೧೨. ಶ್ರೀಮದ್-ಭಗವದ್ಗೀತಾ-ಪೀಠಿಕಾ ೯
(೩೧) ಭಗವದ್ಗೀತಾಸಾರವಿಚಾರ—ಹೊಸಕೆರೆ ಚಿದಂಬರಯ್ಯ
…ಕ್ರಿ.ಶ. 1911 ರಲ್ಲಿ ವಿದ್ಯಾಭೂಷಣ, ವೇದಾಂತವಾಚಸ್ಪತಿ, Ph.D., F.R.S.A,M.R.A.,S. ಇತ್ಯಾದಿ ಬಿರುದಾಂಕಿತರಾದ ಕುರ್ತುಕೋಟಿಯ ಶ್ರೀಮಹಾಭಾಗವತರು ಧಾರವಾಡದ ಮಹಾಸಭೆಯಲ್ಲಿ ಕೊಟ್ಟ ಭಗವದ್ಗೀತಾಸಾರವಿಚಾರ ವ್ಯಾಖ್ಯಾನಮಾಲೆಯನ್ನು ಈಗ ಪುಸ್ತಕರೂಪದಲ್ಲಿ…ತರುವುದಕ್ಕೆ ನನಗೆ ಬಹು ಸಂತೋಷವಾಗುತ್ತದೆ….ಶ್ರೀಕೃಷ್ಣನ ನಿಜವಾದ ತಾತ್ಪರ್ಯವನ್ನು ಹಿಡಿಯುವುದು ಬರೀ ಮೇಧಾಶಕ್ತಿಗೆ ಸಾಧ್ಯವಲ್ಲ….ಪ್ರಜ್ಞಾಶಾಲಿಯಾಗಿ ಸಾಧನಚತುಷ್ಟಯ ಸಂಪನ್ನನಾಗಿ ಗುರುವಿಗೆ ಶರಣೆಂದವನಿಗೆ ಮಾತ್ರ ಗೀತೆಯ ಯಥಾರ್ಥವು ಸ್ಫೂರ್ತಿಯಾದೀತು.
ಪಾತ್ರೆಯಲ್ಲಿ ತುಂಬಿಟ್ಟ ಹಾಲು, ಆಗತಾನೆ ಹಸುವಿನ ಕೆಚ್ಚಲಿನಿಂದ ಹೊರಟ ಹಾಲಿನಷ್ಟು ಗುಣಕಾರಿಯಲ್ಲವೆಂಬುದು ಹೇಗೋ ಹಾಗೆ, ಇದು ಅವರ ಸಾಕ್ಷಾನ್ಮುಖದಿಂದ ತನಗೆ ತಾನೇ ಸ್ಫೂರ್ತಿಯಾಗಿ ಏಕಪ್ರಕಾರವಾಗಿ ಪ್ರವಹಿಸುತ್ತಿದ್ದ ವಾಣಿಯಷ್ಟು ಉದ್ಬೋಧಕಾರಿಯಾಗಲಾರದು…ಅವರಿಂದ ಅಗತ್ಯವಾದ ತಿದ್ದುಪಾಟುಗಳನ್ನು ಮಾಡಿಸಿರುವೆನು.
ಗೀತಾರ್ಥದಲ್ಲಿ ತೋರಬಹುದಾದ ಎಷ್ಟೋ ಸಂಶಯದ ಗಂಟುಗಳನ್ನು ಬಿಚ್ಚಿ, ಶ್ರುತಿಸ್ಮೃತಿ ಮೊದಲಾದವುಗಳ ಪ್ರಮಾಣವಾಕ್ಯಗಳನ್ನೂ, ಲೌಕಿಕವಾದ ಯುಕ್ತಿಗಳನ್ನೂ ಸಮಂಜಸವಾದ ಉದಾಹರಣೆಗಳನ್ನೂ ಸೂರೆಮಾಡುವ ಈ ವ್ಯಾಖ್ಯಾನಗಳನ್ನು ಕನ್ನಡಿಗರೆಲ್ಲರೂ ಅಗತ್ಯವಾಗಿ ಓದಬೇಕಾಗಿರುವುದು.
ಬ್ರಹ್ಮನಿಷ್ಠಾಯ ವಿದ್ಮಹೇ ಸಂಯಮೀಂದ್ರಾಯ ಧೀಮಹಿ |
ತನ್ನಃ ಸಚ್ಚಿದಾನಂದಃ ಪ್ರಚೋದಯಾತ್ ||
★ ಪ್ರಸ್ತಾವನೆ
ಭಗವದ್ಗೀತೆಯು ಭಗವಂತನ ಸಾಕ್ಷಾತ್ ಮುಖಾರವಿಂದದಿಂದ ಹೊರಹೊಮ್ಮಿದ ವಚನಾಮೃತ. ಇದರ ಮಹಿಮೆ ಅಪಾರವಾದುದು. ಇದು ಅತ್ಯಂತ ನಿಗೂಢ ರಹಸ್ಯಗರ್ಭಿತವಾದ ಗ್ರಂಥರತ್ನ. ಭಗವಂತನಲ್ಲಿ ಅನನ್ಯಭಕ್ತಿಯನ್ನಿಟ್ಟು ಏಕಾಗ್ರಚಿತ್ತದಿಂದ ಭಗವದ್ಗೀತೆಯನ್ನು ಅಧ್ಯಯನ ಮಾಡಬೇಕು. ಭಗವಂತನ ಸ್ವರೂಪ ಹಾಗೂ ಮಹಿಮೆಗಳು ಇಲ್ಲಿ ವರ್ಣಿತವಾಗಿರುವಂತೆ ಮನನ ಮಾಡುವವರನ್ನು, ಭಕ್ತಿಮಾರ್ಗವನ್ನು ತೆರೆದುಕೊಟ್ಟು ಆತ್ಮದರ್ಶನಕ್ಕೆ ಸಿದ್ಧಪಡಿಸುತ್ತವೆ. ಭಗವದ್ಗೀತೆಯ ಅಧ್ಯಯನದಿಂದ ಕರ್ಮ, ಉಪಾಸನಾ, ಜ್ಞಾನಗಳ ರಹಸ್ಯವು ಸ್ಪಷ್ಟವಾಗಿ ಅರಿವಾಗುತ್ತದೆ. ಇದೊಂದೇ ಸರ್ವಶಾಸ್ತ್ರಮಯವಾಗಿ ಬೆಳಗುತ್ತದೆ. ಆದುದರಿಂದಲೇ ಭೀಷ್ಮಪರ್ವದಲ್ಲಿ “ಸರ್ವಶಾಸ್ತ್ರಮಯೀಗೀತಾ” ಎಂದು ಇದರ ಮಹಿಮೆ ವರ್ಣಿತವಾಗಿದೆ. ಗೀತೆಯು ಎಲ್ಲ ಶಾಸ್ತ್ರಗಳಿಗಿಂತಲೂ ಮಿಗಿಲಾದುದೆಂದು ಹೇಳಬಹುದು. ಚತುರ್ಮುಖ ಬ್ರಹ್ಮನ ಮುಖಗಳಿಂದ ವೇದರಾಶಿಯು ಪ್ರಕಟವಾಯಿತು. ಭಗವಂತನ ನಾಭಿಕಮಲದಿಂದ ಬ್ರಹ್ಮದೇವರ ಆವಿರ್ಭಾವವಾಯಿತು. ವೇದಗಳೇ ಸಕಲಶಾಸ್ತ್ರಗಳಿಗೂ ಮೂಲವಾಗಿವೆ. ಇದರಿಂದ ಶಾಸ್ತ್ರಗಳ ಸರಣಿಯು ಪರಂಪರೆಯಿಂದ ಬಂದಂತಾಗುತ್ತದೆ. ಆದರೆ ಭಗವದ್ಗೀತೆಯು ನೇರವಾಗಿ ಭಗವಂತನ ಮುಖಕಮಲದಿಂದ ಹರಿದ ಅಮೃತವಾಗಿದೆ. ಇದನ್ನು ಪಾನಮಾಡುವವರು ಅಮೃತರಾಗುವುದು ತ್ರಿಕಾಲಸತ್ಯವಾಗಿದೆ. ಭಗವಂತನ ಸ್ವರೂಪವೇ ಆಗಿರುವ ವೇದವ್ಯಾಸ ಮುನಿಯ ಸತ್ಯಘೋಷವಿದು—
“ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ್ರವಿಸ್ತರೈಃ |
ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ ವಿನಿಃಸೃತಾ ||”
ಭಗವದ್ಗೀತೆಯ ಮಹಿಮೆಯು ಗಂಗೆಗೂ ಮಿಗಿಲಾದುದು. ಗಂಗಾಸ್ನಾನವು ಪರಮಪವಿತ್ರವಾದುದು ಮತ್ತು ಮುಕ್ತಿದಾಯಕವಾದುದು. ಇಂದಿಗೂ ಭಾರತೀಯರು ಗಂಗೆಯನ್ನು ಭಕ್ತಿಯಿಂದ ಸೇವಿಸುತ್ತಾರೆ. ಆದರೆ ಗಂಗೆಯಲ್ಲಿ ಮಿಂದವನು ತಾನು ಮಾತ್ರ ಮುಕ್ತನಾಗಬಲ್ಲನು; ಇತರರನ್ನು ಮುಕ್ತರನ್ನಾಗಿ ಮಾಡಲಾರನು. ಗೀತಾರೂಪಿ ಅಮರಗಂಗೆಯಲ್ಲಿ ಅವಗಾಹನೆ ಮಾಡಿದವನು ತಾನೂ ಮುಕ್ತನಾಗುತ್ತಾನೆ; ಇತರರನ್ನೂ ಮುಕ್ತರನ್ನಾಗಿ ಮಾಡಬಲ್ಲವನಾಗುತ್ತಾನೆ. ಗಂಗೆಯು ತನ್ನಲ್ಲಿಗೆ ಬಂದವರನ್ನು ಮಾತ್ರ ಪಮಿತ್ರಗೊಳಿಸುತ್ತಾಳೆ. ಆದರೆ ಗೀತಾರೂಪಿ ಗಂಗೆಯು ಮನೆಮನೆಗೆ ಹೋಗಿ ಮನಮನಕ್ಕೆ ಸೇರಿ ಮುಕ್ತಿ ಮಾರ್ಗವನ್ನು ತೆರೆದುಕೊಡುತ್ತಾಳೆ.
ಭಗವಂತನು ಗೀತೆಯಲ್ಲಿ ಆವಾಸವಾಗಿದ್ದಾನೆ; ತನ್ನ ವಾಣಿಯಾದ ಗೀತೆಯ ಜ್ಞಾನದ ಮಹಿಮೆಯಿಂದಲೇ ತಾನು ಮೂರು ಲೋಕಗಳನ್ನೂ ಪಾಲಿಸುತ್ತೇನೆಂದು ಸಾಕ್ಷಾತ್ ಭಗವಂತನೇ ಹೇಳಿದ್ದಾನೆ. ವರಾಹಪುರಾಣದ ಈ ವಚನವು ಇಲ್ಲಿ ಅತ್ಯಂತ ಮನನೀಯವಾಗಿದೆ—
“ಗೀತಾಶ್ರಯೇsಹಂ ತಿಷ್ಠಾಮಿ ಗೀತಾ ಮೇ ಚೋತ್ತಮಂ ಗೃಹಮ್ |
ಗೀತಾಜ್ಞಾನಮುಪಾಶ್ರಿತ್ಯ ತ್ರೀನ್ ಲೋಕಾನ್ ಪಾಲಯಾಮ್ಯಹಮ್ ||”
ಇಷ್ಟೇ ಅಲ್ಲ. ಶ್ರದ್ಧಾವಂತರಾಗಿ ಅಸೂಯಾರಹಿತರಾಗಿ ಸರ್ವಕರ್ಮಗಳನ್ನೂ ಅಧ್ಯಾತ್ಮಭಾವದಿಂದ ಭಗವಂತನಿಗೆ ಅರ್ಪಿಸಿ ಭಗವಂತನ ಮಾತಿನಂತೆ ನಡೆಯುವವರು ಕರ್ಮಬಂಧನದಿಂದ ಮುಕ್ತರಾಗುತ್ತಾರೆ. ಭಗವದ್ಗೀತೆಯ ಶ್ರದ್ಧಾಪೂರ್ವಕವಾದ ಅಧ್ಯಯನವು ಅತ್ಯಂತ ಶ್ರೇಷ್ಠವಾದ ಜ್ಞಾನಯಜ್ಞವೇ ಸರಿ. ಜ್ಞಾನಯಜ್ಞದಿಂದ ಭಗವಂತನು ಪರಮ ಪ್ರೀತನಾಗುತ್ತಾನೆ. ಭಗವದ್ಗೀತೆಯ ಪ್ರತಿ ಅಧ್ಯಾಯದ ಕೊನೆಯಲ್ಲಿ ಭಗವದ್ಗೀತೆಯ ಸ್ವರೂಪ ಮಹಿಮೆಗಳ ಅನುಸಂಧಾನ ನಡೆಯುತ್ತದೆ. ತತ್ತ್ವನಿರೂಪಣೆಯಲ್ಲಿ ಭಗವದ್ಗೀತೆಯು ಉಪನಿಷತ್ತೇ ಆಗಿದೆ. ಆದುದರಿಂದ ಇದು ಬ್ರಹವಿದ್ಯೆ.
ಇದು ಯೋಗಶಾಸ್ತ್ರವೂ ಆಗಿದೆ. ಪರಮ ಪುರುಷನಾದ ಶ್ರೀಕೃಷ್ಣ ಮತ್ತು ಸಕಲಜೀವ ಸಮೂಹದ ಪ್ರತಿನಿಧಿಯಾದ ಅರ್ಜುನ— ಇವರ ಸಂವಾದದಲ್ಲಿ ದೃಶ್ಯರೂಪಕವಾದ ಆಕರ್ಷಣೆಯಿದೆ. ಒಂದೊಂದು ಅಧ್ಯಾಯವೂ ಒಂದೊಂದು ಯೋಗಪ್ರಕ್ರಿಯೆಯೇ ಆಗಿದೆ.
ಜೀವನದ ಧರ್ಮವನ್ನು ಬೋಧಿಸುವ ವಿಷಯದಲ್ಲಿ ಭಗವದ್ಗೀತೆಗೆ ಸಾಟಿಯಾದ ಮತ್ತೊಂದು ಗ್ರಂಥವಿಲ್ಲ. ಬಹುಮಟ್ಟಿಗೆ ಪ್ರಪಂಚದ ಎಲ್ಲ ಭಾಷೆಗಳಲ್ಲೂ ಈ ಗ್ರಂಥರತ್ನದ ಅನುವಾದವಾಗಿದೆ. ಜಗತ್ತಿನ ಎಲ್ಲ ಧರ್ಮಪಂಥದವರಿಗೂ ತಮ್ಮ ತಮ್ಮ ಧರ್ಮದಲ್ಲೇ ನಿಷ್ಠೆಯಿಂದ ಇದ್ದು ಜೀವನದ ಗುರಿಯನ್ನು ಸಾಧಿಸಲು ಭಗವದ್ಗೀತೆಯು ಕೈಬೀಸಿ ರಾಜಮಾರ್ಗವನ್ನು ತೋರಿಸಿಕೊಡುತ್ತದೆ. ಜೀವನದ ಅಂಧಕಾರವನ್ನು ತೊಲಗಿಸುವ ಮಹಾದೀಪವಿದಾಗಿದೆ. ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು— ಮುಂತಾದ ಧರ್ಮಾಚಾರ್ಯರು ಈ ಭಗವದ್ವಾಣಿಯನ್ನು ಅವಲಂಬಿಸಿ ಆತ್ಮತತ್ತ್ವವನ್ನು ನಿರೂಪಿಸುವ ಮಹಾಪ್ರಯತ್ನವನ್ನು ಮಾಡಿದ್ದಾರೆ. ಲೋಕಮಾನ್ಯ ತಿಲಕ್, ಮಹಾತ್ಮಾಗಾಂಧಿ ಮುಂತಾದ ರಾಜಕೀಯ ನಾಯಕರಿಗೂ ಭಗವದ್ಗೀತೆಯಿಂದ ಮಾರ್ಗದರ್ಶನ ಮತ್ತು ಸ್ಫೂರ್ತಿಗಳು ದೊರಕಿವೆ. ಬಹುಮಂದಿ ಪಾಶ್ಚಾತ್ಯ ವಿದ್ವಾಂಸರು ಮತ್ತು ಚಿಂತಕರು ಭಗವದ್ಗೀತೆಯ ಗಾಂಭೀರ್ಯ ಮತ್ತು ತತ್ತ್ವನಿರೂಪಣೆಯ ಆಕರ್ಷಣೆಗೆ ಮಾರುಹೋಗಿದ್ದಾರೆ. ಹೀಗೆ ಜಗದ್ವ್ಯಾಪಿಯಾಗಿ ಭಗವದ್ಗೀತೆಯು ತನ್ನ ಪ್ರಭಾವವನ್ನು ಬೀರಿದೆ. ಶ್ಲೋಕಗಳ ಪಠನ ಮಾತ್ರದಿಂದಲೇ ಮನಸ್ಸು ಪರಮಾತ್ಮನ ಸಾಮೀಪ್ಯವನ್ನು ಪಡೆಯುತ್ತದೆ. ಅರ್ಥಾನುಸಂಧಾನ ಪೂರ್ವಕವಾಗಿ ಗೀತೋಕ್ತಧರ್ಮವನ್ನು ತನ್ನ ಯೋಗ್ಯತೆಯನ್ನು ಅರಿತು ಆಚರಿಸುವವನು ಕೃತಕೃತ್ಯನಾಗಿ ಪರಮಪುರುಷಾರ್ಥವನ್ನು ಹೊಂದುತ್ತಾನೆ.
ಭಗವದ್ಗೀತೆಯು ಪ್ರಧಾನವಾಗಿ ಎರಡು ನಿಷ್ಠೆಗಳನ್ನು ಬೋಧಿಸುತ್ತದೆ. ಸಾಧಕರು ತಮ್ಮ ಯೋಗ್ಯತೆಯನ್ನು ಚೆನ್ನಾಗಿ ಅರಿತು ತಮಗೆ ಯೋಗ್ಯವಾದ ಮಾರ್ಗವನ್ನು ಪಾಲಿಸಬೇಕು. ಈ ಎರಡು ನಿಷ್ಠೆಗಳಿಗೂ ಪೋಷಕವಾಗಿರುವಂತೆ ಭಕ್ತಿತತ್ತ್ವವನ್ನು ನಿರೂಪಿಸಲಾಗಿದೆ.
★ ಸಂಖ್ಯಾನಿಷ್ಠೆಯ ಸ್ವರೂಪ
ಈ ಸಂಪೂರ್ಣ ಜಗತ್ತು ಸ್ವಪ್ನಸದೃಶವಾಗಿ ಮಾಯಾಮಯವಾದುದು. ಜಗದ್ವ್ಯಾಪಾರವೆಲ್ಲಾ ಮಾಯಾಗುಣಗಳ ವರ್ತನೆಯೇ ಆಗಿದೆ. ಶರೀರ, ಇಂದ್ರಿಯ, ಮನಸ್ಸು ಇವುಗಳಿಂದ ನಡೆಯುವ ಸಮಸ್ತಕ್ರಿಯೆಗಳಲ್ಲೂ, ಸಾಧಕನು ಕರ್ತೃತ್ವದ ಅಭಿಮಾನವನ್ನು ಬಿಡಬೇಕು.
“ನೈವ ಕಿಂಚಿತ್ ಕರೋಮಿತಿ ಯುಕ್ತೋ ಮನ್ಯೇತ ತತ್ತ್ವವಿತ್” ಸರ್ವವ್ಯಾಪಿಯಾದ ಸಚ್ಚಿದಾನಂದ ರೂಪಿ ಪರಮಾತ್ಮನಲ್ಲಿ ಏಕೀಭಾವದಿಂದ ನೆಲೆ ನಿಲ್ಲಬೇಕು. ಅದೇ ಬ್ರಹ್ಮಭಾವಪ್ರಾಪ್ತಿ. ಇದು ಸಂಖ್ಯಾನಿಷ್ಠಾ. ಜ್ಞಾನಯೋಗ, ಕರ್ಮಸಂನ್ಯಾಸ ಇತ್ಯಾದಿಗಳ ವಿವರಗಳೆಲ್ಲ ಸಂಖ್ಯಾನಿಷ್ಠೆಯಲ್ಲೇ ಸೇರಿವೆ.
★ ಯೋಗನಿಷ್ಠೆಯ ಸ್ವರೂಪ
ಸಮಸ್ತವೂ ಪರಮಾತ್ಮನೇ ಎಂದು ತಿಳಿದು ಸಿದ್ಧಿ ಅಸಿದ್ಧಿಗಳಲ್ಲಿ ಸಮಭಾವನೆಯನ್ನು ತಾಳಬೇಕು. ಫಲಾಪೇಕ್ಷೆಯನ್ನು ಸಂಪೂರ್ಣವಾಗಿ ತೊರೆಯಬೇಕು. ಭಗವಂತನ ಆಜ್ಞೆಯೆಂದು ಭಾವಿಸಿ ಶಾಸ್ತ್ರವಿಹಿತ ಕರ್ಮಗಳನ್ನು ಆಚರಿಸಬೇಕು. ಸಂಗವನ್ನು ತ್ಯಜಿಸಿ ಯೋಗಸ್ಥನಾಗಿ ಕರ್ಮಗಳನ್ನು ಆಚರಿಸಬೇಕು. ಹೀಗೆ ಕರ್ಮಗಳನ್ನು ಆಚರಿಸುವವನು ಸಂಸಾರಬಂಧನದಿಂದ ಮುಕ್ತನಾಗಿ ಅನಾಮಯಪದವನ್ನು ಹೊಂದುವನು. ಬುದ್ಧಿಯು ಸಮಾಧಿಯಲ್ಲಿ ಅಚಲವಾಗಿ ನಿಂತಾಗ ಯೋಗಸಿದ್ಧಿಯು ಪ್ರಾಪ್ತವಾಗುವುದು. ಸರ್ವಧರ್ಮಪರಿತ್ಯಾಗ ಯೋಗಸಿದ್ಧಿಗೆ ಅನಿವಾರ್ಯ. ಸರ್ವಧರ್ಮಗಳೆಂದರೆ ಕೇವಲ ಲೌಕಿಕ ಧರ್ಮಗಳಲ್ಲ. ಶರೀರ, ಇಂದ್ರಿಯ, ಪ್ರಾಣ, ಮನಸ್ಸು— ಎಲ್ಲದರ ಧರ್ಮಗಳನ್ನು ತೊರೆದು ಭಗವಂತನಲ್ಲೇ ಶರಣಾಗತನಾಗಬೇಕು. ಈ ಎರಡು ನಿಷ್ಠೆಗಳ ನಾನಾ ಪ್ರಕಾರಗಳೂ, ಅವುಗಳ ಸಾಧನೆಗೆ ಬೇಕಾದ ಮಾರ್ಗಗಳೂ, ಭಗವಂತನ ವಾಣಿಯಿಂದ ವಿಪುಲವಾಗಿ ವರ್ಣಿತವಾಗಿವೆ.
“ಭಗವದ್ಗೀತಾಸಾರವಿಚಾರ” ಗ್ರಂಥವು ಈಗ್ಗೆ ತೊಂಬತ್ತುವರ್ಷಗಳಿಗೂ ಹಿಂದೆ ವಿದ್ಯಾಭೂಷಣ, ವೇದಾಂತವಾಚಸ್ಪತಿ ಇತ್ಯಾದಿ ಪ್ರಶಸ್ತಿಗಳಿಂದ ಅಲಂಕೃತರಾಗಿದ್ದ ಕುರ್ತಕೋಟಿ ಶ್ರೀಮಹಾಭಾಗವತರು ಎಂಬ ಮಹನೀಯರು ಧಾರವಾಡದ ಮಹಾಸಭೆಯೊಂದರಲ್ಲಿ ಮಾಡಿದ ಪ್ರವಚನಗಳ ಸಂಕಲನವಾಗಿದೆ. ಶ್ರೀಭಾಗವತರು ಸಂಸ್ಕೃತ, ಕನ್ನಡ, ಮರಾಠಿ, ಇಂಗ್ಲೀಷ್ ಭಾಷೆಗಳಲ್ಲಿ ಉತ್ತಮ ವಿದ್ವಾಂಸರಾಗಿದ್ದರು. ಭಾರತೀಯ ಶಾಸ್ತ್ರಗಳನ್ನೂ ಸಂಪ್ರದಾಯಬದ್ಧವಾಗಿ ಅಧ್ಯಯನ ಮಾಡಿ ಪರಿಣತರಾಗಿದ್ದವರು. ಸಕಲದರ್ಶನಗಳ ಸಾರವನ್ನು ಚೆನ್ನಾಗಿ ತಿಳಿದಿದ್ದರು. ಅದ್ವಿತೀಯವಾದ ಪ್ರವಚನ ಕಲೆ ಅವರದಾಗಿತ್ತು. ಅವರ ವಾಗ್ಧಾರೆಯಿಂದ ಶೋತೃಗಳು ಮಂತ್ರಮುಗ್ಧರಾಗುತ್ತಿದ್ದರೆಂದು ಹಿರಿಯರಿಂದ ನಾನು ಕೇಳಿದ್ದೇನೆ. ಅವರ ಗಂಭೀರವಾದ ವಿಚಾರಸರಣಿ ಅಷ್ಟೇ ಸರಳತೆಯಿಂದ ಕೂಡಿ ಶ್ರೋತೃಗಳ ಮೇಲೆ ಉತ್ತಮ ಪ್ರಭಾವವನ್ನು ಬೀರುತ್ತಿತ್ತು. ಅವರ ಪ್ರವಚನದ ಸಭಾಸ್ಥಾನವು ಕಿಕ್ಕಿರಿದ ಜನಸ್ತೋಮದಿಂದ ತುಂಬಿರುತ್ತಿತ್ತಂತೆ. ಇಂತಹ ಮೇಧಾವಿಗಳೂ ವಿದ್ವಾಂಸರೂ ಪ್ರವಚನಪಟುಗಳೂ ಆದ ಶ್ರೀ ಭಾಗವತರು ತಮ್ಮ ಪ್ರವಚನಮಾಲೆಗೆ ಭಗವದ್ಗೀತೆಯನ್ನು ಆರಿಸಿಕೊಂಡಿರುವುದು ಅಂದಿನ ಶ್ರೋತೃಗಳ ಭಾಗ್ಯವಿಶೇಷವೇ ಸರಿ. ಗೀತೆಯನ್ನು ಅಧ್ಯಯನ ಮಾಡುವವರಿಗೆ ನಾನಾವಿಧವಾದ ಸಂಶಯದ ಗಂಟುಗಳು ತಲೆದೋರುತ್ತವೆ.
ಶ್ರೀ ಭಾಗವತರು ಇಂತಹ ಆಕ್ಷೇಪ - ಸಂದೇಹಗಳನ್ನು ಎತ್ತಿತೋರಿಸಿದ್ದಾರೆ. ಇಂತಹ ಸಂದೇಹಗಳ ಪರಿಹಾರ ಮಾರ್ಗಗಳನ್ನೂ ಸ್ಪಷ್ಟವಾಗಿ ತೋರಿಸಿದ್ದಾರೆ. ಅವರ ಪ್ರವಚನಗಳಲ್ಲಿ ಶ್ರುತಿ, ಸ್ಮೃತಿ ಮುಂತಾದವುಗಳ ಪ್ರಮಾಣ ವಚನಗಳ ಉಲ್ಲೇಖಗಳು ಅವರ ನಿಲುವನ್ನು ಸಮರ್ಥಿಸುತ್ತವೆ. ಅಷ್ಟೇ ಅಲ್ಲದೆ ಲೌಕಿಕಯುಕ್ತಿಗಳೂ ಸ್ಫೂರ್ತಿದಾಯಕವಾದ ಉದಾಹರಣೆಗಳೂ ಗೀತಾರ್ಥಸಾರವನ್ನು ಶ್ರೋತೃಗಳ ಮನಮುಟ್ಟುವಂತೆ ಮಾಡುತ್ತವೆ. ಭಗವದ್ಗೀತೆಯ ಸಾರವನ್ನು ಗಂಭೀರವಾಗಿ ವಿಚಾರಮಾಡಿದ ಮಹನೀಯರ ಪಂಕ್ತಿಯಲ್ಲಿ ಶ್ರೀಭಾಗವತರ ಹೆಸರು ಚಿರಕಾಲ ಮೆರೆಯುವುದರಲ್ಲಿ ಸಂಶಯವಿಲ್ಲ.
ಶ್ರೀ ಭಾಗವತರ “ಭಗವದ್ಗೀತಾಸಾರ ವಿಚಾರ" ಪ್ರವಚನಗಳನ್ನು ಗ್ರಂಥರೂಪದಲ್ಲಿ ಸಂಕಲನಮಾಡಿರುವವರು ಕರ್ನಾಟಕ ಕವಿರತ್ನರೂ ಸುಪ್ರಸಿದ್ದ ಕನ್ನಡ ಗ್ರಂಥಕಾರರೂ ಧರ್ಮನಿಷ್ಠರೂ ಆಗಿದ್ದ ಹೊಸಕೆರೆ ಚಿದಂಬರಯ್ಯನವರು. ಈ ಮಹನೀಯರು ಧಾರವಾಡದ ಕರ್ನಾಟಕ ಮಹಾವಿದ್ಯಾಲಯದ ಮುಖ್ಯಾಧ್ಯಾಪಕರಾಗಿದ್ದರು. ಇವರು ಶ್ರೀಭಾಗವತರ ಅತ್ಯಂತ ಆಪ್ತಮಿತ್ರರಾಗಿದ್ದರು. ಗೀತಾರ್ಥವಿವರಣೆ, ಗೀತಾರ್ಥಚಂದ್ರಿಕೆ, ಭರತಖಂಡದ ಜೀವಜ್ಯೋತಿಗಳು, ಆತ್ಮಶಕ್ತಿಯ ತೇಜಸ್ಸು, ಆರ್ಯಧರ್ಮಪ್ರದೀಪ, ಶ್ರೀವಿದ್ಯಾರಣ್ಯಕಾವ್ಯ ಮುಂತಾದ ಅನೇಕ ಗ್ರಂಥಗಳನ್ನು ರಚಿಸಿ ಅಂದಿನ ಕಾಲಕ್ಕೆ ಕರ್ನಾಟಕದಲ್ಲಿ ಮಹಾವಿದ್ವಾಂಸರೂ ಗ್ರಂಥಕರ್ತರೂ ಎಂದು ಪ್ರಸಿದ್ಧರಾಗಿದ್ದರು. ಇವರ ಸರಳವಾದ ಗದ್ಯಶೈಲಿ ಓದುಗರ ಮನಸ್ಸನ್ನು ಸೂರೆಮಾಡುವಂತಹುದು. ಶ್ರೀದ್ವಾರಕಾಶಾರದಾಪೀಠಾಧೀಶ್ವರರಾಗಿದ್ದ ಶ್ರೀಜಗದ್ಗುರು ಶ್ರೀಶಂಕರಾಚಾರ್ಯ ಶ್ರೀಭಾರತೀಕೃಷ್ಣತೀರ್ಥ ಮಹಾಸ್ವಾಮಿಗಳು ಶ್ರೀಚಿದಂಬರಯ್ಯನವರ “ಆರ್ಯಧರ್ಮಪ್ರದೀಪ” ಗ್ರಂಥಕ್ಕೆ ಉತ್ತಮವಾದ ಭೂಮಿಕೆಯನ್ನು ಬರೆದುಕೊಟ್ಟು ಗ್ರಂಥಕರ್ತರನ್ನು ಪ್ರಶಂಸಿಸಿ ಆಶೀರ್ವಾದಿಸಿರುವುದು ಶ್ರೀಚಿದಂಬರಯ್ಯನವರ ಹೆಗ್ಗಳಿಕೆಯಾಗಿದೆ. ಆ ಕಾಲಕ್ಕೆ ಇವರ ಗ್ರಂಥಗಳು ಕನ್ನಡನಾಡಿನಲ್ಲಿ ಬಹಳ ಪ್ರಚಾರದಲ್ಲಿದ್ದವು. ಆ ಕಾಲದ ಪ್ರಸಿದ್ಧ ಪತ್ರಿಕೆಗಳಲ್ಲೆಲ್ಲ ಇವರ ಸರಳವಾದ ಗದ್ಯ ಶೈಲಿಯನ್ನು ಪ್ರಶಂಸಿಸಿ ಇವರ ಗ್ರಂಥಗಳನ್ನು ಹೊಗಳಿರುವದಲ್ಲದೆ ಅಂದಿನ ಕನ್ನಡ ಗದ್ಯಗ್ರಂಥಕಾರರ ಪಂಗಡದಲ್ಲಿ ಇವರ ಹೆಸರು ಉಲ್ಲೇಖಿತವಾಗಿರುವುದು ಈ ಮಹನೀಯರ ಹಿರಿಮೆಯನ್ನು ಸೂಚಿಸುತ್ತದೆ. ಶ್ರೀಭಾಗವತರ ಗಂಭೀರವೂ ಸ್ಫೂರ್ತಿದಾಯಕವೂ ಆದ ಪ್ರವಚನಗಳಿಗೆ ಶ್ರೀಚಿದಂಬರಯ್ಯನವರ ಸರಳವೂ ಸವಿಯೂ ಆದ ಶೈಲಿ ಸೇರಿರುವುದು ಭಗವದ್ಗೀತಾಸಾರಕುಸುಮಕ್ಕೆ ಸೌಂದರ್ಯ, ಮಾಧುರ್ಯ, ಸೌಕುಮಾರ್ಯಗಳು ಸೇರಿದಂತೆ ಆಗಿದೆ. ಗೀತಾಧ್ಯಯನಶೀಲರಿಗೆ ಇದೊಂದು ಅತ್ಯಂತ ಉಪಾದೇಯವಾದ ಗ್ರಂಥ. ಅದಕ್ಕಾಗಿ ಪ್ರವಚನಕಾರರು ಮತ್ತು ಗ್ರಂಥರೂಪವಾಗಿ ಸಂಗ್ರಹಕಾರರು ಚಿರಸ್ಮರಣೀಯರು. ಇದೀಗ ನಾಲ್ಕನೆಯ ಮುದ್ರಣವನ್ನು ಕಾಣುತ್ತಿರುವುದೇ ಈ ಗ್ರಂಥದ ಮಹತ್ತ್ವವನ್ನು ಸೂಚಿಸುತ್ತದೆ. ಈ ಗ್ರಂಥರತ್ನವನ್ನು ಈಗ ಪ್ರಕಾಶನಮಾಡುತ್ತಿರುವ ಹೊಳೆ-ನರಸೀಪುರದ ಅಧ್ಯಾತ್ಮಪ್ರಕಾಶ ಕಾರ್ಯಾಲಯದ ವ್ಯವಸ್ಥಾಪಕರು ಸರ್ವಥಾ ಅಭಿನಂದನೀಯರಾಗಿದ್ದಾರೆ. ಇದರಿಂದ ಕನ್ನಡಬಾಂಧವರು ಗೀತಾಮಾಧುರ್ಯವನ್ನು ಸವಿಯುವಂತಾಗಲಿ,
ಗೀತಾಚಾರ್ಯನಾದ ಪರಮಾತ್ಮನ ಪಾದಾರವಿಂದಗಳಿಗೆ ನನ್ನ ತ್ರಿಕರಣಗಳಿಂದಲೂ ಮತ್ತೆ ಮತ್ತೆ ನಮನಗಳು !
“ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ್ರವಿಸ್ತರೈಃ |
ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ ವಿನಿಃಸೃತಾ ||”
ಬೆಂಗಳೂರು ಇತಿ
ದಿನಾಂಕ— 08-06-2002 ಶೇಷಾಚಲಶರ್ಮ
ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ
Comments
Post a Comment