೩. ಶ್ರೀಮದ್-ಭಗವದ್ಗೀತಾ-ಪೀಠಿಕಾ ೨
೩. ಶ್ರೀಮದ್-ಭಗವದ್ಗೀತಾ-ಪೀಠಿಕಾ ೨
(೪) ಡಿವಿಜಿಯವರ ಶ್ರೀಮದ್ಭಗವದ್ಗೀತಾತಾತ್ಪರ್ಯ / ಜೀವನಧರ್ಮಯೋಗ
ಭೂಮಿಕೆಯಿಂದ…
ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವನ್ದೇ ಶುಕತಾತಂ ತಪೋನಿಧಿಮ್ ||
(ಬ್ರಹ್ಮರ್ಷಿ ವಸಿಷ್ಠರ ಮರಿಮಗನೂ, ಶಕ್ತಿಮುನಿಯ ಮೊಮ್ಮಗನೂ, ಪರಾಶರಮಹರ್ಷಿಗಳ ಪುತ್ರನೂ, ಮಹಾತ್ಮಾ ಶುಕಮುನಿಯ ತಂದೆಯೂ, ನಿಷ್ಕಲ್ಮಷರೂ, ತಪೋನಿಧಿಗಳೂ ಆದ ವೇದವ್ಯಾಸಮಹರ್ಷಿಗಳನ್ನು ವಂದಿಸುತ್ತೇನೆ.—ಸಂಪಾದಕ)
(ಶ್ರೀಕೃಷ್ಣಾವತಾರಿಯಾಗಿ ವಿಷ್ಣುವಿನಿಂದ ಉಪದಿಷ್ಟವಾದ ಭಗವದ್ಗೀತೆಯನ್ನು ಮಹಾಭಾರತದೊಳಗೆ ಬರೆಯಲು ಸಾಕ್ಷಾತ್ ವಿಷ್ಣುವೇ ವ್ಯಾಸಾವತಾರಿಯಾಗಿ ಭುವಿಗಿಳಿದು ಬಂದ ಎಂಬುದಂತೂ ಅಚ್ಚರಿಯೇ ಸರಿ!!—ಸಂಪಾದಕ)
ಶ್ರೀ ವಿಷ್ಣುವಾದಿಗುರು ಪಾ- |
ರ್ಥವ್ಯಾಜದೆ ಸಕಲಮನುಜಲೋಕಹಿತಾರ್ಥಂ ||
ಕಾವ್ಯಮಯಶಾಸ್ತ್ರನಯದಿಂ |
ಜೀವನ-ಸದ್ಧರ್ಮಯೋಗಮಂ ಗೀತಿಸಿದಂ ||
{ಜಗತ್ತಿನ ಆದಿಗುರುವಾದ ಶ್ರೀ(ಲಕ್ಷ್ಮೀ)-ಪತಿಯಾದ (ವಿಶ್ವವ್ಯಾಪಿಯಾದ)ವಿಷ್ಣುವು ಪೃಥಾಸುತನಾಗಿ ಪಾರ್ಥನೆನಿಸಿದ / ಕುಂತೀಪುತ್ರನಾಗಿ ಕೌಂತೇಯನೆನಿಸಿದ ಅರ್ಜುನನನ್ನು ನೆಪಮಾಡಿಕೊಂಡು, ಸಮಗ್ರ ಮನುಕುಲದ ಹಿತಕಾಯಲೋಸುಗ, ಕಾಂತೆಯಂತೆ ರಮಿಸಿ ಹೇಳಬಲ್ಲ ಕಾವ್ಯರೂಪಿಯೂ (ಕಾಂತಾಸಂಮಿತ), ರಾಜಶಾಸನದಂತೆ ಆದೇಶ ವಿಧಿಸುವ ವೇದ-ಧರ್ಮಶಾಸ್ತ್ರರೂಪಿಯೂ (ಪ್ರಭುಸಂಮಿತ), ಮಿತ್ರನಂತೆ ಹಿತೋಪದೇಶ ಮಾಡುವ ಇತಿಹಾಸ-ಪುರಾಣ-ಸುಭಾಷಿತ-ನೀತಿ (ನಯ)ಶಾಸ್ತ್ರರೂಪಿಯೂ (ಮಿತ್ರಸಂಮಿತ) ಆಗಿರುವ, ಧರ್ಮಬದ್ಧಜೀವನಕ್ಕೆ ದಾರಿದೀಪದಂತಿರುವ ಜೀವನಧರ್ಮಯೋಗರೂಪೀ ಶ್ರೀಮದ್ಭಗವದ್ಗೀತೆಯನ್ನು ಉಪದೇಶಿಸಿದನು.— ಸಂ.}
"ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿನ್ದತಿ ಮಾನವಃ ||" (೧೮.೪೬)
(ತಾನು ಮಾಡುವ ಕರ್ಮದಿಂದಲೇ ಪರಮಾತ್ಮನನ್ನು ಅರ್ಚಿಸಿ, ಆತನ ಸೇವೆಯೇ ಎಂಬ ಭಾವದಿಂದ ಮಾಡಿ, ಮಾನವನು ಫಲಸಿದ್ಧಿಯನ್ನು ಹೊಂದುತ್ತಾನೆ.—ಸಂ.)
"ತಸ್ಮಾತ್ ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ ||" (೮.೭)
(ಹಾಗಾದ್ದರಿಂದ, ಎಲ್ಲಾ ಕಾಲಗಳಲ್ಲೂ ನನ್ನನ್ನೇ ಸ್ಮರಿಸು ಹಾಗೂ ಭಗವತ್ಸ್ಮರಣೆಯೊಂದಿಗೇ ಸತ್ಯ-ನ್ಯಾಯ-ಧರ್ಮಕ್ಕಾಗಿ ಯುದ್ಧ ಮಾಡು / ನಿನ್ನ ಕರ್ತವ್ಯಕರ್ಮವನ್ನು ಮಾಡು.—ಸಂ.)
ಜಗದೊಳ್ ಭಗವತ್ಸರಸವ |
ಭಗವದ್ವಿಲಸಿತದಿ ಜಗವ ಕಾಣ್ವುದು ಧರ್ಮಂ ||
ಜಗಮಿರ್ಪನ್ನಂ ಧರ್ಮಂ |
ಜಗಮಿರದವೊಲಾಗೆ ನಿನಗೆ ಸರ್ವಂ ಬ್ರಹ್ಮಂ ||
(ಈ ಲೋಕವ್ಯವಹಾರದಲ್ಲಿ / ಜಗನ್ನಾಟಕದಲ್ಲಿ ಭಗವಂತನ ಲೀಲೆಯನ್ನೇ ಕಾಣುವುದು ಹಾಗೂ ಭಗವಂತನ ಲೀಲಾಚರಿತೆಯ ಶ್ರವಣ, ಸ್ವಾಧ್ಯಾಯಾದಿಗಳ ಜಾಡಿನಲ್ಲೇ ಜಗತ್ತನ್ನು ನೋಡುವುದೇ ನಿಜಧರ್ಮವು. ವ್ಯಕ್ತಿಗೆ / ಸಾಧಕನಿಗೆ ಈ ಜಗತ್ತು ಸತ್ಯವಾಗಿ ಇದೆಯೆಂಬ ಭಾವ ಇರುವ ವರೆಗೆ ಮಾತ್ರ ಧರ್ಮಾಚರಣೆ; ಯಾವಾಗ ಜಗನ್ಮಿಥ್ಯಾತ್ವದ ಅನುಭವವಾಯಿತೋ ಅಲ್ಲಿಂದ ಅನಂತರ ಆತನಿಗೆ ಜಗವೆಲ್ಲವೂ ಬ್ರಹ್ಮಮಯವಾಗಿ ತೋರುವುದು.— ಸಂ.)
ಓಂತತ್ಸತ್-ಪದಸೂಚ್ಯಾಯ | ವಿಷ್ಣವೇ ಪರಮಾತ್ಮನೇ |
ಜಗಜ್ಜೀವೇಶತತ್ತ್ವಾಯ | ಶ್ರೀಕೃಷ್ಣಬ್ರಹ್ಮಣೇ ನಮಃ || ೧ ||
{" ಓಂತತ್ಸದಿತಿ ನಿರ್ದೇಶೋ ಬ್ರಹ್ಮಣಃ ತ್ರಿವಿಧಃ ಸ್ಮೃತಃ | ಬ್ರಾಹ್ಮಣಾಃ ತೇನ ವೇದಾಃ ಚ ಯಜ್ಞಾಃ ಚ ವಿಹಿತಾಃ ಪುರಾ || (ಗೀತೆ ೧೭|೨೩)"— ಓಮ್ (ಪ್ರಣವಬೀಜ, ನಾದಬ್ರಹ್ಮ, ಶಬ್ದಬ್ರಹ್ಮ), ತತ್ (ಅದು, ಪರತತ್ತ್ವ, ಉಪನಿಷದ್ವಾಚ್ಯ), ಸತ್ (ಸಮಗ್ರ ಸತ್ತೆ, ಇರುವಿಕೆ, ಅಸ್ತಿತ್ವ)- ಎಂದು ಮೂರು ವಿಧವಾಗಿ ಅಪರಬ್ರಹ್ಮನ ಸಂಕೇತಗಳಿವೆಯೆನ್ನಲಾಗಿದೆ. ಸರ್ವಮೂಲ ಪರಬ್ರಹ್ಮತತ್ತ್ವದಿಂದಲೇ ಇಂತಹ ಅಪರಬ್ರಹ್ಮ / ಕಾರ್ಯಬ್ರಹ್ಮ ಉಂಟಾಗಿ, ಅದರಿಂದಲೇ ಬ್ರಹ್ಮಜ್ಞಾನಿಗಳೂ ಬ್ರಹ್ಮಜಿಜ್ಞಾಸುಗಳೂ ಆದ ಬ್ರಾಹ್ಮಣರು (ಜಾತಿಸೂಚಕವಲ್ಲ; ಗುಣ-ಕರ್ಮಸೂಚಕ), ವೇದಗಳು ಹಾಗೂ ಯಜ್ಞಗಳು ಬಹುಹಿಂದೆಯೇ ಸೃಷ್ಟಿಯಾದವು. ಇದು ಗೀತಾಚಾರ್ಯೋಕ್ತಿ. ಅದಕ್ಕೆ ಸಂವಾದಿಯಾಗಿ, ಇಲ್ಲಿ ಡಿವಿಜಿಯವರು ಹೀಗನ್ನುತ್ತಾರೆ—
ಓಮ್, ತತ್, ಸತ್— ಈ ಪದಗಳಿಂದ ಸೂಚಿಸಲ್ಪಡುವ ಪರಮಾತ್ಮನಾದ ವಿಷ್ಣುವಿಗೆ ನಮಸ್ಕಾರ. ಅಂತೆಯೇ, ಜಗತ್ (ಪ್ರಣವಾಕಾರ), ಜೀವ (ತತ್ ತ್ವಂ ಅಸಿ), ಈಶ (ಸತ್— ಅಸ್ತಿತ್ವವೆಲ್ಲವೂ ಪರಮಾತ್ಮನೇ)— ಈ ಮೂರೂ ತತ್ತ್ವಸ್ವರೂಪನಾದ ಪರಬ್ರಹ್ಮನ ಸಾಕಾರಮೂರ್ತಿಯಾದ ಶ್ರೀಕೃಷ್ಣನಿಗೆ (ದಾಸರ ಪದ— "ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ…."— ಪರಬ್ರಹ್ಮವೆಂಬ ಆನೆ ಸರಪಳಿ ಕಡಿದುಕೊಂಡು ಬಂತು) ನಮಸ್ಕಾರ.— ಸಂ.}
ಮರ್ತ್ಯಾತಿಮರ್ತ್ಯಲೀಲಾಯ | ಪೃಥಗ್ಜೀವಸ್ವಬನ್ಧವೇ |
ಧರ್ಮಾಧಿಧರ್ಮಗುರವೇ | ಶ್ರೀಕೃಷ್ಣಬ್ರಹ್ಮಣೇ ನಮಃ || ೨ ||
{ಮರಣವಿರುವ ಸಾಮಾನ್ಯ ಮನುಷ್ಯನಂತೆ ಅವತರಿಸಿ ಮರ್ತ್ಯಲೀಲೆಯನ್ನು ತೋರಿದ, ಅತಿಮಾನುಷಲೀಲೆಯನ್ನೂ ತೋರಿದ, ಪ್ರತಿಯೊಂದು ಜೀವವನ್ನೂ ತನ್ನ ಬಂಧುವಿನಂತೆ ಕಾಣುವವನಾದ ಅಥವಾ ಪ್ರತಿ ಜೀವವೂ ಆತನದೇ ಸೃಷ್ಟಿ / ಸಂತಾನವಾಗಿರುವವನಾದ, ಸರ್ವ ಧರ್ಮಗಳಿಗೂ ಮೂಲಾಶ್ರಯನಾಗಿ ಮೂಲಧರ್ಮಬೋಧಕನಾಗಿ ಜಗದ್ಗುರುವೆನಿಸಿದ, ಶ್ರೀಕೃಷ್ಣನಾಮಕ ಪರಬ್ರಹ್ಮನಿಗೆ ನಮಸ್ಕಾರ.—ಸಂ.}
ಏಕೋ ಬಹೂನಾಂ ಯಃ ಕಾಮಾನ್ | ದದಾತಿ ಬಹುರೂಪತಃ |
ರಾಸಿಕ್ಯಮೂರ್ತಯೇ ತಸ್ಮೈ | ಶ್ರೀಕೃಷ್ಣಬ್ರಹ್ಮಣೇ ನಮಃ || ೩ ||
{ಒಬ್ಬನೇ ಆಗಿದ್ದರೂ ಅನೇಕರೂಪಗಳನ್ನು ತಾಳಿ ಬಹುಸಂಖ್ಯೆಯ ಗೋಪಿಯರ ಭಗವತ್ಪ್ರೇಮಕ್ಕೆ ಏಕಕಾಲದಲ್ಲಿ ಸ್ಪಂದಿಸಿದಂತೆಯೇ, ಇಂದಿಗೂ ತನ್ನ ಅಸಂಖ್ಯ ಭಕ್ತರ ಬಹುವಿಧ ಬೇಡಿಕೆಗಳನ್ನು ಅವರವರ ಕಲ್ಪನೆಯ ದೇವರಾಗಿ, ಅವರವರಿಗೆ ಬೇಕಾದಂತೆ, ಬೇರೆ ಬೇರೆ ರೂಪಗಳಿಂದ ಈಡೇರಿಸುತ್ತಿರುವ, ನವರಸಭರಿತನಾದ ("ರಸೋ ವೈ ಸಃ"— ತೈತ್ತಿರೀಯೋಪನಿಷತ್), ತಾನೇ ರಸದ ಸಾಕಾರಮೂರ್ತಿಯಾದಂತಹ ಶ್ರೀಕೃಷ್ಣಬ್ರಹ್ಮನಿಗೆ ನಮಸ್ಕಾರ.—ಸಂ.}
ನಾನಾಮನುಷ್ಯಹೃದಯ- | -ಸ್ಪನ್ದಸೂಕ್ಷ್ಮಾನುಕಮ್ಪಿನೇ |
ತತ್ತದ್ಧಿತೋಪಾಯವಿದೇ | ಶ್ರೀಕೃಷ್ಣಬ್ರಹ್ಮಣೇ ನಮಃ || ೪ ||
{ನಾನಾ ಮನುಷ್ಯರ ಹೃದಯ ಮಿಡಿತದ ಸ್ಪಂದನೆಯನ್ನರಿತವನಾಗಿ, ಮನದಾಳವನ್ನರಿತವನಾಗಿ, ಅದಕ್ಕೆ ಅವರವರಿಗೆ ಹಿತವಾಗುವ ಉಪಾಯವರಿತವನಾಗಿ ಸೂಕ್ಷ್ಮವಾಗಿ ಅವ್ಯಕ್ತವಾಗಿ ಸ್ಪಂದಿಸುತ್ತಿರುವ ಶ್ರೀಕೃಷ್ಣಬ್ರಹ್ಮನಿಗೆ ನಮಸ್ಕಾರ.—ಸಂ.}
ಪ್ರತಿಜೀವಪೃಥಗ್ವ್ಯಾಧಿ- | -ನಿದಾನೈಕಚಿಕಿತ್ಸಿನೇ |
ಸರ್ವರೋಗೈಕವೈದ್ಯಾಯ | ಶ್ರೀಕೃಷ್ಣಬ್ರಹ್ಮಣೇ ನಮಃ || ೫ ||
{ಪ್ರತಿ ಜೀವಿಯ ಪ್ರತಿಯೊಂದು ಆಧಿ/ವ್ಯಾಧಿಯನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಬಲ್ಲ ಅದ್ವೀತೀಯನೂ, ಎಲ್ಲ ರೋಗಗಳಿಗೂ ಏಕಮೇವ ಪರಮೌಷಧಸ್ವರೂಪಿಯೂ, ಪರಮವೈದ್ಯನೂ ಆದ ಶ್ರೀಕೃಷ್ಣಬ್ರಹ್ಮನಿಗೆ ನಮಸ್ಕಾರ.—ಸಂ.}
ಜಗದ್ರಣಾಙ್ಗಣೇ ಯಸ್ಯ | ಸ್ಮರಣಂ ಜಯಕಾರಣಮ್ |
ಪಾರ್ಥಸಾರಥಯೇ ತಸ್ಮೈ | ಶ್ರೀಕೃಷ್ಣಬ್ರಹ್ಮಣೇ ನಮಃ || ೬ ||
{ಜಗತ್ತೆಂಬ / ಜೀವನವೆಂಬ ನಿತ್ಯ-ಹೋರಾಟದ ರಂಗದಲ್ಲಿ ಯಾವನ ಸ್ಮರಣೆಮಾತ್ರವು ಜಯಕ್ಕೆ ಕಾರಣವಾಗುವುದೋ ಅಂತಹ, ಅರ್ಜುನನ ಸಾರಥಿಯಾಗಿದ್ದು ಪಾಂಡವರಿಗೆ ಜಯವುಂಟುಮಾಡಿದ ಶ್ರೀಕೃಷ್ಮಬ್ರಹ್ಮನಿಗೆ, ನಮಸ್ಕಾರ.—ಸಂ.}
ತದ್ಗೀತಾರ್ಥಾನುವಾದಾಯ | ಯತ್ಯತೇ ತತ್ಪ್ರಸಾದತಃ |
ಸಾಮಾನ್ಯಜನಮುದ್ದಿಶ್ಯ | ಮಯಾ ಕರ್ಣಾಟಭಾಷಯಾ || ೭ ||
{ಹೀಗಾಗಿಯೇ ಅಂತಹ ಭಗವಂತನ ಗೀತೋಪದೇಶದ ಅರ್ಥವನ್ನನುಸರಿಸಿ ಸಾಮಾನ್ಯಜನರಿಗೆ ಅನುಕೂಲವಾಗುವಂತೆ ಕನ್ನಡ ಭಾಷೆಯಲ್ಲಿ ಹೇಳಲು ಆತನ ಅನುಗ್ರಹಪ್ರಸಾದಬಲಮಾತ್ರದಿಂದ ನನ್ನಿಂದ ಪ್ರಯತ್ನಿಸಲ್ಪಡುತ್ತದೆ.—ಸಂ.}
ವ್ಯಾಖ್ಯಾತಾ ಬಹುಭಿರ್ಗೀತಾ | ನಾನಾಮತವಿಭೇದತಃ |
ವಿತರ್ಕಾಂಸ್ತು ವಿಹಾಯಾತ್ರ | ಋಜ್ವರ್ಥಶ್ಚಿನ್ತ್ಯತೇ ಮಯಾ || ೮ ||
{ಈಗಾಗಲೇ ಬಹುಮಂದಿಗಳಿಂದ ಅವರವರ ಅಭಿಪ್ರಾಯಭೇದಕ್ಕನುಸಾರವಾಗಿ ಗೀತೆಯು ವ್ಯಾಖ್ಯಾನಿಸಲ್ಪಟ್ಟಿರುವುದು. ಆದರೆ, ವಿಚಿತ್ರವಾದ ತರ್ಕ, ಊಹೆ, ದೂರಾರ್ಥಗಳನ್ನು ತೊರೆದು ಇಲ್ಲಿ ನನ್ನಿಂದ ನೇರವಾದ ಅರ್ಥಮಾತ್ರ ಚಿಂತಿಸಲ್ಪಡುವುದು.—ಸಂ.}
ಜೀವನವ್ಯವಹಾರೇಷು | ಸರ್ವೇಷ್ವಪಿ ಚ ಸರ್ವದಾ |
ತತ್ತಾತ್ಪರ್ಯಾನ್ವಯಾದೇವ | ಗೀತಾಪಾಠಫಲೋದಯಃ || ೯ ||
{ತಮ್ಮ ತಮ್ಮ ಬದುಕಿನ ಸಕಲ ವ್ಯವಹಾರಗಳಲ್ಲಿ ಅನುಕ್ಷಣವೂ ಗೀತೋಪದೇಶತಾತ್ಪರ್ಯವನ್ನು ಅಳವಡಿಸಿಕೊಳ್ಳುವಿಕೆಯಿಂದ ಮಾತ್ರ ಗೀತಾಧ್ಯಯನದ ಫಲವು ಉಂಟಾಗುವುದು.—ಸಂ.}
ತಸ್ಮಾದಸ್ಮಿನ್ ಪ್ರವೃತ್ತೋऽಹಮ್ | ಅನುಷ್ಠಾನೋಪಯೋಗದೃಕ್ |
ಸನ್ಮಾರ್ಗದೃಷ್ಟಿಶುದ್ಧಿಂ ವೋ | ದದ್ಯಾದನ್ತರ್ಗುರುರ್ಹರಿಃ || ೧೦ ||
{ಹೀಗಾಗಿ ನಿಜಜೀವನದಲ್ಲಿ ಗೀತೆಯ ಅನುಷ್ಠಾನಕ್ಕೆ / ಬಳಕೆಗೆ ಉಪಯೋಗವಾಗುವ ದೃಷ್ಟಿಯುಳ್ಳವನಾದ ನಾನು, ಇದರಲ್ಲಿ (ಗೀತಾತಾತ್ಪರ್ಯರಚನೆಯಲ್ಲಿ) ಪ್ರವೃತ್ತನಾಗಿರುತ್ತೇನೆ (ತೊಡಗಿರುತ್ತೇನೆ). ಸರ್ವಾಂತರ್ಯಾಮಿಯಾಗಿ ಗುರುವಿನಂತೆ ಮಾರ್ಗದರ್ಶಕನಾದ ಶ್ರೀಹರಿಯು ನಿಮಗೆಲ್ಲರಿಗೂ ಸನ್ಮಾರ್ಗವನ್ನೂ, ಪರಿಶುದ್ಧ ದರ್ಶನವನ್ನೂ ನೀಡಲಿ.—ಸಂ.}
ಬ್ರಹ್ಮಪತ್ತನವೀಥೀಷು | ಚರತಾ ಜೀವಸಮ್ಭ್ರಮಾನ್ |
ಪಶ್ಯತಾ ಹಿತನಿಃಶ್ರೇಣೀ- | -ಮಿಚ್ಛತಾ ಶಿವಭಿಕ್ಷುಣಾ || ೧೧ ||
ಕೃತಂ ಸ್ವಚಿತ್ತಶುದ್ಧ್ಯರ್ಥಂ | ನ ಜ್ಞಂಮನ್ಯತಯಾ ತ್ವಿದಮ್ |
ಕ್ಷಮ್ಯತಾಂ ಸಾಹಸಂ ಸದ್ಭಿಃ | ಕೃಪಯಾ ಚಾವಲೋಕ್ಯತಾಮ್ || ೧೨ ||
{ಲೋಕದ ಜೀವರ ಸಂಭ್ರಮ ಹಾಗೂ ಚಿತ್ತವಿಭ್ರಮಗಳನ್ನು ಕಂಡವನಾದ, ಬ್ರಹ್ಮಪುರಿಯ / ಮುಕ್ತಿಧಾಮದ ಬೀದಿಗಳಲ್ಲಿ ಸರ್ವರಿಗೂ ಮೋಕ್ಷಕ್ಕೇರಲು ಹಿತವಾದ ಏಣಿ / ನಿಚ್ಚಣಿಯನ್ನು ಇಚ್ಛಿಸುವ, ಸರ್ವಶುಭವನ್ನು ಬೇಡುತ್ತಾ ಸಂಚರಿಸುತ್ತಿರುವ ಶಿವಭಿಕ್ಷುವಿನಿಂದ ಈ ಸಾಹಸವು ತನ್ನ ಚಿತ್ತಶುದ್ಧಿಗಾಗಿಯೇ ವಿರಚಿಸಲ್ಪಟ್ಟಿರುವುದೇ ಹೊರತು ಪಾಂಡಿತ್ಯಪ್ರದರ್ಶನಕ್ಕಾಗಿ (ತನಗೆಲ್ಲ ತಿಳಿದಿದೆಯೆಂಬ ದೃಷ್ಟಿಯಿಂದ) ಅಲ್ಲವೇ ಅಲ್ಲ. ಸಜ್ಜನರಿಂದ ಇದು (ಈ ದುಸ್ಸಾಹಸವು)ಕೃಪೆಯಿಟ್ಟು ಕ್ಷಮಿಸಲ್ಪಡಲಿ ಹಾಗೂ ಅವಲೋಕಿಸಲ್ಪಡಲಿ.—ಸಂ.}
ಓಂ ತತ್ಸತ್ ಪದಚಿಂತ್ಯನ- |
ನಂತಂ ವಿಶ್ವಪ್ರಪಂಚಲೀಲೋದಂತಂ ||
ಕಾಂತಂ ಚಿತ್ಪ್ರಭೆಯಿಂ ಜಗ- |
ಕಂತರ್ಯಾಮಿ ಪ್ರಭು ಪ್ರಸನ್ನಂ ಕೃಷ್ಣಂ || ೧ ||
ಮರ್ತ್ಯಾತಿಮರ್ತ್ಯಲೀಲಂ |
ನಿತ್ಯಂ ಧರ್ಮಾಧಿಧರ್ಮತತ್ತ್ವಾಧಾರಂ ||
ಪ್ರತ್ಯಕ್ಷಪರಮದೈವಂ |
ಸತ್ಯದಿ ನಡೆಯಿಸುಗೆ ನಮ್ಮನರ್ಜುನಸೂತಂ || ೨ ||
"ಏಕೋ ವಿದಧಾತಿ ಬಹೂ- |
-ನಾಂ ಕಾಮಾನ್" ಎಂಬ ವೇದವಚವಂ ಪ್ರತ್ಯ- ||
ಕ್ಷೀಕರಿಸಿದ ಬಹುರೂಪಂ |
ಶ್ರೀಕೃಷ್ಣಂ ತೋರುಗೆಮಗೆ ಮಂಗಲಗತಿಯಂ || ೩ ||
ಗೋಪೀಮಧ್ಯದಿ ರಸಿಕಂ |
ತಾಪಸರೊಳ್ ತಪಸಿ ರಾಜ್ಯತಂತ್ರದಿ ಶುಕ್ರಂ ||
ಸೂಪಾಯಂ ರಣರಂಗದೊ- |
ಳಾಪತ್ಸಖನಾಶ್ರಿತರ್ಗೆ ಸರ್ವಂ ಕೃಷ್ಣಂ || ೪ ||
ಪುರುಷಾರ್ಥಚತುಷ್ಕವ ನಿಜ- |
ಚರಿತೆಗಳೊಳ್ ಕಣ್ಗೆ ತೋರ್ದ ನಾನಾ ಜೀವೋ- ||
ದ್ಧರಣೋಪಾಯಸಮರ್ಥಂ |
ಗುರುಂ ಕೃಷ್ಣಂ ನೆಲಸಿ ನಲಿಗೆ ಮನ್ಮಾನಸದೊಳ್ || ೫ ||
ಹರಿಯವತಾರಗಳೊಳ್ ಯದು- |
ವರನವೊಲಾರ್ ಮನುಜಹೃದಯಮರ್ಮವನರಿತನ್ |
ಗುರುವೆಮಗದರಿಂ ಕೃಷ್ಣಂ |
ಧರಣಿಯ ಗುಣವರಿಯದವನ ಕೃಷಿಯಿಂದಹುದೇಂ || ೬ ||
ಮಾನವಹೃನ್ಮರ್ಮದ ವಿ- |
ಜ್ಞಾನಿ ಶ್ರೀಕೃಷ್ಣನವನೆ ಭವಗದಭಿಷಜಂ |
ಮಾನಸಕಾಯಕರೋಗನಿ- |
ದಾನವ ಕಾಣದನ ವೈದ್ಯವೆಂತುಪಕರಿಕುಂ || ೭ ||
ಪ್ರತ್ಯಕ್ಷಧರ್ಮನ್ ಅಂತೆಯೆ |
ಮೂರ್ತಿಮದಧಿಧರ್ಮನ್ ಅಖಿಲ ಸುಲಭೋಪಾಸ್ಯಂ ||
ಪಾರ್ಥಗುರು ಪರಮತೇಜಂ |
ನಿತ್ಯಂ ತನ್ನಡಿಗೆ ನಮಗೆ ತೋರುಗೆ ಪಥಮಂ || ೮ ||
ಭಗವದ್ಗೀತಾಶಾಸ್ತ್ರಂ |
ನಿಗಮಾಗಮಸಾರಮಖಿಲಮನುಜಕುಲಕ್ಕಂ ||
ಲಘುವೆನಿಸಿ ಜಗದ್ಭಾರವ |
ಸುಗಮವಾಗಿಪುದು ಜೀವಿತೋತ್ತಮಪದವಂ || ೯ ||
ಶ್ರೀವೇದವ್ಯಾಸ ನಮೋ |
ಭೂವಿಯದಾದ್ಯಂತದರ್ಶಿ ಕವಿಸೂರ್ಯ ನಮೋ ||
ಜೀವಿತಸಾರಜ್ಞ ನಮೋ |
ಭಾವಿತವಿಶ್ವಪ್ರಜಾಭವಿಷ್ಯಾರ್ಥ ನಮೋ || ೧೦ ||
ಗುರುವೇ ನಿನ್ನಿತಿಹಾಸಾಂ- |
ಬರಭಾಸ್ಕರದೀಪ್ತಿನಿಧಿಯ ಭಗವದ್ಗೀತಾ ||
ಪರಮಾರ್ಥವನೆನ್ನ ಜನ- |
ಕ್ಕರಿಪಲ್ಕನುಮತಿಯ ನೀಡು ಮತಿವಾಗ್ಬಲಮಂ || ೧೧ ||
ಗಿರಿಶಿಖರದಿಂದೆ ಧರೆಯಂ |
ನಿರುಕಿಸಿದರ್ ಪೂರ್ವಭಾಷ್ಯಕಾರರ್ ನಾಮೀ |
ಧರಣಿಯ ನಿಮ್ನದೆ ಜೀವಿತ- |
ಗಿರಿಶಿಖರವ ನೋಳ್ಪ ನಮ್ರ ಲೌಕಿಕರಲ್ತೇ || ೧೨ ||
ಮೋಕ್ಷವ ಪಾಡುಗೆ ಸಿದ್ಧರ್ |
ಲಕ್ಷ್ಯಂ ಸಾಧಕರಿಗಿರ್ಕೆ ಜೀವನನಯದೊಳ್ ||
ದಕ್ಷತೆ ಕೃಷಿಕರ್ಮದೊಳಿರೆ |
ಸುಕ್ಷೇತ್ರಂ ತಾನೆ ಫಲಿಸದೇಂ ನಿರ್ಯತ್ನಂ || ೧೩ ||
ನಾರಾಯಣನಂ ನರನಂ |
ಭಾರತಿಯಂ ವ್ಯಾಸನಂ ಸದಾ ನಮಿಸುತೆ ಸಂ- |
ಸಾರಾಹವಮಂ ಭಾರತ |
ಸಾರಥಿಗೀತೋಪದಿಷ್ಟಬಲದಿಂ ಗೆಲುವಂ || ೧೪ ||
ಗ್ರಂಥಾವತರಣ
ಗುರಿಯೇಂ ಜೀವನಕದು ಬರಿ |
ಪರದಾಟಮೊ ಮನಸು ಬೇಡುವಿಂದ್ರಿಯಸುಖಮೋ ||
ಸಿರಿತನಮೋ ದೊರೆತನಮೋ |
ಸೆರೆಮನೆಯೋ ತಿರುಕನುಂಡ ಕನಸೌತಣಮೋ || ೧ ||
ಜೀವಿತದರ್ಥವದೇನ್ ಅದು |
ದೈವಾಗ್ರಹಬಲಿಯೊ ಸೃಷ್ಟಿಯಂಧವಿಕಟಮೋ ||
ಸೇವಾರ್ಹಮದರೊಳೇನ್ ಅದು |
ಭಾವುಗರಿಗೆ ಸುಕೃತಭೂಮಿಯದು ಪಿರಿಯರ್ಥಂ || ೨ ||
ತತ್ತ್ವವಿವೇಕದೆ ಜೀವವಿ- |
ದುತ್ತಮಪದಕಡರಲಹುದು ಸಂಸ್ಕೃತಿನಯದಿಂ ||
ಆತ್ಮೋದ್ಧೃತಿಯವಕಾಶಮೆ |
ವಿತ್ತಗಳೊಳ್ ಪರಮವಿತ್ತಮದು ಪುರುಷವಶಂ || ೩ ||
ವರಗಳೊಳಗ್ರದ ವರಮಿದು |
ನರಜನ್ಮಂ ಮೃಗಕಲಂಕಶೇಷವ ಕಳೆದೀ ||
ಪುರುಷತೆಯಿಂದಧಿಪುರುಷತೆ- |
ಗರಿವಿಂ ಪ್ರಗತಿಯ ಗಳಿಪ್ಪ ಸಾಧನರಂಗಂ || ೪ ||
ಗೀತೆಯಿಂದಾಗುವ ಲಾಭ
ಪ್ರತಿಯೊಬ್ಬನಿಗೂ ಪ್ರತಿಯೊಬ್ಬಳಿಗೂ ಜೀವನದಲ್ಲಿ ಒಂದು ಗೌರವ, ಕರ್ತವ್ಯದ ವಿಷಯದಲ್ಲಿ ಒಂದು ಉತ್ಸಾಹ, ಆಪತ್ಕಾಲದಲ್ಲಿ ಧೈರ್ಯ, ಸಂಶಯ ಹುಟ್ಟಿದಾಗ ನೆಮ್ಮದಿಯನ್ನುಂಟುಮಾಡುವ ನಂಬಿಕೆ— ಇವು ಗೀತೆಯಿಂದ ನಾವು ಸಂಪಾದಿಸಿಕೊಳ್ಳಬಹುದಾದ ಸಂಪತ್ತು. ಇದು ಧರ್ಮಶಾಸ್ತ್ರವೂ ಹೌದು; ಮೋಕ್ಷಶಾಸ್ತ್ರವೂ ಹೌದು.
ಗೀತಾವ್ಯಾಸಂಗಕ್ಕೆ ಪೂರ್ವಸಿದ್ಧತೆ
ಗೀತೆಯ ಎಲ್ಲ ಭಾಗವೂ ಎಲ್ಲರಿಗೂ ಒಂದೇ ಸಮನಾಗಿ ಅರ್ಥವಾಗತಕ್ಕದ್ದಲ್ಲ. ಹೇಗೆ ಉಪದೇಶವು ಅದನ್ನು ಬೇಡುವವನ ಯೋಗ್ಯತೆಗೆ ತಕ್ಕಂತಿರಬೇಕೋ ಹಾಗೆಯೇ. ನಮ್ಮ ನಮ್ಮ ಶ್ರದ್ಧೆ-ನೀತಿ-ಸಿದ್ಧತೆ-ಬುದ್ಧಿಶಕ್ತಿಗಳ ಮಟ್ಟಕ್ಕಿಂತ ಮೇಲಿನ ಅಂಶ ನಮಗರ್ಥವಾಗದೆ ಹೋದೀತು. ನಮಗೆ ಮೊದಲ ಸಲ, ಎರಡನೆಯ ಸಲ ಅರ್ಥವಾಗಲಿಲ್ಲ ಅತವಾ ಸರಿತೋರಲಿಲ್ಲವೆಂಬ ಕಾರಣದಿಂದಾಗಿ ನಾವು ನಿಲ್ಲಿಸಿಬಿಟ್ಟರೆ ನಮಗೇ ನಷ್ಟ. ಸದ್ಯಕ್ಕೆ ಅರ್ಥವಾದಷ್ಟನ್ನು ಗ್ರಹಿಸಿ, ಮನನಮಾಡಿ, ಅಭ್ಯಾಸಕ್ಕೆ ತಂದುಕೊಳ್ಳುವುದರಿಂದ ಅದಕ್ಕಿಂತ ಮೇಲ್ಮಟ್ಟದ ವಿಷಯವನ್ನು ಮುಂದೆ ಹಂತಹಂತವಾಗಿ ತಿಳಿದುಕೊಳ್ಳಲು ನಮಗೆ ಸಾಮರ್ಥ್ಯ ಬರುತ್ತದೆ. ಹಾಗೆಯೇ ಗೀತೆಯ ಬಗ್ಗೆ ವಿಶ್ವಾಸವಿರದಿದ್ದರೆ, ವೈದ್ಯನಲ್ಲಿ ವಿಶ್ವಾಸವಿರದೆ ಹೇಗೆ ಔಷಧಿಯೂ ಫಲಿಸಲಾರದೋ ಹಾಗೆಯೇ, ಭವರೋಗವೈದ್ಯ ಶ್ರೀಹರಿಯು ಬೋಧಿಸಿದ ಗೀತೆಯ ಅಧ್ಯಯನವೂ ಪೂರ್ಣವಾಗಿ ಫಲಿಸಲಾರದು. ಹೀಗಾಗಿ ಗೀತೆಯ ಸಾರ್ಥಕ ಓದಿಗೆ ತಾಳ್ಮೆಯೂ, ನಂಬಿಕೆಯೂ ಅವಶ್ಯಕಸಿದ್ಧತೆಗಳು.
ಅಂತೆಯೇ, ಯಶಸ್ವಿಯಾಗಿ ದೊಡ್ಡ ಪರ್ವತವನ್ನಾರೋಹಿಸುವವನು ಹೇಗೆ ಅಲ್ಲಲ್ಲಿ ವಿಶ್ರಮಿಸುತ್ತಾ, ಜಾಗ್ರತೆಯಾಗಿ ಹಾಗೂ ನಿಧಾನವಾಗಿ ಅದನ್ನೇರುತ್ತಾನೋ ಹಾಗೆಯೇ ಅತಿಗಹನವೂ, ಸೂಕ್ಷ್ಮವೂ, ಸಂಕೀರ್ಣವೂ ಆದ ಗೀತಾವಿಚಾರವನ್ನೂ ಆತುರಪಡದೆ, ಅಪಾರ್ಥಕ್ಕೆಡೆಯಾಗದಂತೆ ಅಧ್ಯಯನ ಮಾಡಬೇಕು. ಅದಕ್ಕಾಗಿ, ಗೀತಾಭ್ಯಾಸಿಗಳಿಗೆ ಮನಸ್ಸಮಾಧಾನ (ಸಮಾಧಾನಚಿತ್ತತೆ), ಸಾವಧಾನ (ಎಚ್ಚರದ ಗಮನ)— ಇವೆರಡು ಗುಣಗಳೂ ಇರಬೇಕು.
ಮತಭೇದಗಳು
ಗೀತೆಯನ್ನು ಅರ್ಥೈಸುವಾಗ ನಾವು ದ್ವೈತ-ಅದ್ವೈತ-ವಿಶಿಷ್ಟಾದ್ವೈತ-ಶುದ್ಧಾದ್ವೈತ-ಭೇದಾಭೇದವಾದ— ಮುಂತಾದ ಸಿದ್ಧಾಂತಗಳಲ್ಲಿ ಯಾವ ಹಾದಿಯನ್ನು (ಪ್ರಸ್ಥಾನವನ್ನು) ಅವಲಂಬಿಸಬೇಕು? ಸತ್ಯ ಒಂದೇ; ಆದರೆ ಸತ್ಯದರ್ಶನಗಳು ಸಾವಿರಾರು. ಒಂದು ಬೆಟ್ಟವನ್ನು ಬೇರೆ ಬೇರೆ ಮಗ್ಗುಲುಗಳಿಂದ ಕಂಡಂತೆ. ವ್ಯಾಖ್ಯಾನಕಾರರ ಚಮತ್ಕಾರ, ತರ್ಕ-ವ್ಯಾಕರಣಗಳ ಯುಕ್ತಿಬಲದಿಂದ ಅದ್ವೈತವನ್ನು ದ್ವೈತವೆಂದೂ, ದ್ವೈತವನ್ನು ಅದ್ವೈತವೆಂದೂ ಸಾಧಿಸಬಹುದು. ಹಾಗಾಗಿ, ಜಿಜ್ಞಾಸುವಿನ ಸ್ವಾನುಭವವೇ ಅವನಿಗೆ ಪರಮಪ್ರಮಾಣವಾಗಬಲ್ಲದು. ಅದೇ ಅವರವರ ಪಾಲಿನ ಸತ್ಯಾಂಶ. ಸತ್ಯ ಅಖಂಡವಾದರೂ ಅದನ್ನು ನೋಡುವವನ ದೃಷ್ಟಿ ಯಾವುದೇ ವಸ್ತುವಿನ ಒಂದು ಬದಿಯನ್ನು ಮಾತ್ರ ಏಕಕಾಲದಲ್ಲಿ ತೋರಿಸಬಲ್ಲುದು. ಹಾಗಾಗಿ ಎಲ್ಲ ಸಿದ್ಧಾಂತಗಳೂ ಆಯಾಯ ದೃಷ್ಟಿಯಲ್ಲಿ ಸತ್ಯಾಂಶಗಳನ್ನೇ ಹೇಳುವುವು. ರೋಗಕ್ಕೆ ಚಿಕಿತ್ಸೆ ನೀಡಿದರೆ ಹೇಗೆ ಸೂಕ್ತವಾಗಲಾರದೋ, ಆಯಾ ರೋಗಿಯ ಪರಿಸ್ಥಿತಿ, ಸಂದರ್ಭ, ಸನ್ನಿವೇಶ, ಪ್ರಕೃತಿಯನ್ನನುಸರಿಸಿ ಒಂದೇ ರೋಗಕ್ಕೆ ಚಿಕಿತ್ಸೆಯು ಒಬ್ಬೊಬ್ಬ ರೋಗಿಗೂ ಹೇಗೆ ವಿಭಿನ್ನವಾಗಿರುವುದೋ, ಹಾಗೆಯೇ ಸತ್ಯವೂ ಒಬ್ಬೊಬ್ಬನ ದೃಷ್ಟಿಗೆ ಒಂದೊಂದು ತೆರನಾಗಿ ಅಂಶಮಾತ್ರವಷ್ಟೇ ಗೋಚರಿಸುವುದು. ಹಾಗಾಗಿ, ಯಾವುದೂ ಪೂರ್ಣಸತ್ಯವೆಂದೋ ಅಥವಾ ಪೂರ್ಣಮಿಥ್ಯವೆಂದೋ ಗ್ರಹಿಸತಕ್ಕದ್ದಲ್ಲ. ಎಲ್ಲವೂ ಸತ್ಯದ ವಿಭಿನ್ನ ಮುಖಗಳೇ ಆಗಿವೆ.
ಗ್ರಂಥಸ್ವರೂಪ
ಪ್ರತಿಯೊಂದು ಗೀತಾಧ್ಯಾಯದ ಕೊನೆಯಲ್ಲಿ ಹೀಗಿದೆ— "ಇತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ… ಯೋಗೋ ನಾಮ… ಅಧ್ಯಾಯಃ" ಎಂಬುದಾಗಿ. ಹೀಗಾಗಿ ಇದು ಕುರುಕ್ಷೇತ್ರದ ಕೌರವ-ಪಾಂಡವರ ರಣರಂಗದಲ್ಲಿ, ಸ್ವಜನಮೋಹವಶನಾಗಿ ವ್ಯಾಕುಲಭೀತಿಗಳಿಂದಾವೃತನಾದ ಅರ್ಜುನನ ನಿಮಿತ್ತವಾಗಿ ಲೋಕೋಪಕಾರಕ್ಕಾಗಿಯೂ ಶ್ರೀಕೃಷ್ಣನು ಬೋಧಿಸಿದ ಜೀವನಧರ್ಮಯೋಗಶಾಸ್ತ್ರವೂ, ಮೋಕ್ಷಶಾಸ್ತ್ರವೂ ಆಗಿದೆ. ಉಪನಿಷತ್ಸಾರವಾಗಿ ವೇದಾಂತತುಲ್ಯವೂ ಹೌದು. ಸಾಂಖ್ಯಯೋಗ (ಜ್ಞಾನಯೋಗ), ಭಕ್ತಿಯೋಗ, ಧ್ಯಾನಯೋಗ ಮುಂತಾದ ಅನೇಕ ಯೋಗಯುಕ್ತವಾಗಿ ಯೋಗಶಾಸ್ತ್ರವೂ ಆಗಿದೆ. ಛಂದೋಬದ್ಧವೂ, ಪಾದನಿಬದ್ಧವೂ ಆಗಿ, ಪದ್ಯ / ಗೀತಾ ರೂಪವಾಗಿದ್ದು ಪದ್ಯಕಾವ್ಯವಾಗಿದೆ. ಉಪದೇಶಗಳೂ, ಬ್ರಹ್ಮಜಿಜ್ಞಾಸೆಯೂ ಸಾಕಷ್ಟಿರುವುದರಿಂದ ಪ್ರಭುಸಮ್ಮಿತ ವೇದಾಂತಶಾಸ್ತ್ರವೂ ಹೌದು ("ಶಾಸನಾತ್ ಶಾಸ್ತ್ರಮ್"). ಹಿತವಾದ ನೀತಿವಚನಗಳಿದ್ದು ಮಿತ್ರಸಮ್ಮಿತವಾದ ಧರ್ಮಶಾಸ್ತ್ರ. ಸಂವಾದರೂಪದಲ್ಲಿರುವುದರಿಂದ ಕಾಂತಾಸಮ್ಮಿತವಾದ ಕಾವ್ಯ. ಅಲ್ಲದೆ, ಮಾನವನ ದೈನಂದಿನ ಬದುಕಿನಲ್ಲಿ ಬರಬಹುದಾದ ಪ್ರಶ್ನೆಗಳನ್ನೆದುರಿಸಿ, ಉತ್ತರಿಸಬಲ್ಲ ವಿಚಾರನಿಧಿ. ಹೀಗೆ ಇದು ಸಾರ್ವಕಾಲಿಕವೂ, ಸಾರ್ವದೇಶಿಕವೂ ಆದ ಜೀವನಧರ್ಮಶಾಸ್ತ್ರ.
ಗೀತೋಪದೇಶಕಾಲ
ಕೌರವ-ಪಾಂಡವರದು ಧರ್ಮಯುದ್ಧವಾದ್ದರಿಂದ, ಅದು ಕ್ಷತ್ರಿಯಧರ್ಮಾಚರಣೆಯ ಒಂದು ಅಂಗವೇ ಆದ್ದರಿಂದ, ಅದಕ್ಕೆ ಸ್ಥಳನಿಯಮ, ಕಾಲನಿಯಮ, ಅರ್ಹಾನರ್ಹನಿಯಮಗಳೂ ಇದ್ದವು. ಈಗಿನಂತೆ, ಯಾರು ಯಾವಾಗ ಬೇಕಾದರೂ, ಯಾರನ್ನೂ ಹೇಗೆ ಬೇಕಾದರೂ ಎಲ್ಲಿ ಬೇಕಾದರೂ ಕೊಲ್ಲಲು ಸಾಧ್ಯವಿರಲಿಲ್ಲ. ಇತ್ತಂಡಗಳೂ ರಣರಂಗದಲ್ಲಿ ಸೇರಿ, ಈರ್ವರೂ ಒಪ್ಪಿದ ಬಳಿಕವೇ ಯುದ್ಧಾರಂಭ. ಹಾಗಾಗಿ, ಯುದ್ಧರಂಗದಲ್ಲಿ ಬೋಧನೆಗೆ ವ್ಯವಧಾನ, ಕಾಲಾವಕಾಶ ಇತ್ತೇ ಎಂಬ ಸಂದೇಹಕ್ಕೆಡೆಯಿಲ್ಲ. ಯಾಕೆಂದರೆ ಗೀತೋಪದೇಶದ ಬಳಿಕವೂ ಸಾಕಷ್ಟು ಸಮಯಾವಕಾಶವಿತ್ತು. ಆಗ, ಧರ್ಮರಾಯನು ರಥದಿಂದಿಳಿದು ಕಾಲ್ನಡಿಗೆಯಲ್ಲೇ ಭೀಷ್ಮಾದಿ ಗುರುಜನರ ಬಳಿಸಾರಿ, ಅವರೆಲ್ಲರ ಆಶೀರ್ವಾದ ಬೇಡಿದ. ಇಷ್ಟೆಲ್ಲ ಆದ ನಂತರವೇ ಯುದ್ಧಾರಂಭವಾದದ್ದು.
ಅನುಬಂಧ-ಚತುಷ್ಟಯ
ಪ್ರಾಚೀನ ಪದ್ಧತಿಯ ಪ್ರಕಾರ, ಯಾವುದೇ ಪ್ರಸಿದ್ಧ ಶಾಸ್ತ್ರಗ್ರಂಥದ ಅಧ್ಯಯನಪೂರ್ವದಲ್ಲಿ ೪ ಮುಖ್ಯ ಅನುಬಂಧಗಳು / ಸಂಗತಿಗಳು ಇವು— ಅಧಿಕಾರಿ, ವಿಷಯ, ಸಂಬಂಧ ಹಾಗೂ ಪ್ರಯೋಜನ.
ಅಧಿಕಾರೀ ಚ ವಿಷಯಃ ಸಂಬಂಧಶ್ಚ ಪ್ರಯೋಜನಮ್ |
ಶಾಸ್ತ್ರಾರಂಭಫಲಂ ಪ್ರಾಹುರನುಬಂಧಚತುಷ್ಟಯಮ್ ||
- ಈ ಗೀತಾಶಾಸ್ತ್ರದ ಅಧ್ಯಯನಕ್ಕೆ ಅಧಿಕಾರಿ ಯಾರು?
ಯಾರು ಲೋಕಜೀವನದ ಕಷ್ಟ-ನಷ್ಟ-ಇಕ್ಕಟ್ಟು-ಬಿಕ್ಕಟ್ಟುಗಳನ್ನು ಅನುಭವದಿಂದ ಕಂಡು, ಭೋಗ-ಲಾಭಗಳಲ್ಲಿ "ಆಶಾಪರಿಮಿತಿ"ಯುಳ್ಳವನಾಗಿ, ಸಕಲಜನ-ಸಹಾನುಭೂತಿಯುಳ್ಳವನಾಗಿ, ಜೀವನದಲ್ಲಿ ತಾನು ಹೇಗೆ ನಡೆದುಕೊಂಡರೆ ಜನ್ಮ ಸಾರ್ಥಕವಾದೀತು— ಎಂಬುದನ್ನು ತಿಳಿಯಲು ತೀವ್ರ ಕುತೂಹಲವುಳ್ಳವಾಗಿ "ತತ್ತ್ವಜ್ಞಾನೇಚ್ಛೆ"ಯುಳ್ಳವನೂ, "ಸಂಯಮ"ವುಳ್ಳವನೂ ಆಗಿರುವನೋ ಅವನೇ ಅಧಿಕಾರಿ.
2. ಗೀತೆಯ ವಿಷಯವೇನು?
ವಿಶ್ವತತ್ತ್ವ— ಜೀವ-ಜಗತ್ತು-ಈಶ್ವರರ ಸ್ವರೂಪ, ಪರಸ್ಪರ ಸಂಬಂಧ, ಜೀವನ ಉದ್ಧಾರ, ಈಶ್ವರನ ಸ್ಥಾನ— ಸಂಪೂರ್ಣ ವಿಶ್ವಜೀವನದರ್ಶನ.
3. ಗೀತೆಗೂ ನಮಗೂ ಇರುವ ಹಾಗೂ ಗೀತೆಗೂ ಇತರ ಶಾಸ್ತ್ರಗಳಿಗೂ ಇರುವ ಸಂಬಂಧವೇನು?
ಇದು ೩ ವಿಧ—
(೧) ಬೋಧ್ಯ(ವ್ಯಾಸಂಗಿ)-ಬೋಧಕ(ಗೀತೆ)
(೨) ಸಮನ್ವಯ(ವೇದ-ವೇದಾಂಗ-ಶಾಸ್ತ್ರ-ಪುರಾಣ-ಇತಿಹಾಸ)-ಸಮನ್ವೇಯ(ಗೀತೆ)
(೩) ಸಂಸ್ಕಾರ್ಯ(ವ್ಯಾಸಂಗಿ)-ಸಂಸ್ಕಾರಕ(ಗೀತೆ).
4. ಗೀತೆಯಿಂದೇನು ಪ್ರಯೋಜನ?
ಗೀತೆಯ ನಿತ್ಯಾನುಸಂಧಾನದಿಂದ ಜೀವಿಗೆ ಜಗದ್ಭಾರವು ಹಗುರವಾಗುತ್ತದೆ. ತತ್ತ್ವವಿವೇಕದಿಂದ ನಾನಾ ಲೋಕವಸ್ತುಗಳ ಯಥಾಯೋಗ್ಯತೆಯ ಅರಿವಾಗಿ ಅವುಗಳ ಮೌಲ್ಯತಾರತಮ್ಯಜ್ಞಾನವು ನಿರ್ಣಯವಾಗುತ್ತದೆ. ಅದೇ ಮೋಹಭ್ರಾಂತಿನಿವಾರಣೆ. ಜೀವನದ ಅರ್ಥವೇನು? ಪರಮಾರ್ಥವೇನು? ಕರ್ತವ್ಯ-ಅಕರ್ತವ್ಯಗಳು ಎಂಥವು?— ಇವೇ ಮುಂತಾದ ಪ್ರಶ್ನೆಗಳು ಬಗೆಹರಿದು, ನಿರ್ಮಲ ಜೀವಿತಧರ್ಮಮಾರ್ಗ ತೋರಿಬರುತ್ತದೆ. ಆಗ, ಮನಃಪ್ರಸನ್ನತೆ, ಜೀವನದ ಕಷ್ಟ-ಸಂಕಟಗಳ ಪರಿಹಾರ, ಶಾಂತಿ. ಅದೇ ಗೀತಾನುಷ್ಠಾನದ ಫಲ.
ಗೀತಾಧ್ಯಯನಕ್ಕೆ ಅಧಿಕಾರಿಯಾದವನ ವಿಷಯದಲ್ಲಿ ಮೇಲುಕೀಳೆಂಬ ಭಾವ ಸಲ್ಲದು. ಅವರವರಿಗೆ ತಕ್ಕಷ್ಟು ಪ್ರಮಾಣದಲ್ಲಿ, ಅವರವರಿಗೆ ಬೇಕಾದ ವಿಚಾರಗಳನ್ನು ಮಾತ್ರ ಅನುಸರಿಸುವುದು / ಉಪದೇಶಿಸುವುದು ತಪ್ಪಲ್ಲ. ಇದು ೨ ವರ್ಷದ ಮಗುವಿಗೆ ೨ ಸೇರು ಮಿಠಾಯಿ (ಸರ್ವರಿಗೂ ಸಮಪಾಲು ಎಂಬ ಭಾವದಂತೆ) ಕೊಟ್ಟಂತಾಗಬಾರದಲ್ಲವೆ? ಮದ್ದುಗಳಲ್ಲಿ ಇಂಜಕ್ಶನ್ / ಗ್ಲೂಕೋಸ್ ಡ್ರಿಪ್ ಶ್ರೇಷ್ಠ; ಮಾತ್ರೆ ಕನಿಷ್ಠ ಎನ್ನಲಾದೀತೇ? ಕಾಯಿಲೆಗೆ ಹಾಗೂ ರೋಗಿಯ ಶರೀರಧರ್ಮಕ್ಕೆ ತಕ್ಕಂತೆ ಚಿಕಿತ್ಸೆ. ಅಲ್ಲವೆ? ಅಂತೆಯೇ ನಮ್ಮ ಅಜ್ಞಾನವೆಂಬ ವ್ಯಾಧಿಗೆ ಗೀತಾಚಾರ್ಯನೇ ಸೂಕ್ತ ವೈದ್ಯ. ಗೀತೋಪದೇಶಾನಂತರದ ಅಶ್ವಮೇಧಿಕಪರ್ವದಲ್ಲಿ ಕೃಷ್ಣನೇ ಈ ಬಗ್ಗೆ ಅರ್ಜುನನಿಗೆ ಸಮಾಧಾನ ಹೇಳಿದ್ದಾನೆ—
ಸರ್ವೇ ಸ್ವವಿಷಯೇ ಶ್ರೇಷ್ಠಾಃ
ಸರ್ವೇ ಚಾನ್ಯೋನ್ಯರಕ್ಷಿಣಃ ||
ಪ್ರತಿಯೊಬ್ಬನೂ ಅವನವನಿಗೆ ಗೊತ್ತಾದ ಕರ್ತವ್ಯವಿಷಯದಲ್ಲಿ ಮಿಕ್ಕವರಿಗಿಂತ ಶ್ರೇಷ್ಠನು— ವೇದವಿಷಯದಲ್ಲಿ ಬ್ರಾಹ್ಮಣ ಶ್ರೇಷ್ಠ ; ರಾಜ್ಯ ವಿಷಯದಲ್ಲಿ ಕ್ಷತ್ರಿಯ ಶ್ರೇಷ್ಠ ; ಸಂಪದ್ವಿಷಯದಲ್ಲಿ ವೈಶ್ಯ ಶ್ರೇಷ್ಠ ; ಲೋಕಸೇವೆಯಲ್ಲಿ ಗೃಹಸ್ಥ ಶ್ರೇಷ್ಠ ; ತಪಸ್ಸಿನಲ್ಲಿ ಸಂನ್ಯಾಸಿ ಶ್ರೇಷ್ಠ— ಇತ್ಯಾದಿ. ತನ್ನ ವಿಹಿತಕರ್ತವ್ಯ ಹೊರತು ಮಿಕ್ಕ ವಿಚಾರಗಳಲ್ಲಿ ಪ್ರತಿಯೊಬ್ಬನೂ ಮಿಕ್ಕವರಿಗೆ ಸಹಕಾರಿಯಾಗಿರಬೇಕಾದವನು. ಹೀಗಾಗಿಯೇ, ಪ್ರತಿಯೊಬ್ಬನಿಗೂ— ಅವನ ಜೀವ ಪರಿಶೋಧನೆಗೂ ಆದ್ಯಾತ್ಮಿಕ ಪ್ರಗತಿಗೂ ಸಾಧಕವಾಗುವ ಉಪದೇಶ ಯಾವುದುಂಟೋ ಅದೇ ಅವನಿಗೆ ಶ್ರೇಷ್ಠ. ಇದನ್ನೇ ಗೀತೆಯಲ್ಲಿ ಹೀಗೆ ಹೇಳಿದೆ—
ಶ್ರೇಯಾನ್ ಸ್ವಧರ್ಮೋ ವಿಗುಣಃ
ಪರಧರ್ಮಾತ್ ಸ್ವನುಷ್ಠಿತಾತ್ ||
"ಸ್ವಧರ್ಮವು ಗುಣವಿರಹಿತವಾದರೂ ಅದೇ ಶ್ರೇಷ್ಠ. ಪರಧರ್ಮವನ್ನು ಚೆನ್ನಾಗಿ ಅನುಷ್ಠಾನಿಸುವುದಕ್ಕಿಂತಲೂ ತನ್ನದಾದ ಕರ್ತವ್ಯಕರ್ಮವೇ ಅವನವನಿಗೆ ಶ್ರೇಯಸ್ಕರ."
ಗೀತೆಯು ಮೋಕ್ಷಶಾಸ್ತ್ರವೇನೋ ಸರಿ ; ಹಾಗೆಂದು ಗೀತೆಯನ್ನೊಮ್ಮೆ ಕೇವಲ ಪಾರಾಯಣ ಮಾಡಿದ ಕೂಡಲೇ ಮೋಕ್ಷಹೊಂದಲಾಗದು. ಹಾಗಾಗಿ, ಆತುರ ಸಲ್ಲದು. ಅದು ಎಷ್ಟರ ಮಟ್ಟಿಗೆ ಮೋಕ್ಷಶಾಸ್ತ್ರವೋ, ಅಷ್ಟೇ ಮಟ್ಟಿನ ಧರ್ಮಶಾಸ್ತ್ರವೂ ಹೌದು. ಮೋಕ್ಷಚಿಂತನೆಯ ಮೊದಲ ಮೆಟ್ಟಿಲು ಧರ್ಮಚಿಂತನೆ. "ಧರ್ಮಾದರ್ಥಶ್ಚ ಕಾಮಶ್ಚ" ಎಂಬಂತೆ ನಾಲ್ಕು ಪುರುಷಾರ್ಥಗಳಲ್ಲೊಂದಾದ ಧರ್ಮವು, ಉಳಿದ ಮೂರರ ಪ್ರಾಪ್ತಿಗೂ (ಅರ್ಥ-ಕಾಮ-ಮೋಕ್ಷ) ಮೂಲಸಾಧನವು. ಹೀಗಾಗಿ ಮೋಕ್ಷಕ್ಕಾಗಿ ಹಪಹಪಿಸಬೇಕಾದ್ದೇ ಇಲ್ಲ. ಧರ್ಮವಿದ್ದಲ್ಲಿ ಮೋಕ್ಷವು ತಾನಾಗಿಯೇ ಬಂದೊಗುವುದು. ಹಗಲು ದುಡಿದು, ಮಾಡಬೇಕಾದದ್ದನ್ನು ಯಥಾಶಕ್ತಿ ಮಾಡಿ, ಆರೋಗ್ಯವಿಧಿಯಂತೆ ಬಾಳಿದವನು, ರಾತ್ರಿ ನಿದ್ದೆಗಾಗಿ ಗುಳಿಗೆ ಸೇವಿಸಬೇಕಿಲ್ಲ. ಆಹಾರ ಜೀರ್ಣವಾದವನು ಕೃತಕೃತ್ಯಸಮಾಧಾನದಿಂದ ತಲೆ ನೆಲಕ್ಕಿಟ್ಟರೆ ನಿದ್ದೆ ತಾನಾಗಿ ಬರುತ್ತದೆ. ವಿವೇಕ-ಜಾಗರೂಕತೆಗಳಿಂದ ಧರ್ಮಸೇವೆ ಮಾಡಿದವನಿಗೆ ಮೋಕ್ಷ ಸ್ವತಃ ಸಿದ್ಧವಾಗಿರುತ್ತದೆ.
ಆದ್ದರಿಂದ ನಾವು ತಾಯಿಯಿತ್ತ ಊಟದಲ್ಲಿ, ವೈದ್ಯರ ಔಷಧಿಯಲ್ಲಿ ವಿಶ್ವಾಸವಿಟ್ಟಂತೆ, ಆಧ್ಯಾತ್ಮಿಕವಿದ್ಯೆಯಾದ ಗೀತೆಯಲ್ಲಿ (ಲೌಕಿಕವಿದ್ಯೆಯಂತಲ್ಲದೆ) ಮೊದಲು ಶ್ರದ್ಧೆಯಿಟ್ಟು ನಂಬಿ ಅಧ್ಯಯನ ಮಾಡಿ ಅನುಷ್ಠಾನಿಸಿ, ಬಳಿಕ ಅದನ್ನು ತಾಯಿಯ ಅಡುಗೆ ಉಪ್ಪಾಗಿದೆಯೆಂದು ಹೇಳಿ ಬೇರೆ ಮಾಡಿಸಿದಂತೆ, ವೈದ್ಯರ ಔಷಧಿ ಫಲಿಸಲಿಲ್ಲವಾದರೆ ಬೇರೊಬ್ಬ ವೈದ್ಯರಲ್ಲಿಗೆ ಹೋದಂತೆ, ವಿಮರ್ಶಿಸಿ ಸರಿಯೆಂದು ಅನುಭವಕ್ಕೆ ಬಂದರೆ ಮಾತ್ರ ಸ್ವೀಕರಿಸುವ ಅವಕಾಶವನ್ನು ಕೃಷ್ಣನೇ ಕೊಟ್ಟಿದ್ದಾನೆ— "ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು"— "ಇದನ್ನು ಅಶೇಷವಾಗಿ (ಆಮೂಲಾಗ್ರವಾಗಿ) ವಿಮರ್ಶಿಸಿ ಬಳಿಕ ನಿನಗೆ ಸರಿಯೆನಿಸಿದ್ದನ್ನು ಮಾಡು" ಎಂದು. ಅಂದರೆ, ಇಲ್ಲಿ ಹೇರಿಕೆಯ ಬಲವಂತವಿಲ್ಲ. ವಿಮರ್ಶೆಯ ಸ್ವಾತಂತ್ರ್ಯವಿದೆ. ಆದರೆ ಪೂರ್ವಾಗ್ರಹವಿಲ್ಲದೆ ಮುಕ್ತಮನದಿಂದ ಅಧ್ಯಯನಮಾಡಿ, ಅದನ್ನು ಆಚರಣೆಗೆ ತಂದು ಪರೀಕ್ಷಿಸಿ ನೋಡಬಹುದು. ಹೀಗಾಗಿ ಇಲ್ಲಿ ಕೇವಲ ತತ್ತ್ವಶ್ರವಣಮಾಡಿದ ಮಾತ್ರದಿಂದ ಉದ್ದೇಶಸಿದ್ಧಿಯಾಯಿತೆಂದು ಭಾವಿಸತಕ್ಕದ್ದಲ್ಲ. ಅದು ಬುದ್ಧಿಗೆ ಅರ್ಥವಾಗಿ ಗ್ರಾಹ್ಯವಾಯಿತಾದರೂ, ಕೇವಲ ಅದನ್ನು ವಾದಕ್ಕಾಗಿ ಬಳಸದೆ, ಆಚರಣೆಗೆ ತಂದಾಗ ನಮ್ಮ ಚಿತ್ತದಲ್ಲಿ ಅದು ಸತ್ಸಂಸ್ಕಾರರೂಪವಾಗಿ ಸಂಚಿತವಾಗುತ್ತದೆ. ಆಗಲೇ, ತತ್ತ್ವಜ್ಞಾನದ ಫಲಸಿದ್ಧಿ. ಅನುಷ್ಠಾನಿಸಿದಾಗ ಉಂಟಾದ ಅನುಭವವೇ ಜ್ಞಾನ. "ಯಸ್ತು ಕ್ರಿಯಾವಾನ್ ಸಃ ಪಂಡಿತಃ"— ಯಾವ ತತ್ತ್ವಜ್ಞನು ಬೋಧಿಸಿದ್ದನ್ನು, ತಿಳಿದದ್ದನ್ನು ತಾನೂ ಆಚರಿಸಿ ಅನುಭವಪಡೆದಿರುವನೋ ಅವನೇ ನಿಜವಾದ ಪಂಡಿತನು.
ಸಾಧನ-ಚತುಷ್ಟಯ
ಕೇವಲ ಬುದ್ಧಿಬಲದಿಂದಲೇ ಗೀತಾನುಸಂಧಾನ, ಅನುಷ್ಠಾನಗಳು ಅಸಾಧ್ಯ. ಕೇವಲ ಅರ್ಥಮಾಡಿಕೊಳ್ಳಬಹುದಷ್ಟೆ ; ವಾದಮಾಡಬಹುದಷ್ಟೆ. ಯಾಕೆಂದರೆ, ಬುದ್ಧಿಯು ಮನಸ್ಸಿನ ಪ್ರಭಾವಕ್ಕೊಳಪಟ್ಟದ್ದು ; ಮನಸ್ಸಿನೊಡಗೂಡಿ ಕೆಲಸ ಮಾಡತಕ್ಕ ಶಕ್ತಿ. ಹೀಗಾಗಿ, ಬುದ್ಧಿಶುದ್ಧಿಗೂ ಮೊದಲು ಮನಶ್ಶುದ್ಧಿಯಾಗಬೇಕು. ಗೀತಾಶಾಸ್ತ್ರಾಭ್ಯಾಸಕ್ಕೆ ಮನಶ್ಶುದ್ಧಿಯು ಇರಲೇಬೇಕಾದ ಪೂರ್ವಸಿದ್ಧತೆ. ಈ ಮನಶ್ಶೋಧನೆಯ ಕ್ರಮವೇ ಸಾಧನ-ಚತುಷ್ಟಯ.
(೧) ನಿತ್ಯಾನಿತ್ಯವಿವೇಕ— ಜಗತ್ತಿನಲ್ಲಿ ನಿತ್ಯವಾದದ್ದು ಯಾವುದು? ಅನಿತ್ಯವಾದದ್ದು ಯಾವುದು? ಎಲ್ಲ ಕಾಲಕ್ಕೂ ಇರುವಂಥ ಗುರು-ಸ್ಥಿರ-ಸಾರ್ವಕಾಲಿಕ ತತ್ತ್ವ ಹಾಗೂ ಲಘು-ಚರ-ಕ್ಷಣಿಕ೭೭೭ ತತ್ತ್ವಗಳ ನಡುವಿನ ತಾರತಮ್ಯವನ್ನು ಹೆಜ್ಜೆಹೆಜ್ಜೆಗೂ ಚಿಂತಿಸಿ ಮನಸ್ಸಿಗೆ ತಂದುಕೊಳ್ಳಬೇಕು.
(೨) ಇಹಾಮುತ್ರಾರ್ಥಫಲಭೋಗವಿರಾಗ— ಇಹಲೋಕದಲ್ಲಾಗಲೀ, ಪರಲೋಕ (ಅಮುತ್ರ) ದಲ್ಲಾಗಲೀ ದೇಹಭೋಗದ ಇಚ್ಛೆಯನ್ನು ಹಂತಹಂತವಾಗಿ ಹೋಗಲಾಡಿಸಿಕೊಳ್ಳುವುದು; ಇಂದ್ರಿಯಭೋಗವಿಚಾರದಲ್ಲಿ ಆಶೆಗೆ ವಶನಾಗದಿರುವುದು.
(೩) ಶಮದಮಾದಿಷಟ್-ಸಂಪತ್ತಿ— ಶಮ, ದಮ, ಉಪರತಿ, ತಿತಿಕ್ಷಾ, ಶ್ರದ್ಧಾ, ಸಮಾಧಾನ— ಇವು ೬.
- ಶಮ— ಬೇರೆ ಚಿಂತೆಯನ್ನಿಟ್ಟುಕೊಳ್ಳದೆ ಮನಸ್, ಚಿತ್ತ, ಬುದ್ಧಿ, ಅಹಂಕಾರಗಳೆಂಬ ಅಂತಃಕರಣ (ಅಂತರಿಂದ್ರಿಯ) ಚತುಷ್ಟಯವನ್ನು ನಿಯಂತ್ರಿಸಿಟ್ಟುಕೊಂಡು, ಮನಸ್ಸನ್ನು ಸ್ವಸ್ಥವಾಗಿರಿಸಿ ಪ್ರ-ಶಮನ (ಪ್ರಶಾಂತ / ಶಮನ) ಗೊಳಿಸುವುದು.
- ದಮ— ಬಾಹ್ಯೇಂದ್ರಿಯಗಳನ್ನು (೫ ಜ್ಞಾನೇಂದ್ರಿಯಗಳು + ೫ ಕರ್ಮೇಂದ್ರಿಯಗಳು) ಹತೋಟಿಯಲ್ಲಿರಿಸಿಕೊಳ್ಳುವುದು.
- ಉಪರತಿ— ಹೊರಪ್ರಪಂಚದ ವ್ಯಾಪಾರಗಳಿಂದ ಮನಸ್ಸನ್ನು ಒಳಕ್ಕೆಳೆದುಕೊಂಡು ಸ್ವಸ್ಥತೆಯಿಂದಿರುವುದು.
- ತಿತಿಕ್ಷೆ— ಲಾಭ-ನಷ್ಟ, ಸುಖ-ದುಃಖ, ರಾಗ-ದ್ವೇಷ, ಶೀತೋಷ್ಣಾದಿ ದ್ವಂದ್ವಗಳನ್ನು ಮನಸ್ಸಿಗೆ ತಂದುಕೊಳ್ಳದೆ ಸಮಸ್ಥಿತಿಯಲ್ಲಿರುವುದು.
- ಶ್ರದ್ಧೆ— ಶಾಸ್ತ್ರವಾಕ್ಯ ಹಾಗೂ ಗುರುಹಿರಿಯರ ಉಪದೇಶಗಳನ್ನು ನಂಬಿಕೆಯಿಂದ ಗ್ರಹಿಸುವುದು.
- ಸಮಾಧಾನ— ಮನಸ್ಸನ್ನು ಹೋದಂತೆ ಬಿಡದೆ ಉದ್ದೇಶಿತ ಲಕ್ಷ್ಯಸ್ಥಾನದಲ್ಲಿ ಅದು ನಿಶ್ಚಿಂತವಾಗಿ ನಿಲ್ಲುವಂತೆ ಮಾಡುವುದು.
(೪) ಮುಮುಕ್ಷುತ್ವ— ಮೋಕ್ಷದಲ್ಲಿ ಕುತೂಹಲ. ("ಮೋಕ್ತುಮ್ ಇಚ್ಛಾ ಮುಮುಕ್ಷಾ"— ಮುಕ್ತಿಹೊಂದುವ, ಪುನರ್ಜನ್ಮಚಕ್ರದಿಂದ ಬಿಡುಗಡೆಹೊಂದುವ ಬಯಕೆಯೇ ಮುಮುಕ್ಷಾ / ಮುಮುಕ್ಷುತ್ವ.) ದುಃಖದ ಸ್ಮರಣೆಯಿಲ್ಲದ, ದ್ವಂದ್ವಗಳಿಗೆ ಮೇಲ್ಪಟ್ಟ, ಬಂಧವಿಮೋಚನಜನಿತವಾದ ಆನಂದಾನುಭವ.
ಒಟ್ಟಿನಲ್ಲಿ ಲೌಕಿಕದೃಷ್ಟಿಗಿಂತ ಮೇಲಿನದಾದ ಆತ್ಮತತ್ತ್ವ ಎಂಬುದೊಂದುಂಟೆಂದು ತಿಳಿದು, ತನ್ನೆಲ್ಲ ವ್ಯವಹಾರಗಳಲ್ಲಿಯೂ ಆ ಪರಮಾರ್ಥವನ್ನೇ ಸರ್ವೋತ್ತಮವಾದದ್ದೆಂದು ಪರಿಗಣಿಸುವ ಪರಮಾರ್ಥದೃಷ್ಟಿಯೇ ಗೀತಾಧ್ಯಯನಶೀಲನಿಗಿರಬೇಕಾದ ಮೊದಲನೆಯ ಪೂರ್ವಸಿದ್ಧತೆ.
ಎರಡು ಮುನ್ನೆಚ್ಚರಿಕೆಗಳು
(೧) ಕಥಾಸಂಗತಿಯಲ್ಲಿ ಅಪನಂಬಿಕೆಯನ್ನು ಅಮಾನತ್ತಿನಲ್ಲಿರಿಸಿ, ಆಗಾಗ ಅದು ಯಾಕೆ (ರಾಮಾಯಣದಲ್ಲಿ ರಾವಣನ ೧೦ ತಲೆ, ಮಾರೀಚನು ಚಿನ್ನದ ಜಿಂಕೆಯಾದದ್ದು, ಇತ್ಯಾದಿ) ಎಂದು ಮುಂತಾಗಿ ಪ್ರಶ್ನಿಸದೆ, ಮಗುವಿನಂತಹ ಮುಗ್ಧಮನದಿಂದ ಗ್ರಹಿಸುವುದು. ಇದರಿಂದ ಮುಂದೆ ಬರಬಹುದಾದ ತತ್ತ್ವವಿಚಾರಗಳ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತದೆ. ಅದಲ್ಲವಾದರೆ ಕಥಾರಸವೂ ಕೆಡುವುದು ; ಕವಿಯ ಕಾವ್ಯದೃಷ್ಟಿಗೂ ಅಪಚಾರವಾಗಿ, ತತ್ತ್ವಭಾಗವೂ ನಮಗೆ ಅಲಭ್ಯವಾಗುವುದು.
(೨) ವಾಕ್ಯಧೋರಣೆಯಲ್ಲಿ ನೇರ ಅರ್ಥಕ್ಕಿಂತ ಸೂಚ್ಯಾರ್ಥ / ಭಾವಾರ್ಥ / ತಾತ್ಪರ್ಯ / ಧ್ವನಿತಾರ್ಥ / ಸಾಂದರ್ಭಿಕ ಅರ್ಥವನ್ನು ಸ್ವೀಕರಿಸುವುದು. ಉದಾ— ಊಟದ ವೇಳೆಯಲ್ಲಿ "ಸೈಂಧವವನ್ನು ತಾ" ಎಂದರೆ ಕುದುರೆಯೆಂದರ್ಥೈಸದೆ, ಉಪ್ಪೆಂದೇ ತಿಳಿಯಬೇಕು. ಇದನ್ನು ಶಾಸ್ತ್ರದಲ್ಲಿ "ಲಕ್ಷಣಾ-ವೃತ್ತಿ" ಎನ್ನುವರು. ಮಾತಿಗಿಂತ ಮಾತನಾಡಿದವನ ಮನೋಗತ / ಆಶಯವೇ ಮುಖ್ಯ. ಪುನರುಕ್ತಿಯಿದ್ದಲ್ಲಿ ಅದರ ಹೆಚ್ಚಿನ ಮಹತ್ತ್ವವನ್ನು ತಿಳಿಯಬೇಕು.
ಕೇವಲ ಪಾರಾಯಣ ಸಾಲದು
ಗೀತೆಯನ್ನು ಕೇವಲ ಓದಿದ್ದರಿಂದ / ಕೇಳಿದ್ದರಿಂದ "ನಾನು ಗೀತೆಯನ್ನೋದಿರುವೆನು / ಕೇಳಿರುವೆನು" ಎಂಬ ಅಹಂ ಮಾತ್ರ ಬರಬಹುದೇ ವಿನಾ ಬೇರೇನೂ ಪ್ರಯೋಜನವಾಗದು. ಅಲ್ಲದೆ, ಅಹಂಕಾರವು ತೊಂದರೆಯನ್ನೇ ಉಂಟುಮಾಡುವುದು. ಆದ್ದರಿಂದ, ಪಾರಾಯಣದ ಸಫಲತೆಯು ಅರ್ಥಾನುಸಂಧಾನದಿಂದ. ಇದಕ್ಕೆ ಮೂರು ಹಂತಗಳು— "ಶ್ರೋತವ್ಯೋ ಮನ್ತವ್ಯೋ ನಿದಿಧ್ಯಾಸಿತವ್ಯಃ |...ತರತಿ ಶೋಕಮಾತ್ಮವಿತ್ |"— ಶ್ರವಣ, ಮನನ, ನಿದಿಧ್ಯಾಸನ. ಶ್ರವಣವೆಂದರೆ ಗಮನವಿಟ್ಟು, ಶ್ರದ್ಧೆಯಿಂದ, ಮನವಿಟ್ಟು ಕೇಳುವುದು (ಬರಿಯ Hearing ಅಲ್ಲ, ಆದರೆ Listening). ಮನನವೆಂದರೆ ಸುಸಂಸ್ಕೃತ ಮನಸ್ಸೂ, ಸುಶಿಕ್ಷಿತ ಬುದ್ಧಿಯೂ ಒಂದುಗೂಡಿ ಗ್ರಂಥಾರ್ಥವನ್ನು ವಿಚಾರಮಾಡುವುದು. ನಿದಿಧ್ಯಾಸನವೆಂದರೆ ಮನನದಿಂದ ಗೊತ್ತಾದ ಸಿದ್ಧಾಂತವನ್ನು ನಡವಳಿಕೆಯಲ್ಲಿ ಯಾವಾಗಲೂ ಜಾಗರೂಕತೆಯಿಂದ ಗಮನದಲ್ಲಿಟ್ಟುಕೊಂಡು ಅನುಸರಿಸುವುದು ("ಪುನಃ ಪುನರತಿಶಯೇನ ವಾ ನಿಧ್ಯಾಯತೀತಿ"— ಮತ್ತೆ ಮತ್ತೆ ಅಥವಾ ಬಹಳವಾಗಿ / ಅತಿಶಯವಾಗಿ, ಚೆನ್ನಾಗಿ ಧ್ಯಾನಿಸುವುದು / ಗಮನಿಸುವುದು).
ಇದರಲ್ಲಿ ಶ್ರವಣವು ಸ್ವಲ್ಪ ಸುಲಭ. ಮಿಕ್ಕೆರಡೂ ಕಷ್ಟ. ಆ ಎರಡರಲ್ಲೂ ಮನನವು ಸರಿಯಾದರೆ ನಿದಿಧ್ಯಾಸನವೂ ಕಷ್ಟವಾಗದು. ಶ್ರವಣವು ಸಾರ್ಥಕವಾಗಬೇಕಾದರೆ ಮನನದ ದಾರಿಯನ್ನು ಹಿಡಿಯಬೇಕು. ಬೃಹದಾರಣ್ಯಕೋಪನಿಷತ್ತಿನಲ್ಲಿ ಗಾರ್ಗಿಯು ಯಾಜ್ಞವಲ್ಕ್ಯಮಹರ್ಷಿಯನ್ನು ಮತ್ತೆ ಮತ್ತೆ ಪ್ರಶ್ನಿಸಿದಾಗ ಅವರು "ಮಾऽತಿಪ್ರಾಕ್ಷೀಃ"— "ಅತಿಯಾಗಿ ಪ್ರಶ್ನಿಸಬೇಡ" ಎನ್ನುತ್ತಾರೆ. ಪ್ರಶ್ನೆಗಳಿಗೂ ಮಿತಿಯಿದೆ. ಯಾಕೆಂದರೆ, ಆ ಮಿತಿ ಮೀರಿದ ಮೇಲೆ ಇರುವುದು ಮಾತುಗಳಿಗೆ ನಿಲುಕದ, ಕೇವಲ ಅನುಭವವೇದ್ಯವಾದ ವಿಚಾರ. ಅದಕ್ಕೆ ಮನನ-ಅನುಸಂಧಾನಗಳೇ ದಾರಿ. ಮನನವು ಮುಖ್ಯವಾಗಿ ಬುದ್ಧಿಯ ಕೆಲಸ. ಅದು ಜಾಗೃತಬುದ್ಧಿಯ ವ್ಯಾಪಾರವನ್ನು ಅಪೇಕ್ಷಿಸುತ್ತದೆ. (ವ್ಯಾಪಾರವೆಂದರೆ ವ್ಯವಹಾರ, ವಹಿವಾಟು, ಕೆಲಸ)
ಧರ್ಮದ ಸ್ವರೂಪ
ಧರ್ಮದಲ್ಲಿ ಮುಖ್ಯವಾದ ಲಕ್ಷಣಗುಣಗಳು ೪— ಭಗವನ್ಮಹಿಮಾ-ಸ್ಮರಣೆ, ಸ್ವಾಹಂಕಾರ-ವಿಸರ್ಜನೆ, ಮಮಕಾರ-ಕೃಶೀಕರಣ ಮತ್ತು ಸ್ವ-ಗುಣ-ಶಕ್ತಿಗಳ ಪರಾರ್ಥ-ವಿನಿಯೋಗ. ಈ ಧರ್ಮವು ಕುಟುಂಬಧರ್ಮ, ಕುಲಧರ್ಮ, ಜನಪದಧರ್ಮ, ರಾಷ್ಟ್ರಧರ್ಮ, ಮಾನವಧರ್ಮ, ವಿಶ್ವಧರ್ಮ, ವೃತ್ತಿಧರ್ಮ, ಪ್ರವೃತ್ತಿಧರ್ಮ, ನಿವೃತ್ತಿಧರ್ಮ, ವರ್ಣಧರ್ಮ, ಆಶ್ರಮಧರ್ಮ, ವರ್ಣಾಶ್ರಮಧರ್ಮ, ಕಾಲಧರ್ಮ, ಯುಗಧರ್ಮ, ಸಾಮಾನ್ಯಧರ್ಮ, ವಿಶೇಷಧರ್ಮ, ನಿತ್ಯಧರ್ಮ, ನೈಮಿತ್ತಿಕಧರ್ಮ— ಎಂದು ಮುಂತಾಗಿ ಬಹುರೂಪವುಳ್ಳದ್ದು.
ಯಜ್ಞ, ದಾನ, ತಪಸ್ಸುಗಳೇ ಭಗವದನುಭವಸಾಧಕಗಳು. ಯಜ್ಞವೆಂದರೆ ದೇವಪೂಜೆ. ದಾನವೆಂದರೆ ಲೋಕಸೇವೆ. ತಪಸ್ಸೆಂದರೆ ಆತ್ಮಶಿಕ್ಷಣ. ಈ ಮೂರೂ ಪ್ರತಿಫಲಾಪೇಕ್ಷೆಯಿಲ್ಲದೆ ನಡೆದಾಗ ಜೀವೋದ್ಧಾರದ ಮಾರ್ಗಗಳು. ಶಂಕರಾಚಾರ್ಯರ ಪ್ರಕಾರ, ವೇದೋಕ್ತ ಧರ್ಮವು ಪ್ರವೃತ್ತಿ-ನಿವೃತ್ತಿಪರವೆಂದು ೨ ವಿಧ. ಜಗತ್ತಿನ ಸುಸ್ಥಿತಿಗೆ ಕಾರಣವಾದ, ಸಕಲ ಜೀವರ ಪ್ರತ್ಯಕ್ಷವಾದ ಲೌಕಿಕ ಅಭ್ಯುದಯ ಹಾಗೂ ಪ್ರತ್ಯಕ್ಷವಲ್ಲದ ಪಾರಲೌಕಿಕ ನಿಃಶ್ರೇಯಸ್ಸಿಗೆ ಕಾರಣವಾದ ಯಾವ ಧರ್ಮವಿದೆಯೋ, ಅದು ಶ್ರೇಯಃಕಾಂಕ್ಷಿಗಳಾದ ಎಲ್ಲರಿಂದಲೂ ಅನುಷ್ಠಾನಿಸಲ್ಪಡತಕ್ಕದ್ದು...ಅಭ್ಯುದಯಕ್ಕಾಗಿರುವ ಆಯಾ ವರ್ಣಾಶ್ರಮವಿಹಿತವಾದ ಯಾವ ಪ್ರವೃತ್ತಿಧರ್ಮವಿರುವುದೋ ಅದು ದೈವತ್ವಕ್ಕೇರಿಸುವುದರೊಂದಿಗೆ, ಈಶ್ವರಾರ್ಪಣಬುದ್ಧಿಯಿಂದ ಫಲವನ್ನು ಬಯಸದೆಯೇ ಆಚರಿಸಲ್ಪಟ್ಟಾಗ ಸತ್ತ್ವಶುದ್ಧಿಯನ್ನುಂಟುಮಾಡುವುದು. ಇದು ರಾಮಾನುಜಾಚಾರ್ಯರ ಹಾಗೂ ಮಧ್ವಾಚಾರ್ಯರ ಅಭಿಪ್ರಾಯವೂ ಹೌದು.
ಪರಿಪೂರ್ಣಜೀವನಯೋಗ
ಹೀಗೆ, ದೈವತೋಪಾಸನೆ, ಲೋಕಜೀವನ ಹಾಗೂ ಆತ್ಮಸ್ವರೂಪಚಿಂತನ— ಈ ತ್ರಿವಿಧ ಸಾಧನೆಗಳು ಪರಸ್ಪರ ಸಂಬಂಧಿಸಿದವೆಂದೂ, ಒಂದೊಂದಕ್ಕೂ ಸಮ್ಯಗ್ಜೀವನದಲ್ಲಿ ಅದರದೇ ಆದ ಸ್ಥಾನವುಂಟೆಂದೂ ತೋರಿಸುವ ಭಗವದ್ಗೀತೆಯು ಕೇವಲ ನಾಸ್ತಿಕರಲ್ಲದ ಸಮಸ್ತ ಮನುಷ್ಯಲೋಕಕ್ಕೂ ಒಂದು ಸಮಗ್ರ ಸಮ್ಯಗ್ಜೀವನದರ್ಶನವನ್ನು ದೊರಕಿಸುವುದು ಗೀತೆಯಿಂದ ನಮಗೆ ಆಗಿರುವ ಪರಮೋಪಕಾರ.
ಶ್ರದ್ಧಾವಾನ್ ಲಭತೇ ಜ್ಞಾನಮ್ ||
ಯೋ ಯಚ್ಛ್ರದ್ಧಃ ಸ ಏವ ಸಃ ||
ಶ್ರದ್ಧಾ ಹಿ ಪರಮಾ ಗತಿಃ ||
ಶ್ರದ್ಧೆಯಿಲ್ಲದವನಿಗೆ ಬುದ್ಧಿಭ್ರಾಂತಿ ತಪ್ಪದು. "ಸಂಶಯಾತ್ಮಾ ವಿನಶ್ಯತಿ"— ಸದಾ ಸಂದೇಹಬುದ್ಧಿಯಿದ್ದವನು ವಿನಾಶಹೊಂದುತ್ತಾನೆ. ಗೀತೆಯು ಸರ್ವಾಂಶಪರಿಪೂರ್ಣವೂ ಸರ್ವಸಮಂಜಸವೂ ಸರ್ವಸಮರಸವೂ ಆದ ಜಗತ್-ಜೀವ-ಈಶ್ವರ-ತತ್ತ್ವನಿರೂಪಣೆ. ಅದರ ಬಳಿ ನಾವು ಹೋಗುವಾಗ ಭಕ್ತಿಶ್ರದ್ಧೆಗಳಿಲ್ಲದವರಾದರೆ ಮೈಲಿಗೆಯಲ್ಲಿ ದೇವಸ್ಥಾನಕ್ಕೆ ಹೋದಂತೆ ; ಅದು ವ್ಯರ್ಥಪ್ರಯಾಸವೇ ಸರಿ.
ಶ್ರದ್ಧೆಯುಳ್ಳವನಿಗೆ ಗೀತೆಯಿಂದ ಲಭಿಸುವ ಉಪದೇಶವನ್ನು ಸಂಗ್ರಹಿಸಿ ಹೇಳುವುದಾದರೆ ಅದನ್ನು ಈಶೋಪನಿಷತ್ತಿನ ಈ ವಾಕ್ಯದಲ್ಲಿ ಹೇಳಬಹುದು—
"ಕುರ್ವನ್ನೇವೇಹ ಕರ್ಮಾಣಿ
ಜಿಜೀವಿಷೇಚ್ಛತಗ್ಂ ಸಮಾಃ ||"
"ಕರ್ತವ್ಯಕರ್ಮವನ್ನು ಮಾಡುತ್ತಾ ನೂರಾರು ವರ್ಷ ಬದುಕಬಯಸು."
ಜೀವನ ಕೆಟ್ಟದ್ದಲ್ಲ. ಅದರ ವಿಷಯದಲ್ಲಿ ಜಿಗುಪ್ಸೆಪಡತಕ್ಕದ್ದಲ್ಲ. ಅದರಲ್ಲಿರುವ ಕಷ್ಟಗಳನ್ನೆದುರಿಸಿ ಪೌರುಷದಿಂದ ಹೋರಾಡತಕ್ಕದ್ದು. ಇದೇ ಗೀತೆಯ ಉಪದೇಶ.
ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ
ನೈತತ್ ತ್ವಯ್ಯುಪಪದ್ಯತೇ |
ಕ್ಷುದ್ರಂ ಹೃದಯದೌರ್ಬಲ್ಯಂ
ತ್ಯಕ್ತ್ವೋತ್ತಿಷ್ಠ ಪರಂತಪ ||
ಎಲೈ ಪಾರ್ಥನೆ! ಪೌರುಷವನ್ನು ಮರೆತು ಹೇಡಿಯಾಗಬೇಡ. ಇದು ನಿನಗೆ ತರವಲ್ಲ. ಎಲೈ ಶತ್ರುಗಳ ಎದೆಗೆಡಿಸಬಲ್ಲ ವೀರನೇ! ಕ್ಷುಲ್ಲಕವಾದ ಹೃದಯದೌರ್ಬಲ್ಯವನ್ನು ಬಿಟ್ಟು ಎದ್ದುನಿಲ್ಲು.
ಇದು ಗೀತೋಪದೇಶದ ಮುಖ್ಯ ಹಾಗೂ ಪ್ರಾಸಂಗಿಕ ಉದ್ದೇಶ.
ಮಾನುಷ್ಯಲೀಲಾರಸಿಕನತಿಮಾನುಷವೈಭವಂ |
ಮಾನುಷಾಸ್ಪೃಷ್ಟಚಿತ್ತೇಜಂ ಕೃಷ್ಣನಿರ್ಕೆಮ್ಮ ಚಿತ್ತದೊಳ್ ||
ಉಪಸಂಹಾರದಿಂದ…
ವಿಶ್ವಮಾನವ ಧರ್ಮ
ಗೀತೆಯಲ್ಲಿ ಬರುವ ಸರ್ವಮನುಷ್ಯಸಾಮಾನ್ಯವಾದ ಧರ್ಮಗಳು ಹತ್ತು ಅಂಶಗಳದ್ದಾಗಿ ತೋರುತ್ತದೆ—
(೧) ಆತ್ಮಪಾರಮ್ಯದ ಅಂಗೀಕಾರ
(೨) ಈಶ್ವರಾಧಿಕಾರದ ಅಂಗೀಕಾರ
(೩) ಧರ್ಮಾಂಗೀಕಾರ
(೪) ಭೋಗೇಚ್ಛಾಪರಿಮಿತಿ
(೫) ಲೋಕಸಂಸ್ಥಿತಿಕರ್ತವ್ಯತೆ
(೬) ಆತ್ಮೌಪಮ್ಯನೀತಿ— ದಾನ
(೭) ನಿತ್ಯಜೀವನಸಂಸ್ಕಾರ— ಯಜ್ಞ
(೮) ತತ್ತ್ವಚಿಂತನಾಭ್ಯಾಸ— ತಪಸ್ಸು
(೯) ಶರಣಾಗತಿ
(೧೦) ಭೋಗಕ್ಕಿಂತ ಶಾಂತಿಯ ಉತ್ಕೃಷ್ಟತೆ
(೧) ಆತ್ಮಪಾರಮ್ಯ—
ಅಚ್ಛೇದ್ಯೋऽಯಮದಾಹ್ಯೋಯಮ್
ಅಕ್ಲೇದ್ಯೋऽಶೋಷ್ಯ ಏವ ಚ |
ನಿತ್ಯಃ ಸರ್ವಗತಃ ಸ್ಥಾಣುಃ
ಅಚಲೋऽಯಂ ಸನಾತನಃ || ೨-೨೪ ||
ಅವ್ಯಕ್ತೋऽಯಮಚಿನ್ತ್ಯೋऽಯಮ್
ಅವಿಕಾರ್ಯೋऽಯಮುಚ್ಯತೇ |
ತಸ್ಮಾದೇವಂ ವಿದಿತ್ವೈನಂ
ನಾನುಶೋಚಿತುಮರ್ಹಸಿ || ೨-೨೫ ||
ದೇಹೀ ನಿತ್ಯಮವಧ್ಯೋऽಯಂ
ದೇಹೇ ಸರ್ವಸ್ಯ ಭಾರತ |
ತಸ್ಮಾತ್ಸರ್ವಾಣಿ ಭೂತಾನಿ
ನ ತ್ವಂ ಶೋಚಿತುಮರ್ಹತಿ || ೨-೩೦ ||
(೨) ಈಶ್ವರಾಧಿಕಾರದ ಅಂಗೀಕಾರ—
ಕವಿಂ ಪುರಾಣಮನುಶಾಸಿತಾರಮ್
ಅಣೋರಣೀಯಾಂಸಮನುಸ್ಮರೇದ್ಯಃ |
ಸರ್ವಸ್ಯ ಧಾತಾರಮಚಿನ್ತ್ಯರೂಪಮ್
ಆದಿತ್ಯವರ್ಣಂ ತಮಸಃ ಪರಸ್ತಾತ್ || ೮-೯ ||
ಗತಿರ್ಭರ್ತಾ ಪ್ರಭುಃ ಸಾಕ್ಷೀ
ನಿವಾಸಃ ಶರಣಂ ಸುಹೃತ್ |
ಪ್ರಭವಃ ಪ್ರಲಯಃ ಸ್ಥಾನಂ
ನಿಧಾನಂ ಬೀಜಮವ್ಯಯಮ್ || ೯-೧೮ ||
ಸರ್ವತಃ ಪಾಣಿಪಾದಂ ತತ್
ಸರ್ವತೋऽಕ್ಷಿಶಿರೋಮುಖಮ್ |
ಸರ್ವತಃ ಶ್ರುತಿಮಲ್ಲೋಕೇ
ಸರ್ವಮಾವೃತ್ಯ ತಿಷ್ಠತಿ || ೧೩-೧೩ ||
ಅನನ್ಯಾಶ್ಚಿನ್ತಯನ್ತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ || ೯-೨೨ ||
(೩) ಧರ್ಮತತ್ತ್ವದ ಅಂಗೀಕಾರ—
ತ್ವಮಕ್ಷರಂ ಪರಮಂ ವೇದಿತವ್ಯಂ
ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ |
ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ
ಸನಾತನಸ್ತ್ವಂ ಪುರುಷೋ ಮತೋ ಮೇ || ೧೧-೧೮ ||
ಯೇ ಯಥಾ ಮಾಂ ಪ್ರಪದ್ಯನ್ತೇ ತಾಂಸ್ತಥೈವ ಭಜಾಮ್ಯಹಮ್ |
ಮಮ ವರ್ತ್ಮಾನುವರ್ತನ್ತೇ ಮನುಷ್ಯಾಃ ಪಾರ್ಥ ಸರ್ವಶಃ || ೪-೧೧ ||
ಬ್ರಹ್ಮಣೋ ಹಿ ಪ್ರತಿಷ್ಠಾऽಹಮಮೃತಸ್ಯಾವ್ಯಯಸ್ಯ ಚ |
ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾನ್ತಿಕಸ್ಯ ಚ || ೧೪-೨೭ ||
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾऽऽತ್ಮಾನಂ ಸೃಜಾಮ್ಯಹಮ್ || ೪-೭ ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ |
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ || ೪-೮ ||
(೪) ಭೋಗೇಚ್ಛಾಪರಿಮಿತಿ—
ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ |
ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್ || ೩-೩೭ ||
{ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ತು |
ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ ||(— ಕಠೋಪನಿಷತ್)}
ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ |
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋऽಭಿಜಾಯತೇ || ೨-೬೨ ||
ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿವಿಭ್ರಮಃ |
ಸ್ಮೃತಿಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ || ೨-೬೩ ||
ರಾಗದ್ವೇಷವಿಯುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್ |
ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ || ೨-೬೪ ||
ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ |
ನ ಚಾಭಾವಯತಃ ಶಾಂತಿರಶಾಂತಸ್ಯ ಕುತಃ ಸುಖಮ್ || ೨-೬೬ ||
(೫) ಲೋಕಸಂಸ್ಥಿತಿ—
ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ |
ಲೋಕಸಂಗ್ರಹಮೇವಾಪಿ ಸಂಪಶ್ಯನ್ ಕರ್ತುಮರ್ಹಸಿ || ೩-೨೦ ||
ಲಭಂತೇ ಬ್ರಹ್ಮನಿರ್ವಾಣಮೃಷಯಃ ಕ್ಷೀಣಕಲ್ಮಷಾಃ |
ಛಿನ್ನದ್ವೈಧಾ ಯತಾತ್ಮಾನಃ ಸರ್ವಭೂತಹಿತೇ ರತಾಃ || ೫-೨೫ ||
ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವನ್ತಿ ಭಾರತ |
ಕುರ್ಯಾದ್ವಿದ್ವಾಂಸ್ತಥಾऽಸಕ್ತಶ್ಚಿಕೀರ್ಷುರ್ಲೋಕಸಂಗ್ರಹಮ್ || ೩-೨೫ ||
(೬) ಆತ್ಮೌಪಮ್ಯ—
ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾऽऽತ್ಮನಿ |
ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ || ೬-೨೯ ||
(೭) ನಿತ್ಯಜೀವನಸಂಸ್ಕಾರ(ಯಜ್ಞ)—
ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ |
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್ || ೧೮-೫ ||
ಏತಾನ್ಯಪಿ ತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ |
ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಮ್ || ೧೮-೬ ||
ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್ |
ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿನ್ದತಿ ಮಾನವಃ || ೧೮-೪೬ ||
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ |
ಸ್ವಭಾವನಿಯತಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್ || ೧೮-೪೭ ||
ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್ |
ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ || ೧೮-೪೮ ||
ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ |
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ || ೩-೫ ||
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್ |
ವಿಮುಚ್ಯ ನಿರ್ಮಮಃ ಶಾನ್ತೋ ಬ್ರಹ್ಮಭೂಯಾಯ ಕಲ್ಪತೇ || ೧೮-೫೩ ||
ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ |
ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಮ್ || ೧೮-೫೪ ||
ಭಕ್ತ್ಯಾ ಮಾಮಭಿಜಾನಾತಿ ಯಾವಾನ್ ಯಶ್ಚಾಸ್ಮಿ ತತ್ತ್ವತಃ |
ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ ತದನನ್ತರಮ್ || ೧೮-೫೫ ||
…ಸದಾ ಕುರ್ವಾಣೋ ಮದ್ವ್ಯಪಾಶ್ರಯಃ...ಶಾಶ್ವತಂ ಪದಮವ್ಯಯಮ್ || ೧೮-೫೬ ||
...ಮಚ್ಚಿತ್ತಃ ಸತತಂ ಭವ || ೧೮-೫೭ ||
...ಸರ್ವದುರ್ಗಾಣಿ ಮತ್ಪ್ರಸಾದಾತ್ ತರಿಷ್ಯಸಿ |...
…ಅಹಂಕಾರಾತ್ ನ ಶ್ರೋಷ್ಯಸಿ ವಿನಂಕ್ಷ್ಯಸಿ || (೧೮-೫೮)
...ಸ್ವಭಾವಜೇನ... ನಿಬದ್ಧಃ ಸ್ವೇನ ಕರ್ಮಣಾ |
ಕರ್ತುಂ ನೇಚ್ಛಸಿ ಯನ್ಮೋಹಾತ್ ಕರಿಷ್ಯಸ್ಯವಶೋऽಪಿ ತತ್ || ೬೦ ||
(೮) ತತ್ತ್ವಧ್ಯಾನ (ತಪಸ್ಸು)—
ಯೋಗೀ ಯುಂಜೀತ ಸತತಮಾತ್ಮಾನಂ ರಹಸಿ ಸ್ಥಿತಃ || (೬-೧೦)
ಆತ್ಮಸಂಸ್ಥಂ ಮನಃ ಕೃತ್ವಾ ನ ಕಿಂಚಿದಪಿ ಚಿನ್ತಯೇತ್ || (೬-೨೫)
(೯) ಶರಣಾಗತಿ—
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾಮೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ || (೯-೩೪)
(ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋऽಸಿ ಮೇ || ೧೮-೬೫)
ಗತಿರ್ಭರ್ತಾ ಪ್ರಭುಸ್ಸಾಕ್ಷೀ ನಿವಾಸಃ ಶರಣಂ ಸುಹೃತ್... | (೯-೧೮)
ಅನನ್ಯಾಶ್ಚಿನ್ತಯನ್ತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ || (೯-೨೨)
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ || (೧೮-೬೬)
ವಾಲ್ಮೀಕಿರಾಮಾಯಣದ ಯುದ್ಧಕಾಂಡದಲ್ಲಿ (೧೮-೩೩) ರಾಮನೂ ಹೀಗೆಯೇ ಹೇಳಿದ್ದಾನೆ—
ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ |
ಅಭಯಂ ಸರ್ವಭೂತೇಭ್ಯೋ ದದಾಮ್ಯೇತದ್ವ್ರತಂ ಮಮ ||
"ನನ್ನನ್ನೂ ನಾನು ನಂಬಿಲ್ಲ, ನಿನ್ನನ್ನೊಬ್ಬನನ್ನೇ ನಂಬಿದ್ದೇನೆ"— ಎಂಬ ಪ್ರಪತ್ತಿಭಾವವು ಭಕ್ತಿಯ ಪರಿಪೂರ್ಣವೂ, ಪರಿಶುದ್ಧವೂ ಆದ ರೂಪ. ಸಂನ್ಯಾಸ ಎಂದರೂ ಇದೇ. ಅಹಂಕಾರದ ನಿರ್ಮೂಲನ.
(೧೦) ಶಾಂತಿಪರಮಾರ್ಥತೆ (ಭೋಗಕ್ಕಿಂತ ಶಾಂತಿಯ ಉತ್ಕೃಷ್ಟತೆ)—
ಅಶಾನ್ತಸ್ಯ ಕುತಃ ಸುಖಮ್? (೨-೬೬)
ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಃಸ್ಪೃಹಃ |
ನಿರ್ಮಮೋ ನಿರಹಂಕಾರಃ ಸ ಶಾನ್ತಿಮಧಿಗಚ್ಛತಿ || (೨-೭೧)
ಏಷಾ ಬ್ರಾಹ್ಮೀಸ್ಥಿತಿಃ ಪಾರ್ಥ…|| (೨-೭೨)
ಯಸ್ಮಾನ್ನೋದ್ವಿಜತೇ ಲೋಕಃ | ಲೋಕಾನ್ನೋದ್ವಿಜತೇ ಚ ಯಃ || (೧೨-೧೫)
ಅಂತಹ ಬ್ರಹ್ಮಭಾವದವನಿಗೆ ತಾನು ಇತರರು, ಸುಖ-ದುಃಖ ಮುಂತಾದ ಯಾವ ಭೇದಗಳೂ ಇಲ್ಲ. ಹೀಗಾಗಿ ಯಾರಲ್ಲೂ ದ್ವೇಷವಿಲ್ಲ, ಭಯವಿಲ್ಲ. ಯಾಕೆಂದರೆ ಎಲ್ಲ ದೇಹಗಳೊಳಗಿರುವವನೂ ನನ್ನೊಳಗಿರುವವನೂ ಒಬ್ಬನೇ ಎಂಬ ಭಾವವಿರುವುದರಿಂದ. "ದ್ವಿತೀಯಾದ್ವೈ ಭಯಂ ಭವತಿ"— ಎರಡನೆಯವನೊಬ್ಬನಿದ್ದಾನೆಂಬ ಭಾವವಿದ್ದರೆ ಮಾತ್ರ ತಾನೇ ಭಯಕ್ಕೆ ಅವಕಾಶ? ತಾನೇ ಎಲ್ಲವೂ ಹಾಗೂ ಎಲ್ಲವೂ (ತನ್ನಂತೆಯೇ) ತಾನೇ ಎಂಬ ಪೂರ್ಣಾದ್ವೈತಭಾವವೇ ಚರಮಸ್ಥಿತಿ, ನಿತ್ಯಶಾಂತಸ್ಥಿತಿ.
ಒಂದೆರಡು ದಿನಗಳಲ್ಲಿ ಸಾಧ್ಯವಿಲ್ಲ ಈ ಬ್ರಾಹ್ಮೀಸ್ಥಿತಿಯನ್ನು ಪಡೆಯಲು. ಆದರೆ, ಸಂತತವಾಗಿ ನಮ್ಮ ಉದ್ದೇಶದಲ್ಲಿರಬೇಕಾದದ್ದು ಅದು. ಆ ಸ್ಥಿತಿಯನ್ನು ಪಡೆದಿರುವವನು ಅಜಾತಶತ್ರುವಾಗುತ್ತಾನೆ. ಅವನಿಗೆ ಲೋಕವೇ ಕ್ರೀಡಾರಂಗವಾಗುತ್ತದೆ ; ಜೀವನವ್ಯಾಪಾರವೆಲ್ಲ ಒಂದು ವಿನೋದವಾಗುತ್ತದೆ.
ಈ ಮೇಲಿನ ದಶನಿಷ್ಠೆಗಳ ತಾತ್ಪರ್ಯವು ಜೀವಸಂಸ್ಕಾರ ಹಾಗೂ ಜೀವೋನ್ನತಿ. ಅದು ಪರಮಾತ್ಮ ಸಂದರ್ಶನಕ್ಕೆ ಬೇಕಾದ ಪೂರ್ವಸಿದ್ಧತೆ. ಈ ನಿಷ್ಠೆಗಳನ್ನು ಸಂತತವಾಗಿ ಅಭ್ಯಾಸಮಾಡಿದವನಿಗೆ ಅವನವನ ಪ್ರಾಚೀನಭಾಗ್ಯದಂತೆ, ಅವನವನ ಅಭ್ಯಾಸಬಲದಂತೆ, ಭಗವತ್ಸಾನ್ನಿಧ್ಯವು ಸಮೀಪವಾಗುತ್ತದೆ. ಭಗವದ್ಗೀತೆ ಪರವಸ್ತುವನ್ನು ಪಡೆಯಲು ಉಪಾಯ ತೋರಿಸೀತೇ ಹೊರತು ಪರವಸ್ತುವನ್ನೇ ತಂದು ನಮ್ಮ ಕೈಯಲ್ಲಿರಿಸಲಾರದು. ವಸ್ತುಪ್ರಾಪ್ತಿ ಅಪೇಕ್ಷಕನ ಯೋಗ್ಯತೆಗೆ ತಕ್ಕಂತೆ ಆಗತಕ್ಕದ್ದು.
Comments
Post a Comment