೧೦. ಶ್ರೀಮದ್-ಭಗವದ್ಗೀತಾ-ಪೀಠಿಕಾ ೭
೧೦. ಶ್ರೀಮದ್-ಭಗವದ್ಗೀತಾ-ಪೀಠಿಕಾ ೮
(೨೬) ನೀಲಕಂಠೀಯ ಭಾರತಭಾವ(ಪ್ರ)ದೀಪಾಂತರ್ಗತಾ (ಗೀತಾ)ಚತುರ್ಧರೀವ್ಯಾಖ್ಯಾ
ಓಂ ನಮೋ ಬ್ರಹ್ಮಾದಿಭ್ಯೋ ಬ್ರಹ್ಮವಿದ್ಯಾಸಂಪ್ರದಾಯಕರ್ತೃಭ್ಯೋ ವಂಶಋಷಿಭ್ಯೋ ನಮೋ ಗುರುಭ್ಯಃ ||
(ಬ್ರಹ್ಮಾದಿಭ್ಯಃ) ಪರಬ್ರಹ್ಮಕ್ಕೂ, ಸೃಷ್ಟಿಕರ್ತ ಚತುರ್ಮುಖ ಬ್ರಹ್ಮನೇ ಮೊದಲಾದವರಿಗೂ, (ಬ್ರಹ್ಮವಿದ್ಯಾಸಂಪ್ರದಾಯಕರ್ತೃಭ್ಯಃ) ಬ್ರಹ್ಮವಿದ್ಯಾಸಂಪ್ರದಾಯಕರ್ತೃಗಳಿಗೂ, (ವಂಶಋಷಿಭ್ಯಃ) ಆ ಪರಂಪರೆಯ ವಂಶಗಳಲ್ಲಿ ಬಂದ ಋಷಿಗಳಿಗೂ (ನಮಃ) ನಮಸ್ಕಾರ. (ಗುರುಭ್ಯಃ) ಗುರುಗಳಿಗೂ, (ನಮಃ) ನಮಸ್ಕಾರ.
ಪ್ರಣಮ್ಯ ಭಗವತ್ಪಾದಾನ್ ಶ್ರೀಧರಾದೀಂಶ್ಚ ಸದ್ಗುರೂನ್ |
ಸಂಪ್ರದಾಯಾನುಸಾರೇಣ ಗೀತಾವ್ಯಾಖ್ಯಾಂ ಸಮಾರಭೇ || ೧ ||
(ಭಗವತ್ಪಾದಾನ್) ಭಗವತ್ಪಾದರಾದ ಆಚಾರ್ಯ ಶಂಕರರನ್ನೂ, (ಸದ್ಗುರೂನ್ ಶ್ರೀಧರಾದೀನ್) ಸದ್ಗುರುಗಳಾದ ಶ್ರೀಧರಸ್ವಾಮಿಗಳೇ ಮುಂತಾದವರನ್ನೂ, (ಪ್ರಣಮ್ಯ) ಪ್ರಣಾಮಮಾಡಿ, (ಸಂಪ್ರದಾಯಾನುಸಾರೇಣ) ಗುರುಸಂಪ್ರದಾಯಾನುಸಾರಿಯಾದ (ಸ್ವೇಚ್ಛಾನುಸಾರಿಯಲ್ಲದ), (ಗೀತಾವ್ಯಾಖ್ಯಾಂ) ಗೀತಾವ್ಯಾಖ್ಯಾನವನ್ನು, (ಸಮಾರಭೇ) ಚೆನ್ನಾಗಿ ಆರಂಭಿಸುತ್ತೇನೆ.
ಟಿಪ್ಪನೀ— ಪ್ರ + ನತ್ವಾ = ಪ್ರಣಮ್ಯ; ಪ್ರ ಉಪಸರ್ಗಪೂರ್ವಕ ಕ್ತ್ವಾಂತ ಕೃದಂತ; ಉಪಸರ್ಗ ಸೇರಿದಾಗ ಕ್ತ್ವಾಂತ ಕೃದಂತವು ಲ್ಯಬಂತವಾಗುತ್ತದೆ. ಉದಾ— ಲಿಖಿತ್ವಾ-(ಬರೆದು)ವಿಲಿಖ್ಯ(ವಿಶೇಷವಾಗಿ ಬರೆದು), ಗತ್ವಾ(ಹೋಗಿ)-ಆಗತ್ಯ(ಬಂದು), ನಿರ್ಗತ್ಯ(ನಿರ್ಗಮಿಸಿ, ತೆರಳಿ), ಪಠಿತ್ವಾ(ಓದಿ)-ಸಂಪಠ್ಯ(ಚೆನ್ನಾಗಿ ಓದಿ, ಸಮ್ಯಕ್ ಪಠಿತ್ವಾ), ಹೃತ್ವಾ(ಅಪಹರಿಸಿ)-ಅಪಹಾರ್ಯ, ಜಿತ್ವಾ(ಗೆದ್ದು)-ವಿಜಿತ್ಯ, ನಿರ್ಜಿತ್ಯ ಇತ್ಯಾದಿ. ನತ್ವಾ ಹೋಗಿ ಪ್ರಣಮ್ಯವಾಗಿದೆ. ಪ್ರ ದ ರೇಫದಿಂದಾಗಿ ನ ಹೋಗಿ ಣ ಆಗಿದೆ. ಉದಾ—ಕರ್ಣಾಟಕ, ಪ್ರಣಾಶ… ಪ್ರಣಮ್ಯ ಎಂದರೆ ಭಕ್ತಿಯಿಂದ ನಮಿಸಿ ಎಂದರ್ಥ. ಸಮ್ಯಕ್ ಆರಭೇ = ಸಮಾರಭೇ.
ಭಾರತೇ ಸರ್ವವೇದಾರ್ಥೋ ಭಾರತಾರ್ಥಶ್ಚ ಕೃತ್ಸ್ನಶಃ |
ಗೀತಾಯಾಮಸ್ತಿ ತೇನೇಯಂ ಸರ್ವಶಾಸ್ತ್ರಮಯೀ ಮತಾ || ೨ ||
(ಭಾರತೇ) ವ್ಯಾಸಮಹಾಭಾರತದಲ್ಲಿ, (ಸರ್ವವೇದಾರ್ಥಃ) ಎಲ್ಲ ವೇದಾರ್ಥವೂ, (ಚ) ಹಾಗೆಯೇ, (ಕೃತ್ಸ್ನಶಃ) ಸಮಸ್ತ, ಸಮಗ್ರವಾಗಿ (ಭಾರತಾರ್ಥಃ) ವ್ಯಾಸಭಾರತಸಾರವು, (ಗೀತಾಯಾಮ್) ಗೀತೆಯಲ್ಲೂ, (ಅಸ್ತಿ) ಇದೆ. (ತೇನ) ಅದರಿಂದಾಗಿ (ಇಯಂ) ಈ ಗೀತಾಶಾಸ್ತ್ರವು (ಸರ್ವಶಾಸ್ತ್ರಮಯೀ) ಸರ್ವಶಾಸ್ತ್ರಮಯೀ ಎಂಬ, (ಮತಾ) ಅಭಿಪ್ರಾಯವಿದೆ.
ಕರ್ಮೋಪಾಸ್ತಿಜ್ಞಾನಭೇದೈಃ ಶಾಸ್ತ್ರಂ ಕಾಣ್ಡತ್ರಯಾತ್ಮಕಮ್ |
ಅನ್ಯೇ ತೂಪಾಸನಾಕಾಣ್ಡಾತ್ ತೃತೀಯೋ ನಾತಿರಿಚ್ಯತೇ || ೩ ||
(ಕರ್ಮೋಪಾಸ್ತಿಜ್ಞಾನಭೇದೈಃ)ಕರ್ಮ, ಉಪಾಸನಾ, ಜ್ಞಾನ— ಈ ಮೂರು ಭೇದಗಳಿಗನುಸಾರ (ಶಾಸ್ತ್ರಂ)ಗೀತಾಶಾಸ್ತ್ರವು (ಕಾಣ್ಡತ್ರಯಾತ್ಮಕಮ್)೩ ಕಾಂಡಗಳಿಂದ ಕೂಡಿದೆ. (ಅನ್ಯೇ ತು)ಇನ್ನು ಕೆಲವರಾದರೋ (ಉಪಾಸನಾಕಾಣ್ಡಾತ್)೨ನೆಯ ಉಪಾಸನಾಕಾಂಡಕ್ಕಿಂತ (ತೃತೀಯೋ ನ ಅತಿರಿಚ್ಯತೇ)೩ನೆಯ ಜ್ಞಾನಕಾಂಡವು ಮಿಗಿಲಾದದ್ದೇನಲ್ಲ ಎನ್ನುವರು. ಆದರೆ,
“ತದೇವ ಬ್ರಹ್ಮ ವಿದ್ಧಿ ತ್ವಂ ನೇದಂ ಯತ್ತದುಪಾಸತೇ”(ಕೈ.ಉ. ೧|೪) |
ಇತಿ ಶ್ರುತ್ಯೈವ ವೇದ್ಯಸ್ಯ ಹ್ಯಪಾಸ್ಯಾದನ್ಯಥೇರಿತಾ || ೪ ||
ಕೈವಲ್ಯ ಉಪನಿಷತ್ತಿನ ಪ್ರಕಾರ, (ತ್ವಂ ಯತ್ ಉಪಾಸತೇ)ನೀನ್ಯಾವುದನ್ನೆಲ್ಲ ಉಪಾಸಿಸುವಿಯೋ (ತತ್ ನ)ಅದಾವುದೂ ಬ್ರಹ್ಮವಲ್ಲ; (ತತ್ ಏವ ಬ್ರಹ್ಮ)ಅದಕ್ಕೂ ಮೀರಿದ, ಅದೆಲ್ಲವನ್ನೂ ಒಳಗೊಂಡಿರುವ ಪರತತ್ತ್ವವೇ ಪರಬ್ರಹ್ಮವು (ವಿದ್ಧಿ)ಎಂದು ತಿಳಿ. (ಇತಿ ಶ್ರುತ್ಯಾ ಏವ)ಈ ಶ್ರುತಿವಚನದ ಆಧಾರದಿಂದಲೇ, (ವೇದ್ಯಸ್ಯ)ತಿಳಿಯಲ್ಪಡಬೇಕಾದ (ವೇದ್ಯವಾದ—ವೇತ್ತುಂ ಯೋಗ್ಯಂ ವೇದ್ಯಮ್) ಪರಬ್ರಹ್ಮಸ್ವರೂಪಜ್ಞಾನವೇ ಹೆಚ್ಚಿನದೆಂದರಿತು, (ಅನ್ಯಥಾ ಈರಿತಾ)ಇದರ ಹೊರತಾದ ಹೇಳಿಕೆಗಳು (ಹಿ)ನಿಶ್ಚಯವಾಗಿಯೂ (ಅಪಾಸ್ಯಾತ್)ನಿರಾಕರಿಸಲ್ಪಡತಕ್ಕದ್ದು.
ಇಯಮಷ್ಟಾದಶಾಧ್ಯಾಯೀ ಕ್ರಮಾತ್ ಷಟ್ಕತ್ರಿಕೇಣ ಹಿ |
ಕರ್ಮೋಪಾಸ್ತಿಜ್ಞಾನಕಾಣ್ಡತ್ರಿತಯಾತ್ಮಾ ನಿಗದ್ಯತೇ || ೫ ||
(ಅಷ್ಟಾದಶಾಧ್ಯಾಯೀ) ೧೮ ಅಧ್ಯಾಯಗಳುಳ್ಳ, (ಇಯಂ) ಈ ಭಗವದ್ಗೀತೆಯು, (ಹಿ) ನಿಶ್ಚಯವಾಗಿಯೂ, (ಕ್ರಮಾತ್) ಅನುಕ್ರಮವಾಗಿ, (ಷಟ್ಕತ್ರಿಕೇಣ) ಆರು ಆರು ಅಧ್ಯಾಯಗಳಿಂದ ಕೂಡಿದ, (ಕರ್ಮೋಪಾಸ್ತಿಜ್ಞಾನಕಾಣ್ಡತ್ರಿತಯಾತ್ಮಾ) ಕರ್ಮ-ಉಪಾಸನಾ-ಜ್ಞಾನ ಎಂಬ ೩ ಕಾಂಡಗಳಿಂದ ಕೂಡಿದೆ ಎಂದು, (ನಿಗದ್ಯತೇ) ಹೇಳಲ್ಪಡುತ್ತದೆ.
[ಗೀತೆಯಲ್ಲಿ ಮೊದಲ ೬ ಅಧ್ಯಾಯಗಳು ಕರ್ಮಕಾಂಡವೂ, ಮಧ್ಯದ ೬ ಉಪಾಸನಾಕಾಂಡವೂ, ಕೊನೆಯ ೬ ಜ್ಞಾನಕಾಂಡವೂ, ಹೀಗೆ ೩ ಷಟ್ಕಗಳಿವೆ. ಷಟ್ ಎಂದರೆ ೬. ೬ ಅಧ್ಯಾಯಗಳ ಸಮೂಹ ಷಟ್ಕ. ಅದು ೧ ಕಾಂಡ. ಇಂತಹ ೩ ಕಾಂಡಗಳಿವೆಯೆಂದು ತಾತ್ಪರ್ಯ.]
(೨೭) ಭಗವದ್ಗೀತೆಯ ಉಪನ್ಯಾಸಗಳು—ಹೊಳೆನರಸೀಪುರಶ್ರೀಗಳು
ಡಿ.ವಿ.ಜಿಯವರ ಮುನ್ನುಡಿ
(ನರಸಿಂಹರಾಜಾ ಕಾಲೋನಿ ಶ್ರೀ ರಾಮಾಯಣ ಪ್ರಕಾಶನಸಮಿತಿಯವರು ಪ್ರಕಾಶಿಸಿದ 'ಭಗವದ್ಗೀತೆಯ ಉಪನ್ಯಾಸಗಳು- ಸಾರಸಂಗ್ರಹ' ದಿಂದ)
ಶ್ರೀಮತ್ಪರಮಹಂಸ ಶ್ರೀಶ್ರೀಸಚ್ಚಿದಾನಂದೇಂದ್ರಸರಸ್ವತೀಸ್ವಾಮಿಗಳವರ ಭಗವದ್ಗೀತೋಪನ್ಯಾಸಗ್ರಂಥಕ್ಕೆ ಪೀಠಿಕೆ ಬರೆಯುವವರಿಗೆ ಇರಬೇಕಾದ ಯೋಗ್ಯತೆ ನನಗೆ ಎಷ್ಟು ಮಾತ್ರವೂ ಇಲ್ಲವೆಂದು ನಾನು ತಿಳಿದುಕೊಂಡಿದ್ದೇನೆ. ಆದರೂ ಸತ್ಕಾರ್ಯದಲ್ಲಿ ಪ್ರವೃತ್ತರಾಗಿರುವ ಮಿತ್ರರು ಶ್ರೀ ಡಿ.ಸಿ. ಅನಂತರಾಮಯ್ಯ ಮೊದಲಾದ ಶ್ರೀರಾಮಾಯಣ ಪ್ರಕಾಶನ ಸಮಿತಿಯ ಸ್ನೇಹಿತರ ಪ್ರೋತ್ಸಾಹಕ್ಕೆ ಸಿಕ್ಕಿ ಈ ಸಾಹಸ ಮಾಡುತ್ತಿದ್ದೇನೆ. ವಾಚಕಮಹಾಶಯರು ಅನುಮತಿ ಕೊಡಬೇಕು.
ಶ್ರೀಭಗವದ್ಗೀತೆಯನ್ನು ಕುರಿತು ಉಪನ್ಯಾಸಮಾಡಹೊರಡುವವರಿಗೆ ಮೂರು ಬಗೆಯ ಅರ್ಹತೆ ಅವಶ್ಯಕವೆಂದು ನನಗನ್ನಿಸುತ್ತದೆ.
1) ಶಾಸ್ತ್ರಪಾಂಡಿತ್ಯ
2) ಲೋಕಾನುಭವ
3) ಅಂತರ್ದೃಷ್ಟಿ
ಶ್ರೀ ಸ್ವಾಮಿಗಳವರು ಬಹುಶಾಸ್ತ್ರನಿಷ್ಣಾತರಾಗಿರುವರೆಂಬುದು ಪ್ರಸಿದ್ಧ ಸಂಗತಿಯಾಗಿದೆ. ವೇದ, ವ್ಯಾಕರಣ, ತರ್ಕ, ಮೀಮಾಂಸಾದಿಶಾಸ್ತ್ರಗಳಲ್ಲಿ ಅವರ ಪಾಂಡಿತ್ಯವನ್ನು ಅಳೆಯಲು ಮಾನದಂಡ ನನ್ನಲ್ಲಿಲ್ಲ. ಬಹುಶ್ರುತರೆಂದು ಮಾತ್ರ ಹೇಳಬಲ್ಲೆ. ಮಹಾನುಭಾವರಾದ ಮಧುಸೂದನ ಸರಸ್ವತಿಗಳನ್ನು ಕುರಿತು ಪೂರ್ವಿಕರೊಬ್ಬರು ಹೇಳಿದ ಮಾತು ಜ್ಞಾಪಕಕ್ಕೆ ಬರುತ್ತದೆ.
ಮಧುಸೂದನಸರಸ್ವತ್ಯಾಃ ಪಾರಂ ವೇತ್ತಿ ಸರಸ್ವತೀ ।
ಪಾರಂ ವೇತ್ತಿ ಸರಸ್ವತ್ಯಾಃ ಮಧುಸೂದನಸರಸ್ವತೀ ||
(ಮಧುಸೂದನಸರಸ್ವತಿಗಳ ವ್ಯಾಪ್ತಿಯನ್ನು ಆ ಸರಸ್ವತೀದೇವಿಯೋರ್ವಳೇ ಬಲ್ಲಳು. ಅಂತೆಯೇ, ಆ ಶಾರದೆಯ ಆಂತರ್ಯವನ್ನು ಈ ಮಧುಸೂದನಸರಸ್ವತಿಗಳೋರ್ವರೇ ಬಲ್ಲರು.)
ಅವರು ಲೌಕಿಕರಾಗಿದ್ದ ದಿವಸದಿಂದ ನನಗೆ ಪರಿಚಿತರು. ಈಗ್ಗೆ ಸುಮಾರು 50 ವರ್ಷಗಳ ಹಿಂದೆ ಶ್ರೀ ಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆಯಲ್ಲಿ ಇಂಗ್ಲಿಷನ್ನೂ ಲೌಕಿಕವಿಷಯಗಳನ್ನೂ ಸಹ ಕಲಿಸುವ ತರಗತಿಯಿತ್ತು. ಆ ತರಗತಿಗೆ ನನ್ನ ಚಿರಂಜೀವಿ ಒಬ್ಬಾತನನ್ನು ಸೇರಿಸಬೇಕೆಂದು ನಾನು ಅಲ್ಲಿಗೆ ಹೋಗಿದ್ದಾಗ ಶ್ರೀಗಳವರ ಪರಿಚಯ ಲಭಿಸಿತು. ಅಲ್ಲಿಂದೀಚೆಗೆ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಶ್ರೀ ಕೆ.ಎ. ಕೃಷ್ಣಸ್ವಾಮಿ ಐಯ್ಯರ್ ಅವರ ಮನೆಯಲ್ಲಿ ಆಗಾಗ ಭೇಟಿ ಪಡೆಯುವ ಅವಕಾಶ ಸಿಕ್ಕಿತು.
ಶ್ರೀ ಕೃಷ್ಣಸ್ವಾಮಿ ಐಯ್ಯರ್ ಅವರು ಮಹಾಪಂಡಿತರು, ಮೇಧಾವಿಗಳು, ವೇದಾಂತಿಗಳು. ಅವರ ಮನೆಯಲ್ಲಿ, ಆಗ ಲೌಕಿಕರಾಗಿದ್ದ ಶ್ರೀಗಳವರ ದರ್ಶನಭಾಗ್ಯ ನನಗೆ ಆಗಾಗ ದೊರೆಯುತ್ತಿದ್ದದ್ದು ನನ್ನ ಪೂರ್ವಪುಣ್ಯದಿಂದ ಎಂದು ತಿಳಿದುಕೊಂಡಿದ್ದೇನೆ. ಆಗಲೂ, ಅಲ್ಲಿಂದೀಚೆಗೆ ಕೆಲವು ವರ್ಷಗಳ ಕಾಲವೂ, ಶ್ರೀಗಳವರು ಗೃಹಸ್ಥರಾಗಿದ್ದುಕೊಂಡು, ಸದಾಚಾರಶೀಲರಾಗಿ ಸಂಸಾರದ ಕಷ್ಟನಿಷ್ಠುರಗಳನ್ನೂ ತಾಪಕಾರ್ಪಣ್ಯಗಳನ್ನೂ ಸಮಾಹಿತಚಿತ್ತರಾಗಿ ಅನುಭವಿಸಿದ್ದು, ನನಗೆ ಗೊತ್ತಿದೆ. ಹೀಗೆ ಅವರಿಗೆ ಲೋಕಾನುಭವ ಆಳವಾಗಿ ದೊರೆತು ಮನುಷ್ಯ ಜೀವನದ ಎಲ್ಲ ಮುಖಗಳೂ ಪರಿಚಿತವಾಗಿವೆ. ಅರ್ಜುನನು ಅಂಥ ಲೋಕಾನುಭವಿ, ಲೋಕದ ಕಷ್ಟಗಳ ತಾಪದಲ್ಲಿ ಬೆಂದಿದ್ದವನು.
ಇನ್ನು ಅಂತರ್ದೃಷ್ಟಿಯ ವಿಚಾರ. ಅದನ್ನು ಕುರಿತು ನಾನು ಹೇಳಬಹುದಾದ ಮಾತು ಊಹೆಯದು. ಸ್ವಯಮನುಭವದ್ದಲ್ಲ. ಅದು ತಪಃಸ್ಸಿದ್ಧವಾದ ವರ—ಎಂದು ನಾನು ತಿಳಿದುಕೊಂಡಿದ್ದೇನೆ, ಅದು ಈಶ್ವರಾನುಗ್ರಹ ; ಕಲಿತು ಬರುವುದಲ್ಲ.
'ಈಶ್ವರಾನುಗ್ರಹಾದೇವ ನೄಣಾಂ ವೇದಾಂತವಾಸನಾ''
(ಈಶ್ವರಾನುಗ್ರಹಾದೇವ ಪುಂಸಾಮದ್ವೈತವಾಸನಾ)
ಬಹುಕಾಲದ, ಸತತವಾದ ತಪಸ್ಸಿನ ಫಲವಾಗಿ ಬಹುಶಃ ಮನುಷ್ಯನ ಅಂತರಂಗದಲ್ಲಿ ಒಂದು ಜ್ಯೋತಿಯ, ಒಂದು ತೇಜಸ್ಸಿನ ಅನುಭವವಾಗುತ್ತದೆ. ಈ ಅಂತರಂಗ ಪ್ರಕಾಶದಿಂದಲೇ ತತ್ತ್ವಾನುಭವ, ಅದು ಇಲ್ಲದೆ ಬರಿಯ ಪುಸ್ತಕಪಾಂಡಿತ್ಯವಿದ್ದಲ್ಲಿ ಅದರ ಪ್ರಯೋಜನ ಹೊಟ್ಟೆಯಪಾಡಿಗೆ ಆಗಬಹುದು. ಜೀವನಸರ್ವಸ್ವಕ್ಕೂ ಅದು ಆಗಲಾರದು. ಇಂಥ ಮಹಾ ಅಪರೂಪವಾದದ್ದು ಈ ಅಂತರ್ದೃಷ್ಟಿ. ಶ್ರೀಗಳವರು ತಪೋನಿಷ್ಠರಾಗಿರತಕ್ಕವರು. ಅವರ ವಾಣಿಯಲ್ಲಿ ಅಂತಸ್ತೇಜಸ್ಸು ಪ್ರಕಾಶಿಸುತ್ತದೆ. ಇದು ಲೋಕಕ್ಕೆ ಬೇಕಾದ ಬೆಳಕು.
ಶ್ರೀಗಳವರು ಕೊಡುವ ನಿರ್ಧಾರಣೆಗಳು ವಿಚಾರವಿಮರ್ಶೆಯಿಂದ ಸಿದ್ಧವಾದವು. ಬರಿಯ ಕುರುಡುನಂಬಿಕೆಯ ಅಥವಾ ಕೇವಲ ಸಂಪ್ರದಾಯಾನುಸಾರಿಯಾದ ಮಾತಲ್ಲ. ಅವರ ರೀತಿ ಸ್ವತಂತ್ರ ಬುದ್ಧಿಕ್ರಿಯೆಯದು, ವಿಮರ್ಶನಪೂರ್ವಕವಾದದ್ದು; ಪೂರ್ವಪಕ್ಷ ಸಮಾಧಾನಗಳ ರೂಪವಾದ ಕಥೆ — ಎಂಬುದು ಅವರ ಇತರ ಲೇಖನಗಳನ್ನು ನೋಡಿದವರಿಗೆ ಗೊತ್ತಾಗದೆ ಇರದು.
ಅವರು ಅನೇಕ ಗ್ರಂಥಗಳನ್ನು ಕನ್ನಡದ ಜನರಿಗೂ, ಕನ್ನಡ ತಿಳಿಯದ ಇಂಗ್ಲಿಷ್ ಬಲ್ಲ ಜನರಿಗೂ, ಸಂಸ್ಕೃತಭಾಷಾಪರಿಣತರಾದ ಮಹಾಜನರಿಗೂ ಒದಗಿಸಿಕೊಟ್ಟಿದ್ದಾರೆ. ಈ ಮೂರು ಭಾಷೆಗಳಲ್ಲಿಯ ಯಾವ ಗ್ರಂಥವನ್ನು ನೋಡಿದರೂ ಶ್ರೀಸ್ವಾಮಿಗಳವರ ದಾರಿ ವಿಚಾರದ್ದೆಂಬುದು ಚೆನ್ನಾಗಿ ವ್ಯಕ್ತಪಡುತ್ತದೆ. ಶ್ರೀಸ್ವಾಮಿಗಳವರ ಸಾಧನವು ವಿಚಾರ ರೂಪವಾದದ್ದು, ಆದರೆ ಶ್ರದ್ಧೆಯನ್ನು ಬಿಟ್ಟದ್ದಲ್ಲ, ಶ್ರದ್ಧಾಸಮನ್ವಿತವಾದ ಬುದ್ಧಿವಿಚಾರವು ಅವರ ದಾರಿ.
ಅಧಿಕಾರ, ಅನಧಿಕಾರ ವಿವೇಚನೆಯ ಅಭ್ಯಾಸವು ಜನರಲ್ಲಿ ಕ್ಷಯಿಸುತ್ತಿರುವ ಈ ಕಾಲದಲ್ಲಿ ತಾರತಮ್ಯವಿವೇಕವನ್ನು ಇನ್ನೂ ಉಳಿಸಿಕೊಂಡಿರುವವರೆಗೆ ಶ್ರೀಸ್ವಾಮಿಗಳವರ ಈ ಗ್ರಂಥವು ಕುಂಬಾರನ ಆವಿಗೆಯಲ್ಲಿ ಕೈಯಿಟ್ಟವರಿಗೆ ಚಿನ್ನದ ಪಾತ್ರ ಸಿಕ್ಕಿದಂತೆ ಆಗುತ್ತದೆ. ಈ ಕಾಲದಲ್ಲಿ ಅಕ್ಷರವಿದ್ಯೆ ಹರಡುತ್ತಿದೆ. ಅಚ್ಚಿನ ಕಾರ್ಖಾನೆಗಳು ಬೀದಿಬೀದಿಯಲ್ಲೂ ಇವೆ. ಆದ್ದರಿಂದ ಎಲ್ಲರೂ ಗ್ರಂಥಲೇಖನಕ್ಕೆ ಉದ್ಯುಕ್ತವಾಗಬಹುದಾಗಿದೆ. ಈಗ ಎಲ್ಲ ಸರ್ವಸಮಾನ ; ಎಲ್ಲರೂ ವಿದ್ವಾಂಸರು; ಎಲ್ಲರೂ ಗ್ರಂಥಕರ್ತರು.
ವಸನಾಶನಮಾತ್ರಸಂಭವೇ ।
ಧನದಾದಪ್ಯಧಿಕಾಯತೇ ಜನಃ ||
ಅಥ ವೇತ್ತಿ ಷಡಕ್ಷರಾಣಿ ಚೇತ್ |
ಉಪದೇಷ್ಟಾ ಶತಕಂಠಮಿಚ್ಛತಿ॥
(ಹೊಟ್ಟೆಗೆ, ಲಂಗೋಟಿಗೆ ಇದ್ದರೆ 'ಕುಬೇರನದೇನು?' ಎನ್ನುತ್ತಾನಂತೆ. ಅ, ಆ, ಇ, ಈ, ಉ, ಊ - ಇಷ್ಟು ಬಂದವನು 'ಪರಮೇಶ್ವರನೇ ತನಗೆ ಶಿಷ್ಯನಾಗಿರಲಿ' ಎನ್ನುತ್ತಾನಂತೆ)
ಇಂಥಾದ್ದು ಈಗಿನ ಜನದ ಲಕ್ಷಣ. ಒಂದು ಪ್ರಸಂಗ; ಉದಾಹರಣೆಯಾಗಿ, ...
ಎಂಟು-ಹತ್ತು ವರ್ಷಗಳ ಹಿಂದೆ ಒಂದು ಸಂಜೆ ನಾನು ಚಿಕ್ಕಪೇಟೆಯಲ್ಲಿ ಒಂದು ಪುಸ್ತಕದಂಗಡಿಯಲ್ಲಿ ಒಬ್ಬ ವಿದ್ವಾಂಸಸ್ನೇಹಿತರೊಡನೆ ಮಾತನಾಡುತ್ತ ಕುಳಿತಿದ್ದೆ. ಆಗ ಒಂದು 10-15 ಮಂದಿ ಹುಡುಗರ ಗುಂಪು ಅಲ್ಲಿ ಮೆರವಣಿಗೆ ಹೋಗುತ್ತಿತ್ತು. ಸತ್ಯಾಗ್ರಹಿಗಳ ಗುಂಪು “ಮಹಾತ್ಮಾಗಾಂಧೀಕೀ ಜೈ' ಘೋಷಮಾಡಿತು. ಅವರಿಗೆ ಮುಂದಾಳಾಗಿದ್ದ ಯುವಕ ಆ ನನ್ನ ವಿದ್ವಾಂಸಸ್ನೇಹಿತರ ಬಳಿ ಬಂದು ನಿಂತ. ಆಗ —
ವಿದ್ವಾಂಸರು : (ತೆಲುಗಿನಲ್ಲಿ) ಏನೋ ? ಏನು ಮಾಡಿಕೊಂಡಿದ್ದೀ?
ಯುವಕ : ಇಗೋ! ಹೀಗೆಯೇ— ಎಂದು ಹುಡುಗರ ಕಡೆ ಕೈ ತೋರಿಸಿದ.
ವಿದ್ವಾಂಸರು: ಇದೆಲ್ಲ ಏನೋ ? ಏನಾಗುತ್ತದೆ, ಇದರಿಂದ ?
ಯುವಕ : ಏನು ? ಏನಾಗುವುದು ?
ಕರ್ಮಣ್ಯೇವಾಧಿಕಾರಸ್ತೇ......
ವಿದ್ವಾಂಸರು : ಹೊಡಕೋ ! ಗೀತೆಗೆ ಬಂತು ಆಪತ್ತು ನಿನ್ನಿಂದ.
ಹೀಗಿದೆ ಈಗಿನ ವಿವೇಚನೆ.
ಗೀತೆಯ ಮೇಲಿನ ವ್ಯಾಖ್ಯಾನಗ್ರಂಥಗಳಿಗೆ ಲೆಕ್ಕವಿಲ್ಲ. ಆದರೆ, ಒಂದು ಮಾತಿಗೆ ಬೆಲೆ ಬರುವುದು, ಅದನ್ನಾಡಿದವರ ವ್ಯಕ್ತಿವಿಶೇಷದಿಂದ ಎಂಬುದನ್ನು ಲೇಖಕರೂ ವಾಚಕರೂ ಮರೆಯಬಾರದು. 'ಶಿವ ಶಿವಾ' ಎಂದು ಭಾಗವತನೂ ಹೇಳುತ್ತಾನೆ, ಭಂಗೀಕೋರನೂ ಹೇಳುತ್ತಾನೆ. ಅದು ಸಾರ್ಥಕವಾಗುವುದು ನಿಜವಾದ ಭಾಗವತರ ಬಾಯಿಂದ ಬಂದಾಗ ಮಾತ್ರ.
ಈಗ ಗ್ರಂಥರಚನೆಗೆ ಅಭಾವವಿಲ್ಲ. ಆದರೆ ಬೆಲೆಬಾಳುವ ಗ್ರಂಥವನ್ನು ಹುಡುಕಿ ವಿಮರ್ಶೆ ಮಾಡಿದರೆ ತಾನೆ, ಗೊತ್ತಾಗುವುದು ? ಹಾಗೆ ವಿಮರ್ಶೆಮಾಡಿ ನೋಡುವವರಿಗೆ ಶ್ರೀಶ್ರೀ ಸಚ್ಚಿದಾನಂದೇಂದ್ರ ಸರಸ್ವತೀಸ್ವಾಮಿಗಳವರಿಂದ ಅನುಗೃಹೀತವಾದ ಈ ಗ್ರಂಥವು, ಕತ್ತಲೆಯಲ್ಲಿ ಸಂಚಾರ ಮಾಡುತ್ತಿರುವವರಿಗೆ ವಿದ್ಯುತ್-ಪ್ರಕಾಶ ಬಂದಾಗ ಹೇಗಾಗುತ್ತದೋ ಅಂಥಾ ಅನುಭವದಾಯಕವಾದೀತೆಂದು ನನಗೆ ಅನ್ನಿಸುತ್ತದೆ.
ನಮ್ಮ ಜನರಲ್ಲಿ ಧಾರ್ಮಿಕ ಸಾಹಿತ್ಯ ಗ್ರಂಥಗಳ ರಾಶಿ ಅಪಾರವಾಗಿದೆ. ಅದರಲ್ಲಿ ಭಗವದ್ಗೀತೆಯು ವಿಶೇಷ ಮಹತ್ತ್ವದ ಸ್ಥಾನವನ್ನು ಸಂಪಾದಿಸಿಕೊಂಡಿದೆ. ಇಷ್ಟು ಜನಪ್ರಿಯವಾದ ಗ್ರಂಥ ಯಾವುದೂ ಇಲ್ಲ. ಜನಪ್ರೀತಿಗೆ ಕಾರಣವಾದದ್ದು ಅದರ ಸರ್ವಾಂಗಸುಂದರತೆ ಮತ್ತು ಅದರ ಐತಿಹಾಸಿಕವಾದ ಹಿನ್ನೆಲೆ.
ಭಗವದ್ಗೀತೆಯು ಮಹಾಭಾರತದ ಒಂದು ಭಾಗವಷ್ಟೆ! ಅದೂ ಶ್ರೀಕೃಷ್ಣನೇ ಸ್ವಯಂ ಸಾಕ್ಷಾತ್ತಾಗಿ ಅರ್ಜುನನಿಗೆ ಉಪದೇಶಮಾಡಿದ್ದೆಂಬ ಒಂದು ಸಂಗತಿಯೇ ಆ ಗ್ರಂಥದ ಮಹತ್ತ್ವಕ್ಕೆ ಸಾಕಷ್ಟು ಕಾರಣವಾಗಿದೆ. ಇದರ ಜೊತೆಗೆ ಸೇರಿಕೊಂಡಿರುವ ಕಾರಣವೂ ದೊಡ್ಡದು. ಅದೇನೆಂದರೆ ಈ ಗೀತೆಯೊಳಗೆ ಮಿಕ್ಕೆಲ್ಲ ಗ್ರಂಥಗಳ ಸ್ವಾರಸ್ಯವೂ ಅಡಗಿದೆ. ಗೀತೆಯೇ ವೇದೋಪನಿಷತ್ತುಗಳ ಸಾರವೆಂಬುದು ಪ್ರಸಿದ್ಧವಾಗಿದೆ. ಆದ್ದರಿಂದಲೇ ಶ್ರೀಮಚ್ಛಂಕರಾಚಾರ್ಯರವರು.
“ಗೇಯಂ ಗೀತಾ ನಾಮಸಹಸ್ರಂ…”
-ಎಂದು ಉಪದೇಶಮಾಡಿರುವಂತೆ ತೋರುತ್ತದೆ. ಗೀತೆಯಲ್ಲಿ ಪ್ರಸ್ತಾವವಾಗದಿರುವ ಮಾನುಷಜೀವನ ಪ್ರಶ್ನೆ ಯಾವುದೂ ಇಲ್ಲ. ಜಿಜ್ಞಾಸುವಿಗೆ ತೋರಬಹುದಾದ ಎಲ್ಲ ಪ್ರಶ್ನೆಗಳಿಗೂ ಇಲ್ಲಿ ಸಮಂಜಸವಾದ ಉತ್ತರ ದೊರೆಯುತ್ತದೆ. ಸಾವಧಾನವಾಗಿ ಈ ಗ್ರಂಥವನ್ನು ವ್ಯಾಸಂಗ ಮಾಡುವವರಿಗೆ ಬೇರೆ ಯಾವ ಗ್ರಂಥವೂ ಬೇಕೆನ್ನಿಸಲಾರದು. ಕೇಳಬಹುದಾದ ಪ್ರಶ್ನೆಗಳಿಗೆ ಸಕಾರಣವೂ ಸಮಗ್ರವೂ ಆದ ಉತ್ತರಗಳು ಗೀತೆಯಲ್ಲಿ ಹೊರಡುತ್ತವೆ. ಇಂಥ ಮಹಾಗ್ರಂಥವನ್ನು ಓದಿದ ಬಳಿಕ ಜೀವನದ ಸಮಸ್ಯೆಗಳು ಸುಲಭವಾಗಿ ಉತ್ತರ ಪಡೆದು, ಮನಸ್ಸಿಗೆ ಶಾಂತಿ ಬರಬಹುದಾಗಿದೆ. ಹೀಗೆ ಶಾಂತರಸಪ್ರಧಾನವಾದದ್ದು ಈ ಗ್ರಂಥ. ಮನಸ್ಸಿಗೆ ನೆಮ್ಮದಿಯನ್ನು ಬಯಸುವವರು ಇದರಿಂದ ಉಪಕೃತರಾಗುವಂತೆ ಮತ್ತಾವ ಗ್ರಂಥದಿಂದಲೂ ಆಗಲಾರರು. ಹೀಗೆ ಈ ಗೀತಾವ್ಯಾಖ್ಯಾನದಿಂದ ನಮ್ಮ ಪರಮಹಂಸ ಸ್ವಾಮಿಗಳವರು ಲೋಕಕ್ಕೆ ಮಹೋಪಕಾರ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಸಹಸ್ರ ಸಮಸ್ಕಾರ.
ಇನ್ನು ಹೆಚ್ಚಾಗಿ ಹೇಳಲಾರೆ. ಕ್ಲಿಷ್ಟ ವಿಷಯಗಳನ್ನು ಸರಳವಾಗಿ ಪ್ರತಿಪಾದಿಸಿ ಓದುಗರ ಮನಸ್ಸು ನಿಶ್ಶಂಕವಾಗುವಂತೆ ಪ್ರವಚನಮಾಡಬಲ್ಲ ವ್ಯಾಖ್ಯಾನಚತುರತೆಯನ್ನೂ ಮತ್ತು ಭಾಷಾ ವೈಶದ್ಯವನ್ನೂ ದೇವರು ಅವರಿಗೆ ವರ ಕೊಟ್ಟಿದ್ದಾನೆ. ನಮ್ಮ ಜನ ಈ ವರದಿಂದ ಪ್ರಯೋಜನ ಪಡೆಯಲಿ.
ಇಂತು ಸರ್ವಂ ಶಿವಂ
ಆನಂದ ಸಂವತ್ಸರ, ಕಾರ್ತಿಕ ಬಹುಳ ಡಿ.ವಿ. ಗುಂಡಪ್ಪ
ಚತುರ್ದಶಿ ಗುರುವಾರ, ತಾ. 12-12-1974
(೨೮) ಮಧುಸೂದನೀ-ಗೂಢಾರ್ಥದೀಪಿಕಾ-ವ್ಯಾಖ್ಯಾ, ಧರ್ಮದತ್ತ (/ಬಚ್ಚಾ)ಶರ್ಮವಿರಚಿತ-ಗೂಢಾರ್ಥತತ್ತ್ವಾಲೋಕೇನ ಯುತಾ
ಪೀಠಿಕೆ
ಓಂ ನಮಃ ಪರಮಹಂಸಾಸ್ವಾದಿತ-ಚರಣಕಮಲ-ಚಿನ್ಮಕರಂದಾಯ ಭಕ್ತಜನಮಾನಸನಿವಾಸಾಯ ಶ್ರೀರಾಮಚಂದ್ರಾಯ ||
ಪರಮಹಂಸರಿಂದ ಆಸ್ವಾದಿಸಲ್ಪಡುವ ಪಾದಪದ್ಮಗಳ ಮಕರಂದವುಳ್ಳ, ಚಿನ್ಮಾತ್ರನಾದ, ಭಕ್ತರ ಜನಮಾನಸದಲ್ಲಿ ವಾಸಿಸುವ, ಶ್ರೀರಾಮಚಂದ್ರನಿಗೆ ನಮಸ್ಕಾರ.
ಭಗವತ್ಪಾದಭಾಷ್ಯಾರ್ಥಮಾಲೋಚ್ಯಾತಿಪ್ರಯತ್ನತಃ |
ಪ್ರಾಯಃ ಪ್ರತ್ಯಕ್ಷರಂ ಕುರ್ವೇ ಗೀತಾಗೂಢಾರ್ಥದೀಪಿಕಾಮ್ || ೧ ||
ಶಂಕರಭಗವತ್ಪಾದಾಚಾರ್ಯರ ಗೀತಾಭಾಷ್ಯವನ್ನು ಅತ್ಯಂತ ಪ್ರಯತ್ನಪಟ್ಟು ಚಿಂತನೆಮಾಡಿ, ಗೀತೆಯ ಗೂಢಾರ್ಥದೀಪಿಕೆಯನ್ನು ಪ್ರಾಯಶಃ ಪ್ರತಿಯೊಂದು ಅಕ್ಷರಕ್ಕೂ ವ್ಯಾಖ್ಯಾನಮಾಡುವ ಮೂಲಕ ವಿರಚಿಸುತ್ತೇನೆ.
ಸಹೇತುಕಸ್ಯ ಸಂಸಾರಸ್ಯಾತ್ಯನ್ತೋಪರಮಾತ್ಮಕಮ್ |
ಪರಂ ನಿಃಶ್ರೇಯಸಂ ಗೀತಾಶಾಸ್ತ್ರಸ್ಯೋಕ್ತಂ ಪ್ರಯೋಜನಮ್ || ೨ ||
ಅವಿದ್ಯೆಯಿಂದಾದ ಅಜ್ಞಾನವೆಂಬ ಹಾಗೂ ಪೂರ್ವಕರ್ಮವೆಂಬ ಕಾರಣವುಳ್ಳ ಜನನ ಮರಣ ರೂಪೀ ಸಂಸಾರಕ್ಕೆ ಅತ್ಯಂತವಾದ ನಿಲುಗಡೆ / ಚರಮ ಪೂರ್ಣವಿರಾಮವಾದ ಪರಮ ನಿಃಶ್ರೇಯಸ್ಸು / ಮೋಕ್ಷವೇ ಗೀತಾಶಾಸ್ತ್ರದ ಪ್ರಯೋಜನವೆಂದು ಹೇಳಿದೆ.
ಸಚ್ಚಿದಾನಂದರೂಪಂ ತತ್ಪೂರ್ಣಂ ವಿಷ್ಣೋಃ ಪರಂ ಪದಮ್ |
ಯತ್ಪ್ರಾಪ್ತಯೇ ಸಮಾರಬ್ಧಾ ವೇದಾಃ ಕಾಂಡತ್ರಯಾತ್ಮಕಾಃ || ೩ ||
ಆ ಪರಿಪೂರ್ಣವೂ ಸಚ್ಚಿದಾನಂದಸ್ವರೂಪವೂ ಆದ ವಿಷ್ಣುವಿನ ಪರಮ ಪದ ಯಾವುದಿದೆಯೋ ಅದನ್ನು ಹೊಂದಲು ಕರ್ಮ-ಉಪಾಸನಾ-ಜ್ಞಾನವೆಂಬ ೩ ಕಾಂಡಗಳಿಂದ ಕೂಡಿದ ವೇದಗಳು ಹೊರಟಿವೆ.
ಕರ್ಮೋಪಾಸ್ತಿಸ್ತಥಾ ಜ್ಞಾನಮಿತಿ ಕಾಂಡತ್ರಯಂ ಕ್ರಮಾತ್ |
ತದ್ರೂಪಾಷ್ಟಾದಶಾಧ್ಯಾಯೀ ಗೀತಾ ಕಾಂಡತ್ರಯಾತ್ಮಿಕಾ || ೪ ||
ಅಂತಹ ವೇದಗಳಂತೆಯೇ ೧೮ ಅಧ್ಯಾಯಗಳ ಗೀತೆಯೂ ಅನುಕ್ರಮವಾಗಿ ಅವೇ ೩ ಕಾಂಡಗಳಿಂದ ಕೂಡಿರುವುದು.
ಏಕಮೇಕೇನ ಷಟ್ಕೇನ ಕಾಂಡಮತ್ರೋಪಲಕ್ಷಯೇತ್ |
ಕರ್ಮನಿಷ್ಠಾಜ್ಞಾನನಿಷ್ಠೇ ಕಥಿತೇ ಪ್ರಥಮಾಂತ್ಯಯೋಃ || ೫ ||
೬-೬ ಅಧ್ಯಾಯಗಳ ಒಂದೊಂದೂ ಷಟ್ಕದಿಂದ ಇಲ್ಲಿಯೂ ಗೀತೆಯನ್ನೂ ಪರಿಗಣಿಸಬೇಕು. ಮೊದಲ ಷಟ್ಕವು ಕರ್ಮನಿಷ್ಠಾಪರವಾದರೆ, ಕೊನೆಯದು ಜ್ಞಾನನಿಷ್ಠೆಯನ್ನು ಹೇಳುತ್ತದೆ.
ಯತಃ ಸಮುಚ್ಚಯೋ ನಾಸ್ತಿ ತಯೋರತಿವಿರೋಧತಃ |
ಭಗವದ್ಭಕ್ತಿನಿಷ್ಠಾ ತು ಮಧ್ಯಮೇ ಪರಿಕೀರ್ತಿತಾ || ೬ ||
ಕರ್ಮ-ಜ್ಞಾನನಿಷ್ಠೆಗಳೆರಡೂ ಪರಸ್ಪರ ಅತ್ಯಂತ ವಿರುದ್ಧವಾಗಿರುವುದರಿಂದ ಅವೆರಡರ ಸಮುಚ್ಚಯ (ಒಟ್ಟಿಗಿರುವಿಕೆ ಎಂಬುದು) ಸಂಭವಿಸದು. ಹಾಗಾಗಿ, ಅವೆರಡರ ನಡುವೆ ಭಗವದ್ಭಕ್ತಿನಿಷ್ಠೆಯೆಂಬ ಕಾಂಡವಿರುವುದು.
ಉಭಯಾನುಗತಾ ಸಾ ಹಿ ಸರ್ವವಿಘ್ನಾಪನೋದಿನೀ |
ಕರ್ಮಮಿಶ್ರಾ ಚ ಶುದ್ಧಾ ಚ ಜ್ಞಾನಮಿಶ್ರಾ ಚ ಸಾ ತ್ರಿಧಾ ॥ ೭ ॥
ಆ ಭಕ್ತಿನಿಷ್ಠೆಯಾದರೋ ಕರ್ಮಜ್ಞಾನವೆರಡನ್ನೂ ಒಳಗೊಂಡಿದ್ದು ಸಕಲ ವಿಘ್ನಗಳನ್ನೂ ನಿವಾರಿಸುವುದು. ಹಾಗೆಯೇ, ಅದು ಶುದ್ಧಭಕ್ತಿ, ಕರ್ಮಮಿಶ್ರಭಕ್ತಿ ಹಾಗೂ ಜ್ಞಾನಮಿಶ್ರಭಕ್ತಿ ಎಂದು ೩ ವಿಧವಾಗಿರುವುದು.
ತತ್ರ ತು ಪ್ರಥಮೇ ಕಾಂಡೇ ಕರ್ಮ ತತ್ತ್ಯಾಗವರ್ತ್ಮನಾ |
ತ್ವಂಪದಾರ್ಥೋ ವಿಶುದ್ಧಾತ್ಮಾ ಸೋಪಪತ್ತಿರ್ನಿರೂಪ್ಯತೇ ॥ ೮ ॥
ಅದರಲ್ಲಿ, ಪ್ರಥಮಕಾಂಡದಲ್ಲಿ ಕರ್ಮ ಮತ್ತು ಅದನ್ನು ಬಿಡುವ ಕುರಿತು ವಿವರಿಸುತ್ತಾ, ವಿಶುದ್ಧವಾದ ಆತ್ಮನ ವಾಚಕವಾದ “ತ್ವಮ್” ಪದದ ಅರ್ಥವು ಯುಕ್ತಿಯುಕ್ತವಾಗಿ ನಿರೂಪಿತವಾಗಿದೆ.
ದ್ವಿತೀಯೇ ಭಗವದ್ಭಕ್ತಿನಿಷ್ಠಾವರ್ಣನವರ್ತ್ಮನಾ | ಭಗವಾನ್ಪರಮಾನಂದಸ್ತತ್ಪದಾರ್ಥೋsವಧಾರ್ಯತೇ ॥ ೯ ॥
ಭಗವದ್ಭಕ್ತಿನಿಷ್ಠೆಯನ್ನು ವರ್ಣಿಸುವ ಎರಡನೆಯ ಕಾಂಡದಲ್ಲಿ ಪರಮಾನಂದಸ್ವರೂಪಿಯಾದ ಭಗವಂತನ ವಾಚಕವಾದ “ತತ್” ಪದದ ಅರ್ಥವು ಬೋಧಿಸಲ್ಪಡುತ್ತದೆ.
ತೃತೀಯೇ ತು ತಯೋರೈಕ್ಯಂ ವಾಕ್ಯಾರ್ಥೋ ವರ್ಣ್ಯತೇ ಸ್ಪುಟಮ್ |
ಏವಮಪ್ಯತ್ರ ಕಾಂಡಾನಾಂ ಸಂಬಂಧೋsಸ್ತಿ ಪರಸ್ಪರಮ್ ॥ ೧೦ ॥
ಮೂರನೆಯ ಷಟ್ಕ / ಕಾಂಡದಲ್ಲಿ “ತ್ವಮ್” ಮತ್ತು “ತತ್” ಪದಾರ್ಥಗಳ ಏಕತ್ವವು ಹಾಗೂ “ತತ್ ತ್ವಮ್ ಅಸಿ” ಎಂಬ ಸಾಮವೇದದ ಛಾಂದೋಗ್ಯೋಪನಿಷತ್ತಿನ ಮಹಾವಾಕ್ಯದ ಅರ್ಥವೂ ಸ್ಪಷ್ಟವಾಗಿ ವರ್ಣಿಸಲ್ಪಡುತ್ತದೆ. ಹೀಗೆ ಇಲ್ಲಿ (ಗೀತೆಯಲ್ಲಿ) ೩ ಕಾಂಡಗಳಿಗೆ ಪರಸ್ಪರ ಸಂಬಂಧವಿರುವುದು.
ಪ್ರತ್ಯಧ್ಯಾಯಂ ವಿಶೇಷಸ್ತು ತತ್ರ ತತ್ರೈವ ವಕ್ಷ್ಯತೇ |
ಮುಕ್ತಿಸಾಧನಪರ್ವೇದಂ ಶಾಸ್ತ್ರಾರ್ಥತ್ವೇನ ಕಥ್ಯತೇ ॥ ೧೧ ॥
ಪ್ರತಿಯೊಂದು ಅಧ್ಯಾಯದ ವಿಶೇಷಗಳನ್ನು ಅಲ್ಲಲ್ಲೇ ಹೇಳಲಾಗುವುದು. ಒಟ್ಟಿನಲ್ಲಿ ಈ ಗೀತಾಶಾಸ್ತ್ರವು ಸಕಲ ಶಾಸ್ತ್ರಗಳ / ಮಹಾಭಾರತದ ಸಾರರೂಪವಾಗಿದ್ದು, ಮುಕ್ತಿಸಾಧನವಾದ ಪರ್ವವಾಗಿದೆ.
ನಿಷ್ಕಾಮಕರ್ಮಾನುಷ್ಠಾನಂ ತ್ಯಾಗಾತ್ಕಾಮ್ಯನಿಷಿದ್ಧಯೋಃ |
ತತ್ರಾಪಿ ಪರಮೋ ಧರ್ಮೋ ಜಪಸ್ತುತ್ಯಾದಿಕಂ ಹರೇಃ ॥ ೧೨ ॥
ಕಾಮ್ಯಕರ್ಮ (ಫಲವನ್ನು ಕಾಮಿಸಿ ಮಾಡುವ ಕರ್ಮ) ಹಾಗೂ ನಿಷಿದ್ಧಕರ್ಮಗಳ ತ್ಯಾಗದಿಂದ ನಿಷ್ಕಾಮಕರ್ಮದ ಅನುಷ್ಠಾನ (ಫಲಾಪೇಕ್ಷಾರಹಿತವಾಗಿ), ಅದರಲ್ಲೂ ಶ್ರೀಹರಿಯ (ಪರಮಾತ್ಮನ) ಜಪ, ಸ್ತುತಿ ಮುಂತಾದವುಗಳೇ ಪರಮ ಧರ್ಮವೆನ್ನಲಾಗಿದೆ.
ಕ್ಷೀಣಪಾಪಸ್ಯ ಚಿತ್ತಸ್ಯ ವಿವೇಕೇ ಯೋಗ್ಯತಾ ಯದಾ ।
ನಿತ್ಯಾನಿತ್ಯವಿವೇಕಸ್ತು ಜಾಯತೇ ಸುದೃಢಸ್ತದಾ ॥ ೧೩ ॥
ಹೀಗೆ ಮಾಡಿದ ಕರ್ಮಯೋಗದಿಂದ ಚಿತ್ತವು ಪಾಪಕ್ಷಯವನ್ನು ಹೊಂದಿ ಶುದ್ಧವಾಗಿ ವಿವೇಕಕ್ಕೆ ಯೋಗ್ಯತೆಯನ್ನು ಯಾವಾಗ ಹೊಂದುವುದೋ ಆಗ, ನಿತ್ಯ-ಅನಿತ್ಯಗಳಾದ ಆತ್ಮ-ಅನಾತ್ಮಗಳ ಸತ್ಯ-ಮಿಥ್ಯಾ ವಿವೇಕವು ಚಿತ್ತದಲ್ಲಿ ಗಟ್ಟಿಯಾಗುತ್ತದೆ.
ಇಹಾಮುತ್ರಾರ್ಥವೈರಾಗ್ಯಂ ವಶೀಕಾರಾಭಿಧಂ ಕ್ರಮಾತ್ |
ತತಃ ಶಮಾದಿಸಂಪತ್ತ್ಯಾ ಸಂನ್ಯಾಸೋ ನಿಷ್ಠಿತೋ ಭವೇತ್ ॥ ೧೪ ॥
ಇಹಲೋಕದ ಹಾಗೂ ಪರಲೋಕದ ವಿವಿಧ ಬಯಕೆಗಳ ಬಗ್ಗೆ ವೈರಾಗ್ಯವು, ವಿವೇಕದ ನಂತರ ಕ್ರಮೇಣ ಉಂಟಾಗುತ್ತದೆ. ಅದರಲ್ಲೇ ತೀವ್ರವಾದುದು ವಶೀಕಾರವೆಂಬುದು. ಇಲ್ಲಿ ಮನಸ್ಸೂ ಕೂಡ ಭೋಗವಿರತಿಯನ್ನು ಹೊಂದುವುದು. ಬಳಿಕ ಶಮ, ದಮ, ಉಪರತಿ, ತಿತಿಕ್ಷಾ, ಶ್ರದ್ಧಾ, ಸಮಾಧಾನಗಳೆಂಬ ಸಾಧನಷಟ್ಸಂಪತ್ತಿಯ ಪ್ರಾಪ್ತಿಯಿಂದ ನೈಷ್ಠಿಕಸಂನ್ಯಾಸವು (ಸಂನ್ಯಾಸನಿಷ್ಠೆಯು) ಸ್ಥಿರ(/ಗಟ್ಟಿ/ದೃಢ)ವಾಗುವುದು.
ಏವಂ ಸರ್ವಪರಿತ್ಯಾಗಾನ್ಮುಮುಕ್ಷಾ ಜಾಯತೇ ದೃಢಾ |
ತತೋ ಗುರೂಪಸದನಮುಪದೇಶಗ್ರಹಸ್ತತಃ ॥ ೧೫ ॥
ಹೀಗೆ ಎಲ್ಲವನ್ನೂ ಎಲ್ಲರೀತಿಯಿಂದಲೂ ಬಿಟ್ಟುಬಿಟ್ಟಾಗ ದೃಢವಾದ ಮೋಕ್ಷಾಕಾಂಕ್ಷೆಯು ಉಂಟಾಗುತ್ತದೆ. ಬಳಿಕ ಗುರುವಿನ ಬಳಿಸಾರಿ ಉಪದೇಶವನ್ನು ಸ್ವೀಕರಿಸುತ್ತಾನೆ.
ತತಃ ಸಂದೇಹಹಾನಾಯ ವೇದಾಂತಶ್ರವಣಾದಿಕಮ್ |
ಸರ್ವಮುತ್ತರಮೀಮಾಂಸಾಶಾಸ್ತ್ರಮತ್ರೋಪಯುಜ್ಯತೇ ॥ ೧೬ ॥
ಗುರೂಪದೇಶವನ್ನು ಪಡೆದ ಮೇಲೆ, ಬರಬಹುದಾದ ಸಂಶಯಗಳ ಪರಿಹಾರಕ್ಕೆ ವೇದಾಂತಶಾಸ್ತ್ರದ ಶ್ರವಣ, ಮನನ, ನಿದಿಧ್ಯಾಸನ, ಸ್ವಾಧ್ಯಾಯಾದಿಗಳನ್ನು ಮಾಡುತ್ತಾನೆ. ಮುಮುಕ್ಷುವಿನ ಸಂದೇಹನಿವಾರಣೆಗೆ ಸಂಪೂರ್ಣ ಉತ್ತರಮೀಮಾಂಸಾ(ವೇದಾಂತ/ಉಪನಿಷದ್/ಬ್ರಹ್ಮಸೂತ್ರ/ಗೀತಾ ಇತ್ಯಾದಿ)ದರ್ಶನವು ಉಪಯುಕ್ತವಾಗಿದೆ.
ತತಸ್ತತ್ಪರಿಪಾಕೇಣ ನಿದಿಧ್ಯಾಸನನಿಷ್ಠತಾ |
ಯೋಗಶಾಸ್ತ್ರಂ ತು ಸಂಪೂರ್ಣಮುಪಕ್ಷೀಣಂ ಭವೇದಿಹ ॥ ೧೭ ॥
ಆ ಬಳಿಕ ಸಂಶಯಗಳೆಲ್ಲ ತೊಲಗಿಹೋಗಿ ಪರಿಪಕ್ವತೆಯುಂಟಾಗಿ ನಿದಿಧ್ಯಾಸನ (ಅಧ್ಯಾತ್ಮಯೋಗ, ಬ್ರಹ್ಮಾತ್ಮಧ್ಯಾನಾನುಭವ)ದಲ್ಲಿ ನಿಷ್ಠೆ ಬರುವುದು. ಅಲ್ಲಿಗೆ ಯೋಗಶಾಸ್ತ್ರವು ಪೂರ್ತಿ ಮುಗಿದುಹೋಗುತ್ತದೆ. ಯೋಗದ ಅಂತಿಮಹಂತವೇ ಸಮಾಧಿಯಾದುದರಿಂದ ಯೋಗಶಾಸ್ತ್ರಕ್ಕೆ ಮತ್ತಾವ ಕೆಲಸವೂ ಉಳಿದಿರುವುದಿಲ್ಲ.
ಕ್ಷೀಣದೋಷೇ ತತಶ್ಚಿತ್ತೇ ವಾಕ್ಯಾತ್ತತ್ತ್ವಮತಿರ್ಭವೇತ್ |
ಸಾಕ್ಷಾತ್ಕಾರೋ ನಿರ್ವಿಕಲ್ಪಃ ಶಬ್ದಾದೇವೋಪಜಾಯತೇ ॥ ೧೮ ॥
ಚಿತ್ತದಲ್ಲಿನ ದೋಷಗಳೆಲ್ಲವೂ ಕ್ಷಯಿಸಿ ಚಿತ್ತಶುದ್ಧಿಯಾದಾಗ, ಉಪನಿಷದ್ವಾಕ್ಯಗಳಾದ “ತತ್ ತ್ವಮ್ ಅಸಿ”, “ಅಹಂ ಬ್ರಹ್ಮ ಅಸ್ಮಿ”, “ಸರ್ವಂ ಖಲು ಇದಂ ಬ್ರಹ್ಮ”, “ಅಯಮ್ ಆತ್ಮಾ ಬ್ರಹ್ಮ”, “ಪ್ರಜ್ಞಾನಂ ಬ್ರಹ್ಮ”, “ನ ಇಹ ನಾನಾ ಅಸ್ತಿ ಕಿಂಚನ”, “ಕೇನ ಕಂ ಪಶ್ಯೇತ್”, “ಏಕೋ ದೇವಃ ಸರ್ವಭೂತೇಷು ಗೂಢಃ”, “ಪ್ರಾಣಸ್ಯ ಪ್ರಾಣಃ”, “ಭೀಷಾ ಅಸ್ಮಾದ್ ವಾತಃ ಪವತೇ”, “ಬ್ರಹ್ಮವಿದ್ ಬ್ರಹ್ಮ ಏವ ಭವತಿ”, “ಸತ್ಯಂ ಜ್ಞಾನಮ್ ಅನನ್ತಂ ಬ್ರಹ್ಮ”, “ನ ದ್ವಿತೀಯಃ ಅಸ್ತಿ ಕಶ್ಚಿತ್” — ಇತ್ಯಾದಿಗಳಿಂದ ತತ್ತ್ವಜ್ಞಾನವು ಹುಟ್ಟುತ್ತದೆ. ನಿರ್ವಿಕಲ್ಪವಾದ (ವಿಕಲ್ಪರಹಿತವಾದ) ಸಾಕ್ಷಾತ್-ಕಾರವು ಇಂತಹ ಶಬ್ದಗಳಿಂದಲೇ (ಶಬ್ದಪ್ರಮಾಣವೆನಿಸಿದ ವೇದದಿಂದಲೇ) ಉಂಟಾಗುತ್ತದೆ.
ಅವಿದ್ಯಾವಿನಿವೃತ್ತಿಸ್ತು ತತ್ತ್ವಜ್ಞಾನೋದಯೇ ಭವೇತ್ |
ತತ ಆವರಣೇ ಕ್ಷೀಣೇ ಕ್ಷೀಯತೇ ಭ್ರಮಸಂಶಯೌ ॥ ೧೯ ॥
ಇಂತಹ ತತ್ತ್ವ (ತತ್ ತ್ವಮ್—ಅದೇ ನೀನು) ಜ್ಞಾನೋದಯವಾದಾಗ ಅವಿದ್ಯೆ (ಅಜ್ಞಾನ, ಭ್ರಾಂತಿಜ್ಞಾನ) ನಿವೃತ್ತವಾಗುತ್ತದೆ (ಇಲ್ಲವಾಗುತ್ತದೆ). ಅನಂತರ ಅವಿದ್ಯೆಯ ಆವರಣ (ಪೊರೆ) ಕಳಚಿದಾಗ ವಿದ್ಯೆಯು ಗೋಚರವಾಗಿ ಎಲ್ಲ ಭ್ರಮೆ-ಸಂಶಯಗಳು ನಿವಾರಿಸಲ್ಪಡುತ್ತವೆ.
ಅನಾರಬ್ಧಾನಿ ಕರ್ಮಾಣಿ ನಶ್ಯತ್ಯೇವ ಸಮಂತತಃ |
ನ ಚಾssಗಾಮೀನಿ ಜಾಯಂತೇ ತತ್ತ್ವಜ್ಞಾನಪ್ರಭಾವತಃ ॥ ೨೦ ॥
ಇದರಿಂದಾಗಿ, ಇನ್ನೂ ಆರಂಭವಾಗದ ಕರ್ಮಫಲಗಳೆಲ್ಲವೂ ನಾಶವಾಗುತ್ತವೆ (ಅರ್ಥಾತ್ ಕರ್ತೃತ್ವಬುದ್ಧಿಯು ತೊಲಗಿ, ಹಿಂದೆ ಇಂದು ಮುಂದೆಯೂ ಮಾಡುವವನು ಬ್ರಹ್ಮಾತ್ಮನಾದ ತಾನಲ್ಲ, ಕೇವಲ ದೇಹೇಂದ್ರಿಯಗಳೆಂದರಿತಾಗ, ಹಿಂದೆ ಮಾಡಿದ್ದಾವುದೂ ಕರ್ಮವಾಗದೇ, ಅವುಗಳ ಪುಣ್ಯಪಾಪಗಳ ಲೇಪವಿರದು). ಇಂತಹ ತತ್ತ್ವಜ್ಞಾನದ ಪ್ರಭಾವದಿಂದ ಆಗಾಮಿಗಳಾದ ಕರ್ಮಗಳು ಹುಟ್ಟಲೂ ಅವಕಾಶವಿರುವುದಿಲ್ಲ (ಕರ್ತೃತ್ವಭಾವವಿಲ್ಲದ್ದರಿಂದ ಮುಂದೆ ಮಾಡುವ ಕ್ರಿಯೆಗಳಾವುವೂ ಕರ್ಮಗಳೆನಿಸವು. ಕೇವಲ ಮಾತ್ರಾಸ್ಪರ್ಶಗಳು / ಇಂದ್ರಿಯಗಳಿಗೇ ವಿಷಯಗಳೇ ಹೊರತು ತನಗಲ್ಲ ಎಂದರಿತಿರುತ್ತಾನೆ.)
ಪ್ರಾರಬ್ಧಕರ್ಮವಿಕ್ಷೇಪಾದ್ವಾಸನಾ ತು ನ ನಶ್ಯತಿ |
ಸಾ ಸರ್ವದಾ ಬಲವತಾ ಸಂಯಮೇನೋಪಶಾಮ್ಯತಿ ॥ ೨೧ ॥
ಪ್ರಾರಬ್ಧಕರ್ಮವನ್ನು ಅನುಭವಿಸುವುದರಿಂದ / ತೊಲಗಿಸುವುದರಿಂದ ಪೂರ್ವಕರ್ಮವಾಸನೆ / ಸಂಸ್ಕಾರವಾದರೋ ನಾಶವಾಗುವುದಿಲ್ಲ. ಅದು ಸದಾಕಾಲವೂ ಇಂದ್ರಿಯ-ಮನಗಳ ಬಲವಾದ ಸಂಯಮ / ನಿಗ್ರಹದಿಂದಲೇ ಉಪಶಮನಹೊಂದುತ್ತದೆ.
ಸಂಯಮೋ ಧಾರಣಾ ಧ್ಯಾನಂ ಸಮಾಧಿರಿತಿ ಯತ್ತ್ರಿಕಮ್ |
ಯಮಾದಿಪಂಚಕಂ ಪೂರ್ವಂ ತದರ್ಥಮುಪಯುಜ್ಯತೇ || ೨೨ ||
ಸಂಯಮವೆಂದರೆ ಧಾರಣಾ, ಧ್ಯಾನ ಮತ್ತು ಸಮಾಧಿಗಳೆಂಬ ಮೂರರ ಸಮೂಹ. ಯಮ, ನಿಯಮ, ಆಸನ, ಪ್ರಾಣಾಯಾಮ ಮತ್ತು ಪ್ರತ್ಯಾಹಾರಗಳೆಂಬ ೫ ಅಂಗಗಳು ಸಂಯಮಸಿದ್ಧಿಗೆ ಅವಶ್ಯವಾದ ಪೂರ್ವಸಿದ್ಧತೆಗಳಾಗಿ ಉಪಯುಕ್ತವಾಗಿವೆ.
ಈಶ್ವರಪ್ರಣಿಧಾನಾತ್ತು ಸಮಾಧಿಃ ಸಿದ್ಧ್ಯತಿ ದ್ರುತಮ್ |
ತತೋ ಭವೇನ್ಮನೋನಾಶೋ ವಾಸನಾಕ್ಷಯ ಏವ ಚ || ೨೩ ||
ಈಶ್ವರಪ್ರಣಿಧಾನ / ಪರಮಾತ್ಮನಿಗೆ ಸಂಪೂರ್ಣ ಶರಣಾಗಿ ಅವನನ್ನೇ ಆಶ್ರಯಿಸುವುದರಿಂದ ಸಮಾಧಿಯು ಬೇಗನೆ ಸಿದ್ಧಿಸುವುದು. ಅದರಿಂದ ಮನಸ್ಸಿನ ನಾನಾ ವೃತ್ತಿ / ಸಂಕಲ್ಪ / ಯೋಚನೆಗಳು ಇಲ್ಲವಾಗಿ ಪೂರ್ವಸಂಸ್ಕಾರ / ವಾಸನೆಗಳು ಕ್ಷೀಣವಾಗುತ್ತವೆ.
ತತ್ತ್ವಜ್ಞಾನಂ ಮನೋನಾಶೋ ವಾಸನಾಕ್ಷಯ ಇತ್ಯಪಿ |
ಯುಗಪತ್ತ್ರಿತಯಾಭ್ಯಾಸಾಜ್ಜೀವನ್ಮುಕ್ತಿರ್ದೃಢಾ ಭವೇತ್ ॥ ೨೪ ॥
ತತ್ತ್ವಜ್ಞಾನ, ಮನೋನಾಶ ಹಾಗೂ ವಾಸನಾಕ್ಷಯಗಳೆಂಬ ಮೂರನ್ನೂ ಜೊತೆಜೊತೆಗೇ ಅಭ್ಯಸಿಸುವುದರಿಂದ ಜೀವನ್ಮುಕ್ತಿಯು ದೃಢವಾಗುತ್ತದೆ.
ವಿದ್ವತ್ಸಂನ್ಯಾಸಕಥನಮೇತದರ್ಥಂ ಶ್ರುತೌ ಕೃತಮ್ |
ಪ್ರಾಗಸಿದ್ಧೋ ಯ ಏವಾಂಶೋ ಯತ್ನಃ ಸ್ಯಾತ್ತಸ್ಯ ಸಾಧನೇ || ೨೫ ॥
ಇದಕ್ಕಾಗಿಯೇ ಶ್ರುತಿಯಲ್ಲಿ (ಉಪನಿಷತ್ತಿನಲ್ಲಿ) ವಿದ್ವತ್-ಸಂನ್ಯಾಸದ ನಿರೂಪಣೆಯಿದೆ. ಹಿಂದೆ ಸಿದ್ಧಿಯಾದ ಯಾವ ಅಂಶವಿದೆಯೋ ಅದರ ಸಾಧನೆಯ ಯತ್ನವು ಇದರಲ್ಲಿ ಅಡಕವಾಗಿರುವುದು. ಅರ್ಥಾತ್, ಜ್ಞಾನಿಗೆ ಸಂನ್ಯಾಸವು ಜ್ಞಾನಕಾರಕವಾಗಲಾರದು. ಆದರೂ, ಜ್ಞಾನಿಯಾದರೂ ಪ್ರಾರಬ್ಧದಿಂದಾಗಿ ಜೀವನ್ಮುಕ್ತಾನಂದವು ಉಂಟಾಗಿರುವುದಿಲ್ಲ. ಅದಕ್ಕೆ ಸಂನ್ಯಾಸಸ್ವೀಕಾರವು ಅಗತ್ಯ.
ನಿರುದ್ಧೇ ಚೇತಸಿ ಪುರಾ ಸವಿಕಲ್ಪಸಮಾಧಿನಾ |
ನಿರ್ವಿಕಲ್ಪಸಮಾಧಿಸ್ತು ಭವೇದತ್ರ ತ್ರಿಭೂಮಿಕಃ || ೨೬ ||
ಮೊದಲು ಸ-ವಿಕಲ್ಪ-ಸಮಾಧಿಯಿಂದ ಚಿತ್ತ-ವಿಕಲ್ಪಗಳು / ವೃತ್ತಿಗಳು ನಿಗ್ರಹಿಸಲ್ಪಡಬೇಕು. ಬಳಿಕ, ನಿರ್ವಿಕಲ್ಪಸಮಾಧಿಯು ಸಿದ್ಧಿಸುವುದು. ನಿರ್ವಿಕಲ್ಪವು ಮೂರು ಭೂಮಿಕೆಗಳುಳ್ಳದ್ದು.
ವ್ಯುತ್ತಿಷ್ಠತೇ ಸ್ವತಸ್ತ್ವಾದ್ಯೇ ದ್ವಿತೀಯೇ ಪರಬೋಧಿತಃ |
ಅಂತ್ಯೇ ವ್ಯುತ್ತಿಷ್ಠತೇ ನೈವ ಸದಾ ಭವತಿ ತನ್ಮಯಃ || ೨೭ ||
ಮೊದಲ ಭೂಮಿಕೆಯಲ್ಲಿ ಯೋಗಿಯು ತಾನೇ (ಸ್ವತಃ) ನಿರ್ವಿಕಲ್ಪಸಮಾಧಿಯಿಂದ ಮೇಲೇಳುತ್ತಾನೆ (ಹೊರಬರುತ್ತಾನೆ). ಎರಡನೆಯದರಲ್ಲಿ ಬೇರೆಯವರ ಸಹಾಯದಿಂದ ಎಚ್ಚರಗೊಳ್ಳುತ್ತಾನೆ. ಆದರೆ, ತೃತೀಯಭೂಮಿಕೆಯಲ್ಲಿ ಯೋಗಿಯು ಎಂದೂ ಸಮಾಧಿಯಿಂದ ಹೊರಬರದೆ ಸದಾಕಾಲವೂ ಸಮಾಧಿಸ್ಥನಾಗಿಯೇ ಇರುತ್ತಾನೆ.
ಏವಂಭೂತೋ ಬ್ರಾಹ್ಮಣಃ ಸ್ಯಾದ್ವರಿಷ್ಠೋ ಬ್ರಹ್ಮವಾದಿನಾಮ್ |
ಗುಣಾತೀತಃ ಸ್ಥಿತಪ್ರಜ್ಞೋ ವಿಷ್ಣುಭಕ್ತಶ್ಚ ಕಥ್ಯತೇ ॥ ೨೮ ॥
ಇಂಥ ಬ್ರಹ್ಮವಿದನು ಬ್ರಹ್ಮನಿಷ್ಠರಲ್ಲೇ ವರಿಷ್ಠನು (ಶ್ರೇಷ್ಠನು). ಅವನು ಸತ್ತ್ವ-ರಜ-ತಮಗಳೆಂಬ ತ್ರಿಗುಣಗಳನ್ನು ಮೀರಿದವನೂ, ಪ್ರಜ್ಞೆಯು ಸ್ಥಿರವಾಗಿರುವವನೂ ಹಾಗೂ ವಿಷ್ಣುಭಕ್ತನೆಂದೂ ಕರೆಯಲ್ಪಡುತ್ತಾನೆ.
ಅತಿವರ್ಣಾಶ್ರಮೀ ಜೀವನ್ಮುಕ್ತ ಆತ್ಮರತಿಸ್ತಥಾ |
ಏತಸ್ಯ ಕೃತಕೃತ್ಯತ್ವಾಚ್ಛಾಸ್ತ್ರಮಸ್ಮಾನ್ನಿವರ್ತತೇ ॥ ೨೯ ||
ಅವನು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಎಂಬ ಚಾತುರ್ವರ್ಣ್ಯವನ್ನು ಹಾಗೂ ಬ್ರಹ್ಮಚರ್ಯ-ಗೃಹಸ್ಥ-ವಾನಪ್ರಸ್ಥ-ಸಂನ್ಯಾಸವೆಂಬ ೪ ಆಶ್ರಮಗಳನ್ನೂ ದಾಟಿದವನು, ಬದುಕಿರುವಾಗಲೇ ಮುಕ್ತನು ಹಾಗೂ ತನ್ನಲ್ಲೇ ತಾನು ಆನಂದಮಗ್ನನಾಗಿರುವವನು. ಇವನ ಕೃತಕೃತ್ಯತೆಯಿಂದಾಗಿ (ಮಾಡಬೇಕಾದ ಕೃತ್ಯವನ್ನು ಮಾಡಿದವನಾಗಿ) ಶಾಸ್ತ್ರವೂ ಅವನಿಂದ ನಿವೃತ್ತವಾಗುತ್ತದೆ. ಅಂದರೆ, ಅವನಿಗೆ ಶಾಸ್ತ್ರದಿಂದ ಯಾವ ಪ್ರಯೋಜನವೂ ಇಲ್ಲ.
ಯಸ್ಯ ದೇವೇ ಪರಾಭಕ್ತಿರ್ಯಥಾ ದೇವೇ ತಥಾ ಗುರೌ ।
ತಸ್ಯೈತೇ ಕಥಿತಾ ಹ್ಯರ್ಥಾಃ ಪ್ರಕಾಶಂತೇ ಮಹಾತ್ಮನಃ || ೩೦ ||
ಅಂಥವನು ಮಹಾತ್ಮನು. ಯಾವನಿಗೆ ದೇವರಲ್ಲಿ ಶ್ರೇಷ್ಠವಾದ ಭಕ್ತಿಯೂ, ಅದರಂತೆಯೇ ಗುರುವಿನಲ್ಲೂ ಅಷ್ಟೇ ಭಕ್ತಿಯೂ ಇರುವುದೋ ಅಂತಹ ಈ ಮಹಾತ್ಮನಿಗೆ ಉಪದೇಶಗಳ ಹಂಗಿಲ್ಲದೆ ಶಾಸ್ತ್ರಾರ್ಥಗಳೆಲ್ಲವೂ ತಾವೇತಾವಾಗಿ ಮೈದೋರುತ್ತವೆ.
ಇತ್ಯಾದಿಶ್ರುತಿಮಾನೇನ ಕಾಯೇನ ಮನಸಾ ಗಿರಾ ।
ಸರ್ವಾವಸ್ಥಾಸು ಭಗವದ್ಭಕ್ತಿರತ್ರೋಪಯುಜ್ಯತೇ ॥ ೩೧ ॥
ಶ್ರುತಿವರ್ಣಿತವಾದ ಇಂತಹ ಪರತತ್ತ್ವವನ್ನರಿಯಲು ದೇಹ-ಮನ-ಮಾತುಗಳೆಂಬ ತ್ರಿಕರಣ ಪೂರ್ವಕವಾದ ಭಗವದ್-ಭಕ್ತಿಯು ಸದಾಕಾಲವೂ ಎಲ್ಲಾ ಅವಸ್ಥೆಗಳಲ್ಲೂ (ಭೂಮಿಕೆಗಳಲ್ಲೂ) ಇರಬೇಕಾದುದು ಅನಿವಾರ್ಯ.
ಪೂರ್ವಭೂಮೌ ಕೃತಾ ಭಕ್ತಿರುತ್ತರಾಂ ಭೂಮಿಮಾನಯೇತ್ |
ಅನ್ಯಥಾ ವಿಘ್ನಬಾಹುಲ್ಯಾತ್ಫಲಸಿದ್ಧಿಃ ಸುದುರ್ಲಭಾ ॥ ೩೨ ॥
ಹಿಂದಿನ ಹಂತದಲ್ಲಿ ಆಚರಿಸಿದ ಭಕ್ತಿಯು ಮುಂದಿನ ಭೂಮಿಕೆಗೆ ಕರೆದೊಯ್ಯುವ ಸಾಧನವಾಗುತ್ತದೆ. ಇಲ್ಲದಿದ್ದರೆ ಅತಿಯಾದ ವಿಘ್ನಗಳಿಂದಾಗಿ ಫಲಸಿದ್ಧಿಯು ಕಷ್ಟವಾಗಿಬಿಡುವುದು.
ಪೂರ್ವಾಭ್ಯಾಸೇನ ತೇನೈವ ಹ್ರಿಯತೇ ಹ್ಯವಶೋऽಪಿ ಸಃ |
ಅನೇಕಜನ್ಮಸಂಸಿದ್ಧ ಇತ್ಯಾದಿ ಚ ವಚೋ ಹರೇಃ ॥ ೩೩ ॥
“ಪೂರ್ವಜನ್ಮದ ಅಭ್ಯಾಸದಿಂದಾಗಿ, ಇಚ್ಛೆಯಿಲ್ಲದಿದ್ದರೂ ಭೋಗಸಾಧನಗಳಿಂದ ಹೊರಬಂದು ಮೋಕ್ಷಸಾಧನಗಳಲ್ಲಿ ಸೇರುವಂತೆ ಈ ಭಕ್ತಿಯು ಮಾಡುತ್ತದೆ (ಗೀತಾ ೬ |೪೪). ಅನೇಕಜನ್ಮಗಳ ಪ್ರಯತ್ನದಿಂದ ಸಿದ್ಧಿಯನ್ನು ಪಡೆದು ಪರಮಗತಿಯನ್ನು ಹೊಂದುತ್ತಾನೆ (ಗೀತಾ ೬ | ೪೧)” ಇತ್ಯಾದಿಯಾಗಿ ಭಗವಂತನೇ ಹೇಳಿದ್ದಾನೆ.
ಯದಿ ಪ್ರಾಗ್ಭವಸಂಸ್ಕಾರಸ್ಯಾಚಿಂತ್ಯತ್ವಾತ್ತು ಕಶ್ಚನ |
ಪ್ರಾಗೇವ ಕೃತಕೃತ್ಯಃ ಸ್ಯಾದಾಕಾಶಫಲಪಾತವತ್ || ೩೪ ||
ಒಂದುವೇಳೆ, ಹಿಂದಿನ ಜನ್ಮಗಳ ಸಂಸ್ಕಾರಗಳನ್ನು ಊಹಿಸಲು ದುಸ್ಸಾಧ್ಯವಾದ್ದರಿಂದ, ಯಾವನೋ ಒಬ್ಬನು ಕಾಕತಾಲೀಯ ನ್ಯಾಯದಂತೆ (ಕಾಗೆ ಹಣ್ಣಿನ ಮೇಲೆ ಕುಳಿತುದೂ ಫಲ ಮೇಲಿಂದ ಬಿದ್ದುದೂ ಒಟ್ಟಿಗೇ ಆದಂತೆ), ಮೊದಲೇ ಕೃತಕೃತ್ಯನಾಗಿದ್ದೇ ಆದರೆ,
ನ ತಂ ಪ್ರತಿ ಕೃತಾರ್ಥತ್ವಾಚ್ಛಾಸ್ತ್ರಮಾರಬ್ಧುಮಿಷ್ಯತೇ । ಪ್ರಾಕ್ಸಿದ್ಧಸಾಧನಾಭ್ಯಾಸಾದ್ದುರ್ಜ್ಞೇಯಾ ಭಗವತ್ಕೃಪಾ ॥ ೩೫ ॥
ಅಂತಹ ಕೃತಾರ್ಥನಾದವನ ವಿಷಯದಲ್ಲಿ ಶಾಸ್ತ್ರದ ಕಟ್ಟಳೆಗಳೇನೂ ನಡೆಯಲಾರವು. ಹಿಂದಿನ ಸಿದ್ಧಿಸಾಧನಗಳ ಅಭ್ಯಾಸದಿಂದ ಅವನು ಕೃತಾರ್ಥನಾಗುತ್ತಾನೆ. ಹೀಗೆ ಭಗವಂತನ ಕೃಪೆಯ ರಹಸ್ಯವು ಊಹಿಸಲು ಕಷ್ಟವಾದುದು.
ಏವಂ ಪ್ರಾಗ್ಭೂಮಿಸಿದ್ಧಾವಪ್ಯುತ್ತರೋತ್ತರಭೂಮಯೇ ।
ವಿಧೇಯಾ ಭಗವದ್ಭಕ್ತಿಸ್ತಾಂ ವಿನಾ ಸಾ ನ ಸಿಧ್ಯತಿ ॥ ೩೬ ॥
ಹೀಗೆ ಹಿಂದಿನ ಭೂಮಿಕೆಯು ಸಿದ್ಧವಾಗಿದ್ದರೂ ಮುಂದುಮುಂದಿನ ಭೂಮಿಕೆಗಳಿಗಾಗಿ ಭಗವದ್ಭಕ್ತಿಯು ಇರಲೇಬೇಕು. ಇಲ್ಲದಿದ್ದರೆ ಸಿದ್ಧಿಪ್ರಾಪ್ತಿಯಾಗದು.
ಜೀವನ್ಮುಕ್ತಿದಶಾಯಾಂ ತು ನ ಭಕ್ತೇಃ ಫಲಕಲ್ಪನಾ |
ಅದ್ವೇಷ್ಟೃತ್ವಾದಿವತ್ತೇಷಾಂ ಸ್ವಭಾವೋ ಭಜನಂ ಹರೇಃ ॥ ೩೭ ॥
ಜೀವನ್ಮುಕ್ತಾವಸ್ಥೆಯಲ್ಲಾದರೋ ಭಕ್ತಿಯಿದ್ದರೂ ಫಲಾಪೇಕ್ಷೆಯಿರುವುದಿಲ್ಲ. ದ್ವೇಷವಿಲ್ಲದಿರುವಿಕೆಯೇ ಮುಂತಾದುವುಗಳಂತೆ ಭಗವದ್ಬಕ್ತಿಯೂ ಆತನಿಗೆ ಸಹಜ ಸ್ವಭಾವವೇ ಆಗಿರುವುದು.
ಆತ್ಮಾರಾಮಾಶ್ಚ ಮುನಯೋ ನಿರ್ಗ್ರಂಥಾ ಅಪ್ಯುರುಕ್ರಮೇ |
ಕುರ್ವಂತ್ಯಹೈತುಕೀಂ ಭಕ್ತಿಮಿತ್ಥಂಭೂತಗುಣೋ ಹರಿಃ ॥ ೩೮ ॥
ಆತ್ಮನಲ್ಲೇ ರಮಿಸುತ್ತಿರುವ ಮುನಿಗಳ ಎಲ್ಲ ಮಾಯಾಪಾಶಗಳೂ ಕತ್ತರಿಸಲ್ಪಟ್ಟಿರುತ್ತದೆ. ಹಾಗಿದ್ದರೂ ಅವರು ನಿಷ್ಕಾಮವಾದ ಭಕ್ತಿಯನ್ನು ಭಗವಂತನಲ್ಲಿಡುತ್ತಾರೇಕೆಂದರೆ ಆತನು ಅಂತಹ ಅದ್ಭುತಗುಣಗಳಿಂದ ಕೂಡಿರುತ್ತಾನೆ.
ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ |
ಇತ್ಯಾದಿವಚನಾತ್ ಪ್ರೇಮಭಕ್ತೋsಯಂ ಮುಖ್ಯ ಉಚ್ಯತೇ ॥ ೩೯ ॥
ಆರ್ತ, ಜಿಜ್ಞಾಸು, ಅರ್ಥಾರ್ಥೀ ಹಾಗೂ ಜ್ಞಾನಿಗಳೇ ಮುಂತಾದ ವಿವಿಧ ಭಕ್ತರಲ್ಲಿ ನಿತ್ಯವೂ ಯೋಗಸ್ಥನಾಗಿ ಅನನ್ಯಭಕ್ತಿಯುಳ್ಳ ಜ್ಞಾನೀಭಕ್ತನು ಶ್ರೇಷ್ಠನೆಂಬಿತ್ಯಾದಿ ಭಗವದುಪದೇಶಗಳಿಂದ ಪ್ರೇಮಭಕ್ತಿಯುಳ್ಳ ಜೀವನ್ಮುಕ್ತನೇ ಮುಖ್ಯಭಕ್ತ / ಭಕ್ತಶ್ರೇಷ್ಠನೆಂದು ಹೇಳಲಾಗಿದೆ.
ಏತತ್ಸರ್ವಂ ಭಗವತಾ ಗೀತಾಶಾಸ್ತ್ರೇ ಪ್ರಕಾಶಿತಮ್ |
ಅತೋ ವ್ಯಾಖ್ಯಾತುಮೇತನ್ಮೇ ಮನ ಉತ್ಸಹತೇ ಭೃಶಮ್ ॥ ೪೦ ||
ಇದೆಲ್ಲವೂ ಭಗವಂತನಿಂದ ಗೀತಾಶಾಸ್ತ್ರದಲ್ಲಿ ಪ್ರಕಾಶಿತವಾಗಿದೆ. ಆದ್ದರಿಂದಲೇ ಗೀತೆಯನ್ನು ವ್ಯಾಖ್ಯಾನಿಸಲು ನನ್ನ ಮನವು ತುಂಬ ಉತ್ಸಾಹದಿಂದಿರುವುದು.
ನಿಷ್ಕಾಮಕರ್ಮಾನುಷ್ಠಾನಂ ಮೂಲಂ ಮೋಕ್ಷಸ್ಯ ಕೀರ್ತಿತಮ್ |
ಶೋಕಾದಿರಾಸುರಃ ಪಾಪ್ಮಾ ತಸ್ಯ ಚ ಪ್ರತಿಬಂಧಕಃ ॥ ೪೧ ||
ನಿಷ್ಕಾಮಕರ್ಮಾನುಷ್ಠಾನವೇ (ಯಾವುದೇ ಬಯಕೆಯಿಲ್ಲದೆ ಕರ್ಮವನ್ನು ಮಾಡುವುದೇ) ಮೋಕ್ಷಕ್ಕೆ ಕಾರಣವೆಂದು ಕೀರ್ತಿಸಲಾಗಿದೆ (ಪ್ರಶಂಸಿಸಲಾಗಿದೆ). ಶೋಕವೇ ಮುಂತಾದ ಪಾಪೀ ಆಸುರೀಸಂಪತ್ತುಗಳು ಅದಕ್ಕೆ ಅಡ್ಡಿಯಾಗಿವೆ.
ಯತಃ ಸ್ವಧರ್ಮವಿಭ್ರಂಶಃ ಪ್ರತಿಷಿದ್ಧಸ್ಯ ಸೇವನಮ್ |
ಫಲಾಭಿಸಂಧಿಪೂರ್ವಾ ವಾ ಸಾಹಂಕಾರಾ ಕ್ರಿಯಾ ಭವೇತ್ ॥ ೪೨ ||
ಯಾವ ಈ ಆಸುರೀಸಂಪದದಿಂದ ಸ್ವಧರ್ಮಭ್ರಷ್ಟತೆ, ನಿಷಿದ್ಧಕರ್ಮಾಚರಣೆ, ಫಲಾಪೇಕ್ಷೆ ಹಾಗೂ ಅಹಂಕಾರಪುರಸ್ಸರವಾಗಿ ಕರ್ಮಗಳಲ್ಲಿ ಪ್ರವೃತ್ತಿಯುಂಟಾಗುತ್ತದೆ.
ಆವಿಷ್ಟಃ ಪುರುಷೋ ನಿತ್ಯಮೇವಾಸುರಪಾಪ್ಮಭಿಃ |
ಪುಮರ್ಥಲಾಭಾಯೋಗ್ಯಃ ಸನ್, ಲಂಭತೇ ದುಃಖಸಂತತಿಮ್ ॥ ೪೩ ॥
ಇಂತಹ ಆಸುರೀಸಂಪತ್ತಿಂದ ಯಾವಾಗಲೂ ಕೂಡಿಕೊಂಡಿರುವ ಪುರುಷನು ಚತುರ್ವಿಧಪುರುಷಾರ್ಥಗಳ ಪ್ರಾಪ್ತಿಗೆ ಅಯೋಗ್ಯನಾಗಿ, ದುಃಖಪರಂಪರೆಗೆ ಈಡಾಗುತ್ತಾನೆ.
ದುಃಖಂ ಸ್ವಭಾವತೋ ದ್ವೇಷ್ಯಂ ಸರ್ವೇಷಾಂ ಪ್ರಾಣಿನಾಮಿಹ |
ಅತಸ್ತತ್ಸಾಧನಂ ತ್ಯಾಜ್ಯಂ ಶೋಕಮೋಹಾದಿಕಂ ಸದಾ || ೪೪ ||
ದುಃಖವು ಸಕಲ ಪ್ರಾಣಿಮಾತ್ರರಿಗೂ ಇಷ್ಟವಲ್ಲದ್ದರಿಂದ, ಅದಕ್ಕೆ ಸಾಧನವಾದ ಶೋಕಮೋಹಾದಿಗಳೂ ತ್ಯಾಜ್ಯವೇ ಆಗಿವೆ.
ಅನಾದಿಭವಸಂತಾನಾನಿರೂಢಂ ದುಃಖಕಾರಣಮ್ |
ದುಸ್ತ್ಯಜಂ ಶೋಕಮೋಹಾದಿ ಕೇನೋಪಾಯೇನ ಹೀಯತಾಮ್ ॥ ೪೫ ॥
ಆದರೆ ದುಃಖಕ್ಕೆ ಕಾರಣವಾದ ಈ ಶೋಕಮೋಹಾದಿಗಳು ಅನಾದಿಕಾಲದಿಂದಲೂ ಪರಂಪರಾಗತವಾಗಿ ರೂಢಮೂಲವಾಗಿ ಬಂದಿದ್ದು, ಬಿಡಲು ಕಷ್ಟಸಾಧ್ಯವಾಗಿದೆ. ಇವನ್ನು ಯಾವುದಾದರೂ ಉಪಾಯದಿಂದ ಪರಿಹರಿಸಬೇಕು.
ಏವಮಾಕಾಂಕ್ಷಯಾssವಿಷ್ಟಂ ಪುರುಷಾರ್ಥೋನ್ಮುಖಂ ನರಮ್ | ಬುಬೋಧಯಿಷುರಾಹೇದಂ ಭಗವಾಂಛಾಸ್ತ್ರಮುತ್ತಮಮ್ ॥೪೬॥
ಈ ರೀತಿಯ ಇಚ್ಛೆಯುಳ್ಳ, ಪರಮಪುರುಷಾರ್ಥವಾದ ಮೋಕ್ಷೋನ್ಮುಖನಾದ ನರನಿಗೆ ಬೋಧಿಸುವ ಇಚ್ಛೆಯುಳ್ಳ ಭಗವಂತನು ಈ ಶ್ರೇಷ್ಠವಾದ ಗೀತಾಶಾಸ್ತ್ರವನ್ನು ಹೇಳಿದ್ದಾನೆ.
|| ಇಲ್ಲಿಗೆ ಮಧುಸೂದನಸರಸ್ವತೀ ವಿರಚಿತ ಗೀತಾಗೂಢಾರ್ಥದೀಪಿಕಾ ಪೀಠಿಕೆಯ ಕನ್ನಡ ಅನುವಾದವು ಮುಗಿಯಿತು ||
(೨೯) ಶ್ರೀಮದ್ಭಗವದ್ಗೀತಾರ್ಥಸರ್ವಸ್ವ—ಹೊಳೆನರಸೀಪುರಶ್ರೀಗಳು
ಪೀಠಿಕೆ
ಈ ಗ್ರಂಥದಲ್ಲಿ ಪ್ರಧಾನವಾಗಿ ಐದು ಪ್ರಕರಣಗಳಿವೆ. ಗೀತಾ ತಾತ್ಪರ್ಯವನ್ನು ಯಾವ ಸಾಧನದಿಂದ ನಿರ್ಣಯಿಸಬೇಕೆಂಬುದನ್ನು ಮೊದಲನೆಯ ಪ್ರಕರಣದಲ್ಲಿ ವಿವೇಚಿಸಿರುವರು. ಹಿಂದಿನ ಭಾಷ್ಯಕಾರರಂತೆ ಈಗಿನ ವಿಮರ್ಶಕರಿಗೂ ಗೀತಾ ತಾತ್ಪರ್ಯದ ವಿಷಯಕ್ಕೆ ಮತಭೇದವಿದೆ. ಸ್ವತಂತ್ರಪರೀಕ್ಷಣಮಾರ್ಗದಿಂದಲೂ ಗೀತೆಯ ತಾತ್ಪರ್ಯವನ್ನು ನಿರ್ಣಯಿಸಲಾಗದು. ಗೀತಾಶ್ಲೋಕಗಳನ್ನು ಮಹಾಭಾರತದ ಬೇರೆ ಬೇರೆ ಭಾಗಗಳೊಡನೆ ಹೋಲಿಸಿ ನೋಡುವದರಿಂದ ಗೀತಾರ್ಥನಿರ್ಣಯಕ್ಕೇನೊ ಸಹಾಯವಾಗುವದು. ಆದರೂ ಉಪಕ್ರಮೋಪಸಂಹಾರ, ಅಭ್ಯಾಸ, ಅಪೂರ್ವತಾ, ಅರ್ಥವಾದ, ಫಲ, ಉಪಪತ್ತಿ ಎಂಬ ತಾತ್ಪರ್ಯಲಿಂಗಗಳು ಗೀತಾತಾತ್ಪರ್ಯನಿರ್ಣಯಕ್ಕೆ ಅಮೂಲ್ಯಸಾಧನಗಳಾಗಿವೆ. ಅಲ್ಲದೆ ಈ ಅರ್ಥವನ್ನು ಯುಕ್ತ್ಯನುಭವಗಳಿಗೆ ಹೊಂದಿಸಿ ತಿಳಿಯಬೇಕು.
ಗೀತೆಯಲ್ಲಿ ಉಪದಿಷ್ಟವಾದ ವಿಷಯವು ಯಾವದು ಎಂಬ ವಿಚಾರವು ಎರಡನೆಯ ಪ್ರಕರಣದಲ್ಲಿದೆ. ಭಗವದ್ಗೀತೆಯಲ್ಲಿ ಕರ್ಮ, ಧ್ಯಾನ, ಭಕ್ತಿಗಳನ್ನು ಪ್ರವೃತ್ತಿಯೆಂಬ ಹೆಸರಿನಿಂದಲೂ ಜ್ಞಾನವನ್ನು ನಿವೃತ್ತಿಯೆಂಬ ಹೆಸರಿನಿಂದಲೂ ಕರೆದಿದೆ. ಪ್ರವೃತ್ತಿ ಧರ್ಮವು ನಿವೃತ್ತಿ ಧರ್ಮಕ್ಕಿಂತ ಕೀಳುತರದ್ದಾದರೂ ಪ್ರವೃತ್ತಿ ಧರ್ಮವು ಭಗವಂತನಿಗಾಗಿಯೇ ಮಾಡತಕ್ಕದ್ದಾಗಿದೆ. ಪ್ರವೃತ್ತಿಧರ್ಮದಿಂದ ನಿವೃತ್ತಿಧರ್ಮವನ್ನು ಪಡೆದು ನಿವೃತ್ತಿಧರ್ಮದಿಂದ ಪುನರಾವೃತ್ತಿ ರಹಿತವಾದ ಮೋಕ್ಷವನ್ನು ಪಡೆಯುತ್ತಾರೆ. ಹೀಗೆ ಗೀತೆಯಲ್ಲಿ ಮುಖ್ಯವಾಗಿ ಈ ಪ್ರವೃತ್ತಿನಿವೃತ್ತಿಗಳೆಂಬ ಎರಡು ಧರ್ಮಗಳನ್ನೇ ಪ್ರತಿಪಾದಿಸಿದೆ. ಮಹಾಭಾರತದ ನಾರಾಯಣೀಯೋಪಾಖ್ಯಾನ ಮುಂತಾದ ಭಾಗಗಳೊಡನೆ ಗೀತೆಯನ್ನು ಹೋಲಿಸಿದಾಗ ಈ ಅಭಿಪ್ರಾಯವು ಬಹಳ ಸ್ಪಷ್ಟವಾಗಿ ಮೂಡುವದು. ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಎಂಬ ಉಳಿದೆರಡು ಪ್ರಸ್ಥಾನಗಳೊಡನೆ ಗೀತಾಪ್ರಸ್ಥಾನವನ್ನು ಹೋಲಿಸಿ ನೋಡಿದಾಗಲೂ ಈ ಅರ್ಥವೇ ನಿಶ್ಚಯವಾಗುವದು.
'ಕರ್ಮಯೋಗ'ವೆಂಬುದು ಮೂರನೆಯ ಪ್ರಕರಣವು. ಒಂದನೆಯ ಅಧ್ಯಾಯದಲ್ಲಿ ಗೀತೆಯಲ್ಲಿ ಮುಖ್ಯವಾಗಿ ಪ್ರತಿಪಾದಿಸಿದ ಬ್ರಹ್ಮವಿದ್ಯೆ ಮತ್ತು ಯೋಗಗಳ ಸ್ವರೂಪನ್ನು ವಿಶದಗೊಳಿಸಿರುವರು. ಗೀತೋಕ್ತವಾದ ಕರ್ಮದ ಸ್ವರೂಪನ್ನು ಎರಡನೆಯ ಅಧ್ಯಾಯದಲ್ಲಿ ವಿವೇಚಿಸುತ್ತಾ ಶಾಸ್ತ್ರೋಕ್ತ ಕರ್ಮವನ್ನೇ ಗೀತೆಯಲ್ಲಿ ಕರ್ಮಶಬ್ದದಿಂದ ಕರೆದಿದೆ ಎಂದು ನಿರ್ಣಯಿಸಿ, ಶಾಸ್ತ್ರೀಯಕರ್ಮಕ್ಕೆ ಅಧಿಕಾರಿಗಳಾಗಿದ್ದು ಅದನ್ನು ಮಾಡಲು ಸಾಮರ್ಥ್ಯವಿಲ್ಲದವರಿಗೂ, ಶಾಸ್ತ್ರೀಯ ಕರ್ಮವನ್ನು ಮಾಡಲು ಅವಕಾಶವಿಲ್ಲದವರಿಗೂ ತಕ್ಕ ಕರ್ಮಗಳನ್ನು ಗೀತೆಯಲ್ಲಿ ಹೇಳಿರುವದು. ಅದನ್ನು ಶ್ರದ್ಧೆಯಿಂದ ಆಚರಿಸಿದರೆ ಅವರಿಗೂ ಉತ್ತಮ ಗತಿಯಾಗುವದು ಎಂಬುದು ಗೀತಾಕಾರರಿಗೆ ಒಪ್ಪಾದದ್ದೇ. ಪ್ರಕೃತಿಯ ಗುಣಗಳಿಗೆ ಅಧೀನನಾಗಿ ಪ್ರತಿಯೊಬ್ಬನೂ ಸ್ವಾತಂತ್ರ್ಯವಿಲ್ಲದೆಯೇ ಏನಾದರೊಂದು ಕರ್ಮವನ್ನು ಮಾಡುತ್ತಲೇ ಇರುವನು. ಇದೇ ಕರ್ಮಬಂಧವು. ಜನರು ಮಾಡುವ ಒಂದೊಂದು ಕರ್ಮಕ್ಕೂ ಒಂದೊಂದು ಉದ್ದೇಶವಿರುವದು. ಪ್ರತಿಯೊಬ್ಬರೂ ತಮ್ಮ ತಮ್ಮ ಉದ್ದೇಶಗಳ ಹೆಚ್ಚುಗಾರಿಕೆಯನ್ನು ಮಿಕ್ಕವರಿಗೆ ತಿಳಿಸುತ್ತಲೇ ಇರುವರು. ಆದರೆ ಪ್ರತಿಯೊಂದು ಕರ್ಮದಲ್ಲೂ ಒಂದಲ್ಲ ಒಂದು ಕುಂದು ಇರುವದು. ಹೀಗೆ ಅನಿವಾರ್ಯವಾದ ಕರ್ಮದಲ್ಲಿ ಯಾವದನ್ನು ಮಾಡುವದು ಒಳ್ಳೆಯದು? ಯಾವದನ್ನು ಬಿಡುವದು ಒಳ್ಳೆಯದು? ಎಂಬ ವಿಚಾರವು ಜನರಿಗೆ ಸ್ವಾಭಾವಿಕವಾಗಿರುವದಷ್ಟೆ? ಇದಕ್ಕೆ ಗೀತೆಯ ಉತ್ತರ ಶಾಸ್ತ್ರೀಯ ಕರ್ಮವನ್ನು ಮಾಡಬೇಕು; ಅದನ್ನು ಯೋಗರೂಪವಾಗಿ ಮಾಡಬೇಕು, ಎಂದು ತಿಳಿಸಿ ಇನ್ನೂ ಹೆಚ್ಚಿನ ಧ್ಯೇಯವನ್ನು ನಮ್ಮ ಮುಂದಿಡುವದು. ಮುಂದಿನ ಅಧ್ಯಾಯಗಳಲ್ಲಿ ಕರ್ಮಯೋಗದ ಸ್ವರೂಪವನ್ನು ನಿರೂಪಿಸಿರುವರು. ಉತ್ತಮ ಕರ್ಮದಲ್ಲಿ ಸಂಗವಿರಬೇಕು; ಗುಣಸಂಗವಿರಬಾರದು; ಭಗವದ್ಭಾವನೆಯಿರಬೇಕು; ರಾಗದ್ವೇಷಗಳೆಂಬ ದುರ್ಭಾವವು ಇರಬಾರದು; ಫಲದ ಕಡೆಗೆ ಲಕ್ಷ್ಯವಿರಬೇಕು; ಸ್ವಾರ್ಥದಿಂದಾಗುವ ಅಲ್ಪಫಲಕ್ಕೆ ಜೋಲು ಬೀಳಬಾರದು—ಎಂದು ಕರ್ಮವನ್ನು ಹೇಗೆ ಮಾಡಬೇಕು ಎಂಬ ಅಧ್ಯಾಯದಲ್ಲಿ ತಿಳಿಸಿರುವರು.
ಧ್ಯಾನಯೋಗವೆಂಬುದು ನಾಲ್ಕನೆಯ ಪ್ರಕರಣವು. ಅವತರಣಿಕೆಯಲ್ಲಿ ಒಬ್ಬನೇ ಸಾಧಕನು ಕರ್ಮದೃಷ್ಟಿಯಿಂದ ಕರ್ಮಯೋಗಿಯೂ, ಬುದ್ಧಿದೃಷ್ಟಿಯಿಂದ ಧ್ಯಾನಯೋಗಿಯೂ ಆಗಿರುತ್ತಾನೆ. ಉತ್ತಮತರವಾದ ಬುದ್ಧಿಯನ್ನು ಹೇಗೆ ಸಂಪಾದಿಸಿಕೊಳ್ಳಬೇಕೆಂಬುದನ್ನು ತಿಳಿಸಿಕೊಡುವದೇ ಧ್ಯಾನಯೋಗದ ಮುಖ್ಯ ಉದ್ದೇಶವು. ಈ ಧ್ಯಾನಯೋಗದಿಂದಲೇ ಪುನರ್ಜನ್ಮರೂಪವಾದ ಸಂಸಾರವು ಪರಿಹಾರವಾಗುವದೆಂದು ತಿಳಿಸುತ್ತಾ ಪ್ರಾಸಂಗಿಕವಾಗಿ ಬಂದ ಪುನರ್ಜನ್ಮ ವಿಚಾರವನ್ನು ಯುಕ್ತಿಯುಕ್ತವಾಗಿ ಸಾಧಿಸಿರುವರು. ಮಹಾಭಾರತದಲ್ಲೂ, ಭಗವದ್ಗೀತೆಯಲ್ಲೂ ಧ್ಯಾನಯೋಗದ ಮೊದಲನೆಯ ಮೆಟ್ಟಿಲಾಗಿ ಹೇಳಿರುವ ಶಮವೆಂಬ ಸಾಧನವನ್ನು ವಿಸ್ತಾರವಾಗಿ ವಿಮರ್ಶಿಸಿರುವರು. ಶಮವೆಂಬ ಮಾತಿಗೆ ಸಂನ್ಯಾಸವೇ ಹೇಗೆ ಮುಖ್ಯಾರ್ಥವಾಗಿರುವದೆಂಬುದನ್ನು ತೋರಿಸಲು ಮಹಾಭಾರತದ ಮೋಕ್ಷಧರ್ಮಪರ್ವದಲ್ಲೂ ಗೀತೆಯಲ್ಲೂ ಹೇಳಿರುವ ಸಂನ್ಯಾಸ ವಿಚಾರವನ್ನು ವಿಸ್ತಾರವಾಗಿ ಚರ್ಚಿಸಿರುವರು. ಹೀಗೆ ಉಪರತಿಯನ್ನು ಪಡೆದವನು ವೈರಾಗ್ಯಾದಿ ಸಾಧನಗಳನ್ನು ಬೆಳಸಿಕೊಳ್ಳುವದೇ ಧ್ಯಾನಯೋಗದ ಎರಡನೆಯ ಮೆಟ್ಟಲಾಗಿದೆ. 'ಸುಖದುಃಖವಿವೇಕ'ವೆಂಬ ಅಧ್ಯಾಯದಲ್ಲಿ ದ್ವಂದ್ವಸಹಿಷ್ಣುತೆಯನ್ನು ವಿವರಿಸಿರುವರು. ಇಂದ್ರಿಯ ನಿಗ್ರಹಕ್ಕಾಗಿ ‘ಅಭ್ಯಾಸಯೋಗ'ವನ್ನು ಹೇಳಿರುವರು. 'ಧ್ಯಾನಯೋಗದ ಬಹಿರಂಗ ಸಾಧನ'ವಾಗಿ ಏಕಾಂತವಾಸ, ಆಸನ, ಧಾರಣಾ, ಧ್ಯಾನ, ಸಮಾಧಿಗಳನ್ನು ವಿಸ್ತಾರವಾಗಿ ತಿಳಿಸಿ, ಧ್ಯಾನಯೋಗದಿಂದಲೇ ಏಕತ್ವ ದರ್ಶನವಾಗುವದೆಂಬುದನ್ನು ಉಪಸಂಹಾರದಲ್ಲಿ ಪ್ರತಿಪಾದಿಸಿರುವರು.
ಭಕ್ತಿಯೋಗವೆಂಬುದು ಐದನೆಯ ಪ್ರಕರಣವು. ಇದು ಪೂರ್ಣಗೊಂಡಿಲ್ಲ. ಭಾಗವತ ಧರ್ಮವು ಯಾವದು ಎಂಬುದನ್ನು ನಾರಾಯಣೀಯ ಮತ್ತು ಭಾಗವತಗಳ ಆಧಾರದಿಂದ ವಿಮರ್ಶಿಸಿ ಭಗವದ್ಗೀತೆಯೇ ಭಾಗವತ ಧರ್ಮದ ಮೂಲಗ್ರಂಥವು. ಇದರಲ್ಲಿ ತಿಳಿಸಿದ ಧರ್ಮವೇ ಭಾಗವತ ಧರ್ಮವೆಂದು ಪ್ರತಿಪಾದಿಸಿರುವರು. ಭಕ್ತಿಯ ಸ್ವರೂಪವನ್ನು ಭಗವದ್ಗೀತೆಯ ಶ್ಲೋಕಗಳಿಂದಲೇ ನಿರೂಪಿಸಿರುವರು. ದೇವತೆಗಳ ವಿಚಾರ ಹಾಗೂ ಕರ್ಮಫಲದಾತೃವಾದ ಈಶ್ವರನ ವಿಚಾರವನ್ನು ಮಾಡುತ್ತಾ, ಜಾಣರಾದವರು ದೇವತೆಗಳನ್ನು ಬೇರೆ ಬೇರೆಯೆಂದು ಉಪಾಸನೆ ಮಾಡಬಾರದು; ಏಕೆಂದರೆ ದೇವತೆಗಳೆಲ್ಲರೂ ಈಶ್ವರನಿಗಿಂತ ಬೇರೆಯಲ್ಲ; ಅನನ್ಯ ಭಕ್ತಿಯನ್ನು ಆಚರಿಸುವವನ ಮನಸ್ಸಿನಲ್ಲಿ ದೇವತೆಗಳ ವ್ಯಕ್ತಿಭೇದವಾಗಲಿ, ಅವರು ಪರಮಾತ್ಮನಿಗಿಂತ ಬೇರೆಯೆಂದಾಗಲಿ, ತನ್ನ ಆತ್ಮವಸ್ತುವಿಗಿಂತ ಪರಮಾತ್ಮನು ಬೇರೆಯೆಂಬ ಬುದ್ಧಿಯಾಗಲಿ ಇರಬಾರದು; ಪರಮಾತ್ಮನನ್ನೇ ಉಪಾಸಿಸಬೇಕು—ಎಂದು ತಿಳಿಸಿ ಉಪಾಸನೆಯನ್ನು ಹೇಗೆ ಮಾಡಬೇಕೆಂಬುದನ್ನು ಪರಮಾತ್ಮನ ಉಪಾಸನೆಯೆಂಬ ಅಧ್ಯಾಯದಲ್ಲಿ ಮಾಡಿರುವರು. ಇಲ್ಲಿಗೆ ಗ್ರಂಥವು ನಿಂತಿರುವದು. ಈಶ್ವರೋಪಾಸನೆಯಿಂದ ಆಗುವ ಫಲ, ಅವಕಾಶ ಎಂಬ ಎರಡು ವಿಚಾರವನ್ನು ಈ ಪ್ರಕರಣದಲ್ಲೇ ಮಾಡುವ ಸೂಚನೆಯನ್ನು ಬರೆದಿರುವರು. ಮುಂದೆ ಜ್ಞಾನಯೋಗವೆಂಬ ಆರನೆಯ ಪ್ರಕರಣದಲ್ಲಿ ಈಶ್ವರ ತತ್ತ್ವವು ಯಾವದು, ಅಧ್ಯಾತ್ಮತತ್ತ್ವವು ಯಾವದು? ಮನುಷ್ಯನ ಪರಧ್ಯೇಯ ಅಥವಾ ಪರಮಪುರುಷಾರ್ಥವೇನು? ಕಾಮವು ಪೂರ್ಣವಾಗಿ ಹೋಗಿ ಬಿಡುವದುಂಟೆ? ಮಾಯೆ, ಅಜ್ಞಾನಗಳ ಸ್ವರೂಪ, ಕೃತಕೃತ್ಯರ ವ್ಯವಹಾರವು ಹೇಗಿರುವದು? ಎಂಬ ವಿಚಾರವನ್ನು ಮಾಡಬೇಕೆಂದು ಸೂಚಿಸಿರುವರು. ಆದರೆ ಗ್ರಂಥವು ಅರ್ಧಕ್ಕೇ ನಿಂತದ್ದರಿಂದ ಈ ವಿಷಯಗಳೆಲ್ಲ ಸೂಚನಾ ಮಾತ್ರವಾಗಿಯೇ ಉಳಿದಿರುವವು. ಗುರುಗಳೇ ಬರೆದಿರುವ ಭಕ್ತಿಚಂದ್ರಿಕೆಯೆಂಬ ಗ್ರಂಥದಲ್ಲಿ ಭಕ್ತಿಯ ವಿಚಾರವನ್ನು ಪೂರ್ಣವಾಗಿ ಮಾಡಿರುವರು. ಆದ್ದರಿಂದ ಭಕ್ತಿಯ ಬಗ್ಗೆ ವಿಶದವಾಗಿ ತಿಳಿಯಬೇಕೆನ್ನುವರು ಆ ಗ್ರಂಥವನ್ನು ಸಮಗ್ರವಾಗಿ ನೋಡಬಹುದು.
ಯುವನಾಮ ಸಂವತ್ಸರ
ಆಶ್ವಯುಜ ಶುದ್ಧ ದ್ವಿತೀಯಾ ಮ. ರಾ. ಕೇಶವ ಅವಧಾನಿ
26-9-1995
ಗೀತೆಯ ಅರ್ಥದಲ್ಲಿ ಉಂಟಾಗಬಹುದಾದ ಸಂಶಯ
ಗೀತೆಯ ಅರ್ಥವನ್ನು ನಿರ್ಣಯಿಸುವ ಬಗೆ ಹೇಗೆ ? ಎಂಬುದೇ ಇಲ್ಲಿ ಮೊದಲನೆಯ ಪ್ರಶ್ನೆಯಾಗಿರುತ್ತದೆ. ಏಕೆಂದರೆ ಕನ್ನಡದಲ್ಲಿ ಗೀತಾತಾತ್ಪರ್ಯವನ್ನು ನಿರ್ಣಯಿಸುವ ಕೆಲಸಕ್ಕೆ ಕೈಹಾಕಿರುವ ಗ್ರಂಥಗಳು ಬಹಳವಾಗಿ ಇಲ್ಲದಿದ್ದರೂ ಸಂಸ್ಕೃತದಲ್ಲಿ ಇವು ಬಹಳವಾಗಿವೆ. ಬೇರೆ ಬೇರೆ ಸಿದ್ದಾಂತಗಳ ಪರವಾಗಿ ವಿವರಿಸಿ ಹೇಳುವದಕ್ಕೆ ಮೊಟ್ಟ ಮೊದಲು ಬರೆದ ಸಂಸ್ಕೃತ ಗ್ರಂಥಗಳಿಗೆ ಭಾಷ್ಯಗಳೆಂದು ಹೆಸರು. ಈ ಭಾಷ್ಯಗಳ ಅನುವಾದವೂ ಕನ್ನಡದಲ್ಲಿ ದೊರೆಯುತ್ತಾ ಇದೆ. ಈ ಭಾಷ್ಯಗಳನ್ನೇ ಅನುಸರಿಸಿ ಆಯಾ ಸಂಪ್ರದಾಯದವರು ಬರೆದಿರುವ ಗ್ರಂಥಗಳಿಗೆ ವ್ಯಾಖ್ಯಾನಗಳೆಂದೂ ಟೀಕೆಗಳೂ ಟಿಪ್ಪಣಿಗಳೆಂದೂ ಹೆಸರು. ಬೆಂಗಳೂರಿನಲ್ಲಿ ಕೆಲವು ವರ್ಷಗಳ ಹಿಂದೆ ಕೊಪ್ಪರ್ ವೆಂಕಟಾಚಾರ್ಯರೆಂಬ ವಿದ್ವಾಂಸರು ಶ್ರೀಶಂಕರಾಚಾರ್ಯರ, ಶ್ರೀರಾಮಾನುಜಾಚಾರ್ಯರ ಮತ್ತು ಶ್ರೀಮಧ್ವಾಚಾರ್ಯರ ಭಾಷ್ಯಗಳನ್ನು ಈ ಮತತ್ರಯಗಳಲ್ಲಿ ಮುಖ್ಯ ಮುಖ್ಯವೆಂದು ತೋರುವ ಟೀಕಾಕಾರರ ಗ್ರಂಥಗಳನ್ನು ನೋಡಿ “ಗೀತಾರ್ಥಸಾರ''ವೆಂಬ ಗ್ರಂಥವನ್ನು ಪ್ರಕಟಿಸಿದರು. ಈ ಗ್ರಂಥವು ಈಗಲೂ ಅನೇಕರಲ್ಲಿ ಬಳಕೆಯಲ್ಲಿರುತ್ತದೆ. ಅದನ್ನು ಓದಿದವರಿಗೆ ಭಾಷ್ಯಕಾರರೆಲ್ಲರೂ ಗೀತೆಗೆ ಒಂದೇ ತಾತ್ಪರ್ಯವನ್ನೇ ಕೊಟ್ಟಿಲ್ಲವೆಂದೂ ಒಬ್ಬರ ಮತವನ್ನೊಬ್ಬರು ಖಂಡನೆ ಮಾಡಿ ತಾವುತಾವು ಹೇಳುವ ಸಿದ್ಧಾಂತವೇ ಗೀತಾಸಮ್ಮತವೆಂದೂ ಬರೆದಿರುವರೆಂದೇ ಸ್ಪಷ್ಟವಾಗಿ ತೋರಿಬರುತ್ತದೆ. ಬೌದ್ಧಧರ್ಮವು ನಮ್ಮ ದೇಶದಲ್ಲಿ ಕಳೆಗುಂದಿದ ಬಳಿಕ ಯಾವ ಯಾವ ವೈದಿಕ ಧರ್ಮಗಳು ಪ್ರಚಲಿತವಾದವೋ ಆಯಾ ಧರ್ಮಗಳ ಸಂಪ್ರದಾಯ ಪ್ರವರ್ತಕರಾದ ಆಚಾರ್ಯರು ತಮ್ಮ ತಮ್ಮ ಸಂಪ್ರದಾಯವು— ಸಂಪ್ರದಾಯಗಳು ಬೇರೆ ಬೇರೆಯಾಗುವ ಮೊದಲೇ ಇದ್ದುಕೊಂಡಿದ್ದ— ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆ- ಎಂಬ ಮೂಲ ಪ್ರಮಾಣ ಗ್ರಂಥಗಳಲ್ಲಿ ಪ್ರತಿಪಾದಿತವಾಗಿರುವವೆಂತಲೂ, ಮಿಕ್ಕ ಸಂಪ್ರದಾಯಗಳು ಈ ಧರ್ಮಗ್ರಂಥಗಳಿಗೆ ಸಮ್ಮತವಿರಲಿಲ್ಲವೆಂತಲೂ ತೋರಿಸಿಕೊಡುವ ಅವಶ್ಯಕತೆ ಬಂದದ್ದರಿಂದ ಆಯಾ ಭಾಷ್ಯಗಳನ್ನು ಬರೆದಿರುತ್ತಾರೆಂದು ಈಗಿನ ಕೆಲವು ಶೋಧಕರ ಅಭಿಪ್ರಾಯವಿರುತ್ತದೆ. ಇದು ಎಷ್ಟರಮಟ್ಟಿಗೆ ನಿಜವೆಂಬುದನ್ನು ನಾವು ಇಲ್ಲಿ ಹೇಳಬೇಕಾದದ್ದೇನೂ ಇಲ್ಲ. ಭಾಷ್ಯಕಾರರು ಒಬ್ಬರಿಗೊಬ್ಬರು ವಿರುದ್ಧವಾಗಿ ಬರೆದಿರುತ್ತಾರೆಂತಲೂ ಇಷ್ಟೊಂದು ವಿರುದ್ಧವಾಗಿರುವ ಅರ್ಥಗಳೆಲ್ಲವೂ ಗೀತೆಗೆ ಸಮ್ಮತವೆಂದು ನಂಬುವದಕ್ಕೆ ಯಾರಿಗೂ ಸಾಧ್ಯವಿಲ್ಲವೆಂತಲೂ ತಿಳಿಸಿದರೆ ಸಾಕಾಗಿರುತ್ತದೆ.
1) ಶಂಕರಾಚಾರ್ಯರ ಭಾಷ್ಯದಂತೆ ಗೀತಾಶಾಸ್ತ್ರಕ್ಕೆ ಪುರುಷಾರ್ಥಗಳಲ್ಲೆಲ್ಲ ಹೆಚ್ಚಿನದೆನಿಸುವ ಮೋಕ್ಷವೇ ಪ್ರಯೋಜನವು. ಮೋಕ್ಷವೆಂದರೆ ಸಂಸಾರಕ್ಕೆ ಕಾರಣವಾಗಿರುವ ಅಜ್ಞಾನವನ್ನು ಸಂಪೂರ್ಣವಾಗಿ ಕಳೆದುಕೊಂಡು ಸಂಸಾರದುಃಖದಿಂದ ಬಿಡುಗಡೆ ಹೊಂದುವದು. ಈ ಪ್ರಯೋಜನಕ್ಕೆ ಸಾಧನವೇನೆಂದರೆ ಸರ್ವಕರ್ಮಗಳನ್ನೂ ಸಂನ್ಯಾಸಮಾಡಿ ಆತ್ಮಜ್ಞಾನದಲ್ಲಿಯೇ ನಿಂತುಬಿಡುವದು. ಇದು ಅದ್ವೈತಭಾಷ್ಯಕಾರರಂತೆ ಗೀತೆಯ ಪರಮತಾತ್ಪರ್ಯವು.
2) ಇನ್ನು ವಿಶಿಷ್ಟಾದ್ವೈತಿಗಳಾದ ರಾಮಾನುಜಾಚಾರ್ಯರವರ ಭಾಷ್ಯದ ದೃಷ್ಟಿಯಿಂದ ನೋಡಿದರೆ ಜ್ಞಾನಕರ್ಮಗಳಿಂದ ಪ್ರಾಪ್ತವಾಗುವ ವಾಸುದೇವ ಭಕ್ತಿಯೇ ಮೋಕ್ಷಕ್ಕೆ ಸಾಧನವೆಂಬುದೇ ಗೀತೆಯ ಪರಮತಾತ್ಪರ್ಯವು.
3) ಆನಂದತೀರ್ಥರವರು ಅಥವಾ ಮಧ್ವಾಚಾರ್ಯರವರೂ, ವಲ್ಲಭಾಚಾರ್ಯರೂ ಬರೆದಿರುವ ಭಾಷ್ಯಗಳಲ್ಲಿ ರಾಮಾನುಜಮತದಂತೆಯೇ ಭಕ್ತಿಯಿಂದಲೇ ಮೋಕ್ಷವು ದೊರಕುವದೆಂಬುದೇ ಗೀತೆಯ ತಾತ್ಪರ್ಯವೆಂದು ಹೇಳಿರುತ್ತದೆ. ಆನಂದತೀರ್ಥರವರು ಜೀವ-ಬ್ರಹ್ಮರು ತೀರ ಭಿನ್ನರಾಗಿರುವರೆಂಬ ದ್ವೈತವಾದವನ್ನು ಅಂಗೀಕರಿಸಿರುವರು. ವಲ್ಲಭಾಚಾರ್ಯರವರು ಜೀವ-ಬ್ರಹ್ಮರ ಐಕ್ಯವನ್ನೇ ಕೊನೆಯಲ್ಲಿ ಒಪ್ಪಿರುತ್ತಾರಾದರೂ, ಬೆಂಕಿಯ ಕಿಡಿಯಂತೆ ಜೀವನು ಈಶ್ವರನ ಅಂಶವೆಂದೂ, ಈಶ್ವರನ ಅನುಗ್ರಹದಿಂದಲೇ ಇವನು ಮೋಕ್ಷವನ್ನು ಪಡೆಯುತ್ತಾನೆಂದೂ ಹೇಳುವದರಿಂದ ವ್ಯವಹಾರದಲ್ಲಿ ನಿಜವಾದ ದ್ವೈತವನ್ನು ಅಂಗೀಕರಿಸಿರುವರು. ರಾಮಾನುಜಾಚಾರ್ಯರು ಜೀವನು ಪರಮೇಶ್ವರನ ಚಿದ್ರೂಪವಾದ ಶರೀರವಾಗಿರುತ್ತಾನೆಂದು ಹೇಳಿರುವರು. ಇಷ್ಟು ಈ ಮೂರು ಭಕ್ತಿಮಾರ್ಗದ ಪಂಥಗಳಿಗೆ ಇರುವ ಮುಖ್ಯವಾದ ತಾರತಮ್ಯವಾಗಿರುತ್ತದೆ.
4) ರಾಧಾಕೃಷ್ಣಭಕ್ತಿಯನ್ನು ಬೋಧಿಸುವ ನಿಂಬಾರ್ಕಾಚಾರ್ಯರ ಮತವು ದ್ವೈತಾದ್ವೈತ ಸಿದ್ಧಾಂತವಾಗಿರುತ್ತದೆ. ಇದೂ ವಲ್ಲಭಾಚಾರ್ಯರ ಮತವೂ ನಮ್ಮ ದಕ್ಷಿಣ ದೇಶದಲ್ಲಿ ಪ್ರಚಾರದಲ್ಲಿರುವದಿಲ್ಲ. ಕನ್ನಡದಲ್ಲಿ ಈ ಮತಗಳ ಗ್ರಂಥಗಳು ಇದುವರೆಗೆ ಬಂದಿರುವದಿಲ್ಲ. ಇದು ಹಾಗಿರಲಿ. ತಮ್ಮತಮ್ಮ ಸಂಪ್ರದಾಯದಂತೆ ಗೀತೆಗೆ ಸಂಸ್ಕೃತದಲ್ಲಿ ಭಾಷ್ಯಗಳನ್ನು ಬರೆದಿರುವ ಭಾಷ್ಯಕಾರರು ಅತ್ಯಂತವಾಗಿ ಪರಸ್ಪರ ವಿರುದ್ಧವಾದ ಸಿದ್ಧಾಂತಗಳನ್ನು ಹೇಳಿರುವದಲ್ಲದೆ ಅವುಗಳು ಗೀತೆಗೆ ಮಾನ್ಯವಾಗಿರುವವೆಂದು ಹೇಳಿರುತ್ತಾರೆಂಬುದು ಸ್ಪಷ್ಟವಾಗಿರುತ್ತದೆ. ಇವರನ್ನು ಅನುಸರಿಸಿರುವ ಟೀಕಾಕಾರರು ಅಲ್ಲಲ್ಲಿ ಸ್ವಲ್ಪಮಟ್ಟಿಗೆ ತಮ್ಮ ಸ್ವಂತ ಅಭಿಪ್ರಾಯಗಳನ್ನೂ ಸೇರಿಸಿರುತ್ತಾರಾದರೂ ಇವರ ಈ ಮತಗಳನ್ನು ಬೇರೆಯಾಗಿ ಎಣಿಸುವದಕ್ಕೇನೂ ಕಾರಣವಿರುವದಿಲ್ಲ. ಏಕೆಂದರೆ ಇವರು ತಮ್ಮ ತಮ್ಮ ಭಾಷ್ಯಕಾರರ ಸಿದ್ಧಾಂತಗಳನ್ನೇ ಅನುಸರಿಸಿರುತ್ತಾರಾದ್ದರಿಂದ ಅವರಂತೆಯೇ ಆಯಾ ಸಿದ್ಧಾಂತವೇ ಸರಿಯೆಂದು ತೋರಿಸುವದಕ್ಕೆ ಹೊರಟಿರುತ್ತಾರೆ. ಅಂತೂ ಭಾಷ್ಯಕಾರರುಗಳ ಮತವಾಗಲಿ, ಟೀಕಾಕಾರರುಗಳ ಮತವಾಗಲಿ— ಹೊಂದುಗಡೆಯಾಗಬಹುದೆಂಬ ಆಶೆಯೇನೂ ನಮಗೆ ಉಂಟಾಗುವದಕ್ಕೆ ಮಾರ್ಗವಿರುವದಿಲ್ಲ.
ಹೀಗೆ ಗೀತೆಗೆ ಪ್ರಾಚೀನ ಭಾಷ್ಯಕಾರರೂ ಬಗೆಬಗೆಯಾಗಿ ತಾತ್ಪರ್ಯವನ್ನು ಹೇಳುತ್ತಿರುವದರಿಂದ ಒಟ್ಟು ಗ್ರಂಥದ ಪರೀಕ್ಷಣವನ್ನು ಸ್ವತಂತ್ರವಾಗಿಯೇ ಮಾಡಿ ಕೇವಲ ಇದರಿಂದಲೇ ಗೀತೆಯ ಮಥಿತಾರ್ಥವನ್ನು ತೆಗೆಯುವದು ಹೆಚ್ಚು ಸ್ವಾಭಾವಿಕವಾದದ್ದೆಂದು ಈಚಿನ ವಿಚಾರಕರು ಭಾವಿಸಿರುತ್ತಾರೆ. ಆದರೆ ಈ ವಿಚಾರಕರಲ್ಲಿಯಾದರೂ ಗೀತಾತಾತ್ಪರ್ಯದ ವಿಷಯಕ್ಕೆ ಒಂದೇ ಅಭಿಪ್ರಾಯವು ಉಂಟಾಗಿರುವದಿಲ್ಲ. ಗೀತೆಯು ತತ್ತ್ವಶಾಸ್ತ್ರದ ವಿಚಾರಗಳನ್ನು ಒಳಗೊಂಡ ಗ್ರಂಥವಾಗಿರುವದರಿಂದಲೂ, ಅದರಲ್ಲಿರುವ ಜ್ಞಾನಪರವಾದ ಉಪದೇಶಗಳನ್ನು ರಣರಂಗದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಉಪದೇಶಿಸುವ ಕಾರಣವಿಲ್ಲದ್ದರಿಂದಲೂ ಇದು ಮಹಾಭಾರತಕ್ಕೆ ಸೇರಿದ್ದೇ ಅಲ್ಲವೆಂದು ಇವರಲ್ಲಿ ಕೆಲವರು ಊಹಿಸುತ್ತಾರೆ. ಇವರ ಅಭಿಪ್ರಾಯದಂತೆ ಗೀತೆಯನ್ನು ಭಾರತಕಾಲದಿಂದೀಚೆಗೆ ಯಾರೋ ಒಬ್ಬ ಪಂಡಿತನೇ ಬರೆದು ಸೇರಿಸಿರುವನೆಂದೂ ಹೇಳಬೇಕಾಗಿದೆ. ಆದರೆ ಮತ್ತೆ ಕೆಲವರು ಗೀತೆಯಲ್ಲಿ ತತ್ತ್ವಶಾಸ್ತ್ರದ ವಿಷಯಗಳನ್ನು ಮುಖ್ಯವಾಗಿ ಹೇಳಿಲ್ಲವೆಂದೂ ಭಕ್ತಿಮಾರ್ಗವನ್ನು ಹೆಚ್ಚಾಗಿ ಹೇಳಿದೆಯೆಂದೂ ಎಣಿಸುತ್ತಾರೆ. ಈ ಭಕ್ತಿಮಾರ್ಗವು ಭಾಗವತಮತದ್ದೆಂದು ಪ್ರೊಫೆಸರ್ ಥೀಬೋ ಮುಂತಾದ ಕೆಲವರು ಹೇಳುತ್ತಾರೆ. ಭಾಗವತಮತವು ಮಹಾಭಾರತದ ಶಾಂತಿಪರ್ವದಲ್ಲಿ ಕೊಟ್ಟಿರುವ ನಾರಾಯಣೀಯೋಪಾಖ್ಯಾನದಲ್ಲಿ ಪ್ರಧಾನವಾಗಿ ವರ್ಣಿತವಾಗಿದ್ದು, ಆ ಭಾಗವತಧರ್ಮವನ್ನು ಶ್ವೇತದ್ವೀಪದಿಂದ ನಾರದರು ತಂದರೆಂದು ಅಲ್ಲಿ ಹೇಳಿರುವದರಿಂದಲೂ, ಭಗವದ್ಗೀತೆಯ ಉಪದೇಶಗಳಿಗೂ ಕ್ರಿಸ್ತರ ಬೈಬಲು ಗ್ರಂಥದ ಉಪದೇಶಗಳಿಗೂ ಭಕ್ತಿವಿಚಾರದಲ್ಲಿ ಬಹಳ ಹೋಲಿಕೆಯಿರುವದರಿಂದಲೂ, ಭಕ್ತಿಮಾರ್ಗವು ಕ್ರಿಸ್ತಿಯರ ಧರ್ಮದಿಂದ ತೆಗೆದುಕೊಂಡದ್ದೆಂದು ಡಾಕ್ಟರ್ ಲೊರಿಸ್ಸರ್, ಪ್ರೊಫೆಸರ್ ರೀಬಕ್ ಇತ್ಯಾದಿ ಅನೇಕರು ವಾದಿಸಿರುವರು. ಡಾ|| ಭಂಡಾರಕರರೇ ಮುಂತಾದವರ ಅಭಿಪ್ರಾಯದಲ್ಲಿ ಈಶ್ವರನೊಬ್ಬನು ಜೀವರಿಗಿಂತ ಬೇರೆಯಾಗಿರುತ್ತಾನೆಂಬ ಮತವನ್ನು ಒತ್ತಿಹೇಳುವದೇ ಗೀತೆಯ ಉದ್ದೇಶವಾಗಿರುತ್ತದೆ. ಕಲಕತ್ತೆಯ ಸೀತಾನಾಥ ತತ್ತ್ವಭೂಷಣರೆಂಬ ಪಂಡಿತರು ಗೀತೆಯಲ್ಲಿ ಹೇಳಿರುವ ಯೋಗವೆಂದರೆ ಧ್ಯಾನಯೋಗವೆಂದು ಒಂದು ಕಡೆ (ಪು. 183) ಭಕ್ತಿಯೆಂದು ಮತ್ತೊಂದು ಕಡೆ, ಹೀಗೆ ಹೇಳಿ ಕೊನೆಗೆ ಗೀತೆಯಲ್ಲಿ ಪ್ರತಿಪಾದಿತವಾಗಿರುವದು ಅದ್ವೈತವೂ ಅಲ್ಲ ದ್ವೈತವೂ ಅಲ್ಲ. ದ್ವೈತಾದ್ವೈತವು ಎಂದು ಅಭಿಪ್ರಾಯಪಟ್ಟಿರುವರು. ('ಕೃಷ್ಣನೂ ಗೀತೆಯೂ'' ಪು. 249). ಮದ್ರಾಸಿನಲ್ಲಿ ಪ್ರೊಫೆಸರ್ ಎಂ. ರಂಗಾಚಾರ್ಯರೆಂಬವರು ಗೀತೆಯು ಒಳ್ಳೆಯ ನಡತೆಯನ್ನು ತಿಳಿಸುವ ಶಾಸ್ತ್ರಗ್ರಂಥವೆಂದು ಅಭಿಪ್ರಾಯಪಟ್ಟಿರುವರು. (The Indian Philosophy of Conduct) ಗೀತೆಯ ಕಾಲದಲ್ಲಿ ಸಾಂಖ್ಯ, ಯೋಗ ಮುಂತಾದ ಸಿದ್ಧಾಂತಗಳು ಒಂದಕ್ಕೊಂದು ವಿರುದ್ಧವಾಗಿರುತ್ತಿದ್ದವು. ಅವುಗಳನ್ನೆಲ್ಲ ಹೊಂದಿಕೆ ಮಾಡಿ ಕೊನೆಗೆ ಎಲ್ಲವೂ ಒಂದೇ ಗತಿಯನ್ನು ಕೊಡುವವೆಂದು ತಿಳಿಸುವದೇ ಗೀತೆಯ ಪರಮೋದ್ದೇಶವೆಂದು ಸರ್ ಮನಿಯಲ್ ವಿಲಿಯನ್, ಪ್ರೊಫೆಸರ್ ಮ್ಯಾಕ್ ಡಾನೆಲ್ ಮೊದಲಾದವರ ಅಭಿಪ್ರಾಯವು.
ಆದರೆ ಮನುಷ್ಯನ ಕರ್ತವ್ಯಗಳಲ್ಲೆಲ್ಲ ವರ್ಣಾಶ್ರಮಧರ್ಮವೇ ಶ್ರೇಷ್ಠವೆಂಬುದನ್ನು ತಿಳಿಸುವದೇ ಗೀತೆಯ ಉದ್ದೇಶವೆಂದು ಕೆಲವರು ಹಳೆಯ ಕ್ರಿಸ್ತಿಯನ್ ಪಾದ್ರಿಗಳ ಅಭಿಪ್ರಾಯವು. ಇತ್ತೀಚಿನ ಪಾದ್ರಿಗಳು ಕೃಷ್ಣನು ಪರಮೇಶ್ವರನ ಅವತಾರವೆಂಬುದನ್ನು ಪ್ರಧಾನವಾಗಿ ಬೋಧಿಸಿ ಮಿಕ್ಕದ್ದನ್ನು ಈ ಬೋಧನೆಗೆ ಅಂಗವಾಗಿ ಹೇಳುವದೇ ಗೀತೆಯ ತಾತ್ಪರ್ಯವೆಂದು ಅಭಿಪ್ರಾಯಪಟ್ಟಿರುವರು. ಬಾಲಗಂಗಾಧರತಿಲಕರವರು ಬರೆದಿರುವ ಗೀತಾರಹಸ್ಯದಲ್ಲಿ ಗೀತೆಯಲ್ಲಿ ಉಪದಿಷ್ಟವಾದ ಯೋಗಗಳಲ್ಲೆಲ್ಲ ಕರ್ಮಯೋಗವೇ ಮುಖ್ಯವಾದ ಯೋಗವೆಂದೂ ಜ್ಞಾನ, ಭಕ್ತಿ, ಧ್ಯಾನ ಇವು ಅದಕ್ಕೆ ಅಂಗಗಳೆಂದೂ ಹೇಳಿರುತ್ತದೆ. ರಂಗನಾಥ ದಿವಾಕರರವರು ತಿಲಕರ ದೃಷ್ಟಿಯನ್ನೇ ಅನುಸರಿಸಿ “ಪರಮಾತ್ಮಪ್ರೇರಣೆಯನ್ನು ಅನುಸರಿಸಿ ವೀರಕರ್ಮವನ್ನು ಮಾಡುತ್ತಾ'' ಕಾಲವನ್ನು ಕಳೆಯುವದನ್ನು ತಿಳಿಸುವದೇ ಗೀತೆಯ ಧ್ಯೇಯವೆಂದು ಅಭಿಪ್ರಾಯಪಟ್ಟಿರುತ್ತಾರೆ. ಹೀಗೆ ಬೇರೆಬೇರೆ ಮಾರ್ಗಗಳನ್ನು ಅನುಸರಿಸಿ ಶೋಧನೆಮಾಡಿ ಬೇರೆಬೇರೆ ತೀರ್ಮಾನಗಳನ್ನು ಈಚಿನವರು ಮಾಡುತ್ತಿರುವದನ್ನು ನೋಡಿದವರಿಗೆ ಗೀತಾ ತಾತ್ಪರ್ಯದ ವಿಷಯಕ್ಕೆ ಸ್ವತಂತ್ರವಿಚಾರವು ಉಪಯೋಗವಾದೀತೇ? ಎಂಬ ಸಂದೇಹವು ಸಹಜವಾಗಿ ಹುಟ್ಟುವದು. ಇನ್ನು ಇಂಥ ಮತಭೇದಗಳನ್ನು ಬೆಳೆಸುತ್ತಾ ಹೋಗುವದರಿಂದ ಪ್ರಯೋಜನವಿಲ್ಲ. ಹಿಂದಿನ ಭಾಷ್ಯಕಾರರಂತೆ ಈಗಿನವರೂ ಗೀತೆಯ ತಾತ್ಪರ್ಯದ ವಿಷಯಕ್ಕೆ ಬೇರೆಬೇರೆ ಅಭಿಪ್ರಾಯ ಉಳ್ಳವರಾಗಿರುವರು ಎಂಬುದು ಇದುವರೆಗಿನ ವಿವರಣೆಯಿಂದ ಗೊತ್ತಾಗಿರಬೇಕೆಂದು ನಂಬುತ್ತೇನೆ. ಹೀಗೆ ಭಾಷ್ಯಕಾರರನ್ನು ಬಿಟ್ಟು ಸ್ವತಂತ್ರ ಪರೀಕ್ಷಣದ ಮಾರ್ಗವನ್ನು ಅನುಸರಿಸುವವರ ಮಾರ್ಗದಿಂದಲೂ ಗೀತೆಯ ತಾತ್ಪರ್ಯದ ನಿರ್ಣಯಕ್ಕೆ ಅವಕಾಶವಿಲ್ಲವೆಂಬುದು ಸ್ಪಷ್ಟವಾಯಿತು.
ಗೀತಾರ್ಥನಿರ್ಣಯಕ್ಕೆ ವಿಮರ್ಶಕರು ಉಪಯೋಗಿಸಿರುವ ಸಾಧನಗಳು
ಪ್ರಾಚೀನರಾದ ಭಾಷ್ಯಕಾರರಲ್ಲಿಯೂ ಈಚಿನ ಸ್ವತಂತ್ರವಿಚಾರಕರಲ್ಲಿಯೂ ಇಷ್ಟು ಭಿನ್ನಾಭಿಪ್ರಾಯಗಳಾಗಿರುವಾಗ ಗೀತಾರ್ಥದ ತಿರುಳನ್ನು ತೆಗೆಯುವದಕ್ಕೆ ಬೇರೆ ಯಾವ ಉಪಾಯವು ಸಿಗಬಹುದು? ಎಂದು ಯೋಚನೆ ಹುಟ್ಟುವದು ಸ್ವಾಭಾವಿಕವಾಗಿರುವದು. ಆದರೆ ಇದುವರೆಗೆ ಗೀತಾರ್ಥವನ್ನು ಮಥನ ಮಾಡುವದಕ್ಕೆ ಯಾವ ಯಾವ ಉಪಾಯಗಳನ್ನು ವಿಚಾರಕರು ಉಪಯೋಗಿಸಿರುವರು ಎಂಬುದನ್ನು ಮೊದಲು ತಿಳಿಯುವದು ಅತ್ಯವಶ್ಯವಾಗಿದೆ. ಏಕೆಂದರೆ ಇವರು ಉಪಯೋಗಿಸಿರುವ ಸಾಧನಗಳ ಯೋಗ್ಯತೆಯನ್ನೂ ಅವುಗಳನ್ನು ಇವರು ಉಪಯೋಗಿಸಿಕೊಂಡಿರುವ ಕ್ರಮದ ಬೆಲೆಯನ್ನೂ ಗೊತ್ತುಪಡಿಸಿದ ಮೇಲೆ ಅವುಗಳು ಯಾವವೂ ಉಪಯೋಗವಿಲ್ಲವೆಂದು ನಿರ್ಣಯವಾದರೆ ಮತ್ತೊಂದು ಉಪಾಯವನ್ನು ನಾವು ಹುಡುಕಬೇಕಾಗುವದು. ಹಾಗಿಲ್ಲದೆ ಈಗಿರುವ ಉಪಾಯಗಳಲ್ಲಿಯೇ ಯಾವದಾದರೊಂದು ಉಪಾಯವು ನಮ್ಮ ಉದ್ದೇಶವನ್ನು ನೆರವೇರಿಸುವಂತಿದ್ದು ಅದನ್ನು ವಿಮರ್ಶಕರು ಸರಿಯಾಗಿ ಉಪಯೋಗಿಸಿಕೊಂಡಿಲ್ಲವೆಂದಾಗಲೀ ಅಥವಾ ಉಪೇಕ್ಷೆ ಮಾಡಿಬಿಟ್ಟಿರುವರೆಂದಾಗಲೀ ಗೊತ್ತಾದರೆ ಆಗ ಆ ಉಪಾಯವನ್ನೇ ನಾವು ಸರಿಯಾದ ಮಾರ್ಗದಿಂದ ಉಪಯೋಗಿಸಿ ಗೀತಾರ್ಥದ ನಿರ್ಣಯವನ್ನು ಮಾಡಿಕೊಳ್ಳುವದಕ್ಕೆ ಯಾವ ಅಡ್ಡಿಯೂ ಇರುವದಿಲ್ಲ. ಆದಕಾರಣ ಗೀತಾರ್ಥನಿರ್ಣಯಕ್ಕೆ ಇದುವರೆಗೆ ಉಪಯೋಗಿಸಿರುವ ಕ್ರಮಗಳನ್ನು ಒಂದೊಂದಾಗಿ ತೆಗೆದುಕೊಂಡು ವಿಚಾರ ಮಾಡುವದು ಬಹಳ ಅವಶ್ಯವಾಗಿರುತ್ತದೆ.
ಗೀತಾರ್ಥವನ್ನು ಗೊತ್ತುಪಡಿಸುವದಕ್ಕೆ ಉಪಯೋಗಿಸಿರುವ ಸಾಧನಗಳಲ್ಲಿ ಗೀತಾಧ್ಯಾನಶ್ಲೋಕಗಳ ಸಂಗ್ರಹವು ಒಂದಾಗಿರುತ್ತದೆ. ಈ ಸಂಗ್ರಹದಲ್ಲಿ ಒಂಭತ್ತು ಶ್ಲೋಕಗಳು ಇರುತ್ತವೆ. ಅವುಗಳನ್ನು ಇಲ್ಲಿ ಕೊಡುತ್ತೇನೆ.
ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ |
ಅದ್ವೈತಾಮೃತವರ್ಷಿಣೀಂ ಭಗವತೀಮಷ್ಟಾದಶಾಧ್ಯಾಯಿನೀಮ್
ಅಂಬ ತ್ವಾಮನುಸಂದಧಾಮಿ ಭಗವದ್ಗೀತೇ ಭವದ್ವೇಷಿಣೀಮ್ || 1 ||
ಭಗವಂತನಾದ ನಾರಾಯಣನು ತಾನೇ ಅರ್ಜುನನಿಗೆ ಉಪದೇಶಮಾಡಿ, ಪ್ರಾಚೀನ ಋಷಿಗಳಾದ ವ್ಯಾಸರು ರಚನೆ ಮಾಡಿ ಮಹಾಭಾರತದೊಳಗೆ ಸೇರಿಸಿರುವದಾದ, ಹದಿನೆಂಟು ಅಧ್ಯಾಯದ ಭಗವದ್ಗೀತೆಯೆಂಬ ತಾಯೆ! ಸಂಸಾರಕ್ಕೆ ಶತ್ರುವಾಗಿಯೂ ಅದ್ವೈತವೆಂಬ ಅಮೃತವನ್ನು ಸುರಿಸುವವಳಾಗಿಯೂ ಇರುವ ಪೂಜ್ಯಳಾದ ನಿನ್ನನ್ನು ನಮಸ್ಕರಿಸುತ್ತೇನೆ.
ನಮೋऽಸ್ತು ತೇ ವ್ಯಾಸ ವಿಶಾಲಬುದ್ಧೇ ಫುಲ್ಲಾರವಿಂದಾಯತಪತ್ರನೇತ್ರ |
ಯೇನ ತ್ವಯಾ ಭಾರತತೈಲಪೂರ್ಣಃ ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ || 2 ||
ಅರಳಿದ ಕಮಲದ ಎಸಳಿನಂತೆ ಅಗಲವಾದ ಕಣ್ಣುಳ್ಳ ಮಹಾಬುದ್ಧಿವಂತನಾದ ವ್ಯಾಸನೆ! ನಿನಗೆ ನಮಸ್ಕಾರವು. ಆ ನೀನೇ ಭಾರತವೆಂಬ ಎಣ್ಣೆಯನ್ನು ತುಂಬಿ ಜ್ಞಾರೂಪವಾದ ದೊಡ್ಡ ದೀಪವನ್ನು ಹಚ್ಚಿರುತ್ತೀಯೆ.
ಪ್ರಪನ್ನಪಾರಿಜಾತಾಯ ತೋತ್ರವೇತ್ರೈಕಪಾಣಯೇ ।
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ || 3 ||
ಶರಣರಾದ ಜನರಿಗೆ ಪಾರಿಜಾತವೃಕ್ಷವಾಗಿ ಕೇಳಿದ್ದನ್ನು ಕೊಡುವಂಥವನಾಗಿಯೂ, ಗೋವುಗಳನ್ನು ಹೊಡೆಯುವ ಬೆತ್ತವನ್ನು ಹಿಡಿದಿರುವವನಾಗಿಯೂ, ಜ್ಞಾನಮುದ್ರೆಯನ್ನು ಧರಿಸಿರುವವನಾಗಿಯೂ, ಗೀತೆಯೆಂಬ ಅಮೃತವನ್ನು ಕರೆದವನಾಗಿಯೂ ಇರುವ ಕೃಷ್ಣನಿಗೆ ನಮಸ್ಕಾರವು.
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ |
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ || 4 ||
ಸಕಲ ಉಪನಿಷತ್ತುಗಳೇ ಹಸುಗಳು. ಗೋಪಾಲಕೃಷ್ಣನೇ ಕರೆಯುವಾತನು, ಅರ್ಜುನನೇ ಕರುವು, ಜಾಣನಾದ ಪುರುಷನೇ ಹಾಲುಣ್ಣುವವನು, ಹೆಚ್ಚಿನ ಗೀತಾಮೃತವೇ ಕರೆದ ಹಾಲು.
ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ |
ದೇವಕೀಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ || 5 ||
ವಸುದೇವನ ಪುತ್ರನಾಗಿಯೂ, ಕಂಸಚಾಣೂರರೆಂಬ ರಕ್ಕಸರನ್ನು ಕೊಂದವನಾಗಿಯೂ, ದೇವಕೀದೇವಿಗೆ ಪರಮಾನಂದಕರನಾಗಿಯೂ ಇರುವ, ಜಗದ್ಗುರುವಾದ ದೇವ(ಕೃಷ್ಣ)ನನ್ನು ನಮಸ್ಕರಿಸುತ್ತೇನೆ.
ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋ-ತ್ಪಲಾ(/-ಪಲಾ)
ಶಲ್ಯಗ್ರಾಹವತೀ ಕೃಪೇಣ ವಹನೀ ಕರ್ಣೇನ ವೇಲಾಕುಲಾ |
ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರ್ತಿನೀ
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ || 6 ||
ಭೀಷ್ಮದ್ರೋಣರೆಂಬ ದಡಗಳುಳ್ಳದ್ದಾಗಿಯೂ, ಜಯದ್ರಥನೆಂಬ ನೀರು, ಶಕುನಿಯೆಂಬ ಕನ್ನೈದಿಲೆ (ನೀಲ+ಉಪಲಾ= ನೀಲ ಕಲ್ಲುಬಂಡೆ), ಶಲ್ಯನೆಂಬ ಜಲಜಂತು, ಕೃಪನೆಂಬ ಪ್ರವಾಹ, ಕರ್ಣನೆಂಬ ತೀರದ ಗದ್ದಲ, ಅಶ್ವತ್ಥಾಮ ವಿಕರ್ಣ ಎಂಬ ಭಯಂಕರವಾದ ಮೊಸಳೆಗಳು, ದುರ್ಯೋಧನನೆಂಬ ಸುಳಿ —ಇವುಗಳಿಂದ ಕೂಡಿರುವ ರಣನದಿಯನ್ನು ಪಾಂಡವರು ದಾಟಿದರಷ್ಟೆ. ಕೇಶವನು ಅದಕ್ಕೆ ಅಂಬಿಗನು.
ಪಾರಾಶರ್ಯವಚಃ ಸರೋಜಮಮಲಂ ಗೀತಾರ್ಥಗನ್ಧೋತ್ಕಟಮ್ |
ನಾನಾಖ್ಯಾನಕಕೇಸರಂ ಹರಿಕಥಾಸಂಬೋಧನಾಬೋಧಿತಮ್ ||
ಲೋಕೇ ಸಜ್ಜನಷಟ್ಟದೈರಹರಹಃ ಪೇಪೀಯಮಾನಂ ಮುದಾ |
ಭೂಯಾದ್ಭಾರತಪಂಕಜಂ ಕಲಿಮಲಪ್ರಧ್ವಂಸಿ ನಃ ಶ್ರೇಯಸೇ || 7 ||
ಪರಾಶರರ ಮಕ್ಕಳಾದ ವ್ಯಾಸರ ವಚನವೆಂಬ ಸರೋವರದಲ್ಲಿ ಹುಟ್ಟಿ ಗೀತಾರ್ಥವೆಂಬ ಸುವಾಸನೆಯಿಂದ ತುಂಬಿರುವದಾಗಿಯೂ, ಬಗೆಬಗೆಯ ಆಖ್ಯಾನಗಳೆಂಬ ಕೇಸರಗಳುಳ್ಳದ್ದಾಗಿಯೂ, ಹರಿಯ ಕಥೆಯ ಉಪದೇಶಗಳಿಂದ ಅರಳಿದ್ದಾಗಿಯೂ, ಲೋಕದ(ಲ್ಲಿ) ಸತ್ಪುರುಷರೆಂಬ ಭ್ರಮರಗಳು ಪ್ರತಿದಿನವೂ ಕೂಡಿ ಕುಡಿದು ತಣಿಯುತ್ತಿರುವದಾಗಿಯೂ, ಕಲಿಕಲ್ಮಷವನ್ನು ನಾಶಗೊಳಿಸುವದಾಗಿಯೂ ಇರುವ ಭಾರತವೆಂಬ ಕಮಲವು ನಮಗೆ ಶ್ರೇಯಸ್ಸನ್ನುಂಟುಮಾಡಲಿ.
ಮೂಕಂ ಕರೋತಿ ವಾಚಾಲಂ ಪಙ್ಗುಂ ಲಂಘಯತೇ ಗಿರಿಮ್ |
ಯತೃಪಾ ತಮಹಂ ವಂದೇ ಪರಮಾನಂದಮಾಧವಮ್ || 8 ||
ಯಾವಾತನ ಕೃಪೆಯು ಮೂಕನನ್ನು ಕೂಡ ಬೇಕಾದಂತೆ ಮಾತಾಡುವಂತೆ ಮಾಡುವದೋ, ಹೆಳವನನ್ನು ಕೂಡ ಬೆಟ್ಟವನ್ನು ಹಾರುವಂತೆ ಮಾಡುವದೋ, ಅಂಥ ಪರಮಾನಂದ ರೂಪನಾದ ಲಕ್ಷ್ಮೀಪತಿಯನ್ನು ನಮಸ್ಕರಿಸುತ್ತೇನೆ.
ಯಂ ಬ್ರಹ್ಮಾವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಃ ಸ್ತವೈಃ
ವೇದೈಃ ಸಾಂಗಪದಕ್ರಮೋಪನಿಷದೈರ್ಗಾಯನ್ತಿ ಯಂ ಸಾಮಗಾಃ |
ಧ್ಯಾನಾವಸ್ಥಿತತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ
ಯಸ್ಯಾನ್ತಂ ನ ವಿದುಃ ಸುರಾಸುರಗಣಾ ದೇವಾಯ ತಸ್ಮೈ ನಮಃ || 9 ||
ಬ್ರಹ್ಮನೂ ವರುಣನೂ ಇಂದ್ರನೂ ರುದ್ರನೂ ಮಿಕ್ಕದೇವತೆಗಳೂ ದಿವ್ಯವಾದ ಸ್ತೋತ್ರಗಳಿಂದ ಯಾವಾತನನ್ನು ಹೊಗಳುವರೋ, ಸಾಮಗಾನವನ್ನು ಬಲ್ಲವರು ವೇದಾಂಗಗಳು, ಪದ, ಕ್ರಮ, ಉಪನಿಷತ್ತು ಇವುಗಳಿಂದೊಡಗೂಡಿದ ವೇದಗಳಿಂದ ಯಾವಾತನನ್ನು ಹಾಡಿಹೊಗಳುವರೋ, ಯೋಗಿಗಳು ಧ್ಯಾನದಲ್ಲಿ ಅದೇ ಮನಸ್ಸಿನಿಂದ ಯಾವಾತನನ್ನು ಕಾಣುವರೋ, ದೇವತೆಗಳಾಗಲಿ ಅಸುರರಾಗಲಿ ಯಾವಾತನ ಸ್ವರೂಪವನ್ನು ಅರಿಯರೋ, ಅಂಥ ದೇವನಿಗೆ ನಮಸ್ಕಾರ.
ಮೇಲಿನ ಗೀತಾಧ್ಯಾನಕ್ರಮವು ಗೀತೆಯ ಕಾಲದಿಂದಲೂ ಎಡೆಬಿಡದೆ ಪರಂಪರೆಯಾಗಿ ಬಂದಿದೆಯೆಂದು ಯಾವದಾದರೂ ಪ್ರಮಾಣದಿಂದ ಸಿದ್ಧಪಡಿಸುವದಕ್ಕೆ ಆಗುವ ಹಾಗಿದ್ದರೆ ಪ್ರಕೃತ ವಿಚಾರವನ್ನು ನಿರ್ಣಯಮಾಡಿದಂತೆಯೇ ಆಗುತ್ತಿತ್ತು. ಏಕೆಂದರೆ ಗೀತೆಯು ವ್ಯಾಸನಿರ್ಮಿತವಾದ ಮಹಾಭಾರತದೊಳಗೆ ಸೇರಿದ್ದೆಂದೂ, ಇದರಲ್ಲಿ ಅದ್ವೈತವೇ ಮುಖ್ಯವಾಗಿ ಹೇಳಲ್ಪಟ್ಟಿರುತ್ತದೆಯೆಂದೂ ಸ್ಪಷ್ಟವಾಗಿ ಹೇಳಿರುತ್ತದೆ. ಆದರೆ ಈ ಧ್ಯಾನಶ್ಲೋಕಗಳು ಯಾರಾದರೊಬ್ಬ ಗ್ರಂಥಕರ್ತನು ಮಾಡಿದನೆಂದು ಹೇಳುವದಕ್ಕೆ ಆಧಾರವಿಲ್ಲ. ಬೇರೆಬೇರೆ ಗ್ರಂಥಗಳಲ್ಲಿ ಪ್ರಸಿದ್ಧವಾಗಿರುವ ಶ್ಲೋಕಗಳು ಇಲ್ಲಿ ಒಕ್ಕಡೆಗೆ ಸೇರಿಸಿಕೊಡಲ್ಪಟ್ಟಿವೆ. ಉದಾಹರಣೆಗೆ ''ವಸುದೇವಸುತಂ ದೇವಂ'' ಎಂಬುದು ಕೃಷ್ಣಾಷ್ಟಕವೆಂಬ ಸ್ತೋತ್ರಮಾಲೆಗೆ ಸೇರಿದ್ದು. “'ಭೀಷ್ಮದ್ರೋಣತಟಾ'' ಎಂಬ ಶ್ಲೋಕವು ಭಾಸಕವಿಯ “ಊರುಭಂಗ”ವೆಂಬ ನಾಟಕಕ್ಕೆ ಸೇರಿದ್ದೆಂದು ಕಂಡುಹಿಡಿದಿರುತ್ತಾರೆ. ಹೀಗೆ ಬೇರೆಬೇರೆ ಕಡೆಗಳಲ್ಲಿ ಬೇರೆಬೇರೆ ಕಾಲದ ಗ್ರಂಥಗಳಲ್ಲಿ ಬರೆದಿರುವ ಶ್ಲೋಕಗಳನ್ನು ಪಾರಾಯಣಕ್ಕಾಗಿ ಯಾರಾದರೂ ಸೇರಿಸಿಕೊಂಡಿದ್ದರೆ ಅಷ್ಟುಮಾತ್ರದಿಂದ ಅವುಗಳ ಆಧಾರದ ಮೇಲೆ ಗೀತಾತಾತ್ಪರ್ಯವನ್ನೂ ನಿರ್ಣಯವನ್ನೂ ಮಾಡುವದಕ್ಕೆ ಆಗುವದೆ ? ಆಗಲಾರದು.
ಆದ್ದರಿಂದ ಧ್ಯಾನಕ್ರಮಕ್ಕಾಗಿ ಏರ್ಪಟ್ಟಿರುವ ಈ ಒಂಭತ್ತು ಶ್ಲೋಕಗಳ ಆಧಾರದಿಂದ ಗೀತೆಯ ವಿಷಯದಲ್ಲಿ ಯಾವ ಅಭಿಪ್ರಾಯವನ್ನೂ ಗೊತ್ತುಪಡಿಸಲಾಗುವದಿಲ್ಲ. ಇಲ್ಲಿ ವಾಚಕರಲ್ಲಿ ವಿಜ್ಞಾಪಿಸಿಕೊಳ್ಳುವದೇನೆಂದರೆ, ಈ ಧ್ಯಾನಶ್ಲೋಕಗಳ ಸಂಗ್ರಹವು ಇತ್ತೀಚೆಗೆ ಯಾರೋ ಕೂಡಿಹಾಕಿದ್ದೆಂದು ಈ ವಿಚಾರದಿಂದ ಸಿದ್ಧವಾದ ಮಾತ್ರದಿಂದ ಇದರಲ್ಲಿರುವ ಪ್ರಮೇಯಗಳ ಅಂಶಗಳು ಅಶುದ್ಧವೆಂತಲಾಗಲಿ, ಇನ್ನು ಮೇಲೆ ನಾವು ಇದನ್ನು ಪಾರಾಯಣಕ್ರಮದಲ್ಲಿ ಸೇರಿಸಿಕೊಳ್ಳುವದನ್ನು ಬಿಡಬೇಕೆಂದಾಗಲಿ ಸಿದ್ಧವಾಗುವದಿಲ್ಲ. ಇದರ ಆಧಾರದಿಂದಲೇ ಗೀತೆಯ ಉಪದೇಶದ ಜೀವಾಳವನ್ನು ನಿರ್ಣಯಿಸಕೂಡದೆಂದು ಮಾತ್ರ ಸಿದ್ಧವಾಗುತ್ತದೆ. ಈಚೀಚೆಗೆ ವಿಮರ್ಶಕರು ನಮ್ಮ ದೇಶದ ಆಸ್ತಿಕಪದ್ಧತಿಯವರ ಬಳಕೆಯಲ್ಲಿರುವ ಆಚರಣೆಗಳನ್ನೂ ನಂಬಿಕೆಗಳನ್ನೂ ತಮ್ಮ ವಿಚಾರಕ್ಕೆ ತೆಗೆದುಕೊಂಡು ತಮಗೆ ತೋರುವ ಗುಣದೋಷಗಳನ್ನು ಬಗೆಬಗೆಯಾಗಿ ಹೊರಕ್ಕೆ ತೆಗೆಯುತ್ತಿರುವರು. ದೋಷವನ್ನು ಕೈಬಿಟ್ಟು ಗುಣವನ್ನು ಅಂಗೀಕರಿಸುವದು ನಮ್ಮೆಲ್ಲರ ಕರ್ತವ್ಯವೇ ಸರಿ. ಆದರೆ ತಮ್ಮ ತಮ್ಮ ಮೂಗಿನ ನೇರಕ್ಕೆ ವಿಚಾರಮಾಡಿ ಇಷ್ಟೇ ಸರಿ ಎಂದು ಒಬ್ಬೊಬ್ಬ ವಿಮರ್ಶಕರು ಒಂದೊಂದು ಬಗೆಯಾಗಿ ನಿರ್ಣಯಿಸುವ ಮತಗಳಿಂದ ನಮ್ಮ ಆಚರಣೆಗಳನ್ನು ಮಾರ್ಪಡಿಸಿಕೊಳ್ಳುವದು ಮಾತ್ರ ಯೋಗ್ಯವಾಗಲಾರದು. 'ಜನವನ್ನು ಮೆಚ್ಚಿಸುವದಕ್ಕೆ ಜನಾರ್ದನನಿಂದಲೂ ಆಗದು' ಎಂಬ ಗಾದೆಯಂತೆ ನಮ್ಮ ಆಚರಣೆಗಳು ನಂಬಿಕೆಗಳು ಸರ್ವರಿಗೂ ಮೆಚ್ಚಾಗುವಂತೆ ಇಟ್ಟುಕೊಳ್ಳುವದೆಂಬುದು ಯಾರಿಂದಲೂ ಆಗುವ ಕೆಲಸವಲ್ಲ. ಶಿಷ್ಟರು ಒಪ್ಪುವ ಯುಕ್ತಿಗೂ ಅನುಭವಕ್ಕೂ ವಿರೋಧವಲ್ಲದ ನಡತೆಯನ್ನು ನಾವು ಅನುಸರಿಸಿದರಾಯಿತು. ಅದೇ ನಮಗೆ ಗತಿಯನ್ನು ಕಾಣಿಸುವದು. ಆದ್ದರಿಂದಲೇ ಶ್ರುತಿಃ ಸ್ಮೃತಿಃ ಸದಾಚಾರಃ ಸ್ವಸ್ಯ ಚ ಪ್ರಿಯಮಾತ್ಮನಃ ಎಂದು ದೊಡ್ಡವರ ವಚನವಿರುವದು. ಇದರ ತಾತ್ಪರ್ಯವೇನೆಂದರೆ ಯಾವದಾದರೊಂದು ಕಾರ್ಯವು ಧರ್ಮವೆನಿಸಿಕೊಳ್ಳಬೇಕಾದರೆ ಅದಕ್ಕೆ ನಾಲ್ಕು ಲಕ್ಷಣಗಳಿರಬೇಕು. ಮೊಟ್ಟಮೊದಲು ಅದು ನಮಗೆ ಮಾಡತಕ್ಕದ್ದೆನಿಸಿರಬೇಕು. ನಮಗೆ ಒಪ್ಪಿಲ್ಲದ ಕೆಲಸವನ್ನು ನಾವು ಮಾಡುವದಾದರೂ ಹೇಗೆ ? ಆಗಲಾರದು.
ಆದ್ದರಿಂದ ಗೀತಾಧ್ಯಾನಕ್ರಮವು ಯಾರಿಗಾದರೂ ಈಚಿನ ರಚನೆಯೆಂಬುದರ ಮೇಲೆ ರುಚಿಸದೆ ಹೋದರೆ ಹೋಗಲಿ. ಅದು ಶಿಷ್ಟರು ನಡೆಸಿಕೊಂಡು ಬಂದಿರುವ ಆಚರಣೆಯಾಗಿರುತ್ತದೆ, ಚೆನ್ನಾಗಿ ನೋಡಿದರೆ, ಅದರಲ್ಲಿರುವ ತತ್ತ್ವವು ಯಾವ ಅನುಭವಕ್ಕೂ ವಿರೋಧವೂ ಅಲ್ಲ. ಆದ್ದರಿಂದ ಶ್ರದ್ಧಾಳುಗಳಾದವರು ಈ ಕ್ರಮವನ್ನು ಅನುಸರಿಸುವದರಲ್ಲಿ ಯಾವ ದೋಷವೂ ಆಗುವ ಹಾಗಿಲ್ಲ. ನಮ್ಮ ದೇಶದ ಪೂರ್ವಾಚಾರಗಳನ್ನು ವಿಮರ್ಶಕರು ಚರ್ಚೆಗೆ ತಂದ ಮಾತ್ರದಿಂದ ನಾವು ಕೈ ಬಿಡಲೇಬೇಕೆಂಬಷ್ಟು ನಿಸ್ಸಾರವಾಗಿರುವದಿಲ್ಲ. ಈ ಅಂಶವನ್ನು ನಮ್ಮ ವಾಚಕರು ಮುಂದೆಯೂ ಆಯಾ ಸಂದರ್ಭದಲ್ಲಿ ನೆನಪಿಗೆ ತಂದುಕೊಳ್ಳಬೇಕೆಂದು ಬೇಡುತ್ತೇನೆ. ಇನ್ನು ಈ ಮಾತು ಸಾಕು, ಗೀತಾರ್ಥಸಾರವನ್ನು ನಿರ್ಣಯಿಸುವದಕ್ಕೆ ಈ ಧ್ಯಾನಶ್ಲೋಕಗಳ ಸಂಗ್ರಹವಲ್ಲದೆ ಮತ್ತೇನೇನು ಉಪಾಯಗಳನ್ನು ವಿಚಾರಕರು ಉಪಯೋಗಿಸಿಕೊಂಡಿರುವರೆಂಬುದನ್ನು ಇನ್ನು ನೋಡೋಣ.
ಗೀತೆಯ ಉಪದೇಶಗಳನ್ನು ಪ್ರಸಿದ್ಧವಾದ ಉಪನಿಷತ್ತುಗಳ ಉಪದೇಶಗಳಿಗೆ ಹೋಲಿಸುವದು ಇಂಥ ಉಪಾಯಗಳಲ್ಲಿ ಒಂದು ಮುಖ್ಯವಾದದ್ದಾಗಿರುತ್ತದೆ. ಮೇಲೆ ಕೊಟ್ಟಿರುವ ಧ್ಯಾನಶ್ಲೋಕಗಳಲ್ಲಿ ಸೇರಿರುವ,
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ |
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ||
ಎಂಬ ಶ್ಲೋಕವನ್ನು ಈ ಪಕ್ಷದವರು ಆಗಾಗ್ಗೆ ಉದಾಹರಿಸಿರುವರು. ಶ್ರೀಕೃಷ್ಣನು ಅರ್ಜುನನನ್ನು ನಿಮಿತ್ತಮಾಡಿಕೊಂಡು ಉಪನಿಷತ್ತುಗಳೆಲ್ಲದರ ಸಾರವನ್ನು ಹಿಂಡಿ ತತ್ತ್ವಜಿಜ್ಞಾಸುಗಳಿಗೆಲ್ಲ ಕುಡಿಯುವದಕ್ಕೆ ಎದುರಿಗೆ ಇಟ್ಟಿರುತ್ತಾನೆ ಎಂಬುದೇ ಈ ಶ್ಲೋಕದ ತಾತ್ಪರ್ಯವು. ಈ ಕಾರಣದಿಂದ ಉಪನಿಷತ್ತುಗಳ ಸಿದ್ಧಾಂತವೇ ಭಗವದ್ಗೀತೆಯ ಸಿದ್ಧಾಂತವೆಂದು ಸಿದ್ಧವಾಗುತ್ತದೆ. ಆದರೆ ಉಪನಿಷತ್ತುಗಳೆಲ್ಲವೂ ಎಂದದ್ದರಿಂದ ಎಷ್ಟು ಉಪನಿಷತ್ತುಗಳನ್ನು ತೆಗೆದುಕೊಳ್ಳಬೇಕು ? ಉಪನಿಷತ್ತುಗಳ ಸಂಖ್ಯೆಯನ್ನು ನೂರೆಂಟೆಂಬ ಪಕ್ಷವನ್ನು ಹಿಡಿಯಬೇಕೋ? ಹತ್ತು-ಹನ್ನೆರಡೆಂಬ ಪಕ್ಷವನ್ನು ಹಿಡಿಯಬೇಕೊ? ನೂರೆಂಟೆಂದು ಅಂಗೀಕರಿಸಿದರೆ ಮಿಕ್ಕವುಗಳನ್ನು ತೆಗೆದುಕೊಳ್ಳಬಾರದೇಕೆ? ಅವುಗಳನ್ನೂ ತೆಗೆದುಕೊಂಡರೆ 'ಅಲ್ಲೋಪನಿಷತ್ತು' 'ಚಾಕ್ಷುಷೋಪನಿಷತ್ತು' ಮುಂತಾಗಿ ಎಷ್ಟೋ ಉಪನಿಷತ್ತುಗಳಾಗುವವು. ಆಗ ಉಪನಿಷತ್ತುಗಳ ಸಿದ್ಧಾಂತವೇ ಕೈಗೆ ಸಿಕ್ಕುವ ಸಂಭವವಿರುವದಿಲ್ಲ. ಇನ್ನು ಶಂಕರಾಚಾರ್ಯರವರು ಹಿಡಿದಿರುವ ಹತ್ತು-ಹನ್ನೆರಡು ಉಪನಿಷತ್ತುಗಳನ್ನೇ ನಾವೂ ತೆಗೆದುಕೊಂಡರೆ ಉಪನಿಷತ್ತುಗಳ ಮೇಲೆ ಆಗಿರುವ ಭಾಷ್ಯಗಳು ಭಿನ್ನಭಿನ್ನವಾಗಿ ಇರುವದರಿಂದ ಅವುಗಳ ಸಿದ್ಧಾಂತವೇನೆಂಬುದು ಗೊತ್ತಾಗುವ ಹಾಗಿರುವದಿಲ್ಲ. ಭಾಷ್ಯಗಳನ್ನು ಕೈಬಿಟ್ಟು ಸ್ವತಂತ್ರವಾಗಿ ವಿಚಾರ ಮಾಡಿರುವ ವಿಮರ್ಶಕರ ಬೆನ್ನು ಹತ್ತೋಣವೆಂದರೆ ಅವರ ಅಭಿಪ್ರಾಯಗಳು ನಾನಾ ಮುಖವಾಗಿರುವದರಿಂದ ಯಾವ ದಾರಿಯನ್ನು ಹಿಡಿಯಬೇಕೋ ಅದೇ ಗೊತ್ತಾಗುವದಿಲ್ಲ. ನಾವೇ ಸ್ವತಂತ್ರವಾಗಿ ಉಪನಿಷತ್ತುಗಳ ಅರ್ಥವನ್ನು ನಿರ್ಣಯಿಸೋಣವೆಂದರೆ ಕಣ್ಣು ಕಟ್ಟಿಸಿ ಕಾಡಿಗೆ ಬಿಟ್ಟಂತೆ ಆಗುವದು. ಈ ಪೇಚಾಟದಲ್ಲಿ ಏನು ಮಾಡಬೇಕು ? ಹೀಗೆ ಭಗವದ್ಗೀತೆಯನ್ನೂ ಉಪನಿಷತ್ತುಗಳನ್ನೂ ಹೋಲಿಸುವ ದಾರಿಯಲ್ಲಿ ಕೆಲವು ಕಲ್ಲುಮುಳ್ಳುಗಳು ಇದ್ದೇ ಇರುವವು.
ಇದಕ್ಕೆ ಪರಿಹಾರವನ್ನು ಹುಡುಕುವ ಗೋಜಿಗೆ ಹೋಗದೆ ಕೆಲವರು ಮತ್ತೊಂದು ದಾರಿಯನ್ನು ಅನುಸರಿಸುತ್ತಾರೆ. ಅವರ ಅಭಿಪ್ರಾಯವೇನೆಂದರೆ, ಭಗವದ್ಗೀತೆಯ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ಬರುವ ಗ್ರಂಥಸಮಾಪ್ತಿವಾಕ್ಯವನ್ನು ಪರೀಕ್ಷಿಸುವದು. ಸಂಸ್ಕೃತಕೃತಿಗಳಲ್ಲೆಲ್ಲ ಗ್ರಂಥಭಾಗವನ್ನೂ ಗ್ರಂಥವನ್ನೂ ಸಮಾಪ್ತಿಮಾಡುವಾಗ 'ಇತಿ ಶ್ರೀ' ಎಂದು ಪ್ರಾರಂಭಿಸಿ ಗ್ರಂಥದ ಹೆಸರು, ಸ್ವರೂಪ, ಸಮಾಪ್ತವಾದ ಭಾಗ, ಅದರ ಸ್ವರೂಪ— ಇವುಗಳನ್ನು ವಿವರಿಸುವ ಒಕ್ಕಣೆಯನ್ನು ಸೇರಿಸಿ ಒಂದು ವಾಕ್ಯವನ್ನು ಬರೆಯುವದುಂಟು. ಇದನ್ನು 'ಪುಷ್ಪಿಕೆ'' ಎಂದು ಕರೆಯುವದುಂಟು. ಗೀತೆಯಲ್ಲಿರುವ ಈ ಪುಷ್ಪಿಕೆಯು ಮಹಾಭಾರತದಲ್ಲಿರುವದಿಲ್ಲವಾದ್ದರಿಂದ ಅದು ವ್ಯಾಸರು ಮಾಡಿದ್ದಲ್ಲವೆಂಬುದೇನೋ ಸ್ಪಷ್ಟವಾಗಿರುತ್ತದೆ. ಆದರೆ ಗೀತೆಯ ಎಲ್ಲಾ ಗ್ರಂಥಗಳಲ್ಲಿಯೂ ಇದು ದೊರೆಯುವದರಿಂದ ಮಹಾಭಾರತದೊಳಗಿಂದ ಗೀತೆಯನ್ನು ನಿತ್ಯ ಪಾರಾಯಣಕ್ಕೆ ಬೇರೆಯಾಗಿ ತೆಗೆದಂದಿನಿಂದ, ಅಂದರೆ ಗೀತೆಯ ಮೇಲೆ ಯಾವ ಟೀಕೆಯೂ ಮೊಳೆದೋರುವ ಮೊದಲೆ ಈ ವಾಕ್ಯವು ಪ್ರಚಾರದಲ್ಲಿ ಬಂದಿರಬೇಕೆಂದು ಬಾಲಗಂಗಾಧರತಿಲಕರವರೇ ಮುಂತಾದವರ ಅಭಿಪ್ರಾಯವಾಗಿರುತ್ತದೆ (ಗೀ. ರ. 3).
ಈ ಸಮಾಪ್ತಿದರ್ಶಕ ವಾಕ್ಯವು ಹೇಗಿರುವದೆಂದರೆ — ''ಇತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಸಾಂಖ್ಯಯೋಗೋ ನಾಮ ದ್ವಿತೀಯೋsಧ್ಯಾಯಃ” ಈ ವಾಕ್ಯವನ್ನು ವಿಚಾರಮಾಡಿ ಭಗವದ್ಗೀತೆಯ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳನ್ನು ತೆಗೆದಿರುತ್ತಾರೆ. ''ಇತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು” ಎಂದರೆ ''ಭಗವಂತನಿಂದ ಗೀತವಾದ ಉಪನಿಷತ್ತುಗಳಲ್ಲಿ'' ಎಂದರ್ಥವಾಗುತ್ತದೆ. ಗೀತ ಎಂಬ ಶಬ್ದವು 'ಗಾನಮಾಡಲ್ಪಟ್ಟ ಎಂದು ಕರ್ಮಾರ್ಥವಾದರೆ ಮಾತ್ರ ''ಗೀತಾಸು'' ಎಂದು ಸ್ತ್ರೀಲಿಂಗದಲ್ಲಿ ಉಪಯೋಗಿಸಿದ್ದು ಸರಿಯಾಗುತ್ತದೆ. ಏಕೆಂದರೆ ಗೀತಾ ಎಂಬುದು ಶ್ಲೋಕಗಳ ಹೆಸರೆಂದು ಆಚಾರ್ಯರು ತಮ್ಮ ಭಾಷ್ಯದ ಉಪೋದ್ಘಾತದಲ್ಲಿ ಸ್ಪಷ್ಟವಾಗಿ ಹೇಳಿರುತ್ತಾರೆ. ಗೀತ ಅಂದರೆ 'ಗಾನ, ಹಾಡು' ಎಂದಿಷ್ಟೇ ಅರ್ಥವಾದರೆ “ಗೀತಮ್'' ಎಂದು ನಪುಂಸಕದಲ್ಲಿರಬೇಕಾಗುತ್ತಿತ್ತು. ಇದು ಸಂಸ್ಕೃತ ವ್ಯಾಕರಣದ ಮರ್ಯಾದೆಯು. ಹೀಗಿರುವದರಿಂದ 'ಭಗವದ್ಗೀತಾಸೂಪನಿಷತ್ಸು’ ಎಂಬುದರ ತಾತ್ಪರ್ಯವೇನಾಗುವದೆಂದರೆ ಭಗವಂತನಾದ ಕೃಷ್ಣನು ಗಾನಮಾಡಿದ ಉಪನಿಷತ್ತುಗಳೇ ಭಗವದ್ಗೀತೆಯು. ಈ ಅಭಿಪ್ರಾಯವನ್ನು ಇಟ್ಟುಕೊಂಡು ಕೆಲವರು 'ಭಗವದ್ಗೀತೆಯಲ್ಲಿರುವ ಶ್ಲೋಕಗಳೆಲ್ಲ ಶ್ರೀಕೃಷ್ಣನ ಬಾಯಿಂದ ಚಕಾರ ತುಕಾರವೂ ಸಹ ಹೆಚ್ಚು ಕಡಿಮೆ ಇಲ್ಲದ ಹಾಗೇ ಬಂದಿರುತ್ತವೆ. ಆದ್ದರಿಂದ ಬ್ರಹ್ಮನ ಮುಖದಿಂದ ಬಂದ ಉಪನಿಷತ್ತುಗಳ ಹಾಗೆ ಅಥವಾ ಅದಕ್ಕಿಂತಲೂ ಹೆಚ್ಚಾಗಿಯೇ ಇವುಗಳು ಪ್ರಮಾಣಭೂತವಾದವುಗಳಾದ್ದರಿಂದ ಇವೂ ಉಪನಿಷತ್ತುಗಳೆಂದೇ ಎಣಿಸಬೇಕು' ಎನ್ನುತ್ತಿರುವರು.
[ ಗೀತಾರಹಸ್ಯ (ಪುಟ 3)ದಲ್ಲಿಯೂ, ಕುರ್ತಕೋಟಿಯ ಮಹಾಭಾಗವತರವರು ಮಾಡಿರುವ The Heart of the Bhagavadgita (ಭಗವದ್ಗೀತಾ ಹೃದಯ)ವೆಂಬ ಗ್ರಂಥ(ಪುಟ 10)ದಲ್ಲಿಯೂ ಈ ಮತವಿದೆ. ತಿಲಕರವರು “ಶ್ರೀಮದ್ಭಗವದ್ಗೀತಾಸೂಪನಿಷತ್ಸು” ಎಂದು ಬಹುವಚನವು ಆದರಾರ್ಥದಲ್ಲಿ ಬಂದಿರುತ್ತದೆಯೆಂದು ಹೇಳುತ್ತಾರೆ. ಆದರೆ ಗ್ರಂಥಕ್ಕೆ ಅದರಕ್ಕಾಗಿ ಬಹುವಚನವನ್ನುಪಯೋಗಿಸುವ ರೂಢಿಯು ಸಂಸ್ಕೃತದಲ್ಲಿಲ್ಲ. ]
ಮತ್ತೆ ಕೆಲವರು “ಭಗವದ್ಗೀತೋಪನಿಷತ್ತು ಎಂಬುದೇ ಈ ಗ್ರಂಥದ ಪೂರ್ಣವಾದ ಹೆಸರು. ಇದಕ್ಕೆ ಭಗವದ್ಗೀತಾ, ಗೀತಾ ಎಂಬಿವು ಸಂಕ್ಷಿಪ್ತ ಸ್ವರೂಪಗಳು'' ಎಂದು ವಾದಿಸುತ್ತಿರುವರು. ಇದಿಷ್ಟು ಸಮಾಪ್ತಿ ವಾಕ್ಯದ ಮೊದಲನೆಯ ಎರಡು ಪದಗಳ ವಿಚಾರವಾಯಿತು.
ಇನ್ನು ಮುಂದಿನ ಎರಡು ಪದಗಳನ್ನು ತೆಗೆದುಕೊಂಡರೂ ಹೀಗೆ ಭಿನ್ನಾಭಿಪ್ರಾಯಗಳಿರುವವು. “ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ'' ಎಂಬ ಮಾತುಗಳಿಗೆ ಎರಡು ಬಗೆಯಾಗಿ ಅರ್ಥಮಾಡಬಹುದು. ಈ ಎರಡು ಮಾತುಗಳೂ ಭಗವದ್ಗೀತೆಯನ್ನೇ ವರ್ಣಿಸುವದಕ್ಕೆ ಬಂದಿವೆ ಎಂದು ಇಟ್ಟುಕೊಂಡರೆ ಬ್ರಹ್ಮವಿದ್ಯೆಯೂ ಯೋಗಶಾಸ್ತ್ರವೂ (ಗೀತೆಯು ಗ್ರಂಥವಾಗಿದೆ. ಇದು ಬ್ರಹ್ಮವಿದ್ಯಾಶಾಸ್ತ್ರವಾದೀತೇ ಹೊರತು ಬ್ರಹ್ಮವಿದ್ಯೆಯಾಗಲಾರದು. ಆದ್ದರಿಂದ ಈ ವಾಕ್ಯವು ಸರಿಯಾಗಿ ಅನ್ವಯವಾಗುವಂತೆ ತೋರುವದಿಲ್ಲ.) ಆದ ಭಗವದ್ಗೀತೆಯಲ್ಲಿ ಎಂದರ್ಥವಾಗುವದು. ಹೀಗೆ ಅರ್ಥಮಾಡುವಾಗ ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಎಂಬ ಸಪ್ತಮೀ ವಿಭಕ್ತಿಗಳನ್ನು ಸಾಮಾನಾಧಿಕರಣ್ಯವಾಗಿ ಎಂದರೆ ಒಂದೇ ವಸ್ತುವನ್ನು ವರ್ಣಿಸುವದಕ್ಕೆ ಉಪಯೋಗಿಸಿದಂತೆ ಒಪ್ಪಿಕೊಳ್ಳಬೇಕಾಗುವದು. ಇದನ್ನು ಒಪ್ಪಿಕೊಂಡು ಭಗವದ್ಗೀತೆಯಲ್ಲಿ ಬ್ರಹ್ಮವಿದ್ಯೆಯೂ ಯೋಗವೂ ಮಿಲಿತವಾಗಿರುವವೆಂದು ಕೆಲವರು ಅಭಿಪ್ರಾಯಪಟ್ಟಿರುವರು. ಆದರೆ ಮತ್ತೆ ಕೆಲವರು ಈ ಸಪ್ತಮ್ಯಂತವಾದ ಪದಗಳನ್ನು ವೈಯಧಿಕರಣವಾಗಿ ತೆಗೆದುಕೊಂಡಿರುತ್ತಾರೆ. 'ಬ್ರಹ್ಮವಿದ್ಯಾಯಾಮ್' 'ಯೋಗಶಾಸ್ತ್ರೇ' ಇವೆರಡೂ ಒಂದೇ ವಸ್ತುವನ್ನು ಹೇಳುವದಿಲ್ಲ, ಬೇರೆಬೇರೆಯಾಗಿರುತ್ತವೆ ಎಂಬುದೇ ಇವರ ಮತ. ಈ ಮತದಲ್ಲಿ 'ಬ್ರಹ್ಮವಿದ್ಯೆಯೊಳಗಿನ ಯೋಗಶಾಸ್ತ್ರವು' ಎಂಬುದೇ ಈ ಎರಡು ಪದಗಳ ಅರ್ಥವು. ಬ್ರಹ್ಮವಿದ್ಯೆ ಬ್ರಹ್ಮಜ್ಞಾನವು; ಅದು ಉಂಟಾದ ಬಳಿಕ ಜ್ಞಾನಿಯಾದವನು ಅನುಸರಿಸಬಹುದಾದ ಯೋಗವನ್ನು ಎಂದರೆ ಕರ್ಮದ ಬಗೆಯನ್ನು ತಿಳಿಸುವದರಿಂದ ಇದು 'ಬ್ರಹ್ಮವಿದ್ಯಾಂತರ್ಗತ ಯೋಗಶಾಸ್ತ್ರವು' ಎಂಬುದು ಈ ವಾದಿಗಳ ಅಭಿಪ್ರಾಯವಾಗಿರುತ್ತದೆ. (ಬ್ರಹ್ಮವಿದ್ಯೆಯಲ್ಲಿ ಯೋಗವು ಅಡಕವಾಗಿರಬಹುದಾದರೆ ಯೋಗಶಾಸ್ತ್ರವು ಅಡಕವಾಗುವ ಹಾಗಿಲ್ಲ. ಈ ಕಾರಣದಿಂದ ಈ ಅರ್ಥವೂ ಅಷ್ಟು ಸಮಂಜಸವಾಗಿ ತೋರುವುದಿಲ್ಲ.)
ಬಾಲಗಂಗಾಧರತಿಲಕರವರು ಬರೆದಿರುವ 'ಗೀತಾರಹಸ್ಯ ಅಥವಾ ಕರ್ಮಯೋಗಶಾಸ್ತ್ರ' ಎಂಬ ಗ್ರಂಥಕ್ಕೆ ಈ ಅರ್ಥವು ಬಹಳ ಸಾಧಕವಾಗಿರುತ್ತದೆ. ಅವರು ಈ ಅರ್ಥವನ್ನು ಅನುಸರಿಸಿ ಗೀತೆಯು ಕರ್ಮಯೋಗವನ್ನು ತಿಳಿಸುವ ಶಾಸ್ತ್ರವೆಂದು ತೋರಿಸುವದಕ್ಕೆ ತಮ್ಮ 858 ಪುಟದ ದೊಡ್ಡ ಗ್ರಂಥವನ್ನು ಬರೆದಿರುತ್ತಾರೆ. ಇನ್ನು ಈ ಎರಡೂ ಪದಗಳನ್ನು ಇಷ್ಟಕ್ಕೇ ನಿಲ್ಲಿಸಿ ಮುಂದಕ್ಕೆ ಕಣ್ಣು ಹಾಕಿದರೆ 'ಸಾಂಖ್ಯಯೋಗೋ ನಾಮ ದ್ವಿತೀಯೋsಧ್ಯಾಯಃ' ಎಂಬ ಪದಗಳು ಗೋಚರವಾಗುವವು. ಬೇರೆಬೇರೆ ಅಧ್ಯಾಯಗಳಲ್ಲಿ ಬೇರೆಬೇರೆ 'ಯೋಗ'ವೆಂಬ ಹೆಸರಿರುವದು. ಮೊದಲನೆಯ ಅಧ್ಯಾಯವು 'ಅರ್ಜುನವಿಷಾದಯೋಗ'; ಎರಡನೆಯದು 'ಸಾಂಖ್ಯ ಯೋಗ'; ಮೂರನೆಯದು 'ಕರ್ಮಯೋಗ'; ನಾಲ್ಕನೆಯದು 'ಜ್ಞಾನಕರ್ಮ ಸಂನ್ಯಾಸಯೋಗ' ಹೀಗೆಲ್ಲ ಹೆಸರಿವೆ. ಇದನ್ನು ನೋಡಿ ಕೆಲವರು ಒಂದೊಂದು ಅಧ್ಯಾಯದಲ್ಲಿ ಒಂದೊಂದು ಯೋಗವಿರುವದರಿಂದ ಗೀತೆಯು 'ಯೋಗಗಳ ಶಾಸ್ತ್ರವು' ಎಂದರೆ ಅನೇಕ ಮೋಕ್ಷೋಪಾಯಗಳನ್ನು ಹೇಳುವದು ಎನ್ನುತ್ತಿದ್ದಾರೆ. ಇವರು ಗೀತೆಯು ಕರ್ಮಯೋಗವೊಂದನ್ನೇ ಹೇಳುವದು ಎಂಬ ವಾದವನ್ನು ಒಪ್ಪುವದಿಲ್ಲ.
ಮೇಲಿನ ವಿವರಣೆಯಿಂದ ಗೀತಾಧ್ಯಾಯಗಳ ಕೊನೆಗೆ ಬಂದಿರುವ ಪುಷ್ಪಿಕೆಯಲ್ಲಿ ಎರಡೆರಡಾಗಿ ಮಾತುಗಳನ್ನು ತೆಗೆದುಕೊಂಡು ಪರಿಶೀಲಿಸಲಾಗಿ ಒಂದೊಂದು ಜೋಡಿಯಲ್ಲಿಯೂ ಬೇರೆಬೇರೆಯ ಅಭಿಪ್ರಾಯಪಡುವದಕ್ಕೆ ಅವಕಾಶವಿರುವದೆಂದೂ ಅದರಂತೆ ಈಗಿನ ವಿಮರ್ಶಕರು ಭಿನ್ನಾಭಿಪ್ರಾಯಗಳನ್ನು ಕೊಡುತ್ತಲೂ ಇರುವರೆಂದೂ ಸ್ಪಷ್ಟವಾಗುತ್ತದೆಯಷ್ಟೆ. ಈ ಸಮಾಪ್ತಿವಾಕ್ಯವೆಂಬುದು ಎಲ್ಲಾ ಭಾಷ್ಯಕಾರರಿಗಿಂತ ಹಿಂದಿನ ಕಾಲದಲ್ಲಿಯೇ ಯಾರೋ ವಿಚಾರಮಾಡಿ ಸೇರಿಸಿರಬೇಕೆಂದು ಇಟ್ಟುಕೊಂಡೇ ಈ ಭಿನ್ನಾಭಿಪ್ರಾಯಗಳು ಹೊರಟಿವೆಯೆಂಬುದನ್ನು ಇಲ್ಲಿ ಮರೆಯಲಾಗದು. ಈ ವಾಕ್ಯವು ಮೂಲಭಾರತದಲ್ಲಿರುವದಿಲ್ಲವೆಂದು ಮೊದಲೇ ಹೇಳಿರುತ್ತೇನಷ್ಟೆ. ಯಾವ ಭಾಷ್ಯಕಾರರೂ ಈ ವಾಕ್ಯಕ್ಕೆ ವಿವರಣೆಯನ್ನು ಮಾಡದೆ ಇರುವದರಿಂದ ಭಾಷ್ಯಕಾರರಿಗಿಂತಲೂ ಮೊದಲು ಇದು ಇತ್ತೋ ಇಲ್ಲವೋ ಎಂಬ ಸಂದೇಹಕ್ಕೆ ಅವಕಾಶವನ್ನು ಕೊಡುವಂತಿದೆ. ಭಾಷ್ಯಕಾರರು ಮೂಲಭಾರತಕ್ಕೆ ಸೇರಿಲ್ಲವೆಂಬುದರ ಮೇಲೆ ಇದನ್ನು ಕೈಬಿಟ್ಟರೆಂದು ಇಟ್ಟುಕೊಳ್ಳಬಹುದು ಅಥವಾ ಇದು ಭಾಷ್ಯಕಾಲದಿಂದೀಚೆಗೆ ಯಾರೋ ಸೇರಿಸಿದರೆಂದು ಈ ವಾಕ್ಯಗಳಿಂದ ತಮ್ಮತಮ್ಮ ಸಿದ್ಧಾಂತಕ್ಕೆ ಯಾವ ಹಾನಿಯೂ ಇಲ್ಲವೆಂಬುದರ ಮೇಲೆ ಆಯಾ ಮತದವರು ಈ ಸಂಪ್ರದಾಯವನ್ನು ಸುಮ್ಮನೆ ಅಂಗೀಕರಿಸಿದರೆಂದೂ ಹೇಳಬಹುದು. ಇದೂ ಅಲ್ಲದೆ ಆಯಾ ಅಧ್ಯಾಯದಲ್ಲಿ ಹೇಳಿದೆಯೆಂಬ ಯೋಗದ ಹೆಸರನ್ನು ಎಲ್ಲಾ ಪುಸ್ತಕಗಳಲ್ಲಿಯೂ ಒಂದೇ ಬಗೆಯಾಗಿ ಕೊಟ್ಟಿರುವದಿಲ್ಲ. ಒಂದು ಅಧ್ಯಾಯದ ವಿಷಯಕ್ಕೆ ಎರಡು ಮೂರು ಹೆಸರುಗಳು ಬಂದುಬಿಟ್ಟಿವೆ. ಕೆಳಗಿನ ಪಟ್ಟಿಯಿಂದ ಆ ಹೆಸರುಗಳನ್ನು ತೆಗೆದುಕೊಳ್ಳಬಹುದಾಗಿದೆ. ಈ ಪಟ್ಟಿಯನ್ನು ನೋಡಿದರೆ ಆಯಾ ಲೇಖಕರು ತಮತಮಗೆ ತೋರಿದಂತೆ ಅಧ್ಯಾಯಕ್ಕೆ ಹೆಸರುಗಳನ್ನು ಕೊಡುತ್ತಾ ಬಂದಿರುತ್ತಾರೆಂದು ಹೇಳಬೇಕಾಗಿದೆ. ಅಂತೂ ಅಧ್ಯಾಯಗಳ ಸಮಾಪ್ತಿವಾಕ್ಯವನ್ನು ವಿವೇಚನೆ ಮಾಡುವದರಿಂದ ಭಗವದ್ಗೀತೆಯ ತಾತ್ಪರ್ಯವನ್ನು ನಿರ್ಣಯಿಸುವದಕ್ಕೆ ಹೋಗುವದು ನೂರಾರು ತೇಪೆಯ ಹರಕುದಟ್ಟವನ್ನು ಬಿಚ್ಚಿದಂತೆ ಆಗುವದೇ ಹೊರತು ಇದರಿಂದಲೂ ನಮಗೆ ನಿಲುಗಡೆಯೇನೂ ದೊರೆಯುವಂತೆ ಕಾಣುವದಿಲ್ಲವೆಂಬುದು ಮೇಲೆಯೇ ಕಾಣುತ್ತಿರುವದು.
ಭಾರತದ ಬೇರೆಬೇರೆ ಭಾಗಗಳನ್ನು ಗೀತೆಗೆ ಹೋಲಿಸುವದು ಗೀತಾರ್ಥ ನಿರ್ಣಯಕ್ಕೆ ಬಹುಮುಖ್ಯವಾದ ಉಪಾಯವೆಂದು ಹಲವರ ಭಾವನೆಯಿರುವದು. ಈ ಭಾವನೆಗೆ ಪೋಷಕಯುಕ್ತಿಯೇನೆಂದರೆ ಗೀತೆಯೆಂಬುದು ಮಹಾಭಾರತದ ಒಂದು ಭಾಗವಾಗಿರುತ್ತದೆ. ಮಹಾಭಾರತಕರ್ತರು ಯಾವ ತತ್ತ್ವವನ್ನು ಉಪದೇಶಿಸಬೇಕೆಂದು ಇಟ್ಟುಕೊಂಡಿರುತ್ತಾರೋ ಅದನ್ನು ಗೀತೆಯಲ್ಲಿ ಪ್ರಧಾನವಾಗಿ ಹೇಳಿದ್ದರೂ ಮಿಕ್ಕಕಡೆಗಳಲ್ಲಿಯೂ ಮತ್ತೆಮತ್ತೆ ಹೇಳಿಯೇ ಇರಬೇಕೆಂದು ನಿರೀಕ್ಷಿಸಬೇಕಾಗಿದೆ. ಈ ದೃಷ್ಟಿಯಿಂದ ಮಹಾಭಾರತದ ಉಳಿದ ಭಾಗಗಳನ್ನೂ ಗೀತೆಯನ್ನೂ ಹೋಲಿಸುವದು ಉತ್ತಮಸಾಧನವೇ ಸರಿ. ಆದರೆ ನಿಜವನ್ನು ನಿರ್ಧರಿಸುವಾಗ ಎಷ್ಟು ಸಂಶಯಪೂರ್ವಕವಾಗಿ ವಿಚಾರಮಾಡಿದರೆ ಅಷ್ಟು ಒಳ್ಳೆಯದೆಂಬ ಅಭಿಪ್ರಾಯದಿಂದ ಕೆಲವರು ಮಹಾಭಾರತಕ್ಕೆ ಗೀತೆಯು ಸೇರಿದ್ದೋ ಅಲ್ಲವೊ? ಯಾರಿಗೆ ಗೊತ್ತು? ಎಂಬ ಸಂದೇಹವನ್ನು ತೆಗೆದಿರುವರು. ಈ ಆಕ್ಷೇಪಕರು ಪರೀಕ್ಷೆಗೆ ತರುವ ವಿಚಾರಗಳೇನೆಂದರೆ,
1) ಗೀತೆಯು ತತ್ತ್ವಪರವಾದ ಗ್ರಂಥವಾಗಿದ್ದು ಇಂಥ ದೊಡ್ಡ ಶಾಸ್ತ್ರವನ್ನು ಶ್ರೀಕೃಷ್ಣನು ಯುದ್ಧರಂಗದಲ್ಲಿ ಹೇಳುವದಕ್ಕೆ ಕಾರಣವಾಗಲಿ ಅವಶ್ಯಕತೆಯಾಗಲಿ ಇರಲಿಲ್ಲ.
2) ಆದಿಪರ್ವದ ಮೊದಲನೆಯ ಅಧ್ಯಾಯದಲ್ಲಿಯೂ ಎರಡನೆಯ ಅಧ್ಯಾಯದಲ್ಲಿಯೂ ಭಗವದ್ಗೀತೆಯ ಸಂಬಂಧವಾದ ವಾಕ್ಯಗಳು ಬಂದಿವೆಯಾದರೂ ಅವು ಹಿಂದು ಮುಂದಿನ ವಾಕ್ಯಗಳಿಗೆ ಅಷ್ಟು ಹೊಂದುಗಡೆಯಾಗಿ ತೋರುವದಿಲ್ಲವಾದ್ದರಿಂದ ಅವು ಪ್ರಕ್ಷಿಪ್ತವಾಗಿರಬೇಕು.
3) ಭಾರತದ ಕೆಲವು ಕೈಪ್ರತಿಗಳಲ್ಲಿ ಅವು ಇರುವದಿಲ್ಲ.
4) ಗೀತೆಯ ಅಧ್ಯಾಯಸಮಾಪ್ತಿವಾಕ್ಯಕ್ಕೂ ಭಾರತವಾಕ್ಯಕ್ಕೂ ಶೈಲಿಯಲ್ಲಿ ಹೆಚ್ಚುಕಡಿಮೆ ಇದೆ.
5) ಗೀತೆಯ ಪ್ರತಿಗಳಲ್ಲಿಯೇ ಬೇರೆಬೇರೆ ತರದ ಸಮಾಪ್ತಿವಾಕ್ಯಗಳಿರುತ್ತವೆ.
ಈ ಐದು ಆಕ್ಷೇಪಗಳಲ್ಲಿ ಮೊದಲನೆಯ ಆಕ್ಷೇಪವು ಸಮರ್ಪಕವಲ್ಲ. ಭಾರತದ ಆಖ್ಯಾನಗಳೂ ವಿಚಾರಗಳೂ ಹಿಂದುಮುಂದಿನ ಸಂದರ್ಭಕ್ಕೆ ಹೊಂದುತ್ತವೆಯೆ ಇಲ್ಲವೆ ಎಂಬುದನ್ನು ಇಪ್ಪತ್ತನೆಯ ಶತಮಾನದಲ್ಲಿರುವ ನಾವು ನಮ್ಮ ದೃಷ್ಟಿಯಿಂದ ನೋಡಿ ನಿರ್ಣಯಿಸುವದೇ ಮೊದಲು ಸರಿಯಲ್ಲ. ಏಕೆಂದರೆ ಒಂದೇ ಶತಮಾನದಲ್ಲಿರುವ ನಮ್ಮ ದೇಶದ ಜನರಲ್ಲಿ ಹಿಂದಿನ ತಲೆಯವರ ವಿಚಾರಸರಣಿಗೂ ಈಗಿನ ತಲೆಯವರ ವಿಚಾರಸರಣಿಗೂ ಎಷ್ಟೋ ಭೇದಗಳುಂಟಾಗಿರುವದಲ್ಲದೆ ಹಿಂದಿನ ಕ್ರಮವನ್ನು ಈಗಿನವರೂ ಈಗಿನ ಕ್ರಮವನ್ನು ಹಿಂದಿನ ಸಂಸ್ಕಾರವುಳ್ಳ ವೃದ್ಧರೂ ಒಪ್ಪದೆ ಇರುವದು ನಮ್ಮೆಲ್ಲರ ಅನುಭವದಲ್ಲಿಯೇ ಇರುತ್ತದೆ. ಹೀಗಿರುವಲ್ಲಿ ಮಹಾಭಾರತಗ್ರಂಥದ ಸಂದರ್ಭಕ್ರಮವನ್ನು ಈಗಿನ ಪದ್ಧತಿಯಂತೆ ವಿವೇಚನೆ ಮಾಡಿ ವಿಮರ್ಶೆಮಾಡುವದು ಹೇಗೆ ಯುಕ್ತವಾದೀತು? ಭಾರತದಲ್ಲಿ ಅಲ್ಲಲ್ಲಿ ಕಾಣುವ ಎಷ್ಟೋ ಆಖ್ಯಾನಗಳೂ ಚರ್ಚೆಗಳೂ ಅಪ್ರಕೃತವಾಗಿ ಬಂದಿವೆಯೆಂದು ಈಗಿನವರು ಕೆಲವರು ಅಭಿಪ್ರಾಯಪಡುತ್ತಿರುವದಕ್ಕೆ ಈ ಉತ್ತರವು ಅನ್ವಯಿಸುತ್ತದೆ. ಎರಡನೆಯ ಆಕ್ಷೇಪವು ಇದೇ ಜಾತಿಗೆ ಸೇರಿದ್ದಾಗಿರುತ್ತದೆಯಾದ್ದರಿಂದ ಅದನ್ನು ಬೇರೆ ವಿಚಾರಿಸುವ ಕಾರಣವಿರುವದಿಲ್ಲ. ಇನ್ನು ಮೂರನೆಯ ಆಕ್ಷೇಪವನ್ನು ನೋಡೋಣ. ಭಾರತದ ಕೆಲವು ಕೈಪ್ರತಿಗಳಲ್ಲಿ ಗೀತೆಯು ಇಲ್ಲದಿದ್ದರೇನಾಯಿತು? ಮಿಕ್ಕ ಪ್ರತಿಗಳಲ್ಲೆಲ್ಲ ಅದು ಕಂಡುಬಂದಿರುವದರಿಂದ ಆ ಪ್ರತಿಗಳು ಅಸಮಗ್ರವೆಂದು ಏತಕ್ಕೆ ಭಾವಿಸಬಾರದು ? ಆ ಪ್ರತಿಗಳನ್ನು ಯಾರು ಯಾವ ಸಂದರ್ಭದಲ್ಲಿ ಬರೆದರು? ಎಂಬುದನ್ನು ನಿರ್ಣಯಿಸಿದ ಹೊರತು ಆ ಕೈಪ್ರತಿಗಳ ಬೆಲೆಯನ್ನಾಗಲಿ ಗೀತೆಯ ಸ್ಥಾನವನ್ನಾಗಲಿ ಬರಿಯ ಇದೊಂದು ಆಧಾರದಿಂದಲೇ ಗೊತ್ತುಪಡಿಸುವದಕ್ಕೆ ಆಗಲಾರದೆಂಬುದು ನಿಸ್ಸಂದೇಹವಾಗಿರುತ್ತದೆ. ನಾಲ್ಕು-ಐದನೆಯ ಆಕ್ಷೇಪಣೆ ಗಳಿಗಂತೂ ಉತ್ತರ ಹೇಳಬೇಕಾದ ಅವಶ್ಯಕತೆಯೇ ಇಲ್ಲ. ಸಮಾಪ್ತಿವಾಕ್ಯವು ವ್ಯಾಸರು ಬರೆದದ್ದಲ್ಲವಾದ್ದರಿಂದ ಅದರಲ್ಲಿ ಯಾವ ಹೆಚ್ಚುಕಡಿಮೆಯಿದ್ದರೂ ಗೀತೆಯು ಭಾರತದ ಭಾಗವೆಂಬುದಕ್ಕೆ ಏನೂ ಬಾಧಕವಾಗುವದಿಲ್ಲ.
ಇದುವರೆಗೂ ಆಕ್ಷೇಪಗಳಿಗೆ ಪರಿಹಾರವನ್ನು ಮಾತ್ರ ಹೇಳಿದ್ದಾಯಿತು. ಆದರೆ ಭಗವದ್ಗೀತೆಯು ಭಾರತದ ಭಾಗವೇ ಎಂದು ನಿರ್ಣಯಿಸುವದಕ್ಕೆ ಗೀತಾರಹಸ್ಯದಲ್ಲಿ (ಪು. 505-517) ಬೇಕಾದಷ್ಟು ಸಾಕ್ಷಿಗಳನ್ನು ಕೊಟ್ಟಿರುತ್ತದೆ. ಕುತೂಹಲವುಳ್ಳವರು ಅಲ್ಲಿ ನೋಡಬಹುದು. ಅಲ್ಲಿ ಹೇಳಿರುವದರ ಸಾರಾಂಶವನ್ನು ಮಾತ್ರ ವಾಚಕರಿಗಾಗಿ ಇಲ್ಲಿ ಸಂಗ್ರಹಿಸಿ ಬರೆಯುತ್ತೇನೆ.
(1) ಮಹಾಭಾರತದ ಬೇರೆಬೇರೆ ಭಾಗಗಳಲ್ಲಿ ಭಗವದ್ಗೀತೆಯ ಹೆಸರನ್ನೂ ಉಪದೇಶಗಳನ್ನೂ ಅನುವಾದಮಾಡಿರುತ್ತದೆ.
(2) ಭಾರತದ ಬೇರೆಬೇರೆ ಗ್ರಂಥಭಾಗಗಳಿಗೂ ಗೀತೆಗೂ ಶಬ್ದಸಾದೃಶ್ಯವೂ ಅರ್ಥಸಾದೃಶ್ಯವೂ ಹೇರಳವಾಗಿರುವ ಶ್ಲೋಕಗಳು ಬಂದಿರುತ್ತವೆ. ಆದ್ದರಿಂದ ಗೀತೆಯನ್ನು ಭಾರತದ ಒಂದು ಭಾಗವೆಂದೇ ನಾವು ಇಟ್ಟುಕೊಳ್ಳಬೇಕು. ಆದ್ದರಿಂದ ಗೀತಾರ್ಥನಿರ್ಣಯವನ್ನು ಮಾಡುವದಕ್ಕೆ ಮಹಾಭಾರತದ ಬೇರೆ ಭಾಗಗಳನ್ನು ಹೋಲಿಸುವದು ತುಂಬಾ ಸಹಕಾರಿಯಾಗಿರುತ್ತದೆಯೆಂದು ಗೊತ್ತಾಗುತ್ತದೆ.
(3) ಭಾರತದ ಬೇರೆಬೇರೆ ಭಾಗಗಳನ್ನು ಗೀತೆಗೆ ಹೋಲಿಸುವಾಗ ಯಾವ ಭಾಗವನ್ನು ತೆಗೆದುಕೊಳ್ಳಬೇಕು? ಯಾವದನ್ನು ಬಿಡಬೇಕು? ಇದೊಂದು ಪ್ರಶ್ನೆಯನ್ನು ಸ್ವಲ್ಪ ವಿಚಾರಮಾಡುವದು ಅವಶ್ಯವಾಗಿರುತ್ತದೆ. ಏಕೆಂದರೆ ಭಗವದ್ಗೀತೆಯೆಂಬ ಮಾತಿನಲ್ಲಿರುವ “ಭಗವಾನ್'' ಎಂಬ ಶಬ್ದದ ಸಾಮ್ಯದಿಂದ ಇಲ್ಲಿ ಭಾಗವತಮತ ಎಂಬ ಒಂದು ವಿಶಿಷ್ಟ ಸಿದ್ಧಾಂತವನ್ನು ಹೇಳಿರುತ್ತದೆಯೆಂದೂ ಭಾರತದ ಶಾಂತಿಪರ್ವದಲ್ಲಿ ಭಾಗವತಧರ್ಮಬೋಧಕವಾದ ನಾರಾಯಣೀಯೋಪಾಖ್ಯಾನವನ್ನು ಇದಕ್ಕೆ ಹೋಲಿಸುವದು ಮುಖ್ಯವೆಂತಲೂ ಗೀತಾರಹಸ್ಯಕಾರರು ನಿರ್ಣಯಿಸಿಕೊಂಡು ವಿಚಾರಕ್ಕೆ ಹೊರಟಿರುತ್ತಾರೆ. ನಮ್ಮ ಅಭಿಪ್ರಾಯದಲ್ಲಿ ಈ ನಿರ್ಣಯವು ಸರಿಯಲ್ಲ. ಏಕೆಂದರೆ ನಾರಾಯಣೀಯದಲ್ಲಿಯೂ ಮಿಕ್ಕ ಭಾರತದ ಭಾಗಗಳಲ್ಲಿಯೂ ಭಗವದ್ಗೀತೆಯನ್ನು ಸಮವಾಗಿಯೇ ಹೊಗಳಿರುವಾಗ ನಾರಾಯಣೀಯವನ್ನು ಮಾತ್ರ ಗೀತೆಯ ಅರ್ಥವನ್ನು ನಿರ್ಣಯಿಸುವದಕ್ಕೆ ತೆಗೆದುಕೊಳ್ಳಬೇಕೆಂಬುದು ಯುಕ್ತವಾಗುವದಿಲ್ಲ. ಇದಲ್ಲದೆ ಮಹಾಭಾರತಕಾರರು ಒಬ್ಬರೇ ಎಂದು ಸಾಂಪ್ರದಾಯಿಕ ದೃಷ್ಟಿಯಿಂದ ಒಪ್ಪಿಕೊಂಡರೆ ಗೀತೆಯ ಹೆಸರನ್ನು ಹೇಳಲಿ ಬಿಡಲಿ ಭಾರತದಲ್ಲಿರುವ ತತ್ತ್ವವಿಚಾರಗಳನ್ನೆಲ್ಲ ಸಮಯಕ್ಕೆ ತಕ್ಕ ಹಾಗೆ ಹೋಲಿಕೆಗೆ ತೆಗೆದುಕೊಳ್ಳುವದಕ್ಕೆ ಅಡ್ಡಿ ಏನೂ ಇರುವದಿಲ್ಲ. ಇದರಂತೆ ಗೀತಾರಹಸ್ಯಕಾರರು ತೆಗೆದುಕೊಂಡೂ ಇರುತ್ತಾರೆ. ಈಗಿನ ಭಾರತದ ಬೇರೆಬೇರೆ ಭಾಗಗಳನ್ನು ಬೇರೆಬೇರೆ ಗ್ರಂಥಕಾರರು ಮಾಡಿರುವರೆಂಬ ಈಚಿನ ಶಂಕಾವಾದಿಗಳ ಮತವನ್ನು ತೆಗೆದುಕೊಂಡರಂತೂ ನಾರಾಯಣೀಯವನ್ನು ಗೀತಾಕಾರರೇ ಬರೆದರೆಂದು ಸಿದ್ಧಪಡಿಸಿದ ಹೊರತು ಅದನ್ನು ಹೋಲಿಕೆಗೆ ತೆಗೆದುಕೊಳ್ಳುವದಕ್ಕೆ ಕಾರಣವೇ ಉಳಿಯುವದಿಲ್ಲ. ಆದ್ದರಿಂದ ನೋಡಿದ ಮಾತ್ರದಿಂದಲೇ ಒಂದಕ್ಕೊಂದು ವಿರುದ್ಧವೆಂದು ನಿಶ್ಚಯವಾಗಬಹುದಾದ ಭಾಗಗಳನ್ನು ಗೀತಾನಿರ್ಣಯಕ್ಕೆ ಉಪಯೋಗಿಸಿಕೊಳ್ಳಬಹುದೆಂಬುದೇ ಸರಿಯಾದ ಮಾರ್ಗವಾಗಿರುತ್ತದೆ.
(4) ಮೇಲೆ ಹೇಳಿರುವ ಮೂರು ಉಪಾಯಗಳಲ್ಲದೆ ಇನ್ನೊಂದು ಎಲ್ಲಕ್ಕೂ ಮುಖ್ಯವಾದ ಸಾಧನವುಂಟು. ಅದೇನೆಂದರೆ ಗೀತೆಯನ್ನೇ ಒಟ್ಟಿನಲ್ಲಿ ಪರೀಕ್ಷೆಮಾಡಿ ಒಳಗಿನ ಉಪದೇಶಗಳನ್ನು ಒಂದೊಂದಕ್ಕೆ ಹೋಲಿಸಿ ನೋಡಿ, ಉಪಕ್ರಮೋಪಸಂಹಾರಗಳು, ಅಭ್ಯಾಸ, ಅಪೂರ್ವತಾ, ಫಲ, ಅರ್ಥವಾದ, ಉಪಪತ್ತಿ ಎಂಬ ಆರು ಹೆಗ್ಗುರುತುಗಳಿಂದ ತಾತ್ಪರ್ಯವನ್ನು ಗೊತ್ತುಪಡಿಸುವದು. ಇದು ಮೇಲೆ ಹೇಳಿದ ಎಲ್ಲಾ ಉಪಾಯಗಳಿಗಿಂತಲೂ ಬೆಲೆಯುಳ್ಳದ್ದು. ಏಕೆಂದರೆ ಮಿಕ್ಕ ಉಪಾಯಗಳು ಹೊರಗಿನ ಸಾಧನದಿಂದ ಗೀತೆಯ ಬೆಲೆಯನ್ನು ನಿರ್ಣಯಿಸುವವು; ಈ ಉಪಾಯವು ಗೀತೆಯ ಪರೀಕ್ಷೆಯಿಂದ ಗೀತೆಯ ಬೆಲೆಯನ್ನು ನಿರ್ಣಯಿಸುವದು. ಯಾವ ಗ್ರಂಥದ ತಾತ್ಪರ್ಯವನ್ನಾದರೂ ಈ ಆರು ಹೆಗ್ಗುರುತುಗಳನ್ನು ನೋಡಿಯೇ ಗೊತ್ತುಮಾಡಬೇಕಾಗಿರುತ್ತದೆ ; ಮಿಕ್ಕ ಸಾಧನಗಳನ್ನು ಆ ತಾತ್ಪರ್ಯ ನಿರ್ಣಯವನ್ನು ಪುಷ್ಟಿಗೊಳಿಸುವದಕ್ಕೆ ಉಪಯೋಗಿಸುವುದೇ ಹೊರತು ಮತ್ತೇತಕ್ಕೂ ಅವುಗಳನ್ನು ಉಪಯೋಗಿಸುವದು ಸರಿಯಾಗುವದಿಲ್ಲ. ಆದ್ದರಿಂದ ಈ ಗುರುತುಗಳ ವಿವರವನ್ನು ಇಲ್ಲಿ ತಿಳಿದುಕೊಳ್ಳುವದು ಅತ್ಯವಶ್ಯವಾಗಿರುತ್ತದೆ.
ಮೊದಲನೆಯ ಗುರುತು ಯಾವದೆಂದರೆ ಉಪಕ್ರಮೋಪಸಂಹಾರಗಳು. ಗ್ರಂಥವನ್ನು ಬರೆಯುವಾತನು ತಾತ್ಪರ್ಯವನ್ನು ಗ್ರಂಥದ ಮೊದಲಿನಲ್ಲಿಯೂ ಕೊನೆಯಲ್ಲಿಯೂ ಬಹುಮಟ್ಟಿಗೆ ಸ್ಪಷ್ಟವಾಗಿ ಹೇಳಿರುತ್ತಾನೆ. ಏಕೆಂದರೆ ಗ್ರಂಥದ ಅಥವಾ ಭಾಷಣದ ಮೊದಲೂ ಕೊನೆಯೂ ಬಹುಮುಖ್ಯವಾದ ಸ್ಥಾನಗಳಾಗಿರುತ್ತವೆ. ಓದುವವರೂ ಕೇಳುವವರೂ ವಿಷಯವು ಯಾವ ವಿಚಾರದ್ದೆಂದು ತಿಳಿದುಕೊಳ್ಳುವದಕ್ಕೆ ತುಂಬ ಕುತೂಹಲವುಳ್ಳವರಾಗಿರುತ್ತಾರೆ. ಆದ್ದರಿಂದ ಮತ್ತೆ ಯಾವ ಯೋಚನೆಯಿಂದಲೂ ತುಂಬಿರದ ಆ ಕಾಲದಲ್ಲಿ ಅವರ ಮನಸ್ಸಿನ ಮೇಲೆ ಬಿಂಬಿಸುವ ಹಾಗೆ ತನ್ನ ಅಭಿಪ್ರಾಯವನ್ನು ಹಾಕುವದಕ್ಕೆ ಲೇಖಕನಾಗಲಿ ಭಾಷಣಮಾಡುವವನಾಗಲಿ ಪ್ರಯತ್ನ ಮಾಡುತ್ತಾನೆಂಬುದು ಸಹಜವಾಗಿರುತ್ತದೆ. ಆದ್ದರಿಂದ ಗ್ರಂಥದ ಆರಂಭದಲ್ಲಿ ಹೇಳಿರುವದು ಏನು? ಎಂಬುದು ಬಹುದೊಡ್ಡದಾಗಿರುತ್ತದೆ. ಇದರಂತೆಯೆ ಗ್ರಂಥದ ಕೊನೆಯಲ್ಲಿ ಹೇಳಿರುವದೂ ತುಂಬಾ ಬೆಲೆಯುಳ್ಳದ್ದಾಗಿರುವದು. ಗ್ರಂಥದಲ್ಲಿ ಹೇಳುವ ವಿಷಯಗಳು ಸಂದರ್ಭಾನುಸಾರ ಕವಲುಕವಲಾಗಿ ಎಲ್ಲೆಲ್ಲಿಯೋ ಹೋಗಿ ಬಿಟ್ಟಿರುವದರಿಂದ ಕೊನೆಯಲ್ಲಿ ತಾನು ಹೇಳಬೇಕೆಂದಿರುವ ಮುಖ್ಯ ವಿಚಾರಗಳನ್ನು ಒಕ್ಕಡೆಗೆ ಜೋಡಿಸಿ ಒತ್ತಿ ಹೇಳುವದಕ್ಕೆ ಯತ್ನಿಸುವದು ಲೇಖಕನಿಗೆ ಸ್ವಭಾವವಾಗಿರುತ್ತದೆ. ಈ ಕಾರಣದಿಂದ ಮೊದಲೂ ಕೊನೆಯೂ ಯಾವ ವಿಷಯವನ್ನು ಮುಖ್ಯವೆಂದು ಮುಂದಿಡುವೆವೊ ಅದೇ ಗ್ರಂಥದ ಪ್ರಧಾನವಿಷಯವೆಂದು ತಿಳಿಯುವದು ಯುಕ್ತವಾಗಿರುತ್ತದೆ. ಹೀಗೆ ಉಪಕ್ರಮೋಪಸಂಹಾರಗಳು ತಾತ್ಪರ್ಯಕ್ಕೆ ಮೊದಲನೆಯ ಗುರುತು.
ಇದಾದ ಮೇಲೆ ಅಭ್ಯಾಸವೆಂಬ ಎರಡನೆಯ ಗುರುತನ್ನು ನೋಡಿಕೊಳ್ಳಬಹುದು. ಯಾವಾತನು ತಾನು ಇಂಥ ವಿಷಯವನ್ನು ವಾಚಕನ ಮನಸ್ಸಿನಲ್ಲಿಡಬೇಕೆಂದು ನೆನೆಸಿ ಗ್ರಂಥವನ್ನು ಬರೆಯುತ್ತಾನೋ ಆತನೇ ಮೊದಲೊಂದು ಸಲ, ಕೊನೆಗೊಂದು ಸಲ— ಹೀಗೆ ಎರಡೇ ಸಲ ವಿಷಯವನ್ನು ಹೇಳಿ ನಡುವೆ ತನಗೆ ತೋಚಿದ ಯಾವ ಯಾವದೋ ಸಂಗತಿಗಳನ್ನು ತುಂಬಿಯಾನೆ? ಎಂದಿಗೂ ಇಲ್ಲ. ಅವನು ತಾನು ಹೇಳುವ ಪ್ರಧಾನವಿಷಯಕ್ಕೇ ಮಿಕ್ಕ ಸಂಗತಿಗಳು ಸೇರಿರುವವೆಂದು ತಿಳಿಸಿಕೊಡುವದಕ್ಕಾಗಿ ಅಡಿಗಡಿಗೆ ತಾನು ಹೇಳಿದ್ದಕ್ಕೂ ಮುಖ್ಯ ವಿಷಯಕ್ಕೂ ಇರುವ ಸಂಬಂಧವನ್ನು ತಿಳಿಸುತ್ತಾ ಇರುವನು. ಹೀಗೆ ಗ್ರಂಥದ ನಡುವಿನಲ್ಲಿಯೂ ಮತ್ತೆ ಮತ್ತೆ ಯಾವ ವಿಷಯವನ್ನು ತರುತ್ತಿರುವನೋ ಅದೇ ಆ ಗ್ರಂಥದ ಮುಖ್ಯ ವಿಷಯವೆನ್ನಬೇಕಲ್ಲವೆ? ಈ ರೀತಿಯಲ್ಲಿ ಬಾರಿಬಾರಿಗೂ ಗ್ರಂಥವಿಷಯವನ್ನು ಕುರಿತು ಮಾತುಗಳನ್ನಾಡುತ್ತಿರುವದೇ ಅಭ್ಯಾಸವೆಂಬ ಎರಡನೆಯ ಹೆಗ್ಗುರುತು. ಈ ಗುರುತಿನಿಂದಲೂ ತಾತ್ಪರ್ಯವನ್ನು ನಿರ್ಣಯಿಸುವದಕ್ಕೆ ಸಹಾಯವಾಗುವದು.
ಅಪೂರ್ವತಾ ಎಂಬುದು ಮೂರನೆಯ ಗುರುತು. ಎಲ್ಲರೂ ಹೇಳಿದ್ದನ್ನು ತಾನೂ ಹೇಳಿದರೆ ತನ್ನ ಗ್ರಂಥದ ಹೆಚ್ಚುಗಾರಿಕೆಯೇನು? ಏನೂ ಇಲ್ಲ. ಇದಕ್ಕಾಗಿ ಗ್ರಂಥಕಾರನು ಮತ್ತೊಬ್ಬರ ಗ್ರಂಥಕ್ಕೂ ತನ್ನ ಗ್ರಂಥಕ್ಕೂ ಇರುವ ತಾರತಮ್ಯವನ್ನು ಚೆನ್ನಾಗಿ ಕಾಣುವಂತೆ ವಾಚಕರ ಮುಂದೆ ಇಟ್ಟಿರುತ್ತಾನೆ. ಮಿಕ್ಕವರು ಹೇಳಿರುವ ಸಂಗತಿಗಳನ್ನೂ ಅವು ಬೇಕಾದಾಗ ಹೇಳಬಹುದು; ಆದರೆ ಅದಕ್ಕೆ ಅಷ್ಟು ಪ್ರಾಮುಖ್ಯತೆಯನ್ನೇನೂ ಅವನು ಕೊಡುವದಿಲ್ಲ. ತಾನು ಹೇಳುವ ಮುಖ್ಯ ವಿಷಯವು ಬಂತೆಂದರೆ ಸರಿ, ಅದು ವಾಚಕರಿಗೆ ಕಣ್ಣಿಗೆ ಕಟ್ಟಿದ ಹಾಗಾಗುವಂತೆ ಎದುರಿಗಿಡುತ್ತಾನೆ. ಇದರಿಂದ ಈ ಗ್ರಂಥದ ವಿಷಯವೇನು? ಎಂಬ ಪ್ರಶ್ನೆ ಬಂದರೆ ವಾಚಕರು ಥಟ್ಟನೆ 'ಇಂಥದ್ದೇ ಈ ಗ್ರಂಥದ ವಿಷಯವು: ಮಿಕ್ಕದ್ದು ಬೇರೆ ಕಡೆಗಳಲ್ಲಿದೆ, ಆದರೆ ಈ ವಿಷಯವನ್ನು ಮಾತ್ರ ಯಾರೂ ಹೀಗೆ ಹೇಳಲಿಲ್ಲ' ಎಂದು ಗೊತ್ತುಮಾಡಿಕೊಂಡುಬಿಡುವರು. ಆದ್ದರಿಂದ ಈ ಗ್ರಂಥದಲ್ಲಿರುವ ಹೊಸ ವಿಚಾರವೇನು? ಎಂಬಿದನ್ನು ತಿಳಿಸುವ ಗುರುತೂ ತಾತ್ಪರ್ಯನಿರ್ಣಯಕ್ಕೆ ಸಹಕಾರಿಯಾಗಿರುತ್ತದೆ. ಇದಕ್ಕೆ ಅಪೂರ್ವತೆ ಎಂದು ಹೆಸರು.
ಇನ್ನು ಫಲವೆಂಬುದು ನಾಲ್ಕನೆಯ ಗುರುತು. ಯಾವದನ್ನು ತಿಳಿದುಕೊಂಡರೆ ಅಥವಾ ಮಾಡಿದರೆ ಎಲ್ಲಕ್ಕೂ ಹೆಚ್ಚಿನ ಫಲವುಂಟಾಗುವದೆಂದು ಗ್ರಂಥಕರ್ತನು ಹೇಳುತ್ತಾನೋ ಅದೇ ಅವನ ಆಶಯವಾಗಿರುತ್ತದೆ. ಯಾವ ಪ್ರಯೋಜನವೂ ಇಲ್ಲದ್ದನ್ನು ತಿಳಿಯುವದಕ್ಕಾಗಲಿ ಮಾಡುವದಕ್ಕಾಗಲಿ ಜನರು ಕೈ ಹಾಕುವದಿಲ್ಲವಷ್ಟೆ; ಇದನ್ನು ತಿಳಿದ ಗ್ರಂಥಕರ್ತನು ತಾನು ಹೇಳುವ ವಿಷಯದ ತಿಳಿವಳಿಕೆಯಿಂದಾಗುವ ಪ್ರಯೋಜನವನ್ನು ಅವಶ್ಯವಾಗಿ ಹೇಳಿಯೇ ಹೇಳುವನು. ಹೀಗೆ ಫಲವನ್ನು ಹೇಳಿರುವ ಮಾತುಗಳಲ್ಲಿ ಅವನಿಗೆ ತಾತ್ಪರ್ಯವಿದೆಯೆಂದೂ ಸುಮ್ಮನೆ ಫಲವನ್ನೇನೂ ಹೇಳದೆ ಅಲ್ಲಲ್ಲಿ ತಂದಿರುವ ವಿಚಾರಗಳೆಲ್ಲ ಅದಕ್ಕೆ ಅಂಗವು ಎಂದರೆ ಸಹಾಯಕವಾಗಿ ಹೇಳಿದ್ದು ಎಂತಲೂ ತಿಳಿಯಬೇಕು. 'ಫಲವಿಲ್ಲದ್ದು ಫಲವಿರುವದರ ಅಂಗವು' ಎಂದು ಮೀಮಾಂಸಕರು ಒಂದು ತಾತ್ಪರ್ಯಲಿಂಗವನ್ನು ಗೊತ್ತುಮಾಡುವ ನಿಯಮವನ್ನು ತೆಗೆದಿರುತ್ತಾರೆ. ಈ ನಿಯಮವು ವೇದಕ್ಕೆ ಮಾತ್ರವೇ ಅಲ್ಲದೆ ಯಾವ ಗ್ರಂಥಕ್ಕಾದರೂ ಹತ್ತುವದರಿಂದ ಯಾವ ವಿಷಯವನ್ನು ವಾಚಕರಿಗೆ ಸರಿಯಾದ ಪ್ರಯೋಜನವನ್ನು ತೋರಿಸಿಕೊಟ್ಟು ಗ್ರಂಥಕಾರನು ಹೇಳುತ್ತಾನೋ ಅದರಲ್ಲಿ ಅವನ ತಾತ್ಪರ್ಯವಿರುವದೆಂದು ನಾವು ನಂಬಬಹುದಾಗಿರುತ್ತದೆ.
ಐದನೆಯ ಗುರುತು ಯಾವದೆಂದರೆ ಅರ್ಥವಾದವು. ಅರ್ಥವಾದವೆಂದರೆ ತಾನು ಹೇಳುವ ವಿಷಯವು ಕೇಳುವವರಿಗೆ ಒಪ್ಪಾಗುವಂತೆ ಅದನ್ನು ಹೊಗಳುವದು ಅಥವಾ ಅದಕ್ಕೆ ವಿರುದ್ಧವಾದದ್ದನ್ನು, ಅದಕ್ಕಿಂತ ಕಡಿಮೆಯಾದದ್ದನ್ನು ಜರಿಯುವದು. ತನ್ನ ವಿಷಯವನ್ನು ಬಗೆಬಗೆಯಾಗಿ ಹೊಗಳುವದರಿಂದ ಆ ವಿಷಯದ ಹೆಚ್ಚಿಗೆಯು ಎದ್ದು ಕಾಣುವದು. ಅದನ್ನು ಹೊಗಳುವ ಉದ್ದೇಶದಿಂದ ಅದಕ್ಕಿಂತ ಬೇರೆಯಾದದ್ದನ್ನು ಜರಿದರೂ ವಿಷಯದ ಹೆಚ್ಚಿಗೆಯೇ ತೋರಿಕೊಳ್ಳುವದು. ಉದಾಹರಣೆಗೆ 'ಯಾವನು ಹೀಗೆ ಮಾಡುತ್ತಾನೋ ಅವನಿಗೆ ರಾಜಪದವಿಯು ಕೈವಶವಾಯಿತೆಂದು ತಿಳಿಯತಕ್ಕದ್ದು. ಮೂರು ಲೋಕವೂ ಅವನ ಆಜ್ಞೆಯನ್ನು ತಲೆಯಲ್ಲಿ ಹೊತ್ತಿರುವದು' ಎಂದು ಹೇಳಿದರೆ ಹೀಗೆ ಮಾಡುವದು ಒಳ್ಳೆಯದೆಂಬ ಅರ್ಥವು ಚೆನ್ನಾಗಿ ಎದ್ದುಕಾಣುವದು. 'ಇವನೀಗ ವಿದ್ಯಾರ್ಥಿ; ಮಿಕ್ಕವರು. ಎಂಥ ವಿದ್ಯಾರ್ಥಿಗಳು? ಅವರೆಲ್ಲ ಬರಿಯ ಅಲಂಕಾರದ ವಿದ್ಯಾರ್ಥಿಗಳು' ಎಂದರೆ ಪ್ರಕೃತವಾಗಿರುವ ವಿದ್ಯಾರ್ಥಿಯು ಎಲ್ಲರಿಗೂ ಹೆಚ್ಚೆಂದು ಸ್ಪಷ್ಟವಾಗುವದು. ಪ್ರಕೃತವಾದ ವಿಷಯವನ್ನು ಹೊಗಳುವದಕ್ಕಾಗಲಿ ಅದಲ್ಲದ ಮತ್ತೊಂದನ್ನು ಹಳಿಯುವದಕ್ಕಾಗಲಿ ಬೇಕಾದ ಕಥೆಯೊಂದನ್ನು ಕಲ್ಪಿಸಿ ಹೊಗಳಬಹುದು ಅಥವಾ ಹಳಿಯಬಹುದು; ಹೊಗಳಿಕೆಯ ಅಥವಾ ನಿಂದೆಯ ಅಂಶವೆಲ್ಲವೂ ನಿಜವಾಗಿರಲೇಬೇಕೆಂದು ನಿಯಮವೂ ಇಲ್ಲ. ಅರ್ಥವಾದಕ್ಕೆ ತಾನು ಹೇಳುವ ವಿಷಯದಲ್ಲಿ ಮುಖ್ಯತಾತ್ಪರ್ಯವಿರುವದಿಲ್ಲ; ಯಾವದನ್ನು ಹೊಗಳುವದಕ್ಕೆ ಅಥವಾ ಜರಿಯುವದಕ್ಕೆಂದೇ ಅದು ಹೊರಟಿರುವದೋ ಆ ವಿಷಯದಲ್ಲಿ ಅದಕ್ಕೆ ತಾತ್ಪರ್ಯವಿರುವದು. ಆದಕಾರಣ ಯಾವದನ್ನು ಕುರಿತು ಬೇರೆಬೇರೆ ಅರ್ಥವಾದಗಳನ್ನು ಕಲ್ಪಿಸಿ ಗ್ರಂಥಕಾರನು ವಿಷಯವನ್ನು ನಮ್ಮ ಮುಂದೆ ಇಡುವನೋ ಅಂಥ ವಿಷಯದಲ್ಲಿ ಅವನಿಗೆ ತಾತ್ಪರ್ಯವಿರುವದೆಂದು ತಿಳಿಯಬೇಕು. ಇದು ತಾತ್ಪರ್ಯವನ್ನು ಗೊತ್ತು ಹಚ್ಚುವ ಐದನೆಯ ಗುರುತು.
ತಾತ್ಪರ್ಯವನ್ನು ನಿಶ್ಚಯಿಸುವದಕ್ಕೆ ಉಪಕ್ರಮೋಪಸಂಹಾರ, ಅಭ್ಯಾಸ, ಅಪೂರ್ವತೆ, ಫಲ, ಅರ್ಥವಾದ ಇವು ಐದೇ ಅಲ್ಲದೆ ಮತ್ತೂ ಒಂದು ಹೆಗ್ಗುರುತು ಇರುವದು. ಯಾವ ವಿಷಯದಲ್ಲಿ ತನಗೆ ಆದರವಿರುವದೋ ಗ್ರಂಥಕಾರನು ಅದಕ್ಕೆ ತಕ್ಕ ಉಪಪತ್ತಿಗಳನ್ನು ಎಂದರೆ ಯುಕ್ತಿಗಳನ್ನು ಕೊಟ್ಟು ನಮಗೆ ಅದನ್ನು ಮೆಚ್ಚುವಂಥ ಮನಸ್ಸನ್ನುಂಟುಮಾಡುವನೆಂಬುದು ನಿರೀಕ್ಷಿಸತಕ್ಕದ್ದೇ ಅಲ್ಲವೆ ? ಹೀಗೆ ಉತ್ತಮವಾದ ಯುಕ್ತಿಗಳಿಂದ ಯಾವದು ಪೋಷಿತವಾಗಿರುವದೋ ಅದೇ ಗ್ರಂಥಕಾರನಿಗೆ ಅಭಿಮತವಾದ ವಿಷಯವೆಂದು ನಾವು ತಿಳಿದುಕೊಳ್ಳಬಹುದಾಗಿರುವದರಿಂದ ಯುಕ್ತಿಗಳೂ ತಾತ್ಪರ್ಯವನ್ನು ನಿರ್ಣಯಿಸುವ ಗುರುತಾಗಿರುತ್ತವೆ. ಈ ಗುರುತಿಗೆ ಮೀಮಾಂಸಕರು ಉಪಪತ್ತಿ ಎನ್ನುತ್ತಾರೆ. ಇದುವರೆಗೆ ವಿವರಿಸಿರುವ ತಾತ್ಪರ್ಯನಿಶ್ಚಾಯಕವಾದ ಗುರುತುಗಳನ್ನು ಮೀಮಾಂಸಕರು ಷಡ್ಲಿಂಗಗಳು ಎಂದು ಕರೆಯುತ್ತಾರೆ. ಈ ಲಿಂಗಗಳಿಂದ ಭಗವದ್ಗೀತೆಯ ತಾತ್ಪರ್ಯವನ್ನು ನಿರ್ಣಯಿಸುವದು ಎಲ್ಲಕ್ಕೂ ಹೆಚ್ಚಿನ ಸಾಧನವೆಂದು ವಾಚಕರಿಗೆ ತಿಳಿಸಬೇಕಾದದ್ದೇ ಇರುವದಿಲ್ಲ.
ಹಿಂದಿನ ಭಾಷ್ಯಕಾರರಾಗಲಿ ಉಳಿದ ವಿಚಾರಕರಾಗಲಿ ಈ ಗುರುತುಗಳನ್ನು ಉಪಯೋಗಿಸಿಲ್ಲವೆ? ಉಪಯೋಗಿಸಿದ್ದರೂ ಅವರ ಮತಗಳು ಭಿನ್ನಭಿನ್ನವಾಗಿವೆಯಲ್ಲ? ಎಂದು ನಮಗೆ ಶಂಕೆಯಾಗಬಹುದು. ಆದರೆ ಒಬ್ಬೊಬ್ಬರೂ ತಮ್ಮ ತಮ್ಮ ಅಭಿಪ್ರಾಯದ ಮೇಲಿನ ಅಭಿಮಾನದಿಂದ ಯಾವದಾದರೊಂದು ವಾಕ್ಯವನ್ನು ಉಪಕ್ರಮವೆಂದೂ ಮತ್ತೊಂದನ್ನು ಉಪಸಂಹಾರವೆಂದೂ, ಮಗದೊಂದನ್ನು ಅಭ್ಯಾಸವೆಂದೂ ಬೇರೊಂದನ್ನು ಅಪೂರ್ವತೆಯೆಂದೂ ತಂದೊಡ್ಡಬಹುದಷ್ಟೆ. ಇಷ್ಟು ಜನರಲ್ಲಿ ಯಾರು ಷಡ್ಲಿಂಗಗಳನ್ನು ಸ್ವಾಭಾವಿಕವಾಗಿ ತಂದುತೋರಿಸುತ್ತಾರೆ? ಯಾರು ವಾಕ್ಯಗಳನ್ನು ಹಿಗ್ಗಾಮುಗ್ಗಾ ಜಗ್ಗಾಡಿರುತ್ತಾರೆ? ಎಂಬುದನ್ನು ವಾಚಕರೇ ನಿರ್ಣಯಿಸಬೇಕಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ಗ್ರಂಥಕಾರನೂ ತನಗೆ ತಿಳಿದಮಟ್ಟಿಗೆ ಷಡ್ಲಿಂಗಗಳನ್ನು ಉಪಯೋಗಿಸಿರುತ್ತಾನೆಂದೇ ಹೇಳಬೇಕಾಗಿರುತ್ತದೆ. ಆದರೆ ಈ ಎಲ್ಲಾ ನಿರ್ಣಯಗಳ ಯುಕ್ತಾಯುಕ್ತತೆಯನ್ನು ಗೊತ್ತುಹಚ್ಚುವುದು ತತ್ತ್ವಪಕ್ಷಪಾತಿಗಳಾದ ವಾಚಕರನ್ನೇ ಅವಲಂಬಿಸಿರುವುದು.
ಗೀತಾರ್ಥನಿರ್ಣಯಕ್ಕೆ ವಿಮರ್ಶಕರು ಉಪಯೋಗಿಸಿರುವ ಸಾಧನಗಳು
ಪ್ರಾಚೀನರಾದ ಭಾಷ್ಯಕಾರರಲ್ಲಿಯೂ ಈಚಿನ ಸ್ವತಂತ್ರವಿಚಾರಕರಲ್ಲಿಯೂ ಇಷ್ಟು ಭಿನ್ನಾಭಿಪ್ರಾಯಗಳಾಗಿರುವಾಗ ಗೀತಾರ್ಥದ ತಿರುಳನ್ನು ತೆಗೆಯುವದಕ್ಕೆ ಬೇರೆ ಯಾವ ಉಪಾಯವು ಸಿಗಬಹುದು? ಎಂದು ಯೋಚನೆ ಹುಟ್ಟುವದು ಸ್ವಾಭಾವಿಕವಾಗಿರುವದು. ಆದರೆ ಇದುವರೆಗೆ ಗೀತಾರ್ಥವನ್ನು ಮಥನ ಮಾಡುವದಕ್ಕೆ ಯಾವ ಯಾವ ಉಪಾಯಗಳನ್ನು ವಿಚಾರಕರು ಉಪಯೋಗಿಸಿರುವರು ಎಂಬುದನ್ನು ಮೊದಲು ತಿಳಿಯುವದು ಅತ್ಯವಶ್ಯವಾಗಿದೆ. ಏಕೆಂದರೆ ಇವರು ಉಪಯೋಗಿಸಿರುವ ಸಾಧನಗಳ ಯೋಗ್ಯತೆಯನ್ನೂ ಅವುಗಳನ್ನು ಇವರು ಉಪಯೋಗಿಸಿಕೊಂಡಿರುವ ಕ್ರಮದ ಬೆಲೆಯನ್ನೂ ಗೊತ್ತುಪಡಿಸಿದ ಮೇಲೆ ಅವುಗಳು ಯಾವವೂ ಉಪಯೋಗವಿಲ್ಲವೆಂದು ನಿರ್ಣಯವಾದರೆ ಮತ್ತೊಂದು ಉಪಾಯವನ್ನು ನಾವು ಹುಡುಕಬೇಕಾಗುವದು. ಹಾಗಿಲ್ಲದೆ ಈಗಿರುವ ಉಪಾಯಗಳಲ್ಲಿಯೇ ಯಾವದಾದರೊಂದು ಉಪಾಯವು ನಮ್ಮ ಉದ್ದೇಶವನ್ನು ನೆರವೇರಿಸುವಂತಿದ್ದು ಅದನ್ನು ವಿಮರ್ಶಕರು ಸರಿಯಾಗಿ ಉಪಯೋಗಿಸಿಕೊಂಡಿಲ್ಲವೆಂದಾಗಲೀ ಅಥವಾ ಉಪೇಕ್ಷೆ ಮಾಡಿಬಿಟ್ಟಿರುವರೆಂದಾಗಲೀ ಗೊತ್ತಾದರೆ ಆಗ ಆ ಉಪಾಯವನ್ನೇ ನಾವು ಸರಿಯಾದ ಮಾರ್ಗದಿಂದ ಉಪಯೋಗಿಸಿ ಗೀತಾರ್ಥದ ನಿರ್ಣಯವನ್ನು ಮಾಡಿಕೊಳ್ಳುವದಕ್ಕೆ ಯಾವ ಅಡ್ಡಿಯೂ ಇರುವದಿಲ್ಲ. ಆದಕಾರಣ ಗೀತಾರ್ಥನಿರ್ಣಯಕ್ಕೆ ಇದುವರೆಗೆ ಉಪಯೋಗಿಸಿರುವ ಕ್ರಮಗಳನ್ನು ಒಂದೊಂದಾಗಿ ತೆಗೆದುಕೊಂಡು ವಿಚಾರ ಮಾಡುವದು ಬಹಳ ಅವಶ್ಯವಾಗಿರುತ್ತದೆ.
ಗೀತಾರ್ಥವನ್ನು ಗೊತ್ತುಪಡಿಸುವದಕ್ಕೆ ಉಪಯೋಗಿಸಿರುವ ಸಾಧನಗಳಲ್ಲಿ ಗೀತಾಧ್ಯಾನಶ್ಲೋಕಗಳ ಸಂಗ್ರಹವು ಒಂದಾಗಿರುತ್ತದೆ. ಈ ಸಂಗ್ರಹದಲ್ಲಿ ಒಂಭತ್ತು ಶ್ಲೋಕಗಳು ಇರುತ್ತವೆ. ಅವುಗಳನ್ನು ಇಲ್ಲಿ ಕೊಡುತ್ತೇನೆ.
ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ |
ಅದ್ವೈತಾಮೃತವರ್ಷಿಣೀಂ ಭಗವತೀಮಷ್ಟಾದಶಾಧ್ಯಾಯಿನೀಮ್
ಅಂಬ ತ್ವಾಮನುಸಂದಧಾಮಿ ಭಗವದ್ಗೀತೇ ಭವದ್ವೇಷಿಣೀಮ್ || 1 ||
ಭಗವಂತನಾದ ನಾರಾಯಣನು ತಾನೇ ಅರ್ಜುನನಿಗೆ ಉಪದೇಶಮಾಡಿ, ಪ್ರಾಚೀನ ಋಷಿಗಳಾದ ವ್ಯಾಸರು ರಚನೆ ಮಾಡಿ ಮಹಾಭಾರತದೊಳಗೆ ಸೇರಿಸಿರುವದಾದ, ಹದಿನೆಂಟು ಅಧ್ಯಾಯದ ಭಗವದ್ಗೀತೆಯೆಂಬ ತಾಯೆ! ಸಂಸಾರಕ್ಕೆ ಶತ್ರುವಾಗಿಯೂ ಅದ್ವೈತವೆಂಬ ಅಮೃತವನ್ನು ಸುರಿಸುವವಳಾಗಿಯೂ ಇರುವ ಪೂಜ್ಯಳಾದ ನಿನ್ನನ್ನು ನಮಸ್ಕರಿಸುತ್ತೇನೆ.
ನಮೋऽಸ್ತು ತೇ ವ್ಯಾಸ ವಿಶಾಲಬುದ್ಧೇ ಫುಲ್ಲಾರವಿಂದಾಯತಪತ್ರನೇತ್ರ |
ಯೇನ ತ್ವಯಾ ಭಾರತತೈಲಪೂರ್ಣಃ ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ || 2 ||
ಅರಳಿದ ಕಮಲದ ಎಸಳಿನಂತೆ ಅಗಲವಾದ ಕಣ್ಣುಳ್ಳ ಮಹಾಬುದ್ಧಿವಂತನಾದ ವ್ಯಾಸನೆ! ನಿನಗೆ ನಮಸ್ಕಾರವು. ಆ ನೀನೇ ಭಾರತವೆಂಬ ಎಣ್ಣೆಯನ್ನು ತುಂಬಿ ಜ್ಞಾರೂಪವಾದ ದೊಡ್ಡ ದೀಪವನ್ನು ಹಚ್ಚಿರುತ್ತೀಯೆ.
ಪ್ರಪನ್ನಪಾರಿಜಾತಾಯ ತೋತ್ರವೇತ್ರೈಕಪಾಣಯೇ ।
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ || 3 ||
ಶರಣರಾದ ಜನರಿಗೆ ಪಾರಿಜಾತವೃಕ್ಷವಾಗಿ ಕೇಳಿದ್ದನ್ನು ಕೊಡುವಂಥವನಾಗಿಯೂ, ಗೋವುಗಳನ್ನು ಹೊಡೆಯುವ ಬೆತ್ತವನ್ನು ಹಿಡಿದಿರುವವನಾಗಿಯೂ, ಜ್ಞಾನಮುದ್ರೆಯನ್ನು ಧರಿಸಿರುವವನಾಗಿಯೂ, ಗೀತೆಯೆಂಬ ಅಮೃತವನ್ನು ಕರೆದವನಾಗಿಯೂ ಇರುವ ಕೃಷ್ಣನಿಗೆ ನಮಸ್ಕಾರವು.
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ |
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ || 4 ||
ಸಕಲ ಉಪನಿಷತ್ತುಗಳೇ ಹಸುಗಳು. ಗೋಪಾಲಕೃಷ್ಣನೇ ಕರೆಯುವಾತನು, ಅರ್ಜುನನೇ ಕರುವು, ಜಾಣನಾದ ಪುರುಷನೇ ಹಾಲುಣ್ಣುವವನು, ಹೆಚ್ಚಿನ ಗೀತಾಮೃತವೇ ಕರೆದ ಹಾಲು.
ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ |
ದೇವಕೀಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ || 5 ||
ವಸುದೇವನ ಪುತ್ರನಾಗಿಯೂ, ಕಂಸಚಾಣೂರರೆಂಬ ರಕ್ಕಸರನ್ನು ಕೊಂದವನಾಗಿಯೂ, ದೇವಕೀದೇವಿಗೆ ಪರಮಾನಂದಕರನಾಗಿಯೂ ಇರುವ, ಜಗದ್ಗುರುವಾದ ದೇವ(ಕೃಷ್ಣ)ನನ್ನು ನಮಸ್ಕರಿಸುತ್ತೇನೆ.
ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋ-ತ್ಪಲಾ(/-ಪಲಾ)
ಶಲ್ಯಗ್ರಾಹವತೀ ಕೃಪೇಣ ವಹನೀ ಕರ್ಣೇನ ವೇಲಾಕುಲಾ |
ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರ್ತಿನೀ
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ || 6 ||
ಭೀಷ್ಮದ್ರೋಣರೆಂಬ ದಡಗಳುಳ್ಳದ್ದಾಗಿಯೂ, ಜಯದ್ರಥನೆಂಬ ನೀರು, ಶಕುನಿಯೆಂಬ ಕನ್ನೈದಿಲೆ (ನೀಲ+ಉಪಲಾ= ನೀಲ ಕಲ್ಲುಬಂಡೆ), ಶಲ್ಯನೆಂಬ ಜಲಜಂತು, ಕೃಪನೆಂಬ ಪ್ರವಾಹ, ಕರ್ಣನೆಂಬ ತೀರದ ಗದ್ದಲ, ಅಶ್ವತ್ಥಾಮ ವಿಕರ್ಣ ಎಂಬ ಭಯಂಕರವಾದ ಮೊಸಳೆಗಳು, ದುರ್ಯೋಧನನೆಂಬ ಸುಳಿ —ಇವುಗಳಿಂದ ಕೂಡಿರುವ ರಣನದಿಯನ್ನು ಪಾಂಡವರು ದಾಟಿದರಷ್ಟೆ. ಕೇಶವನು ಅದಕ್ಕೆ ಅಂಬಿಗನು.
ಪಾರಾಶರ್ಯವಚಃ ಸರೋಜಮಮಲಂ ಗೀತಾರ್ಥಗನ್ಧೋತ್ಕಟಮ್ |
ನಾನಾಖ್ಯಾನಕಕೇಸರಂ ಹರಿಕಥಾಸಂಬೋಧನಾಬೋಧಿತಮ್ ||
ಲೋಕೇ ಸಜ್ಜನಷಟ್ಟದೈರಹರಹಃ ಪೇಪೀಯಮಾನಂ ಮುದಾ |
ಭೂಯಾದ್ಭಾರತಪಂಕಜಂ ಕಲಿಮಲಪ್ರಧ್ವಂಸಿ ನಃ ಶ್ರೇಯಸೇ || 7 ||
ಪರಾಶರರ ಮಕ್ಕಳಾದ ವ್ಯಾಸರ ವಚನವೆಂಬ ಸರೋವರದಲ್ಲಿ ಹುಟ್ಟಿ ಗೀತಾರ್ಥವೆಂಬ ಸುವಾಸನೆಯಿಂದ ತುಂಬಿರುವದಾಗಿಯೂ, ಬಗೆಬಗೆಯ ಆಖ್ಯಾನಗಳೆಂಬ ಕೇಸರಗಳುಳ್ಳದ್ದಾಗಿಯೂ, ಹರಿಯ ಕಥೆಯ ಉಪದೇಶಗಳಿಂದ ಅರಳಿದ್ದಾಗಿಯೂ, ಲೋಕದ(ಲ್ಲಿ) ಸತ್ಪುರುಷರೆಂಬ ಭ್ರಮರಗಳು ಪ್ರತಿದಿನವೂ ಕೂಡಿ ಕುಡಿದು ತಣಿಯುತ್ತಿರುವದಾಗಿಯೂ, ಕಲಿಕಲ್ಮಷವನ್ನು ನಾಶಗೊಳಿಸುವದಾಗಿಯೂ ಇರುವ ಭಾರತವೆಂಬ ಕಮಲವು ನಮಗೆ ಶ್ರೇಯಸ್ಸನ್ನುಂಟುಮಾಡಲಿ.
ಮೂಕಂ ಕರೋತಿ ವಾಚಾಲಂ ಪಙ್ಗುಂ ಲಂಘಯತೇ ಗಿರಿಮ್ |
ಯತೃಪಾ ತಮಹಂ ವಂದೇ ಪರಮಾನಂದಮಾಧವಮ್ || 8 ||
ಯಾವಾತನ ಕೃಪೆಯು ಮೂಕನನ್ನು ಕೂಡ ಬೇಕಾದಂತೆ ಮಾತಾಡುವಂತೆ ಮಾಡುವದೋ, ಹೆಳವನನ್ನು ಕೂಡ ಬೆಟ್ಟವನ್ನು ಹಾರುವಂತೆ ಮಾಡುವದೋ, ಅಂಥ ಪರಮಾನಂದ ರೂಪನಾದ ಲಕ್ಷ್ಮೀಪತಿಯನ್ನು ನಮಸ್ಕರಿಸುತ್ತೇನೆ.
ಯಂ ಬ್ರಹ್ಮಾವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಃ ಸ್ತವೈಃ
ವೇದೈಃ ಸಾಂಗಪದಕ್ರಮೋಪನಿಷದೈರ್ಗಾಯನ್ತಿ ಯಂ ಸಾಮಗಾಃ |
ಧ್ಯಾನಾವಸ್ಥಿತತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ
ಯಸ್ಯಾನ್ತಂ ನ ವಿದುಃ ಸುರಾಸುರಗಣಾ ದೇವಾಯ ತಸ್ಮೈ ನಮಃ || 9 ||
ಬ್ರಹ್ಮನೂ ವರುಣನೂ ಇಂದ್ರನೂ ರುದ್ರನೂ ಮಿಕ್ಕದೇವತೆಗಳೂ ದಿವ್ಯವಾದ ಸ್ತೋತ್ರಗಳಿಂದ ಯಾವಾತನನ್ನು ಹೊಗಳುವರೋ, ಸಾಮಗಾನವನ್ನು ಬಲ್ಲವರು ವೇದಾಂಗಗಳು, ಪದ, ಕ್ರಮ, ಉಪನಿಷತ್ತು ಇವುಗಳಿಂದೊಡಗೂಡಿದ ವೇದಗಳಿಂದ ಯಾವಾತನನ್ನು ಹಾಡಿಹೊಗಳುವರೋ, ಯೋಗಿಗಳು ಧ್ಯಾನದಲ್ಲಿ ಅದೇ ಮನಸ್ಸಿನಿಂದ ಯಾವಾತನನ್ನು ಕಾಣುವರೋ, ದೇವತೆಗಳಾಗಲಿ ಅಸುರರಾಗಲಿ ಯಾವಾತನ ಸ್ವರೂಪವನ್ನು ಅರಿಯರೋ, ಅಂಥ ದೇವನಿಗೆ ನಮಸ್ಕಾರ.
ಮೇಲಿನ ಗೀತಾಧ್ಯಾನಕ್ರಮವು ಗೀತೆಯ ಕಾಲದಿಂದಲೂ ಎಡೆಬಿಡದೆ ಪರಂಪರೆಯಾಗಿ ಬಂದಿದೆಯೆಂದು ಯಾವದಾದರೂ ಪ್ರಮಾಣದಿಂದ ಸಿದ್ಧಪಡಿಸುವದಕ್ಕೆ ಆಗುವ ಹಾಗಿದ್ದರೆ ಪ್ರಕೃತ ವಿಚಾರವನ್ನು ನಿರ್ಣಯಮಾಡಿದಂತೆಯೇ ಆಗುತ್ತಿತ್ತು. ಏಕೆಂದರೆ ಗೀತೆಯು ವ್ಯಾಸನಿರ್ಮಿತವಾದ ಮಹಾಭಾರತದೊಳಗೆ ಸೇರಿದ್ದೆಂದೂ, ಇದರಲ್ಲಿ ಅದ್ವೈತವೇ ಮುಖ್ಯವಾಗಿ ಹೇಳಲ್ಪಟ್ಟಿರುತ್ತದೆಯೆಂದೂ ಸ್ಪಷ್ಟವಾಗಿ ಹೇಳಿರುತ್ತದೆ. ಆದರೆ ಈ ಧ್ಯಾನಶ್ಲೋಕಗಳು ಯಾರಾದರೊಬ್ಬ ಗ್ರಂಥಕರ್ತನು ಮಾಡಿದನೆಂದು ಹೇಳುವದಕ್ಕೆ ಆಧಾರವಿಲ್ಲ. ಬೇರೆಬೇರೆ ಗ್ರಂಥಗಳಲ್ಲಿ ಪ್ರಸಿದ್ಧವಾಗಿರುವ ಶ್ಲೋಕಗಳು ಇಲ್ಲಿ ಒಕ್ಕಡೆಗೆ ಸೇರಿಸಿಕೊಡಲ್ಪಟ್ಟಿವೆ. ಉದಾಹರಣೆಗೆ ''ವಸುದೇವಸುತಂ ದೇವಂ'' ಎಂಬುದು ಕೃಷ್ಣಾಷ್ಟಕವೆಂಬ ಸ್ತೋತ್ರಮಾಲೆಗೆ ಸೇರಿದ್ದು. “'ಭೀಷ್ಮದ್ರೋಣತಟಾ'' ಎಂಬ ಶ್ಲೋಕವು ಭಾಸಕವಿಯ “ಊರುಭಂಗ”ವೆಂಬ ನಾಟಕಕ್ಕೆ ಸೇರಿದ್ದೆಂದು ಕಂಡುಹಿಡಿದಿರುತ್ತಾರೆ. ಹೀಗೆ ಬೇರೆಬೇರೆ ಕಡೆಗಳಲ್ಲಿ ಬೇರೆಬೇರೆ ಕಾಲದ ಗ್ರಂಥಗಳಲ್ಲಿ ಬರೆದಿರುವ ಶ್ಲೋಕಗಳನ್ನು ಪಾರಾಯಣಕ್ಕಾಗಿ ಯಾರಾದರೂ ಸೇರಿಸಿಕೊಂಡಿದ್ದರೆ ಅಷ್ಟುಮಾತ್ರದಿಂದ ಅವುಗಳ ಆಧಾರದ ಮೇಲೆ ಗೀತಾತಾತ್ಪರ್ಯವನ್ನೂ ನಿರ್ಣಯವನ್ನೂ ಮಾಡುವದಕ್ಕೆ ಆಗುವದೆ ? ಆಗಲಾರದು.
ಆದ್ದರಿಂದ ಧ್ಯಾನಕ್ರಮಕ್ಕಾಗಿ ಏರ್ಪಟ್ಟಿರುವ ಈ ಒಂಭತ್ತು ಶ್ಲೋಕಗಳ ಆಧಾರದಿಂದ ಗೀತೆಯ ವಿಷಯದಲ್ಲಿ ಯಾವ ಅಭಿಪ್ರಾಯವನ್ನೂ ಗೊತ್ತುಪಡಿಸಲಾಗುವದಿಲ್ಲ. ಇಲ್ಲಿ ವಾಚಕರಲ್ಲಿ ವಿಜ್ಞಾಪಿಸಿಕೊಳ್ಳುವದೇನೆಂದರೆ, ಈ ಧ್ಯಾನಶ್ಲೋಕಗಳ ಸಂಗ್ರಹವು ಇತ್ತೀಚೆಗೆ ಯಾರೋ ಕೂಡಿಹಾಕಿದ್ದೆಂದು ಈ ವಿಚಾರದಿಂದ ಸಿದ್ಧವಾದ ಮಾತ್ರದಿಂದ ಇದರಲ್ಲಿರುವ ಪ್ರಮೇಯಗಳ ಅಂಶಗಳು ಅಶುದ್ಧವೆಂತಲಾಗಲಿ, ಇನ್ನು ಮೇಲೆ ನಾವು ಇದನ್ನು ಪಾರಾಯಣಕ್ರಮದಲ್ಲಿ ಸೇರಿಸಿಕೊಳ್ಳುವದನ್ನು ಬಿಡಬೇಕೆಂದಾಗಲಿ ಸಿದ್ಧವಾಗುವದಿಲ್ಲ. ಇದರ ಆಧಾರದಿಂದಲೇ ಗೀತೆಯ ಉಪದೇಶದ ಜೀವಾಳವನ್ನು ನಿರ್ಣಯಿಸಕೂಡದೆಂದು ಮಾತ್ರ ಸಿದ್ಧವಾಗುತ್ತದೆ. ಈಚೀಚೆಗೆ ವಿಮರ್ಶಕರು ನಮ್ಮ ದೇಶದ ಆಸ್ತಿಕಪದ್ಧತಿಯವರ ಬಳಕೆಯಲ್ಲಿರುವ ಆಚರಣೆಗಳನ್ನೂ ನಂಬಿಕೆಗಳನ್ನೂ ತಮ್ಮ ವಿಚಾರಕ್ಕೆ ತೆಗೆದುಕೊಂಡು ತಮಗೆ ತೋರುವ ಗುಣದೋಷಗಳನ್ನು ಬಗೆಬಗೆಯಾಗಿ ಹೊರಕ್ಕೆ ತೆಗೆಯುತ್ತಿರುವರು. ದೋಷವನ್ನು ಕೈಬಿಟ್ಟು ಗುಣವನ್ನು ಅಂಗೀಕರಿಸುವದು ನಮ್ಮೆಲ್ಲರ ಕರ್ತವ್ಯವೇ ಸರಿ. ಆದರೆ ತಮ್ಮ ತಮ್ಮ ಮೂಗಿನ ನೇರಕ್ಕೆ ವಿಚಾರಮಾಡಿ ಇಷ್ಟೇ ಸರಿ ಎಂದು ಒಬ್ಬೊಬ್ಬ ವಿಮರ್ಶಕರು ಒಂದೊಂದು ಬಗೆಯಾಗಿ ನಿರ್ಣಯಿಸುವ ಮತಗಳಿಂದ ನಮ್ಮ ಆಚರಣೆಗಳನ್ನು ಮಾರ್ಪಡಿಸಿಕೊಳ್ಳುವದು ಮಾತ್ರ ಯೋಗ್ಯವಾಗಲಾರದು. 'ಜನವನ್ನು ಮೆಚ್ಚಿಸುವದಕ್ಕೆ ಜನಾರ್ದನನಿಂದಲೂ ಆಗದು' ಎಂಬ ಗಾದೆಯಂತೆ ನಮ್ಮ ಆಚರಣೆಗಳು ನಂಬಿಕೆಗಳು ಸರ್ವರಿಗೂ ಮೆಚ್ಚಾಗುವಂತೆ ಇಟ್ಟುಕೊಳ್ಳುವದೆಂಬುದು ಯಾರಿಂದಲೂ ಆಗುವ ಕೆಲಸವಲ್ಲ. ಶಿಷ್ಟರು ಒಪ್ಪುವ ಯುಕ್ತಿಗೂ ಅನುಭವಕ್ಕೂ ವಿರೋಧವಲ್ಲದ ನಡತೆಯನ್ನು ನಾವು ಅನುಸರಿಸಿದರಾಯಿತು. ಅದೇ ನಮಗೆ ಗತಿಯನ್ನು ಕಾಣಿಸುವದು. ಆದ್ದರಿಂದಲೇ ಶ್ರುತಿಃ ಸ್ಮೃತಿಃ ಸದಾಚಾರಃ ಸ್ವಸ್ಯ ಚ ಪ್ರಿಯಮಾತ್ಮನಃ ಎಂದು ದೊಡ್ಡವರ ವಚನವಿರುವದು. ಇದರ ತಾತ್ಪರ್ಯವೇನೆಂದರೆ ಯಾವದಾದರೊಂದು ಕಾರ್ಯವು ಧರ್ಮವೆನಿಸಿಕೊಳ್ಳಬೇಕಾದರೆ ಅದಕ್ಕೆ ನಾಲ್ಕು ಲಕ್ಷಣಗಳಿರಬೇಕು. ಮೊಟ್ಟಮೊದಲು ಅದು ನಮಗೆ ಮಾಡತಕ್ಕದ್ದೆನಿಸಿರಬೇಕು. ನಮಗೆ ಒಪ್ಪಿಲ್ಲದ ಕೆಲಸವನ್ನು ನಾವು ಮಾಡುವದಾದರೂ ಹೇಗೆ ? ಆಗಲಾರದು.
ಆದ್ದರಿಂದ ಗೀತಾಧ್ಯಾನಕ್ರಮವು ಯಾರಿಗಾದರೂ ಈಚಿನ ರಚನೆಯೆಂಬುದರ ಮೇಲೆ ರುಚಿಸದೆ ಹೋದರೆ ಹೋಗಲಿ. ಅದು ಶಿಷ್ಟರು ನಡೆಸಿಕೊಂಡು ಬಂದಿರುವ ಆಚರಣೆಯಾಗಿರುತ್ತದೆ, ಚೆನ್ನಾಗಿ ನೋಡಿದರೆ, ಅದರಲ್ಲಿರುವ ತತ್ತ್ವವು ಯಾವ ಅನುಭವಕ್ಕೂ ವಿರೋಧವೂ ಅಲ್ಲ. ಆದ್ದರಿಂದ ಶ್ರದ್ಧಾಳುಗಳಾದವರು ಈ ಕ್ರಮವನ್ನು ಅನುಸರಿಸುವದರಲ್ಲಿ ಯಾವ ದೋಷವೂ ಆಗುವ ಹಾಗಿಲ್ಲ. ನಮ್ಮ ದೇಶದ ಪೂರ್ವಾಚಾರಗಳನ್ನು ವಿಮರ್ಶಕರು ಚರ್ಚೆಗೆ ತಂದ ಮಾತ್ರದಿಂದ ನಾವು ಕೈ ಬಿಡಲೇಬೇಕೆಂಬಷ್ಟು ನಿಸ್ಸಾರವಾಗಿರುವದಿಲ್ಲ. ಈ ಅಂಶವನ್ನು ನಮ್ಮ ವಾಚಕರು ಮುಂದೆಯೂ ಆಯಾ ಸಂದರ್ಭದಲ್ಲಿ ನೆನಪಿಗೆ ತಂದುಕೊಳ್ಳಬೇಕೆಂದು ಬೇಡುತ್ತೇನೆ. ಇನ್ನು ಈ ಮಾತು ಸಾಕು, ಗೀತಾರ್ಥಸಾರವನ್ನು ನಿರ್ಣಯಿಸುವದಕ್ಕೆ ಈ ಧ್ಯಾನಶ್ಲೋಕಗಳ ಸಂಗ್ರಹವಲ್ಲದೆ ಮತ್ತೇನೇನು ಉಪಾಯಗಳನ್ನು ವಿಚಾರಕರು ಉಪಯೋಗಿಸಿಕೊಂಡಿರುವರೆಂಬುದನ್ನು ಇನ್ನು ನೋಡೋಣ.
ಗೀತೆಯ ಉಪದೇಶಗಳನ್ನು ಪ್ರಸಿದ್ಧವಾದ ಉಪನಿಷತ್ತುಗಳ ಉಪದೇಶಗಳಿಗೆ ಹೋಲಿಸುವದು ಇಂಥ ಉಪಾಯಗಳಲ್ಲಿ ಒಂದು ಮುಖ್ಯವಾದದ್ದಾಗಿರುತ್ತದೆ. ಮೇಲೆ ಕೊಟ್ಟಿರುವ ಧ್ಯಾನಶ್ಲೋಕಗಳಲ್ಲಿ ಸೇರಿರುವ,
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ |
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ||
ಎಂಬ ಶ್ಲೋಕವನ್ನು ಈ ಪಕ್ಷದವರು ಆಗಾಗ್ಗೆ ಉದಾಹರಿಸಿರುವರು. ಶ್ರೀಕೃಷ್ಣನು ಅರ್ಜುನನನ್ನು ನಿಮಿತ್ತಮಾಡಿಕೊಂಡು ಉಪನಿಷತ್ತುಗಳೆಲ್ಲದರ ಸಾರವನ್ನು ಹಿಂಡಿ ತತ್ತ್ವಜಿಜ್ಞಾಸುಗಳಿಗೆಲ್ಲ ಕುಡಿಯುವದಕ್ಕೆ ಎದುರಿಗೆ ಇಟ್ಟಿರುತ್ತಾನೆ ಎಂಬುದೇ ಈ ಶ್ಲೋಕದ ತಾತ್ಪರ್ಯವು. ಈ ಕಾರಣದಿಂದ ಉಪನಿಷತ್ತುಗಳ ಸಿದ್ಧಾಂತವೇ ಭಗವದ್ಗೀತೆಯ ಸಿದ್ಧಾಂತವೆಂದು ಸಿದ್ಧವಾಗುತ್ತದೆ. ಆದರೆ ಉಪನಿಷತ್ತುಗಳೆಲ್ಲವೂ ಎಂದದ್ದರಿಂದ ಎಷ್ಟು ಉಪನಿಷತ್ತುಗಳನ್ನು ತೆಗೆದುಕೊಳ್ಳಬೇಕು ? ಉಪನಿಷತ್ತುಗಳ ಸಂಖ್ಯೆಯನ್ನು ನೂರೆಂಟೆಂಬ ಪಕ್ಷವನ್ನು ಹಿಡಿಯಬೇಕೋ? ಹತ್ತು-ಹನ್ನೆರಡೆಂಬ ಪಕ್ಷವನ್ನು ಹಿಡಿಯಬೇಕೊ? ನೂರೆಂಟೆಂದು ಅಂಗೀಕರಿಸಿದರೆ ಮಿಕ್ಕವುಗಳನ್ನು ತೆಗೆದುಕೊಳ್ಳಬಾರದೇಕೆ? ಅವುಗಳನ್ನೂ ತೆಗೆದುಕೊಂಡರೆ 'ಅಲ್ಲೋಪನಿಷತ್ತು' 'ಚಾಕ್ಷುಷೋಪನಿಷತ್ತು' ಮುಂತಾಗಿ ಎಷ್ಟೋ ಉಪನಿಷತ್ತುಗಳಾಗುವವು. ಆಗ ಉಪನಿಷತ್ತುಗಳ ಸಿದ್ಧಾಂತವೇ ಕೈಗೆ ಸಿಕ್ಕುವ ಸಂಭವವಿರುವದಿಲ್ಲ. ಇನ್ನು ಶಂಕರಾಚಾರ್ಯರವರು ಹಿಡಿದಿರುವ ಹತ್ತು-ಹನ್ನೆರಡು ಉಪನಿಷತ್ತುಗಳನ್ನೇ ನಾವೂ ತೆಗೆದುಕೊಂಡರೆ ಉಪನಿಷತ್ತುಗಳ ಮೇಲೆ ಆಗಿರುವ ಭಾಷ್ಯಗಳು ಭಿನ್ನಭಿನ್ನವಾಗಿ ಇರುವದರಿಂದ ಅವುಗಳ ಸಿದ್ಧಾಂತವೇನೆಂಬುದು ಗೊತ್ತಾಗುವ ಹಾಗಿರುವದಿಲ್ಲ. ಭಾಷ್ಯಗಳನ್ನು ಕೈಬಿಟ್ಟು ಸ್ವತಂತ್ರವಾಗಿ ವಿಚಾರ ಮಾಡಿರುವ ವಿಮರ್ಶಕರ ಬೆನ್ನು ಹತ್ತೋಣವೆಂದರೆ ಅವರ ಅಭಿಪ್ರಾಯಗಳು ನಾನಾ ಮುಖವಾಗಿರುವದರಿಂದ ಯಾವ ದಾರಿಯನ್ನು ಹಿಡಿಯಬೇಕೋ ಅದೇ ಗೊತ್ತಾಗುವದಿಲ್ಲ. ನಾವೇ ಸ್ವತಂತ್ರವಾಗಿ ಉಪನಿಷತ್ತುಗಳ ಅರ್ಥವನ್ನು ನಿರ್ಣಯಿಸೋಣವೆಂದರೆ ಕಣ್ಣು ಕಟ್ಟಿಸಿ ಕಾಡಿಗೆ ಬಿಟ್ಟಂತೆ ಆಗುವದು. ಈ ಪೇಚಾಟದಲ್ಲಿ ಏನು ಮಾಡಬೇಕು ? ಹೀಗೆ ಭಗವದ್ಗೀತೆಯನ್ನೂ ಉಪನಿಷತ್ತುಗಳನ್ನೂ ಹೋಲಿಸುವ ದಾರಿಯಲ್ಲಿ ಕೆಲವು ಕಲ್ಲುಮುಳ್ಳುಗಳು ಇದ್ದೇ ಇರುವವು.
ಇದಕ್ಕೆ ಪರಿಹಾರವನ್ನು ಹುಡುಕುವ ಗೋಜಿಗೆ ಹೋಗದೆ ಕೆಲವರು ಮತ್ತೊಂದು ದಾರಿಯನ್ನು ಅನುಸರಿಸುತ್ತಾರೆ. ಅವರ ಅಭಿಪ್ರಾಯವೇನೆಂದರೆ, ಭಗವದ್ಗೀತೆಯ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ಬರುವ ಗ್ರಂಥಸಮಾಪ್ತಿವಾಕ್ಯವನ್ನು ಪರೀಕ್ಷಿಸುವದು. ಸಂಸ್ಕೃತಕೃತಿಗಳಲ್ಲೆಲ್ಲ ಗ್ರಂಥಭಾಗವನ್ನೂ ಗ್ರಂಥವನ್ನೂ ಸಮಾಪ್ತಿಮಾಡುವಾಗ 'ಇತಿ ಶ್ರೀ' ಎಂದು ಪ್ರಾರಂಭಿಸಿ ಗ್ರಂಥದ ಹೆಸರು, ಸ್ವರೂಪ, ಸಮಾಪ್ತವಾದ ಭಾಗ, ಅದರ ಸ್ವರೂಪ— ಇವುಗಳನ್ನು ವಿವರಿಸುವ ಒಕ್ಕಣೆಯನ್ನು ಸೇರಿಸಿ ಒಂದು ವಾಕ್ಯವನ್ನು ಬರೆಯುವದುಂಟು. ಇದನ್ನು 'ಪುಷ್ಪಿಕೆ'' ಎಂದು ಕರೆಯುವದುಂಟು. ಗೀತೆಯಲ್ಲಿರುವ ಈ ಪುಷ್ಪಿಕೆಯು ಮಹಾಭಾರತದಲ್ಲಿರುವದಿಲ್ಲವಾದ್ದರಿಂದ ಅದು ವ್ಯಾಸರು ಮಾಡಿದ್ದಲ್ಲವೆಂಬುದೇನೋ ಸ್ಪಷ್ಟವಾಗಿರುತ್ತದೆ. ಆದರೆ ಗೀತೆಯ ಎಲ್ಲಾ ಗ್ರಂಥಗಳಲ್ಲಿಯೂ ಇದು ದೊರೆಯುವದರಿಂದ ಮಹಾಭಾರತದೊಳಗಿಂದ ಗೀತೆಯನ್ನು ನಿತ್ಯ ಪಾರಾಯಣಕ್ಕೆ ಬೇರೆಯಾಗಿ ತೆಗೆದಂದಿನಿಂದ, ಅಂದರೆ ಗೀತೆಯ ಮೇಲೆ ಯಾವ ಟೀಕೆಯೂ ಮೊಳೆದೋರುವ ಮೊದಲೆ ಈ ವಾಕ್ಯವು ಪ್ರಚಾರದಲ್ಲಿ ಬಂದಿರಬೇಕೆಂದು ಬಾಲಗಂಗಾಧರತಿಲಕರವರೇ ಮುಂತಾದವರ ಅಭಿಪ್ರಾಯವಾಗಿರುತ್ತದೆ (ಗೀ. ರ. 3).
ಈ ಸಮಾಪ್ತಿದರ್ಶಕ ವಾಕ್ಯವು ಹೇಗಿರುವದೆಂದರೆ — ''ಇತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಸಾಂಖ್ಯಯೋಗೋ ನಾಮ ದ್ವಿತೀಯೋsಧ್ಯಾಯಃ” ಈ ವಾಕ್ಯವನ್ನು ವಿಚಾರಮಾಡಿ ಭಗವದ್ಗೀತೆಯ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳನ್ನು ತೆಗೆದಿರುತ್ತಾರೆ. ''ಇತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು” ಎಂದರೆ ''ಭಗವಂತನಿಂದ ಗೀತವಾದ ಉಪನಿಷತ್ತುಗಳಲ್ಲಿ'' ಎಂದರ್ಥವಾಗುತ್ತದೆ. ಗೀತ ಎಂಬ ಶಬ್ದವು 'ಗಾನಮಾಡಲ್ಪಟ್ಟ ಎಂದು ಕರ್ಮಾರ್ಥವಾದರೆ ಮಾತ್ರ ''ಗೀತಾಸು'' ಎಂದು ಸ್ತ್ರೀಲಿಂಗದಲ್ಲಿ ಉಪಯೋಗಿಸಿದ್ದು ಸರಿಯಾಗುತ್ತದೆ. ಏಕೆಂದರೆ ಗೀತಾ ಎಂಬುದು ಶ್ಲೋಕಗಳ ಹೆಸರೆಂದು ಆಚಾರ್ಯರು ತಮ್ಮ ಭಾಷ್ಯದ ಉಪೋದ್ಘಾತದಲ್ಲಿ ಸ್ಪಷ್ಟವಾಗಿ ಹೇಳಿರುತ್ತಾರೆ. ಗೀತ ಅಂದರೆ 'ಗಾನ, ಹಾಡು' ಎಂದಿಷ್ಟೇ ಅರ್ಥವಾದರೆ “ಗೀತಮ್'' ಎಂದು ನಪುಂಸಕದಲ್ಲಿರಬೇಕಾಗುತ್ತಿತ್ತು. ಇದು ಸಂಸ್ಕೃತ ವ್ಯಾಕರಣದ ಮರ್ಯಾದೆಯು. ಹೀಗಿರುವದರಿಂದ 'ಭಗವದ್ಗೀತಾಸೂಪನಿಷತ್ಸು’ ಎಂಬುದರ ತಾತ್ಪರ್ಯವೇನಾಗುವದೆಂದರೆ ಭಗವಂತನಾದ ಕೃಷ್ಣನು ಗಾನಮಾಡಿದ ಉಪನಿಷತ್ತುಗಳೇ ಭಗವದ್ಗೀತೆಯು. ಈ ಅಭಿಪ್ರಾಯವನ್ನು ಇಟ್ಟುಕೊಂಡು ಕೆಲವರು 'ಭಗವದ್ಗೀತೆಯಲ್ಲಿರುವ ಶ್ಲೋಕಗಳೆಲ್ಲ ಶ್ರೀಕೃಷ್ಣನ ಬಾಯಿಂದ ಚಕಾರ ತುಕಾರವೂ ಸಹ ಹೆಚ್ಚು ಕಡಿಮೆ ಇಲ್ಲದ ಹಾಗೇ ಬಂದಿರುತ್ತವೆ. ಆದ್ದರಿಂದ ಬ್ರಹ್ಮನ ಮುಖದಿಂದ ಬಂದ ಉಪನಿಷತ್ತುಗಳ ಹಾಗೆ ಅಥವಾ ಅದಕ್ಕಿಂತಲೂ ಹೆಚ್ಚಾಗಿಯೇ ಇವುಗಳು ಪ್ರಮಾಣಭೂತವಾದವುಗಳಾದ್ದರಿಂದ ಇವೂ ಉಪನಿಷತ್ತುಗಳೆಂದೇ ಎಣಿಸಬೇಕು' ಎನ್ನುತ್ತಿರುವರು.
[ ಗೀತಾರಹಸ್ಯ (ಪುಟ 3)ದಲ್ಲಿಯೂ, ಕುರ್ತಕೋಟಿಯ ಮಹಾಭಾಗವತರವರು ಮಾಡಿರುವ The Heart of the Bhagavadgita (ಭಗವದ್ಗೀತಾ ಹೃದಯ)ವೆಂಬ ಗ್ರಂಥ(ಪುಟ 10)ದಲ್ಲಿಯೂ ಈ ಮತವಿದೆ. ತಿಲಕರವರು “ಶ್ರೀಮದ್ಭಗವದ್ಗೀತಾಸೂಪನಿಷತ್ಸು” ಎಂದು ಬಹುವಚನವು ಆದರಾರ್ಥದಲ್ಲಿ ಬಂದಿರುತ್ತದೆಯೆಂದು ಹೇಳುತ್ತಾರೆ. ಆದರೆ ಗ್ರಂಥಕ್ಕೆ ಅದರಕ್ಕಾಗಿ ಬಹುವಚನವನ್ನುಪಯೋಗಿಸುವ ರೂಢಿಯು ಸಂಸ್ಕೃತದಲ್ಲಿಲ್ಲ. ]
ಮತ್ತೆ ಕೆಲವರು “ಭಗವದ್ಗೀತೋಪನಿಷತ್ತು ಎಂಬುದೇ ಈ ಗ್ರಂಥದ ಪೂರ್ಣವಾದ ಹೆಸರು. ಇದಕ್ಕೆ ಭಗವದ್ಗೀತಾ, ಗೀತಾ ಎಂಬಿವು ಸಂಕ್ಷಿಪ್ತ ಸ್ವರೂಪಗಳು'' ಎಂದು ವಾದಿಸುತ್ತಿರುವರು. ಇದಿಷ್ಟು ಸಮಾಪ್ತಿ ವಾಕ್ಯದ ಮೊದಲನೆಯ ಎರಡು ಪದಗಳ ವಿಚಾರವಾಯಿತು.
ಇನ್ನು ಮುಂದಿನ ಎರಡು ಪದಗಳನ್ನು ತೆಗೆದುಕೊಂಡರೂ ಹೀಗೆ ಭಿನ್ನಾಭಿಪ್ರಾಯಗಳಿರುವವು. “ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ'' ಎಂಬ ಮಾತುಗಳಿಗೆ ಎರಡು ಬಗೆಯಾಗಿ ಅರ್ಥಮಾಡಬಹುದು. ಈ ಎರಡು ಮಾತುಗಳೂ ಭಗವದ್ಗೀತೆಯನ್ನೇ ವರ್ಣಿಸುವದಕ್ಕೆ ಬಂದಿವೆ ಎಂದು ಇಟ್ಟುಕೊಂಡರೆ ಬ್ರಹ್ಮವಿದ್ಯೆಯೂ ಯೋಗಶಾಸ್ತ್ರವೂ (ಗೀತೆಯು ಗ್ರಂಥವಾಗಿದೆ. ಇದು ಬ್ರಹ್ಮವಿದ್ಯಾಶಾಸ್ತ್ರವಾದೀತೇ ಹೊರತು ಬ್ರಹ್ಮವಿದ್ಯೆಯಾಗಲಾರದು. ಆದ್ದರಿಂದ ಈ ವಾಕ್ಯವು ಸರಿಯಾಗಿ ಅನ್ವಯವಾಗುವಂತೆ ತೋರುವದಿಲ್ಲ.) ಆದ ಭಗವದ್ಗೀತೆಯಲ್ಲಿ ಎಂದರ್ಥವಾಗುವದು. ಹೀಗೆ ಅರ್ಥಮಾಡುವಾಗ ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಎಂಬ ಸಪ್ತಮೀ ವಿಭಕ್ತಿಗಳನ್ನು ಸಾಮಾನಾಧಿಕರಣ್ಯವಾಗಿ ಎಂದರೆ ಒಂದೇ ವಸ್ತುವನ್ನು ವರ್ಣಿಸುವದಕ್ಕೆ ಉಪಯೋಗಿಸಿದಂತೆ ಒಪ್ಪಿಕೊಳ್ಳಬೇಕಾಗುವದು. ಇದನ್ನು ಒಪ್ಪಿಕೊಂಡು ಭಗವದ್ಗೀತೆಯಲ್ಲಿ ಬ್ರಹ್ಮವಿದ್ಯೆಯೂ ಯೋಗವೂ ಮಿಲಿತವಾಗಿರುವವೆಂದು ಕೆಲವರು ಅಭಿಪ್ರಾಯಪಟ್ಟಿರುವರು. ಆದರೆ ಮತ್ತೆ ಕೆಲವರು ಈ ಸಪ್ತಮ್ಯಂತವಾದ ಪದಗಳನ್ನು ವೈಯಧಿಕರಣವಾಗಿ ತೆಗೆದುಕೊಂಡಿರುತ್ತಾರೆ. 'ಬ್ರಹ್ಮವಿದ್ಯಾಯಾಮ್' 'ಯೋಗಶಾಸ್ತ್ರೇ' ಇವೆರಡೂ ಒಂದೇ ವಸ್ತುವನ್ನು ಹೇಳುವದಿಲ್ಲ, ಬೇರೆಬೇರೆಯಾಗಿರುತ್ತವೆ ಎಂಬುದೇ ಇವರ ಮತ. ಈ ಮತದಲ್ಲಿ 'ಬ್ರಹ್ಮವಿದ್ಯೆಯೊಳಗಿನ ಯೋಗಶಾಸ್ತ್ರವು' ಎಂಬುದೇ ಈ ಎರಡು ಪದಗಳ ಅರ್ಥವು. ಬ್ರಹ್ಮವಿದ್ಯೆ ಬ್ರಹ್ಮಜ್ಞಾನವು; ಅದು ಉಂಟಾದ ಬಳಿಕ ಜ್ಞಾನಿಯಾದವನು ಅನುಸರಿಸಬಹುದಾದ ಯೋಗವನ್ನು ಎಂದರೆ ಕರ್ಮದ ಬಗೆಯನ್ನು ತಿಳಿಸುವದರಿಂದ ಇದು 'ಬ್ರಹ್ಮವಿದ್ಯಾಂತರ್ಗತ ಯೋಗಶಾಸ್ತ್ರವು' ಎಂಬುದು ಈ ವಾದಿಗಳ ಅಭಿಪ್ರಾಯವಾಗಿರುತ್ತದೆ. (ಬ್ರಹ್ಮವಿದ್ಯೆಯಲ್ಲಿ ಯೋಗವು ಅಡಕವಾಗಿರಬಹುದಾದರೆ ಯೋಗಶಾಸ್ತ್ರವು ಅಡಕವಾಗುವ ಹಾಗಿಲ್ಲ. ಈ ಕಾರಣದಿಂದ ಈ ಅರ್ಥವೂ ಅಷ್ಟು ಸಮಂಜಸವಾಗಿ ತೋರುವುದಿಲ್ಲ.)
ಬಾಲಗಂಗಾಧರತಿಲಕರವರು ಬರೆದಿರುವ 'ಗೀತಾರಹಸ್ಯ ಅಥವಾ ಕರ್ಮಯೋಗಶಾಸ್ತ್ರ' ಎಂಬ ಗ್ರಂಥಕ್ಕೆ ಈ ಅರ್ಥವು ಬಹಳ ಸಾಧಕವಾಗಿರುತ್ತದೆ. ಅವರು ಈ ಅರ್ಥವನ್ನು ಅನುಸರಿಸಿ ಗೀತೆಯು ಕರ್ಮಯೋಗವನ್ನು ತಿಳಿಸುವ ಶಾಸ್ತ್ರವೆಂದು ತೋರಿಸುವದಕ್ಕೆ ತಮ್ಮ 858 ಪುಟದ ದೊಡ್ಡ ಗ್ರಂಥವನ್ನು ಬರೆದಿರುತ್ತಾರೆ. ಇನ್ನು ಈ ಎರಡೂ ಪದಗಳನ್ನು ಇಷ್ಟಕ್ಕೇ ನಿಲ್ಲಿಸಿ ಮುಂದಕ್ಕೆ ಕಣ್ಣು ಹಾಕಿದರೆ 'ಸಾಂಖ್ಯಯೋಗೋ ನಾಮ ದ್ವಿತೀಯೋsಧ್ಯಾಯಃ' ಎಂಬ ಪದಗಳು ಗೋಚರವಾಗುವವು. ಬೇರೆಬೇರೆ ಅಧ್ಯಾಯಗಳಲ್ಲಿ ಬೇರೆಬೇರೆ 'ಯೋಗ'ವೆಂಬ ಹೆಸರಿರುವದು. ಮೊದಲನೆಯ ಅಧ್ಯಾಯವು 'ಅರ್ಜುನವಿಷಾದಯೋಗ'; ಎರಡನೆಯದು 'ಸಾಂಖ್ಯ ಯೋಗ'; ಮೂರನೆಯದು 'ಕರ್ಮಯೋಗ'; ನಾಲ್ಕನೆಯದು 'ಜ್ಞಾನಕರ್ಮ ಸಂನ್ಯಾಸಯೋಗ' ಹೀಗೆಲ್ಲ ಹೆಸರಿವೆ. ಇದನ್ನು ನೋಡಿ ಕೆಲವರು ಒಂದೊಂದು ಅಧ್ಯಾಯದಲ್ಲಿ ಒಂದೊಂದು ಯೋಗವಿರುವದರಿಂದ ಗೀತೆಯು 'ಯೋಗಗಳ ಶಾಸ್ತ್ರವು' ಎಂದರೆ ಅನೇಕ ಮೋಕ್ಷೋಪಾಯಗಳನ್ನು ಹೇಳುವದು ಎನ್ನುತ್ತಿದ್ದಾರೆ. ಇವರು ಗೀತೆಯು ಕರ್ಮಯೋಗವೊಂದನ್ನೇ ಹೇಳುವದು ಎಂಬ ವಾದವನ್ನು ಒಪ್ಪುವದಿಲ್ಲ.
ಮೇಲಿನ ವಿವರಣೆಯಿಂದ ಗೀತಾಧ್ಯಾಯಗಳ ಕೊನೆಗೆ ಬಂದಿರುವ ಪುಷ್ಪಿಕೆಯಲ್ಲಿ ಎರಡೆರಡಾಗಿ ಮಾತುಗಳನ್ನು ತೆಗೆದುಕೊಂಡು ಪರಿಶೀಲಿಸಲಾಗಿ ಒಂದೊಂದು ಜೋಡಿಯಲ್ಲಿಯೂ ಬೇರೆಬೇರೆಯ ಅಭಿಪ್ರಾಯಪಡುವದಕ್ಕೆ ಅವಕಾಶವಿರುವದೆಂದೂ ಅದರಂತೆ ಈಗಿನ ವಿಮರ್ಶಕರು ಭಿನ್ನಾಭಿಪ್ರಾಯಗಳನ್ನು ಕೊಡುತ್ತಲೂ ಇರುವರೆಂದೂ ಸ್ಪಷ್ಟವಾಗುತ್ತದೆಯಷ್ಟೆ. ಈ ಸಮಾಪ್ತಿವಾಕ್ಯವೆಂಬುದು ಎಲ್ಲಾ ಭಾಷ್ಯಕಾರರಿಗಿಂತ ಹಿಂದಿನ ಕಾಲದಲ್ಲಿಯೇ ಯಾರೋ ವಿಚಾರಮಾಡಿ ಸೇರಿಸಿರಬೇಕೆಂದು ಇಟ್ಟುಕೊಂಡೇ ಈ ಭಿನ್ನಾಭಿಪ್ರಾಯಗಳು ಹೊರಟಿವೆಯೆಂಬುದನ್ನು ಇಲ್ಲಿ ಮರೆಯಲಾಗದು. ಈ ವಾಕ್ಯವು ಮೂಲಭಾರತದಲ್ಲಿರುವದಿಲ್ಲವೆಂದು ಮೊದಲೇ ಹೇಳಿರುತ್ತೇನಷ್ಟೆ. ಯಾವ ಭಾಷ್ಯಕಾರರೂ ಈ ವಾಕ್ಯಕ್ಕೆ ವಿವರಣೆಯನ್ನು ಮಾಡದೆ ಇರುವದರಿಂದ ಭಾಷ್ಯಕಾರರಿಗಿಂತಲೂ ಮೊದಲು ಇದು ಇತ್ತೋ ಇಲ್ಲವೋ ಎಂಬ ಸಂದೇಹಕ್ಕೆ ಅವಕಾಶವನ್ನು ಕೊಡುವಂತಿದೆ. ಭಾಷ್ಯಕಾರರು ಮೂಲಭಾರತಕ್ಕೆ ಸೇರಿಲ್ಲವೆಂಬುದರ ಮೇಲೆ ಇದನ್ನು ಕೈಬಿಟ್ಟರೆಂದು ಇಟ್ಟುಕೊಳ್ಳಬಹುದು ಅಥವಾ ಇದು ಭಾಷ್ಯಕಾಲದಿಂದೀಚೆಗೆ ಯಾರೋ ಸೇರಿಸಿದರೆಂದು ಈ ವಾಕ್ಯಗಳಿಂದ ತಮ್ಮತಮ್ಮ ಸಿದ್ಧಾಂತಕ್ಕೆ ಯಾವ ಹಾನಿಯೂ ಇಲ್ಲವೆಂಬುದರ ಮೇಲೆ ಆಯಾ ಮತದವರು ಈ ಸಂಪ್ರದಾಯವನ್ನು ಸುಮ್ಮನೆ ಅಂಗೀಕರಿಸಿದರೆಂದೂ ಹೇಳಬಹುದು. ಇದೂ ಅಲ್ಲದೆ ಆಯಾ ಅಧ್ಯಾಯದಲ್ಲಿ ಹೇಳಿದೆಯೆಂಬ ಯೋಗದ ಹೆಸರನ್ನು ಎಲ್ಲಾ ಪುಸ್ತಕಗಳಲ್ಲಿಯೂ ಒಂದೇ ಬಗೆಯಾಗಿ ಕೊಟ್ಟಿರುವದಿಲ್ಲ. ಒಂದು ಅಧ್ಯಾಯದ ವಿಷಯಕ್ಕೆ ಎರಡು ಮೂರು ಹೆಸರುಗಳು ಬಂದುಬಿಟ್ಟಿವೆ. ಕೆಳಗಿನ ಪಟ್ಟಿಯಿಂದ ಆ ಹೆಸರುಗಳನ್ನು ತೆಗೆದುಕೊಳ್ಳಬಹುದಾಗಿದೆ. ಈ ಪಟ್ಟಿಯನ್ನು ನೋಡಿದರೆ ಆಯಾ ಲೇಖಕರು ತಮತಮಗೆ ತೋರಿದಂತೆ ಅಧ್ಯಾಯಕ್ಕೆ ಹೆಸರುಗಳನ್ನು ಕೊಡುತ್ತಾ ಬಂದಿರುತ್ತಾರೆಂದು ಹೇಳಬೇಕಾಗಿದೆ. ಅಂತೂ ಅಧ್ಯಾಯಗಳ ಸಮಾಪ್ತಿವಾಕ್ಯವನ್ನು ವಿವೇಚನೆ ಮಾಡುವದರಿಂದ ಭಗವದ್ಗೀತೆಯ ತಾತ್ಪರ್ಯವನ್ನು ನಿರ್ಣಯಿಸುವದಕ್ಕೆ ಹೋಗುವದು ನೂರಾರು ತೇಪೆಯ ಹರಕುದಟ್ಟವನ್ನು ಬಿಚ್ಚಿದಂತೆ ಆಗುವದೇ ಹೊರತು ಇದರಿಂದಲೂ ನಮಗೆ ನಿಲುಗಡೆಯೇನೂ ದೊರೆಯುವಂತೆ ಕಾಣುವದಿಲ್ಲವೆಂಬುದು ಮೇಲೆಯೇ ಕಾಣುತ್ತಿರುವದು.
ಭಾರತದ ಬೇರೆಬೇರೆ ಭಾಗಗಳನ್ನು ಗೀತೆಗೆ ಹೋಲಿಸುವದು ಗೀತಾರ್ಥ ನಿರ್ಣಯಕ್ಕೆ ಬಹುಮುಖ್ಯವಾದ ಉಪಾಯವೆಂದು ಹಲವರ ಭಾವನೆಯಿರುವದು. ಈ ಭಾವನೆಗೆ ಪೋಷಕಯುಕ್ತಿಯೇನೆಂದರೆ ಗೀತೆಯೆಂಬುದು ಮಹಾಭಾರತದ ಒಂದು ಭಾಗವಾಗಿರುತ್ತದೆ. ಮಹಾಭಾರತಕರ್ತರು ಯಾವ ತತ್ತ್ವವನ್ನು ಉಪದೇಶಿಸಬೇಕೆಂದು ಇಟ್ಟುಕೊಂಡಿರುತ್ತಾರೋ ಅದನ್ನು ಗೀತೆಯಲ್ಲಿ ಪ್ರಧಾನವಾಗಿ ಹೇಳಿದ್ದರೂ ಮಿಕ್ಕಕಡೆಗಳಲ್ಲಿಯೂ ಮತ್ತೆಮತ್ತೆ ಹೇಳಿಯೇ ಇರಬೇಕೆಂದು ನಿರೀಕ್ಷಿಸಬೇಕಾಗಿದೆ. ಈ ದೃಷ್ಟಿಯಿಂದ ಮಹಾಭಾರತದ ಉಳಿದ ಭಾಗಗಳನ್ನೂ ಗೀತೆಯನ್ನೂ ಹೋಲಿಸುವದು ಉತ್ತಮಸಾಧನವೇ ಸರಿ. ಆದರೆ ನಿಜವನ್ನು ನಿರ್ಧರಿಸುವಾಗ ಎಷ್ಟು ಸಂಶಯಪೂರ್ವಕವಾಗಿ ವಿಚಾರಮಾಡಿದರೆ ಅಷ್ಟು ಒಳ್ಳೆಯದೆಂಬ ಅಭಿಪ್ರಾಯದಿಂದ ಕೆಲವರು ಮಹಾಭಾರತಕ್ಕೆ ಗೀತೆಯು ಸೇರಿದ್ದೋ ಅಲ್ಲವೊ? ಯಾರಿಗೆ ಗೊತ್ತು? ಎಂಬ ಸಂದೇಹವನ್ನು ತೆಗೆದಿರುವರು. ಈ ಆಕ್ಷೇಪಕರು ಪರೀಕ್ಷೆಗೆ ತರುವ ವಿಚಾರಗಳೇನೆಂದರೆ,
1) ಗೀತೆಯು ತತ್ತ್ವಪರವಾದ ಗ್ರಂಥವಾಗಿದ್ದು ಇಂಥ ದೊಡ್ಡ ಶಾಸ್ತ್ರವನ್ನು ಶ್ರೀಕೃಷ್ಣನು ಯುದ್ಧರಂಗದಲ್ಲಿ ಹೇಳುವದಕ್ಕೆ ಕಾರಣವಾಗಲಿ ಅವಶ್ಯಕತೆಯಾಗಲಿ ಇರಲಿಲ್ಲ.
2) ಆದಿಪರ್ವದ ಮೊದಲನೆಯ ಅಧ್ಯಾಯದಲ್ಲಿಯೂ ಎರಡನೆಯ ಅಧ್ಯಾಯದಲ್ಲಿಯೂ ಭಗವದ್ಗೀತೆಯ ಸಂಬಂಧವಾದ ವಾಕ್ಯಗಳು ಬಂದಿವೆಯಾದರೂ ಅವು ಹಿಂದು ಮುಂದಿನ ವಾಕ್ಯಗಳಿಗೆ ಅಷ್ಟು ಹೊಂದುಗಡೆಯಾಗಿ ತೋರುವದಿಲ್ಲವಾದ್ದರಿಂದ ಅವು ಪ್ರಕ್ಷಿಪ್ತವಾಗಿರಬೇಕು.
3) ಭಾರತದ ಕೆಲವು ಕೈಪ್ರತಿಗಳಲ್ಲಿ ಅವು ಇರುವದಿಲ್ಲ.
4) ಗೀತೆಯ ಅಧ್ಯಾಯಸಮಾಪ್ತಿವಾಕ್ಯಕ್ಕೂ ಭಾರತವಾಕ್ಯಕ್ಕೂ ಶೈಲಿಯಲ್ಲಿ ಹೆಚ್ಚುಕಡಿಮೆ ಇದೆ.
5) ಗೀತೆಯ ಪ್ರತಿಗಳಲ್ಲಿಯೇ ಬೇರೆಬೇರೆ ತರದ ಸಮಾಪ್ತಿವಾಕ್ಯಗಳಿರುತ್ತವೆ.
ಈ ಐದು ಆಕ್ಷೇಪಗಳಲ್ಲಿ ಮೊದಲನೆಯ ಆಕ್ಷೇಪವು ಸಮರ್ಪಕವಲ್ಲ. ಭಾರತದ ಆಖ್ಯಾನಗಳೂ ವಿಚಾರಗಳೂ ಹಿಂದುಮುಂದಿನ ಸಂದರ್ಭಕ್ಕೆ ಹೊಂದುತ್ತವೆಯೆ ಇಲ್ಲವೆ ಎಂಬುದನ್ನು ಇಪ್ಪತ್ತನೆಯ ಶತಮಾನದಲ್ಲಿರುವ ನಾವು ನಮ್ಮ ದೃಷ್ಟಿಯಿಂದ ನೋಡಿ ನಿರ್ಣಯಿಸುವದೇ ಮೊದಲು ಸರಿಯಲ್ಲ. ಏಕೆಂದರೆ ಒಂದೇ ಶತಮಾನದಲ್ಲಿರುವ ನಮ್ಮ ದೇಶದ ಜನರಲ್ಲಿ ಹಿಂದಿನ ತಲೆಯವರ ವಿಚಾರಸರಣಿಗೂ ಈಗಿನ ತಲೆಯವರ ವಿಚಾರಸರಣಿಗೂ ಎಷ್ಟೋ ಭೇದಗಳುಂಟಾಗಿರುವದಲ್ಲದೆ ಹಿಂದಿನ ಕ್ರಮವನ್ನು ಈಗಿನವರೂ ಈಗಿನ ಕ್ರಮವನ್ನು ಹಿಂದಿನ ಸಂಸ್ಕಾರವುಳ್ಳ ವೃದ್ಧರೂ ಒಪ್ಪದೆ ಇರುವದು ನಮ್ಮೆಲ್ಲರ ಅನುಭವದಲ್ಲಿಯೇ ಇರುತ್ತದೆ. ಹೀಗಿರುವಲ್ಲಿ ಮಹಾಭಾರತಗ್ರಂಥದ ಸಂದರ್ಭಕ್ರಮವನ್ನು ಈಗಿನ ಪದ್ಧತಿಯಂತೆ ವಿವೇಚನೆ ಮಾಡಿ ವಿಮರ್ಶೆಮಾಡುವದು ಹೇಗೆ ಯುಕ್ತವಾದೀತು? ಭಾರತದಲ್ಲಿ ಅಲ್ಲಲ್ಲಿ ಕಾಣುವ ಎಷ್ಟೋ ಆಖ್ಯಾನಗಳೂ ಚರ್ಚೆಗಳೂ ಅಪ್ರಕೃತವಾಗಿ ಬಂದಿವೆಯೆಂದು ಈಗಿನವರು ಕೆಲವರು ಅಭಿಪ್ರಾಯಪಡುತ್ತಿರುವದಕ್ಕೆ ಈ ಉತ್ತರವು ಅನ್ವಯಿಸುತ್ತದೆ. ಎರಡನೆಯ ಆಕ್ಷೇಪವು ಇದೇ ಜಾತಿಗೆ ಸೇರಿದ್ದಾಗಿರುತ್ತದೆಯಾದ್ದರಿಂದ ಅದನ್ನು ಬೇರೆ ವಿಚಾರಿಸುವ ಕಾರಣವಿರುವದಿಲ್ಲ. ಇನ್ನು ಮೂರನೆಯ ಆಕ್ಷೇಪವನ್ನು ನೋಡೋಣ. ಭಾರತದ ಕೆಲವು ಕೈಪ್ರತಿಗಳಲ್ಲಿ ಗೀತೆಯು ಇಲ್ಲದಿದ್ದರೇನಾಯಿತು? ಮಿಕ್ಕ ಪ್ರತಿಗಳಲ್ಲೆಲ್ಲ ಅದು ಕಂಡುಬಂದಿರುವದರಿಂದ ಆ ಪ್ರತಿಗಳು ಅಸಮಗ್ರವೆಂದು ಏತಕ್ಕೆ ಭಾವಿಸಬಾರದು ? ಆ ಪ್ರತಿಗಳನ್ನು ಯಾರು ಯಾವ ಸಂದರ್ಭದಲ್ಲಿ ಬರೆದರು? ಎಂಬುದನ್ನು ನಿರ್ಣಯಿಸಿದ ಹೊರತು ಆ ಕೈಪ್ರತಿಗಳ ಬೆಲೆಯನ್ನಾಗಲಿ ಗೀತೆಯ ಸ್ಥಾನವನ್ನಾಗಲಿ ಬರಿಯ ಇದೊಂದು ಆಧಾರದಿಂದಲೇ ಗೊತ್ತುಪಡಿಸುವದಕ್ಕೆ ಆಗಲಾರದೆಂಬುದು ನಿಸ್ಸಂದೇಹವಾಗಿರುತ್ತದೆ. ನಾಲ್ಕು-ಐದನೆಯ ಆಕ್ಷೇಪಣೆ ಗಳಿಗಂತೂ ಉತ್ತರ ಹೇಳಬೇಕಾದ ಅವಶ್ಯಕತೆಯೇ ಇಲ್ಲ. ಸಮಾಪ್ತಿವಾಕ್ಯವು ವ್ಯಾಸರು ಬರೆದದ್ದಲ್ಲವಾದ್ದರಿಂದ ಅದರಲ್ಲಿ ಯಾವ ಹೆಚ್ಚುಕಡಿಮೆಯಿದ್ದರೂ ಗೀತೆಯು ಭಾರತದ ಭಾಗವೆಂಬುದಕ್ಕೆ ಏನೂ ಬಾಧಕವಾಗುವದಿಲ್ಲ.
ಇದುವರೆಗೂ ಆಕ್ಷೇಪಗಳಿಗೆ ಪರಿಹಾರವನ್ನು ಮಾತ್ರ ಹೇಳಿದ್ದಾಯಿತು. ಆದರೆ ಭಗವದ್ಗೀತೆಯು ಭಾರತದ ಭಾಗವೇ ಎಂದು ನಿರ್ಣಯಿಸುವದಕ್ಕೆ ಗೀತಾರಹಸ್ಯದಲ್ಲಿ (ಪು. 505-517) ಬೇಕಾದಷ್ಟು ಸಾಕ್ಷಿಗಳನ್ನು ಕೊಟ್ಟಿರುತ್ತದೆ. ಕುತೂಹಲವುಳ್ಳವರು ಅಲ್ಲಿ ನೋಡಬಹುದು. ಅಲ್ಲಿ ಹೇಳಿರುವದರ ಸಾರಾಂಶವನ್ನು ಮಾತ್ರ ವಾಚಕರಿಗಾಗಿ ಇಲ್ಲಿ ಸಂಗ್ರಹಿಸಿ ಬರೆಯುತ್ತೇನೆ.
(1) ಮಹಾಭಾರತದ ಬೇರೆಬೇರೆ ಭಾಗಗಳಲ್ಲಿ ಭಗವದ್ಗೀತೆಯ ಹೆಸರನ್ನೂ ಉಪದೇಶಗಳನ್ನೂ ಅನುವಾದಮಾಡಿರುತ್ತದೆ.
(2) ಭಾರತದ ಬೇರೆಬೇರೆ ಗ್ರಂಥಭಾಗಗಳಿಗೂ ಗೀತೆಗೂ ಶಬ್ದಸಾದೃಶ್ಯವೂ ಅರ್ಥಸಾದೃಶ್ಯವೂ ಹೇರಳವಾಗಿರುವ ಶ್ಲೋಕಗಳು ಬಂದಿರುತ್ತವೆ. ಆದ್ದರಿಂದ ಗೀತೆಯನ್ನು ಭಾರತದ ಒಂದು ಭಾಗವೆಂದೇ ನಾವು ಇಟ್ಟುಕೊಳ್ಳಬೇಕು. ಆದ್ದರಿಂದ ಗೀತಾರ್ಥನಿರ್ಣಯವನ್ನು ಮಾಡುವದಕ್ಕೆ ಮಹಾಭಾರತದ ಬೇರೆ ಭಾಗಗಳನ್ನು ಹೋಲಿಸುವದು ತುಂಬಾ ಸಹಕಾರಿಯಾಗಿರುತ್ತದೆಯೆಂದು ಗೊತ್ತಾಗುತ್ತದೆ.
(3) ಭಾರತದ ಬೇರೆಬೇರೆ ಭಾಗಗಳನ್ನು ಗೀತೆಗೆ ಹೋಲಿಸುವಾಗ ಯಾವ ಭಾಗವನ್ನು ತೆಗೆದುಕೊಳ್ಳಬೇಕು? ಯಾವದನ್ನು ಬಿಡಬೇಕು? ಇದೊಂದು ಪ್ರಶ್ನೆಯನ್ನು ಸ್ವಲ್ಪ ವಿಚಾರಮಾಡುವದು ಅವಶ್ಯವಾಗಿರುತ್ತದೆ. ಏಕೆಂದರೆ ಭಗವದ್ಗೀತೆಯೆಂಬ ಮಾತಿನಲ್ಲಿರುವ “ಭಗವಾನ್'' ಎಂಬ ಶಬ್ದದ ಸಾಮ್ಯದಿಂದ ಇಲ್ಲಿ ಭಾಗವತಮತ ಎಂಬ ಒಂದು ವಿಶಿಷ್ಟ ಸಿದ್ಧಾಂತವನ್ನು ಹೇಳಿರುತ್ತದೆಯೆಂದೂ ಭಾರತದ ಶಾಂತಿಪರ್ವದಲ್ಲಿ ಭಾಗವತಧರ್ಮಬೋಧಕವಾದ ನಾರಾಯಣೀಯೋಪಾಖ್ಯಾನವನ್ನು ಇದಕ್ಕೆ ಹೋಲಿಸುವದು ಮುಖ್ಯವೆಂತಲೂ ಗೀತಾರಹಸ್ಯಕಾರರು ನಿರ್ಣಯಿಸಿಕೊಂಡು ವಿಚಾರಕ್ಕೆ ಹೊರಟಿರುತ್ತಾರೆ. ನಮ್ಮ ಅಭಿಪ್ರಾಯದಲ್ಲಿ ಈ ನಿರ್ಣಯವು ಸರಿಯಲ್ಲ. ಏಕೆಂದರೆ ನಾರಾಯಣೀಯದಲ್ಲಿಯೂ ಮಿಕ್ಕ ಭಾರತದ ಭಾಗಗಳಲ್ಲಿಯೂ ಭಗವದ್ಗೀತೆಯನ್ನು ಸಮವಾಗಿಯೇ ಹೊಗಳಿರುವಾಗ ನಾರಾಯಣೀಯವನ್ನು ಮಾತ್ರ ಗೀತೆಯ ಅರ್ಥವನ್ನು ನಿರ್ಣಯಿಸುವದಕ್ಕೆ ತೆಗೆದುಕೊಳ್ಳಬೇಕೆಂಬುದು ಯುಕ್ತವಾಗುವದಿಲ್ಲ. ಇದಲ್ಲದೆ ಮಹಾಭಾರತಕಾರರು ಒಬ್ಬರೇ ಎಂದು ಸಾಂಪ್ರದಾಯಿಕ ದೃಷ್ಟಿಯಿಂದ ಒಪ್ಪಿಕೊಂಡರೆ ಗೀತೆಯ ಹೆಸರನ್ನು ಹೇಳಲಿ ಬಿಡಲಿ ಭಾರತದಲ್ಲಿರುವ ತತ್ತ್ವವಿಚಾರಗಳನ್ನೆಲ್ಲ ಸಮಯಕ್ಕೆ ತಕ್ಕ ಹಾಗೆ ಹೋಲಿಕೆಗೆ ತೆಗೆದುಕೊಳ್ಳುವದಕ್ಕೆ ಅಡ್ಡಿ ಏನೂ ಇರುವದಿಲ್ಲ. ಇದರಂತೆ ಗೀತಾರಹಸ್ಯಕಾರರು ತೆಗೆದುಕೊಂಡೂ ಇರುತ್ತಾರೆ. ಈಗಿನ ಭಾರತದ ಬೇರೆಬೇರೆ ಭಾಗಗಳನ್ನು ಬೇರೆಬೇರೆ ಗ್ರಂಥಕಾರರು ಮಾಡಿರುವರೆಂಬ ಈಚಿನ ಶಂಕಾವಾದಿಗಳ ಮತವನ್ನು ತೆಗೆದುಕೊಂಡರಂತೂ ನಾರಾಯಣೀಯವನ್ನು ಗೀತಾಕಾರರೇ ಬರೆದರೆಂದು ಸಿದ್ಧಪಡಿಸಿದ ಹೊರತು ಅದನ್ನು ಹೋಲಿಕೆಗೆ ತೆಗೆದುಕೊಳ್ಳುವದಕ್ಕೆ ಕಾರಣವೇ ಉಳಿಯುವದಿಲ್ಲ. ಆದ್ದರಿಂದ ನೋಡಿದ ಮಾತ್ರದಿಂದಲೇ ಒಂದಕ್ಕೊಂದು ವಿರುದ್ಧವೆಂದು ನಿಶ್ಚಯವಾಗಬಹುದಾದ ಭಾಗಗಳನ್ನು ಗೀತಾನಿರ್ಣಯಕ್ಕೆ ಉಪಯೋಗಿಸಿಕೊಳ್ಳಬಹುದೆಂಬುದೇ ಸರಿಯಾದ ಮಾರ್ಗವಾಗಿರುತ್ತದೆ.
(4) ಮೇಲೆ ಹೇಳಿರುವ ಮೂರು ಉಪಾಯಗಳಲ್ಲದೆ ಇನ್ನೊಂದು ಎಲ್ಲಕ್ಕೂ ಮುಖ್ಯವಾದ ಸಾಧನವುಂಟು. ಅದೇನೆಂದರೆ ಗೀತೆಯನ್ನೇ ಒಟ್ಟಿನಲ್ಲಿ ಪರೀಕ್ಷೆಮಾಡಿ ಒಳಗಿನ ಉಪದೇಶಗಳನ್ನು ಒಂದೊಂದಕ್ಕೆ ಹೋಲಿಸಿ ನೋಡಿ, ಉಪಕ್ರಮೋಪಸಂಹಾರಗಳು, ಅಭ್ಯಾಸ, ಅಪೂರ್ವತಾ, ಫಲ, ಅರ್ಥವಾದ, ಉಪಪತ್ತಿ ಎಂಬ ಆರು ಹೆಗ್ಗುರುತುಗಳಿಂದ ತಾತ್ಪರ್ಯವನ್ನು ಗೊತ್ತುಪಡಿಸುವದು. ಇದು ಮೇಲೆ ಹೇಳಿದ ಎಲ್ಲಾ ಉಪಾಯಗಳಿಗಿಂತಲೂ ಬೆಲೆಯುಳ್ಳದ್ದು. ಏಕೆಂದರೆ ಮಿಕ್ಕ ಉಪಾಯಗಳು ಹೊರಗಿನ ಸಾಧನದಿಂದ ಗೀತೆಯ ಬೆಲೆಯನ್ನು ನಿರ್ಣಯಿಸುವವು; ಈ ಉಪಾಯವು ಗೀತೆಯ ಪರೀಕ್ಷೆಯಿಂದ ಗೀತೆಯ ಬೆಲೆಯನ್ನು ನಿರ್ಣಯಿಸುವದು. ಯಾವ ಗ್ರಂಥದ ತಾತ್ಪರ್ಯವನ್ನಾದರೂ ಈ ಆರು ಹೆಗ್ಗುರುತುಗಳನ್ನು ನೋಡಿಯೇ ಗೊತ್ತುಮಾಡಬೇಕಾಗಿರುತ್ತದೆ ; ಮಿಕ್ಕ ಸಾಧನಗಳನ್ನು ಆ ತಾತ್ಪರ್ಯ ನಿರ್ಣಯವನ್ನು ಪುಷ್ಟಿಗೊಳಿಸುವದಕ್ಕೆ ಉಪಯೋಗಿಸುವುದೇ ಹೊರತು ಮತ್ತೇತಕ್ಕೂ ಅವುಗಳನ್ನು ಉಪಯೋಗಿಸುವದು ಸರಿಯಾಗುವದಿಲ್ಲ. ಆದ್ದರಿಂದ ಈ ಗುರುತುಗಳ ವಿವರವನ್ನು ಇಲ್ಲಿ ತಿಳಿದುಕೊಳ್ಳುವದು ಅತ್ಯವಶ್ಯವಾಗಿರುತ್ತದೆ.
ಮೊದಲನೆಯ ಗುರುತು ಯಾವದೆಂದರೆ ಉಪಕ್ರಮೋಪಸಂಹಾರಗಳು. ಗ್ರಂಥವನ್ನು ಬರೆಯುವಾತನು ತಾತ್ಪರ್ಯವನ್ನು ಗ್ರಂಥದ ಮೊದಲಿನಲ್ಲಿಯೂ ಕೊನೆಯಲ್ಲಿಯೂ ಬಹುಮಟ್ಟಿಗೆ ಸ್ಪಷ್ಟವಾಗಿ ಹೇಳಿರುತ್ತಾನೆ. ಏಕೆಂದರೆ ಗ್ರಂಥದ ಅಥವಾ ಭಾಷಣದ ಮೊದಲೂ ಕೊನೆಯೂ ಬಹುಮುಖ್ಯವಾದ ಸ್ಥಾನಗಳಾಗಿರುತ್ತವೆ. ಓದುವವರೂ ಕೇಳುವವರೂ ವಿಷಯವು ಯಾವ ವಿಚಾರದ್ದೆಂದು ತಿಳಿದುಕೊಳ್ಳುವದಕ್ಕೆ ತುಂಬ ಕುತೂಹಲವುಳ್ಳವರಾಗಿರುತ್ತಾರೆ. ಆದ್ದರಿಂದ ಮತ್ತೆ ಯಾವ ಯೋಚನೆಯಿಂದಲೂ ತುಂಬಿರದ ಆ ಕಾಲದಲ್ಲಿ ಅವರ ಮನಸ್ಸಿನ ಮೇಲೆ ಬಿಂಬಿಸುವ ಹಾಗೆ ತನ್ನ ಅಭಿಪ್ರಾಯವನ್ನು ಹಾಕುವದಕ್ಕೆ ಲೇಖಕನಾಗಲಿ ಭಾಷಣಮಾಡುವವನಾಗಲಿ ಪ್ರಯತ್ನ ಮಾಡುತ್ತಾನೆಂಬುದು ಸಹಜವಾಗಿರುತ್ತದೆ. ಆದ್ದರಿಂದ ಗ್ರಂಥದ ಆರಂಭದಲ್ಲಿ ಹೇಳಿರುವದು ಏನು? ಎಂಬುದು ಬಹುದೊಡ್ಡದಾಗಿರುತ್ತದೆ. ಇದರಂತೆಯೆ ಗ್ರಂಥದ ಕೊನೆಯಲ್ಲಿ ಹೇಳಿರುವದೂ ತುಂಬಾ ಬೆಲೆಯುಳ್ಳದ್ದಾಗಿರುವದು. ಗ್ರಂಥದಲ್ಲಿ ಹೇಳುವ ವಿಷಯಗಳು ಸಂದರ್ಭಾನುಸಾರ ಕವಲುಕವಲಾಗಿ ಎಲ್ಲೆಲ್ಲಿಯೋ ಹೋಗಿ ಬಿಟ್ಟಿರುವದರಿಂದ ಕೊನೆಯಲ್ಲಿ ತಾನು ಹೇಳಬೇಕೆಂದಿರುವ ಮುಖ್ಯ ವಿಚಾರಗಳನ್ನು ಒಕ್ಕಡೆಗೆ ಜೋಡಿಸಿ ಒತ್ತಿ ಹೇಳುವದಕ್ಕೆ ಯತ್ನಿಸುವದು ಲೇಖಕನಿಗೆ ಸ್ವಭಾವವಾಗಿರುತ್ತದೆ. ಈ ಕಾರಣದಿಂದ ಮೊದಲೂ ಕೊನೆಯೂ ಯಾವ ವಿಷಯವನ್ನು ಮುಖ್ಯವೆಂದು ಮುಂದಿಡುವೆವೊ ಅದೇ ಗ್ರಂಥದ ಪ್ರಧಾನವಿಷಯವೆಂದು ತಿಳಿಯುವದು ಯುಕ್ತವಾಗಿರುತ್ತದೆ. ಹೀಗೆ ಉಪಕ್ರಮೋಪಸಂಹಾರಗಳು ತಾತ್ಪರ್ಯಕ್ಕೆ ಮೊದಲನೆಯ ಗುರುತು.
ಇದಾದ ಮೇಲೆ ಅಭ್ಯಾಸವೆಂಬ ಎರಡನೆಯ ಗುರುತನ್ನು ನೋಡಿಕೊಳ್ಳಬಹುದು. ಯಾವಾತನು ತಾನು ಇಂಥ ವಿಷಯವನ್ನು ವಾಚಕನ ಮನಸ್ಸಿನಲ್ಲಿಡಬೇಕೆಂದು ನೆನೆಸಿ ಗ್ರಂಥವನ್ನು ಬರೆಯುತ್ತಾನೋ ಆತನೇ ಮೊದಲೊಂದು ಸಲ, ಕೊನೆಗೊಂದು ಸಲ— ಹೀಗೆ ಎರಡೇ ಸಲ ವಿಷಯವನ್ನು ಹೇಳಿ ನಡುವೆ ತನಗೆ ತೋಚಿದ ಯಾವ ಯಾವದೋ ಸಂಗತಿಗಳನ್ನು ತುಂಬಿಯಾನೆ? ಎಂದಿಗೂ ಇಲ್ಲ. ಅವನು ತಾನು ಹೇಳುವ ಪ್ರಧಾನವಿಷಯಕ್ಕೇ ಮಿಕ್ಕ ಸಂಗತಿಗಳು ಸೇರಿರುವವೆಂದು ತಿಳಿಸಿಕೊಡುವದಕ್ಕಾಗಿ ಅಡಿಗಡಿಗೆ ತಾನು ಹೇಳಿದ್ದಕ್ಕೂ ಮುಖ್ಯ ವಿಷಯಕ್ಕೂ ಇರುವ ಸಂಬಂಧವನ್ನು ತಿಳಿಸುತ್ತಾ ಇರುವನು. ಹೀಗೆ ಗ್ರಂಥದ ನಡುವಿನಲ್ಲಿಯೂ ಮತ್ತೆ ಮತ್ತೆ ಯಾವ ವಿಷಯವನ್ನು ತರುತ್ತಿರುವನೋ ಅದೇ ಆ ಗ್ರಂಥದ ಮುಖ್ಯ ವಿಷಯವೆನ್ನಬೇಕಲ್ಲವೆ? ಈ ರೀತಿಯಲ್ಲಿ ಬಾರಿಬಾರಿಗೂ ಗ್ರಂಥವಿಷಯವನ್ನು ಕುರಿತು ಮಾತುಗಳನ್ನಾಡುತ್ತಿರುವದೇ ಅಭ್ಯಾಸವೆಂಬ ಎರಡನೆಯ ಹೆಗ್ಗುರುತು. ಈ ಗುರುತಿನಿಂದಲೂ ತಾತ್ಪರ್ಯವನ್ನು ನಿರ್ಣಯಿಸುವದಕ್ಕೆ ಸಹಾಯವಾಗುವದು.
ಅಪೂರ್ವತಾ ಎಂಬುದು ಮೂರನೆಯ ಗುರುತು. ಎಲ್ಲರೂ ಹೇಳಿದ್ದನ್ನು ತಾನೂ ಹೇಳಿದರೆ ತನ್ನ ಗ್ರಂಥದ ಹೆಚ್ಚುಗಾರಿಕೆಯೇನು? ಏನೂ ಇಲ್ಲ. ಇದಕ್ಕಾಗಿ ಗ್ರಂಥಕಾರನು ಮತ್ತೊಬ್ಬರ ಗ್ರಂಥಕ್ಕೂ ತನ್ನ ಗ್ರಂಥಕ್ಕೂ ಇರುವ ತಾರತಮ್ಯವನ್ನು ಚೆನ್ನಾಗಿ ಕಾಣುವಂತೆ ವಾಚಕರ ಮುಂದೆ ಇಟ್ಟಿರುತ್ತಾನೆ. ಮಿಕ್ಕವರು ಹೇಳಿರುವ ಸಂಗತಿಗಳನ್ನೂ ಅವು ಬೇಕಾದಾಗ ಹೇಳಬಹುದು; ಆದರೆ ಅದಕ್ಕೆ ಅಷ್ಟು ಪ್ರಾಮುಖ್ಯತೆಯನ್ನೇನೂ ಅವನು ಕೊಡುವದಿಲ್ಲ. ತಾನು ಹೇಳುವ ಮುಖ್ಯ ವಿಷಯವು ಬಂತೆಂದರೆ ಸರಿ, ಅದು ವಾಚಕರಿಗೆ ಕಣ್ಣಿಗೆ ಕಟ್ಟಿದ ಹಾಗಾಗುವಂತೆ ಎದುರಿಗಿಡುತ್ತಾನೆ. ಇದರಿಂದ ಈ ಗ್ರಂಥದ ವಿಷಯವೇನು? ಎಂಬ ಪ್ರಶ್ನೆ ಬಂದರೆ ವಾಚಕರು ಥಟ್ಟನೆ 'ಇಂಥದ್ದೇ ಈ ಗ್ರಂಥದ ವಿಷಯವು: ಮಿಕ್ಕದ್ದು ಬೇರೆ ಕಡೆಗಳಲ್ಲಿದೆ, ಆದರೆ ಈ ವಿಷಯವನ್ನು ಮಾತ್ರ ಯಾರೂ ಹೀಗೆ ಹೇಳಲಿಲ್ಲ' ಎಂದು ಗೊತ್ತುಮಾಡಿಕೊಂಡುಬಿಡುವರು. ಆದ್ದರಿಂದ ಈ ಗ್ರಂಥದಲ್ಲಿರುವ ಹೊಸ ವಿಚಾರವೇನು? ಎಂಬಿದನ್ನು ತಿಳಿಸುವ ಗುರುತೂ ತಾತ್ಪರ್ಯನಿರ್ಣಯಕ್ಕೆ ಸಹಕಾರಿಯಾಗಿರುತ್ತದೆ. ಇದಕ್ಕೆ ಅಪೂರ್ವತೆ ಎಂದು ಹೆಸರು.
ಇನ್ನು ಫಲವೆಂಬುದು ನಾಲ್ಕನೆಯ ಗುರುತು. ಯಾವದನ್ನು ತಿಳಿದುಕೊಂಡರೆ ಅಥವಾ ಮಾಡಿದರೆ ಎಲ್ಲಕ್ಕೂ ಹೆಚ್ಚಿನ ಫಲವುಂಟಾಗುವದೆಂದು ಗ್ರಂಥಕರ್ತನು ಹೇಳುತ್ತಾನೋ ಅದೇ ಅವನ ಆಶಯವಾಗಿರುತ್ತದೆ. ಯಾವ ಪ್ರಯೋಜನವೂ ಇಲ್ಲದ್ದನ್ನು ತಿಳಿಯುವದಕ್ಕಾಗಲಿ ಮಾಡುವದಕ್ಕಾಗಲಿ ಜನರು ಕೈ ಹಾಕುವದಿಲ್ಲವಷ್ಟೆ; ಇದನ್ನು ತಿಳಿದ ಗ್ರಂಥಕರ್ತನು ತಾನು ಹೇಳುವ ವಿಷಯದ ತಿಳಿವಳಿಕೆಯಿಂದಾಗುವ ಪ್ರಯೋಜನವನ್ನು ಅವಶ್ಯವಾಗಿ ಹೇಳಿಯೇ ಹೇಳುವನು. ಹೀಗೆ ಫಲವನ್ನು ಹೇಳಿರುವ ಮಾತುಗಳಲ್ಲಿ ಅವನಿಗೆ ತಾತ್ಪರ್ಯವಿದೆಯೆಂದೂ ಸುಮ್ಮನೆ ಫಲವನ್ನೇನೂ ಹೇಳದೆ ಅಲ್ಲಲ್ಲಿ ತಂದಿರುವ ವಿಚಾರಗಳೆಲ್ಲ ಅದಕ್ಕೆ ಅಂಗವು ಎಂದರೆ ಸಹಾಯಕವಾಗಿ ಹೇಳಿದ್ದು ಎಂತಲೂ ತಿಳಿಯಬೇಕು. 'ಫಲವಿಲ್ಲದ್ದು ಫಲವಿರುವದರ ಅಂಗವು' ಎಂದು ಮೀಮಾಂಸಕರು ಒಂದು ತಾತ್ಪರ್ಯಲಿಂಗವನ್ನು ಗೊತ್ತುಮಾಡುವ ನಿಯಮವನ್ನು ತೆಗೆದಿರುತ್ತಾರೆ. ಈ ನಿಯಮವು ವೇದಕ್ಕೆ ಮಾತ್ರವೇ ಅಲ್ಲದೆ ಯಾವ ಗ್ರಂಥಕ್ಕಾದರೂ ಹತ್ತುವದರಿಂದ ಯಾವ ವಿಷಯವನ್ನು ವಾಚಕರಿಗೆ ಸರಿಯಾದ ಪ್ರಯೋಜನವನ್ನು ತೋರಿಸಿಕೊಟ್ಟು ಗ್ರಂಥಕಾರನು ಹೇಳುತ್ತಾನೋ ಅದರಲ್ಲಿ ಅವನ ತಾತ್ಪರ್ಯವಿರುವದೆಂದು ನಾವು ನಂಬಬಹುದಾಗಿರುತ್ತದೆ.
ಐದನೆಯ ಗುರುತು ಯಾವದೆಂದರೆ ಅರ್ಥವಾದವು. ಅರ್ಥವಾದವೆಂದರೆ ತಾನು ಹೇಳುವ ವಿಷಯವು ಕೇಳುವವರಿಗೆ ಒಪ್ಪಾಗುವಂತೆ ಅದನ್ನು ಹೊಗಳುವದು ಅಥವಾ ಅದಕ್ಕೆ ವಿರುದ್ಧವಾದದ್ದನ್ನು, ಅದಕ್ಕಿಂತ ಕಡಿಮೆಯಾದದ್ದನ್ನು ಜರಿಯುವದು. ತನ್ನ ವಿಷಯವನ್ನು ಬಗೆಬಗೆಯಾಗಿ ಹೊಗಳುವದರಿಂದ ಆ ವಿಷಯದ ಹೆಚ್ಚಿಗೆಯು ಎದ್ದು ಕಾಣುವದು. ಅದನ್ನು ಹೊಗಳುವ ಉದ್ದೇಶದಿಂದ ಅದಕ್ಕಿಂತ ಬೇರೆಯಾದದ್ದನ್ನು ಜರಿದರೂ ವಿಷಯದ ಹೆಚ್ಚಿಗೆಯೇ ತೋರಿಕೊಳ್ಳುವದು. ಉದಾಹರಣೆಗೆ 'ಯಾವನು ಹೀಗೆ ಮಾಡುತ್ತಾನೋ ಅವನಿಗೆ ರಾಜಪದವಿಯು ಕೈವಶವಾಯಿತೆಂದು ತಿಳಿಯತಕ್ಕದ್ದು. ಮೂರು ಲೋಕವೂ ಅವನ ಆಜ್ಞೆಯನ್ನು ತಲೆಯಲ್ಲಿ ಹೊತ್ತಿರುವದು' ಎಂದು ಹೇಳಿದರೆ ಹೀಗೆ ಮಾಡುವದು ಒಳ್ಳೆಯದೆಂಬ ಅರ್ಥವು ಚೆನ್ನಾಗಿ ಎದ್ದುಕಾಣುವದು. 'ಇವನೀಗ ವಿದ್ಯಾರ್ಥಿ; ಮಿಕ್ಕವರು. ಎಂಥ ವಿದ್ಯಾರ್ಥಿಗಳು? ಅವರೆಲ್ಲ ಬರಿಯ ಅಲಂಕಾರದ ವಿದ್ಯಾರ್ಥಿಗಳು' ಎಂದರೆ ಪ್ರಕೃತವಾಗಿರುವ ವಿದ್ಯಾರ್ಥಿಯು ಎಲ್ಲರಿಗೂ ಹೆಚ್ಚೆಂದು ಸ್ಪಷ್ಟವಾಗುವದು. ಪ್ರಕೃತವಾದ ವಿಷಯವನ್ನು ಹೊಗಳುವದಕ್ಕಾಗಲಿ ಅದಲ್ಲದ ಮತ್ತೊಂದನ್ನು ಹಳಿಯುವದಕ್ಕಾಗಲಿ ಬೇಕಾದ ಕಥೆಯೊಂದನ್ನು ಕಲ್ಪಿಸಿ ಹೊಗಳಬಹುದು ಅಥವಾ ಹಳಿಯಬಹುದು; ಹೊಗಳಿಕೆಯ ಅಥವಾ ನಿಂದೆಯ ಅಂಶವೆಲ್ಲವೂ ನಿಜವಾಗಿರಲೇಬೇಕೆಂದು ನಿಯಮವೂ ಇಲ್ಲ. ಅರ್ಥವಾದಕ್ಕೆ ತಾನು ಹೇಳುವ ವಿಷಯದಲ್ಲಿ ಮುಖ್ಯತಾತ್ಪರ್ಯವಿರುವದಿಲ್ಲ; ಯಾವದನ್ನು ಹೊಗಳುವದಕ್ಕೆ ಅಥವಾ ಜರಿಯುವದಕ್ಕೆಂದೇ ಅದು ಹೊರಟಿರುವದೋ ಆ ವಿಷಯದಲ್ಲಿ ಅದಕ್ಕೆ ತಾತ್ಪರ್ಯವಿರುವದು. ಆದಕಾರಣ ಯಾವದನ್ನು ಕುರಿತು ಬೇರೆಬೇರೆ ಅರ್ಥವಾದಗಳನ್ನು ಕಲ್ಪಿಸಿ ಗ್ರಂಥಕಾರನು ವಿಷಯವನ್ನು ನಮ್ಮ ಮುಂದೆ ಇಡುವನೋ ಅಂಥ ವಿಷಯದಲ್ಲಿ ಅವನಿಗೆ ತಾತ್ಪರ್ಯವಿರುವದೆಂದು ತಿಳಿಯಬೇಕು. ಇದು ತಾತ್ಪರ್ಯವನ್ನು ಗೊತ್ತು ಹಚ್ಚುವ ಐದನೆಯ ಗುರುತು.
ತಾತ್ಪರ್ಯವನ್ನು ನಿಶ್ಚಯಿಸುವದಕ್ಕೆ ಉಪಕ್ರಮೋಪಸಂಹಾರ, ಅಭ್ಯಾಸ, ಅಪೂರ್ವತೆ, ಫಲ, ಅರ್ಥವಾದ ಇವು ಐದೇ ಅಲ್ಲದೆ ಮತ್ತೂ ಒಂದು ಹೆಗ್ಗುರುತು ಇರುವದು. ಯಾವ ವಿಷಯದಲ್ಲಿ ತನಗೆ ಆದರವಿರುವದೋ ಗ್ರಂಥಕಾರನು ಅದಕ್ಕೆ ತಕ್ಕ ಉಪಪತ್ತಿಗಳನ್ನು ಎಂದರೆ ಯುಕ್ತಿಗಳನ್ನು ಕೊಟ್ಟು ನಮಗೆ ಅದನ್ನು ಮೆಚ್ಚುವಂಥ ಮನಸ್ಸನ್ನುಂಟುಮಾಡುವನೆಂಬುದು ನಿರೀಕ್ಷಿಸತಕ್ಕದ್ದೇ ಅಲ್ಲವೆ ? ಹೀಗೆ ಉತ್ತಮವಾದ ಯುಕ್ತಿಗಳಿಂದ ಯಾವದು ಪೋಷಿತವಾಗಿರುವದೋ ಅದೇ ಗ್ರಂಥಕಾರನಿಗೆ ಅಭಿಮತವಾದ ವಿಷಯವೆಂದು ನಾವು ತಿಳಿದುಕೊಳ್ಳಬಹುದಾಗಿರುವದರಿಂದ ಯುಕ್ತಿಗಳೂ ತಾತ್ಪರ್ಯವನ್ನು ನಿರ್ಣಯಿಸುವ ಗುರುತಾಗಿರುತ್ತವೆ. ಈ ಗುರುತಿಗೆ ಮೀಮಾಂಸಕರು ಉಪಪತ್ತಿ ಎನ್ನುತ್ತಾರೆ. ಇದುವರೆಗೆ ವಿವರಿಸಿರುವ ತಾತ್ಪರ್ಯನಿಶ್ಚಾಯಕವಾದ ಗುರುತುಗಳನ್ನು ಮೀಮಾಂಸಕರು ಷಡ್ಲಿಂಗಗಳು ಎಂದು ಕರೆಯುತ್ತಾರೆ. ಈ ಲಿಂಗಗಳಿಂದ ಭಗವದ್ಗೀತೆಯ ತಾತ್ಪರ್ಯವನ್ನು ನಿರ್ಣಯಿಸುವದು ಎಲ್ಲಕ್ಕೂ ಹೆಚ್ಚಿನ ಸಾಧನವೆಂದು ವಾಚಕರಿಗೆ ತಿಳಿಸಬೇಕಾದದ್ದೇ ಇರುವದಿಲ್ಲ.
ಹಿಂದಿನ ಭಾಷ್ಯಕಾರರಾಗಲಿ ಉಳಿದ ವಿಚಾರಕರಾಗಲಿ ಈ ಗುರುತುಗಳನ್ನು ಉಪಯೋಗಿಸಿಲ್ಲವೆ? ಉಪಯೋಗಿಸಿದ್ದರೂ ಅವರ ಮತಗಳು ಭಿನ್ನಭಿನ್ನವಾಗಿವೆಯಲ್ಲ? ಎಂದು ನಮಗೆ ಶಂಕೆಯಾಗಬಹುದು. ಆದರೆ ಒಬ್ಬೊಬ್ಬರೂ ತಮ್ಮ ತಮ್ಮ ಅಭಿಪ್ರಾಯದ ಮೇಲಿನ ಅಭಿಮಾನದಿಂದ ಯಾವದಾದರೊಂದು ವಾಕ್ಯವನ್ನು ಉಪಕ್ರಮವೆಂದೂ ಮತ್ತೊಂದನ್ನು ಉಪಸಂಹಾರವೆಂದೂ, ಮಗದೊಂದನ್ನು ಅಭ್ಯಾಸವೆಂದೂ ಬೇರೊಂದನ್ನು ಅಪೂರ್ವತೆಯೆಂದೂ ತಂದೊಡ್ಡಬಹುದಷ್ಟೆ. ಇಷ್ಟು ಜನರಲ್ಲಿ ಯಾರು ಷಡ್ಲಿಂಗಗಳನ್ನು ಸ್ವಾಭಾವಿಕವಾಗಿ ತಂದುತೋರಿಸುತ್ತಾರೆ? ಯಾರು ವಾಕ್ಯಗಳನ್ನು ಹಿಗ್ಗಾಮುಗ್ಗಾ ಜಗ್ಗಾಡಿರುತ್ತಾರೆ? ಎಂಬುದನ್ನು ವಾಚಕರೇ ನಿರ್ಣಯಿಸಬೇಕಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ಗ್ರಂಥಕಾರನೂ ತನಗೆ ತಿಳಿದಮಟ್ಟಿಗೆ ಷಡ್ಲಿಂಗಗಳನ್ನು ಉಪಯೋಗಿಸಿರುತ್ತಾನೆಂದೇ ಹೇಳಬೇಕಾಗಿರುತ್ತದೆ. ಆದರೆ ಈ ಎಲ್ಲಾ ನಿರ್ಣಯಗಳ ಯುಕ್ತಾಯುಕ್ತತೆಯನ್ನು ಗೊತ್ತುಹಚ್ಚುವುದು ತತ್ತ್ವಪಕ್ಷಪಾತಿಗಳಾದ ವಾಚಕರನ್ನೇ ಅವಲಂಬಿಸಿರುವುದು.
ಈ ಗ್ರಂಥದಲ್ಲಿ ತಾತ್ಪರ್ಯವನ್ನು ನಿರ್ಣಯಿಸಿರುವ ಬಗೆ
ಗೀತೆಯ ಅರ್ಥವನ್ನು ವಿಚಾರಿಸುವದರ ಆವಶ್ಯಕತೆಯನ್ನೂ, ಅದರ ಸಾರವನ್ನು ತಿಳಿಯುವದಕ್ಕೆ ಇರುವ ಅಡ್ಡಿಗಳನ್ನೂ, ಮೊದಲು ಹೇಳಿದ್ದಾಯಿತು. ಆಮೇಲೆ ಗೀತಾರ್ಥದ ತಿರುಳನ್ನು ತೆಗೆಯುವದಕ್ಕೆ, ಈಗಿನ ವಿಮರ್ಶಕರು ಉಪಯೋಗಿಸಿರುವ ಉಪಾಯಗಳನ್ನೂ, ಅವುಗಳ ಯೋಗ್ಯತೆಯಲ್ಲಿರುವ ತಾರತಮ್ಯವನ್ನೂ ತಿಳಿಸಿದ್ದಾಯಿತು. ಇನ್ನು ಮುಂದೆ ಈ ಗ್ರಂಥದಲ್ಲಿ ನಾನು ಅನುಸರಿಸುವ ಕ್ರಮವನ್ನು ತಿಳಿಸಿ ಈ ಪ್ರಕರಣವನ್ನು ಮುಗಿಸುತ್ತೇನೆ. ಗ್ರಂಥದ ತಾತ್ಪರ್ಯವನ್ನು ನಿರ್ಣಯಿಸುವದಕ್ಕೆ ಷಡ್ಲಿಂಗಗಳೇ ಮುಖ್ಯವಾದ್ದರಿಂದ, ಅವಶ್ಯವಾಗಿ ಆ ಲಿಂಗಗಳನ್ನು ಮುಖ್ಯವಾಗಿ ಅನುಸರಿಸಬೇಕಾಯಿತು; ಇದಕ್ಕೆ ಸಹಾಯಕವಾಗಿರುವ ಇತರ ಉಪಾಯಗಳನ್ನೂ ಅನುಸರಿಸಿದರೆ ತಪ್ಪೇನೂ ಇಲ್ಲವಾದ್ದರಿಂದ ಮಹಾಭಾರತದ ಉಳಿದ ಭಾಗಗಳಲ್ಲಿರುವ ಉಪದೇಶಗಳನ್ನೂ ಬೇಕಾದ ಕಡೆ ಅವಶ್ಯವಾಗಿ ಉಪಯೋಗಿಸುತ್ತೇನೆ. ಗೀತೆಯ ಧ್ಯಾನಶ್ಲೋಕಗಳ ಸಂಗ್ರಹವೂ ಅಧ್ಯಾಯದ ಸಮಾಪ್ತಿವಾಕ್ಯವೂ ಗೀತೆಗೆ ಸೇರಿದವುಗಳಲ್ಲವೆಂದು ಅನೇಕರ ಅಭಿಪ್ರಾಯವಿದ್ದರೂ ಅವುಗಳೂ ಗೀತೆಗೆ ಸೇರಿದ ಭಾಗಗಳೇ ಎಂದು ನಂಬುವವರ ಸಲುವಾಗಿ ಕೊನೆಗೆ ಅವುಗಳನ್ನೂ ಉಪಯೋಗಿಸಿಕೊಳ್ಳುತ್ತೇನೆ; ಎಂದರೆ ಇದುವರೆಗೆ ವಿಮರ್ಶಕರು ಉಪಯೋಗಿಸಿರುವ ಎಲ್ಲಾ ಸಾಧನಗಳನ್ನೂ ಉಪಯೋಗಿಸಿಕೊಳ್ಳುತ್ತೇನೆ.
ಹೀಗೆ ಎಲ್ಲಾ ಸಾಧನಗಳನ್ನೂ ಉಪಯೋಗಿಸಿಕೊಂಡಮೇಲೂ ನಾವು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾದ ಮತ್ತೊಂದು ಹೆಚ್ಚಿನ ವಿಚಾರವಿರುವದು. ಅದನ್ನು ಇಲ್ಲಿ ಸ್ವಲ್ಪ ವಾಚಕರಿಗೆ ತಿಳಿಸಬೇಕಾಗಿದೆ. ನಮ್ಮ ದೇಶದಲ್ಲಿರುವ ಆಧ್ಯಾತ್ಮಿಕ ಗ್ರಂಥಗಳನ್ನೆಲ್ಲಾ ಈಗಿನ ಶೋಧಕರು ಉಳಿದ ಗ್ರಂಥಗಳನ್ನು ನೋಡುವಂತೆಯೇ ನೋಡಿ, ಗ್ರಂಥಕಾರನ ತಾತ್ಪರ್ಯವನ್ನು ನಿರ್ಣಯಿಸುವ ರೂಢಿಯಿದೆ. ಇವರು ಯಾವದಾದರೊಂದು ಗ್ರಂಥವನ್ನು ನೋಡಿ ಈ ಗ್ರಂಥಕಾರನ ಕಾಲವು ಯಾವದು? ಆ ಕಾಲದ ಜನರ ಸ್ಥಿತಿ ಹೇಗಿತ್ತು ? ಅವರ ವಿಚಾರ ಸರಣಿ ಯಾವದು? ಈ ಗ್ರಂಥಕಾರನ ಉಳಿದ ಗ್ರಂಥಗಳಲ್ಲಿ ಯಾವ ವಿಚಾರಗಳು ಬಂದಿವೆ? ಎಂದು ಮುಂತಾಗಿ ಯೋಚಿಸಿ ಹೇಗಾದರೂ ಮಾಡಿ ಒಂದು ತಕ್ಕಮಟ್ಟಿಗೆ ಹೊಂದಿಕೆಯಾದ ಅಭಿಪ್ರಾಯವನ್ನು ತೆಗೆದು ಅದೇ ಗ್ರಂಥಕಾರನ ಅಭಿಪ್ರಾಯವೆಂದು ನಿಶ್ಚಯಿಸುತ್ತಾರೆ. ಇದುವರೆಗೆ ನಾವು ಗೀತಾರ್ಥದ ನಿರ್ಣಯ ಸಾಧನಗಳೆಂದು ಎಣಿಸಿರುವ ಉಪಾಯಗಳೂ ಇಂಥವೇ ಆಗಿರುತ್ತವೆ. ಇವುಗಳಲ್ಲಿ ಬೆಲೆಯಿಲ್ಲವೆಂದಲ್ಲ, ಅವೆಲ್ಲ ಅತ್ಯವಶ್ಯಕವಾಗಿರುವವು. ಆದರೆ ಅವುಗಳ ಜತೆಗೆ ಸೇರಿಸಿಕೊಳ್ಳಬೇಕಾದ ಮತ್ತೊಂದು ಮುಖ್ಯ ಸಾಮಗ್ರಿಯಿದೆ. ಅದೇನೆಂದರೆ ಯುಕ್ತ್ಯನುಭವಗಳು. ಹಿಂದೆ ಗ್ರಂಥದ ತಾತ್ಪರ್ಯವನ್ನು ನಿರ್ಣಯಿಸುವದಕ್ಕೆ ಆರು ಗುರುತುಗಳು ಇವೆಯೆಂದು ಹೇಳಿದ ಸಂದರ್ಭದಲ್ಲಿ ಉಪಪತ್ತಿಯೆಂಬ ಹೆಸರಿನಿಂದ ಯುಕ್ತಿಯನ್ನೂ ಸೇರಿಸಿಯೇ ಹೇಳಿರುತ್ತದೆಯಷ್ಟೆ ; ಆದರೆ ಆ ಉಪಪತ್ತಿಗೂ ಈಗ ನಾವು ಹೇಳುವ ಯುಕ್ತಿಗೂ ತುಂಬ ಭೇದವಿದೆ. ಅಲ್ಲಿ ಹೇಳಿದ ಉಪಪತ್ತಿಯಂಬಿದು ಗ್ರಂಥಕಾರನದು, ಇಲ್ಲಿ ಹೇಳಿರುವದು ವಾಚಕರದು. ಗ್ರಂಥಕಾರನು ತನ್ನ ಧ್ಯೇಯವನ್ನು ವಾಚಕರಿಗೆ ಮನಗಾಣಿಸುವದಕ್ಕೆಂದು ತನಗೆ ಸಾಧಕವಾದ ಯುಕ್ತಿಗಳನ್ನು ಕೊಟ್ಟು, ಬಾಧಕವೆಂದು ತೋರಬಹುದಾದ ಕೆಲವು ಯುಕ್ತಿಗಳನ್ನು ಖಂಡಿಸಿರುತ್ತಾನೆ. ಹೀಗೆ ತಾನು ಹೇಳಬೇಕೆಂದಿರುವ ವಿಷಯವನ್ನು ಖಂಡನ ಮಂಡನಗಳ ಮೂಲಕ ಬಲಪಡಿಸಿ ತಿಳಿಸುವ ಕ್ರಮಕ್ಕೆ ಉಪಪಾದನ ಅಥವಾ ಉಪಪತ್ತಿ ಎಂದು ಹೆಸರು. ಈಗ ನಾವು ಹೇಳುತ್ತಿರುವ ಯುಕ್ತಿಯೆಂಬುದು ಹಾಗಲ್ಲ. ನಮಗೆ ತಿಳಿದಿರುವ ಯುಕ್ತಿಗೂ ಅನುಭವಕ್ಕೂ, ಗ್ರಂಥದ ತಾತ್ಪರ್ಯವೆಂದು ನಾವು ತೆಗೆದಿರುವ ವಿಷಯವು ಹೊಂದುಗಡೆಯಾಗಿದೆಯೆ? ಇದರಲ್ಲಿ ಹೇಳಿರುವ ನಡೆಯು ಆಚರಣೆಗೆ ಇಟ್ಟುಕೊಳ್ಳುವದಕ್ಕೆ ಶಕ್ಯವೂ ಯೋಗ್ಯವೂ ಆಗಿರುತ್ತದೆಯೆ? ಇದರಲ್ಲಿ ಹೇಳಿರುವ ತತ್ತ್ವ ಮನುಷ್ಯನ ಅನುಭವಕ್ಕೂ, ಅನುಭವಾನುಸಾರಿಯಾದ ಯುಕ್ತಿಗೂ ವಿರೋಧವಲ್ಲವಷ್ಟೆ? ಒಂದು ವೇಳೆ ಮೊದಮೊದಲು ವಿರೋಧವೆಂದು ಕಂಡರೂ ನಮಗೆ ಸ್ವಾಭಾವಿಕವಾಗಿ ಈಗಿರುವ ಯುಕ್ತ್ಯನುಭವಗಳನ್ನು ನುಂಗಿ ಇನ್ನೂ ಹೆಚ್ಚು ವ್ಯಾಪಕವಾಗಿರುವಂಥ ಯುಕ್ತ್ಯನುಭವಗಳನ್ನು ಗ್ರಂಥಕಾರನು ಕೊಟ್ಟಿರುತ್ತಾನೆಯೆ? ಎಂದು ಪರೀಕ್ಷಿಸುವದು ಈಗ ಹೇಳುವ ಯುಕ್ತಿಯು. ಈ ರೀತಿ ಯುಕ್ತ್ಯನುಭವಗಳಿಗೆ ಗ್ರಂಥದ ವಿಷಯವನ್ನು ಹೊಂದಿಸಿ ನೋಡುವದು ಅಧ್ಯಾತ್ಮಗ್ರಂಥಗಳ ತಾತ್ಪರ್ಯವನ್ನು ನಿರ್ಣಯಿಸಿ ನೋಡುವಲ್ಲಿ ಅತ್ಯಗತ್ಯವಾಗಿರುತ್ತದೆ ಎಂಬುದು ನಮ್ಮ ದೇಶದಲ್ಲಿ ಬಹುಕಾಲದಿಂದ ನಡೆದುಕೊಂಡು ಬಂದಿರುವ ನಂಬಿಕೆಯಾಗಿದೆ.
ಗ್ರಂಥದ ತಾತ್ಪರ್ಯವು ನಮ್ಮ ಯುಕ್ತಿಗಳಿಗೂ ಅನುಭವಗಳಿಗೂ ವಿರುದ್ಧವಾಗಿದ್ದ ಮಾತ್ರಕ್ಕೆ ಅದು ಗ್ರಂಥದ ತಾತ್ಪರ್ಯವೇ ಅಲ್ಲವೆಂದು ಹೇಳಬಹುದೆ? ಒಂದು ವೇಳೆ ಗ್ರಂಥಕಾರನು ತನ್ನ ಅಭಿಪ್ರಾಯವನ್ನು ನಮ್ಮಗಳನುಭವಕ್ಕೆ ವಿರುದ್ಧವಾಗಿಯೆ ಹೇಳಿರಬಾರದೇಕೆ? ಗ್ರಂಥಗಳೆಲ್ಲ ನಮಗೆ ಸಮ್ಮತವಾಗುವಂತೆಯೇ ಬರೆದಿರಬೇಕೆಂದು ನಿರ್ಬಂಧವೇನು? ಎಂದು ಕೆಲವರು ಇಲ್ಲಿ ಆಕ್ಷೇಪಿಸಬಹುದಷ್ಟೆ. ಈ ಆಕ್ಷೇಪಣೆಯು ಯುಕ್ತವಾದದ್ದೆ ಸರಿ. ಆದರೆ ಭಗವದ್ಗೀತೆಯಂಥ ಗ್ರಂಥದ ತಾತ್ಪರ್ಯವನ್ನು ನಾವು, ಪ್ರಾಚೀನಕಾಲದ ಯಾವದೋ ಒಂದು ಗ್ರಂಥವನ್ನು ಆ ಕಾಲದ ಸಾಮಾಜಿಕತೆಯನ್ನು ನಿರ್ಣಯಮಾಡುದಕ್ಕಾಗಲಿ ಅಥವಾ ಮತ್ತೆ ಯಾವ ಸಾಮಾನ್ಯ ಉದ್ದೇಶದಿಂದಾಗಲಿ ಐತಿಹಾಸಿಕರು ಶೋಧಿಸುವಂತೆ ಶೋಧಿಸುವದಕ್ಕೆ ಹೊರಟಿರುವದಿಲ್ಲ. ಶ್ರುತಿಸ್ಮೃತಿಪುರಾಣೇತಿಹಾಸಗಳಲ್ಲಿ ಇಹಪರ ಸುಖಕ್ಕೆ ಬೇಕಾದ ಧರ್ಮವೂ, ಜಗತ್ತಿನ ತತ್ತ್ವವನ್ನು ತಿಳಿಸಿ ಕೊನೆಗೆ ಪರಮಪದವಿಯಾದ ಮೋಕ್ಷವನ್ನು ಕೊಡುವ ಜ್ಞಾನವೂ, ಅದರಲ್ಲಿ ಅಡಕವಾಗಿರುವುದೆಂದೇ ನಮ್ಮ ದೇಶದಲ್ಲಿ ಆಸ್ತಿಕರೆಲ್ಲರ ನಂಬಿಕೆಯಿರುವದು. ಆದ್ದರಿಂದ ಅಂಥ ಧರ್ಮಜ್ಞಾನಗಳ ವಿಚಾರಗಳು ಇಲ್ಲದ ಗ್ರಂಥವನ್ನು ನಾವು ಅಧ್ಯಾತ್ಮಗ್ರಂಥವೆಂದು ಕರೆಯುವದಿಲ್ಲ. ಭಗವದ್ಗೀತೆಯು ಇಂಥಾ ಅಧ್ಯಾತ್ಮಗ್ರಂಥವೆಂಬ ನಂಬಿಕೆಯು ಅನಾದಿಕಾಲದಿಂದಲೂ ಬಂದಿರುವದರಿಂದ ಇದರಲ್ಲಿ ನಮ್ಮೆಲ್ಲರಿಗೂ ಬೇಕಾದ ಧರ್ಮಜ್ಞಾನಗಳು ಅಡಕವಾಗಿರುವವೆ? ಇಲ್ಲವೆ? ಎಂಬುದನ್ನು ನಾವು ಮೊದಲು ನಿರ್ಣಯಿಸಬೇಕು. ಯಾವಾತನು ಇದೇ ಭಗವದ್ಗೀತೆಯ ಅರ್ಥವೆಂದು ಯಾವದಾದರೊಂದು ಸಾಮಾನ್ಯ ಲೌಕಿಕ ವಿಷಯವನ್ನು ನಮ್ಮ ಮುಂದೆ ಒಡ್ಡಿದರೆ ನಾವು ಯಾರೂ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ. ಯಾವನು ಸಂಪ್ರದಾಯವನ್ನೂ ಮೀರದೆ, ಉಪಕ್ರಮೋಪಸಂಹಾರಾದಿಲಿಂಗಗಳನ್ನೂ ಅಂಗೀಕರಿಸಿ, ನಮ್ಮಗಳೆಲ್ಲರ ಯುಕ್ತ್ಯನುಭವಕ್ಕೆ ಹೊಂದುಗಡೆಯಾಗುವಂತೆ ಭಗವದ್ಗೀತಾ ತಾತ್ಪರ್ಯವನ್ನು ತೆಗೆಯುವನೋ ಅವನ ಮಾತಿಗೆ ನಾವು ಅವಶ್ಯವಾಗಿ ಕಿವಿಗೊಡುವವು.
ಇದಕ್ಕೆ ಒಂದು ದೃಷ್ಟಾಂತವನ್ನು ಕೊಡಬಹುದು. ಒಂದಂಗಳದಲ್ಲಿ ಒಂದು ಮಾವಿನಗಿಡವಿರುತ್ತದೆ. ಈ ಮಾವಿನ ಗಿಡವನ್ನು ಏತಕ್ಕೆ ಹಾಕಿರುತ್ತಾರೆಂದು ನಾವು ತರ್ಕಿಸುವದಕ್ಕೆ ಹೊರಟಿರುವಾಗ ಒಬ್ಬನು ಮನೆಯ ತೋರಣಕ್ಕೆ ಮಾವಿನ ತಳಿರುಬೇಕಾಗುತ್ತದೆ; ಆದ್ದರಿಂದ ಈ ಗಿಡವನ್ನು ಹಾಕಿಕೊಂಡಿರುತ್ತಾನೆಂದು ಹೇಳುತ್ತಾನೆಂದು ಇಟ್ಟುಕೊಳ್ಳೋಣ. ಅವನ ಮಾತನ್ನೇನೂ ಇಲ್ಲವೆನ್ನುವದಕ್ಕಾಗುವದಿಲ್ಲ. ಏಕೆಂದರೆ ಹಬ್ಬ ಹರಿದಿನಗಳಲ್ಲಿ ಮಾವಿನ ತಳಿರನ್ನು ತೋರಣಕ್ಕೆ ಉಪಯೋಗಿಸುವದುಂಟಾದ್ದರಿಂದ ಅವನು ಹೇಳಿದ್ದು ಯುಕ್ತಿಯುಕ್ತವಾಗಿಯೆ ಇರುತ್ತದೆ. ಆದರೆ ಇನ್ನೊಬ್ಬನು ಈತನ ಮತವನ್ನು ಖಂಡಿಸಿ, “ಛೇ ಛೇ! ಹಾಗಲ್ಲ ಎಲ್ಲಿಯೋ ಒಂದು ದಿನ ಮಾವಿನ ತಳಿರನ್ನು ಉಪಯೋಗಿಸುವ ಮಾತ್ರದಿಂದ ಅದಕ್ಕಾಗಿಯೆ ಗಿಡವನ್ನು ಬೆಳೆಸುತ್ತಿದ್ದಾರೆನ್ನಬಹುದೆ? ಈ ಗಿಡದಿಂದ ಬೇಕಾದಷ್ಟು ತರಗೆಲೆಗಳೂ, ಕಡ್ಡಿಗಳೂ ಮನೆಯವರಿಗೆ ಆಗಾಗ್ಗೆ ಸಿಕ್ಕುತ್ತವೆ. ಒಲೆಯನ್ನು ಹಚ್ಚುವದಕ್ಕೆ ಮಾವಿನ ಎಲೆಯೂ ಕಡ್ಡಿಯೂ ತುಂಬ ಉಪಯೋಗವಾಗಿರುತ್ತದೆ. ಈ ಕಾರಣದಿಂದಲೆ ಗಿಡವನ್ನು ಹಾಕಿರಬೇಕು'' ಎನ್ನುತ್ತಾನೆಂದು ಇಟ್ಟುಕೊಳ್ಳಿ. ಆಗ ಅವನ ಮಾತಿಗೂ ಯುಕ್ತಿ ಇದೆ. ಮಾವಿನ ಕಡ್ಡಿಯನ್ನೂ ಎಲೆಯನ್ನೂ ಬೆಂಕಿಗೆ ಉಪಯೋಗಿಸುವದು ನಮ್ಮ ಅನುಭವದಲ್ಲಿಯೂ ಇರುತ್ತದೆ. ಆದ್ದರಿಂದ ಅದು ಅನುಭವಕ್ಕೆ ಹೊಂದುತ್ತದೆ. ಆದರೂ ಮೂರನೆಯವನೊಬ್ಬನು ಕಳಿತ ಮಾವಿನ ಹಣ್ಣೆರಡನ್ನು ಕಿತ್ತು ನಮ್ಮ ಕೈಯಲ್ಲಿಟ್ಟು “ಇಗೋ ನೋಡಿ! ಇದಕ್ಕೋಸ್ಕರವೆ ಗಿಡವನ್ನು ಹಾಕಿರುವದು, ತಳಿರು, ಕಡ್ಡಿ, ತರಗೆಲೆ, ನೆರಳು- ಇವುಗಳೂ ಈ ಗಿಡದಿಂದಾಗುವ ಪ್ರಯೋಜನಗಳೇ ಹೌದು ; ಆದರೆ ಅದಕ್ಕೋಸ್ಕರವೇ ಗಿಡವನ್ನು ಹಾಕಿರುವದಿಲ್ಲ. ಅವೆಲ್ಲ ನಡುನಡುವೆ ಸಿಕ್ಕುವ ಪ್ರಯೋಜನಗಳು. ಮಾವಿನಗಿಡದ ಪರಮಪ್ರಯೋಜನವೆಂದರೆ ಈ ಹಣ್ಣಿ. ಬೇಕಾದರೆ ಇದನ್ನು ಸವಿನೋಡಿ. ಮಾವಿನಗಿಡದ ಹಾಗೆ ಮನೋಹರವಾದ ತಳಿರು ಬೇರೆಕಡೆ ಸಿಕ್ಕಬಹುದು, ಸೌದೆಯೂ ನೆರಳೂ ಅವಶ್ಯವಾಗಿ ಬೇರೆಕಡೆ ಸಿಕ್ಕೇ ಸಿಕ್ಕುವವು; ಆದರೆ ಮಾವಿನಹಣ್ಣಿನ ಸವಿಯನ್ನು ಮತ್ತೆಲ್ಲಿ ಕಂಡಿರುವಿರಿ?'' ಎಂದು ಕೇಳಿದರೆ ಆಗ ನಮ್ಮ ಮನಸ್ಸಿನ ಮೇಲೆ ಎಂಥ ಪರಿಣಾಮವಾಗುವದು! ಈ ಅನುಭವವೂ ಯುಕ್ತಿಯೂ ಉಳಿದವುಗಳೆಲ್ಲಕ್ಕಿಂತಲೂ ವ್ಯಾಪಕವೆಂದು ನಾವು ಕೂಡಲೆ ಒಪ್ಪಿಕೊಂಡು ಬಿಡುವೆವಲ್ಲವೆ ?
ಭಗವದ್ಗೀತೆಯ ತಾತ್ಪರ್ಯದ ನಿರ್ಣಯದ ವಿಷಯವೂ ಹೀಗೆಯೇ ಸರಿ. ಅಲ್ಲೊಂದು ಶ್ಲೋಕ, ಇಲ್ಲೊಂದು ಶ್ಲೋಕ ಹೀಗೆ ತೆಗೆದು ತಮಗೆ ತೋಚಿದ ತಾತ್ಪರ್ಯವನ್ನು ಹಿಂಡಿ ತೆಗೆಯುವವರಿಗಿಂತ ಮೊದಲಿಂದ ಕೊನೆಯವರೆಗೂ ಹೊಂದುಗಡೆಯಾಗುವಂತೆ ತಾತ್ಪರ್ಯವನ್ನು ತೆಗೆದಿಡುವವರು ಜಾಣರೇ ಸರಿ. ಅವರನ್ನು ನಾವು ಮೆಚ್ಚಬೇಕು. ಅವರ ಜಾಣ್ಮೆಯನ್ನು ಕೊಂಡಾಡಬೇಕು. ಆದರೆ ಅವರು ಹೇಳುವದೇ ಭಗವದ್ಗೀತೆಯ ತಾತ್ಪರ್ಯವೆಂದು ನಮಗೆ ಮನಗಾಣಬೇಕಾದರೆ ಗೀತೆಗೂ ಭಾರತಕ್ಕೂ ಹೊಂದುಗಡೆಯಾಗಬೇಕು, ಗೀತೆಗೂ ಉಪನಿಷತ್ತುಗಳಿಗೂ ಹೊಂದುಗಡೆಯಾಗಬೇಕು, ಗೀತೆಗೂ ಸೂತ್ರಗಳಿಗೂ ಹೊಂದುಗಡೆಯಾಗಬೇಕು. ಇಷ್ಟೇ ಸಾಲದು. ಗೀತೆಗೂ, ಸಾರ್ವತ್ರಿಕವಾದ ಮಾನವಾನುಭವಕ್ಕೂ ಹೊಂದುಗಡೆಯಾಗಬೇಕು. ಅಂಥ ಅರ್ಥವನ್ನು ಕೇಳಿದರೆ ನಾವು ಸುಮ್ಮನೆ ಚಪ್ಪಾಳೆ ಹಾಕುವದಿಲ್ಲ, ಸುಮ್ಮನೆ ತಲೆದೂಗುವದಿಲ್ಲ, ಸುಮ್ಮನೆ ಅವರು ಹೇಳಿದ್ದನ್ನು ಮತ್ತೊಬ್ಬರಿಗೆ ಪಾಠಹೇಳಿ ಮುಗಿಸಿಬಿಡುವದಿಲ್ಲ; ಅದನ್ನು ತಿಳಿದುಕೊಂಡದ್ದೇ ನಮ್ಮ ಜೀವನದ ಸಾಫಲ್ಯವೆಂದು ಎಣಿಸಿ, ಅದರಲ್ಲಿರುವ ಉಪದೇಶಗಳನ್ನು ನಮ್ಮ ಬಾಳುವೆಯಲ್ಲಿ ಆಚರಣೆಗೆ ತರುವಂತೆ ಅವು ನಮ್ಮ ರಕ್ತನಾಳಗಳಲ್ಲೆಲ್ಲ ಹರಿದಾಡುವಂತೆಯೂ ನಮ್ಮ ರೋಮರೋಮಗಳಲ್ಲೆಲ್ಲ ತುಂಬಿ ತುಳುಕುವಂತೆಯೂ ಮಾಡಿಕೊಳ್ಳುವದಕ್ಕೆ ಪ್ರಯತ್ನಿಸುವೆವು. ಭಗವದ್ಗೀತೆಯ ಅರ್ಥವನ್ನು ಹೀಗೆ ತಿಳಿದು ಮನಗಂಡು ತನ್ನ ಜೀವನಕ್ರಮಕ್ಕೆ ಹೊಂದಿಸಿಕೊಳ್ಳಬೇಕೆಂದು ಪ್ರಯತ್ನಿಸುವವರೇ ಧನ್ಯರು. ಅವರೇ ಗೀತಾತಾತ್ಪರ್ಯವನ್ನು ತಿಳಿದುಕೊಳ್ಳುವದಕ್ಕೆ ಮೊದಲನೆಯ ಅಧಿಕಾರಿಗಳು. ಆ ಅಧಿಕಾರಿಗಳಿಗಾಗಿಯೆ ಭಗವಂತನಿಂದ ಅರ್ಜುನನ ನಿಮಿತ್ತದಿಂದ ಈ ಗೀತೆಯು ಅನುಗೃಹೀತವಾಗಿರುವದೆಂದು ನಮ್ಮೆಲ್ಲರ ನಂಬಿಕೆಯಿದೆ. ಆದ್ದರಿಂದ ಭಗವದ್ಗೀತೆಯ ತಾತ್ಪರ್ಯವೆಂದು ತೆಗೆದದ್ದು ಸಾರ್ವತ್ರಿಕಾನುಭವಕ್ಕೂ ಯುಕ್ತಿಗೂ ವಿರುದ್ಧವಾಗಿರುವದೆಂಬುದು ಎಂದಿಗೂ ಒಪ್ಪದ ಮಾತಾಗಿರುತ್ತದೆ.
ಹೀಗಿರುವದರಿಂದ ಈ ಗ್ರಂಥದಲ್ಲಿ ಭಗವದ್ಗೀತೆಯ ಸಾರವನ್ನು ತೆಗೆಯುವಾಗ ಸುಮ್ಮನೆ ಗ್ರಂಥವನ್ನು ಶೋಧಿಸಬೇಕೆಂಬ ಕುತೂಹಲದಿಂದ ವಿಚಾರ ಮಾಡುವ ದೃಷ್ಟಿಯನ್ನು ಅನುಸರಿಸದೆ, ತತ್ತ್ವಾರ್ಥವನ್ನು ತಿಳಿದುಕೊಳ್ಳಬೇಕೆಂದು ಆದರದಿಂದ ಗೀತೆಯನ್ನು ಓದುವ ಮುಮುಕ್ಷುಗಳನ್ನು ಲಕ್ಷ್ಯದಲ್ಲಿಟ್ಟು ನಾನು ಗ್ರಂಥಗಳಿಂದಲೂ ದೊಡ್ಡವರಿಂದಲೂ ಕೇಳಿ ಮನಗಂಡಿರುವ ಎರಡು ಮಾತುಗಳನ್ನು ಹೇಳುವೆನು. ಗೀತೆಯ ತಾತ್ಪರ್ಯವು ಇದೇ ಎಂದು ಎಲ್ಲರೂ ವಾದಿಸುತ್ತಿರುವ ಈ ಕಾಲದಲ್ಲಿ ನಾನು ಯಾವ ಮತವನ್ನು ಹಿಡಿದರೂ ಅದೇ ನನ್ನ ಸ್ವಂತ ಮತವಾಗುವದೇ ಹೊರತು ಎಲ್ಲರಿಗೂ ಒಪ್ಪಾಗುವ ಸಂಭವವಿಲ್ಲವೆಂದು ನನಗೆ ಗೊತ್ತೇ ಇದೆ. ಆದರೂ ಈಗ ನಾನು ಹೇಳುವ ಅಭಿಪ್ರಾಯಗಳು ನಿಷ್ಪಕ್ಷಪಾತಬುದ್ಧಿಯುಳ್ಳ ವಿಚಾರಕರಿಗೆ ಕೆಲವರಿಗಾದರೂ ಸ್ವಲ್ಪಮಟ್ಟಿಗೆ ಸಹಾಯಕವಾಗುವದಾದರೆ ಅಷ್ಟರಿಂದಲೆ ಕೃತಕೃತ್ಯನೆಂದು ಎಣಿಸುವೆನು. ಪೂರ್ವಾಪರ ವಿಚಾರಪರರಾದವರಿಗೆ ಇದರಲ್ಲಿರುವ ವಿಷಯಗಳು ಬಹುಸಾಧಾರಣವಾಗಿ ಕಾಣಬಹುದಾದರೂ ಅಂಥವರು ನನ್ನ ಬುದ್ಧಿಯಲ್ಲಿರುವ ದೋಷವನ್ನೂ ತಿಳಿಸಿ ಇನ್ನೂ ಹೆಚ್ಚಿನ ವಿಚಾರಗಳ ಕಡೆಗೆ ನನ್ನ ಅವಧಾನವನ್ನು ಎಳೆಯುವದಕ್ಕೆ ಅವಕಾಶವಾದೀತೆಂದು ನಂಬಿರುತ್ತೇನೆ. ಇನ್ನು ಪ್ರಸ್ತಾವವೆಂಬ ಪ್ರಕರಣವನ್ನು ಇಲ್ಲಿಗೆ ಸಾಕುಮಾಡಿ ಗೀತಾರ್ಥವಿಚಾರವನ್ನು ಪ್ರಾರಂಭಿಸುವೆನು.
ಗೀತೆಯಲ್ಲಿ ಉಪದಿಷ್ಟವಾಗಿರುವ ವಿಷಯವೇನು?
ಹಿಂದಿನ ಪ್ರಕರಣದಲ್ಲಿ ಭಗವದ್ಗೀತೆಯ ಸಾರವನ್ನು ತೆಗೆಯುವದಕ್ಕೆ ಉಪಕ್ರಮೋಪಸಂಹಾರಗಳು ಪ್ರಧಾನವಾದ ಸಾಧನವೆಂತಲೂ, ಭಾರತದ ಮಿಕ್ಕ ಭಾಗಗಳ ಹೋಲಿಕೆ ಆಮೇಲೆ ಬರಬೇಕೆಂತಲೂ, ಮಿಕ್ಕ ಗ್ರಂಥಗಳ ಸಂವಾದವನ್ನು ಕೊನೆಗೆ ಉಪಯೋಗಿಸಬೇಕೆಂದೂ— ಹೀಗೆ ಎಲ್ಲಕ್ಕೂ ಏಕವಾಕ್ಯತೆಯನ್ನು ಮಾಡಿದ ಮೇಲೂ ಫಲಿತವಾದ ತಾತ್ಪರ್ಯವನ್ನು ಸಾರ್ವತ್ರಿಕಾನುಭವಕ್ಕೂ (ಯುಕ್ತಿಗೂ) ಹೊಂದಿಸಿನೋಡುವದು ಅಧ್ಯಾತ್ಮಗ್ರಂಥವಾದ ಗೀತೆಯ ವಿಷಯದಲ್ಲಿ ಅತ್ಯಂತ ಆವಶ್ಯಕವೆಂತಲೂ ನಿರ್ಣಯಿಸಿದ್ದಾಯಿತು. ಈ ಪ್ರಕರಣದಲ್ಲಿ ಈ ಕ್ರಮವನ್ನೇ ಅನುಸರಿಸಿ ಗೀತಾರ್ಥನಿರ್ಣಯಕ್ಕೆ ಪ್ರಯತ್ನ ಮಾಡುತ್ತೇನೆ. ಮೊದಲು ಭಗವದ್ಗೀತೆಯ ತಾತ್ಪರ್ಯವನ್ನು ಕುರಿತು ಷಡ್ಲಿಂಗಗಳ ವಿಚಾರವನ್ನು ಆರಂಭಿಸುತ್ತೇನೆ.
ಉಪಕ್ರಮೋಪಸಂಹಾರವೇ ಮುಂತಾದ ಹೆಗ್ಗುರುತುಗಳಿಂದ ಗ್ರಂಥಾರ್ಥವನ್ನು ನಿರ್ಣಯಿಸಬೇಕೆಂಬುದನ್ನು ನಮ್ಮ ದೇಶದ ವ್ಯಾಖ್ಯಾನಕಾರರು ಒಪ್ಪಿರುತ್ತಾರಾದರೂ ತಮ್ಮ ತಮ್ಮ ನಿರ್ಣಯವೇ ಈ ಗುರುತುಗಳಿಂದ ಆಗುವದೆಂದು ಪ್ರತಿಯೊಬ್ಬರೂ ಹಠತೊಟ್ಟಿರುವರು. ಆದ್ದರಿಂದ ಭಗವದ್ಗೀತೆಯ ಉಪಕ್ರಮಾದಿಲಿಂಗಗಳನ್ನು ಕುರಿತು ಮಾತಾಡುವಾಗ ಯಾವದನ್ನು ಉಪಕ್ರಮವಾಗಿ ಭಾವಿಸಬೇಕು ಯಾವದನ್ನು ಉಪಸಂಹಾರವೆಂದು ನಿರ್ಣಯಿಸಬೇಕು?~ ಎಂಬುದನ್ನು ಮೊದಲು ಗೊತ್ತುಮಾಡಿಕೊಳ್ಳುವದು ಒಳ್ಳೆಯದು. ಈ ಸಂದರ್ಭದಲ್ಲಿ ಉಪಕ್ರಮವೆಂದರೇನು? ಉಪಸಂಹಾರವೆಂದರೇನು? ಎಂಬುದನ್ನೂ ವಿಚಾರಿಸಿ ತಿಳಿಯಬೇಕಾಗಿರುತ್ತದೆ. ಕೆಲವರು ಉಪಕ್ರಮವೆಂದರೆ ಪೂರ್ವದ ಕಥಾಸಂದರ್ಭವೆಂದೂ ಉಪಸಂಹಾರವೆಂದರೆ ಕೊನೆಯಲ್ಲಾದ ಕಥಾಸಂದರ್ಭವೆಂದೂ ಫಲವೆಂದರೆ ಕೊನೆಗೆ ಆದ ಪರಿಣಾಮವೆಂದೂ ಅರ್ಥಮಾಡಿಕೊಂಡಿರುವದು (ಗೀತಾರಹಸ್ಯ 25-26)— ಈ ಅರ್ಥದಂತೆ ನೋಡಿದರೆ ಭಗವದ್ಗೀತೆಯ ಉಪಕ್ರಮವು ಅರ್ಜುನನ ವಿಷಾದವು. ಅರ್ಜುನನು ನೆಂಟರಿಷ್ಟರನ್ನು ಗುರುಹಿರಿಯರನ್ನು ದುರ್ಯೋಧನನ ಸೈನ್ಯದಲ್ಲಿ ಕಂಡದ್ದರಿಂದ ಕೃಪೆಯಿಂದ ಕೂಡಿದವನಾಗಿ ಯುದ್ಧವನ್ನು ಮಾಡುವದು ಕ್ಷತ್ರಿಯ ಧರ್ಮವೆಂದು ಶಾಸ್ತ್ರದಲ್ಲಿ ಹೇಳಿದ್ದರೂ ಭಯಂಕರಪಾತಕಗಳಿಗೆ ಕಾರಣವಾಗಿರುವ ಈ ಯುದ್ಧವೂ, ಅದನ್ನು ಮಾಡುವದೆಂಬ ಕ್ಷಾತ್ರಧರ್ಮವೂ, ಯೋಗ್ಯನಾದವನು ಕೈಕೊಳ್ಳುವಂಥದ್ದಲ್ಲವೆಂದು ತಿಳಿದು, ಇಂಥ ಸಂದರ್ಭದಲ್ಲಿ ತಾನೇನು ಮಾಡುವದು ಉತ್ತಮವೆಂದು ಶ್ರೀಕೃಷ್ಣನನ್ನು ಕೇಳಿದನು. ಇದೇ ಗೀತೆಯ ಉಪಕ್ರಮವು. ಶ್ರೀಕೃಷ್ಣನು ಅವನಿಗೆ ಗೀತೆಯ ಉಪದೇಶವನ್ನು ಮಾಡಿ ಅವನನ್ನು ಯುದ್ಧಕ್ಕೆ ಹಚ್ಚಿದನು. ಇದು ಉಪಸಂಹಾರವು. ಅದರಂತೆ ಅರ್ಜುನನು ಯುದ್ಧಮಾಡಿ ಜಯಶೀಲನಾದನು; ಇದು ಫಲವು. ಹೀಗೆ ಉಪಕ್ರಮೋಪಸಂಹಾರಗಳೂ ಫಲವೂ ಇರುವದರಿಂದ ಗೀತೆಯು ಪ್ರವೃತ್ತಿಪರವು ಎಂದರೆ ಕರ್ಮಪರವು ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ತಸ್ಮಾದ್ಯುಧ್ಯಸ್ವ ಭಾರತ (ಗೀ. 2-18)— 'ಎಲೈ, ಅರ್ಜುನನೆ, ಆದಕಾರಣ ಸಮರಕ್ಕನುವಾಗು', ತಸ್ಮಾದುತ್ತಿಷ್ಠ ಕೌನ್ತೇಯ ಯುದ್ಧಾಯ ಕೃತನಿಶ್ಚಯಃ— 'ಆದ್ದರಿಂದ ಯುದ್ಧಮಾಡಲು ನಿಶ್ಚಯಮಾಡಿ ಚಟ್ಟನೆ ಏಳು' (ಗೀ.2-37) ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ— 'ಆದ್ದರಿಂದ ಆಸಕ್ತಿಯನ್ನು ತೊರೆದು ನಿನ್ನ ಕರ್ತವ್ಯ ಕರ್ಮವನ್ನು ಮಾಡು (ಗೀ, 3-19); ಕುರು ಕರ್ಮೈವ ತಸ್ಮಾತ್ತ್ವಮ್ 'ಆದಕಾರಣ ನೀನು ಕರ್ಮವನ್ನು ಮಾಡು' (ಗೀ, 4-15) ಎಂದು ಮೊದಲಾಗಿ ಆಸಕ್ತಿರಹಿತ ಕರ್ಮವನ್ನು ಮತ್ತೆ ಮತ್ತೆ ಅರ್ಜುನನಿಗೆ ಉಪದೇಶಮಾಡಿರುವದು ಅಭ್ಯಾಸವೆಂಬ ಲಿಂಗವಾಗಿರುತ್ತದೆ. ಆದ್ದರಿಂದ ಉಪಕ್ರಮೋಪಸಂಹಾರಗಳೂ, ಫಲವೂ, ಅಭ್ಯಾಸವೂ ಗೀತೆಯು ಕರ್ಮಪರವೆಂಬುದನ್ನು ಸ್ಪಷ್ಟವಾಗಿ ಹೇಳುತ್ತವೆ. ಹೀಗೆಂಬುದು ಗೀತಾರಹಸ್ಯಕಾರರ ಮತವು.
ಮೇಲಿನ ಉಪಕ್ರಮಾದಿಗಳ ವರ್ಣನೆಯು ಸರಿಯಲ್ಲವೆಂಬುದು ನನ್ನ ಅಭಿಪ್ರಾಯವು. ಏಕೆಂದರೆ ಉಪಕ್ರಮೋಪಸಂಹಾರವೇ ಮುಂತಾದ ಲಿಂಗಗಳನ್ನು ತಾತ್ಪರ್ಯವನ್ನು ನಿಶ್ಚಯಿಸುವದಕ್ಕೆ ಉಪಯೋಗಿಸಬೇಕೆಂದು ನಮಗೆ ತಿಳಿಸಿಕೊಟ್ಟಿರುವವರು ಮೀಮಾಂಸಕರು. ಅವರು ಈ ಲಿಂಗಗಳನ್ನು ಹೇಗೆ ವಿವರಿಸುವರೋ ಅದರಂತೆ ನಾವು ತಿಳಿದುಕೊಳ್ಳಬೇಕೇ ಹೊರತು ನಮಗೆ ತಿಳಿದಂತೆ ಈ ಶಬ್ದಗಳಿಗೆ ಬೇರೆ ವ್ಯಾಖ್ಯಾನಗಳನ್ನು ಮಾಡುವದು ಸರಿಯಲ್ಲ. ಭಗವದ್ಗೀತೆಯ ತಾತ್ಪರ್ಯವೆಂದರೇನು ? ಈ ಗ್ರಂಥದಲ್ಲಿ ಏಳುನೂರು ಶ್ಲೋಕಗಳಿವೆ. ಇವುಗಳಲ್ಲಿ ಧೃತರಾಷ್ಟ್ರನ ವಾಕ್ಯದ ಶ್ಲೋಕ 1, ಸಂಜಯನ ಶ್ಲೋಕಗಳು 40, ಅರ್ಜುನನವು 84, ಉಳಿದವೆಲ್ಲ ಶ್ರೀಕೃಷ್ಣನ ಶ್ಲೋಕಗಳು. ಹೀಗಿರುವಲ್ಲಿ ಗೀತೆಯ ತಾತ್ಪರ್ಯವೆಂದರೆ ಧೃತರಾಷ್ಟ್ರನ ತಾತ್ಪರ್ಯವೆ, ಸಂಜಯನ ತಾತ್ಪರ್ಯವೆ, ಅರ್ಜುನನ ತಾತ್ಪರ್ಯವೆ, ಶ್ರೀಕೃಷ್ಣನ ತಾತ್ಪರ್ಯವೆ? ಮೇಲಿನ ವಿಚಾರದಲ್ಲಿ ಈ ಸಂಶಯವನ್ನು ಲೆಕ್ಕಕ್ಕೆ ತೆಗೆದುಕೊಂಡಿರುವದಿಲ್ಲ. ಅಥವಾ ಇದೆಲ್ಲವನ್ನೂ ಬದಿಗೊತ್ತಿ ಭಗವದ್ಗೀತೆಯನ್ನು ಬರೆದ ಮಹಾಭಾರತಕಾರರ ತಾತ್ಪರ್ಯವೇನಿರಬಹುದು? ಎಂಬ ಪ್ರಶ್ನೆಯನ್ನು ಪೂರ್ವಾಪರಸಂದರ್ಭಗಳನ್ನು ನೋಡಿ ಊಹಿಸಿ ಬರೆದಿರುತ್ತದೆ ಎಂದರೂ ಆಗುತ್ತದೆ. ಭಗವದ್ಗೀತೆಯ ತಾತ್ಪರ್ಯವಂತೂ ಇದಾಗುವದಿಲ್ಲ. ಭಗವದ್ಗೀತೆಯೆಂದರೆ ಶ್ರೀಕೃಷ್ಣ ಭಗವಂತನು ಹೇಳಿದ ಉಪದೇಶವು ; ಆದ್ದರಿಂದ ಗೀತೋಪದೇಶದ ತತ್ತ್ವವನ್ನು ನಿರ್ಣಯಿಸಿದರೇ ಭಗವದ್ಗೀತೆಯ ಸಾರವನ್ನು ಗೊತ್ತುಪಡಿಸಿದಂತೆ ಆಗುವದೆ ಹೊರತು ಅತ್ತಿತ್ತ ನೋಡಿ ಕಂಡು ಕೇಳಿದ ಮಾತುಗಳಿಂದ ಊಹೆಮಾಡುವದು ಗೀತಾರ್ಥನಿರ್ಣಯವಾಗಲಾರದು.
ಇನ್ನು ಭಗವಂತನು ಮಾತನಾಡುವದಕ್ಕೆ ಪ್ರಾರಂಭವು ಎಲ್ಲಿಂದಲೆಂದು ನಿರ್ಣಯಮಾಡುವದಕ್ಕೆ ಹೊರಟರೆ—
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ |
ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ ||
ಕೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ ।
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ ||
ಇವೆರಡು ಎಲ್ಲಕ್ಕೂ ಮೊದಲನೆಯ ಶ್ಲೋಕಗಳಾಗಿವೆ. ಅರ್ಜುನನು ಗುರುಗಳನ್ನೂ, ಹಿರಿಯರನ್ನೂ, ನೆಂಟರನ್ನೂ, ಗೆಳೆಯರನ್ನೂ ತಾನು ಕೊಲ್ಲಲಾರೆನೆಂದು ಹೇಳಿ ಬಿಲ್ಲುಬಾಣಗಳನ್ನು ಅತ್ತೊಗೆದು ರಥದಲ್ಲಿ ತಣ್ಣಗೆ ಕುಳಿತುಕೊಂಡದ್ದನ್ನು ಕಂಡು ಶ್ರೀಕೃಷ್ಣನು ಈ ಮಾತುಗಳನ್ನು ಆಡಿದ್ದಾನೆ.
“ಅರ್ಜುನ, ಇಂಥ ವಿಷಮಸಂದರ್ಭದಲ್ಲಿ ಈ ಬುದ್ಧಿಮಾಂದ್ಯವು ನಿನಗೇಕೆ ಬಂದೊದಗಿತು ? ಇದು ಅನಾರ್ಯರಿಗೆ ಮಾತ್ರ ಬರತಕ್ಕದ್ದು. ನರಕಕ್ಕೆ ಕಾರಣವಾದದ್ದು, ಕೆಟ್ಟ ಹೆಸರನ್ನು ತಂದೊಡ್ಡುವಂಥದ್ದು. ಎಲೈ ಪಾರ್ಥನೆ, ಹೇಡಿಯಾಗಬೇಡ, ಇದು ನಿನಗೆ ತಕ್ಕದ್ದಲ್ಲ. ತುಚ್ಛವಾದ ಈ ಎದೆಗುಂದನ್ನು ತೆಗೆದು ಯುದ್ಧಕ್ಕೆ ನಿಲ್ಲು” ಎಂದು ಶ್ರೀಕೃಷ್ಣನು ಹೇಳಿರುತ್ತಾನೆ. ಈ ಮಾತಿನಿಂದ ಶ್ರೀಕೃಷ್ಣನ ಉಪದೇಶವು ಪ್ರಾರಂಭವಾಯಿತೆಂದು ತಿಳಿಯೋಣವೆಂದರೆ ಅರ್ಜುನನಿಗೆ ಗೊತ್ತಿಲ್ಲದ ಹೊಸ ಮಾತೊಂದನ್ನು ಆತನು ಇಲ್ಲಿ ಆಡಿರುವದಿಲ್ಲ. ಅರ್ಜುನನಿಗೆ ಈ ಯುದ್ಧವು ವಿಷಮಸಂದರ್ಭವೆಂದೂ, ಇದರ ಸೋಲುಗೆಲವುಗಳ ಮೇಲೆ ಕೌರವಪಾಂಡವರ ಮುಂದಿನ ಹಣೆಬರಹವನ್ನು ಗೊತ್ತುಹಚ್ಚುವ ಹಾಗಿತ್ತೆಂದೂ ಗೊತ್ತಿರಲಿಲ್ಲವೇನು? ಅವನೇ ಶ್ರೀಕೃಷ್ಣನನ್ನು ಯುದ್ಧಕ್ಕಾಗಿ ಸೇನಾಮುಖದಲ್ಲಿ ರಥವನ್ನು ನಿಲ್ಲಿಸುವಂತೆ ಹೇಳಿರುತ್ತಾನೆ (1.22-23). ಕಾಳಗದಲ್ಲಿ ಗೆದ್ದರೆ ರಾಜ್ಯವೂ ಮಡಿದರೆ ಸ್ವರ್ಗವೂ ದೊರೆಯುವವೆಂಬುದನ್ನು ಅವನು ಅರಿಯನೆ? ಮೂರು ಲೋಕಗಳ ಸುಖವೂ ತನಗೆ ಬೇಡ, ಜಯವೇತಕ್ಕೆ ? ಎಂದು ಹೇಳಿಕೊಂಡಿದ್ದಾನೆ (1.32-35) ಕೌರವರಿಗೆ ಹೆದರಿ ಹೀಗೆ ಮಾತನಾಡುತ್ತಾನೆನ್ನೋಣವೆ? ಸ್ವಜನರನ್ನು ಕಂಡು ತನಗೆ ಕೃಪೆಯುಂಟಾಗಿರುವದೆಂದು ಹೇಳಿಕೊಂಡಿರುತ್ತಾನೆ (1.28-21) ಮುಂದೆಯೂ ''ಭೀಷ್ಮದ್ರೋಣಾದಿಗಳನ್ನು ಹೇಗೆ ಕೊಲ್ಲಲಿ? ಅವರು ಪೂಜಾರ್ಹರಲ್ಲವೆ? ಅವರನ್ನು ಕೊಲ್ಲುವದು ಧರ್ಮವೆನಿಸೀತೆ? ನನಗೆ ಈಗ ಯಾವದು ಧರ್ಮವೋ ತಿಳಿಯಲೊಲ್ಲದು. (ಧರ್ಮಸಂಮೂಢಚೇತಾಃ); ನನಗೆ ಯಾವದರಿಂದ ಶ್ರೇಯಸ್ಸಾದೀತೋ ನಿಶ್ಚಯವಾಗಿ ತಿಳಿದು ಹೇಳು, ನಾನು ನಿನಗೆ ಶಿಷ್ಯನೆಂದು ಎಣಿಸಿಕೊ'' (2.4-6) ಎಂದು ಹೇಳಿಕೊಂಡಿರುತ್ತಾನೆ. ಆದ್ದರಿಂದ ಈ ಶ್ಲೋಕಗಳ ತಾತ್ಪರ್ಯವನ್ನು ನಾವು ಏನೆಂದು ಕಲ್ಪಿಸಬೇಕಾಯಿತು? ಇಲ್ಲಿ ಭಗವಂತನು ತನ್ನ ಹೊಸ ಅಭಿಪ್ರಾಯವನ್ನೇನೂ ಹೇಳಲಿಲ್ಲ. ಪ್ರಪಂಚದ ಜನರ ದೃಷ್ಟಿಯಿಂದ ಯುದ್ಧದಿಂದ ಉಂಟಾಗುವ ಗೆಲುವೂ, ಲಾಭಕೀರ್ತಿ ಇವುಗಳನ್ನೂ, ಹೇಡಿತನದಿಂದಾಗುವ ಸೋಲು, ನಷ್ಟ ಕೆಟ್ಟಹೆಸರು ಇವುಗಳನ್ನೂ ಇನ್ನೊಂದು ಸಲ ವೀರಕ್ಷತ್ರಿಯನಾದ ಅರ್ಜುನನ ಕಣ್ಣಮುಂದೆ ಇಟ್ಟು “ಅರ್ಜುನ, ಚೆನ್ನಾಗಿ ನೋಡು. ಯುದ್ಧಮಾಡುವದು ನಿನಗೆ ಒಳ್ಳೆಯದಲ್ಲವೆ?' ಎಂದನು. ಆದರೆ ಅರ್ಜುನನು ಲಾಭಾಲಾಭಗಳ ಲೆಕ್ಕವನ್ನು ಮನಸ್ಸಿಗೆ ಹಚ್ಚಿಕೊಂಡು ಯಾವ ಕೆಲಸವನ್ನಾದರೂ ಮಾಡುವದಕ್ಕೆ ಸಿದ್ಧವಾಗಿರುವ ಸಾಮಾನ್ಯರ ದೃಷ್ಟಿಯನ್ನು ಅನುಸರಿಸುವ ಸ್ಥಿತಿಯಲ್ಲಿರಲಿಲ್ಲ. ಅವನಿಗೆ ಧರ್ಮವೊಂದು ಗೊತ್ತಾಗಬೇಕಾಗಿತ್ತು. 'ಪೂಜ್ಯರಾದ ಭೀಷ್ಮಾದಿಗಳನ್ನು ಕೊಂದು ಜಯಶೀಲರಾಗುವದು ಧರ್ಮವೋ, ಅಂಥ ಪಾತಕಕ್ಕೆ ಎಳೆತರುವ ಯುದ್ಧವನ್ನು ಕೈಬಿಡುವದು ಧರ್ಮವೊ?' – ಎಂಬುದು ಅವನಿಗೆ ಬಂದೊದಗಿದ್ದ ಸಂಶಯವು ; ಅವನ ಆಗಿನ ಮನಸ್ಸಿನ ಬಲವನ್ನು ನೋಡಿಕೊಂಡರೆ ಕ್ಷತ್ರಿಯಧರ್ಮವಾದರೂ ಸ್ವಜನರನ್ನು ಕೊಲ್ಲುವಂಥ ಯುದ್ಧವು ಧರ್ಮವಾಗಲಾರದೆಂದು ಅವನಿಗೆ ತೋರುತ್ತಿತ್ತು. ಆದ್ದರಿಂದ ಅರ್ಜುನನ ಈ ಮನಸ್ಥಿತಿಯನ್ನು ವಾಚಕರ ಮುಂದೆ ಸ್ವಲ್ಪದರಲ್ಲಿಡುವದಕ್ಕೆಂದು ವೇದವ್ಯಾಸರು ಈ ಭಗವದ್ವಚನಗಳನ್ನು ಇಲ್ಲಿ ತಂದಿರುತ್ತಾರೆಂಬುದು ಸ್ಪಷ್ಟವಾಗಿರುತ್ತದೆ. ಈ ಕಾರಣಗಳಿಂದ ಭಗವಂತನ ಉಪದೇಶಕ್ಕೆ ಈ ಶ್ಲೋಕಗಳು ಉಪಕ್ರಮವಲ್ಲ, ಉಪದೇಶಕ್ಕೆ ಇವು ಪೀಠಿಕೆಯಾಗಿವೆ.
ಇಲ್ಲಿಂದ ಮುಂದಕ್ಕೆ ಸಾಗಿದರೆ,
ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ |
ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ ||
ಎಂದು ಭಗವಂತನ ವಾಕ್ಯವು ಮೊದಲಾಗಿರುವದು. ಈ ಶ್ಲೋಕದ ಅರ್ಥವನ್ನು ನೋಡಿರಿ— “ಯಾರನ್ನು ಕುರಿತು ಶೋಕಿಸತಕ್ಕದ್ದಲ್ಲವೋ ಅಂಥವರನ್ನು ಕುರಿತು ನೀನು ಶೋಕಮಾಡುತ್ತಿರುವೆ. ತಿಳಿದವರಾಡುವಂಥ ಮಾತುಗಳನ್ನೂ ಆಡುತ್ತಿದ್ದೀಯೆ ! ಇದೆಂಥ ರೀತಿಯು ! ಜ್ಞಾನಿಗಳಾದವರು ಸತ್ತವರಿಗಾಗಲಿ ಇದ್ದವರಿಗಾಗಲಿ ಶೋಕಿಸುತ್ತಿರುವದಿಲ್ಲ.” (2.11) ಎಂದು ಮೊದಲುಮಾಡಿರುತ್ತಾನೆ.
ಈ ಶ್ಲೋಕದಿಂದ ಮೊದಲಾಗಿರುವ ಭಗವಂತನ ಮಾತಿನ ಕ್ರಮವೇ ಬೇರೆ. ಅರ್ಜುನನಿಗೆ ಈ ವಿಚಾರವೇ ಇದುವರೆಗೆ ತಿಳಿಯದು. ಅವನಿಗೆ ನಾನು, ನನ್ನದು ಎಂಬ ಮಾತುಗಳೇ ಗೊತ್ತು. ದೂರದೂರಕ್ಕೆ ಇರುವವರೆಗೂ ನಮಗೆ ತೊಂದರೆಯನ್ನುಂಟುಮಾಡುತ್ತಿದ್ದ ದುರ್ಯೋಧನನನ್ನು ಸದೆಬಡಿದು ರಾಜ್ಯವನ್ನು ಗೆದ್ದುಕೊಂಡು ಧರ್ಮರಾಯನಿಗೆ ಪಟ್ಟಾಭಿಷೇಕವನ್ನು ಮಾಡಿ ಅವನ ಸೇವೆಯಲ್ಲಿ ನಿಂತರೆ ತನ್ನ ಕರ್ತವ್ಯವು ನೆರವೇರಿದಂತಾಗುವದೆಂದು ಎಣಿಸಿಕೊಂಡಿದ್ದಾನೆ. ಈಗ ಯುದ್ಧಕ್ಕೆ ಬಂದು ನಿಂತಿರುವಾಗ ತನ್ನೆದುರಿಗೆ ನಿಂತಿರುವ ಹನ್ನೊಂದಕ್ಷೌಹಿಣೀ ಸೈನ್ಯದಲ್ಲಿ ತನ್ನವರೇ ಎನಿಸಿಕೊಂಡಿರುವ ಎಷ್ಟೋ ಜನರನ್ನು ಕಂಡನು. ಅವರಲ್ಲಿಯೂ ಭೀಷ್ಮದ್ರೋಣರಂಥ ಗುರುಹಿರಿಯರು ಕಣ್ಣೆದುರಿಗೆ ಗೋಚರವಾಗುತ್ತಲೂ ಅವನ ಮನಸ್ಸಿನ ಪರಿಸ್ಥಿತಿಯೇ ಮಾರ್ಪಟ್ಟುಹೋಯಿತು. ಈಗ ಎದುರಿನ ಸೈನ್ಯದವರೂ ತನ್ನವರು, ಇತ್ತ ಕಡೆಯವರೂ ತನ್ನವರು ; ಯಾರ ಮೇಲೆ ಕೈ ಮಾಡುವದು ? ಗುರುಹಿರಿಯರನ್ನು ನೆಂಟರಿಷ್ಟರನ್ನು ಕೊಂದು ಬಾಳುವದೆ? ಎಂಬ ಯೋಚನೆ ಬಲವಾಗಿ ಹತ್ತಿಕೊಂಡಿತು. ಈ ತೊಡಕಿನಿಂದ ಅವನಿಗೆ ಬಿಡುಗಡೆ ತೋರಲಿಲ್ಲ. ಇಂಥ ಸಂದರ್ಭದಲ್ಲಿ ಶ್ರೀಕೃಷ್ಣನು ಅವನಿಗೆ ಶೋಕಕಾರಣವಾದ ಅಜ್ಞಾನವನ್ನು ಕಳೆಯಬೇಕೆಂದು ಜ್ಞಾನೋಪದೇಶಕ್ಕೆ ಹೊರಟಿರುತ್ತಾನೆ. ಹಾಗೆ ನೋಡಿದರೆ ಭಗವದ್ಗೀತೆಯ ಉಪಕ್ರಮವು ಯಾವದಾಗುವದು? 'ಅಶೋಚ್ಯರಾದವರನ್ನು ಕುರಿತು ನೀನು ಶೋಕ ಮಾಡುತ್ತಿರುವೆ' ಎಂದು ಉಪದೇಶವನ್ನು ಮಾಡುವ ಜ್ಞಾನವೇ ಉಪಕ್ರಮವು. ಗೀತೆಯ ಎರಡನೆಯ ಅಧ್ಯಾಯದಲ್ಲಿ ಈ (11ನೆಯ) ಶ್ಲೋಕದಿಂದ ಮುಂದೆ 'ದೇಹೀ ನಿತ್ಯಮವಧ್ಯೋऽಯಂ' ದೇಹಸ್ವಾಮಿಯಾದ ಈ ಆತ್ಮನು ಎಂದಿಗೂ ಕೊಲೆಯಾಗತಕ್ಕವನಲ್ಲ (2.20) ಎಂಬವರೆಗಿನ ಶ್ಲೋಕಗಳೆಲ್ಲ ಈ ಆತ್ಮಜ್ಞಾನವನ್ನೇ ಹೇಳುತ್ತವೆ. ಈ ಜ್ಞಾನಕ್ಕೆ 'ಸಾಂಖ್ಯ'ವೆಂಬ ಹೆಸರನ್ನು ಗೀತೆಯಲ್ಲಿ ಕೊಟ್ಟಿರುತ್ತದೆ. ಇದರ ಜತೆಗೆ 'ಯೋಗ'ವೆಂಬ ಮತ್ತೊಂದುಪದೇಶವನ್ನೂ ಭಗವಂತನು ಇದೇ ಅಧ್ಯಾಯದಲ್ಲಿ ಪ್ರಾರಂಭಿಸಿರುತ್ತಾನೆ.
ಏಷಾ ತೇऽಭಿಹಿತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು |
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮಬನ್ಧಂ ಪ್ರಹಾಸ್ಯಸಿ || 2.39 ||
“ಎಲೈ ಪಾರ್ಥನೆ, ಸಾಂಖ್ಯ ವಿಷಯಕವಾದ ಜ್ಞಾನವನ್ನು ಇದುವರೆಗೆ ಹೇಳಿದೆನು. ಇನ್ನು ಯೋಗವಿಷಯದ ಜ್ಞಾನವನ್ನು ಕೇಳು. ಈ ಯೋಗಬುದ್ಧಿಯಿಂದ ಕೂಡಿದೆಯೆಂದರೆ ಕರ್ಮದ ಕಟ್ಟನ್ನು ಕಡಿದುಹಾಕಿಕೊಳ್ಳಬಹುದು''
ಎಂಬುದು ಈ ಶ್ಲೋಕದ ಅರ್ಥವು. ಈ ಶ್ಲೋಕದಲ್ಲಿ 'ಯೋಗ'ವೆಂಬ ಹೊಸ ಮಾತನ್ನೊಂದನ್ನು ತಂದು ಅದನ್ನು ಹೊಗಳುತ್ತಾ ಮುಂದೆ ಹೀಗೆಂದು ಹೇಳಿರುತ್ತಾನೆ.
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಙ್ಗೋऽಸ್ತ್ವಕರ್ಮಣಿ ||
ಯೋಗಸ್ಥಃ ಕುರು ಕರ್ಮಾಣಿ ಸಙ್ಗಂ ತ್ಯಕ್ತ್ವಾ ಧನಂಜಯ |
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ ||
ಈ ಎರಡು ಶ್ಲೋಕಗಳ ಭಾವಾರ್ಥವೇನೆಂದರೆ ''ಕರ್ಮವನ್ನು ಮಾತ್ರ ಮಾಡುವದರಲ್ಲಿ ನಿನಗೆ ಸಂಬಂಧವಿರಬೇಕು, ಅವುಗಳ ಫಲಗಳ ಗೋಜಿಗೆ ಹೋಗದೆ ಇರು. ಕರ್ಮಗಳ ಫಲಕ್ಕೆ ಕಾರಣನಾಗದೆ ಇರಬೇಕು, ಆದರೂ ಕರ್ಮವನ್ನು ಮಾಡಬಾರದೆಂಬುದರಲ್ಲಿ ಮಾತ್ರ ನಿನಗೆ ಇಚ್ಛೆಯುಂಟಾಗಬಾರದು. ಧನಂಜಯನೆ, ಕರ್ಮದಿಂದ ಸಿದ್ಧಿಯಾಗಲಿ ಆಗದಿರಲಿ ಎರಡರಲ್ಲಿಯೂ ಸಮದೃಷ್ಟಿಯಿಂದಿದ್ದುಕೊಂಡು ಯೋಗದಲ್ಲಿ ನಿಂತು ಸಂಗವನ್ನು ಬಿಟ್ಟು ಕರ್ಮಗಳನ್ನು ಮಾಡು. ಈ ಸಮತೆಯೇ ಯೋಗವೆನಿಸುವದು'' (2.47-48).
ಇವೆರಡು ಶ್ಲೋಕಗಳನ್ನೂ ನೋಡಿದರೆ ಅರ್ಜುನನು ಕರ್ಮವನ್ನು ಮಾಡಬೇಕೆಂದೂ ಆದರೆ ಅವುಗಳ ಸಿದ್ಧಿಗಳ ಕಡೆಗೆ ಲಕ್ಷ್ಯಹಾಕದೆ ಅನಾಸಕ್ತಿಯಿಂದಿರಬೇಕು, ಕರ್ಮದ ಫಲವು ಸಿದ್ದಿಯಾಗಲಿ, ಸಿದ್ದಿಯಾಗದಿರಲಿ ಎರಡರಲ್ಲಿಯೂ ಸಮಭಾವದಿಂದ ಇದ್ದುಕೊಂಡೇ ಕರ್ಮಮಾಡಬೇಕೆಂದೂ ಈ ಸಮಭಾವಕ್ಕೆ ಯೋಗವೆಂಬ ಹೆಸರೆಂದೂ ಭಗವಂತನು ಉಪದೇಶಮಾಡಿರುವದು ಕಂಡುಬರುತ್ತದೆ. ಈ ಯೋಗವೆಂಬುದೂ ಅರ್ಜುನನಿಗೆ ಹಿಂದೆ ತಿಳಿದ ಮಾತಲ್ಲ, ಭಗವಂತನು ಹೊಸದಾಗಿ ಉಪದೇಶಮಾಡಿರುತ್ತಾನೆ. ಹೀಗೆ ಸಾಂಖ್ಯ, ಯೋಗ ಈ ಎರಡೂ ಉಪದೇಶಗಳನ್ನು ಭಗವಂತನು ಮಾಡಿರುತ್ತಾನೆ. ಮುಂದಿನ ಅಧ್ಯಾಯದಲ್ಲಿಯೂ ಭಗವಂತನು—
ಲೋಕೇಽಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ |
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ ||
“ಎಲೈ ನಿರ್ದುಷ್ಟನಾದ ಅರ್ಜುನನೆ, ಹಿಂದೆ ನಾನು ಲೋಕದಲ್ಲಿರುವ ಜನರಿಗಾಗಿ ಎರಡು ನಿಷ್ಠೆಗಳನ್ನು ಹೇಳಿರುವೆನು. ಸಾಂಖ್ಯರಿಗೆ ಜ್ಞಾನಯೋಗದ ನಿಷ್ಠೆಯು, ಯೋಗಿಗಳಿಗೆ ಕರ್ಮಯೋಗದ ನಿಷ್ಠೆಯು - ಇವೇ ಆ ಎರಡು ನಿಷ್ಠೆಗಳು” (3.3) ಎಂದು ತಾನೇ ವಿಂಗಡಿಸಿರುವದರಿಂದ ಜ್ಞಾನ, ಕರ್ಮ ಎಂಬ ಸಾಧನಗಳ ನಿಷ್ಠೆಯನ್ನು ಕ್ರಮವಾಗಿ ಸಾಂಖ್ಯರಿಗೂ, ಯೋಗಿಗಳಿಗೂ ಭಗವದ್ಗೀತೆಯಲ್ಲಿ ಹೇಳಿರುತ್ತದೆಯೆಂದು ಇಟ್ಟುಕೊಳ್ಳುವದು ಸರ್ವಸಮ್ಮತವಾದದ್ದಾಗುವದು. ಆದ್ದರಿಂದ ಗೀತೆಯ ಉಪಕ್ರಮವನ್ನು ನೋಡಿದರೆ ಎಂದರೆ ಭಗವದ್ಗೀತೆಯನ್ನು ಉಪದೇಶಮಾಡಿರುವ ಕ್ರಮವು ಪ್ರಾರಂಭವಾಗಿರುವದನ್ನು ನೋಡಿದರೆ ಸಾಂಖ್ಯ, ಯೋಗ ಇವೆರಡೂ ಗೀತೆಯಲ್ಲಿ ಉಪದಿಷ್ಟವಾಗಿರುವವೆಂದು ಹೇಳಬೇಕಾಗುತ್ತದೆ.
ಇನ್ನು ಗೀತೆಯ ಉಪಸಂಹಾರವನ್ನು ನೋಡೋಣ. ಉಪಕ್ರಮವೂ ಉಪಸಂಹಾರವೂ ಹೊಂದಿಗೆಯಾದರೆ ಗ್ರಂಥದ ತಾತ್ಪರ್ಯವನ್ನು ಬಹುಮಟ್ಟಿಗೆ ನಿರ್ಣಯ ಮಾಡಿದಂತೆಯೇ. ಇವೆರಡೂ ಒಂದೇ ಬಗೆಯಲ್ಲಿದ್ದರೆ ಗ್ರಂಥಕಾರನ ಹೃದಯವು ಏತರಲ್ಲಿರುವದೆಂಬುದು ತಾನೇ ಸ್ಫುಟವಾಗುವದು. ಒಂದು ವೇಳೆ ಇವುಗಳಲ್ಲಿ ಒಂದಕ್ಕೊಂದಕ್ಕೆ ವಿರೋಧವೇನಾದರೂ ತೋರಿದರೆ ಆಗ ನಮ್ಮ ಮನಸ್ಸು ತೂಗಾಡುವದಕ್ಕೆ ಪ್ರಾರಂಭಿಸಿ 'ಮೊದಲು ಹಾಗೆ ಹೇಳಿತ್ತು, ಈಗ ಹೀಗೆ ಹೇಳಿದೆಯಲ್ಲ! ಗ್ರಂಥಕಾರನ ಆಶಯವೇನಿರಬಹುದು?' ಎಂದು ತಬ್ಬಿಬ್ಬಾಗುವದು. ಆಗ ಮಿಕ್ಕ ತಾತ್ಪರ್ಯಲಿಂಗಗಳನ್ನು ನೋಡಿದ ಮೇಲೆಯೇ ನಮ್ಮ ಮನಸ್ಸಿಗೆ ನಿಶ್ಚಯವು ಹುಟ್ಟಬೇಕಾಗುವದು. ಹಾಗಿಲ್ಲದೆ ಉಪಕ್ರಮೋಪಸಂಹಾರಗಳು ಒಂದಾದರೆ ಇಂಥ ತಂಟೆಯೇನೂ ಇರುವದಿಲ್ಲ. ಈ ಕಾರಣದಿಂದಲೆ ಉಪಕ್ರಮೋಪಸಂಹಾರಗಳೆರಡೂ ಸೇರಿ ಒಂದೇ ತಾತ್ಪರ್ಯಲಿಂಗವೆಂದು ಅನೇಕರು ಹೇಳಿರುತ್ತಾರೆ. ಆದಕಾರಣ ಗ್ರಂಥವನ್ನು ಮುಗಿಸುವ ಕಾಲಕ್ಕೆ ಭಗವಂತನು ಏನು ಹೇಳಿರುತ್ತಾನೋ ನೋಡೋಣ:
ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ ।
ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು ||
ಸರ್ವಗುಹ್ಯತಮಂ ಭೂಯಃ ಶೃಣು ಮೇ ಪರಮಂ ವಚಃ |
ಇಷ್ಟೋऽಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್ ||
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋऽಸಿ ಮೇ ||
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||
“ಹೀಗೆ ಗುಟ್ಟಿನಲ್ಲಿ ಗುಟ್ಟಾಗಿರುವ ಜ್ಞಾನವನ್ನು ನಾನು ನಿನಗೆ ಹೇಳಿರುವೆನು. ಇದೆಲ್ಲವನ್ನೂ ಚೆನ್ನಾಗಿ ಆಲೋಚಿಸಿ ನಿನಗೆ ತಿಳಿದಂತೆ ಮಾಡು. ಗುಟ್ಟುಗಳಲ್ಲೆಲ್ಲ ಗುಟ್ಟೆನಿಸುವ ನನ್ನ ಹೆಚ್ಚಿನ ಮಾತನ್ನು ಮತ್ತೊಮ್ಮೆ ಹೇಳುವೆನು ಕೇಳು. ನೀನು ನನಗೆ ಬಹಳ ಬೇಕಾದವನು, ಆದ್ದರಿಂದ ನಿನಗೆ ಹಿತವನ್ನು ಹೇಳುವೆನು. ನನ್ನಲ್ಲಿಯೇ ಮನಸ್ಸಿಡು, ನನ್ನ ಭಕ್ತನಾಗಿರು, ನನ್ನನ್ನೇ ಪೂಜಿಸು, ನನ್ನನ್ನೇ ನಮಸ್ಕರಿಸು — ಹೀಗೆ ಮಾಡಿದೆಯಾದರೆ ನನ್ನನ್ನೇ ಸೇರಿಕೊಳ್ಳುತ್ತೀಯೆ. ಈ ಮಾತು ಸತ್ಯವೆಂದು ಆಣೆಮಾಡಿ ಹೇಳುತ್ತೇನೆ. ಏಕೆಂದರೆ ನೀನು ನನಗೆ ಬೇಕಾದವನಾಗಿರುತ್ತೀಯೆ. ಸರ್ವಧರ್ಮಗಳನ್ನೂ ಬಿಟ್ಟು ನನ್ನೊಬ್ಬನನ್ನೇ ಶರಣುಹೊಂದು, ನಾನು ನಿನ್ನನ್ನು ಸಕಲ ಪಾಪಗಳಿಂದಲೂ ಬಿಡುಗಡೆ ಮಾಡಿಸುವೆನು, ಶೋಕಿಸದಿರು'' (18.63-66).
ಈ ಉಪಸಂಹಾರವಚನಗಳಲ್ಲಿ ಮೊಟ್ಟಮೊದಲು ನಮ್ಮ ಕಣ್ಣೆದುರಿಗೆ ತಾನೇ ಬಂದು ನಿಲ್ಲುವ ವಿಷಯವು ಯಾವದೆಂದರೆ ಜ್ಞಾನದ ಉಪಸಂಹಾರವು. 'ಇಂತು ನಿನಗೆ ಜ್ಞಾನವನ್ನು ನಾನು ತಿಳಿಯಹೇಳಿರುವೆನು'- ಎಂದು ಭಗವಂತನು ಕಂಠೋಕ್ತವಾಗಿ ತಿಳಿಸಿರುವದರಿಂದ ಜ್ಞಾನವು ಉಪಕ್ರಮದಲ್ಲಿದ್ದಂತೆ ಉಪಸಂಹಾರದಲ್ಲಿಯೂ ಇರುತ್ತದೆಯೆಂಬ ಬಗ್ಗೆ ಯಾವ ಸಂಶಯವೂ ಉಳಿಯಲಿಲ್ಲ. ಈ ವಿಷಯದಲ್ಲಿ ಉಪಕ್ರಮೋಪಸಂಹಾರಗಳ ಏಕವಾಕ್ಯತೆಯಾಯಿತು. ಇನ್ನು ಮುಂದಿನ ವಿಚಾರವನ್ನು ನೋಡಿದರೆ ನನ್ನಲ್ಲಿಯೇ ಮನಸ್ಸಿಟ್ಟಿರು, ನನ್ನ ಭಕ್ತನಾಗಿರು' ಎಂದು ಹೇಳಿರುವ ಮಾತುಗಳಲ್ಲಿ ಈಶ್ವರನನ್ನು ಶರಣುಹೋಗಬೇಕೆಂದು ಹೇಳಿರುತ್ತದೆ. ಇದನ್ನೇ ಭಕ್ತಿಯೆಂದು ರೂಢಿಯಲ್ಲಿ ಕರೆಯುತ್ತಾರೆ. ಪ್ರಾರಂಭದಲ್ಲಿ ಕರ್ಮಯೋಗವನ್ನು ಹೇಳಿ, ಇಲ್ಲಿ ಭಕ್ತಿಯನ್ನು ಹೇಳಿರುವದರಿಂದ ಇವೆರಡೂ ವಾಕ್ಯಕ್ಕೆ ಹೇಗೆ ಮೇಳವಾಗಬೇಕೆಂಬ ಚಿಂತೆಯು ಒದಗುವದು. ಆದ್ದರಿಂದ ಈ ವಿಷಯದಲ್ಲಿ ಗೀತೆಯಲ್ಲಿ ಸಿಕ್ಕುವ ಬೇರೆ ವಚನಗಳನ್ನೂ ಅವುಗಳಲ್ಲಿರುವ ಮಿಕ್ಕ ತಾತ್ಪರ್ಯಲಿಂಗಗಳನ್ನೂ ಪರೀಕ್ಷೆ ಮಾಡಬೇಕಾಗಿರುತ್ತದೆ.
ಈ ಉಪಸಂಹಾರವಾಕ್ಯದ ಕೊನೆಯ ಶ್ಲೋಕವೂ ವಿಚಾರಕ್ಕೆ ಅರ್ಹವಾಗಿರುತ್ತದೆ. ಏಕೆಂದರೆ ''ಸರ್ವಧರ್ಮಗಳನ್ನೂ ಬಿಟ್ಟು ನನ್ನೊಬ್ಬನನ್ನೇ ಶರಣು ಹೊಂದು'' ಎಂಬ ವಚನಕ್ಕೆ ಎರಡೆರಡು ಅರ್ಥವಾಗುವ ಸಂಭವವಿದೆ. ಧರ್ಮಗಳನ್ನೆಲ್ಲ ಬಿಡಬೇಕೆಂದರೆ ಹೇಗೆ? ಎಂಬುದು ಮೊದಲನೆಯ ಪ್ರಶ್ನೆ. ಕೆಲವರು ಜ್ಞಾನದಿಂದ ಎಂದು ಹೇಳುತ್ತಿರುವರು. ಮತ್ತೆ ಕೆಲವರು ಅಹಿಂಸಾ, ಸತ್ಯ, ಮುಂತಾದ ಬೇರೆ ಧರ್ಮಗಳ ಗೋಜಿಗೆ ಹೋಗದೆ ನೀನು ನನ್ನೊಬ್ಬನನ್ನೆ ಭಜಿಸು- ಎಂಬುದು ಅರ್ಥವೆಂದು, (ಗೀ. ರ. 854) ಅರ್ಥಮಾಡಿರುತ್ತಾರೆ. ಅವರ ಈ ಅಭಿಪ್ರಾಯದಲ್ಲಿ ಸರ್ವಧರ್ಮಗಳನ್ನೂ ಬಿಡುವದೆಂದರೆ 'ಈಶ್ವರನಲ್ಲಿ ಭಕ್ತಿಯಿಟ್ಟು ಸ್ವಧರ್ಮೋಚಿತವಾದ ಕರ್ಮಗಳನ್ನು ಮಾಡುವದು' (ಗೀ, ರ. 854). ಆದರೆ ಈ ಅರ್ಥದಲ್ಲಿರುವ ತೊಡಕೇನೆಂದರೆ 'ಸಕಲಧರ್ಮಗಳನ್ನೂ ಬಿಡು' ಎಂಬ ಮಾತಿಗೆ “ಸಕಲಧರ್ಮಗಳನ್ನೂ ಮಾಡು” ಎಂಬ ಅರ್ಥವನ್ನೂ ನಾವು ಇಟ್ಟುಕೊಳ್ಳಬೇಕಾಗುತ್ತದೆ. ಇನ್ನು ‘ನನ್ನೊಬ್ಬನನ್ನೆ ಶರಣುಹೊಂದು' ಎಂಬ ಮಾತಿನ ಅರ್ಥದ ವಿಷಯದಲ್ಲಿಯೂ ವಾದವುಂಟಾಗಿರುವದು. ಸಗುಣನಾದ ಈಶ್ವರನನ್ನು ಭಜಿಸೆಂದು ಇಲ್ಲಿ ಹೇಳಿರುತ್ತದೆಯೆಂದು ಕೆಲವರು ಹೇಳುತ್ತಿದ್ದಾರೆ. ನಿರ್ಗುಣ ಬ್ರಹ್ಮವನ್ನು ಶರಣು ಹೊಂದೆಂದು ಹೇಳಿರುತ್ತದೆಯೆಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಈ ಎರಡರಲ್ಲಿ ಯಾವದು ಸರಿ ? ಎಂಬುದನ್ನು ಗೀತೆಯ ಒಳಗಣ ವಿವರಗಳನ್ನು ನೋಡಿ ತಿಳಿಸಬೇಕಾಗುತ್ತದೆ. ಇದೂ ಅಲ್ಲದೆ ಕರ್ಮ, ಭಕ್ತಿ, ಜ್ಞಾನ - ಈ ಮೂರೂ ಉಪಕ್ರಮೋಪಸಂಹಾರಗಳಿಂದ ನಮ್ಮ ಕಣ್ಣಮುಂದೆ ಬಂದಿರುತ್ತವೆಯಷ್ಟೆ. ಇವುಗಳಿಗೆ ಪರಸ್ಪರ ಸಂಬಂಧವೇನು? ಅರ್ಜುನನು ಕೇಳಿದ ಪ್ರಶ್ನೆಗೂ ಇವಕ್ಕೂ ಏನು ಸಂಬಂಧವಿರುವದು ? ಎಂಬುದನ್ನೂ ಗೀತೆಯ ಬೇರೆಯ ಭಾಗಗಳಿಂದ ತಿಳಿಯಬೇಕಾಗುತ್ತದೆ. ಹೀಗೆ ಉಪಕ್ರಮೋಪಸಂಹಾರಗಳೇ ಅಲ್ಲದೆ ಮಿಕ್ಕ ತಾತ್ಪರ್ಯಲಿಂಗಗಳನ್ನೂ ನೋಡಿ, ಮೇಲೆ ತೋರಿಸಿದ ಸಂದೇಹಗಳನ್ನೆಲ್ಲ ಪರಿಹರಿಸಿಕೊಳ್ಳಬೇಕಾಗಿರುತ್ತದೆ.
ಗೀತೆಯಲ್ಲಿ ಉಳಿದ ತಾತ್ಪರ್ಯಲಿಂಗಗಳು
ಮೇಲೆ ವರ್ಣಿಸಿರುವ ರೀತಿಯಲ್ಲಿ ಗೀತೆಯ ಉಪಕ್ರಮೋಪಸಂಹಾರಗಳನ್ನು ನೋಡಲಾಗಿ ಇದರಲ್ಲಿ ಸಾಂಖ್ಯವು ಅಥವಾ ಜ್ಞಾನಯೋಗವು ಮತ್ತು ಯೋಗವು ಅಥವಾ ಕರ್ಮಯೋಗವು ಇರುವವೆಂದು ಉಪಕ್ರಮದಿಂದ ಕಂಡುಬಂದಿತು. ಇವೆರಡೂ ಅರ್ಜುನನಿಗೆ ಗೊತ್ತಿಲ್ಲದೆ ಇರುವ ಹೊಸ ವಿಷಯಗಳಾದ್ದರಿಂದ 'ಅಪೂರ್ವತೆ' ಎಂಬ ಲಿಂಗವೂ ಇವುಗಳಲ್ಲಿರುತ್ತದೆ ಎಂದು ಗೊತ್ತಾಯಿತು. ಉಪಸಂಹಾರವನ್ನು ನೋಡಲಾಗಿ ಜ್ಞಾನವನ್ನು ಸ್ಪಷ್ಟವಾಗಿ ಉಪಸಂಹಾರಮಾಡಿರುತ್ತದೆಯೆಂದೂ, ಭಕ್ತಿಯನ್ನೂ ತಂದಿರುತ್ತದೆಯೆಂದೂ ತಿಳಿಯಿತು. ಕರ್ಮವನ್ನು ಬಿಟ್ಟಿದೆಯೊ, ಭಕ್ತಿಯಲ್ಲಿಯೇ ಅಡಕಮಾಡಿದೆಯೊ, ಕರ್ಮವನ್ನು ಭಕ್ತಿಗೆ ಅಂಗವಾಗಿ ಹೇಳಿದೆಯೊ, ಭಕ್ತಿಯನ್ನು ಕರ್ಮಕ್ಕೆ ಅಂಗವಾಗಿ ಹೇಳಿರುತ್ತದೆಯೊ, ಕರ್ಮಜ್ಞಾನಗಳಲ್ಲಿ ಯಾವದಕ್ಕೆ ಹೆಚ್ಚಿನ ಪ್ರಾಧಾನ್ಯವನ್ನು ಕೊಟ್ಟಿದೆ? - ಎಂಬ ಈ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರವು ಉಪಕ್ರಮೋಪಸಂಹಾರಗಳಲ್ಲಿ ದೊರೆಯಲಿಲ್ಲ. ಆದ್ದರಿಂದ ಗೀತೆಯನ್ನು ಒಳಹೊಕ್ಕು ಮತ್ತೂ ಪರೀಕ್ಷೆ ಮಾಡಬೇಕಾಯಿತು. ಮೇಲೆ ಹೇಳಿದ ಉಪಸಂಹಾರ ವಾಕ್ಯಗಳ ಜೊತೆಗೆ ಈ ಗೀತೋಪದೇಶವನ್ನು ಭಕ್ತರಲ್ಲದವರಿಗೆ (“ನಾಭಕ್ತಾಯ'') ಹೇಳಕೂಡದೆಂದೂ, (18.67), ಭಕ್ತರಿಗೆ ಹೇಳಿದವರು ಭಗವಂತನನ್ನೇ ಸೇರುವರೆಂದೂ, (18.68) ಅವರು ಭಗವಂತನಿಗೆ ಅತ್ಯಂತ ಪ್ರಿಯರಾಗುವರೆಂದೂ, (18.69) ಭಕ್ತಿಯನ್ನು ಬಹುವಾಗಿ ಹೊಗಳಿದೆ. ಇದರಂತೆ ಶ್ರೀಕೃಷ್ಣಾರ್ಜುನಸಂವಾದವನ್ನು ಯಾರು ಓದುವರೋ ಅವರು ಭಗವಂತನ ಉದ್ದೇಶದಿಂದ 'ಜ್ಞಾನಯಜ್ಞ'ವನ್ನು ಮಾಡಿದಂತೆ ಆಗುವದೆಂದೂ (18.70) ಜ್ಞಾನವನ್ನು ಹೊಗಳಿರುತ್ತದೆ. ಹೀಗೆ ಜ್ಞಾನವನ್ನೂ ಭಕ್ತಿಯನ್ನೂ ಗ್ರಂಥದಲ್ಲಿ ಹೊಗಳಿರುವದರಿಂದ ಈ 'ಅರ್ಥವಾದ'ವೆಂಬ ಲಿಂಗದಿಂದ ಭಕ್ತಿಜ್ಞಾನಗಳ ಕಡೆಗೆ ಗೀತೆಯ ಲಕ್ಷ್ಯವು ಬಹಳವಾಗಿ ಇರುತ್ತದೆಯೆಂಬುದೂ ಸ್ಪಷ್ಟವಾಗುತ್ತದೆ.
ಇನ್ನು 'ಅಭ್ಯಾಸ', 'ಫಲ' ಎಂಬ ಎರಡು ಲಿಂಗಗಳನ್ನು ಪರೀಕ್ಷಿಸಬೇಕು. ಗೀತೆಯಲ್ಲಿ ಯಾವದನ್ನು ಮತ್ತೆಮತ್ತೆ ಒತ್ತಿ ಹೇಳಿರುತ್ತದೆ? ಯಾವದನ್ನು ಫಲಸಮೇತವಾಗಿ ಹೇಳಿ ಮಿಕ್ಕದ್ದನ್ನು ಅದಕ್ಕೆ ಸೇರಿಸಿ ಸಾಧನವಾಗಿ ಹೇಳಿರುತ್ತದೆ ? ಎಂಬುದನ್ನು ಈಗ ನಿರ್ಣಯಿಸಬೇಕು. ಇದಕ್ಕಾಗಿ ಗೀತಾಧ್ಯಾಯಗಳ ಕ್ರಮವನ್ನು ಅನುಸರಿಸಿ ವಿಷಯ ವಿವೇಚನವನ್ನು ಮಾಡುವದು ಅವಶ್ಯವಾಗಿರುತ್ತದೆ. ಹಿಂದೆಯೇ ಹೇಳಿರುವ ರೀತಿಯಲ್ಲಿ ಮೊದಲನೆಯ ಅಧ್ಯಾಯದಲ್ಲೇ ಅಲ್ಲದೆ ಎರಡನೆಯ ಅಧ್ಯಾಯದ 10ನೆಯ ಶ್ಲೋಕದವರೆಗೆ ಅರ್ಜುನನ ಶೋಕಮೋಹಗಳನ್ನು ವಿವರಿಸಿರುತ್ತದೆ. ಮೊದಲನೆಯ ಅಧ್ಯಾಯಕ್ಕೆ 'ಅರ್ಜುನವಿಷಾದಯೋಗ'ವೆಂಬ ಹೆಸರು ಪ್ರಸಿದ್ಧವಾಗಿಯೂ ಇದೆ; ಇದಕ್ಕೆ ಅನುಸಾರವಾಗಿ ಆ ಅಧ್ಯಾಯದ ವಿಷಯವು ಇದ್ದೂ ಇರುತ್ತದೆ. ಅರ್ಜುನನಿಗೆ ಬಂಧುಬಾಂಧವರನ್ನೂ, ಗುರುಹಿರಿಯರನ್ನೂ ಕಂಡು 'ನಾನೂ ಇವರೂ ಅನುಬಂಧಿಗಳು' ಎಂಬ ತಿಳಿವಳಿಕೆಯು ಅವನಲ್ಲಿ ಸ್ವಾಭಾವಿಕವಾಗಿ ಬೇರೂರಿದ್ದುಕೊಂಡಿದ್ದರಿಂದ ಇವರನ್ನೆಲ್ಲ ಕೊಂದರೆ ನನ್ನ ಕಡೆಯವರಾದ ಇವರೆಲ್ಲರೂ ಸಾಯುವರಲ್ಲ', ಅವರ ಸಂಕಟವನ್ನು ಕಂಡು ಹೇಗೆ ಆ ದುಃಖವನ್ನು ಸಹಿಸಿಕೊಳ್ಳಲಿ?' ಎಂಬ ಯೋಚನೆ ಅವನ ಮನಸ್ಸಿಗೆ ಹತ್ತಿಕೊಂಡಿತು. ಆಗ ಅವನಿಗೆ ಕ್ಷತ್ರಿಯ ಧರ್ಮವಾದ ಯುದ್ಧವನ್ನು ಮಾಡಬೇಕೋ ಅಥವಾ ಬಿಡಬೇಕೋ ಎಂಬ ಸಂದೇಹವಾಯಿತು. ಅವರನ್ನೆಲ್ಲ ಕೊಂದು ರಾಜ್ಯಭೋಗವನ್ನು ಅನುಭವಿಸುವದಕ್ಕಿಂತಲೂ ಬ್ರಾಹ್ಮಣರಂತೆ ಭಿಕ್ಷೆಮಾಡಿ ಜೀವಿಸುವದೂ ಕೂಡ ಉತ್ತಮವಾದೀತೆಂದು ಅವನಿಗೆ ತೋರಿತು.
ಹೀಗೆ ಧರ್ಮಸಮ್ಮೂಢನಾಗಿ ಅವನು ಭಗವಂತನನ್ನು ತನಗೆ ಕರ್ತವ್ಯವನ್ನು ತಿಳಿಸಿಕೊಡಬೇಕು ಎಂದು ಬೇಡಿಕೊಳ್ಳಲು ಆತನು (2.30ರವರೆಗೆ) ಸಾಂಖ್ಯವೆಂಬ ಹೆಸರಿನಿಂದ ಆತ್ಮಜ್ಞಾನವನ್ನು ಹೇಳಿರುತ್ತಾನೆ. ಆಮೇಲೆ (2.39ರಿಂದ) ಯೋಗವೆಂಬ ಹೆಸರಿನಿಂದ ಕರ್ಮಯೋಗವನ್ನು ಬೋಧಿಸಿರುತ್ತಾನೆ. ಯೋಗವೆಂದರೆ ಬುದ್ಧಿಯ ಸಮತ್ವವೆಂದು (2.48ರಲ್ಲಿ) ಲಕ್ಷಣವನ್ನು ಕೊಟ್ಟಿರುತ್ತಾನೆ. ಸಾಮಾನ್ಯವಾಗಿ ಜನರು ಕರ್ಮಕ್ಕೆ ಉತ್ತಮ ಫಲವಾಗುವದೆಂದರೆ ಅದಕ್ಕೆ ಹಿಗ್ಗಿ ಅಂಥ ಕರ್ಮವನ್ನು ಮಾಡುವರಷ್ಟೆ? ಹಾಗೆ ಕಾಮ್ಯಕರ್ಮವನ್ನು ಮಾಡುವವರಿಗೆ ಈ ಯೋಗವು ಎಂದರೆ ಬುದ್ಧಿಯ ಸಾಮ್ಯವು ಸಿಕ್ಕಲಾರದು, (2.44) ಎಂದು ಹೇಳಿರುವದಲ್ಲದೆ ಈ ಸಮತೆಯು ಹೇಗಿರಬೇಕೆಂಬುದನ್ನು ಅಧ್ಯಾಯದ ಕೊನೆಯವರೆಗೂ (2.55-68) ವಿವರಿಸಿದ ಮೇಲೆ, “ಸಕಲ ಕಾಮಗಳನ್ನು ತೊರೆದು ಯಾವಾತನು ವ್ಯವಹರಿಸುತ್ತಿರುವನೋ 'ನಾನು' 'ನನ್ನದು' ಎಂಬ ಬುದ್ಧಿಯಿಲ್ಲದ ಆತನೇ ಶಾಂತಿಯನ್ನು ಪಡೆಯುವನು; ಹೀಗಿರುವದೇ 'ಬ್ರಹ್ಮಸ್ಥಿತಿಯು', ಈ ಸ್ಥಿತಿಯನ್ನು ಪಡೆದವನು 'ಬ್ರಹ್ಮನಿರ್ವಾಣ'ವೆಂಬ ಮೋಕ್ಷವನ್ನು ಪಡೆಯುವನು'' ಎಂದು ಅಧ್ಯಾಯವನ್ನು ಮುಗಿಸಿರುತ್ತಾನೆ.
ಹೀಗೆ ಸಾಂಖ್ಯಜ್ಞಾನ, ಯೋಗಜ್ಞಾನ - ಎಂಬ ಎರಡು ಜ್ಞಾನಗಳನ್ನು ಉಪದೇಶಮಾಡಿದ ಮೇಲೆ ಕೊನಗೆ 'ನಾನು' 'ನನ್ನದು' ಎಂಬ ಬುದ್ಧಿಯನ್ನು ಬಿಟ್ಟ ಜ್ಞಾನಿಗೆ ಮಾತ್ರ ಮೋಕ್ಷವನ್ನು ಹೇಳಿದ್ದರಿಂದಲೂ ಅರ್ಜುನನಿಗೆ ಮಾತ್ರ 'ನೀನು ಕರ್ಮವನ್ನೆ ಮಾಡು' (2-47) ಎಂದು ಕರ್ಮಯೋಗವನ್ನು ಬೋಧಿಸಿ ಆ ಯೋಗಕ್ಕೆ ಫಲವನ್ನು ಹೇಳಲಿಲ್ಲವಾದ್ದರಿಂದಲೂ ಜ್ಞಾನವೇ ಕರ್ಮಕ್ಕಿಂತ ಹೆಚ್ಚಿನದೆಂಬುದು ಭಗವಂತನ ಅಭಿಪ್ರಾಯವೆಂದು ತಿಳಿದು ಅರ್ಜುನನು ಹಾಗಾದರೆ ಭಯಂಕರವಾದ ಈ ಯುದ್ಧರೂಪವಾದ ಕರ್ಮದಲ್ಲಿ ನನ್ನನ್ನೇಕೆ ಕಟ್ಟುಮಾಡುತ್ತಿರುವೆ?" (3-1) ಎಂದು ಕೇಳಿದನು. ನಿಜವಾಗಿ ಭಗವಂತನು ಕರ್ಮಕ್ಕೆ ಫಲವು ಇಲ್ಲವೆಂದು ಹೇಳಲಿಲ್ಲ. ಅವನು ಕರ್ಮಯೋಗದಿಂದ 'ಕರ್ಮಬಂಧವನ್ನು ತಪ್ಪಿಸಿಕೊಳ್ಳಬಹುದೆಂದೂ (2-39), ಕರ್ಮಯೋಗಿಯು ಮಾಡಿದ ಕರ್ಮವು ನಾಶವಾಗುವದಿಲ್ಲ; ಮಾಡದೆ ಇದ್ದರೆ ದೋಷವಾಗುವದಿಲ್ಲ; ಸ್ವಲ್ಪಮಟ್ಟಿಗೆ ಇದನ್ನು ಅನುಸರಿಸಿದರೂ ದೊಡ್ಡ ಭಯದಿಂದ ಬಿಡಿಸಿಕೊಂಡಂತಾಗುವದು' ಎಂದು (2-40) ಹೇಳಿರುತ್ತಾನೆ. ಆದರೂ ಸಾಕ್ಷಾತ್ತಾಗಿ ಅದರಿಂದ ಮೋಕ್ಷವಾಗುವದೋ ಇಲ್ಲವೊ, ಪರಂಪರೆಯಾಗಿಯಾದರೂ ಅದರಿಂದ ಅದು ದಕ್ಕುವದೋ ಇಲ್ಲವೋ ಎಂಬಿದು ಅರ್ಜುನನ ಸಂಶಯವಾಗಿರುತ್ತದೆ. ಇದಲ್ಲದೆ ಕರ್ಮಗಳನ್ನು ಮಾಡುವದೊಂದು, ಆತ್ಮಜ್ಞಾನವನ್ನು ಸಂಪಾದನೆ ಮಾಡಿಕೊಳ್ಳುವದೊಂದು ಹೀಗೆ ಎರಡು ಬೇರೆಬೇರೆ ಮಾರ್ಗಗಳನ್ನು ಭಗವಂತನು ಹೇಳಿರುತ್ತಾನಷ್ಟೆ; ಇವೆರಡರಲ್ಲಿ ಯಾವದು ತನಗೆ ಶ್ರೇಷ್ಠವಾದದ್ದು? ಇದರ ನಿಶ್ಚಯವನ್ನು ಇನ್ನೊಮ್ಮೆ ಭಗವಂತನಿಂದ ಮಾಡಿಸಿಕೊಂಡು ಬಿಡಬೇಕು, (3.2) ಎಂದು ಅರ್ಜುನನ ಅಭಿಪ್ರಾಯವಿತ್ತು.
ಅವನ ಈ ಕುತೂಹಲವನ್ನು ನೆರವೇರಿಸುವದಕ್ಕಾಗಿ ಭಗವಂತನು ಮೂರನೆಯ ಅಧ್ಯಾಯವನ್ನು ಮೊದಲು ಮಾಡಿರುತ್ತಾನೆ. ಆತನ ಉಪದೇಶದ ಸಾರವೇನೆಂದರೆ 'ಅರ್ಜುನನೆ! ನಾನು ಸಾಂಖ್ಯರಿಗೆ ಜ್ಞಾನಯೋಗವನ್ನೂ ಯೋಗಿಗಳಿಗೆ ಕರ್ಮಯೋಗವನ್ನೂ ಹೇಳಿರುತ್ತೇನೆ. (3.3) ಕರ್ಮಗಳನ್ನು ಮಾಡದೆ ಇರುವದರಿಂದಲೆ, ಸುಮ್ಮನೆ ಕರ್ಮಗಳನ್ನು ತ್ಯಾಗಮಾಡಿದ ಮಾತ್ರದಿಂದಲೆ, ನೈಷರ್ಮ್ಯವೆಂಬ ಸಿದ್ಧಿಯುಂಟಾಗಲಾರದು. (3.4) ಏಕೆಂದರೆ ಪ್ರಕೃತಿಯ ಗುಣಗಳು ಎಂಥ ಜಾಣನನ್ನಾದರೂ ಕೆಲಸಕ್ಕೆ ಹಚ್ಚುವವು. ಆದ್ದರಿಂದ ಕರ್ಮವನ್ನು ಮಾಡದೆ ಇರುವದೆಂಬುದು ಆಗುವ ಮಾತಲ್ಲ (3.33). ಆದ್ದರಿಂದ ಕೆಲಸಮಾಡದೆ ಇರುವ ಪ್ರಾಣಿಯೇ ನಿಜವಾಗಿ ಇಲ್ಲ (3.5), ಆದ್ದರಿಂದ ಕರ್ಮವನ್ನು ಮಾಡಬೇಕು. ಆದ್ದರಿಂದ ಕರ್ಮಗಳಿಂದ ಬಿಡುಗಡೆಯಾಗಬೇಕಾದರೆ ಎರಡು ಮಾರ್ಗವುಂಟು. ಆತ್ಮಜ್ಞಾನನಿಷ್ಠನಾಗಿ ಅದರಿಂದಲೆ ತೃಪ್ತನಾಗಿರುವದೊಂದು (3.17), ಈಶ್ವರಾರ್ಪಣ ಬುದ್ಧಿಯಿಂದ ನಿಷ್ಕಾಮನಾಗಿ ಸ್ವಧರ್ಮವನ್ನು ಮಾಡುವದೊಂದು (3.30), ಹೀಗೆ ನಿಷ್ಕಾಮಕರ್ಮವನ್ನು ಮಾಡದೆ ಇರುವದಕ್ಕೆ ಕಾಮವು ಅಡ್ಡಬರುವದು; ಆದ್ದರಿಂದ ಈ ಕಾಮವನ್ನು ಗೆಲ್ಲುವದು ಬಹುಮುಖ್ಯವಾದದ್ದು (3.37-41), ಕಾಮವನ್ನು ಸಂಪೂರ್ಣವಾಗಿ ಗೆಲ್ಲುವದಕ್ಕೆ ಬುದ್ಧಿಸಾಕ್ಷಿಯಾದ ಆತ್ಮಸ್ವರೂಪವನ್ನು ಕಂಡುಕೊಳ್ಳಬೇಕು (3.42-43). ಇದನ್ನು ಕಂಡುಕೊಂಡವನಿಗೆ ಕರ್ಮವನ್ನು ಮಾಡುವದರಿಂದಲಾಗಲಿ ಬಿಡುವದರಿಂದಲಾಗಲಿ ಯಾವ ಪ್ರಯೋಜನವೂ ಇಲ್ಲದಿದ್ದರೂ (3.17, 18) ತ್ರಿಗುಣಗಳ ಸ್ವರೂಪವನ್ನೂ ಅವುಗಳ ವ್ಯಾಪಾರವನ್ನೂ ಬಲ್ಲ ಜ್ಞಾನಿಯು ಯಾವ ಕರ್ಮದಲ್ಲಿಯೂ ಆಸಕ್ತಿಯಿಲ್ಲದೆಯೆ ಜನರನ್ನು ಸರಿಯಾದ ಮಾರ್ಗದಲ್ಲಿ ಹಚ್ಚುವದಕ್ಕಾಗಿ ಕರ್ಮಗಳನ್ನೂ ಮಾಡುತ್ತಿರಬಹುದು (3.25). ಈ ಲೋಕಸಂಗ್ರಹವೊಂದನ್ನು ಬಿಟ್ಟರೆ ಜ್ಞಾನಿಗೆ ಮತ್ತೇನೂ ಕರ್ತವ್ಯವಿರುವದಿಲ್ಲ (3.17): ಜನಕನೇ ಮೊದಲಾದವರು ಇದಕ್ಕೆ ಉದಾಹರಣೆ (3.20). ಭಗವಂತನ ಆಚರಣೆಯೂ ಇದಕ್ಕೆ ಉದಾಹರಣೆಯು (3.22-24). ಈ ಭಗವಂತನ ಮತವನ್ನು ಅನುಸರಿಸಿ ಯಾರು ನಡೆಯುವರೋ ಅವರಿಗೂ ಕರ್ಮದಿಂದ ಬಿಡುಗಡೆಯಾಗುವದು. ಯಾರು ನಡೆಯುವದಿಲ್ಲವೋ ಅವರಿಗೆ ಧರ್ಮದ ಜ್ಞಾನವಾಗಲಿ ಆತ್ಮಜ್ಞಾನವಾಗಲಿ ತಿಳಿಯದೆಂದು ನಿಶ್ಚಯಿಸಬೇಕು (3.32). ಇದು ಮೂರನೆಯ ಅಧ್ಯಾಯದ ಅರ್ಥವು.
ಇದುವರೆಗೆ ಎರಡು ಮೂರನೆಯ ಅಧ್ಯಾಯಗಳ ಅರ್ಥವನ್ನು ತಕ್ಕಮಟ್ಟಿಗೆ ವಿವರವಾಗಿ ಹೇಳಿರುತ್ತದೆಯಷ್ಟೆ, ಇಷ್ಟರಲ್ಲಿ ಗೀತೆಯ ಸಕಲ ಅರ್ಥವೂ ಅಡಗಿಯೇ ಬಿಟ್ಟಿರುತ್ತದೆಯೆಂದು ತಿಳಿಯಬೇಕು. ಏಕೆಂದರೆ ನಾಲ್ಕನೆಯ ಅಧ್ಯಾಯದಲ್ಲಿ ಈ ಗೀತಾ ತತ್ತ್ವೋಪದೇಶವು ಹೇಗೆ ನಡೆದು ಬಂದಿರುವದೆಂದು ತಿಳಿಸುವದಕ್ಕೆ ಗುರುಪರಂಪರೆಯನ್ನು ಹೇಳಿರುತ್ತದೆ. ಇನ್ನು ಮುಂದೆ ಇರುವದೆಲ್ಲ ಇದುವರೆಗೆ ಹೇಳಿರುವದರ ವಿವರಣವೇ ಆಗಿರುವದು. ನಾಲ್ಕನೆಯ ಅಧ್ಯಾಯದಲ್ಲಿ ಮುಖ್ಯವಾಗಿ ಜ್ಞಾನಿಗೆ ಕರ್ಮವೇ ಇಲ್ಲವಾದ್ದರಿಂದ ಕರ್ಮಬಂಧವಿಲ್ಲವೆಂಬುದು ಹೇಗೆಂಬುದನ್ನು ತಿಳಿಸಿದೆ; ಈ ಜ್ಞಾನವನ್ನು ಗುರುಗಳಿಂದ ಅಧಿಕಾರಿಯಾದವನು ಪಡೆಯುವನೆಂದೂ (4.34-39) ಇದಕ್ಕೆ 'ಯೋಗವೇ' ಸಾಧನವೆಂದೂ (4.38) ಹೇಳಿರುತ್ತದೆ. ಜ್ಞಾನರಹಿತನಾದವನಿಗೆ ಕರ್ಮವನ್ನು ಬಿಡುವದ(ಸಂನ್ಯಾಸ)ಕ್ಕಿಂತಲೂ ಕರ್ಮಯೋಗವೇ ಮೇಲೆಂದೂ (5.2), ಈ ಯೋಗದಿಂದ ಚಿತ್ತಶುದ್ಧಿಯಾಗಿ ಆತ್ಮಜ್ಞಾನವನ್ನು ಹೊಂದಿ ಕರ್ಮಬಂಧವನ್ನು ಬಿಡಿಸಿಕೊಳ್ಳುವನೆಂದೂ (5.7, 12), ನಿಜವಾಗಿ ಕರ್ಮವು ಯಾರಿಗೂ ಇಲ್ಲವಾದರೂ ಅಜ್ಞಾನಿಗಳು ಕರ್ತೃಬುದ್ಧಿಯುಳ್ಳ ವರಾಗಿರುವದರಿಂದ ಕರ್ಮಗಳನ್ನು ಮಾಡುವರೆಂದೂ, ಜ್ಞಾನವನ್ನು ಪಡೆದವರು ಅಜ್ಞಾನವನ್ನು ನಾಶಮಾಡಿಕೊಂಡು ಮೋಕ್ಷವನ್ನು ಹೊಂದುವರೆಂದೂ (5.16-17.20), ಅಂಥ ಜ್ಞಾನಿಗಳಿಗೆ ಎಲ್ಲೆಲ್ಲಿಯೂ ಸಮಬುದ್ಧಿಯಿರುವದೆಂದೂ (5.18-20) ಐದನೆಯ ಅಧ್ಯಾಯದಲ್ಲಿ ಹೇಳಿದೆ.
ಆರನೆಯ ಅಧ್ಯಾಯದಲ್ಲಿ ಸಮಬುದ್ಧಿಯನ್ನು ಹೊಂದುವ ಧ್ಯಾನಕ್ರಮವನ್ನು ವಿವರಿಸಿ, ಆ ಧ್ಯಾನಯೋಗದಿಂದ ಸರ್ವಭೂತಗಳಲ್ಲಿಯೂ ಆತ್ಮವಸ್ತುವೊಂದೇ ಇರುವದೆಂಬ ಜ್ಞಾನವು ದೊರಕುವದೆಂದು (6.29) ಹೇಳಿರುತ್ತದೆ. ಯೋಗಿಗಳಲ್ಲೆಲ್ಲ ಈಶ್ವರನನ್ನು ಭಕ್ತಿಯಿಂದ ಸೇವಿಸುವವರೇ ಹೆಚ್ಚಿನವರೆಂದು (6.47) ಉಪಸಂಹಾರಮಾಡಿರುತ್ತದೆ. ಏಳನೆಯ ಅಧ್ಯಾಯದಲ್ಲಿ ಭಕ್ತಿಯಿಂದ ಜ್ಞಾನವು ಆಗುವ ಪ್ರಕಾರವನ್ನು ಹೇಳಿರುತ್ತದೆ; ಭಕ್ತರಲ್ಲೆಲ್ಲ ಜ್ಞಾನಿಯು ಮುಖ್ಯನೆಂದು (7.17) ತಿಳಿಸಿರುತ್ತದೆ. ಎಂಟನೆಯ ಅಧ್ಯಾಯದಲ್ಲಿ ಭಕ್ತಿಯಿಂದೊಡಗೂಡಿದ ಯೋಗದಿಂದ ಪ್ರಣವಧ್ಯಾನವನ್ನು ಮಾಡುವವರು (8.10-13) ದೇಹವು ಬಿದ್ದುಹೋದ ಮೇಲೆ ಅಗ್ನಿ, ಜ್ಯೋತಿ ಮುಂತಾದ ಮಾರ್ಗದಿಂದ ಬ್ರಹ್ಮವನ್ನು ಕ್ರಮವಾಗಿ ಪಡೆಯುವರೆಂದು (8-24) ತಿಳಿಸಿದೆ. ಒಂಭತ್ತನೆಯ ಅಧ್ಯಾಯದಲ್ಲಿ ಜ್ಞಾನಯಜ್ಞದಿಂದ (9-15) ಉಪಾಸನೆ ಮಾಡುವ ಭಕ್ತರು ಪಡೆಯುವ ಫಲವು ಪ್ರತ್ಯಕ್ಷವಾಗಿಯೇ ಗೊತ್ತಾಗುವದೆಂದು (9.2) ಇಲ್ಲಿ ಪರಮಾರ್ಥತತ್ತ್ವವನ್ನೇ ಅಲ್ಲದೆ ಭಗವಂತನ ವಿಭೂತಿಗಳನ್ನೂ ತಿಳಿಸಿದೆ. ಹತ್ತನೆಯ ಅಧ್ಯಾಯದಲ್ಲಿಯೂ ಇದರಂತೆಯೇ ಭಗವಂತನ ವಿಭೂತಿಗಳನ್ನು ವಿಶೇಷವಾಗಿ ಹೇಳಿರುತ್ತದೆ.
ಹನ್ನೊಂದನೆಯ ಅಧ್ಯಾಯದಲ್ಲಿ ಭಗವಂತನು ಅರ್ಜುನನಿಗೆ ವಿಶ್ವರೂಪವನ್ನು ತೋರಿಸಿದನೆಂದು ವರ್ಣಿಸಿರುತ್ತದೆ. ಹನ್ನೆರಡರಲ್ಲಿ ಪರಮೇಶ್ವರನ ವ್ಯಕ್ತೋಪಾಸನೆಯು ಅವ್ಯಕ್ತೋಪಾಸನೆಗಿಂತ ಸುಲಭವೆಂದು ಹೇಳಿ ಪರಭಕ್ತಿಯ ಹೆಚ್ಚಿಗೆಯನ್ನು ವರ್ಣಿಸಿರುತ್ತದೆ. ಹದಿಮೂರನೆಯ ಅಧ್ಯಾಯದಲ್ಲಿ ಕ್ಷೇತ್ರ, ಕ್ಷೇತ್ರಜ್ಞ ಎಂಬ ಭಗವಂತನ ಎರಡು ಪ್ರಕೃತಿಗಳನ್ನು ಹೇಳಿ ಈಶ್ವರತತ್ತ್ವವನ್ನು ನಿರ್ಣಯಿಸಿರುತ್ತದೆ. ಹದಿನಾಲ್ಕನೆಯ ಅಧ್ಯಾಯದಲ್ಲಿ ಜಗತ್ತಿನ ಉತ್ಪತ್ತಿ ಕ್ರಮವನ್ನೂ, ಪ್ರಕೃತಿಯ ಗುಣಗಳ ವರ್ಣನೆಯನ್ನೂ, ಗುಣಗಳಲ್ಲಿ ಆಸಕ್ತಿಯಿಂದ ಸಂಸಾರವಾಗುವ ರೀತಿಯನ್ನೂ, ಅವುಗಳಿಂದ ಬಿಡುಗಡೆ ಹೊಂದುವ ಉಪಾಯವನ್ನೂ ತಿಳಿಸಿರುತ್ತದೆ. ಹದಿನೈದರಲ್ಲಿ ಪರಮಾತ್ಮತತ್ತ್ವವನ್ನು ತಿಳಿಸಿರುತ್ತದೆ. ಹದಿನಾರನೆಯ ಅಧ್ಯಾಯದಲ್ಲಿ ದೈವ, ಆಸುರ~ ಎಂಬ ಎರಡು ಜನಗಳ ಸ್ವಭಾವಗಳನ್ನೂ ದೈವಪ್ರಕೃತಿಯಿಂದ ಮುಕ್ತಿಯಾಗುವ ಬಗೆಯನ್ನೂ ಆಸುರಪ್ರಕೃತಿಯಿಂದ ಬಂಧವಾಗುವ ರೀತಿಯನ್ನೂ ತಿಳಿಸಿರುತ್ತದೆ. ಹದಿನೇಳನೆಯ ಅಧ್ಯಾಯದಲ್ಲಿ ಸಾತ್ತ್ವಿಕ, ರಾಜಸ, ತಾಮಸ ಶ್ರದ್ಧೆಗಳ ಸ್ವರೂಪವನ್ನೂ, ಶ್ರದ್ಧೆಯಿಂದ ಮಾಡಿದ ಕರ್ಮಕ್ಕೆ ಆಗುವ ಉತ್ತಮ ಫಲವನ್ನೂ ವಿವರಿಸಿರುತ್ತದೆ. ಗೀತೆಯ ಸರ್ವಾರ್ಥವನ್ನೂ ಹದಿನೆಂಟನೆಯ ಅಧ್ಯಾಯದಲ್ಲಿ ಉಪಸಂಹಾರಮಾಡಿರುತ್ತದೆ.
ಹೀಗೆ ಗೀತಾಧ್ಯಾಯದ ವಿಷಯಗಳ ಸಂಗತಿಯನ್ನು ಕಂಡುಕೊಂಡಮೇಲೆ ಗೀತೆಯಲ್ಲಿ ಉಪದಿಷ್ಟವಾಗಿರುವ ವಿಷಯಗಳನ್ನೂ ಅವುಗಳ ಸಂಬಂಧವನ್ನೂ ನಿರ್ಣಯಿಸಬೇಕು. ಮೇಲೆ ತೋರಿಸಿದಂತೆ ಎರಡನೆಯ ಮೂರನೆಯ ಅಧ್ಯಾಯಗಳಲ್ಲಿ ಭಗವದ್ಗೀತೆಯ ಒಟ್ಟು ಅಭಿಪ್ರಾಯವನ್ನು ಸಂಕ್ಷೇಪವಾಗಿ ಹೇಳಿರುತ್ತದೆ. ಇವುಗಳ ವಿವರವನ್ನು ಮುಂದಿನ ಅಧ್ಯಾಯಗಳಲ್ಲಿ ಕೊಟ್ಟಿರುತ್ತದೆ. ಆದ್ದರಿಂದ ಗೀತೆಯ ಉಪಕ್ರಮೋಪಸಂಹಾರಗಳಿಂದಲೂ, ಅರ್ಥವಾದದಿಂದಲೂ, ಅಪೂರ್ವತೆಯಿಂದಲೂ ನಿರ್ಣಯವಾಗಿರುವ ಜ್ಞಾನಯೋಗ, ಕರ್ಮಯೋಗಗಳ ವಿಚಾರವನ್ನು ಅಭ್ಯಾಸ, ಫಲ ಎಂಬ ಎರಡು ಲಿಂಗಗಳಿಂದ ನಿರ್ಣಯಿಸುವಾಗ ಈ ಕ್ರಮವನ್ನು ಅನುಸರಿಸಿಯೇ ನಿರ್ಣಯಿಸಬೇಕಾಗಿರುತ್ತದೆ. ಗೀತೆಯಲ್ಲಿ ಮತ್ತೆಮತ್ತೆ ಹೇಳಿರುವ ತತ್ತ್ವಗಳು ಜ್ಞಾನ, ಕರ್ಮ ಎರಡೇ. ಜ್ಞಾನವು ಆತ್ಮ ವಿಷಯಕವಾದದ್ದು (2.11-20). ಜ್ಞಾನದಿಂದ ಕಾಮವು ತೊಲಗುವದು (3.43). ಕರ್ಮಗಳು ಸುಟ್ಟು ಬೂದಿಯಾಗುವವು (4.37), ಸಂಶಯಗಳೆಲ್ಲ ತೊಲಗುವವು (4.42). ಆತ್ಮಜ್ಞಾನವಿದ್ದವನಿಗೆ ಕರ್ತವ್ಯವಿಲ್ಲ (3.17), ಕರ್ಮಗಳಿಂದ ಲೇಪವಿಲ್ಲ (3.28), ಶೋಕವಿಲ್ಲ (2.11), ಮೋಹವಿಲ್ಲ (4.35), ಇದಿಷ್ಟು ಜ್ಞಾನದ ವಿಚಾರವಾಯಿತು. ಇನ್ನು ಕರ್ಮವಿಚಾರವನ್ನು ತೆಗೆದುಕೊಂಡರೆ ಅರ್ಜುನನನ್ನು - ಕರ್ಮವನ್ನು ಮಾಡಬೇಕು (4.47), ಸ್ವಧರ್ಮವನ್ನು ಮಾಡಬೇಕು (4.35), ಈಶ್ವರಾರ್ಪಣಬುದ್ಧಿಯಿಂದ ನಿಷ್ಕಾಮನಾಗಿ ಮಾಡಬೇಕು (3.30), ಸಮಬುದ್ದಿಯಾಗಿ ಯೋಗದಿಂದ ಮಾಡಬೇಕು (2.48); ಸಮಬುದ್ಧಿಯು ಧ್ಯಾನಯೋಗದಿಂದ ಬರುತ್ತದೆ (6.18), ಧ್ಯಾನಯೋಗಿಗಳಲ್ಲೆಲ್ಲ ಭಕ್ತನು ಶ್ರೇಷ್ಠನು (6.47), ಭಕ್ತರಲ್ಲಿ ಜ್ಞಾನಿಯು ಶ್ರೇಷ್ಠನು (7.17), ಕರ್ಮಯೋಗದಿಂದ ಚಿತ್ತಶುದ್ದಿಯಾಗುವದು (5.11), ಭಕ್ತಿಯಿಂದ ಕರ್ಮಗಳ ಶುಭಾಶುಭಫಲಗಳು ಆಗದೆ ಹೋಗುವವು (6.28), ಧ್ಯಾನದಿಂದ ಸರ್ವಾತ್ಮನ ಸಾಕ್ಷಾತ್ಕಾರವಾಗುವದು (6.29). ಇವೆಲ್ಲ ಕರ್ಮಯೋಗದ ವಿಚಾರವು.
ಮೇಲೆ ಕೊಟ್ಟಿರುವ ವಿವರಗಳಿಂದ ಜ್ಞಾನಕರ್ಮಗಳ ಸಂಬಂಧವು ಸ್ಪಷ್ಟವಾಗುವದು. ಜ್ಞಾನವು ಸಾಧ್ಯ, ಕರ್ಮವು ಸಾಧನ; ಕರ್ಮವು ಯೋಗ, ಭಕ್ತಿ ಎಂಬ ಎರಡು ಮಾರ್ಪಾಡುಗಳನ್ನು ಹೊಂದಿ ಜ್ಞಾನವನ್ನು ಕೊಡುವದೆಂಬುದೇ ಗೀತಾರ್ಥವು. ಜ್ಞಾನದಿಂದ ಸಕಲಕರ್ಮಗಳೂ ಬಿಡುಗಡೆಯಾಗಿ ಮುಕ್ತನಾಗುತ್ತಾನೆಂಬುದು ಗೀತೆಯ ಕೊನೆಯ ಮಾತಾಗಿರುವದು. ಇದೇ ಗೀತೆಯ ತಾತ್ಪರ್ಯವೆಂಬುದನ್ನು ಇನ್ನು ಉಪಸಂಹಾರದ ಅಧ್ಯಾಯವಾದ ಹದಿನೆಂಟನೆಯ ಅಧ್ಯಾಯದ ಈ ಕೆಳಗಿನ ಶ್ಲೋಕಗಳಿಂದಲೂ ಮನಗಾಣಬಹುದಾಗಿರುತ್ತದೆ—
ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್ |
ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ || 18.46 ||
ಯಾವಾತನಿಂದ ಈ ಪ್ರಾಣಿಗಳೆಲ್ಲವೂ ಹುಟ್ಟಿ ತಮ್ಮ ವ್ಯಾಪಾರಗಳನ್ನು ಮಾಡುತ್ತಿರುವವೋ, ಯಾವಾತನು ಈ ಜಗತ್ತನ್ನೆಲ್ಲವನ್ನೂ ವ್ಯಾಪಿಸಿಕೊಂಡಿರುವನೋ, ಆ ಪರಮೇಶ್ವರನನ್ನು ಸ್ವಧರ್ಮವನ್ನು ಮಾಡಿ ಪೂಜಿಸಿದರೆ ಮನುಷ್ಯನು ಸಿದ್ಧಿಯನ್ನು ಹೊಂದುವನು.
ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾಪ್ನೋತಿ ನಿಬೋಧ ಮೇ |
ಸಮಾಸೇನೈವ ಕೌನ್ತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ || 18.50 ||
ತನ್ನತನ್ನ ಕರ್ಮವನ್ನು ಮಾಡಿ ಈಶ್ವರನನ್ನು ಅರ್ಚಿಸಿದ ಬಳಿಕ ಚಿತ್ತಶುದ್ಧಿಯಿಂದುಂಟಾದ, ಯೋಗ್ಯತೆಯೆಂಬ ಸಿದ್ದಿಯನ್ನು ಪಡೆದುಕೊಂಡ ಬಳಿಕ ಬ್ರಹ್ಮವನ್ನು ಹೇಗೆ ಪಡೆಯುವನೆಂದರೆ, ಕೇಳು, ಸಂಕ್ಷೇಪವಾಗಿ ಹೇಳುವೆನು. ಇಲ್ಲಿಗೆ ಜ್ಞಾನದ ಪರಿಸಮಾಪ್ತಿಯಾದಂತಾಗುವದು.
ಬುದ್ಧ್ಯಾವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಮ ಚ |
ಶಬ್ದಾದೀನ್ವಿಷಯಾಂಸ್ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ || 18.51 ||
ವಿವಿಕ್ತಸೇವೀ ಲಘ್ವಾಶೀ ಯತವಾಕ್ಕಾಯಮಾನಸಃ |
ಧ್ಯಾನಯೋಗಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ || 18.52 ||
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್ |
ವಿಮುಚ್ಯ ನಿರ್ಮಮಃ ಶಾನ್ತೋ ಬ್ರಹ್ಮಭೂಯಾಯ ಕಲ್ಪತೇ || 18.53 ||
ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ ||
ಬುದ್ಧಿಯನ್ನು ಚೆನ್ನಾಗಿ ಶುದ್ಧಿಮಾಡಿಕೊಂಡು, ಧೈರ್ಯದಿಂದ ಶರೀರೇಂದ್ರಿಯಗಳನ್ನು ಬಿಗಿಹಿಡಿದು, ಶಬ್ದಾದಿವಿಷಯಗಳನ್ನು ಕೈಬಿಟ್ಟು, ರಾಗದ್ವೇಷಗಳನ್ನು ಕಿತ್ತೊಗೆದು, ಏಕಾಂತ ಸ್ಥಳದಲ್ಲಿ ಸ್ವಭಾವದಿಂದಿರುತ್ತಾ, ಹಗುರವಾದ ಆಹಾರವನ್ನು ತೆಗೆದುಕೊಳ್ಳುತ್ತಾ, ಎಡೆಬಿಡದೆ ಧ್ಯಾನಯೋಗಪರನಾಗಿ, ವೈರಾಗ್ಯವುಳ್ಳವನಾಗಿ, ಅಹಂಕಾರವನ್ನೂ, ಕಾಮಾದಿಗಳ ಜೋರನ್ನೂ, ಸೊಕ್ಕಿ ನಡೆಯುವದನ್ನೂ, ಸಿಟ್ಟನ್ನೂ ಬಿಟ್ಟು, ನನ್ನದೆಂಬ ವಸ್ತುಗಳನ್ನಿಟ್ಟುಕೊಳ್ಳದೆ, ನನ್ನದೆಂಬ ಅಭಿಮಾನವನ್ನು ಬಿಟ್ಟು ಶಾಂತಿಯಿಂದಿರುವಾತನು ಬ್ರಹ್ಮಸ್ವರೂಪವನ್ನು ಪಡೆಯುವದಕ್ಕೆ ತಕ್ಕವನಾಗುವನು. ಯಾವಾತನು ಬ್ರಹ್ಮಭಾವವನ್ನು ಪಡೆಯುವನೋ ಅವನ ಮನಸ್ಸು ಪ್ರಸನ್ನವಾಗಿರುವದು. ಅವನಿಗೆ ಇದು ಹೋಯಿತೆಂಬ ಶೋಕವಿಲ್ಲ. ಇದು ಬೇಕೆಂಬ ಆಸೆಯಿರುವದಿಲ್ಲ.
ಈ ಮೇಲಿನ ಶ್ಲೋಕಗಳ ತಾತ್ಪರ್ಯವನ್ನು ಚೆನ್ನಾಗಿ ಮನಸ್ಸಿನಲ್ಲಿ ತಿರುವಿ ಹಾಕಿದವರಿಗೆ ಗೀತಾ ತಾತ್ಪರ್ಯದ ವಿಷಯದಲ್ಲಿ ಸಂದೇಹವಾಗುವದಕ್ಕೆ ಕಾರಣವೇ ಇರುವದಿಲ್ಲ. ಏಕೆಂದರೆ ಇಲ್ಲಿ ಕರ್ಮ, ಯೋಗ, ಭಕ್ತಿ, ಜ್ಞಾನ - ಇವುಗಳ ಸಂಬಂಧವನ್ನೆಲ್ಲ ಚೆನ್ನಾಗಿ ತೋರಿಸಿರುತ್ತದೆ. ಕರ್ಮದಿಂದ ಚಿತ್ತಶುದ್ಧಿಯಾಗುವದು. ಇದನ್ನು ಈಶ್ವರಾರ್ಪಣ ಮಾಡುವ ಭಕ್ತಿಯಿಂದ ಜ್ಞಾನಕ್ಕೆ ತಕ್ಕ ಯೋಗ್ಯತೆ ಬರುವದು. ಧ್ಯಾನಯೋಗದಿಂದ ಭಗವಂತನ ತತ್ತ್ವದ ಜ್ಞಾನವಾಗುವದು. ಜ್ಞಾನದಿಂದ ಭಗವಂತನ ಸ್ವರೂಪವೇ ಉಂಟಾಗುವದು. ಆಗ ಶೋಕ, ಮೋಹಗಳೆಲ್ಲ ಪೂರ್ಣವಾಗಿ ತೊಲಗಿಬಿಡುವವು. ಇದೇ ಗೀತೆಯ ತಾತ್ಪರ್ಯವೆಂದು ಉಪಕ್ರಮೋಪಸಂಹಾರ, ಅಪೂರ್ವತಾ, ಅರ್ಥವಾದ, ಅಭ್ಯಾಸ, ಫಲ ಈ ಲಿಂಗಗಳಿಂದ ಸಿದ್ಧವಾಗುವದು.
ಇನ್ನು ಉಪಪತ್ತಿಯೆಂಬದೊಂದು ಲಿಂಗವುಳಿಯಿತಷ್ಟೆ. ಇದನ್ನು ಇಲ್ಲಿಯೇ ಕೊಡದೇ ಮುಂದಿನ ಪ್ರಕರಣಗಳಲ್ಲಿ ಸಂದರ್ಭಾನುಸಾರವಾಗಿ ತಿಳಿಸುತ್ತಾ ಹೋಗುವೆನು. ಭಗವಂತನು ತನಗೆ ಇಷ್ಟಮಿತ್ರನಾಗಿಯೂ ಭಕ್ತನಾಗಿಯೂ ಇರುವ ಅರ್ಜುನನಿಗೆ ಮಾಡಿದ ಉಪದೇಶದಲ್ಲಿ ‘ಹೀಗೆ ಮಾಡು', 'ಹೀಗೆ ಮಾಡಬೇಡ’ ಎಂದು ಸುಮ್ಮನೆ ಪ್ರಭುಸಂಮಿತ ವಾಕ್ಯಗಳಿಂದ ವೇದಗಳ ಸರಣಿಯನ್ನು ಅನುಸರಿಸಿರುವದಿಲ್ಲ. ಅಲ್ಲಲ್ಲಿಗೆ ತಕ್ಕ ಯುಕ್ತಿಗಳನ್ನು ಕೊಟ್ಟುಕೊಂಡೇ ಹೋಗಿರುವನು. ಆದ್ದರಿಂದ ಭಗವದ್ಗೀತೆಯ ಉಪದೇಶವು ಯುಕ್ತ್ಯನುಭವಗಳಿಗೆ ಎಷ್ಟರಮಟ್ಟಿಗೆ ಹೊಂದುವದೆಂಬುದನ್ನು ತೋರಿಸುವದಕ್ಕಾಗಿ ಆಯಾ ಸಂದರ್ಭಗಳಿಗೆ ತಕ್ಕಂತೆ ಅಲ್ಲಲ್ಲಿಗೆ ಜೋಡಿಸಿಯೇ ತೋರಿಸುತ್ತಾ ಹೋಗುವೆನು. ಅಂತೂ ಇಲ್ಲಿಗೆ ಈ ಪ್ರಕರಣವು ಮುಗಿದಂತೆ ಆಯಿತು. ಷಡ್ಲಿಂಗಗಳಿಂದ ನೋಡಿದರೆ ಕರ್ಮ, ಜ್ಞಾನಗಳೆಂಬ ಎರಡು ಮುಖ್ಯ ಉಪದೇಶಗಳನ್ನು ಇಲ್ಲಿ ತಿಳಿಸಿರುತ್ತದೆಯೆಂದು ಸ್ಪಷ್ಟವಾಗುತ್ತದೆ. ಇವುಗಳಲ್ಲಿ ಕರ್ಮವು ಅಂಗವಾಗಿರುತ್ತದೆ. ಎಂದರೆ ಜ್ಞಾನಪ್ರಾಪ್ತಿಗಾಗಿ ಮಾಡುವ ಸಾಧನವಾಗಿರುತ್ತದೆ; ಜ್ಞಾನವು ಮೋಕ್ಷಸಾಧನವಾಗಿರುತ್ತದೆ. ಇಷ್ಟು ವಿಷಯವು ಇಲ್ಲಿಗೆ ಸಿದ್ಧವಾಗಿರುತ್ತದೆ.
ಅನೇಕರಿಗೆ ಈ ಮೇಲೆ ನಿರೂಪಿಸಿರುವ ಗೀತಾತಾತ್ಪರ್ಯವು ರುಚಿಸುವದಿಲ್ಲ. ಅನೇಕರಿಗೆ ಇದರ ಅರ್ಥವೂ ಸರಿಯಾಗಿ ಆಗಿರುವದಿಲ್ಲ. ಪ್ರಾಚೀನ ಭಾಷ್ಯಕಾರರ ಮತಗಳನ್ನು ಸಂಕ್ಷೇಪವಾಗಿ ಹಿಂದೆಯೇ ಸೂಚಿಸಿರುತ್ತೇನೆ. ಕೆಲವರು ಈ ಜ್ಞಾನಮಾರ್ಗವನ್ನು ಅನುಸರಿಸುವವರು ವೇಷಾಂತರ ಹಾಕಿರುವ ಬೌದ್ಧರು ಎಂದು ಬಯ್ಯುವರು. ಇನ್ನು ಕೆಲವರು ಜಗತ್ತಿನ ವ್ಯವಹಾರವನ್ನೆಲ್ಲ ನಿಲ್ಲಿಸಿ ಜನರಿಗೆಲ್ಲ ಸಂನ್ಯಾಸದೀಕ್ಷೆ ಕೊಡುವವರ ಮತವಿದೆಂದು ಭಾವಿಸಿರುವರು. ಈಗಿನ ಕಾಲದಲ್ಲಿ ಚಟುವಟಿಕೆಯಿಂದ ವ್ಯವಹಾರವನ್ನು ಮಾಡುವ ಜನರು ದೇಶದ ಹಿತಕ್ಕಾಗಿ ಬೇಕಾಗಿದೆಯಾದ್ದರಿಂದ ವ್ಯವಹಾರವನ್ನೆಲ್ಲ ಬದಿಗೊತ್ತುವ ಗೊಡ್ಡುವೇದಾಂತದ ಉಪದೇಶವಿರುವ ಭಗವದ್ಗೀತೆಯೇ ನಮಗೆ ಬೇಕಿಲ್ಲವೆಂದು ಹೇಳುತ್ತಿರುವರು ; ಮತ್ತೆ ಕೆಲವರು ''ಗೀತೆಯಲ್ಲಿ ಕರ್ಮಯೋಗವನ್ನೇ ಪ್ರಧಾನವಾಗಿ ಹೇಳಿರುತ್ತದೆ. ಇದನ್ನು ಸಂನ್ಯಾಸದ ಅಭಿಮಾನದ ಜನರು ನಿವೃತ್ತಿಪರವಾಗಿ ಅರ್ಥವನ್ನು ಮಾಡಿರುತ್ತಾರೆ. ನಿಜವಾಗಿ ಗೀತಾಗ್ರಂಥವು ಯಾವ ನಿವೃತ್ತಿಪರ ಪಂಥಕ್ಕೂ ಸಂಬಂಧಿಸಿರುವದಿಲ್ಲವೆಂಬುದಿಷ್ಟೇ ಅಲ್ಲ ; ಜ್ಞಾನೋತ್ತರದಲ್ಲಿ ಕೂಡ, ಏಕೆ ಕರ್ಮಸಂನ್ಯಾಸಮಾಡಕೂಡದೆಂಬುದಕ್ಕೆ ಬ್ರಹ್ಮಜ್ಞಾನದೃಷ್ಟಿಯಿಂದ ಸಯುಕ್ತಿಕವಾದ ಉತ್ತರ ಕೊಡಬೇಕೆಂತಲೇ ಗೀತಾಗ್ರಂಥವು ಹುಟ್ಟಿರುತ್ತದೆ'' (ಗೀ.ರ. 464) ಎಂದು ಹೇಳುತ್ತಿರುವರು. ಇಂಥ ಜನರು ವ್ಯವಹಾರದಲ್ಲಿಯೂ ದೇಶದಲ್ಲಿಯೂ ತೋರಿಸುವ ಅಭಿಮಾನವನ್ನು ಕಂಡರೆ ಯಾರಿಗಾದರೂ ಪರಮಸಂತೋಷವಾಗುತ್ತದೆ.
ಆದರೆ ಯಾವ ಕರ್ಮಾಭಿಮಾನಿಯೂ ಗೀತೆಯಲ್ಲಿಲ್ಲದ ತಾತ್ಪರ್ಯವನ್ನು ಅದರಲ್ಲಿರುವದೆಂದು ಹೇಳಿ ತನ್ನ ಕಾರ್ಯವನ್ನು ಸಾಧಿಸಿಕೊಳ್ಳುವದು ಯುಕ್ತವಲ್ಲ ; ಯಾವ ದೇಶಾಭಿಮಾನಿಯೂ ದೇಶಾಭಿಮಾನಕ್ಕಾಗಿ ಗೀತೆಯ ತಾತ್ಪರ್ಯವನ್ನು ಮಾರ್ಪಡಿಸುವದು ನ್ಯಾಯವಲ್ಲ. ಭಗವದ್ಗೀತೆಯು ಜ್ಞಾನಕರ್ಮಗಳನ್ನು ಬೋಧಿಸುವದೆಂದೂ ಜ್ಞಾನದಿಂದಲೇ ಮೋಕ್ಷವಾಗುವದೆಂದೂ, ಕರ್ಮವು ಜ್ಞಾನಕ್ಕೆ ಚಿತ್ತಶುದ್ಧಿಯ ಮೂಲಕವಾಗಿ ಸಾಧನವಾಗಿರುವದಷ್ಟೇ ಅಲ್ಲದೆ ಮೋಕ್ಷಕ್ಕೆ ಸಾಧನವಲ್ಲವೆಂದೂ ಹೇಳಿದ ಮಾತ್ರದಿಂದ ಸಕಲಕರ್ಮಗಳನ್ನೂ ಮಣ್ಣುಗೂಡಿಸಿದ ಹಾಗಾಯಿತೆಂದು ಅನೇಕರು ಬೆಚ್ಚಿ ಬೀಳುವರು ; ನಮ್ಮ ದೇಶವೆಲ್ಲ ಕಾವಿಶಾಟಿಯ ಸಂನ್ಯಾಸಿಗಳಿಗೇ ಎಲ್ಲಿ ಆಸರೆಯಾಗಿ ಬಿಡುವದೋ ಎಂದು ಕೊರಗುವರು. ಆದರೆ ಇಂಥ ಭಯವೇನೂ ಇಲ್ಲವೆಂದೂ ಗೀತಾತಾತ್ಪರ್ಯವು ಅವರು ತಿಳಿದಿರುವಷ್ಟು ಸಂಕುಚಿತವಾಗಿರುವದಿಲ್ಲವೆಂದೂ ತಿಳಿಸುವದಕ್ಕಾಗಿ ಮುಂದಿನ ಪ್ರಕರಣಗಳಲ್ಲಿ ಗೀತಾರ್ಥವನ್ನು ವಿಸ್ತಾರವಾಗಿ ವಿವೇಚನಕ್ಕೆ ತೆಗೆದುಕೊಳ್ಳುತ್ತೇನೆ. ಗ್ರಂಥವನ್ನು ಚೆನ್ನಾಗಿ ಪರೀಕ್ಷಿಸುವದರಿಂದಲೇ ಗೀತಾತಾತ್ಪರ್ಯವನ್ನು ತೆಗೆಯಬಹುದಾದರೂ ಇದರ ಸಹಾಯಕ್ಕೆ ಬೇರೆ ಗ್ರಂಥಗಳನ್ನೂ, ಅದರಲ್ಲಿಯೂ ಗೀತೆಯು ಯಾವದರ ಭಾಗವಾಗಿದೆಯೋ ಆ ಮಹಾಭಾರತವನ್ನೂ ತೆಗೆದುಕೊಂಡು, ಮೇಲೆ ತೋರಿಸಿರುವ ತಾತ್ಪರ್ಯಕ್ಕೆ ಏನು ಪುಷ್ಟಿ ದೊರೆಯುವದೆಂಬುದರ ವಿಚಾರವಾಗಿ ಈಗ ವಿಮರ್ಶೆ ಮಾಡೋಣ.
ಮಹಾಭಾರತದ ಮಿಕ್ಕಭಾಗಗಳಿಗೂ ಗೀತೆಗೂ ಹೋಲಿಕೆ
7. ಪ್ರವೃತ್ತಿ ನಿವೃತ್ತಿ ಧರ್ಮಗಳ ಸಂಬಂಧ
ಭಗವದ್ಗೀತೆಯಲ್ಲಿರುವ ಸದುಪದೇಶವು ಯಾವದೆಂಬುದನ್ನು ವಿಚಾರಿಸುವಾಗ ಅದರಲ್ಲಿರುವ ಉಪಕ್ರಮೋಪಸಂಹಾರಗಳೇ ಮುಂತಾದ ಆರು ಗುರುತುಗಳನ್ನು ಇಟ್ಟುಕೊಂಡು ನಿರ್ಣಯಿಸಿದರೆ ಸಾಕಾಗಿರುತ್ತದೆಯಾದರೂ ಗೀತೆಯು ಮಹಾಭಾರತದ ಒಂದು ಭಾಗವೆಂದು ನಂಬುವ ಬಹುಮಂದಿಗೆ ಇಷ್ಟರಿಂದಲೇ ತೃಪ್ತಿಯಾಗುವದಿಲ್ಲ. ಮಹಾಭಾರತದ ಮಿಕ್ಕ ಭಾಗಗಳಲ್ಲಿ ಮಹಾಭಾರತಕಾರರು ಯಾವ ಉಪದೇಶವನ್ನು ವರ್ಣಿಸಿರುತ್ತಾರೆ? ಅದರಿಂದ ಗೀತೆಯಲ್ಲಿ ಹೇಳಿರುವದು ಆ ಉಪದೇಶಕ್ಕೆ ಹೊಂದುಗಡೆಯಾಗಿರುವದೆ? ಇಲ್ಲವೆ? ಎಂಬುದನ್ನು ವಿಚಾರಿಸುವದು ಅಗತ್ಯವಾಗಿರುವದೆಂಬ ವಿಷಯವನ್ನು ಹಿಂದೆಯೇ ತಿಳಿಸಿರುತ್ತದೆ. ಈ ವಿಚಾರವನ್ನು ಈ ಪ್ರಕರಣದಲ್ಲಿ ಕೈಗೊಂಡಿರುತ್ತದೆ.
ಭಾರತಕಾರರು ಭಗವದ್ಗೀತೆಯ ವಿಷಯದಲ್ಲಿ ತಾವೇ ಹೇಳಿಕೊಂಡಿರುವ ಭಾಗಗಳನ್ನು ನೋಡಿದರೆ ಇದರಲ್ಲಿ “ಭಾಗವತ'' ಧರ್ಮವು ಹೇಳಲ್ಪಟ್ಟಿರುವದೆಂದು ಗೊತ್ತಾಗುತ್ತದೆ. ಈ ಧರ್ಮವು ವಿಶೇಷವಾಗಿ ''ನಾರಾಯಣೀಯೋಪಾಖ್ಯಾನ”ವೆಂಬ ಭಾರತದ ಭಾಗದಲ್ಲಿ ಬಂದಿರುವದರಿಂದ ಆ ಗ್ರಂಥದಿಂದ ಗೀತೆಯ ಸಾರವನ್ನು ಗೊತ್ತುಮಾಡಬೇಕೆಂದೂ, ಅದರಂತೆ ನೋಡಿದರೆ ಗೀತೆಯಲ್ಲಿ ಪ್ರವೃತ್ತಿಧರ್ಮವನ್ನು ಮುಖ್ಯವಾಗಿ ಹೇಳಿರುತ್ತದೆಯೆಂದೂ, ಅದಕ್ಕೆ ಅಂಗವಾಗಿ ಮಿಕ್ಕ ಜ್ಞಾನ ಭಕ್ತಿ ಮುಂತಾದವುಗಳನ್ನು ಹೇಳಿದೆಯೆಂದೂ ವ್ಯಕ್ತವಾಗುವದಾಗಿ ಈಚಿನ ಕೆಲವರ ಅಭಿಪ್ರಾಯವಿರುವದು. ಈ ಅಭಿಪ್ರಾಯವನ್ನು ಬಲುಮಟ್ಟಿಗೆ ಹೊರಕ್ಕೆ ತಂದು ಬಲಪಡಿಸಿರುವವರು ಬಾಲಗಂಗಾಧರ ತಿಲಕರವರು. ಇವರ ''ಗೀತಾರಹಸ್ಯ”ದಲ್ಲಿ ಈ ಅಭಿಪ್ರಾಯವನ್ನು ಚೆನ್ನಾಗಿ ಯುಕ್ತಿವಾಕ್ಯಗಳಿಂದ ಬೆಳೆಸಿರುತ್ತದೆ. ಅನೇಕ ದೇಶಾಭಿಮಾನಿಗಳಾದ ಜನರು ಈ ಗ್ರಂಥದಲ್ಲಿ ಹೆಚ್ಚಿನ ವಿಶ್ವಾಸವನ್ನು ಇಟ್ಟುಕೊಂಡಿರುವದರಿಂದ, ತತ್ತ್ವದಲ್ಲಿ ಅಭಿಮಾನವಿರುವವರಿಗೋಸ್ಕರ ಈ ಅಭಿಪ್ರಾಯವನ್ನು ಇಲ್ಲಿ ವಿವೇಚನೆಗೆ ತೆಗೆದುಕೊಳ್ಳಬೇಕಾಗಿದೆ. ಗೀತಾರಹಸ್ಯದಲ್ಲಿ ಹೇಳಿರುವ ಅಂಶಗಳನ್ನು ವಿಸ್ತಾರವಾಗಿ ತಿಳಿಯಬೇಕೆಂಬುವರು ಆ ಗ್ರಂಥವನ್ನೇ ನೋಡಬೇಕು. ಸದ್ಯಕ್ಕೆ ಗೀತೆಯು ಪ್ರವೃತ್ತಿಧರ್ಮವನ್ನಷ್ಟೇ ಹೇಳುವದೆಂಬುದನ್ನು ಸಮರ್ಥಿಸುವದಕ್ಕೆ ಗೀತಾರಹಸ್ಯಕಾರರು ಕೊಟ್ಟಿರುವ ಮಹಾಭಾರತದ ಆಧಾರವು ನಿರಾಧಾರವಾದದ್ದೆಂಬುದನ್ನು ಮಾತ್ರ ಇಲ್ಲಿ ತೋರಿಸುವದಕ್ಕೆ ಪ್ರಯತ್ನಿಸುತ್ತೇನೆ.
ರಹಸ್ಯಕಾರರು ಈ ವಿಷಯದಲ್ಲಿ ಹೇಳಿರುವದರ ಸಾರಾಂಶವನ್ನು ಮೊದಲು ತಿಳಿಸುತ್ತೇನೆ. ಭಗವದ್ಗೀತಾ ಎಂದರೆ ಭಗವಂತನಿಂದ ಗೀತವಾದ ಉಪನಿಷತ್ತು. ಈ ಹೆಸರಿನಿಂದಲೆ ಇದರಲ್ಲಿ ಭಾಗವತ ಧರ್ಮವು, ಎಂದರೆ ಭಗವಂತನು ಪ್ರವೃತ್ತಮಾಡಿದ ಧರ್ಮವಿರಬೇಕೆಂದು ಗೊತ್ತಾಗುತ್ತದೆ. ಈ ಉಪದೇಶವನ್ನು ಭಗವಂತನು ವಿವಸ್ವಂತನಿಗೆ, ವಿವಸ್ವಂತನು ಮನುವಿಗೆ, ಮನುವು ಇಕ್ಷಾಕುವಿಗೆ ಮಾಡಿದ್ದಾನೆಂದು ಗೀತೆಯಲ್ಲಿ (4.1-3) ಹೇಳಿರುವಂತೆಯೇ ನಾರಾಯಣೀಯದಲ್ಲಿಯೂ (ಮೋ. 348-51, 52) ಇದೇ ಪರಂಪರೆಯನ್ನು ಹೇಳಿರುತ್ತದೆ. ಇದೇ ಧರ್ಮವನ್ನು ಭಗವದ್ಗೀತೆಯಲ್ಲಿ ಹೇಳಿರುತ್ತದೆಯೆಂಬುದಕ್ಕೆ ಈ ಉಪಾಖ್ಯಾನದಲ್ಲಿನ ಎರಡು ಶ್ಲೋಕಗಳು ಸಾಕ್ಷಿಯಾಗಿವೆ.
ಏವಮೇಷ ಮಹಾನ್ ಧರ್ಮಃ ಸ ತೇ ಪೂರ್ವಂ ನೃಪೋತ್ತಮ |
ಕಥಿತೋ ಹರಿಗೀತಾಸು ಸಮಾಸವಿಧಿಕಲ್ಪಿತಃ || 346-11 ||
ಸಮುಪೇತೇಷ್ವನೀಕೇಷು ಕುರುಪಾಂಡವಯೋರ್ಮೃಧೇ ।
ಅರ್ಜುನೇ ವಿಮನಸ್ಕೇ ಚ ಗೀತಾ ಭಗವತಾ ಸ್ವಯಮ್ II 348-8 ||
ಈ ಶ್ಲೋಕಗಳಲ್ಲಿ ಭಗವಂತನು ಅರ್ಜುನನಿಗೆ ಇದೇ ಉಪದೇಶವನ್ನು ಮಾಡಿರುತ್ತಾನೆಂದು ಸಂದೇಹವು ಉಳಿಯದ ಹಾಗೆ ಹೇಳಿರುತ್ತದೆ. ಈ ನಾರಾಯಣೀಯ ಧರ್ಮದಲ್ಲಿ ಎರಡು ಲಕ್ಷಣಗಳು ಉಂಟೆಂಬುದನ್ನು,
ನಾರಾಯಣಪರೋ ಧರ್ಮಃ ಪುನರಾವೃತ್ತಿದುರ್ಲಭಃ |
ಪ್ರವೃತ್ತಿಲಕ್ಷಣಶ್ಚೈವ ಧರ್ಮೋ ನಾರಾಯಣಾತ್ಮಕಃ ||
''ಈ ನಾರಾಯಣೀಯ ಧರ್ಮವು ಪುನರ್ಜನ್ಮವನ್ನು ತಪ್ಪಿಸುವಂಥದ್ದು. ಅಂದರೆ ಮೋಕ್ಷಪರವೂ ಆಗಿರುವದಲ್ಲದೆ ಪ್ರವೃತ್ತಿಪರವಾಗಿಯೂ ಇದೆ” (347-82, 83) ಎಂದು ತಿಳಿಸಿರುತ್ತದೆ.
ಈ ಧರ್ಮವು ಹೇಗೆ ಪ್ರವೃತ್ತಿಪರವೆಂಬುದನ್ನು ಮಹಾಭಾರತದಲ್ಲಿ ವಿಶದವಾಗಿ ತಿಳಿಸಿಹೇಳಿದೆ. ಪ್ರವೃತ್ತಿಯೆಂದರೆ ಸಂನ್ಯಾಸವನ್ನು ಸ್ವೀಕರಿಸದೆ ಆಮರಣವಾಗಿ ಚಾತುರ್ವರ್ಣ್ಯವಿಹಿತವಾದ ನಿಷ್ಕಾಮಕರ್ಮಗಳನ್ನು ಮಾಡುತ್ತಲೆ ಇರುವದು ಎಂಬರ್ಥವು ಪ್ರಸಿದ್ಧವಿದೆ. ಆದಕಾರಣ ಗೀತೆಯಲ್ಲಿ ಅರ್ಜುನನಿಗೆ ಹೇಳಿದ ಉಪದೇಶವು ಭಾಗವತಧರ್ಮವಾಗಿದ್ದು ಆ ಧರ್ಮವು ಪ್ರವೃತ್ತಿಪರವಾಗಿರುವದರಿಂದ ಆ ಉಪದೇಶವನ್ನಾದರೂ ಮಹಾಭಾರತಕಾರರು ಪ್ರವೃತ್ತಿಪರವಾಗಿಯೇ ಭಾವಿಸುತ್ತಾರೆಂಬುದು ಸ್ಪಷ್ಟವಾಗುತ್ತದೆ (ಗೀ.ರ. ಪು. 10), ಇದುವರೆಗೆ ವರ್ಣಿಸಿದ್ದು ಗೀತಾರಹಸ್ಯಕಾರರು ಪಟ್ಟಿರುವ ಅಭಿಪ್ರಾಯವಾಗಿರುತ್ತದೆ.
ಮೇಲೆ ಕೊಟ್ಟಿರುವ ಅಭಿಪ್ರಾಯದಲ್ಲಿ ಸ್ವಲ್ಪ ಭಾಗವು ಸರಿಯೆಂದೂ ಸ್ವಲ್ಪ ಭಾಗವು ಸರಿಯಾಗಿಲ್ಲವೆಂದೂ ನಾರಾಯಣೀಯೋಪಾಖ್ಯಾನವನ್ನು ಓದಿದವರಿಗೆ ಸ್ಪಷ್ಟವಾಗುವದು. ಏಕೆಂದರೆ ಈ ಉಪಾಖ್ಯಾನದಲ್ಲಿ ಪ್ರವೃತ್ತಿ ಧರ್ಮವನ್ನು ಹೇಳಿರುತ್ತದೆಯೆಂಬುದೇನೋ ನಿಜ. ಆದರೆ ಪ್ರವೃತ್ತಿ ಧರ್ಮವೆಂದರೆ “ನಿಷ್ಕಾಮಕರ್ಮವನ್ನು ಮಾಡುತ್ತ ಆಮರಣವಾಗಿ” ಇದ್ದುಕೊಂಡಿರುವದೆಂಬ ಅರ್ಥವೇನೂ ಸರಿಯಲ್ಲ. ಭಾಗವತ ಮತದಲ್ಲಿ ಬರಿಯ ಪ್ರವೃತ್ತಿ ಧರ್ಮವನ್ನು ಹೇಳಿದೆಯೆಂಬುದೂ ಸರಿಯಲ್ಲ. ಭಾಗವತಮತದ ಸ್ವರೂಪವೇನೆಂಬುದನ್ನು ಮುಂದೆ ಭಕ್ತಿಯ ನಿರೂಪಣೆಯನ್ನು ಮಾಡುವಾಗ ವಿವೇಚನೆಗೆ ತೆಗೆದುಕೊಳ್ಳುತ್ತೇನೆ. ಇಲ್ಲಿ ಭಾಗವತಮತದಲ್ಲಿ ಪ್ರವೃತ್ತಿ ಧರ್ಮವೊಂದೇ ಇದೆಯೆ, ಬೇರೆಯೇನಾದರೂ ಅದರಲ್ಲಿ ಸೇರಿದೆಯೆ? ಎಂಬ ಪ್ರಶ್ನೆಗೆ ಮಾತ್ರ ಉತ್ತರವನ್ನು ಕಂಡುಕೊಳ್ಳಬೇಕಾಗಿರುವದರಿಂದ ಅಷ್ಟನ್ನೇ ಇಲ್ಲಿ ಚರ್ಚೆಗೆ ಇಟ್ಟುಕೊಳ್ಳುತ್ತೇನೆ.
ಇದೇ ನಾರಾಯಣೀಯದಲ್ಲಿ ಗೀತೆಯ ವಿಷಯಕ್ಕೆ ಮತ್ತೊಂದು ಮಹತ್ತ್ವದ ಶ್ಲೋಕವುಂಟು. ಅದು ಯಾವುದೆಂದರೆ :
ಯತೀನಾಂ ಚಾಪಿ ಯೋ ಧರ್ಮಃ ಸ ತೇ ಪೂರ್ವಂ ನರೋತ್ತಮ |
ಕಥಿತೋ ಹರಿಗೀತಾಸು ಸಮಾಸವಿಧಿಕಲ್ಪಿತಃ || 348-53 ||
''ಇದಲ್ಲದೆ ಯತಿಗಳ ಧರ್ಮವನ್ನೂ, ಎಲೈ ರಾಜನೆ, ನಿನಗೆ ಈ ಮುಂಚೆ ಭಗವದ್ಗೀತೆಯಲ್ಲಿ ಸಂಕ್ಷೇಪರೀತಿಯಿಂದ ಹೇಳಿರುತ್ತೇನೆ'' (ಮೋ. 348.53) ಎಂದು ವೈಶಂಪಾಯನನು ಜನಮೇಜಯನಿಗೆ ಹೇಳಿರುತ್ತಾನೆ. ಈ ವಾಕ್ಯದಂತೆ ನೋಡಿದರೆ ಭಗವದ್ಗೀತೆಯಲ್ಲಿ ಪ್ರವೃತ್ತಿಧರ್ಮವನ್ನೇ ಅಲ್ಲದೆ ನಿವೃತ್ತಿಧರ್ಮವನ್ನೂ ಹೇಳಿರುತ್ತದೆಯೆಂಬುದೇ ಭಾರತಕಾರರ ಮತವೆಂದು ನಿಶ್ಚಯವಾಗುತ್ತದೆ. “ಆದರೆ ಈ ಮೇರೆಗೆ ಪ್ರವೃತ್ತಿ ಧರ್ಮದೊಂದಿಗೇ ಯತಿಗಳ ನಿವೃತ್ತಿ ಧರ್ಮವನ್ನೂ ಗೀತೆಯಲ್ಲಿ ಹೇಳಿದ್ದರೂ ಗೀತೆಯಲ್ಲಿ ಕೊಟ್ಟಿರುವ ಮನು-ಇಕ್ಷ್ವಾಕು ಇತ್ಯಾದಿ ಗೀತಾಧರ್ಮದ ಪರಂಪರೆಯು ಈ ಯತಿಧರ್ಮಕ್ಕೆ ಎಳ್ಳಷ್ಟಾದರೂ ಹೊಂದದೆ ಭಾಗವತಧರ್ಮದ ಪರಂಪರೆಗೆ ಮಾತ್ರ ಹೊಂದುತ್ತದಾದ ಕಾರಣ, ಗೀತೆಯಲ್ಲಿ ಅರ್ಜುನನಿಗೆ ಮಾಡಿದ ಉಪದೇಶವು ಪ್ರಾಮುಖ್ಯವಾಗಿ ಮನು-ಇಕ್ಷಾಕು ಮುಂತಾದವರ ಪರಂಪರೆಯಿಂದ ನಡೆದುಬಂದ ಪ್ರವೃತ್ತಿಪರವಾದ ಭಾಗವತಧರ್ಮದ ಉಪದೇಶವಾಗಿದ್ದು, ಅದರಲ್ಲಿ ನಿವೃತ್ತಿಧರ್ಮದ ನಿರೂಪಣೆಯೂ ಆನುಷಂಗಿಕವಾಗಿ ಬಂದಿರುತ್ತದೆಂದು ಮಹಾಭಾರತಕರ್ತರ ಅಭಿಪ್ರಾಯವಿದ್ದಂತೆ ಮೇಲಿನ ಎಲ್ಲಾ ವಚನಗಳಿಂದ ನಿಷ್ಪನ್ನವಾಗುತ್ತದೆ” (ಗೀ.ರ.10) ಎಂದು ಗೀತಾರಹಸ್ಯಕಾರರು ಹೇಳಿದ್ದಾರೆ. ಇವರ ಆಶಯವೇನೆಂದರೆ ''ಭಾಗವತ ಧರ್ಮವು ಪ್ರವೃತ್ತಿ ಪರವೇ, ಗೀತೆಯಲ್ಲಿಯೂ ಮುಖ್ಯವಾಗಿ ಇದೇ ಧರ್ಮವು ಉಪದಿಷ್ಟವಾಗಿರುತ್ತದೆ; ನಿವೃತ್ತಿಧರ್ಮವು ಯತಿಗಳದು, ಅದು ಭಾಗವತಧರ್ಮವಲ್ಲ. ಅದನ್ನು ಗೀತೆಯಲ್ಲಿ ಅಲ್ಲಲ್ಲಿ ಸಂದರ್ಭಕ್ಕೋಸ್ಕರ ತೆಗೆದುಕೊಂಡಿರುತ್ತದೆ. ಇಷ್ಟೆ ಹೊರತು ಅದಕ್ಕೂ ಗೀತೆಗೂ ಏನೂ ಸಂಬಂಧವಿಲ್ಲ.'' ಈ ಅಭಿಪ್ರಾಯಕ್ಕೆ ಯಾವ ಆಧಾರವೂ ಇಲ್ಲವೆಂತಲೂ ಪ್ರವೃತ್ತಿ ನಿವೃತ್ತಿಶಬ್ದಗಳಿಗೆ ರಹಸ್ಯಕಾರರು ಕೊಟ್ಟಿರುವ ಅರ್ಥವು ಸರಿಯಲ್ಲವೆಂತಲೂ ಭಾರತ ಶ್ಲೋಕಗಳನ್ನು ಗೀತಾರಹಸ್ಯಕಾರರು ಸರಿಯಾಗಿ ಅರ್ಥಮಾಡಿಕೊಂಡಿರುವದಿಲ್ಲವೆಂತಲೂ ನನ್ನ ನಿಶ್ಚಿತವಾದ ಮತವಾಗಿರುತ್ತದೆ. ಗೀತೆಯಲ್ಲಿ ಯತಿಧರ್ಮವನ್ನು ಹೇಳಿರುತ್ತದೆಯೆಂದು ನಾರಾಯಣೀಯದಲ್ಲಿ ಸ್ಪಷ್ಟವಾಗಿ ಹೇಳಿರುವಲ್ಲಿ ಅದನ್ನು ಕೈಬಿಡುವದಕ್ಕೆ ಕಾರಣವೇನು? ಗುರುಪರಂಪರೆಗೆ ಹೊಂದುವದಿಲ್ಲವೆಂಬ ಕುಂಟು ನೆಪವು ಇದಕ್ಕೆ ಸಾಲದಾಗಿದೆ. ಏಕೆಂದರೆ ಮನುಸ್ಮೃತಿಯೇ ಮುಂತಾದುವುಗಳಲ್ಲಿ ವರ್ಣಿಸಿರುವ ಪ್ರತಿಯೊಂದು ಧರ್ಮವನ್ನೂ ಆಯಾ ಸ್ಮೃತಿಕಾರನು ಅನುಸರಿಸಬೇಕೆಂದು ಯಾರೂ ಬಗೆಯುವದಿಲ್ಲ. ಇದರಂತೆ ಮನ್ವಾದಿಗಳು ಯತಿಧರ್ಮವನ್ನು ತಾವೇ ಆಚರಿಸಬೇಕಾದದ್ದು ಇಲ್ಲ, ಇನ್ನು ಭಾಗವತ ಧರ್ಮವು ಪ್ರವೃತ್ತಿಯೆಂಬುದನ್ನು ಏತರಿಂದ ನಿರ್ಣಯಿಸಬೇಕು? ನಾರಾಯಣೀಯದಲ್ಲಂತೂ ಈ ಮಾತು ಇಲ್ಲ. ಇದನ್ನು ವಾಚಕರಿಗೆ ಮನಗಾಣಿಸಿಕೊಡುವದಕ್ಕೆ ಇನ್ನು ಪ್ರಯತ್ನ ಮಾಡುತ್ತೇನೆ.
ನಾರಾಯಣೀಯೋಪಾಖ್ಯಾನವು ಏನು ಹೇಳುವದಕ್ಕೆ ಬಂದಿದೆ ಎಂಬುದನ್ನು ಉಪಕ್ರಮಾದಿಗಳಿಂದ ಮೊದಲು ನಿಶ್ಚಯಿಸಿಕೊಳ್ಳುವದು ಈ ವಿಚಾರಕ್ಕೆ ಅತ್ಯವಶ್ಯವಾಗಿರುತ್ತದೆ. ಆದ್ದರಿಂದ ಭಾರತವನ್ನು ತಾವೇ ಓದಿ ನಿರ್ಣಯಮಾಡಿಕೊಳ್ಳಬಲ್ಲವರ ಅನುಕೂಲಕ್ಕೆ ಇದರ ದಿಗ್ದರ್ಶನವನ್ನು ಮಾಡುತ್ತೇನೆ. ಈ ಆಖ್ಯಾನದ ಮೊದಲನೆಯ ಶ್ಲೋಕವೇನೆಂದರೆ
ಗೃಹಸ್ಥೋ ಬ್ರಹ್ಮಚಾರೀ ವಾ ವಾನಪ್ರಸ್ಥೋಽಥ ಭಿಕ್ಷುಕಃ |
ಯ ಇಚ್ಛೇತ್ಸಿದ್ಧಿಮಾಸ್ಥಾತುಂ ದೇವತಾಂ ಕಾಂ ಯಜೇತ ಸಃ || 1 ||
ಇದು ಭೀಷ್ಮನನ್ನು ಕುರಿತು ಯುಧಿಷ್ಠಿರನು ಮಾಡಿದ ಪ್ರಶ್ನೆಯು, “ಎಲೈ ಭೀಷ್ಮನೆ, ಗೃಹಸ್ಥನಾಗಲಿ, ಬ್ರಹ್ಮಚಾರಿಯಾಗಲಿ, ವಾನಪ್ರಸ್ಥನಾಗಲಿ, ಸಂನ್ಯಾಸಿಯಾಗಲಿ - ತನಗೆ ಸಿದ್ಧಿಯಾಗಬೇಕೆಂದು ಇಚ್ಛೆಯಿದ್ದರೆ ಯಾವ ದೇವತೆಯನ್ನು ಪೂಜಿಸಬೇಕು?'' ಎಂಬುದು ಇದರ ಭಾವಾರ್ಥವು.
(1) ಈ ಶ್ಲೋಕವನ್ನು ನೋಡಿದರೆ ಈ ಧರ್ಮವು ಯಾವದೊಂದು ಮುಖ್ಯ ಆಶ್ರಮವನ್ನು ಕುರಿತು ಬರೆದದ್ದಲ್ಲವೆಂದೂ, ಸರ್ವಸಾಧಾರಣವಾಗಿ ಸ್ವರ್ಗಮೋಕ್ಷಗಳೆಂಬ ಗತಿ (334.2-3)ಗಳು ಆಗಬೇಕಾದರೆ ಮಾಡುವ ಸಾಧನೆಗೆ ಯಾವ ದೇವತೆಯನ್ನು ವಿಷಯವಾಗಿಟ್ಟುಕೊಳ್ಳಬೇಕೆಂಬುದೇ ಇಲ್ಲಿ ಮುಖ್ಯವಾಗಿ ಬೇಕಾಗಿರುವದೆಂದೂ ಗೊತ್ತಾಗುತ್ತದೆ. ಆದ್ದರಿಂದ ಇಲ್ಲಿ ಉಪಕ್ರಮದಲ್ಲಿ ಪ್ರವೃತ್ತಿ ನಿವೃತ್ತಿ ವಿಚಾರವೇನೂ ಇರುವದಿಲ್ಲ. ನಿವೃತ್ತಿಪರರಾದ ಸಂನ್ಯಾಸಿಗಳಿಗೂ ಪ್ರವೃತ್ತಿಪರರಾದ ಇತರ ಆಶ್ರಮದವರಿಗೂ ಸಮವಾಗಿಯೇ ಈ ಪ್ರಶ್ನೆಯು ಅನ್ವಯಿಸುತ್ತದೆ.
(2) ಇನ್ನೂ ಮುಂದಕ್ಕೆ ಈ ಆಖ್ಯಾಯಿಕೆಯನ್ನು ನೋಡುತ್ತಾ ಹೋದರೆ (335ನೆಯ ಅಧ್ಯಾಯದಲ್ಲಿ) ಈ ಭಾಗವತಧರ್ಮದ ಉತ್ಪತ್ತಿಕ್ರಮವನ್ನು ವರ್ಣಿಸಿರುತ್ತದೆ. ಅದರಲ್ಲಿ ಉಪರಿಚರವಸುವೆಂಬ ರಾಜನ ಕಥೆಯನ್ನು ಹೇಳುವದಕ್ಕೆ ಪ್ರಾರಂಭಿಸಿ ಅವನು ಚಿತ್ರಶಿಖಂಡಿಗಳೆಂಬ ಏಳುಜನ ಋಷಿಗಳು ಮಾಡಿದ ಶಾಸ್ತ್ರವನ್ನು ಕಲಿತುಕೊಂಡನೆಂದು ತಿಳಿಸಿರುತ್ತದೆ (336.3). ಈ ಶಾಸ್ತ್ರದಲ್ಲಿ ಧರ್ಮಾರ್ಥಕಾಮಗಳೂ ಮೋಕ್ಷವೂ ಎಲ್ಲವೂ ಪ್ರತಿಪಾದಿತವಾಗಿತ್ತು (335.33). ಅವರು ಶ್ರೀಮನ್ನಾರಾಯಣನನ್ನು ಆರಾಧನೆ ಮಾಡಿ ಈ ಶಾಸ್ತ್ರವನ್ನು ರಚಿಸಿದ್ದರು. ಅವರ ಶಾಸ್ತ್ರವು ಮುಗಿಯುವ ಹೊತ್ತಿಗೆ ಭಗವಂತನು ಅವರಿಗೆ ಪ್ರಸನ್ನನಾಗಿ
ಕೃತಂ ಶತಸಹಸ್ರಂ ಹಿ ಶ್ಲೋಕಾನಾಮಿದಮುತ್ತಮಮ್ |
ಲೋಕತಂತ್ರಸ್ಯ ಕೃತ್ಸ್ನಸ್ಯ ಯಸ್ಮಾದ್ಧರ್ಮಃ ಪ್ರವರ್ತತೇ ॥ 39 ||
ಪ್ರವೃತ್ತೌ ಚ ನಿವೃತ್ತೌ ಚ ಯಸ್ಮಾದೇತದ್ಭವಿಷ್ಯತಿ |
ಯಜುರ್ಋಕ್ಸಾಮಭಿರ್ಜುಷ್ಟಮಥರ್ವಾಙ್ಗಿರಸೈಸ್ತಥಾ || 40 ||
ಭವಿಷ್ಯತಿ ಪ್ರಮಾಣಂ ವೈ ಏತನ್ಮದನುಶಾಸನಮ್ II 44 II
“ಎಲೈ ಋಷಿಗಳಿರಾ, ನೀವು ಮಾಡಿರುವ ನೂರುಸಾವಿರ ಶ್ಲೋಕಗಳಿಂದ ಕೂಡಿದ ಈ ಗ್ರಂಥವು ಲೋಕದಲ್ಲೆಲ್ಲಾ ಧರ್ಮವು ನಡೆಯುವದಕ್ಕೆ ಕಾರಣವಾಗುವದು. ಇದು ಪ್ರವೃತ್ತಿಗೂ ನಿವೃತ್ತಿಗೂ ಅನುಕೂಲವಾಗಿರುವದು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದಗಳಿಂದ ಇದು ಕೂಡಿರುತ್ತದೆ. ಇದು ಎಲ್ಲರಿಗೂ ಪ್ರಮಾಣವಾಗಲಿ. ಇದೇ ನನ್ನ ಅಪ್ಪಣೆಯು" (ಮೋ. 335.39-44) ಎಂದು ಅನುಗ್ರಹಿಸಿದನು.
ಈ ಶಾಸ್ತ್ರಪ್ರಶಂಸೆಯನ್ನು ನೋಡಿದರೆ ಭಾಗವತಧರ್ಮದಲ್ಲಿ ಪ್ರವೃತ್ತಿನಿವೃತ್ತಿ ಧರ್ಮಗಳೆರಡೂ ಇರುವವೆಂದು ಸಿದ್ಧವಾಗುತ್ತದೆ.
(3) ಈ ಆಖ್ಯಾನವನ್ನು ಅವಲೋಕಿಸುತ್ತಾ ಹೋದರೆ ಇನ್ನೊಂದು ಶ್ಲೋಕವು ಕಣ್ಣಿಗೆ ಬೀಳುವದು. ನಾರದಋಷಿಗೆ ವಿಶ್ವರೂಪವನ್ನು ತೋರಿಸಿದ ನಾರಾಯಣ ಭಗವಂತನು ತಾನು ಪೂರ್ವದಲ್ಲಿ ಬ್ರಹ್ಮನಿಗೆ ಪ್ರಸನ್ನನಾಗಿ ವರಗಳನ್ನು ಕೊಟ್ಟ ಬಳಿಕ ನಿವೃತ್ತಿಪರನಾದೆನೆಂದು ಹೇಳಿಕೊಂಡಿರುತ್ತಾನೆ.
ಏತಾಂಶ್ಚಾನ್ಯಾಂಶ್ಚ ರುಚಿರಾನ್ ಬ್ರಹ್ಮಣೇಽಮಿತತೇಜಸೇ।
ಅಹಂ ದತ್ತ್ವಾ ವರಾನ್ ಪ್ರೀತೋ ನಿವೃತ್ತಿಪರಮೋsಭವಮ್ ||
ನಿರ್ವಾಣಂ ಸರ್ವಧರ್ಮಾಣಾಂ ನಿವೃತ್ತಿಃ ಪರಮಾ ಸ್ಮೃತಾ |
ತಸ್ಮಾನ್ನಿವೃತ್ತಿಮಾಪನ್ನಶ್ಚರೇತ್ಸರ್ವಾಙ್ಗನಿರ್ವೃತಃ ||
ಇವೇ ಮುಂತಾದ ವರಗಳನ್ನು ಅಪರಿಮಿತವಾದ ತೇಜಸ್ಸುಳ್ಳ ಆ ಬ್ರಹ್ಮನಿಗೆ ಕೊಟ್ಟಮೇಲೆ ನಾನು ನಿವೃತ್ತಿಯಲ್ಲಿಯೇ ಆಸಕ್ತನಾಗಿಬಿಟ್ಟೆನು. ಧರ್ಮಗಳೆಲ್ಲ ಇಲ್ಲವಾಗುವ ನಿವೃತ್ತಿಯೇ ಹೆಚ್ಚಿನದೆನಿಸುವದು; ಆದ್ದರಿಂದ ನಿವೃತ್ತಿಯನ್ನು ಪಡೆದು ಪರಿಪೂರ್ಣವಾದ ಆನಂದದಿಂದ ಇರತಕ್ಕದ್ದು (ಮೋ. 339.66-67).
ಈ ಶ್ಲೋಕಗಳು ಪ್ರಕೃತವಾದ ವಿಷಯವನ್ನು ನಿರ್ಣಯಮಾಡುವದಕ್ಕೆ ತುಂಬ ಉಪಯೋಗವಾಗುವವು. ಏಕೆಂದರೆ ಭಗವಂತನು ಇಲ್ಲಿ ತಾನು ತನ್ನ ಕಾರ್ಯಾಂತದಲ್ಲಿ ನಿವೃತ್ತಿಪರನಾದೆನೆಂದು ಹೇಳಿರುವದಲ್ಲದೆ ಅದೇ ಎಲ್ಲಕ್ಕೂ ಹೆಚ್ಚಿನ ಧರ್ಮವೆಂದೂ, ಆದಕಾರಣ ಎಲ್ಲರೂ ನಿವೃತ್ತಿಧರ್ಮದ ಆನಂದವನ್ನು ಪಡೆಯುವದಕ್ಕೆ ಯತ್ನಿಸಬೇಕೆಂದೂ ಸ್ಪಷ್ಟವಾಗಿ ಹೇಳಿಟ್ಟಿರುತ್ತಾನೆ. ಇದನ್ನು ನೋಡಿದರೆ ನಿವೃತ್ತಿಧರ್ಮವು ಭಾಗವತಧರ್ಮದೊಳಗೆ ಸೇರಿಕೊಂಡಿರುವದೊಂದೇ ಅಲ್ಲದೆ ಅದರಲ್ಲಿ ಪ್ರವೃತ್ತಿಗಿಂತಲೂ ನಿವೃತ್ತಿಗೇ ಹೆಚ್ಚಿನ ಸ್ಥಾನವನ್ನೂ ಕೊಟ್ಟಿರುತ್ತದೆಯೆಂದು ಒಡೆದುಮೂಡಿದಂತೆ ಕಾಣಿಸುತ್ತದೆ.
(4) ಈ ನಾರಾಯಣೀಯೋಪಾಖ್ಯಾನದಲ್ಲಿ ಪ್ರವೃತ್ತಿ-ನಿವೃತ್ತಿಧರ್ಮಗಳೆರಡೂ ಇರುವವೆಂಬುದಕ್ಕೆ ಸಾಕ್ಷಿಗಳು ಇಷ್ಟೇ ಅಲ್ಲ. ಏಕೆಂದರೆ ಮುಂದಕ್ಕೆ ಹೋದರೆ ಈ ವಿಷಯವನ್ನು ಉಪಾಖ್ಯಾನದಲ್ಲಿಯೇ ಪ್ರಶೋತ್ತರಗಳ ಮೂಲಕವಾಗಿಯೂ ನಿಸ್ಸಂದಿಗ್ಧವಾಗಿ ನಿರೂಪಿಸಿರುವದು ಕಂಡುಬರುತ್ತದೆ. ನಾರದನು ಭಗವನ್ನಾರಾಯಣನಿಂದ ತಾನು ತಿಳಿದ ಭಾಗವತಧರ್ಮವನ್ನು ಬ್ರಹ್ಮಸಭೆಯಲ್ಲಿ ಹೇಳಿದನೆಂದೂ ಅಲ್ಲಿಂದ ಮುಂದಕ್ಕೆ ಪರಂಪರೆಯಿಂದ ಈ ಧರ್ಮವು ಲೋಕದಲ್ಲೆಲ್ಲ ಹರಡಿಕೊಂಡಿತೆಂದೂ ಸೌತಿಯು ಶೌನಕಾದಿ ಋಷಿಗಳಿಗೆ ಹೇಳಲು ಶೌನಕನು ಬಂದು ಪ್ರಶ್ನೆಯನ್ನು ಮಾಡಿರುತ್ತಾನೆ. ಅದೇನೆಂದರೆ—
ಕಥಂ ಸ ಭಗವಾನ್ ದೇವೋ ಯಜ್ಞೇಷ್ಟಗ್ರಹರಃ ಪ್ರಭುಃ |
ಯಜ್ಞಧಾರೀ ಚ ಸತತಂ ವೇದವೇದಾಂಗವಿತ್ತಥಾ ||
ನಿವೃತ್ತಿಂ ಚಾಸ್ಥಿತೋ ಧರ್ಮಂ ಕ್ಷಮೀ ಭಾಗವತಃ ಪ್ರಭುಃ |
ನಿವೃತ್ತಿಧರ್ಮಾನ್ವಿದಧೇ ಸ ಏವ ಭಗವಾನ್ ಪ್ರಭುಃ ||
ಕಥಂ ಪ್ರವೃತ್ತಿಧರ್ಮೇಷು ಭಾಗಾರ್ಹಾ ದೇವತಾಃ ಕೃತಾಃ |
ಕಥಂ ನಿವೃತ್ತಿಧರ್ಮಾಶ್ಚ ಕೃತಾ ವ್ಯಾವೃತ್ತಬುದ್ಧಯಃ ||
“ಎಲೈ ಸೂತಪುತ್ರನೆ, ಆ ಭಗವಂತನಾದ ದೇವನು ಯಜ್ಞಗಳಲ್ಲೆಲ್ಲ ಮುಖ್ಯಭಾಗಕ್ಕೆ ತಕ್ಕವನೆಂಬುದು ಹೇಗೆ? ಅವನೇ ಯಜ್ಞವನ್ನು ನಡೆಸುವದಕ್ಕೆ ಆಧಾರನೆಂಬುದು ಹೇಗೆ? ವೇದಗಳನ್ನೂ ವೇದಾಂಗಗಳನ್ನೂ ಬಲ್ಲವನೆಂಬುದು ಹೇಗೆ? ಮತ್ತು ಅದೇ ಪ್ರಭುವಾದ ಭಗವಂತನು ಶಾಂತಿಯಿಂದ ನಿವೃತ್ತಿಧರ್ಮವನ್ನು ಅನುಸರಿಸುವನೆಂಬುದು ಹೇಗೆ? ನಿವೃತ್ತಿಧರ್ಮಗಳನ್ನು ಏರ್ಪಡಿಸಿರುವನೆಂಬುದು ಹೇಗೆ? ದೇವತೆಗಳಿಗೆಲ್ಲ ಪ್ರವೃತ್ತಿಧರ್ಮಗಳಲ್ಲಿ ಬೇರೆಬೇರೆ ಭಾಗಗಳು ಇರುವವೆಂದು ಆತನು ಕಲ್ಪಿಸಿದ್ದು ಹೇಗೆ? ಯಾರು ನಿವೃತ್ತಿಧರ್ಮವನ್ನು ಅಂಗೀಕರಿಸುವರೋ ಅಂಥವರಿಗೆ ಬುದ್ದಿಯು ವ್ಯವಹಾರದಲ್ಲಿ ತೊಡಗದಂತೆ ಹಿಂತಿರುಗುವಹಾಗೆ ಮಾಡಿದ್ದು ಹೇಗೆ? ಈ ಸಂಶಯವನ್ನು ನಮಗೆ ತಿಳಿಸುವವನಾಗು.” (ಮೋ. 340. 1-3)
ಈ ಪ್ರಶ್ನೆಗಳನ್ನು ವಿವೇಚನೆ ಮಾಡುವವರಿಗೆ ತಿಳಿಯಬರುವದೇನೆಂದರೆ, ಸಾಮಾನ್ಯ ಬುದ್ಧಿಯುಳ್ಳ ನಮಗೆ ವಿರುದ್ಧವಾಗಿ ಕಾಣುವ ಪ್ರವೃತ್ತಿಧರ್ಮವನ್ನೂ ನಿವೃತ್ತಿಧರ್ಮವನ್ನೂ ಎರಡನ್ನೂ ತಾನೇ ಜನರಿಗೆ ಬೋಧಿಸಿರುವನೆಂದು ನಂಬುವದು ಕಷ್ಟವಾಗಿದೆ. ಆದ್ದರಿಂದ ಅದೇ ಭಗವಂತನೇ ಇವೆರಡು ಧರ್ಮಗಳನ್ನು ಉಪದೇಶ ಮಾಡಿರುತ್ತಾನೆಯೆ? ಇವೆರಡಕ್ಕೂ ಸಂಬಂಧವೇನು? ತಿಳಿಸು - ಎಂದು ಶೌನಕನು ಕೇಳಿರುತ್ತಾನೆ. ಸೂತಪುತ್ರನು ಇದಕ್ಕೆ ಉತ್ತರವನ್ನು ಕಥಾರೂಪವಾಗಿ ವಿವರಿಸಿರುತ್ತಾನೆ. ಅದರಲ್ಲಿರುವ ಸಾರಾಂಶವೇನೆಂದರೆ ನಾರಾಯಣ ಭಗವಂತನು ತಾನೇ ಸೃಷ್ಟಿಮಾಡಿದ ಬ್ರಹ್ಮನೇ ಮುಂತಾದ ದೇವತೆಗಳನ್ನು ಕುರಿತು ನೀವು ನನ್ನ ಪ್ರೀತ್ಯರ್ಥವಾಗಿ ಯಜ್ಞವನ್ನು ಮಾಡಿರೆಂದು ಅಪ್ಪಣೆಮಾಡಲು ಅವರು ಅದರಂತೆ ಮಾಡಿದರು. ದೇವತೆಗಳು ಆ ಮೊದಲಿನ ಯಜ್ಞದಲ್ಲಿ ವಿಷ್ಣುಪ್ರೀತ್ಯರ್ಥವಾಗಿ ಯಾವಯಾವ ಭಾಗವನ್ನು ಸಮರ್ಪಿಸಿದರೋ ಆಯಾ ಭಾಗವೇ ಅವರವರಿಗೆ ಪ್ರತಿಯುಗದಲ್ಲಿಯೂ ಉಂಟಾಗಲೆಂದು ಹರಸಿದನು (340.62-63).
ಯೇನ ಯಃ ಕಲ್ಪಿತೋ ಭಾಗಃ ಸ ತಥಾ ಮಾಮುಪಾಗತಃ |
ಪ್ರೀತೋಽಹಂ ಪ್ರದಿಶಾಮ್ಯದ್ಯ ಫಲಮಾವೃತ್ತಿಲಕ್ಷಣಮ್ ||
“ದೇವತೆಗಳಲ್ಲಿ ಯಾವ ಯಾವನು ಹೇಗೆ ಹೇಗೆ ನನಗೋಸ್ಕರ ಯಜ್ಞಭಾಗವನ್ನು ಕಲ್ಪಿಸಿದನೋ ಅದು ಹಾಗೆ ಹಾಗೆಯೇ ನನಗೆ ಮುಟ್ಟಿರುತ್ತದೆ. ಆದ್ದರಿಂದ ನನಗೆ ಸಂತೋಷವಾಗಿರುವದು. ಇಗೋ, ನಿಮಗೆ ಮತ್ತೆಮತ್ತೆ ಈ ಕರ್ಮದ ಫಲವು ಬರುತ್ತಿರುವಂತೆ (ಆವೃತ್ತಿಲಕ್ಷಣಂ) ಕೊಟ್ಟಿರುತ್ತೇನೆ'' (340.59) ಎಂದು ಹೇಳಿದ್ದಲ್ಲದೆ,
ಮರೀಚಿರಂಗಿರಾಶ್ಚಾತ್ರಿಃ ಪುಲಸ್ತ್ಯಃ ಪುಲಹಃ ಕ್ರತುಃ |
ವಸಿಷ್ಠ ಇತಿ ಸಪೈತೇ ಮಾನಸಾ ನಿರ್ಮಿತಾ ಹಿ ತೇ ||
ಏತೇ ವೇದವಿದೋ ಮುಖ್ಯಾ ವೇದಾಚಾರ್ಯಾಶ್ಚ ಕಲ್ಪಿತಾಃ |
ಪ್ರವೃತ್ತಿಧರ್ಮಿಣಶ್ಚೈವ ಪ್ರಾಜಾಪತ್ಯೇ ಚ ಕಲ್ಪಿತಾಃ ||
ಮರೀಚಿ, ಆಂಗಿರಸ್ಸು, ಅತ್ರಿ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ - ಈ ಏಳು ಜನರು ಬ್ರಹ್ಮನ ಮಾನಸಪುತ್ರರು. ಇವರು ವೇದವನ್ನು ಬಲ್ಲವರು. ಮುಖ್ಯವಾಗಿ ಇವರೇ ವೇದಾಚಾರ್ಯರು. ಪ್ರವೃತ್ತಿಧರ್ಮದಲ್ಲಿದ್ದುಕೊಂಡು ಇವರು ಪ್ರಜಾಪತಿಗಳಾಗಿರುವರು (ಸಪ್ತ ಪ್ರಜಾಪತಿಗಳು) (340-69, 70) - ಎಂದು ಹೇಳಿದನು. ಆಮೇಲೆ -
ಸನಃ ಸನತ್ಸುಜಾತಶ್ಚ ಸನಕಶ್ಚ ಸನಂದನಃ |
ಸನತ್ಕುಮಾರಃ ಕಪಿಲಃ ಸಪ್ತಮಶ್ಚ ಸನಾತನಃ ||
ಸಪ್ತೈತೇ ಮಾನಸಾಃ ಪ್ರೋಕ್ತಾ ಋಷಯೋ ಬ್ರಹ್ಮಣಃ ಸುತಾಃ |
ಸ್ವಯಮಾಗತವಿಜ್ಞಾನಾ ನಿವೃತ್ತಿಂ ಧರ್ಮಮಾಸ್ಥಿತಾಃ ||
ಏತೇ ಯೋಗವಿದೋ ಮುಖ್ಯಾಃ ಸಾಂಖ್ಯಜ್ಞಾನವಿಶಾರದಾಃ |
ಆಚಾರ್ಯಾ ಧರ್ಮಶಾಸ್ತ್ರೇಷು ಮೋಕ್ಷಧರ್ಮಪ್ರವರ್ತಕಾಃ ||
''ಸನ, ಸನತ್ಸುಜಾತ, ಸನಕ, ಸನಂದನ, ಸನತ್ಕುಮಾರ, ಕಪಿಲ, ಸನಾತನ - ಎಂಬ ಈ ಏಳುಜನ ಬ್ರಹ್ಮನ ಮಾನಸಪುತ್ರರು ಹುಟ್ಟುತ್ತಲೇ ಜ್ಞಾನಿಗಳಾಗಿ ನಿವೃತ್ತಿಧರ್ಮದಲ್ಲಿರುತ್ತಾರೆ. ಇವರು ಯೋಗವನ್ನು ತಿಳಿದವರಲ್ಲಿ ಮುಖ್ಯರು, ಸಾಂಖ್ಯಜ್ಞಾನದಲ್ಲಿ ಜಾಣರು; ಇವರು ಧರ್ಮಶಾಸ್ತ್ರಗಳನ್ನು ತಿಳಿಸುವದಕ್ಕೆ ಆಚಾರ್ಯರಾಗಿರುವರು. ಮೋಕ್ಷಧರ್ಮಕ್ಕೆ ಇವರೇ ಪ್ರವರ್ತಕರಾಗಲಿ'' (340.72-74) ಎಂದು ಅಪ್ಪಣೆಕೊಟ್ಟನು.
ಭಗವಂತನ ಈ ಅಪ್ಪಣೆಯನ್ನು ಪರೀಕ್ಷಿಸಿದರೆ ಪ್ರವೃತ್ತಿ ನಿವೃತ್ತಿಧರ್ಮಗಳೆರಡನ್ನೂ ಆತನೇ ಚಾಲನೆಗೆ ಕೊಟ್ಟಿರುವನೆಂದು ಗೊತ್ತಾಗುವದಲ್ಲದೆ ಆ ಧರ್ಮಗಳ ಸ್ವರೂಪವೂ ಫಲವೂ ಇಲ್ಲಿ ಗೊತ್ತಾಗುವದು. ಪ್ರವೃತ್ತಿಯೆಂದರೆ ವೇದೋಕ್ತವಾದ ಕರ್ಮಗಳನ್ನು ಮಾಡುವದು; ನಿವೃತ್ತಿಯೆಂದರೆ ಸಾಂಖ್ಯ ಯೋಗಗಳನ್ನು ಅನುಷ್ಠಾನ ಮಾಡುವದು; ಪ್ರವೃತ್ತಿಗೆ ಪುನರಾವೃತ್ತಿಯೇ ಎಂದರೆ ಕರ್ಮದ ಆಯಾ ಫಲವನ್ನು ಪಡೆದು ಮತ್ತೆಮತ್ತೆ ಹುಟ್ಟುವದೇ ಫಲವು, ನಿವೃತ್ತಿಗೆ ಮೋಕ್ಷವೇ ಫಲವು. ಈ ಅಭಿಪ್ರಾಯವನ್ನು ಈ ಕೆಳಗಿನ ಶ್ಲೋಕಗಳಲ್ಲಿ ಭಾರತಕಾರರು ಉಪಸಂಹಾರ ಮಾಡಿರುತ್ತಾರೆ:
ಏವಮೇಷ ಮಹಾಭಾಗ ಪದ್ಮನಾಭಃ ಸನಾತನಃ |
ಯಜ್ಞೇಷ್ಟಗ್ರಹರಃ ಪ್ರೋಕ್ತೋ ಯಜ್ಞಧಾರೀ ಚ ನಿತ್ಯದಾ ||
ನಿವೃತ್ತಿಂ ಚಾಸ್ಥಿತೋ ಧರ್ಮಂ ಗತಿಮಕ್ಷಯಧರ್ಮಿಣಾಮ್ |
ಪ್ರವೃತ್ತಿಧರ್ಮಾನ್ವಿದಧೇ ಕೃತ್ವಾ ಲೋಕಸ್ಯ ಚಿತ್ರತಾಮ್ ||
"ಎಲೈ ಪುಣ್ಯಶಾಲಿಯಾದ ಶೌನಕನೇ, ಹೀಗೆ ಈ ಪದ್ಮನಾಭನು ಸನಾತನನಾಗಿರುವದರಿಂದ ಯಜ್ಞಕ್ಕೆ ಮೊದಲನೆಯ ಭಾಗಕ್ಕೆ ತಕ್ಕವನಾದನು. ಅವನು ಯಾವಾಗಲೂ ಯಜ್ಞವನ್ನು ಧರಿಸಿಕೊಂಡಿರುವನು. ತಾನೇ ನಿವೃತ್ತಿಧರ್ಮವನ್ನು ಅನುಸರಿಸಿಕೊಂಡು ಅಕ್ಷಯವಾದ ಆ ನಿವೃತ್ತಿಧರ್ಮವನ್ನನುಸರಿಸುವವರಿಗೆ ಗತಿಯಾಗಿಯೇ ಇದ್ದುಕೊಂಡು ಪ್ರವೃತ್ತಿಧರ್ಮವನ್ನೂ ಹೊರಡಿಸಿರುವನು. ಹೀಗೆ ಜಗತ್ತನ್ನು ಬಗೆಬಗೆಯಾಗಿ ಮಾಡಿರುತ್ತಾನೆ" (340.98-99).
ಮೇಲೆ ಮಾಡಿರುವ ನಾರಾಯಣೀಯೋಪಾಖ್ಯಾನದ ವಿವೇಚನೆಯಿಂದ ಕಂಡುಬರುವದೇನೆಂದರೆ ಭಾಗವತಧರ್ಮದಲ್ಲಿ ಪ್ರವೃತ್ತಿಧರ್ಮವೂ, ನಿವೃತ್ತಿಧರ್ಮವೂ ಎರಡೂ ಸೇರಿಕೊಂಡಿರುತ್ತವೆ; ಪ್ರವೃತ್ತಿಯೆಂದರೆ ಶಾಸ್ತ್ರೋಕ್ತ ಕರ್ಮಗಳನ್ನು ಮಾಡುವದು, ನಿವೃತ್ತಿಯೆಂದರೆ ಜ್ಞಾನಧ್ಯಾನಗಳಿಂದ ಆತ್ಮನಿಷ್ಠನಾಗಿರುವದು; ಇವೆರಡನ್ನೂ ಭಗವಂತನೇ ಸೃಷ್ಟಿಕಾಲದಲ್ಲಿ ಅನುಗ್ರಹಮಾಡಿರುತ್ತಾನಾದ್ದರಿಂದ ಎರಡೂ 'ಭಾಗವತ' ಮತವೆನಿಸಿಕೊಂಡಿವೆ; ಪ್ರವೃತ್ತಿಧರ್ಮಗಳಲ್ಲಿ ಸೇರಿದ ಯಜ್ಞಾದಿಗಳಿಗೂ ನಿವೃತ್ತಿಧರ್ಮದಲ್ಲಿ ಸೇರಿದ ಜ್ಞಾನಕ್ಕೂ ಗತಿಯಾದವನು ಆತನೇ. ಆದರೂ ಹೀಗೆ ಎಲ್ಲರೂ ಒಪ್ಪುವಂತೆ ಘಂಟಾಘೋಷವಾಗಿ ಸಾರಿರುವ ಈ ಭಾಗವತಮತವನ್ನು ಗೀತಾರಹಸ್ಯಕಾರರು ಪ್ರವೃತ್ತಿಪರವೆಂದು ಏತಕ್ಕೆ ಹೇಳಿರುವರೋ ತಿಳಿಯದು. ಸಾಂಪ್ರದಾಯಿಕ ಅಭಿಮಾನದಿಂದ ದೃಷ್ಟಿಯು ಕಲುಷಿತವಾಗಿರುವದರಿಂದ ತಮ್ಮ ಸಂಪ್ರದಾಯದ ಹೊರತು ಗ್ರಂಥಕ್ಕೆ ಬೇರೊಂದು ಅರ್ಥವಾಗುತ್ತಿದ್ದರೂ ಅದು ನಿಜವಾದ ಅರ್ಥವಲ್ಲವೆಂದೂ ಅದಕ್ಕೆ ಬೇರೊಂದು ಉದ್ದೇಶವಿರಬೇಕೆಂದೂ ಗ್ರಂಥದ ತಾತ್ಪರ್ಯದ ವಿಷಯಕ್ಕೆ ಮುಂಚಿತವಾಗಿಯೇ ಟೀಕಾಕಾರರೆಲ್ಲರಿಗೂ ದೃಢವಾದ ಗ್ರಹಿಕೆಯಾಗಿರುತ್ತದೆ ಎಂದು (ಗೀ.ರ. 24) ಇವರು ಹೇಳಿರುತ್ತಾರೆ. ಆದರೆ ಯಾವ ಅಭಿಮಾನವೂ ಇಲ್ಲದೆ ಗ್ರಂಥದ ತಾತ್ಪರ್ಯವನ್ನು ಇವರು ಹೊರಡಿಸಿದ್ದರೆ ಮೇಲೆ ಹೇಳಿದ ವಾಕ್ಯಗಳೆಲ್ಲ ಇವರ ಕಣ್ಣಿಗೆ ಏಕೆ ಬೀಳಲಿಲ್ಲವೋ ಅಥವಾ ಬಿದ್ದರೂ ಅವಕ್ಕೆ 'ಬೇರೆ ಉದ್ದೇಶವಿರಬೇಕೆಂದು ಗ್ರಹಿಕೆ'ಯಾಯಿತೋ ಹೇಳಲಶಕ್ಯವು.
ಇದಿರಲಿ, ನಾರಾಯಣಧರ್ಮವು ಪ್ರವೃತ್ತಿಲಕ್ಷಣವಾಗಿಯೇ ಇರುವದೆಂಬುದಕ್ಕೆ ಇವರು ಕೊಟ್ಟಿರುವ ವಾಕ್ಯವನ್ನೂ ಅದಕ್ಕೆ ಇವರು ಹೀಗೆ ಅಪಾರ್ಥವನ್ನು ಕಲ್ಪಿಸಿರುತ್ತಾರೆಂಬುದನ್ನೂ ವಾಚಕರಿಗೆ ತೋರಿಸಿಕೊಟ್ಟು ಈ ವಿಚಾರವನ್ನು ಸಾಕು ಮಾಡುವೆನು. ಈ ಉಪಾಖ್ಯಾನದಲ್ಲಿ ಭಗವಂತನ ಹಯಗ್ರೀವಾವತಾರವನ್ನು ಹೇಳುವ ಪ್ರಸಂಗದಿಂದ ಉಪಸಂಹಾರದಲ್ಲಿ ಪ್ರಕೃತಶ್ಲೋಕವು ಬಂದಿರುತ್ತದೆ. ಪರಮಾತ್ಮನು ಯಾವ ಯಾವ ರೂಪವನ್ನಾದರೂ ಕಾರ್ಯವಶದಿಂದ ತಾಳುವನೆಂದೂ, (ಮೋ. 347.79) ಈತನು ವೇದನಿಧಿಯು, ತಪೋನಿಧಿಯು, ಯೋಗಕ್ಕೂ ಸಾಂಖ್ಯಕ್ಕೂ ಗತಿಯು, ಬ್ರಹ್ಮಸ್ವರೂಪವು, ಹೋಮಕ್ಕೆ ಮುಖ್ಯವಾದ ದೇವತೆಯು (ಮೋ. 347.80)- ಎಂದೂ ಹೇಳಿದ ಮೇಲೆ,
ನಾರಾಯಣಪರಾ ವೇದಾ ಯಜ್ಞಾ ನಾರಾಯಣಾತ್ಮಕಾಃ |
ತಪೋ ನಾರಾಯಣಪರಂ ನಾರಾಯಣಪರಾ ಗತಿಃ || 81 ||
ನಾರಾಯಣಪರಂ ಸತ್ಯಮೃತಂ ನಾರಾಯಣಾತ್ಮಕಮ್ |
ನಾರಾಯಣಪರೋ ಧರ್ಮಃ ಪುನರಾವೃತ್ತಿದುರ್ಲಭಃ || 82 ||
ಪ್ರವೃತ್ತಿಲಕ್ಷಣಶ್ಚೈವ ಧರ್ಮೊ ನಾರಾಯಣಾತ್ಮಕಃ ||
ಎಂದು ಮುಂತಾದ ಶ್ಲೋಕಗಳು ಹೊರಟಿರುವವು. ವೇದ, ಯಜ್ಞ, ತಪಸ್ಸು, ಮೋಕ್ಷ ಮುಂತಾದವೆಲ್ಲ ನಾರಾಯಣಸ್ವರೂಪವೆಂಬುದೇ ಈ ಪ್ರಕರಣದ ಅರ್ಥವು. ಆದಕಾರಣ ಪುನರಾವೃತ್ತಿಯಿಲ್ಲದ (ನಿವೃತ್ತಿ) ಧರ್ಮವೂ ನಾರಾಯಣಾತ್ಮಕವಾಗಿರುವದು. ಪ್ರವೃತ್ತಿ ಧರ್ಮವೂ ನಾರಾಯಣಾತ್ಮಕವಾಗಿರುವದು- ಎಂದು ಸರಳವಾಗಿ ಅರ್ಥವಾಗುವ ಶ್ಲೋಕವನ್ನು ತಿರಿಚಿ ಭಾಗವತಧರ್ಮವು ಪ್ರವೃತ್ತಿಪರವೆಂದು ಅರ್ಥ ಮಾಡುವದು ನಿಷ್ಪಕ್ಷಪಾತಿಗಳಾದ ಯಾರಿಗೂ ಒಪ್ಪಾಗುವದಿಲ್ಲವೆಂದು ಧಾರಾಳವಾಗಿ ಹೇಳಬಹುದು.
ಇದೂ ಅಲ್ಲದೆ ನಿವೃತ್ತಿಧರ್ಮವನ್ನು ಭಗವಂತನು ಹೊಗಳಿರುವನೆಂದು ಹಿಂದೊಮ್ಮೆ ಒಂದು ಶ್ಲೋಕದ ಆಧಾರವನ್ನು ಕೊಟ್ಟು ತೋರಿಸಿರುತ್ತೇನಷ್ಟೆ. ಇದರ ಜತೆಗೆ ಪ್ರವೃತ್ತಿಧರ್ಮವನ್ನು ತಗ್ಗಿಸಿ ನುಡಿದಿರುವ ವಚನವೂ ಇದೇ ನಾರಾಯಣೀಯದಲ್ಲಿ ದೊರೆಯುತ್ತದೆ. ಈಗ ಅದನ್ನು ವಾಚಕರೆದುರಿಗೆ ಇಡುತ್ತೇನೆ.
ಜಾಯಮಾನಂ ಹಿ ಪುರುಷಂ ಯಂ ಪಶ್ಯನ್ಮಧುಸೂದನಃ |
ಸಾತ್ತ್ವಿಕಸ್ತು ಸ ವಿಜ್ಞೇಯೋ ಭವೇನ್ಮೋಕ್ಷೇ ಚ ನಿಶ್ಚಿತಃ ||
''ಯಾವ ಮನುಷ್ಯನು ಹುಟ್ಟಿದ ಕೂಡಲೇ ಅವನ ಮೇಲೆ ಮಧುಸೂದನನಾದ ಈ ಪರಮಾತ್ಮನು ಕೃಪಾದೃಷ್ಟಿಯನ್ನು ಬೀರುವನೋ ಅವನೇ ಸಾತ್ತ್ವಿಕನೂ ಮುಮುಕ್ಷುವೂ ಆಗುವನು.'' (348.73) ಎಂದು ಹೇಳಿ ಪರಮಾತ್ಮನ ಕೃಪೆಯನ್ನು ಹೊಗಳುವ ಸಂದರ್ಭದಲ್ಲಿ,
ರಾಜಸೀ ತಾಮಸೀ ಚೈವ ವ್ಯಾಮಿಶ್ರೇ ಪ್ರಕೃತೀ ಸ್ಮೃತೇ ।
ತದಾತ್ಮಕಂ ಹಿ ಪುರುಷಂ ಜಾಯಮಾನಂ ವಿಶಾಂ ಪತೇ ||
ಪ್ರವೃತ್ತಿಲಕ್ಷಣೈರ್ಯುಕ್ತಂ ನಾವೇಕ್ಷತಿ ಹರಿಃ ಸ್ವಯಮ್ |
ಪಶ್ಯತ್ಯೇನಂ ಜಾಯಮಾನಂ ಬ್ರಹ್ಮಾ ಲೋಕಪಿತಾಮಹಃ ||
''ರಾಜಸಪ್ರಕೃತಿಯೂ ತಾಮಸಪ್ರಕೃತಿಯೂ ಮಿಶ್ರಪ್ರಕೃತಿಯೆನಿಸುವವು. ಈ ಪ್ರಕೃತಿಗಳಿಂದೊಡಗೂಡಿ ಹುಟ್ಟಿ ಪ್ರವೃತ್ತಿಧರ್ಮದ ಲಕ್ಷಣಗಳಿಂದ ಕೂಡಿರುವಾತನ ಮೇಲೆ, ಎಲೈ ನರಪತಿಯೆ, ಸಾಕ್ಷಾದ್ಭಗವಂತನು ತನ್ನ ದೃಷ್ಟಿಯನ್ನೂ ಹಾಕುವದಿಲ್ಲ. ಜನರಿಗೆಲ್ಲ ಪಿತಾಮಹನೆನಿಸಿಕೊಂಡಿರುವ ಬ್ರಹ್ಮನು ಇವನ ಮೇಲೆ ದೃಷ್ಟಿಯನ್ನು ಹಾಕುವನು.'' (348.76, 17) ಎಂದು ಹೇಳಿರುತ್ತದೆ. "
ಇನ್ನು ಹೆಚ್ಚು ವಿಚಾರವೇನೂ ಅವಶ್ಯಕವಿರುವದಿಲ್ಲ. ನಾರಾಯಣೀಯದಲ್ಲಿಯೂ, ಭಗವದ್ಗೀತೆಯಂತೆಯೇ ಕರ್ಮವನ್ನೂ ಜ್ಞಾನವನ್ನೂ ಪ್ರವೃತ್ತಿಧರ್ಮ ನಿವೃತ್ತಿಧರ್ಮ ಎಂಬ ಹೆಸರುಗಳಿಂದ ಕರೆದಿರುತ್ತದೆಯೇ ಹೊರತು ಮತ್ತೆ ಬೇರೆ ಇಲ್ಲ. ನಿವೃತ್ತಿಧರ್ಮವು ಪ್ರವೃತ್ತಿಧರ್ಮಕ್ಕಿಂತ ಹೆಚ್ಚಿನದು. ಏಕೆಂದರೆ ಇದೇ ಕೊನೆಗೆ ಮೋಕ್ಷಕ್ಕೆ ಕಾರಣವಾಗಿರುವದು. ಪ್ರವೃತ್ತಿಧರ್ಮವು ನಿವೃತ್ತಿಧರ್ಮಕ್ಕಿಂತ ತಗ್ಗಿನದಾದರೂ ಅದೂ ಭಗವಂತನಿಗಾಗಿಯೇ ಮಾಡತಕ್ಕದ್ದು. ಇದನ್ನು ಆದಿಯಲ್ಲಿ ಭಗವಂತನು ಸೃಷ್ಟಿ ಮಾಡಿದ ಮರೀಚ್ಯಾದಿ ಋಷಿಗಳೇ ಬೋಧಿಸಿರುವರು. ಉಪರಿಚರವಸುವು ಭಗವತ್ಪ್ರೀತಿಗಾಗಿ ಈ ಧರ್ಮವನ್ನು ಮಾಡಲು ಅವನಿಗೆ ಉತ್ತಮ ಗತಿಯೇ ಆಯಿತು. ಯೋಗವೂ ಭಕ್ತಿಯೂ ನಿವೃತ್ತಿಧರ್ಮಕ್ಕೆ ಅಂಗವಾಗಿರುವದರಿಂದ ಪ್ರವೃತ್ತಿಧರ್ಮದಿಂದ ನಿವೃತ್ತಿಧರ್ಮವನ್ನು ಪಡೆದು, ನಿವೃತ್ತಿಧರ್ಮದಿಂದ 'ಪುನರಾವರ್ತಿದುರ್ಲಭ'ವಾದ ಮೋಕ್ಷವನ್ನೇ ಪಡೆಯುವದೆಂಬುದು ಗೀತೆಯಂತೆ ನಾರಾಯಣೀಯಕ್ಕೂ ಸಮ್ಮತವಾಗಿದೆ. ಆದ್ದರಿಂದ ಗೀತೆಯ ಉಪಕ್ರಮೋಪಸಂಹಾರಗಳಿಂದ ನಾವು ಗೊತ್ತುಮಾಡಿದ ಅರ್ಥವು ನಾರಾಯಣೀಯದಿಂದ ಸಡಿಲವಾಗುವದಕ್ಕೆ ಬದಲು ಇನ್ನೂ ಚೆನ್ನಾಗಿ ಬಲಪಟ್ಟಿತು. ಇಷ್ಟು ವಾಚಕರ ಮನಸ್ಸಿನಲ್ಲಿ ಮೂಡಿರಬಹುದೆಂದು ನಂಬಿ ಈ ಗ್ರಂಥಭಾಗವನ್ನು ಇಲ್ಲಿಗೆ ನಿಲ್ಲಿಸುತ್ತೇನೆ.
8. ಮಹಾಭಾರತದ ಮಿಕ್ಕ ಭಾಗಗಳು
ಭಗವದ್ಗೀತೆಯಲ್ಲಿರುವದು ಭಾಗವತಮತವಾದ್ದರಿಂದ ಈ ಮತವನ್ನು ವಿಸ್ತರಿಸಿ ಹೇಳುವ ನಾರಾಯಣೀಯವನ್ನು ಬಿಚ್ಚಿನೋಡಿ ಗೀತೆಯ ತಾತ್ಪರ್ಯವನ್ನು ಗೊತ್ತುಪಡಿಸುವದು ಒಳ್ಳೆಯದೆಂಬವರ ತೃಪ್ತ್ಯರ್ಥವಾಗಿ ಮೊಟ್ಟ ಮೊದಲು ಆ ಕಾರ್ಯವನ್ನು ಕೈಕೊಂಡದ್ದಾಯಿತು. ಇನ್ನು ಗೀತೆಯ ಉಲ್ಲೇಖವಿರುವ ಅನುಗೀತೆಯನ್ನು ಮೋಕ್ಷವಿಚಾರವಾಗಿರುವ ಭಾರತದ ಬೇರೆಬೇರೆ ಕೆಲವು ಭಾಗಗಳನ್ನೂ ಹೋಲಿಸಿ ನೋಡುವದು ಒಂದು ಉಳಿದಿರುವದು. ಗೀತೆಯು ಮಹಾಭಾರತದ ಒಂದು ಭಾಗವಾದ ಮೇಲೆ, ಭಾರತಕಾರರು ಎಲ್ಲಾ ಕಡೆಗೂ ಒಂದೇ ಮತವನ್ನು ವರ್ಣಿಸಿರುವರೆಂದೂ ಅದರಲ್ಲಿ ಒಂದೊಂದು ವಿಷಯವನ್ನು ಒಂದೊಂದು ಕಡೆಯಲ್ಲಿ ಪ್ರಸಂಗಾನುಸಾರವಾಗಿ ವಿಶೇಷವಾಗಿ ಬೆಳಸಿರಬಹುದೆಂದೂ ಹೇಳಬಹುದಾಗಿರುತ್ತದೆ. ಭಾರತದ ಮತ್ತೆ ಯಾವ ಕಡೆಯಲ್ಲಾದರೂ ಗೀತೆಯ ತಾತ್ಪರ್ಯವೆಂದು ಉಪಕ್ರಮೋಪಸಂಹಾರವೇ ಮುಂತಾದ ಗುರುತುಗಳಿಂದ ನಾವು ಗೊತ್ತುಮಾಡಿಕೊಂಡಿರುವ ತಾತ್ಪರ್ಯಕ್ಕೆ ವಿರುದ್ಧವಾದ ಅಭಿಪ್ರಾಯವಿರುವದೆ? ಎಂದು ನೋಡುವದೇ ಈ ವಿಚಾರದ ಉದ್ದೇಶವು.
ಅನುಗೀತೆಯಲ್ಲಿ ಭಗವದ್ಗೀತೆಯನ್ನು ಬಹುವಾಗಿ ಭಗವಂತನೇ ಹೊಗಳಿರುತ್ತಾನೆ.
ಸ ಹಿ ಧರ್ಮಃ ಸುಪರ್ಯಾಪ್ತೋ ಬ್ರಹ್ಮಣಃ ಪದವೇದನೇ
“ಅರ್ಜುನನೆ, ಬ್ರಹ್ಮಪದವನ್ನು ಅರಿತುಕೊಳ್ಳುವದರಲ್ಲಿ ಆ ಗೀತೆಯಲ್ಲಿ ಹೇಳಿರುವ ಧರ್ಮವೇ ಸಮರ್ಥವಾದದ್ದು” (ಅಶ್ವ 16.12) ಎಂದು ಆತನ ಅಪ್ಪಣೆಯಾಗಿರುವದು.
ಪರಂ ಹಿ ಬ್ರಹ್ಮ ಕಥಿತಂ ಯೋಗಯುಕ್ತೇನ ತನ್ಮಯಾ |
ಇತಿಹಾಸಂ ತು ವಕ್ಷ್ಯಾಮಿ ತಸ್ಮಿನ್ನರ್ಥೇ ಪುರಾತನಮ್ ||
''ಆಗ ನಾನು ಯೋಗಯುಕ್ತವಾದ ಮನಸ್ಸಿನಿಂದ ಪರಬ್ರಹ್ಮವನ್ನೇ ನಿನಗೆ ತಿಳಿಸಿದ್ದೆನು, ಈಗ ಅದೇ ಅರ್ಥವನ್ನು ತಿಳಿಸುವ ಒಂದು ಪುರಾತನ ಆಖ್ಯಾನವನ್ನು ಹೇಳುವೆನು." (ಅಶ್ವ. 16.13)
ಎಂದು ಪ್ರಾರಂಭಿಸಿರುವದನ್ನು ನೋಡಿದರೆ ಭಗವದ್ಗೀತೆಯಲ್ಲಿ ಬ್ರಹ್ಮವನ್ನು ಮುಟ್ಟುವ ಸಾಧನವನ್ನೇ ಮುಖ್ಯವಾಗಿ ತಿಳಿಸಿರುತ್ತದೆಯೆಂಬುದು ಭಾರತಕಾರರ ತಾತ್ಪರ್ಯವೆಂದು ಹೇಳಬೇಕಾಗುವದು. ಇದು ಬರಿಯ ನಮ್ಮ ಊಹೆಯಲ್ಲ ; ಅನುಗೀತೆಯಲ್ಲಿ ಕೊಟ್ಟಿರುವ ಬ್ರಾಹ್ಮಣ-ಕಾಶ್ಯಪ ಸಂವಾದದಲ್ಲಿ,
ಅತೋ ನಿಯಮ್ಯತೇ ಲೋಕಃ ಪ್ರಚ್ಯವನ್ಧರ್ಮವರ್ಚಸಾ |
ಯಶ್ಚ ಯೋಗೀ ಚ ಮುಕ್ತಶ್ಚ ಸ ಏತೇಭ್ಯೋ ವಿಶಿಷ್ಯತೇ ||
“ಆದ್ದರಿಂದ ಧರ್ಮಮಾರ್ಗಗಳಿಂದ ಜಾರಿ ಬೀಳುವ ಜನರೆಲ್ಲ ಬದ್ಧರಾಗಿರುವರು. ಯಾವಾತನು ಯೋಗಿಯೂ ಮುಕ್ತನೂ ಆಗಿರುವನೋ ಅವನು ಇವರೆಲ್ಲರಿಗಿಂತಲೂ ಹೆಚ್ಚಿನವನು.” (ಅಶ್ವ. 18.21) ಎಂದು ಹೇಳಿರುವದಲ್ಲದೆ, ಯೋಗಮಾರ್ಗದಿಂದ ಆತ್ಮಸಾಕ್ಷಾತ್ಕಾರವನ್ನು ಪಡೆಯುವ ಮಾರ್ಗವನ್ನು ಉಪದೇಶಿಸಿಯೂ ಇರುತ್ತದೆ. ಇದೇ ಅನುಗೀತಾಪರ್ವದಲ್ಲಿ,
ಪ್ರವೃತ್ತಿಲಕ್ಷಣೋ ಯೋಗೋ ಜ್ಞಾನಂ ಸಂನ್ಯಾಸಲಕ್ಷಣಮ್ |
ತಸ್ಮಾಜ್ಜ್ಞಾನಂ ಪುರಸ್ಕೃತ್ಯ ಸಂನ್ಯಸೇದಿಹ ಬುದ್ಧಿಮಾನ್ ||
ಎಂಬ ಶ್ಲೋಕವೂ ಇರುತ್ತದೆ.
ಸನತ್ಸುಜಾತೀಯ, ವಿದುರನೀತಿ— ಇವುಗಳಲ್ಲಿ,
ಅಪ್ರವೃತ್ತೇರಮರ್ತ್ಯತ್ವಂ ಮರ್ತ್ಯತ್ವಂ ಕರ್ಮಣಃ ಫಲಮ್ | (ಶಾ. 12.12)
ಪ್ರವೃತ್ತಿಲಕ್ಷಣೋ ಧರ್ಮೋ ಗೃಹಸ್ಥೇಷು ವಿಧೀಯತೇ || (ಅನು. 141.76)
ನಿವೃತ್ತಿಲಕ್ಷಣಸ್ತ್ವನ್ಯೋ ಧರ್ಮೊ ಮೋಕ್ಷಾಯ ತಿಷ್ಠತಿ II (ಅನು. 141-180)
ಅನ್ತವತಃ ಕ್ಷತ್ರಿಯ ತೇ ಜಯನ್ತಿ
ಲೋಕಾನ್ ಜನಾಃ ಕರ್ಮಣಾ ನಿರ್ಮಲೇನ |
ಬ್ರಹ್ಮೈವ ವಿದ್ವಾಂಸ್ತೇನ ಚಾಭ್ಯೇತಿ ಸರ್ವಂ
ನಾನ್ಯಃ ಪಂಥಾ ಅಯನಾಯ ವಿದ್ಯತೇ || (ಸನ. 44.24)
ಪ್ರವೃತ್ತಿತ್ಯಾಗದಿಂದ ಅಮೃತತ್ವವೂ, ಕರ್ಮಾನುಷ್ಠಾನದಿಂದ ಪುನಃ ಪುನಃ ಮರಣ ಭಾವವೂ ಫಲವಾಗುತ್ತದೆ. (ಶಾ.12.12)
ಪ್ರವೃತ್ತಿರೂಪವಾದ ಧರ್ಮವು ಗೃಹಸ್ಥರಿಗೆ ವಿಧಿಸಿದ್ದಾಗಿದೆ. (ಅನು.141-76) ಸಂನ್ಯಾಸ ರೂಪವಾದ ಧರ್ಮವು ಮೋಕ್ಷಫಲಕ್ಕಾಗಿಯೇ ಇರುತ್ತದೆ. (ಅನು.141-180)
ಧೃತರಾಷ್ಟ್ರನೆ, ಜನರು ತಾವು ಮಾಡಿದ ಶುದ್ಧವಾದ ಕರ್ಮಗಳಿಂದ ಅನಿತ್ಯಫಲದಿಂದ ಲೋಕಗಳನ್ನೇ ಗೆಲ್ಲುತ್ತಾರೆ. ಜ್ಞಾನಿಯಾದವನೋ ಬ್ರಹ್ಮವನ್ನೇ ಎಲ್ಲೆಡೆಯಿಂದಲೂ ಸೇರಿಕೊಳ್ಳುತ್ತಾನೆ. ಬ್ರಹ್ಮಪ್ರಾಪ್ತಿಗೆ ಜ್ಞಾನ ಬಿಟ್ಟು ಬೇರೆ ದಾರಿಯೇ ಇರುವದಿಲ್ಲ. (ಸನ.44.24)
ಇದುವರೆಗೆ ಭಾರತದ ಅನೇಕ ಭಾಗಗಳನ್ನು ತೆಗೆದುಕೊಂಡು ವಿಚಾರಿಸಿದ್ದಾಯಿತು. ಇನ್ನು ಭಾರತದಲ್ಲಿ ಮೋಕ್ಷಧರ್ಮವೆಂದು ಪ್ರಸಿದ್ಧವಾಗಿರುವ ಶಾಂತಿಪರ್ವದ ಭಾಗವನ್ನು ಒಳಹೊಕ್ಕು ನೋಡೋಣ. ಇದರಲ್ಲಿ ನಾರಾಯಣೀಯೋಪಾಖ್ಯಾನವನ್ನು ಆಗಲೆ ವಿಮರ್ಶೆ ಮಾಡಿದ್ದು ಆಗಿರುತ್ತದೆ; ಆದ್ದರಿಂದ ಮಿಕ್ಕ ಉಪಭಾಗಗಳನ್ನು ತಕ್ಕಮಟ್ಟಿಗೆ ಇಲ್ಲಿ ನೋಡಿದರೆ ಸಾಕಾಗುವದು. ಮೋಕ್ಷಧರ್ಮದಲ್ಲಿ,
(1) ಜಾಪಕೋಪಾಖ್ಯಾನವೆಂಬುದೊಂದು ಭಾಗವಿರುವದು. ಇದರ ಪ್ರಾರಂಭದಲ್ಲಿ ಪ್ರವೃತ್ತಿ ನಿವೃತ್ತಿಧರ್ಮಗಳ ವಿಚಾರವು ನಡೆದಿದೆ. ಇವುಗಳನ್ನು ಗೀತೆಯಲ್ಲಿ ಕರೆದಿರುವಂತೆ ಸಾಂಖ್ಯ ಯೋಗಗಳೆಂಬ ಹೆಸರಿನಿಂದಲೂ ಕರೆದಿರುತ್ತದೆ.
ಸಾಂಖ್ಯಯೋಗೌ ತು ಯಾವುಕ್ತೌ ಮುನಿಭಿಃ ಸಮದರ್ಶಿಭಿಃ |
ಮಾರ್ಗೌ ತಾವಪ್ಯುಭಾವೇತೌ ಸಂಶ್ರಿತೌ ನ ಚ ಸಂಶ್ರಿತೌ ||
''ಸಮದರ್ಶಿಗಳಾದ ಮುನಿಗಳು ಹೇಳಿರುವ ಸಾಂಖ್ಯ ಯೋಗಗಳೆಂಬ ಮಾರ್ಗಗಳುಂಟಷ್ಟೆ. ಇವೆರಡೂ ಒಂದಕ್ಕೊಂದು ಕೂಡಿಯೂ ಇವೆ, ಕೂಡದೆಯೂ ಇವೆ.'' (196.8)
ಎಂದು ಹೇಳಿ ಇವು ಹೇಗೆ ಕೂಡಿಕೊಂಡಿವೆ ಎಂದರೆ -
ಯಥಾ ಸಂಶ್ರಯತೇ ರಾಜನ್ ಕಾರಣಂ ಚಾತ್ರ ವಕ್ಷ್ಯತೇ |
ಮನಃಸಮಾಧಿರತ್ರಾಪಿ ತಥೇಂದ್ರಿಯಜಯಃ ಸ್ಮೃತಃ ||
''ಎರಡು ಮಾರ್ಗದಲ್ಲಿಯೂ ಮನಸ್ಸು ಸಮಾಹಿತವಾಗಿರಬೇಕು. ಇಂದ್ರಿಯ ಜಯವು ಎರಡಕ್ಕೂ ಬೇಕಾಗಿರುವದು'' (196.9)ಎಂದುಹೇಳಿ ಪ್ರವೃತ್ತಿಧರ್ಮವನ್ನು ವಿವರಿಸುವದಕ್ಕೆ ಹೊರಟಿರುತ್ತದೆ. ಸತ್ಯ, ಅಗ್ನಿಪರಿಚರ್ಯೆ, ವಿವಿಕ್ತವಾದ ದೇಶದಲ್ಲಿರುವದು, ಧ್ಯಾನ, ತಪಸ್ಸು, ದಮ, ಕ್ಷಮೆ, ಆಸೆಯಿಲ್ಲದಿರುವದು, ಮಿತವಾಗಿ ಊಟಮಾಡುವದು, ವಿಷಯಗಳನ್ನು ನೆಚ್ಚದೆ ಇರುವದು, ನಾಲಿಗೆ ಬಿಗಿಹಿಡಿದು ಮಾತಾಡುವದು, ಶಾಂತಿ—ಇವೆಲ್ಲ ಪ್ರವರ್ತಕ ಯಜ್ಞವು(196.10-11). ನಿವೃತ್ತಿಮಾರ್ಗದಲ್ಲಿರುವಾತನು ಅತ್ಯಂತನಿಷ್ಕಾಮನಾದ್ದರಿಂದ ಅವನು ವಿಷಯಗಳಿಗೆಲ್ಲ ಶರಣು ಹೊಡೆದ ಮನಸ್ಸನ್ನು ಸಾಮ್ಯಸ್ಥಿತಿಗೆ ತಂದು ಬ್ರಹ್ಮಚಿಂತನೆಯನ್ನು ಮಾಡುವನು ; ಇವನು ಸಂಹಿತಾಜಪವನ್ನಾದರೂ ಮಾಡುವನು ಇಲ್ಲದಿದ್ದರೆ ಸಮಾಧಿನಿಷ್ಠನಾಗಿ ಅದನ್ನು ಕೈಬಿಡುವನು. ಚಿತ್ತಶುದ್ಧಿಯನ್ನು ಪಡೆದು ಇಂದ್ರಿಯಗಳನ್ನು ಜಯಿಸಿ, ರಾಗದ್ವೇಷಮೋಹಗಳನ್ನು ಬಿಟ್ಟು, ಅಹಂಕಾರವನ್ನು ಬಿಟ್ಟು ಕಾರ್ಯವಿಲ್ಲದೆ ದಾನಪರಿಗ್ರಹಗಳಿಲ್ಲದೆ, ಧ್ಯಾನದಿಂದ ಸಮಾಧಿಯನ್ನು ಹೊಂದಿ ಅದನ್ನೂ ಕೈಬಿಟ್ಟು ಸರ್ವವನ್ನೂ ತ್ಯಾಗಮಾಡಿ ಬ್ರಹ್ಮಲೋಕ ವನ್ನಾದರೂ ಹೊಂದುವನು. ಅಥವಾ ಶುದ್ಧಾತ್ಮಸ್ಥಿತಿಯನ್ನಾದರೂ ಪಡೆಯುವನು (196, 12-23). ಈ ಅಧ್ಯಾಯದಲ್ಲಿ ಪ್ರವೃತ್ತಿ ನಿವೃತ್ತಿಮಾರ್ಗಗಳ ವರ್ಣನೆಯನ್ನೇ ಮಾಡಿರುತ್ತದೆಯಾದ್ದರಿಂದ ವಾಚಕರು ಮೂಲವನ್ನು ನೋಡುವದೇ ಒಳ್ಳೆಯದು. ಸಾಂಖ್ಯ ಅಥವಾ ನಿವೃತ್ತಿಮಾರ್ಗವು ಬ್ರಹ್ಮಪ್ರಾಪ್ತಿಗೆ ಸಾಧನವೆಂದೂ, ಯೋಗ ಅಥವಾ ಪ್ರವೃತ್ತಿಮಾರ್ಗವು ಅದಕ್ಕೆ ಸಾಧನವಾಗಿರುವದೆಂದೂ ಇಲ್ಲಿ ಬಾಯಿಬಿಟ್ಟು ಹೇಳಿರುವದನ್ನು ನೆನಪಿಟ್ಟರೆ ಸದ್ಯಕ್ಕೆ ಸಾಕಾಗಿದೆ.
(2) ಮನು- ಬೃಹಸ್ಪತಿ ಸಂವಾದವೆಂಬ ಮೋಕ್ಷಧರ್ಮದ ಭಾಗದಲ್ಲಿಯೂ ಹೀಗೆಯೇ.
ಇಷ್ಟಂ ಚ ಮೇ ಸ್ಯಾದಿತರಚ್ಚ ನ ಸ್ಯಾದೇತತ್ಕೃತೇ ಕರ್ಮವಿಧಿಃ ಪ್ರವೃತ್ತಃ |
ಇಷ್ಟಂ ತ್ವನಿಷ್ಟಂ ಚ ನ ಮಾಂ ಭಜೇತೇತ್ಯೇತತ್ಕೃತೇ ಜ್ಞಾನವಿಧಿಃ ಪ್ರವೃತ್ತಃ ||
''ನನಗೆ ಒಳ್ಳೆಯದೇ ಆಗಲಿ, ಅಲ್ಲದ್ದು ಬೇಡ ಎಂಬವನಿಗೋಸ್ಕರ ಕರ್ಮಮಾರ್ಗವು ಹೊರಟಿರುವದು, ನನಗೆ ಇಷ್ಟವೂ ಬೇಡ, ಅನಿಷ್ಟವೂ ಬೇಡ ಎಂಬವನಿಗೆ ಜ್ಞಾನ ಮಾರ್ಗವು ಬಂದಿರುವದು'' (ಮೋ, 201.11) ಎಂದು ಎರಡು ಮಾರ್ಗಗಳನ್ನು ವಿಂಗಡಿಸಿ ಹೇಳಿ ಕರ್ಮವೇ ಜ್ಞಾನಮಾರ್ಗಕ್ಕೆ ಸಾಧನವಾಗುವದೆಂಬುದನ್ನು,
ಪ್ರಜಾಃ ಸೃಷ್ಟಾ ಮನಸಾ ಕರ್ಮಣಾ ಚ ದ್ವಾವೇವೈತೌ ಸತ್ಪಥೌ ಲೋಕಜುಷ್ಟೌ।
ದೃಷ್ಟಂ ಕರ್ಮ ಶಾಶ್ವತಂ ನಾಶವಚ್ಚ ಮನಸ್ತ್ಯಾಗಃ ಕಾರಣಂ ನಾನ್ಯದಸ್ತಿ ||
''ಪ್ರಜೆಗಳನ್ನು ದೇವರು ಮನಸ್ಸು, ಕರ್ಮ ಇವುಗಳೊಡನೆಯೆ ಸೃಷ್ಟಿಸುವನು, ಇವೆರಡೇ ಸನ್ಮಾರ್ಗಗಳೆಂದು ಜನರು ಅನುಸರಿಸುತ್ತಿರುತ್ತಾರೆ. ಕರ್ಮಕ್ಕೆ ಫಲವು ನಾಶವುಳ್ಳದ್ದೂ ಆಗುವದು, ಶಾಶ್ವತವೂ ಆಗುವದು. ಹೀಗೆ ಶಾಶ್ವತವಾಗುವದಕ್ಕೆ ಮನಸ್ಸಿನಲ್ಲಿ ಮಾಡಿದ ಫಲತ್ಯಾಗವಲ್ಲದೆ ಬೇರೊಂದು ಕಾರಣವಿಲ್ಲ.'” (ಮೋ. 201-15) ಎಂಬ ಶ್ಲೋಕದಲ್ಲಿ ತಿಳಿಸಿಕೊಟ್ಟಿರುತ್ತದೆ.
(3) ವಾರ್ಷ್ಣೇಯಾಧ್ಯಾತ್ಮವೆಂಬ ಭಾಗದಲ್ಲಿಯೂ ಹೀಗೆಯೇ ಪ್ರವೃತ್ತಿ ನಿವೃತ್ತಿಗಳನ್ನು ತಿಳಿಯಹೇಳಿದೆ.
ಪ್ರವೃತ್ತಿಲಕ್ಷಣಂ ಧರ್ಮಮೃಷಿರ್ನಾರಾಯಣೋಽಬ್ರವೀತ್ |
ತತ್ರೈವಾವಸ್ಥಿತಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ |
ನಿವೃತ್ತಿಲಕ್ಷಣಂ ಧರ್ಮಮವ್ಯಕ್ತಂ ಬ್ರಹ್ಮ ಶಾಶ್ವತಮ್ ||
ನಾರಾಯಣಋಷಿಯು (ನಾರಾಯಣಋಷಿ ಎಂದರೆ ನಾರಾಯಣ ಪ್ರತಿಪಾದಕವಾದ ವೇದವೆಂದು ವ್ಯಾಖ್ಯಾನಕಾರರು ಹೇಳಿರುತ್ತಾರೆ. ಇದೇ ಸಂದರ್ಭಕ್ಕೆ ಹೊಂದುವ ಹಾಗಿದೆ. ಆದರೆ ನಾರಾಯಣೀಯಾಖ್ಯಾನವನ್ನನುಸರಿಸಿದರೆ ಇದ್ದಂತೆಯೂ ಅರ್ಥವನ್ನು ಮಾಡಬಹುದು.) ಪ್ರವೃತ್ತಿರೂಪ ಧರ್ಮವನ್ನು ಹೇಳಿರುತ್ತಾನೆ; ಇದರ ಫಲದಲ್ಲಿ ಸ್ಥಾವರಜಂಗಮಾತ್ಮಕವಾದ ಮೂರು ಲೋಕವೂ ಸೇರಿರುತ್ತದೆ. ನಿವೃತ್ತಿ ಲಕ್ಷಣಧರ್ಮವನ್ನು ಆತನು ಹೇಳಿರುತ್ತಾನೆ. ಅದರ ಫಲವು ಅವ್ಯಕ್ತವೂ ಶಾಶ್ವತವೂ ಆದ ಬ್ರಹ್ಮವಾಗಿರುವದು (ಮೋ. 217-2.3).
ಪ್ರವೃತ್ತಿಲಕ್ಷಣಂ ಧರ್ಮಂ ಪ್ರಜಾಪತಿರಥಾಬ್ರವೀತ್ |
ಪ್ರವೃತ್ತಿಃ ಪುನರಾವೃತ್ತಿರ್ನಿವೃತ್ತಿಃ ಪರಮಾ ಗತಿಃ ||
ತಾಂ ಗತಿಂ ಪರಮಾಮೇತಿ ನಿವೃತ್ತಿಪರಮೋ ಮುನಿಃ |
ಜ್ಞಾನತತ್ತ್ವಪರೋ ನಿತ್ಯಂ ಶುಭಾಶುಭನಿದರ್ಶನಃ ||
ಈಚೆಗೆ ಪ್ರವೃತ್ತಿಲಕ್ಷಣವಾದ ಧರ್ಮವನ್ನು ಬ್ರಹ್ಮನು ಹೇಳಿರುತ್ತಾನೆ. ಪ್ರವೃತ್ತಿಗೆ ಮತ್ತೆ ಈ ಲೋಕಕ್ಕೆ ತಿರುಗಿಬರುವಂಥ ಫಲವಾಗುವದು. ನಿವೃತ್ತಿಗೆ ಹಿಂತಿರುಗಬೇಕಾದ್ದಿಲ್ಲದ ಹೆಚ್ಚಿನ ಗತಿಯಾಗುವದು. ನಿವೃತ್ತಿಪರನಾಗಿ ಯಾವಾಗಲೂ ಒಳ್ಳೆಯದು ಕೆಟ್ಟದ್ದು ಇವುಗಳನ್ನು ನೋಡಿ ಜ್ಞಾನತತ್ತ್ವದಲ್ಲಿಯೇ ಮನಸ್ಸಿಟ್ಟಿರುವವನಿಗೆ ಈ ಉತ್ಕೃಷ್ಟ ಗತಿಯಾಗುವದು (ಮೋ. 217.4-5). ಇಲ್ಲಿ ನಿವೃತ್ತಿಯೆಂದರೆ ಜ್ಞಾನವೆಂದೂ ಅದಕ್ಕೇ ಶಾಶ್ವತಫಲವಾದ ಮೋಕ್ಷವು ಸಿಕ್ಕುವದೇ ಹೊರತು ಪ್ರವೃತ್ತಿಗೆ ಅದು ದಕ್ಕಲಾರದೆಂದೂ ಹೇಳಿರುತ್ತದೆ.
(4) ಶುಕಾನುಪ್ರಶ್ನವೆಂಬ ಭಾಗದಲ್ಲಿಯೂ ಈ ವಿಭಾಗವು ಕಂಡುಬರುತ್ತದೆ.
ದ್ವಾವಿಮಾವಥ ಪಂಥಾನೌ ಯತ್ರ ವೇದಾಃ ಪ್ರತಿಷ್ಠಿತಾಃ |
ಪ್ರವೃತ್ತಿಲಕ್ಷಣೋ ಧರ್ಮೋ ನಿವೃತ್ತಿಶ್ಚ ಸುಭಾಷಿತಃ ||
ಕರ್ಮಣಾ ಬಧ್ಯತೇ ಜನ್ತುರ್ರ್ವಿದ್ಯಯಾ ತು ಪ್ರಮುಚ್ಯತೇ ।
ತಸ್ಮಾತ್ಕರ್ಮ ನ ಕುರ್ವನ್ತಿ ಯತಯಃ ಪಾರದರ್ಶಿನಃ ||
ಕರ್ಮಣಾ ಜಾಯತೇ ಪ್ರೇತ್ಯ ಮೂರ್ತಿಮಾನ್ ಷೋಡಶಾತ್ಮಕಃ |
ವಿದ್ಯಯಾ ಜಾಯತೇ ನಿತ್ಯಮವ್ಯಕ್ತಂ ಹ್ಯವ್ಯಯಾತ್ಮಕಮ್ ||
ಶುಕರು ವ್ಯಾಸರನ್ನು ಒಂದು ಪ್ರಶ್ನೆಯನ್ನು ಕೇಳಿದರು. ''ವೇದದಲ್ಲಿ ಕರ್ಮವನ್ನು ಮಾಡಬೇಕೆಂದೂ ಬಿಡಬೇಕೆಂದೂ ವಚನಗಳಿವೆಯಷ್ಟೆ? ಮಾಡಿದರೇನು ಫಲ? ಅವುಗಳನ್ನು ಬಿಟ್ಟು ಜ್ಞಾನಿಯಾದರೇನು ಫಲ?'' ಈ ಪ್ರಶ್ನೆಗೆ ವ್ಯಾಸರು ಹೇಳಿದ ಉತ್ತರದಲ್ಲಿ ಮೇಲಿನ ಶ್ಲೋಕಗಳು ಸೇರಿವೆ. ವೇದಗಳ ಆಧಾರವುಳ್ಳ ಮಾರ್ಗಗಳು ಪ್ರವೃತ್ತಿಧರ್ಮವು, ಉತ್ತಮವಾದ ನಿವೃತ್ತಿ ಧರ್ಮವು ಎಂದೀ ಪರಿಯಾಗಿ ಎರಡು ಬಗೆ. ಕರ್ಮದಿಂದ ಜೀವನು ಬದ್ಧನಾಗುವನು, ಜ್ಞಾನದಿಂದ ಮುಕ್ತನಾಗುವನು ; ಆದ್ದರಿಂದ ಪಾರದರ್ಶಿಗಳಾದ ಯತಿಗಳು ಕರ್ಮವನ್ನು ಮಾಡುವದಿಲ್ಲ. ಕರ್ಮವನ್ನು ಮಾಡಿ ಸತ್ತಮೇಲೆ ಹದಿನಾರು ಅಂಶಗಳಿಂದ ಕೂಡಿದ ಮತ್ತೊಂದು ದೇಹವನ್ನು ಧರಿಸಿ ಹುಟ್ಟುವನು. ಆದರೆ ಜ್ಞಾನದಿಂದ ನಿತ್ಯವೂ ಅತೀಂದ್ರಿಯವೂ ಆದ ಬ್ರಹ್ಮಸ್ವರೂಪನಾಗುವನು.'' (241.6-7-8) ಎಂಬುದು ಈ ಶ್ಲೋಕಗಳ ಅರ್ಥವು. ಮುಂದೆ ಕರ್ಮದಿಂದ ಏನು ಪ್ರಯೋಜನವೆಂದು ಶುಕರು ಕೇಳಿದಾಗ- "
ಕಷಾಯಂ ಪಾಚಯಿತ್ವಾಶು ಶ್ರೇಣಿಸ್ಥಾನೇಷು ಚ ತ್ರಿಷು |
''ನಿಚ್ಚಣಿಗೆಯ ಮೆಟ್ಟಿಲುಗಳಂತೆ ಇರುವ ಮೊದಲನೆಯ ಮೂರು ಆಶ್ರಮಗಳ ಕರ್ಮದಿಂದ 'ಕಷಾಯವು ಪಕ್ವವಾಗುವದು' ಎಂದರೆ ಈ ಅವಸ್ಥೆಯಲ್ಲಿ ರಾಗದ್ವೇಷಾದಿಗಳ ವಾಸನೆಯು ದೂರವಾಗುವದು. ಈ ಬುದ್ಧಿ ಸಂಸ್ಕಾರವೇ ಕರ್ಮದ ಫಲವು.''(ಮೋ. 245.3) ಎಂದು ವ್ಯಾಸರು ಅಪ್ಪಣೆ ಕೊಡಿಸಿರುತ್ತಾರೆ.
(5) ಗೋಕಪಿಲೀಯವೆಂಬುದು ಮೋಕ್ಷಧರ್ಮದ ಮತ್ತೊಂದು ಭಾಗವು. ಇದರಲ್ಲಿ ಸ್ಯೂಮರಶ್ಮಿ ಎಂಬಾತನಿಗೂ ಕಪಿಲ ಋಷಿಗೂ ಒಂದು ಸಂವಾದವು ನಡೆದಿರುತ್ತದೆ. ಅದರಲ್ಲಿ ಜ್ಞಾನವನ್ನೇ ಬಹುವಾಗಿ ಕಪಿಲನು ಹೊಗಳುತ್ತಿರುವದನ್ನು ಕೇಳಿ ಸ್ಯೂಮರಶ್ಮಿಯು, “ಗೃಹಸ್ಥಾಶ್ರಮದಲ್ಲಿ ಮಾಡುವ ಕುಟುಂಬ-ಭರಣವೂ, ದಾನ, ಅಧ್ಯಯನ, ಯಜ್ಞ, ಸಂತಾನವೃದ್ಧಿ, ಋಜುತೆ ಇವೆಲ್ಲವೂ ಸುಲಭವಾದ ಕರ್ಮಗಳಲ್ಲ. ಶಾಸ್ತ್ರೋಕ್ತವಾದಂತೆಯೇ ಇವುಗಳನ್ನು ಮಾಡಿದರೂ ಮೋಕ್ಷವಿಲ್ಲದ ಮೇಲೆ ಆ ಕರ್ಮವನ್ನು ಮಾಡಿದವನ ಬಾಳು ವ್ಯರ್ಥವಲ್ಲವೆ? ಅಂಥ ಕರ್ಮವಾದರೂ ವ್ಯರ್ಥವಲ್ಲವೆ? ಗೃಹಸ್ಥಕರ್ಮದಿಂದ ಮೋಕ್ಷವಿಲ್ಲವೆಂದ ಬಳಿಕ ವೇದಗಳನ್ನೆಲ್ಲ ಆಚೆಗೆ ತಳ್ಳಿದಂತಾಗುವದಿಲ್ಲವೆ ?'' ಎಂದು ಕೇಳಿದನು. ಅದಕ್ಕೆ ಕಪಿಲನು ಸಮಾಧಾನ ಹೇಳುವದಕ್ಕೆ ಪ್ರಾರಂಭಿಸಿ –
ಕೃತಶುದ್ಧಶರೀರೋ ಹಿ ಪಾತ್ರಂ ಭವತಿ ಬ್ರಾಹ್ಮಣಃ |
ಆನಂತ್ಯಮತ್ರ ಬುದ್ಧ್ಯೇದಂ ಕರ್ಮಣಾಂ ತದ್ಬ್ರವೀಮಿ ತೇ ||
''ಶರೀರವನ್ನು ಶುದ್ಧಿಮಾಡಿಕೊಂಡ ಮೇಲಲ್ಲವೆ ಬ್ರಹ್ಮಜ್ಞಾನಕ್ಕೆ ಯೋಗ್ಯನಾಗುವನು ? ಆಮೇಲೆ ಜ್ಞಾನದಿಂದ ಅನಂತವಾದ ಮೋಕ್ಷವನ್ನು ಪಡೆಯುವನಾದ್ದರಿಂದ ಇದು ಕರ್ಮಗಳ ಫಲವೇ ಆಗುವದು. ಇದು ಹೇಗೆಂಬುದನ್ನು ನಿನಗೆ ಹೇಳುವೆನು ಕೇಳು'' (ಮೋ. 270.3) ಎಂದು ತಿಳಿಸಿದ್ದಾನೆ. ಈ ಅಧ್ಯಾಯದಲ್ಲಿ ಕರ್ಮದಿಂದ ಚಿತ್ತಶುದ್ಧಿಯಾಗುವ ಬಗೆಯನ್ನು ವರ್ಣಿಸಿರುತ್ತಾನೆ. ಇದೇ ಅಭಿಪ್ರಾಯವನ್ನು ಮುಂದೆ –
ಶರೀರಪಕ್ತಿಃ ಕರ್ಮಾಣಿ ಜ್ಞಾನಂ ತು ಪರಮಾ ಗತಿಃ |
ಕಷಾಯೇ ಕರ್ಮಭಿಃ ಪಕ್ವೇ ರಸಜ್ಞಾನೇ ಚ ತಿಷ್ಠತಿ ||
''ಕರ್ಮಗಳಿಂದ ಸ್ಕೂಲಸೂಕ್ಷ್ಮಶರೀರಗಳ ಪಕ್ವವಾಗುವದು. ಜ್ಞಾನವೇ ಹೆಚ್ಚಿನ ಗತಿಯು. ಕರ್ಮಗಳಿಂದ ಕಷಾಯವು ಪಕ್ವವಾದ ಮೇಲೆ ರುಚಿಯಾದ ಜ್ಞಾನದಲ್ಲಿ ನಿಲ್ಲುವನು” ಎಂದು ಹೇಳಿರುತ್ತದೆ.
(ಶಂಕರಾಚಾರ್ಯರ ಭಾಷ್ಯಗಳಲ್ಲಿ ಈ ಶ್ಲೋಕವನ್ನು ಉದಾಹರಿಸಿರುತ್ತದೆ. ಅಲ್ಲಿರುವ ಪಾಠವು ಹೇಗಿದೆಯೆಂದರೆ ''ಕಷಾಯಪಕ್ತಿಃ ಕರ್ಮಾಣಿ ಜ್ಞಾನಂತು ಪರಮಾಗತಿಃ | ಕಷಾಯೇ ಕರ್ಮಭಿಃ ಪಕ್ವೇ ತತೋ ಜ್ಞಾನಂ ಪ್ರವರ್ತತೇ ।।'' ಈ ಪಾಠವು ಶುದ್ಧವಾದದ್ದೆಂದು ಮಹಾಭಾರತದ ಬೇರೆ ಭಾಗಗಳನ್ನು ಹೋಲಿಸಿದರೆ ನಿರ್ಣಯವಾಗುವದು. ಈಗ ಮಹಾಭಾರತದಲ್ಲಿರುವ ಪಾಠಕ್ಕೆ ಪ್ರಕೃತವಿಷಯವು ಅದೇ ಆಗುವದರಿಂದ ಯಾವ ಪಾಠವನ್ನು ಇಟ್ಟುಕೊಂಡರೂ ಆಗಬಹುದು.)
ಹೆಚ್ಚೇಕೆ? ಮುಂದೆ ನಾರದಾಸಿತ ಸಂವಾದ, ಪಿತಾಪುತ್ರ ಸಂವಾದ— ಇವುಗಳಲ್ಲೂ ಕರ್ಮದಿಂದ ಆಗುವ ಫಲ ಜ್ಞಾನದಿಂದ ಆಗುವ ಫಲ ಇವುಗಳನ್ನು ವಿಂಗಡವಾಗಿ ತಿಳಿಸಿ ಕರ್ಮಜ್ಞಾನಗಳ ಸಂಬಂಧವನ್ನು ಬಹಳ ಸ್ಪಷ್ಟವಾಗಿ ತಿಳಿಸಿದೆ.
ಪುಣ್ಯಪಾಪಕ್ಷಯಾರ್ಥಂ ಹಿ ಸಾಂಖ್ಯಜ್ಞಾನಂ ವಿಧೀಯತೇ |
ತತ್‌ಕ್ಷಯೇ ಹ್ಯಸ್ಯ ಪಶ್ಯನ್ತಿ ಬ್ರಹ್ಮಭಾವೇ ಪರಾಂ ಗತಿಮ್ ||
(ಮೋ.275.33)
ಪುಣ್ಯ, ಪಾಪ— ಈ ಎರಡನ್ನೂ ಕಳೆಯುವದಕ್ಕೋಸ್ಕರ ಸಾಂಖ್ಯಜ್ಞಾನವನ್ನು (ಶಾಸ್ತ್ರದಲ್ಲಿ) ಹೇಳಿದೆ. ಅವುಗಳೆರಡೂ ನಾಶವಾದ ಮೇಲೆ ಈತನು ಬ್ರಹ್ಮವೇ ಆಗಿದ್ದಾನೆ ಎಂದು ಹೆಚ್ಚಿನ ಸ್ವರೂಪವನ್ನು ಕಂಡುಕೊಳ್ಳುತ್ತಾರೆ.
ನೈತಾದೃಶಂ ಬ್ರಾಹ್ಮಣಸ್ಯಾಸ್ತಿ ವಿತ್ತಂ ಯಥೈಕತಾ ಸಮತಾ ಸತ್ಯತಾ ಚ |
ಶೀಲಂ ಸ್ಥಿತಿರ್ದಂಡನಿಧಾನಮಾರ್ಜವಂ ತತಸ್ತತಶ್ಚೋಪರಮಃ ಕ್ರಿಯಾಭ್ಯಃ ||
(ಮೋ.277.37)
ಒಂಟಿಯಾಗಿರುವದು, ಸರ್ವರಲ್ಲಿಯೂ ಸಮಬುದ್ದಿಯುಳ್ಳವನಾಗಿರುವದು, ಸತ್ಯವನ್ನು ನುಡಿಯುವದು, ಒಳ್ಳೆಯ ನಡತೆ, ಸ್ಥಿರ ಚಿತ್ತನಾಗಿರುವದು, ಹಿಂಸೆ ಮಾಡದೆ ಇರುವದು, ಸರಳತನ, ಕ್ರಿಯೆಗಳನ್ನು ಆಗಾಗಲೇ ಬಿಡುತ್ತಿರುವದು— ಇಂಥ ಧನವು ಬ್ರಾಹ್ಮಣನಿಗೆ ಮತ್ತೊಂದಿಲ್ಲ.
9. ಉಪನಿಷತ್ತುಗಳಿಗೂ ಭಗವದ್ಗೀತೆಗೂ ಹೋಲಿಕೆ
ಭಗವದ್ಗೀತೆಯ ಉಪಕ್ರಮಾದಿ ಲಿಂಗಗಳಿಂದ ನಿರ್ಧರಿಸಿದ ಸಿದ್ಧಾಂತವೇ ಭಾರತದ ಮಿಕ್ಕಕಡೆಗಳಲ್ಲಿಯೂ ಕಂಡುಬರುವದೆಂದು ಇದುವರೆಗಿನ ವಿಚಾರದಿಂದ ವಾಚಕರ ಮನಸ್ಸಿನಲ್ಲಿ ಬಿಂಬಿಸಿರಬಹುದು. ಈಗ ಜ್ಞಾನಕರ್ಮಗಳ ವಿಷಯದಲ್ಲಿ ಗೀತೆಯಲ್ಲಿ ಹೇಳಿರುವ ವಿಷಯಕ್ಕೂ ಉಪನಿಷತ್ತುಗಳಲ್ಲಿ ಹೇಳಿರುವದಕ್ಕೂ ಏನಾದರೂ ಹೆಚ್ಚುಕಡಿಮೆಯಿದೆಯೆ ? ಎಂಬುದನ್ನು ನಿರ್ಣಯಿಸುವದಕ್ಕೆ ಹೊರಡಬಹುದಾಗಿದೆ. ಮಹಾಭಾರತದಲ್ಲಿಯೂ ಭಗವದ್ಗೀತೆಯಲ್ಲಿಯೂ ಎಷ್ಟೋ ಉಪನಿಷತ್ತಿನ ವಾಕ್ಯಗಳು ಅಕ್ಷರಕ್ಷರವಾಗಿ ಕಂಡುಬರುತ್ತವೆ ; ಇನ್ನು ಕೆಲವು ಕಡೆಗಳಲ್ಲಿ ಉಪನಿಷತ್ತುಗಳಲ್ಲಿರುವ ಅಭಿಪ್ರಾಯವನ್ನು ಇವೆರಡರಲ್ಲಿಯೂ ಬಹುಮಟ್ಟಿಗೆ ಅನುಕರಿಸಿರುವದು ಕಂಡು ಬರುತ್ತದೆ. ಭಗವದ್ಗೀತೆಯು ಉಪನಿಷತ್ತುಗಳೆಂಬ ಗೋವುಗಳಿಂದ ಗೋಪಾಲನಂದನನಾದ ಶ್ರೀಕೃಷ್ಣನು ಕರೆದಿಟ್ಟಿರುವ ಸವಿಯಾದ ಹಾಲೆಂದು ಹಿಂದೆ ಉದಾಹರಿಸಿರುವ ಧ್ಯಾನಶ್ಲೋಕದಲ್ಲಿ ಹೇಳಿರುತ್ತದೆ ; ಅಧ್ಯಾಯದ ಸಮಾಪ್ತಿವಾಕ್ಯದಲ್ಲಿ ಭಗವದ್ಗೀತೆಗೆ ಉಪನಿಷತ್ತೆಂಬ ಹೆಸರನ್ನು ಕೊಟ್ಟಿರುತ್ತದೆ. ಈ ಎಲ್ಲಾ ಸಂದರ್ಭಗಳಿಂದ ಗೀತೆಯಲ್ಲಿ ಉಪನಿಷತ್ಸಿದ್ಧಾಂತವೇ ಇರಬೇಕೆಂದು ಯಾರಿಗಾದರೂ ಸಹಜವಾಗಿ ಹೊಳೆಯುವದು. ಆದರೆ ವಿಚಾರಮಾಡದೆ ತಟ್ಟನೆ ಮನದಲ್ಲಿ ಮಿಂಚಿದ ಅರ್ಥವನ್ನು ಅನುಸರಿಸುವದು ಯುಕ್ತವಲ್ಲವಾದ್ದರಿಂದ ನಮ್ಮ ಮನಸ್ಸಿನ ಒಲವನ್ನು ಅಷ್ಟು ಲೆಕ್ಕಕ್ಕೆ ತೆಗೆದುಕೊಳ್ಳದೆ ಗೀತೆಯನ್ನೂ ಉಪನಿಷತ್ತುಗಳನ್ನೂ ಹೋಲಿಸಿ ನೋಡುವದೇ ಯುಕ್ತವಾಗಿರುತ್ತದೆ.
ಉಪನಿಷತ್ತುಗಳಲ್ಲಿ ಕರ್ಮಗಳಿಂದ ನೇರಾಗಿ ಮೋಕ್ಷವು ಸಿಕ್ಕಲಾರದೆಂದು ಕರ್ಮಸಂನ್ಯಾಸವನ್ನು ಮಾಡಿ ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳುವದರಿಂದಲೇ ಮೋಕ್ಷವು ದೊರಕುವದೆಂದು ಹೇಳುವ ವಾಕ್ಯಗಳಿವೆ. ಉದಾಹರಣೆಗೆ ನೋಡಿ: 'ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವಮಾನಶುಃ' - ಕರ್ಮದಿಂದಾಗಲಿ, ಪ್ರಜಾಸಂತತಿಯಿಂದಾಗಲಿ, ಧನದಿಂದಾಗಲಿ ಮೋಕ್ಷವನ್ನು ಪಡೆಯಲಿಲ್ಲ: ಜ್ಞಾನಿಗಳಾದವರು ಮುಖ್ಯವಾಗಿ ತ್ಯಾಗದಿಂದಲೇ ಮೋಕ್ಷವನ್ನು ಪಡೆದಿರುವರು. (ತೈ. ಆ. 10-12); “ಅನ್ಯತ್ರ ಧರ್ಮಾದನ್ಯತ್ರಾಧರ್ಮಾದನ್ಯತ್ರಾಸ್ಮಾತ್ಕೃತಾಕೃತಾತ್” ಧರ್ಮಕ್ಕೆ ಅತೀತವಾಗಿ, ಅಧರ್ಮಕ್ಕೆ ಅತೀತವಾಗಿ, ಕಾರ್ಯಕಾರಣಗಳೆರಡಕ್ಕೂ ಅತೀತವಾಗಿರುವ ಆತ್ಮತತ್ತ್ವವನ್ನು ಹೇಳು (ಕಠ, 1-2-14); "ತದ್ಯಥೇಹ ಕರ್ಮಚಿತೋ ಲೋಕಃ ಕ್ಷೀಯತ ಏವಮೇವಾಮುತ್ರ ಪುಣ್ಯಚಿತೋ ಲೋಕಃ ಕ್ಷೀಯತೇ'' ಇಲ್ಲಿ ನಾವು ಮಾಡಿರುವ ಕರ್ಮದ ಫಲವು ನಾಶವಾಗುವಂತೆಯೇ ಪರಲೋಕದಲ್ಲಿಯೂ ಪುಣ್ಯದಿಂದ ಸಂಪಾದನೆ ಮಾಡಿಕೊಂಡ ಭೋಗವೂ ನಾಶವಾಗುವದು (ಬೃ.) ಎಂದು ಮುಂತಾದ ವಚನಗಳು ಕರ್ಮದಿಂದ ಮೋಕ್ಷವಾಗುವದಿಲ್ಲವೆಂದು ಹೇಳುವವು. “ಬ್ರಹ್ಮವಿದಾಪ್ನೋತಿ ಪರಮ್” (ಬ್ರಹ್ಮವನ್ನರಿತವನು ಪರಮ ಪುರುಷಾರ್ಥವನ್ನು ಹೊಂದುವನು. ತೈ. 2.1) 'ತರತಿ ಶೋಕಮಾತ್ಮವಿತ್' (ಆತ್ಮವನ್ನು ಅರಿತವನು ಶೋಕವನ್ನು ದಾಟುವನು) (ಛಾ. 7-1-3)- ಇವೇ ಮುಂತಾದ ಮಂತ್ರಗಳಲ್ಲಿ ಜ್ಞಾನದಿಂದ ಮೋಕ್ಷವಾಗುವದೆಂದೂ ಹೇಳಿರುತ್ತದೆ. ಇದರಂತೆ ಗೀತೆಯಲ್ಲಿಯೂ 'ಏವಂ ತ್ರಯೀಧರ್ಮಮನುಪ್ರಪನ್ನಾ ಗತಾಗತಂ ಕಾಮಕಾಮಾ ಲಭನ್ತೇ'- ಈ ರೀತಿಯಲ್ಲಿ ವೇದೋಕ್ತ ಧರ್ಮವನ್ನು ಅನುಸರಿಸುತ್ತ ಕಾಮವನ್ನೇ ಬಯಸುತ್ತಿರುವವರು ಸ್ವರ್ಗಕ್ಕೆ ಹೋಗುವದು, ಹಿಂತಿರುಗುವದು, ಹೀಗೆ ಹೋಗಿ ಬಂದೂ ಮಾಡುವ ಗತಿಯನ್ನೇ ಪಡೆಯುವರು. (9.21); 'ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ' ಎಲ್ಲಾ ಧರ್ಮಗಳನ್ನೂ ಕೈಬಿಟ್ಟು ನನ್ನೊಬ್ಬನನ್ನೇ ಶರಣುಹೊಂದು (18.66), ಇದಂ ತು ತೇ ಗುಹ್ಯತಮಂ ಪ್ರವಕ್ಷಾಮ್ಯನಸೂಯವೇ | ಜ್ಞಾನಂ ವಿಜ್ಞಾನಸಹಿತಂ ಯಜ್ಜ್ಞಾತ್ವಾ ಮೋಕ್ಷ್ಯಸೇಽಶುಭಾತ್ || ಸಕಲ ಗುಣಯುಕ್ತನಾಗಿರುವ ನಿನಗೆ ಇನ್ನು ಇದೊಂದನ್ನು ಹೇಳುವೆನು ಕೇಳು. ಈ ಜ್ಞಾನವನ್ನು ವಿಜ್ಞಾನದೊಂದಿಗೆ ತಿಳಿಸುವೆನು, ಇದನ್ನು ತಿಳಿದುಕೊಂಡೆಯಾದರೆ ಅಮಂಗಲವಾದ ಸಂಸಾರದಿಂದ ಮುಕ್ತಿಯನ್ನು ಪಡೆಯುವೆ. (9.1); ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ ಇವೇ ಮುಂತಾದ ವಚನಗಳಲ್ಲಿ ಇದೇ ಸಿದ್ಧಾಂತವನ್ನೇ ಹೇಳಿರುತ್ತದೆ. ಉಪನಿಷತ್ತುಗಳಲ್ಲಿ ಚಿತ್ತಶುದ್ಧಿಗಾಗಿ ಕರ್ಮವನ್ನೂ ಚಿತ್ತೈಕಾಗ್ರತೆಗಾಗಿ ಉಪಾಸನೆಯನ್ನೂ ಹೇಳಿರುವಂತೆಯೇ ಗೀತೆಯಲ್ಲಿಯೂ 'ಯೋಗಿನಃ ಕರ್ಮ ಕುರ್ವನ್ತಿ ಸಙ್ಗಂ ತ್ಯಕ್ತ್ವಾತ್ಮಶುದ್ಧಯೇ' ಯೋಗಿಗಳಾದವರು ಆಸಕ್ತಿಯನ್ನು ತೊರೆದು ಚಿತ್ತಶುದ್ಧಿಗಾಗಿ ಕರ್ಮವನ್ನು ಮಾಡುತ್ತಾರೆ (5.11); 'ಯಥಾ ದೀಪೋ ನಿವಾತಸ್ಥೋ ನೇಙ್ಗತೇ ಸೋಪಮಾ ಸ್ಮೃತಾ'- 'ಗಾಳಿಯಿಲ್ಲದೆಡೆ ಇರುವ ದೀಪದಂತೆ ಸ್ವಲ್ಪವೂ ಅಲುಗಾಡದೆ ಚಿತ್ತವಿರಬೇಕು; ಇದೇ ಯೋಗಿಗಳ ಚಿತ್ತಕ್ಕೆ ಕೊಟ್ಟಿರುವ ಉಪಮಾನವು' (6.19)- ಎಂಬಿದೇ ಮುಂತಾದ ಕಡೆಯಲ್ಲಿ ಹೇಳಿರುತ್ತದೆ. ಆದ್ದರಿಂದ ಜ್ಞಾನದಿಂದ ಮೋಕ್ಷವೆಂಬ ಸಿದ್ದಾಂತದ ವಿಷಯದಲ್ಲಿಯೂ ಕರ್ಮಾದಿಗಳು ಜ್ಞಾನಕ್ಕೆ ಸಾಧನವೆಂಬ ವಿಷಯದಲ್ಲಿಯೂ ನಿಜವಾಗಿ ಉಪನಿಷತ್ಸಿದ್ಧಾಂತಕ್ಕೂ ಗೀತಾಸಿದ್ಧಾಂತಕ್ಕೂ ಏನೂ ಹೆಚ್ಚುಕಡಿಮೆಯಿಲ್ಲವೆಂದೇ ಹೇಳಬೇಕಾಗಿರುವದು.
ಆದರೆ ಈ ವಿಷಯದಲ್ಲಿಯೂ ಈಗಿನ ಕೆಲವರಿಗೆ ಸಂಶಯವುಂಟಾಗಿರುತ್ತದೆ. ಅವರು ಹೇಳುವದೇನೆಂದರೆ— ಎಲ್ಲಾ ಉಪನಿಷತ್ತುಗಳಲ್ಲಿಯೂ ಒಂದೇ ಸಿದ್ಧಾಂತವಿರುವದಿಲ್ಲ. ಕೆಲವು ಉಪನಿಷತ್ತುಗಳಲ್ಲಿ, ಸಂನ್ಯಾಸ ಕರ್ಮಗಳಲ್ಲಿ ಒಂದೊಂದನ್ನೆ ಹೇಳಿದೆ. ಕೆಲವು ಉಪನಿಷತ್ತುಗಳಲ್ಲಿ ಜ್ಞಾನಕರ್ಮಗಳ ಸಮುಚ್ಚಯವೂ ಹೇಳಿದೆ. ಇದನ್ನು ತಿಳಿಯದೆ ಸಾಂಪ್ರದಾಯಿಕ ಭಾಷ್ಯಕಾರರು ಉಪನಿಷತ್ತುಗಳೆಲ್ಲವೂ ಒಂದೇ ಅರ್ಥವನ್ನು, ವಿಶೇಷವಾಗಿ ಸಂನ್ಯಾಸವನ್ನು, ಪ್ರತಿಪಾದಿಸುವದೆಂದು ಹೇಳಿರುತ್ತಾರೆ (ಗೀ.ರ. 353), ಹೀಗಿರುವಾಗ ಎಲ್ಲಾ ಉಪನಿಷತ್ತುಗಳಿಗೂ ಗೀತೆಗೂ ಏಕವಾಕ್ಯತೆ ಆಗುವ ಹಾಗಿಲ್ಲವೆಂದು ಅವರ ಹೇಳಿಕೆಯಾಗಿರುತ್ತದೆ. ಈ ಅಭಿಪ್ರಾಯವು ಮುಖ್ಯವಾಗಿ ಗೀತಾರಹಸ್ಯಕಾರರದಾಗಿರುತ್ತದೆಯಾದ್ದರಿಂದ ಈ ಗ್ರಂಥದ ವಿಷಯದಲ್ಲಿ ಕೆಲವು ಮಾತುಗಳನ್ನು ಇಲ್ಲಿ ಹೇಳಬೇಕಾಗಿದೆ. ಶ್ರೀ ಶಂಕರಾಚಾರ್ಯರು ಬರೆದಿರುವ ಭಾಷ್ಯಗಳಲ್ಲಿ ಸಕಲ ಉಪನಿಷತ್ತುಗಳೂ, ಗೀತೆಯೂ, ಸಂನ್ಯಾಸಾಶ್ರಮವನ್ನು ವಿಧಿಸುತ್ತವೆಯೆಂದು ಬರೆದಿರುವರೆಂಬ ತಪ್ಪುಗ್ರಹಿಕೆಯು ಹೇಗೋ ಇವರ ಮನಸ್ಸಿನಲ್ಲಿ ಹೊಕ್ಕುಬಿಟ್ಟಿರುತ್ತದೆ. ಇದು ತಪ್ಪುತಿಳುವಳಿಕೆಯೆಂಬುದನ್ನು ಮುಂದೆ ಸಂನ್ಯಾಸಸ್ವರೂಪವನ್ನು ವಿಚಾರಮಾಡುವಾಗ ಸ್ಪಷ್ಟಗೊಳಿಸಿಕೊಡುವೆನು. ಇದು ಹೋಗಲಿ, ಜ್ಞಾನಕರ್ಮಗಳ ಸಮುಚ್ಚಯವನ್ನು ಹೇಳುವ ವೃತ್ತಿಕಾರರಮತವನ್ನೂ ಆಚಾರ್ಯರವರು ಖಂಡಿಸಿರುತ್ತಾರಷ್ಟೆ, ಸಮುಚ್ಚಯವಾದವೆಂಬುದರ ಅರ್ಥವನ್ನೂ ಸರಿಯಾಗಿ ಮಾಡಿಕೊಳ್ಳದೆ ಗೀತಾರಹಸ್ಯಕಾರರು ತಮ್ಮದೇ ಒಂದು ಹೊಸ ಸಮುಚ್ಚಯವಾದವನ್ನು ಹೊರಕ್ಕೆ ತಂದು ಅದೇ ಗೀತಾರ್ಥವೆಂದು ಸಾಧಿಸುವದಕ್ಕೆ ಹೊರಟಿದ್ದಾರೆ. ಈ ಹೊಸ ಸಮುಚ್ಚಯವಾದವೂ ಪರೀಕ್ಷೆಗೆ ನಿಲ್ಲುವಹಾಗಿಲ್ಲವೆಂಬುದನ್ನು ಸಮುಚ್ಚಯ ಪರೀಕ್ಷೆಯಲ್ಲಿ ಮುಂದೆ ತೋರಿಸಿ ಕೊಡುತ್ತೇನೆ. ಕರ್ಮದಿಂದ ಮೋಕ್ಷವು ಸಿಕ್ಕುವದೆಂದಾಗಲಿ, ಜ್ಞಾನದಿಂದಲೇ ಮೋಕ್ಷವೆಂಬ ಸಿದ್ಧಾಂತವು ಸರಿಯಲ್ಲವೆಂದಾಗಲಿ, ಉಪನಿಷತ್ತುಗಳಲ್ಲಿಯೂ ಹೇಳಿರುವದಿಲ್ಲ ಗೀತೆಯಲ್ಲಿಯೂ ಹೇಳಿರುವದಿಲ್ಲ. ಈ ವಿಷಯದಲ್ಲಿ ಯಾರಿಗೂ ವಾದವಿರುವದಿಲ್ಲ.
ಗೀತೆಯಲ್ಲಿ ತತ್ತ್ವವನ್ನು ಪ್ರತಿಪಾದನೆ ಮಾಡಿರುವ ಕ್ರಮಕ್ಕೂ ಉಪನಿಷತ್ತುಗಳಲ್ಲಿ ಮಾಡಿರುವ ಕ್ರಮಕ್ಕೂ ಸ್ವಲ್ಪ ಹೆಚ್ಚುಕಡಿಮೆಯಿರುವದು. ಉದಾಹರಣೆಗೆ ಗೀತೆಯಲ್ಲಿ ಕಾಪಿಲಸಾಂಖ್ಯವನ್ನು ಹೆಚ್ಚಾಗಿ ಉಪಯೋಗಿಸಿಕೊಂಡಿರುತ್ತದೆ. ಈ ಕ್ರಮವು ಪ್ರಧಾನವಾದ ಉಪನಿಷತ್ತುಗಳಲ್ಲಿ ಕಣ್ಣಿಗೆ ಬೀಳುವದಿಲ್ಲ. ಗೀತೆಯಲ್ಲಿರುವ ಈಶ್ವರಾವತಾರವರ್ಣನೆಯ ರೀತಿಯು ಉಪನಿಷತ್ತಿನಲ್ಲಿಲ್ಲ; ಗೀತೆಯಲ್ಲಿ ನಿಷ್ಕಾಮ ಕರ್ಮವನ್ನು ವರ್ಣನೆ ಮಾಡಿರುವಂತೆ ಉಪನಿಷತ್ತುಗಳಲ್ಲಿ ವರ್ಣಿಸಿರುವದಿಲ್ಲ; ಶ್ವೇತಾಶ್ವತರ, ಕಠ - ಈ ಉಪನಿಷತ್ತುಗಳಲ್ಲಿ ಹೇಳಿರುವ ಅಲ್ಪಸ್ವಲ್ಪ ಸೂಚನೆಯನ್ನು ಬಿಟ್ಟರೆ ಮಿಕ್ಕ ಪ್ರಧಾನವಾದ ಉಪನಿಷತ್ತುಗಳಲ್ಲಿ ಎಂದರೆ ಶ್ರೀಶಾಂಕರಭಾಷ್ಯವು ದೊರೆಯುವ ಉಪನಿಷತ್ತುಗಳಲ್ಲಿ ಧ್ಯಾನಯೋಗವನ್ನೂ ಗೀತೆಯಲ್ಲಿ ಹೇಳಿರುವಂತೆ ಎಲ್ಲಿಯೂ ಹೇಳಿರುವದಿಲ್ಲ. ಆದರೆ ಈ ವಿಶೇಷ ಸಂಗತಿಗಳು ಗೀತೆಯಲ್ಲಿರುವ ಅಸಾಧಾರಣ ಸ್ವಭಾವವನ್ನು ಸೂಚಿಸುತ್ತವೆಯೇ ಹೊರತು ಮತ್ತೇನೂ ಇಲ್ಲ. ಇವುಗಳ ಮಹತ್ತ್ವವನ್ನು ಕುರಿತು ಹೇಳತಕ್ಕದ್ದು ಮುಂದೆ ಆಯಾಸ್ಥಳದಲ್ಲಿ ಹೇಳುವೆನು. ಆದರೆ ಇಷ್ಟಂತು ನಿಜ; ಕರ್ಮಜ್ಞಾನಗಳ ಸ್ಥಾನವನ್ನು ಕುರಿತು ಬಂದಿರುವ ಉಪನಿಷದ್ವಚನಗಳಿಗೂ ಗೀತೆಗೂ ಎಲ್ಲಿಯೂ ಮತಭೇದವಿರುವದಿಲ್ಲ. ಜ್ಞಾನಿಯಾದವನು ಕರ್ಮವನ್ನು ಮಾಡುತ್ತಲೇ ಇರಬೇಕೆಂದು ಭಗವದ್ಗೀತೆಯಲ್ಲಿಯೂ ಕೆಲವು ಉಪನಿಷತ್ತುಗಳಲ್ಲಿಯೂ ಹೇಳಿರುತ್ತದೆಯೆಂದು ಗೀತಾರಹಸ್ಯಕಾರರು ಹೇಳಿರುತ್ತಾರೆ. ಇದನ್ನೇ ಅವರು ಸಮುಚ್ಚಯವಾದವೆಂದೂ ಕರೆದಿರುತ್ತಾರೆ. ಆದರೆ ಈ ಸಿದ್ಧಾಂತವು ಸರಿಯೆ ಅಲ್ಲವೆ ಎಂಬುದು ಒಂದು ಮಾತಿನಲ್ಲಿ ನಿರ್ಣಯಿಸತಕ್ಕದ್ದಲ್ಲವಾದ್ದರಿಂದ ಈವೊಂದು ವಿಷಯವನ್ನು ಮುಂದಿನ ವಿಚಾರಕ್ಕೆ ಇಟ್ಟುಕೊಂಡು ಜ್ಞಾನಕರ್ಮಗಳು ಮೋಕ್ಷಕ್ಕೆ ಹೇಗೆ ಸಾಧನವೆಂಬ ವಿಚಾರದಲ್ಲಿ ಗೀತೆಗೂ ಉಪನಿಷತ್ತುಗಳಿಗೂ ಏನೂ ಮತಭೇದವಿಲ್ಲವೆಂಬುದಷ್ಟನ್ನೇ ಇಲ್ಲಿ ಹೇಳಿಟ್ಟು ಈ ವಿಷಯವನ್ನು ಇಲ್ಲಿಗೆ ಮುಗಿಸುತ್ತೇನೆ.
10. ಬ್ರಹ್ಮಸೂತ್ರಕ್ಕೂ ಗೀತೆಗೂ ಹೋಲಿಕೆ
ಈಗ ವೇದಾಂತದರ್ಶನಕ್ಕೆ ಮೂಲಗ್ರಂಥವೆನಿಸಿರುವ ಬ್ರಹ್ಮಸೂತ್ರವನ್ನು ತೆಗೆದುಕೊಂಡು ಗೀತೆಯ ಸಿದ್ಧಾಂತಕ್ಕೆ ಹೋಲಿಸುವದಕ್ಕೆ ಹೊರಡುವದು ಅವಶ್ಯಕವಾಗುವದು. ಏಕೆಂದರೆ ಬ್ರಹ್ಮಸೂತ್ರದಲ್ಲಿ ಸಕಲ ಉಪನಿಷತ್ತುಗಳ ಒಟ್ಟು ತಾತ್ಪರ್ಯವನ್ನು ನಿರ್ಣಯಿಸಿರುತ್ತದೆಯೆಂದು ನಮ್ಮ ದೇಶದವರೆಲ್ಲರ ನಂಬಿಕೆಯಿರುವದು. ಬ್ರಹ್ಮಸೂತ್ರದಲ್ಲಿ ಗೀತೆಯನ್ನು ಪ್ರಮಾಣವಾಗಿ ಅಂಗೀಕರಿಸಿ ಆಗಾಗ್ಗೆ ಉದಾಹರಿಸಿರುತ್ತದೆಯೆಂದು ಭಾಷ್ಯಕಾರರನೇಕರು ಒಪ್ಪುತ್ತಾರೆ. ಆದ್ದರಿಂದ ಬ್ರಹ್ಮಸೂತ್ರಕಾರರು ತಮ್ಮ ಗ್ರಂಥದಲ್ಲಿ ಗೀತಾತಾತ್ಪರ್ಯಕ್ಕೆ ಹೊಂದುವಂತೆಯೇ ಬರೆದಿರುವರೆಂದು ಇಟ್ಟುಕೊಳ್ಳುವದು ಯುಕ್ತವಾಗುವದು.
ಇಲ್ಲಿ ಕೆಲವರ ಅಭಿಪ್ರಾಯವೇನೆಂದರೆ : ಭಗವದ್ಗೀತೆಯಲ್ಲಿ ಬ್ರಹ್ಮಸೂತ್ರವೆಂಬ ಹೆಸರು ಒಂದು ಶ್ಲೋಕದಲ್ಲಿ ಕಂಡುಬರುತ್ತದೆ.
ಋಷಿಭಿರ್ಬಹುಧಾ ಗೀತಂ ಛಂದೋಭಿರ್ವಿವಿಧೈಃ ಪೃಥಕ್ |
ಬ್ರಹ್ಮಸೂತ್ರಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈಃ ||
''ಈ ವಿಷಯವನ್ನು ಋಷಿಗಳು ಬೇರೆಬೇರೆ ಛಂದಸ್ಸಿನಲ್ಲಿರುವ ವೇದಗಳಲ್ಲಿ ಬಹುಬಗೆಯಿಂದ ಗಾನಮಾಡಿರುವರು ; ಬ್ರಹ್ಮಸೂತ್ರದ ಪದಗಳೂ ಹೇತುಯುಕ್ತವಾಗಿ ನಿಶ್ಚಯರೂಪವಾಗಿ ಇದನ್ನು ನಿರ್ಣಯಿಸಿರುತ್ತವೆ'' ಎಂಬುದು ಈ ಶ್ಲೋಕದ (13.4) ಭಾವಾರ್ಥವಾಗಿರುತ್ತದೆ.
ಇಲ್ಲಿ ''ಹೇತುಮದ್ಭಿಃ ವಿನಿಶ್ಚಿತೈ'' ಎಂಬ ವಿಶೇಷಣವನ್ನು ನೋಡಿದರೆ ನೈಯಾಯಿಕರ ಸರಣಿಯನ್ನನುಸರಿಸಿ ಸಾಧಕ ಬಾಧಕ ಪ್ರಮಾಣಗಳಿಂದ ವಿಷಯವನ್ನು ನಿಶ್ಚಯಿಸಿರುವ ಬ್ರಹ್ಮಸೂತ್ರಗಳಿಗೆ ಹೊಂದುವ ಹಾಗೆ ಇವು ಮತ್ತೆ ಯಾವ ಗ್ರಂಥಕ್ಕೂ ಹೊಂದುವದಿಲ್ಲ. ಆದ್ದರಿಂದ ಭಗವದ್ಗೀತೆಯಲ್ಲಿ ಬ್ರಹ್ಮಸೂತ್ರವನ್ನು ಪ್ರಮಾಣವಾಗಿ ಕೊಟ್ಟಿರುತ್ತದೆಯೆಂದಾಯಿತು. ಆದರೆ ಬ್ರಹ್ಮಸೂತ್ರದಲ್ಲಿ ಗೀತಾವಾಕ್ಯಗಳನ್ನು ಕೊಟ್ಟಿರುವದರಿಂದ ಯಾವ ಗ್ರಂಥವು ಮೊದಲೆನ್ನಬೇಕು? ಒಂದು ಸಲ ಬ್ರಹ್ಮಸೂತ್ರವು ಗೀತೆಗಿಂತ ಮುಂಚಿತವಾಗಿ ಬರೆದದ್ದೆಂದೂ ಇನ್ನೊಂದು ಸಲ ಅದಕ್ಕಿಂತ ಹಿಂದಾಗಿ ಬರೆದದ್ದೆಂದೂ ಹೇಳುವದು ಹೇಗೆ ಒಪ್ಪತಕ್ಕ ಮಾತಾದೀತು? ಆದ್ದರಿಂದ ಗೀತೆಯಲ್ಲಿ ಬ್ರಹ್ಮಸೂತ್ರವೆಂಬ ಹೆಸರೇ ಬಂದಿರುವದರಿಂದ ಅದೇ ಹಿಂದುಗಡೆಯಾದದ್ದೆಂದು ಹೇಳಬೇಕು. ಬ್ರಹ್ಮಸೂತ್ರದಲ್ಲಿ ಉದಾಹರಿಸಿರುವ ಸ್ಮೃತಿಯು ಮತ್ತೆಯಾವದೋ ಇರಬೇಕು ಎಂದು ಆಕ್ಷೇಪಕರ ಅಭಿಪ್ರಾಯವು. ಈ ಅಭಿಪ್ರಾಯಕ್ಕೆ ಮತ್ತೆ ಕೆಲವರು ಸಮಾಧಾನ ಹೇಳಿರುವದೇನೆಂದರೆ ಬ್ರಹ್ಮಸೂತ್ರದಲ್ಲಿ ಗೀತೆಯಲ್ಲಿ ಹೇಳಿರುವ ವಿಷಯಗಳು ಸ್ಪಷ್ಟವಾಗಿ ಉಲ್ಲೇಖವಾಗಿರುತ್ತವೆ; ಆ ಉಲ್ಲೇಖಗಳು ಬೇರೆ ಇಂಥ ಗ್ರಂಥಕ್ಕೆ ಹತ್ತುತ್ತವೆ ಎಂದು ನಾವು ತೋರಿಸಿಕೊಟ್ಟ ಹೊರತು ಸಂಪ್ರದಾಯದ ಭಾಷ್ಯಕಾರರ ವಚನಗಳನ್ನು ಅನುಸರಿಸದೆ ಇರುವದಕ್ಕೆ ಕಾರಣವಿಲ್ಲ. ಆದಕಾರಣ ಭಗವದ್ಗೀತೆ, ಬ್ರಹ್ಮಸೂತ್ರ—ಇವೆರಡನ್ನೂ ಒಬ್ಬರೇ ಏಕಕಾಲದಲ್ಲಿ ರಚಿಸಿರಬೇಕು; ಅಥವಾ ಭಗವದ್ಗೀತೆಯನ್ನೂ ಬ್ರಹ್ಮಸೂತ್ರವನ್ನೂ ಮೊದಲು ಬರೆದವರು ಬೇರೆಬೇರೆ ಇರಬಹುದಾದರೂ ಬ್ರಹ್ಮಸೂತ್ರಕರ್ತರೇ ಭಾರತಕ್ಕೂ ಗೀತೆಗೂ ಈಗಿನ ಸ್ವರೂಪವನ್ನು ಕೊಟ್ಟಿರಬೇಕು. ಆದ್ದರಿಂದ ಹೀಗೆ ಎರಡು ಗ್ರಂಥಗಳಲ್ಲಿಯೂ ಒಂದರ ಉಲ್ಲೇಖವು ಮತ್ತೊಂದರಲ್ಲಿ ಬರುವದಕ್ಕೆ ಕಾರಣವಾಗಿರುತ್ತದೆ. ಇದು ಕೆಲವರು ಶೋಧಕರ ಮತವು.
ಈ ಆಕ್ಷೇಪ ಸಮಾಧಾನಗಳೆರಡೂ ಅನವಶ್ಯಕವೆಂದು ನನಗೆ ತೋರುತ್ತದೆ. ಭಗವದ್ಗೀತೆಯಲ್ಲಿ ಬ್ರಹ್ಮಸೂತ್ರವೆಂಬ ಹೆಸರಿನಿಂದ ಬಾದರಾಯಣ ವಿರಚಿತವಾದ ಸೂತ್ರವನ್ನು ಕರೆದಿರುತ್ತದೆ ಎಂದು ಇಟ್ಟುಕೊಂಡದ್ದರಿಂದ ಇಷ್ಟು ಸಂಶಯವು ಬರುವದಕ್ಕೆ ಅವಕಾಶವಾಯಿತು. ಗೀತೆಯ ಕಾಲದಲ್ಲಿ ಬೇರೆ ಗ್ರಂಥಗಳಲ್ಲಿ ಅಥವಾ ಮಹಾಭಾರತದ ಬೇರೆ ಯಾವದಾದರೂ ಒಂದು ಭಾಗದಲ್ಲಿ ಬ್ರಹ್ಮಸೂತ್ರವೆಂಬ ಹೆಸರು ಕಂಡುಬರುತ್ತದೆಯೆ ಇಲ್ಲವೆ ? ಎಂಬುದನ್ನು ಗೊತ್ತುಪಡಿಸುವದು ಈ ಚರ್ಚೆಗೆ ಬಹುಮುಖ್ಯವಾಗಿರುತ್ತದೆ. ಭಾರತದಲ್ಲಿ ಸೂತ್ರವೆಂಬ ಶಬ್ದವೇನೋ ಬೇರೆ ಕಡೆಯಲ್ಲಿ ಬರುತ್ತದೆ. ಆದರೆ ಬ್ರಹ್ಮಸೂತ್ರವೆಂಬ ಮಾತು ಎಲ್ಲಿಯೂ ಇರುವಂತೆ ತೋರುವದಿಲ್ಲ. ಬ್ರಹ್ಮಸೂತ್ರವನ್ನು ಬರೆದವರೇ ಭಾರತವನ್ನು ಈಗಿನ ರೂಪಕ್ಕೆ ತಂದರೆಂದೂ ಆದ್ದರಿಂದಲೇ ಗೀತೆಯಲ್ಲಿ 'ಬ್ರಹ್ಮಸೂತ್ರಪದೈಶ್ಚೈವ' ಎಂಬ ಮಾತನ್ನು ಹಾಕಿರುವರೆಂದೂ ಹೇಳುವವರು ಈ ಹೆಚ್ಚು ಕಡಿಮೆಗೆ ಕಾರಣವನ್ನು ಹೇಳಬೇಕಾಗಿದೆ. ಇನ್ನು ಒಂದು ವಿಷಯವು. ಬ್ರಹ್ಮಸೂತ್ರವನ್ನು ಮಾಡಿರುವವರು ಬಾದರಾಯಣರೆಂದು ಶ್ರೀಶಂಕರಾಚಾರ್ಯರ ಭಾಷ್ಯದಿಂದ ಸ್ಪಷ್ಟವಾಗಿ ಕಂಡುಬರುತ್ತದೆ. ಆದರೆ ಭಾರತಕರ್ತರನ್ನಾಗಲಿ ಗೀತಾಕರ್ತರನ್ನಾಗಲಿ ಈ ಆಚಾರ್ಯರವರು ಬಾದರಾಯಣನೆಂಬ ಹೆಸರಿನಿಂದ ಎಲ್ಲಿಯೂ ಕರೆದಿರುವದು ಕಂಡುಬಂದಿಲ್ಲ. ಭಾರತಕರ್ತರನ್ನು 'ವ್ಯಾಸ'ರೆಂದೇ ತಮ್ಮ ಭಾಷ್ಯಗಳಲ್ಲೆಲ್ಲ ಕರೆದಿರುತ್ತಾರೆ. ಈ ಹೆಸರಿನ ಹೆಚ್ಚು ಕಡಿಮೆಗೆ ಕಾರಣವನ್ನು ಸರಿಯಾಗಿ ತೋರಿಸಿದ ಹೊರತು ಬ್ರಹ್ಮಸೂತ್ರಕಾರರೇ ಗೀತೆಗೆ ಈಗಿನ ರೂಪವನ್ನು ಕೊಟ್ಟರೆಂದು ಒಪ್ಪುವದಕ್ಕಾಗುವದಿಲ್ಲ. ಇದೆಲ್ಲ ಹಾಗಿರಲಿ. ಬ್ರಹ್ಮಸೂತ್ರವೆಂದರೆ ವೇದಾಂತಸೂತ್ರವೆಂದು ಈಗ ರೂಢಿಯಿದ್ದರೂ ಶಂಕರಾಚಾರ್ಯರವರ ಕಾಲಕ್ಕೆ ಅದು ಇದ್ದಂತೆಯೇ ಕಾಣುವದಿಲ್ಲ. ಶಾರೀರಕಸೂತ್ರ, ವೇದಾಂತಸೂತ್ರ, ಚತುರ್ಲಕ್ಷಣೀ ಮುಂತಾದ ಅನೇಕ ಹೆಸರುಗಳು ಈ ಬಾದರಾಯಣ ರಚಿತ ಗ್ರಂಥಕ್ಕೆ ಇದ್ದವೆಂದು ಪ್ರಾಚೀನ ಗ್ರಂಥಗಳಲ್ಲಿ ಕಂಡುಬಂದಿರುತ್ತದೆ; ಆದರೆ ಬ್ರಹ್ಮಸೂತ್ರವೆಂಬ ಹೆಸರು ಹಾಗೆ ಎಲ್ಲಿಯೂ ಬಹಳ ಹಿಂದಿನ ಗ್ರಂಥಗಳಲ್ಲಿ ಕಂಡುಬರುವದಿಲ್ಲ. ಆನಂದಗಿರಿಗಳು, ಶ್ರೀಧರಾಚಾರ್ಯರವರು, ರಾಮಾನುಜಾಚಾರ್ಯರೂ, ಮಧ್ವಾಚಾರ್ಯರೂ, ಈ ಹೆಸರನ್ನು ತಮ್ಮ ತಮ್ಮ ಗ್ರಂಥಗಳಲ್ಲಿ ಬರೆದಿರುತ್ತಾರೆಂಬುದು ನಿಜ. ಆದರೆ ಈಚಿನ ರೂಢಿಯಿಂದ ಹುಟ್ಟಿರುವ ಈ ಹೆಸರನ್ನು ಗೀತಾಕಾರರು ಇದೇ ಅರ್ಥದಲ್ಲಿ ಉಪಯೋಗಿಸಿರುತ್ತಾರೆಂದು ಇಟ್ಟುಕೊಳ್ಳುವದಾದರೆ, ಬ್ರಹ್ಮೇತಿ, ಪುರಾಣ, ಅಧ್ವಾನ, ಅನಾಹುತ, ಅವಾಂತರ- ಮುಂತಾದ ಸಂಸ್ಕೃತ ಶಬ್ದಗಳನ್ನು ಕನ್ನಡಿಗರು ಯಾವ ಅರ್ಥದಲ್ಲಿ ಈಗ ಉಪಯೋಗಿಸುತ್ತಿರುವರೋ ಅದೇ ಅರ್ಥದಲ್ಲಿಯೇ ಸಂಸ್ಕೃತ ಗ್ರಂಥಗಳಲ್ಲಿಯೂ ಉಪಯೋಗಿಸುತ್ತಿದ್ದಾರೆಂದು ಇಟ್ಟುಕೊಂಡಂತೆ ಆಗುವದು. ಆದಕಾರಣ ಬ್ರಹ್ಮಸೂತ್ರವೆಂದರೆ ಬಾದರಾಯಣರು ಮಾಡಿದ ವೇದಾಂತಸೂತ್ರವೆಂದು ಇಟ್ಟುಕೊಳ್ಳುವದೇ ಮೊದಲು ತಪ್ಪು.
ಇದರ ಜತೆಗೆ ಗೀತಾಶ್ಲೋಕದ ನಿಜವಾದ ಅರ್ಥವೂ ಇದಕ್ಕೆ ಹೊಂದುವದಿಲ್ಲ. ಏಕೆಂದರೆ,
ಋಷಿಭಿರ್ಬಹುಧಾ ಗೀತಂ ಛಂದೋಭಿರ್ವಿವಿಧೈಃ ಪೃಥಕ್ |
ಬ್ರಹ್ಮಸೂತ್ರಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈಃ ||
ಎಂಬ ಶ್ಲೋಕದ ಸರಳವಾದ ಅರ್ಥವು ಹೇಗೆ ಆಗುತ್ತದೆ ನೋಡಿರಿ: ''ಬಗೆಬಗೆಯಾದ ವೇದಮಂತ್ರಗಳಿಂದಲೂ ಹೇತುಯುಕ್ತವಾದ ಸುನಿಶ್ಚಿತವಾದ ಬ್ರಹ್ಮಸೂತ್ರಪದಗಳಿಂದಲೂ ಈ ವಿಷಯವನ್ನು ಋಷಿಗಳು ಬಹುವಾಗಿ ಗಾನಮಾಡಿರುವರು.''
ಋಷಿಪ್ರೋಕ್ತವಾದ ಉಪನಿಷತ್ತುಗಳು ಬೇರೆ ಬೇರೆ ಛಂದಸ್ಸುಗಳಲ್ಲಿವೆ. ಅವುಗಳಲ್ಲಿ ಬ್ರಹ್ಮವನ್ನು ಸೂತ್ರರೂಪವಾಗಿ ಹೇಳಿರುವ ಮಾತುಗಳಿವೆ. ಆ ಮಾತುಗಳು ಹೇತುಯುಕ್ತವಾಗಿಯೂ ನಿಶ್ಚಿತವಾಗಿಯೂ ಇವೆ - ಎಂದಲ್ಲವೆ ಇಲ್ಲಿ ಹೇಳಿದೆ? ಮೊದಲನೆಯ ಶ್ಲೋಕಾರ್ಧದಲ್ಲಿ ಋಷಿಗಳನ್ನು ಹೇಳಿದವರೇ ಎರಡನೆಯ ಅರ್ಧದಲ್ಲಿ ಗ್ರಂಥದ ಹೆಸರನ್ನು ಸಮುಚ್ಚಯಕ್ಕೆ ತೆಗೆದುಕೊಳ್ಳುವರೆ ? 'ಬ್ರಹ್ಮಸೂತ್ರಪದೈಶ್ಚೈವ' ಎನ್ನುವುದಕ್ಕೆ ಬದಲು ''ಬ್ರಹ್ಮಸೂತ್ರಕೃತಾಶ್ಚೈವ'' ಎಂದು ಹೇಳುವದು ಬಲುಕಷ್ಟವಾಗಿತ್ತೆ ? ಏನೂ ಕಷ್ಟವಿರಲಿಲ್ಲ, ಬಾದರಾಯಣರು ಋಷಿಗಳಲ್ಲವೆಂಬ ಅನಿಷ್ಟವೊಂದು ಮಾತ್ರ ಬಂದು ಒದಗುತ್ತಿತ್ತು. ಅದು ಹೋಗಲಿ ; 'ಹೇತುಮದ್ಭಿರ್ವಿನಿಶ್ಚಿತೈಃ' – ಎಂಬ ಮಾತುಗಳು ಉಪನಿಷತ್ತುಗಳಿಗೆ ಹೊಂದುವದಿಲ್ಲವೆಂದು ತಿಳಿಯುವದೇ ಅನುಚಿತವೆಂದು ನನಗೆ ತೋರುತ್ತದೆ. ಆತ್ಮಸ್ವರೂಪವನ್ನು ಹೇಳುವ ''ಸತ್ಯಂ ಜ್ಞಾನಮನಂತಂ ಬ್ರಹ್ಮ” ಮುಂತಾದ ಸೂತ್ರವಾಕ್ಯಗಳು ಸರಿಯಾದ ಹೇತುಗಳಿಂದ ಪುಷ್ಟಿಯನ್ನೂ ಹೊಂದಿರುತ್ತವೆ. ನಿಃಸಂದೇಹವಾಗಿ ತತ್ತ್ವವನ್ನೂ ತಿಳಿಸುತ್ತವೆ. 'ವೇದಾಂತವಿಜ್ಞಾನಸುನಿಶ್ಚಿತಾರ್ಥಾಃ' ಎಂಬುದೇ ಮುಂತಾದ ಉಪನಿಷದ್ವಾಕ್ಯಗಳನ್ನು ನೋಡಿದವರಿಗೆ ಉಪನಿಷದ್ವಾಕ್ಯಗಳು ನಿಶ್ಚಯವಾಗುವ ರೀತಿಯಿಂದ ಆತ್ಮವಸ್ತುವನ್ನು ಬೋಧಿಸುವದಿಲ್ಲವೆಂಬ ಸಂಶಯವೇನೂ ಉಳಿಯುವ ಹಾಗಿಲ್ಲ. ಮೇಲಿನ ಗೀತಾವಾಕ್ಯದ ಮುಖ್ಯ ಉದ್ದೇಶವು ತರ್ಕರೀತಿಯಿಂದ ಆತ್ಮವನ್ನು ನಿಶ್ಚಯಿಸಿರುವದೆಂದು ತಿಳಿಸುವದಲ್ಲ. ಉಪನಿಷತ್ತುಗಳಲ್ಲಿ ಒಂದೇ ಆತ್ಮತತ್ತ್ವವನ್ನು ಬಗೆಬಗೆಯಾಗಿ ವರ್ಣಿಸಿ ಸಂದೇಹವೆಲ್ಲ ತೊಲಗುವಂತೆ ತಿಳಿಸಿರುತ್ತದೆ. ಇದನ್ನು ತಿಳಿಯುವದಕ್ಕೆ ಅನುಕೂಲಿಸುವಂತೆ ಸೃಷ್ಟಿ ಪ್ರಲಯಾದಿ ಯುಕ್ತಿಗಳನ್ನು ಕೊಟ್ಟಿರುತ್ತದೆ. ಅದನ್ನೇ ನಿನಗೆ ಈಗ ತಿಳಿಸುತ್ತೇನೆ ಎಂದು ತಿಳಿಸುವದೇ ಉದ್ದೇಶವು. ಆದ್ದರಿಂದಲೇ ಮುಂದೆ ಶ್ವೇತಾಶ್ವತರವೇ ಮುಂತಾದ ಉಪನಿಷದ್ವಾಕ್ಯಗಳನ್ನು ಈ ಪ್ರಕರಣದಲ್ಲಿ (13-16) ಸೂಚಿಸಿರುತ್ತದೆ. ಆದ ಕಾರಣ ಬ್ರಹ್ಮಸೂತ್ರಪದಗಳೆಂದರೆ ಉಪನಿಷದ್ವಾಕ್ಯಗಳೇ ಹೊರತು ಮತ್ತೇನೂ ಅಲ್ಲ. ಆದ್ದರಿಂದ ಇಲ್ಲಿ ಶಂಕಾಸಮಾಧಾಗಳಿಗೆ ಕಾರಣವೇ ಇರುವದಿಲ್ಲ.
ಇನ್ನು ಪ್ರಕೃತ ವಿಚಾರಕ್ಕೆ ಹೋಗೋಣ. ಬ್ರಹ್ಮಸೂತ್ರದಲ್ಲಿ ಕರ್ಮಜ್ಞಾನಗಳ ವಿಷಯದಲ್ಲಿ ಏನು ಹೇಳಿರುತ್ತದೆ— ಎಂಬುದನ್ನು ನಿರ್ಣಯಿಸುವದೇ ಪ್ರಕೃತ ವಿಷಯವು. ಈ ವಿಷಯಕ್ಕೆ ಸಂಬಂಧಪಟ್ಟ ಸೂತ್ರಗಳನ್ನು ಮಾತ್ರ ಇಲ್ಲಿ ಉದಾಹರಿಸುತ್ತೇನೆ. ಪುರುಷಾರ್ಥೋऽತಃ ಶಬ್ದಾದಿತಿ ಬಾದರಾಯಣಃ 'ಈ ವೇದಾಂತ ಜ್ಞಾನದಿಂದ ಸ್ವತಂತ್ರವಾಗಿಯೇ ಪುರುಷಾರ್ಥವಾದ ಮೋಕ್ಷವು ದೊರಕುವದೆಂದು ಬಾದರಾಯಣನಾದ ನನ್ನ ಮತವು'' (ಸೂ. 3-4-1). ಈ ಸೂತ್ರದಲ್ಲಿ ಕರ್ಮ, ಉಪಾಸನೆ- ಇವುಗಳ ಸಹಾಯವೇನೂ ಬೇಕಿಲ್ಲದೆಯೇ ಜ್ಞಾನವು ನೇರಾಗಿ ಮುಕ್ತಿಯನ್ನು ಕೊಡಬಲ್ಲದೆಂದು ಹೇಳಿರುತ್ತದೆ. ಅನುಷ್ಠೇಯಂ ಬಾದರಾಯಣಃ ಸಾಮ್ಯಶ್ರುತೇಃ – ''ಗೃಹಸ್ಥಾಶ್ರಮವೇ ಮುಂತಾದವುಗಳಂತೆ ಸಂನ್ಯಾಸಾಶ್ರಮವೂ ಅವಶ್ಯವಾಗಿ ಅನುಸರಿಸತಕ್ಕದ್ದು. ಏಕೆಂದರೆ ಇತರ ಆಶ್ರಮಗಳಂತೆ ಈ ಆಶ್ರಮವನ್ನೂ ಶ್ರುತಿಯಲ್ಲಿ ಹೇಳಿರುವದು'' (3-4-19), ಈ ಸೂತ್ರದಲ್ಲಿ ವೇದೋಕ್ತಕರ್ಮಗಳನ್ನು ಬಿಟ್ಟರೆ ಪ್ರತ್ಯವಾಯವೆಂಬ ದೋಷವು ಬರುವದರಿಂದ ಕರ್ಮವನ್ನು ಮಾಡುತ್ತಲೇ ಇರಬೇಕೆಂಬುವರ ಮತವನ್ನು ನಿರಾಕರಣ ಮಾಡಿರುತ್ತದೆ; ವೇದೋಕ್ತ ಕರ್ಮವನ್ನು ಕೈಬಿಟ್ಟು ಬ್ರಹ್ಮಚಿಂತನವನ್ನೊಂದನ್ನೇ ಮಾಡುವ ಆಶ್ರಮವೂ ಶಾಸ್ತ್ರಸಮ್ಮತವೆಂದು ಹೇಳಿರುತ್ತದೆ. ಗೀತೆಯಲ್ಲಿಯೂ ಇವೆರಡು ತತ್ತ್ವಗಳನ್ನು ಹೇಳಿರುತ್ತದೆ. ಉದಾಹರಣೆಗೆ ನೋಡಿ:
ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್ |
ಯಜ್ಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ ||
“ಮತ್ತೂ ಒಂದು ಸಲ ನಿನಗೆ ಜ್ಞಾನಗಳಲ್ಲೆಲ್ಲ ಉತ್ತಮವೆನಿಸಿರುವ ಪರಮಾತ್ಮ ವಿಷಯಕವಾದ ಜ್ಞಾನವನ್ನು ಹೇಳುತ್ತೇನೆ; ಇದನ್ನು ತಿಳಿದ ಮುನಿಗಳೆಲ್ಲ ಈ ಸಂಸಾರವನ್ನು ಬಿಟ್ಟು ಹೆಚ್ಚಿನ ಸಿದ್ಧಿಯಾದ ಮುಕ್ತಿಯನ್ನು ಪಡೆದಿರುವರು.” (14.1)
ಈ ಶ್ಲೋಕದಲ್ಲಿ ಜ್ಞಾನದಿಂದ ಪರಸಿದ್ಧಿಯಾದ ಮೋಕ್ಷವಾಗುವದೆಂಬುದನ್ನು ಒತ್ತಿ ಹೇಳಿರುತ್ತದೆ. “ಸಂನ್ಯಾಸಃ ಕರ್ಮಯೋಗಶ್ಚ ನಿಃಶ್ರೇಯಸಕರಾವುಭೌ'' ಸಂನ್ಯಾಸವೂ ಕರ್ಮಯೋಗವೂ – ಇವೆರಡೂ ಮುಕ್ತಿಗೆ ಕಾರಣವಾಗಿರುತ್ತದೆ (5-2) ಎಂಬ ಶ್ಲೋಕ ಭಾಗದಲ್ಲಿ ಕರ್ಮವನ್ನು ಮಾಡುವ ಆಶ್ರಮದಂತೆ ಕರ್ಮವನ್ನು ಬಿಡುವ ಆಶ್ರಮವೂ ಮುಕ್ತಿಗೋಸ್ಕರ ಅನುಸರಿಸತಕ್ಕದ್ದೇ ಎಂಬ ಅಭಿಪ್ರಾಯವು ಬಂದಿರುತ್ತದೆ. ''ಸರ್ವಾಪೇಕ್ಷಾ ಚ ಯಜ್ಞಾದಿಶ್ರುತೇರಶ್ವವತ್” - ಯಜ್ಞ ದಾನ, ತಪಸ್ಸು - ಇವುಗಳನ್ನು ಶ್ರುತಿಯಲ್ಲಿ ಜ್ಞಾನಸಾಧನವೆಂದು ಹೇಳಿರುವದರಿಂದ ಆಶ್ರಮಕರ್ಮಗಳೆಲ್ಲವೂ ಜ್ಞಾನಕ್ಕೆ ಬೇಕಾಗಿಯೇ ಇರುವವು. ಕುದುರೆಯು ನೇಗಿಲನ್ನು ಎಳೆಯುವದಕ್ಕೆ ಬರದಿದ್ದರೂ ಗಾಡಿಯನ್ನೆಳೆಯುವದಕ್ಕೆ ಉಪಯೋಗವಾಗುವಂತೆ ಯಜ್ಞಾದಿಕರ್ಮಗಳು ಮುಕ್ತಿಗೆ ಬೇಕಿಲ್ಲದಿದ್ದರೂ ಜ್ಞಾನೋತ್ಪತ್ತಿಗೆ ಬೇಕಾಗುವವು (ಸೂ. 3-4-26). ಈ ಸೂತ್ರದಲ್ಲಿ ಕರ್ಮಗಳನ್ನು ಅವಶ್ಯವಾಗಿ ಮಾಡಲೇಬೇಕೆಂದು ತಿಳಿಸಿ ಅದರ ಉಪಯೋಗವನ್ನು ಹೇಳಿದೆಯೆಂಬುದು ಸ್ಪಷ್ಟವಾಗಿದೆ. ಇದರಂತೆಯೇ ಗೀತೆಯಲ್ಲಿಯೂ
ಯಜ್ಞದಾನತಪಃ ಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ |
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್ ||
ಯಜ್ಞ ದಾನ ತಪಸ್ಸುಗಳೆಂಬ ಕರ್ಮವನ್ನು ಬಿಡತಕ್ಕದ್ದಲ್ಲ, ಇದನ್ನು ಮಾಡತಕ್ಕದ್ದೆ ಸರಿ. ಯಜ್ಞವೂ ದಾನವೂ ತಪಸ್ಸೂ ತಿಳಿದವರಿಗೆ ಚಿತ್ತವನ್ನು ಪವಿತ್ರಗೊಳಿಸುವವಾಗಿದೆ (18.5) ಎಂದು ಅಕ್ಷರಕ್ಕಕ್ಷರವನ್ನಿಟ್ಟು ಹೇಳಿರುತ್ತದೆ.
ವಿಹಿತತ್ವಾಚ್ಚಾಶ್ರಮಕರ್ಮಾಪಿ ''ಆಶ್ರಮಕರ್ಮವನ್ನು ವಿಧಿಸಿರುವದರಿಂದ ಎಲ್ಲರೂ ಅದನ್ನು ಮಾಡತಕ್ಕದ್ದೆ'' (ಸೂ. 3-4-32) ಈ ಸೂತ್ರದಲ್ಲಿ ಮುಮುಕ್ಷುಗಳಲ್ಲದವರೂ ಶಾಸ್ತ್ರವಿಹಿತಕರ್ಮಗಳನ್ನು ಮಾಡಬೇಕೆಂದು ಹೇಳಿರುತ್ತದೆ.
(ಈ ಸೂತ್ರಕ್ಕೆ ತಿಲಕರವರು ಬೇರೆ ಅರ್ಥಮಾಡಿರುತ್ತಾರೆ. ''ಜ್ಞಾನಿಯು ಆಶ್ರಮ ಕರ್ಮಗಳನ್ನು ಮಾಡಿದರೂ ನಡೆಯುತ್ತದೆ. ಏಕೆಂದರೆ ಅದು ವಿಹಿತವಿರುತ್ತದೆ'' ಎಂಬುದು ಅವರ ಅರ್ಥವು. ಈ ಅರ್ಥವು ಸೂತ್ರದ ಆಶಯಕ್ಕೆ ವಿರುದ್ಧವಾಗುವದೆಂದು ನನ್ನ ಅಭಿಪ್ರಾಯವು. ಜ್ಞಾನಿ ಎಂಬ ಪದವನ್ನು ಹೆಚ್ಚಿಗೆ ಹಾಕಿಕೊಳ್ಳುವ ಕ್ಲೇಶವೇ ಅಲ್ಲದೇ 'ವಿಹಿತಮಾಡಿರುವದರಿಂದ' ಎಂಬ ಹೇತುವಿಗೆ ಪ್ರಯೋಜನವು ಸಾಲದೆ ಹೋಗುವದೊಂದು ಆರೋಪವು. ಜ್ಞಾನಿಗೆ ಕರ್ಮವನ್ನು ವಿಧಿಸಿದೆ ಎಂದರೆ, ಬಿಟ್ಟರೆ ಅವನಿಗೆ ದೋಷವು ಬರುವದೆಂದಾಗುವದು. ಆದರೆ ಇದು ತಿಲಕರವರಿಗೆ ಸಮ್ಮತವಿಲ್ಲ, ವಿಹಿತವಾದದ್ದನ್ನು ಮಾಡಲೇಬೇಕು. ಅದನ್ನು ಮಾಡದಿದ್ದರೂ ಸಾಗುತ್ತದೆ ಎಂಬುದು ವಿಧಿಯ ಅರ್ಥ.)
ಇದರಂತೆಯೇ ಗೀತೆಯಲ್ಲಿ—
ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ |
ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಮ್ ||
''ಯಾವನು ಶಾಸ್ತ್ರದಲ್ಲಿ ವಿಧಿಸಿರುವದನ್ನು ಲೆಕ್ಕಿಸದೆ ತನಗೆ ತಿಳಿದಂತೆ ನಡೆಯುತ್ತಿರುವನೋ ಅವನಿಗೆ ಸಿದ್ಧಿಯೂ ಇಲ್ಲ, ಈ ಲೋಕದ ಸುಖವೂ ಇಲ್ಲ, ಪರದಲ್ಲಿ ಗತಿಯೂ ಇಲ್ಲ.'' (16.23) ಎಂದು ಮೋಕ್ಷಾರ್ಥಿಗಳಲ್ಲದೆ ಕೇವಲ ಸುಖಾಪೇಕ್ಷಿಗಳಾದವರೂ ಶಾಸ್ತ್ರವಿಹಿತ ಕರ್ಮವನ್ನೇ ಮಾಡುತ್ತಿರಬೇಕೆಂದು ಹೇಳಿರುತ್ತದೆ.
ಇಲ್ಲಿಗೆ ಬ್ರಹ್ಮಸೂತ್ರಗಳಲ್ಲಿ ನಮಗೆ ಬೇಕಾದ ವಿಷಯವೆಲ್ಲ ದೊರೆತಂತಾಯಿತು. ಏಕೆಂದರೆ ಕರ್ಮಕ್ಕೂ ಜ್ಞಾನಕ್ಕೂ ಇರುವ ಸಂಬಂಧವೇ ನಮಗೆ ಬೇಕಾಗಿದ್ದದ್ದು. ಇದು ಗೀತೆಯಲ್ಲಿರುವಂತೆಯೇ ಸೂತ್ರದಲ್ಲಿಯೂ ಇರುವದೆಂದು ಗೊತ್ತಾದ ಬಳಿಕ ಈ ವಿಷಯದಲ್ಲಿ ನಾವು ಮುಂದೆ ತಿಳಿದುಕೊಳ್ಳಬೇಕಾದದ್ದು ಏನೂ ಉಳಿಯುವದಿಲ್ಲ. ಬ್ರಹ್ಮಸೂತ್ರಗಳಲ್ಲಿ ಉಪನಿಷತ್ತುಗಳ ಸಿದ್ಧಾಂತವನ್ನೇ ವಿಚಾರಮಾಡಿ ನಿರ್ಣಯಿಸಿರುತ್ತದೆಯೆಂದು ಒಪ್ಪುವದರಿಂದ ಉಪನಿಷತ್ತುಗಳ ಸಿದ್ಧಾಂತವು ಗೀತೆಯ ಸಿದ್ಧಾಂತದಂತೆಯೆ ಇರುವದೆಂದು ಹಿಂದೆ ಹೇಳಿದ ಮಾತಿಗೆ ಮತ್ತಷ್ಟು ಪುಷ್ಟಿ ಬಂದಂತಾಯಿತು.
11. ಗೀತಾ ಪ್ರತಿಪಾದ್ಯ ವಿಷಯದ ಉಪಸಂಹಾರ
ಇದುವರೆಗೆ ಗೀತೆಯಲ್ಲಿ ಉಪದಿಷ್ಟವಾಗಿರುವ ವಿಷಯವೇನೆಂಬ ಬಗ್ಗೆ ಬೇರೆ ಬೇರೆ ದೃಷ್ಟಿಗಳಿಂದ ವಿಚಾರವನ್ನು ಬೆಳೆಸಿದ್ದಾಯಿತು. ಗೀತಾಗ್ರಂಥದ ಉಪಕ್ರಮೋಪಸಂಹಾರವೇ ಮುಂತಾದ ತಾತ್ಪರ್ಯದ ಗುರುತುಗಳನ್ನು ಹಿಡಿದು ವಿಚಾರಮಾಡಲಿ; ಭಾರತದ ಬೇರೆ ಭಾಗಗಳಲ್ಲಿರುವ ಉಪದೇಶವನ್ನು ಈ ಗ್ರಂಥಕ್ಕೆ ಹೋಲಿಸಿ ನೋಡಲಿ; ಉಪನಿಷತ್ತು, ಬ್ರಹ್ಮಸೂತ್ರ ಇವುಗಳಲ್ಲಿ ಪ್ರತಿಪಾದಿತವಾಗಿರುವ ವಿಷಯಕ್ಕೆ ಹೋಲಿಸಿ ನೋಡಲಿ - ಎಲ್ಲೆಲ್ಲಿಯೂ ಒಂದೇ ತಾತ್ಪರ್ಯವು ಹೊರಡುತ್ತದೆ. ವೇದೋಕ್ತವಾದ ಪ್ರವೃತ್ತಿ, ನಿವೃತ್ತಿ ಎಂಬ ಎರಡು ಧರ್ಮಗಳನ್ನು ಇಲ್ಲಿ ಉಪದೇಶಿಸಿರುತ್ತದೆ ; ಆತ್ಮಜ್ಞಾನದಿಂದ, ಸಂಸಾರಬಂಧನದಿಂದ ಬಿಡುಗಡೆಯಾಗುವದೆಂಬ ವೈದಿಕ ಸಿದ್ಧಾಂತವನ್ನು ಇಲ್ಲಿ ತಿಳಿಸಿರುತ್ತದೆ. ಕರ್ಮ, ಯೋಗ, ಭಕ್ತಿ ಇವುಗಳು ಸಾಧನಗಳೆಂದೂ ಜ್ಞಾನವು ಸಾಧ್ಯವೆಂದೂ ಇವುಗಳಿಗೆ ಅಂಗಾಂಗಿಭಾವವನ್ನು ಇಲ್ಲಿ ಹೇಳಿರುತ್ತದೆ. ಇಷ್ಟು ತಾತ್ಪರ್ಯವು ಇಲ್ಲಿಯವರೆಗಿನ ವಿಚಾರದಿಂದ ನಿಷ್ಪನ್ನವಾಯಿತು.
ಇನ್ನು ಈ ಗೀತಾಸಿದ್ಧಾಂತವನ್ನು ವಿಸ್ತಾರವಾಗಿ ನೋಡಿ ಇದು ಎಷ್ಟರಮಟ್ಟಿಗೆ ಯುಕ್ತ್ಯನುಭವಗಳಿಗೆ ಹೊಂದುತ್ತದೆಯೆಂಬುದನ್ನು ಗೊತ್ತುಪಡಿಸುವದೊಂದು ಉಳಿದುಕೊಂಡಿತು. ಕರ್ಮವೆಂದರೆ ಏನು ? ಕರ್ಮದ ಫಲವು ಯಾವದು? ಇದೇ ಕರ್ಮವನ್ನು ಜ್ಞಾನಕ್ಕೆ ಸಾಧನವಾಗಿ ಮಾಡಿಕೊಳ್ಳುವದು ಹೇಗೆ? ಕರ್ಮವನ್ನು ಬಿಡಬಹುದೆ? ಬಿಡುವದಕ್ಕೆ ಶಕ್ಯವೆ? ಕರ್ಮಸಂನ್ಯಾಸದ ತತ್ತ್ವವೇನು? ಸಂನ್ಯಾಸಾಶ್ರಮವೇ ಗೀತಾ ತಾತ್ಪರ್ಯವೆ? ಅಲ್ಲದಿದ್ದರೆ ಅದನ್ನು ಇಲ್ಲಿ ಹೇಳುವದಕ್ಕೆ ಕಾರಣವೇನು? ವ್ಯವಹಾರದ ವಿಷಯದಲ್ಲಿ ಗೀತೆಯ ಮತವೇನು? ವ್ಯವಹಾರವನ್ನು ಬಿಡಬೇಕೆಂದು ಗೀತೆಯು ಬೋಧಿಸುತ್ತಿದೆಯೆ ಹೇಗೆ? ಜ್ಞಾನಿಗೆ ವ್ಯವಹಾರವುಂಟೆ ಇಲ್ಲವೆ? ಇದ್ದರೆ ಅವನು ಹೇಗೆ ವ್ಯವಹರಿಸುವನು? ಈಗಿನ ಸ್ಥಿತಿಯಲ್ಲಿ ಗೀತೋಪದೇಶದಿಂದ ನಮಗೇನು ಪ್ರಯೋಜನವಿರುವದು? ಇವೇ ಮುಂತಾದ ಪ್ರಶ್ನೆಗಳು ಕರ್ಮದ ವಿಷಯದಲ್ಲಿ ಹುಟ್ಟುವವು. ಇನ್ನು ಜ್ಞಾನವೆಂದರೆ ಯಾವದು? ಗೀತೆಯಲ್ಲಿ ಹೇಳಿರುವ ಸಿದ್ಧಾಂತವು ದ್ವೈತವೂ, ಅದ್ವೈತವೂ, ದ್ವೈತಾದ್ವೈತ ಅಥವಾ ಮತ್ತೆ ಯಾವದಾದರೊಂದೊ? ಈ ಜ್ಞಾನಕ್ಕೂ ಭಕ್ತಾದಿಗಳಿಗೂ ಇರುವ ಸಂಬಂಧವೇನು? ಗೀತೆಯಲ್ಲಿ ಮೋಕ್ಷಸಾಧನವಾದ ಜ್ಞಾನವನ್ನುಪದೇಶಿಸಿರುವದು ಕಥಾ ಸಂದರ್ಭಕ್ಕೆ ಹೇಗೆ ಹೊಂದುತ್ತದೆ? ಇವೇ ಮುಂತಾದ ಪ್ರಶ್ನೆಗಳು ಹುಟ್ಟುತ್ತವೆ. ಆದ್ದರಿಂದ ಇವುಗಳನ್ನೆಲ್ಲ ಒಂದು ಕ್ರಮವನ್ನು ಹಿಡಿದು ವಿಚಾರಮಾಡುವದು ಅವಶ್ಯಕವಾಗಿರುವದು.
ಈ ಪ್ರಕರಣವನ್ನು ಮುಗಿಸುವ ಮೊದಲು ಇನ್ನೊಂದು ಮಾತನ್ನು ಹೇಳಿಡಬೇಕಾಗಿದೆ. ಅದೇನೆಂದರೆ ಗೀತೆಯು ಪ್ರಸ್ಥಾನತ್ರಯಗಳಲ್ಲಿ ಒಂದೆಂದು ಈಗ ಪ್ರಸಿದ್ಧವಾಗಿರುತ್ತದೆ. ಈ ಸ್ಥಾನವು ಇದಕ್ಕೆ ಹೇಗೆ ಒಪ್ಪುತ್ತದೆಯೆಂಬುದನ್ನು ಕುರಿತು ಸ್ವಲ್ಪ ವಿಚಾರಮಾಡುವದು ಅಗತ್ಯವು. ವೇದದಲ್ಲಿ ಕರ್ಮಕಾಂಡವೆಂದೂ ಜ್ಞಾನಕಾಂಡವೆಂದೂ ಮುಖ್ಯವಾಗಿ ಎರಡು ಭಾಗವಿರುತ್ತದೆ. ಕರ್ಮಕಾಂಡದಲ್ಲಿ ಬೇರೆಬೇರೆ ದೇವತೆಗಳ ಉದ್ದೇಶದಿಂದ ಮಾಡುವ ಯಜ್ಞಯಾಗಾದಿಗಳನ್ನು ವಿವರಿಸಿರುತ್ತದೆ. ಜ್ಞಾನಕಾಂಡದಲ್ಲಿ ಕೇವಲ ಮನಸ್ಸಿನ ಸಹಾಯದಿಂದ ಆಗುವ ಉಪಾಸನೆ ಮತ್ತು ಆತ್ಮಜ್ಞಾನ ಇವುಗಳ ವಿಚಾರವಿದೆ. ಕರ್ಮಕಾಂಡದ ತಾತ್ಪರ್ಯದ ನಿರ್ಣಯ ಮಾಡುವದಕ್ಕೆ ಜೈಮಿನೀಯಸೂತ್ರವೂ ಜ್ಞಾನಕಾಂಡದ ತಾತ್ಪರ್ಯವನ್ನು ನಿರ್ಣಯ ಮಾಡುವದಕ್ಕೆ ಬಾದರಾಯಣೀಯಸೂತ್ರವೂ ಹೊರಟಿವೆ. ಆದ್ದರಿಂದಲೇ ಇವುಗಳಲ್ಲಿರುವ ವಿಚಾರಕ್ಕೆ “ಮೀಮಾಂಸಾ'' ಎಂದರೆ ಪೂಜ್ಯವಾಗಿರುವ ವೇದಾರ್ಥದ ವಿಚಾರವು ಎಂಬ ಹೆಸರು ಉಂಟಾಗಿರುತ್ತದೆ. ಕಾಲಕ್ರಮದಲ್ಲಿ ಜನರ ದುರ್ದೈವದಿಂದ ಧರ್ಮಜ್ಞಾನವೂ ತತ್ತ್ವಜ್ಞಾನವೂ ಕಡಿಮೆಯಾಗುತ್ತಾ ಬಂದಿರುವಾಗ ಜನರು ಕರ್ಮಗಳ ಹೊರಸಿಪ್ಪೆಯಾದ ಬಾಹ್ಯಾಚರಣೆಗಳಿಗೆ ಹೆಚ್ಚು ಬೆಲೆಯನ್ನು ಕೊಡುತ್ತಾ ಬಂದರು. ಇಂಥ ಸಂದರ್ಭದಲ್ಲಿ ಬೌದ್ಧಧರ್ಮವು ತಲೆದೋರಿತು. ಗೌತಮಬುದ್ಧನ ಅಹಿಂಸೆ, ಮನಃಶೌಚ, ಪರೋಪಕಾರಬುದ್ಧಿ ಮುಂತಾದ ಉದಾತ್ತ ವಿಚಾರಗಳು ಜನಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಮಾಡಹತ್ತಿದ್ದರಿಂದ ಜನರು ವೈದಿಕರ ಒಣಗದ್ದಲವೇ ಬೇಡವೆಂದು ಉದಾಸೀನರಾಗುತ್ತ ಬಂದರು. ಆದರೆ ಗೌತಮನು ಉಪದೇಶಮಾಡಿದ್ದ ತತ್ತ್ವವು ಯಾವದೊಂದು ಧರ್ಮಗ್ರಂಥದ ಆಧಾರದ ಮೇಲೂ ನಿಲ್ಲದೆ ಇದ್ದದ್ದರಿಂದಲೂ ಅವನಂಥ ಆದರ್ಶಪ್ರಾಯರಾದ ಆಚಾರ್ಯರು ಅವನನ್ನು ಹಿಂಬಾಲಿಸದೆ ಇದ್ದದ್ದರಿಂದಲೂ ಬೌದ್ಧಮತವು ಅಧಿಕಾರತಾರತಮ್ಯವನ್ನು ಅಂಗೀಕರಿಸದೆ ಎಲ್ಲಾ ಜಾತಿಯ ಜನರಿಗೂ ಒಂದೇ ಬಗೆಯ ತತ್ತ್ವೋಪದೇಶ ಹೇಳುತ್ತಾ ಬಂದದ್ದರಿಂದಲೂ ಮನಃಸಂಸ್ಕಾರವಿಲ್ಲದ ಬೌದ್ಧಧರ್ಮವನ್ನು ಹಾಗೆ ನಂಬಿದ್ದವರಲ್ಲಿಯೂ ಧರ್ಮವಿಷಯದಲ್ಲಿ ಸಂಶಯಗಳು ಹೇರಳವಾದವು.
ಜನರಿಗೆ ಧರ್ಮಮಾರ್ಗವು ಯಾವದೆಂಬುದೇ ತಿಳಿಯದಂತಾಗಿದ್ದ ಇಂಥ ಕಾಲದಲ್ಲಿ ಕುಮಾರಿಲಭಟ್ಟರೇ ಮುಂತಾದವರು ಮತ್ತೆ ಕರ್ಮಕಾಂಡದ ಮೀಮಾಂಸಾಶಾಸ್ತ್ರವನ್ನು ಜನರ ಮುಂದೆ ಒಡ್ಡಿದರು. ವೇದದಲ್ಲಿ ಶ್ರದ್ಧೆಯಿಟ್ಟು ವರ್ಣಾಶ್ರಮ ಧರ್ಮವನ್ನು ಮಾಡುತ್ತಾ ಬಂದರೆ ಇಹದಲ್ಲಿ ಸುಖವೂ ಪರದಲ್ಲಿ ಸದ್ಗತಿಯೂ ಅವಶ್ಯವಾಗಿ ಬರುವವೆಂದು ಬೋಧೆಯಿಂದಲೂ ಆಚಾರದಿಂದಲೂ ಜನರಿಗೆ ಮೀಮಾಂಸಕರು ತಿಳಿಸುತ್ತಾ ಬಂದರಾದ್ದರಿಂದ ಬೌದ್ಧಧರ್ಮದಲ್ಲಿ ಯಾವ ಹುರುಳನ್ನೂ ಕಾಣದೆ ಮುಂದೇನು ಮಾಡಬೇಕೆಂಬ ವಿಷಯಕ್ಕೆ ದಿಕ್ಕುಕಾಣದಂತೆ ಆಗಿದ್ದ ಜನರು ಸ್ವಭಾವವಾಗಿ ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿದ್ದ ವೈದಿಕಧರ್ಮವನ್ನು ಆದರದಿಂದ ಅವಲಂಬಿಸುವದಕ್ಕೆ ಮೊದಲುಮಾಡಿದರು. ಆದರೆ ಈ ಮೀಮಾಂಸೆಯಲ್ಲಿದ್ದ ಮುಖ್ಯವಾದ ಕೊರತೆಯೇನೆಂದರೆ ಕರ್ಮವೊಂದೇ ಮತ್ತೆ ಯಾವ ಸಹಾಯವನ್ನೂ ಬಯಸದೆ ಸ್ವರ್ಗಮೋಕ್ಷಗಳೆರಡನ್ನೂ ಕೊಡುತ್ತದೆಯೆಂಬ ದುರ್ವಾದವನ್ನು ಮೀಮಾಂಸಕರು ಈಗ್ಗೆ ತಂದಿದ್ದರು. ಉಪನಿಷತ್ತುಗಳಲ್ಲಿ ಹೇಳಿರುವ ಸಗುಣನಾದ ಈಶ್ವರನಾಗಲಿ ನಿರ್ಗುಣವಾದ ಬ್ರಹ್ಮವಾಗಲಿ ಇಲ್ಲವೇ ಇಲ್ಲವೆಂದೂ ಉಪನಿಷತ್ತುಗಳೆಲ್ಲ ಬ್ರಾಹ್ಮಣದ ಭಾಗವಾಗಿದ್ದರಿಂದ ಇವು ಕರ್ಮವನ್ನೇ ಪುಷ್ಟಿಗೊಳಿಸುವದಕ್ಕೆ ಹೊರಟಿರುವವೆಂದೂ ಇವರು ವಾದಿಸುತ್ತಿದ್ದರು.
ಹಾಗೆ ವೈದಿಕಧರ್ಮವು ಅರೆಬೆರಕಲಾಗಿರುವಾಗ ಅನೇಕ ವಿದ್ವಾಂಸರು ಶ್ರುತಿಸ್ಮೃತಿಪ್ರದಿಪಾದ್ಯವಾದ ಉಪಾಸನೆಯನ್ನೂ ಜ್ಞಾನವನ್ನೂ ಮುಂದಕ್ಕೆ ತಂದದ್ದಲ್ಲದೆ ಕರ್ಮಕಾಂಡದಲ್ಲಿದ್ದ ಕರ್ಮಗಳಿಗೂ ಜ್ಞಾನಕಾಂಡದಲ್ಲಿದ್ದ ಜ್ಞಾನಕ್ಕೂ ಇರುವ ಸಂಬಂಧವೇನೆಂಬುದನ್ನೂ ವಿಶದಗೊಳಿಸುವದಕ್ಕೆ ಪ್ರಾರಂಭಿಸಿದರು. ಈ ಕಾರ್ಯಕ್ಕೆ ಇವರು ಉಪಯೋಗಿಸಿಕೊಂಡಿರುವ ಮುಖ್ಯ ಗ್ರಂಥಗಳು ಯಾವವೆಂದರೆ ಉಪನಿಷತ್ತುಗಳು, ಭಗವದ್ಗೀತೆ, ಬ್ರಹ್ಮಸೂತ್ರ. ಉಪನಿಷತ್ತುಗಳಲ್ಲಿ ಉಪಾಸನೆ ಜ್ಞಾನ ಇವುಗಳನ್ನು ಚೆನ್ನಾಗಿ ವಿವರಿಸಿರುತ್ತದೆ; ಕರ್ಮದ ಉಪಯೋಗವನ್ನು ಅಲ್ಲಲ್ಲಿ ಸೂಚನೆ ಮಾಡಿರುತ್ತದೆ. ಕೆಲವು ಉಪನಿಷತ್ತುಗಳು ಜ್ಞಾನೋಪಾಸನೆಗಳನ್ನು ಹೊಗಳುವ ಭರದಲ್ಲಿ ಕರ್ಮದ ನಿಂದೆಯನ್ನು ಕೂಡ ಮಾಡಿರುತ್ತವೆ; ಆದರೆ ಅವುಗಳಿಗೆ ಈ ನಿಂದೆಯಲ್ಲಿ ತಾತ್ಪರ್ಯವಿಲ್ಲವೆಂಬುದನ್ನು ವಿವರಿಸುವದಕ್ಕೆ ಭಾರತದಂಥ ಸ್ಮೃತಿಗಳು ಬೇಕು. ಆದ್ದರಿಂದ ಭಾರತವನ್ನೂ - ಅದರಲ್ಲಿಯೂ ವಿಶೇಷವಾಗಿ ಭಗವದ್ಗೀತೆಯನ್ನೂ ಧರ್ಮಕ್ಕೂ ಜ್ಞಾನಕ್ಕೂ ಸಂಬಂಧವೇನೆಂಬುದನ್ನು ತಿಳಿಸುವದಕ್ಕೆ ಮೂಲಗ್ರಂಥವಾಗಿ ಹಿಡಿದರು. ಬ್ರಹ್ಮಸೂತ್ರವು ಬೇರೆಬೇರೆ ಉಪನಿಷತ್ತುಗಳಲ್ಲಿರುವ ಅರ್ಥವು ಒಂದೇ ಆಗಿರುವದೆಂದೂ ತಿಳಿಸುವ ನ್ಯಾಯಗ್ರಂಥವಾಗಿರುತ್ತದೆ; ಇದರಲ್ಲಿ ಉಪನಿಷತ್ ಸಿದ್ಧಾಂತದ ಸಾರವನ್ನೆಲ್ಲ ತೆಗೆದು, ವಿರೋಧಗಳನ್ನೆಲ್ಲ ಪರಿಹಾರಮಾಡಿರುತ್ತದೆ. ಈ ಕಾರ್ಯವನ್ನು ಮಾಡುವಾಗ ಸೂತ್ರಕಾರರು ಉಪನಿಷತ್ತುಗಳ ಜತೆಗೆ ಭಾರತಾದಿ ಕೃತಿಗಳನ್ನೂ ಭಗವದ್ಗೀತೆಯನ್ನೂ ಉಪಯೋಗಿಸಿಕೊಂಡು ಯೋಗ್ಯವೆಂದು ಕಾಣುವ ಯುಕ್ತಿಗಳನ್ನೂ ಅಲ್ಲಲ್ಲಿ ಸಹಾಯಕ್ಕೆ ತೆಗೆದುಕೊಂಡಿರುತ್ತಾರೆ. ಹೀಗೆ ವೈದಿಕ ಸಿದ್ಧಾಂತವನ್ನು ಚೆನ್ನಾಗಿ ತಿಳಿಸುವದಕ್ಕೆ ಆಧಾರ ಗ್ರಂಥಗಳು ಮುಖ್ಯವಾಗಿ ಮೂರು ಆದವು. ಇವುಗಳಲ್ಲೆಲ್ಲ ಒಂದೇ ತಾತ್ಪರ್ಯವು ಇರುತ್ತದೆಯಾದರೂ ಇವುಗಳು ಬೇರೆ ಬೇರೆ ಕೆಲಸವನ್ನು ಮಾಡುವದಕ್ಕೆ ಹೊರಟಿರುತ್ತವೆ.
ಉಪನಿಷತ್ತುಗಳು ಉಪಾಸನೆಯನ್ನೂ ಜ್ಞಾನವನ್ನೂ ಹೇಳುವದಕ್ಕೆ ಹೊರಟಿವೆ; ಗೀತೆಯು ಕರ್ಮಕ್ಕೂ ಉಪನಿಷತ್ತುಗಳಲ್ಲಿರುವ ಜ್ಞಾನೋಪಾಸನೆಗಳಿಗೂ ಇರುವ ಸಂಬಂಧವನ್ನು ಬೆಸುಗೆ ಮಾಡಿತೋರಿಸುವದಕ್ಕೆ ಹೊರಟಿದೆ. ಬ್ರಹ್ಮಸೂತ್ರವು ಇವೆರಡೂ ಒಂದೇ ತಾತ್ಪರ್ಯದಿಂದ ಹೊರಟಿವೆಯೆಂಬುದನ್ನು ವಿವೇಚನೆ ಮಾಡಿ ತೋರಿಸುವದಕ್ಕೆ ಹೊರಟಿದೆ. ಹೀಗೆ ವೈದಿಕ ಸಿದ್ಧಾಂತವನ್ನು ತಿಳಿಸುವದಕ್ಕೆ ಬೇರೆಬೇರೆ ರೀತಿಯಲ್ಲಿ ಹೊರಟಿರುವದರಿಂದ ಇವಕ್ಕೆ ಪ್ರಸ್ಥಾನತ್ರಯವೆಂಬ ಹೆಸರು ಬಂದಿರುತ್ತದೆ. ಈ ಹೆಸರು ಬರುವದಕ್ಕೆ ಪ್ರತಿಪಾದ್ಯ ವಿಷಯವನ್ನು ಬೇರೆಬೇರೆ ದೃಷ್ಟಿಯಿಂದ ತೆಗೆದುಕೊಂಡಿರುವದೊಂದೇ ಅಲ್ಲದೆ ಇವುಗಳ ಭಿನ್ನ ತತ್ತ್ವವನ್ನು ಪ್ರತಿಪಾದಿಸುವ ಶೈಲಿಯೂ ಕಾರಣವಾಗಿರುವದು. ಉಪನಿಷತ್ಪ್ರಸ್ಥಾನವು ವೈದಿಕಪದ್ಧತಿಯಿಂದ ಮಾತ್ರ ಬ್ರಾಹ್ಮಣರೂಪವಾಗಿರುತ್ತದೆ; ಕೆಲವು ಕಡೆ ಗದ್ಯಾತ್ಮಕವಾಗಿಯೂ, ಕೆಲವು ಕಡೆ ಪದ್ಯಾತ್ಮಕವಾಗಿಯೂ ವೈದಿಕ ಭಾಷೆಯನ್ನು ಉಪಯೋಗಿಸಿರುತ್ತದೆ. ಗೀತಾಪ್ರಸ್ಥಾನವು ಈಚಿನ ಸಂಸ್ಕೃತಭಾಷೆಯನ್ನುಪಯೋಗಿಸಿಕೊಂಡು ಬಂದಿರುತ್ತದೆ; ಉಪನಿಷತ್ತುಗಳಂತೆ ಸುಮ್ಮನೆ ವಿಷಯವನ್ನು ನಿರೂಪಣೆ ಮಾಡುವ ಕ್ರಮವನ್ನವಲಂಬಿಸದೆ ಸಂವಾದರೂಪವನ್ನು ಅವಲಂಬಿಸಿಕೊಂಡು ಸಂದರ್ಭಕ್ಕೆ ತಕ್ಕಂತೆ ಪ್ರಶೋತ್ತರರೂಪವಾಗಿ ವಿಷಯವನ್ನು ಬೆಳೆಸುತ್ತಾ ಹೋಗುತ್ತದೆ. ಸೂತ್ರಪ್ರಸ್ಥಾನವು ಇವೆರಡು ಶೈಲಿಯನ್ನೂ ಕೈಬಿಟ್ಟು ಅತಿಸಂಕ್ಷಿಪ್ತವಾದ ಮಾತುಗಳಿಂದ ಶ್ರುತಿಸ್ಮೃತಿ ಪ್ರಸ್ಥಾನಗಳ ವಿಷಯವನ್ನು ವಿಂಗಡಿಸಿಕೊಂಡು ಸಯುಕ್ತಿಕವಾಗಿ ವಿವೇಚನೆ ಮಾಡುತ್ತದೆ.
ನ್ಯಾಯವಾಗಿ ನೋಡಿದರೆ ಶ್ರುತಿಪ್ರಸ್ಥಾನದ ಜತೆಗೆ ಸ್ಮೃತಿಗಳನ್ನೆಲ್ಲ ವಿವೇಚನೆ ಮಾಡುವದೇ ಯುಕ್ತವಾಗಿರುವದು. ಆದರೂ ತಪ್ಪಲೆಯ ಅನ್ನವನ್ನು ಒಂದೆರಡು ಅಗುಳಿನಿಂದ ಗೊತ್ತುಮಾಡುವಂತೆ ಸ್ಮೃತಿಪ್ರಸ್ಥಾನದ ಸರ್ವಾರ್ಥವನ್ನೂ ಗೀತೆಯ ಏಳುನೂರು ಶ್ಲೋಕಗಳಿಂದಲೇ ನಿರ್ಣಯಿಸಬೇಕೆಂದು ನಮ್ಮ ಪೂರ್ವಾಚಾರ್ಯರುಗಳು ಇದನ್ನು ಆರಿಸಿಕೊಂಡಿರುವರೆಂದು ತೋರುತ್ತದೆ. ಇದು ಹೇಗೇ ಇರಲಿ, “ಭಗವದ್ಗೀತೆಯು ಸಕಲ ಸ್ಮೃತಿಗಳಿಗೂ ಈ ವಿಷಯದಲ್ಲಿ ಪ್ರತಿನಿಧಿಯಾಗಿರುವದೆಂಬುದರಲ್ಲಿ ಸಂದೇಹವೇನೂ ಇರುವದಿಲ್ಲ. ಏಕೆಂದರೆ ಅನೇಕ ಸ್ಮೃತಿ ಗಳಲ್ಲಿ ಕರ್ಮ, ಭಕ್ತಿ, ಯೋಗ, ಜ್ಞಾನ- ಎಂಬ ನಾಲ್ಕು ವಿಚಾರಗಳನ್ನೂ ತೆಗೆದುಕೊಂಡಿದೆಯಾದರೂ ಒಂದೊಂದು ಸ್ಮೃತಿಯಲ್ಲಿ ಇವುಗಳಲ್ಲೊಂದೊಂದನ್ನೇ ಹೆಚ್ಚು ಬೆಳೆಸಿರುತ್ತದೆ; ಇದಲ್ಲದೆ ಕೆಲಕೆಲವು ಕೃತಿಗಳಲ್ಲಿ ತನ್ನತನ್ನ ವಿಶಿಷ್ಟ ವಿಷಯವನ್ನು ವಿವರಿಸಿರುವದಾದರೂ ಮಿಕ್ಕ ವಿಷಯಗಳ ಗತಿಯೇನೆಂಬುದನ್ನು ಕೂಡ ಹೇಳಿರುವದಿಲ್ಲ. ಈ ಎಲ್ಲಾ ಕಾರಣಗಳಿಂದ ಭಗವದ್ಗೀತೆಯು ವೈದಿಕಧರ್ಮವೆಂಬ ಕಟ್ಟಡಕ್ಕೆ ಮೂಲ ಸ್ತಂಭಗಳಂತೆ ಇರುವ ಮೂರು ಪ್ರಸ್ಥಾನಗಳಲ್ಲಿ ಒಂದೆಂದು ಎಲ್ಲರೂ ಒಡಂಬಡುವದಕ್ಕೆ ಯೋಗ್ಯವಾದ ಕಾರಣಗಳೇ ಇವೆ'' ಎಂದು ಹೇಳಬಹುದಾಗಿದೆ.
ಗೀತಾಪ್ರಸ್ಥಾನದಲ್ಲಿ ಪ್ರವೃತ್ತಿ ನಿವೃತ್ತಿಧರ್ಮಗಳೆರಡನ್ನೂ ಹೇಳಿದ್ದಾರೆಂದೂ, ನಿವೃತ್ತಿಧರ್ಮಕ್ಕೆ ಸಾಂಖ್ಯ ಅಥವಾ ಬ್ರಹ್ಮಜ್ಞಾನನಿಷ್ಠೆಯೆಂದು ಅರ್ಥವೆಂದೂ, ಪ್ರವೃತ್ತಿ ಧರ್ಮಕ್ಕೆ ಜ್ಞಾನಸಾಧನದ ಅನುಷ್ಠಾನವೆಂಬ ಅರ್ಥವೆಂದೂ ಹಿಂದೆ ವಿಸ್ತಾರವಾಗಿ ತಿಳಿಸಿರುತ್ತದೆ. ಉಪನಿಷತ್ಸಿದ್ಧಾಂತಕ್ಕೆ ಅನುಸಾರವಾಗಿರುವ ಈ ಸಿದ್ಧಾಂತವನ್ನೇ ಈ ಗ್ರಂಥದಲ್ಲಿ ತಿಳಿಸಿರುತ್ತದೆಯೆಂದು ಸೂಚಿಸುವದಕ್ಕಾಗಿಯೇ ಅಧ್ಯಾಯ ಸಮಾಪಕ ವಾಕ್ಯದಲ್ಲಿ ಆಯಾ ವಿಶೇಷಣಗಳು ಬಂದಿರುವವೆಂದು ಈಗ ನಾವು ಹೇಳಬಹುದಾಗಿದೆ. ಈ ದೃಷ್ಟಿಯಿಂದ ನೋಡಿದರೆ 'ಇತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ’ ಎಂಬ ವಿವರಣವು ಗೀತೆಗೆ ಚೆನ್ನಾಗಿ ಒಪ್ಪುತ್ತದೆ. ಏಕೆಂದರೆ ಈ ವಿಚಾರವು ಭಗವಂತನಿಂದ ಗೀತವಾಗಿದೆ, ಉಪನಿಷತ್ತುಗಳ ಸಾರವಾಗಿದೆ. ಬ್ರಹ್ಮವಿದ್ಯೆಯನ್ನು ಉಪದೇಶ ಮಾಡುತ್ತದೆ.
(ಬ್ರಹ್ಮವಿದ್ಯಾಯಾಂ~ ಎಂದರೆ ಬ್ರಹ್ಮವಿದ್ಯೆಯನ್ನು ಪ್ರತಿಪಾದನೆ ಮಾಡುವ ಗ್ರಂಥವೆಂದು ಲಕ್ಷಣೆಯಿಂದ ಅರ್ಥಮಾಡಿಕೊಂಡ ಹೊರತು ಈ ವಾಕ್ಯದಲ್ಲಿರುವ ಪದಗಳು ಒಂದಕ್ಕೊಂದು ಸರಿಯಾಗಿ ಅನ್ವಯವಾಗುವದಿಲ್ಲ.)
ಇದು ಯೋಗಶಾಸ್ತ್ರವಾಗಿದೆ. ಗೀತೆಯಲ್ಲಿ ಯೋಗವನ್ನೂ ಎಂದರೆ ಪಾತಂಜಲ ಯೋಗವನ್ನು ಸ್ವಲ್ಪಮಟ್ಟಿಗೆ ಹೇಳಿದೆಯಾದರೂ ಈ ಅಭಿಪ್ರಾಯದಿಂದ ಇದಕ್ಕೆ ಯೋಗಶಾಸ್ತ್ರವೆಂಬ ಹೆಸರನ್ನು ಕೊಟ್ಟಿರುತ್ತದೆಯೆಂದು ಭಾವಿಸುವದಕ್ಕಿಲ್ಲ. ಯೋಗವೆಂಬ ಶಬ್ದಕ್ಕೆ ಉಪಾಯ, ಸಾಧನ- ಎಂಬ ಅರ್ಥವೂ ಇರುವದರಿಂದ ಬ್ರಹ್ಮವಿದ್ಯೆಯನ್ನೇ ಅಲ್ಲದೆ ಅದಕ್ಕೆ ಸಾಧನವಾದ ಪ್ರವೃತ್ತಿಧರ್ಮವನ್ನೂ ಹೇಳಿರುತ್ತದೆಯೆಂದು ಯೋಗಶಬ್ದಕ್ಕೆ ವ್ಯಾಪಕವಾದ ಅರ್ಥವನ್ನು ಇಟ್ಟುಕೊಳ್ಳುವದೇ ಉತ್ತಮವಾದದ್ದು. ಹೀಗೆ ಇಟ್ಟುಕೊಂಡು ಈ ಗ್ರಂಥದಲ್ಲಿ ಹೇಳಿರುವ ಬ್ರಹ್ಮವಿದ್ಯೆಯ ಸ್ವರೂಪವೇನು? ಅದಕ್ಕೆ ಸಾಧನವೆಂದು ಇದು ಹೇಳಿರುವ ಯೋಗದ ಸ್ವರೂಪವೇನು? ಎಂಬುದನ್ನು ಗ್ರಂಥದ ಒಳಹೊಕ್ಕು ನೋಡಿ ತಿಳಿಯಬಹುದಾಗಿದೆ. ಇನ್ನು ಈ ಕೆಲಸಕ್ಕೆ ಕೈ ಹಾಕೋಣ.
Comments
Post a Comment