विवेकचूडामणिः १ / ವಿವೇಕಚೂಡಾಮಣಿ ೧

॥ हरिः ॐ ॥
विवेकचूडामणिः १
(शङ्कर-भगवत्पाद- विरचितः / विरचिता)
|| ಹರಿಃ ಓಮ್ ||
ವಿವೇಕಚೂಡಾಮಣಿ ೧
(ಶಂಕರ-ಭಗವತ್ಪಾದ-ವಿರಚಿತ)
१) समर्पणम् / मङ्गलाचरणम्

सर्व-वेदान्त-सिद्धान्त-गोचरं तमगोचरम् ।
गोविन्दं परमानन्दं सद्गुरुं प्रणतोऽस्म्यहम् ॥ १ ॥
(पंचमं लघु सर्वत्र सप्तमं द्विचतुर्थयोः |
गुरुषष्ठं च पादानां चतुर्णां स्याद्-अनुष्टुभि ||)


೧) ಸಮರ್ಪಣೆ / ಮಂಗಲಾಚರಣೆ

ಸರ್ವ-ವೇದಾನ್ತ-ಸಿದ್ಧಾನ್ತ-ಗೋಚರಂ ತಮಗೋಚರಮ್ ।
ಗೋವಿನ್ದಂ ಪರಮಾನನ್ದಂ ಸದ್ಗುರುಂ ಪ್ರಣತೋಽಸ್ಮ್ಯಹಮ್ ॥ ೧ ॥
(ಪಂಚಮಂ ಲಘು ಸರ್ವತ್ರ ಸಪ್ತಮಂ ದ್ವಿಚತುರ್ಥಯೋಃ |
ಗುರುಷಷ್ಠಂ ಚ ಪಾದಾನಾಂ ಚತುರ್ಣಾಂ ಸ್ಯಾದ್-ಅನುಷ್ಟುಭಿ ||)

ಸಮಸ್ತ ವೇದರಾಶಿಯ ಸಾರಸ್ವರೂಪವೂ ಅಂತಿಮಭಾಗವೂ ಆಗಿ ವೇದಾಂತವೆನಿಸಿದ ಉಪನಿಷತ್ತುಗಳ ತಾತ್ಪರ್ಯ (ಪ್ರತಿಪಾದಿತ ಸಿದ್ಧಾಂತ)ಕ್ಕೆ ಮಾತ್ರ ಗೋಚರಿಸುವವನೂ (ನಿಲುಕುವವನೂ, ವಿಷಯವಾಗಿರುವವನೂ), ಮಾತು-ಮನಸ್ಸುಗಳಿಗೆ ಅಗೋಚರನೂ (" यतो वाचो निवर्तन्ते अप्राप्य मनसा सह "— श्रुतिः), ಪರಮಾನಂದ (ಬ್ರಹ್ಮಾನಂದ, ಆತ್ಮಾನಂದ, ಶ್ರೇಷ್ಠವೂ ನಿತ್ಯವೂ ಶಾಶ್ವತವೂ ಆದ ಆನಂದ) ಸ್ವರೂಪನೂ, ಸದ್ಗುರುವೂ (ಜಗದ್ಗುರುವೂ) ಆದ ಗೋವಿಂದ ಭಗವತ್ಪಾದರನ್ನು ( /ವಿಷ್ಣುವನ್ನು) ಪ್ರಣಾಮ ಮಾಡಿದವನಾಗಿದ್ದೇನೆ.

२) आध्यात्मिकजीवनस्य माहात्म्यम्

जन्तूनां नरजन्म दुर्लभमतः पुंस्त्वं ततो विप्रता
तस्माद्वैदिकधर्ममार्गपरता विद्वत्त्वमस्मात् परम् ।
आत्मानात्मविवेचनं स्वनुभवो ब्रह्मात्मना संस्थितिः
मुक्तिर्नो शतकोटिजन्मसुकृतैः पुण्यैर्विना लभ्यते ॥ २ ॥
(सूर्याश्वैर्मसजस्ततास्सगुरवः / सूर्याश्वैर्यदि मस्सजौ सततगाः शार्दूलविक्रीडितम्)

೨) ಆಧ್ಯಾತ್ಮಿಕಜೀವನದ ಮಹಾತ್ಮೆ

ಜನ್ತೂನಾಂ ನರಜನ್ಮ ದುರ್ಲಭಮತಃ ಪುಂಸ್ತ್ವಂ ತತೋ ವಿಪ್ರತಾ
ತಸ್ಮಾದ್ವೈದಿಕಧರ್ಮಮಾರ್ಗಪರತಾ ವಿದ್ವತ್ತ್ವಮಸ್ಮಾತ್ ಪರಮ್ ।
ಆತ್ಮಾನಾತ್ಮವಿವೇಚನಂ ಸ್ವನುಭವೋ ಬ್ರಹ್ಮಾತ್ಮನಾ ಸಂಸ್ಥಿತಿಃ
ಮುಕ್ತಿರ್ನೋ ಶತಕೋಟಿಜನ್ಮಸುಕೃತೈಃ ಪುಣ್ಯೈರ್ವಿನಾ ಲಭ್ಯತೇ ॥ ೨ ॥
(ಸೂರ್ಯಾಶ್ವೈರ್ಮಸಜಸ್ತತಾಸ್ಸಗುರವಃ / ಸೂರ್ಯಾಶ್ವೈರ್ಯದಿ ಮಸ್ಸಜೌ ಸತತಗಾಃ ಶಾರ್ದೂಲವಿಕ್ರೀಡಿತಮ್)

जन्तूनाम्— " जायते उद्भवते देहात्मभावरूपि-अविद्यादोषादिति जन्तुः जननशीलः देहाभिमानी प्राणी जीवः सामान्यतया क्रिमि-कीटादिः नीचयोनिः "— "ಜನಿಸುತ್ತದೆ ಉದ್ಭವಿಸುತ್ತದೆ ದೇಹವೇ ತಾನೆಂಬ ಅವಿದ್ಯಾದೋಷದಿಂದ ಎಂಬುದರಿಂದ ಜಂತುವು ಜನನಶೀಲತೆಯುಳ್ಳ ದೇಹಾಭಿಮಾನಿಯಾದ ಪ್ರಾಣವಂತ ಜೀವಿಯು, ಸಾಮಾನ್ಯವಾಗಿ ಕ್ರಿಮಿಕೀಟಾದಿ ನೀಚಜನ್ಮ ". ಅಂತಹ ಜಂತುಗಳಿಗೆ ಎಂದರ್ಥ.

नरजन्म— " नृणाति (leads) नयति नरयति नारयति इति नरः, नृ नये धातुः, नय-विनय-न्याय-नीति-द्यूत-कपट-विवेकवान् " — " ಮುನ್ನಡೆಸುತ್ತಾನೆ ಕರೆದೊಯ್ಯುತ್ತಾನೆ ಮುಂದುವರೆಯುತ್ತಾನೆ ಮುಂದುವರೆಸುತ್ತಾನೆ ಎಂಬುದರಿಂದ ನರನು, ನೃ ನಯೇ ಧಾತುವು, ನಯ-ವಿನಯ-ನ್ಯಾಯ-ನೀತಿ-ದ್ಯೂತ-ಮೋಸ-ವಿವೇಕಗುಣಗಳುಳ್ಳವನು ". " जायते, इति जन्म, आद्यक्षणसम्बन्धः, गर्भवासतो योनिद्वारा निस्सरणम्, अपूर्वदेहादिभिः आत्मनः सम्बन्धो ज्योतिषोक्तः । "
" जनुर्जननजन्मानि जनिरुत्पत्तिरुद्भवः ।
प्राणी तु चेतनो जन्मी जन्तुजन्युशरीरिणः ॥ "
(अमरकोषः
 " ಜನಿಸುತ್ತಾನೆ ಎಂಬುದರಿಂದ ಜನ್ಮ / ಹುಟ್ಟು, ಬದುಕಿನ ಮೊತ್ತಮೊದಲ ಕ್ಷಣದ ಸಂಬಂಧವು, ಗರ್ಭವಾಸದಿಂದ ಯೋನಿಯ ಮೂಲಕ ಹೊರಬರುವಿಕೆ, ಜೀವನ ಪೂರ್ವಕರ್ಮಾನುಸಾರ ಬರುವ ಜ್ಯೋತಿಷ್ಯದ ಗ್ರಹಗತಿಗನುಗುಣವಾಗಿ ಹಿಂದಿಲ್ಲದಿದ್ದ ಹೊಸ ದೇಹೇಂದ್ರಿಯಾದಿಗಳೊಂದಿಗೆ ಆತ್ಮನ / ತನ್ನ ಸಂಬಂಧವು ". 

ಜನುಸ್ / ಜನುಃ, ಜನನಮ್, ಜನ್ಮನ್ / ಜನ್ಮ (—ನಪುಂಸಕಲಿಂಗ); ಜನಿಃ, ಉತ್ಪತ್ತಿಃ (—ಸ್ತ್ರೀಲಿಂಗ); ಉದ್ಭವಃ (ಪುಲ್ಲಿಂಗ). ಪ್ರಾಣೀ / ಪ್ರಾಣಿನ್ (ತ್ರಿಲಿಂಗ)— ಚೇತನಃ, ಜನ್ಮಿನ್ / ಜನ್ಮೀ, ಜನ್ತುಃ, ಜನ್ಯುಃ, ಶರೀರಿನ್ / ಶರೀರೀ  (ಪು). (— ಅಮರಕೋಷ).
ಹೀಗಿರುವ ಮನುಷ್ಯಜನ್ಮವು ಎಂದು ತಾತ್ಪರ್ಯ.

दुर्लभम्— "दुर्-दुःखेन लभ्यते, इति, दुर् + लभ् / डुलभष् प्राप्तौ धातुः "— " ಕಷ್ಟದಿಂದ ಲಭಿಸುವಂಥದ್ದೇ ದುರ್ಲಭವು, ದುರ್ + ಲಭ್ / ಡುಲಭಷ್ ಪ್ರಾಪ್ತೌ ಧಾತುವು". ಅತ್ಯಂತ ವಿಶೇಷವೂ ಪ್ರಶಸ್ತವೂ ಆದದ್ದೆಂದು ಭಾವಾರ್ಥ.

जन्तूनां नरजन्म दुर्लभम्— ಹೀಗೆ ಜಂತುಗಳಿಗೆ ಮನುಷ್ಯಜನ್ಮವು ಅತ್ಯಂತ ಅಮೂಲ್ಯವೂ, ದುರ್ಲಭವೂ ಆದದ್ದೆಂಬುದು ಸಾರವು. " ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ "— ಇದು ದಾಸರ ಅಮೃತವಾಣಿ. 

" विषमायां तिथौ क्षिप्तं कुर्याद् बीजं तु कन्यकाम् ।
समायां पुरुषं नूनं केचिदाहुर्मनीषिणः ॥
चतुरशीतिलक्षान्ते गोजन्मा तत्परं नरः ।
ततस्तु ब्राह्मणश्च स्यादभयं नात्र संशयः ॥ "
(पद्मपुराणोत्तरखण्डे अध्यायः १५)

" ವಿಷಮ / ಬೆಸ (odd) ಸಂಖ್ಯೆಯ ತಿಥಿಯಂದು (೧ಪಾಡ್ಯ, ೩ತದಿಗೆ, ೫ಪಂಚಮಿ, ೭ಸಪ್ತಮಿ, ೯ನವಮಿ, ೧೧ಏಕಾದಶಿ, ೧೩ತ್ರಯೋದಶಿ) ಪುರುಷನಿಂದ ಸ್ತ್ರೀಯಲ್ಲಿ ಬೀಜಾವಾಪ (ಗರ್ಭಾಧಾನ) ವಾದರೆ ಹೆಣ್ಣುಮಗುವನ್ನೂ, ಸಮಸಂಖ್ಯೆಯ ತಿಥಿಯಂದು (೨ಬಿದಿಗೆ, ೪ಚೌತಿ, ೬ಷಷ್ಠೀ, ೮ಅಷ್ಟಮಿ, ೧೦ದಶಮಿ, ೧೨ದ್ವಾದಶಿ, ೧೪ಚತುರ್ದಶಿ) ಮಾಡಿದ ಸಂಪರ್ಕದಿಂದ ಗಂಡುಮಗುವನ್ನೂ ಉಂಟುಮಾಡುವುದೆಂದು ಕೆಲವು ಮನೀಷಿಗಳು / ಜ್ಞಾನಿಗಳು ಹೇಳುತ್ತಾರೆ. ೮೪ ಲಕ್ಷ ಜನ್ಮಗಳ ಬಳಿಕ ಗೋವಿನ ಜನ್ಮವೆಂದೂ, ಆನಂತರ ಸಾಮಾನ್ಯ ನರಜನ್ಮವೆಂತಲೂ, ತರುವಾಯ ಬ್ರಾಹ್ಮಣಜನ್ಮವೆಂತಲೂ, ಈ ವಿಚಾರದಲ್ಲಿ ಭಯ, ಸಂಶಯಗಳು ಬೇಡವೆಂದೂ ಪದ್ಮಪುರಾಣದ ಉತ್ತರಖಂಡದಲ್ಲಿ ೧೫ನೆಯ ಅಧ್ಯಾಯದಲ್ಲಿ ಹೇಳಿದೆ.

जन्मना जायते जन्तुः कर्मणा जायते द्विजः ।
वेदाध्ययनतो विप्रो ब्रह्मविद् ब्राह्मणः स्मृतः ॥

ಹುಟ್ಟುವಾಗ ಎಲ್ಲರೂ ಕೇವಲ ಪ್ರಾಣಿಮಾತ್ರರು / ಪ್ರಾಣವಿರುವವರು ಮಾತ್ರ. ಉಪನಯನಾದಿ ಸಂಸ್ಕಾರಗಳಾದರೆ ದ್ವಿಜನೆನಿಸುತ್ತಾನೆ. ವೇದಾಧ್ಯಯನವನ್ನು ಮಾಡಿದರೆ ವಿಪ್ರನಾಗುವನು. ಬ್ರಹ್ಮಜ್ಞಾನವುಂಟಾದರೆ ಬ್ರಾಹ್ಮಣನೆನಿಸುವನು.

ಹೀಗಾಗಿ, ನರಜನ್ಮವು ಅತ್ಯಂತ ದುರ್ಲಭವೂ, ಪರಮಪವಿತ್ರವೂ, ಶ್ರೇಷ್ಠವೂ, ೮೪ ಲಕ್ಷ ಜನ್ಮಗಳ ಬಳಿಕ ಬರುವ ಗೋಜನ್ಮದ ತರುವಾಯ ದೊರಕುವುದೂ ಆಗಿರುವುದು.

अतः पुंस्त्वम्— " पुंसः पुरुषस्य भावः, पुरुषत्वम्, वीर्यम् " । " ಪುರುಷನ ಭಾವವೇ / ಮನೋಭಾವವೇ / ಭಾವನೆಯೇ ಪುಂಸ್ತ್ವ, ಪುರುಷತ್ವ, ವೀರ್ಯ, ಪರಾಕ್ರಮ ". 

अर्धनारीनरवपुः पुरुषोऽतिशरीरवान् ।
विभजात्मानमित्युक्त्वा स तदान्तर्दधे ततः ॥ १० ॥
स चोक्तो वै पृथक् स्त्रीत्वं पुरुषत्वं तथाकरोत् ।
बिभेद पुरुषत्वं च दशधा चैकधा तु सः ॥ ११ ॥
सौम्यासौम्यैस्तथा शान्तैः पुंस्त्वं स्त्रीत्वं च स प्रभुः ।
विभेद बहुधा देवः पुरुषैरसितैः सितैः (/पुरुषैरमितैः शितैः) ॥ १२ ॥
(मार्कण्डेयपुराणम् अध्यायः ४७ ) 

ಪ್ರಜಾಪತಿಯಾದ ಸೃಷ್ಟಿಕರ್ತಬ್ರಹ್ಮನು ಅರ್ಧಭಾಗ ಪುರುಷ ಹಾಗೂ ಅರ್ಧಭಾಗ ಸ್ತ್ರೀಯಾಗಿಯೂ ಇರುವ ಬೃಹದ್ಗಾತ್ರದ ಪುರುಷನನ್ನು ಸೃಜಿಸಿ, ನಿನ್ನನ್ನು ನೀನು ವಿಭಜಿಸು ಎಂದು ಹೇಳಿ ಅದೃಶ್ಯನಾದನು(೧೦). ಬ್ರಹ್ಮನಿಂದ ಹಾಗೆ ಬೋಧಿಸಲ್ಪಟ್ಟ ಪುರುಷನು ತನ್ನಲ್ಲಿ ಸ್ತ್ರೀತ್ವವನ್ನೂ, ಪುರುಷತ್ವವನ್ನೂ ವಿಭಜಿಸಿಕೊಂಡನು. ಆಗ ಪುರುಷತ್ವವನ್ನು ೧೧ ರೂಪಗಳಿಂದ ವಿಭಾಗಮಾಡಿದನು (೧೧). ಸರ್ವಶಕ್ತನಾದ ಆ ಪುರುಷನು ಪುರುಷತ್ವ ಮತ್ತು ಸ್ತ್ರೀತ್ವಗಳನ್ನು ಸೌಮ್ಯ-ಅಸೌಮ್ಯರೂಪಗಳಿಂದಲೂ ಮತ್ತು ಶಾಂತರೂಪದಿಂದಲೂ ವಿಭಜಿಸಿ, ಅಮಿತವಾದ ತೀಕ್ಷ್ಣಸ್ವಭಾವದ ಪುರುಷರನ್ನಾಗಿ ಬಹುವಿಧವಾಗಿ ಸೃಷ್ಟಿಸಿದನು (೧೨) ಎಂದು ಮಾರ್ಕಂಡೇಯಪುರಾಣ ಅಧ್ಯಾಯ ೪೭ | ಶ್ಲೋಕ ೧೦, ೧೧ ೧೨ ರಲ್ಲಿ ಹೇಳಿದೆ.

ಹೀಗೆ जन्तूनां नरजन्म दुर्लभम् अतः पुंस्त्वम्— ಜಂತುಗಳಿಗೆ ನರಜನ್ಮವು ಅತ್ಯಂತ ದುರ್ಲಭವಾದದ್ದು. ಸಾಮಾನ್ಯವಾಗಿ ಸ್ತ್ರೀಯು ಕರುಣೆ, ವಾತ್ಸಲ್ಯ, ಮಮತೆ, ಮೃದುತ್ವ, ತಾಯ್ತನದ ತ್ಯಾಗಬುದ್ಧಿ ಇತ್ಯಾದಿ ಭಾವಾವೇಶಗಳ ಸ್ವಭಾವವಿರುವ ವ್ಯಕ್ತಿ. ಆದರೆ  ಪುರುಷತ್ವ, ಧೀರತೆ, ಕಠೋರನಿಷ್ಠೆ, ದೃಢ ಮನಸ್ಸು, ದೌರ್ಬಲ್ಯರಹಿತತೆ, ವೈರಾಗ್ಯಭಾವ, ಅಚಲ ಶ್ರದ್ಧೆ, ಏಕಾಗ್ರಬುದ್ಧಿ, ಅಚಂಚಲತೆಯೇ ಮೊದಲಾದುವು ಪುರುಷಸಾಮಾನ್ಯ ಗುಣಗಳು. ಶ್ರವಣ, ಮನನ, ಅಧ್ಯಯನ, ಧ್ಯಾನಗಳು ಒಂದು ರೀತಿಯ ಉಗ್ರತಪಸ್ಸು. ಇದಕ್ಕೆ ಬೇಕಾದ ದೃಢಮನಸ್ಸು ಯಾರಲ್ಲಿ ಉಂಟೋ ಅವರೇ ಬ್ರಹ್ಮಜಿಜ್ಞಾಸೆಗೆ ಅಧಿಕಾರಿಗಳೇ ಹೊರತು ಹೇಡಿಗಳೂ, ಚಂಚಲರೂ ಅಲ್ಲ. ಹಾಗಾಗಿ, ಈ ಗುಣಗಳುಳ್ಳವರು ಸ್ತ್ರೀಪುರುಷರ್ಯಾರೇ ಆಗಿರಲಿ ಅಂತಹವರ ಸ್ವಭಾವವನ್ನೇ ಇಲ್ಲಿ ಪುಂಸ್ತ್ವ ಎನ್ನಲಾಗಿದೆಯೇ ಹೊರತು, ಇದು ಬಾಹ್ಯಲಿಂಗಭೇದವಲ್ಲ, ಆದರೆ ಆಂತರಿಕ ಗುಣಲಿಂಗಭೇದವಾಚ್ಯ. 

ಹೀಗಾಗಿ, ಇಲ್ಲಿ ಜಂತುಗಳಿಗೆ ನರಜನ್ಮವು ದುರ್ಲಭವಾದುದು; ಅದಕ್ಕಿಂತಲೂ ಪುರುಷತ್ವದ ಗುಣಗಳಿರುವುದು ಮತ್ತೂ ದುರ್ಲಭ / ಅಪರೂಪ / ಪುಣ್ಯವಿಶೇಷಪ್ರಾಪ್ತವಾದದ್ದು ಎಂದು ತಾತ್ಪರ್ಯವು.

ततः, विप्रता— ಅದಕ್ಕಿಂತಲೂ / ಪುರುಷತ್ವಕ್ಕಿಂತಲೂ ವಿಪ್ರತ್ವವು ಹೆಚ್ಚಿನದು. " विशेषेण प्राति पूरयति यजन-याजन-अध्ययन-अध्यापन-दान-प्रतिग्रहाख्यानि षट्कर्माणि इति विप्रः, प्रा पूरणे धातुः " । " ವಿಶೇಷವಾಗಿ ಯಜ್ಞ ಮಾಡುವುದು, ಮಾಡಿಸುವುದು, ಸ್ವಾಧ್ಯಾಯ, ಬೋಧನೆ, ದಾನ ಕೊಡುವುದು ಹಾಗೂ ಸ್ವೀಕಾರಗಳೆಂಬ ಷಟ್ಕರ್ಮಗಳನ್ನು ಪೂರೈಸುವವನು, ಅನುಷ್ಠಾನಿಸುವವನು ವಿಪ್ರನು, ಪ್ರಾ ಪೂರಣೇ ಧಾತು (ಕ್ರಿಯಾಪದದ ಮೂಲರೂಪವೇ ಧಾತುವು). 
अथवा, " उप्यते धर्मबीजम् अत्र अनेन इति विप्रः, वप बीजसन्ताने धातुः "। तस्य लक्षणं यथा— ಅಥವಾ, " ಬಿತ್ತಲ್ಪಡುತ್ತದೆ ಧರ್ಮದ ಬೀಜವು ಇಹಲೋಕದಲ್ಲಿ ಇವನಿಂದ ಎಂಬುದರಿಂದ ವಿಪ್ರನು, ವಪ ಬೀಜಸಂತಾನೇ ಧಾತು. ಅಂತಹ ವಿಪ್ರನ ಲಕ್ಷಣವೇನೆಂದರೆ—

जन्मना ब्राह्मणो ज्ञेयः संस्कारैर्द्विज उच्यते ।
विद्यया याति विप्रत्वं त्रिभिः श्रोत्रियलक्षणम् ॥
(प्रायश्चित्तविवेकः)

ಜನ್ಮದಿಂದ / ಹುಟ್ಟಿನಿಂದ ಬ್ರಾಹ್ಮಣನ ಮಗುವು ಜಾತಿಯಲ್ಲಿ ಬ್ರಾಹ್ಮಣನೆಂದು ತಿಳಿಯಬೇಕು. ಉಪನಯನಾದಿ ಸಂಸ್ಕಾರಗಳಿಂದ ವ್ಯಕ್ತಿಯೋರ್ವನು ದ್ವಿಜನೆನಿಸುವನು. ವೇದಶಾಸ್ತ್ರಾದಿ ಜ್ಞಾನದಿಂದ ಯಾವನೇ ಆದರೂ ವಿಪ್ರನೆನಿಸುವನು. ಈ ಮೂರೂ— ಅರ್ಥಾತ್ ಬ್ರಾಹ್ಮಣಕುಲದಲ್ಲಿ ಜನ್ಮ, ಉಪನಯನಾದಿ ಸಂಸ್ಕಾರ, ವೇದಾದಿವಿದ್ಯೆಗಳು ಯಾವೋರ್ವನಲ್ಲಿದೆಯೋ ಅಂಥವನು ಶ್ರೋತ್ರಿಯನೆನಿಸುವನು. ಈ ಮೂರು ಇರುವಿಕೆಯು ಶ್ರೋತ್ರಿಯನ ಲಕ್ಷಣ ಎಂದಿದೆ ಪ್ರಾಯಶ್ಚಿತ್ತವಿವೇಕ.

उत्पत्तिरेव विप्रस्य मूर्तिर्धर्मस्य शाश्वती ।
स हि धर्मार्थमुत्पन्नो ब्रह्मभूयाय कल्पते ॥
(मनुस्मृतिः १ । ९८)

ಮನುಸ್ಮೃತಿ ೧ | ೯೮ ರಲ್ಲಿ ಹೀಗೆ ಹೇಳಿದೆ— ವಿಪ್ರನ ಉತ್ಪತ್ತಿಯೇ / ಜನ್ಮವೇ ಶಾಶ್ವತವಾದ ಧರ್ಮದ ಸಾಕ್ಷಾತ್ ಪ್ರತಿರೂಪವಾಗಿರುವುದು; ಧರ್ಮವೇ ಮೂರ್ತಿವೆತ್ತಂತೆ, ಸಾಕಾರಗೊಂಡಂತಿರುವುದು. ಆತನು ಧರ್ಮಕ್ಕಾಗಿಯೇ ಉತ್ಪನ್ನನಾಗಿರುವನು; ಅಂಥವನು ಬ್ರಹ್ಮಭಾವ / ಬ್ರಹ್ಮತ್ವ / ಬ್ರಹ್ಮಸಾಯುಜ್ಯ / ಮೋಕ್ಷವನ್ನೇ ಹೊಂದುವನು.

विप्रो नाम मेधावी, स्तोता वा इत्यप्यर्थः । ( "निषुसीद गणपते गणेषु त्वामाहुर्विप्रतमं कवीनाम् " इति ऋग्वेदमन्त्रस्य सायणकृते भाष्ये)

ವಿಪ್ರನೆಂದರೆ ಮೇಧಾವೀ ಅಥವಾ ದೇವರನ್ನು ಸ್ತೋತ್ರಮಾಡುವವನೆಂದೂ ಅರ್ಥವಿದೆ ಎಂಬುದು ಋಗ್ವೇದದ ಸಾಯಣಭಾಷ್ಯದಲ್ಲಿ "ನಿಷುಸೀದ ಗಣಪತೇ ಗಣೇಷು ತ್ವಾಮಾಹುರ್ವಿಪ್ರತಮಂ ಕವೀನಾಮ್ " ಎಂಬ ಋಙ್ಮಂತ್ರಭಾಷ್ಯಭಾಗದಲ್ಲಿ ಕಂಡುಬರುತ್ತದೆ.

ಇನ್ನು, " ...वेदाध्ययनतो विप्रः…" ಎಂಬ ಹಿಂದೆ ಹೇಳಿದ ಶ್ಲೋಕದಲ್ಲಿರುವಂತೆ, ಹುಟ್ಟಿನಿಂದ ಸಕಲರೂ ಜಂತುಗಳೇ. ಉಪನಯನಾದಿ ಸಂಸ್ಕಾರಗಳಿಂದ ದ್ವಿಜರೆಂದೂ, ವೇದಾಧ್ಯಯನಸಂಪನ್ನತೆಯಿಂದ ವಿಪ್ರರೆಂದೂ, ಬ್ರಹ್ಮಜ್ಞಾನಮಾತ್ರದಿಂದ ಬ್ರಾಹ್ಮಣರೆಂಬ ಅಭಿಪ್ರಾಯವೂ ಇದೆ.

ಒಟ್ಟಿನಲ್ಲಿ, ಶಂಕರಾಚಾರ್ಯರ ಮತದಂತೆ, जन्तूनां नरजन्म दुर्लभमतः पुंस्त्वं ततो विप्रता— ಸಕಲ ಜೀವಜಂತುಗಳಿಗೆ ನರಜನ್ಮವೇ ಶ್ರೇಷ್ಠ;  ಅದರಲ್ಲೂ ಪುರುಷತ್ವ ಅಥವಾ ಧೀರತ್ವ-ದೃಢತ್ವ-ಅಚಂಚಲತ್ವಾದಿ ಗುಣವು ಹೆಚ್ಚಿನದು; ವೇದಶಾಸ್ತ್ರಾದಿ ಅಧ್ಯಯನ ಸಂಪನ್ನತೆಯುಳ್ಳ ವಿಪ್ರತ್ವವು ಅದಕ್ಕೂ ಮಿಗಿಲಾದದ್ದು ಎಂದು ವಿವೇಕಚೂಡಾಮಣಿಯ ಈ ೨ನೆಯ ಶ್ಲೋಕದ ಪ್ರಥಮಪಾದದ ತಾತ್ಪರ್ಯವು.

तस्माद् वैदिकधर्म-मार्गपरता— ವೇದಾಧ್ಯಯನಸಂಪನ್ನತೆಗಿಂತಲೂ ವೈದಿಕಧರ್ಮಮಾರ್ಗದಲ್ಲಿ ವೇದೋಕ್ತಕರ್ಮಗಳನ್ನಾಚರಿಸುತ್ತ ಬಾಳುವಿಕೆಯು ಇನ್ನೂ ಉತ್ತಮವಾದುದು. ಕೇವಲ ವೇದಜ್ಞಾನ ಮಾತ್ರ ಸಾಲದು. ಅದರ ಆಚರಣೆ, ಅನುಷ್ಠಾನ, ನಿಜಜೀವನದಲ್ಲಿ ಅದರ ಅಳವಡಿಕೆಯೂ ಅಷ್ಟೇ ಮುಖ್ಯ. ಇಲ್ಲವಾದರೆ, "दर्वी पाकरसो यथा " ಎಂಬಂತೆ ಪದಾರ್ಥದ ಪಾತ್ರೆಯಲ್ಲಿರುವ ಸೌಟು ಅದರೊಳಗೇ ಮುಳುಗಿದ್ದರೂ ಅದರ ಸವಿಯನ್ನು ಹೇಗೆ ತಿಳಿಯದೋ ಹಾಗೆಯೇ, ಕೇವಲ ಪಠನ, ಕಂಠಗತಮಾಡಿಕೊಳ್ಳುವಿಕೆಯಿಂದ ವೇದದ ಸಾರವು ಅನುಭವಕ್ಕೆ ಬರದು. ಹೀಗಾಗಿ, ಕೇವಲ ವಿಪ್ರತ್ವಕ್ಕಿಂತ ವೇದೋಕ್ತಧರ್ಮಾನುಷ್ಠಾನನಿರತನು ಶ್ರೇಷ್ಠ.

विद्वत्त्वमस्मात्परम्— ವಿದ್ವತ್ತೆಯು ಇದಕ್ಕಿಂತಲೂ ಮಿಗಿಲಾದುದು. ವೇದಧರ್ಮಾಚರಣೆಗಿಂತಲೂ ಅದರ ಅಂತರಾರ್ಥವನ್ನರಿಯುವ ಜ್ಞಾನವು ಹೆಚ್ಚಿನದು. " वेत्तीति विद्वान्, विदुषो भावः विद्वत्त्वम् / विद्वत्ता " — "ಬಲ್ಲವನೆಂಬುದರಿಂದ ವಿದ್ವಾನ್, ವಿದ್ವಾನನ ಭಾವವೇ ವಿದ್ವತ್ತಾ / ವಿದ್ವತ್ತೆ / ವಿದ್ವತ್ತ್ವಮ್ ". ಅಂತಹ ಜ್ಞಾನಿಯು ವೇದಾರ್ಥವನ್ನರಿಯುವನು. ಹಾಗಾದಾಗ ಆತನು ಜಂತುವಿಗಿಂತ, ಕೇವಲ ನರಜನ್ಮಕ್ಕಿಂತ, ಕೇವಲ ಪುರುಷತ್ವಕ್ಕಿಂತ, ವಿಪ್ರತ್ವಕ್ಕಿಂತ, ವೈದಿಕಧರ್ಮಮಾರ್ಗಪರತ್ವಕ್ಕಿಂತಲೂ ಹೆಚ್ಚಿನವನೆನಿಸುವನೆಂದು ಜಗದ್ಗುರು ಆದಿಶಂಕರ ಭಗವತ್ಪೂಜ್ಯಪಾದಾಚಾರ್ಯರ ಅಭಿಮತ.

आत्म-अनात्म-विवेचनम्— नित्य-अनित्य / सद्-असद् —विवेकः विद्वत्त्वादपि श्रेष्ठम् । ಇಂತಹ ವೇದಾರ್ಥಜ್ಞಾನಕ್ಕಿಂತಲೂ ಆತ್ಮ ಹಾಗೂ ಅನಾತ್ಮಗಳ ವ್ಯತ್ಯಾಸವನ್ನರಿಯುವ ವಿವೇಚನಾಶಕ್ತಿಯಿರುವವನೇ ಮೇಲು. ಸದ್-ಅಸದ್ ವಿವೇಕ, ನಿತ್ಯ-ಅನಿತ್ಯ ವಿವೇಕವೇ ಆತ್ಮ-ಅನಾತ್ಮ ವಿವೇಕ. ಸಾಧನಚತುಷ್ಟಯದಲ್ಲಿ ಮೊದಲನೆಯದೇ ಇದು. नित्यानित्यविवेकः, इह-अमुत्र-फलभोग-विरागः, शम-दम-उपरति-श्रद्धा-तितिक्षा-समाधानाख्या षट्सम्पत्तिः, मुमुक्षुत्वम् च इति साधनाचतुष्टयम् । (೧)ನಿತ್ಯಾನಿತ್ಯವಿವೇಕ, (೨)ಇಹ-ಪರಲೋಕಗಳ ಫಲಭೋಗ ವೈರಾಗ್ಯ, (೩)ಮನೋನಿಯಂತ್ರಣ (ಶಮ)-ಇಂದ್ರಿಯನಿಗ್ರಹ(ದಮ)-ತನ್ನಲ್ಲೇ ಆನಂದವಾಗಿರುವುದು (ಉಪ-ರತಿ)-ಆತ್ಮನಲ್ಲಿ ಶ್ರದ್ಧೆ-ತಿತಿಕ್ಷೆ(ಸಹನೆ)-ಆತ್ಮಧ್ಯಾನದಲ್ಲಿ ತಲ್ಲೀನತೆ (ಸಮ್-ಆಧಾನ) ಎಂಬ ಷಟ್/6-ಸಂಪತ್ತಿ ಹಾಗೂ (೪)ಮೋಕ್ಷಾಕಾಂಕ್ಷೆ (ಮುಮುಕ್ಷುತ್ವ)— ಇವೇ ೪ ಸಾಧನಚತುಷ್ಟಯ. ಇವುಗಳಲ್ಲಿ ಮೊದಲನೆಯದೇ ಇಲ್ಲಿ ಹೇಳಿರುವುದು.

" ब्रह्म सत्यं जगन्मिथ्या जीवो ब्रह्मैव नापरः " इत्थं विविच्यति यः सः विदुषोऽपि वरिष्ठः । " ಬ್ರಹ್ಮವೊಂದೇ ಸತ್ಯ / ಶಾಶ್ವತ; ತೋರುವ ಜಗತ್ತೆಲ್ಲವೂ ಮಿಥ್ಯಾ / ನಶ್ವರ; ಈ ಜೀವನೆನಿಸಿದವನು ಬ್ರಹ್ಮವೇ ಹೊರತು ಅದಕ್ಕಿಂತ ಬೇರೆಯಲ್ಲ; ಎಲ್ಲರ ದೇಹದೊಳಗಿರುವ ಏಕಮೇವ ಬ್ರಹ್ಮವೇ ಅನೇಕ ಜೀವರೆನಿಸಿದೆಯೇ ಹೊರತು, ಆತ್ಮವು ಬಹುವಲ್ಲ, ಒಂದೇ ಎಲ್ಲರೊಳಗೂ ಇರುವುದು " ಈ ರೀತಿ ಯಾವನು ವಿವೇಚಿಸುತ್ತಾನೋ ಅವನು ವೇದಾರ್ಥ ಬಲ್ಲ ವಿದ್ವಾನನಿಗಿಂತ ಹೆಚ್ಚಿನವನು.

ಹೀಗೆ, ವೇದಾರ್ಥಜ್ಞಾನಕ್ಕಿಂತ ನಿತ್ಯಾನಿತ್ಯವಿವೇಕವೇ ಮಿಗಿಲು.

स्वनुभवः— "सु+ अनुभवः— सुष्ठु अनुभवः ब्रह्मात्मस्वरूपस्य, नित्यानित्यविवेकाद् उपजायते यदेतत् अात्मानात्मविवेकादपि वरम् " इति । 

" ಒಳ್ಳೆಯ ಅನುಭವ ಬ್ರಹ್ಮ-ಆತ್ಮಸ್ವರೂಪದ್ದು, ನಿತ್ಯಾನಿತ್ಯವಿವೇಕದಿಂದಾಗಿ ಉಂಟಾಗುವುದೆಂಬುದು ಆತ್ಮಾನಾತ್ಮವಿವೇಕಕ್ಕಿಂತಲೂ ಹೆಚ್ಚಿನದು" ಎಂಬುದಾಗಿ. 

ब्रह्मात्मना संस्थितिः— स्वनुभवादपि श्रेष्ठा प्रतिक्षणमपि अहं ब्रह्मास्मीति भावे संस्थितिः, ब्रह्मात्मस्वरूपे उपस्थितिः, यदेव मुक्तिः, जीवन्मुक्तिरिति वा स्मृतः । 

ಬ್ರಹ್ಮಾತ್ಮಸ್ವರೂಪದ ಕ್ಷಣಿಕವಾದ ಅನುಭವಕ್ಕಿಂತ, ಸದಾ ಅದೇ ಭಾವದಲ್ಲಿ ನೆಲೆಯಾಗಿರುವುದೇ ಪರಮಶ್ರೇಷ್ಠವಾದುದು. ಹೀಗೆ ಬ್ರಹ್ಮಾತ್ಮಭಾವದಲ್ಲೇ ಇರುವಿಕೆಯೇ ಮುಕ್ತಿ ಅಥವಾ ಜೀವನ್ಮುಕ್ತಿಯೆನ್ನಲ್ಪಟ್ಟಿರುವುದು.

मुक्तिः— उपर्युक्ता मुक्तस्थितिः, ಮೇಲೆ ಹೇಳಿರುವ ಮುಕ್ತಸ್ಥಿತಿಯು,
शतकोटिजन्मसुकृतैः पुण्यैः विना— अनेकानेकजन्मसम्पादितैः सुकर्मार्जितपुण्यैः विना, ಬಹುಜನ್ಮಗಳಲ್ಲಿ ಮಾಡಿದ ಒಳ್ಳೆಯ ಕರ್ಮಗಳಿಂದ ಸಂಗೃಹೀತವಾದ ಪುಣ್ಯರಾಶಿಯಿಲ್ಲದೆಯೇ,
नो लभ्यते— न प्राप्यते । ಪ್ರಾಪ್ತಿಯಾಗದು. तर्हि कर्मणैव मुक्तिरिति चेन्न । ಹಾಗಾದರೆ ಕರ್ಮದಿಂದಲೇ ಮುಕ್ತಿಯೇ ಎಂದು ಕೇಳಿದರೆ, ಅಲ್ಲ. वेदोक्तकर्मणा तामसराजसगुणनिरासः, सात्त्विकगुणाधिक्यो जायते, तद्द्वारार्जितपुण्यैः कोटिजन्मनि अनुक्रमेणैव चित्तशुद्धित्वात् ब्रह्मात्मज्ञानं भवति । ವೇದೋಕ್ತಕರ್ಮದಿಂದ ತಾಮಸ-ರಾಜಸಾದಿ ಗುಣಗಳು ಕಡಿಮೆಯಾಗಿ ಸಾತ್ತ್ವಿಕಗುಣದ ಹೆಚ್ಚಳವಾಗುತ್ತದೆ, ಅದರಿಂದ ಸತ್ಕರ್ಮಗಳನ್ನಾಚರಿಸಿ ಸಂಪಾದಿಸಿದ ಪುಣ್ಯಗಳಿಂದ ಕೋಟ್ಯಂತರಜನ್ಮಗಳಲ್ಲಿ ಅನುಕ್ರವಾಗಿ ಚಿತ್ತಶುದ್ಧಿಯುಂಟಾಗಿ ಬ್ರಹ್ಮಾತ್ಮಜ್ಞಾನವಾಗುತ್ತದೆ. तदनन्तरं ज्ञानिनः कर्मानिवार्यता नास्ति । ಬಳಿಕ ಜ್ಞಾನಿಗೆ ಕರ್ಮದ ಅನಿವಾರ್ಯತೆಯಿಲ್ಲ.  लोकसङ्ग्रहबुद्ध्या प्रारब्धकर्मफलपरिपूर्तिपर्यन्तमिह देहान्तपर्यन्तं कर्माणि करोति सः न कर्तृत्वभोक्तृत्वभावनया परन्तु ब्रह्मात्मभावे स्थित्वैव देहेन्द्रियादीनि स्वस्वविषये प्रवर्तन्ते न चान्यथा इति मत्वा । ಲೋಕಸಂಗ್ರಹಬುದ್ಧಿಯಿಂದ (ಇತರರಿಗೋಸ್ಕರ, ತನಗಾಗಿ ಅಲ್ಲ) ಪ್ರಾರಬ್ಧಕರ್ಮಫಲದ ಪೂರ್ತಿಯಾಗಿ ಮುಗಿಯುವವರೆಗೆ ಇಲ್ಲಿ (ಈ ಲೋಕದಲ್ಲಿ) ದೇಹವಿರುವವರೆಗೆ ಕರ್ಮಗಳನ್ನು ಅವನು ಮಾಡುತ್ತಾನೆ, ತಾನು ಮಾಡುವವನು, ಅದರ ಫಲವನ್ನು ಅನುಭವಿಸುವವನು ಎಂಬ ಭಾವನೆಯಿಂದ ಅಲ್ಲ, ಆದರೆ ಬ್ರಹ್ಮಾತ್ಮನು ತಾನೆಂಬ ಭಾವದಲ್ಲೇ ಸ್ಥಿತನಾಗಿ, ದೇಹೇಂದ್ರಿಯಾದಿಗಳು ತಮ್ಮ ತಮ್ಮ ವಿಷಯಗಳಲ್ಲಿ ಪ್ರವರ್ತಿಸುತ್ತಿವೆಯೇ ಹೊರತು ಬೇರೆರೀತಿಯಿಂದಲ್ಲ, ನಾನು ಕರ್ತೃಭೋಕ್ತೃವಲ್ಲ ಎಂದು ತಿಳಿದು ಮಾಡುತ್ತಾನೆ.  एवं ब्रह्मात्मभावे सर्वकालेष्वपि संस्थित्या मुक्तिः सम्भवत्येव । ಹೀಗೆ ಬ್ರಹ್ಮಾತ್ಮನು ನಾನೆಂಬ ಭಾವದಲ್ಲಿ ಎಲ್ಲಕಾಲದಲ್ಲಿಯೂ ನೆಲೆಸಿರುವುದರಿಂದ ಮುಕ್ತಿಯು ಉಂಟಾಗಿಯೇ ಆಗುವುದು. तदेव मुक्तिरित्यपि । ಅದೇ ಮುಕ್ತಾವಸ್ಥೆಯು. अतः अत्र कर्मज्ञानसमुच्चयवादो न । ಆದ್ದರಿಂದ ಇಲ್ಲಿ ಕರ್ಮಜ್ಞಾನಗಳೆರಡೂ ಬೇಕು ಮೋಕ್ಷಕ್ಕೆ ಎಂಬ ಸಮುಚ್ಚಯವಾದವಿಲ್ಲ. कर्मणा चित्तशुद्धिः, साधनचतुष्टयसम्पन्नता, तद्द्वारा साधकस्य ब्रह्मात्मजिज्ञासा, ज्ञानमार्गाधिकारप्राप्तिः, तदनन्तरं तस्मिन् सम्यगवस्थितिः ज्ञानं मोक्षो वा इत्यर्थः । ಕರ್ಮದಿಂದ ಚಿತ್ತಶುದ್ಧಿ, ಸಾಧನಚತುಷ್ಟಯಸಂಪನ್ನತೆ, ತನ್ಮೂಲಕ ಸಾಧಕನಿಗೆ ಬ್ರಹ್ಮಾತ್ಮದ ಕುರಿತು ತಿಳಿಯುವ ಇಚ್ಛೆ, ಜ್ಞಾನಮಾರ್ಗದಲ್ಲಿ ಹೋಗುವ ಅರ್ಹತೆ, ತರುವಾಯ ಅದರಲ್ಲೇ ಚೆನ್ನಾಗಿ ನೆಲೆನಿಲ್ಲುವಿಕೆ, ಜ್ಞಾನ / ಮೋಕ್ಷ ಎಂದರ್ಥ.  अतः अनेकजन्मार्जितपुण्यबलेन नरजन्म, पुंस्त्वम्, विप्रता, वैदिकधर्ममार्गपरता, विद्वत्त्वम्, आत्मानात्मविवेचनम्, स्वनुभवः, ब्रह्मात्मना संस्थितिः अनुक्रमेण जायते, इति तात्पर्यः ॥ ಆದ್ದರಿಂದ ಅನೇಕಜನ್ಮಗಳಲ್ಲಿ ಸಂಪಾದಿಸಿದ ಪುಣ್ಯಬಲದಿಂದ ಮನುಷ್ಯಜನ್ಮ, ಪುರುಷತ್ವ / ಧೀರತೆ, ವೇದಾಧ್ಯಯನಸಂಪನ್ನತೆ / ವಿಪ್ರತ್ವ / ಸಾತ್ತ್ವಿಕತೆ, ವೈದಿಕಧರ್ಮಮಾರ್ಗಪರತೆ, ವಿದ್ವತ್ತ್ವ / ವೇದಾರ್ಥಜ್ಞಾನ, ಆತ್ಮ-ಅನಾತ್ಮ ವಿವೇಕ, ಆತ್ಮಾನುಭವ, ಬ್ರಹ್ಮಾತ್ಮಭಾವದಲ್ಲೇ ನೆಲೆಯಾಗಿರುವಿಕೆಗಳು ಒಂದರ ನಂತರ ಒಂದು ಕ್ರಮಕ್ರಮವಾಗಿ ಉಂಟಾಗುವುದು ಎಂದು ತಾತ್ಪರ್ಯವು.

ಹೀಗೆ, ಕೊನೆಗೆ ಕೇವಲ ಬ್ರಹ್ಮಾತ್ಮನೇ ನಾನೆಂಬ ಭಾವದಲ್ಲೇ ಎಲ್ಲ ಕಾಲಗಳಲ್ಲೂ ಸ್ಥಿರವಾಗಿ ನೆಲೆಸಿರುವಿಕೆಯಿಂದಲೇ ಮುಕ್ತಿಯು ಉಂಟಾಗಿಯೇ ಆಗುತ್ತದೆ. यतः, " ज्ञानादेव हि कैवल्यम् ?" ಯಾಕೆಂದರೆ, "ಬ್ರಹ್ಮವೇ ತಾನೆಂಬ ತಿಳುವಳಿಕೆಯೇ ಮೋಕ್ಷವಲ್ಲವೇ?" "ब्रह्मविद् ब्रह्मैव भवति " इति श्रुतिः । " ಬ್ರಹ್ಮವಿದನು ಬ್ರಹ್ಮವೇ ಆಗುತ್ತಾನೆ " ಎಂದಿದೆ ಶ್ರುತಿ / ವೇದ. ಹೀಗೆ ಕರ್ಮದಿಂದ ಸಿದ್ಧತೆ-ಚಿತ್ತಶುದ್ಧಿ, ಜ್ಞಾನದಿಂದ ಮೋಕ್ಷಸಿದ್ಧಿ.


३) दैवानुग्रहः


दुर्लभं त्रयमेवैतद्दैवानुग्रहहेतुकम् ।
मनुष्यत्वं मुमुक्षुत्वं महापुरुषसंश्रयः ॥ ३ ॥
(अनुष्टुब्-वृत्तम्)


೩) ದೈವಾನುಗ್ರಹ


ದುರ್ಲಭಂ ತ್ರಯಮೇವೈತದ್ದೈವಾನುಗ್ರಹಹೇತುಕಮ್ ।
ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ ॥ ೩ ॥
(ಅನುಷ್ಟುಬ್-ವೃತ್ತಮ್)


मनुष्यत्वम्— नरत्वम्, मानुषजन्म, ಮನುಷ್ಯತ್ವ, ನರಜನ್ಮ, ಮಾನುಷಜನ್ಮ, " मनोः अपत्यम् इति मनुष्यः, तस्य भावः मनुष्यत्वम् " ಮನ್ವಂತರಾಧಿಪನೂ, ಮನ್ವಂತರಸೃಷ್ಟಿಯ ಆದಿಮನೂ ಆದ ಮನುವಿನ ಸಂತಾನವಾದ್ದರಿಂದ ಮನುಷ್ಯನು, ಆತನ ಭಾವವೇ ಮನುಷ್ಯತ್ವ " ಅಥವಾ ಮನುಷ್ಯನಾಗಿ ಹುಟ್ಟಿ, ಮನುಷ್ಯನಾಗಿ ಬದುಕಿ, ಮನುಷ್ಯಸಹಜ ಗುಣಧರ್ಮದಲ್ಲೇ ಸಾಯುವುದು ಮನುಷ್ಯತ್ವ. 
मुमुक्षुत्वम्— " मोक्षस्य / मोक्तुम् इच्छा मुमुक्षा ; मोक्तुम् इच्छति इति मुमुक्षुः मुक्तिमिच्छुः ; तस्य भावः मुमुक्षुत्वम् / मुमुक्षुता " ಮೋಕ್ಷದ / ಬಿಡುಗಡೆಯಾಗಲು ಇಚ್ಛೆಯೇ ಮುಮುಕ್ಷಾ; ಭವಸಾಗರದಿಂದ ಬಿಡುಗಡೆಹೊಂದಲು ಇಚ್ಛಿಸುತ್ತಾನಾದ್ದರಿಂದ ಮುಮುಕ್ಷುವು ಮುಕ್ತಿಬಯಸುವವನು; ಆತನ ಭಾವವೇ ಮುಮುಕ್ಷುತ್ವ / ಮುಮುಕ್ಷುತೆ ".
महापुरुष-संश्रयः— " महांश्चासौ पुरुषश्च महापुरुषः ", तादृशानां मनीषिणां ज्ञानिनां धीराणां महात्मनां सद्गुरूणां साधूनां सतां सज्जनानां सत्पुरुषाणां विवेकिनां महाप्राज्ञानां महतां संश्रयः, आश्रयः, प्रश्रयः, प्रपत्तिः, शरणागतिः, संसर्गः, उपदेशः ( उप समीपे देशः स्थितिः), सन्निधिः, सन्निधानं, अनुग्रहः, कृपाकटाक्षः, सत्सङ्ग एव महापुरुषसंश्रयः, मुक्तये न तु भुक्तये  यदि साधनत्वेन प्रयुक्तो भवति तदेव तदैव आत्मोद्धारसिद्धिः भवसागरात् ।
" ಮಹಾನನೂ ಇವನು ಪುರುಷನೂ ಮಹಾಪುರುಷನು ", ಅಂತಹ ಮನೀಷಿಗಳ, ಜ್ಞಾನಿಗಳ, ಧೀರರ, ಮಹಾತ್ಮರ, ಸದ್ಗುರುಗಳ, ಸಾಧುಗಳ, ಸಂತರ, ಸಜ್ಜನರ, ಸತ್ಪುರುಷರ, ವಿವೇಕಿಗಳ, ಮಹಾಪ್ರಾಜ್ಞರ, ಮಹಾತ್ಮರ, ಸಂಶ್ರಯ, ಆಶ್ರಯ, ಪ್ರಶ್ರಯ, ಪ್ರಪತ್ತಿ, ಶರಣಾಗತಿ, ಸಂಸರ್ಗ, ಉಪದೇಶ (ಉಪ ಸಮೀಪೇ ದೇಶಃ ಸ್ಥಿತಿಃ— ಹತ್ತಿರ ಇರುವಿಕೆ), ಸನ್ನಿಧಿ, ಸನ್ನಿಧಾನ, ಅನುಗ್ರಹ, ಕೃಪಾಕಟಾಕ್ಷ, ಸತ್ಸಂಗವೇ ಮಹಾಪುರುಷಸಂಶ್ರಯವು; ಇದು ಮುಕ್ತಿಗಾಗಿಯೇ ಹೊರತು ಭುಕ್ತಿ / ಭೋಗಕ್ಕಾಗಿ ಅಲ್ಲ. ಮುಕ್ತಿಸಾಧನವಾಗಿ ಬಳಸಿದರೆ ಮಹಾಪುರುಷರ ಆಶ್ರಯವೇ ಭವಸಾಗರದಿಂದ ಆತ್ಮನನ್ನು ಮೇಲೆತ್ತಲು / ಬ್ರಹ್ಮಾತ್ಮದ ಯಥಾರ್ಥ ಜ್ಞಾನವಾಗಲು ಅದೇ ಕಾರಣವಾಗುತ್ತದೆ ಹಾಗೂ ಆಗಲೇ ಸಾಧ್ಯವಾಗುತ್ತದೆ.
दैवानुग्रह-हेतुकम्— परमात्मानुग्रहकारकम् । ಭಗವಂತನ ಅನುಗ್ರಹಕ್ಕೆ ಕಾರಣವಾದ,
एतत् त्रयम् एव दुर्लभम्— मनुष्यजन्म, मोक्षाकाङ्क्षा, महापुरुषसंसर्गः च— एतानि त्रीणि अपि भगवत्कृपासाधनानि, किन्तु प्राप्तुम् अतीवदुष्कराणि सन्ति लोके ।

ನರಜನ್ಮ, ಮೋಕ್ಷದ ಬಯಕೆ ಹಾಗೂ ಮಹಾಪುರುಷರ ಸಂಸರ್ಗ— ಇವು ಮೂರೂ ಸಹ ಪರಮಾತ್ಮನ ಅನುಗ್ರಹಕ್ಕೆ ಸಾಧನಗಳಾಗಿವೆಯಾದರೂ, ಇವುಗಳನ್ನು ಪಡೆಯುವುದು ಜಗತ್ತಿನಲ್ಲಿ ಅತ್ಯಂತ ಕಷ್ಟಸಾಧ್ಯವಾಗಿರುವುದು.


४) आध्यात्मिकज्ञानविहीनस्य क्लेशः
(श्लोकाः ४—७)


लब्ध्वा कथञ्चिन्नरजन्म दुर्लभं
तत्रापि पुंस्त्वं श्रुतिपारदर्शनम् ।
यस्त्वात्ममुक्तौ न यतेत मूढधीः
स ह्यात्महा स्वं विनिहन्त्यसद्ग्रहात् ॥ ४ ॥
(जतौ तु वंशस्थम्-उदीरितं जरौ)


೪) ಆಧ್ಯಾತ್ಮಿಕಜ್ಞಾನವಿಲ್ಲದವನ ಬವಣೆ
(ಶ್ಲೋಕಾಃ ೪—೭)


ಲಬ್ಧ್ವಾ ಕಥಞ್ಚಿನ್ನರಜನ್ಮ ದುರ್ಲಭಂ
ತತ್ರಾಪಿ ಪುಂಸ್ತ್ವಂ ಶ್ರುತಿಪಾರದರ್ಶನಮ್ ।
ಯಸ್ತ್ವಾತ್ಮಮುಕ್ತೌ ನ ಯತೇತ ಮೂಢಧೀಃ
ಸ ಹ್ಯಾತ್ಮಹಾ ಸ್ವಂ ವಿನಿಹನ್ತ್ಯಸದ್ಗ್ರಹಾತ್ ॥ ೪ ॥
(ಜತೌ ತು ವಂಶಸ್ಥಮ್-ಉದೀರಿತಂ ಜರೌ)


कथञ्चित् कस्माच्चित् कारणादपि दुर्लभं दुष्प्राप्यं दुःखेन कष्टेन वा लभ्यं नरजन्म मनुष्ययोनिं मनुष्यरूपं लब्ध्वा प्राप्य आप्त्वा, तत्र अपि तस्मिन् नरजन्मनि अपि श्रुतिपारदर्शनं वेदान्तचरमसीमारूपं ब्रह्मात्मस्वरूपज्ञानं प्रदर्श्यमाणं पुंस्त्वं पौरुषं धीरतां वा अवाप्य, यः मूढधीः तु यः मूढबुद्धिः अज्ञानी अज्ञः मूर्खः विवेचनारहितः अविवेकी तु आत्ममुक्तौ स्वमोक्षे आत्मनो मोक्षार्थं जननमृत्युरूपिसंसारचक्रात् मोक्तुं न यतेत प्रयत्नं न करोति, सः - हि स वै निश्चयेन आत्महा स्वस्य हानिं करोति आत्महत्या इव स्वघातक एव भवति, असद्-ग्रहात् असद् / अनात्म / अनित्य / असत्य / मिथ्य / अनृत- ग्रहणात् परिग्रहात् स्वीकाराद् वा स्वं आत्मानं स्वयमेव वि-निहन्ति विशेषेण हन्ति हन्ता भवति, आत्मघातको वा स्व-वध-कर्ता वा भवतीत्यर्थः । अतः मनुष्यः स्वात्मज्ञानं ब्रह्मज्ञानं वा प्राप्य स्वजन्मसार्थक्यं प्राप्नुयात् इति तात्पर्यः ॥


ಕಥಂಚಿತ್ ಯಾವುದೋ ಕಾರಣದಿಂದಾಗಿ ದುರ್ಲಭಂ ದುಃಖದಿಂದ / ಕಷ್ಟದಿಂದ ಪಡೆಯಬಹುದಾದ / ಪಡೆಯಲು ಯೋಗ್ಯವಾದ ನರಜನ್ಮ ಮನುಷ್ಯಜನ್ಮವನ್ನು ಲಬ್ಧ್ವಾ ಪಡೆದು, ತತ್ರ ಅಪಿ ಅಂತಹ ನರಜನ್ಮದಲ್ಲೂ ಕೂಡ ಶ್ರುತಿಪಾರದರ್ಶನಂ ವೇದಾಂತಸಾಗರದ ಪಾರ / ದಡವಾದ ಬ್ರಹ್ಮಾತ್ಮಸ್ವರೂಪಜ್ಞಾನವನ್ನು ಪ್ರದರ್ಶಿಸುವಂತಹ ಪುಂಸ್ತ್ವಂ ಪೌರುಷವನ್ನು ಅತವಾ ದೀರತೆಯನ್ನು ಹೊಂದಿ, ಯಃ ಮೂಢಧೀಃ ತು ಯಾವ ಮೂಢಬುದ್ಧಿಯ ಅಜ್ಞಾನಿ ಅಜ್ಞ ಮೂರ್ಖ ವಿವೇಚನಾರಹಿತ ಅವಿವೇಕಿಯಾದರೋ ಆತ್ಮಮುಕ್ತೌ ತನ್ನ ಮೋಕ್ಷದಲ್ಲಿ / ತನ್ನ ಮೋಕ್ಷಕ್ಕಾಗಿ / ಜನನ-ಮರಣ ರೂಪಿಯಾದ ಸಂಸಾರಚಕ್ರದಿಂದ ಬಿಡುಗಡೆಯನ್ನು ಹೊಂದಲು ನ ಯತೇತ ಪ್ರಯತ್ನವನ್ನು ಮಾಡುವುದಿಲ್ಲವೋ, ಸಃ - ಹಿ ಅವನಾದರೋ ನಿಶ್ಚಯಾತ್ಮಕವಾಗಿಯೂ ಆತ್ಮಹಾ ತನಗೇ ಹಾನಿಯನ್ನುಂಟುಮಾಡುತ್ತಾನೆ / ಆತ್ಮಹತ್ಯೆಯೋ ಎಂಬಂತೆ ತನ್ನನ್ನೇ ತಾನು ಕೊಂದುಕೊಂಡವನಂತಾಗುತ್ತಾನೆ, ಅಸದ್-ಗ್ರಹಾತ್ ಅಸತ್ / ಅನಾತ್ಮ / ಅನಿತ್ಯ / ಅಸತ್ಯ / ಮಿಥ್ಯ / ಅನೃತ ದ ಗ್ರಹಿಸುವಿಕೆಯಿಂದಾಗಿ / ಪರಿಗ್ರಹದಿಂದಾಗಿ / ಸ್ವೀಕಾರದಿಂದಾಗಿ ಸ್ವಂ ತನ್ನನ್ನು ತಾನೇ ವಿ-ನಿಹನ್ತಿ ವಿಶೇಷವಾಗಿ ಕೊಲ್ಲುತ್ತಾನೆ, ಕೊಂದವನಾಗುತ್ತಾನೆ, ಆತ್ಮಘಾತಕ / ತನ್ನ ವಧೆಯನ್ನು ಹತ್ಯೆಯನ್ನು ಮಾಡಿದವನಾಗುತ್ತಾನೆ ಎಂದರ್ಥ. ಹಾಗಾಗಿ ಮನುಷ್ಯನು ತನ್ನ / ಆತ್ಮದ ಅರಿವನ್ನು ಅಥವಾ ಬ್ರಹ್ಮದ ತಿಳಿವನ್ನು ಪಡೆದು ತನ್ನ ಜನ್ಮದ ಸಾರ್ಥಕತೆಯನ್ನು ಹೊಂದಬೇಕು ಎಂದು ತಾತ್ಪರ್ಯವು.


इतः कोन्वस्ति मूढात्मा यस्तु स्वार्थे प्रमाद्यति ।
दुर्लभं मानुषं देहं प्राप्य तत्रापि पौरुषम् ॥ ५ ॥


ಇತಃ ಕೋನ್ವಸ್ತಿ ಮೂಢಾತ್ಮಾ ಯಸ್ತು ಸ್ವಾರ್ಥೇ ಪ್ರಮಾದ್ಯತಿ |
ದುರ್ಲಭಂ ಮಾನುಷಂ ದೇಹಂ ಪ್ರಾಪ್ಯ ತತ್ರಾಪಿ ಪೌರುಷಮ್ || ೫ ||


दुर्लभं दुष्प्राप्यं, प्राप्तुं दुष्करं मानुषं मनुष्यरूपं देहं शरीरं तनुं , तत्र अपि तस्मिन् अपि पौरुषं पुरुषत्वं धीरत्वं वा प्राप्य अवाप्य आप्त्वा, यः तु यो व्यक्तिः हि स्वार्थे स्वस्य अर्थे आत्मार्थे प्रमाद्यति प्रमादम् अनवधानं करोति, इतः अतः, एतस्मादपि मूढात्मा मूर्खः, अज्ञः, मूढबुद्धिः कः, नु अस्ति को वा अस्ति खलु? स्वस्य आत्मनो वा उद्धारविषये हिते वा धीरः पुमान् मनुष्यो वा सम्यगवधानं कुर्यात् ;  नो चेत् तस्य नरजन्म निरर्थको भवति इत्यभिप्रायः ॥

ದುರ್ಲಭಂ ಪಡೆಯಲು ಕಷ್ಟಸಾಧ್ಯವಾದ ಮಾನುಷಂ ಮನುಷ್ಯರೂಪವಾದ ದೇಹಂ ಶರೀರವನ್ನು ತನುವನ್ನು, ತತ್ರ ಅಪಿ ಅದರಲ್ಲೂ ಪೌರುಷಂ ಪುರುಷತ್ವವನ್ನು ಅಥವಾ ಧೀರತೆಯನ್ನು ಪ್ರಾಪ್ಯ ಪಡೆದು, ಯಃ ತು ಯಾವ ವ್ಯಕ್ತಿಯಾದರೋ ಸ್ವಾರ್ಥೇ ತನಗಾಗಿ ಆತ್ಮಕ್ಕಾಗಿ ಪ್ರಮಾದ್ಯತಿ ಪ್ರಮಾದ / ಅನವಧಾನ ವನ್ನು ಮಾಡುತ್ತಾನೋ / ಅಜಾಗ್ರತೆಯನ್ನು ಮಾಡುತ್ತಾನೋ, ಇತಃ ಇದಕ್ಕಿಂತಲೂ ಮೂಢಾತ್ಮಾ ಮೂರ್ಖನೂ ಅಜ್ಞಾನಿಯೂ ಮೂರ್ಖನೂ ಕಃ, ನು ಅಸ್ತಿ ಯಾವನು ತಾನೇ ಇರುವನು? ತನ್ನ ಅಥವಾ ಆತ್ಮನ ಉದ್ಧಾರದ ವಿಷಯದಲ್ಲಿ ಅಥವಾ ಹಿತಕರ ವಿಷಯದಲ್ಲಿ ಧೀರನೂ / ಪುರುಷನೂ ಆದ ಮನುಷ್ಯನು ಸರಿಯಾದ ಗಮನವನ್ನು ಕೊಡಬೇಕು ; ಇಲ್ಲವಾದರೆ ಆತನ ಮನುಷ್ಯಜನ್ಮವೇ ವ್ಯರ್ಥವಾಗುವುದೆಂದು ಅಭಿಪ್ರಾಯ.



वदन्तु शास्त्राणि यजन्तु देवान्
कुर्वन्तु कर्माणि भजन्तु देवताः ।
आत्मैक्यबोधेन विना विमुक्तिः
न सिद्ध्यति ब्रह्मशतान्तरेऽपि ॥ ६ ॥
(उपजातिवृत्तम्— उपेन्द्रवज्रा + इन्द्रवज्रा— उपेन्द्रवज्रा जतजास्ततो गौ । स्यादिन्द्रवज्रा यदि तौ जगौगः ॥)


शास्त्राणि वदन्तु , देवान् यजन्तु , (पुण्य)कर्माणि कुर्वन्तु , देवताः भजन्तु , (किन्तु) आत्मैक्यबोधेन विना ब्रह्मशतान्तरेऽपि (साधकस्य) विमुक्तिः न सिद्ध्यति ॥


ವದನ್ತು ಶಾಸ್ತ್ರಾಣಿ ಯಜನ್ತು ದೇವಾನ್
ಕುರ್ವನ್ತು ಕರ್ಮಾಣಿ ಭಜನ್ತು ದೇವತಾಃ ।
ಆತ್ಮೈಕ್ಯಬೋಧೇನ ವಿನಾ ವಿಮುಕ್ತಿಃ
ನ ಸಿದ್ಧ್ಯತಿ ಬ್ರಹ್ಮಶತಾನ್ತರೇಽಪಿ ॥ ೬ ॥
(ಉಪಜಾತಿವೃತ್ತಮ್— ಉಪೇನ್ದ್ರವಜ್ರಾ + ಇನ್ದ್ರವಜ್ರಾ— ಉಪೇನ್ದ್ರವಜ್ರಾ ಜತಜಾಸ್ತತೋ ಗೌ । ಸ್ಯಾದಿನ್ದ್ರವಜ್ರಾ ಯದಿ ತೌ ಜಗೌಗಃ ॥)


ಶಾಸ್ತ್ರಗಳನ್ನು ಹೇಳಲಿ, ದೇವರುಗಳನ್ನು ಆರಾಧಿಸಲಿ, (ಪುಣ್ಯ)ಕರ್ಮಗಳನ್ನು ಮಾಡಲಿ, ದೇವತೆಗಳನ್ನು ಪೂಜಿಸಲಿ, ಭಜಿಸಲಿ, (ಆದರೆ) ಆತ್ಮೈಕ್ಯಜ್ಞಾನವಾಗದೆ ಇದ್ದರೆ ನೂರಾರು ಬ್ರಹ್ಮರ ಆಯುಸ್ಸಿನಷ್ಟು ಸುದೀರ್ಘಕಾಲದ ಬಳಿಕವೂ (ಸಾಧಕನಿಗೆ) ಮುಕ್ತಿಯುಂಟಾಗುವುದಿಲ್ಲ. 


शास्त्राणि— शिष्यते अनेन इति शास्त्रम्, शास् अनुशिष्टौ धातुः । शास्त्रं विद्या इत्यप्युच्यते । विद्यते असौ इति विद्या विद्यमाना । न विद्यते यथार्थज्ञानमिति अविद्या । ज्ञानम्, मन्त्रः, मोक्षे बुद्धिः, परमोत्तमपुरुषार्थस्य मोक्षस्य साधनीभूता ब्रह्मज्ञानपरा इत्यादिभ्यः विद्याशब्दः व्यवह्रियते । शास्त्राणामुत्पत्तिः ब्रह्मतपसेति पौराणिकमतम् । तानि च—
  1.  ऋग्यजुस्सामाथर्वाख्य-संहिताब्राह्मणयुतं चतुर्वेदात्मकं (" संहिता-ब्राह्मणयोः वेदनामधेयम् ") कर्मकाण्डम्  
  2. वेदानाम् आरण्यकात्मकमुपासनाकाण्डम् 
  3. उपनिषदाख्यं ज्ञानकाण्डम्
  4. शिक्षा-व्याकरण-च्छन्दो-ज्योतिष-निरुक्त-कल्पाख्य-षड्वेदाङ्गानि
  5. धर्मशास्त्राख्य-मनुयाज्ञवल्क्यपराशरहारीतगौतमवसिष्ठाङ्गिरसविष्णुशङ्खलिखितादिस्मृत्युपस्मृतीः
  6. साङ्ख्य(कपिल)योग(पतञ्जलि)वैशेषिक(कणाद)न्याय(गौतम)पूर्वमीमांसा(जैमिनि)-उत्तरमीमांसा/वेदान्त/उपनिषत्/शारीरकमीमांसा/ब्रह्मसूत्र(बादरायण-व्यास)-आख्यषडास्तिकदर्शनानि
  7. अद्वैत(शङ्कर)-विशिष्टाद्वैत(रामानुज)-द्वैत(मध्व)-शक्तिविशिष्टाद्वैत/वीरशैव/लिङ्गायत(बसवेश्वर)-सौर-गाणपत्य-शाक्त-शैव-वैष्णव-पाशुपत-कौमार-कापालिक-गौडीय(गौडदेशीय)-सनातन(निम्बार्क)-स्वामिनारायण(अक्षरब्रह्म)-प्रजापितब्रह्मकुमारीश्वरीयादिमतसिद्धान्तानां ग्रन्थाः
  8. आयुर्वेद(ऋक्)-धनुर्वेद(यजुर्)-गान्धर्ववेद(साम)-स्थापत्यवेद/वास्तुशिल्पशास्त्र-अर्थशास्त्र(अथर्व)-आद्युपवेदाः
  9. तन्त्रागमानि
  10. त्स्य-मार्कण्डेय-विष्य-भागवत-ब्रह्म-ब्रह्मवैवर्त-ब्रह्माण्ड-राह-वामन-वायु-विष्णु-ग्नि-नारद-द्म-लिङ्ग-रुड-कूर्म-स्कान्द-आख्य-अष्टादशमहापुराणानि ("म-द्वयं -द्वयं चैव ब्र-त्रयं व-चतुष्टयम् । अ-ना-प-लिङ्-ग-कू-स्का-नि पुराणानि प्रचक्षते ॥")
  11. आदि-नरसिंह-कुमारकृतस्कन्द-शिवधर्म-दुर्वास-नारद-कपिल-विष्णुधर्म-औषनस-ब्रह्माण्ड-कालिका-वरुण-माहेश्वर-साम्ब-सौर-पराशर-मारीच-भास्कराख्य-उपपुराणानि
  12. सनत्कुमार-बृहन्नारदीय-आदित्य-सूर्य-नन्दिकेश्वर-कूर्म-भागवत-वसिष्ठ-भार्गव-मुद्गल-कल्कि-देवी-महाभागवत-बृहद्धर्म-परानन्द-वह्नि-पशुपति-हरिवंशाख्य-औपपुराणानि
  13. रामायणमहाभारतगुरुचरित्रादीतिहासाः
  14.  स्तोत्र-सुभाषितेत्यादिशास्त्रजालानि च 


वदन्तु— (उपर्युक्तशास्त्राणि) कथयन्तु प्रपञ्चन्तु विस्तरन्तु व्याख्यान्तु । 


ಶಾಸ್ತ್ರಾಣಿ— "ಶಿಷ್ಯತೇ ಅನೇನ ಇತಿ ಶಾಸ್ತ್ರಮ್— ಶಾಸನಮಾಡಲ್ಪಡುತ್ತದೆ / ಆಳಲ್ಪಡುತ್ತದೆ / ವಿಧಿ-ನಿಷೇಧಾದಿಗಳನ್ನು ಹೇಳುವ ಮೂಲಕ ಇದರಿಂದ ಎಂಬುದರಿಂದಾಗಿ ಶಾಸ್ತ್ರವು " , 'ಶಾಸ್ ಅನುಶಿಷ್ಟೌ— ಶಾಸ್ ಅನುಶಾಸನ / ಸಂವಿಧಾನಾರ್ಥಕ ' ಎಂಬ ಧಾತು. ಶಾಸ್ತ್ರವು ವಿದ್ಯೆಯೆಂದೂ ಕರೆಯಲ್ಪಡುತ್ತದೆ. " ವಿದ್ಯತೇ ಅಸೌ ಇತಿ ವಿದ್ಯಾ— ಇದು ಇರುವಂಥದ್ದು / ವಿದ್ಯಮಾನವಾದದ್ದು ಎಂಬುದರಿಂದ ವಿದ್ಯೆಯು. " ಯಥಾರ್ಥಜ್ಞಾನವಿಲ್ಲದಿರುವಿಕೆಯೇ ಅವಿದ್ಯೆಯು ". ಜ್ಞಾನ, ಮಂತ್ರ, ಮೋಕ್ಷದಲ್ಲಿ ಬುದ್ಧಿಯಿರುವಿಕೆ, ಪರಮೋತ್ಕೃಷ್ಟ ಪುರುಷಾರ್ಥವೆನಿಸಿದ ಮೋಕ್ಷಕ್ಕೆಸಾಧನವಾದ ಬ್ರಹ್ಮಜ್ಞಾನಪರವಾದುದು ಇತ್ಯಾದಿಗಳಿಗಾಗಿ ವಿದ್ಯಾ ಶಬ್ದವು ವ್ಯವಹರಿಸಲ್ಪಡುತ್ತದೆ. ಶಾಸ್ತ್ರಗಳ ಉತ್ಪತ್ತಿಯು ಸೃಷ್ಟಿಕರ್ತನಾದ ಚತುರ್ಮುಖಬ್ರಹ್ಮನ ತಪಸ್ಸಿನ ಫಲವೆಂಬುದು ಪುರಾಣಗಳ ಅಭಿಪ್ರಾಯ. ಅವುಗಳಾದರೋ—
  1. ಋಗ್-ಯಜುಸ್-ಸಾಮ-ಅಥರ್ವಗಳೆಂಬ ಸಂಹಿತಾ-ಬ್ರಾಹ್ಮಣಗಳಿಂದ ಕೂಡಿದ ("ಸಂಹಿತೆ-ಬ್ರಾಹ್ಮಣಗಳಿಗೆ ವೇದವೆಂದು ಹೆಸರು") ಚತುರ್ವೇದಾತ್ಮಕವಾದ ಕರ್ಮಕಾಂಡ 
  2. ವೇದಗಳ ಆರಣ್ಯಕಗಳೆಂಬ ಉಪಾಸನಾಕಾಂಡ
  3. ಉಪನಿಷತ್ತುಗಳೆಂಬ ಜ್ಞಾನಕಾಂಡ
  4. ಶಿಕ್ಷಾ-ವ್ಯಾಕರಣ-ಛಂದಸ್-ಜ್ಯೋತಿಷ-ನಿರುಕ್ತ-ಕಲ್ಪವೆಂಬ ೬ ವೇದಾಂಗಗಳು 
  5. ಧರ್ಮಶಾಸ್ತ್ರಗಳೆಂಬ ಮನು-ಯಾಜ್ಞವಲ್ಕ್ಯ-ಪರಾಶರ-ಹಾರೀತ-ಗೌತಮ-ವಸಿಷ್ಠ-ಆಂಗಿರಸ-ವಿಷ್ಣು-ಶಂಖಲಿಖಿತಾದಿ ಸ್ಮೃತಿ-ಉಪಸ್ಮೃತಿಗಳು
  6. ಸಾಂಖ್ಯ(ಕಪಿಲ)-ಯೋಗ(ಪತಂಜಲಿ)-ವೈಶೇಷಿಕ(ಕಣಾದ)-ನ್ಯಾಯ(ಗೌತಮ)-ಪೂರ್ವಮೀಮಾಂಸಾ(ಜೈಮಿನಿ)-ಉತ್ತರಮೀಮಾಂಸಾ/ವೇದಾಂತ/ಉಪನಿಷತ್/ಶಾರೀರಕಮೀಮಾಂಸಾ/ಬ್ರಹ್ಮಸೂತ್ರ(ಬಾದರಾಯಣವ್ಯಾಸ)ವೆಂಬ ೬ ಆಸ್ತಿಕದರ್ಶನಗಳು
  7. ಅದ್ವೈತ(ಶಂಕರ)-ವಿಶಿಷ್ಟಾದ್ವೈತ(ರಾಮಾನುಜ)-ದ್ವೈತ(ಮಧ್ವ)-ಶಕ್ತಿವಿಶಿಷ್ಟಾದ್ವೈತ/ವೀರಶೈವ/ಲಿಂಗಾಯತ(ಬಸವೇಶ್ವರ)-ಸೌರ(ಸೂರ್ಯ)-ಗಾಣಪತ್ಯ(ಗಣಪತಿ)-ಶಾಕ್ತ(ಶಕ್ತಿ/ದೇವಿ)-ಶೈವ(ಶಿವ)-ವೈಷ್ಣವ(ವಿಷ್ಣು)-ಪಾಶುಪತ(ಪಶುಪತಿ)-ಕೌಮಾರ(ಕುಮಾರಸುಬ್ರಹ್ಮಣ್ಯ)-ಕಾಪಾಲಿಕ(ಕಪಾಲಧಾರಿಗಳು)-ಗೌಡೀಯ(ಬಾಂಗ್ಲಾಪ್ರದೇಶೀಯ)-ಸನಾತನ(ನಿಂಬಾರ್ಕ)-ಸ್ವಾಮಿನಾರಾಯಣ(ಅಕ್ಷರಬ್ರಹ್ಮ)-ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ಮುಂತಾದ ಮತಸಿದ್ಧಾಂತಗಳ ಗ್ರಂಥಗಳು
  8. ಆಯುರ್ವೇದ(ಋಕ್)-ಧನುರ್ವೇದ(ಯಜುರ್)-ಗಾಂಧರ್ವವೇದ(ಸಾಮ)-ಸ್ಥಾಪತ್ಯವೇದ/ವಾಸ್ತುಶಿಲ್ಪಶಾಸ್ತ್ರ ಹಾಗೂ ಅರ್ಥಶಾಸ್ತ್ರಗಳು (ಅಥರ್ವ)- ಮುಂತಾದ ಉಪವೇದಗಳು
  9. ತಂತ್ರ-ಆಗಮಗಳು
  10. ತ್ಸ್ಯ-ಮಾರ್ಕಂಡೇಯ-ವಿಷ್ಯ-ಭಾಗವತ-ಬ್ರಹ್ಮ-ಬ್ರಹ್ಮವೈವರ್ತ-ಬ್ರಹ್ಮಾಂಡ-ರಾಹ-ವಾಮನ-ವಾಯು-ವಿಷ್ಣು-ಗ್ನಿ-ನಾರದ-ದ್ಮ-ಲಿಂಗ-ರುಡ-ಕೂರ್ಮ-ಸ್ಕಾನ್ದ ಎಂಬ ೧೮ ಮಹಾಪುರಾಣಗಳು ("-ದ್ವಯಂ -ದ್ವಯಂ ಚೈವ ಬ್ರ-ತ್ರಯಂ -ಚತುಷ್ಟಯಮ್ | ಅ-ನಾ-ಪ-ಲಿಂ-ಗ-ಕೂ-ಸ್ಕಾ-ನಿ ಪುರಾಣಾನಿ ಪ್ರಚಕ್ಷತೇ ||")
  11. ಆದಿ-ನರಸಿಂಹ-ಕುಮಾರಕೃತಸ್ಕಂದ-ಶಿವಧರ್ಮ-ದುರ್ವಾಸ-ನಾರದ-ಕಪಿಲ-ವಿಷ್ಣುಧರ್ಮ-ಔಷನಸ-ಬ್ರಹ್ಮಾಂಡ-ಕಾಲಿಕಾ-ವರುಣ-ಮಾಹೇಶ್ವರ-ಸಾಂಬ-ಸೌರ-ಪರಾಶರ-ಮಾರೀಚ-ಭಾಸ್ಕರ-ಎಂಬ ಉಪಪುರಾಣಗಳು
  12. ಸನತ್ಕುಮಾರ-ಬೃಹನ್ನಾರದೀಯ-ಆದಿತ್ಯ-ಸೂರ್ಯ-ನನ್ದಿಕೇಶ್ವರ-ಕೂರ್ಮ-ಭಾಗವತ-ವಸಿಷ್ಠ-ಭಾರ್ಗವ-ಮುದ್ಗಲ-ಕಲ್ಕಿ-ದೇವೀ-ಮಹಾಭಾಗವತ-ಬೃಹದ್ಧರ್ಮ-ಪರಾನನ್ದ-ವಹ್ನಿ-ಪಶುಪತಿ-ಹರಿವಂಶ-ಎಂಬ ಔಪಪುರಾಣಗಳು
  13. ರಾಮಾಯಣ-ಮಹಾಭಾರತ-ಗುರುಚರಿತ್ರ- ಮುಂತಾದ ಇತಿಹಾಸಗ್ರಂಥಗಳು
  14. ಹಾಗೂ ಸ್ತೋತ್ರ-ಸುಭಾಷಿತ- ಇತ್ಯಾದಿ ಶಾಸ್ತ್ರಜಾಲಗಳು.


ವದನ್ತು— (ಮೇಲೆ ಹೇಳಿದ ಶಾಸ್ತ್ರಗಳನ್ನು) ಕಥನಮಾಡಲಿ, ಚರ್ಚಿಸಲಿ, ವಿಸ್ತರಿಸಲಿ, ವ್ಯಾಖ್ಯಾನಿಸಲಿ.

 देवान् नानादेवतारूपान् देवजातान् विद्योपासनापुण्यविशेषप्राप्तदिव्यशरीरान् अशाश्वतान् अब्रह्मज्ञान् इति । देवशब्दस्य मूलं दिवि > दिव् प्रीणने, दिवु > दिव् कान्तौ, क्रीडायाम्, गतौ, द्युतौ, अर्दने, परिकूजने, मदे, मोदने, विजिगीषायाम्, व्यवहारे, स्तुतौ, स्वप्ने च इति धातुः । अतः देवाः भक्तप्रार्थनानि परिगृह्य प्रसन्नाः, भक्तान् अनुगृह्य तानपि तर्पयन्ति इति दिवि प्रीणने । कान्तिरूपाः, शोभायमानाः, इति कान्तौ । जगति क्रीडन्ति रमन्ति, गच्छन्ति सर्वत्र, ध्युतिरूपाः प्रकाशन्ति, दुष्टान् अर्दन्ति हिंसन्ति, देवासुरसङ्ग्रामे धर्माधर्मसङ्ग्रामे पक्षिण इव ध्वनिं कुर्वन्ति परिकूजन्ति वा, कदाचिन्मदोन्मत्ताः च भवन्ति सुरापानेन वा, सदा मोदन्ति हृष्यन्ति, सदा धर्मविजयेच्छवः, लोकव्यवहारकारणाः, स्तुत्याः, परन्तु स्वप्नमिव अशाश्वताः स्वप्ने वा दृश्यमानाः भक्तैः इति वा नानार्थाः । 
यजन्तु इति यज देवपूजा-सङ्गतिकरण-दानेषु नाम धातुना जन्यः । तादृशान् देवान् अनन्तकालपर्यन्तं पूजयन्तु , सेवन्ताम् , उपास्यन्तु , ध्यायन्तु , तेभ्यो हविर्दानं वा कुर्वन्तु यज्ञयागादिषु ।

ದೇವಾನ್ ನಾನಾದೇವತಾರೂಪಗಳನ್ನು ದೇವಯೋನಿಯಲ್ಲಿ ಜನಿಸಿದವರನ್ನು ವಿದ್ಯೆಯ ಉಪಾಸನೆಯ ಪುಣ್ಯವಿಶೇಷಬಲದಿಂದ ಪ್ರಾಪ್ತವಾದ ದಿವ್ಯಶರೀರಿಗಳನ್ನು ಅಶಾಶ್ವತರನ್ನು ಬ್ರಹ್ಮಜ್ಞರಲ್ಲದವರನ್ನು ಎಂದರ್ಥ. ದೇವಶಬ್ದದ ಮೂಲವು ದಿವಿ > ದಿವ್ ಪ್ರೀಣನೇ (ತೃಪ್ತಿಪಡಿಸುವುದು), ದಿವು  > ದಿವ್ ಕಾನ್ತೌ (ಕಾಂತಿ / ಆಕರ್ಷಕ ಕಾಂತಶಕ್ತಿ), ಕ್ರೀಡಾಯಾಮ್, ಗತೌ, ದ್ಯುತೌ, ಅರ್ದನೇ, ಪರಿಕೂಜನೇ, ಮದೇ, ಮೋದನೇ, ವಿಜಿಗೀಷಾಯಾಮ್, ವ್ಯವಹಾರೇ, ಸ್ತುತೌ ಹಾಗೂ ಸ್ವಪ್ನೇ ಎಂಬ ಧಾತು. ಆದ್ದರಿಂದ ದೇವತೆಗಳು ಭಕ್ತರ ಪ್ರಾರ್ಥನೆಗಳನ್ನು ಸ್ವೀಕರಿಸಿ ಪ್ರಸನ್ನರಾಗಿ, ಭಕ್ತರನ್ನು ಅನುಗ್ರಹಿಸಿ ಅವರನ್ನೂ ತೃಪ್ತಿಪಡಿಸುತ್ತಾರೆಂಬುದರಿಂದಾಗಿ ದಿವಿ ಪ್ರೀಣನೇ. ಅವರು ಉಜ್ಜ್ವಲ ಕಾಂತಿರೂಪರೂ / ಆಕರ್ಷಕರೂಪರೂ, ಶೋಭಾಯಮಾನರೂ ಎಂಬುದು ದಿವು ಕಾನ್ತೌ. ಜಗತ್ತಿನಲ್ಲೆಲ್ಲ ಕ್ರೀಡಿಸುತ್ತಾರೆ ರಮಿಸುತ್ತಾರೆ ಆಟವಾಡುತ್ತಾರೆ, ಎಲ್ಲೆಡೆಯೂ ಗಮನ / ಗತಿಶೀಲತೆಯುಳ್ಳವರು, ದ್ಯುತಿ / ಬೆಳಕಿನರೂಪದಿಂದ ಬೆಳಗಿ ಪ್ರಕಾಶಿಸುವವರು, ದುಷ್ಟರನ್ನು ಅರ್ದಿಸುತ್ತಾರೆ / ಮರ್ದನಮಾಡುತ್ತಾರೆ / ಹಿಂಸಿಸುತ್ತಾರೆ, ದೇವಾಸುರಸಂಗ್ರಾಮದಲ್ಲಿ ಧರ್ಮ-ಅಧರ್ಮಸಂಗ್ರಾಮದಲ್ಲಿ ಪಕ್ಷಿಗಳಂತೆ ಧರ್ಮಪಕ್ಷಕ್ಕೆ ಜಯಘೋಷದ ಪರಿಕೂಜನವನ್ನು ಮಾಡುತ್ತಾರೆ, ಕೆಲವು ಬಾರಿ ಮೈಮರೆತು ಅಹಂಕಾರ / ಸುರಾಪಾನದಿಂದ ಮದೋನ್ಮತ್ತರಾಗುತ್ತಾರೆ, ಯಾವಾಗಲೂ ಸ್ವರ್ಗಸುಖದ ಆಮೋದ-ಪ್ರಮೋದಗಳಲ್ಲಿ ತೊಡಗಿರುತ್ತಾರೆ, ಯಾವಾಗಲೂ ಧರ್ಮಕ್ಕೇ ವಿಜಯವನ್ನು ಬಯಸುವವರು, ಲೋಕವ್ಯವಹಾರಕ್ಕೆ ಕಾರಣರು, ಎಲ್ಲರಿಂದ ಸ್ತುತಿಸಲ್ಪಡುವವರು, ಆದರೆ ಕನಸಿನಂತೆ ಅಶಾಶ್ವತರು, ಮನ್ವಂತರವು ಬದಲಾವಣೆಯಾದಾಗ ದೇವತೆಗಳ ಆಯುಸ್ಸೂ ಮುಗಿದು ಬೇರೆಯವರು ಆ ಪಟ್ಟಗಳಿಗೇರುವರು, ಅಥವಾ ಭಕ್ತರಿಗೆ ಸ್ವಪ್ನದಲ್ಲಿ ದರ್ಶನವೀಯುವವರು ಎಂದು ನಾನಾರ್ಥಗಳಿವೆ.
ಯಜನ್ತು ಎಂಬುದು ಯಜ ದೇವಪೂಜಾ-ಸಂಗತಿಕರಣ-ದಾನೇಷು ಎಂಬ ಧಾತುವಿನಿಂದ ಹುಟ್ಟಿದ್ದು. ಅಂತಹ ದೇವರುಗಳನ್ನು ಅಂತ್ಯವಿಲ್ಲದಷ್ಟು ಕಾಲದ ವರೆಗೆ ಪೂಜಿಸಲಿ, ಸೇವೆಮಾಡಲಿ, ಉಪಾಸಿಸಲಿ, ಧ್ಯಾನಿಸಲಿ, ಅಥವಾ ಅವರಿಗೆ ಹವಿರ್ದಾನವನ್ನು ಯಜ್ಞಯಾಗಾದಿಗಳಲ್ಲಿ ಮಾಡಲಿ.

कर्माणि यानि क्रियन्ते पुण्यपापकर्तृभोक्त्रादिभावैः तानि क्रियाः । कुर्वन्तु यथेच्छं पुण्यकर्माणि कुर्वन्तु नाम । देवताः देवान् वा स्त्रीरूपान् भजन्तु भज विश्राणने (दाने) सेवायाम् भाषार्थे च धातुः , सेवन्ताम् , देवताः प्रति सम्भाषणं कुर्वन्तु प्रार्थनादिद्वारा , ताभ्यः द्रव्यादिसमर्पणं वा कुर्युः ।

ಕರ್ಮಾಣಿ ಪುಣ್ಯ-ಪಾಪ-ಕರ್ತೃ-ಭೋಕ್ತೃ ಮುಂತಾದ ಭಾವಗಳಿಂದ ಯಾವ ಕ್ರಿಯೆಗಳು ಮಾಡಲ್ಪಡುವುವೋ ಅವುಗಳೇ ಕರ್ಮಗಳೆನಿಸುತ್ತವೆ. ಕುರ್ವನ್ತು ಯಥೇಚ್ಛವಾಗಿ ಪುಣ್ಯಕರ್ಮಗಳನ್ನು ಮಾಡಿದರೆಂದಿಟ್ಟುಕೊಳ್ಳೋಣ. ದೇವತಾಃ ಸ್ತ್ರೀರೂಪದ ದೇವತೆಗಳನ್ನು ಭಜನ್ತು ಭಜ ವಿಶ್ರಾಣನೇ (ದಾನೇ) ಸೇವಾಯಾಮ್ ಭಾಷಾರ್ಥೇ ಚ ಧಾತುವು, ಸೇವೆಮಾಡಲಿ, ದೇವತೆಗಳನ್ನುದ್ದೇಶಿಸಿ ಪ್ರಾರ್ಥನಾದಿಗಳ ಮೂಲಕ ಸಂಭಾಷಿಸಲಿ, ಅಥವಾ ಅವರಿಗೆ ನಾನಾ ಸುವಸ್ತುಗಳ ಸಮರ್ಪಣೆಯನ್ನಾದರೂ ಮಾಡಲಿ.

ब्रह्मशतान्तरे अपि शताधिकब्रह्मपराऽवध्यतीतेष्वपि इत्थं अनन्तकालपर्यन्तं क्रियमाणेष्वपि आत्म-ऐक्य-बोधेन विना ब्रह्मात्मैकत्वज्ञानेन अन्तरा वि-मुक्तिः विशेष-अद्वैतमुक्तिः शाश्वती न सिद्ध्यति अनवाप्तैव भवति । 

ಬ್ರಹ್ಮಶತಾನ್ತರೇ ಅಪಿ ಸೃಷ್ಟಿಕರ್ತನೂ, ತ್ರಿಮೂರ್ತಿಗಳಲ್ಲೋರ್ವನೂ ಆದ ಚತುರ್ಮುಖಬ್ರಹ್ಮನ ಆಯುರ್ಮಾನವಾದ "ಪರಾ" ಎಂಬ ಕಾಲಾವಧಿಯು ನೂರಾರು ಬಾರಿ ಕಳೆದು ಹೋದರೂ, ಅರ್ಥಾತ್ ಅನೇಕ ಬ್ರಹ್ಮರ ಕಾಲಾವಧಿಗಳು ಮುಗಿದು ಹೋದರೂ ಕೂಡ, ಹೀಗೆ ಅನಂತಕಾಲದವರೆಗೆ ಶಾಸ್ತ್ರಗಳ ಪಠನ-ಪಾಠನ, ದೇವರುಗಳ ಯಜನ-ಯಾಜನ, ದೇವತೆಗಳ ಪೂಜೆ-ಭಜನೆ, ಪುಣ್ಯಾದಿ ಕರ್ಮಗಳ ಮಾಡುವಿಕೆ— ಮುಂತಾದವುಗಳನ್ನು ಆಚರಿಸುತ್ತಿದ್ದರೂ, ಆತ್ಮ-ಐಕ್ಯ-ಬೋಧೇನ ವಿನಾ ಬ್ರಹ್ಮ-ಆತ್ಮಗಳ ಏಕತ್ವಜ್ಞಾನವಾಗದ ಹೊರತು, ವಿ-ಮುಕ್ತಿಃ ವಿಶೇಷವೂ ಶಾಶ್ವತವೂ ಆದ ಅದ್ವೈತಮುಕ್ತಿಯು, ನ ಸಿದ್ಧ್ಯತಿ ಸಿದ್ಧಿಸಲಾರದು (ಪ್ರಾಪ್ತಿಯಾಗದೇ ಉಳಿಯುವುದು).

"सहस्रयुगपर्यन्तमहर्यद्ब्रह्मणो विदुः । रात्रिं युगसहस्रान्तं…" (गीता) इत्यनेन कृतत्रेताद्वापरकल्याख्यचतुर्युगचक्रस्य (कलौ ४,३२,००० मानववर्षाणि, द्वापरे कलेर्द्विगुणं, त्रेतायां कलेस्त्रिगुणं, कृते च कलेश्चतुर्गुणम् ) द्विसहस्रावर्तनं सृष्टिकर्त्रेः त्रिमूर्तिष्वन्यतमस्य चतुराननब्रह्मणः दिनमानं कल्पाख्यं भवति (८६,४०,००,००० मानववर्षाणि)। 

"ಸಾವಿರ ಮಾನುಷ ಚತುರ್ಯುಗಪ್ರವರ್ತನೆಯು ಸೃಷ್ಟಿಕರ್ತನಾದ ಚತುರ್ಮುಖ ಬ್ರಹ್ಮನ ೧ ಹಗಲೆಂದೂ, ಮನುಷ್ಯಮಾನದ ಕೃತ-ತ್ರೇತಾ-ದ್ವಾಪರ-ಕಲಿಯೆಂಬ ಚತುರ್ಯುಗ (=೧ ಮಹಾಯುಗ ಅಥವಾ ದೇವಯುಗ)ಗಳು ಮತ್ತೆ ೧,೦೦೦ ಬಾರಿ ಬಂದಾಗ ಆತನ ೧ ರಾತ್ರಿಯೆಂದೂ" ಗೀತಾಚಾರ್ಯನಿಂದ ಹೇಳಲ್ಪಟ್ಟಂತೆ, ಈ ಚತುರ್ಯುಗಚಕ್ರದ (ಕಲಿಯುಗಾವಧಿ ೪,೩೨,೦೦೦ ಮಾನವವರ್ಷಗಳು, ದ್ವಾಪರ ಇದರ ದ್ವಿಗುಣ, ತ್ರೇತಾವಧಿ ಕಲಿಯ ತ್ರಿಗುಣ ಹಾಗೂ ಕೃತಾವಧಿ ಕಲಿಯ ಚತುರ್ಗುಣ) ೨,೦೦೦ ಬಾರಿಯ ಪುನರಾವರ್ತನೆಯು ಬ್ರಹ್ಮನ "ಕಲ್ಪ" ಎಂದು ಕರೆಯಲ್ಪಡುವ ೧ ದಿನವಾಗುತ್ತದೆ (೮೬,೪೦,೦೦,೦೦೦ ಮಾನವವರ್ಷಗಳು). 

एवं शतवर्षाणि तदायुर्मानम् । ಇಂತಹ ಬ್ರಹ್ಮಮಾನದ ನೂರು ವರ್ಷಗಳು ಆತನ ಆಯುಷ್ಯ. तादृशानां शताधिकानामपि ब्रह्मणामायुर्मानकालपर्यन्तं शास्त्रवादः, देवयजनम्, कर्मकरणम्, देवताराधनं वा क्रियतेऽहर्निशमपि साधकस्य जननमरणशृङ्खलामुक्तिः जीवन्मुक्तिर्वा न सम्पद्यते । ಅಂತಹ ನೂರಾರು ಬ್ರಹ್ಮರ ಆಯುಷ್ಯಕಾಲದವರೆಗೆ ಶಾಸ್ತ್ರವಾದ, ದೇವಯಜ್ಞ, ವೇದೋಕ್ತ ಕರ್ಮಾನುಷ್ಠಾನ ಅಥವಾ ದೇವತಾರಾಧನೆ— ಇವುಗಳನ್ನು ಹಗಲಿರುಳು ಮಾಡುತ್ತಿದ್ದರೂ ಸಾಧಕನಿಗೆ ಜನನಮರಣಸರಪಣಿಯಿಂದ ಬಿಡುಗಡೆ ಅಥವಾ ಬದುಕಿದ್ದೂ ಬರುವ ಜೀವನ್ಮುಕ್ತಿಯೂ ಉಂಟಾಗದು.  परन्तु बन्धमुक्तिः आत्मपरमात्माभेददर्शनानुभवसंस्थितेरेव "ज्ञानादेव हि कैवल्यम् ", "न हि ज्ञानेन सदृशं पवित्रमिह विद्यते ", "न कर्मणा न प्रजया धनेन त्यागेनैके अमृतत्वमानशुः ", "प्रज्ञानं ब्रह्म ", "तत्त्वमसि ", "अयमात्मा ब्रह्म ", "सर्वं खल्विदं ब्रह्म ", "अहं ब्रह्मास्मि " इत्यादिभ्यः ॥ ಆದರೆ, ಬಂಧಮುಕ್ತಿಯು ಆತ್ಮಪರಮಾತ್ಮಗಳ ಅಭೇದದರ್ಶನದ ಅನುಭವದಲ್ಲೇ ನೆಲೆನಿಲ್ಲುವಿಕೆಯಿಂದಲೇ ಎಂಬುದು ಹಲವು ಶ್ರುತಿಸ್ಮೃತಿವಚನಸಿದ್ಧವಾದುದು— "ಜ್ಞಾನದಿಂದಲೇ ಮೋಕ್ಷ ", "ಜ್ಞಾನಕ್ಕೆ ಸಮನಾದ ಪವಿತ್ರವಸ್ತುವು ಇಲ್ಲಿ ಯಾವುದೂ ಇಲ್ಲ", "ಕರ್ಮದಿಂದಲಾಗಲೀ, ಸಂತಾನದಿಂದಾಗಲೀ, ಧನದಿಂದಾಗಲೀ ಅಮೃತತ್ತ್ವವಿಲ್ಲ; ಅದು ಕೇವಲ ಸರ್ವ ಅನಾತ್ಮವಸ್ತುಗಳ ಪರಿತ್ಯಾಗಬುದ್ಧಿಯಿಂದಲೇ ಸಿದ್ಧಿಸುವುದು", "ಪ್ರಜ್ಞಾನವೇ ಬ್ರಹ್ಮವು", "ಅದು ನೀನೇ ಆಗಿರುವಿ", "ಈ ಆತ್ಮನೇ ಬ್ರಹ್ಮವು", "ಇದೆಲ್ಲವೂ ಬ್ರಹ್ಮವೇ ", "ನಾನು ಬ್ರಹ್ಮಸ್ವರೂಪನು" ಇತ್ಯಾದಿ ವಾಕ್ಯಗಳೇ ಇದಕ್ಕೆ ಪ್ರಮಾಣಗಳು.

Comments

Popular posts from this blog

೧೭. ವಿಶುದ್ಧವೇದಾಂತಪರಿಭಾಷಾ / १७. विशुद्धवेदान्तपरिभाषा

೩. ಶ್ರೀಮದ್-ಭಗವದ್ಗೀತಾ-ಪೀಠಿಕಾ ೨