೧೧. ಶ್ರೀಮದ್-ಭಗವದ್ಗೀತಾ-ಪೀಠಿಕಾ ೮

(೩೦) ಧನಪತಿಸೂರಿಕೃತಾ ಭಾಷ್ಯೋತ್ಕರ್ಷದೀಪಿಕಾ

ಸಪ್ತದ್ವೀಪಾ ಧರೇಯಂ ಸಗಿರಿವನಜಲಾ, ಲೋಕಪಾಲಾಃ ಸಲೋಕಾಃ,

ಬ್ರಹ್ಮಾಂಡೇ ಸನ್ತಿ ಯಸ್ಮಿನ್ ಸಲಿಲಹುತಭುಗಾದ್ಯಾವೃತೇ, ತತ್ಪ್ರಧಾನಾತ್ |

ಯಸ್ಮಾದವ್ಯಕ್ತಸಂಜ್ಞಾದ್ಭವತಿ ಗುಣಮಯಾದ್ ವೇದವೇದ್ಯಃ ಪರೋ ಯಃ,

ತಸ್ಮಾನ್ನಾರಾಯಣಂ ತಂ ಸುವಿಮಲಸಭಯಂ ಶಂಕರಂ ನೌಮಿ ಸತ್ಯಮ್ || ೧ ||

(“ಮ್ರಭ್ನೈರ್ಯಾನಾಂ ತ್ರಯೇಣ ತ್ರಿಮುನಿಯತಿಯುತಾ ಸ್ರಗ್ಧರಾ ಕೀರ್ತಿತೇಯಮ್ ”)


(ತತ್) ಆ ಪರವಸ್ತುವು,  (ಪ್ರಧಾನಾತ್) ತನ್ನದಾದ ಪ್ರಧಾನವೆನಿಸಿದ ಮೂಲಪ್ರಕೃತಿಯಿಂದಾಗಿ / ಮಹತ್ತತ್ತ್ವದ ದೆಸೆಯಿಂದಾದ, (ಯಸ್ಮಿನ್ ಸಲಿಲ-ಹುತಭುಗಾದ್ಯಾವೃತೇ ಬ್ರಹ್ಮಾಣ್ಡೇ) ಯಾವ ಜಲ, ಅಗ್ನಿ ಮುಂತಾದ ಪಂಚಮಹಾಭೂತಗಳಿಂದ (ಪೃಥ್ವಿ-ಅಪ್-ತೇಜ-ವಾಯು-ಆಕಾಶ) ಆವೃತವಾದ ಬ್ರಹ್ಮಾಂಡವಿದೆಯೋ ಅದರಲ್ಲಿ, (ಸಗಿರಿವನಜಲಾ) ಪರ್ವತ-ಕಾಡು-ನದಿ-ತೊರೆಗಳಿಂದ ಕೂಡಿದ, (ಸಪ್ತದ್ವೀಪಾ) ಜಂಬೂ, ಪ್ಲಕ್ಷ, ಶಾಲ್ಮಲೀ, ಕುಶ, ಕ್ರೌಂಚ, ಶಾಕ, ಪುಷ್ಕರವೆಂಬ ಏಳು ದ್ವೀಪಗಳ (ಇಯಂ ಧರಾ) ಈ ವಸುಂಧರೆಯೂ, (ಸಲೋಕಾಃ) ಅತಲ ವಿತಲ ಸುತಲ ತಲಾತಲ ರಸಾತಲ ಮಹಾತಲ ಪಾತಲವೆಂಬ ೭ ಅಧೋಲೋಕಗಳ ಸಹಿತರೂ, ಭೂಃ ಭುವಃ ಸುವಃ ಮಹಃ ಜನಃ ತಪಃ ಸತ್ಯಮ್ ಎಂಬ ೭ ಊರ್ಧ್ವಲೋಕಗಳ ಸಮೇತರೂ ಆದ, (ಲೋಕಪಾಲಾಃ) ಪೂರ್ವಕ್ಕೆ ಇಂದ್ರ ಆಗ್ನೇಯಕ್ಕೆ ಅಗ್ನಿ ದಕ್ಷಿಣಕ್ಕೆ ಯಮ ನೈರ್ಋತ್ಯಕ್ಕೆ ನಿರುತಿ ಪಶ್ಚಿಮಕ್ಕೆ ವರುಣ ವಾಯವ್ಯಕ್ಕೆ ವಾಯು ಉತ್ತರಕ್ಕೆ ಕುಬೇರ ಈಶಾನ್ಯಕ್ಕೆ ಈಶಾನ ಅಧೋದಿಕ್ಕಿಗೆ ಅನಂತ ಊರ್ಧ್ವದಿಕ್ಕಿಗೆ ಬ್ರಹ್ಮ ರೆಂಬ ದಶದಿಕ್ಪಾಲಕರೂ ಆದ ಲೋಕಪಾಲಕರೂ, (ಸನ್ತಿ) ಇರುವರೋ, (ಯಸ್ಮಾತ್, ಗುಣಮಯಾತ್) ತನ್ನದೇ ಆದ ಯಾವ ಸತ್ತ್ವ ರಜ ತಮಗಳೆಂಬ ತ್ರಿಗುಣಗಳಿಂದ ಕೂಡಿರುವ, (ಅವ್ಯಕ್ತಸಂಜ್ಞಾತ್) ಅವ್ಯಕ್ತವಾದ ಮೂಲಪ್ರಕೃತಿಯ ದೆಸೆಯಿಂದ,  (ಯಃ) ಯಾವ, (ವೇದವೇದ್ಯಃ) ಜ್ಞಾನದಿಂದಲೇ ಅರಿಯಲ್ಪಡುವ, (ಪರಃ) ಪರಮಾತ್ಮನು, (ಭವತಿ) ಸಗುಣ ಸಾಕಾರನಾಗಿಯೂ ಉಂಟಾಗುವನೋ, (ತಸ್ಮಾತ್) ಹಾಗಾದ್ದರಿಂದ, (ತಮ್) ಅಂತಹ, (ಸತ್ಯಮ್) ಸತ್ಯಸ್ವರೂಪನೂ, (ಶಂಕರಮ್) ಲೋಕಕ್ಕೆ ಶುಭಂಕರನೂ, (ನಾರಾಯಣಮ್) ಮೋಕ್ಷಾಶ್ರಯನೂ ಆದ ಭಗವಂತನನ್ನು, (ಸು-ವಿಮಲ-ಸ-ಭಯಮ್) ನಿಷ್ಕಲ್ಮಷಹೃದಯದಿಂದಲೂ, ಶ್ರದ್ಧಾಭಯಭಕ್ತಿಗಳಿಂದಲೂ, (ನೌಮಿ) ನಮಿಸುತ್ತೇನೆ.


ಸೃಷ್ಟ್ವೇದಂ ಶ್ರುತಿಗಂ ಪ್ರವೃತ್ತಿಜನಕಂ ಧರ್ಮಂ ಮರೀಚ್ಯಾದಿಕಾನ್,

ವಿಶ್ವಸ್ಥಾಪನಹೇತವೇऽಬ್ಜಜತನುಃ ಸಂಗ್ರಾಹಯಾಮಾಸ ಯಃ |

ಸರ್ವಾನರ್ಥನಿಬರ್ಹಣಂ ಚ ಸನಕಾದ್ಯಾನ್ ಪೂರ್ವಸೃಷ್ಟಾನ್ ಋಷೀನ್,

ವೈರಾಗ್ಯಾದಿಕಲಕ್ಷಣಂ ಶಿವಮಹಂ ತಂ ವಾಸುದೇವಂ ಭಜೇ || ೨ ||

(“ಸೂರ್ಯಾಶ್ವೈರ್ಮಸಜಸ್ತತಾಸ್ಸಗುರವಃ ಶಾರ್ದೂಲವಿಕ್ರೀಡಿತಮ್ ”)


ಅನ್ವಯಃ— ಯಃ ಅಬ್ಜಜತನುಃ ಮರೀಚ್ಯಾದಿಕಾನ್ ಸೃಷ್ಟ್ವಾ ಶ್ರುತಿಗಂ ಪ್ರವೃತ್ತಿಜನಕಮ್ ಇದಂ ಧರ್ಮಂ  ಚ, ಸರ್ವಾನರ್ಥನಿಬರ್ಹಣಂ ವೈರಾಗ್ಯಾದಿಕಲಕ್ಷಣಂ ವಿಶ್ವಸ್ಥಾಪನಹೇತವೇ ಸಂಗ್ರಾಹಯಾಮಾಸ, ಪೂರ್ವಸೃಷ್ಟಾನ್ ಸನಕಾದ್ಯಾನ್ ಋಷೀನ್, ತಂ ಶಿವಂ ವಾಸುದೇವಮ್ ಅಹಂ ಭಜೇ ||


ತಾತ್ಪರ್ಯಮ್— ಯಾವ ಓರ್ವನೇ ಪರಮಾತ್ಮನು ಕಮಲಜ ಚತುರ್ಮುಖಬ್ರಹ್ಮನ ತನುವನ್ನಾಂತು ಸೃಷ್ಟಿಕರ್ತನಾಗಿ, ಮರೀಚಿಯೇ ಮೊದಲಾದ ಸಪ್ತಪ್ರಜಾಪತಿಗಳನ್ನು ಸೃಜಿಸಿ, ವೇದಾನುಸಾರಿಯಾದ ಪ್ರವೃತ್ತಿಯನ್ನುಂಟುಮಾಡುವಂತಹ ಈ ವ್ಯಾವಹಾರಿಕ / ಲೌಕಿಕವಾದ ಪ್ರವೃತ್ತಿಧರ್ಮವನ್ನು ಹಾಗೂ ಅದಕ್ಕೂ ಮೊದಲು ಸನಕಾದಿ ಋಷಿಗಳನ್ನು ಸೃಜಿಸಿ ಎಲ್ಲ ಅನರ್ಥ-ದುಃಖಾದಿ ಪರಂಪರೆಗಳನ್ನು ನಿವಾರಿಸಬಲ್ಲ ವೈರಾಗ್ಯಾದಿ ಲಕ್ಷಣವುಳ್ಳ ನಿವೃತ್ತಿಧರ್ಮವನ್ನು, ವಿಶ್ವದ ಸುಸ್ಥಿತಿಗಾಗಿ / ಸಂಸ್ಥಾಪನೆಗಾಗಿ / ಪಾಲನೆಗಾಗಿ / ರಕ್ಷಣೆ ಹಾಗೂ ಸುವ್ಯವಸ್ಥೆಗಾಗಿ ಸ್ವೀಕರಿಸಿದನೋ / ಪ್ರಚುರಪಡಿಸಿದನೋ, ಅಂತಹ ಹಿಂದೆ ಸೃಜಿಸಲ್ಪಟ್ಟ ಸನಕ ಸನಂದನ ಸನಾತನ ಸನತ್ಕುಮಾರ ನಾರದಾದಿ ವಿರಕ್ತರೂಪೀ ನಿವೃತ್ತಿಪರ ಋಷಿಗಳನ್ನೂ, ಮರೀಚಿ ಕಶ್ಯಪ ದಕ್ಷ ಕರ್ದಮ ಪುಲಸ್ತ್ಯ ಪುಲಹ ಕ್ರತು ಮುಂತಾದ ಪ್ರಜಾಪತಿರೂಪೀ ಪ್ರವೃತ್ತಿಪರ ಋಷಿಗಳನ್ನೂ, ಲಯ / ಸಂಹಾರ ಕಾರಕನಾಗಿ ಲೋಕಮಂಗಳಕರನಾಗಿ ಶಿವನೆನಿಸಿದ, ಸಮಸ್ತ ಸೃಷ್ಟಿಯಲ್ಲಿಯೂ ವಾಸವಾಗಿ ಸ್ಥಿತಿಪಾಲಕನಾಗಿ ಬೆಳಗುತ್ತಿರುವುದರಿಂದ ವಾಸುದೇವನೆನಿಸಿದ ಏಕಮೇವಾದ್ವಿತೀಯನಾದ ಭಗವಂತನನ್ನೂ, ನಾನು ಭಜಿಸುತ್ತೇನೆ / ಪೂಜಿಸುತ್ತೇನೆ / ಸೇವೆಮಾಡುತ್ತೇನೆ.


ಶಬ್ದಸ್ವಾರಸ್ಯ— 


★ ಅಬ್ಜಜತನುಃ— “ಅಪ್+ಜ+ಜ+ತನುಃ | ಅಪ್ಸು ಜಾಯತೇ ಇತಿ ಅಬ್ಜಂ ಕಮಲಮ್ |” ನೀರಿನಲ್ಲಿ ಹುಟ್ಟುತ್ತದೆಯೆಂಬುದರಿಂದ ಅಬ್ಜವೆಂದರೆ ತಾವರೆ. ಹರಿಯ ನಾಭಿಯಲ್ಲಿನ ತಾವರೆಯಲ್ಲಿ ಹುಟ್ಟಿದ್ದರಿಂದ ಬ್ರಹ್ಮನು ಅಬ್ಜಜನು. “ಅಬ್ಜೇ ಜಾಯತೇ ಇತಿ ಬ್ರಹ್ಮಾ ಅಬ್ಜಜಃ |” ಒಬ್ಬನೇ ಪರಮಾತ್ಮನು ಬೇರೆ ಬೇರೆ ರೂಪವನ್ನು ತಾಳುವುದರಿಂದ, ಬ್ರಹ್ಮನೂ ಆ ಪರಮಾತ್ಮನದೇ ಒಂದು ತನು / ಶರೀರ. ಹಾಗಾಗಿ ಪರಮಾತ್ಮನೇ ಅಬ್ಜಜನ / ಬ್ರಹ್ಮನ ದೇಹವನ್ನು ಧರಿಸಿದನೆಂದರ್ಥ.


ಅಜನ್ಮಾ ಸರ್ವೇಷಾಮಧಿಪತಿರಮೇಯೋऽಪಿ ಜಗತಾಮ್,

ಅಧಿಷ್ಠಾಯ ಸ್ವೀಯಾಂ ಪ್ರಕೃತಿಮಿವ ದೇಹೀ ಸ್ಫುರತಿ ಯಃ |

ವಿನಷ್ಟಂ ಕಾಲೇನ ದ್ವಿವಿಧಮಮೃತಂ ಧರ್ಮಮನಘಂ,

ಪುನಃ ಪ್ರಾಹೇಶಂ ತಂ ವಿಮಲಶುಭದಂ ನೌಮಿ ಪರಮಮ್ || ೩ ||

(“ರಸೈ ರುದ್ರೈಶ್ಛಿನ್ನಾ ಯಮನಸಭಲಾಗಃ ಶಿಖರಿಣೀ”)


(ಯಃ) ಯಾವನು, (ಅಜನ್ಮಾ) ಜನ್ಮರಹಿತನೂ, (ಅಮೇಯಃ + ಅಪಿ— ಅಮೇಯೋऽಪಿ—ಪೂರ್ವರೂಪಸನ್ಧಿಃ) ಅಳತೆಗೆ ಸಿಗದ ನಿರಾಕಾರನಾದರೂ, (ಸರ್ವೇಷಾಂ ಜಗತಾಮ್ ಅಧಿಪತಿಃ) ಎಲ್ಲ ಜಗತ್ತುಗಳ ಅಧಿಪತಿಯೂ, (ಸ್ವೀಯಾಂ ಪ್ರಕೃತಿಮ್ ಅಧಿಷ್ಠಾಯ) ತನ್ನದಾದ ಪ್ರಕೃತಿಯನ್ನಾಶ್ರಯಿಸಿ, (ದೇಹೀ ಇವ ಸ್ಫುರತಿ) ದೇಹವಂತನೋ ಎಂಬಂತೆ ತೋರುವನೋ, (ಕಾಲೇನ ವಿನಷ್ಟಂ) ಬಹುಕಾಲದಿಂದ ವಿಶೇಷವಾಗಿ ನಷ್ಟಪ್ರಾಯವಾದ, (ದ್ವಿವಿಧಂ ಧರ್ಮಂ) ಪ್ರವೃತ್ತಿ-ನಿವೃತ್ತಿಗಳೆಂಬ ಎರಡು ಬಗೆಯಾದ ಧರ್ಮವನ್ನು, (ಪುನಃ ಪ್ರಾಹ) ಮತ್ತೆ ಉಪದೇಶಿಸಿದ, (ತಂ ವಿಮಲ-ಶುಭ-ದಂ) ಆ ನಿಷ್ಕಲ್ಮಷನೂ ಶುಭಪ್ರದನೂ (ಶುಭಂ ದದಾತೀತಿ ಶುಭದಃ), (ಅಮೃತಮ್) ಅಮೃತಸ್ವರೂಪನೂ, (ಅನಘಂ) ಪಾಪರಹಿತನೂ ಆದ, (ಪರಮಮ್ ಈಶಮ್) ಪರಮೇಶ್ವರನನ್ನು, (ನೌಮಿ) ನಮಿಸುತ್ತೇನೆ.


ಈಶಾವೇಕಾತ್ಮಕೌ ಲೋಕೇ ಸಂಪ್ರದಾಯಪ್ರವರ್ತಕೌ |

ಗೀತಾಭಾಷ್ಯಪ್ರಕಾಶೇನ ವಂದೇ ಶ್ರೀಕೃಷ್ಣಶಂಕರೌ || ೪ ||

(ಅನುಷ್ಟುಭ್ ವೃತ್ತಮ್)


(ಗೀತಾ-ಭಾಷ್ಯಪ್ರಕಾಶೇನ) ಭಗವದ್ಗೀತೆ ಮತ್ತು ಅದರ ಭಾಷ್ಯಗಳನ್ನು ಪ್ರಕಾಶಪಡಿಸಿ, (ಲೋಕೇ ಸಂಪ್ರದಾಯಪ್ರವರ್ತಕೌ) ಜಗತ್ತಿನಲ್ಲಿ ಪ್ರಾಚೀನ ಸನಾತನ ಸಂಪ್ರದಾಯದ ಪ್ರವರ್ತಕರೆನಿಸಿದ, (ಏಕಾತ್ಮಕೌ) ನಾಮರೂಪಗಳು ಭಿನ್ನವಾದರೂ ಒಂದೇ ಆತ್ಮಸ್ವರೂಪರಾದ, (ಈಶೌ) ಜಗತ್ತಿನ ಒಡೆಯರಾದ,  (ಶ್ರೀಕೃಷ್ಣಶಂಕರೌ ವನ್ದೇ) ಜಗದ್ದುರುಗಳಾದ ಶ್ರೀಕೃಷ್ಣಪರಮಾತ್ಮನನ್ನೂ, ಭಗವಾನ್ ಶಂಕರಾಚಾರ್ಯರನ್ನೂ ವಂದಿಸುತ್ತೇನೆ.


ಬಾಲಸ್ವಾಮಿನಮಾಚಾರ್ಯಂ ನುಮೋ ವ್ಯಾಸಮುಖಾನ್ಮುನೀನ್ |

ವಿಘ್ನಹರ್ತೄನ್ ಗಣೇಶಾದೀನ್ ಪಂಡಿತಾಂಶ್ಚ ವಿಮತ್ಸರಾನ್ || ೫ ||


(ಬಾಲಸ್ವಾಮಿನಮ್) ಬಾಲಯತಿಗಳಾದ, (ಆಚಾರ್ಯಂ) ಶಂಕರಭಗವತ್ಪಾದಾಚಾರ್ಯರನ್ನೂ, (ವ್ಯಾಸಮುಖಾನ್ ಮುನೀನ್) ವ್ಯಾಸಾದಿ ಮುನಿಗಳನ್ನೂ, (ವಿಘ್ನಹರ್ತೄನ್ ಗಣೇಶಾದೀನ್) ವಿಘ್ನಹರರಾದ ಗಣೇಶಾದಿಗಳನ್ನೂ, (ವಿಮತ್ಸರಾನ್) ಮತ್ಸರವಿರಹಿತರಾದ, (ಪಂಡಿತಾನ್) ಪಂಡಿತರನ್ನೂ, (ನುಮಃ) ನಮಸ್ಕರಿಸುತ್ತೇವೆ.


ಕುಮತಸ್ಯ ನಿರಾಸಾಯ ಗೀತಾಭಾಷ್ಯಕೃತಾ ಸ್ವಯಮ್ |

ಕೃಷ್ಣಾತ್ಮನಾ ಶಿವೇನಾದೌ ವ್ಯಾಖ್ಯಾತಾ ಪದಶಃ ಸ್ಫುಟಮ್ || ೬ ||


(ಗೀತಾಭಾಷ್ಯಕೃತಾ) ಗೀತಾಭಾಷ್ಯವನ್ನು ವಿರಚಿಸಿದ, (ಸ್ವಯಂ ಕೃಷ್ಣಾತ್ಮನಾ ಶಿವೇನ) ಸ್ವತಃ ಕೃಷ್ಣನ ಆತ್ಮನೇ ಆದ ಅಥವಾ ಕೃಷ್ಣನನ್ನೇ ತನ್ನ ಆತ್ಮವಾಗಿ ಹೊಂದಿರುವ ಶಿವನೇ ಆದ ಶಂಕರಾಚಾರ್ಯರಿಂದ,  (ಆದೌ ಕುಮತಸ್ಯ ನಿರಾಸಾಯ) ಮೊದಲಿಗೆ ಅಪವ್ಯಾಖ್ಯಾನಗಳ ತಪ್ಪು ಅಭಿಪ್ರಾಯಗಳ ನಿವಾರಣೆಗಾಗಿ, (ಪದಶಃ ಸ್ಫುಟಂ ವ್ಯಾಖ್ಯಾತಾ) ಪ್ರತಿಪದಕ್ಕೂ ಸ್ಪಷ್ಟವಾಗಿ ವ್ಯಾಖ್ಯಾನ ಮಾಡಲ್ಪಟ್ಟಿದೆ.


ತತೋ ಭಾಷ್ಯಾರ್ಥಮಾದಾಯ ವ್ಯಾಖ್ಯಾತಾ ಬಹುಭಿಸ್ತು ಸಾ |

ಯತ್ತು ಕೈಶ್ಚಿತ್ ಕ್ವಚಿತ್ ಪ್ರೋಕ್ತಂ ವಿರುದ್ಧಂ ಭಾಷ್ಯತೋऽಖಿಲಮ್ || ೭ ||


(ತತಃ) ಬಳಿಕ, (ಭಾಷ್ಯಾರ್ಥಮ್ ಆದಾಯ) ಆ ಶಾಂಕರಭಾಷ್ಯಾರ್ಥವನ್ನು ತೆಗೆದುಕೊಂಡು ಅದರ ಆಧಾರದಲ್ಲಿ, (ಸಾ ತು) ಆ ಗೀತೆಯಾದರೋ, (ಬಹುಭಿಃ ವ್ಯಾಖ್ಯಾತಾ, ಯತ್ ತು) ಬಹುಮಂದಿಯಿಂದ ವ್ಯಾಖ್ಯಾನಿಸಲ್ಪಟ್ಟಿರುವುದಾದರೂ, (ಕೈಶ್ಚಿತ್) ಕೆಲವರಿಂದ, (ಕ್ವಚಿತ್) ಕೆಲವೆಡೆಗಳಲ್ಲಿ, (ಭಾಷ್ಯತಃ, ಅಖಿಲಂ ವಿರುದ್ಧಂ) ಭಾಷ್ಯಾರ್ಥಕ್ಕೆ ಪೂರ್ತಿ ವಿರುದ್ಧವಾದ ಅರ್ಥವು, (ಪ್ರೋಕ್ತಮ್) ಹೇಳಲ್ಪಟ್ಟಿರುವುದು.


ಸಾಕ್ಷೇಪಂ ಯುಕ್ತಿಹೀನಂ ಚ ತನ್ನಿರಾಸಾಯ ಲೇಖಕಮ್ |

ಅಂತರ್ಯಾಮಿಸ್ವರೂಪೋऽಸೌ ಮಾಂ ಕರೋತಿ ಮಹೇಶ್ವರಃ || ೮ ||


(ಸಾಕ್ಷೇಪಂ) ಆಕ್ಷೇಪಾರ್ಹವಾದ, (ಚ ಯುಕ್ತಿಹೀನಂ) ಮತ್ತು ತರ್ಕಬದ್ಧವಲ್ಲದ, (ತತ್ ನಿರಾಸಾಯ) ಅಂತಹ ವಿರುದ್ಧಾರ್ಥವನ್ನು ನಿವಾರಿಸಲು, (ಅಂತರ್ಯಾಮಿಸ್ವರೂಪಃ ಅಸೌ ಮಹೇಶ್ವರಃ) ಸರ್ವರ ಅಂತರ್ಯಾಮಿಸ್ವರೂಪನಾದ ಈ ಮಹೇಶ್ವರನು, (ಮಾಂ ಲೇಖಕಂ ಕರೋತಿ) ನನ್ನನ್ನು ಈ ವ್ಯಾಖ್ಯಾನ ಬರೆಯುವ ಲೇಖಕನನ್ನಾಗಿ ಮಾಡುತ್ತಾನೆ.


ಯದ್ಯಪಿ ಪ್ರಾಣಿಜಾತಸ್ಯ ಪ್ರೇರಕೋ ಜಗದೀಶ್ವರಃ |

ಸ ಏವಾಸ್ತಿ ತಥಾಪ್ಯೇವಂ ಶ್ರುತ್ಯರ್ಥೇನ ವ್ಯವಸ್ಥಿತಿಃ || ೯ ||


(ಸ ಏವ ಜಗದೀಶ್ವರಃ) ಅದೇ ಜಗದೀಶ್ವರನಾದ ಒಬ್ಬನೇ ಪರಮಾತ್ಮನು, (ಪ್ರಾಣಿಜಾತಸ್ಯ ಪ್ರೇರಕಃ, ತಥಾಪಿ) ಪ್ರಾಣವುಳ್ಳ ಸಕಲ ಪ್ರಾಣಿ ಜೀವರ ಪ್ರೇರಕನಾಗಿದ್ದರೂ ಕೂಡ, (ಶ್ರುತ್ಯರ್ಥೇನ) ವೇದಗಳ ಅರ್ಥಾನುಸಂಧಾನದಿಂದ, (ಏವಂ ವ್ಯವಸ್ಥಿತಿಃ) ಈ ಮುಂದಿನಂತೆ ವ್ಯವಸ್ಥೆಯೊಂದಿದೆಯೆಂದು ತಿಳಿದು ಬರುತ್ತದೆ.


ಯಮಧೋ ನೇತುಮಿಚ್ಛಾಸ್ಯ ಜಾಯತೇ ಪರಮಾತ್ಮನಃ |

ಅಸಾಧುಕರ್ಮನಿರ್ವೃತ್ತೌ ಸಂಪ್ರೇರಯತಿ ತಂ ತು ಸಃ || ೧೦ ||


(ಅಸ್ಯ ಪರಮಾತ್ಮನಃ) ಈ ಪರಮಾತ್ಮನಿಗೆ, (ಯಮ್) ಯಾವನನ್ನು, (ಅಧೋ ನೇತುಮ್ ಇಚ್ಛಾ ಜಾಯತೇ) ಅಧಃಪತನಗೊಳಿಸಲು / ಕೆಳಮಟ್ಟಕ್ಕೊಯ್ಯಲು ಸಂಕಲ್ಪವುಂಟಾಗುತ್ತದೋ, (ತಂ ತು) ಅಂಥವನನ್ನಾದರೋ, (ಸಃ) ಆ ಭಗವಂತನು, (ಅಸಾಧುಕರ್ಮನಿರ್ವೃತ್ತೌ) ಕೆಟ್ಟ ಕೆಲಸಗಳನ್ನು ಮಾಡುವುದರಲ್ಲಿ, (ಸಂಪ್ರೇರಯತಿ) ಚೆನ್ನಾಗಿ ಪ್ರೇರಿಸುತ್ತಾನೆ.


ಕಾರಯತ್ಯಮಲಂ ಕರ್ಮ ಯಸ್ಯೇಚ್ಛತ್ಯೂರ್ಧ್ವಮಾಸ್ಪದಮ್ |

ತಸ್ಮಾನ್ಮದಾತ್ಮನಾ ತೇನ ಸ್ವಭಾಷ್ಯೋತ್ಕರ್ಷದೀಪಿಕಾ || ೧೧ ||


(ಯಸ್ಯ) ಯಾವನ, (ಊರ್ಧ್ವಮ್ ಆಸ್ಪದಮ್ ಇಚ್ಛತಿ) ಉನ್ನತಿಯನ್ನು ಬಯಸುತ್ತಾನೋ ಅಂಥವನಿಂದ, (ಅಮಲಂ ಕರ್ಮ ಕಾರಯತಿ) ಕಳಂಕರಹಿತವಾದ ಕರ್ಮಗಳನ್ನು ಮಾಡಿಸುತ್ತಾನೆ. (ತಸ್ಮಾತ್) ಹಾಗಾದ್ದರಿಂದ, (ಮದಾತ್ಮನಾ ತೇನ) ನನ್ನ ಆತ್ಮನಾಗಿರುವ ಅವನಿಂದ, (ಸ್ವಭಾಷ್ಯೋತ್ಕರ್ಷದೀಪಿಕಾ) ತನ್ನ ಗೀತೆಗೆ ಹಾಗೂ ಗೀತಾಭಾಷ್ಯಕ್ಕೆ ಭಾಷ್ಯೋತ್ಕರ್ಷದೀಪಿಕೆಯು,


ತನ್ಯತೇ ಸ್ವಸ್ಯ ಭಕ್ತಾನಾಂ ಸುಖದಾ ಸುಹೃದಾಂ ಸತಾಮ್ |

ಭಕ್ತಾಭಾಸಸ್ಯ ಹೀನಸ್ಯ ಭಕ್ತ್ಯಾ ಚೋದ್ವೇಗದಾऽಸತಃ || ೧೨ ||


(ತನ್ಯತೇ) ವಿಸ್ತರಿಸಲ್ಪಡುತ್ತಿದೆ. ಇದು, (ಸ್ವಸ್ಯ ಭಕ್ತಾನಾಂ) ತನ್ನ ಭಕ್ತರಿಗೆ, (ಸುಹೃದಾಂ ಸತಾಂ) ಒಳ್ಳೆಯ ಹೃದಯವಂತರಿಗೆ, ಸಜ್ಜನರಿಗೆ, (ಸುಖದಾ) ಸುಖವನ್ನುಂಟುಮಾಡುವುದು. (ಚ, ಭಕ್ತಾಭಾಸಸ್ಯ ಹೀನಸ್ಯ) ಹಾಗೆಯೇ, ಭಕ್ತನಂತೆ ಆಭಾಸ / ಹುಸಿತೋರಿಕೆಯವನಿಗೆ, ಹೀನನಿಗೆ / ನೀಚನಿಗೆ, (ಅಸತಃ) ಅಸತ್ಪುರುಷರಿಗೆ / ಕೆಟ್ಟವರಿಗೆ, (ಭಕ್ತ್ಯಾ) ಭಕ್ತಿಯಿಂದ, (ಉದ್ವೇಗದಾ) ಉದ್ವಿಗ್ನತೆ, ಅಶಾಂತಿ ಉಂಟುಮಾಡುತ್ತದೆಯೇ ಹೊರತು ಶಾಂತಿ ಸಿಗಲಾರದು.


Comments

Popular posts from this blog

विवेकचूडामणिः १ / ವಿವೇಕಚೂಡಾಮಣಿ ೧

೧೭. ವಿಶುದ್ಧವೇದಾಂತಪರಿಭಾಷಾ / १७. विशुद्धवेदान्तपरिभाषा

೩. ಶ್ರೀಮದ್-ಭಗವದ್ಗೀತಾ-ಪೀಠಿಕಾ ೨