೮. ಶ್ರೀಮದ್-ಭಗವದ್ಗೀತಾ-ಪೀಠಿಕಾ ೫
(೧೨) ಆಚಾರ್ಯ ವಿನೋಬಾ ಭಾವೆಯವರ ಗೀತಾಪ್ರವಚನ
(ಪ್ರಸ್ತಾವನೆ)
ಎರಡು ಮಾತು
(ಎರಡನೆ ಆವೃತ್ತಿಯಿಂದ)
ಇದು ಗೀತಾ ಪ್ರವಚನದ ಎರಡನೆ ಅಚ್ಚು. ಮೊದಲನೆಯದು ನಾನು ಸೆರೆಮನೆಯಲ್ಲಿರುವಾಗಲೇ ಅಚ್ಚಾಯಿತು. ಮೊದಲು ನಾನದನ್ನು ನೋಡಲಾಗಲಿಲ್ಲ. ಮನಸ್ಸಿಗೆ ಸಮರ್ಪಕವಾಗಿರಲಿಲ್ಲ.
ಗೀತೆಯಂತೆ ಇದೂ ಪ್ರತ್ಯಕ್ಷ ಕರ್ಮಕ್ಷೇತ್ರದಲ್ಲೇ ಪ್ರಕಟವಾಗಿದೆ. ೧೯೩೨ರಲ್ಲಿ ಧುಳೇ ಜೈಲಿನಲ್ಲಿ ಅನೇಕ ಸಂತ ಮಹಂತ-ಸೇವಕರು ಸೇರಿದ್ದರು. ಅವರ ಸೇವೆಗಾಗಿ ಇದು ಹುಟ್ಟಿ ಬಂತು. ಅದರಿಂದ ದಿನಬಳಕೆಯ ಮಾತೇ ಈ ಚರ್ಚೆಯಲ್ಲಿ ಬಂದಿದೆ. ಬಾಳಿನ ಸಂಬಂಧವಿಲ್ಲದ ಯಾವ ವಿಚಾರವೂ ವಾದವೂ ಇದರಲ್ಲಿಲ್ಲ. ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಇರುವ ಕೂಲಿಕಾರ-ಕೃಷಿಕರಿಗೆ ಕೂಡ ಇದರಿಂದ ಸಾಂತ್ವನ, ಶ್ರಮಪರಿಹಾರ ಆದೀತು ಎಂಬ ವಿಶ್ವಾಸ ನನಗಿದೆ.
ಈ ಪ್ರವಚನದ ನೆವದಿಂದ ಗೀತೆಯ ಸೇವೆ ಮಾಡುವ ಸುಯೋಗವನ್ನು ದೇವರು ನನಗೆ ಕೊಟ್ಟ. ಅವನ ಅಪಾರ ಕೃಪೆ. ಇದನ್ನು ಬರೆದಿಟ್ಟು ಕೊಳ್ಳಲು ಸಾನೇ ಗುರುಜೀಯಂಥ ಸಿದ್ಧಹಸ್ತ ಸತ್ಪುರುಷರು ಲಭಿಸಿದರು. ಕೇಳಲು ಜಮನಾಲಾಲರಂಥ ತಳಮಳದ ಸಾಧಕರು ದೊರೆತರು. ಹಿಂದುಸ್ಥಾನದಲ್ಲಿ ಈ ಪ್ರವಚನ ಎಲ್ಲೆಲ್ಲಿ ಮುಟ್ಟಿದೆಯೋ ಅಲ್ಲಲ್ಲಿ ಹೃದಯಶುದ್ಧಿಯ, ಕ್ರಿಯಾ ಪರಿವರ್ತನದ ಪ್ರೇರಣೆ ಕೊಟ್ಟಿದೆ. ಮನೆಮನೆಯಲ್ಲೂ ಇದರ ಶ್ರವಣ-ಪಠನ-ಮನನ ಆಗಬೇಕೆಂದು ನನ್ನ ಅಭಿಲಾಷೆ. ತುಕಾರಾಮರ ಭಾಷೆಯಲ್ಲಿ—
ಶಿಕವೂನಿ ಬೋಲ | ಕೇಲೇ ಕೌತುಕ ನವಲ |
ಆಪಣಿಯಾಂ ರಂಜವಿಲೇ | ಬಾಪೇಂ ಮಾಝಿಯಾ ವಿಠಲೇ ||
ನನ್ನ ತಂದೆ ವಿಠ್ಠಲ ನನಗೆ ಮಾತು ಕಲಿಸಿ ತಾನೇ ಆ ಚಮತ್ಕಾರವನ್ನು ಕಂಡು ಹಿಗ್ಗುತ್ತಿದ್ದಾನೆ.
ಪರಂಧಾಮ, ಪವನಾರ್ ವಿನೋಬಾ.
೨೨-೧-೧೯೫೧
ಗೀತಾ ಪ್ರವಚನ
೧. ಮಧ್ಯೇ ಮಹಾಭಾರತಂ
ಒಲವಿನ ತಮ್ಮಂದಿರೆ,
ಇವೊತ್ತಿನಿಂದ ನಾನು ಶ್ರೀಮದ್ ಭಗವದ್ ಗೀತೆಯ ವಿಷಯ ಹೇಳುತ್ತೇನೆ. ಗೀತೆಗೂ ನನಗೂ ಇರುವ ಸಂಬಂಧ ತರ್ಕಕ್ಕೆ ಮೀರಿದ್ದು. ನನ್ನ ಮೈ ತಾಯ ಹಾಲಿನಿಂದ ಬೆಳೆದಿದೆ. ಅದಕ್ಕಿಂತ ಹೆಚ್ಚಾಗಿ ನನ್ನ ಮನಸ್ಸು ಗೀತೆಯ ಹಾಲಿನಿಂದ ಬೆಳೆದಿದೆ. ಎಲ್ಲಿ ಜೀವಾಳದ ಸಂಬಂಧ ಇರುತ್ತದೋ ಅಲ್ಲಿ ತರ್ಕಕ್ಕೆ ಎಡೆಯಿಲ್ಲ. ತರ್ಕವನ್ನುಳಿದು ಶ್ರದ್ಧೆ-ಪ್ರಯೋಗ ಈ ಎರಡು ರೆಕ್ಕೆಗಳನ್ನು ಕೆದರಿ ಗೀತಾಗಗನದಲ್ಲಿ ನಾನು ಯಥಾಶಕ್ತಿ ವಿಹರಿಸುತ್ತೇನೆ. ಬಹುಶಃ ನಾನು ಗೀತೆಯ ವಾತಾವರಣದಲ್ಲೇ ಇದ್ದೇನೆ. ಗೀತೆಯೆಂದರೆ ನನ್ನ ಪ್ರಾಣತತ್ತ್ವ. ಗೀತೆಯ ಬಗ್ಗೆ ಯಾರಿಗಾದರೂ ನಾನು ಹೇಳಿದರೆ ಆಗ ಗೀತಾಸಮುದ್ರದ ಮೇಲೆ ತೇಲಾಡುತ್ತಿರುತ್ತೇನೆ. ನಾನೊಬ್ಬನೇ ಇದ್ದರೆ ಆ ಅಮೃತದ ಕಡಲಿನಲ್ಲಿ ಆಳವಾಗಿ ಮುಳುಗಿ ಕುಳಿತಿರುತ್ತೇನೆ. ಇಂಥ ಗೀತಾಮಾತೆಯ ಚರಿತ್ರೆಯನ್ನು ಪ್ರತಿ ಭಾನುವಾರ ನಾನು ಹೇಳಬೇಕೆಂದು ನಿರ್ಧಾರವಾಗಿದೆ.
ಗೀತೆಯನ್ನು ಮಹಾಭಾರತದಲ್ಲಿ ಯೋಜಿಸಿದ್ದಾರೆ. ಮಹಾಭಾರತದ ನಟ್ಟನಡುವೆ ಭಾರತದ ಎಲ್ಲೆಡೆಗೂ ಬೆಳಕು ಬೀರುವ ಎತ್ತರವಾದ ದೀಪದಂತೆ ಇದೆ—ಗೀತೆ. ಒಂದು ಕಡೆ ೬ ಪರ್ವ, ಇನ್ನೊಂದು ಕಡೆ ೧೨ ಪರ್ವ, ಇದರ ನಡುವೆ ಒಂದು ಕಡೆ ೭ ಅಕ್ಷೋಹಿಣಿ ಸೇನೆ, ಇನ್ನೊಂದು ಕಡೆ ೧೧ ಅಕ್ಷೋಹಿಣಿ ಸೇನೆ—ಹೀಗೆ ನಟ್ಟ ನಡುವೆ ಗೀತೆ ಉಪದೇಶಿತವಾಗುತ್ತದೆ.
ಮಹಾಭಾರತ-ರಾಮಾಯಣಗಳು ನಮ್ಮ ರಾಷ್ಟ್ರೀಯ ಗ್ರಂಥಗಳು. ಅವುಗಳಲ್ಲಿ ವರ್ಣಿಸಿದ ವ್ಯಕ್ತಿಗಳು ನಮ್ಮ ಬಾಳಿನಲ್ಲಿ ಐಕ್ಯವಾಗಿದ್ದಾರೆ. ರಾಮ-ಸೀತೆ, ಧರ್ಮರಾಯ-ದೌಪದಿ, ಭೀಷ್ಮ-ಹನುಮಂತರೇ ಮೊದಲಾದವರು ಸಾವಿರಾರು ವರ್ಷಗಳಿಂದ ಸಮಸ್ತ ಭಾರತೀಯ ಜೀವನದ ಮನಸೆಳೆದಿದ್ದಾರೆ. ಜಗತ್ತಿನ ಇತರ ಮಹಾ ಕಾವ್ಯಗಳ ಪಾತ್ರಗಳು ಯಾವುವೂ ಹೀಗೆ ಜನಜೀವನದಲ್ಲಿ ಬೆರೆತುಹೋದಂತೆ ಕಾಣುವುದಿಲ್ಲ. ಈ ದೃಷ್ಟಿಯಿಂದ ಮಹಾಭಾರತ ರಾಮಾಯಣಗಳು ನಿಸ್ಸಂದೇಹವಾಗಿ ಅದ್ಭುತ ಗ್ರಂಥಗಳು. ರಾಮಾಯಣ ಮಧುರ ನೀತಿಕಾವ್ಯ, ಮಹಾಭಾರತ ವ್ಯಾಪಕ ಸಮಾಜಶಾಸ್ತ್ರ. ವ್ಯಾಸರು ಒಂದು ಲಕ್ಷ ಸಂಹಿತೆಯನ್ನು ಬರೆದು, ಅಸಂಖ್ಯ ಚಿತ್ರಗಳನ್ನೂ, ಚರಿತ್ರೆಗಳನ್ನೂ, ಚಾರಿತ್ರ್ಯಗಳನ್ನೂ ಬಹು ಕೌಶಲದಿಂದ ಯಥಾವತ್ ನಿರೂಪಿಸಿದ್ದಾರೆ. ಲೋಕದಲ್ಲಿ ಕೇವಲ ನಿರ್ದೋಷವಾದುದೆಂದರೆ ದೇವರೊಬ್ಬನೇ. ಹಾಗೆಯೇ ಬರೀ ದೋಷಪೂರ್ಣವಾದುದೂ ಯಾವುದೂ ಇಲ್ಲ. ಇದನ್ನು ಮಹಾಭಾರತ ಸ್ಪಷ್ಟವಾಗಿ ತಿಳಿಸುತ್ತದೆ. ಯುಧಿಷ್ಠಿರರಂಥವರಲ್ಲಿಯೂ ದೋಷಗಳನ್ನು ತೋರಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಕರ್ಣ-ದುರ್ಯೋಧನರ ಗುಣವನ್ನೂ ಪ್ರಕಟಿಸಿದ್ದಾರೆ. ಮಾನವನ ಬಾಳು ಕರಿ - ಬಿಳಿ ದಾರಗಳಿಂದ ನೇಯ್ದ ಬಟ್ಟೆ ಎಂಬುದನ್ನು ಮಹಾಭಾರತ ನಿಚ್ಚಳಮಾಡಿ ತಿಳಿಸುತ್ತದೆ. ತಾವು ಅಲಿಪ್ತರಾಗಿದ್ದು, ಭಗವಾನ್ ವೇದವ್ಯಾಸರು ಈ ವಿರಾಟ್ ಪ್ರಪಂಚದ ನೆರಳು-ಬೆಳಕಿನ ಚಿತ್ರವನ್ನು ತೋರಿಸಿದ್ದಾರೆ. ವ್ಯಾಸರ ಈ ಅಲಿಪ್ತ ಉದಾತ್ತ ಗ್ರಂಥರಚನಾಕೌಶಲದಿಂದ ಮಹಾಭಾರತ ಬಂಗಾರದ ಗಣಿಯಾಗಿದೆ. ಸೋಸಿ ತೆಗೆದು ತೆಕ್ಕೆ ತುಂಬಾ ಬಂಗಾರವನ್ನು ಒಯ್ಯಬಹುದು.
ವ್ಯಾಸರು ಇಂಥ ಮಹಾಭಾರತವನ್ನೇನೋ ಬರೆದರು, ಆದರೆ ಅವರ ಸಂದೇಶ ಎಂದು, ಹೇಳಬೇಕಾದುದು ಅವರಿಗೆ ಏನೂ ಇರಲಿಲ್ಲವೇ ? ತಮ್ಮದು ಈ ಉಪದೇಶ ಎಂದು ಎಲ್ಲಾದರೂ ಹೇಳಿದ್ದಾರೆಯೆ ? ವ್ಯಾಸರಿಗೆ ಎಲ್ಲಿ ಸಮಾಧಿ ಬಂದಿದೆ ? ಬೇರೆ ಬೇರೆ ಕಡೆ ಹೊರೆ ಹೊರೆಯಾಗಿ ತತ್ತ್ವಜ್ಞಾನ ಮಹಾಭಾರತದಲ್ಲೆಲ್ಲಾ ಬಂದಿದೆ. ಆದರೆ ಈ ಎಲ್ಲ ತತ್ತ್ವಜ್ಞಾನದ ಉಪದೇಶದ ಸಾರಸರ್ವಸ್ವವನ್ನು ಎಲ್ಲಾದರೂ ಒತ್ತಟ್ಟಿಗೆ ವ್ಯಾಸರು ಇಟ್ಟಿಲ್ಲವೆ? ಇಟ್ಟಿದ್ದಾರೆ. ಸಮಗ್ರ ಭಾರತದ ನವನೀತವನ್ನು ವ್ಯಾಸರು ಭಗವದ್ಗೀತೆಯಲ್ಲಿ ಕೊಟ್ಟಿದ್ದಾರೆ.
ಗೀತೆ ವ್ಯಾಸರ ಮುಖ್ಯ ಉಪದೇಶ, ಅವರ ಮನನದ ಸಾರಸಂಗ್ರಹ. ಇದರಿಂದಲೇ 'ಮುನೀನಾಮಪಿ ಅಹಂ ವ್ಯಾಸಃ' ಎಂದು ವಿಭೂತಿಯೋಗದಲ್ಲಿ ಅರ್ಥಪೂರ್ಣವಾಗಿ ಹೇಳಿದೆ. ಪ್ರಾಚೀನಕಾಲದಿಂದಲೂ ಗೀತೆಗೆ ಉಪನಿಷತ್ತು ಎಂಬ ಗೌರವ ಸಂದಿದೆ. ಗೀತೆ ಉಪನಿಷತ್ತುಗಳ ಉಪನಿಷತ್ತು. ಸರ್ವ ಉಪನಿಷತ್ತುಗಳನ್ನು ಹಿಂಡಿ ಗೀತಾರೂಪದಲ್ಲಿ ಆ ಹಾಲನ್ನು ಭಗವಂತ ಲೋಕಕ್ಕೆ ನೀಡಿದ್ದಾನೆ. ಅರ್ಜುನ ಬರೀ ನಿಮಿತ್ತ ಮಾತ್ರ. ಬಾಳಿನ ವಿಕಾಸಕ್ಕೆ ಅಗತ್ಯವಾದ ಪ್ರತಿಯೊಂದು ವಿಚಾರವೂ ಬಹುಶಃ ಗೀತೆಯಲ್ಲಿ ಬಂದೇ ಇದೆ. ಆದುದರಿಂದಲೇ ಗೀತೆ ಧರ್ಮಜ್ಞಾನದ ಕೋಶ ಎಂದು ಅನುಭವಿಗಳು ಯಥಾರ್ಥವಾಗಿ ಹೇಳಿದ್ದಾರೆ. ಗೀತೆ ಚಿಕ್ಕದು. ಆದರೆ ಹಿಂದೂಧರ್ಮದ ಮಹಾಗ್ರಂಥ!
ಗೀತೆಯನ್ನು ಹೇಳಿದುದು ಶ್ರೀಕೃಷ್ಣ. ಇದು ಎಲ್ಲರಿಗೂ ಗೊತ್ತಿದೆ. ಈ ಮಹಾ ಉಪದೇಶ ಪಡೆದ ಭಕ್ತ ಅರ್ಜುನ ಅದರಲ್ಲಿ ಬೆರೆತುಹೋದ. ಅಂತೇ ಅವನಿಗೂ ಕೃಷ್ಣ ಎಂಬ ಹೆಸರು ಬಂತು. ಭಗವಂತ - ಭಕ್ತರ ಹೃದ್ಗತವನ್ನು ಪ್ರಕಟಪಡಿಸುವಾಗ ವ್ಯಾಸದೇವ ಪೂರಾ ಕರಗಿಹೋಗಿದ್ದಾನೆ. ಲೋಕ ಆತನನ್ನೂ ಕೃಷ್ಣನೆಂದು ಕರೆವಷ್ಟು ಮಟ್ಟಿಗೆ ಆಗಿದೆ. ಹೇಳುವವನು ಕೃಷ್ಣ, ಕೇಳುವವನು ಕೃಷ್ಣ, ಕಟ್ಟುವವನು ಕೃಷ್ಣ ಹೀಗೆ ಮೂವರಲ್ಲೂ ಒಂದೇ ಅದ್ವೈತ ಮೂಡಿತು. ಮೂವರಿಗೂ ಸಮಾಧಿ ಹತ್ತಿತು. ಗೀತೆಯನ್ನು ಅಭ್ಯಸಿಸುವಾಗ ಇಂಥ ಏಕಾಗ್ರತೆ ಬರಬೇಕು.
(೧೨) ವೇಂಕಟನಾಥಕೃತಂ ಬ್ರಹ್ಮಾನಂದಗಿರ್ಯಾಖ್ಯ-ವ್ಯಾಖ್ಯಾನಮ್
ಪ್ರಸ್ತಾವನಾ
ಪಾರ್ಥಸ್ಯೇವಾತ್ಮಗೀತಾಹೃದಯಮುಪದಿಶನ್ ಯೋ ಮಮಾಪಾರ್ಥಭಾವಂ
ಪ್ರಚ್ಯಾವ್ಯಾಹನ್ ಧನಿತ್ವಂ ವಿತನು ಕೃತಿಮಿಹಾಭೀಪ್ಸಿತಂ ಪ್ರಾಪ್ಸ್ಯಸೀತಿ |
ಸಾನನ್ದಂ ಸಂದಿದೇಶ ಸ್ಫುರತು ಸ ಪುರತಃ ಸಾನ್ದ್ರಜೀಮೂತಧಾಮಾ
ಶ್ರೀಮಾನದ್ವೈತಭೂಮಾ ಮಮ ಪರಮಗುರುಃ ಶ್ರೀಯಶೋದಾಕಿಶೋರಃ || ೧ ||
(ಪಾರ್ಥಸ್ಯ ಇವ ಆತ್ಮಗೀತಾಹೃದಯಮ್) ಪಾರ್ಥನಿಗೆ ಆತ್ಮಗೀತಾಹೃದಯವನ್ನುಪದೇಶಿಸಿದಂತೆ, (ಉಪದಿಶನ್) ನನಗೂ ಉಪದೇಶಿಸುತ್ತಾ, (ಯಃ) ಯಾವನು, (ಮಮ ಅಪಾರ್ಥಭಾವಂ ಪ್ರಚ್ಯಾವ್ಯಾಹನ್) ನನ್ನ ಅಪಾರ್ಥಮಾಡಿಕೊಳ್ಳುವ ಅಜ್ಞಾನವನ್ನು ನಿವಾರಿಸಿ, (ಧನಿತ್ವಂ ವಿತನು) ಜ್ಞಾನಧನವನ್ನುಂಟುಮಾಡಿದನೋ, (ಇಹ ಅಭೀಪ್ಸಿತಂ ಕೃತಿಂ ಪ್ರಾಪ್ಸ್ಯಸಿ ಇತಿ) ಇಲ್ಲಿ ಬಯಸಿದ ಗೀತಾಕೃತಿಯ ನಿಜಾರ್ಥವನ್ನು ಹೊಂದುವೆಯೆಂದು, (ಸಾನನ್ದಂ ಸನ್ದಿದೇಶ) ಆನಂದದಿಂದ ಸಂದೇಶವನ್ನಿತ್ತನೋ, (ಸಃ) ಅಂತಹ, (ಸಾನ್ದ್ರಜೀಮೂತಧಾಮಾ) ಸರ್ವೋನ್ನತವಾದ ಗೋಲೋಕನಿವಾಸಿಯಾದ, (ಶ್ರೀಮಾನ್) ರಾಧಾಸಮೇತನಾದ, (ಅದ್ವೈತಭೂಮಾ) ಅದ್ವೈತಾನಂತಸ್ವರೂಪನಾದ, (ಮಮ ಪರಮಗುರುಃ) ನನ್ನ ಅತ್ಯಂತ ಹೆಚ್ಚಿನ ಗುರುವಾದ, (ಶ್ರೀಯಶೋದಾಕಿಶೋರಃ) ಶ್ರೀ ಯಶೋದಾನಂದನ ಕೃಷ್ಣಪರಮಾತ್ಮನು, (ಪುರತಃ ಸ್ಫುರತು) ನನ್ನ ಮುಂದೆ ಗೋಚರಿಸಲಿ.
ಶ್ರೀಮದ್ರಾಮಬ್ರಹ್ಮಶ್ರೀಚರಣಸ್ಮರಣಪರಿಣತಸ್ಫುರಣಃ |
ಭಗವದುಪದಿಷ್ಟಗೀತಾಭಾವಂ ವಿವರೀತುಮಾರಭೇ ಸೋऽಹಮ್ || ೨ ||
(ಶ್ರೀಮದ್-ರಾಮಬ್ರಹ್ಮ-ಶ್ರೀ-ಚರಣ-ಸ್ಮರಣ-ಪರಿಣತ-ಸ್ಫುರಣಃ) ಪರಬ್ರಹ್ಮಸ್ವರೂಪಿ ಶ್ರೀರಾಮನ ಶ್ರೀಚರಣದ ಸ್ಮರಣೆಯಲ್ಲಿ ಪರಿಪೂರ್ಣವಾಗಿ ನತಮನನಾಗಿ ಪರಿಣತಿ ಹೊಂದಿದ್ದರಿಂದಾದ ಸ್ಫುರಣೆಯುಳ್ಳವನಾದ, (ಸಃ, ಅಹಮ್) ಅಂತಹ ನಾನು, (ಭಗವದ್-ಉಪದಿಷ್ಟ-ಗೀತಾಭಾವಮ್) ಭಗವಂತನಿಂದ ಉಪದೇಶಿಸಲ್ಪಟ್ಟ ಗೀತೆಯ ಭಾವಾರ್ಥವನ್ನು, (ವಿವರೀತುಮ್ ಆರಭೇ) ವಿವರಿಸಲು ಆರಂಭಿಸುತ್ತೇನೆ.
ವ್ಯಾಖ್ಯಾತಾರಃ ಕತಿ ನ ಕೃತಿನಃ ಸನ್ತಿ ಗೀತಾಸು ಕಿಂ ತೈ-
-ರ್ವ್ಯಾಖ್ಯಾಸ್ಯೇऽಹಂ ಯದುಕುಲಪತಿಶ್ರೀಮುಖಾಬ್ಜೋಪದಿಷ್ಟಮ್ |
ಭಾವಂ ತಾವಚ್ಛೃಣುತ ಭಗವತ್ಪಾದಭಾಷ್ಯೋಪನೀತ-
-ಬ್ರಹ್ಮಾದ್ವೈತಾಮೃತರಸಪರಿಸ್ಯನ್ದಿಸನ್ದರ್ಭಗರ್ಭಮ್ || ೩ ||
(ಗೀತಾಸು) ಗೀತೆಗಳಲ್ಲಿ, (ಕೃತಿನಃ ವ್ಯಾಖ್ಯಾತಾರಃ) ಪುಣ್ಯವಂತರಾದ ವ್ಯಾಖ್ಯಾನಕಾರರು, (ಕತಿ ನ ಸನ್ತಿ) ಎಷ್ಟು ಜನ ತಾನೇ ಇಲ್ಲ? (ತೈಃ ಕಿಂ) ಆದರೆ, ಅವರಿಂದೇನು? (ಅಹಂ) ನಾನಾದರೋ, (ಯದುಕುಲಪತಿಶ್ರೀಮುಖಾಬ್ಜ-ಉಪದಿಷ್ಟಮ್) ಸಾಕ್ಷಾತ್ ಯದುಕುಲಪತಿಯಾದ ವಾಸುದೇವ ಭಗವಂತನ ವದನಾರವಿಂದದಿಂದ ಉಪದೇಶಿಸಲ್ಪಟ್ಟ ಗೀತೆಯ, (ಭಾವಂ ವ್ಯಾಖ್ಯಾಸ್ಯೇ) ಭಾವವನ್ನು ವ್ಯಾಖ್ಯಾನಮಾಡುವೆನು. (ತಾವತ್ ಶ್ರುಣುತ) ಅದನ್ನೀಗ ತಾವು ಶ್ರವಣಮಾಡಿರಿ. (ಭಗವತ್ಪಾದ-ಭಾಷ್ಯ-ಉಪನೀತ-ಬ್ರಹ್ಮ-ಅದ್ವೈತ-ಅಮೃತ-ರಸ-ಪರಿಸ್ಯನ್ದಿ-ಸನ್ದರ್ಭ-ಗರ್ಭಮ್) ಇದು ಶಂಕರಭಗವತ್ಪಾದಾಚಾರ್ಯರ ಗೀತಾಭಾಷ್ಯದಿಂದ ಆಯ್ದ ಅದ್ವಯ ಬ್ರಹ್ಮಾಮೃತದ ರಸವನ್ನು ಸುತ್ತೆಲ್ಲ ಸ್ರವಿಸುತ್ತಿರುವ ಪ್ರಬಂಧರಚನೆಯನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿರುವುದಾಗಿದೆ.
ಸದ್ಯಃ ಪರಬ್ರಹ್ಮರಸಾಸ್ವಾದೋ ಯೈರಭಿಕಾಂಕ್ಷಿತಃ |
ಬ್ರಹ್ಮಾನನ್ದಗಿರಿವ್ಯಾಖ್ಯಾ ಭಾವ್ಯತಾಂ ತೈರಿಯಂ ಮುಹುಃ || ೪ ||
(ಸದ್ಯಃ) ಈಗಲೇ, (ಪರಬ್ರಹ್ಮರಸ-ಆಸ್ವಾದಃ) ಪರಬ್ರಹ್ಮರಸದ ರುಚಿಯನ್ನು ನೋಡಲು, (ಯೈಃ ಅಭಿಕಾಂಕ್ಷಿತಃ) ಯಾರು ಬಯಸುತ್ತಾರೋ, (ತೈಃ, ಇಯಂ) ಅಂಥವರು ಈ, (ಬ್ರಹ್ಮಾನನ್ದಗಿರಿವ್ಯಾಖ್ಯಾ) ಬ್ರಹ್ಮಾನಂದಗಿರಿವ್ಯಾಖ್ಯಾನವನ್ನು, (ಮುಹುಃ) ಮತ್ತೆ ಮತ್ತೆ, (ಭಾವ್ಯತಾಮ್) ಮನನ ಮಾಡಬೇಕು.
ಜಾತಾಸಿ ತ್ವಂ ಮುರಹರಮುಖಾಜ್ಜಾಹ್ನವೀ ತಸ್ಯ ಪಾದಾತ್
ಸರ್ವಾನಭ್ಯುದ್ಧರತಿ ಭವತೀ ಸಾ ತು ಮಗ್ನಾನ್ ವಿಧತ್ತೇ |
ಪ್ರತ್ಯಗ್ಬ್ರಹ್ಮಾಮೃತರಸನಿಧಿಂ ಪ್ರಾಪ್ಯ ವಿಶ್ರಾಮ್ಯಸಿ ತ್ವಂ
ಮಾತರ್ಗೀತೇ ಜಡನಿಧಿಮಿಯಂ ಮಾತಿ ನ ತ್ವತ್ಪ್ರಭಾವಃ || ೫ ||
(ಮಾತಃ, ಗೀತೇ) ಹೇ ಗೀತಾಮಾತೆಯೆ! (ತ್ವಂ) ನೀನು, (ಮುರಹರಮುಖಾತ್ ಜಾತಾ ಅಸಿ) ಮುರಾಸುರನನ್ನು ಸಂಹರಿಸಿದ ಮಾಧವನ ಬಾಯಿಯಿಂದ ಜನಿಸಿದವಳಾಗಿರುವೆ. (ಜಾಹ್ನವೀ) ಜಹ್ನು ಋಷಿಯಿಂದ ಆಪೋಶನಮಾಡಲ್ಪಟ್ಟು ಜಾಹ್ನವಿಯೆನಿಸಿದ ಗಂಗೆಯು, (ತಸ್ಯ ಪಾದಾತ್) ಆತನ ಪಾದದಿಂದ ಉದಿಸಿದಳು. (ಭವತೀ ತು) ನೀನಾದರೋ, (ಸರ್ವಾನ್) ಎಲ್ಲರನ್ನೂ, (ಅಭ್ಯುದ್ಧರತಿ) ಉದ್ಧರಿಸುವಿ. (ಸಾ) ಆ ಗಂಗಾಮಾತೆಯು, (ಮಗ್ನಾನ್) ತನ್ನಲ್ಲಿ ಮುಳುಗಿ ಮಿಂದವರನ್ನು / ಮಜ್ಜನ ಮಾಡಿದವರನ್ನು ಮಾತ್ರ, (ವಿಧತ್ತೇ) ಉದ್ಧರಿಸುವಳು. (ತ್ವಂ) ನೀನು, (ಪ್ರತ್ಯಗ್-ಬ್ರಹ್ಮ-ಅಮೃತರಸ-ನಿಧಿಂ) ಸಕಲರಂತರ್ಯಾಮಿಯಾದ ಪ್ರತ್ಯಗಾತ್ಮಬ್ರಹ್ಮವೆಂಬ ಅಮೃತರಸನಿಧಿಯನ್ನು, (ಪ್ರಾಪ್ಯ) ಪಡೆದು, (ವಿಶ್ರಾಮ್ಯಸಿ) ವಿಶ್ರಾಂತಿಯನ್ನು ಹೊಂದುತ್ತಿರುವಿ. ಆದರೆ ಸಾಮಾನ್ಯರು, ಅಜ್ಞಾನಿಗಳು, ನಿನ್ನನ್ನು (‘ಇಯಂ ಜಡನಿಧಿಂ’) ‘ಈಕೆ ಕೇವಲ ಜಡವಾದ ಸೂಕ್ತಿಗಳ ನಿಧಿ’ ಯೆಂದಷ್ಟೇ, (ಮಾತಿ) ತಿಳಿದಿರುವರು. (ತ್ವತ್-ಪ್ರಭಾವಃ, ನ) ನಿನ್ನ ಯಥಾರ್ಥ ಪ್ರಭಾವವನ್ನರಿಯರು.
(೧೩) ಸ್ವಾಮಿ ಸೋಮನಾಥಾನಂದಜೀಯವರ ಗೀತಾಭಾವಧಾರೆ
ಪ್ರಸ್ತಾವನೆ
ಹಲವಾರು ವರುಷಗಳಿಂದ ಜನರಿಗೆ ಭಗವದ್ಗೀತೆಯನ್ನು ವಿವರಿಸುತ್ತಿದ್ದೆ. ಅನೇಕ ವೇಳೆ ಇದನ್ನು ಕೇಳಿದವರು ನೀವು ಇದನ್ನು ಒಂದು ಪುಸ್ತಕರೂಪಕ್ಕೆ ತೆಗೆದುಕೊಂಡು ಬಂದರೆ ಮೇಲಾಗುವುದು; ಕೇಳಿ ಅನೇಕವೇಳೆ ಮರೆಯುವೆವು; ಪುನಃ ಅದನ್ನು ಜ್ಞಾಪಿಸಿಕೊಳ್ಳುವುದಕ್ಕೆ ಒಂದು ಪುಸ್ತಕರೂಪದಲ್ಲಿ ಇದ್ದರೆ ಸಹಾಯವಾಗುವುದು ಎಂದು ಹೇಳುತ್ತಿದ್ದರು. ಅವರ ಕೋರಿಕೆಯಂತೆ ಮಾತಿನಲ್ಲೆ ಕೊನೆಗಾಣುತ್ತಿದ್ದ ವಿಷಯಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದೆ.
ಭಗವದ್ಗೀತೆಯ ಮೇಲೆ ಹಿಂದಿನಿಂದಲೂ ಅನೇಕ ಜನ ಭಾಷ್ಯಗಳನ್ನು ಬರೆದಿರುವರು. ನಮ್ಮ ಮತ್ತಾವ ಗ್ರಂಥದ ಮೇಲೂ ಅಷ್ಟೊಂದು ಸಾಹಿತ್ಯ ಬೆಳೆದಿಲ್ಲ, ಇದಕ್ಕೆ ಕಾರಣ ಗೀತೆಗೆ ಜನರ ಮೇಲಿರುವ ಪ್ರಭಾವ. ಯಾರು ಏನನ್ನು ಹೇಳಬೇಕಾದರೂ ಗೀತೆಯ ಮೂಲಕ ಹೇಳಿದರೆ ಜನ ಅದನ್ನು ಪುರಸ್ಕರಿಸುತ್ತಾರೆ, ಇಲ್ಲದೆ ಇದ್ದರೆ ಇಲ್ಲ. ಗೀತೆಯಲ್ಲಿ ಎರಡು ಭಾಗದ ಸತ್ಯ ಗಳಿವೆ. ಒಂದು ಆ ಕಾಲ ಮತ್ತು ಆ ದೇಶಕ್ಕೆ ಮಾತ್ರ ಅನ್ವಯಿಸುವುದು. ಮತ್ತೊಂದು ಎಲ್ಲಾ ಕಾಲ ದೇಶ ಜನಾಂಗಕ್ಕೂ ಅನ್ವಯಿಸುವ ಸನಾತನ ತತ್ತ್ವ. ಈ ಎರಡನೆಯ ದೃಷ್ಟಿಯಿಂದ ಗೀತೆ ಎಂದಿಗೂ ಹಳೆಯದಾಗುವುದಿಲ್ಲ. ಆದಕಾರಣವೇ ಅಷ್ಟೊಂದು ಮೇಧಾವಿಗಳು ಹಿಂದಿನಿಂದಲೂ ವಿದ್ವತ್‌ಪೂರ್ಣವಾದ ಭಾಷ್ಯಗಳನ್ನು ಬರೆದಿರುವುದು. ನಮಗೆ ಸಿಕ್ಕಿರುವುದರಲ್ಲಿ ಶಂಕರಾಚಾರ್ಯರ ಭಾಷ್ಯವೇ ಅತ್ಯಂತ ಪುರಾತನವಾದುದು. ಬಹುಶಃ ಅದಕ್ಕಿಂತ ಪುರಾತನವಾದುದು ಇದ್ದಿರಬಹುದು. ಆದರೆ ಅದು ನಮಗೆ ಸಿಕ್ಕಿಲ್ಲ. ಅನಂತರ ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರು, ನಿಂಬಾರ್ಕ, ವಲ್ಲಭ, ಶ್ರೀಧರ ಮುಂತಾದ ಪ್ರಮುಖರು ಭಾಷ್ಯವನ್ನು ಬರೆದು ತಮ್ಮ ತಮ್ಮ ಸಿದ್ಧಾಂತಗಳನ್ನು ಸಮರ್ಥಿಸಿರು ವರು. ಇತ್ತೀಚೆಗೆ ಕರ್ಮರಂಗದಲ್ಲಿ ಹೆಸರಾಂತ ಮೂರು ವ್ಯಕ್ತಿಗಳಿಂದ ಮೂರು ಭಾಷ್ಯಗಳು ಬಂದಿವೆ. ಇವರೆಲ್ಲ ತಮ್ಮ ಜೀವನದ ಚಟುವಟಿಕೆಗೆ ಗೀತೆಯಿಂದ ಸಾರವನ್ನು ಹೀರಿದವರು. ಅವರೇ ರಾಜಕೀಯ ಕ್ಷೇತ್ರದಲ್ಲಿ ಪ್ರಖ್ಯಾತರಾದ ಬಾಲಗಂಗಾಧರ ತಿಲಕರು, ಮಹಾತ್ಮ ಗಾಂಧೀಜಿ ಮತ್ತು ಪಾಂಡಿಚೆರಿಯ ಅರವಿಂದ ಘೋಷರು. ಇವುಗಳಲ್ಲದೆ ದೇಶಭಾಷೆಯಲ್ಲಿ ಬೇಕಾದಷ್ಟು ಗೀತೆಯ ಮೇಲೆ ಪುಸ್ತಕಗಳು ಬಂದಿವೆ. ಗೀತೆ ಆತ್ಮನ ವಿಕಾಸಕ್ಕೆ ಸಂಬಂಧಪಟ್ಟ ನಿತ್ಯಶಾಸ್ತ್ರ. ಅದರ ಮೇಲೆ ಎಷ್ಟು ಗ್ರಂಥಗಳನ್ನು ಬರೆದರೂ ಅದೇನು ಹಳತಾಗುವುದಿಲ್ಲ. ಒಬ್ಬೊಬ್ಬನೂ ತನ್ನ ತನ್ನ ಸಂಸ್ಕಾರ ಮತ್ತು ವಿಕಾಸಕ್ಕೆ ತಕ್ಕಂತೆ ಗೀತೆಯನ್ನು ವಿವರಿಸಲು ಸಾಧ್ಯ. ಅಲ್ಲಿ ಎಲ್ಲರಿಗೂ ಸ್ಥಳವಿದೆ ಹಿಂದಿನ ಭಾಷ್ಯಕಾರರಿಗೆ, ಈಗಿನವರಿಗೆ, ಮುಂದಿನವರಿಗೆ. ಏಕೆಂದರೆ ಅಲ್ಲಿರುವುದು ಅನಂತ ಸತ್ಯ, ಬಹುಮುಖದ ಸತ್ಯ. ಅದನ್ನು ಎಷ್ಟು ದೃಷ್ಟಿಕೋಣ ಗಳಿಂದ ಬೇಕಾದರೂ ನೋಡಬಹುದು. ಹಿಂದಿನಿಂದ ಸೂರ್ಯೋದಯ, ಅಸ್ತಮಯವನ್ನು ಎಷ್ಟು ಕವಿಗಳು ಬಣ್ಣಿಸಿರುವರು, ಚಿತ್ರಕಾರರು ಚಿತ್ರಿಸಿರುವರು. ಇಂದಿಗೂ ಅದನ್ನು ಬೇರೆ ಬೇರೆ ದೃಷ್ಟಿಕೋಣಗಳಿಂದ ಬಣ್ಣಿಸುವರು, ಚಿತ್ರಿಸುವರು. ಒಂದರಂತೆ ಮತ್ತೊಂದು ಇಲ್ಲ.
ಪ್ರತಿಯೊಂದರಲ್ಲಿಯೂ ಒಂದು ನವ್ಯತೆಯನ್ನು ನೋಡುತ್ತೇವೆ. ಹಾಗೆಯೇ ಗೀತೆ. ಅದು ಎಲ್ಲರ ಹೃದಯನಾಡಿಯನ್ನು ಮಿಡಿಯುವುದು. ಮಿಡಿದಾಗ ಒಬ್ಬೊಬ್ಬನಿಂದ ಒಂದೊಂದು ಭಾವಧಾರೆ ಹೊರಹೊಮ್ಮುವುದು, ಸರಿಯಾಗಿ ನೋಡಿದರೆ ಒಂದು ಮತ್ತೊಂದಕ್ಕೆ ವಿರೋಧ ವಾಗಿಲ್ಲ; ಒಂದು ಮತ್ತೊಂದಕ್ಕೆ ಪೋಷಕವಾಗಿರುವುದು.
ನಾನು ಗೀತೆಯನ್ನು ಸಿದ್ಧಾಂತದ ದೃಷ್ಟಿಗಿಂತ ಹೆಚ್ಚಾಗಿ ಸಾಧಕನ ದೃಷ್ಟಿಯಿಂದ ನೋಡುತ್ತೇನೆ. ಸಾಧಕನಿಗೆ ಯಾವುಯಾವುದು ಪೂರ್ಣ ಸತ್ಯದೆಡೆಗೆ ಹೋಗುವುದಕ್ಕೆ ಅಡ್ಡಿಯಾಗಿದೆ, ಅವುಗಳಿಂದ ಪಾರಾಗುವುದು ಹೇಗೆ ಎಂಬುದನ್ನು ಶ್ರೀಕೃಷ್ಣ ಗೀತೆಯ ಬೋಧೆಯಲ್ಲೆಲ್ಲ ಬೇಕಾದಷ್ಟು ಹೇಳಿರುವನು. ಸಾಧಕನ ದೃಷ್ಟಿ ಎಲ್ಲಾ ಸಿದ್ಧಾಂತದವರಿಗೂ ಅನ್ವಯಿಸುವುದು. ಎಲ್ಲರೂ ಸಂಧಿಸುವ ಒಂದು ಸಾಮಾನ್ಯ ಭೂಮಿಕೆ ಎಂದರೆ ಇದೇ. ಯಾರು ಯಾವ ತತ್ತ್ವ ವನ್ನಾದರೂ ತೆಗೆದುಕೊಂಡಿರಲಿ, ಯಾವ ಯೋಗವನ್ನಾದರೂ ತೆಗೆದುಕೊಂಡಿರಲಿ, ಯಾವ ಭಾವದ ಮೂಲಕವಾಗಿ ಆದರೂ ಭಗವಂತನನ್ನು ಪ್ರೀತಿಸುತ್ತಿರಲಿ, ಅಲ್ಲಿ , ಇರುವ ಸ್ಥಳದಲ್ಲಿ ಇರದೆ ಮುಂದುವರಿದು ಹೋಗಬೇಕಾದರೆ ಏನು ಮಾಡಬೇಕು ಎಂಬುದನ್ನು ಹೇಳುವುದು. ಭಗವದ್ಗೀತೆ ಎಲ್ಲಾ ಸಾಧಕರಿಗೂ ಒಂದು ಊರುಗೋಲು ಆಗಬಲ್ಲದು; ಅವರ ಕೈದೀವಿಗೆ ಆಗಬಲ್ಲದು.
ನಾನು ಇದನ್ನು ಬರೆಯುವಾಗ ಸಾಧಾರಣ ಕುಳಿತುಕೊಂಡು ಮಾತನಾಡುವ ಶೈಲಿಯ ಸಮೀಪದಲ್ಲೆ ಇದ್ದೇನೆ. ಶ್ರೋತೃಗಳಿಗೆ ಮಾತನಾಡುತ್ತಿರುವಾಗ ಹೇಗೆ ಹೇಳುತ್ತಿದ್ದೆನೊ, ಯಾವ ಯಾವ ಉದಾಹರಣೆಗಳನ್ನು ಕೊಡುತ್ತಿದ್ದೆನೊ, ಅದನ್ನೆಲ್ಲಾ ಇದರಲ್ಲಿ ಬಳಸಿಕೊಂಡಿರುವೆನು. ಗ್ರಂಥದ ಉದ್ದಕ್ಕೂ ಸಾಧ್ಯವಾದೆಡೆಯಲ್ಲೆಲ್ಲಾ ಶ್ರೀರಾಮಕೃಷ್ಣರ ಉಪದೇಶಗಳನ್ನು ಉದ ಹರಿಸಿದ್ದೇನೆ. ಶ್ರೀರಾಮಕೃಷ್ಣರು ಗೀತೆಯಂತೆ ಬಾಳಿ ಬದುಕಿದವರು. ಅವರ ಜೀವನ ಮತ್ತು ಉಪದೇಶವೇ ಗೀತೆಗೆ ಬರೆದ ಸಚೇತನ ಭಾಷ್ಯದಂತಿದೆ. ಶ್ರೀ ಕೃಷ್ಣನ ಪವಿತ್ರವದನದಿಂದ ಭವಜೀವಿಗಳ ಅಜ್ಞಾನಮೋಚನೆಗೆಂದು ಧರೆಗೆ ಇಳಿದುಬಂದ ಗಂಗೆ ಭಗವದ್ಗೀತೆ. ಅದನ್ನು ಹೇಳುವಾಗ ನಾನು ಆ ತೀರ್ಥದಲ್ಲಿ ಮೀಯುತ್ತಿದ್ದೆ. ಕೇಳುತ್ತಿದ್ದವರು ಮೀಯುತ್ತಿದ್ದರು. ಈಗ ಇದರಲ್ಲಿ ಓದುವವರೂ ಮೀಯುವರು. ಇದನ್ನು ಹೇಳುವುದು, ಕೇಳುವುದು, ಓದುವುದು ಎಲ್ಲವೂ ಒಂದು ಜ್ಞಾನತಪಸ್ಸು, ಒಂದು ಜ್ಞಾನ ಯಜ್ಞ, ಒಂದು ಪೂಜೆ, ಅದರಲ್ಲಿ ಎಲ್ಲರೂ ಭಾಗಿಗಳು.
ಸೋಮನಾಥಾನಂದ
ಗೀತಾದರ್ಶನ
ಸರ್ವ ಹಿಂದೂಗಳಿಗೂ ಪರಮ ಪವಿತ್ರವಾದ ಧರ್ಮಗ್ರಂಥ ಭಗವದ್ಗೀತಾ. ಇಲ್ಲಿ ನಮಗೆ ದೊರೆಯುವುದು ಸತ್ಯದ ಪೂರ್ಣದೃಷ್ಟಿ. ದೈತ ವಿಶಿಷ್ಟಾದೈತ ಅದೈತವೆಂಬ ತತ್ತ್ವಗಳು, ಜ್ಞಾನಯೋಗ, ಕರ್ಮಯೋಗ, ರಾಜಯೋಗಗಳೆಂಬ ಯೋಗಮಹಾನದಿಗಳು ಇಲ್ಲಿ ಸಂಗಮವಾಗಿವೆ. ದೇವರನ್ನು ನಿರಾಕಾರವಾಗಿ ಉಪಾಸನೆ ಮಾಡುವವರಿಗೆ ಸ್ಥಳವಿದೆ ಇಲ್ಲಿ, ಅವನನ್ನು ಸಾಕಾರವಾಗಿ ಉಪಾಸನೆ ಮಾಡುವವರಿಗೆ ಸ್ಥಳವಿದೆ ಇಲ್ಲಿ, ಅವನನ್ನು ಯಾವುದೋ ಒಂದು ವ್ಯಕ್ತಿಯಲ್ಲಿ ಒಂದು ಸ್ಥಳದಲ್ಲಿ ನೋಡುವುದರಿಂದ ಹಿಡಿದು, ಸರ್ವಾಂತರ್ಯಾಮಿ ಅವನು, ಅವನಿಲ್ಲದ ಸ್ಥಳವಿಲ್ಲ. ಅವನಿಲ್ಲದ ಕಾಲವಿಲ್ಲ ಎಂಬ ಭಾವನೆಯವರೆಗೆ ಎಲ್ಲದಕ್ಕೂ ಇಲ್ಲಿ ಸ್ಥಳವಿದೆ. ಇಲ್ಲಿ ಬರುವ ತತ್ತ್ವ ಆಗಸದಷ್ಟು ವಿಶಾಲವಾಗಿದೆ, ಕಡಲಿನಷ್ಟು ಆಳವಾಗಿದೆ. ಇದು ಯಾರನ್ನೂ ನಿರಾಕರಿಸುವುದಿಲ್ಲ. ಎಲ್ಲರನ್ನೂ ಸ್ವೀಕರಿಸುವುದು. ಯಾರ ಭಾವಕ್ಕೂ ನಷ್ಟವನ್ನುಂಟುಮಾಡದೆ, ಅವರವರು ಇರುವ ಸ್ಥಳದಿಂದ ಮುಂದುವರಿದು ವಿಕಾಸವಾಗಿ, ಸರ್ವಾಂತರ್ಯಾಮಿಯಾದ ಭಗವಂತನೆಡೆಗೆ ಕರೆದುಕೊಂಡು ಹೋಗುವುದಕ್ಕೆ ಇರುವ ಮಾರ್ಗದರ್ಶಕನೇ ಗೀತಾ. ಹಾಗೆ ಮುಂದುವರಿಯುವಾಗ ಇನ್ನೊಬ್ಬರನ್ನು ನಿಕೃಷ್ಟವಾಗಿ ಕಾಣುವುದಾಗಲಿ, ಅವರನ್ನು ಭಂಗಿಸುವುದಾಗಲಿ, ಹಂಗಿಸುವುದಾಗಲಿ ಯಾವುದೂ ಇಲ್ಲ. ಯಾವಾಗಲೂ ಔದಾರ್ಯತೆಯ ಛಾಯೆಯಲ್ಲಿಯೇ ಇಲ್ಲಿ ಪಥಿಕ ಪ್ರಯಾಣ ಮಾಡುತ್ತಿರುವನು.
ಪ್ರಸ್ಥಾನತ್ರಯ
ಹಿಂದೂಗಳ ತತ್ತ್ವಸೌಧಕ್ಕೆ ಶಾಸ್ತ್ರದ ಆಧಾರಸ್ತಂಭವಿದೆ. ಆ ಆಧಾರಸ್ತಂಭವೇ ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತಾ ಎಂಬ ಪ್ರಸ್ಥಾನತ್ರಯ. ಏನನ್ನು ಹೇಳಬೇಕಾದರೂ ಅವರು ಈ ಪ್ರಸ್ಥಾನತ್ರಯದ ಮೂಲಕ ಹೇಳಬೇಕು. ತಾವು ಹೇಳುವುದಕ್ಕೆ ಇದರಲ್ಲಿ ಪ್ರಮಾಣ ಸಿಕ್ಕ ಬೇಕು. ಇಲ್ಲಿ ಇಲ್ಲದೇ ಇದ್ದರೆ, ಅವರು ಹೇಳುವುದನ್ನು ಯಾರೂ ಗೌರವಿಸುವುದಿಲ್ಲ, ಪುರ ಸ್ಕರಿಸುವುದಿಲ್ಲ. ಆದಕಾರಣವೇ, ಈ ಮೂರು ಗ್ರಂಥಗಳ ಮೇಲೆ ಅಷ್ಟೊಂದು ಭಾಷ್ಯಗಳು, ಭಾಷ್ಯಗಳಿಗೆ ಟೀಕೆಗಳು, ಟೀಕೆಗಳಿಗೆ ತಾತ್ಪರ್ಯಗಳು ಹುಟ್ಟಿಕೊಂಡಿವೆ.
ಈ ಪ್ರಸ್ಥಾನತ್ರಯದಲ್ಲಿ ಉಪನಿಷತ್ತುಗಳು ಅತ್ಯಂತ ಪ್ರಾಚೀನವಾದುವುಗಳು. ಇವುಗಳು ವೇದಗಳ ಜ್ಞಾನಕಾಂಡದಲ್ಲಿ ಬರುವುವು. ಇದನ್ನೇ ವೇದಾಂತ ಎಂತಲೂ ಕರೆಯುತ್ತಾರೆ. ಈ ಉಪನಿಷತ್ತುಗಳಲ್ಲಿ ಹತ್ತು ಬಹಳ ಪ್ರಮುಖವಾದವುಗಳು. ಅವೇ ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ ಮತ್ತು ಬೃಹದಾರಣ್ಯಕ ಎಂಬುವುಗಳು. ಹಿಂದಿನ ಕಾಲದಲ್ಲಿ ಯಾವುದೋ ಕಾರಣದಿಂದ ಉಪನಿಷತ್ತುಗಳನ್ನು ಎಲ್ಲರೂ ಓದಕೂಡದು, ಕೇವಲ ದ್ವಿಜರು ಮಾತ್ರ ಓದಬಹುದು ಎಂಬ ಭಾವನೆ ಬಂದುಹೋಗಿತ್ತು. ಇವು ಬಹಳ ಕಷ್ಟ. ಇವನ್ನು ತಿಳಿದುಕೊಳ್ಳಬೇಕಾದರೆ ಸೂಕ್ಷ್ಮ ಬುದ್ದಿ ಇರಬೇಕು, ಚಿತ್ತ ಶುದ್ಧವಾಗಿರಬೇಕು. ಇಲ್ಲದೇ ಇದ್ದರೆ ಒಂದು ಬರೆದಿದ್ದರೆ ಓದುವವನು ಮತ್ತೊಂದನ್ನು ಗ್ರಹಿಸುತ್ತಾನೆ. ಅದು ತಪ್ಪಿರಬಹುದು, ಅದನ್ನು ಮತ್ತೊಬ್ಬನಿಗೆ ಬೋಧಿಸುತ್ತಾನೆ. ಇದರಿಂದ ಇವನಿಗೆ ಮಾತ್ರ ಹಾನಿಯಲ್ಲ, ಕೇಳುವವರಿಗೆಲ್ಲ ಹಾನಿಯಾದೀತು. ಈ ಕಾರಣದಿಂದಲೇ ಎಲ್ಲರೂ ಓದಕೂಡದೆಂದು ನಿಯಮಿಸಿರಬಹುದೆಂದು ನಾವು ಊಹಿಸಬಹುದು. ಅಂತೂ ಉಪನಿಷತ್ತಿನ ಜ್ಞಾನ ಬಹು ಕಾಲದವರೆಗೆ ಯಾವುದೋ ಒಂದು ಕೋಮಿನವರಿಗೆ ಮಾತ್ರ ಮೀಸಲಾಗಿತ್ತು.
ಅನಂತರ ಬರುವ ಪ್ರಸ್ಥಾನವೇ ಬ್ರಹ್ಮಸೂತ್ರ. ಇದನ್ನು ವ್ಯಾಸರೇ ಕ್ರೋಢೀಕರಿಸಿದರು ಎಂದು ಹೇಳುತ್ತಾರೆ. ಇಲ್ಲಿ ಸೂತ್ರರೂಪದಲ್ಲಿ ಬರುವುದೇ ಉಪನಿಷತ್ತಿನಿಂದ ಆಯ್ದ ಸಂಕ್ಷೇಪವಾದ ವಾಕ್ಯಗಳು. ಇವುಗಳನ್ನು ತಾತ್ತ್ವಿಕ ದೃಷ್ಟಿಯಿಂದ ಪೋಣಿಸಿರುವರು. ಜೀವ, ಜಗತ್ತು, ಈಶ್ವರ, ಕರ್ಮ ಮುಂತಾದ ವಿಷಯಗಳೆಲ್ಲ ಇಲ್ಲಿ ಬರುವುವು. ಆದರೆ ಇದನ್ನು ತಿಳಿದುಕೊಳ್ಳಬೇಕಾದರೆ ಉಪನಿಷತ್ತಿಗಿಂತ ಕಷ್ಟ. ಏಕೆಂದರೆ ಬರುವ ವಾಕ್ಯಗಳು ಬಹಳ ಸಣ್ಣವು. ಆ ವಾಕ್ಯಗಳಿಗೆ ಹಿಂದೆ ಮುಂದೆ ಯಾವುದೂ ಮೊದಲನೇ ಬಾರಿ ಓದುವವನಿಗೆ ಗೊತ್ತಾಗುವುದಿಲ್ಲ. ಇದನ್ನು ತಿಳಿದುಕೊಳ್ಳಬೇಕಾದರೆ ಯಾರಾದರೂ ಭಾಷ್ಯಕಾರರ ಸಹಾಯವಿಲ್ಲದೇ ಇದ್ದರೆ ದುಸ್ಸಾಧ್ಯ. ವಿದ್ವಾಂಸರಿಗೇ ಇದನ್ನು ತಿಳಿದುಕೊಳ್ಳುವುದಕ್ಕೆ ಕಷ್ಟ ಎಂದಮೇಲೆ ಸಾಧಾರಣ ಮನುಷ್ಯರಿಗೆ ಇದು ದಕ್ಕುವ ವಸ್ತುವೇ ಅಲ್ಲ.
ಮೂರನೆಯ ಪ್ರಸ್ಥಾನವೇ ಭಗವದ್ಗೀತಾ. ಇದು ಮಹಾಭಾರತದ ಭೀಷ್ಮಪರ್ವದಲ್ಲಿ ಬರು ವುದು. ಹದಿನೆಂಟು ಅಧ್ಯಾಯಗಳನ್ನೊಳಗೊಂಡಿದೆ. ಏಳುನೂರು ಶ್ಲೋಕಗಳಿವೆ. ಮಹಾ ಭಾರತವನ್ನು ಓದುವುದಕ್ಕೆ ಯಾವ ಅಡ್ಡಿ ಆತಂಕವೂ ಇಲ್ಲ, ಯಾರು ಬೇಕಾದರೂ ಓದ ಬಹುದು. ಅದನ್ನು ತಿಳಿದುಕೊಳ್ಳುವುದು ಕೂಡ ಅಷ್ಟು ಕಷ್ಟವಲ್ಲ. ಮಹಾಭಾರತವನ್ನು ಪಂಚಮವೇದ ಎನ್ನುವರು. ವೇದಗಳಲ್ಲಿ ಹೇಗೆ ವ್ಯಕ್ತಿ ಸಮಾಜ ದೇಶ— ಇವುಗಳಿಗೆ ಬೇಕಾದ ಮುಖ್ಯ ವಿಷಯಗಳಿವೆಯೋ ಹಾಗೆಯೇ ಮಹಾಭಾರತದಲ್ಲಿ ಎಲ್ಲ ಜೀವರಾಶಿಗಳಿಗೂ ಬೇಕಾದ ತತ್ತ್ವವಿದೆ. ಈ ತತ್ತ್ವವನ್ನು ನಿದರ್ಶಿಸುವ ಕಥೆ ಇದೆ. ಈ ತತ್ತ್ವವನ್ನು ಹೇಳುವ ವಿಧಾನ ಕೂಡ ಬಹಳ ಸುಲಭವಾದುದು.
ಭಗವದ್ಗೀತೆಯಲ್ಲಿ ವಿಷಯಗಳನ್ನು ಶ್ರೀಕೃಷ್ಣ ಬಹಳ ಸುಲಭವಾಗಿ ಹೇಳುವನು. ಉಪ ನಿಷತ್ತುಗಳ ಸಾರವನ್ನೇ ಮಾನವಕೋಟಿಯ ಮೇಲೆ ಕರುಣೆ ತಾಳಿ ಎಲ್ಲರೂ ತಿಳಿದುಕೊಳ್ಳು ವಂತಹ ತಿಳಿಭಾಷೆಯಲ್ಲಿ ಹೇಳುವನು. ಆದಕಾರಣವೇ ಗೀತೆಯ ಧ್ಯಾನಶ್ಲೋಕಗಳಲ್ಲಿ “ಸರ್ವ ಉಪನಿಷತ್ತುಗಳೇ ಗೋವುಗಳು, ಅವನ್ನು ಕರೆದವನು ಶ್ರೀಕೃಷ್ಣ. ಆ ಹಾಲೇ ಗೀತೆ” ಎಂದಿದೆ. ಸ್ತ್ರೀ ವೈಶ್ಯ ಚಂಡಾಲರೆಲ್ಲರೂ ಗೀತೆಯ ಅಮೃತವನ್ನು ಪಾನಮಾಡಿ ಧನ್ಯರಾಗಲಿ ಎಂದೇ ಶ್ರೀಕೃಷ್ಣ ಇದನ್ನು ಅರ್ಜುನನನ್ನು ನಿಮಿತ್ತವಾಗಿ ಮಾಡಿಕೊಂಡು ಜಗತ್ತಿಗೆ ಸಾರಿರುವನು. ಗೀತೆಯನ್ನು ಓದಿ ತಿಳಿದುಕೊಳ್ಳಬೇಕಾದರೆ ಬುದ್ಧಿಯ ಕಸರತ್ತು ಬೇಕಿಲ್ಲ. ಪ್ರತಿಯೊಬ್ಬನೂ ತನ್ನ ಯೋಗ್ಯತೆಗೆ ತಕ್ಕಂತೆ ಇಲ್ಲಿ ತಿಳಿದುಕೊಳ್ಳಬಲ್ಲ. ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಹೋದರೆ ಹೆಚ್ಚು ಸಿಕ್ಕುವುದು. ಸಣ್ಣ ಪಾತ್ರೆ ತೆಗೆದುಕೊಂಡು ಹೋದರೆ ಕಡಿಮೆ ಸಿಕ್ಕುವುದು. ಯಾವ ಪಾತ್ರೆಯನ್ನು ತೆಗೆದುಕೊಳ್ಳದೇ ಹೋದರೂ ಕೈಯಿಂದ ನೀರನ್ನು ತೆಗೆದುಕೊಂಡು ತಾತ್ಕಾಲಿಕವಾಗಿ ಆದರೂ ಬಾಯಾರಿಕೆಯಿಂದ ಪಾರಾಗಬಹುದು. ತನ್ನೆಡೆಗೆ ಬಂದ ಯಾರನ್ನೂ ಗೀತೆ ಹಾಗೇ ಕಳುಹಿಸುವುದಿಲ್ಲ. ಅವರವರಿಗೆ ಏನನ್ನು ತಿಳಿದುಕೊಳ್ಳಲು ಸಾಧ್ಯವೋ, ಎಷ್ಟನ್ನು ಅರಗಿಸಿಕೊಳ್ಳಲು ಸಾಧ್ಯವೋ ಅಷ್ಟನ್ನು ಕೊಟ್ಟು ಕಳುಹಿಸುವುದು. ಶ್ರೀ ಶಂಕರಾಚಾರ್ಯರು ಗೀತೆಗೆ ಭಾಷ್ಯವನ್ನು ಬರೆಯುವಾಗ ಮೊದಲಲ್ಲಿ “ಸಮಸ್ತ ವೇದಾರ್ಥಸಾರಸಂಗ್ರಹಭೂತಂ” “ತದರ್ಥವಿಜ್ಞಾನೇ ಸಮಸ್ತಪುರುಷಾರ್ಥಸಿದ್ಧಿಃ” ಎಂದು ಹೇಳುವರು. ಭಗವದ್ಗೀತೆಯಲ್ಲಿ ಸಕಲ ವೇದಗಳ ಅರ್ಥದ ಸಾರಸಂಗ್ರಹವಿದೆ. ಇದನ್ನು ತಿಳಿದುಕೊಂಡವನಿಗೆ ಧರ್ಮ, ಅರ್ಥ, ಕಾಮ, ಮೋಕ್ಷಗಳೆಲ್ಲ ಲಭಿಸುವುವು. ಇಹಪರ ಎರಡಕ್ಕೂ ಒಳ್ಳೆಯದನ್ನು ಮಾಡಬಲ್ಲ ಗ್ರಂಥ ಇದು.
ಗೀತೆಯ ಪ್ರತಿಯೊಂದು ಅಧ್ಯಾಯವನ್ನು ಒಂದು ಉಪನಿಷತ್ತಿಗೆ ಸಮ ಎಂದು ಭಾವಿಸಿ ದರು. ಅದಕ್ಕಾಗಿಯೇ ಪ್ರತಿ ಅಧ್ಯಾಯವೂ “ಇತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು, ಬ್ರಹ್ಮವಿದ್ಯಾಯಾಂ, ಯೋಗಶಾಸ್ತ್ರೇ, ಶ್ರೀಕೃಷ್ಣಾರ್ಜುನಸಂವಾದೇ” ಎಂದು ಕೊನೆಗೊಳ್ಳು ವುದು. ಇದು ಭಗವದ್ಗೀತಾ, ಸಾಕ್ಷಾತ್ ಭಗವಂತನೇ ಅರ್ಜುನನನ್ನು ನಿಮಿತ್ತಮಾಡಿಕೊಂಡು ಮಾನವಕೋಟಿಗೆ ಹೇಳಿದ್ದು. ಅವನು ಹೇಳುವ ಮಾತಿನಲ್ಲಿ ಒಂದು ಅಪೂರ್ವ ಶಕ್ತಿ ಇರುವುದು. ಅವನ ಸಾಕ್ಷಾತ್ಕಾರವೆಲ್ಲ ಸ್ಪಂದಿಸುತ್ತಿರುವುದು ಅವನಾಡುವ ಮಾತಿನಲ್ಲಿ, ಅಗ್ನಿ ಕುಂಡದಿಂದ ಸಿಡಿಯುವ ಕಿಡಿಯಂತೆ. ಸತ್ಯದ ಪೂರ್ಣ ಪರಿಚಯ ಮಾಡಿಕೊಂಡು ಶ್ರೀಕೃಷ್ಣ ಇಲ್ಲಿ ಹೇಳುತ್ತಿರುವನು. ಅದನ್ನು ಹೇಳುವಾಗಲೂ ಅಷ್ಟು ಸರಳವಾಗಿ ಹೇಳುವನು. ಸ್ವಲ್ಪವೂ ಕಷ್ಟವಿಲ್ಲ. ಹೇಳುವುದನ್ನು ಸ್ಪಷ್ಟವಾಗಿ ಹೇಳುವನು. ಅನುಮಾನಕ್ಕೆ ಸ್ವಲ್ಪವೂ ಅವಕಾಶವಿಲ್ಲ. ಸ್ಪಷ್ಟತೆ, ಸರಳತೆಗಳೇ ಮೂಡಿವೆ ಅಲ್ಲಿ. ಅವನಾಡುವ ಮಾತಿನಲ್ಲಿ ಒಂದು ಅಪೂರ್ವ ಶಕ್ತಿ ಇರುವುದರಿಂದ ನಮ್ಮ ಹೃದಯಕ್ಕೆ ನೇರವಾಗಿ ತಾಕುವುದು.
ಇದನ್ನು ಉಪನಿಷತ್ತು ಎನ್ನುವನು. ಹೇಗೆ ವೇದಗಳಲ್ಲಿ ಉಪನಿಷತ್ತುಗಳು ಅದರ ಶಿರವೋ ಎಲ್ಲಾ ತಾತ್ತ್ವಿಕ ಭಾಗಗಳನ್ನೂ ಅದು ಒಳಗೊಂಡಿದೆಯೋ ಹಾಗೆ ತತ್ತ್ವದ ಸಾರವನ್ನೇ ಒಳ ಗೊಂಡಿದೆ ಭಗವದ್ಗೀತಾ. ಆದರೆ ಅದನ್ನು ಎಲ್ಲರೂ ತಿಳಿದುಕೊಳ್ಳುವ ಶೈಲಿಯಲ್ಲಿ ಹೇಳುವನು. ಇದನ್ನು ಯಾವ ಕೋಮಿಗೂ ಮೀಸಲಾಗಿಟ್ಟಿಲ್ಲ. ಯಾರು ಬೇಕಾದರೂ ಓದಿ ಉದ್ಧಾರವಾಗಬಹುದು. ಭಗವತ್ ಸಾಕ್ಷಾತ್ಕಾರದ ಬಾಗಿಲನ್ನು ಎಲ್ಲರಿಗೂ ತೆರೆದಿರುವನು ಇಲ್ಲಿ.
ಇಲ್ಲಿರುವುದು ಬ್ರಹ್ಮವಿದ್ಯೆ—ಜೀವಜಗತ್ತಿನ ಸ್ವರೂಪವೇನು ಎಂಬ ತಾತ್ತ್ವಿಕ ವಿಷಯಗಳನ್ನೆಲ್ಲ ಹೇಳುವನು. ಜೀವನದಲ್ಲಿ ಅಧ್ಯಾತ್ಮವಿದ್ಯೆಯೇ ಎಲ್ಲಾ ವಿದ್ಯೆಗಳಿಗಿಂತ ಶ್ರೇಷ್ಠ. ಅದನ್ನು ಪ್ರತಿ ಅಧ್ಯಾಯದಲ್ಲಿಯೂ ಸಾರುತ್ತಿರುವನು.
ಇದೊಂದು ಯೋಗಶಾಸ್ತ್ರ. ಬರೀ ತತ್ತ್ವವೇ ಅಲ್ಲ. ಯೋಗ ಎಂದರೆ ಒಂದುಗೂಡಿಸುವುದು, ಜೀವಾತ್ಮನನ್ನು ಪರಮಾತ್ಮನೆಡೆಗೆ ಒಯ್ಯುವುದಕ್ಕೆ ಯೋಗ ಎಂದು ಹೇಳುತ್ತೇವೆ. ಇದು ಅನುಷ್ಠಾನ ಪ್ರಧಾನವಾದುದು. ನಾವು ತಿಳಿದುಕೊಂಡಿರುವುದನ್ನು ಅನುಷ್ಠಾನಕ್ಕೆ ಹೇಗೆ ತರುವುದು ಎಂಬುದನ್ನು ಹೇಳುವುದು. ಇಲ್ಲಿ ಸಿದ್ಧಾಂತವಿದೆ. ಆದರೆ ಅಷ್ಟೇ ಪ್ರಾಮುಖ್ಯತೆ ಸಾಧನೆಗೆ ಇದೆ. ನಾವು ಏನನ್ನು ತಿಳಿದುಕೊಂಡಿರುವೆವೊ ಅದಲ್ಲ ನಮ್ಮನ್ನು ಉದ್ಧರಿಸುವುದು. ನಾವು ಏನನ್ನು ಅನುಷ್ಠಾನಕ್ಕೆ ತಂದಿರುವೆವೊ ಅದು ಮಾತ್ರ ನಮ್ಮದು. ಶ್ರೀರಾಮಕೃಷ್ಣರು ದೋಣಿಯಲ್ಲಿ ಹೋಗುತ್ತಿದ್ದ ಒಬ್ಬ ಪಂಡಿತನ ವಿಷಯವನ್ನು ಉದಾಹರಿಸುವರು. ಆ ಪಂಡಿತ ದೋಣಿಯಲ್ಲಿ ಕುಳಿತ ನಾವಿಕನಿಗೆ, ‘ನಿನಗೆ ತರ್ಕ ಗೊತ್ತೆ, ನ್ಯಾಯ ಗೊತ್ತೆ, ವೇದಾಂತ ಗೊತ್ತೆ’ ಎಂದು ಕೇಳುತ್ತಾನೆ. ಪಾಪ ಅವನು ಯಾವುದನ್ನೂ ಓದಿದವನಲ್ಲ, ‘ತನಗೆ ಏನೂ ಗೊತ್ತಿಲ್ಲ’ ಎನ್ನುತ್ತಾನೆ. ಆಗ ಪಂಡಿತ “ನಿನ್ನ ಜೀವನವನ್ನೆಲ್ಲ ಹಾಳುಮಾಡಿಕೊಂಡೆಯಲ್ಲ” ಎಂದು ಹೇಳುತ್ತಾನೆ. ಆಗ ಒಂದು ಬಿರುಗಾಳಿ ಎದ್ದಿತು. ದೊಡ್ಡ ದೊಡ್ಡ ಅಲೆಗಳು ಏಳಲು ಮೊದಲಾದುವು. ದೋಣಿ ಅಲ್ಲೋಲಕಲ್ಲೋಲವಾಯಿತು. ಇನ್ನೇನು ಮುಳುಗುವ ಸ್ಥಿತಿಗೆ ಬಂದಿತು. ದೋಣಿಯವನು ಪಂಡಿತನಿಗೆ, “ನಿಮಗೆ ಈಜು ಬರುವುದೇ?” ಎಂದು ಕೇಳಿದ. ಪಂಡಿತ, “ಇಲ್ಲ” ಎಂದ. ಆಗ ದೋಣಿಯವನು, ನನಗೆ ನ್ಯಾಯ ತರ್ಕ ವೇದಾಂತ ಗೊತ್ತಿಲ್ಲ. ಆದರೆ ಈಜು ಬರುವುದು ಎಂದ. ಹಾಗೆ ಜೀವನದಲ್ಲಿ ನಮ್ಮನ್ನು ಭವಸಾಗರದಿಂದ ಪಾರು ಮಾಡುವುದು, ಎಷ್ಟನ್ನು ನಾವು ಅನುಷ್ಠಾನಕ್ಕೆ ತಂದಿರುವೆವೋ ಅದು ಮಾತ್ರ. ಆದಕಾರಣವೇ ಗೀತಾ ಎಲ್ಲಕ್ಕಿಂತ ಹೆಚ್ಚಾಗಿ ಯೋಗಶಾಸ್ತ್ರ. ಅನುಷ್ಠಾನಪ್ರಧಾನವಾದ ಶಾಸ್ತ್ರ.
ಇಲ್ಲಿ ವಿಷಯವನ್ನು ಹೇಳುವ ರೀತಿ ಸಂವಾದರೂಪವಾಗಿರುವುದು. ಶಿಷ್ಯ ಗುರುವಿನ ಮುಂದೆ ತನ್ನ ಸಂದೇಹವನ್ನು ಇಡುವನು. ಗುರು ಅದನ್ನು ಬಿಡಿಸುವನು. ಆದಕಾರಣ ಸಂಬಂಧ ನಿಕಟವಾಗಿದೆ. ಇಲ್ಲಿ ಬಹಿರಂಗ ಸಭೆಯಲ್ಲಿ ಕೊಡುವ ಉಪನ್ಯಾಸದಂತೆ ಇಲ್ಲ. ಒಂದು ಸ್ಥಳದಲ್ಲಿ ಕುಳಿತುಕೊಂಡು ಶಿಷ್ಯ ಗುರುವನ್ನು ಪ್ರಶ್ನಿಸುತ್ತಿರುವನು, ಗುರು ಸಮಾಧಾನದಿಂದ ಅದಕ್ಕೆ ಉತ್ತರಗಳನ್ನು ಕೊಡುತ್ತಿರುವನು. ಇದು ಸಹಜವಾದ ಆತ್ಮೀಯವಾದ ಸಂಬಂಧ. ಶಿಷ್ಯ ಗುರುವಿನ ಬಳಿ ತಾನಿರುವಾಗ ಯಾವ ಪ್ರಶ್ನೆಯನ್ನಾದರೂ ಕೇಳುವುದಕ್ಕೆ ಹಿಂದೆಗೆಯುವುದಿಲ್ಲ. ಗುರುವಾದರೂ ಶಿಷ್ಯನ ಸಂದೇಹವನ್ನು ಯಾವ ಕಾಲಾವಸರವೂ ಇಲ್ಲದೆ, ಆಮೂಲಾಗ್ರವಾಗಿ ಹೋಗಲಾಡಿಸಲು ಯತ್ನಿಸುವನು. ಇಲ್ಲಿ ಅರ್ಜುನ ಕೇಳುವ ಪ್ರಶ್ನೆಗಳು ಅರ್ಜುನನಿಗೆ ಮಾತ್ರ ಸಂಬಂಧಪಟ್ಟದ್ದಲ್ಲ. ಆತ ನಮ್ಮೆಲ್ಲರ ಪ್ರತಿನಿಧಿಯಂತೆ ಇರುವನು. ನಮ್ಮ ಮನಸ್ಸಿನಲ್ಲಿ ಯಾವ ಪ್ರಶ್ನೆಗಳು ಉದಿಸಬಹುದೋ ಅವುಗಳನ್ನೆಲ್ಲ ನಮ ಗಾಗಿ ಅವನು ಕೇಳುವಂತಿದೆ. ಇಂತಹ ಒಂದು ಸಹಜವಾದ ವಾತಾವರಣದಲ್ಲಿದೆ ಆಧ್ಯಾತ್ಮಿಕ ಗ್ರಂಥ ಗೀತಾ.
ಕೆಲವು ಆಕ್ಷೇಪಣೆಗಳು
ಹಿಂದಿನಿಂದ ಭಗವದ್ಗೀತೆ ಮಹಾಭಾರತದಲ್ಲಿ ಅಂತರ್ಗತವಾಗಿ ಬಂದಿದೆ. ಆದರೂ ಕೆಲವು ವಿಮರ್ಶಕರು ಗೀತೆಯನ್ನು ಯಾರೋ ಅನಂತರ ಬರೆದು ಮಹಾಭಾರತದಲ್ಲಿ ಸೇರಿಸಿರುವರು ಎನ್ನುವರು. ಏಕೆಂದರೆ ನಮ್ಮಲ್ಲಿ ಇತಿಹಾಸ ಪುರಾಣಗಳು ಮರದಂತೆ ಕಾಲ ಕಾಲಕ್ಕೆ ಬೆಳೆ ಯುತ್ತಾ ಹೋಗುವುವು. ಮೊದಲು ಜಯ ಎಂಬ ಕಾವ್ಯ ಸುಮಾರು ಹತ್ತುಸಾವಿರ ಶ್ಲೋಕಗಳನ್ನೊಳಗೊಂಡಿತ್ತು. ಅನಂತರ ಇಪ್ಪತ್ತುನಾಲ್ಕು ಸಾವಿರ ಶ್ಲೋಕದ ಭಾರತವಾಯಿತು. ಕೊನೆಗೆ ಒಂದು ಲಕ್ಷ ಶ್ಲೋಕಗಳ ಮಹಾಭಾರತವಾಯಿತು. ಸಣ್ಣ ಜಯ ಎಂಬ ಗ್ರಂಥ ಕ್ರಮೇಣ ಇತರ ಕಥೆಗಳನ್ನೆಲ್ಲ ಒಳಗೊಂಡು ಮಹಾಭಾರತವೆಂಬ ದೊಡ್ಡ ಗ್ರಂಥವಾಯಿತು. ಹೇಗೆ ನದಿ ಮೂಲದಲ್ಲಿ ಸಣ್ಣಾದಾಗಿದ್ದರೂ ಹರಿಯುತ್ತಿರುವಾಗ ಇತರ ಉಪನದಿಗಳನ್ನು ಸೇರಿಸಿಕೊಂಡು ದೊಡ್ಡ ನದಿಯಾಗುವುದೋ ಹಾಗೆಯೇ ಜಯ ಎಂಬ ಮೂಲಗ್ರಂಥ ಹಲವು ಕಥೆಗಳು ಮತ್ತು ತತ್ತ್ವಗಳು— ಇವುಗಳನ್ನೆಲ್ಲ ಸೇರಿಸಿಕೊಂಡು ಈಗ ನಮಗೆ ಕಾಣುವ ಮಹಾಭಾರತವಾಗಿದೆ. ಈಗಿರುವುದೆಲ್ಲ ಒಂದೇ ಕಾಲದಲ್ಲಿ ಹುಟ್ಟಿದ್ದಲ್ಲ, ಅನಂತರ ಸೇರಿದ್ದು ಇರಬಹುದು, ಹಾಗೆ ಅನಂತರ ಮಹಾಭಾರತವೆಂಬ ನದಿಗೆ ಸಂಗಮವಾದ ಉಪನದಿ ಭಗವದ್ಗೀತೆ ಎಂಬುದು ಇರಬಹುದು. ಅವರು ಅದನ್ನು ಸಮರ್ಥನೆ ಮಾಡುವುದಕ್ಕೆ ಕೆಲವು ಕಾರಣಗಳನ್ನು ಕೊಡುವರು. ಅದೇ ಯುದ್ಧಕ್ಕೆ ಸಿದ್ಧನಾಗಿ ಬಂದಿರುವ ಅರ್ಜುನನಿಗೆ ಆಗಲೇ ಗೊತ್ತಿತ್ತು, ಯಾರ ಮೇಲೆ ಯುದ್ಧಮಾಡಬೇಕಾಗಿದೆ ಎಂಬುದು. ಅವರನ್ನು ಯುದ್ಧರಂಗದಲ್ಲಿ ನೋಡಿದಾಗ ವೈರಾಗ್ಯ ಬರುವುದು ಸೋಜಿಗವಾಗಿ ಕಾಣುವುದು. ಅದಕ್ಕಿಂತ ಸೋಜಿಗವಾಗಿ ಕಾಣುವುದೇ ಶ್ರೀ ಕೃಷ್ಣ ನಿಧಾನವಾಗಿ ಏಳುನೂರು ಶ್ಲೋಕಗಳಲ್ಲಿ ಗೀತೆಯ ಬೋಧನೆಯನ್ನು ಮಾಡುತ್ತಿರುವುದು. ಇದು ಅನೌಚಿತ್ಯವಾಗಿ ಕಾಣುವುದು. ಇನ್ನು ಸ್ವಲ್ಪಹೊತ್ತಿಗೆ ಯುದ್ಧ ಶುರುವಾಗಬೇಕಾಗಿದೆ. ಅಂತಹ ಸಮಯದಲ್ಲಿ ಇಂತಹ ದೀರ್ಘವಾದ ಉಪನ್ಯಾಸವನ್ನು ಕೊಡುವುದಕ್ಕಾದರೂ ಸಮಯವೆಲ್ಲಿದೆ?
ಇದಕ್ಕೆ ಪರಿಹಾರ ನಾವು ಈ ರೀತಿ ಕೊಡಬಹುದು. ಅರ್ಜುನನಿಗೆ ಮೊದಲೇ ಗೊತ್ತಿತ್ತು ಯಾರಮೇಲೆ ಯುದ್ಧಮಾಡಬೇಕಾಗಿದೆ, ಯಾರುಯಾರನ್ನು ಕೊಲ್ಲಬೇಕಾಗಿದೆ ಎಂಬುದು. ಮುಂಚೆ ಗೊತ್ತಿರುವುದು ಬೇರೆ. ಆ ಕಾರ್ಯವನ್ನು ಮಾಡಲು ಹೋಗುವಾಗ ನಮ್ಮ ಮನಸ್ಸಿ ನಲ್ಲಿ ಏಳುವ ಭಾವನೆಗಳೇ ಬೇರೆ. ಎಷ್ಟೋ ಜನ ಜೀವನದಲ್ಲಿ ರೋಸಿದಾಗ ಆತ್ಮಹತ್ಯವನ್ನು ಮಾಡಿಕೊಳ್ಳಬೇಕೆಂದು ಕೆರೆಗೆ ಬಾವಿಗೆ ಬೀಳುವುದಕ್ಕೆ ಹೋಗುವರು. ಹಾಗೆ ನೀರಿಗೆ ಇಳಿ ಯುತ್ತಿರುವಾಗ, ಬೀಳುತ್ತಿರುವಾಗ ಮನಸ್ಸು ಬದಲಾಯಿಸಿ ಮನೆಗೆ ಹಿಂತಿರುಗಿ ಬಂದಿರು ವರು. ಆತ್ಮಹತ್ಯೆ ಮಾಡಿಕೊಂಡವರಿಗಿಂತ ಅದನ್ನು ಮಾಡಿಕೊಳ್ಳಲಾರದೆ ಹಿಂತಿರುಗಿ ಬಂದ ವರೇ ಜಾಸ್ತಿ. ಅನೇಕರು ಆ ಗುಂಪಿಗೆ ಸೇರಿದವರು. ಒಂದು ಶಪಥವನ್ನು ಮಾಡುತ್ತೇವೆ. ಆದರೆ ನಾವು ಕಾರ್ಯಗತಮಾಡುವುದರಲ್ಲಿ ಉದ್ಯುಕ್ತರಾಗಿರುವಾಗ ನಾವು ಮುಂಚೆ ಊಹಿ ಸುವುದಕ್ಕೂ ಆಗದ ಭಾವನೆಗಳು ಮೇಲೆದ್ದು ನಮ್ಮನ್ನು ಆ ಕಾರ್ಯದಿಂದ ವಿಮುಖರನ್ನಾಗಿ ಮಾಡುವುವು. ಅದರಂತೆಯೇ ಅರ್ಜುನ ಸೇಡನ್ನು ತೀರಿಸಿಕೊಳ್ಳಲು ಬಂದಿರುವನು. ಆಗ ಅರ್ಜುನನ ಮನಸ್ಸಿನಲ್ಲಿ ಅನುಕಂಪವೇಳುವುದು, ತಾನು ಕೊಲ್ಲಬೇಕಾದ ಗುರುಹಿರಿಯರನ್ನು ಕಣ್ಣಾರೆ ನೋಡಿದಾಗ ಅವರ ಮೇಲೆ ಅನುಕಂಪ ಬರುವುದು ಸೋಜಿಗವಲ್ಲ. ಇದು ಮಾನವ ಸಹಜವಾಗಿರುವ ಭಾವನೆ.
ವೈರಾಗ್ಯ ಇಂತಹ ಸಮಯದಲ್ಲಿ ಬರಬೇಕು, ಇಂತಹ ಸಮಯದಲ್ಲಿ ಬರಬಾರದು ಎಂಬ ನಿಯಮವಿಲ್ಲ. ಒಬ್ಬೊಬ್ಬ ಮನುಷ್ಯನಿಗೆ ಜೀವನದಲ್ಲಿ ಯಾವು ಯಾವುದೋ ದೃಶ್ಯವನ್ನೋ, ಮಾತನ್ನೋ, ಸನ್ನಿವೇಶವನ್ನೋ ನೋಡಿದಾಗ ವೈರಾಗ್ಯ ಬರುವುದು. ಅವನ ಸುಪ್ತ ಸಂಸ್ಕಾರ ವನ್ನು ಹೊಡೆದು ಮೇಲೆಬ್ಬಿಸಲು ಯಾವುದೋ ಒಂದು ಕಿಡಿ ಸಾಕು. ಒಬ್ಬೊಬ್ಬ ಮನುಷ್ಯನ ಜೀವನದಲ್ಲಿಯೂ ಆ ಕಿಡಿ ಒಂದೊಂದು ವಿಧವಾಗಿರುವುದು. ಸಾಧಾರಣವಾಗಿ ವೈರಾಗ್ಯ ಬರುವುದು ಈ ಪ್ರಪಂಚದ ಕ್ಷಣಿಕತೆ ಗೊತ್ತಾದಾಗ, ಮೃತ್ಯು, ಗೋಳು, ದುಃಖ ಇವುಗಳನ್ನು ನೋಡಿದಾಗ. ಅಶೋಕ ಕಳಿಂಗ ರಾಜ್ಯದ ಮೇಲೆ ಯುದ್ಧಮಾಡಿದ ಮೇಲೆ ಅಲ್ಲಿ ಮಡಿದ, ಗಾಯಗೊಂಡ ಲಕ್ಷಾಂತರ ಜನರನ್ನು ನೋಡಿದಾಗ ಇನ್ನು ಮೇಲೆ ಯುದ್ಧವನ್ನು ಮಾಡುವು ದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಿದನು. ಅರ್ಜುನ ಈಗ ಇಂತಹ ಒಂದು ಸನ್ನಿವೇಶದ ಎದುರಿಗೆ ಇರುವನು. ಗುರುಹಿರಿಯರನ್ನು ಕೊಲ್ಲಬೇಕು. ಹಾಗೆ ಕೊಲ್ಲುವಾಗ ಇವನ ಕಡೆ ಯವರೂ ಬೇಕಾದಷ್ಟು ಮಂದಿ ಸಾಯುವರು. ಕೊನೆಗೆ ಕುರುಕ್ಷೇತ್ರ ಹೆಣಗಳ ರಾಶಿಯಿಂದ ತುಂಬುವುದು. ದೇಶವೆಲ್ಲ ತಬ್ಬಲಿಯರ, ವಿಧವೆಯರ, ಮಕ್ಕಳನ್ನು ಕಳೆದುಕೊಂಡ ತಾಯಿ ತಂದೆಯರ ಗೋಳಿನಿಂದ ತುಂಬಿ ತುಳುಕಾಡುವುದು. ದಾರಿಯಲ್ಲಿ ಹೋಗುತ್ತಿರುವಾಗ ಒಂದು ಹೆಣವನ್ನು ನೋಡಿದರೆ ನಮಗೆ ಅನೇಕ ವೇಳೆ ನಮ್ಮ ಬಾಳೆ ಹೀಗೆ ಪರ್ಯವಸಾನ ವಾಗುವುದು ಎಂಬ ವೈರಾಗ್ಯದ ಉದ್ಗಾರ ಬರುವುದು. ಹೀಗಿರುವಾಗ ಯುದ್ಧವಾದ ಮೇಲೆ ಕುರುಕ್ಷೇತ್ರ ಸ್ಮಶಾನಭೂಮಿಯಾಗುವುದನ್ನು ಊಹಿಸಿಕೊಂಡರೆ ವೈರಾಗ್ಯ ಬರುವುದು ಸ್ವಾಭಾವಿಕ. ಹಾಗೆ ಬರದೆ ಇರುವುದು ಅಸ್ವಾಭಾವಿಕ ಎಂದು ಭಾವಿಸಬೇಕಾಗುವುದು.
ಶ್ರೀ ಕೃಷ್ಣ ಅಷ್ಟು ನಿಧಾನವಾಗಿ ಉತ್ತರ ಹೇಳುವುದಕ್ಕೆ ಸಮಯವೆಲ್ಲಿತ್ತು ಎಂಬುದಕ್ಕೆ ಸಮಾಧಾನ ಇದು. ಶ್ರೀ ಕೃಷ್ಣ ಅರ್ಜುನನಿಗೆ ಗೀತೆಯಲ್ಲಿ ಬರುವ ಶ್ಲೋಕಗಳ ಮೂಲಕವೇ ಉತ್ತರ ಕೊಟ್ಟನು ಎಂದು ಭಾವಿಸಬೇಕಾಗಿಲ್ಲ. ಶ್ರೀಕೃಷ್ಣ ಕೆಲವು ಮಾತಿನಲ್ಲಿ ಅರ್ಜುನನ ಸಂದೇಹಗಳನ್ನು ನಿವಾರಣೆ ಮಾಡಿರಬಹುದು. ವ್ಯಾಸರು ನಂತರ ಅದನ್ನು ಬರೆಯುವಾಗ ಮಾನವರಿಗೆಲ್ಲ ಇದು ಚೆನ್ನಾಗಿ ಅರ್ಥವಾಗಲಿ ಎಂದು ವಿವರವಾಗಿ ಬರೆದಿರುವರು. ಈ ವಿಷಯದಲ್ಲಿ ಗೀತೆಗೆ ಟೀಕೆಯನ್ನು ಬರೆದ ಶ್ರೀಧರಸ್ವಾಮಿಗಳು ತಮ್ಮ ಪ್ರಸ್ತಾವನೆಯಲ್ಲಿ ತುಂಬಾ ಚೆನ್ನಾಗಿ ಹೀಗೆ ಹೇಳುವರು: “ಭಗವಂತನು ಉಪದೇಶಿಸಿದ ವಿಷಯವನ್ನೇ ಶ್ರೀಕೃಷ್ಣ ದೈಪಾಯನರು (ವ್ಯಾಸರು) ಏಳುನೂರು ಶ್ಲೋಕಗಳಲ್ಲಿ ಬರೆದರು…ಸಂಬಂಧವನ್ನು ಸೂಚಿಸುವುದಕ್ಕೋಸ್ಕರ ಅಲ್ಲಲ್ಲಿ ತಮ್ಮ ಶ್ಲೋಕಗಳನ್ನು ಸೇರಿಸಿದರು…” .
ಶೈಲಿಯ ರೀತಿಯಿಂದ ನೋಡಿದರೆ ಮಹಾಭಾರತದಲ್ಲಿ ಮತ್ತು ಗೀತೆಯಲ್ಲಿ ಒಂದೇ ಕವಿಯ ಕೈವಾಡವನ್ನು ನೋಡಬಹುದು ಎಂಬುದು ಬಾಲಗಂಗಾಧರ ತಿಲಕರ ಅಭಿಪ್ರಾಯ. ಗೀತೆಯನ್ನು ಬಿಟ್ಟರೆ ಮಹಾಭಾರತಕ್ಕೆ ಯಾವ ತಾತ್ತ್ವಿಕ ಬೆಲೆಯೂ ಇಲ್ಲ. ಅದೊಂದು ಬರೀ ಕಥೆಯಾಗುವುದು. ಗೀತೆಗಾಗಿ ಮಹಾಭಾರತ ಇರುವುದು. ಮಹಾಭಾರತದಲ್ಲಿ ಬರುವ ಕಥೆ ಗಳೆಲ್ಲ ಗೀತೆಯನ್ನು ಉಲ್ಲೇಖಿಸುವುದಕ್ಕೆ ಇರುವುವು, ಬರೀ ಕಥೆಗಾಗಿ ಅಲ್ಲ, ಗೀತೆಯಲ್ಲಿ ಬರುವ ಯಾವುದೋ ತತ್ತ್ವವನ್ನು ಉದಾಹರಿಸುವುದಕ್ಕಾಗಿವೆ. ಆದಕಾರಣವೇ ಗೀತೆಯ ಧ್ಯಾನಶ್ಲೋಕಗಳಲ್ಲಿ “ಯೇನ ತ್ವಯಾ ಭಾರತತೈಲಪೂರ್ಣಃ ಪ್ರಜ್ವಾಲಿತೋ ಜ್ಞಾನಮಯ ಪ್ರದೀಪಃ” ಎಂದು ಇದೆ. ಇಡೀ ಮಹಾಭಾರತ, ಗೀತೆಯಲ್ಲಿ ಬರುವ ತತ್ತ್ವಜ್ಯೋತಿಯನ್ನು ಪೋಷಿಸುವುದಕ್ಕೆ ಇರುವ ತೈಲದಂತೆ ಇದೆ.
ಶ್ರೀಕೃಷ್ಣನ ಚಾರಿತ್ರಿಕತೆ
ಮಹಾಭಾರತ ಈಗ ನಮಗೆ ದೊರಕುವ ಸ್ಥಿತಿಯನ್ನು ಮುಟ್ಟುವುದಕ್ಕೆ ಸುಮಾರು ಹಲವು ಶತಮಾನಗಳು ಹಿಡಿದಿರಬಹುದು. ಇದನ್ನು ಕೃಷ್ಣದ್ವೈಪಾಯನ ವ್ಯಾಸರು ಸಂಗ್ರಹಿಸಿ ಒಂದು ಗ್ರಂಥರೂಪಕ್ಕೆ ತಂದರು. ಅವರು ಹಾಗೆ ಮಾಡುವುದಕ್ಕೆ ಮುಂಚೆ ಅದರಲ್ಲಿ ಬರುವ ಕಥೆ, ಉಪಕಥೆಗಳೆಲ್ಲ ಜನರ ಬಾಯಲ್ಲಿ ಇದ್ದುವು. ಈ ರೂಪಕ್ಕೆ ಬಂದ ಮಹಾಭಾರತ ಸುಮಾರು ಕ್ರಿಸ್ತಪೂರ್ವ ಐದನೇ ಶತಮಾನಕ್ಕೆ ಮುಂಚೆ ಇದ್ದಿರಬಹುದು. ಇದನ್ನು ಒಂದು ಇತಿಹಾಸ ವೆಂದು ಹಿಂದಿನವರು ಹೇಳುತ್ತಿದ್ದರು. ಇತಿಹಾಸ ಎಂದರೆ ಒಂದು ಚರಿತ್ರೆ, ನಿಜವಾಗಿ ನಡೆದ ಘಟನೆಗಳಿಂದ ಕೂಡಿದ್ದು. ಮಹಾಭಾರತವೆಲ್ಲಾ ಚರಿತ್ರೆ ಎನ್ನುವುದಕ್ಕೆ ಆಗುವುದಿಲ್ಲ. ಚಾರಿತ್ರಿಕ ದೃಷ್ಟಿಗೆ ವಿರೋಧವಾದ ಹಲವು ಅಂಶಗಳು ನಮಗೆ ಅಲ್ಲಿ ದೊರಕುವುವು. ಚರಿತ್ರೆಗಿಂತ ಹೆಚ್ಚಾಗಿ ಪೌರಾಣಿಕ ಅಂಶಗಳೇ ಜಾಸ್ತಿ. ಆದರೂ ಚರಿತ್ರೆಯ ಒಂದು ಅಸ್ಥಿಪಂಜರ ಅದರ ಹಿಂದೆ ಇದ್ದಿರಬೇಕು. ಕ್ರಮೇಣ ಪೌರಾಣಿಕ ಘಟನಾವಳಿಗಳು ಅದರ ಸುತ್ತಲೂ ಕವಿದಿವೆ.
ಅನೇಕ ವೇಳೆ ಶ್ರೀಕೃಷ್ಣ ಎಂಬ ವ್ಯಕ್ತಿ ನಿಜವಾಗಿಯೂ ಚಾರಿತ್ರಿಕ ವ್ಯಕ್ತಿಯೆ ಎಂಬ ಸಂದೇಹ ಬರುವುದು. ಒಂದು ವೇಳೆ ಶ್ರೀಕೃಷ್ಣ ಎಂಬುವನು ಇದ್ದರೆ, ಒಬ್ಬ ಶ್ರೀಕೃಷ್ಣನು ಇದ್ದನೊ, ಹಲವು ಶ್ರೀಕೃಷ್ಣರು ಇದ್ದರೊ ಎಂಬ ಸಮಸ್ಯೆ ಬರುವುದು. ನಮಗೆ ಶ್ರೀಕೃಷ್ಣನ ವಿಷಯ ಹರಿವಂಶ, ಮಹಾಭಾರತ ಮತ್ತು ಭಾಗವತಗಳಲ್ಲಿ ದೊರೆಯುವುದು. ಇವೆಲ್ಲವೂ ಒಬ್ಬನೇ ಕೃಷ್ಣನನ್ನು ಕುರಿತದ್ದೇ ಅಥವಾ ಬೇರೆ ಬೇರೆ ಕೃಷ್ಣರನ್ನು ಕುರಿತದ್ದೆ ಎಂಬ ಪ್ರಶ್ನೆ ಬೇರೆ ಏಳುವುದು.
ಶ್ರೀ ಕೃಷ್ಣ ಎಂಬ ವ್ಯಕ್ತಿ ಚಾರಿತ್ರಿಕವಾಗಿ ಹಿಂದಿನ ಕಾಲದಲ್ಲಿ ಇದ್ದಿರಬೇಕು. ಸಾಹಿತ್ಯ ಮತ್ತು ಶಾಸನಗಳ ಮೂಲಕ ಅಂತಹ ವ್ಯಕ್ತಿ ಹಿಂದಿನಿಂದ ಇದ್ದ ಎಂಬುದಕ್ಕೆ ಸಾಕಷ್ಟು ಪ್ರಮಾಣಗಳು ದೊರೆಯುತ್ತವೆ ಮತ್ತು ಅವೆಲ್ಲ ಕ್ರಿಸ್ತಪೂರ್ವಕ್ಕೆ ಸಂಬಂಧಿಸಿದ ಕಾಲ. ಛಾಂದೋಗ್ಯವು ಉಪ ನಿಷತ್ತುಗಳಲ್ಲೆಲ್ಲ ಬಹಳ ಹಳೆಯದು. ಇದು ಬುದ್ಧನಿಗಿಂತ ಮುಂಚೆ ಎಂದು ಹೇಳಬಹುದು. ಬುದ್ಧನ ಕಾಲ ಕ್ರಿಸ್ತಪೂರ್ವ ಆರನೆ ಶತಮಾನ. ಆ ಸಮಯದಲ್ಲಿ ಶ್ರೀಕೃಷ್ಣ ಎಂಬ ವ್ಯಕ್ತಿಯ ವಿಚಾರವಾಗಿ ನಾವು ಛಾಂದೋಗ್ಯ ಉಪನಿಷತ್ತಿನಲ್ಲಿ ನೋಡುತ್ತೇವೆ. ಛಾಂದೋಗ್ಯ ಉಪನಿಷತ್ತಿ ನಲ್ಲಿ (III, ೧೭, ೬) ದೇವಕಿಪುತ್ರನಾದ ಕೃಷ್ಣ ಎಂಬುವನು ಗೋರ ಅಂಗೀರಸನ ಶಿಷ್ಯನಾಗಿದ್ದನು ಎಂದಿದೆ. ಪಾಣಿನಿ ತನ್ನ ಸೂತ್ರದಲ್ಲಿ ಶ್ರೀಕೃಷ್ಣ-ಅರ್ಜುನರು ಪೂಜೆಗೆ ಯೋಗ್ಯರಾದ ವ್ಯಕ್ತಿಗಳು ಎನ್ನುವನು. ಪಾಣಿನಿಯ ಕಾಲವನ್ನು ಕೂಡ ಬುದ್ಧನ ಕಾಲಕ್ಕೆ ಮುಂಚೆ ಎಂದು ವಿದ್ವಾಂಸರು ಊಹಿಸುವರು. ಕ್ರಿಸ್ತಪೂರ್ವ ನಾಲ್ಕನೇ ಶತಮಾನಕ್ಕೆ ಸೇರಿದ ಬೌದ್ಧಗ್ರಂಥವಾದ 'ನಿದ್ದೀಶ' ಎಂಬ ಪಾಲೀ ಗ್ರಂಥ ವಾಸುದೇವ ಮತ್ತು ಬಲದೇವನ ಭಕ್ತರ ವಿಷಯವನ್ನು ಹೇಳುವುದು. ಇಂಡಿಯ ದೇಶಕ್ಕೆ ಬಂದ ಗ್ರೀಕರ ಮೆಗಸ್ಥನೀಸ್ ಎಂಬುವನು ಕ್ರಿಸ್ತಪೂರ್ವ ೩೨೦ರಲ್ಲಿ ಶೌರಸೇನೀಯರು ಕೃಷ್ಣನನ್ನು ಪೂಜಿಸುತ್ತಿದ್ದರು ಎನ್ನುವನು. ಕ್ರಿಸ್ತಪೂರ್ವ ೧೮೦ಕ್ಕೆ ಸೇರಿದ್ದ ಬೆಸ್ ನಗರದ ಶಾಸನದಲ್ಲಿ ಹಲಿಯದೋರ ಎಂಬ ಗ್ರೀಕ್ ಭಾಗವತನು ವಾಸುದೇವನನ್ನು ದೇವದೇವ ಎಂದು ಕರೆಯುತ್ತಾನೆ. ಕ್ರಿಸ್ತಪೂರ್ವ ಒಂದನೆಯ ಶತಮಾನಕ್ಕೆ ಸೇರಿದ ನಾನಾಗಾಟಿನ ಶಾಸನದಲ್ಲಿ ದೇವರ ಹೆಸರುಗಳನ್ನು ಹೇಳುವ ಮೊದಲನೆ ಶ್ಲೋಕದಲ್ಲಿ ವಾಸುದೇವನ ಹೆಸರು ಬರುವುದು. ಪತಂಜಲಿ ತನ್ನ ಮಹಾಭಾಷ್ಯದಲ್ಲಿ ಪಾಣಿನಿಯ (iv, ೩, ೯೮) ಸೂತ್ರವನ್ನು ವಿವರಿಸುವಾಗ ಭಾಗವತನಾದ ವಾಸುದೇವನ ಹೆಸರು ಬರುವುದು,
ಅಂತೂ ಇವುಗಳನ್ನೆಲ್ಲ ನೋಡಿದರೆ ಶ್ರೀ ಕೃಷ್ಣ ಎಂಬ ಚಾರಿತ್ರಿಕ ವ್ಯಕ್ತಿ ಹಿಂದೆ ಇದ್ದಿರಬೇಕು. ಅವನ ಸುತ್ತಲೂ ಬೇಕಾದಷ್ಟು ಕಲ್ಪನೆ, ಉತ್ಪ್ರೇಕ್ಷೆ— ಇವುಗಳೆಲ್ಲ ವ್ಯಾಪಿಸಿಕೊಂಡು ಅವನನ್ನು ಒಬ್ಬ ಅತಿಮಾನವ ವ್ಯಕ್ತಿಯನ್ನಾಗಿ ಮಾಡಿ, ಈಗ ನಮಗೆ ಅದನ್ನು ನಂಬುವುದಕ್ಕೆ ಆಗುವುದಿಲ್ಲ ಎಂಬ ಸ್ಥಿತಿಗೆ ತಂದಿರಬಹುದು. ಆರೋಪ ಮಾಡಿರುವುದನ್ನೆಲ್ಲ ತೆಗೆದರೂ ತೆಗೆದು ಹಾಕುವುದಕ್ಕೆ ಆಗಲಾರದ ಒಂದು ವ್ಯಕ್ತಿ ನಿಲ್ಲುವುದು. ಅವನೇ ಗೀತೆಯನ್ನು ಅರ್ಜುನನಿಗೆ ಬೋಧಿಸಿದ್ದು, ಇಲ್ಲಿ ಕರ್ತವ್ಯಕ್ಕಾಗಿ ಕರ್ತವ್ಯ, (ii, ೪೭) ಎಂಬ ಭಾವನೆ ಅತಿನೂತನವಾದುದು. ಇದು ಯಾವುದೋ ಒಂದು ವ್ಯಕ್ತಿಯ ಮೂಲಕ ಬಂದಿರಬೇಕು. ಅದನ್ನೇ ಇಲ್ಲಿ ಕೃಷ್ಣ ಎಂದು ಕರೆಯುತ್ತಾರೆ.
ಶ್ರೀಕೃಷ್ಣನ ವ್ಯಕ್ತಿತ್ವವನ್ನು ನಾವು ಎರಡನೆಯ ದೃಷ್ಟಿಯಿಂದ ನೋಡಬಹುದು. ಅದೇ ಸಾಹಿತ್ಯ ದೃಷ್ಟಿ. ಶ್ರೀಕೃಷ್ಣನ ಜೀವನವನ್ನು ರೂಪಿಸುವ ಎರಡು ಶ್ರೇಷ್ಠ ಗ್ರಂಥಗಳಿವೆ. ಅದರಲ್ಲಿ ಮೊದಲನೆಯದು ಭಾಗವತ. ಅದು ಶ್ರೀ ಕೃಷ್ಣನ ಬಾಲ್ಯಜೀವನ ಮುಂತಾದುವುಗಳನ್ನು ಚೆನ್ನಾಗಿ ರೂಪಿಸುವುದು. ಅನಂತರವೇ ನಮಗೆ ಮಹಾಭಾರತದಲ್ಲಿ ಅವನ ನಂತರದ ಜೀವನ ದೊರಕುವುದು. ಬರೀ ಒಂದು ಸಾಹಿತ್ಯದ ದೃಷ್ಟಿಯಿಂದ ನೋಡಿದರೇನೇ ಅದಕ್ಕೆ ಚಾರಿತ್ರಿಕತೆ ದೊರಕುವುದಿಲ್ಲ. ಹೇಗೆ ಸಾಹಿತ್ಯ ಒಬ್ಬನ ಕಲ್ಪನೆಯೋ ಅದರಂತೆಯೇ ಶ್ರೀಕೃಷ್ಣನೂ ಒಬ್ಬ ಕವಿಯ ಕಲ್ಪನೆ ಇರಬಹುದು ಎನ್ನಬಹುದು. ಆದರೆ ಕವಿ ಆಗಲೇ ಪ್ರಚಾರದಲ್ಲಿ ಇರುವ ಒಂದು ವ್ಯಕ್ತಿಯನ್ನು ತೆಗೆದುಕೊಂಡು ಅದರ ಮೇಲೆ ಇರುವುದು ಇಲ್ಲದಿರುವುದು ಎಲ್ಲವನ್ನು ಸೇರಿಸಿ ಒಂದು ಕಾವ್ಯವನ್ನು ನೇಯುವನು. ಅಂತಹ ಪ್ರಚಾರದಲ್ಲಿದ್ದ ಶ್ರೀಕೃಷ್ಣ ಎಂಬ ವ್ಯಕ್ತಿ ಹಿಂದೆ ಇದ್ದಿರಬೇಕು ಎನ್ನುವುದನ್ನು ಊಹಿಸಬೇಕಾಗಿದೆ. ಶಿಲ್ಪಿ ಒಂದು ವಿಗ್ರಹ ಕೊರೆಯುತ್ತಾನೆ. ಆ ವಿಗ್ರಹ ಕಲ್ಪನೆ ಆಗಿರಬಹುದು. ಆದರೆ ಯಾವ ಕಲ್ಲಿನ ಮೇಲೆ ತನ್ನ ಕಲ್ಪನೆಯನ್ನು ನೇತುಹಾಕುವನೊ ಅದು ಕಾಲ್ಪನಿಕವಾಗಲಾರದು. ಅಷ್ಟನ್ನಾದರೂ ನಾವು ಸಾಹಿತ್ಯದೃಷ್ಟಿಯಿಂದ ಒಪ್ಪಿಕೊಳ್ಳಬೇಕಾಗುವುದು.
ಮೂರನೆಯ ದೃಷ್ಟಿಯೇ ಆಧ್ಯಾತ್ಮಿಕ ದೃಷ್ಟಿ. ಇಲ್ಲಿ ಶ್ರೀಕೃಷ್ಣ ಚಾರಿತ್ರಿಕವಾಗಿದ್ದನೆ ಇಲ್ಲವೆ ಎಂಬುದು ಬೇಕಾಗಿಲ್ಲ. ಕಾವ್ಯದೃಷ್ಟಿಯಿಂದ ಅವನು ಒಬ್ಬ ಕವಿಯ ಕಲ್ಪನೆ ಆಗಿರಬಹುದು. ಅವನು ಏನನ್ನು ಹೇಳುತ್ತಾನೊ, ಅದನ್ನೆಲ್ಲ ಒಬ್ಬ ಕವಿಯೇ ಅವನ ಮೂಲಕ ಹೇಳಬಹುದು ಎಂದು ಭಾವಿಸಬಹುದು. ಆದರೆ ಅಂತಹ ಒಂದು ವ್ಯಕ್ತಿಯನ್ನೇ ಆದರ್ಶವಾಗಿ ಮಾಡಿ ಕೊಂಡು ಅನೇಕ ಜನ ಸಾಧುಸಂತರು, ಭಕ್ತರು ಉದ್ಧಾರವಾಗಿದ್ದಾರೆ; ಈ ಸಂಸಾರದಿಂದ ಪಾರಾಗಿದ್ದಾರೆ, ಈಗಲೂ ಅವನ ಜೀವನ ಮತ್ತು ಸಂದೇಶ ಇತರರಿಗೆ ಉದ್ಧಾರವಾಗಲು ಒಂದು ಸೇತುವೆಯಂತೆ ನಿಂತಿದೆ. ಶ್ರೀ ಕೃಷ್ಣ ಎನ್ನುವಂತಹ ವ್ಯಕ್ತಿಯನ್ನು ಚಿಂತನೆ ಮಾಡಿ, ಧ್ಯಾನ ಮಾಡಿ, ಅವನು ಹೇಳುವ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಈ ಮರ್ತ್ಯ ಅಮೃತನಾಗಿದ್ದಾನೆ, ಅಜ್ಞಾನಿ ಜ್ಞಾನಿಯಾಗಿದ್ದಾನೆ, ಪಾಪಿ ಪುಣ್ಯವಂತನಾಗಿದ್ದಾನೆ. ಇದನ್ನಾದರೂ ನಾವು ಒಪ್ಪಲೇಬೇಕು. ಒಂದು ವೈಜ್ಞಾನಿಕ ಪುಸ್ತಕವನ್ನು ಯಾರು ಬರೆದರೋ ಅವನ ಚಾರಿತ್ರಿಕತೆ ನಮಗೆ ಮುಖ್ಯವಲ್ಲ. ಅಲ್ಲಿ ಬರೆದಿರುವುದು ಸತ್ಯವೇ, ಸುಳ್ಳೇ ಎಂಬುದನ್ನು ನಾವು ಪ್ರಯೋಗಶಾಲೆಗೆ ಹೋಗಿ ಪ್ರಯೋಗ ಮಾಡಿದಾಗ ನಮಗೆ ಗೊತ್ತಾಗುವುದು. ಅದು ಸರಿಯಾಗಿದ್ದರೆ, ಆ ಪುಸ್ತಕವನ್ನು ಯಾರಾದರೂ ಬರೆದಿರಲಿ ಚಿಂತೆ ಇಲ್ಲ. ಅದು ಸ್ವೀಕಾರಕ್ಕೆ ಯೋಗ್ಯ. ಆಧ್ಯಾತ್ಮಿಕ ಜೀವನಕ್ಕೆ ತಮ್ಮ ಬಾಳನ್ನು ತೆತ್ತ ಸಾಧುಸಂತರು ಭಕ್ತರು ಅಂತಹ ಪ್ರಯೋಗ ಶಾಲೆ. ಅವರು ಶ್ರೀ ಕೃಷ್ಣನ ವ್ಯಕ್ತಿತ್ವದ ಮೇಲೆ ಧ್ಯಾನಮಾಡಿ, ಜಪಮಾಡಿ, ಅವನನ್ನು ಪ್ರಾರ್ಥಿಸಿ ಅವನನ್ನು ಪ್ರೀತಿಸಿ ಉದ್ಧಾರವಾಗಿ ಹೋಗಿದ್ದಾರೆ. ಹಾಗೆಯೇ ಅವನ ಗೀತಾ ಸಂದೇಶ ಆಧ್ಯಾತ್ಮಿಕ ಜೀವನದಲ್ಲಿ ಒಬ್ಬ ಯಾವ ಮೆಟ್ಟಲಿನಲ್ಲಿ ಇರಲಿ ಅವನನ್ನು ಅಲ್ಲಿಂದ ಪರಮ ಸತ್ಯದೆಡೆಗೆ ಮೆಟ್ಟಲು ಮೆಟ್ಟಲಾಗಿ ಕರೆದುಕೊಂಡು ಹೋಗಿ ಪೂರ್ಣಸತ್ಯದ ಪರಿಚಯ ಮಾಡಿಸಿದೆ. ಈ ವಿಷಯವನ್ನು ಯಾರೂ ಅನುಮಾನಿಸಲಾರರು. ಇದರ ಎದುರಿಗೆ ಚಾರಿತ್ರಿಕ ದೃಷ್ಟಿ, ಸಾಹಿತ್ಯದ ದೃಷ್ಟಿ ಇವುಗಳೆಲ್ಲ ಗೌಣ. ಇಲ್ಲಿ ಬರುವ ಆಧ್ಯಾತ್ಮಿಕ ವಿಷಯ ವೈಜ್ಞಾನಿಕ ನಿಯಮದಷ್ಟೇ ಸತ್ಯ. ಅದನ್ನು ಯಾರಾದರೂ ಹೇಳಿರಲಿ ಚಿಂತೆಯಿಲ್ಲ, ಶ್ರೀಕೃಷ್ಣನೆಂಬ ಚಾರಿತ್ರಿಕ ವ್ಯಕ್ತಿಯೇ ಹೇಳಿರಲಿ ಅಥವಾ ಯಾವನೋ ಒಬ್ಬ ಮಹಾ ದ್ರಷ್ಟಾರನಾದ ಕವಿ ಶ್ರೀಕೃಷ್ಣ ಎಂಬ ವ್ಯಕ್ತಿಯ ಮೂಲಕ ಹೇಳಿರಲಿ, ಚಿಂತೆಯಿಲ್ಲ. ಇದೊಂದು ಆಧ್ಯಾತ್ಮಿಕ ಸತ್ಯ. ಜೀವನದಲ್ಲಿ ಅನುಷ್ಠಾನ ಮಾಡಲು ಸಾಧ್ಯ. ಹಿಂದೆ ಎಷ್ಟೋ ಜನ ಹೀಗೆ ಮಾಡಿದ್ದಾರೆ, ಈಗ ಮಾಡುತ್ತಿರುವರು, ಮುಂದೆ ಮಾಡುವರು. ಅದನ್ನು ಯಾರು ಹೇಳುತ್ತಾರೆ ಎಂಬ ದೃಷ್ಟಿಯಿಂದ ನೋಡಬೇಕಾಗಿಲ್ಲ. ಹೇಳಿರುವುದು ಸತ್ಯವಾದರೆ, ಅದನ್ನು ಶ್ರೀಕೃಷ್ಣನೇ ಹೇಳಿರಲಿ, ಅಥವಾ ಇನ್ನು ಯಾರೊ ಅವನ ಹೆಸರಿನಲ್ಲಿ ಹೇಳಿರಲಿ ಚಿಂತೆ ಇಲ್ಲ. ಅದು ಸ್ವೀಕಾರಕ್ಕೆ ಯೋಗ್ಯ. ಇದು ವೈಜ್ಞಾನಿಕವಾದ ದೃಷ್ಟಿ. ನಾವು ಭಗವದ್ಗೀತೆಯನ್ನು ಈ ದೃಷ್ಟಿಯಿಂದಲೂ ನೋಡಬಹುದು.
ನಾಟಕೀಯ ಹಿನ್ನೆಲೆ
ಪ್ರಪಂಚದಲ್ಲಿ ಮತ್ತಾವ ಆಧ್ಯಾತ್ಮಿಕ ಗ್ರಂಥವೂ ಇಷ್ಟು ನಾಟಕೀಯವಾಗಿ ಪ್ರಾರಂಭವಾಗುವುದಿಲ್ಲ. ಗೀತಾ ಸಂದೇಶ ಪ್ರಾರಂಭವಾಗುವುದಕ್ಕಾಗಿಯೇ ಕುರುಕ್ಷೇತ್ರದ ಯುದ್ಧದ ಹಿನ್ನೆಲೆ ರೂಪಿತವಾದಂತೆ ಇದೆ. ಇದೊಂದು ಗುರು ಶಿಷ್ಯರು ಇರುವ ಪುಷ್ಯಾಶ್ರಮವಲ್ಲ, ಗಿರಿಗುಹೆಯಲ್ಲ. ಒಟ್ಟು ಹದಿನೆಂಟು ಅಕ್ಷೋಹಿಣಿ ಸೈನ್ಯದ ವೀರರಿಂದ ಮೊಳಗುತ್ತಿರುವ ಕುರುಕ್ಷೇತ್ರ.
ಪಾಂಡವರು ಬಾಲ್ಯದಿಂದಲೂ ಕೌರವರಿಂದ ಪಡಬಾರದ ಯಾತನೆಯನ್ನು ಪಟ್ಟು ಜೂಜಾಡಿ ತಮ್ಮ ರಾಜ್ಯವನ್ನು ಕಳೆದುಕೊಂಡು, ಹದಿನಾಲ್ಕು ವರುಷಗಳು ವನವಾಸ ಮಾಡಿ, ಒಂದು ವರುಷ ಅಜ್ಞಾತವಾಸದಲ್ಲಿ ಕಳೆದು, ತಮಗೆ ನ್ಯಾಯವಾಗಿ ಬರಬೇಕಾದ ಅರ್ಧ ರಾಜ್ಯವನ್ನು ಪಡೆಯುವುದಕ್ಕೆ ಶ್ರೀಕೃಷ್ಣನನ್ನು ಕಳುಹಿಸಿದರು. ಆದರೆ ಆ ಕೌರವ ನಾಯಕನಾದ ದುರ್ಯೋಧನ ಅರ್ಧ ರಾಜ್ಯವಲ್ಲ ಐದು ಹಳ್ಳಿಯನ್ನೂ ಕೊಡುವುದಿಲ್ಲ, ಐದು ಹೆಜ್ಜೆಯನ್ನೂ ಕೊಡುವುದಿಲ್ಲ. ಬೇಕಾದರೆ ಯುದ್ಧಭೂಮಿಯಲ್ಲಿ ನಮ್ಮನ್ನು ಸೋಲಿಸಿ ತೆಗೆದುಕೊಳ್ಳಲಿ ಎಂದು ಹೇಳಿ ಕಳುಹಿಸಿದ. ಬೇರೆ ಮಾರ್ಗವಿಲ್ಲದೆ ಪಾಂಡವರು ಯುದ್ಧಕ್ಕೆ ಅಣಿಯಾಗಬೇಕಾಯಿತು. ಅವರು ಏಳು ಅಕ್ಷೋಹಿಣಿ ಸೈನ್ಯವನ್ನು ಸಂಗ್ರಹಿಸಿಕೊಂಡು ಯುದ್ಧಮಾಡುವುದಕ್ಕಾಗಿ ಕುರು ಕ್ಷೇತ್ರದಲ್ಲಿ ನೆರೆದಿರುವರು. ಶ್ರೀಕೃಷ್ಣ ಅರ್ಜುನನ ಸಾರಥಿಯಾಗಿರುವನು. ಅವನು ಕೈದುಗಳನ್ನು ಹಿಡಿಯಲಿಲ್ಲ. ಯುದ್ಧ ಮಾಡುವುದಕ್ಕೆ ಮುಂಚೆ ದುರ್ಯೋಧನನಿಗೆ ಯಾರು ಯಾರು ಸಹಾಯಕ್ಕೆ ಬಂದಿರುವರೋ ಅವರನ್ನೆಲ್ಲಾ ನೋಡೋಣ, ರಥವನ್ನು ಎರಡು ಸೇನೆಗಳ ಮಧ್ಯದಲ್ಲಿ ನಿಲ್ಲಿಸು ಎಂದು ಅರ್ಜುನ ಶ್ರೀಕೃಷ್ಣನನ್ನು ಕೇಳಿಕೊಳ್ಳುವನು. ಶ್ರೀ ಕೃಷ್ಣ ಹಾಗೆ ಮಾಡಿದ. ಅರ್ಜುನ ನೋಡಿದ ಯಾರುಯಾರು ಇರುವರು ಕೌರವರ ಕಡೆ ಎಂಬುದನ್ನು. ಅಜ್ಜ ಭೀಷ್ಮ—ಅವನೇ ಸೇನಾನಿ. ಅವನ ನೇತೃತ್ವದಲ್ಲಿ ಕೌರವರ ಸೇನೆಯೆಲ್ಲಾ ನೆರೆದಿದೆ. ಪಾಂಡುರಾಜ ಕಾಲವಾದ ಮೇಲೆ ಕಾಡಿನಲ್ಲಿ ಅನಾಥರಾಗಿದ್ದ ಪಾಂಡವರನ್ನು ಹಸ್ತಿನಾವತಿಗೆ ಕರೆದುಕೊಂಡು ಬಂದು ಪ್ರೀತಿಯಿಂದ ನೋಡಿಕೊಂಡವನು ಭೀಷ್ಮ. ಕೌರವರನ್ನು ಪ್ರೀತಿಸುತ್ತಿದ್ದಂತೆ ಪಾಂಡವರನ್ನೂ ಪ್ರೀತಿಸುತ್ತಿದ್ದವನು ಅವನು. ಅವನ ತೊಡೆಯ ಮೇಲೆ ಬಾಲ್ಯದಲ್ಲಿ ಆಡಿದವರು, ಅವನ ಹಿತವಚನಗಳನ್ನು ಕೇಳಿದವರು, ಅವನ ಹರಕೆಯ ಬಲದಿಂದ ವೀರಾಧಿವೀರರಾದವರು ಪಾಂಡವರು. ಅಜ್ಜನ ಪ್ರೀತಿಯ ಸವಿಯನ್ನು ನೋಡಿದವನು ಅರ್ಜುನ. ಅವನೇ ಈಗ ಎದುರಿಗೆ ನಿಂತಿರುವನು. ಮುಂಚೆ ಅವನನ್ನು ಕೊಲ್ಲಬೇಕಾಗಿದೆ. ರಣದೇವತೆಗೆ ಪ್ರಥಮ ಬಲಿಯೇ ತಮ್ಮ ಪ್ರೀತಿಯ ಅಜ್ಜ. ಅವನಿಗೆ ಸ್ವಲ್ಪ ದೂರದಲ್ಲಿ ದ್ರೋಣಾಚಾರ್ಯರು ಇರುವರು. ಪಾಂಡವರ ಶಸ್ತ್ರವಿದ್ಯಾ ಗುರುಗಳು ಅವರು. ದ್ರೋಣಾಚಾರ್ಯರಿಗೆ ಅರ್ಜುನ ನನ್ನು ಕಂಡರೆ ಪ್ರಾಣ. ಅಂತಹ ಪ್ರೀತಿ ಅವನ ಮೇಲೆ. ಶಿಷ್ಯನ ಶ್ರೇಯಸ್ಸಿಗಾಗಿ ತಮ್ಮ ವಿದ್ಯೆಯ ಸರ್ವಸ್ವವನ್ನು ಬೋಧಿಸಿದರು. ಅವನು ಅನುಪಮ ಬಿಲ್ಲುಗಾರನಾದಾಗ, “ಭಲೆ! ಭೇಷ್!” “ನನ್ನ ಶಿಷ್ಯ ಇವನು” ಎಂದು ತಲೆದೂಗಿದ ಗುರು. ತಮ್ಮ ಮಗ ಅಶ್ವತ್ಥಾಮನನ್ನು ಕೂಡ ಅರ್ಜುನನನ್ನು ಪ್ರೀತಿಸುತ್ತಿದ್ದಷ್ಟು ಪ್ರೀತಿಸುತ್ತಿರಲಿಲ್ಲ. ಅಶ್ವತ್ಥಾಮ ತಮ್ಮ ದೇಹದಿಂದ ಹುಟ್ಟಿ ದವನು. ಆದರೆ ಅರ್ಜುನನಾದರೋ ದ್ರೋಣಾಚಾರ್ಯರ ಮಾನಸ ಪುತ್ರ. ಈ ಗುರು ಪ್ರೀತಿ ಯನ್ನು ಸವಿದವನು ಅರ್ಜುನ. ಇಂತಹ ಮಹಾನ್ ಗುರುವಿನ ಅಚ್ಚುಮೆಚ್ಚಿನ ಶಿಷ್ಯನಾಗು ವುದು ಎಲ್ಲರ ಪಾಲಿಗೂ ಬರುವ ಅದೃಷ್ಟವಲ್ಲ. ಇದೊಂದು ಅಲಭ್ಯ ಲಾಭ. ಇಂತಹ ಗುರು ವನ್ನು ಕೊಲ್ಲಬೇಕು ಅರ್ಜುನನಿಗೆ ಜಯ ಬರಬೇಕಾದರೆ. ಜೊತೆಗೆ ಗುರುಪುತ್ರರನ್ನು ಗುರು ಗಳ ಇತರ ನೆಂಟರಿಷ್ಟರನ್ನು ಕೊಲ್ಲಬೇಕು. ಕರ್ಣ ಮುಂತಾದ ದ್ವಾಪರ ಯುಗದ ಶ್ರೇಷ್ಠತಮ ಸಾಹಸಿಗಳಲ್ಲಿ ಕೆಲವರು ಕೌರವರ ಕಡೆ ಇರುವರು. ರಣದೇವಿಗೆ ಇವರನ್ನೆಲ್ಲಾ ಬಲಿ ಕೊಡ ಬೇಕು. ಇಲ್ಲದೇ ಇದ್ದರೆ ಜಯ ಸಿಕ್ಕುವುದಿಲ್ಲ. ಸಮರ ಭೂಮಿಯಲ್ಲಿ ನೆರೆದಿರುವವರಾರೂ ಬೆನ್ನನ್ನು ತೋರಿಸಿ ಓಡಿಹೋಗುವವರಲ್ಲ. ಅವರೆಲ್ಲಾ ಬಂದಿರುವುದು ಮಡಿಯುವುದಕ್ಕೆ, ಇಲ್ಲವೇ ಜಯವನ್ನು ಗಳಿಸುವುದಕ್ಕೆ. ಇಂತಹ ಘೋರ ಯುದ್ಧವನ್ನು ಮಾಡಿಯಾದ ಮೇಲೆ ಉಳಿಯುವುದೇ ಕೋಟ್ಯಂತರ ಪ್ರೇತರಾಶಿಗಳು, ಎರಡೂ ಕಡೆ. ಅಂಗಹೀನರ ಆರ್ತನಾದ, ಇವರನ್ನೇ ನಂಬಿದ ವಿಧವೆಯರು, ತಬ್ಬಲಿ ಮಕ್ಕಳು, ವೃದ್ಧ ತಂದೆ ತಾಯಿಗಳ ದುಃಖದ ಹಾಹಾಕಾರ ದೇಶವನ್ನೆಲ್ಲಾ ವ್ಯಾಪಿಸುವುದು. ಇದರಿಂದ ಇವರಿಗೆ ದೊರಕುವುದೇನು? ಜಯ, ರಾಜ್ಯಲಾಭ, ಜಯದ ಮಾರಿಗೆ ಇಷ್ಟೊಂದು ಬಲಿ. ಬರುವ ರಾಜ್ಯ ಇಷ್ಟೊಂದು ಜನರ ಗೋಳಿನ ಜ್ವಾಲಾಮುಖಿಯ ಮೇಲೆ ಕಟ್ಟಿದ ನಗರ. ಇನ್ನವರಿಗೆ ಯಾವ ಶಾಂತಿ ಬಂದೀತು? ಸುಖ ಬಂದೀತು?! ಈ ಭಾವನೆಗಳು, ಅರ್ಜುನನ ಹೃದಯವನ್ನೆಲ್ಲಾ ಕಲಕುವುವು. ಕೌರವರನ್ನು ನೋಡುತ್ತಿದ್ದಂತೆ ಮರುಕ ಬರುವುದು, ಕಣ್ಣು ಹನಿಗೂಡುವುದು, ಗಾಂಡೀವ ಜಾರುವುದು, ಮೈ ಸುಡುವುದು, ಬಾಯಿ ಒಣಗುವುದು. ಸುಂಟರ ಗಾಳಿಗೆ ಸಿಕ್ಕಿದ ತರಗೆಲೆಯಂತೆ ಆಗುವುದು ಅರ್ಜುನನ ಮನಸ್ಸು. ಕಿಂಕರ್ತವ್ಯಮೂಢನಾಗುವನು. ಇಂತಹ ಒಂದು ಕೊಲೆ ಮಾಡುವುದು ಯುದ್ಧ ಮಾಡುವುದು ಧರ್ಮವೇ ಎಂದು ಪ್ರಶ್ನಿಸುತ್ತಾನೆ. ಆಗಲೇ ಶ್ರೀಕೃಷ್ಣ “ಅರ್ಜುನ, ಆರ್ಯರಿಗೆ ಅಯೋಗ್ಯವೂ ಸ್ವರ್ಗಗತಿಗೆ ವಿರೋಧವೂ ಅಪಕೀರ್ತಿಯನ್ನು ಉಂಟುಮಾಡುವುದೂ ಆದ ಈ ಮೋಹ ಇಂತಹ ವಿಷಮ ಸಮಯದಲ್ಲಿ ನಿನಗೆ ಹೇಗೆ ಬಂತು?” ಎಂದು ಕೇಳುತ್ತಾನೆ.
“ಅರ್ಜುನಾ, ಷಂಡತನವನ್ನು ಹೊಂದಬೇಡ. ಇದು ನಿನಗೆ ಯೋಗ್ಯವಲ್ಲ. ಎಲೈ ಶತ್ರುತಾಪನನೇ, ತುಚ್ಛವಾದ ಮನಸ್ಸಿನ ದೌರ್ಬಲ್ಯವನ್ನು ಬಿಟ್ಟು ಏಳು.”
ಎಂದು ಗುಡುಗಿನಂತೆ ಮೊಳಗುವ ಗಂಭೀರವಾಣಿಯಿಂದ ಶ್ರೀಕೃಷ್ಣನ ಗೀತಾ ಸಂದೇಶ ಮೊದಲಾಗುವುದು. ಜ್ಞಾನ ಭಕ್ತಿ ಕರ್ಮದ ಬಿರುಗಾಳಿಯಿಂದ ತಾತ್ಕಾಲಿಕವಾಗಿ ಆವರಿಸಿದ್ದ ಅಜ್ಞಾನದ ಬೂದಿ ಹಾರಿಹೋಗುವುದು. ಸ್ವರ್ಗ ತಾನಾಗಿ ತೆರೆದ ಬಾಗಿಲಿನಂತಿದೆ ಧರ್ಮ ಯುದ್ಧ. ಗೆದ್ದರೆ ಇಹಲೋಕದ ಸುಖ, ಮಡಿದರೆ ಪರಲೋಕದ ಸುಖ. ಸ್ವಧರ್ಮಕ್ಕೋಸ್ಕರ ಮಡಿದರೂ ಶ್ರೇಷ್ಠವೇ, ಮುಂತಾದ ವಾಕ್ಯಗಳಿಂದ ಅರ್ಜುನನ ಪೌರುಷದ ಅಗ್ನಿಕುಂಡವನ್ನು ಕಲಕಿ ಪುನಃ ಕಿಡಿಯಾಗುವಂತೆ ಮಾಡುವನು. ಅರ್ಜುನನನ್ನು ನಿಮಿತ್ತ ಮಾತ್ರವಾಗಿ ಮಾಡಿ ಕೊಂಡು, ಅಧರ್ಮದ ಕಳೆಯನ್ನು ಬೇರುಸಹಿತ ನಿರ್ದಾಕ್ಷಿಣ್ಯವಾಗಿ ಕಿತ್ತೊಗೆದು ಶಾಶ್ವತ ಧರ್ಮವನ್ನು ಜಗತ್ತಿಗೆ ಬೋಧಿಸಿದನು. ಇದೇ ಗೀತೆ.
ವಿಷಾದಯೋಗ
ಭಗವದ್ಗೀತೆ ಪ್ರಾರಂಭವಾಗುವುದು ಅರ್ಜುನನ ವಿಷಾದದಿಂದ. ಮನುಷ್ಯನ ಜೀವನದಲ್ಲಿ ಒಂದು ದೊಡ್ಡ ವ್ಯಾಕುಲ ಪ್ರಾರಂಭವಾದಾಗಲೇ ಹೊಸ ಅಧ್ಯಾಯ ಪ್ರಾರಂಭವಾಗುವುದು. ಮನಸ್ಸಿನ ನೋವನ್ನೇ ಬೆಲೆಯಾಗಿ ಕೊಡಬೇಕು ಒಂದು ಹೊಸ ಭಾವನೆಯ ಉದಯವನ್ನು ನೋಡಬೇಕಾದರೆ. ಯಾತನೆಯಿಲ್ಲದೆ ವ್ಯಾಕುಲವಿಲ್ಲದೆ ಯಾವ ಒಂದು ಹೊಸ ಬಾಳಾಗಲೀ ಹೊಸ ದೃಷ್ಟಿಯಾಗಲೀ ಪ್ರಾರಂಭವಾಗುವುದಿಲ್ಲ. ವಾಲ್ಮೀಕಿಯ ವಿಷಾದದಿಂದ ರಾಮಾಯಣ ಹುಟ್ಟಿತು. ಬುದ್ಧನ ವಿಷಾದದಿಂದ ಅವನಿಗೆ ನಿರ್ವಾಣ ಸಿಕ್ಕಿತು. ಅರ್ಜುನನ ವಿಷಾದದಿಂದ ಲೋಕಕ್ಕೆ ಭಗವಂತನ ಗೀತೆ ಸಿಕ್ಕಿತು.
ಅರ್ಜುನ ಕುರುಕ್ಷೇತ್ರದಲ್ಲಿ ತಾನು ಮಾಡಬೇಕಾದ ಯುದ್ಧವನ್ನು ಕೇವಲ ತನ್ನ ಲಾಭ ನಷ್ಟದ ಅಲ್ಪ ದೃಷ್ಟಿಯಿಂದ ನೋಡುತ್ತಿರುವನು. ಅವನು ಅದನ್ನು ಬಿಟ್ಟು ಭೂಮ ದೃಷ್ಟಿಯ ಕಡೆ ಹೋಗಬೇಕಾಗಿದೆ. ಹಾಗೆ ಹೋಗುವಾಗ ಅಲ್ಪ ದೃಷ್ಟಿಯಲ್ಲಿ ಬಿಟ್ಟ ತನ್ನ ಬೇರನ್ನೆಲ್ಲಾ ಕಿತ್ತುಕೊಂಡು ಏಳಬೇಕಾಗುವುದು, ಹೊಸ ದೃಷ್ಟಿಗೆ ಹೊಂದಿಕೊಳ್ಳಬೇಕಾಗುವುದು. ಒಂದು ಸಸಿ ಒಂದು ಕುಂಡದಲ್ಲಿ ಬೆಳೆದಿರುವುದು. ಅಲ್ಲೇ ಅದು ಬೇರು ಬಿಟ್ಟು ನೆಲದಿಂದ ಸಾರವನ್ನು ಹೀರುತ್ತಿದೆ. ಅದನ್ನು ಮತ್ತೂ ವಿಶಾಲವಾಗಿ ಬೆಳೆಸುವುದಕ್ಕೆ ಬೇರೊಂದು ಸ್ಥಳದಲ್ಲಿ ನೆಟ್ಟಾಗ, ಸಸಿ ಮೊದಲು ಬಾಡಿಹೋಗುವುದು. ಎಲೆಗಳೆಲ್ಲಾ ಉದುರಿ ಹೋಗುವುವು. ಕೆಲವುಕಾಲದ ಮೇಲೆಯೇ, ಹೊಸ ನೆಲದಲ್ಲಿ ಬೇರೂರಿ ಆದಮೇಲೆಯೇ ಪುನಃ ಚಿಗುರಲು ಪ್ರಾರಂಭಿಸು ವುದು. ಅದರಂತೆಯೇ ಅರ್ಜುನ ಇದುವರೆಗೆ ತನ್ನ ವ್ಯಕ್ತಿಯ ದೃಷ್ಟಿಯಿಂದ ಎಲ್ಲವನ್ನು ಅಳೆ ಯುತ್ತಿದ್ದ, ತೂಗುತ್ತಿದ್ದ. ಇನ್ನು ಮೇಲೆ ಭೂಮದೃಷ್ಟಿಯಿಂದ ಅದನ್ನು ನೋಡಬೇಕಾಗುವುದು. ಅಲ್ಪವನ್ನು ಭೂಮಕ್ಕೆ ಬಲಿಕೊಡಬೇಕಾಗುವುದು. ಆಗಲೇ ನಾವು ಮೇಲೇಳಬೇಕಾದರೆ. ಅರ್ಜುನ ತನ್ನ ಗುರುಹಿರಿಯರನ್ನು ಕೊಲ್ಲುವುದು, ಅದರಿಂದಾಗುವ ದುಃಖ ಸಂಕಟಗಳು, ಅದರಿಂದ ಬರುವ ಪಾಪ ಪುಣ್ಯಗಳು, ಇವುಗಳನ್ನೆಲ್ಲ ಬಿಟ್ಟು ಧರ್ಮಸಂಸ್ಥಾಪನೆಗೆ ಕ್ಷತ್ರಿಯ ಏನನ್ನು ಮಾಡಬೇಕಾಗಿದೆಯೊ ಆ ದೃಷ್ಟಿಯಿಂದ ನೋಡಬೇಕಾಗಿದೆ. ಈ ಪ್ರಪಂಚದಲ್ಲಿ ಸತ್ಯ ಮತ್ತು ಧರ್ಮ ನಿಲ್ಲಬೇಕು. ಯಾರು ಯಾರು ಅದರ ಬೆಳವಣಿಗೆಗೆ ಆತಂಕಪ್ರಾಯ ರಾಗಿರುವರೋ ಅವರು ಗುರುಗಳಾಗಿರಲೀ ಹಿರಿಯರಾಗಿರಲೀ ಬಂಧುಬಾಂಧವರಾಗಿರಲಿ ಎಲ್ಲರನ್ನೂ ಕಳೆಯಂತೆ ಕಿತ್ತುಹಾಕಬೇಕು. ವ್ಯಕ್ತಿ ಇದನ್ನು ತನ್ನ ಲಾಭ ನಷ್ಟದ ದೃಷ್ಟಿಯಿಂದ ನೋಡಕೂಡದು. ಸಮಷ್ಟಿಯ ಹಿತದ ದೃಷ್ಟಿಯಿಂದ ನೋಡಬೇಕು. ಹಿಂದಿನದು ಬಡಪೆಟ್ಟಿಗೆ ನಮ್ಮನ್ನು ಮೇಲೆ ಹೋಗಗೊಡುವುದಿಲ್ಲ. ಅದು ಹಲವಾರು ಕಾರಣಗಳನ್ನು ತಂದೊಡ್ಡು ವುದು. ಅದರಂತೆಯೇ ಅರ್ಜುನ, “ಈ ಯುದ್ಧವನ್ನು ಮಾಡಿದರೆ ಪಾಪ ಬರುವುದು, ಇದರಿಂದ ಕುಲಕ್ಷಯವಾಗುವುದು, ಕುಲಧರ್ಮ ನಾಶವಾಗುವುದು, ಕುಲಸ್ತ್ರೀಯರು ಕೆಡು ವರು, ವರ್ಣಸಂಕರ ಬರುವುದು, ಪಿತೃಗಳು ದುರ್ಗತಿಗೆ ಬರುವರು, ಇದಕ್ಕೆಲ್ಲ ಕಾರಣಕರ್ತ ರಾದ ನಮಗೆ ನರಕವಲ್ಲದೆ ಬೇರಿಲ್ಲ. ಇವರನ್ನು ಕೊಲ್ಲುವುದಕ್ಕಿಂತ ತಾನೇ ಯುದ್ಧರಂಗದಲ್ಲಿ ಮಡಿಯುವುದು ಮೇಲು” ಎನ್ನುತ್ತಾನೆ.
ಆದರೆ ಶ್ರೀ ಕೃಷ್ಣ ಇದನ್ನು ನೋಡುವ ದೃಷ್ಟಿಯೇ ಬೇರೆ. ಈ ಯುದ್ಧದಲ್ಲಿ ಅವನ ಬಂಧು ಬಾಂಧವರೂ ಕೂಡ ಕೌರವರ ಮತ್ತು ಪಾಂಡವರ ಪಕ್ಷದಲ್ಲಿದ್ದಾರೆ. ಅವರೂ ಕೂಡಾ ಈ ಯುದ್ಧಮಾರಿಗೆ ಆಹುತಿಯಾಗುವವರೆ. ಆದರೆ ಅವನು ವ್ಯಕ್ತಿಯ ಸುಖದುಃಖ ದೃಷ್ಟಿಯಿಂದ ನೋಡುವುದಿಲ್ಲ. ಅದು ಧರ್ಮಕ್ಕೂ ಅಧರ್ಮಕ್ಕೂ ಇರುವ ಪ್ರಶ್ನೆಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ಷತ್ರಿಯನ ಕರ್ತವ್ಯವೇನು ಎಂಬುದನ್ನು ಶ್ರೀಕೃಷ್ಣ ಹೇಳುತ್ತಾನೆ. ಅರ್ಜುನ ಯುದ್ಧವನ್ನು ಮಾಡಲೇಬೇಕಾಗಿದೆ. ತನಗೆ ರಾಜ್ಯ ಬೇಡದೇ ಇದ್ದರೂ ಅವನು ಯುದ್ಧವನ್ನು ಬಿಡುವುದಕ್ಕೆ ಆಗುವುದಿಲ್ಲ. ಬೇಕಾದರೆ ಅವನು ಕರ್ಮದ ಫಲವನ್ನು ತ್ಯಜಿಸಬಹುದೇ ಹೊರತು ಕರ್ಮವನ್ನು ತ್ಯಜಿಸುವುದಕ್ಕೆ ಅವನಿಗೆ ಅಧಿಕಾರವಿಲ್ಲ. ಹಾಗೆ ಅವನ ಕೈಯಲ್ಲಿ ಯುದ್ಧವನ್ನು ಮಾಡಿಸುವುದಕ್ಕೆ ಹಲವಾರು ದೃಷ್ಟಿಕೋಣಗಳಿಂದ ಮಾತನಾಡುತ್ತಾನೆ. ತಾತ್ತ್ವಿಕ ದೃಷ್ಟಿಯಿಂದ ಮಾತನಾಡುತ್ತಾನೆ, ವ್ಯಾವಹಾರಿಕ ದೃಷ್ಟಿಯಿಂದ ಮಾತನಾಡುತ್ತಾನೆ. ಸ್ವಧರ್ಮದ ದೃಷ್ಟಿಯಿಂದ ಮಾತನಾಡುತ್ತಾನೆ. ಕೀರ್ತಿದೃಷ್ಟಿಯಿಂದ ಮಾತನಾಡುತ್ತಾನೆ. ಲಾಭದ ದೃಷ್ಟಿಯಿಂದ ಮಾತನಾಡುತ್ತಾನೆ. ಕೊನೆಗೆ ಕರ್ಮಯೋಗದ ದೃಷ್ಟಿಯಿಂದ ಮಾತ ನಾಡುತ್ತಾನೆ. ಅಂತೂ ಹೇಗಾದರೂ ಅವನು ಕರ್ಮವನ್ನು ಮಾಡಬೇಕಾಗಿದೆ ಎಂಬುದನ್ನು ವಿವರಿಸುತ್ತಾನೆ.
ಅರ್ಜುನನಿಗೆ ವಿಷಾದ ಒಂದು ಪರೀಕ್ಷೆಯಾಯಿತು. ಇದುವರೆಗೆ ಅರ್ಜುನ ಶ್ರೀಕೃಷ್ಣನನ್ನು ಸಖ ಎಂದು ಕರೆಯುತ್ತಿದ್ದ. ತನ್ನ ಸಾರಥಿಯನ್ನಾಗಿ ಮಾಡಿಕೊಂಡಿದ್ದ. ಅವನನ್ನು ತನ್ನ ಪರಮ ಆಪ್ತನಂತೆ ಕಾಣುತ್ತಿದ್ದ. ಆದರೆ ಶ್ರೀಕೃಷ್ಣನ ಮೇರುಸದೃಶ ವ್ಯಕ್ತಿತ್ವವೇ ಇವನಿಗೆ ಪರಿಚಯವಿರಲಿಲ್ಲ. ಈ ಕುರುಕ್ಷೇತ್ರದ ಯುದ್ಧರಂಗದಲ್ಲಿ ತಾನೆಷ್ಟು ಕೆಳಗೆ ಇರುವೆನು, ಶ್ರೀಕೃಷ್ಣ ಎಷ್ಟು ಮಹಿಮೋನ್ನತ ವ್ಯಕ್ತಿ ಎಂಬುದು ಅರ್ಥವಾಯಿತು. ಜೀವನದಲ್ಲಿ ನಮ್ಮ ಯೋಗ್ಯತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಒಂದು ಅವಕಾಶ ಬೇಕು. ಒರಗಲ್ಲಿನಮೇಲೆ ತಿಕ್ಕಿ ನೋಡಿದಾಗ ತಾನೇ ಅರ್ಥವಾಗುವುದು ಲೋಹದಲ್ಲಿ ಎಷ್ಟು ಚಿನ್ನವಿದೆ ಎಂಬುದು. ಗಾಳಿಗೆ ತೂರಿದಾಗ ತಾನೇ ಜೊಳ್ಳು ಹೋಗುವುದು, ಕಾಳು ಉಳಿಯುವುದು. ಅರ್ಜುನನ ಜೀವನ ವಿಷಾದದ ಬಿರುಗಾಳಿಗೆ ಸಿಕ್ಕಿ ಹಾರಿಹೋಗುತ್ತಿದೆ. ಶ್ರೀಕೃಷ್ಣನಾದರೋ ಆ ಸಮಯದಲ್ಲಿ ಮಂದರಪರ್ವತದಂತೆ ನಿಂತಿರುವನು. ಇದನ್ನು ನೋಡಿದಾಗಲೇ ಹೀಗೆ ಹೇಳುತ್ತಾನೆ: “ದೈನ್ಯವೆಂಬ ದೋಷದಿಂದ ಕುಂದಿದ ಸ್ವಭಾವವುಳ್ಳವನಾಗಿ, ಧರ್ಮ ವಿಷಯದಲ್ಲಿ ಮೂಢವಾದ ಮನಸ್ಸುಳ್ಳವನಾಗಿ, ನಿನ್ನನ್ನು ಪ್ರಶ್ನೆ ಮಾಡುತ್ತಿದ್ದೇನೆ. ಯಾವುದು ನನಗೆ ಶ್ರೇಯಸ್ಕರವೋ ಅದನ್ನು ನಿಶ್ಚಯಪೂರ್ವಕ ಹೇಳು. ನಾನು ನಿನ್ನ ಶಿಷ್ಯ; ನಿನ್ನನ್ನೇ ಶರಣುಹೊಂದಿದ ನನಗೆ ಬೋಧಿಸು.” (ii, ೭)
ಅರ್ಜುನ ಇನ್ನು ಮೇಲೆ ಶ್ರೀಕೃಷ್ಣನನ್ನು ತನ್ನ ಸಖ ಎಂದು ಕರೆಯುವುದಿಲ್ಲ. 'ನಾನು ನಿನ್ನ ಶಿಷ್ಯ' ಎಂದು ಹೇಳುತ್ತಾನೆ. 'ನಾನು ನಿನ್ನಲ್ಲಿ ಶರಣಾಗಿದ್ದೇನೆ' ಎನ್ನುತ್ತಾನೆ. 'ನನಗೆ ಶ್ರೇಯಸ್ಸಿನ ದಾರಿಯನ್ನು ತೋರು' ಎಂದು ಬೇಡುತ್ತಾನೆ. ಯಾವಾಗ ಒಬ್ಬ ತನ್ನ ಶಿಷ್ಯನಾಗುತ್ತಾನೆಯೋ ಆಗಲೇ ಗುರು ಶಿಷ್ಯನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು. ಅದಕ್ಕೆ ಮುಂಚೆ ಅಲ್ಲ. ಸಖನಾದ ಅರ್ಜುನನನ್ನು ಶಿಷ್ಯನ ಸ್ಥಾನದಲ್ಲಿ ಕೂರಿಸುವುದು ವಿಷಾದ. ಆಗಲೇ ಭಗವಂತನ ಬೋಧನೆ ಮೊದಲಾಗಬೇಕಾದರೆ, ಅದು ಹೇಗೆ ಪ್ರಾರಂಭವಾಗವುದು? ಸಂಜಯ ಹೇಳುವಂತೆ, “ನಗುತ್ತಿರುವವನಂತೆ ಈ ಮಾತನ್ನು ಹೇಳುತ್ತಾನೆ.” ಮೊದಲು ಕತ್ತಲೆಯನ್ನೆಲ್ಲಾ ಸೀಳುವಂತೆ ಮಿಂಚಿ, ಅಮೃತಮಯವಾದ ಮುಸಲಧಾರೆಯಂತಹ ಮಳೆಯನ್ನು ಗೀತೋಪದೇಶದಲ್ಲಿ ಹದಿನೇಳು ಅಧ್ಯಾಯಗಳಲ್ಲಿ ಹರಿಸುವನು.
ಜೀವನದಲ್ಲಿ ಗಹನವಾದ ಸತ್ಯವನ್ನು ತಿಳಿದುಕೊಳ್ಳುವುದಕ್ಕೆ ನಮ್ಮಲ್ಲಿ ವ್ಯಾಕುಲತೆ ಇದ್ದರೆ ಅದನ್ನು ತಿಳಿಸುವವನು ಸಿಕ್ಕುತ್ತಾನೆ. ವ್ಯಾಕುಲತೆ ಹುಟ್ಟಿದಾಗ ಅದನ್ನು ತೃಪ್ತಿಪಡಿಸುವ ಚೈತನ್ಯವೂ ಇವನನ್ನು ಹುಡುಕಿಕೊಂಡು ಬರುವುದು. ಇದೊಂದು ಜೀವನದ ಗಾಢನಿಯಮ. ಏಸುಕ್ರಿಸ್ತ, “ಕೇಳಿ, ನಿಮಗದು ದೊರಕುವುದು” ಎನ್ನುತ್ತಾನೆ. ಯಾವಾಗ ಅರ್ಜುನ ಶ್ರೀಕೃಷ್ಣನನ್ನು ಕೇಳುತ್ತಾನೋ ತನಗೆ ಜೀವನದಲ್ಲಿ ದಾರಿ ತೋರೆಂದು, ಶ್ರೀಕೃಷ್ಣ ಅವನಿಗೆ ಮಾರ್ಗದರ್ಶಕನಾಗುತ್ತಾನೆ. ಇದು ಬರೀ ಅರ್ಜುನನಿಗೆ ಮಾತ್ರ ಸತ್ಯವಲ್ಲ, ಗೀತೆಯಲ್ಲಿ ಬರುವುದು ನಿತ್ಯಸತ್ಯದ ಮಾತು. ಎಲ್ಲಾ ಜೀವರ ಪಾಲಿಗೂ ಇದು ಸತ್ಯ. ನಾವು ಭಗವಂತನಲ್ಲಿ ಶರಣಾದರೆ, ದಾರಿ ತೋರೆಂದು ವ್ಯಾಕುಲತೆಯಿಂದ ಪ್ರಾರ್ಥಿಸಿದರೆ, ಭಗವಂತನ ಶಕ್ತಿ ಹತ್ತಿರವೇ ಕಾದು ಕುಳಿತಿದೆ ನಮ್ಮನ್ನು ಮೇಲೆತ್ತಲು.
ಯಜ್ಞಭಾವನೆ
ಗೀತೆಯಲ್ಲಿ ಬರುವ ಒಂದು ಅತ್ಯಂತ ಶ್ರೇಷ್ಠಭಾವನೆ ಯಜ್ಞ. ಶ್ರೀಕೃಷ್ಣ ಅರ್ಜುನನಿಗೆ ಯಜ್ಞದೃಷ್ಟಿಯಿಂದ ಕರ್ಮವನ್ನು ಮಾಡು, ಆಗ ಅದು ನಿನ್ನನ್ನು ಬಂಧಿಸುವುದಿಲ್ಲ (ii, ೯) ಎಂದು ಹೇಳುತ್ತಾನೆ. ಅದರ ಭಾವನೆಯನ್ನು ವಿಸ್ತರಿಸಿ ಇಡೀ ಬ್ರಹ್ಮಾಂಡವೇ ಹೇಗೆ ಯಜ್ಞದ ಭಾವನೆಯ ಮೇಲೆ ನಿಂತಿದೆ ಎಂಬುದನ್ನು ವಿವರಿಸುವನು.
“ಪ್ರಜಾಪತಿ ಯಜ್ಞಗಳೊಂದಿಗೆ ಪ್ರಜೆಗಳನ್ನು ಸೃಷ್ಟಿಸಿ, ಪ್ರಜೆಗಳಿಗೆ ನೀವು ಯಜ್ಞದಿಂದ ವೃದ್ಧಿಯಾಗಿ, ಅದು ನಿಮ್ಮ ಬಯಕೆಗಳನ್ನು ಈಡೇರಿಸುವ ಕಾಮಧೇನುವಾಗಲಿ” (iii, ೧೦) ಎನ್ನುವನು. ಸೃಷ್ಟಿಯ ಆದಿಯಲ್ಲಿ ಭಗವಂತನು ಜೀವರನ್ನು ಸೃಷ್ಟಿಸುವಾಗಲೇ ಯಜ್ಞವನ್ನು ಸೃಷ್ಟಿಸಿದನು, ಎಂದು ಹೇಳಿದೆ. ನಾವು ಬೆಳೆಯಬೇಕು, ವೃದ್ಧಿಯಾಗಬೇಕು. ಹಾಗೆ ಆಗಬೇಕಾ ದರೆ ಒಂದು ಮಾರ್ಗವನ್ನು ತೋರುತ್ತಾನೆ. ಆ ಭಾವನೆಯೇ ಯಜ್ಞದ ಭಾವನೆಯನ್ನು ನಮ್ಮ ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಪಾಲಿನ ಕರ್ತವ್ಯಗಳನ್ನು ಮಾಡುವುದು. ಆಗ ಯಾವ ವ್ಯಕ್ತಿ ಯಾಗಲೀ, ವ್ಯಕ್ತಿಗಳ ಸಮುದಾಯದ ಸಮಾಜವಾಗಲೀ ಅಭಿವೃದ್ಧಿಯಾಗುವುದು. ಅದನ್ನು ಪ್ರಪಂಚದಲ್ಲಿ ಯಾವುದೂ ನಿರ್ನಾಮ ಮಾಡುವುದಕ್ಕೆ ಆಗುವುದಿಲ್ಲ. ಒಂದು ಜನಾಂಗದ ಶಕ್ತಿಕೇಂದ್ರವೇ ಈ ಯಜ್ಞದ ಭಾವನೆಯಲ್ಲಿದೆ. ಎಲ್ಲಿ ಇದು ಮಾಯವಾಗಿದೆಯೋ ಅಲ್ಲಿ ಆ ಜನಾಂಗವನ್ನು ರಕ್ಷಿಸಲು ಬೇಕಾದಷ್ಟು ಸೇನೆ ಇದ್ದರೂ ಅದು ಬಹು ಬೇಗ ನಾಶವಾಗುವುದು. ನಾವು ಯಾವುದನ್ನು ಸನಾತನ ಧರ್ಮ ಎನ್ನುವೆವೊ ಅದರಲ್ಲಿ ಈ ಶಕ್ತಿ ಸುಪ್ತವಾಗಿದೆ. ಅದು ನಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಕಾಮಧೇನುವಾಗುವುದು.
ಯಜ್ಞದೃಷ್ಟಿ ನಮಗೆ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನೆಲ್ಲಾ ಕೊಡಬಲ್ಲದು. ಪ್ರಪಂಚವನ್ನು ಅನುಭವಿಸಬೇಕೆಂಬ ಆಸೆ ಇರುವವನಿಗೆ ಅದನ್ನು ಅನುಭವಿಸಬೇಡ ಎನ್ನುವುದಿಲ್ಲ, ಯಾವ ರೀತಿ ಅನುಭವಿಸಬೇಕೊ ಅದರ ಮರ್ಮವನ್ನು ತಿಳಿದುಕೊಂಡು ಅನುಭವಿಸು ಎನ್ನುವುದು. ಮಾನವನಲ್ಲಿ ಕಾಮಾಸಕ್ತಿ ಮತ್ತು ಅಧಿಕಾರಾಸಕ್ತಿ ಎಂಬ ಎರಡು ಪ್ರಬಲ ವಾಸನೆಗಳಿವೆ. ಅದನ್ನು ನಿಗ್ರಹಿಸು ಎನ್ನುವ ಬದಲು ಅನುಭವಿಸುವ ದೃಷ್ಟಿಯನ್ನು ಬದಲಾಯಿಸು ಎನ್ನುವುದು, ನಮ್ಮ ಕಾಮಾಸಕ್ತಿಯನ್ನು ತೃಪ್ತಿಪಡಿಸಿಕೊಳ್ಳಲು ಯಾರು ಯಾರನ್ನೋ ಕೂಡಿಕೊಂಡು ಮೃಗೀಯ ತೃಷ್ಣೆಗಳನ್ನು ತೃಪ್ತಿಪಡಿಸಿಕೊಂಡು ಹಲವು ರೋಗರುಜಿನಗಳಿಗೆ ತುತ್ತಾಗಿ ಸಮಾಜ ಘಾತುಕನಾಗುವ ಬದಲು, ಅಗ್ನಿಸಾಕ್ಷಿಯಾಗಿ ಪುರುಷ ಒಬ್ಬ ಸ್ತ್ರೀಯನ್ನು ವರಿಸಿ ಗೌರವದಿಂದ ಸಂಸಾರವನ್ನು ಸಾಗಿಸುವುದು ಉದ್ಧಾರವಾಗುವ ಹಾದಿ. ಇದರಿಂದ ನಮ್ಮ ಬಯಕೆಗಳು ತೃಪ್ತಿಯಾಗಿ ಕ್ರಮೇಣ ನಮ್ಮ ಸ್ವಾರ್ಥ ಕೂಡ ಕಡಿಮೆಯಾಗಲು ಸಹಾಯವಾಗುವುದು. ಇದರಂತೆಯೇ ಅಧಿಕಾರಲಾಲಸೆ. ಯಾರಲ್ಲಿ ಈ ಬಯಕೆ ಇದೆಯೋ ಅವರು ಬೇಕಾದರೆ ಅದನ್ನು ತೃಪ್ತಿಪಡಿಸಿಕೊಳ್ಳಲಿ. ಅಧಿಕಾರವನ್ನು ನ್ಯಾಯವಾಗಿ ಸಂಪಾದಿಸಲಿ. ಅದರಿಂದ ಇತರರಿಗೆ ಒಳ್ಳೆಯದನ್ನು ಮಾಡಲಿ. ಅಧಿಕಾರವನ್ನು ಪಡೆಯುವುದು ಭೋಗಕ್ಕಲ್ಲ, ಅದೊಂದು ದೊಡ್ಡ ಜವಾಬ್ದಾರಿಯೆಂದು ಅರಿತು ಕೆಲಸ ಮಾಡಲಿ. ಆಗ ಅವರು ಮಾಡುವ ಕೆಲಸ ಒಂದು ಯಜ್ಞವಾಗುವುದು. ಅದರಂತೆಯೇ ದ್ರವ್ಯವನ್ನು ಆರ್ಜಿಸಬೇಕೆಂಬ ಆಸೆ ಹಲವರಲ್ಲಿದೆ. ಅದನ್ನು ಯೋಗ್ಯವಾದ ರೀತಿಯಲ್ಲಿ ಸಂಪಾದಿಸಲಿ, ಯೋಗ್ಯವಾದ ರೀತಿಯಲ್ಲಿ ವೆಚ್ಚಮಾಡಲಿ. ಆಗ ಅದೊಂದು ದ್ರವ್ಯಯಜ್ಞವಾಗುವುದು. ನಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಯಜ್ಞದೃಷ್ಟಿಯಿಂದ ಮಾಡಿದರೆ ಸಮಾಜ ಭದ್ರವಾಗುವುದು. ಎಲ್ಲಾ ಧರ್ಮಗಳು ಅಲ್ಲಿ ಹುಲುಸಾಗಿ ಬೆಳೆಯಲು ಸಾಧ್ಯವಾಗುವುದು. ಯಜ್ಞದೃಷ್ಟಿಯಿಂದ ಕೆಲಸ ಮಾಡಿದರೆ ಜ್ಞಾನ ಬರುವುದು, ಕೊನೆಗೆ ಅದರಿಂದ ಮುಕ್ತಿಯೂ ಲಭಿಸುವುದು. ಮಾನವನಿಗೆ ಬೇಕಾದುದೆಲ್ಲಾ ಇದರಿಂದ ಲಭಿಸುವುದು.
“ನೀವು ಯಜ್ಞದ ಮೂಲಕ ದೇವರನ್ನು ತೃಪ್ತಿಪಡಿಸಿದರೆ, ಆ ದೇವತೆಗಳು ನಿಮ್ಮನ್ನು ಪೋಷಿಸುವರು. ಪರಸ್ಪರ ಭಾವನೆ ಇದ್ದರೆ ಪರಮ ಶ್ರೇಯಸ್ಸು ಲಭಿಸುವುದು. ಯಜ್ಞದಿಂದ ತೃಪ್ತರಾದ ದೇವತೆಗಳು ನಿಮಗೆ ಇಷ್ಟವಾದ ಭೋಗಗಳನ್ನು ಕರುಣಿಸುವರು. ಅವರಿಂದ ಅನುಗ್ರಹಿಸಲ್ಪಟ್ಟ ಭೋಗವನ್ನು ಅವರಿಗೆ ಕೊಡದೆ ಯಾರು ತಾವೇ ಅನುಭವಿಸುವರೋ ಅವರು ಕಳ್ಳರು.” (iii, ೧೧, ೧೨)
ನಾವು ದೇವರನ್ನು ಏನು ಕೇಳುತ್ತೇವೆಯೋ ಅವನು ಅದನ್ನು ನಮಗೆ ಕೊಡುವನು. ಆದರೆ ಅವನನ್ನು ಯಜ್ಞದ ಮೂಲಕ ಕೇಳಬೇಕು. ಅವನಿಗೆ ಒಂದು ರೀತಿಯಿಂದ ಕೊಟ್ಟು ಕೇಳಬೇಕು. ಹಾಗೆಯೇ ಕೇಳುವುದಲ್ಲ. ನಮ್ಮಂತಹ ಬಡ ಮಾನವರು ಭಗವಂತನಿಗೆ ಕೊಡುವುದಾದರೂ ಏನಿದೆ ಎಂದು ಭಾವಿಸಬಹುದು. ಆದರೆ ನಮ್ಮಲ್ಲಿರುವ ಯಾವ ಅಲ್ಪವನ್ನು ಕೊಡುವೆವೋ ಅವನು ಅದನ್ನು ಸ್ವೀಕರಿಸುವನು. ಬಡ ವಿದುರ ಕುಡಿಕೆ ಹಾಲನ್ನು ಕೊಡಲಿಲ್ಲವೆ? ಕುಚೇಲನು ಕೊಟ್ಟ ಒಂದು ಹಿಡಿ ಒಣ ಅವಲಕ್ಕಿಯನ್ನು ಅವನು ಸ್ವೀಕರಿಸಲಿಲ್ಲವೆ? ನಾವು ಕೊಡುವಾಗ ನಮ್ಮಲ್ಲಿರುವ ಅಲ್ಪಕ್ಕಾಗಿ ನಾವು ನಾಚಬೇಕಾಗಿಲ್ಲ. ನಾವು ಏನನ್ನು ಕೊಟ್ಟರೂ ಅವನು ಸ್ವೀಕರಿಸುವನು. ಸ್ವೀಕರಿಸಿ ಆದಮೇಲೆ ಅದನ್ನು ಮತ್ತೂ ಹೆಚ್ಚು ಮಾಡಿಕೊಡುವನು. ಹಾಗೆಯೇ ಅವನು ನಮಗೆ ಕೊಡುವಾಗ ಅದನ್ನು ಪುನಃ ಅವನಿಗೆ ಅರ್ಪಿಸಿ ನಾವು ತೆಗೆದುಕೊಳ್ಳಬೇಕು. ಇಲ್ಲದೇ ಇದ್ದರೆ ನಾವು ಕಳ್ಳರಾಗುತ್ತೇವೆ, ಎನ್ನವನು ಶ್ರೀ ಕೃಷ್ಣ. (iii, ೧೩) ಯಜ್ಞದ ಮೂಲಕ ಕೇಳಿ, ಯಜ್ಞದ ಮೂಲಕ ಅನುಭವಿಸಿ, ಎನ್ನುವನು.
ಸೃಷ್ಟಿಚಕ್ರ ನಿಂತಿರುವುದೇ ಯಜ್ಞದ ಆಧಾರದ ಮೇಲೆ ಎಂಬುದನ್ನು ಶ್ರೀಕೃಷ್ಣ ಸುಂದರವಾಗಿ ವಿವರಿಸುವನು. “ಅನ್ನದಿಂದ ಪ್ರಾಣಿಗಳು ಉತ್ಪನ್ನವಾಗುತ್ತವೆ. ಮಳೆಯಿಂದ ಅನ್ನ ಉಂಟಾಗುವುದು. ಯಜ್ಞದಿಂದ ಮಳೆಯಾಗುವುದು. ಕರ್ಮದಿಂದ ಯಜ್ಞವಾಗುವುದು. ಕರ್ಮ ಬ್ರಹ್ಮದಿಂದಾಗುವುದು. ಬ್ರಹ್ಮ ಅಕ್ಷರದಿಂದ ಉದ್ಭವಿಸುವುದು. ಆದಕಾರಣ ಸರ್ವ ವ್ಯಾಪಿಯಾದ ಬ್ರಹ್ಮ ಸದಾ ಯಜ್ಞದಲ್ಲಿ ಪ್ರತಿಷ್ಠಿತವಾಗಿರುವುದು. ಈ ರೀತಿ ಪ್ರವರ್ತಿಸಲ್ಪಟ್ಟ ಜಗಚ್ಚಕ್ರವನ್ನು ಯಾರು ಅನುಸರಿಸುವುದಿಲ್ಲವೋ ಅವರು ಪಾಪಾಯುಗಳೂ ಇಂದ್ರಿಯಾ ರಾಮರೂ ಆಗಿ ಅವರ ಬಾಳು ವ್ಯರ್ಥವಾಗುವುದು. (iii, ೧೪, ೧೫, ೧೬)
ನಾವು ಎಂದು ಭೂಮಿಗೆ ಬರುತ್ತೇವೆಯೋ ಅಂದಿನಿಂದ ಇಡೀ ಬ್ರಹ್ಮಾಂಡ ಒಂದಲ್ಲ ಒಂದು ರೀತಿಯಲ್ಲಿ ಕೊಡುತ್ತಿದೆ. ಅದು ಕೊಟ್ಟದ್ದನ್ನು ತಿಂದು ನಾವು ಬೆಳೆಯುತ್ತಿರುವೆವು. ಪಂಚಭೂತಗಳೂ, ಎಲ್ಲಾ ಬಗೆಯ ಜೀವಜಂತುಗಳೂ ಸಹಾಯ ಮಾಡುತ್ತಿವೆ. ನಾವು ಅವರಿಂದ ತೆಗೆದುಕೊಳ್ಳುವುದು ಒಂದು ಸಾಲವನ್ನು ಮಾಡಿದಂತೆ. ಆ ಸಾಲವನ್ನು ನಾವು ಸಾಧ್ಯವಾದಷ್ಟು ತೀರಿಸಬೇಕು. ಆದಕಾರಣವೇ ನಮ್ಮ ಪೂರ್ವಿಕರೂ, ಪ್ರತಿಯೊಬ್ಬ ಹಿಂದುವೂ, ಪಂಚಯಜ್ಞಗಳನ್ನು ಮಾಡಬೇಕು ಎನ್ನುತ್ತಿದ್ದರು. ಅದೇ ದೇವಯಜ್ಞ, ಋಷಿಯಜ್ಞ, ಪಿತೃಯಜ್ಞ, ನೃಯಜ್ಞ, ಭೂತಯಜ್ಞ. ಎಂದು ನಾವು ಯಜ್ಞದೃಷ್ಟಿಯನ್ನು ಮರೆಯುವೆವೊ, ಕೇವಲ ಸ್ವಾರ್ಥಕ್ಕಾಗಿ ಬಾಳುವೆವೊ ಆ ಬಾಳು ಶೋಚನೀಯ, ವ್ಯರ್ಥ.
ಈ ಸೃಷ್ಟಿ ನಿಂತಿರುವುದೇ ಯಜ್ಞದ ಆಧಾರದ ಮೇಲೆ. ಈ ವಿರಾಟ್ ಯಜ್ಞಕ್ಕೆ ಎಲ್ಲರೂ ಅರ್ಪಣೆ ಮಾಡಬೇಕಾಗಿದೆ. ಯಾರಲ್ಲಿ ಯಾವ ವಿಧವಾದ ಒಳ್ಳೆಯದು ಇದೆಯೋ ಅದನ್ನು ಇತರರ ಸೇವೆಗೆ ನೀಡಬೇಕು. ಹಲವು ವಿಧದ ಯಜ್ಞಗಳಿವೆ ಎಂದು ಶ್ರೀಕೃಷ್ಣ ಹೇಳುತ್ತಾನೆ. “ಕೆಲವರು ದ್ರವ್ಯದಾನ ರೂಪದ ಯಜ್ಞವನ್ನು ಮಾಡುತ್ತಾರೆ. ತಪೋರೂಪವಾದ ಯಜ್ಞವನ್ನು ಕೆಲವರು ಮಾಡುತ್ತಾರೆ. ಸ್ವಾಧ್ಯಾಯ ಮತ್ತು ಜ್ಞಾನರೂಪದ ಯಜ್ಞವನ್ನು ಕೆಲವರು ಮಾಡು ತ್ತಾರೆ. ಇವರೆಲ್ಲರೂ ದೃಢವ್ರತರಾದ ಯತಿಗಳು” (iv.೨೮).
ನಾವು ಏನನ್ನು ಕೊಡುತ್ತೇವೆಯೋ ಅದಲ್ಲ ಮುಖ್ಯ. ಅದನ್ನು ಯಾವ ದೃಷ್ಟಿಯಿಂದ ಕೊಡುತ್ತೇವೆ ಎಂಬುದನ್ನು ನೋಡಬೇಕು. ನಾವು ಯಜ್ಞದೃಷ್ಟಿಯಿಂದ ಕೇವಲ ಲೌಕಿಕವಸ್ತುವನ್ನೇ ಇತರರಿಗೆ ನೀಡಬಹುದು. ಆದರೂ ಅದರಿಂದ ಪರಮಜ್ಞಾನ ಪ್ರಾಪ್ತವಾಗುವುದು. ಶ್ರೀಕೃಷ್ಣ ಗೀತೆಯಲ್ಲಿ “ಎಲ್ಲಾ ಕರ್ಮಗಳೂ ಜ್ಞಾನದಲ್ಲಿ ಪರಿಸಮಾಪ್ತವಾಗುತ್ತವೆ” (iv,೩೩) ಎಂದು ಹೇಳುತ್ತಾನೆ. ಶ್ರೇಷ್ಠವಾದ ಆಧ್ಯಾತ್ಮಿಕ ವಸ್ತುವನ್ನು ಕೊಟ್ಟರೆ ನಮ್ಮ ಜೀವನದ ಮೇಲೆ ಯಾವ ಪರಿಣಾಮ ಉಂಟಾಗುವುದೋ ಅದೇ ಪರಿಣಾಮ ಯಜ್ಞದೃಷ್ಟಿಯಿಂದ ರೋಗಿಗೆ ಔಷಧ ಕೊಡುವುದರಿಂದ, ನಿರ್ಗತಿಕನಿಗೆ ಅನ್ನ ಕೊಡುವುದರಿಂದ, ನಿರಕ್ಷರಸ್ಥನಿಗೆ ವಿದ್ಯೆ ಕೊಡುವುದರಿಂದ ಪ್ರಾಪ್ತವಾಗುವುದು.
“ಯಜ್ಞಕ್ಕೋಸ್ಕರ ಮಾಡದೇ ಇರುವ ಕರ್ಮಗಳು ನಮ್ಮನ್ನು ಬಂಧಿಸುವುವು” (iii, ೫). ಯಾವಾಗ ಯಜ್ಞಭಾವನೆಯನ್ನು ಮರೆಯುತ್ತೇವೆಯೋ ಆಗ ನಾವು ಪ್ರಪಂಚದಲ್ಲಿ ಒಳ್ಳೆಯ ಕೆಲಸವನ್ನೇ ಮಾಡುತ್ತಿರಬಹುದು, ವೇದಾಂತ ವಿಷಯಗಳನ್ನೇ ಇತರರಿಗೆ ಬೋಧಿಸುತ್ತಿರಬಹುದು, ಆದರೂ ಕೀರ್ತಿ ಮುಂತಾದ ಪಿಶಾಚಿಗಳು ನಮ್ಮನ್ನು ಮೆಟ್ಟುವುವು. ಆದಕಾರಣ ಒಳ್ಳೆಯ ಕೆಲಸ ಮಾಡುವುದು, ಒಳ್ಳೆಯ ವಿಷಯಗಳನ್ನು ಇತರರಿಗೆ ಹೇಳುವುದು— ಇವೇ ದೊಡ್ಡದಲ್ಲ. ಯಾವ ದೃಷ್ಟಿಯಿಂದ ಅದನ್ನು ಮಾಡುತ್ತಿರುವೆವು ಎಂಬುದನ್ನು ಗಮನಿಸಬೇಕು.
“ಅಮೃತವೆಂಬ ಹೆಸರುಳ್ಳ ಯಜ್ಞಶೇಷವನ್ನು ಯಾರು ಸೇವಿಸುವರೋ ಅವರು ಸನಾತನವಾದ ಬ್ರಹ್ಮವನ್ನು ಹೊಂದುತ್ತಾರೆ” (iv, ೩೧). ನಮ್ಮ ಪಾಲಿಗೆ ಯಾವ ಕರ್ತವ್ಯವೆ ಬರಲಿ, ಬರುವ ಫಲ ಭಗವಂತನಿಗೆ ಅರ್ಪಿತವಾಗಲಿ ಎಂದು ಮಾಡಿದರೆ ಅದೊಂದು ಯಜ್ಞವಾಗುವುದು. ಕೊನೆಗೆ ಏನು ಉಳಿಯುವುದೋ ಅದನ್ನು ಒಂದು ಪ್ರಸಾದದಂತೆ ಸ್ವೀಕರಿಸಿದರೆ ಅದೇ ಅಮೃತವಾಗಿ ನಮ್ಮನ್ನು ಸನಾತನ ಬ್ರಹ್ಮಸ್ಥಿತಿಗೆ ಒಯ್ಯುವುದು.
“ಯಜ್ಞ ಮಾಡದವನಿಗೆ ಇಹದಲ್ಲೇ ಸುಖವಿಲ್ಲ. ಇನ್ನು ಪರದಲ್ಲಿ ಹೇಗೆ ಸುಖ ಪ್ರಾಪ್ತ ವಾದೀತು” (iv, ೩೧). ಈ ಪ್ರಪಂಚದಲ್ಲಿ ನಾವು ಸುಖವಾಗಿರಬೇಕಾದರೆ ಕೊಟ್ಟು ತೆಗೆದು ಕೊಳ್ಳಬೇಕು. ಸಾಧ್ಯವಾದಷ್ಟು ಹೆಚ್ಚನ್ನು ಕೊಟ್ಟು ಸಾಧ್ಯವಾದಷ್ಟು ಕಡಿಮೆಯನ್ನು ಸ್ವೀಕರಿಸುವುದೇ ಆನಂದದ ಮೂಲ. ಎಲ್ಲಿ ನಾವು ಕೊಡುವಾಗ ಗೊಣಗಾಡುವೆವೋ, ವಿಧಿಯಿಲ್ಲದೆ ಬಂದಾಗ ಸಾಧ್ಯವಾದಷ್ಟು ಕಡಿಮೆ ಕೊಡುವೆವೋ ಅದಕ್ಕಿಂತ ಹೆಚ್ಚನ್ನು ನಿರೀಕ್ಷಿಸುವೆವೋ ಆಗ ನಮಗೆ ದುಃಖ ತಪ್ಪಿದ್ದಲ್ಲ. “ನೀನು ಏನು ಕೆಲಸ ಮಾಡುತ್ತೀಯೊ, ಏನು ಊಟ ಮಾಡುತ್ತೀಯೊ, ಯಾವ ಯಜ್ಞವನ್ನು ಮಾಡುತ್ತೀಯೊ, ಯಾವ ದಾನವನ್ನು ಮಾಡುತ್ತೀಯೊ, ಯಾವ ತಪಸ್ಸನ್ನು ಮಾಡುತ್ತೀಯೋ ಅದನ್ನೆಲ್ಲಾ ನನಗೆ ಅರ್ಪಣೆ ಮಾಡು” (ix, ೨೭) ಎನ್ನುವನು ಶ್ರೀಕೃಷ್ಣ. ಈ ಅರ್ಪಿತ ಭಾವವನ್ನೇ ಯಜ್ಞವೆಂದು ಹೇಳುವುದು. ಸೃಷ್ಟಿ ನಿಂತಿರುವುದೇ ಈ ಯಜ್ಞದ ಆಧಾರದ ಮೇಲೆ. ವ್ಯಷ್ಟಿ ಸಮಷ್ಟಿಗೆ ತನ್ನನ್ನು ತಿಳಿದೋ ತಿಳಿಯದೆಯೋ ಪ್ರಯತ್ನಪೂರ್ವಕವಾಗಿಯೋ, ಬಲಾತ್ಕಾರವಾಗಿಯೋ ಧಾರೆ ಎರೆದುಕೊಳ್ಳುತ್ತಿದೆ. ಸಮಷ್ಟಿ ವ್ಯಷ್ಟಿಯ ಬೆಳವಣಿಗೆಗೆ ಏನು ಬೇಕೋ ಅದನ್ನು ನೀಡುತ್ತದೆ. ಕೇಳಿಸಿಕೊಂಡು ಸಮಷ್ಟಿ ವ್ಯಷ್ಟಿಗೆ ಅದನ್ನು ಕೊಡುವುದಿಲ್ಲ. ಕೇಳಿಸಿಕೊಳ್ಳದೆ ಅದನ್ನು ಕೊಡುವುದು. ನಾನು ಕೊಡಬೇಕಾಗಿರುವುದನ್ನು ಕೊಟ್ಟರೆ ನನಗೆ ಬರಬೇಕಾಗಿರುವುದು ಬಂದೇ ಬರುವುದು. ಇದು ಜೀವನದ ಗಾಢ ನಿಯಮ.
ಕೊಡುವುದರ ಮೇಲೆ ಜಗತ್ತು ನಿಂತಿದೆ. ಕೆಲವರು ತಿಳಿದು ಕೊಡುತ್ತಿರುವರು. ಮತ್ತೆ ಕೆಲವರು ತಿಳಿಯದೆ ಕೊಡುತ್ತಿರುವರು. ಕೆಲವರು ಸಂತೋಷದಿಂದ ಕೊಡುತ್ತಿರುವರು. ಕೆಲವರು ಅಯ್ಯೋ! ಕೊಡಬೇಕಲ್ಲಾ ಎಂದು ಗೊಣಗಾಡಿಕೊಂಡು ಕೊಡುತ್ತಿರುವರು. ಅಂತೂ ನಾವು ಕೊಡಬೇಕಾಗಿರುವುದನ್ನು ದೇವರು ವಸೂಲಿ ಮಾಡಿಯೇ ಮಾಡುವನು. ಅವನಿಗೆ ವಸೂಲಿ ಮಾಡುವುದಕ್ಕೆ ಹಲವು ಮಾರ್ಗಗಳಿವೆ. ದಾನಕ್ಕೆ ಕೊಡದೇ ಇದ್ದರೆ ದಂಡಕ್ಕೆ ಕೊಡಬೇಕಾ ಗುವುದು. ರೋಗ, ನಷ್ಟ, ಅತ್ಯಾಸೆ, ಕೋರ್ಟು, ಕಚೇರಿ, ಕಳ್ಳಕಾಕರು ಇವುಗಳ ಮೂಲಕ ತನಗೆ ಬರಬೇಕಾಗಿರುವುದನ್ನು ವಸೂಲಿ ಮಾಡಿಯೇ ಮಾಡುವನು. ನಗುತ್ತಾ ಕೊಡು, ಕೊಟ್ಟು ಉದ್ಧಾರವಾಗು, ಕೊಟ್ಟು ಶಾಂತಿ ಹೊಂದು ಎನ್ನುವುದು ಯಜ್ಞದೃಷ್ಟಿ.
ಬ್ರಹ್ಮಾಂಡವನ್ನು ನೋಡಲಿ, ಪಿಂಡಾಂಡವನ್ನು ನೋಡಲಿ, ಎಲ್ಲಾ ಮತ್ತೊಂದಕ್ಕೆ ದುಡಿ ಯುವುದು ಕಾಣುವುದು. ಸೂರ್ಯ ತನಗಾಗಿ ಕಾಂತಿಯನ್ನು ಶಾಖವನ್ನು ಚೆಲ್ಲುತ್ತಿಲ್ಲ. ಭೂಮಿಗಾಗಿ, ಇತರ ಗ್ರಹಗಳಿಗಾಗಿ ಅದನ್ನು ಕೊಡುತ್ತಿರುವನು. ಚಂದ್ರ ತನಗಾಗಿ ಸುತ್ತುತ್ತಿಲ್ಲ. ಭೂಮಿಗಾಗಿ ಸುತ್ತುತ್ತಿರುವನು. ಭೂಮಿ ಕೂಡ ತನಗಾಗಿ ಸೂರ್ಯನ ಸುತ್ತ ಸುತ್ತುತ್ತಿಲ್ಲ. ಅಲ್ಲಿರುವ ಪ್ರಾಣಿವರ್ಗಕ್ಕಾಗಿ ಹಗಲು ರಾತ್ರಿಗಳಾಗಲೆಂದು ಸೂರ್ಯನ ಸುತ್ತಲೂ ಪ್ರದಕ್ಷಿಣೆ ಮಾಡುತ್ತಿದೆ. ಅನೇಕ ಖನಿಜ ಸಂಪತ್ತುಗಳು ಎಣ್ಣೆ ಮಂತಾದುವುಗಳನ್ನು ಭೂಮಿ ತನಗಾಗಿ ತನ್ನ ಗರ್ಭದಲ್ಲಿ ಹುದುಗಿಸಿಟ್ಟುಕೊಂಡಿಲ್ಲ. ಮುಂದೆ ಬರುವ ಮಾನವರಿಗಾಗಿ ಇಟ್ಟಿದೆ. ಭೂಮಿಯ ಮೇಲಿರುವ ಬೆಟ್ಟ ತನಗಾಗಿ ಇಲ್ಲ, ನದಿ ತನಗಾಗಿ ಹರಿಯುತ್ತಿಲ್ಲ, ಗಿಡಮರಗಳು ಕೇವಲ ತಮಗಾಗಿ ಹೂ ಹಣ್ಣನ್ನು ಬಿಡುತ್ತಿಲ್ಲ, ಎಲ್ಲ ಇತರರ ಸೌಕರ್ಯಕ್ಕಾಗಿ ಬಾಳುತ್ತಿವೆ.
ನಮ್ಮ ದೇಹದಲ್ಲಿಯೂ ಒಂದು ಮತ್ತೊಂದಕ್ಕೆ ವ್ಯಷ್ಟಿ ಸಮಷ್ಟಿಗೆ ಕೆಲಸ ಮಾಡುವುದನ್ನು ನೋಡುತ್ತೇವೆ. ಹೃದಯ ತನ್ನೆಡೆಗೆ ಬರುವ ರಕ್ತವನ್ನು ಒತ್ತಿ ನಮ್ಮ ದೇಹದ ಭಾಗಗಳಿಗೆಲ್ಲ ಕಳುಹಿಸುವುದು. ಮೂಳೆಯ ಒಳಗಡೆ ರಕ್ತದ ಕಣಗಳು ಹುಟ್ಟಿ ರಕ್ತ ಪ್ರವಾಹವನ್ನು ಸೇರು ವುವು. ದೇಹದ ಹಲವು ಕಡೆಗಳಲ್ಲಿರುವ ಹಲವಾರು ಗ್ರಂಥಿಗಳು ತಮ್ಮ ರಸವನ್ನು ಸಮಷ್ಟಿ ದೇಹದ ರಕ್ಷಣೆಗೆ ಸುರಿಸುತ್ತಿವೆ. ಎಲ್ಲಾ ಅಂಗಾಂಗಗಳು ಒಟ್ಟು ದೇಹಕ್ಕೆ ಕೆಲಸ ಮಾಡುವುವು. ಒಟ್ಟು ದೇಹ ಪ್ರತಿಯೊಂದು ಅಂಗಾಂಗವನ್ನು ಗಮನದಲ್ಲಿಟ್ಟಿರುವುದು.
ಸಮಾಜದಲ್ಲಿಯೂ ಇದೇ ನಿಯಮ ಜಾರಿಯಲ್ಲಿರುವುದನ್ನು ನೋಡುತ್ತೇವೆ. ಪಾಂಡಿತ್ಯ ಅಧಿಕಾರ ಐಶ್ವರ್ಯ ಎಲ್ಲರಿಗೂ ಹಂಚಿ ಹೋಗುವುದಕ್ಕಿಂತ ಮುಂಚೆ ಕೆಲವು ವ್ಯಕ್ತಿಗಳಲ್ಲಿ ಸಂಗ್ರಹವಾಗುವುದು. ಅಲ್ಲಿಂದ ಇತರ ಕಡೆಗೆ ಹರಿದುಹೋಗುವುದು. ಮೇಲಿರುವ ಟ್ಯಾಂಕಿನಿಂದ ಕೆಳಗಿರುವ ಊರಿನ ನಲ್ಲಿಗಳಿಗೆಲ್ಲಾ ನೀರು ಬರುವುದು. ಕೆಳಗೆ ನೀರನ್ನು ಕಳುಹಿಸುವುದಕ್ಕಾಗಿ ಮೇಲೆ ಟ್ಯಾಂಕನ್ನು ಮಾಡಿದ್ದಾರೆ. ಆ ಟ್ಯಾಂಕು ಎಲ್ಲಾ ನೀರು ತನ್ನಲ್ಲೇ ಇರಬೇಕು ಎಂದರೆ ನಾಶವಾಗುವುದು. ಇನ್ನೊಬ್ಬರಿಗೆ ಹಂಚುವುದಕ್ಕಾಗಿ ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿ ದೇವರು ಕೆಲವು ವ್ಯಕ್ತಿಗಳಲ್ಲಿ ಪಾಂಡಿತ್ಯ, ಐಶ್ವರ್ಯ, ಅಧಿಕಾರ ಮುಂತಾದುವನ್ನು ಶೇಖರಿಸಿಡುವನು. ಯಾವಾಗ ವ್ಯಕ್ತಿ ಬರೀ ಶೇಖರಿಸುತ್ತಾ ಹೋಗುವನೋ, ಹಂಚುವುದಿಲ್ಲವೋ ಅವನು ಆಗ ಹಾಳಾಗುತ್ತಾನೆ. ಇತರರಿಗೆ ನೀಡುವುದಕ್ಕಾಗಿ ದೇವರು ನಮ್ಮಲ್ಲೆ ಇಟ್ಟಿದ್ದಾನೆ ಎಂದರಿತು ಅರ್ಪಿತ ಭಾವದಿಂದ ಯಾವಾಗ ಇನ್ನೊಬ್ಬರಿಗೆ ಕೊಡುತ್ತೇವೆಯೋ ಅದೇ ಯಜ್ಞ. ಇದೇ ವ್ಯಕ್ತಿಗೆ ಮತ್ತು ಜನಾಂಗಕ್ಕೆ ಕಲ್ಯಾಣಕಾರಿ. ಗೀತೆಯಲ್ಲಿ ಬರುವ ಒಂದು ಅಮೋಘವಾದ ಭಾವನೆ ಇದು. ಶ್ರೀಕೃಷ್ಣ ಗೀತೆಯಲ್ಲಿ ಇನ್ನು ಏನನ್ನೂ ಹೇಳದೆ ಈ ಯಜ್ಞಭಾವನೆಯೊಂದನ್ನು ಮಾತ್ರ ಕೊಟ್ಟಿದ್ದರೂ ಸಾರ್ಥಕವಾಗುತ್ತಿತ್ತು ಗೀತೆ.
ಚತುರ್ವರ್ಣ
ಶ್ರೀಕೃಷ್ಣ “ಗುಣ ಮತ್ತು ಕರ್ಮಗಳಿಗೆ ತಕ್ಕಂತೆ ಚತುರ್ವರ್ಣ ನನ್ನಿಂದ ಸೃಷ್ಟಿಸಲ್ಪಟ್ಟಿತು” (iv, ೧೩) ಎನ್ನುತ್ತಾನೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವರ್ಣಗಳನ್ನು ದೇವರೇ ಮಾಡಿದನು ಎಂದು ಹೇಳಿದೆ. ಗುಣ ಮತ್ತು ಕರ್ಮಗಳಿಗೆ ಅನುಸಾರವಾಗಿ ಅವರನ್ನು ವಿಭಾಗ ಮಾಡಿರುವೆನು ಎನ್ನುತ್ತಾನೆ. ಶ್ರೀಕೃಷ್ಣ ನಾಲ್ಕು ವರ್ಣಗಳನ್ನು ಕುರಿತು ಹೇಳುತ್ತಿರುವಾಗ ಕೇವಲ ಭರತಖಂಡ ಒಂದನ್ನೇ ತನ್ನ ಮನಸ್ಸಿನಲ್ಲಿಟ್ಟುಕೊಂಡಿಲ್ಲ. ಇಡೀ ವಿಶ್ವದ ದೃಷ್ಟಿಯಿಂದ ಹೇಳುತ್ತಿರುವನು. ಒಂದು ದೇಶ ಚೆನ್ನಾಗಿರಬೇಕಾದರೆ ಅಲ್ಲಿ ನಾಲ್ಕು ಬಗೆಯ ಜನರು ಇರಬೇಕು. ಎಲ್ಲಿ ಪ್ರತಿಯೊಬ್ಬನೂ ತನ್ನ ಪಾಲಿಗೆ ಬಂದ ಕರ್ತವ್ಯವನ್ನು ಮಾಡುವುದಿಲ್ಲವೋ, ಇನ್ನೊಬ್ಬರ ಕರ್ತವ್ಯವನ್ನು ಮಾಡುತ್ತಾನೋ ಆಗಲೆ ವರ್ಣಸಂಕರ ಉಂಟಾಗುವುದು, ದೇಶದಲ್ಲಿ ಅನಾಯಕತೆ ತಲೆದೋರುವುದು. ವರ್ಣವನ್ನು ಗುಣ ಮತ್ತು ಸ್ವಭಾವದ ಮೂಲಕ ನಿರ್ಧರಿಸಬೇಕಾಗಿದೆ ಎಂದಿದ್ದರೂ, ಆಯಾ ವರ್ಣದಲ್ಲಿ ಹುಟ್ಟಿದ ಮಾತ್ರಕ್ಕೆ ಅವನಿಗೆ ಆಯಾ ಸ್ವಭಾವ ಇರಲಿ ಇಲ್ಲದಿರಲಿ ಆ ವರ್ಣಕ್ಕೆ ಸೇರಿದವನೆಂಬ ತಪ್ಪು ಭಾವನೆ ನಮ್ಮಲ್ಲಿ ಬಂದುಹೋಗಿದೆ.
ಭರತಖಂಡದಲ್ಲಿ ಈಗಿರುವ ಯಾವ ಜಾತಿಯನ್ನು ತೆಗೆದುಕೊಂಡರೂ ಅದರಲ್ಲಿ ನಾಲ್ಕು ವರ್ಣದವರು ಇರುವುದನ್ನು ನೋಡುವೆವು. ಒಂದು ಬ್ರಾಹ್ಮಣ ಕುಟುಂಬವನ್ನು ತೆಗೆದು ಕೊಂಡರೆ, ಅಲ್ಲಿ ಒಬ್ಬ ಬ್ರಾಹ್ಮಣನ ವೃತ್ತಿಯನ್ನು ಅನುಸರಿಸಿ ವೇದಾಧ್ಯಯನ ಮುಂತಾದುವನ್ನು ಮಾಡುವನು, ಮತ್ತೊಬ್ಬ ಮಿಲಿಟರಿಗೆ ಸೇರುವನು, ಮೂರನೆಯವನು ಒಂದು ಅಂಗಡಿ ತೆಗೆಯುವನು, ನಾಲ್ಕನೆಯವನು ಯಾವುದೊ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರುವನು. ನಾವು ಯಾವ ವರ್ಣದಲ್ಲಿ ಹುಟ್ಟಿರುವೆವೋ ಅದಲ್ಲ ಮುಖ್ಯ. ನಾವು ಯಾವುದನ್ನು ನಮ್ಮ ಅಭಿರುಚಿ ಮತ್ತು ಯೋಗ್ಯತೆಗೆ ತಕ್ಕಂತೆ ಆರಿಸಿಕೊಳ್ಳುವೆವೋ ಅದು ಮುಖ್ಯ. ಪ್ರತಿಯೊಂದು ವ್ಯಕ್ತಿಗೂ ಒಂದು ಧರ್ಮವಿದೆ. ಯಾವಾಗ ನಾವು ಅದನ್ನು ಸ್ವೀಕರಿಸುತ್ತೇವೆಯೋ ಅದನ್ನು ಅನುಸರಿಸಬೇಕು. ಯಾವ ವೃತ್ತಿಯ ಮೇಲೆ ನನಗೆ ಅಭಿರುಚಿ ಇರುವುದೊ, ಮತ್ತು ಯಾವುದಕ್ಕಾಗಿ ನಾನು ಹಲವು ವರುಷಗಳು ತರಬೇತನ್ನು ತೆಗೆದುಕೊಂಡಿರುವೆನೊ, ಅದನ್ನು ಬಿಡದೆ, ಆ ಮಾರ್ಗದಲ್ಲಿ ಮುಂದುವರಿಯಬೇಕು. ಹಾಗೆ ಮಾಡದೆ ಹೋದರೆ ತಪ್ಪಿತಸ್ಥರಾಗುವೆವು. ಅರ್ಜುನ ಇಲ್ಲಿ ಮಾಡುತ್ತಿರುವ ತಪ್ಪು ಅದೇ. ಅವನು ಕ್ಷತ್ರಿಯನಾಗಿ ಹುಟ್ಟಿದ್ದು ಮಾತ್ರವಲ್ಲ. ಅದು ಗೌಣ. ಅನಂತರ ಅವನು ಕ್ಷತ್ರಿಯನ ವೃತ್ತಿಯಲ್ಲಿ ತರಬೇತನ್ನು ತೆಗೆದುಕೊಂಡಿರುವನು. ದೇಶ ಅವನಿಂದ ಕ್ಷತ್ರಿಯನ ಕೆಲಸವನ್ನು ಒಂದು ಸನ್ನಿವೇಶದಲ್ಲಿ ನಿರೀಕ್ಷಿಸುತ್ತಿದೆ. ಯಾವಾಗ ಅವನು ಆ ಕೆಲಸವನ್ನು ಮಾಡುವುದಿಲ್ಲವೋ ಆಗ ಅವನು ತಪ್ಪಿತಸ್ಥನಾಗುತ್ತಾನೆ.
ಭರತಖಂಡದಲ್ಲಿ ನಾವು ಈಗ ಯಾವುದನ್ನೂ ಅವನ ಹುಟ್ಟಿದ ಜಾತಿಯ ದೃಷ್ಟಿಯಿಂದ ಅಳೆಯಬೇಕಾಗಿಲ್ಲ. ಏಕೆಂದರೆ ಯಾವ ಜಾತಿಯೂ ಶುದ್ಧವಾಗಿಲ್ಲ, ಎಲ್ಲರೂ ಬೇರೆ ಬೇರೆ ವೃತ್ತಿಗಳಿಗೆ ಕೈ ಹಾಕಿರುವರು. ಆದರೆ ನಾವು ಒಂದನ್ನು ಅನುಸರಿಸಬೇಕು, ಯಾವ ವೃತ್ತಿಯನ್ನು ನಾವು ತೆಗೆದುಕೊಂಡಿರುವೆವೊ ಅದಕ್ಕೆ ಒಂದು ಧರ್ಮವಿದೆ. ಆ ಧರ್ಮವನ್ನು ಅನುಸರಿಸಬೇಕು. ಹಾಗೆ ಅನುಸರಿಸುವಾಗ ಒಂದು ವೃತ್ತಿ ಮೇಲಲ್ಲ ಮತ್ತೊಂದು ವೃತ್ತಿ ಕೀಳಲ್ಲ. ಒಂದರಷ್ಟೇ ಮತ್ತೊಂದು ಮುಖ್ಯ ಸಮಷ್ಟಿಯ ದೃಷ್ಟಿಯಿಂದ ನೋಡಿದಾಗ, ಒಂದರಷ್ಟೇ ಮತ್ತೊಂದು ಪವಿತ್ರ ಬ್ರಹ್ಮದೃಷ್ಟಿಯಿಂದ ನೋಡಿದಾಗ, ಬ್ರಹ್ಮನ ಬಾಯಿಂದ ಬ್ರಾಹ್ಮಣರು, ಭುಜದಿಂದ ಕ್ಷತ್ರಿಯರು, ತೊಡೆಯಿಂದ ವೈಶ್ಯರು, ಪಾದಗಳಿಂದ ಶೂದ್ರರೂ ಆಗಿರುವರು ಎಂದು ಪುರುಷಸೂಕ್ತದಲ್ಲಿ ಬರುವುದು. ಆ ಬ್ರಹ್ಮನಲ್ಲಿ ಒಂದು ಕೀಳು, ಮತ್ತೊಂದು ಮೇಲು ಎಂಬ ಭಾವನೆ ಹೇಗೆ ಇದ್ದೀತು? ಒಂದರಷ್ಟೇ ಮತ್ತೊಂದು ಪವಿತ್ರ. ಸಕ್ಕರೆಯಿಂದ ಮಾಡಿದ ಗೊಂಬೆಯಲ್ಲಿ ತಲೆ ತಿನ್ನಲಿ, ತೋಳು ತಿನ್ನಲಿ, ಕಾಲು ತಿನ್ನಲಿ, ಎಲ್ಲಾ ಸಿಹಿಯೇ. ಒಂದು ಹೆಚ್ಚು ಅಲ್ಲ, ಮತ್ತೊಂದು ಕಡಿಮೆ ಅಲ್ಲ. ವರ್ಣ ಮಾನವ ಜೀವನಕ್ಕೆ ಆವಶ್ಯಕ. ಹಳೆಯ ವರ್ಣವನ್ನು ಕಿತ್ತು ಹಾಕಿದರೆ ಹೊಸ ವರ್ಣ ಆ ಸ್ಥಳದಲ್ಲಿ ಹುಟ್ಟಿಕೊಳ್ಳುವುದು. ಒಂದು ವರ್ಣ ಮೇಲು, ಮತ್ತೊಂದು ಕೀಳು ಎಂಬ ಭಾವನೆ ಹೋಗಬೇಕು. ಆಯಾ ವರ್ಣದವರು ಮುಕ್ತರಾಗುವಾಗ ಅಲ್ಲಿಂದಲೇ ನೇರವಾಗಿ ಮುಕ್ತರಾಗುತ್ತಾರೆ. ಅವರು ಬೇರೆ ಬೇರೆ ವರ್ಣಕ್ಕೆ ಪ್ರಮೋಷನ್ ತೆಗೆದುಕೊಂಡು ಮುಕ್ತರಾಗುವುದಿಲ್ಲ.
ಗೀತೆಯಲ್ಲಿ ಬರುವ ಯೋಗಗಳು
ಗೀತೆಯ ಹದಿನೆಂಟು ಅಧ್ಯಾಯಗಳ ಕೊನೆಯಲ್ಲಿಯೂ “ಯೋಗ” ಎಂದು ಹಾಕಿದೆ. ಪ್ರತಿಯೊಂದು ಅಧ್ಯಾಯಕ್ಕೂ ಒಂದೊಂದು ಯೋಗವೆಂದು ಹೆಸರು ಕೊಟ್ಟಿದೆ. ಯೋಗ ಎಂದರೆ ಒಂದುಗೂಡಿಸುವುದು ಎಂದು ಅರ್ಥ. ಯಾವುದು ಜೀವಾತ್ಮನನ್ನು ಪರಮಾತ್ಮನೊಡನೆ ಸೇರಿಸುವುದೋ ಅದು ಯೋಗ. ಈ ದೃಷ್ಟಿಯಿಂದ ಗೀತೆಯಲ್ಲಿ ನಾಲ್ಕು ಮುಖ್ಯ ಯೋಗಗಳಿವೆ. ಅವೇ ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ ಮತ್ತು ಧ್ಯಾನಯೋಗಗಳು. ಇಲ್ಲಿ ಯಾವೊಂದು ಯೋಗವೂ ಪ್ರತ್ಯೇಕವಾಗಿ ಇತರ ಯೋಗಗಳೊಂದಿಗೆ ಸಂಬಂಧವಿಲ್ಲದೆ ಇಲ್ಲ. ಪ್ರತಿಯೊಂದು ಯೋಗದಲ್ಲಿಯೂ ಇತರ ಯೋಗಗಳ ಅಂಶಗಳು ಬೆರೆತಿವೆ. ಆದರೆ ಆಯಾ ಯೋಗದ ಭಾಗ ಜಾಸ್ತಿ ಇರುವುದರಿಂದ ಅದಕ್ಕೆ ಆ ಹೆಸರು ಬಂದಿದೆ.
ಜ್ಞಾನ — ಇದು ಅತಿ ಕಷ್ಟದ ದಾರಿ. ವಿಚಾರ ಪ್ರಧಾನವಾದ ದಾರಿ. ವ್ಯಕ್ತಿ ತನ್ನ ಎದುರಿಗೆ ಇರುವ ದೃಶ್ಯವನ್ನೆಲ್ಲ ವಿಭಜನೆ ಮಾಡಿ ಯಾವುದು ಆತ್ಮವಸ್ತುವೊ ಅದನ್ನು ಮಾತ್ರ ಹಿಡಿದುಕೊಂಡು ಅನಾತ್ಮವಾದ ವಸ್ತುವನ್ನು ತ್ಯಜಿಸಬೇಕಾಗುವುದು. ಇಲ್ಲಿ ದೃಶ್ಯ ಪ್ರಪಂಚವೆಂದರೆ ದೇಹದಿಂದ ಹೊರಗೆ ಇರುವ ವಸ್ತು ಮಾತ್ರವಲ್ಲ; ದೇಹ, ಇಂದ್ರಿಯ, ಮನಸ್ಸು, ಬುದ್ಧಿ, ಅಹಂಕಾರ ಮುಂತಾದುವುಗಳೆಲ್ಲ ಪ್ರಕೃತಿಯೊಳಗೇ ಸೇರಿವೆ. ಆತ್ಮನ ಮೇಲೆ ಈ ಉಪಾಧಿಗಳೆಲ್ಲ ಆರೋಪವಾಗಿವೆ. ನಾವು ಅವುಗಳನ್ನು ಬೇರ್ಪಡಿಸಬೇಕು. ಇದೊಂದು ದೊಡ್ಡ ಸಾಹಸ. ಪ್ರಕೃತಿಯನ್ನು ಚಾಪೆಯಂತೆ ಸುತ್ತಿ ಅತ್ತ ಸರಿಸಬೇಕು. ಇದಕ್ಕೆ ನಮ್ಮ ಚಿತ್ತ ಶುದ್ಧವಾಗಿರಬೇಕು. ಇಂದ್ರಿಯಗಳನ್ನು ಜಯಿಸಬೇಕು, ಬುದ್ಧಿ ಹರಿತವಾಗಿರಬೇಕು. ಆಗ ಮಾತ್ರ ಈ ಹಾದಿಯಲ್ಲಿ ಮುಂದುವರಿದು ಗುರಿಯನ್ನು ಸೇರಬಹುದು. ಇಲ್ಲಿ ತಾನು ಸತ್ಯವನ್ನು ಕಾಣಬೇಕು, ಅದರಲ್ಲಿ ಒಂದಾಗಬೇಕು ಎಂಬುದೊಂದೇ ಮುಖ್ಯ ಉದ್ದೇಶವಾಗಿರಬೇಕು. ಇದಕ್ಕಾಗಿ ಅವನು ಪೂರ್ವಕಲ್ಪಿತ ಅಭಿಪ್ರಾಯಗಳನ್ನೆಲ್ಲ ಬಲಿಕೊಡಬೇಕು. ಸತ್ಯವೆಲ್ಲಿಗೆ ಕೊಂಡೊಯ್ದರೆ ಅಲ್ಲಿಗೆ ಹೋಗಲು ಸಿದ್ಧನಾಗಿರಬೇಕು. ಈ ಮಾರ್ಗ ಕಷ್ಟವಾದರೂ, ಇಲ್ಲಿ ಹೋಗಬಯಸುವವನಿಗೆ ಸಾಕಷ್ಟು ಪ್ರೋತ್ಸಾಹವಿದೆ ಗೀತೆಯಲ್ಲಿ.
ಕರ್ಮ — ಮುಂಚೆ ನಾವು ಕರ್ಮಕ್ಕೂ, ಕರ್ಮಯೋಗಕ್ಕೂ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಕರ್ಮ ಎಂದರೆ ಕೆಲಸ ಮಾಡುವುದು. ಈ ಜೀವನದಲ್ಲಿ ಎಲ್ಲರೂ ಕೆಲಸ ಮಾಡುತ್ತಿರುವರು. ಕೆಲಸ ಮಾಡದೆ ಯಾರೂ ಇಲ್ಲ. ಕೆಲಸ ಮಾಡುವುದು ಮಾಡದೆ ಇರುವುದಕ್ಕಿಂತ ಸುಲಭ. ಅದಕ್ಕಾಗಿ ಅವನು ಕೆಲಸ ಮಾಡುವನು. ಆದರೆ ಆ ಕರ್ಮದಿಂದ ಅನೇಕ ವೇಳೆ ವ್ಯಥೆ ಅನುಭವಿಸುವನು. ಹೇಗೆ ಮಾಡಿದರೆ ಕರ್ಮಬಂಧನದಿಂದ ಪಾರಾಗುತ್ತೇವೆಯೋ ಅದೇ ಕರ್ಮಯೋಗ. ಕರ್ಮಕ್ಕೆ ಎರಡು ಶಕ್ತಿ ಇದೆ. ಒಂದು ರೀತಿ ಮಾಡಿದರೆ ಅದು ನಮ್ಮನ್ನು ಪ್ರಪಂಚಕ್ಕೆ ಕಟ್ಟಿಹಾಕುವುದು, ಮತ್ತೊಂದು ರೀತಿ ಮಾಡಿದರೆ ಅದು ನಮ್ಮನ್ನು ಬಂಧನದಿಂದ ಪಾರು ಮಾಡುವುದು. ರೇಷ್ಮೆಹುಳು ಸುತ್ತಲೂ ಗೂಡನ್ನು ನೆಟ್ಟು ಅದರ ಬಲೆಯೊಳಗೆ ಬೀಳುವುದು. ಅನಂತರ ತಾನೇ ಆ ಗೂಡನ್ನು ಸೀಳಿಕೊಂಡು ಬರುವುದು. ಒಂದು ರೀತಿ ಕರ್ಮ ಮಾಡಿದರೆ ಬಂಧನಕ್ಕೆ ಬೀಳುತ್ತೇವೆ. ಮತ್ತೊಂದು ರೀತಿ ಕರ್ಮ ಮಾಡಿದರೆ ಬಂಧನದಿಂದ ಪಾರಾಗುತ್ತೇವೆ. ಇದನ್ನೇ ಶ್ರೀ ಕೃಷ್ಣ “ಯೋಗಃ ಕರ್ಮಸು ಕೌಶಲಂ” ಎನ್ನುವನು. ಕರ್ಮಕುಶಲಿ ಕರ್ಮಮಾಡಿ ಅದರ ಬಂಧನಕ್ಕೆ ಸಿಕ್ಕದಂತೆ ನೋಡಿಕೊಳ್ಳುತ್ತಾನೆ.
ಶ್ರೀಕೃಷ್ಣ "ಕರ್ಮ ಮಾಡುವುದಕ್ಕೆ ಮಾತ್ರ ನಿನಗೆ ಅಧಿಕಾರ, ಅದರಿಂದ ಬರುವ ಫಲಗಳಿಗಲ್ಲ” (ii, ೪೭) ಎನ್ನುತ್ತಾನೆ. ನಾವು ಬಂಧನಕ್ಕೆ ಬೀಳುವುದಕ್ಕೆಲ್ಲ ಕಾರಣ ಅದರ ಫಲಕ್ಕೆ ಆಸಕ್ತರಾಗಿರುವುದರಿಂದ. ಕರ್ಮಮಾಡುತ್ತೇವೆ, ಅದರಿಂದ ಬರುವ ಹೆಸರು, ಲಾಭ, ಕೀರ್ತಿ— ಇವುಗಳಿಗೆ ಕೈಯೊಡ್ಡುತ್ತೇವೆ. ಅದನ್ನು ತಿಂದಾದಮೇಲೆ ಬಿಟ್ಟುಹೋಗುವುದಕ್ಕೆ ಆಗುವುದಿಲ್ಲ, ನೊಣ ಹಲಸಿನ ಅಂಟಿನಮೇಲೆ ಕುಳಿತಂತಾಗಿ ಅಲ್ಲೆ ಸಾಯುವೆವು ನಾವು. ಹಾಗಾದರೆ ಕರ್ಮವನ್ನು ಹೇಗೆ ಮಾಡಬೇಕು ಎಂದರೆ ಅನಾಸಕ್ತನಾಗಿ ಕರ್ಮಮಾಡು ಎನ್ನುತ್ತಾನೆ. ಯಜ್ಞದೃಷ್ಟಿಯಿಂದ ಕರ್ಮಮಾಡು ಎನ್ನುತ್ತಾನೆ. ಬರುವ ಫಲಗಳನ್ನೆಲ್ಲ ಭಗವಂತನಿಗೆ ಅರ್ಪಿಸಿ ನಿಶ್ಚಿಂತನಾಗಿರು ಎನ್ನುತ್ತಾನೆ. ನಾನು ಕೆಲಸಮಾಡುವವನು ಎಂದು ಭಾವಿಸಬೇಡ, “ನನ್ನ ಕೈಯಲ್ಲಿ ಒಂದು ನಿಮಿತ್ತವಾಗು” (xi, ೩೩) ಎನ್ನುತ್ತಾನೆ ಶ್ರೀಕೃಷ್ಣ. ನಿಜವಾಗಿ ಕೆಲಸಮಾಡುವವನು ದೇವರು. ನಾವು ಅವನ ಕೈಯಲ್ಲಿ ಒಂದು ಯಂತ್ರ. ಯಾವಾಗ ಈ ದೃಷ್ಟಿ ಅವನಲ್ಲಿ ಬರುವುದೊ ಅವನು ಎಂದಿಗೂ ಕೆಟ್ಟ ಕೆಲಸವನ್ನು ಮಾಡಲಾರ.
ನಾವು ಮೂರು ದೃಷ್ಟಿಯಿಂದ ಕೆಲಸ ಮಾಡಬಹುದು. ಒಂದು ತುಂಬಾ ಕೆಳಮಟ್ಟದ್ದು. ಅಲ್ಲಿ ಲಾಭ, ಹೆಸರು, ಕೀರ್ತಿಗಾಗಿ ಕೆಲಸ ಮಾಡುತ್ತಾನೆ. ಇಲ್ಲಿ ಸ್ವಲ್ಪ ಸುಖಪಡುತ್ತಾನೆ. ಅನಂತರ ಅದರಿಂದ ದುಃಖವನ್ನೂ ಪಡುತ್ತಾನೆ. ಅದಕ್ಕಿಂತ ಉತ್ತಮ ಸ್ಥಿತಿಯೇ, ಕರ್ಮ ಮಾಡುವುದರಿಂದ ನನ್ನ ಚಿತ್ತ ಶುದ್ದಿಯಾಗುವುದು, ಅದಕ್ಕಾಗಿ ಮಾಡುತ್ತೇನೆ ಎಂದು ನೋಡು ವುದು. ಮೂರನೆಯದೆ ಒಬ್ಬನ ಚಿತ್ತಶುದ್ಧವಾಗಿದ್ದರೆ, ಅವನು ಲೋಕಸಂಗ್ರಹ ದೃಷ್ಟಿಯಿಂದ ಕೆಲಸಮಾಡುತ್ತಾನೆ, ಲೋಕಕಲ್ಯಾಣವಾಗಲಿ ಎಂದು ಕೆಲಸಮಾಡುತ್ತಾನೆ. ಇವನಿಗೆ ಕೆಲಸ ಮಾಡಿದರೆ ಇದರಿಂದ ಯಾವ ಲಾಭವೂ ಇಲ್ಲ, ಮಾಡದೆ ಇದ್ದರೆ ನಷ್ಟವೂ ಇಲ್ಲ. ಆದರೂ ಸುತ್ತಲೂ ಜನ ಇವನು ಹೇಗೆ ಮಾಡುತ್ತಾನೆಯೋ ಅದನ್ನು ಅನುಸರಿಸುತ್ತಾರೆ. ಶ್ರೇಷ್ಠನು ಯಾವುದನ್ನು ಮಾಡುತ್ತಾನೆಯೋ ಸಾಧಾರಣರು ಆ ಕೆಲಸವನ್ನು ಮಾಡುತ್ತಾರೆ. ಶ್ರೇಷ್ಠನು ಸುಮ್ಮನೆ ಇದ್ದರೆ ಸಾಧಾರಣ ಜನರೂ ಸುಮ್ಮನಿರುತ್ತಾರೆ. ಆದಕಾರಣ ಶ್ರೇಷ್ಠನಾದವನು ತನಗೆ ಅದರಿಂದ ಯಾವ ಲಾಭವಿಲ್ಲದೇ ಇದ್ದರೂ ಇತರರು ತನ್ನನ್ನು ಅನುಕರಿಸಿ ಕಷ್ಟಕ್ಕೆ ಬೀಳುತ್ತಾರೆ ಎಂದು ಯೋಚಿಸಿ ತಾನು ಕರ್ಮಮಾಡಿ ಇತರರ ಕೈಯಿಂದಲೂ ಕರ್ಮಮಾಡಿಸುತ್ತಾನೆ.
ಶ್ರೀಕೃಷ್ಣನೇ ಇದಕ್ಕೆ ಒಂದು ಉದಾಹರಣೆ. ಅವನಿಗೆ ಯಾವ ಅಭಾವವೂ ಇಲ್ಲ, ಆದರೂ ಅವನು ಕರ್ಮದಲ್ಲಿ ನಿರತನಾಗಿರುವನು. ಸಾಧಾರಣ ಕರ್ಮವನ್ನು ಕರ್ಮಯೋಗವನ್ನಾಗಿ ಹೇಗೆ ಮಾರ್ಪಡಿಸುವುದು ಎಂಬುದನ್ನು ಶ್ರೀಕೃಷ್ಣ ಕರ್ಮಯೋಗದಲ್ಲಿ ಬಹಳ ಚೆನ್ನಾಗಿ ವಿವರಿಸುವನು.
ಧ್ಯಾನ — ಧ್ಯಾನ ಎಂದರೆ ಭಗವಂತನ ಮೇಲೆ ಮನಸ್ಸನ್ನು ಏಕಾಗ್ರ ಮಾಡುವುದು. ಮನಸ್ಸಿನ ಏಕಾಗ್ರತೆಗೆ ಅದ್ಭುತವಾದ ಶಕ್ತಿ ಇದೆ. ಅದನ್ನು ಬಾಹ್ಯಪ್ರಪಂಚದ ಮೇಲೆ ಬೀರಿದಾಗ ಅದರ ರಹಸ್ಯವನ್ನು ತಿಳಿದುಕೊಳ್ಳುತ್ತೇವೆ. ವಿಜ್ಞಾನಿ ಭೌತಿಕಪ್ರಪಂಚದಮೇಲೆ ಏಕಾಗ್ರಮಾಡಿ ಅದರಲ್ಲಿ ಇರುವ ನಿಯಮಗಳನ್ನು ಕಂಡುಹಿಡಿದಿರುವನು. ಧ್ಯಾನಿ, ಅದನ್ನು ಅಂತರ್ಮುಖಮಾಡಿ ಭಗವಂತನ ಕಡೆಗೆ ಹರಿಸುವನು. ನದಿ ಹೇಗೆ ಸಾಗರವನ್ನು ಸೇರುವುದೋ ಹಾಗೆ ಅವನಲ್ಲಿ ಒಂದಾಗಲು ಯತ್ನಿಸುವನು.
ಧ್ಯಾನವೆಂದರೆ ಸುಮ್ಮನೆ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳುವುದಲ್ಲ, ಧ್ಯಾನಜೀವನಕ್ಕೆ ಒಂದು ಭದ್ರವಾದ ಶುದ್ಧಚಾರಿತ್ರ್ಯದ ತಳಹದಿ ಇರಬೇಕು. ಆಗ ಮಾತ್ರ ಧ್ಯಾನ ಫಲಕಾರಿ ಆಗುವುದು. ಇಲ್ಲದೇ ಇದ್ದರೆ ಇಲ್ಲ. ಹಲವಾರು ಆಸೆ-ಆಕಾಂಕ್ಷೆಗಳ ಬುದ್ಬುದಗಳು ಮನಸ್ಸಿನಲ್ಲಿ ಏಳುತ್ತಿರುವಾಗ ಅವನು ಭಗವಂತನ ಕಡೆಗೆ ಮನಸ್ಸನ್ನು ಹೇಗೆ ಏಕಾಗ್ರ ಮಾಡಬಲ್ಲ? ಅದೆ ಕಾರಣವೇ ಮೊದಲು ಅವನು ದೇಹ, ಮನಸ್ಸು, ಬುದ್ಧಿ, ಇಂದ್ರಿಯಗಳನ್ನು ನಿಗ್ರಹಿಸಬೇಕು. ಶುದ್ಧಚಾರಿತ್ರ್ಯವೇ ಅಸ್ತಿಭಾರ ಧ್ಯಾನದ ಕಟ್ಟಡವನ್ನು ಕಟ್ಟುವುದಕ್ಕೆ, ಅದಿಲ್ಲದೆ ಪ್ರಯತ್ನಿಸಿದರೆ ಮರಳಮೇಲೆ ಕಟ್ಟಿದ ಮನೆಯಂತಾಗುವುದು.
ಧ್ಯಾನಮಾಡುವುದಕ್ಕೆ ನಿರ್ಜನಪ್ರದೇಶ ಆವಶ್ಯಕ. ಇಲ್ಲದೆ ಇದ್ದರೆ ಬಾಹ್ಯ ಪ್ರಪಂಚದ ಗದ್ದಲ ಮತ್ತು ನೋಟಗಳು ಯೋಗಿಯ ಮನಸ್ಸನ್ನು ಪ್ರಪಂಚದ ಕಡೆಗೆ ಎಳೆಯುವುವು. ಅವನು ಏಕಾಕಿಯಾಗಿರಬೇಕು. ಅವನು ಚಿತ್ತ ಮತ್ತು ಇಂದ್ರಿಯಗಳನ್ನು ನಿಗ್ರಹಿಸಿರಬೇಕು, ಆಶಾರಹಿತನಾಗಿರಬೇಕು, ಅಪರಿಗ್ರಹಿಯಾಗಿರಬೇಕು. ಯಾವಾಗಲೂ ಎಂದರೆ, ಅವನು ಕುಳಿತುಕೊಂಡು ಧ್ಯಾನ ಮಾಡದೇ ಇರುವಾಗಲೂ ಮನಸ್ಸಿನ ಒಂದು ಭಾಗ ಭಗವಂತನನ್ನು ಕುರಿತು ಚಿಂತಿಸುತ್ತಿರಬೇಕು. ಅವನು ಧ್ಯಾನಕ್ಕೆ ಕುಳಿತುಕೊಳ್ಳುವ ಸ್ಥಳ ಶುಚಿಯಾಗಿರಬೇಕು. ಕುಳಿತುಕೊಳ್ಳುವ ಜಾಗ ಸ್ಥಿರವಾಗಿರಬೇಕು. ಅದು ಅತಿ ಮೇಲೂ ಇರಕೂಡದು ಅಥವಾ ಅತಿ ಕೆಳಗೂ ಇರಕೂಡದು. ಕುಶ, ಚರ್ಮ, ಬಟ್ಟೆಯನ್ನು ಹಾಸಿ ಅದರ ಮೇಲೆ ಧ್ಯಾನಕ್ಕೆ ಕುಳಿತುಕೊಳ್ಳಬೇಕು.
ಕುಳಿತುಕೊಳ್ಳುವಾಗ ಶರೀರ, ಶಿರಸ್ಸು ಮತ್ತು ಕತ್ತುಗಳು ನೇರವಾಗಿರಬೇಕು. ಬೆನ್ನಿನ ಮೂಳೆ ಅಥವಾ ತಲೆ ಬಾಗಿದ್ದರೆ ಕ್ರಮೇಣ ನಿದ್ರೆಗೆ ಹೋಗಬೇಕಾಗುವುದು. ಮೂಗಿನ ತುದಿಯನ್ನೇ ನೋಡುತ್ತಾ ದಿಕ್ಕುಗಳನ್ನು ನೋಡದೆ ಪ್ರಶಾಂತಾತ್ಮನೂ, ನಿರ್ಭಯನೂ ಆಗಿ ಬ್ರಹ್ಮಚಾರಿವ್ರತದಲ್ಲಿ ನಿರತನಾಗಿ ಮನಸ್ಸನ್ನು ಸಂಯಮಮಾಡಿ ಪರಮಾತ್ಮನಲ್ಲೇ ಚಿತ್ತವುಳ್ಳವನಾಗಿರಬೇಕು.
ಯೋಗಿಯ ಜೀವನ, “ಮಿತಿಮೀರಿ ತಿನ್ನುವವನಿಗೂ ಅಲ್ಲ. ತಿನ್ನದೆ ಇರುವವನಿಗೂ ಅಲ್ಲ. ಆಹಾರ ವಿಹಾರದಲ್ಲಿ ಮಿತವಾಗಿರಬೇಕು. ಆಗ ಯೋಗವು ದುಃಖನಾಶಕವಾಗುವುದು.”(vi, ೧೭)
ಶ್ರೀಕೃಷ್ಣ ಒಂದು ಮಧ್ಯಮಾರ್ಗವನ್ನು ಹೇಳುವನು. ಒಬ್ಬ ದೇಹಾಸಕ್ತನಾಗಿರಬಾರದು ಮತ್ತು ದೇಹವನ್ನು ನಿರ್ಲಕ್ಷಿಸಲೂ ಕೂಡದು. ದೋಣಿ ಬಲವಾಗಿದ್ದರೆ ನದಿಯನ್ನು ದಾಟಬಹುದು. ಅದು ದುರ್ಬಲವಾಗಿದ್ದರೆ ನದೀಪಾಲಾಗುವೆವು. ಆದರೆ ದೋಣಿಯನ್ನು ಚೆನ್ನಾಗಿ ಇಡುವುದೇ ಗುರಿಯಲ್ಲ. ಅದನ್ನು ಮತ್ತಾವುದೋ ಒಂದು ಉದ್ದೇಶಕ್ಕಾಗಿ ಇಡಬೇಕಾಗಿದೆ.
ಈ ಸಮಯದಲ್ಲಿ ಅರ್ಜುನ ನಮ್ಮ ಪರವಾಗಿಯೋ ಎಂಬಂತೆ ಕೃಷ್ಣನಿಗೆ ಕೆಲವು ಪ್ರಶ್ನೆಗಳನ್ನು ಹಾಕುತ್ತಾನೆ. “ಮನಸ್ಸು ಚಂಚಲವಾದದ್ದು, ಕ್ಷೋಭೆಯನ್ನುಂಟುಮಾಡುವುದು. ಬಲವುಳ್ಳದ್ದು ಮತ್ತು ದೃಢವಾದದ್ದು. ಅದರ ನಿಗ್ರಹ ವಾಯುವಿನಂತೆ ಅತ್ಯಂತ ಕಷ್ಟವೆಂದು ನಾನು ಭಾವಿಸುತ್ತೇನೆ ” (iv, ೩೪) ಎನ್ನುತ್ತಾನೆ.
ಅನೇಕ ವೇಳೆ ಧ್ಯಾನಮಾಡುವುದಕ್ಕೆ ಪ್ರಯತ್ನಿಸಿದಾಗಲೆ ಅದು ಎಂದಿಗಿಂತ ಹೆಚ್ಚು ದಂಗೆ ಏಳುವುದು. ಎಷ್ಟು ಅದನ್ನು ನಿಗ್ರಹಿಸುವುದಕ್ಕೆ ಪ್ರಯತ್ನಪಟ್ಟರೂ ಅದು ನಮ್ಮ ಕೈಗೆ ಸಿಕ್ಕುವುದಿಲ್ಲ. ಪ್ರಯತ್ನಮಾಡಿ ಸೋತುಹೋಗುತ್ತೇವೆ. ಅಂತಹ ಸಮಯದಲ್ಲಿ ಏನು ಮಾಡಬೇಕು ಎಂದು ಅರ್ಜುನ ಕೇಳಿದಾಗ ಶ್ರೀಕೃಷ್ಣ ಹೀಗೆ ಹೇಳುತ್ತಾನೆ.
“ಮನಸ್ಸನ್ನು ನಿಗ್ರಹಿಸುವುದು ಕಷ್ಟ ಮತ್ತು ಅದು ಚಂಚಲವಾದದ್ದು ಎಂಬುದು ನಿಸ್ಸಂಶಯ. ಅಭ್ಯಾಸ ಮತ್ತು ವೈರಾಗ್ಯದಿಂದ ಅದನ್ನು ನಿಗ್ರಹಿಸಬಹುದು.” (iv,೩೬) ಶ್ರೀಕೃಷ್ಣ ಅಭ್ಯಾಸವನ್ನು ಒತ್ತಿ ಹೇಳುತ್ತಾನೆ. ಇದನ್ನೇ ಅಭ್ಯಾಸಯೋಗವೆಂದೂ ಹಲವು ಕಡೆ ಹೇಳಿದ್ದಾನೆ. ಅಭ್ಯಾಸವೆಂದರೆ ಮನಸ್ಸನ್ನು ನಿಗ್ರಹಿಸುವುದಕ್ಕೆ ಪದೇ ಪದೇ ಪ್ರಯತ್ನ ಮಾಡುವುದು. ಒಂದೇ ಸಲ ಅದು ಸಿದ್ಧಿಸುವುದಿಲ್ಲ. ಕೇಳಿಕೇಳಿದ್ದನ್ನೆಲ್ಲಾ ಮನಸ್ಸಿಗೆ ಇದುವರೆಗೆ ಕೊಟ್ಟು ಅದನ್ನು ಮುದ್ದಿಸಿ ಕೂಡಿಸಿರುವೆವು. ಈಗ ಅದು ಕೇಳಿದ್ದನ್ನು ಕೊಡುವುದಿಲ್ಲವೆಂದರೆ ಮೊದಮೊದಲು ಹಟಮಾಡಿಯೇ ಮಾಡುವುದು. ಆದರೆ ಅದಕ್ಕೆ ನಾವು ಬಗ್ಗಕೂಡದು. ಭಂಡರಾಗಿ ಅದಕ್ಕೆ ವಿರೋಧವಾಗಿ ಹೋಗಬೇಕು. ಮೊದಮೊದಲು ಅದು ಗೊಣಗಾಡುವುದು. ಆದರೆ ಯಾವಾಗ ನಾವು ಭಂಡರು ಎನ್ನುವುದು ಗೊತ್ತಾಗುವುದೋ ಆಗ ಅದು ಕ್ರಮೇಣ ಸುಮ್ಮನಾಗುವುದು. ಹೊಸದಾಗಿ ಕುದುರೆಯ ಮೇಲೆ ಕುಳಿತುಕೊಂಡರೆ, ಮೇಲೆ ಕುಳಿತುಕೊಂಡವನನ್ನು ಕುದುರೆ ಕೆಳಗೆ ಉರುಳಿಸಲು ಯತ್ನಿಸುವುದು. ಆದರೆ ಮೇಲೆ ಕುಳಿತವನು ಇಳಿಯದೇ ಇದ್ದರೆ ಅನಂತರ ಅವನು ಹೇಳಿದಂತೆ ಕೇಳುವುದು. ಮನಸ್ಸು ಕೂಡ ಹೀಗೆಯೇ.
ಅರ್ಜುನ ಮತ್ತೊಂದು ಪ್ರಶ್ನೆಯನ್ನು ಕೇಳುತ್ತಾನೆ.
“ಶ್ರದ್ಧಾಯುಕ್ತನಾಗಿದ್ದರೂ (ಸಾಕಷ್ಟು) ಪ್ರಯತ್ನವನ್ನು ಮಾಡದೇ ಇದ್ದರೆ ಯೋಗದಿಂದ ಚಲಿಸಲ್ಪಟ್ಟ ಮನಸ್ಸುಳ್ಳವನಾಗಿ ಯೋಗದಲ್ಲಿ ಸಿದ್ಧಿಯನ್ನು ಪಡೆಯದೆ ಯಾವ ಗತಿಯನ್ನು ಹೊಂದುತ್ತಾನೆ?”
“ಬ್ರಹ್ಮಪ್ರಾಪ್ತಿಯ ಮಾರ್ಗದಲ್ಲಿ ಮುಗ್ಧನೂ ಉಭಯಭ್ರಷ್ಟನೂ ಆಶ್ರಯಹೀನನೂ ತುಂಡಾದ ಮೇಘದಂತೆ ನಾಶವಾಗುವುದಿಲ್ಲವೇ?” (vi, ೩೮, ೩೯)
ಇಲ್ಲಿ ಅರ್ಜುನ ಕೇಳುವ ಪ್ರಶ್ನೆ ನಮ್ಮಲ್ಲಿ ಏಳುವ ಭಾವನೆಯ ಮರುಧ್ವನಿಯಂತೆ ಇದೆ.
ದೇವರ ಕಡೆ ಹೋಗಬೇಕೆಂದು ಇಹಪರಸೌಖ್ಯಗಳನ್ನು ಬಿಟ್ಟು ಸಾಧನೆ ಮಾಡುತ್ತಿರುವೆವು. ಆದರೆ ಹೋರಾಟದಲ್ಲಿರುವಾಗಲೇ ಮೃತ್ಯು ಬರುವುದು. ನಮ್ಮ ಗತಿ ಆಗ ಏನಾಗುವುದು? ತ್ರಿಶಂಕುವಿನ ಸ್ಥಿತಿಯಾಗುವುದಿಲ್ಲವೆ? ಇಹವನ್ನು ಬಿಟ್ಟಾಯಿತು, ಪರ ಸಿಗಲಿಲ್ಲ. ಆಗ ನಾವು ಮಾಡಿದ ಪ್ರಯತ್ನ ಏನಾಯಿತು ಎಂದು ಕೇಳುವೆವು. ಆಗಲೇ ಶ್ರೀಕೃಷ್ಣ ನಮಗೆಲ್ಲಾ ಭರವಸೆಯನ್ನು ನೀಡುವ ಉತ್ತರವನ್ನು ಕೊಡುವನು—
“ಅರ್ಜುನ, ಯೋಗಭ್ರಷ್ಟನಿಗೆ ಈ ಲೋಕದಲ್ಲಿ ನಾಶವಿಲ್ಲ, ಪರಲೋಕದಲ್ಲಿಯೂ ನಾಶವಿಲ್ಲ. ಕಲ್ಯಾಣ ಕಾರ್ಯಗಳನ್ನು ಮಾಡುವ ಯಾವನೂ ದುರ್ಗತಿ ಹೊಂದುವುದಿಲ್ಲ. ಯೋಗಭ್ರಷ್ಟನು ಪುಣ್ಯಶಾಲಿಗಳ ಲೋಕವನ್ನು ಹೊಂದಿ, ಅಲ್ಲಿ ಅನೇಕ ವರ್ಷಗಳವರೆಗೆ ವಾಸವಾಗಿದ್ದು, ಅನಂತರ ಸದಾಚಾರಶೀಲರೂ ಶ್ರೀಮಂತರೂ ಆಗಿರುವವರ ಮನೆಯಲ್ಲಿ ಹುಟ್ಟುವನು. ಅಥವಾ ಧೀಮಂತರಾದ ಯೋಗಿಗಳ ಕುಲದಲ್ಲಿ ಹುಟ್ಟುವನು. ಇಂತಹ ಜನ್ಮ ಲೋಕದಲ್ಲಿ ದುರ್ಲಭತರವಾದದ್ದು. ಅಲ್ಲಿ ಪೂರ್ವಜನ್ಮಗಳ ಸಂಬಂಧವಾದ ಬುದ್ಧಿಯೋಗವನ್ನು ಹೊಂದಿ ಸಂಸಿದ್ಧಿಗಾಗಿ ಪ್ರಯತ್ನಪಡುವನು. ಪೂರ್ವಾಭ್ಯಾಸದಿಂದ ಅಸ್ವತಂತ್ರನಾಗಿ ಅವನು ಎಳೆಯಲ್ಪಡುತ್ತಾನೆ.
“ಪ್ರಯತ್ನದಿಂದ ಅಭ್ಯಾಸ ಮಾಡುತ್ತಿರುವವನೂ ಕಲ್ಮಷರಹಿತನೂ ಅನೇಕ ಜನ್ಮಗಳಿಂದ ಸಿದ್ಧಿಯನ್ನು ಹೊಂದಿದವನೂ ಆದ ಯೋಗಿಯು, ಅನಂತರ ಪರಮಗತಿಯನ್ನು ಹೊಂದುತ್ತಾನೆ.” (vi, ೪೦ ರಿಂದ ೪೫)
ಆಧ್ಯಾತ್ಮಿಕ ಜೀವನ ಒಂದು ಮಹಾ ಸಾಹಸಯಾತ್ರೆ. ಇದು ಮನಸ್ಸಿನ ಗೌರೀಶಂಕರ ಶಿಖರವನ್ನು ಏರುವ ಸಾಹಸ. ಇದು ಕೆಲವು ವರ್ಷಗಳಲ್ಲಿ ಅಥವಾ ಒಂದು ಜನ್ಮದಲ್ಲೇ ಮುಗಿಯುವ ಸಾಹಸವಲ್ಲ. ಇದಕ್ಕಾಗಿ ಜನ್ಮಜನ್ಮಗಳನ್ನು ಮುಡಿಪಾಗಿ ಇಡಬೇಕು. ನಾವು ಹಿಂದೆ ಪ್ರಪಂಚವನ್ನು ಅನುಭವಿಸುವುದಕ್ಕಾಗಿ ಮರೀಚಿಕಾಮಯವಾದ ಸುಖವನ್ನು ಬೆನ್ನಟ್ಟಿಕೊಂಡು ಹೋಗುವುದರಲ್ಲಿ ಲೆಕ್ಕವಿಲ್ಲದಷ್ಟು ಜನ್ಮಗಳನ್ನೇ ಕಳೆದಿರುವೆವು. ಅದರಿಂದ ಬಂದ ಹೀನ ಸಂಸ್ಕಾರಗಳ ರಾಶಿಯೇ ಈಗಿನ ನಮ್ಮ ಮನಸ್ಸಿನ ಉಗ್ರಾಣದಲ್ಲಿದೆ. ಈಗ ಅವುಗಳಿಗೆಲ್ಲಾ ವಿರೋಧವಾಗಿ ಹೋರಾಡಬೇಕಾಗಿದೆ. ತತ್ ಕ್ಷಣವೇ ನಮಗೆ ಜಯ ಸಿಕ್ಕುವುದಿಲ್ಲ.. ಸಿಕ್ಕದೇ ಇದ್ದರೆ ಏನು ಪ್ರಯೋಜನ ಎಂದು ಕೇಳುತ್ತೇವೆ. ಸಂಪೂರ್ಣ ನಮ್ಮ ಮನಸ್ಸಿನ ನಿಗ್ರಹ ನಮಗೆ ದೊರಕದೆ ಇರಬಹುದು. ಅದಕ್ಕಾಗಿ ಹೋರಾಡುವಾಗ ನಾವು ಉತ್ತಮ ಸಂಸ್ಕಾರಗಳನ್ನು ಸಂಗ್ರಹಿಸುತ್ತಾ ಹೋಗುವೆವು. ಕೆಟ್ಟ ಸಂಸ್ಕಾರ ಕಡಿಮೆಯಾಗುತ್ತಾ ಬರುವುದು; ಕ್ರಮೇಣ ಮನಸ್ಸು ಪರಿಶುದ್ಧವಾಗಿ ಏಕಾಗ್ರವಾಗಿ ಭಗವಂತನಲ್ಲಿ ಸಂಲಗ್ನವಾಗುವ ಸಮಯ ಬರುವುದು.
ಇಲ್ಲಿ ನಷ್ಟವೆಂಬುದಿಲ್ಲ. ನಾವು ಒಬ್ಬ ಮಾನವನ ಹತ್ತಿರ ಊಳಿಗ ಮಾಡಿದರೆ ಅವನು ಎಷ್ಟೇ ಜಿಪುಣನಾದರೂ ನಮಗೆ ಏನನ್ನಾದರೂ ಕೊಡದೆ ಕಳುಹಿಸುವುದಿಲ್ಲ. ದೇವರು ದಯಾಮಯ. ನಮ್ಮ ದೌರ್ಬಲ್ಯ ಅವನಿಗೆ ಗೊತ್ತು. ಅವನ ಹೆಸರಿನಲ್ಲಿ ನಾವು ಸಾಧನೆ ಮಾಡಲು ಪ್ರಯತ್ನಿಸಿ ಗುರಿಯನ್ನು ಮುಟ್ಟದೇ ಇದ್ದರೆ ಅವನು ನಮ್ಮನ್ನು ಮರೆಯುವುದಿಲ್ಲ; ಗುರಿಯೆಡೆಗೆ ನಡೆಸಿಕೊಂಡು ಹೋಗುವನು. “ನನ್ನ ಭಕ್ತ ಎಂದಿಗೂ ನಾಶವಾಗುವುದಿಲ್ಲ” ಎಂಬ ಭರವಸೆಯನ್ನು ಕೊಡುತ್ತಾನೆ.
ಭಕ್ತಿ — ಮುಕ್ಕಾಲುಪಾಲು ಜನ ಮಾನವರು ಹೋಗುವ ದಾರಿಯೇ ಭಕ್ತಿ. ಏಕೆಂದರೆ ಭಕ್ತಿ ಮಾನವರಲ್ಲಿ ಸಹಜವಾಗಿರುವುದು. ದೇವರನ್ನು ನಾವು ಯಾವುದಾದರೂ ಆಕಾರದ ಮೂಲಕ ಪ್ರೀತಿಸಬಹುದು. ಯಾವ ಹೆಸರಿನ ಮೂಲಕ ಬೇಕಾದರೂ ಕರೆಯಬಹುದು. ನಾವು ಯಾವ ಆಕಾರದ ಮೂಲಕ ಪ್ರೀತಿಸಿದರೆ ಅವನು ಆ ಆಕಾರದ ಮೂಲಕ ಒಲಿಯುತ್ತಾನೆ. ಪ್ರತಿಯೊಬ್ಬರಿಗೂ ಆಯಾ ಆಕಾರದಲ್ಲಿರುವ ಭಕ್ತಿಯನ್ನು ದೇವರು ದೃಢಮಾಡುವನು. ಶ್ರೀಕೃಷ್ಣನು, ಇಂತಹ ಆಕಾರ ಮೇಲು, ಇಂತಹ ಆಕಾರ ಕೀಳು, ಎನ್ನುವ ತಂಟೆಗೇ ಹೋಗುವುದಿಲ್ಲ. ನಮ್ಮ ಶ್ರದ್ಧೆ-ಭಕ್ತಿಗೆ ತಕ್ಕಂತೆ ಪ್ರತಿಫಲ ದೊರಕುವುದು.
ಯಾವಾಗ ನಾವು ಅವನನ್ನು ಸಾಕಾರವೆಂದು ಭಾವಿಸುವೆವೋ ಆಗ ಅವನನ್ನು ಮಾನವ ಸಹಜವಾದ ರೀತಿಯಲ್ಲಿ ಪ್ರೀತಿಸಬೇಕಾಗಿದೆ. ಅವನನ್ನು ತಂದೆ ಎಂದು ಕರೆಯಬಹುದು. ತಾಯಿ ಎಂದು ಕರೆಯಬಹುದು. ಸ್ವಾಮಿ ಎಂದೂ ಮಗುವೆಂದೂ ನೋಡಬಹುದು. ಯಾವ ಮಾನವೀಯ ಭಾವದ ಮೂಲಕ ಬೇಕಾದರೂ ಅವನೆಡೆಗೆ ಹೋಗಬಹುದು. ಅವನಿಗೆ ನಾವು ಏನನ್ನು ಬೇಕಾದರೂ ಕೊಡಬಹುದು. “ಯಾವನು ನನಗೆ ಎಲೆಯನ್ನಾಗಲಿ, ಹಣ್ಣನ್ನಾಗಲಿ, ನೀರನ್ನಾಗಲಿ ಭಕ್ತಿಯಿಂದ ಕೊಡುತ್ತಾನೆಯೊ ಅಂತಹ ಶುದ್ಧ ಚಿತ್ತವುಳ್ಳವನು ಭಕ್ತಿಯಿಂದ ಅರ್ಪಿಸಿದ ಅದನ್ನು ನಾನು ಸ್ವೀಕರಿಸುತ್ತೇನೆ.” (ix, ೨೬) ನಾವು ಅವನಿಗೆ ಏನು ಕೊಡುತ್ತೇವೆಯೊ ಅದನ್ನಲ್ಲ ಗಮನಿಸುವುದು; ಶ್ರದ್ಧೆ ಭಕ್ತಿಯಿಂದ ಕೊಡುತ್ತೇವೆಯೆ ಎಂಬುದನ್ನು ಗಮನಿಸುತ್ತಾನೆ.
ಭಕ್ತಿಯ ಮಾರ್ಗದಲ್ಲಿ ಹೊರಟವರಲ್ಲಿ ಎಲ್ಲರೂ ಒಂದೇ ಮೆಟ್ಟಿಲಲ್ಲಿ ಇಲ್ಲ. ಒಬ್ಬ ಮೇಲಿರುವನು. ಮತ್ತೊಬ್ಬ ಕೆಳಗಿರುವನು. ಆದರೆ ಶ್ರೀಕೃಷ್ಣ ಯಾರನ್ನೂ ನಿಕೃಷ್ಟವಾಗಿ ಕಾಣುವುದಿಲ್ಲ. ಅವರೆಲ್ಲ ತನ್ನೆಡೆಗೆ ಬಂದರಲ್ಲ; ಅದಕ್ಕಾಗಿ ಅವರನ್ನು ಉದಾರಿಗಳೇ ಎನ್ನುತ್ತಾನೆ (“ಉದಾರಾಃ ಸರ್ವ ಏವೈತೇ”). “ಆರ್ತ, ಜಿಜ್ಞಾಸು, ಅರ್ಥಾರ್ಥಿ, ಜ್ಞಾನಿ ಎಂಬ ನಾಲ್ಕು ಬಗೆಯ ಜನರು ನನ್ನನ್ನು ಭಜಿಸುತ್ತಾರೆ. ಅವರಲ್ಲಿ ನಿತ್ಯಭಕ್ತನೂ, ಏಕಭಕ್ತಿಯುಳ್ಳವನೂ ಆದ ಜ್ಞಾನಿ ಶ್ರೇಷ್ಠ. ನಾನು ಜ್ಞಾನಿಗೆ ಅತ್ಯಂತ ಪ್ರಿಯ, ಜ್ಞಾನಿ ನನಗೆ ಅತ್ಯಂತ ಪ್ರಿಯ. ಆದರೂ ಇವರೆಲ್ಲರೂ ಉದಾರಿಗಳೇ ಸರಿ.” (vii, ೧೬, ೧೭)
ಮೊದಲನೆಯವನೆ ಆರ್ತ. ಜೀವನದಲ್ಲಿ ಸಂಕಟದ ಸುಳಿಗೆ ಸಿಲುಕಿರುವವನು ಅವನು. “ಸಂಕಟ ಬಂದಾಗ ವೆಂಕಟರಮಣ” ಎಂಬ ಗಾದೆ ಅಕ್ಷರಶಃ ನಿಜ. ಮತ್ತೆ ಯಾವ ಕಾಲದಲ್ಲಿ ದೇವರೆಡೆಗೆ ಹೋಗದೆ ಇದ್ದರೂ ಸಂಕಟದ ಬೇಟೆ ನಾಯಿಗಳು ಇವನನ್ನು ಅಟ್ಟಿಸಿಕೊಂಡು ಬಂದಾಗ ದೇವರ ಸಮೀಪಕ್ಕೆ ಓಡುವನು. ದೇವರು ಇವನ ಸಂಕಟವನ್ನು ಕೇಳಿ ಸಮಾಧಾನ ಮಾಡುವನು. ಏನನ್ನು ಕೇಳಿದರೂ ಅವನು ಇಲ್ಲ ಎನ್ನುವುದಿಲ್ಲ. ಅವನೊಂದು ಕಲ್ಪತರು. ಅದರ ಕೆಳಗೆ ನಿಂತು ನಾವು ಏನು ಪ್ರಾರ್ಥಿಸಿದರೂ ಅವನು ಇಲ್ಲವೆನ್ನುವುದಿಲ್ಲ. ಭಕ್ತರಲ್ಲಿ ಈ ಗುಂಪಿಗೆ ಸೇರಿದವರೇ ಬಹುಮಂದಿ.
ಎರಡನೆಯ ಗುಂಪಿಗೆ ಸೇರಿದವನೆ ಧನಾಕಾಂಕ್ಷಿ, ಅವನಿಗೆ ಧನ ಬೇಕು. ದೇವರು ಕಲ್ಪತರು ಎಂದು ಕೇಳಿರುವನು. ಅದಕ್ಕೆ ಅವನ ಬಳಿಗೆ ಬರುವನು. ವ್ಯಾಪಾರಾದಿ ಉದ್ಯಮಗಳಲ್ಲಿ ಮುಂದೆ ಬಂದರೆ ಹಲವು ಉತ್ಸವಗಳನ್ನು ಮಾಡಿಸುವೆನು ಎನ್ನುತ್ತಾನೆ. ಇವನು ದೇವರನ್ನು ಪ್ರಾರ್ಥಿಸುತ್ತಾನೆ. ಅವನೇನಾದರೂ ಬಂದರೆ ಹಣ ನೀಡೆಂದು ತನ್ನ ಭಿಕ್ಷಾಪಾತ್ರೆಯನ್ನು ಒಡ್ಡುತ್ತಾನೆ.
ಮೂರನೆ ಗುಂಪಿಗೆ ಸೇರಿದವನೆ ಜಿಜ್ಞಾಸು. ಇವನದು ವಿಚಾರಪ್ರಧಾನವಾಗಿರುವ ಪ್ರಕೃತಿ. ಈ ಪ್ರಪಂಚದಲ್ಲಿ ದೇವರು ಎಂಬ ಚೈತನ್ಯವೇನಾದರೂ ಇದೆಯೇ, ಇದ್ದರೆ ಅದು ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಯಸುವನು. ಅವನಿಗೆ ಸಂಕಟವಿಲ್ಲ, ಧನದ ಆಕಾಂಕ್ಷೆ ಇಲ್ಲ. ಮನಸ್ಸಿನಲ್ಲಿ ಎದ್ದಿರುವ ಸಂದೇಹವನ್ನು ಪರಿಹರಿಸಿಕೊಳ್ಳಲು ಬಂದಿರುವನು.
ನಾಲ್ಕನೆಯವನೆ ಜ್ಞಾನಿ. ಅವನು ದೇವರೆಡೆಗೆ ಬರುತ್ತಾನೆ. ಅವನು ದೇವರ ಮೇಲಿನ ಪ್ರೇಮಕ್ಕಾಗಿ ಬರುತ್ತಾನೆ. ಅವನು ದೇವರಿಂದ ಲೌಕಿಕವಾಗಿರುವುದೇನನ್ನೂ ವಸೂಲಿ ಮಾಡುವುದಕ್ಕೆ ಬರುವುದಿಲ್ಲ. ಈ ಪ್ರಪಂಚದಲ್ಲಿ ದೇವರೊಬ್ಬನೆ ಸತ್ಯ ಎಂಬುದನ್ನು ಅರಿತಿರುವನು. ಅವನೊಬ್ಬ ಸಿಕ್ಕಿದರೆ ಉಳಿದೆಲ್ಲವೂ ಸಿಕ್ಕಿದಂತೆ. ದೇವರಿಗೆ ಇಂತಹ ಭಕ್ತರನ್ನು ಕಂಡರೆ ಪ್ರೀತಿ.
ಈ ನಾಲ್ಕು ಜನರಲ್ಲಿ ಕೊನೆಯ ಗುಂಪಿಗೆ ಸೇರಿದವನೆ ಶ್ರೇಷ್ಠ. ಆದರೆ ಉಳಿದವರನ್ನು ನಿಕೃಷ್ಟವಾಗಿ ನೋಡುವುದಿಲ್ಲ. ಅವರೆಲ್ಲರೂ ಉದಾರಿಗಳೇ ಎನ್ನುವನು. ಏಕೆಂದರೆ ಅವನೆದುರಿಗೆ ಇಡೀ ಮಾನವಕೋಟಿಯ ವಿಕಾಸದ ಏಣಿ ಇದೆ. ಈಗ ಸಂಕಟದಿಂದ ಪಾರಾಗಲು ದೇವರೆಡೆಗೆ ಬಂದವನೇ ಇನ್ನು ಕೊಂಚ ಕಾಲದ ಮೇಲೆ ಅವನನ್ನು ತಿಳಿಯಲು ಇಚ್ಛಿಸುತ್ತಾನೆ. ಅವನೆ ಇನ್ನು ಸ್ವಲ್ಪ ಕಾಲದ ಮೇಲೆ ಭಗವಂತನನ್ನು ಪ್ರೀತಿಗಾಗಿ ಪ್ರೀತಿಸುವ ಪರಾಭಕ್ತನಾಗುತ್ತಾನೆ. ಇವರು ತಮ್ಮ ಇಚ್ಛೆಯನ್ನು ಪೂರೈಸಿಕೊಳ್ಳುವುದಕ್ಕೆ ಬೇರೆ ಬೇರೆ ಕಡೆಗೆ ಹೋಗುವುದನ್ನು ಬಿಟ್ಟು ನನ್ನ ಸಮೀಪಕ್ಕೆ ಬಂದರಲ್ಲ ಎಂದು ಅದಕ್ಕೇ ಇವರನ್ನೆಲ್ಲ ಉದಾರಿಗಳು ಎನ್ನುತ್ತಾನೆ. ಅಂತೂ ಹೇಗೋ ಯಾವುದರಿಂದಲಾದರೂ ಪ್ರೇರಿತರಾಗಿ ಬರಲಿ, ಅವನನ್ನು ಕ್ರಮೇಣ ಮೇಲಕ್ಕೆ ಎತ್ತಲು ಕಾದು ಕುಳಿತಿರುವನು ಪರಮಾತ್ಮ.
ಅವತಾರ
ಭಕ್ತನಾದ ಸಾಧಕನಿಗೆ ಒಂದು ಅವತಾರದ ಊರುಗೋಲು ಬೇಕು. ಅದಿಲ್ಲದೆ ಇದ್ದರೆ ಆಧ್ಯಾತ್ಮಿಕ ಜೀವನದಲ್ಲಿ ನಡೆದುಕೊಂಡು ಹೋಗುವುದು ಬಹಳ ಕಷ್ಟವಾಗುವುದು. ಅದಕ್ಕಾಗಿಯೇ ಭಕ್ತರಿಗೆ ಅವನು ಅವತಾರವನ್ನು ಒದಗಿಸುವನು. ಅವನು ಬರುವುದಕ್ಕೆ ಕಾರಣವನ್ನು ಹೇಳುತ್ತಾನೆ.
“ಯಾವಾಗ ಧರ್ಮದ ಅವನತಿ ಆಗುವುದೊ, ಅಧರ್ಮದ ಉನ್ನತಿ ಆಗುವುದೊ, ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆ ಮತ್ತು ದುಷ್ಟರ ನಾಶಕ್ಕೆ ಮತ್ತು ಧರ್ಮ ಸಂಸ್ಥಾಪನೆ ಮಾಡುವುದಕ್ಕೆ ನಾನು ಯುಗಯುಗಗಳಲ್ಲಿ ಅವತಾರ ಮಾಡುತ್ತೇನೆ.” (iv, ೭, 05)
ಯಾವಾಗ ದುರಿತಗಳಲ್ಲಿ ಸಿಲುಕಿ ಮಾನವ ದೇವರಿಗೆ ಪ್ರಾರ್ಥನೆ ಮಾಡುತ್ತಾನೆಯೋ ಆಗ ಅವನು ಮೇಲಿನಿಂದ ಕೆಳಗೆ ಇಳಿದುಬರುವನು. ಹಾಗೆ ಇಳಿದು ಬರುವಾಗ ಯಾವುದಾದರೂ ಚಾರಿತ್ರಿಕ ವ್ಯಕ್ತಿಯಂತೆ ಅವತರಿಸುವನು.
ಸರ್ವವ್ಯಾಪಿಯಾದ ಸರ್ವಶಕ್ತನಾಗಿರುವ ದೇವರು ಹೇಗೆ ಒಂದು ಅವತಾರದಂತೆ ಇಳಿದು ಬರಲು ಸಾಧ್ಯ? ಆಗ ಅನಂತ ಸಾಂತವಾಗುವುದಿಲ್ಲವೇ ಎಂದು ನಾವು ತರ್ಕಿಸಬಹುದು. ಆದರೆ ಅವನು ಅವತಾರವಾಗಿ ಇಳಿದುಬರುತ್ತಾನೆ ಎಂದರೆ ಅವನು ತನ್ನ ಸರ್ವವ್ಯಾಪಿತ್ವ ಮತ್ತು ಸರ್ವಜ್ಞತ್ವ ಮುಂತಾದುವುಗಳನ್ನು ಕಳೆದುಕೊಳ್ಳುವುದಿಲ್ಲ. ಅವನ ಯಾವುದೋ ಒಂದು ಸಣ್ಣ ಅಂಶ ಅವತಾರವಾಗಿ ಇಳಿದುಬರುವುದು. ಬಹು ಅಂಶ ಇದಕ್ಕೆ ಅತೀತವಾಗಿರುವುದು. ಸಾಗರದ ನೀರಿನಲ್ಲಿ ಯಾವುದೋ ಕಡೆ ಸ್ವಲ್ಪ ಗಟ್ಟಿಯಾಗಿ ಮಂಜುಗೆಡ್ಡೆಯಂತೆ ಮೇಲೆದ್ದರೆ, ಸಾಗರವೆಲ್ಲಾ ಹಾಗೆ ಆಗಿದೆಯೇ? ಇಲ್ಲ. ಅಂತೆಯೇ ಅವತಾರ. ಎಲ್ಲಿಯವರೆಗೆ ಮಾನವ ಮಾನವನಾಗಿರುವನೋ ಅಲ್ಲಿಯವರೆಗೆ ಹಲವರು ಭಗವಂತನನ್ನು ಕುರಿತು ಯೋಚಿಸಬೇಕಾದರೆ ಒಂದು ಮಾನವಾಕೃತಿ ಮೂಲಕ ಮಾತ್ರ ಸಾಧ್ಯ. ಯಾವುದಾದರೂ ಒಂದು ಆಕಾರದ ಮೂಲಕ ಅವನೆಡೆಗೆ ಹೋಗಬೇಕಾಗಿದೆ.
“ಅವನ ಅವತಾರ ದಿವ್ಯವಾದುದು. ಅವನು ಮಾಡುವ ಕರ್ಮ ದಿವ್ಯವಾದುದು. ಅಂತಹ ಅವತಾರವನ್ನು ಯಾರು ಯಥಾರ್ಥವಾಗಿ ತಿಳಿಯುವರೋ ಅವರು ದೇಹವನ್ನು ತ್ಯಾಗಮಾಡಿದಮೇಲೆ ಪುನರ್ಜನ್ಮವನ್ನು ಹೊಂದುವುದಿಲ್ಲ. ಅವರು ನನ್ನನ್ನು ಹೊಂದುವರು.” (iv, ೯) ಯಾವುದಾದರೂ ಒಂದು ಅವತಾರದ ಮೇಲೆ ಶ್ರದ್ಧೆ, ಭಕ್ತಿ ಇಟ್ಟು ಸಾಧನೆ ಮಾಡಿದರೆ ಸಾಕು. ಅವನು ನಮ್ಮನ್ನು ತನ್ನೆಡೆಗೆ ಸೆಳೆದುಕೊಳ್ಳುವನು. ಗಂಗಾ ನದಿಗೆ ಇರುವ ಹಲವು ಘಟ್ಟಗಳಂತೆ ಅವತಾರ. ಯಾವ ಘಾಟಿನಲ್ಲಿ ಸ್ನಾನಮಾಡಿದರೂ, ಗಂಗೆಯಲ್ಲಿಯೇ ಸ್ನಾನ ಮಾಡಿದಂತೆ ಆಗುವುದು. ಭಕ್ತನಿಗೆ ಯಾವ ಯಾವ ಭಗವಂತನ ಆಕಾರದ ಮೇಲೆ ಶ್ರದ್ಧೆ ಇದೆಯೋ ಅದನ್ನು ಮತ್ತೂ ಊರ್ಜಿತ ಮಾಡುವನೇ ಹೊರತು, ಎಂದಿಗೂ ಅದನ್ನು ಕಿತ್ತುಹಾಕುವುದಿಲ್ಲ. “ಯಾರು ನನ್ನನ್ನು ಹೇಗೆ ಆಶ್ರಯಿಸುತ್ತಾರೆಯೋ ಅವರನ್ನು ಹಾಗೆಯೇ ನಾನು ಅನುಗ್ರಹಿಸುತ್ತೇನೆ. ಅರ್ಜುನ, ಮನುಷ್ಯರು ಎಲ್ಲಾ ಪ್ರಕಾರಗಳಿಂದಲೂ ನನ್ನ ಪಥವನ್ನೇ ಅನುಸರಿಸುತ್ತಾರೆ.” (iv, ೧೧) ದೇವರು ಕೇವಲ ಅವತಾರಗಳಲ್ಲಿ ಮಾತ್ರ ವ್ಯಕ್ತವಾಗುವುದಿಲ್ಲ. ಈ ಪ್ರಪಂಚದಲ್ಲಿ ಯಾವ ಯಾವ ಶ್ರೇಷ್ಠವಾದ ವ್ಯಕ್ತಿಗಳಿರುವರೊ ಅವರ ಹಿಂದೆ ಇರುವುದೆಲ್ಲ ಒಂದೇ ಭಗವಂತನ ಪ್ರಭೆಯ ಅಂಶ. “ಯಾವ ಯಾವ ವಸ್ತು ವಿಭೂತಿಯುಳ್ಳದ್ದೊ, ಶ್ರೀಯುಕ್ತವೊ ಅಥವಾ ಊರ್ಜಿತವಾಗಿದೆಯೋ ಅವೆಲ್ಲ ನನ್ನ ತೇಜಸ್ಸಿನ ಒಂದು ಅಂಶದಿಂದ ಉಂಟಾಯಿತು ಎಂದು ತಿಳಿ.” (x, ೧೦) ಇಲ್ಲಿ ಶ್ರೀಕೃಷ್ಣ ಹೇಳುವುದು ಕೇವಲ ಹಿಂದುಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಇಡೀ ಮಾನವ ಕುಲಕ್ಕೆಲ್ಲ ಅನ್ವಯಿಸುವುದು. ಇಂತಹ ಉದಾರ ವಾಣಿಯನ್ನು ನಾವು ಕೇಳುವುದು ಬಹಳ ಅಪರೂಪ ಧಾರ್ಮಿಕ ಜಗತ್ತಿನಲ್ಲಿ.
ಅವತಾರವಾದವನ್ನು ಎಲ್ಲರೂ ನಂಬಬೇಕೆಂಬ ಬಲಾತ್ಕಾರವಿಲ್ಲ. ಅದೊಂದು ದುರ್ಬಲ ಮನಸ್ಸಿನವರಿಗೆ ದೇವರು ಕೊಟ್ಟಿರುವ ಊರುಗೋಲು. ಅದರ ಸಹಾಯವನ್ನು ಬೇಕಾದರೆ ಒಬ್ಬ ತೆಗೆದುಕೊಳ್ಳಬಹುದು. ನನಗೆ ಯಾವ ಊರುಗೋಲು ಬೇಕಾಗಿಲ್ಲ ಎನ್ನುವ ಧೀರ ಮತಿಗೆ ಬೇಕಾದಷ್ಟು ಅವಕಾಶವಿದೆ ಗೀತೆಯ ಬೋಧನೆಯಲ್ಲಿ. ಯಾರು ಹೇಗೆ ಬೇಕಾದರೂ ಅವನೆಡೆಗೆ ಹೋಗಬಹುದು. ದಾರಿಗಳು ಬೇರೆ ಬೇರೆ ಆಗಿರಬಹುದು. ಆದರೆ ಸೇರುವ ಗುರಿಯೆಲ್ಲ ಒಂದೇ.
ಹಿಂದೂಗಳಲ್ಲಿ ಮೂರು ಮುಖ್ಯ ತತ್ತ್ವದೃಷ್ಟಿಗಳಿವೆ. ಅವೇ ದ್ವೈತ, ವಿಶಿಷ್ಟಾದ್ವೈತ ಮತ್ತು ಅದ್ವೈತ ಎಂಬವು. ದ್ವೈತ ಎಂದರೆ ಜೀವ- ಜಗತ್-ಈಶ್ವರ ಬೇರೆ ಬೇರೆ ಎಂದು ಭಾವಿಸುವುದು. ವಿಶಿಷ್ಟಾದ್ವೈತ ಎಂದರೆ ಇರುವುದು ಒಂದೇ, ಅದರ ಯಾವುದೋ ಸಣ್ಣ ಅಂಶದಿಂದ ಜೀವ-ಜಗತ್ ಆಗಿವೆ ಎಂದು ಒಪ್ಪಿಕೊಳ್ಳುವುದು. ಅವನು ಪೂರ್ಣ, ಜೀವಗಳೆಲ್ಲ ಅಂಶಗಳು, ಸಾಗರ ಮತ್ತು ಅದರ ಅಲೆಗಳಂತೆ. ಅದ್ವೈತ ಎಂದರೆ ಇರುವುದು ಒಂದೇ. ಅದೇ ಹಲವರ ತೆರ ಕಾಣುವುದು. ಈ ಜೀವನ (ಜೀವಿಯ) ನಿಜವಾದ ಸ್ವಭಾವವೆ ಬ್ರಹ್ಮ. ಈಗ ಅಜ್ಞಾನದಲ್ಲಿರುವುದರಿಂದ ಬೇರೆ ಎಂದು ಭಾವಿಸುವನು. ಜ್ಞಾನ ಬಂದಾದ ಮೇಲೆ ತಾನು ಯಾವಾಗಲೂ ಅದೇ ಆಗಿದ್ದೆನು ಎಂದು ತಿಳಿಯುವನು.
ಮೇಲಿನ ಮೂರು ತತ್ತ್ವಗಳನ್ನು ಕ್ರಮವಾಗಿ ಮಧ್ವಾಚಾರ್ಯರು, ರಾಮಾನುಜಾಚಾರ್ಯರು ಹಾಗೂ ಶಂಕರಾಚಾರ್ಯರು ಪ್ರತಿಪಾದಿಸಿರುವರು. ತಾವು ಪ್ರತಿಪಾದಿಸುವ ತತ್ತ್ವ ಆಗಲೆ ಇದೆ ಎಂಬುದನ್ನು ತೋರುವುದಕ್ಕೆ ಪ್ರಸ್ಥಾನತ್ರಯಗಳಿಗೆ ಭಾಷ್ಯವನ್ನು ಬರೆದಿರುವರು. ಪರಸ್ಪರ ವಿರೋಧವಾಗಿರುವ ತತ್ತ್ವಗಳೆಲ್ಲ ಒಂದೇ ಶಾಸ್ತ್ರದಲ್ಲಿ ಹೇಗೆ ಇರಲು ಸಾಧ್ಯ? ಇದರಲ್ಲಿ ಯಾವುದೊ ಒಂದು ಸರಿ ಇರಬೇಕು, ಅಥವಾ ನಾವು ತಪ್ಪುತಿಳಿದುಕೊಂಡಿರಬೇಕು ಎಂದು ಭಾವಿಸುವುದು ರೂಢಿ. ಆದರೆ ಗೀತೆಯಲ್ಲಿ ಯಾವುದೋ ಒಂದು ತತ್ತ್ವವನ್ನು ಹೇಳುವುದಕ್ಕೆ ಶ್ರೀಕೃಷ್ಣ ಹೊರಟಿಲ್ಲ. ಅಲ್ಲಿ ಹಲವು ತತ್ತ್ವಗಳಿವೆ. ಒಂದು ಮತ್ತೊಂದಕ್ಕೆ ವಿರೋಧವಾಗಿಲ್ಲ. ಒಂದು ಮತ್ತೊಂದಕ್ಕೆ ಪೂರಕವಾಗಿದೆ. ಯಾರು ತಮಗೆ ಯಾವುದು ಬೇಕೋ ಅದನ್ನು ಆರಿಸಿಕೊಳ್ಳಬಹುದು. ಒಂದು ನಿಜವಾದರೆ ಉಳಿದವು ಸುಳ್ಳಾಗಿರಬೇಕೆಂದು ಅಲ್ಲ. ಒಂದೇ ಸತ್ಯ ನಾವು ನೋಡುವ ದೃಷ್ಟಿಭೇದಕ್ಕೆ ತಕ್ಕಂತೆ ವಿಧವಿಧವಾಗಿ ಕಾಣುವುದು. ಒಂದೇ ಚಾಮುಂಡಿಬೆಟ್ಟ ಒಂದೊಂದು ದಿಕ್ಕಿನಿಂದ ಒಂದೊಂದು ರೀತಿಯಲ್ಲಿ ಕಾಣುವಂತೆ.
ಒಂದು ನದಿ ದೂರದ ಬೆಟ್ಟದಲ್ಲಿ ಹುಟ್ಟಿ ಒಂದು ಹೆಸರಿನಿಂದ ಹರಿದುಕೊಂಡು ಹೋಗುತ್ತಿದೆ. ಅದು ತನ್ನ ಪ್ರಯಾಣವನ್ನೆಲ್ಲ ಪೂರೈಸಿ ಸಾಗರವನ್ನು ಸೇರುತ್ತಿದೆ. ಸ್ವಲ್ಪ ದೂರ ಹೋದ ಮೇಲೆ ಸಾಗರದಲ್ಲಿ ಒಂದಾಗುವುದು. ಇಲ್ಲಿ ನದಿಯ ಒಂದು ಗತಿ ಮತ್ತೊಂದಕ್ಕೆ ಪೋಷಕವಾಗಿದೆಯೇ ಹೊರತು, ಎಂದಿಗೂ ವಿರೋಧವಾಗಿಲ್ಲ. ನದಿ ದೂರದಲ್ಲಿರುವಾಗ ನದಿ ಬೇರೆ, ಸಾಗರ ಬೇರೆ, ಅದು ಹರಿಯುವ ಪಾತ್ರ ಬೇರೆ. ಅದು ಸ್ವತಂತ್ರವಾಗಿ ಹರಿದುಕೊಂಡು ಹೋಗುತ್ತಿದೆ. ಅದಕ್ಕೂ ಸಾಗರಕ್ಕೂ ಯಾವ ಸಂಬಂಧವೂ ಇನ್ನೂ ಆಗಿಲ್ಲ. ಅದರೆ ಅದೇ ನದಿ ಸಾಗರವನ್ನು ಸೇರುತ್ತಿರುವಾಗ, ಒಂದರಲ್ಲಿ ಮತ್ತೊಂದು ಇರುವುದನ್ನು ನೋಡುತ್ತೇವೆ. ನದಿಯಲ್ಲಿ ಸಾಗರವಿದೆ, ಸಾಗರದಲ್ಲಿ ನದಿ ಇದೆ. ಆದರೆ ಕೆಲವು ಗಜಗಳು ಮುಂದೆ ಹೋದರೆ ನದಿ ಮಾಯವಾಗಿ ಸಾಗರದಲ್ಲಿ ಒಂದಾಗುವುದು. ನಾವು ನದಿಯ ಯಾವುದೋ ಒಂದು ಅವಸ್ಥೆಯನ್ನು ಮಾತ್ರ ತೆಗೆದುಕೊಂಡು, ಅದೇ ಸತ್ಯ ಎಂದರೆ ಪೂರ್ಣ ಸತ್ಯವಾಗುವುದಿಲ್ಲ. ಯಾವುದು ಅಂಶ ಸತ್ಯಗಳನ್ನು ನಿರಾಕರಿಸದೇ ಅದಕ್ಕೆ ಒಂದು ಸ್ಥಾನವನ್ನು ಕೊಟ್ಟು ವಿವರಿಸುವುದೊ ಅದೇ ಪೂರ್ಣ ಸತ್ಯ. ಅದು ಯಾವುದನ್ನೂ ಧಿಕ್ಕರಿಸುವುದಿಲ್ಲ, ಎಲ್ಲವನ್ನೂ ಸ್ವೀಕರಿಸುವುದು.
ಗೀತೆಯಲ್ಲಿ ದ್ವೈತ ಇದೆ, ವಿಶಿಷ್ಟಾದ್ವೈತ ಇದೆ, ಅದ್ವೈತ ಇದೆ ಮತ್ತು ನಮಗೆ ಗೊತ್ತಿಲ್ಲದ ಇನ್ನೂ ಎಷ್ಟೋ ದೃಷ್ಟಿಕೋಣಗಳಿವೆ. ಗೀತೆಯಲ್ಲಿ ಎಲ್ಲಾ ಬಗೆಯ ತತ್ತ್ವಗಳನ್ನೂ ನೋಡುತ್ತೇವೆ. ಎಲ್ಲಾ ತತ್ತ್ವಗಳ ಸಂಗಮಸ್ಥಾನ ಅದು. ಯಾವುದೋ ಒಂದನ್ನು ಸರಿ ಮತ್ತೊಂದನ್ನು ತಪ್ಪು ಎನ್ನುವ ಗೋಜಿಗೆ ಹೋಗದೆ, ಯಾರು ಯಾವ ಸಂಪ್ರದಾಯದಲ್ಲಿ ಹುಟ್ಟಿರುವರೊ ಅವನು ಅದನ್ನು ಅನುಷ್ಠಾನ ಮಾಡಲಿ, ಉಳಿದವರನ್ನು ದೂರದೆ ಇರಲಿ ಎಂಬುದನ್ನು ಗೀತೆಯಲ್ಲಿ ಕಲಿಯುತ್ತೇವೆ. ಅನೇಕ ವೇಳೆ ನಾವು ನಮ್ಮ ತತ್ತ್ವಕ್ಕೆ ಗೌರವ ತೋರುವುದು ಇತರರ ತತ್ತ್ವಗಳನ್ನು ದೂರುವುದರಿಂದ. ನಮ್ಮದನ್ನು ನಾವು ಭಕ್ತಿ-ಗೌರವಗಳಿಂದ ಅನುಷ್ಠಾನ ಮಾಡೋಣ. ಅದರಂತೆಯೇ ಇತರರಿಗೂ ಅವರವರ ತತ್ತ್ವಕ್ಕೆ ಹಾಗೆ ಮಾಡಲು ಅವಕಾಶವನ್ನು ಕೊಡೋಣ. ಸತ್ಯಕ್ಕೆ ಗೊತ್ತಿದೆ ಎಲ್ಲರೂ ನನ್ನನ್ನೇ ಕರೆಯುತ್ತಿರುವರು, ವಿವಿಧಮಾರ್ಗಗಳಿಂದ ತನ್ನೆಡೆಗೇ ಬರುತ್ತಿರುವರು ಎಂಬುದು. “ನನಗಿಂತ ಶ್ರೇಷ್ಠವಾದ ವಸ್ತು ಬೇರೊಂದಿಲ್ಲ. ದಾರದಲ್ಲಿ ಮಣಿಗಳು ಪೋಣಿಸಲ್ಪಟ್ಟಿರುವ ಹಾಗೆ ಇದೆಲ್ಲವೂ ನನ್ನಲ್ಲಿ ಪೋಣಿಸಲ್ಪಟ್ಟಿವೆ.” (vii, ೭)
ಅಧಿಕಾರ, ವಿಚಾರ, ಅನುಭವ —
ಶ್ರೀಕೃಷ್ಣನು ಅರ್ಜುನನಿಗೆ ಅಧಿಕಾರವಾಣಿಯಿಂದ ಹೇಳುವನು. ಯಾವ ವಿಷಯಗಳನ್ನು ಅವನಿಗೆ ಹೇಳುತ್ತಿರುವನೊ ಅದರಲ್ಲಿ ಸಂಶಯಕ್ಕೆ ಆಸ್ಪದವೇ ಇಲ್ಲ. ನಾವು ಕೂಡ ಮುಂಚೆ ವಿಷಯಗಳನ್ನು ಅಧಿಕಾರಿಗಳಾದವರಿಂದ ಕೇಳಬೇಕು. ಅಂತಹ ಮಹಾತ್ಮರು ಬರೆದಿರುವ ಗ್ರಂಥಗಳನ್ನು ಓದಬೇಕು. ಯಾರು ತಾತ್ತ್ವಿಕ ಜೀವನದಲ್ಲಿ ನಮಗಿಂತ ಮುಂದೆ ಹೋಗಿರುವರೋ ಅವರಿಂದ ವಿಷಯಗಳನ್ನು ತಿಳಿದುಕೊಳ್ಳಬೇಕು. ಅಂತಹ ಆಪ್ತವಾಕ್ಯ ದಾರಿಯಲ್ಲಿ ಮಿನುಗುತ್ತಿರುವ ದೀವಿಗೆಯಂತೆ.
ಆದರೆ ಅದನ್ನು ಕುರಿತು ವಿಚಾರವನ್ನೇ ಮಾಡಕೂಡದು ಎಂದು ಶ್ರೀಕೃಷ್ಣ ಹೇಳುವುದಿಲ್ಲ. ಯಾವುದನ್ನು ನಾವು ಓದುತ್ತೇವೆಯೊ, ಕೇಳುತ್ತೇವೆಯೊ ಅದನ್ನು ಕುರಿತು ವಿಚಾರಮಾಡಬೇಕು. ಅದನ್ನು ಚೆನ್ನಾಗಿ ತಿಳಿದುಕೊಳ್ಳುವುದಕ್ಕೆ ಪ್ರಯತ್ನ ಪಡಬೇಕು. ಆಗಲೆ ಸಮಸ್ಯೆಯನ್ನು ಎಲ್ಲಾ ದೃಷ್ಟಿಕೋಣಗಳಿಂದಲೂ ನೋಡಲು ಸಾಧ್ಯವಾಗುವುದು. ಎಂತಹ ಮಹಾನುಭಾವ ಹೇಳಲಿ, ಅವನ ಮೇಲೆ ನಮಗೆ ಎಷ್ಟೇ ಗೌರವವಿದ್ದರೂ ಅವನು ಹೇಳುವುದನ್ನು ನಾವು ಚೆನ್ನಾಗಿ ವಿಚಾರ ಮಾಡಿ ತೆಗೆದುಕೊಳ್ಳಬೇಕು. ಆಗಲೇ ಆ ಜ್ಞಾನ ನಮ್ಮದಾಗುವುದು. ನಮ್ಮ ಯುಕ್ತಿಗೆ ಸಮರ್ಪಕವಾಗಿಲ್ಲದೆ ಇದ್ದರೆ, ನಂಬಿದ ಜ್ಞಾನ ಪರೀಕ್ಷಾ ಸಮಯದಲ್ಲಿ ನಮ್ಮದಾಗುವುದಿಲ್ಲ. ಶ್ರೀಕೃಷ್ಣ ಜಗದ್ಗುರು, ಅನುಭವಗಳನ್ನೆಲ್ಲ ಅರ್ಜುನನಿಗೆ ಕೊಟ್ಟಾದಮೇಲೂ, “ಈಗ ನಿನ್ನ ಮನಸ್ಸಿಗೆ ಹೇಗೆ ತೋರುವುದೊ ಹಾಗೆ ಮಾಡು” (xviii, ೭೩) ಎನ್ನುವನೇ ಹೊರತು ಬಲಾತ್ಕಾರ ಮಾಡುವುದಿಲ್ಲ.
ಅನಂತರವೇ ಅನುಭವ. ವಿಚಾರದ ಮೂಲಕ ನಾವು ಒಂದು ವಿಷಯ ಸಾಧ್ಯ ಎಂದು ತಿಳಿಯಬಹುದು. ಆದರೆ ಅದು ಅಲ್ಲೇ ನಿಲ್ಲಕೂಡದು. ಅದನ್ನು ನಮ್ಮ ಅನುಭವವನ್ನಾಗಿ ಮಾಡಿಕೊಳ್ಳಬೇಕು. ಇದನ್ನೇ ಶ್ರೀಕೃಷ್ಣ ಜ್ಞಾನ ಮತ್ತು ವಿಜ್ಞಾನವೆಂದು ಬೇರೆ ಬೇರೆ ಹೆಸರಿನಿಂದ ಕರೆಯುವುದು. ಜ್ಞಾನವೆಂದರೆ ಯುಕ್ತಿಯ ಆಧಾರದಮೇಲೆ ನಿಂತು ಇದು ನಿಜ ಎಂದು ಅರಿಯುವುದು. ಆದರೆ ಅನುಭವ ಇವನಿಗೆ ಇನ್ನೂ ಬಂದಿಲ್ಲ. ಶ್ರೀರಾಮಕೃಷ್ಣರು ಹೀಗೆ ಹೇಳುತ್ತಾರೆ. ಕೆಲವರು ಹಾಲನ್ನು ನೋಡಿದ್ದಾರೆ. ಕೆಲವರು ಅದನ್ನು ಕುಡಿದಿದ್ದಾರೆ. ನೋಡಿದವನು ವಿಚಾರವಾದಿ. ಅವನಿಗೆ ಅದು ಏನು ಎಂಬುದು ಗೊತ್ತು. ಅದನ್ನು ಕುಡಿದಿರುವವನು ವಿಜ್ಞಾನಿ. ಅದರಿಂದ ಪ್ರಯೋಜನ ಪಡೆದಿರುವನು. ಯುಕ್ತಿ ನಮ್ಮನ್ನು ಅನುಭವದ ಕಡೆಗೆ ಒಯ್ಯಬೇಕು.
ಸ್ವಪ್ರಯತ್ನ, ಶರಣಾಗತಿ —
ಸ್ವಪ್ರಯತ್ನ ಮತ್ತು ಶರಣಾಗತಿ ಎಂಬವು ಪರಸ್ಪರ ವಿರೋಧವಾಗಿರುವ ಭಾವನೆಗಳು. ಒಂದು ಇದ್ದರೆ ಮತ್ತೊಂದು ಹೇಗೆ ಅದರ ಸಮೀಪದಲ್ಲೇ ಇರಬಹುದು ಎಂದು ನಮಗೆ ಆಶ್ಚರ್ಯವಾಗಬಹುದು. ಹೇಗೆ ಶ್ರೀಕೃಷ್ಣ ದೈತ-ಅದೈತಗಳೆಂಬ ತತ್ತ್ವವನ್ನು ಗೀತೆಯಲ್ಲಿ ಹೊಂದಿಸಿರುವನೋ ಹಾಗೆಯೇ ಸ್ವಪ್ರಯತ್ನ ಮತ್ತು ಶರಣಾಗತಿಯನ್ನು ಹೊಂದಿಸಿರುವನು. ಎರಡೂ ಬೇರೆಬೇರೆಯಲ್ಲ, ಒಂದಾದಮೇಲೆ ಮತ್ತೊಂದು ಬರುವುದು. ಮೊದಲು ಹೂವು ಅನಂತರ ಕಾಯಿ ಬರುವಂತೆ. ಒಂದು ಮತ್ತೊಂದಕ್ಕೆ ವಿರೋಧವಾಗಿಲ್ಲ. ಒಂದು ಮತ್ತೊಂದಕ್ಕೆ ಪೂರಕವಾಗಿದೆ. ಹದ್ದು ಮೇಲೆ ಹೋಗುವುದಕ್ಕೆ ಮುಂಚೆ ರೆಕ್ಕೆಯನ್ನು ಬಡಿದುಕೊಂಡು ಏರುವುದು. ಮೇಲೆ ಹೋದಮೇಲೆ ಸುಮ್ಮನೆ ತನ್ನ ರೆಕ್ಕೆಗಳನ್ನು ಹರಡಿ ಬೀಸುವ ಗಾಳಿಯಿಂದ ಪ್ರಯೋಜನ ಪಡೆಯುವುದು. ಮುಂಚೆಯೇ ಅದನ್ನು ಮಾಡುವುದಕ್ಕೆ ಆಗುವುದಿಲ್ಲ. ನಮ್ಮಲ್ಲಿ ಒಂದು ಅಹಂಕಾರವಿರುವಾಗ ಅದರ ಮಿತಿಯನ್ನು ತಿಳಿದುಕೊಳ್ಳಬೇಕಾದರೆ ಅದನ್ನು ಶ್ರಮದಿಂದ ಸಮೆಸಬೇಕು. ಆಗ ತನ್ನ ಮಿತಿ ಇದರಿಂದ ಚೆನ್ನಾಗಿ ಗೊತ್ತಾಗುವುದು. ಅನಂತರ ಶರಣಾಗತಿ ಬರುವುದು. ಒಂದು ಹಕ್ಕಿ ಹಡಗಿನ ಧ್ವಜಸ್ತಂಭದ ಮೇಲೆ ಕುಳಿತುಕೊಂಡು ಸಮುದ್ರದಮೇಲೆ ಹೋಗುತ್ತಿತ್ತು. ಅದಕ್ಕೆ ಕುಳಿತು ಬೇಜಾರಾಗಿ ತಾನು ಮುಂಚೆಯೇ ಹಾರಿಹೋಗಬೇಕೆಂದು ತೀರವನ್ನು ಹುಡುಕುವುದಕ್ಕೆ ನಾಲ್ಕು ದಿಕ್ಕುಗಳಿಗೂ ಹಾರಿಹೋಗಿ ಬಂತು. ಎಲ್ಲಿಯೂ ಸಮೀಪದಲ್ಲಿ ತೀರ ಕಾಣಲಿಲ್ಲ. ಅನಂತರ ಹಡಗು ಹೇಗೂ ಹೋಗುತ್ತಿದೆ. ಒಂದಲ್ಲ ಒಂದು ದಿನ ತೀರ ಸೇರಬಹುದು ಎಂದು ತೆಪ್ಪಗೆ ಕುಳಿತುಕೊಂಡಿತು. ಹಾಗೆಯೇ ಮುಂಚಿನ ಸ್ವಭಾವವನ್ನು ಶ್ರೀಕೃಷ್ಣ ಧ್ಯಾನಯೋಗದಲ್ಲಿ ಹೀಗೆ ವಿವರಿಸುವನು.
“ಆತ್ಮವನ್ನು ಆತ್ಮನಿಂದಲೇ ಉದ್ಧಾರ ಮಾಡಿಕೊಳ್ಳಬೇಕು. ಎಂದಿಗೂ ಆತ್ಮನನ್ನು ಕುಗ್ಗಿಸಿಕೊಳ್ಳಬಾರದು. ಆತ್ಮನೇ ತನ್ನ ಬಂಧು, ಆತ್ಮನೇ ತನ್ನ ಶತ್ರು.”
“ಯಾರು ಆತ್ಮನಿಂದ ಆತ್ಮನನ್ನು ಗೆದ್ದಿರುವನೋ ಅವನಿಗೆ ಆತ್ಮನೇ ಬಂಧು. ಯಾರು ಆತ್ಮನನ್ನು ಗೆದ್ದಿಲ್ಲವೊ ಅವನಿಗೆ ಆತ್ಮನೇ ಶತ್ರು.” (vi, ೫, ೬)
ಇಲ್ಲಿ ಶ್ರೀಕೃಷ್ಣ ಸ್ವಪ್ರಯತ್ನವನ್ನು ಒತ್ತಿ ಹೇಳುತ್ತಾನೆ. ಜೀವನು ಮುಂಚೆ ಪ್ರಚಂಡ ಪ್ರಯತ್ನ ಮಾಡಬೇಕು. ಸುಮ್ಮನೆ ಕುಳಿತುಕೊಳ್ಳಕೂಡದು. ಅಹಂಕಾರವನ್ನು ಸ್ವಪ್ರಯತ್ನದಲ್ಲಿ ಚೆನ್ನಾಗಿ ಪಳಗಿಸಬೇಕು. ಆಗಲೇ ಅದು ಶುದ್ಧವಾಗುವುದು. ಅನಂತರವೇ ಭಗವಂತನ ಕೃಪೆ ಸಹಾಯಕ್ಕೆ ಬರಬೇಕಾದರೆ. ಶುದ್ಧ ಸೋಮಾರಿಗೆ ಭಗವಂತ ಸಹಾಯಕ್ಕೆ ಬರುವುದಿಲ್ಲ.
ಶ್ರೀಕೃಷ್ಣ ಗೀತಾಸಂದೇಶವನ್ನು ಮುಗಿಸುವುದಕ್ಕೆ ಮುಂಚೆ ಶರಣಾಗತಿಯ ಚರಮಮಂತ್ರವನ್ನು ಬೋಧಿಸುತ್ತಾನೆ. “ಸರ್ವ ಧರ್ಮಗಳನ್ನು ಪರಿತ್ಯಾಗ ಮಾಡಿ ನನ್ನೊಬ್ಬನಲ್ಲಿ ಶರಣುಹೊಂದು. ನಾನು ನಿನ್ನನ್ನು ಸರ್ವ ಪಾಪಗಳಿಂದಲೂ ಪಾರು ಮಾಡುತ್ತೇನೆ. ಶೋಕಿಸಬೇಡ.” (xviii, ೬೭)
ರೆಕ್ಕೆ ದಣಿದಮೇಲೆ ಹಕ್ಕಿ ಕುಳಿತುಕೊಂಡು ದೋಣಿಯಲ್ಲಿ ಶರಣಾಗುವುದು. ಹಾಗೆಯೇ ಸ್ವಪ್ರಯತ್ನದಿಂದ ಶ್ರಮಪಟ್ಟವನಿಗೆ ಶರಣಾಗತಿಯ ಅಮೃತ ರುಚಿಸಬಲ್ಲುದು. ಇಲ್ಲಿ ಒಂದು ಮತ್ತೊಂದಕ್ಕೆ ವಿರೋಧವಾಗಿಲ್ಲ. ಒಂದು ಮತ್ತೊಂದಕ್ಕೆ ಒಯ್ಯುವುದು. ಆಯಾ ಅಂತಸ್ತಿನಲ್ಲಿ ಅದೇ ನಿಜ.
ಭರವಸೆಯ ಧ್ರುವತಾರೆ —
“ಅತ್ಯಂತ ದುರಾಚಾರಿಯಾಗಿದ್ದರೂ ಅನನ್ಯ ಭಕ್ತಿಯಿಂದ ನನ್ನನ್ನು ಭಜಿಸಿದರೆ ಅವನು ಸಾಧು ಎಂದೇ ತಿಳಿಯತಕ್ಕದ್ದು. ಏಕೆಂದರೆ ಅವನು ನಿಶ್ಚಯಬುದ್ಧಿಯುಳ್ಳವನಾಗಿರುತ್ತಾನೆ.
“ಅರ್ಜುನ, ಅವನು ಬೇಗ ಧರ್ಮಾತ್ಮನಾಗುತ್ತಾನೆ ಮತ್ತು ಶಾಶ್ವತವಾದ ಶಾಂತಿಯನ್ನು ಹೊಂದುತ್ತಾನೆ. ನನ್ನ ಭಕ್ತ ನಾಶವಾಗುವುದಿಲ್ಲ. ತಿಳಿದುಕೊ.” (ix, ೩೦, ೩೧)
ಭಗವಂತ ಇಲ್ಲಿ ಮುಕ್ತಿಯ ಹೆಬ್ಬಾಗಿಲನ್ನು ಎಲ್ಲರಿಗೂ ತೆಗೆಯುತ್ತಾನೆ. ಒಬ್ಬ ಅತ್ಯಂತ ದುರಾಚಾರಿಯಾಗಿರಬಹುದು; ಭಗವಂತನಲ್ಲಿ ಶರಣಾದರೆ, ಕ್ಷಮೆಯನ್ನು ಯಾಚಿಸಿದರೆ, ಭಗವಂತ ಅವನನ್ನು ತ್ಯಜಿಸುವುದಿಲ್ಲ. ನಾವೆಲ್ಲ ಭಗವಂತನೆದುರಿಗೆ ತಪ್ಪಿತಸ್ಥರೆ. ಕೆಲವರು ಅದನ್ನು ಒಪ್ಪಿಕೊಂಡಿರುವರು, ಇನ್ನು ಕೆಲವರು ಒಪ್ಪಿಕೊಂಡಿಲ್ಲ. ಒಬ್ಬರ ಗುಟ್ಟು ರಟ್ಟಾಗಿದೆ, ಇನ್ನೊಬ್ಬರದು ಇನ್ನೂ ಆಗಿಲ್ಲ. ಒಂದು ಕಾಲದಲ್ಲಿ ಅಜ್ಞಾನದಲ್ಲಿದ್ದಾಗ ನಾವೆಲ್ಲ ತಪ್ಪನ್ನು ಮಾಡಿದವರೆ. ಮಾನವನ ಯಾತ್ರೆ ಅಜ್ಞಾನದಿಂದ ಜ್ಞಾನದ ಕಡೆ ಸಾಗುತ್ತಿದೆ. ಅಜ್ಞಾನದಲ್ಲಿರುವಾಗ ನಾವೆಲ್ಲಾ ಮಾಡಬಾರದುದನ್ನು ಮಾಡಿರುವೆವು. ಆದರೆ ಅದಕ್ಕಾಗಿ ಸುಮ್ಮನೆ ಕುಳಿತುಕೊಂಡು ಅಳಬೇಕಾಗಿಲ್ಲ, ಪಾಪವನ್ನು ತೊಳೆಯುವ ಗಂಗೆ ಹತ್ತಿರದಲ್ಲೇ ಹರಿಯುತ್ತಿರುವಳು. ಅವಳಲ್ಲಿ ಮಿಂದರೆ ಸಾಕು, ನಮ್ಮ ಪಾಪವನ್ನೆಲ್ಲಾ ತೊಳೆಯುವಳು. ನಮ್ಮನ್ನೆಲ್ಲಾ ಉದ್ಧಾರ ಮಾಡುವಳು. ನೀವು ಮಡಿಯಾಗಿ ನನ್ನಲ್ಲಿಗೆ ಬನ್ನಿ ಎಂದು ಹೇಳುವುದಿಲ್ಲ ಗಂಗೆ, ನೀವು ಹೇಗೆ ಇದ್ದೀರೊ ಹಾಗೆ ಬಂದರೆ ಸಾಕು, ನಾನು ನಿಮ್ಮನ್ನು ಉದ್ಧಾರ ಮಾಡುತ್ತೇನೆ ಎನ್ನುವಳು. ಭಗವಂತನ ಕೃಪೆಯ ಗಂಗಾನದಿ ಈಗಲೂ ಹರಿಯುತ್ತಿದೆ. ಅದು ಎಲ್ಲಾ ಪಾಪಿಗಳಿಗೂ ಅಜ್ಞರಿಗೂ ಒಂದು ಭರವಸೆಯನ್ನು ಕೊಡುತ್ತಿದೆ. “ನನ್ನ ಭಕ್ತ ಎಂದಿಗೂ ನಾಶವಾಗುವುದಿಲ್ಲ” ಎಂದು ಭಗವದ್ಗೀತೆಯನ್ನು ಹೇಳುವ ಅವತಾರ ಪುರುಷನಾದ ಶ್ರೀಕೃಷ್ಣನು ಅರ್ಜುನನನ್ನು ನಿಮಿತ್ತ ಮಾಡಿಕೊಂಡು ಮಾನವಕೋಟಿಗೆ ಸಾರುವನು. ರಾಮಾವತಾರದಲ್ಲಿ ವಿಭೀಷಣನನ್ನು ನಿಮಿತ್ತ ಮಾಡಿಕೊಂಡು “ಯಾವಾಗ ಒಬ್ಬ ನನ್ನಲ್ಲಿ ಶರಣಾಗುತ್ತಾನೆಯೋ ಅವನಿಗೆ ಎಲ್ಲಾ ಭೂತಗಳಿಂದಲೂ ಅಭಯವನ್ನು ಕೊಡುತ್ತೇನೆ, ಇದು ನನ್ನ ವ್ರತ” ಎಂದು ಸಾರುತ್ತಾನೆ. ಅವನ ಕೃಪೆ ಸದಾ ಕಾದಿರುವುದು ನಮ್ಮನ್ನು ಉದ್ಧರಿಸುವುದಕ್ಕೆ, ಅದನ್ನು ಹೇಗೆ ಪಡೆಯಬೇಕೆಂದು ಸಾರುವುದೇ ಗೀತೆ.
(೧೪) ಭಗವದ್ಗೀತೆಯ ವಿಶ್ವಸಂದೇಶ—ಸ್ವಾಮಿ ರಂಗನಾಥಾನಂದಜೀ ಮಹಾರಾಜ್—ಪ್ರಸ್ತಾವನಾ
ಕನ್ನಡ ಭಾಷಾಂತರಕ್ಕೆ ಮುನ್ನುಡಿ
ಆಧ್ಯಾತ್ಮಿಕ ಜೀವನವೆಂದರೆ ಸಮಾಜದಿಂದ ದೂರವಾಗಿ ಕಾಡಿನಲ್ಲೋ, ಪರ್ವತಪ್ರದೇಶದಲ್ಲೋ, ಗುಹೆಯಲ್ಲೋ ಅಥವಾ ಆಶ್ರಮದಲ್ಲೋ ಇದ್ದು ಸಾಧನೆ ಮಾಡುವುದಲ್ಲ. ಸಮಾಜದ ನಡುವೆಯೇ ಆಧ್ಯಾತ್ಮಿಕ ಜೀವನ ಸಾಗಬೇಕು, ಆಧ್ಯಾತ್ಮಿಕ ತತ್ತ್ವಗಳು ನಮ್ಮ ದೈನಂದಿನ ಜೀವನದಲ್ಲಿ ಕಾರ್ಯಕಾರಿಯಾಗಬೇಕು, ನಮ್ಮ ಸಾಮಾಜಿಕ ಜೀವನವನ್ನು ಸುಖ ಶಾಂತಿ ಸೌಹಾರ್ದಗಳಿಂದ ತುಂಬಿ ಸಮಾಜದ ಉನ್ನತಿಗೆ ಸಹಾಯಕವಾಗಬೇಕು, ಮತ್ತು ನಮ್ಮ ಪ್ರತಿಯೊಂದು ವೈಯಕ್ತಿಕ ಹಾಗೂ ಸಾಮಾಜಿಕ ಚಟುವಟಿಕೆಯನ್ನು ಅವು ಬೆಳಗುವಂತಾಗಬೇಕು. ಹೀಗೆ ಜೀವನದ ಪ್ರತಿಯೊಂದು ಕ್ಷೇತ್ರವೂ ಧರ್ಮಕ್ಷೇತ್ರವಾಗಬೇಕೆಂಬುದು ಭಗವದ್ಗೀತೆಯ ಮುಖ್ಯ ಸಂದೇಶ.
ಈ ಸಂದೇಶವನ್ನು ಅತ್ಯಂತ ಸಮರ್ಥ ರೀತಿಯಲ್ಲಿ, ಆಧುನಿಕ ಸಾಮಾಜಿಕ ಪರಿಸ್ಥಿತಿಗೆ ಹೊಂದಿಕೆಯಾಗುವಂತೆ, ಆಧುನಿಕ ಚಿಂತನೆಗೆ ವಿರುದ್ಧವಾಗದಂತೆ, ಸಂನ್ಯಾಸಿ ಗೃಹಸ್ಥರೆನ್ನದೆ ಎಲ್ಲರಿಗೂ ಅನ್ವಯವಾಗುವಂತೆ, ಜೀವನದ ಯಾವುದೇ ಕ್ಷೇತ್ರದಲ್ಲಿರುವವರೂ ಓದಿ ಪ್ರಯೋಜನ ಪಡೆಯಬದುದಾದ ರೀತಿಯಲ್ಲಿ ಮತ್ತು ಅಷ್ಟೇ ಅಲ್ಲದೆ, ಜಾಗತಿಕ ಸಮಸ್ಯೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವುಗಳಿಗೂ ಒಂದು ಪರಿಹಾರವನ್ನು ನೀಡುವ ಸದುದ್ದೇಶದಿಂದ ಸ್ವಾಮಿ ರಂಗನಾಥಾನಂದಜೀಯವರು ಈ ಗೀತಾ ವ್ಯಾಖ್ಯಾನದ ಮೂಲಕ ಜಗತ್ತಿಗೆ ಸಾರಿದ್ದಾರೆ. ಈ ವ್ಯಾಖ್ಯಾನದುದ್ದಕ್ಕೂ ನಮ್ಮ ಗಮನಕ್ಕೆ ಬರುವ ಅತ್ಯಂತ ಹೃದಯಸ್ಪರ್ಶಿಯಾದ ಸಂಗತಿಯೆಂದರೆ ಪೂಜ್ಯ ಸ್ವಾಮೀಜಿಯವರಿಗಿರುವ ಆಳ ಸಾಮಾಜಿಕ ಕಳಕಳಿ. ಈ ಗ್ರಂಥವನ್ನು ಓದುವ ಯಾರಿಗೂ ಈ ಕಳಕಳಿಯ ಬಿಸಿ ತಾಕದೆ ಇರದು, ಸ್ವಲ್ಪವಾದರೂ ಅವರ ಮನ ಪರಿವರ್ತನೆ ಆಗದೆ ಇರದು. ಗೀತೆ ಒಂದು ಅನುಷ್ಠಾನದ ಗ್ರಂಥ. ಅದು ಪೂಜ್ಯವಾದರೂ ಕೇವಲ ಪೂಜಿಸಬೇಕಾದ ಅಥವಾ ಪಠಿಸಬೇಕಾದ ಗ್ರಂಥವಲ್ಲ. ಉಪನಿಷತ್ತುಗಳೆಂಬ ಹಸುವಿನಿಂದ ಕರೆಯಲಟ್ಟ ಹಾಲಿನಂತಿರುವ ಈ ಗೀತಾಮೃತವನ್ನು ಎಲ್ಲರೂ ಕುಡಿದು ತಮ್ಮ ಜೀವನವನ್ನೂ ಸಮಾಜವನ್ನೂ ಸಮೃದ್ಧಗೊಳಿಸಬೇಕು ಎಂಬುದು ಸ್ವಾಮೀಜಿಯವರ ಒತ್ತಾಸೆಯಾಗಿದೆ.
ಭಗವದ್ಗೀತೆಯ ವಿಶ್ವಸಂದೇಶ
ಭಗವದ್ಗೀತೆಯನ್ನು ಕುರಿತಾದ ಹಲವಾರು ಗ್ರಂಥಗಳಿವೆ. ಅಂಥ ಗ್ರಂಥಗಳಲ್ಲಿ ಇದೂ ಒಂದು. ಅಂತಹ ವಿಶೇಷವೇನೂ ಇರಲಿಕ್ಕಿಲ್ಲ ಎಂಬ ಧೋರಣೆಯಿಂದ ಈ ಗ್ರಂಥವನ್ನು ಸಾಮಾನ್ಯ ಗ್ರಂಥಗಳ ಗುಂಪಿಗೆ ಸೇರಿಸುವಂತಿಲ್ಲ. ಒಮ್ಮೆ ಓದಲು ಕೈಗೆತ್ತಿಕೊಂಡರೆ ಇದರ ವಿಶಿಷ್ಟತೆ, ವಿಚಾರಗಳ ಪ್ರಸ್ತುತತೆ, ಶೈಲಿಯ ಸೊಬಗು ಮತ್ತು ಲಾಲಿತ್ಯ ಓದುಗರ ಗಮನವನ್ನು ಸೆಳೆದು ಗ್ರಂಥವೇ ಓದಿಸಿಕೊಂಡು ಹೋಗುತ್ತದೆ. ಈ ಆನಂದದಾಯಕ ಅಧ್ಯಯನವೆಂಬ ಪ್ರವಾಸದ ಸಂದರ್ಭದಲ್ಲಿ ನಾವು ವಿಶ್ವದ ಹಲವಾರು ಚಿಂತಕರನ್ನು ಸಂಧಿಸುತ್ತೇವೆ, ನೂತನ ವಿಚಾರಧಾರೆಯ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತೇವೆ, ಉನ್ನತ ತಾತ್ತ್ವಿಕ ಭಾವನೆಗಳ ಶಿಖರಗಳನ್ನು ಏರಿಳಿಯುತ್ತೇವೆ, ಆಳವಾದ ಆಧ್ಯಾತ್ಮಿಕ ಚಿಂತನೆಗಳ ಮಡುವಿನಲ್ಲಿ ಮಿಂದು ಪುನೀತರಾಗುತ್ತೇವೆ ಮತ್ತು ಆನುಷ್ಠಾನಿಕ ಸಲಹೆ ಸೂಚನೆಗಳ ವಿವಿಧ ಸನ್ನಿವೇಶಗಳನ್ನು ಎದುರಿಸುತ್ತೇವೆ.
ಈ ಆಂಗ್ಲ ಗ್ರಂಥವು ಮೊದಲು ಕೊಲ್ಕತ್ತದ ಅದ್ವೈತ ಆಶ್ರಮದಲ್ಲಿ ಪ್ರಕಟಗೊಂಡಿದ್ದು ಈಗ ಕನ್ನಡದಲ್ಲಿ ನಾವು ಇದನ್ನು ಪ್ರಕಟಿಸುತ್ತಿದ್ದೇವೆ. ಈ ಗ್ರಂಥದ ಅನುವಾದವನ್ನು ಸಮರ್ಪಕವಾಗಿಯೂ ಶೀಘ್ರವಾಗಿಯೂ ಮಾಡಿಕೊಟ್ಟಿರುವುದು ಮಾತ್ರವಲ್ಲದೆ ಅಕ್ಷರ ಜೋಡಣೆಯನ್ನೂ ಮಾಡಿರುವ, ಶ್ರೀ ಹೆಚ್.ರಾಮಚಂದ್ರಸ್ವಾಮಿಯವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
ಅನೇಕರು ಈ ಅಪೂರ್ವ ಗ್ರಂಥದ ಪ್ರಯೋಜನವನ್ನು ಪಡೆಯಲಿ ಎಂದು ಇದನ್ನು ಸಾಧ್ಯವಾದಷ್ಟೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ….
ಪ್ರಕಾಶಕರ ಮುನ್ನುಡಿ
ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ನಿನ ಅಧ್ಯಕ್ಷರಾದ ಸ್ವಾಮಿ ರಂಗನಾಥಾನಂದಜೀ ಅವರ ಮೂರು ಸಂಪುಟಗಳ ಪುಸ್ತಕ ಭಗವದ್ಗೀತೆಯ ವಿಶ್ವಸಂದೇಶದ ಮೊದಲ ಸಂಪುಟವನ್ನು ನಮ್ಮ ಓದುಗರ ಮುಂದಿರಿಸಲು ನಮಗೆ ಸಂತೋಷವಾಗುತ್ತಿದೆ. ಇಲ್ಲಿ ಗೀತೆಯ ಒಂದೊಂದು ಶ್ಲೋಕವನ್ನೂ ಪ್ರತಿಪಾದನೆ ಮಾಡಲಾಗಿದೆ. ಈ ವ್ಯಾಖ್ಯಾನವು ಹೈದರಾಬಾದ್ ರಾಮಕೃಷ್ಣ ಮಠದ ೧೨೦೦ ಆಸನವ್ಯವಸ್ಥೆಯುಳ್ಳ ವಿವೇಕಾನಂದ ಹಾಲ್‌ನಲ್ಲಿ ೧೯೮೮ ರಿಂದ ೧೯೯೦ ರ ವರೆಗೆ ಭಾನುವಾರದ ಉಪನ್ಯಾಸಗಳ ಸರಮಾಲೆಯಾಗಿ ಮೊದಲು ಕೊಡಲ್ಪಟ್ಟಿತು. ಅದು ನಗರದ ಯುವಜನರೂ ಸೇರಿದಂತೆ ಬಗೆಬಗೆಯ ಜನಗಳಿಂದ ಕೂಡಿದ ಕಿಕ್ಕಿರಿದ ಶ್ರೋತೃವೃಂದವನ್ನು ವಾರವಾರವೂ ತಪ್ಪದೆ ಆಕರ್ಷಿಸುತ್ತಿತ್ತು.
ಪೂರ್ವಸಿದ್ಧತೆಯಿಲ್ಲದೆ ಕೊಟ್ಟ ಈ ಉಪನ್ಯಾಸಗಳು ದಾಖಲಿಸಲ್ಪಟ್ಟು ಅವುಗಳ ಆಡಿಯೋ ಮತ್ತು ವಿಡಿಯೋ ಕ್ಯಾಸೆಟ್‌ಗಳು ಭಾರತದ ಹಾಗೂ ಇತರ ದೇಶಗಳ ವಿವಿಧ ಭಾಗಗಳಲ್ಲಿ ಅನೇಕಾನೇಕ ಮನೆಗಳಿಗೆ ತಲುಪಿರುವುವು. ವಿಷಯದ ಸ್ವರೂಪ, ಭಾಷಣಕಾರರು ಅದನ್ನು ನಿರ್ವಹಿಸಿದ ರೀತಿ, ಅಲ್ಲದೆ ಅದನ್ನು ಪ್ರತಿಪಾದಿಸಿದ ವಿಧಾನ, ಎಲ್ಲವೂ ಜನರ ಗಮನವನ್ನು ಹಿಡಿದಿಟ್ಟುಕೊಂಡಿದ್ದುವು; ಬೃಹದ್ಗಾತ್ರದ, ವಿವಿಧ ರೀತಿಯ ಜನಸ್ತೋಮದ ಆಸಕ್ತಿ ಕುತೂಹಲಗಳನ್ನೂ ಉತ್ಸಾಹವನ್ನೂ ತಪ್ಪದೇ ಸ್ಥಿರವಾಗಿಟ್ಟುಕೊಂಡಿದ್ದವು. ಅನೇಕಾನೇಕ ಪ್ರಚೋದಕವಾದ ಮತ್ತು ಮುದಗೊಳಿಸಿ ಹೊಸತನವನ್ನುಂಟುಮಾಡುವ ಪರಿಕಲ್ಪನೆಗಳಿಂದ ತುಂಬಿದ, ಹಾಗೂ ಸಂದರ್ಭಾನುಸಾರವಾಗಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಖ್ಯಾತ ಕವಿಗಳ, ವಿಜ್ಞಾನಿಗಳ, ಸಾಹಿತಿಗಳ, ಚರಿತ್ರಕಾರರ ಕೃತಿಗಳಿಂದ ಉಜ್ವಲವಾದ ಉಲ್ಲೇಖಗಳನ್ನು ಪುಂಖಾನುಪುಂಖವಾಗಿ ಸೆಳೆದು ತರುವ ಈ ವ್ಯಾಖ್ಯಾನವು, ಎಲ್ವಿನ್ ಆರ್ನಾಲ್ಡ್‌ನಿಂದ ಸ್ವರ್ಗೀಯ ಗಾನವೆಂದು ಕರೆಸಿಕೊಂಡ ಗೀತೆಯಲ್ಲಿನ ಸಾರ್ವತ್ರಿಕ ಮತ್ತು ಮಾನವಿಕ ಬೋಧನೆಗಳನ್ನು ಆಧುನಿಕ ಚಿಂತನೆಯ ಹಾಗೂ ಆಧುನಿಕ ಅವಶ್ಯಕತೆಗಳ ಸನ್ನಿವೇಶಕ್ಕೆ ತಕ್ಕಂತೆ ಪ್ರಸ್ತುತಪಡಿಸುತ್ತದೆ. ಆದ್ದರಿಂದ ಇದು ಮೊದಲಿನಿಂದ ಕೊನೆಯವರೆಗೆ ಓದುಗರನ್ನು ತನ್ನಲ್ಲಿ ಪೂರ್ಣವಾಗಿ ಲೀನಗೊಳಿಸಿಕೊಂಡುಬಿಡುವುದರಲ್ಲಿ ಸಂದೇಹವಿಲ್ಲ. ಗೀತೆಯ ಮೇಲಣ ಈ ಮೂರು ಸಂಪುಟಗಳ ಕೃತಿಯು, ಮುಂಬಯಿಯ ಭಾರತೀಯ ವಿದ್ಯಾಭವನದವರು ಪ್ರಕಟಿಸಿರುವ, ಈಗ ಏಳನೆಯ ಆವೃತ್ತಿಯಲ್ಲಿರುವ, ಸ್ವಾಮೀಜಿಯ ಉಪನಿಷತ್ತುಗಳ ಸಂದೇಶಕ್ಕೆ ಒಂದು ಆಶ್ಚರ್ಯಕರ ಜೊತೆಯೂ ಆಗುವುದು. ಉಪನಿಷತ್ತುಗಳ ಸಂದೇಶದಲ್ಲಿ ಜೀವವಿಜ್ಞಾನಿ ದಿವಂಗತ ಸರ್ ಜೂಲಿಯನ್ ಹಕ್ಸ್ ಲೇಯವರ ಜೊತೆಗೆ ಸ್ವಾಮೀಜಿ ನಡೆಸಿದ ಪತ್ರಸಂವಾದವನ್ನು ಉಪೋದ್ಘಾತವಾಗಿ ಸೇರಿಸಲಾಗಿದೆ.
ಈ ಉಪನ್ಯಾಸಗಳನ್ನು ಆಡಿಯೋ ಕ್ಯಾಸೆಟ್‌ಗಳಿಂದ ಲಿಪಿಯಾಗಿ ಪರಿವರ್ತಿಸುವ ಕಾರ್ಯದಲ್ಲಿ ನಾವು ರಾಮಕೃಷ್ಣ ಮಿಷನ್‌ನ ಸ್ವಾಮಿ ಸತ್ಯಪ್ರಿಯಾನಂದ ಹಾಗೂ ಸಂಸ್ಕೃತ ವಿಶಾರದೆಯೂ ವೇದಾಂತ ವಿದ್ಯಾರ್ಥಿನಿಯೂ ಆದ ರೊಮೇನಿಯಾದ ಮಿಸ್ ದಾನಾ ಸುಗು ಇವರುಗಳಿಂದ ಗಣನೀಯ ಪ್ರಮಾಣದ ಸಹಾಯವನ್ನು ತೆಗೆದುಕೊಂಡಿದ್ದೇವೆ. ಮಿ. ದಾನಾ ಸುಗು ಅವರು ರೊಮೇನಿಯಾ ಭಾಷೆಗೆ ಮಾಡಿರುವ ಉಪನಿಷತ್ತುಗಳ ಭಾಷಾಂತರಗಳು ಬುಖಾರೆಸ್ಟ್‌ನಲ್ಲಿ ಪ್ರಕಟವಾಗಿವೆ. ಈ ಗೀತೆಯ ಮೇಲಣ ಉಪನ್ಯಾಸಗಳನ್ನು ಸ್ವಾಮಿ ರಂಗನಾಥಾನಂದಜಿಯವರು ಸ್ವಾಮಿ ಸತ್ಯಪ್ರಿಯಾನಂದ, ಬ್ರಹ್ಮಚಾರಿ ಶಾಶ್ವತ ಚೈತನ್ಯ ಮತ್ತು ಸ್ವಾಮಿ ನಿಶ್ಚಲಾನಂದ ಇವರುಗಳ ಸಹಾಯದೊಂದಿಗೆ ಆಮೂಲಾಗ್ರವಾಗಿ ಸಂಪಾದಿಸಿದ್ದಾರೆ. ತಾವು ೯೧ನೆಯ ವಯಸ್ಸಿನಲ್ಲಿದ್ದು ತಮ್ಮ ಆರೋಗ್ಯ ಸೂಕ್ಷ್ಮವಾಗಿರುವುದರಿಂದ ಇವರುಗಳ ಶ್ರದ್ಧಾಪೂರ್ಣ ಸಹಾಯವಿಲ್ಲದೆ ಇದ್ದಿದ್ದರೆ ಈ ಕೃತಿ ಹೊರಬರಲು ಆಗುತ್ತಲೇ ಇರಲಿಲ್ಲ ಎನ್ನುತ್ತಾರೆ ಸ್ವಾಮೀಜಿ.
ಮೊದಲನೆಯ ಸಂಪುಟವು ಗೀತೆಯ ಮೊದಲ ನಾಲ್ಕು ಅಧ್ಯಾಯಗಳನ್ನು ಪ್ರಸ್ತುತಪಡಿಸುತ್ತಿದೆ. ಸದ್ಯದಲ್ಲೇ ಇನ್ನುಳಿದ ಹದಿನಾಲ್ಕು ಅಧ್ಯಾಯಗಳನ್ನು ಎರಡನೆಯ ಮತ್ತು ಮೂರನೆಯ ಸಂಪುಟಗಳ ರೂಪದಲ್ಲಿ ಹೊರತರಲು ಸ್ವಾಮಿ ರಂಗನಾಥಾನಂದಜಿ ಹಾಗೂ ಪ್ರಕಾಶಕರು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುವರು. (ಈಗ ಆ ಎಲ್ಲಾ ಮೂರು ಸಂಪುಟಗಳೂ ಆಂಗ್ಲ ಭಾಷೆಯಲ್ಲಿ ಪ್ರಕಟವಾಗಿವೆ.)
ಗುರುಪೂರ್ಣಿಮಾ ೧೬ ಜುಲೈ ೨೦೦೦
ಪ್ರಕಾಶಕರು ಅದೈತ ಆಶ್ರಮ ಕೊಲ್ಕತ
ಪ್ರಸ್ತಾವನೆಯ ಉಪಶೀರ್ಷಿಕೆಗಳು
ಪೀಠಿಕೆಯ ಮಾತು; ಗೀತೆಯ ಬಗ್ಗೆ ಭಾರತದ ಈವರೆಗಿನ ತಪ್ಪು ತಿಳುವಳಿಕೆ - ಗೀತೆಯ ಮೊಟ್ಟಮೊದಲ ಇಂಗ್ಲಿಷ್ ಅನುವಾದ- ಗೀತೆಯ ಹಿರಿಮೆ - ಗೀತಾ ಧ್ಯಾನಶ್ಲೋಕಗಳು - - - ಆದಿ ಶಂಕರರಿಂದ ಪ್ರಕಾಶಿಸಲ್ಪಟ್ಟ ಜ್ಞಾನಮುದ್ರೆಯ ಮಹತ್ವ - - - ತಪಸ್ಸಿನ ಅರ್ಥ ಮತ್ತು ಮಹತ್ವ - ಆದಿ ಶಂಕರಾಚಾರ್ಯರ ಗೀತಾಭಾಷ್ಯದ ಮುನ್ನುಡಿ - ಮಾನವ ಬದುಕಿನ ಎರಡು ಮಾರ್ಗಗಳು: ಪ್ರವೃತ್ತಿ ಮತ್ತು ನಿವೃತ್ತಿ - ಅಭ್ಯುದಯ ಮತ್ತು ನಿಃಶ್ರೇಯಸ ಎಂಬೆರಡು ಮಾರ್ಗಗಳ ಫಲಗಳು- ಐಂದ್ರಿಯಕ ಮೌಲ್ಯಗಳ ಮೇಲುಗೈಯಿಂದ ಉಂಟಾಗುವ ಕೇಡುಗಳು - ಬ್ರಾಹ್ಮಣತ್ವ: ಮಾನವ ವಿಕಾಸದ ಗುರಿ ಬ್ರಾಹ್ಮಣತ್ವದ ಆದರ್ಶವನ್ನು ಕುರಿತು ಭಗವಾನ್ ಬುದ್ಧ - ಶ್ರೀರಾಮಕೃಷ್ಣರ ದೈವತ್ವದ ಬಗ್ಗೆ ವಿವೇಕಾನಂದರು- ಶ್ರುತಿ ಸ್ಮೃತಿಗಳೆಂಬ ಭಾರತದ ಕಲ್ಪನೆ - ಮಾನವ ವಿಕಾಸದ ಪ್ರಗತಿಯಲ್ಲಿ ದೇವರ ಅವತಾರದ ಪಾತ್ರ - ಅಮೆರಿಕಾವೂ ಅವನತಿಯ ಹಾದಿಯಲ್ಲಿದೆಯೇ ಮತ್ತು ಹೇಗೆ ಅದನ್ನು ತಪ್ಪಿಸಬಹುದು - ಹೇಗೆ ಭಾರತವು ಅನೇಕ ಅವನತಿಯನ್ನು ಅನುಭವಿಸಿದರೂ ಸಾವನ್ನು ತಪ್ಪಿಸಿಕೊಂಡಿತು - ಸಂಸ್ಕೃತಿಗಳ ಸಂಕಲನದಿಂದ ಸಾಂಸ್ಕೃತಿಕ ಅವನತಿಗೆ ತಡೆಯುಂಟಾದದ್ದು - ಉಪಸಂಹಾರ -
ಗೀತೆಯು ಅನುಷ್ಠಾನ ತತ್ತ್ವಕ್ಕೆ ಸಂಬಂಧಿಸಿದುದು, ಅದೊಂದು ಧಾರ್ಮಿಕ ವಿಧಿಗೆ ಸಂಬಂಧಿಸಿದ ಗ್ರಂಥವಲ್ಲ ಎಂಬುದನ್ನು ಸ್ವಾಮಿ ರಂಗನಾಥಾನಂದರು ಶ್ರೋತೃಗಳಿಗೆ ನೆನಪಿಸಿಕೊಡುತ್ತಾರೆ. ಅನೇಕರು ಗೀತೆಯ ಮುಖ್ಯ ಉದ್ದೇಶವನ್ನು ಅರ್ಥಮಾಡಿಕೊಳ್ಳದೆ ಅದನ್ನು ಧಾರ್ಮಿಕ ವಿಧಿಯಂತೆ ಅಥವಾ ಧ್ಯಾನ ಸಹಾಯಕವಾಗಿ ಪಠಿಸುತ್ತಾರೆ. ಆದರೆ ಸ್ವಾಮೀಜಿಯವರು ಗೀತೆಯನ್ನು ಅನುಷ್ಠಾನ ವೇದಾಂತದ ಅತಿಶ್ರೇಷ್ಠ ಗ್ರಂಥವಾಗಿಯೂ ಜೀವನ ಮತ್ತು ಕರ್ಮದ ಸಮಗ್ರ ತತ್ತ್ವವಾಗಿಯೂ ಓದುಗರ ಮುಂದಿಡುತ್ತಾರೆ. ಅದು ವಿರಕ್ತತತ್ತ್ವವಲ್ಲ ಅಥವಾ ಜಗತ್ತನ್ನು ತಿರಸ್ಕರಿಸುವ ತತ್ತ್ವವೂ ಅಲ್ಲ— ಎಂಬ ಅಂಶವನ್ನು ಅವರು ಒತ್ತಿ ಹೇಳುತ್ತಾರೆ. ಗೀತೆಯು ಕ್ರಿಯಾಶೀಲ ಜೀವನಕ್ಕೆ ಪ್ರಾಮುಖ್ಯ ನೀಡುತ್ತದೆ. ಆದರೆ ಆ ಕ್ರಿಯೆ ಮಾನವೀಯ ಕಳಕಳಿಯಿಂದಲೂ ಸೇವಾ ಮನೋಭಾವದಿಂದಲೂ ಪ್ರೇರೇಪಿತವಾಗಿರಬೇಕು.
— ಶ್ರೀ ಪಿ.ಸಿ. ಅಲೆಕ್ಸಾಂಡರ್ (ಮಹಾರಾಷ್ಟ್ರದ ರಾಜ್ಯಪಾಲರು)
ಸ್ವಾಮಿ ರಂಗನಾಥಾನಂದರ ಗೀತಾ ನಿರೂಪಣೆ ಅನೇಕ ಬಗೆಯಲ್ಲಿ ಅನನ್ಯವಾಗಿದೆ ಎಂಬುದನ್ನು ನಾನು ಕಂಡಿದ್ದೇನೆ. ಅದು ಅತ್ಯಂತ ಸರಳವಾಗಿದ್ದೂ ಮೋಹಕ ಪಾಂಡಿತ್ಯವನ್ನೂ ಒಳಗೊಂಡಿದೆ...... ಶ್ರೀಕೃಷ್ಣನ ಸಂದೇಶದ ಆಳ ಅರ್ಥ, ಒಳಸೂಕ್ಷ್ಮಗಳನ್ನು ವಿವರಿಸುತ್ತಲೇ ಸ್ವಾಮೀಜಿ ನಿಮ್ಮನ್ನು ಜ್ಞಾನೋದಯಕ್ಕೆ ಕಾರಣವಾಗುವ ಬೌದ್ಧಿಕ ಸಂಶೋಧನಾ ಪ್ರವಾಸಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ನೀವು ಬುದ್ಧ, ಮಹಾವೀರ, ಟಾವೊ, ಕ್ರಿಸ್ತ ಮತ್ತು ಪಶ್ಚಿಮದ ಬಹುತೇಕ ತಾತ್ತ್ವಿಕರನ್ನು ಭೇಟಿಯಾಗುತ್ತೀರಿ. ಅವರ ಆಲೋಚನೆಗಳನ್ನು ತಮ್ಮ ಬುದ್ಧಿಚಾತುರ್ಯದ ಮೂಲಕ ಶ್ರೀಕೃಷ್ಣನ ಸಂದೇಶದೊಡನೆ ಹೊಂದಿಸುತ್ತಾರೆ.
—ಶ್ರೀ ರಫಿಕ್ ಜಕಾರಿಯಾ
ಪ್ರಸ್ತಾವನೆ
ಗೀತೆಯ ಹೃದಯಂಗಮತೆ ಮತ್ತು ಶಕ್ತಿ
ಉಪನಿಷತ್ತುಗಳ ಒಂದು ಶಾಂತಿಪಾಠದಿಂದ ಆರಂಭಿಸೋಣ.
ಓಂ ಸಹನಾವವತು | ಸಹನೌ ಭುನಕ್ತು | ಸಹವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು | ಮಾ ವಿದ್ವಿಷಾವಹೈ | ಓಂ ಶಾಂತಿಃ ಶಾಂತಿಃ ಶಾಂತಿಃ || -
“ಓಂ, ದೇವರು ನಮ್ಮನ್ನು (ಆಚಾರ್ಯ ಹಾಗೂ ಶಿಷ್ಯರನ್ನು) ಒಟ್ಟಿಗೇ ರಕ್ಷಿಸಲಿ. ನಮ್ಮನ್ನು ಒಟ್ಟಿಗೇ ಪೋಷಿಸಲಿ. ನಾವು ಒಟ್ಟಿಗೇ ಶಕ್ತಿಯನ್ನು ಪಡೆಯೋಣ. ನಾವು ಈ ಅಧ್ಯಯನದಿಂದ ತೇಜೋವಂತರಾಗೋಣ. ನಾವು ಪರಸ್ಪರ ದ್ವೇಷಿಸದಿರೋಣ. ಶಾಂತಿ, ಶಾಂತಿ, ಶಾಂತಿ ಓಮ್. (ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ ತಾಪತ್ರಯದ ಶಾಂತಿಯಾಗಲಿ.)
ಪೀಠಿಕೆಯ ಮಾತು— ಗೀತೆಯ ಬಗ್ಗೆ ಭಾರತದ ಈವರೆಗಿನ ತಪ್ಪು ತಿಳುವಳಿಕೆ
ಈ ಸಂಜೆ ನಾವು ಭಗವದ್ಗೀತೆಯ ಅಧ್ಯಯನವನ್ನು ಪ್ರಾರಂಭಿಸೋಣ. ಮೊದಲ ಮೂರು ಅಧ್ಯಾಯಗಳು ಯೋಗದ ತತ್ತ್ವ ಮತ್ತು ಅಧ್ಯಾತ್ಮಗಳ ಕೇಂದ್ರವಸ್ತುವನ್ನು ತಿಳಿಯಪಡಿಸುತ್ತವೆ. ಈ ಯೋಗವನ್ನು ಕೃಷ್ಣನು ನಾಲ್ಕನೆಯ ಅಧ್ಯಾಯದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳುತ್ತಾನೆ. ಉಳಿದ ಹದಿನಾಲ್ಕು ಅಧ್ಯಾಯಗಳಲ್ಲಿ ಈ ತತ್ತ್ವವು ಶ್ರೀಮಂತವಾಗುತ್ತ ಹೋಗುತ್ತದೆ. ಆದರೆ ಅವನ ಮೂಲಸಂದೇಶದ ಸಾರಾಂಶವು ಎರಡನೆಯ ಮತ್ತು ಮೂರನೆಯ ಅಧ್ಯಾಯಗಳಲ್ಲಿ ಪ್ರತಿಪಾದಿಸಲ್ಪಟ್ಟಿದೆ. ಮಾನವ ಜನಾಂಗವು ಈ ಹೊಸ ಯುಗದಲ್ಲಿ ಅರಸುತ್ತಿರುವ, ಹಾಗೂ ನಮ್ಮ ಭಾರತದ ಸಂವಿಧಾನದಲ್ಲಿ ಅಡಕಗೊಳಿಸಲ್ಪಟ್ಟಿರುವ ಮಾನವೀಯ ಧ್ಯೇಯಗಳೊಂದಿಗೆ ಎಲ್ಲಾ ಸ್ತ್ರೀಪುರುಷರ ಅಂತರಂಗದಲ್ಲಿರುವ ಚಿರಂತನ ಆಧ್ಯಾತ್ಮಿಕ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಲು ನೆರವಾಗುವುದಕ್ಕೆ ಉದ್ದೇಶಪಟ್ಟು ರಚಿತವಾಗಿರುವ ಕೃತಿ ಇದು. ಈ ಕಾರಣದಿಂದಲೆ ಈಗ ಗೀತಾ ಸಂದೇಶವು ಪ್ರಪಂಚದ ವಿವಿಧ ಭಾಗಗಳಲ್ಲಿ ಹರಡುತ್ತಿರುವುದು. ನಮ್ಮ ಮಟ್ಟಿಗೆ ಹೇಳುವುದಾದರೆ, ನಾವು ಈ ನವಯುಗದಲ್ಲಿ ಸಾಂಪ್ರದಾಯಿಕಕ್ಕಿಂತ ಭಿನ್ನವಾದ ದೃಷ್ಟಿಕೋನವನ್ನು ಅನುಸರಿಸಿ ಈ ಅಧ್ಯಯನವನ್ನು ಕೈಕೊಳ್ಳಬೇಕು. ಹಿಂದಿನ ಕಾಲದಲ್ಲಿ ಜನರು ಸ್ವಲ್ಪ ಮನಶ್ಯಾಂತಿಗಾಗಿಯೋ ಪುಣ್ಯದ ಕೆಲಸವೆಂದೋ ಗೀತೆಯನ್ನು ಓದುತ್ತಿದ್ದರು. ಈ ಪುಸ್ತಕವು ಗಾಢವಾದ ಪ್ರಾಯೋಗಿಕತೆಯಿಂದ ಕೂಡಿದೆಯೆಂಬುದನ್ನೂ, ಪೂರ್ಣವಾಗಿ ವಿಕಾಸಹೊಂದಿದ ಮಾನವ ಸಮಾಜವನ್ನು ಸೃಷ್ಟಿಸಲು ನೆರವಾಗುವಂಥ ಸಾಮರ್ಥ್ಯವುಳ್ಳ ಪ್ರಾಯೋಗಿಕ ವೇದಾಂತದ ಮಹಾಕೃತಿ ಇದೆಂಬುದನ್ನೂ ಈ ಹಿಂದೆ ನಾವೆಂದೂ ಮನಗಂಡಿರ ಲಿಲ್ಲ.
ನಾವೆಂದೂ ಗೀತೆಯಲ್ಲಿನ ಬೋಧನೆಗಳ ಪ್ರಾಯೋಗಿಕ ಅನ್ವಯವನ್ನು ಅರ್ಥಮಾಡಿಕೊಂಡಿರಲಿಲ್ಲ. ಹಾಗೆ ಮಾಡಿದ್ದಿದ್ದರೆ ಸಹಸ್ರಾರು ವರ್ಷಗಳ ಕಾಲ ಅನ್ಯದೇಶೀಯರ ಆಕ್ರಮಣ, ದೇಶದೊಳಗಣ ಜಾತಿ ಕಲಹಗಳು, ಊಳಿಗಮಾನ್ಯ ಪದ್ಧತಿಯಲ್ಲಿನ ತುಳಿತ, ಬಹುಸಂಖ್ಯಾತರ ಬಡತನ ಮುಂತಾದುವುಗಳನ್ನು ನಾವು ಅನುಭವಿಸಬೇಕಾಗುತ್ತಿರಲಿಲ್ಲ. ಗೀತೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ; ಆದರೆ ಈಗ ತೆಗೆದುಕೊಳ್ಳಬೇಕಾಗಿದೆ. ಮಾನವನ ಗೌರವ, ಸಮಾನತೆ ಮತ್ತು ಸ್ವಾತಂತ್ರ್ಯದ ನೆಲೆಗಟ್ಟಿನ ಮೇಲೆ ಹೊಸದೊಂದು ಜನಹಿತ ಸಮಾಜವನ್ನು ಕಟ್ಟಲು ಸಹಾಯವಾಗುವಂಥ ಒಂದು ತತ್ತ್ವ ನಮಗಿಂದು ಅಗತ್ಯವಾಗಿದೆ. ನವೀನ ಭಾರತದಲ್ಲಿ ನಾವು ನಮ್ಮ ಮುಂದಿಟ್ಟುಕೊಂಡಿರುವ ಧ್ಯೇಯ ಇದು; ಇದೇ ಪ್ರಪಂಚದ ಎಲ್ಲ ಜನರ ಸ್ಫೂರ್ತಿಯಾಗಿರುವುದು; ಜನಗಳ ಮನಸ್ಸನ್ನೂ ಹೃದಯಗಳನ್ನೂ ಆ ನಿಟ್ಟಿನಲ್ಲಿ ಪರಿಣತರನ್ನಾಗಿಸುವ ಒಂದು ತತ್ತ್ವ ಇಲ್ಲಿ ಈ ಗೀತೆಯಲ್ಲಿದೆ. ಈ ನವಯುಗದಲ್ಲಿ ಗೀತೆಗೆ ಇಂಥದೊಂದು ದಿಗ್ದರ್ಶನವನ್ನು, ಪ್ರಾಯೋಗಿಕ ದಿಗ್ದರ್ಶನವನ್ನು ಕೊಟ್ಟಿದ್ದು ಸ್ವಾಮಿ ವಿವೇಕಾನಂದರು. ಅನೇಕ ಸಾವಿರ ವರ್ಷಗಳ ಹಿಂದೆಯೇ ಕೃಷ್ಣನು ಇತ್ತದ್ದು ಈ ವ್ಯವಹಾರ್ಯವಾದ ತತ್ತ್ವವನ್ನಾದರೂ, ಅದನ್ನು ನಾವು ಕೇವಲ ಒಂದು ಪವಿತ್ರಗ್ರಂಥವಾಗಿ ಪರಿವರ್ತಿಸಿಕೊಂಡಿದ್ದೆವು. ಗೀತೆಯ ಧ್ಯಾನಶ್ಲೋಕಗಳನ್ನು ಓದುವಾಗ ನಮಗೆ ಈ ಪ್ರಾಯೋಗಿಕತೆಯ ಕಲ್ಪನೆ ಅಲ್ಲಿ ಸಿಕ್ಕುತ್ತದೆ. ಗೌಳಿಗನಾದ ಕೃಷ್ಣನು ಅರ್ಜುನನೆಂಬ ಕರುವನ್ನಿಟ್ಟುಕೊಂಡು ವೇದೋಪನಿಷತ್ತುಗಳೆಂಬ ಹಸುವಿನಿಂದ ಕರೆದುಕೊಂಡ ಹಾಲಿಗೆ ಹೋಲಿಸಿದ್ದಾರೆ ಈ ಗೀತೆಯನ್ನು. ಯಾವುದಕ್ಕಾಗಿ ಈ ಹಾಲು? ದೇವರ ಪೂಜೆಗಲ್ಲ, ನಮ್ಮ ಪೋಷಣೆಗಾಗಿ, ನಾವು ಕುಡಿಯುವುದಕ್ಕೆ. ಅನಂತರವೇ ನಮಗೆ ಶಕ್ತಿ ಬರುವುದು. ಆದರೆ ಈ ಎಲ್ಲಾ ನೂರಾರು, ಸಹಸ್ರಾರು ವರ್ಷಗಳೂ ನಾವು ಆ ಹಾಲನ್ನು ಹೂಗಳಿಂದ ಪೂಜಿಸಿ ನಮಸ್ಕರಿಸಿದೆವೇನೋ ನಿಜ, ಆದರೆ ಅದನ್ನು ಕುಡಿಯಲಿಲ್ಲ. ಆದ್ದರಿಂದಲೇ ನಾವು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ದುರ್ಬಲರಾಗಿರುವುದು. ಈಗಲಾದರೂ ನಾವು ಈ ಹಾಲನ್ನು ಕುಡಿದು ಜೀರ್ಣಿಸಿಕೊಳ್ಳತೊಡಗಿದರೆ ಈ ಪರಿಸ್ಥಿತಿ ಬದಲಾಯಿಸುವುದು. ಅದು ನಮಗೆ ಶೀಲದ ಬಲ, ಕಾರ್ಯಸಾಮರ್ಥ್ಯ, ಸೇವಾಮನೋಭಾವಗಳನ್ನು ಬೆಳೆಸಿಕೊಳ್ಳಲು ಹಾಗೂ ರಾಷ್ಟ್ರದ ಹೊಸದೊಂದು ಭವಿಷ್ಯವನ್ನೇ ನಿರ್ಮಾಣ ಮಾಡಲು ನೆರವಾಗುವುದು.
ಭಾರತದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿದ್ದಾಗ, ನಮ್ಮ ಜನರಲ್ಲಿ ಈ ತಪ್ಪು ಕಲ್ಪನೆ ಬಹುವಾಗಿ ಹರಡಿರುವುದನ್ನು ನಾನು ನೋಡಿದೆ. ೧೯೪೯ರ ಪೋಲೀಸ್ ಕಾರ್ಯಕ್ರಮವು ಕೊನೆಗೊಳ್ಳುತ್ತಿದ್ದಂತೆ, ನವದೆಹಲಿಗೆ ಅಲ್ಲಿಯ ರಾಮಕೃಷ್ಣ ಮಿಶನ್ ಕೇಂದ್ರದ ಹೊಣೆಗಾರನಾಗುವುದಕ್ಕೆಂದು ತೆರಳುವಾಗ, ಆಂಧ್ರಪ್ರದೇಶದ ತುಂಬೆಲ್ಲ ತಿರುಗಾಡುತ್ತ, ಐದು ಉಪನ್ಯಾಸಗಳ ಕಾರ್ಯಕ್ರಮಕ್ಕಾಗಿ ಹೈದರಾಬಾದಿಗೆ ಬಂದಾಗ, ಇದು ತೀವ್ರವಾಗಿ ನನ್ನ ಗಮನಕ್ಕೆ ಬಂದಿತು. ಸಂಸ್ಥಾನದ ಮಿಲಿಟರಿ ಗೌರ್ನರ್ ಆಗಿದ್ದ ಜನರಲ್ ಜೆ. ಎನ್. ಚೌಧುರಿಯವರನ್ನು ನಾನು ಭೇಟಿ ಮಾಡಬೇಕೆಂದು ಸ್ನೇಹಿತರೊಬ್ಬರು ಸಲಹೆ ಮಾಡಿದರು. ಸರಿ, ನನ್ನ ಆತಿಥೇಯನಾಗಿದ್ದ ಆ ಸ್ನೇಹಿತನ ಜೊತೆಗೆ ಅವರನ್ನು ಭೇಟಿ ಮಾಡುವುದಕ್ಕೆಂದು ಹೋದೆ. ಜನರಲ್ ಚೌಧುರಿಯವರು ನಮ್ಮನ್ನು ಬರಮಾಡಿಕೊಂಡು ಅರ್ಧಗಂಟೆ ಕಾಲ ಮಾತನಾಡಿದರು, ನಾನು ಕೇಳುತ್ತ ಕುಳಿತಿದ್ದೆ. ಸಂಸ್ಥಾನದ ಕೆಲವು ಭಾಗಗಳಲ್ಲಿ ಕಮ್ಯುನಿಸ್ಟ್ ದಂಗೆ ಆರಂಭವಾಗುವುದರಲ್ಲಿತ್ತು; ಚೌಧುರಿಯವರು ಆಗಾಗ್ಗೆ ದೂರವಾಣಿಯಲ್ಲಿ ಮಾತನಾಡುತ್ತ ಇರಬೇಕಾಗುತ್ತಿತ್ತು; ಆದರೂ ನಮ್ಮ ಸಂಭಾಷಣೆಯೂ ಮುಂದುವರೆಯುತ್ತಿತ್ತು. ಆಗ ಅವರ ಮೇಜಿನ ಮೇಲೆ ಗೀತೆಯ ಒಂದು ಪ್ರತಿ ಇರುವುದನ್ನು ಗಮನಿಸಿದೆ. ಅದು ನಾನು ಮಾತನಾಡುವುದಕ್ಕೆ ಅವಕಾಶ ಕೊಟ್ಟಿತು. “ಜನರಲ್ ಚೌಧುರಿ, ನೀವು ಗೀತೆಯನ್ನು ಓದುತ್ತೀರಾ? ನಿಮ್ಮ ಮೇಜಿನ ಮೇಲೆ ಪುಸ್ತಕವಿರುವುದನ್ನು ನೋಡಿದೆ” ಎಂದು ಕೇಳಿದೆ. “ಹೌದು, ತುಂಬಾ ಆಯಾಸವಾದಾಗ, ಸ್ವಲ್ಪ ಮನಶ್ಯಾಂತಿ ಬೇಕೆಂದೆನಿಸಿದಾಗ, ಗೀತೆಯಿಂದ ಕೆಲವು ಸಾಲುಗಳನ್ನು ಓದಿಕೊಳ್ಳುತ್ತೇನೆ” ಎಂದು ತುಂಬಾ ದಣಿದವರಂತೆ ಉತ್ತರ ಕೊಟ್ಟರು.
'ಗೀತೆಯ ಉದ್ದೇಶ ಅದಲ್ಲವೇ ಅಲ್ಲ,' ಎಂದು ನಾನು ದೃಢವಾಗಿ ಹೇಳಿದೆ. ನನ್ನ ಮಾತಿನಿಂದ ಅವರಿಗೆ ಆಶ್ಚರ್ಯವಾಯಿತು; 'ಮನಸ್ಸಿಗೆ ಶಾಂತಿಯನ್ನು ಕೊಡುವುದಕ್ಕಿಂತ ಬೇರೆಯಾಗಿ ಈ ಪುಸ್ತಕಕ್ಕೆ ಇತರ ಮೌಲ್ಯಗಳೂ ಇವೆಯೆಂದು ನಿಮ್ಮ ಅಭಿಪ್ರಾಯವೆ?' ಎಂದು ಕೇಳಿದರು. ನಾನೆಂದೆ, “ಹೌದು, ಆ ಪುಸ್ತಕದ ಉದ್ದೇಶ ಕೇವಲ ಮನಶ್ಯಾಂತಿ ಕೊಡುವುದು ಮಾತ್ರವಲ್ಲ; ಅದಿರುವುದು ಜನರ ಸೇವೆ ಮಾಡಲು ನಿಮಗೆ ಹೆಚ್ಚಿನ ಬಲವನ್ನು ಕೊಡುವುದಕ್ಕೆ, ನಿಮ್ಮನ್ನು ಒಬ್ಬ ಜವಾಬ್ದಾರಿಯುತ ನಾಗರಿಕನನ್ನಾಗಿ ಮಾಡುವುದಕ್ಕೆ, ಬಾಳ್ವೆಯ ಹಾಗೂ ಕಾಯಕದ ಬಗೆಗಿನ ವ್ಯಾಪಕವಾದ ಒಂದು ತತ್ತ್ವವಿದೆ ಅದರಲ್ಲಿ”. ಅವರಿಗೆ ಮತ್ತೂ ಆಶ್ಚರ್ಯವಾಯಿತು. “ನಾನು ಈ ಸಂಸ್ಥಾನದ ಮಿಲಿಟರಿ ಗೌರ್ನರ್ ಆಗಿರುವುದಕ್ಕೂ ಇದು ಸಂಬಂಧಿಸಿದೆಯೆಂದು ಹೇಳುತ್ತೀರೇನು?” ಎಂದು ಪುನಃ ಪುನಃ ಕೇಳಿದರು. “ಹೌದು, ಖಂಡಿತವಾಗಿ. ಜವಾಬ್ದಾರಿಯುತ ಕಾರ್ಯಕ್ಷೇತ್ರದಲ್ಲಿರುವ ಎಲ್ಲ ಸ್ತ್ರೀಪುರುಷರಿಗೆ ಬದುಕಿನ, ಕಾರ್ಯದ ಬಗೆಗಿನ ಇಂಥದೊಂದು ತತ್ತ್ವ ಅತ್ಯಗತ್ಯವೆಂದು ನಾವೆಲ್ಲರೂ ಅರಿತುಕೊಳ್ಳಬೇಕು. ‘ಯೋಗ'ವೆಂದು ಸರಳವಾಗಿ ಕರೆಯುತ್ತ ಗೀತೆಯು ಬೋಧಿಸುವುದು ಈ ತತ್ತ್ವವನ್ನೇ. ಈವರೆಗೂ ನಾವು ಇದನ್ನು ಅರ್ಥಮಾಡಿಕೊಂಡಿರಲಿಲ್ಲ. ಗೀತೆಯ ನಾಲ್ಕನೆಯ ಅಧ್ಯಾಯದ ಮೊದಲನೆಯ ಶ್ಲೋಕವನ್ನು ತೆಗೆದುಕೊಳ್ಳಿ. ಶ್ರೀಕೃಷ್ಣನು ಅಲ್ಲಿ ನಮಗೆ ಹೇಳುತ್ತಾನೆ, ‘ಜನರನ್ನು ಪೋಷಿಸಲೆಂದು, ಜನರನ್ನು ರಕ್ಷಿಸಿ ಅವರ ಸೇವೆ ಮಾಡಲು ಸಮರ್ಥರಾಗಲೆಂದು ಈ ಯೋಗತತ್ತ್ವವನ್ನು ನಾನು ಹೊಣೆಗಾರರಾದವರಿಗೆ ಕೊಟ್ಟೆ.’ ಇದೇ ಆ ಮಹಾಕೃತಿಯ ಉದ್ದೇಶ” ಎಂದು ನಾನು ಪುನಃ ಪುನಃ ಒತ್ತಿ ಹೇಳಿದೆ. ಅವರೂ ಮತ್ತೆ ಮತ್ತೆ ಕೇಳಿದರು, 'ಈ ಸಂಸ್ಥಾನದ ಗೌರ್ನರ್ ಆಗಿರುವ ನಾನು ಈ ಪುಸ್ತಕದಿಂದ ಪಾಠ ಕಲಿತು ಹೆಚ್ಚು ಸಮರ್ಥನಾದ ಮನುಷ್ಯನಾಗಬಲ್ಲೆನೆ?' ಎಂದು. 'ಹೌದು, ಅದೇ ಈ ಪುಸ್ತಕದ ಉದ್ದೇಶ, ಹೊಣೆಗಾರರಾದ ಸ್ತ್ರೀಪುರುಷರು ಎಲ್ಲರ ಹಿತಕ್ಕಾಗಿ ದುಡಿಯುವಂತೆ ಪ್ರೇರೇಪಿಸುವುದು. ಅಂಥಾದ್ದೇ ಈ ಪುಸ್ತಕ. ಇದು ನಿಮಗೆ ನಿದ್ರೆ ತರಿಸುವುದಕ್ಕಾಗಿ ಇರುವುದಲ್ಲ; ಬದಲಿಗೆ ಎಚ್ಚರಗೊಳಿಸುವುದಕ್ಕಾಗಿ. ಇದು ನಿಮಗೆ ಕೇವಲ ಮನಶ್ಯಾಂತಿಗಾಗಿ ಅಲ್ಲ; ಸಮಾಜದ ಎಲ್ಲರ ಒಳ್ಳೆಯದಕ್ಕಾಗಿ ಕೆಲಸಮಾಡುವ ದೃಢನಿರ್ಧಾರವನ್ನೂ ಅದಕ್ಕೆ ಬೇಕಾಗುವ ಪ್ರಚಂಡ ಮಾನವೀಯ ಅನುಕಂಪವನ್ನೂ ನಿಮಗೆ ಕೊಡುವುದಕ್ಕಾಗಿ'.
ಅವರಿಗೆ ಬಹಳ ಸಂತೋಷವಾಯಿತು. ಒಂದು ಗಂಟೆ ಕಳೆಯಿತು. ಅವರನ್ನು ನಾನು ಕೇಳಿದೆ, 'ನೀವು ಸ್ವಾಮಿ ವಿವೇಕಾನಂದರ ಯಾವುದಾದರೂ ಪುಸ್ತಕವನ್ನು ಓದಿದ್ದೀರಾ?' 'ಹೌದು. ಅವರ ಹೇಳಿಕೆಗಳ ಕೆಲವು ಸಣ್ಣ ಪುಸ್ತಕಗಳನ್ನು ಓದಿದ್ದೇನೆ. ನಾನೆಂದೆ, 'ಅದು ಸಾಲದು! ನೀವು ಒಂದು ಪುಸ್ತಕವನ್ನು, ಕೊಲಂಬೋದಿಂದ ಆಲ್ಮೋರಕೆ ಎಂಬ ಇಂಡಿಯಾದಲ್ಲಿನ ಅವರ ಉಪನ್ಯಾಸಗಳನ್ನು, ಓದಬೇಕೆಂದು ನಾನು ಅಪೇಕ್ಷಿಸುತ್ತೇನೆ. ಈ ಉಪನ್ಯಾಸಗಳು ನಮ್ಮ ದೇಶವನ್ನು ಬಡಿದೆಬ್ಬಿಸಿದುವು; ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಅನೇಕ ದೇಶಭಕ್ತರನ್ನು ಹುಟ್ಟುಹಾಕಿದುವು. ಅವುಗಳ ಉದ್ದೇಶ ಜನರನ್ನು ಮಾನವರನ್ನಾಗಿಸುವುದು ಮತ್ತು ದೇಶ ಕಟ್ಟುವುದು. ನೀವು ಓದುತ್ತೇನೆಂದು ಮಾತು ಕೊಡುವುದಾದರೆ ನಿಮಗೆ ದೆಹಲಿಯಿಂದ ಒಂದು ಪುಸ್ತಕವನ್ನು ನನ್ನ ಹಸ್ತಾಕ್ಷರದೊಂದಿಗೆ ಕಳುಹಿಸಿಕೊಡುತ್ತೇನೆ. ಒಂದು ಪ್ರತಿಯನ್ನು ವ್ಯರ್ಥ ಮಾಡುವುದು ನನಗಿಷ್ಟವಿಲ್ಲ.' ಆಗಲಿ, ನಾನು ಓದುತ್ತೇನೆ' ಎಂದರವರು. ಅನಂತರ ನಾನು ಅವರನ್ನು ಬೀಳ್ಕೊಟ್ಟು ಹೊರಟೆ. ಮಾರನೆಯ ದಿನ ದೆಹಲಿಗೆ ಹೋದವನೇ ಆ ಪುಸ್ತಕವನ್ನು ಅವರಿಗೆ ಕಳುಹಿಸಿದೆ; ಅವರೂ ಧನ್ಯವಾದ ಸೂಚಿಸಿ ಒಳ್ಳೆಯದೊಂದು ಕಾಗದ ಬರೆದರು. ಅನಂತರ, ಕೆನಡಾದಲ್ಲಿ ಅವರು ಭಾರತದ ರಾಯಭಾರಿಯಾಗಿದ್ದಾಗ, ಅಲ್ಲಿನ ಫ್ರೆಂಚ್ ನಾಗರಿಕರಲ್ಲಿ ಭಾರತದ ಸಂಸ್ಕೃತಿಯನ್ನು ಹರಡುವುದಕ್ಕಾಗಿ ನನ್ನ “ಪರಿವರ್ತನಶೀಲ ಸಮಾಜಕ್ಕಾಗಿ ಶಾಶ್ವತ ಮೌಲ್ಯಗಳು” ಎಂಬ ಪುಸ್ತಕದಿಂದ ಭಾರತೀಯ ಸಂಸ್ಕೃತಿಯ ಸಾರ ಎಂಬ ಮೊದಲನೆಯ ಭಾಷಣವನ್ನು ಫ್ರೆಂಚ್ ಭಾಷೆಯಲ್ಲಿ ಪ್ರಕಟಿಸುವ ಸಂದರ್ಭದಲ್ಲಿ, ನನ್ನ ಅನುಮತಿ ತೆಗೆದುಕೊಂಡರು.
ಭಾರತದ ಮಿಲಿಯಗಟ್ಟಲೆ ಜನರು ಬೆಳಗ್ಗೆ ಪವಿತ್ರವಾದ ಕೆಲಸವೆಂದು ಸ್ತೋತ್ರಗಳನ್ನು ಹೇಳಿಕೊಳ್ಳುವ ಹಾಗೆಯೇ ಗೀತೆಯನ್ನು ಸಹ ಪರಿಗಣಿಸುತ್ತಾರೆಂದು ಈ ಅನುಭವದಿಂದ ನನಗೆ ಅರ್ಥವಾಯಿತು. ಇಂದು ಅಪ್ರತಿಹತವಾಗಿ ಬೆಳೆಯುತ್ತಿರುವ ಸ್ತ್ರೀಪುರುಷ ಸಮುದಾಯದ ಅಭಿವೃದ್ಧಿ ಸಾಧಿಸುವ ಸವಾಲನ್ನೆದುರಿಸಲು ಇಡುವ ಹೆಜ್ಜೆಹೆಜ್ಜೆಗೂ ಒಂದು ತತ್ತ್ವದ ಅವಶ್ಯಕತೆ ನಮಗಿದೆ. ಗೀತೆಯಲ್ಲಿ ನಮಗೆ ದೊರೆಯುವುದು ಇದೇ ತತ್ತ್ವ, ಅಧ್ಯಾತ್ಮ. ಕೆಲವು ಸಾವಿರ ವರ್ಷಗಳ ಹಿಂದೆ ಈ ಗೀತಾ ಸಂದೇಶವು ಕುರುಕ್ಷೇತ್ರದ ರಣರಂಗದ ತುಮುಲದ ಮಧ್ಯದಲ್ಲಿ ಕೊಡಲ್ಪಟ್ಟಿತು. ಅಂಥ ತತ್ತ್ವವು ಗೀತೆಯಲ್ಲಿ ಮಾತ್ರ ನಮಗೆ ಸಿಕ್ಕುವುದು. ಇತರ ಎಲ್ಲಾ ಬೋಧನೆಗಳು ದೇವಾಲಯದಲ್ಲೋ, ಗುಹೆಯಲ್ಲೋ, ಅರಣ್ಯದಲ್ಲೋ ಕೊಡಲ್ಪಟ್ಟವು. ಇಲ್ಲಿ ಶಿಷ್ಯ ಮತ್ತು ಗುರು, ಅರ್ಜುನ ಮತ್ತು ಶ್ರೀಕೃಷ್ಣ, ವಿಶಿಷ್ಟ ವ್ಯಕ್ತಿಗಳು; ಯೋಧರವರು. ಗುರು ಶ್ರೀಕೃಷ್ಣ ದಯಾಪೂರ್ಣನಾದವನು, ವಿಶ್ವದೃಷ್ಟಿಯನ್ನುಳ್ಳವನು.
ಹೀಗೆ ಗೀತೆ ವೀರ ಗುರುವಿನಿಂದ ವೀರ ಶಿಷ್ಯನಿಗೆ ಕೊಡಲ್ಪಟ್ಟ ವೀರ ಸಂದೇಶ. ಸಾರ್ವತ್ರಿಕ ಗುಣದಿಂದಾಗಿ ಅದು ಇಡೀ ಪ್ರಪಂಚದಲ್ಲಿ ಎಲ್ಲೇ ಇರಬಹುದಾದ ಯಾವುದೇ ಮಾನವ ಜೀವಿಗೆ, ಅವನ ಮಾನವೀಯ ಹೊಣೆಗಾರಿಕೆಯನ್ನರಿತುಕೊಳ್ಳುವುದಕ್ಕಾಗಿ ಅನ್ವಯಿಸಬಹುದಾದದ್ದಾಗಿದೆ. ಇನ್ನೂ ಒಂದು ಸಾವಿರ ವರ್ಷಗಳ ಹಿಂದೆ, ಉಪನಿಷತ್ತುಗಳು ಅಥವಾ ವೇದಾಂತ, ಮಾನವ ಸಾಧ್ಯತೆಗಳ ವಿಜ್ಞಾನವನ್ನು ಬೋಧಿಸಿದುವು; ಗೀತೆಯು ಆ ವಿಜ್ಞಾನದ ಪ್ರಾಯೋಗಿಕ ಅನ್ವಯವನ್ನು ಬೋಧಿಸಿತು. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಗೀತೆಯನ್ನು ಪ್ರಾಯೋಗಿಕ ವೇದಾಂತದ ಅತ್ಯುತ್ತಮ ಪುಸ್ತಕವೆಂದು ಪರಿಗಣಿಸಿರುವರು.
ಗೀತೆಯ ಮೊಟ್ಟಮೊದಲ ಇಂಗ್ಲಿಷ್ ಅನುವಾದ
ಗೀತೆಯನ್ನು ಮೊದಲು ಇಂಗ್ಲಿಷ್‌ಗೆ ಅನುವಾದಿಸಿದವನು ಸರ್ ಚಾರ್ಲ್ಸ್ ವಿಲ್ಕಿನ್ಸ್ ಎಂಬಾತ. ಇದನ್ನು ಭಾರತದ ಮೊಟ್ಟಮೊದಲ ಬ್ರಿಟಿಷ್ ಗೌರ್ನರ್ ಜನರಲ್ ಆದ ವಾರನ್ ಹೇಸ್ಟಿಂಗ್ಸ್ ಬರೆದ ಮುನ್ನುಡಿಯೊಂದಿಗೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಪ್ರಕಟಿಸಿತು. ಇದರಲ್ಲಿನ ಒಂದು ಭವಿಷ್ಯವಾಣಿ ಹೀಗಿದೆ:
“ಭಾರತೀಯ ತತ್ತ್ವಶಾಸ್ತ್ರವು ಇಂಡಿಯಾದಲ್ಲಿ ಬ್ರಿಟಿಷ್ ರಾಜ್ಯದ ಅವಸಾನವಾದ, ಅದರ ಸಂಪತ್ತು ಶಕ್ತಿಗಳ ಮೂಲಗಳೆಲ್ಲ ಅಳಿದು ಕೇವಲ ನೆನಪಾಗಿಬಿಟ್ಟ ಎಷ್ಟೋ ಕಾಲದ ನಂತರವೂ ಉಳಿದಿರುವುದು.'
ಒಂದು ಶತಮಾನದ ನಂತರ ಗೀತೆಯು ಮತ್ತೊಮ್ಮೆ ಇಂಗ್ಲಿಷ್‌ನಲ್ಲಿ ಹೊರಬಂದಿತು. ಅದೆಂದರೆ ಸರ್ ಎಡ್ವಿನ್ ಆರ್ನಾಲ್ಡ್ (೧೮೩೨-೧೯೦೪) ಬರೆದ “ಸ್ವರ್ಗಿಯ ಗಾನ (The Song Celestial)”. ಭಾರತದಲ್ಲಿ ಅವರು ಪುಣೆ ಮತ್ತಿತರ ಸ್ಥಳಗಳಲ್ಲಿ ಕೆಲಸಮಾಡುತ್ತಿದ್ದಾಗ ಸಂಸ್ಕೃತ ಭಾಷೆಯನ್ನು ಕಲಿತಿದ್ದರು. ಭಾರತೀಯ ಸಂಸ್ಕೃತಿಯ ಮೇಲೆ ಅತಿಶಯವಾದ ಪ್ರೇಮವನ್ನು ಬೆಳೆಸಿಕೊಂಡಿದ್ದ ಅವರು ಇಂಗ್ಲೆಂಡಿಗೆ ಹೋದಮೇಲೆ ಈ ಮಹಾಕೃತಿಯನ್ನೂ ಜೊತೆಗೆ ಬುದ್ಧನ ಮೇಲೆ ಬರೆದ ಇದರಷ್ಟೇ ಉತ್ತಮ ಕೃತಿಯಾದ ಏಷ್ಯಾದ ಬೆಳಕು (The Light of Asia) ಎಂಬುದನ್ನೂ ಹೊರತಂದರು. ಎರಡೂ ಐವತ್ತು ಅರವತ್ತು ಮುದ್ರಣಗಳನ್ನು ಕಂಡಿವೆ; ಎರಡೂ ಓದುಗನ ಹೃದಯಕ್ಕೇ ನೇರವಾಗಿ ಹೋಗಿ ಸೇರುತ್ತವೆ.
ಭಗವದ್ಗೀತೆಯು ಮಾನವೀಯ ಸಮಸ್ಯೆಗಳನ್ನು ಮಾನವೀಯ ರೀತಿಯಲ್ಲಿ ಕೈಗೆತ್ತಿಕೊಳ್ಳುತ್ತದೆ. ಅದಕ್ಕಾಗಿಯೇ ಅದು ಜನರಿಗೆ ಅಧಿಕಾಧಿಕವಾಗಿ ಇಷ್ಟವಾಗುವುದು. ಶತಶತಮಾನಗಳ ಕಾಲ ಭಾರತದಲ್ಲಿ ಮಾನವನ ಮನಸ್ಸನ್ನು ಪ್ರಚೋದಿಸಿದ ಅದು ಇಂದು ಪ್ರಪಂಚದಾದ್ಯಂತ ಅನೇಕ ದೇಶಗಳ ಮಿಲಿಯಗಟ್ಟಲೆ ಜನರಿಗೆ ಸ್ಫೂರ್ತಿಯ ಆಗರವಾಗಿದೆ. ಈ ಎಲ್ಲ ದೇಶಗಳಲ್ಲೂ, ಗೀತೆಯನ್ನೋದಿದ ನಂತರ ಜನರ ದೃಷ್ಟಿಯೇ ಬದಲಾಗಿಬಿಡುವುದು ಕುತೂಹಲಕಾರಿ. ಅಮೆರಿಕಾದಲ್ಲಿ ಎಮರ್ಸನ್, ವಾಲ್ಟ್ ವ್ಹಿಟ್‌ಮನ್, ಥೋರೋ, ಮತ್ತು ಇಂಗ್ಲೆಂಡ್‌ನಲ್ಲಿ ಕಾರ್ಲೈಲ್ ಮೊದಲಾದ ಚಿಂತಕರು ಹಾಗೂ ಬರಹಗಾರರು ಗೀತೆಯನ್ನೋದಿ ತಮ್ಮ ದೃಷ್ಟಿಕೋನವು ಆಳವೂ ವಿಸ್ತಾರವೂ ಆದುದನ್ನು ಅನುಭವಪಟ್ಟರು; ಅವರ ಬರಹಗಳು ಹೊಸ ಸಂದೇಶವನ್ನು ಹೊರತರಲಾರಂಭಿಸಿದುವು.
ಆದಿಶಂಕರರಿಂದ ಪ್ರಕಾಶಪಡಿಸಲ್ಪಟ್ಟ ಗೀತೆಯ ಹಿರಿಮೆ
ಇಂದಿನ ಕಾಲದಲ್ಲಿ ಇಡೀ ಪ್ರಪಂಚವೇ ಗೀತೆಯ ರಾಜ್ಯ ಎನ್ನಬಹುದು. ಮೊದಲು ಅದು ಇಂಡಿಯಾದಲ್ಲಿ ಕೆಲವೇ ಜನ ಸಂಸ್ಕೃತ ಪಂಡಿತರುಗಳಿಗೆ ಮಾತ್ರ ತಿಳಿದಿತ್ತು. ಕ್ರಿ.ಶ ಎಂಟನೆಯ ಶತಮಾನದಲ್ಲಿ ಮೊಟ್ಟಮೊದಲ ಬಾರಿಗೆ ಗೀತೆಯನ್ನು ಶಂಕರಾಚಾರ್ಯರು ಮಹಾಕಾವ್ಯ ಮಹಾಭಾರತದಿಂದ ಹೊರತೆಗೆದು, ಅದರ ಮೇಲೆ ಸಂಸ್ಕೃತದಲ್ಲಿ ಮಹತ್ತ್ವದ ಭಾಷ್ಯವೊಂದನ್ನು ಬರೆದು ವಿದ್ವಜ್ಜನರ ಮುಂದಿರಿಸಿದರು. ಅಲ್ಲಿಯವರೆಗೆ ಅದು ಮಹಾಕಾವ್ಯದ ಭೀಷ್ಮಪರ್ವದಲ್ಲಿ ಹುದುಗಿಹೋಗಿತ್ತು. ಶಂಕರಾಚಾರ್ಯರ ಈ ಮಹಾಕೃತಿಯನ್ನು ಸ್ವಾಮಿ ವಿವೇಕಾನಂದರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ‘ವೇದಾಂತ: ಅದರ ಎಲ್ಲ ಮಜಲುಗಳಲ್ಲಿ' ಎಂಬ ತಮ್ಮ ಉಪನ್ಯಾಸದಲ್ಲಿ ಅವರ ಮಾತು ಹೀಗಿದೆ (ಕೃತಿಶ್ರೇಣಿ, ಸಂಪುಟ ೩, ಪುಟ ೩೨೮):
`ಗೀತೆಯನ್ನು ಬೋಧಿಸಿದ್ದೇ ಶಂಕರಾಚಾರ್ಯರ ಅದ್ಭುತವಾದ ಪ್ರಸಿದ್ಧಿಗೆ ಕಾರಣವಾಯಿತು. ಆ ಮಹಾಪುರುಷನು ತನ್ನ ಉಜ್ವಲ ಜೀವನದಲ್ಲಿ ಮಾಡಿದ ಅನೇಕ ಮಹತ್ಕಾರ್ಯಗಳಲ್ಲಿ ಗೀತೆಯನ್ನು ಪ್ರಚುರಪಡಿಸಿದ್ದು, ಅದರ ಮೇಲೆ ಅತ್ಯಂತ ಸುಂದರವಾದ ಭಾಷ್ಯವನ್ನು ಬರೆದಿದ್ದು ಅತ್ಯಂತ ಮಹತ್ತ್ವದ್ದು. ಅವರ ನಂತರ ಬಂದ ಎಲ್ಲಾ ಮತಸ್ಥಾಪಕರಾದ ಆಚಾರ್ಯರುಗಳೂ ಗೀತೆಯ ಮೇಲೆ ತಮ್ಮದೇ ಆದ ಭಾಷ್ಯಗಳನ್ನು ಬರೆದಿದ್ದಾರೆ.'
ಇಷ್ಟೆಲ್ಲಾ ಆದನಂತರವೂ, ಗೀತೆಯು ಕೆಲಕಾಲ ವಿದ್ವಾಂಸರುಗಳಿಗೆ ಮತ್ತು ಸಂತರಿಗೆ ಸೀಮಿತವಾಗಿಯೇ ಉಳಿದಿತ್ತು. ನಂತರ ಇತರರೂ ವ್ಯಾಖ್ಯಾನಗಳನ್ನು ಬರೆದರು; ನಿಧಾನವಾಗಿ ಅದು ನಮ್ಮ ರಾಷ್ಟ್ರಭಾಷೆಗಳಲ್ಲಿ ಚಾಲನೆಗೆ ಬಂದಿತು - ಉದಾಹರಣೆಗೆ ಶಂಕರಾಚಾರ್ಯರ ಬಳಿಕ ಕೆಲವು ಶತಮಾನಗಳ ನಂತರ ಮರಾಠಿಯಲ್ಲಿ ಸಂತ ಜ್ಞಾನೇಶ್ವರರು ಬರೆದ ಜ್ಞಾನೇಶ್ವರಿ. ಇಂದಿನ ಕಾಲದಲ್ಲಿ ಲೋಕಮಾನ್ಯ ತಿಲಕರು ಎರಡು ಸಂಪುಟಗಳಲ್ಲಿ ತಮ್ಮ ಪ್ರಸಿದ್ಧವಾದ ಗೀತಾರಹಸ್ಯವನ್ನು ಬರೆದರು. ಅದನ್ನು ಅವರು ಬರೆದದ್ದು ಬ್ರಿಟಿಷ್ ಸರ್ಕಾರವು ಅವರನ್ನು ಕೆಲವು ವರ್ಷ ಬರ್ಮಾದ ಮಾಂಡಲೆಯ ಜೈಲಿನಲ್ಲಿ ಬಂಧಿಸಿಟ್ಟಿದ್ದಾಗ. ಅಲ್ಲಿ ಅವರಿಗೆ ಯಾವ ಪುಸ್ತಕಗಳೂ ದೊರಕುತ್ತಿರಲಿಲ್ಲ; ಕೇವಲ ತಮ್ಮ ಜ್ಞಾಪಕಶಕ್ತಿಯನ್ನವಲಂಬಿಸಿ ಅದನ್ನು ಬರೆದರು. ಅದೊಂದು ಗಮನಾರ್ಹವಾದ ಪುಸ್ತಕ; ಅನಂತರ ಇನ್ನೂ ಅನೇಕಾನೇಕ ಪುಸ್ತಕಗಳು ಬಂದಿವೆ; ಇಂದು ಗೀತೆಯು ಇಡೀ ಭಾರತದಲ್ಲಲ್ಲದೆ ಪ್ರಪಂಚದ ಅನೇಕ ಭಾಗಗಳಲ್ಲಿ ತುಂಬ ಪ್ರಚಲಿತವಾಗಿದೆ. ಪ್ರಪಂಚದ ಬೇರೆ ಬೇರೆ ಭಾಷೆಗಳಲ್ಲಿಯೂ ಅದು ಪ್ರಕಟಗೊಳ್ಳುತ್ತಿದೆ; ಹೊರಬಂದಹಾಗೆಲ್ಲ ಮಾರಾಟವಾಗುತ್ತಿದೆ. ಹೀಗೆ, ನಾವಿಂದು ಗೀತೆಯೆಂಬ ಈ ಮಹತ್ತ್ವದ ಪುಸ್ತಕದ ಮೃದುವಾದ ಪ್ರಭಾವಕ್ಕೊಳಗಾದ ಕಾಲದಲ್ಲಿ ಬದುಕುತ್ತಿದ್ದೇವೆ.
ಅದರ ಸಂದೇಶವು ಸಾರ್ವತ್ರಿಕ, ಪ್ರಾಯೋಗಿಕ, ಶಕ್ತಿವರ್ಧಕ ಮತ್ತು ಶುದ್ಧಿಕಾರಕ. ಮಾನವಸಂಪನ್ಮೂಲಗಳ ಬಗ್ಗೆ, ಮಾನವನ ಸಾಧ್ಯತೆಗಳ ವಿಜ್ಞಾನದ ಬಗ್ಗೆ ಬೋಧಿಸುವ ಆ ಮಹಾ ಉಪನಿಷತ್ತುಗಳು, ತಮ್ಮ ಪ್ರಾಯೋಗಿಕ ನೆಲೆಯ ನಿರ್ದೇಶನವನ್ನು ಗೀತೆಯಲ್ಲಿ ಕಂಡುಕೊಳ್ಳುತ್ತವೆ. ಆ ದೃಷ್ಟಿಕೋನದಿಂದ — ಮಾನವಾಭಿವೃದ್ಧಿಯ ಮತ್ತು ಮಾನವ ಸಾಫಲ್ಯದ ವಿಜ್ಞಾನವಾಗಿ — ನಾವು ಈ ಪುಸ್ತಕವನ್ನು ಅಧ್ಯಯನ ಮಾಡಬೇಕು. ಅದರ ಏಳುನೂರು ಶ್ಲೋಕಗಳ ಛಂದಸ್ಸೂ ಸರಳವಾಗಿದೆ— ಒಂದು ಸಾಲಿನಲ್ಲಿ ಎಂಟು ಅಕ್ಷರಗಳು ಬರುವ ಅನುಷ್ಟುಪ್ ಎಂಬ ಹೆಸರಿನ ಛಂದಸ್ಸು; ಕೆಲ ಉದ್ದವಾದ ಛಂದಸ್ಸುಗಳೂ ಅಪರೂಪವಾಗಿ ಕಾಣಸಿಗುತ್ತವೆ.
ಆದಿಶಂಕರಾಚಾರ್ಯರ ಗೀತಾಭಾಷ್ಯದ ಮುನ್ನುಡಿ
ನಾನು ಈ ಹಿಂದೆಯೇ ಹೇಳಿದಂತೆ, ಮೊಟ್ಟಮೊದಲು ಗೀತೆಯ ಪ್ರಾಮುಖ್ಯತೆಯನ್ನು ಅರಿತು ಅದರ ಮೇಲೆ ಭಾಷ್ಯವನ್ನು ಬರೆದು ಜನಗಳಲ್ಲಿ ಪ್ರಚುರಪಡಿಸಿದವರು ಕ್ರಿ. ಶ. ೭೮೮ ರಿಂದ ೮೨೦ರ ವರೆಗೆ ಬದುಕಿದ್ದ ಆದಿಶಂಕರಾಚಾರ್ಯರು. ಅವರು ಭಾರತೀಯ ಸಂಸ್ಕೃತಿ, ತತ್ತ್ವಜ್ಞಾನ, ಆಧ್ಯಾತ್ಮಿಕತೆ ಎಲ್ಲವನ್ನೂ ತಮ್ಮಲ್ಲಿ ಮೈಗೂಡಿಸಿಕೊಂಡಿದ್ದ ಅಸಾಧಾರಣವಾದ ಸೃಜನಶೀಲ ವ್ಯಕ್ತಿಯಾಗಿದ್ದರು. ಅವರು ಬರಿಗಾಲಿನಲ್ಲಿ ದಕ್ಷಿಣದಿಂದ ಉತ್ತರಕ್ಕೆ, ಪಶ್ಚಿಮದಿಂದ ಪೂರ್ವಕ್ಕೆ, ಭಾರತಾದ್ಯಂತ ಪ್ರವಾಸಮಾಡಿ, ಜನಪ್ರಿಯ ಸ್ತೋತ್ರಗಳನ್ನೂ ಪಾಂಡಿತ್ಯಪೂರ್ಣ ವೇದಾಂತ ಗ್ರಂಥಗಳನ್ನೂ ರಚಿಸಿ, ಭಾರತೀಯ ಸಂಸ್ಕೃತಿಯ ಹಾಗೂ ಆಧ್ಯಾತ್ಮಿಕತೆಯ ಮೇಲೆ ತಮ್ಮದೇ ಆದ ಮುದ್ರೆಯನ್ನೊತ್ತಿದರು. ಅವರು ಬದುಕಿದ್ದ ಕೇವಲ ಮೂವತ್ತೆರಡು ವರ್ಷಗಳ ಸ್ವಲ್ಪಕಾಲದಲ್ಲಿಯೇ ಈ ಎಲ್ಲವನ್ನೂ ಅವರು ಸಾಧಿಸಿದ್ದು.
ಮಾನವನ ಅಭಿವೃದ್ಧಿಯ ವ್ಯಾಪಕವಾದ ದೃಷ್ಟಿಯನ್ನು ಪ್ರತಿಪಾದಿಸುವ ಅವರ ಗೀತಾಭಾಷ್ಯದ ಮುನ್ನುಡಿಯ ಹೆಚ್ಚಿನ ಭಾಗವನ್ನು ನಾವು ಅಧ್ಯಯನ ಮಾಡೋಣ. ಗೀತೆಯನ್ನು ಪ್ರೀತಿಸುವ ಪ್ರತಿಯೊಬ್ಬ ಓದುಗನೂ ಶಂಕರಭಾಷ್ಯದ ಈ ಎರಡು ಪುಟಗಳ ಮುನ್ನುಡಿಯನ್ನು ಓದಿ ಅದರ ಸ್ವಾರಸ್ಯವನ್ನು ಗ್ರಹಿಸಬೇಕೆಂದು, ಅದರ ಸಾರ್ವತ್ರಿಕ ವಿಶ್ವದೃಷ್ಟಿಯಿಂದ ಪ್ರಭಾವಿತನಾಗಬೇಕೆಂದು ನಾನು ಆಶಿಸುತ್ತೇನೆ. ಗೀತೆಯು ಮಾನವ ಜೀವನವನ್ನು ಲೌಕಿಕ-ಆಧ್ಯಾತ್ಮಿಕ ಎಂದು ವಿಭಾಗ ಮಾಡುವುದಿಲ್ಲ; ಬದಲಿಗೆ ವಿಧಿಯ ಹಾಗೂ ಜೀವನದ ಒಟ್ಟು ದೃಷ್ಟಿಯನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ, ಈ ಮುನ್ನುಡಿಯ ಹೆಚ್ಚು ಮುಖ್ಯವಾದ ಭಾಗವನ್ನು ಇಂದು ಅಧ್ಯಯನಕ್ಕೆ ತೆಗೆದುಕೊಳ್ಳೋಣ.
ಮುನ್ನುಡಿಯಲ್ಲಿ ಶಂಕರರು ಮೊದಲು ಪೌರಾಣಿಕ ಶ್ಲೋಕವೊಂದನ್ನು ಉಲ್ಲೇಖಿಸುತ್ತಾರೆ. ದೇವರ ಸ್ವರೂಪವನ್ನು ಕುರಿತಾದ ಇದರ ಪ್ರತಿಧ್ವನಿಯನ್ನು ಇಂದಿನ ಪಾಶ್ಚಾತ್ಯ ವಿಶ್ವವಿಜ್ಞಾನದಲ್ಲೂ ಭಾಗಶಃ ಕಾಣಬಹುದು—
ನಾರಾಯಣಃ ಪರೋಽವ್ಯಕ್ತಾತ್ ಅಂಡಮವ್ಯಕ್ತಸಂಭವಮ್ |
ಅಂಡಸ್ಯಾಂತಸ್ತ್ವಿಮೇ ಲೋಕಾಃ ಸಪ್ತದ್ವೀಪಾ ಚ ಮೇದಿನೀ ||
'ಪರಮ (ದೇವನಾದ) ನಾರಾಯಣನು ಅವ್ಯಕ್ತಕ್ಕೂ (ಅವಿಭಕ್ತ ಮೂಲಪ್ರಕೃತಿಗೂ) ಅತೀತನಾದವನು; ಅವ್ಯಕ್ತದಿಂದ ಬ್ರಹ್ಮಾಂಡವು ಉದ್ಭವಿಸಿತು; ಬ್ರಹ್ಮಾಂಡದಲ್ಲಿ ಸಪ್ತದ್ವೀಪಖಂಡಗಳನ್ನೊಳಗೊಂಡ ಭೂಮಿಯೂ ಸೇರಿದಂತೆ ಈ ಎಲ್ಲಾ ವಿಶ್ವಗಳೂ (ಉದ್ಭವಿಸಿದವು).’
ಕೆಲವು ಅಂಶಗಳಲ್ಲಿ ಇಂದಿನ ಪಾಶ್ಚಾತ್ಯ ವಿಶ್ವವಿಜ್ಞಾನದೊಡನೆ ಹೋಲುವ, ಆದರೆ ಅದಕ್ಕಿಂತಲೂ ಗಾಢವಾದ ಭಾರತೀಯ ವಿಶ್ವವಿಜ್ಞಾನವು ಈ ಶ್ಲೋಕದಲ್ಲಿ ಅಭಿವ್ಯಕ್ತವಾಗಿದೆ. ಪ್ರಚಲಿತ ಪಾಶ್ಚಾತ್ಯ ವಿಶ್ವವಿಜ್ಞಾನವು ವಿಶ್ವದ ಉಗಮವನ್ನು ಭೌತವಸ್ತುವೆಂದು ಭಾವಿಸಿದರೆ, ಭಾರತವು ವಿಶ್ವದ ಹುಟ್ಟಿನ ಪವಿತ್ರ ಮೂಲವನ್ನು ಆಧ್ಯಾತ್ಮಿಕವೆಂದು ಭಾವಿಸುತ್ತದೆ. ಆದರೂ ಇಂಗ್ಲೆಂಡಿನ ಫ್ರೆಡ್ ಹಾಯ್ಲ್ ರಂತಹ ಕೆಲವು ಪಾಶ್ಚಾತ್ಯ ವಿಶ್ವವಿಜ್ಞಾನಿಗಳು ಅದನ್ನು ಆಧ್ಯಾತ್ಮಿಕವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ. ನಲವತ್ತು ವರ್ಷಗಳ ಹಿಂದೆ ಫ್ರೆಡ್ ಹಾಯ್ಲ್ ವಿಶ್ವವಿಜ್ಞಾನದ ಮೇಲೆ ಬರೆದ ಪುಸ್ತಕವೊಂದು ಸಂಪೂರ್ಣ ವಾಸ್ತವಿಕ ತಳಹದಿಯನ್ನು ಹೊಂದಿತ್ತು. ಈಗ ಅವರು ತಲೆಬರಹವೇ ಆಧ್ಯಾತ್ಮಿಕವನ್ನು ಸೂಚಿಸುವಂತೆ ಒಂದು ಪುಸ್ತಕವನ್ನು ಬರೆದಿದ್ದಾರೆ: 'ಪ್ರಜ್ಞಾವಂತ ವಿಶ್ವ (The Intelligent Universe)', ವಿಶ್ವವು ಪ್ರಜ್ಞೆಯುಳ್ಳದ್ದು ಹೌದು; ವೇದಾಂತವು ಅದನ್ನು ನಿರ್ದೇಶಿಸುವ ಹಾಗೆ - ಅನಂತ ಅದ್ವಯ, ಚಿನ್ಮಯ.
ಸರಿ, ಇಲ್ಲಿ ಮೊದಲನೆಯ ಶ್ಲೋಕದಲ್ಲಿ, ಪಾಶ್ಚಾತ್ಯ ಜ್ಯೋತಿರ್ವಿಜ್ಞಾನದಲ್ಲಿಲ್ಲದ ನಾರಾಯಣನಿದ್ದಾನೆ; ಆದರೆ ಮುಂದಿನ ಹಂತವಾದ ಅವ್ಯಕ್ತ ಅಥವಾ ಅವಿಭಕ್ತ ಸ್ಥಿತಿಗೆ ಸಮಾನವಾದ 'ಐಕ್ಯಸ್ಥಿತಿ' (singularity) ಎಂಬುದು ಪ್ರಚಲಿತ ಪಾಶ್ಚಾತ್ಯ ಜ್ಯೋತಿರ್ವಿಜ್ಞಾನದಲ್ಲಿ ಇದೆ. ಈ ಅವಿಭಕ್ತ-ಪ್ರಕೃತಿಗಿಂತಲೂ ಅತೀತನಾದವನೆಂದು ನಮ್ಮಲ್ಲಿ ಪರಮದೈವಿಕ ವ್ಯಕ್ತಿಯಾದ ನಾರಾಯಣನನ್ನು ಕಲ್ಪಿಸಿದ್ದಾರೆ. ಪ್ರಕೃತಿಯು ವಿಭಕ್ತ (ವ್ಯಾಕೃತ) ಮತ್ತು ಅವಿಭಕ್ತ (ಅವ್ಯಾಕೃತ) ಎಂಬ ಎರಡು ಆಯಾಮಗಳಲ್ಲಿದೆ ಎಂದು ವೇದಾಂತ ಹೇಳುತ್ತದೆ. ವಿಭಕ್ತ ಎಂದರೆ ನಾವು ನೋಡುತ್ತಿರುವ ಈ ಪ್ರತ್ಯಕ್ಷ ವಿಶ್ವ; ಇದರ ಹಿಂದಿರುವುದು ಅವ್ಯಕ್ತ - ಪ್ರಕೃತಿಯ ಅವಿಭಕ್ತ ಸ್ಥಿತಿ – ಪಾಶ್ಚಾತ್ಯ ಜ್ಯೋತಿರ್ವಿಜ್ಞಾನದ 'ಮಹಾಸ್ಫೋಟ'ಕ್ಕಿಂತ ಮುಂಚೆ ಯಾವ ಸ್ಥಿತಿ ಇತ್ತೋ ಅದು. ಅವ್ಯಕ್ತದಿಂದ ಹೊರಹೊಮ್ಮಿದ್ದು ವ್ಯಕ್ತ; ಶ್ಲೋಕವು ಇದನ್ನು ಬ್ರಹ್ಮಾಂಡವೆನ್ನುತ್ತದೆ; ಈ ಬ್ರಹ್ಮಾಂಡದಲ್ಲಿ ಇಂದು ನಮಗೆ ತಿಳಿದಿರುವ, ಇನ್ನೂ ತಿಳಿಯಬೇಕಾಗಿರುವ ಮಿಲಿಯಗಟ್ಟಲೆ ವಿಶ್ವಗಳಿವೆ; ಅದರಲ್ಲೇ ಏಳು ಖಂಡಗಳನ್ನುಳ್ಳ ನಮ್ಮ ಭೂಮಿಯೂ ಇದೆ. ಆದಿಮೂಲ ಪರಮಸತ್ಯನಾದ ದೇವರನ್ನು ವೇದಾಂತವು ಅನಂತ ಕೋಟಿ ಬ್ರಹ್ಮಾಂಡ ನಾಯಕ ಅಥವಾ ಮಿಲಿಯಗಟ್ಟಲೆ ವಿಶ್ವಗಳ ಒಡೆಯ ಎನ್ನುತ್ತದೆ. ದೇಶ ಕಾಲಗಳ ಬಗ್ಗೆ ಸೆಮಿಟಿಕ್ ಚಿಂತನೆಯ ಬಹು ಮಿತವಾದ ಕಲ್ಪನೆಯಂತಲ್ಲದೆ, ಭಾರತದಲ್ಲಿ ಇಂದಿನ ಪಾಶ್ಚಾತ್ಯ ಜ್ಯೋತಿರ್ವಿಜ್ಞಾನದ ಕಲ್ಪನೆಗೆ ಹತ್ತಿರವಾದದ್ದು ಎನ್ನಬಹುದಾದ ಅನಂತ ದೇಶ ಕಾಲಗಳ ಕಲ್ಪನೆಯಿತ್ತು. ಇಡಿಯ ಬ್ರಹ್ಮಾಂಡವು, ಬ್ರಹ್ಮನಿಂದಲೇ ಬಂದದ್ದು, ಬ್ರಹ್ಮನಲ್ಲಿಯೇ ಇರುವಂಥದು, ಮತ್ತು ವಿಶ್ವಕಲ್ಪಾಂತದ ಕೊನೆಯಲ್ಲಿ ಬ್ರಹ್ಮನಲ್ಲಿಯೇ ಲೀನವಾಗಿ ಹೋಗುವುದು, ಎನ್ನುತ್ತದೆ ವೇದಾಂತ. ಬ್ರಹ್ಮನಿಂದ ಬಂದಿರುವ ಈ ಬ್ರಹ್ಮಾಂಡವು ಒಂದು ಸುವ್ಯವಸ್ಥಿತ ಕ್ರಮದಲ್ಲಿ, ಅಂದರೆ ಅವಿಭಕ್ತ ಸ್ಥಿತಿಯಿಂದ ವಿಭಕ್ತ ಸ್ಥಿತಿಗೆ ವಿಕಾಸಹೊಂದಿದೆ. ವಿಶ್ವದ ವಿಕಾಸ, ಜೀವಿಗಳ ವಿಕಾಸ, ಅನಂತರ ಮಾನವನ (ಬೌದ್ಧಿಕ, ನೈತಿಕ, ಆಧ್ಯಾತ್ಮಿಕ) ವಿಕಾಸ ಹೀಗೆ ಇದು ಒಂದು ವಿಕಾಸದ ಸರಣಿಯನ್ನು ಅನುಸರಿಸುತ್ತದೆ. ಇದು ವೇದಾಂತದ ವಿಶ್ವವಿಜ್ಞಾನದಲ್ಲಿ ಬಳಸಿರುವ ಭಾಷೆ. ವಿಷ್ಣುಸಹಸ್ರನಾಮವು ಗಾನಮಾಡುವಂತೆ (ಮಹಾಭಾರತ, ಭೀಷ್ಮಪರ್ವ)—
ಯತಃ ಸರ್ವಾಣಿ ಭೂತಾನಿ ಭವಂತ್ಯಾದಿಯುಗಾಗಮೇ |
ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ ||
‘ಯುಗದ ಆದಿಯಲ್ಲಿ ಈ ಎಲ್ಲಾ ಭೂತಗಳು ಎಲ್ಲಿಂದ ಬರುತ್ತವೆಯೋ, ಯುಗಾಂತದಲ್ಲಿ ಅವು ಯಾವುದರಲ್ಲಿ ಲೀನವಾಗುತ್ತವೆಯೋ’ ನಾರಾಯಣನೆಂದರೆ ಅದು.
ಏಕವೂ ಅದ್ವಯವೂ ಅನಂತವೂ ಶುದ್ಧಪ್ರಜ್ಞಾತತ್ತ್ವವೂ ವ್ಯಕ್ತ ಅವ್ಯಕ್ತ ಎರಡೂ ಆಗಿರುವುದೂ ಆದ ಪರಬ್ರಹ್ಮದ ವ್ಯಕ್ತರೂಪ ಈ ನಾರಾಯಣನೆಂಬ ದೇವರು.
ಮಾನವ ಬದುಕಿನ ಎರಡು ಮಾರ್ಗಗಳು — ಪ್ರವೃತ್ತಿ ಮತ್ತು ನಿವೃತ್ತಿ
ಇದನ್ನು ಹೇಳಿದ ನಂತರ, ಮಾನವ ಸಮಾಜವು ಒಂದು ಸಮನಾದ ಅಡಿಗಟ್ಟಿನ ಮೇಲೆ ಚಲಿಸಬೇಕೆಂಬ ದೃಷ್ಟಿಯಿಂದ, ಶಂಕರಾಚಾರ್ಯರು ಮಾನವ ಹಂತದ ವಿಕಾಸದ ಬಗ್ಗೆ ಒಂದು ವ್ಯಾಪಕವಾದ ಜೀವನದರ್ಶನವನ್ನು ಕೊಡುತ್ತಾರೆ:
ಸ ಭಗವಾನ್ ಸೃಷ್ಟ್ವೇದಂ ಜಗತ್, ತಸ್ಯ ಚ ಸ್ಥಿತಿಂ ಚಿಕೀರ್ಷುಃ, ಮರೀಚ್ಯಾದೀನ್ ಅಗ್ರೇ ಸೃಷ್ಟ್ವಾ ಪ್ರಜಾಪತೀನ್, ಪ್ರವೃತ್ತಿಲಕ್ಷಣಂ ಧರ್ಮಂ ಗ್ರಾಹಯಾಮಾಸ ವೇದೋಕ್ತಮ್ |
‘ಆ (ಕೃಪಾವಿಷ್ಟನಾದ) ಭಗವಂತನು, (ತನ್ನೊಳಗಿಂದಲೇ) ಈ ವಿಶ್ವವನ್ನು ಹೊರಹೊಮ್ಮಿಸಿ, ಇದರ ಸುವ್ಯವಸ್ಥೆಯನ್ನು ಮಾಡಬೇಕೆಂಬ ಅಪೇಕ್ಷೆಯುಳ್ಳವನಾಗಿ, ಮೊದಲು ಮರೀಚಿಯೇ ಮೊದಲಾದ ಪ್ರಜಾಪತಿಗಳನ್ನು ಹೊರಹೊಮ್ಮಿಸಿ (ಅವರಿಗೆ) ವೇದದಲ್ಲಿ ಹೇಳಿರುವ ಪ್ರವೃತ್ತಿಲಕ್ಷಣವಾದ (ಕ್ರಿಯೆಯೆಂಬ) ಧರ್ಮವನ್ನು ತಿಳಿಸಿಕೊಟ್ಟನು.’
ತತಃ ಅನ್ಯಾನ್ ಚ ಸನಕಸನಂದನಾದೀನ್ ಉತ್ಪಾದ್ಯ, ನಿವೃತ್ತಿಲಕ್ಷಣಂ ಧರ್ಮಂ
ಜ್ಞಾನವೈರಾಗ್ಯಲಕ್ಷಣಂ ಗ್ರಾಹಯಾಮಾಸ |
' ಮತ್ತು ಸನಕ-ಸನಂದನಾದಿ ಬೇರೆ ಕೆಲವರನ್ನು (ಸನಾತನ, ಸನತ್ಕುಮಾರ) ಹೊರ ಹೊಮ್ಮಿಸಿ, (ಅವರಿಗೆ) ಅಧ್ಯಾತ್ಮಜ್ಞಾನ-ವೈರಾಗ್ಯಗಳಿಂದ ವಿಶಿಷ್ಟವಾದ ನಿವೃತ್ತಿ (ಅಂತರ್ಧ್ಯಾನ) ಲಕ್ಷಣವಾದ ಧರ್ಮವನ್ನು ತಿಳಿಸಿಕೊಟ್ಟನು.'
ಈ ಸನಕ, ಸನಂದನ, ಸನಾತನ, ಸನತ್ಕುಮಾರ ಎಂಬ ನಾಲ್ಕು ಜನ ಕುಮಾರರನ್ನು, ಪ್ರಾಪಂಚಿಕತೆಯಿಂದ ಸ್ವಲ್ಪವೂ ಕಳಂಕಿತರಾಗದ ಪರಬ್ರಹ್ಮನ ಚಿರಂಜೀವಿ ಮಕ್ಕಳೆಂದು ಭಾರತೀಯ ಸಾಹಿತ್ಯ ಗೌರವಿಸುತ್ತದೆ.
ದ್ವಿವಿಧೋ ಹಿ ವೇದೋಕ್ತೋ ಧರ್ಮಃ, ಪ್ರವೃತ್ತಿಲಕ್ಷಣೋ ನಿವೃತ್ತಿಲಕ್ಷಣಶ್ಚ,
ಜಗತಃ ಸ್ಥಿತಿಕಾರಣಮ್ | ಪ್ರಾಣಿನಾಂ ಸಾಕ್ಷಾತ್ ಅಭ್ಯುದಯ-ನಿಃಶ್ರೇಯಸಹೇತುಃ |
' ವೇದಗಳಲ್ಲಿ ಹೇಳಿರುವ, ಜಗತ್ತಿನ ಸುಸ್ಥಿತಿಗೆ ಕಾರಣವಾದ ಧರ್ಮವು ಎರಡು ಬಗೆಯಾದದ್ದು— ಪ್ರವೃತ್ತಿಲಕ್ಷಣ, ಎಂದರೆ ಬಾಹ್ಯಕ್ರಿಯೆಯಿಂದ ಯುಕ್ತವಾದದ್ದು, ಮತ್ತು ನಿವೃತ್ತಿ ಲಕ್ಷಣ, ಎಂದರೆ ಅಂತರ್ಧ್ಯಾನದಿಂದ ಯುಕ್ತವಾದದ್ದು; ಇವುಗಳ ಉದ್ದೇಶ ಲೋಕದ ಅಭ್ಯುದಯ ಅಥವಾ ಆರ್ಥಿಕ-ಸಾಮಾಜಿಕ ಸುಸ್ಥಿತಿ ಮತ್ತು ನಿಃಶ್ರೇಯಸ ಅಥವಾ ಎಲ್ಲ ಜೀವಿಗಳ ಆಧ್ಯಾತ್ಮಿಕ ಮುಕ್ತಿ.'
ಮಾನವನ ಸುಸ್ಥಿತಿಗೆ ಕ್ರಿಯೆ ಮತ್ತು ಧ್ಯಾನ ಎರಡೂ ಅಗತ್ಯ; ಇವೆರಡರಲ್ಲಿ ಒಂದು ಮಾತ್ರವೇ ಇದ್ದರೆ, ವ್ಯಕ್ತಿಗತ ಆರೋಗ್ಯ ಅಥವಾ ಸಾಮಾಜಿಕ ಆರೋಗ್ಯ ಇರುವುದಿಲ್ಲ. ಪ್ರಾಚೀನ ಭಾರತೀಯ ಮುನಿಗಳ ಆಶ್ಚರ್ಯಕರವಾದ ಸೂಕ್ಷ್ಮ ಒಳನೋಟ ಹಾಗೂ ವ್ಯಾಪಕವಾದ ವಿವೇಕವನ್ನು ನೋಡಿ! ಪ್ರವೃತ್ತಿಯ ಮೂಲಕ ನೀವು ನಿಮ್ಮ ಆರ್ಥಿಕ ಸ್ಥಿತಿಯನ್ನೂ ರಾಜಕೀಯ ವ್ಯವಸ್ಥೆಯನ್ನೂ ಉತ್ತಮಪಡಿಸಿಕೊಂಡು ಒಂದು ಸ್ವಸ್ಥ ಸಮಾಜವನ್ನು ಕಟ್ಟುವಿರಿ. ನಿವೃತ್ತಿಯ ಮೂಲಕ ನೀವು ಮಾನವನ ಅಂತರಂಗದ ಆಧ್ಯಾತ್ಮಿಕ ಆಯಾಮದಿಂದ ಬರುವ ಮೌಲ್ಯಾಧಾರಿತ ಜೀವನವನ್ನು ಸಾಧಿಸುವಿರಿ. ಇಲ್ಲದಿದ್ದರೆ, ಬೇಕಾದಷ್ಟು ಐಶ್ವರ್ಯ, ಅಧಿಕಾರ, ಮತ್ತೆಲ್ಲವೂ ಪ್ರವೃತ್ತಿಯ ಮೂಲಕ ನಿಮಗೆ ಸಿಗಬಹುದು; ನಿವೃತ್ತಿಯಿಲ್ಲದೆ ಕೇವಲ ಪ್ರವೃತ್ತಿ ಇರುವ ಸಮಾಜ ತತ್ಕಾಲದಲ್ಲಿ ಚೆನ್ನಾಗಿರಬಹುದಾದರೂ, ಕೊನೆಗೆ ಅದು ಕಷ್ಟಕ್ಕೆ ಸಿಕ್ಕಿಕೊಳ್ಳುವುದು, ನಿವೃತ್ತಿಗೆ ಗಮನ ಕೊಡದೆ ಕೇವಲ ಪ್ರವೃತ್ತಿಗೆ ಪ್ರಾಮುಖ್ಯತೆ ಕೊಡುವುದರಿಂದ ಇಂದು ಇಡೀ ಆಧುನಿಕ ಪಾಶ್ಚಾತ್ಯ ಸಂಸ್ಕೃತಿ ತೊಂದರೆಯಲ್ಲಿದೆ – ‘ಕೆಲಸ, ಕೆಲಸ, ಕೆಲಸ; ಹೆಚ್ಚು, ಇನ್ನೂ ಹೆಚ್ಚು ಹಣ ಗಳಿಸು; ಆದರೆ ಅಂತರಂಗದಲ್ಲಿ ಕ್ರಮೇಣ ದುರ್ಬಲನಾಗುತ್ತಾ ನಡೆದು ಕೊನೆಗೊಮ್ಮೆ ನರದೌರ್ಬಲ್ಯದಿಂದ ಝರ್ಝರಿತನಾಗು!’ ಆಧುನಿಕ ಪ್ರಪಂಚದಲ್ಲಿ ಎಷ್ಟೋ ಜನ ಹೀಗೆ ನರಳುತ್ತಿದ್ದಾರೆ. ನಾನು ಆಗಾಗ್ಗೆ ಜರ್ಮನ್ ತತ್ತ್ವಶಾಸ್ತ್ರಜ್ಞ ಶೊಪೆನ್‌ಹೋವರ್‌ನ ಪುಸ್ತಕ The World as Will and Idea ಎಂಬುದರಿಂದ ಉಲ್ಲೇಖಿಸುತ್ತಿರುತ್ತೇನೆ. ನೂರಾಮೂವತ್ತು ವರ್ಷಗಳ ಹಿಂದೆ ಅವನು ಹೇಳಿದ್ದು ಇಂದಿಗೂ ನಿಜವಾಗಿದೆ. ಅವನು ಹೇಳುತ್ತಾನೆ— ‘ಯೋಗಕ್ಷೇಮವನ್ನೂ ಭದ್ರತೆಯನ್ನೂ ಸಾಧಿಸಿಕೊಂಡಿರುವ ಮನುಷ್ಯರು, ಬೇರೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡಿರುವ ಅವರು, ತಮಗೆ ತಾವೇ ಸಮಸ್ಯೆಯಾಗಿಬಿಟ್ಟಿರುವರು.'
ಈ ಆಧುನಿಕ ಕಾಲದ ಸ್ತ್ರೀಪುರುಷರ ವಿಚಾರದಲ್ಲಿ ಇದು ಅದೆಷ್ಟು ಅಕ್ಷರಶಃ ನಿಜ! ನಮ್ಮ ದೇಶದಲ್ಲಿ ಸಹಾ, ಕೊನೆಮೊದಲಿಲ್ಲದಂತೆ ಹಣವನ್ನು, ಅಧಿಕಾರವನ್ನು, ಸುಖವನ್ನು ಅರಸಿಕೊಂಡು ಓಡುವುದರ ಫಲವಾಗಿ ವ್ಯಾಪಕವಾದ ಹಿಂಸೆ ಹುಟ್ಟಿಕೊಂಡಿದೆ, ಮೌಲ್ಯಗಳು ಶಿಥಿಲವಾಗುತ್ತಿವೆ. ಇದು ಮಾನವ ಸಮಾಜವನ್ನು ಆರೋಗ್ಯಕರ ಸುಸ್ಥಿತಿಯಲ್ಲಿಟ್ಟುಕೊಳ್ಳುವ ಮಾರ್ಗ ಅಲ್ಲವೇ ಅಲ್ಲ. ಎರಡನೆಯ ಅಂಶವಾದ ನಿವೃತ್ತಿ ಸಾಕಷ್ಟಿಲ್ಲವಾಗಿದೆ. ಅದಕ್ಕೇ ಶಂಕರರು ಹೇಳುವುದು, ಪ್ರಾಣಿನಾಂ ಸಾಕ್ಷಾತ್ ಅಭ್ಯುದಯ ನಿಃಶ್ರೇಯಸಹೇತುಃ — 'ಲೋಕದ ಅಭ್ಯುದಯ ಅಥವಾ ಆರ್ಥಿಕ-ಸಾಮಾಜಿಕ ಸುಸ್ಥಿತಿ ಮತ್ತು ನಿಃಶ್ರೇಯಸ ಅಥವಾ ಎಲ್ಲ ಜೀವಿಗಳ ಆಧ್ಯಾತ್ಮಿಕ ಮುಕ್ತಿ' ಇವೆರಡನ್ನೂ ಕ್ರಿಯೆ ಹಾಗೂ ಧ್ಯಾನದಿಂದ ಸಮನ್ವಯಿಸಿಕೊಂಡು, ಸಮಗ್ರಗೊಳಿಸಿಕೊಳ್ಳಬಹುದಾದ ಒಂದು ಜೀವನತತ್ತ್ವದ ಅಗತ್ಯವಿದೆ ಎಂದು.
ಈ ಸಂದರ್ಭದಲ್ಲಿ ಇನ್ನೊಂದು ಅಂಶವನ್ನು ಹೇಳಬೇಕು. ಅಭಿಯ ನಂತರ ಉದಯ ಎಂದರೆ ಸುಸ್ಥಿತಿ; ಅಭಿ ಎಂದರೆ ಒಟ್ಟಿಗೆ, ಒಬ್ಬನೇ ಅಲ್ಲ; ಈ ಪೂರ್ವಪ್ರತ್ಯಯ ಮಹತ್ವದ್ದು; ಇದರ ಅರ್ಥ ಪರಸ್ಪರ ಸಹಕಾರದಿಂದ ಮಾಡಿದ ಪ್ರಯತ್ನದಿಂದಲ್ಲದೆ ಯಾವುದೇ ಆರ್ಥಿಕ-ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು. ಒಳ್ಳೆಯ ಆರೋಗ್ಯಕರ ಸಮಾಜದ ಸೃಷ್ಟಿಗೆ ಸಂಘಟನೆ ಹಾಗೂ ಒಗ್ಗಟ್ಟಿನ ಮನೋಭಾವ ಅತ್ಯಗತ್ಯ. ಒಬ್ಬ ಇನ್ನೊಬ್ಬನ ಜೊತೆಗೆ ಹೊಡೆದಾಡುತ್ತಿದ್ದರೆ ಅಭಿವೃದ್ಧಿ ಸಾಧ್ಯವಾಗದು. ಸಮಾಜದಲ್ಲಿ ಶಾಂತಿ, ಅನ್ಯೋನ್ಯತೆ, ಸಹಕಾರ, ಒಗ್ಗಟ್ಟು ಎಲ್ಲವೂ ಅತ್ಯಗತ್ಯ - ಇದನ್ನು ಆ ಒಂದು ಶಬ್ದ ಅಭಿ ಒತ್ತಿ ಹೇಳುತ್ತದೆ. ಇದೊಂದು ಮೌಲ್ಯವನ್ನು ಮಾತ್ರ ಭಾರತೀಯರಾದ ನಾವು ಕಳೆದ ಕೆಲವು ಶತಮಾನಗಳಿಂದ ಸಮಾಜದಲ್ಲಿ ಸಾಕಷ್ಟು ರೂಢಿಸಿಕೊಂಡಿಲ್ಲ. ಇಂದು ನಾವು ಆ ಪಾಠವನ್ನು ಕಲಿಯಬೇಕಾಗಿದೆ; ಸಮುದಾಯ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ಜನರು ಒಟ್ಟಾಗಿ ಕಲೆತು ಕೆಲಸ ಮಾಡುವುದನ್ನು ಕಲಿತುಕೊಂಡರೆ, ನಾಳೆಯೇ ನಮ್ಮ ಹಳ್ಳಿಗಳೆಲ್ಲ ಸ್ವರ್ಗವಾದಾವು. ಇನ್ನೂ ನಾವು ಅದನ್ನು ಕಲಿತಿಲ್ಲ; ಹೇಗೆತಾನೆ ನಮ್ಮ ಸಹಕಾರ ಕಾರ್ಯಕ್ರಮಗಳು ಯಶಸ್ವಿಯಾದಾವು?
ಅಭ್ಯುದಯ, ನಿಃಶ್ರೇಯಸ ಎಂಬೆರಡು ಮಾರ್ಗಗಳ ಫಲಗಳು
ಹೀಗೆ “ಅಭಿ” ಎಂಬ ಪದ “ಉದಯ” ಎಂಬುದರ ಜೊತೆಗೆ ಕೂಡುವುದು ಬಹಳ ಮುಖ್ಯ; ಒಗ್ಗಟ್ಟನ್ನು ಅದು ಸೂಚಿಸುತ್ತದೆ. ನಮ್ಮ ಹಳ್ಳಿಗಳಲ್ಲಿ ನಾವು ನೆರೆಹೊರೆಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕಲಿಯಬೇಕು; ಅವರ ಜೊತೆಯಲ್ಲಿ ಶಾಂತಿಯಿಂದ ಇದ್ದು ಒಟ್ಟುಗೂಡಿ ಹಳ್ಳಿಗಳ ಅಭಿವೃದ್ಧಿ ಸಾಧಿಸಬೇಕು; ಗ್ರಾಮನೈರ್ಮಲ್ಯ, ಒಳ್ಳೆಯ ರಸ್ತೆಗಳು, ಉತ್ತಮ ಮನೆಗಳು, ಎಲ್ಲರಿಗೂ ಉತ್ತಮ ಆಹಾರ, ವಿದ್ಯಾಭ್ಯಾಸ – ಈ ಎಲ್ಲವೂ ನಾವು ಒಟ್ಟಾಗಿ ಕೆಲಸಮಾಡಿದರೆ ಮಾತ್ರ ಸಾಧ್ಯ. ಪಂಚಾಯಿತಿಗಳನ್ನೂ ಮುನಿಸಿಪಾಲಿಟಿಗಳನ್ನೂ ಒಳ್ಳೆಯದಾಗಿ ನಡೆಸುವ ಮಾರ್ಗ ಇದು. ಒಂದು ಹೊಸ ಆರೋಗ್ಯಶಾಲಿಯಾದ ಇಂಡಿಯಾ ದೇಶವನ್ನು ಜೀವಂತವಾಗಿಸುವುದಕ್ಕೆ ಇದುವೆ ಹಾದಿ. ಹೀಗೆ, ಈ ಅಭ್ಯುದಯ ತತ್ತ್ವ ಮುಖ್ಯವಾದದ್ದು; ಪಶ್ಚಿಮ ರಾಷ್ಟ್ರಗಳು ಇದನ್ನು ಬಹುಮಟ್ಟಿಗೆ ಸಾಧಿಸಿವೆ; ನಮ್ಮ ದೇಶದಲ್ಲಿ ನಾವು ಅದನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ಅವರಿಂದ ಕಲಿಯಬಹುದು. ನಮ್ಮ ಬದುಕಿನಲ್ಲಿ, ಕಾರ್ಯದಲ್ಲಿ ಮೂರು ಮೌಲ್ಯಗಳನ್ನು ಇಟ್ಟುಕೊಳ್ಳಬೇಕಾಗಿದೆ— ಕಷ್ಟದ ದುಡಿಮೆ, ಸಾಮರ್ಥ್ಯದ ದುಡಿಮೆ ಹಾಗೂ ಸಹಕಾರದ ದುಡಿಮೆ. ಪ್ರವೃತ್ತಿ-ನಿವೃತ್ತಿ ಎಂಬೆರಡು ಮೌಲ್ಯಗಳಿಂದ ಕೂಡಿದ ಈ ವೇದಕಾಲದ ತತ್ತ್ವದಿಂದ ಒಂದು ಕಡೆ ಸ್ತ್ರೀಪುರುಷರ ಅಭ್ಯುದಯವನ್ನೂ, ಇನ್ನೊಂದು ಕಡೆ ನಿಃಶ್ರೇಯಸವನ್ನೂ ಸಾಧಿಸಬಹುದೆನ್ನುತ್ತಾರೆ ಶ್ರೀ ಶಂಕರಾಚಾರ್ಯರು. ಪೂರ್ಣ ಕ್ಷೇಮಾಭಿವೃದ್ಧಿ ರಾಷ್ಟ್ರ ಎಂದು ನಾವಿಂದು ಮಾತನಾಡುತ್ತೇವೆ; ಅದರಲ್ಲಿ ಅಸಾಧ್ಯ ಆದರ್ಶವೇನಿಲ್ಲ; ಇಂದು ಅನೇಕಾನೇಕ ಸಮಾಜಗಳು ಅಭ್ಯುದಯವನ್ನು ಸಾಧಿಸಿವೆ; ಶೀಲಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದಾದರೆ ನಾವೂ ಸಹ ಭಾರತದಲ್ಲಿ ಅದನ್ನು ಸಾಧಿಸಬಹುದು.
ಜೀಸಸ್ ಹೇಳಿದಂತೆ, “ನೀವು ನೋಡಿರುವ ನನ್ನನ್ನೇ ಪ್ರೀತಿಸುವುದಕ್ಕಾಗದಿದ್ದರೆ ನೋಡಿಲ್ಲದ ದೇವರನ್ನು ಹೇಗೆತಾನೆ ಪ್ರೀತಿಸುವಿರಿ?” ನಮ್ಮ ಜನಗಳು ಆ ಒಂದು ದೊಡ್ಡ ಪಾಠವನ್ನು ಕಲಿಯಬೇಕು. ಎಲ್ಲೋ ದೂರದಲ್ಲಿರುವ ದೇವರು, ದೇವಸ್ಥಾನದಲ್ಲಿರುವ ದೇವರ ಮೂರ್ತಿ, ಇವುಗಳ ಜೊತೆಗೆ ನಮ್ಮನ್ನು ನಾವು ಸಂಬಂಧಿಸಿಕೊಳ್ಳಲು ನಾವು ಆಸಕ್ತರೇ ಹೊರತು, ನೆರೆಹೊರೆಯವರಲ್ಲಿ ಅಲ್ಲ; ಅವರ ಜೊತೆ ದಿನ ಬೆಳಗಾದರೆ ಜಗಳ ತೆಗೆಯುತ್ತೇವೆ. ಇದು ಬದಲಾಗಬೇಕು; ಈ ಬದಲಾವಣೆಯೇ ಅಭ್ಯುದಯವನ್ನು ತರುವುದು. ಅನಂತರ ಬರುವುದು ನಿಃಶ್ರೇಯಸ. ಜೀವನದ ಎಲ್ಲಾ ಸುಖಸೌಲಭ್ಯಗಳನ್ನೂ - ಮನೆ, ವಿದ್ಯಾಭ್ಯಾಸ, ಶುಚಿಯಾದ ಪರಿಸರ, ಆರ್ಥಿಕ ಶಕ್ತಿ, ಆಮೋದಪ್ರಮೋದಗಳು - ಪಡೆದಿರಬಹುದು; ಆದರೂ ಮನಸ್ಸಿಗೆ ಶಾಂತಿಯಿಲ್ಲ; ಒತ್ತಡದ ಜೀವನ. ಏಕೆ? ಏಕೆಂದರೆ ನೀವು ಒಂದನ್ನು ಕಳೆದುಕೊಂಡಿರುವಿರಿ; ಅದೇ ನಿಮ್ಮ ನಿಜವಾದ ಅಂತರಂಗದ ಅರಿವು, ನಿಮ್ಮಲ್ಲಿರುವ ದೈವತ್ವದ ಕಿಡಿ. ನಿಮ್ಮ ಗುರುತ್ವಕೇಂದ್ರ ಯಾವಾಗಲೂ ಹೊರಗಡೆ ಇದ್ದುಬಿಟ್ಟಿದೆ. ನಿಮ್ಮ ನಿಜವಾದ ಘನತೆ ಗೌರವಗಳನ್ನು ಕಳೆದುಕೊಂಡು ವಸ್ತುಗಳ ಸೇವಕರಾಗಿಬಿಟ್ಟಿರುವಿರಿ. ಇದರಿಂದಲೇ ಆಂತರಿಕ ಒತ್ತಡ ಉಂಟಾಗುವುದು; ಸಮಾಜದಲ್ಲಿ ಅಪರಾಧಗಳು ಹೆಚ್ಚಿ ನಿಧಾನವಾಗಿ ವಿನಾಶದತ್ತ ನಡೆಯುವುದು ಇದರಿಂದಲೇ.
ನಿವೃತ್ತಿ ಅಥವಾ ಧ್ಯಾನ ಎಂಬ ಆ ಎರಡನೆಯ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇದನ್ನು ನಿವಾರಿಸಬಹುದು. ಇದರಿಂದ ನಮ್ಮೊಳಗೇ ಇರುವ ಆ ಅಂತರ್ಯಾಮಿಯ ಜೊತೆಗೆ ಸಂಬಂಧ ಉಂಟಾಗುವುದು. ಇದು ಮೂಢನಂಬಿಕೆಯೇನಲ್ಲ; ಉಪನಿಷತ್ತಿನ ಋಷಿಗಳು ಅಧ್ಯಾತ್ಮವಿಜ್ಞಾನದ ಮೂಲಕವಾಗಿ ಪ್ರತ್ಯಕ್ಷ ಮಾಡಿಕೊಂಡಿರುವ ಒಂದು ಸತ್ಯ. ಕೇವಲ ನಂಬಬೇಕಾದ ಸತ್ಯವಲ್ಲ, ಪ್ರತಿಯೊಬ್ಬನೂ ಸಾಧಿಸಲೇಬೇಕಾದ ಸತ್ಯ. ನಿಮ್ಮೊಳಗೆ ನೀವು ಎಷ್ಟೆಷ್ಟು ಮುನ್ನಡೆಯುತ್ತೀರೋ, ಇತರರನ್ನು ಅಷ್ಟೂ ಅಷ್ಟು ಒಳಗೊಂಡು ಸುಖವಾದ ಸಂಬಂಧಗಳನ್ನು ಸ್ಥಾಪಿಸಿಕೊಳ್ಳಬಲ್ಲವರಾಗುತ್ತೀರಿ. ನಿಮ್ಮೊಳಗೆ ನೀವು ಇನ್ನೂ ಆಳವಾಗಿ ಹೋದರೆ, ಪ್ರತ್ಯುತ್ಪಾದನಾ ವ್ಯವಸ್ಥೆಯಿಂದ ನಿಯಂತ್ರಿತವಾದ ನಿಮ್ಮ ಸಣ್ಣ ಅಹಂ ಅನ್ನು ಮೀರಿ, ಎಲ್ಲರಿಗೂ ಒಂದೇ ಆಗಿರುವ, ಎಲ್ಲರ ಜೊತೆಗೆ ಹಂಚಿಕೊಳ್ಳಬಹುದಾದ ಆ ದೊಡ್ಡ ಅಹಂ ನ ಪರಿಚಯ ಆಗುತ್ತದೆ.
ಹೀಗೆ, ಈ ಪ್ರವೃತ್ತಿ ನಿವೃತ್ತಿಗಳ ಸಂಯೋಗ, ಅಭ್ಯುದಯ ನಿಃಶ್ರೇಯಗಳ ಸಾಧನೆ - ಇದೇ ಗೀತೆಯ ಮಹತ್ವದ ಬೋಧನೆ. ಒಟ್ಟು ಮಾನವಾಭಿವೃದ್ಧಿಯನ್ನು ಸಾಧಿಸುವ ತತ್ತ್ವ ಅದರಲ್ಲಿ ಅಡಗಿದೆ; ಅದೇ ಗೀತೆಯ ವಿಶೇಷ.
ಶಂಕರಾಚಾರ್ಯರು ಹೇಳಿದರು — “ಪ್ರಾಣಿನಾಂ ಸಾಕ್ಷಾತ್ ಅಭ್ಯುದಯ ನಿಃಶ್ರೇಯಸಹೇತುಃ” . ಹಿಂದೂಗಳಿಗೆ ಮಾತ್ರ, ಭಾರತೀಯರಿಗೆ ಮಾತ್ರ ಎಂದೇನೂ ಅವರು ಹೇಳಲಿಲ್ಲ; ಪ್ರಾಣಿನಾಂ, ಎಂದರೆ ಎಲ್ಲಾ ಮಾನವಜೀವಿಗಳಿಗೂ, ಎಂದರು. ಇದೇ ಅದರ ಸಾರ್ವತ್ರಿಕತೆ. ಅಭ್ಯುದಯದ ಜೊತೆಗೆ ನಿಃಶ್ರೇಯಸವನ್ನು ಸೇರಿಸುವುದರ ಮೂಲಕ ಗೀತೆಯು ಮಾನವರನ್ನು ಕೇವಲ ಯಂತ್ರಗಳಾಗುವುದರಿಂದ ತಪ್ಪಿಸುತ್ತದೆ. ಇಂದಿನ ಪಾಶ್ಚಿಮಾತ್ಯ ನಾಗರಿಕತೆಯಲ್ಲಿ ಅಂತಹ ಧೋರಣೆಯ ಅಪಾಯವಿದೆ. ಸ್ತ್ರೀಪುರುಷರ ಈ ಯಾಂತ್ರೀಕರಣ ಹೀಗೆಯೇ ಮುಂದುವರೆದು ಮುಂದೊಂದು ದಿವಸ ಕಾರ್ಮಿಕನೊಬ್ಬ ಕೈಯಲ್ಲಿ ಹೂವೊಂದನ್ನು ಹಿಡಿದುಕೊಂಡು ಕಾರ್ಖಾನೆಗೆ ಹೋಗಿ ದೊಡ್ಡ ಯಂತ್ರದ ಮುಂದಿಟ್ಟು, 'ಓ ಯಂತ್ರವೇ, ನನ್ನನ್ನು ನಿನ್ನ ವ್ಯವಸ್ಥೆಯೊಳಗಿನ ಒಂದು ಒಳ್ಳೆಯ ಬೋಲ್ಟ್ ನಟ್‌ನ್ನಾಗಿ ಮಾಡು!' ಎಂದು ಪ್ರಾರ್ಥಿಸಬೇಕಾಗುತ್ತದೆ ಎಂದು “Impact of Science on Society” ಎಂಬ ತನ್ನ ಪುಸ್ತಕದಲ್ಲಿ ಬರ್ಟ್ರೆಂಡ್ ರಸೆಲ್ ಹೇಳುತ್ತಾರೆ. ಮಾನವನ ಯಾಂತ್ರೀಕರಣವೆಂದರೆ ಇಂಥಾದ್ದು.
ಶಂಕರಾಚಾರ್ಯರು ಒತ್ತಿ ಹೇಳಿದ ಆ ಎರಡನೆಯ ಮೌಲ್ಯ ನಿಃಶ್ರೇಯಸದ ಕಡೆಗೆ ಗಮನ ಕೊಟ್ಟರೆ, ಆಧ್ಯಾತ್ಮಿಕ ಮೌಲ್ಯಗಳೂ ಪ್ರಕಾಶಕ್ಕೆ ಬರುವುದರಿಂದ ಅಂಥ ಸಮಸ್ಯೆ ತಲೆದೋರಲಾರದು. ಈ ಪ್ರಪಂಚವನ್ನು ಒಂದು ಸಮನಾದ ಅಡಿಗಟ್ಟಿನ ಮೇಲೆ ನಡೆಸಿಕೊಂಡು ಬರಬೇಕಾದರೆ ಅಭ್ಯುದಯ ಮತ್ತು ನಿಶ್ರೇಯಸ ಎರಡೂ ಒಟ್ಟಿಗೆ ಅಗತ್ಯವಾಗುತ್ತವೆ. ಒಂದಕ್ಕೆ ಹೆಚ್ಚು ಒತ್ತುಕೊಟ್ಟು ಇನ್ನೊಂದನ್ನು ಉದಾಸೀನ ಮಾಡಿದರೆ, ಅದು ದೋಣಿಯಂತೆ ಒಂದಲ್ಲ ಒಂದು ಕಡೆ ವಾಲುತ್ತದೆ. ಇತ್ತೀಚಿನ ಕೆಲವು ಶತಮಾನಗಳಲ್ಲಿ ಭಾರತವು ನಿಃಶ್ರೇಯಸದ ಕಡೆ ವಾಲಿ ಅದೂ ಸರಿಯಾದ ರೀತಿಯಲ್ಲಲ್ಲ - ಅಭ್ಯುದಯವನ್ನು ಉದಾಸೀನ ಮಾಡಿ ನಿಂತಲ್ಲೇ ನಿಂತಿತು. ಇತ್ತೀಚೆಗೆ ಸ್ವಾಮಿ ವಿವೇಕಾನಂದರಂತಹ ಪ್ರಬೋಧಕರು ಈ ಜಡತ್ವದಿಂದ ಭಾರತವನ್ನು ಹೊರತರಲು ಯತ್ನಿಸಿದರು.
ನವಯುಗದ ಪಶ್ಚಿಮವು ಅಭ್ಯುದಯದ ಕಡೆಗೆ ವಾಲಿಕೊಂಡು, ಅದರಿಂದ ತನ್ನನ್ನು ಪಾರುಮಾಡುವವರಾರೆಂದು ಕಾಯುತ್ತಿದೆ. ಧ್ಯಾನದ ಬಗ್ಗೆ ಕ್ರೈಸ್ತ ಪರಿಕಲ್ಪನೆಯ ಫಲವಾಗಿ ಅನೇಕ ಸಂತರೂ ಅನುಭಾವಿಗಳೂ ಹುಟ್ಟಿಬಂದರು; ಆ ಕಾರಣ ಪಶ್ಚಿಮವು ನಿವೃತ್ತಿಯ ಅನುಭವ ಪಡೆಯಿತೇನೋ ನಿಜ, ಆದರೆ ಆಧುನಿಕ ಪಶ್ಚಿಮದಲ್ಲಿ ಅದು ಖಿಲವಾಗಿಹೋಗಿ, ಈಗಲೂ ಪ್ರವೃತ್ತಿಯ ಕಡೆಗೇ ಸಂಪೂರ್ಣವಾಗಿ ವಾಲಿಕೊಂಡಿದೆ. ಜೀವನದ ವಿಷಯದಲ್ಲಿ ಈ ಏಕಮುಖೀ ನಿಲುವಿನ ಬಗ್ಗೆ ಪಶ್ಚಿಮದಲ್ಲಿ ವಿರೋಧ ವ್ಯಕ್ತವಾಗುತ್ತಿದೆ; ಈ ಏಕಮುಖಿ ಧೋರಣೆಯು ಏಕಮುಖೀ ಜನರನ್ನು, ಏಕಮುಖೀ ನಾಗರಿಕತೆಯನ್ನು ಸೃಷ್ಟಿಸುತ್ತಿದೆ ಎಂಬುದನ್ನು ಕಂಡುಕೊಂಡ ಪಾಶ್ಚಿಮಾತ್ಯ ಚಿಂತಕರು, ಮನಶ್ಯಾಸ್ತ್ರಜ್ಞರು, ಬೈಜಿಕ ವಿಜ್ಞಾನಿಗಳೇ ಮೊದಲಾದವರಿಂದ ಈ ಪ್ರತಿಕ್ರಿಯೆ ಅಭಿವ್ಯಕ್ತವಾಗುತ್ತಿರುವುದು ಅಚ್ಚರಿಯ ಸಂಗತಿ. ಅಲ್ಲಿ ಇನ್ನೇನೋ ಅಗತ್ಯವಾಗಿದೆ; ಅಮೆರಿಕಾದ ಈ ಎಲ್ಲ ಇನ್ನೂರು ವರ್ಷಗಳ ಸಾಂಸ್ಕೃತಿಕ ಪ್ರಯೋಗದ ನಂತರ ಇಂಥ ಒಂದು ಅನಿಸಿಕೆ ಕಾಣಿಸಿಕೊಂಡಿದೆ; ಅಲ್ಲಿನ ಕೆಲವು ಚಿಂತಕರು ಈಗ ನಿವೃತ್ತಿಯ ಮೇಲೂ ಒತ್ತು ಇರಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಮೆರಿಕಾದ ಚಿಂತನೆಯಲ್ಲಿ ಅದು ಹೇಗೆ ಅಭಿವ್ಯಕ್ತಿ ಪಡೆಯುತ್ತದೆ?
ಅಪ್ರಜ್ಞೆ, ಉಪಪ್ರಜ್ಞೆ, ಪೂರ್ವಪ್ರಜ್ಞೆ, ಪ್ರಜ್ಞೆಗಳ ಜೊತೆಗೆ ವೇದಾಂತವು ಪ್ರಜ್ಞಾತೀತ ಎಂಬುದನ್ನೂ ಮನ್ನಿಸುತ್ತದೆ. ಮಾನವನ ಸೃಜನಶೀಲ ಚಟುವಟಿಕೆಗಳ ಪೈಕಿ ನಿವೃತ್ತಿಯು ಈ ಪ್ರಜ್ಞಾತೀತ ಸ್ಥಿತಿಗೆ ಸಂಬಂಧಿಸಿದುದು. ಮಾನವ ಸೃಜನಶೀಲ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪಾಶ್ಚಾತ್ಯ ಮನಶ್ಯಾಸ್ತ್ರಜ್ಞರು ನಡೆಸಿದ ಗ್ರಹಿಕೆಯ ಮೇಲಣ ಇತ್ತೀಚಿನ ಅಧ್ಯಯನಗಳು ಸಹ ಇದನ್ನೇ ಸೂಚಿಸುತ್ತವೆ.
೧೯೭೧-೭೨ರಲ್ಲಿ ನಾನು ಎಂಟು ತಿಂಗಳ ಅವಧಿಯ ಒಂದು ಉಪನ್ಯಾಸ ಪ್ರವಾಸದ ವೇಳೆಯಲ್ಲಿ ಅಮೆರಿಕಾದ ವಾಷಿಂಗ್ಟನ್ ಡಿ.ಸಿ, ಯಲ್ಲಿದ್ದಾಗ, ಅನೇಕರು ಒಟ್ಟಾಗಿ ಸೇರಿ ಬರೆದ American Handbook of Psychiatry (Volume 3) ಎಂಬ ಪುಸ್ತಕವನ್ನು ನೋಡಿದೆ. ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಅಮೆರಿಕನ್ ಯುವಜನರು ಒಂದು ಕಾಲದಲ್ಲಿ ಅನೇಕ ಬಗೆಯ ಮಾದಕ ದ್ರವ್ಯಗಳ ದುರುಪಯೋಗ ಮಾಡುತ್ತಿದ್ದುದನ್ನು ವಿರೋಧಿಸಿ ಪುಸ್ತಕವು ಆರೋಗ್ಯರಕ್ಷಣೆಯ ಬಗ್ಗೆ ಬರೆಯುತ್ತದೆ. Creativity and Its Cultivation ಎಂಬ ತಮ್ಮ ಅಧ್ಯಯನದಲ್ಲಿ ಸಿಲ್ವ್ಯಾನೊ ಅರೈಟಿ ಹೀಗೆನ್ನುತ್ತಾನೆ (ಪುಟ ೭೩೭-೭೪೦):
'ವಿಷಸೇವನೆಯ ಮಾರ್ಗಗಳ ಬದಲು, ನಾವು ವಿಶೇಷ ಧೋರಣೆಗಳನ್ನು, ಅಭ್ಯಾಸಗಳನ್ನು ಹಾಗೂ ಯೋಗ್ಯ ಪರಿಸರ ವ್ಯವಸ್ಥೆಗಳನ್ನು ಪರಿಗಣಿಸಬೇಕು ಮತ್ತು ಬಹುಶಃ ಶಿಫಾರಸು ಮಾಡಬೇಕು. ಪರಿಗಣಿಸಬೇಕಾದ ಮೊದಲನೆಯದು ಏಕಾಂತತೆಯ ಸ್ಥಿತಿ. ಈ ಏಕಾಂತತೆಯನ್ನು ಭಾಗಶಃ ಇಂದ್ರಿಯನಿಗ್ರಹ ಎನ್ನಬಹುದು... ವ್ಯಕ್ತಿಗೆ ತನ್ನ ಅಂತರ್ವಾಣಿಗೆ ಕಿವಿಗೊಡುವ ತನ್ನ ಅಂತರಿಕ ಶಕ್ತಿಮೂಲಗಳ ಜೊತೆಗೆ ಸಂಪರ್ಕ ಸಾಧಿಸುವ ಹಾಗೂ ಕೆಲವು ಪ್ರಾಥಮಿಕ ಕ್ರಿಯೆಗಳ (ಸಂಸ್ಕಾರಗಳ) ಅಭಿವ್ಯಕ್ತಿಯನ್ನು ಪರಿಶೀಲಿಸುವ ಅವಕಾಶ ದೊರೆಯುತ್ತದೆ. (ಆಧುನಿಕ ಪಾಶ್ಚಾತ್ಯ ಮನೋವಿಜ್ಞಾನವು ಪ್ರಜ್ಞಾಪೂರ್ವ ಸ್ಥಿತಿಯಲ್ಲಿ ಲಭಿಸಿದ ಅತರ್ಕ ರೀತಿಯ ಜ್ಞಾನವನ್ನು ಪ್ರಾಥಮಿಕ ಅವಗಾಹನೆಯೆಂದೂ, ಪ್ರಜ್ಞಾಸ್ಥಿತಿಯಲ್ಲಿ ಗಳಿಸಿದ ತರ್ಕಬದ್ಧ ಜ್ಞಾನವನ್ನು ಆನುಷಂಗಿಕ ಅವಗಾಹನೆಯೆಂದೂ ಕರೆಯುತ್ತದೆ). ದುರದೃಷ್ಟವಶಾತ್ ತರುಣತರುಣಿಯರ ವಿದ್ಯಾಭ್ಯಾಸದ ಹೊಸ ರೂಪದಲ್ಲಿ ಈ ಏಕಾಂಗಿತನಕ್ಕೆ ಮನ್ನಣೆಯಿಲ್ಲ. ಅದಕ್ಕೆ ಬದಲಾಗಿ ಗುಂಪುಗೂಡುವಿಕೆ, ಜನಪ್ರಿಯತೆಗಳನ್ನೇ ವಿಶೇಷವಾಗಿ ಮಾನ್ಯಮಾಡಲಾಗಿದೆ.
ಏಕಾಂಗಿತನವನ್ನು ದುಃಖದಾಯಕವೆನಿಸುವಂಥ ಸ್ಥಿತ ಏಕಾಂತವೆಂದಾಗಲಿ ವ್ಯಕ್ತಿತ್ವ ಶೋಧವೆಂದಾಗಲಿ ತಪ್ಪುತಿಳಿಯಬಾರದು... ಪ್ರಚಲಿತ ಅಮೆರಿಕನ್ ಸಂಸ್ಕೃತಿಯ ಧೋರಣೆಗೆ ವಿರುದ್ಧವೆನ್ನಬಹುದಾದ ಎರಡನೆಯ ಗುಣವಿಶೇಷವೆಂದರೆ ಕಾರ್ಯಾಭಾವ...
'ಮೂರನೆಯ ಗುಣವಿಶೇಷ ಹಗಲುಗನಸು... ವ್ಯಕ್ತಿ ರೂಢಮಾರ್ಗವನ್ನು ಬಿಟ್ಟು ಸ್ವಲ್ಪ ಅಸಂಬದ್ಧತೆಯ ಪ್ರಪಂಚಕ್ಕೆ ಹಣುಕಿ ಬರುವುದು ಹಗಲುಗನಸು ಕಾಣುವಾಗಲೇ. 'ಸೃಜನಶೀಲ ವ್ಯಕ್ತಿಗಿರುವ - ಒಪ್ಪಿಕೊಳ್ಳಲು ಕಷ್ಟವಾದ - ಇನ್ನೊಂದು ಅಗತ್ಯವೆಂದರೆ ಮುಗ್ಧತೆ. ನಮ್ಮೊಳಗೆ ಹಾಗೂ ನಮ್ಮಿಂದ ಹೊರಗೆ ಇರುವ ಎಲ್ಲ ವಸ್ತುಗಳಲ್ಲಿಯೂ ಕೆಲವು ಸುವ್ಯವಸ್ಥಿತ ಏರ್ಪಾಡುಗಳು ಅಡಕವಾಗಿವೆ ಎಂಬುದನ್ನು, ತಾತ್ಕಾಲಿಕವಾಗಿ ಅಥವಾ ತಪ್ಪೆಂದು ಸಾಧಿತವಾಗುವವರೆಗೆ, ಒಪ್ಪಿಕೊಳ್ಳುವ ಇಚ್ಛೆ ಎಂಬ ಅರ್ಥದಲ್ಲಿ ಈ ಪದವನ್ನು ಇಲ್ಲಿ ಬಳಸಲಾಗಿದೆ. ಹೊಸ ಸಂಗತಿಗಳನ್ನು ಆವಿಷ್ಕರಿಸುವುದಕ್ಕಿಂತ, ಎಷ್ಟೋ ಬಾರಿ ಈ ಅಡಕವಾಗಿರುವ ಏರ್ಪಾಡುಗಳನ್ನು ಅನಾವರಣ ಮಾಡುವುದೇ ಸೃಜನಶೀಲತೆ ಎನಿಸಿಕೊಳ್ಳುತ್ತದೆ...
'ಇತರ ಅಗತ್ಯಗಳೆಂದರೆ ಚುರುಕುತನ ಮತ್ತು ಶಿಸ್ತು, ಸಾಮಾನ್ಯವಾಗಿ ಉತ್ಪಾದಕತೆಗೆ ಅವು ಅಗತ್ಯವಾಗಿ ಇರಲೇಬೇಕಾದ ಪೂರ್ವಾಪೇಕ್ಷಿತ ಗುಣಗಳಾದರೂ, ಸೃಜನಶೀಲತೆಯಲ್ಲಿ ವಿಶಿಷ್ಟ ರೂಪವನ್ನು ಪಡೆಯುತ್ತವೆ.'
ಇವು ಸಿಲ್ವಾನೊ ಅರೈಟಿ ಸೂಚಿಸುವ ಕೆಲವು ಸಲಹೆಗಳು; ಇದರಲ್ಲಿ ಒಂದು ಸಲಹೆ ಕ್ರಾಂತಿಕಾರಕವಾದದ್ದು: ನೀವು ಮುಗ್ಧತೆಯನ್ನು ಬೆಳೆಸಿಕೊಳ್ಳಬೇಕು; ಜನರು ಹೇಳಿದ್ದನ್ನು ನಂಬಬೇಕೇ ಹೊರತು ನಂಬದಿರಬಾರದು. ಇಂದು ಪ್ರತಿಯೊಂದನ್ನೂ ನಂಬದೇ ಇರುವ ಮನೋಭಾವ ತೀರ ಅತಿರೇಕಕ್ಕೆ ಹೋಗಿದೆ ಎನ್ನುತ್ತಾರೆ ಈ ಪುಸ್ತಕದ ಲೇಖಕರು. ಯಾವುದನ್ನೇ ಆದರೂ, ತಪ್ಪೆಂದು ಸಾಧಿತವಾಗುವವರೆಗೆ ನಂಬುವಂಥ ಸಾಮರ್ಥ್ಯ ನಿಮಗಿರಬೇಕು. ಚಿಕ್ಕ ಮಕ್ಕಳು ತುಂಬಾ ಸೃಜನಶೀಲತೆಯನ್ನು ಹೊಂದಿರುವುದು, ಅವರು ನಂಬುವುದರಿಂದಲೇ; ದೊಡ್ಡವರು ಈ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ನಂಬುವ ಸಾಮರ್ಥ್ಯ ಇಲ್ಲವಾದಾಗ - ಅದು ಸಾಮಾನ್ಯವಾಗಿ ಆಗುವುದು ಏಕಮುಖ ಬೆಳವಣಿಗೆಯಾದಾಗ - ನೀವು ನಿಧಾನವಾಗಿ ಸಿನಿಕತನವನ್ನು ಬೆಳೆಸಿಕೊಳ್ಳುತ್ತ ಬರುತ್ತೀರಿ. ಇಂದು ಪ್ರಪಂಚಾದ್ಯಂತ ಈ ಪ್ರತಿಯೊಂದನ್ನೂ ನಂಬದೇ ಇರುವುದು ಮನುಷ್ಯನ ಮನಸ್ಸಿನ ಒಂದು ಕಾಹಿಲೆಯಾಗಿಬಿಟ್ಟಿದೆ. ಒಂದು ಪರಾಕಾಷ್ಠೆಯೆಂದರೆ ಸಿನಿಕತನ; ಇನ್ನೊಂದು ಪರಾಕಾಷ್ಠೆ ಮುಗ್ಧತೆ; ಸಿನಿಕತನವನ್ನು ಮುಗ್ಧತೆಯಿಂದಲೇ ತಹಬಂದಿಗೆ ತರಬೇಕು; ಆಗ ಒಂದು ಸಮತೋಲದ ಧೋರಣೆ ಬರುತ್ತದೆ ಎನ್ನುತ್ತದೆ ಆ ಪುಸ್ತಕ.
ಸಿನಿಕ ಧೋರಣೆಯಿಂದ ಎಲ್ಲಾ ಸೃಜನಶೀಲತೆಯೂ ನಾಶವಾಗುತ್ತದೆ. ಬ್ರಿಟಿಷ್ ಕವಿ ಬೈರನ್ ಎಂದು ತೋರುತ್ತದೆ, ವಿಕ್ಟೋರಿಯಾ ರಾಣಿ ಮತ್ತು ತನ್ನ ತಾಯಿ ಇಬ್ಬರನ್ನು ಬಿಟ್ಟು ಇಡೀ ಇಂಗ್ಲೆಂಡಿನಲ್ಲಿ ಒಬ್ಬಳೇ ಒಬ್ಬಳು ಶೀಲವಂತ ಮಹಿಳೆ ಇಲ್ಲ ಎಂದು ಹೇಳಿದ್ದು. ವಿಕ್ಟೋರಿಯಾ ರಾಣಿಯನ್ನು ಬಿಟ್ಟಿದ್ದು ತನಗೆ ಶಿಕ್ಷೆಯಾದೀತು ಎಂಬುದರಿಂದ, ತನ್ನ ತಾಯಿಯನ್ನು ಬಿಟ್ಟಿದ್ದು ತಾನು ಬೇವಾರ್ಸಿಯಾಗುವೆ ಎಂಬುದರಿಂದ, ಎಂದು ಆಮೇಲೆ ತನ್ನ ಮಾತಿಗೆ ಒಗ್ಗರಣೆಯನ್ನೂ ಹಾಕಿದನಂತೆ!
ಆ ರೀತಿಯ ತೀರ್ಮಾನ ಬರುವುದು ಮನಸ್ಸಿನಲ್ಲಿ ಆಳವಾಗಿ ಬೇರುಬಿಟ್ಟಿರುವ ನಿಷೇಧಾತ್ಮಕತೆಯಿಂದ. ನಾವಿಂದು ವರ್ತಮಾನ ಭಾರತದ ಅನೇಕ ಬುದ್ಧಿಜೀವಿಗಳಲ್ಲಿ ಇಂಥ ಸಿನಿಕತನದ ಧೋರಣೆಯನ್ನು ಕಾಣುತ್ತೇವೆ. ನಮ್ಮ ಕೆಲವು ಪತ್ರಕರ್ತರಲ್ಲೂ ಇನ್ನಿತರ ಮಾಧ್ಯಮಗಳ ಜನರಲ್ಲೂ ಇದನ್ನು ಧಾರಾಳವಾಗಿ ಕಾಣಬಹುದು. ಮನುಷ್ಯನಲ್ಲಿ, ಅವನ ವಿಧಿಯಲ್ಲಿ, ಸತ್ಯದಲ್ಲಿ, ಇರಬೇಕಾದ ಆ ಮೂಲಭೂತ ನಂಬಿಕೆಯೇ ಇಂದು ಶಿಥಿಲವಾಗಿಬಿಟ್ಟಿದೆ. ಆಧ್ಯಾತ್ಮವಿಜ್ಞಾನವು ಸುಮ್ಮನೆ ಕುಳಿತು ಧ್ಯಾನ ಮಾಡಿರಿ ಎಂದು ವಿಧಿಸುವಾಗ, ಅದು ನಿಮ್ಮನ್ನು ಕೇಳುತ್ತಿರುವುದು ಸ್ವಲ್ಪ ಹೊತ್ತು ಏಕಾಂಗಿಯಾಗಿರಿ, ಯಾವಾಗಲೂ ಇತರರೊಡನೆ ಭುಜ ಉಜ್ಜುತ್ತಿರಬೇಡಿ ಎಂದು. ಭುಜ ಉಜ್ಜುವುದೆಂದರೆ ನರಗಳನ್ನೂ ಉಜ್ಜಿದಂತೆಯೆ. ಆಗಾಗ್ಗೆ ಏಕಾಂತದಲ್ಲಿದ್ದು ಆನಂದಪಡುವುದನ್ನು ಕಲಿಯಿರಿ. ಇವೆಲ್ಲ ಬರುವುದು ವೇದಾಂತದ ನಿವೃತ್ತಿ ಎಂಬ ಆ ಬೋಧನೆಯಲ್ಲಿ. ನಾವು ಸಹಜವಾಗಿಯೇ ಪ್ರವೃತ್ತಿಪ್ರಣತರಾಗಿರುವುದರಿಂದ, ನಮಗೆ ಪ್ರವೃತ್ತಿಯನ್ನೇನೂ ಯಾರೂ ಕಲಿಸಬೇಕಾಗಿಲ್ಲ. ಮಗುವೊಂದು ಹಾರಿ ಕುಣಿದು ಓಡಿ ಸಾಮಾನುಗಳನ್ನು ಅತ್ತಿಂದಿತ್ತ ಎಸೆಯುವ ಹಾಗೆ, ಪ್ರವೃತ್ತಿ ಸಹಜವಾದದ್ದೇಯೆ. ಆದರೆ ನಿವೃತ್ತಿಯನ್ನು ಕಲಿಸುವ ಅವಶ್ಯಕತೆ ಇದೆ. ಇಂದು ಇಡೀ ಮಾನವಸಮುದಾಯವೇ ಅದನ್ನು ಎದುರುನೋಡುತ್ತಿದೆ. ಮನಸ್ಸಿನ ಅದೆಂತಹ ಆಳವಾದ ಜ್ಞಾನವನ್ನು ಅದು ಹೊರತರುತ್ತಿರುವುದು!
ತಮ್ಮ ಏಕಪಕ್ಷೀಯ ಸಾಂಸ್ಕೃತಿಕ ಪರಿಸ್ಥಿತಿಗೆ ವಿವೇಚನೆಯಿಂದ ಪ್ರತಿಕ್ರಿಯಿಸುತ್ತಿರುವ ಪಾಶ್ಚಿಮಾತ್ಯ ಬರಹಗಾರರು, ಚಿಂತಕರು, ಮನೋವಿಜ್ಞಾನಿಗಳು ಮುಂತಾದವರಿಂದ ಹಾಗೂ ಇಂಡಿಯಾ, ಚೈನಾ, ಜಪಾನ್ ಮೊದಲಾದ ಪೌರ್ವಾತ್ಯ ದೇಶಗಳಿಂದ ಪ್ರಭಾವಿತವಾಗಿ ಈ ನಿವೃತ್ತಿ ಎಂಬ ಪ್ರಸಾದದ ಸಂದೇಶವು ಪಾಶ್ಚಿಮಾತ್ಯ ಮನಸ್ಸಿನೊಳಕ್ಕೆ ನಿಧಾನವಾಗಿ ಜಿನುಗಿ ಸೇರುತ್ತಿದೆ. ಪ್ರವೃತ್ತಿಯಿಂದ ನೀವು ಸಾಧಿಸುವುದು ಸಾಮಾಜಿಕ ಹಿತ - ಒಳ್ಳೆಯ ಮನೆಗಳು, ತಿಂದು ಕುಡಿಯುವುದಕ್ಕೆ ಇರುವ ಸಮೃದ್ಧಿ, ಒಳ್ಳೆಯ ಬಟ್ಟೆ, ವಿದ್ಯಾಭ್ಯಾಸ, ಬೆಳಗುವ ಬೀದಿಗಳು, ಒಳ್ಳೆಯ ರಸ್ತೆಗಳು - ಮೊದಲಾದುವನ್ನು; ಇದು ಅತಿಯಾದರೆ ಭೋಕ್ತೃತ್ವ ಎನ್ನಿಸಿಕೊಳ್ಳುತ್ತದೆ. ಶಾಂತಿ ಸಮನ್ವಯ ಧನ್ಯತೆ ಕೃತಕೃತ್ಯತೆಗಳಿಂದ ಇರಬೇಕಾದರೆ, ಜನಗಳನ್ನು ಪ್ರೀತಿಸುತ್ತ ಅವರೊಂದಿಗೆ ಶಾಂತಿಯಿಂದಿರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾದರೆ, ಎಲ್ಲರಲ್ಲೂ ದಿವ್ಯತೆಯ ಕಿಡಿಯಂತೆ ಇರುವ ಆಧ್ಯಾತ್ಮಿಕ ಶಕ್ತಿಯನ್ನು ಕ್ರಿಯಾಶೀಲವಾಗಿಸಲು ಅನುವಾಗುವ ಈ ನಿವೃತ್ತಿ ಎಂಬ ಅನುಗ್ರಹದ ಅವಶ್ಯಕತೆಯಿದೆ. ಅಂತಹ ನಿವೃತ್ತಿ ನಮ್ಮೆಲ್ಲಾ ಪ್ರವೃತ್ತಿಗಳಿಗೆ ಸ್ಫೂರ್ತಿಯೂ ಆಗಬಹುದು. ಅದೇ ಗೀತೆಯಲ್ಲಿರುವ ಬೋಧನೆ - ನಿವೃತ್ತಿಯು ಪ್ರವೃತ್ತಿಯನ್ನು ಪ್ರಚೋದಿಸುವುದು. ನಮ್ಮ ಇಂಡಿಯಾದಲ್ಲಿ ಈಗ ಬೇಕಾದಷ್ಟು ಪ್ರವೃತ್ತಿ ಇದೆ; ಈಗತಾನೆ ಚುನಾವಣೆಗಳು ಮುಗಿದಿವೆ, ಅದೆಷ್ಟು ಪ್ರವೃತ್ತಿಯನ್ನು ನಾವು ನೋಡಿದೆವು - ಹಿಂಸಾತ್ಮಕ ಚಿಂತನೆ, ಹಿಂಸಾತ್ಮಕ ಕೃತಿ, ಯಾರೋ ಓಟುಪೆಟ್ಟಿಗೆಯನ್ನು ಹೊತ್ತೊಯ್ಯುವುದು ಇವೇ ಮುಂತಾದುವುಗಳು. ನಾವೇಕೆ ಹಾಗೆ ಮಾಡುವೆವು? ಏಕೆಂದರೆ ಇಂದು ನಮ್ಮಲ್ಲಿ ನಮ್ಮ ಚಿಂತನೆಯನ್ನು ಶುದ್ಧಗೊಳಿಸಿ ಸ್ಥಿರಪಡಿಸುವಷ್ಟು ನಿವೃತ್ತಿ ಇಲ್ಲ. ನಾವು ಯೋಚಿಸಬೇಕು; ನಮ್ಮನ್ನು ನಾವು ಕೇಳಿಕೊಳ್ಳಬೇಕು - ನಾವಿದನ್ನು ಏಕೆ ಮಾಡುತ್ತಿದ್ದೇವೆ? ಇದು ಪ್ರಜಾಪ್ರಭುತ್ವಕ್ಕೆ ಸಹಾಯಕವೆ? ಎಂದು. ತಮಗೆ ಇಷ್ಟಬಂದಂತೆ ಓಟು ಹಾಕಲು ನಾವು ಜನರಿಗೆ ಸ್ವಾತಂತ್ರ್ಯವನ್ನು ಕೊಡಬೇಕು; ಯಾವುದಾದರೂ ರಾಜಕೀಯ ಪಕ್ಷ ಅದರಲ್ಲಿ ಮೂಗು ತೂರಿಸಿ ಅವರನ್ನು ನಿಯಂತ್ರಿಸಬೇಕಾದರೂ ಏಕೆ? ನಮ್ಮ ರಾಜಕೀಯದಲ್ಲಿ ಇಂಥ ದಾರಿಬಿಟ್ಟು ಹೋಗುವ ಅನೇಕ ಸಂದರ್ಭಗಳಿವೆ; ಜೊತೆಗೆ ಭ್ರಷ್ಟಾಚಾರವೂ ಇದೆ. ಆದರೆ ಸ್ವಲ್ಪವೇ ನಿವೃತ್ತಿ ಸಾಕು ಇದೆಲ್ಲವನ್ನೂ ಬದಲಾಯಿಸುವುದಕ್ಕೆ.
ಯಾವ ರೀತಿಯ ಬದುಕು ಪ್ರಚಂಡ ಸಾಮರ್ಥ್ಯವುಳ್ಳದ್ದೋ, ಮಹತ್ತರ ಉತ್ಪಾದಕತೆ ಯುಳ್ಳದ್ದೋ ಮತ್ತು ಯಾವುದರಲ್ಲಿ ಮಾನವೀಯ ಸಂಬಂಧಗಳು ಅತ್ಯುತ್ತಮವಾಗಿರುತ್ತವೆಯೋ ಅಂತಹ ಬದುಕನ್ನು ಕುರಿತು ಗೀತೆ ಹೇಳುತ್ತದೆ. ಇಂತಹ ದೃಷ್ಟಿಕೋನದಲ್ಲಿ ಮಾನವ ಜೀವನಕ್ಕೂ ವಿಧಿಗೂ ಇರುವ ವ್ಯಾಪಕತೆ ಗಮನಾರ್ಹ. ಗೀತೆಯ ಈ ವ್ಯಾಪಕ ಆಧ್ಯಾತ್ಮಿಕತೆಯನ್ನು ಸಾರ ಸಂಗ್ರಹ ರೂಪದಲ್ಲಿ ಶಂಕರಾಚಾರ್ಯರು ಕೊಟ್ಟಿದ್ದಾರೆ. ಪ್ರವೃತ್ತಿ ಮಾರ್ಗದಲ್ಲಿದ್ದರೂ ಸಹ ಎಲ್ಲ ಸ್ತ್ರೀಪುರುಷರೂ ಅಧ್ಯಾತ್ಮಸ್ವರೂಪಿಗಳೇ; ಯಾರೂ ಅಧ್ಯಾತ್ಮದ ಹೊರಗೆ ಇಲ್ಲ. ಇದೊಂದು ಅದ್ಭುತವಾದ ಕಲ್ಪನೆ. ಜೀವನದಲ್ಲಿ ಅಧ್ಯಾತ್ಮ ಸರ್ವವ್ಯಾಪಿ; ನೀವೆಂದಿಗೂ ಅಧ್ಯಾತ್ಮದ ಹೊರಗೆ ಇರಲಾರಿರಿ, ಇದು ಗೀತೆಯ ಮತ್ತು ವೇದಾಂತದ ಧೋರಣೆ. ಅದಕ್ಕಾಗಿಯೇ ನಾನು ದ್ವಿವಿಧೋ ಹಿ ವೇದೋಕ್ತೋ ಧರ್ಮಃ ಎಂದು ಪ್ರಾರಂಭವಾಗುವ ಶಂಕರಾಚಾರ್ಯರ ಭಾಷ್ಯದ ಎರಡನೆಯ ವಾಕ್ಯವನ್ನು ಮೆಚ್ಚುತ್ತೇನೆ. ಈ ಕೆಲವು ಶತಮಾನಗಳಲ್ಲಿ ನಾವು ಈ ಸತ್ಯವನ್ನು ಅರ್ಥಮಾಡಿಕೊಂಡಿರಲಿಲ್ಲ; ನಾವು ನಮ್ಮ ತತ್ತ್ವ ಹಾಗೂ ಧರ್ಮಗಳನ್ನು ಕಳೆದ ಶತಮಾನದವರೆಗೂ ಅದೆಷ್ಟು ಸಾರರಿಕ್ತಗೊಳಿಸಿಬಿಟ್ಟಿದ್ದೆವೆಂದರೆ ಅವು ಮಾರುಕಟ್ಟೆಯಲ್ಲಿ ದೊರಕುವ ಹಾಲಿನಂತೆ ಆಗಿಬಿಟ್ಟಿದ್ದುವು - ಶತಾಂಶ ತೊಂಭತ್ತು ನೀರು - ಮತ್ತು ಶತಾಂಶ ಹತ್ತು ಹಾಲು!
ನಾವು ನಮ್ಮ ಇಡಿಯ ದೇಶವನ್ನು ಈ ಗಾಢವಾದ, ಏಕೀಭವಿಸುವ ತತ್ತ್ವದ ತಳಹದಿಯ ಮೇಲೆ ಕಟ್ಟಬೇಕಾಗಿದೆ. ಆದ್ದರಿಂದಲೇ ಆಧುನಿಕ ಯುಗದಲ್ಲಿ ವೇದಾಂತದ ಈ ವ್ಯಾಪಕವಾದ ತತ್ತ್ವ ಮತ್ತು ಆಧ್ಯಾತ್ಮಿಕತೆಯ ಪತಾಕೆಯನ್ನು ಮುಗಿಲೆತ್ತರ ಎತ್ತಿದವರೆಂದು ಸ್ವಾಮಿ ವಿವೇಕಾನಂದರನ್ನು ಸ್ಮರಿಸಿಕೊಳ್ಳುವುದು. ಅದು ಯುಕ್ತಿಯುಕ್ತ, ವ್ಯವಹಾರ್ಯ, ಸಾರ್ವತ್ರಿಕ ಹಾಗೂ ಮಾನವೀಯತಾಪೂರ್ಣ. ಆ ಪತಾಕೆಯನ್ನು ಮತ್ತೊಮ್ಮೆ ಮೇಲಕ್ಕೆ ಎತ್ತೋಣ. ೧೮೯೭ರಲ್ಲಿ ಲಾಹೋರ್‌ನಲ್ಲಿ ಕೊಟ್ಟ ವೇದಾಂತವೆಂಬ ಉಪನ್ಯಾಸದಲ್ಲಿ (ಕೃತಿಶ್ರೇಣಿ, ಸಂಪುಟ ೩, ಪುಟ ೨೮೭) ಅವರು ದೇಶಕ್ಕೆ ಹೀಗೆಂದು ಕರೆಯಿತ್ತರು: -
“ಆದ್ದರಿಂದ ಲಾಹೋರ್‌ನ ತರುಣರೇ, ಅದ್ವೈತದ ಆ ಶಕ್ತಿಪೂರ್ಣ ಪತಾಕೆಯನ್ನು ಮತ್ತೊಮ್ಮೆ ಮೇಲಕ್ಕೆತ್ತಿ. ಏಕೆಂದರೆ ಬೇರಾವ ನೆಲೆಯಲ್ಲಿಯೂ ನೀವು “ಎಲ್ಲೆಡೆಯೂ ಅದೇ ದೇವರಿರುವ” ನೆಂದು ಕಾಣುವವರೆಗೆ ಆ ಅದ್ಭುತವಾದ ಪ್ರೇಮವನ್ನು ಪಡೆಯಲಾರಿರಿ. ಆ ಪ್ರೇಮಪತಾಕೆಯನ್ನು ಹಾರಿಸಿ! “ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ.” ಏಳಿ, ಇನ್ನೊಮ್ಮೆ ಏಳಿ, ಏಕೆಂದರೆ ತ್ಯಾಗವಿಲ್ಲದೆ ಏನನ್ನು ಮಾಡಲೂ ಸಾಧ್ಯವಿಲ್ಲ. ನೀವು ಬೇರೆಯವರಿಗೆ ಸಹಾಯ ಮಾಡಬೇಕೆಂದರೆ, ನಿಮ್ಮ ಆ ಸಣ್ಣ ಅಹಂ ಹೋಗಲೇಬೇಕು. ದೇಶ ಮುಳುಗುತ್ತಿದೆ; ಅಗಣಿತ ಸಂಖ್ಯೆಯ ಮಿಲಿಯಗಟ್ಟಲೆ ಜನರ ಶಾಪ ನಮ್ಮ ತಲೆಯ ಮೇಲಿದೆ – ಬಾಯಾರಿಕೆಯಿಂದ ಸಾಯುತ್ತಿದ್ದ ಯಾರಿಗೆ ಸಾರ್ವಕಾಲಿಕ ಗಂಗೆ ಹತ್ತಿರದಲ್ಲೇ ಹರಿಯುತ್ತಿದ್ದಾಗಲೂ ನಾವು ಚರಂಡಿ ನೀರನ್ನು ಕುಡಿಯಲು ಕೊಟ್ಟೆವೋ, ಸಮೃದ್ಧಿಯ ಎದುರಿನಲ್ಲೇ ಯಾವ ಅಗಣಿತ ಸಂಖ್ಯೆಯ ಮಿಲಿಯಗಟ್ಟಲೆ ಜನರನ್ನು ಉಪವಾಸವಿಟ್ಟೆವೋ, ನಮ್ಮ ಶಕ್ತಿಯಿದ್ದಷ್ಟೂ ದ್ವೇಷಿಸುತ್ತ ಯಾವ ಅಗಣಿತ ಸಂಖ್ಯೆಯ ಮಿಲಿಯಗಟ್ಟಲೆ ಜನರಿಗೆ ಅದ್ವೈತವನ್ನು ಬೋಧಿಸಿದೆವೋ ಅವರ ಶಾಪ ನಮ್ಮ ತಲೆಯ ಮೇಲಿದೆ. ಈ ಶಾಪವನ್ನು ಅಳಿಸಿ ಹಾಕಿ, ಏಳಿ, ಎದ್ದೇಳಿ ಮತ್ತು ಪರಿಪೂರ್ಣ ಪ್ರಾಮಾಣಿಕರಾಗಿರಿ. ಭಾರತದಲ್ಲಿನ ನಮ್ಮ ಅಪ್ರಾಮಾಣಿಕತೆ ತೀರ ಅತಿರೇಕದ್ದು. ನಮಗೀಗ ಬೇಕಾದದ್ದು ಶೀಲ; ಗಂಭೀರಮೃತ್ಯುವಿಗೂ ಸಹ ಅಂಟಿಕೊಳ್ಳಲು ಅನುವಾಗುವಂತಹ ಸ್ಥೈರ್ಯ ಮತ್ತು ಶೀಲ.'
ಇಂದು ಆ ವೇದಾಂತಕೇಸರಿಯ ಗರ್ಜನೆ ನವಯುಗಕ್ಕೆ ಪ್ರಚಂಡ ಪ್ರಸಕ್ತಿಯೊಂದಿಗೆ ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಬೋಧನೆಗಳಲ್ಲಿ ವ್ಯವಹಾರ್ಯ ವೇದಾಂತವಾಗಿ ನಮಗೆ ಲಭ್ಯವಾಗಿದೆ.
ಪ್ರಾಣಿನಾಂ ಸಾಕ್ಷಾತ್ ಅಭ್ಯುದಯ ನಿಃಶ್ರೇಯಸ ಹೇತುಃ ಎಂದು ಹೇಳುವ ಮೂಲಕ, ವೇದಾಂತ ಅಥವಾ ಸನಾತನ ಧರ್ಮವು, (ತಮ್ಮ ಅನುಯಾಯಿಗಳನ್ನು ಮಾತ್ರ ನೋಡಿಕೊಳ್ಳುವೆವು ಎನ್ನುವ ಇತರ ಕೆಲವು ಧರ್ಮಗಳ ಅಥವಾ ರಾಜಕೀಯ ವ್ಯವಸ್ಥೆಗಳ ಹಾಗಲ್ಲದೆ) ಪ್ರಾಣಿಗಳನ್ನೂ ಸೇರಿಸಿ ಎಲ್ಲ ಜೀವಿಗಳ ಸುಖ ಹಾಗೂ ಯೋಗಕ್ಷೇಮಕ್ಕಾಗಿ ಕೆಲಸಮಾಡುತ್ತದೆ ಎಂಬುದನ್ನು ಶಂಕರರು ಒತ್ತಿ ಹೇಳಿದ್ದಾರೆ.
ಅನಂತರ ಶಂಕರರು ಮುಂದುವರೆಸುತ್ತಾರೆ:
ಯಃ ಸ ಧರ್ಮಃ ಬ್ರಾಹ್ಮಣಾದ್ಯೈಃ ವರ್ಣಿಭಿಃ ಆಶ್ರಮಿಭಿಃ ಚ ಶ್ರೇಯೋರ್ಥಿಭಿಃ ಅನುಷ್ಠೀಯಮಾನಃ ದೀರ್ಘೇಣ ಕಾಲೇನ —
`ಈ ಎರಡು ಬಗೆಯ ಧರ್ಮವು ಬ್ರಾಹ್ಮಣರೇ ಮೊದಲಾದ ವರ್ಣಿಗಳಿಂದಲೂ (ಬ್ರಹ್ಮಚಾರಿಗಳೇ ಮೊದಲಾದ) ಆಶ್ರಮಿಗಳಿಂದಲೂ ದೀರ್ಘಕಾಲದಿಂದಲೂ ಅನುಷ್ಠಾನ ಮಾಡಲ್ಪಡುತ್ತಿತ್ತು.'
ಐಂದ್ರಿಯಕ ಮೌಲ್ಯಗಳ ಮೇಲುಗೈಯಿಂದ ಉಂಟಾಗುವ ಕೇಡುಗಳು
ಹೀಗೆ ದೀರ್ಘಕಾಲದ ವರೆಗೆ ಎಲ್ಲವೂ ಚೆನ್ನಾಗಿಯೇ ನಡೆಯಿತು; ಅನಂತರ ಏನಾಯಿತು? ಶಂಕರರು ಮುಂದುವರೆಸುತ್ತಾರೆ:
ಅನುಷ್ಠಾತೄಣಾಂ ಕಾಮೋದ್ಭವಾತ್ ಹೀಯಮಾನ-ವಿವೇಕವಿಜ್ಞಾನಹೇತುಕೇನ ಅಧರ್ಮೇಣ ಅಭಿಭೂಯಮಾನೇ ಧರ್ಮೇ, ಪ್ರವರ್ಧಮಾನೇ ಚ ಅಧರ್ಮೇ..
'ಈ ಧರ್ಮವನ್ನು ಅನುಷ್ಠಾನ ಮಾಡುವವರಿಗೆ ಕಾಮ ಉಂಟಾಗಿ ವಿವೇಕ ವಿವೇಚನೆಗಳು ಹೊರಟುಹೋದದ್ದರಿಂದ ಉಂಟಾದ ಅಧರ್ಮದಿಂದ ಧರ್ಮ (ಅಥವಾ ಮೌಲ್ಯಪ್ರಜ್ಞೆ) ಮುಚ್ಚಿಹೋಗಿ ಅಧರ್ಮ (ಅಥವಾ ಸಾಮಾಜಿಕ ಕೇಡು) ಹೆಚ್ಚಿತು.’
ಇಂತಹ ಪರಿಸ್ಥಿತಿ ಉದ್ಭವಿಸಿದಾಗ, ಮೊದಲು ಮಾನವ-ಮಾನವರನ್ನು ಒಗ್ಗೂಡಿಸಿ ಸುಸ್ಥಿತಿಯಲ್ಲಿಟ್ಟಿದ್ದ ಮೌಲ್ಯಗಳೂ ಔದಾರ್ಯಗಳೂ ನಶಿಸಿಹೋಗಿ, ಹೆಚ್ಚುತ್ತಿರುವ ಕಾಮ, ದುರಾಸೆ, ಹಿಂಸೆ, ಸ್ವ-ಕೇಂದ್ರಿತ ಸ್ವಾರ್ಥಗಳಿಂದಾಗಿ ಸಮಾಜವು ಅವನತಿಯ ಹಾದಿಯನ್ನು ಹಿಡಿಯುತ್ತದೆ. ಕಾಮ ಮತ್ತು ಕ್ರೋಧಗಳ ಮೇಲುಗೈಯಾದಾಗ ಮೊದಲು ಆಗುವುದು ವಿವೇಕ ವಿವೇಚನೆಗಳು ಕಳೆದು ಹೋಗುವುದೇ. ತಪ್ಪು ಸರಿಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತ ಕಡಿಮೆಯಾಗುತ್ತ, ಕೊನೆಗೆ ಯಾವ ಹಂತದಲ್ಲಿ ಇಂದ್ರಿಯಸುಖದ ಅನ್ವೇಷಣೆಯನ್ನು ನಿಲ್ಲಿಸಬೇಕೆಂಬುದರ ವಿವೇಚನೆಯೇ ಕಳೆದುಹೋಗಿಬಿಡುತ್ತದೆ. ಅನಂತರ ಏನಾಗುತ್ತದೆ? ಅಧರ್ಮವು ಧರ್ಮದ ಮೇಲೆ ಮೇಲುಗೈ ಸಾಧಿಸುತ್ತದೆ; ನೈತಿಕ ನಿಯಂತ್ರಣ ಸಂಪೂರ್ಣವಾಗಿ ಇಲ್ಲವಾಗುತ್ತದೆ. ಇಂದು ಭಾರತದಲ್ಲಿ ಜೀವನದ ಅನೇಕ ಕ್ಷೇತ್ರಗಳಲ್ಲಿ ನಾವು ಕಾಣುತ್ತಿರುವಂತೆ ಪ್ರತಿಯೊಬ್ಬನೂ(ಳೂ) ತನ್ನ ಇಷ್ಟಬಂದಂತೆ ಮಾಡಲು ಪ್ರಾರಂಭಿಸುತ್ತಾನೆ(ಳೆ). ಧರ್ಮವು ಜಯಿಸಲ್ಪಟ್ಟ ಅಭಾವ ಸ್ಥಿತಿಯು ಅಧರ್ಮ ಹೆಚ್ಚುವ ವಿಧಾಯಕ ಸ್ಥಿತಿ ಹುಟ್ಟುವುದಕ್ಕೆ ಕಾರಣವಾಗುತ್ತದೆ. ಕೆಟ್ಟ ಕಾರ್ಯಗಳು ಹೆಚ್ಚುತ್ತಾ ಹೆಚ್ಚುತ್ತಾ, ಒಳ್ಳೆಯ ಕಾರ್ಯಗಳು ಕಡಿಮೆಯಾಗುತ್ತಾ ಕಡಿಮೆಯಾಗುತ್ತಾ ಬರುತ್ತವೆ. ಚರಿತ್ರೆಯಲ್ಲಿ ನಾಗರಿಕತೆಗಳು ಹುಟ್ಟಿ ಬೆಳೆದು ಖಿಲವಾಗಿ ನಶಿಸಿಹೋಗುವುದನ್ನು ನಾವು ಓದುತ್ತೇವೆ. ಅತ್ಯುತ್ತಮ ಉದಾಹರಣೆ ಎಂದರೆ ಎಡ್ವರ್ಡ್ ಗಿಬನ್ ತನ್ನ “ರೋಮನ್ ಸಾಮ್ರಾಜ್ಯದ ಅವನತಿ ಮತ್ತು ನಾಶ” ಎಂಬ ಪುಸ್ತಕದಲ್ಲಿ ದಾಖಲಿಸಿರುವ ರೋಮನ್ ನಾಗರಿಕತೆಯದು. ಇಲ್ಲಿ ಶಂಕರಾಚಾರ್ಯರು ಏನು ಹೇಳುತ್ತಾರೆಂಬುದನ್ನು ಅದು ಚೆನ್ನಾಗಿ ವಿಶದಗೊಳಿಸುತ್ತದೆ. ಶತಮಾನದಿಂದ ಶತಮಾನಕ್ಕೆ ರೋಮನ್ ಚಕ್ರಾಧಿಪತ್ಯದಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳು ಒಂದೇ ಸಮನಾಗಿ ಖಿಲವಾಗುವುದನ್ನು, ಅನಂತರ ಕೊನೆಗೆ ಅದು ಬರ್ಬರರ ದಾಳಿಗೆ ತುತ್ತಾಗಿ ಹೇಗೆ ನಾಶ ವಾಯಿತೆಂಬುದನ್ನು ಗಿಬನ್ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾನೆ.
ಇಂಡಿಯಾ ಸಹ, ತನ್ನ ಐದು ಸಾವಿರ ವರ್ಷಗಳ ಇತಿಹಾಸದಲ್ಲಿ, ಇದೇ ರೀತಿಯ ವಿನಾಶವನ್ನು ಅನುಭವಿಸಿತು; ಆದರೆ ಕೊನೆಯ ಹಂತವಾದ ಸಾವನ್ನು ಮಾತ್ರ ಪಡೆಯಲಿಲ್ಲ; ಬದಲಿಗೆ ಪ್ರತಿಯೊಂದು ವಿನಾಶದ ನಂತರವೂ ಒಂದೊಂದು ಶಕ್ತಿಶಾಲಿ ಪುನರುತ್ಥಾನವನ್ನು ಕಂಡಿತು. ಇದನ್ನೇ ಶಂಕರಾಚಾರ್ಯರು ತಮ್ಮ ಮುನ್ನುಡಿಯಲ್ಲಿನ ಮುಂದಿನ ವಾಕ್ಯದಲ್ಲಿ ಹೇಳುತ್ತಾರೆ:
ಜಗತಃ ಸ್ಥಿತಿಂ ಪರಿಪಿಪಾಲಯಿಷುಃ ಸ ಆದಿಕರ್ತಾ ನಾರಾಯಣಾಖ್ಯೋ ವಿಷ್ಣುಃ, ಭೌಮಸ್ಯ ಬ್ರಹ್ಮಣೋ ಬ್ರಾಹ್ಮಣತ್ವಸ್ಯ ರಕ್ಷಣಾರ್ಥಂ ದೇವಕ್ಯಾಂ ವಸುದೇವಾತ್ ಅಂಶೇನ ಕೃಷ್ಣಃ ಕಿಲ ಸಂಬಭೂವ | ಬ್ರಾಹ್ಮಣತ್ವಸ್ಯ ಹಿ ರಕ್ಷಣೇನ ರಕ್ಷಿತಃ ಸ್ಯಾತ್ ವೈದಿಕೋ ಧರ್ಮಃ | ತದಧೀನತ್ವಾತ್ ವರ್ಣಾಶ್ರಮಭೇದಾನಾಮ್ ||
‘ಆದ್ದರಿಂದ, ಜಗತ್ತಿನ ಹಿತವನ್ನು ಕಾಪಾಡಬೇಕೆಂಬ ದೃಷ್ಟಿಯಿಂದ ನಾರಾಯಣನೆಂಬ ಹೆಸರಿನ ಆದಿಕರ್ತನಾದ ಆ ವಿಷ್ಣುವು, ಭೂಮಿಯಲ್ಲಿನ ಬ್ರಾಹ್ಮಣ್ಯವೆಂಬ ಆಧ್ಯಾತ್ಮಿಕತೆಯ ರಕ್ಷಣೆಗಾಗಿ ವಸುದೇವನೆಂಬ ತಂದೆಯಿಂದ ದೇವಕಿಯೆಂಬ ತಾಯಿಯಲ್ಲಿ ಕೃಷ್ಣನಾಗಿ ಹುಟ್ಟಿದನು.’
`ಬ್ರಾಹ್ಮಣ್ಯವನ್ನು ಕಾಪಾಡಿದರೇ ವೈದಿಕಧರ್ಮವನ್ನು ಕಾಪಾಡಿದಂತಾಗುವುದು; ಏಕೆಂದರೆ ವರ್ಣಾಶ್ರಮಭೇದಗಳು ಅದರ ಅಧೀನವಾಗಿವೆ.’
ವೇದಾಂತವು ಮಣ್ಣಿನಿಂದ ಕುಂಬಾರನು ಮಡಕೆಗಳನ್ನು ಮಾಡುವ ಹಾಗೆ ಪ್ರಪಂಚದ ಸೃಷ್ಟಿಯ ಬಗ್ಗೆ ಹೇಳುವುದಿಲ್ಲ; ಬದಲಿಗೆ ಪ್ರಜ್ವಲವಾಗಿ ಉರಿಯುತ್ತಿರುವ ಬೆಂಕಿಯಿಂದ ಕಿಡಿಗಳು ಹಾರುವಂತೆ, ಜೇಡನಿಂದ ಬಲೆಯು ಹೊರಹೊಮ್ಮುವಂತೆ, ಪ್ರಪಂಚವು ಬ್ರಹ್ಮವಸ್ತುವಿನಿಂದ ಹೊರಹೊಮ್ಮುವುದರ ಬಗ್ಗೆ ವಿವರಿಸುತ್ತದೆ. ಏಕದಿಂದ ಹೊರಹೊಮ್ಮಿದ ಅನೇಕವು ಕೊನೆಗೆ ಏಕದಲ್ಲಿಯೇ ಒಂದಾಗಿ ಸೇರಿಹೋಗುವುದು.
ಬ್ರಾಹ್ಮಣತ್ವ— ಮಾನವ ವಿಕಾಸದ ಗುರಿ
ಈ ಸಾಮಾಜಿಕ ಪುನರುತ್ಥಾನದ ಕೆಲಸವನ್ನು ಯಾವ ರಾಜಕಾರಣಿಯಾಗಲಿ ಬುದ್ಧಿಜೀವಿಯಾಗಲಿ ಪುರೋಹಿತನಾಗಲಿ ಮಾಡಲಾರ; ದೈವಸಾಕ್ಷಾತ್ಕಾರವನ್ನು ಸಾಧಿಸಿಕೊಂಡಿರುವ ಸಮಾಜದಲ್ಲಿ ಒಬ್ಬ ವ್ಯಕ್ತಿ ಮಾತ್ರ ಅದನ್ನು ಮಾಡಲು ಸಾಧ್ಯ. ಭಾರತದ ದೀರ್ಘ ಇತಿಹಾಸದಲ್ಲಿ ಅಂತಹ ದೇವಮಾನವರು ಪುನಃ ಪುನಃ ಹುಟ್ಟಿಬಂದಿದ್ದಾರೆ; ಇಲ್ಲಿ ನಾವು ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಕೃಷ್ಣನ ಜನ್ಮವೆಂಬ ಅಂತಹ ಒಂದು ಸಂಭವವನ್ನು ಕಾಣುತ್ತಿದ್ದೇವೆ. ಇಂಡಿಯಾದಲ್ಲಿ ಬಹಳ ಮುಖ್ಯವಾದ ಕಲ್ಪನೆಯೊಂದಿದೆ: ಮಾನವ ವಿಕಾಸ ಎಂಬುದು ಇದೆ; ತಮಸ್ಸಿನಿಂದ ರಜಸ್ಸಿಗೆ, ರಜಸ್ಸಿನಿಂದ ಸತ್ತ್ವಕ್ಕೆ ಮಾನವನ ಅಭಿವೃದ್ಧಿಯಾಗುವುದೇ ಆ ವಿಕಾಸ. ಸಂಪೂರ್ಣ ಸತ್ತ್ವದಿಂದ ಕೂಡಿದವನು ಒಬ್ಬ ವಿಶೇಷ ಮಹತ್ತ್ವವುಳ್ಳ ವ್ಯಕ್ತಿ; ಅವನು ತನ್ನೊಳಗಿನ ದೈವತ್ವದ ಕಿಡಿಯನ್ನು ಪ್ರಕಾಶಿಸುವಷ್ಟು ಸಂಪೂರ್ಣವಾಗಿ ವಿಕಾಸ ಹೊಂದಿದವನು. ಮಾನವ ವಿಕಾಸದ ಗುರಿಯೇ ಇದು ಎಂಬುದನ್ನು ನಾವು ಭಾರತೀಯರು ಕಂಡುಕೊಂಡೆವು.
ಇಂತಹ ಗುರಿ ಸಾಧಿಸಿದವರನ್ನು ಸಮಾಜದಲ್ಲಿ ಹೆಚ್ಚು ಹೆಚ್ಚಾಗಿಸುವುದು ಹೇಗೆ? ಪ್ರತಿಯೊಬ್ಬನ ಮುಂದೆಯೂ ಈ ಗುರಿಯನ್ನು ಇಡಬೇಕು; ಅವನು ಅಥವಾ ಅವಳು ಅದನ್ನು ಸಾಧಿಸಲು ಯತ್ನಿಸಬೇಕು; ಕನಿಷ್ಠ ಪಕ್ಷಕ್ಕೆ ತನ್ನ ಜೀವನವನ್ನು ಆ ದಿಕ್ಕಿಗೆ ತಿರುಗಿಸಬೇಕು. ನಿಮ್ಮದೇ ಆದ ವೇಗದಲ್ಲಿ ಸಾಗಿ; ಆದರೆ ಆ ಗುರಿಯ ದಿಕ್ಕಿಗೇ ಸಾಗಿ ಎನ್ನುತ್ತದೆ ವೇದಾಂತ. ಆಧುನಿಕ ಸಾಮಾಜಿಕ ಚಿಂತನೆ ಎಂದು ನೀವು ಏನನ್ನು ಕರೆಯುತ್ತೀರೋ ಅದು ಕೇವಲ ಸಾಮಾಜಿಕ ಸಂಖ್ಯಾಸಂಗ್ರಹಣ; ಅದರಿಂದ ಪ್ರಯೋಜನವಿಲ್ಲ. ಆದರೆ, ವೇದಾಂತ ಸೂಚಿಸುವಂತೆ ಸಮಾಜಕ್ಕೊಂದು ದಿಕ್ಕು ತೋರಿಸುವುದು ಅವಶ್ಯಕ; ಸಮಾಜವಿಜ್ಞಾನ ಅದನ್ನು ಮಾಡಬೇಕು; ಎಲ್ಲರೂ ಮಾನವ ವಿಕಾಸದ ಆ ದಿಕ್ಕನ್ನು ಹಿಡಿದು ಸಾಗಬೇಕು. ಹಿಂಸೆ, ದ್ವೇಷಗಳಿಲ್ಲದ, ಪ್ರೇಮಿಯೂ ದಯಾವಂತನೂ ಆದ ಸಾತ್ತ್ವಿಕ ಮನುಷ್ಯನಾಗುವುದು ಎಂಬುದು ಇಂಥ ಒಂದು ದಿಕ್ಕು, ಗುರಿ, ಸಮಾಜದಲ್ಲಿ ಇಂಥ ಸಾತ್ತ್ವಿಕ ಜನರಿದ್ದರೆ, ಕಾವಲುಭಟರ ಅಗತ್ಯವೇ ಇರಲಾರದು; ರಾಜ್ಯಾಂಗವೂ ಬೇಕಿರುವುದಿಲ್ಲ, ಕಾನೂನು ಕಟ್ಟಳೆಗಳೂ ಅಗತ್ಯವಿರುವುದಿಲ್ಲ; ಏಕೆಂದರೆ ತಮ್ಮನ್ನು ತಾವೇ ಶಿಸ್ತಿಗೊಳಪಡಿಸಿಕೊಂಡಿರುವ ಹಾಗೂ ಇತರರೆಲ್ಲರೊಡನೆ ತಮ್ಮ ಆಧ್ಯಾತ್ಮಿಕ ಐಕ್ಯವನ್ನು ಸಾಕ್ಷಾತ್ಕರಿಸಿಕೊಂಡಿರುವ ಜನರು ಆ ಸಮಾಜದಲ್ಲಿರುತ್ತಾರೆ. ಭಾರತದ ಪ್ರಕಾರ ಯಾವ ಸಮಾಜದಲ್ಲಿ ಸಾತ್ವಿಕರೂ ಅಧ್ಯಾತ್ಮವಿಕಾಸ ಹೊಂದಿದವರೂ ಆತ್ಮನ ಪ್ರಕಾಶವನ್ನು ಸಾಧಿಸಿಕೊಂಡವರೂ ಆದ ಇಂಥ ಜನರು ಅಧಿಕ ಸಂಖ್ಯೆಯಲ್ಲಿರುತ್ತಾರೋ, ಅದೇ ಅತ್ಯಂತ ಮುಂದುವರೆದ ಸಮಾಜ.
ಮೂಲ ವೇದಾಂತದ ಅರ್ಥದಲ್ಲಿ ಇಂಥ ಸಾಧನೆ ಮಾಡಿದ ಮನುಷ್ಯನನ್ನು ಬ್ರಾಹ್ಮಣ ಎಂದು ಕರೆಯುತ್ತಾರೆಯೇ ಹೊರತು, ಯಾವುದೋ ಜಾತೀಯತೆಯ ಕೇಡಿನ ಅರ್ಥದಲ್ಲಿ ಅಲ್ಲ. ಬ್ರಾಹ್ಮಣ ಎಂಬ ಶಬ್ದದ ಅತ್ಯಂತ ಪ್ರಾಚೀನ ನಿರೂಪಣೆ ನಾಲ್ಕು ಸಾವಿರ ವರ್ಷ ಹಿಂದಿನ ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುತ್ತದೆ (೩. ೮. ೧೦):
ಯೋ ವಾ ಏತದಕ್ಷರಂ ಗಾರ್ಗಿ ಅವಿದಿತ್ವಾ ಅಸ್ಮಾತ್ ಲೋಕಾತ್ ಪ್ರೈತಿ, ಸ ಕೃಪಣಃ; ಅಥ ಯ ಏತದಕ್ಷರಂ ಗಾರ್ಗಿ ವಿದಿತ್ವಾ ಅಸ್ಮಾತ್ ಲೋಕಾತ್ ಪ್ರೈತಿ, ಸ ಬ್ರಾಹ್ಮಣಃ –
“ಓ ಗಾರ್ಗಿ, ಯಾವನು ಅಕ್ಷರವಾದ (ನಾಶವಿಲ್ಲದ) ಇದನ್ನು (ಸತ್ಯವನ್ನು) ತಿಳಿದುಕೊಳ್ಳದೆ ಈ ಪ್ರಪಂಚದಿಂದ ಹೊರಟುಹೋಗುತ್ತಾನೆಯೋ ಅವನು ಕೃಪಣ; ಆದರೆ, ಓ ಗಾರ್ಗಿ, ಯಾವನು ಈ ಅಕ್ಷರವನ್ನು ಅರಿತ ಮೇಲೆ ಹೊರಟುಹೋಗುತ್ತಾನೆಯೋ ಅವನು ಬ್ರಾಹ್ಮಣ.'
ಉಪನಿಷತ್ತಿನ ಈ ವಾಕ್ಯದ ಮೇಲೆ ಭಾಷ್ಯವನ್ನು ಬರೆಯುತ್ತ ಶಂಕರಾಚಾರ್ಯರು ಕೃಪಣ ಎಂಬ ಮಾತನ್ನು 'ಹಣ ಕೊಟ್ಟು ಕೊಂಡುಕೊಂಡ ಜೀತದಾಳಿನ ಹಾಗೆ ದುಃಖಿಯಾದ' ಎಂದು ನಿರೂಪಿಸುತ್ತಾರೆ.
ಬ್ರಾಹ್ಮಣತ್ವದ ಆದರ್ಶವನ್ನು ಕುರಿತು ಭಗವಾನ್ ಬುದ್ಧ
ಕ್ರೈಸ್ತನಿಗಿಂತ ಏಳು ಶತಮಾನಗಳ ಹಿಂದೆ, ಇಂಡಿಯಾದಲ್ಲಿ ಭಗವಾನ್ ಬುದ್ಧನು ಅವತರಿಸಿ ಪ್ರೇಮ ಕಾರುಣ್ಯಗಳ ತನ್ನ ಸಂದೇಶವನ್ನು ಪ್ರಚುರಪಡಿಸಿದನಲ್ಲದೆ ಯಾವುದೇ ಜಾತಿ ಮತಗಳ ಭೇದವಿಲ್ಲದಂತೆ ಯಾರು ಬೇಕಾದರೂ ಸೇರಬಹುದಾಗಿದ್ದ ಸಂನ್ಯಾಸಿಗಳ ಸಂಘವೊಂದನ್ನು ಸ್ಥಾಪಿಸಿದನು. ಆದರೆ ಅವನು ಬ್ರಾಹ್ಮಣತ್ವದ ಆದರ್ಶವನ್ನು ತುಂಬಾ ಗೌರವದಿಂದ ಕಂಡು ಮೆಚ್ಚಿಕೊಂಡಿದ್ದ. ಬೌದ್ಧ ಶಾಸ್ತ್ರಗಳಲ್ಲೊಂದಾದ ಸುತ್ತಪಿಟಕದಲ್ಲಿರುವ ಖುದ್ದಕ ನಿಕಾಯದ ಒಂದು ಭಾಗವಾದ ಧಮ್ಮಪದದಲ್ಲಿ ಬ್ರಾಹ್ಮಣತ್ವದ ಆದರ್ಶವನ್ನು ಮುಕ್ತವಾಗಿ ಪ್ರಶಂಸಿಸುವ ಬ್ರಾಹ್ಮಣ ವಗ್ಗ ಎಂಬ ಒಂದು ಇಡೀ ಅಧ್ಯಾಯವೇ - ಕೊನೆಯ ಅಧ್ಯಾಯ, ೨೬ನೆಯದು – ಇದೆ. ನಾನು ಆ ಅಧ್ಯಾಯದಿಂದ ಆರಿಸಿದ ಕೆಲವು ಶ್ಲೋಕಗಳನ್ನು ಕೊಡುತ್ತೇನೆ (ಧಮ್ಮಪದ, ಎಸ್. ರಾಧಾಕೃಷ್ಣನ್‌ರವರ ಆಂಗ್ಲಾನುವಾದ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ಹತ್ತನೆಯ ಮುದ್ರಣ, ಅಧ್ಯಾಯ ೨೬): -
ಯಸ್ಸ ಪಾರಂ ಅಪಾರಂ ವಾ ಪಾರಾಪಾರಂ ನ ವಿಜ್ಜತಿ |
ವಿತದ್ದರಂ ವಿಸನ್ನುತ್ತಂ ತಂ ಅಹಂ ಬ್ರೂಮಿ ಬ್ರಾಹ್ಮಣಮ್ || ೩ ||
‘ಯಾವನು ಸಂಕೋಲೆಗಳಿಂದಲೂ ಭಯದಿಂದಲೂ ಮುಕ್ತನಾಗಿರುವನೋ, ಯಾವನಿಗೆ ಈ ದಡವಾಗಲಿ ಆ ದಡವಾಗಲಿ ಅಥವಾ ಎರಡೂ ಆಗಲಿ ಇಲ್ಲವೋ ಅವನನ್ನು ನಾನು ಬ್ರಾಹ್ಮಣ ಎಂದು ಕರೆಯುತ್ತೇನೆ.’
ಝಾಯಿಂ ವಿರಜಂ ಆಸೀನಂ ಕತಕಿಚ್ಚಂ ಅನಾಸವಂ |
ಉತ್ತಮತ್ತಂ ಅನುಪ್ಪತ್ತಂ ತಂ ಅಹಂ ಬ್ರೂಮಿ ಬ್ರಾಹ್ಮಣಮ್ || ೪ ||
'ಯಾವನು ಧ್ಯಾನಸ್ಥ ಸ್ವಭಾವದವನಾಗಿರುವನೋ, ಯಾವನು ಆಸೆಗಳಿಂದ ಮುಕ್ತನೂ ಸ್ಥಿತನೂ ಕಲ್ಮಷರಹಿತನೂ ಕೃತಕೃತ್ಯನೂ ಉನ್ನತ ಸಂತನೂ ಆಗಿರುವನೋ, ಅವನನ್ನು ನಾನು ಬ್ರಾಹ್ಮಣ ಎಂದು ಕರೆಯುತ್ತೇನೆ.'
ಬಾಹಿತಪಾಪೋ ಹಿ ಬ್ರಾಹ್ಮಣೋ ಸಮಚರಿಯಾ ಸಮಣೋ ತಿ ವುಚ್ಚತಿ ।
ಪಬ್ಬಾಜಯಂ ಆತ್ತನೋ ಮಲಂ ತಸ್ಮಾ ಪಬ್ಬಜಿತೋ ತಿ ವುಚ್ಚತಿ || ೬ ||
'ಕೇಡನ್ನು ಬದಿಗಿರಿಸಿರುವುದರಿಂದ ಅವನನ್ನು ಬ್ರಾಹ್ಮಣನೆಂದು ಕರೆಯುತ್ತಾರೆ; ಪ್ರಶಾಂತತೆಯಲ್ಲಿ ವಾಸಿಸುವುದರಿಂದ ಶ್ರಮಣನೆಂದು ಕರೆಯುತ್ತಾರೆ; ಕಲ್ಮಷಗಳನ್ನು ಬದಿಗೆ ಇರಿಸಿರುವುದರಿಂದ ಸರ್ವಜಿತನೆನ್ನುತ್ತಾರೆ.'
ಯಸ್ಸ ಕಾಯೇನ ವಾಚಾಯ ಮನಸಾ ನತ್ತಿ ದುಖತಂ ।
ಸಂಯುತಂ ತಿಹಿ ಥಾನೇ ಹಿ ತಂ ಅಹಂ ಬೂಮಿ ಬ್ರಾಹ್ಮಣಮ್ || ೯ ||
'ಯಾವನು ದೇಹದಿಂದಲೂ, ಮಾತಿನಿಂದಲೂ ಮನಸ್ಸಿನಿಂದಲೂ ಹಿಂಸಿಸುವುದಿಲ್ಲವೋ, ಯಾರು ಈ ಮೂರರಲ್ಲಿ ಸಂಯಮವುಳ್ಳವನೋ ಅವನನ್ನು ನಾನು ಬ್ರಾಹ್ಮಣ ಎಂದು ಕರೆಯುತ್ತೇನೆ.'
ನ ಜಾತಾ ಹಿ ನ ಗೋತ್ತೇನ ನ ಜಚ್ಚಾ ಹೋತಿ ಬ್ರಾಹ್ಮಣೋ |
ಯಂ ಹಿ ಸಚ್ಚಂ ಚ ಧಮ್ಮೋ ಚ ಸೋ ಸುಖಿ ಸೋ ಚ ಬ್ರಾಹ್ಮಣೋ || ೧೧ ||
'ಜಟೆಯಿಂದಾಗಲಿ ಹುಟ್ಟಿನಿಂದಾಗಲಿ, ಜಾತಿಯಿಂದಾಗಲಿ ಒಬ್ಬನು ಬ್ರಾಹ್ಮಣನಾಗುವುದಿಲ್ಲ; ಯಾವನಲ್ಲಿ ಸತ್ಯವಿದೆಯೋ, ಧರ್ಮವಿದೆಯೋ ಅವನು ಬ್ರಾಹ್ಮಣ.’
ಗಂಭೀರಪನ್ನಾಂ ಮೇಧಾವಿಂ ಮಗ್ಗಾ ಮಗ್ಗಸ್ಸ ಕೋವಿದಂ |
ಉತ್ತಮತ್ಥಂ ಅನುಪ್ಪತ್ಥಂ ತಂ ಅಹಂ ಬ್ರೂಮಿ ಬ್ರಾಹ್ಮಣಮ್ || ೨೧ ||
'ಯಾವನು ಆಳವಾದ ವಿವೇಚನೆಯುಳ್ಳವನೋ, ಯಾವನು ಜ್ಞಾನಿಯೋ, ಯಾವನು ಸರಿಯಾದ ಮತ್ತು ತಪ್ಪಾದ ಮಾರ್ಗಗಳನ್ನು ತಿಳಿದಿರುವನೋ ಮತ್ತು ಯಾವನು ಔನ್ನತ್ಯವನ್ನು ಮುಟ್ಟಿರುವನೋ ಅವನನ್ನು ನಾನು ಬ್ರಾಹ್ಮಣ ಎಂದು ಕರೆಯುತ್ತೇನೆ.'
ಈಗ ಈ ನವೀನ ಯುಗದಲ್ಲಿ, ಜಾತೀಯತೆ ಅಸ್ಪೃಶ್ಯತೆಗಳನ್ನೆಲ್ಲಾ ತೀವ್ರವಾಗಿ ಖಂಡಿಸಿರುವ ಸ್ವಾಮಿ ವಿವೇಕಾನಂದರು ಮಾನವ ವಿಕಾಸದ ಈ ಬ್ರಾಹ್ಮಣತ್ವದ ಆದರ್ಶವನ್ನು ಎತ್ತಿ ಹಿಡಿದಿದ್ದಾರೆ. ಭಾರತದ ಭವಿಷ್ಯ ಎಂಬ ಉಪನ್ಯಾಸದಲ್ಲಿ ಅವರು ಹೀಗೆನ್ನುತ್ತಾರೆ (ಕೃತಿಶ್ರೇಣಿ, ಸಂಪುಟ ೩, ಪುಟ ೧೬೬):
`ತಮ್ಮ ಗೀತಾಭಾಷ್ಯದ ಪ್ರಾರಂಭದಲ್ಲಿ ಶಂಕರಾಚಾರ್ಯರು, ಕೃಷ್ಣನು ಬ್ರಾಹ್ಮಣತ್ವದ ರಕ್ಷಣೆಗಾಗಿ ಅವತರಿಸಿದ ಕಾರಣವನ್ನು ಅದ್ಭುತವಾಗಿ ಸಮರ್ಥಿಸುತ್ತ ಹೇಳಿರುವ ಹಾಗೆ, ಭಾರತದಲ್ಲಿ ಬ್ರಾಹ್ಮಣತ್ವವೇ ಮಾನವನ ಆದರ್ಶ. ಅದೇ ಮಹತ್ತ್ವದ ಕೊನೆ. ದೈವೀ ಪುರುಷನಾದ ಈ ಬ್ರಾಹ್ಮಣ, ಬ್ರಹ್ಮನನ್ನು ತಿಳಿದವ, ಆದರ್ಶ ವ್ಯಕ್ತಿ, ಪರಿಪೂರ್ಣ ಮನುಷ್ಯ, ಇವನು ಇರಬೇಕು, ಹೋಗಬಾರದು.'
ಜಾತೀಯತೆಯ ಕೇಡುಗಳನ್ನು ಕುರಿತು ಹೇಳುತ್ತ, ಅದರಲ್ಲೂ ಮೇಲ್ಜಾತಿಯವರು ಕೇಳುವ ವಿಶೇಷ ಹಕ್ಕುಗಳನ್ನು ಕುರಿತಾಗಿ, ಹೀಗೆನ್ನುತ್ತಾರೆ (ಅದೇ, ಪುಟ ೧೬೯):
'ಈ ವಿಶೇಷ ಹಕ್ಕುಬಾಧ್ಯತೆಗಳ ದಿನಗಳು ಕಳೆದುಹೋದವು. ಪ್ರತಿಯೊಂದು ಉಚ್ಚವರ್ಗದ ಕರ್ತವ್ಯ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುವುದು, ಎಷ್ಟು (ಜಾಗ್ರತೆ) ಬೇಗನೆ ಹಾಗೆ ಮಾಡುತ್ತದೆಯೋ ಅಷ್ಟೂ ಒಳ್ಳೆಯದು. ತಡಮಾಡಿದಷ್ಟೂ ಅದು ದೊಡ್ಡ ವ್ರಣವಾಗಿ ಇನ್ನೂ ಕೆಟ್ಟ ಸಾವನ್ನು ಸಾಯಬೇಕಾಗುತ್ತದೆ.'
ಇತ್ತೀಚಿನ ಶತಮಾನಗಳಲ್ಲಿ, ನಾವು ಆ ಮಹತ್ತ್ವದ ಬ್ರಾಹ್ಮಣ ಎಂಬ ಶಬ್ದವನ್ನು ಹಾಳುಮಾಡಿದ್ದೇವೆ; ಇಂದು ಅದರ ಅರ್ಥ ಇತರ ಜಾತಿಯವರನ್ನು ಕೀಳಾಗಿ ಕಾಣುವವನು, ಸತ್ತ್ವಗುಣವೇ ಇಲ್ಲದೆ ಬರೀ ರಜಸ್ಸು ತಮಸ್ಸುಗಳಿಂದಲೇ ತುಂಬಿರುವವನು, ತನ್ನ ಜಾತಿಯ ಹೆಚ್ಚುಗಾರಿಕೆಯ ಅಹಂಕಾರವಿರುವವನು ಎಂದೆಲ್ಲ ಆಗಿಹೋಗಿದೆ. ಕಳೆದ ಸುಮಾರು ಸಾವಿರ ವರ್ಷಗಳಿಂದ ಬ್ರಾಹ್ಮಣ ಜಾತಿಯವರು, ವಿಶೇಷ ಹಕ್ಕುಬಾಧ್ಯತೆಗಳಿಲ್ಲದ ಜನಸಾಮಾನ್ಯರ ಸಮುದಾಯದಲ್ಲಿ ತಮ್ಮ ಜಾತಿಗೆ ಆಢ್ಯತೆ ಸಲ್ಲಬೇಕೆಂದು ಆಗ್ರಹಿಸುವ ಮೂಲಕ ಈ ಮಹತ್ತ್ವದ ಶಬ್ದವನ್ನು ಹಾಳುಗೆಡವುತ್ತಿದ್ದಾರೆ. ಆಧುನಿಕ ಭಾರತದ ಮನಸ್ಸಾಕ್ಷಿಯು ಇದರ ವಿರುದ್ಧ ಯುದ್ಧ ಸಾರಿ, ಭಾರತೀಯ ಸಮಾಜದಿಂದ ಈ ಕೇಡನ್ನು ನಿವಾರಿಸಲು ಶಕ್ತವಾದ ಕ್ರಮವನ್ನು ತೆಗೆದುಕೊಳ್ಳುತ್ತಿದೆ.
ಉಪನಿಷತ್ತುಗಳ ಕಾಲದಿಂದಲೂ, ಬುದ್ಧ ಶಂಕರಾಚಾರ್ಯ ಎಲ್ಲರೂ ಬೋಧಿಸಿರುವಂತೆ, ಈ ಶಬ್ದದ ಅರ್ಥ ಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಂಡವನು, ಆ ಮೂಲಕ ಸಂಪೂರ್ಣವಾಗಿ ಭೂತದಯೆ ಪ್ರೇಮಗಳನ್ನುಳ್ಳವನು ಎಂದು. ಶಂಕರರ ಈ ಮುನ್ನುಡಿಯಲ್ಲಿನ ಬ್ರಾಹ್ಮಣತ್ವ ಎಂಬ ಪದವು ಭಾವನಾಮ; ಅದರ ಅರ್ಥ ಬ್ರಾಹ್ಮಣತನ, ಅದು ಸೂಚಿಸುವುದು ಮಾನವರ ಒಂದು ರೀತಿಯನ್ನು. ಬ್ರಾಹ್ಮಣತ್ವ ಎಂದರೆ ಯಾವುದೋ ಒಂದು ವ್ಯಕ್ತಿಯೋ ಗುಂಪೋ ಅಲ್ಲ, ಆದರೆ ಅದು ಮಾನವನ ವಿಕಾಸದ ಅತ್ಯುನ್ನತ ಮಟ್ಟವನ್ನು ಸೂಚಿಸುತ್ತದೆ; ಅದು ಯಾವುದೋ ದೇಶಕ್ಕೋ ಜಾತಿಗೋ ಗುಂಪಿಗೋ ಸೀಮಿತವಾದದ್ದಲ್ಲ. ಬ್ರಾಹ್ಮಣ ರೀತಿಗಳು ರಷ್ಯಾ, ಅಮೆರಿಕಾ, ಚೈನಾ, ಎಲ್ಲೆಲ್ಲಿಯೂ ಇರಬಹುದು. ನಮ್ಮಲ್ಲಿ ದಿವ್ಯ ಅವತಾರವು ಪ್ರಪಂಚದಲ್ಲಿ ಹುಟ್ಟುವ ಅದ್ಭುತವಾದ ಕಲ್ಪನೆಯಿದೆ; ಅವತಾರನು ಸಮಾಜ ಸುಧಾರಣೆಯನ್ನೇನೂ ಪ್ರಾರಂಭಿಸುವುದಿಲ್ಲ - ಏಕೆಂದರೆ ಅದು ರೋಗಕ್ಕೆ ಮದ್ದು ಕೊಡದೆ ರೋಗಲಕ್ಷಣಗಳನ್ನು ಮಾತ್ರ ಪರಿಹರಿಸುವ ಹಾಗೆ, ಸಾಮಾಜಿಕ ಸಮಸ್ಯೆಗಳ ಮೇಲುಮೇಲಿನ ಉಪಚಾರವಾಗುತ್ತದೆ. ಅವತಾರನು ಹೊಸದೊಂದು ಮೌಲ್ಯವ್ಯವಸ್ಥೆಯನ್ನು ಜಾರಿಗೆ ತರುತ್ತಾನೆ; ಅದು ನಿಧಾನವಾಗಿ ಜನಸಾಮಾನ್ಯರ ಹೃದಯವನ್ನೂ ಮನಸ್ಸನ್ನೂ ಪ್ರಚೋದಿಸುತ್ತದೆ; ಆ ಮೂಲಕ ಮಾನವೀಯತೆ, ನೈತಿಕತೆಗಳು ಎಚ್ಚೆತ್ತು, ಅವಶ್ಯಕವಾದ ಎಲ್ಲ ಸಾಮಾಜಿಕ ಸುಧಾರಣೆಗಳೂ ವಿಧಿವತ್ತಾಗಿ ನಡೆಯುತ್ತವೆ. ಅವತಾರನು ಎರಡು ಸಂಗತಿಗಳನ್ನು ಸ್ಥಾಪಿಸುತ್ತಾನೆ: ಒಂದು, ಸಾರ್ವತ್ರಿಕವಾದ ಸನಾತನ ಧರ್ಮದ ಮಹಿಮೆ; ಇನ್ನೊಂದು, ಮಾನವ ವಿಕಾಸದ ಗುರಿಯಾದ ಬ್ರಾಹ್ಮಣತ್ವವನ್ನು ಪಡೆದ, ಮೈತಳೆದ ನೈತಿಕ ಆಧ್ಯಾತ್ಮಿಕ ಮೌಲ್ಯಗಳಂತೆ ಇರುವ ಆದರ್ಶ ಮಾನವ ರೀತಿಯ ರಕ್ಷಣೆ.
ಆ ನಿಟ್ಟಿನಲ್ಲಿ ಮಾನವರೆಲ್ಲರೂ ಬೆಳೆಯಬೇಕು. ಶ್ರೀಕೃಷ್ಣನ ಅವತಾರವು ಸಂಬಂಧಿಸಿರುವುದು ಭೌಮಸ್ಯ ಬ್ರಹ್ಮಣೋ ಬ್ರಾಹ್ಮಣತ್ವಸ್ಯ ರಕ್ಷಣಾರ್ಥಂ - ಭೌಮಸ್ಯ ಬ್ರಹ್ಮಣಃ – ಮಹತ್ತಾದ ಸಾರ್ವತ್ರಿಕ ಕಲ್ಪನೆಗಳು, ಪ್ರಚಂಡ ತತ್ತ್ವ, ಆಧ್ಯಾತ್ಮಿಕತೆ ತುಂಬಿರುವ ವೇದಗಳೇ ಬ್ರಹ್ಮ. ಈ ತತ್ತ್ವವನ್ನು ಪ್ರಶ್ನಿಸುವುದಕ್ಕೆ ಯಾರೂ ಅಂಜಬೇಕಾಗಿಲ್ಲ. ಪ್ರಾಯೋಗಿಕವಾದ, ತರ್ಕಸಮ್ಮತವಾದ ಅದು, ಪ್ರಶ್ನಿಸುವುದನ್ನು ಸ್ವಾಗತಿಸುತ್ತದೆ. ಎರಡನೆಯದಾಗಿ, ಅದು ಸಾರ್ವತ್ರಿಕವಾದದ್ದು, ಇಡಿಯ ಮಾನವಜನಾಂಗವನ್ನೇ ಕುರಿತದ್ದು; ಜಾತಿ ಕುಲ ದೇಶ ಗುಂಪು ಎಂದು ಪ್ರಭೇದಿತವಾದದ್ದಲ್ಲ. ವೈದಿಕ ಸಂಪ್ರದಾಯದ ಹಿರಿಮೆಯೇ ಅದು. ಸರಿ, ಅವರು ಭೌಮಸ್ಯ ಬ್ರಹ್ಮಣೋ ಮತ್ತು ಬ್ರಾಹ್ಮಣತ್ವಸ್ಯ ರಕ್ಷಣಾರ್ಥಮ್ ಎನ್ನುತ್ತಾರೆ. ವೇದಗಳು, ಶ್ರುತಿ ಅಥವಾ ಉಪನಿಷತ್ತುಗಳು ದೇವರ ಮತ್ತು ಮಾನವೀಯತೆಯ ಬಗ್ಗೆ ವಿಶ್ವಾತ್ಮಕವಾದ ತತ್ತ್ವಗಳನ್ನು ಮಾತ್ರ ಹೊಂದಿವೆ. ಶ್ರೀಕೃಷ್ಣನು ಬಂದದ್ದು ಅದನ್ನು ರಕ್ಷಿಸುವುದಕ್ಕೆ, ಆ ಶ್ರುತಿಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿರುವ ಬ್ರಾಹ್ಮಣರೀತಿಯ ಮನುಷ್ಯರನ್ನು ರಕ್ಷಿಸುವುದಕ್ಕೆ. ನಮ್ಮ ಸಾಹಿತ್ಯದಲ್ಲಿ, ನಮ್ಮ ಸಂಪ್ರದಾಯದಲ್ಲಿ ಈ ಎರಡನ್ನು ಯಾವಾಗಲೂ ಒತ್ತುಕೊಟ್ಟು ಹೇಳಲಾಗಿದೆ. ಇದನ್ನು ಸಾಧಿಸುವುದಕ್ಕಾಗಿ, ಯಾರು ಈ ದ್ವಿವಿಧ ಧರ್ಮವನ್ನು ಜಾರಿಗೆ ತಂದನೋ, ಪ್ರವೃತ್ತಿ ಮತ್ತು ನಿವೃತ್ತಿಗಳ ಚಾಲಕರಾದ ಪ್ರಜಾಪತಿಗಳನ್ನೂ ಕುಮಾರರನ್ನೂ ಲೋಕವನ್ನು ಸ್ಥಿರಗೊಳಿಸುವುದಕ್ಕಾಗಿ ಸೃಷ್ಟಿಸಿದನೋ, ಅವನೇ ನಾರಾಯಣನು. ಲೋಕವು ತಪ್ಪು ದಿಕ್ಕಿನಲ್ಲಿ ಹೋಗುತ್ತಿರುವುದನ್ನು ನೋಡಿ, ಶ್ರುತಿಯ ಸಂದೇಶವನ್ನು, ಜೀವನದ ಆಧ್ಯಾತ್ಮಿಕ ಗುಣವನ್ನು, ಮತ್ತು ಶ್ರುತಿಯ ಸ್ವರೂಪವಾಗಿರುವಂಥ ರೀತಿಯ ಮಾನವತ್ವವನ್ನು (ಎಂದರೆ ಬ್ರಾಹ್ಮಣತ್ವವನ್ನು) ಬಲಪಡಿಸುವುದಕ್ಕಾಗಿ, ವಸುದೇವ ದೇವಕಿಯರ ಪುತ್ರ ಕೃಷ್ಣನಾಗಿ ಬಂದನು; ಅದೇ ದೇವರ ಅವತಾರದ ಕೇಂದ್ರವಾಯಿತು.
ಬೌದ್ಧಧರ್ಮವು ಬ್ರಾಹ್ಮಣವಿರೋಧಿ ಎಂದು ನಾವು ಆಗಾಗ್ಗೆ ಕೇಳುತ್ತೇವೆ. ಪಾಶ್ಚಿಮಾತ್ಯ ಬರಹಗಾರರು ನಮ್ಮ ಪ್ರಾಚೀನ ಮಹಾಕೃತಿಗಳಲ್ಲಿ ವಿವರಿಸಲಾಗಿರುವ ಬ್ರಾಹ್ಮಣ ಮತ್ತು ಪುರೋಹಿತ ಬ್ರಾಹ್ಮಣ ಬೇರೆ ಬೇರೆ ಎಂಬುದನ್ನು ತಿಳಿಯದೆ ಇಂಥ ಅನೇಕ ಸಂಗತಿಗಳನ್ನು ತಪ್ಪಾಗಿ ಪ್ರತಿಪಾದಿಸುತ್ತಿದ್ದಾರೆ. ನಿಜವಾಗಿಯೂ ಶುದ್ಧ ಮತ್ತು ಪವಿತ್ರವಾಗಿದ್ದ ಅನೇಕ ಮಹಾಬ್ರಾಹ್ಮಣರು ಇದ್ದರು. ಈಗ ನಾವು ನೋಡುತ್ತಿರುವುದು ಸಮಾಜಕ್ಕೆ ತೊಂದರೆಯ ಮೂಲನಾಗಿರುವ ಪುರೋಹಿತ ಬ್ರಾಹ್ಮಣನನ್ನು ಮಾತ್ರ, ಇದರಲ್ಲಿ ಸಂದೇಹವಿಲ್ಲ. ಆದರೆ ಆ ಪದದ ನಿಜವಾದ ಅರ್ಥ ಏನೆಂಬುದನ್ನು ಮರೆಯಬಾರದು; ಆದ್ದರಿಂದಲೇ ಬೌದ್ಧಾವತಾರದಲ್ಲಿ ಇದೇ ಅಭಿಪ್ರಾಯವನ್ನು ಭಗವಾನ್ ಬುದ್ಧನೇ ವಿಶದಪಡಿಸಿರುವುದನ್ನು ನೋಡುವಿರಿ. ಅವನಿಗೆ ಬ್ರಾಹ್ಮಣರ ಬಗ್ಗೆ ತುಂಬಾ ಗೌರವವಿದ್ದಿತು. ಅವರ ಜೀವನ ಅತ್ಯಂತ ಸರಳವಾಗಿರುವುದೆಂಬುದನ್ನು, ಅವರು ಅತ್ಯುನ್ನತ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸಾಧನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವರೆಂಬುದನ್ನು, ಬುದ್ದನು ತಿಳಿದಿದ್ದನು. ಆದರ್ಶದೆತ್ತರಕ್ಕೇರದೆ ಸೋಲುವ ಜನರಿರುವರೆಂಬುದು ನಿಜ; ಆ ಕಾರಣಕ್ಕೆ ಆದರ್ಶವನ್ನೇ ಮರೆಯಲಾಗದು. ಬುದ್ಧನ ಬೋಧನೆಗಳಲ್ಲಿ ಬ್ರಾಹ್ಮಣ ಮತ್ತು ಶ್ರಮಣ ಎಂಬೆರಡು ಪದಗಳು ಪುನಃ ಪುನಃ ಬರುವುವು. ಬ್ರಾಹ್ಮಣ ಮತ್ತು ಶ್ರಮಣ ಇಬ್ಬರನ್ನೂ ಗೌರವಿಸಿ ಎಂದು ಬುದ್ಧನು ಹೇಳಿರುವನು. ಸಾಮಾನ್ಯವಾಗಿ ಬ್ರಾಹ್ಮಣರು ಗೃಹಸ್ಥರು ಮತ್ತು ಶ್ರಮಣರು ಸನ್ಯಾಸಿಗಳು. ಸಾತ್ತ್ವಿಕ ಜೀವನವನ್ನು ನಡೆಸುವ ಕಾರಣದಿಂದ ಗೃಹಸ್ಥರೂ ಸಹ ತುಂಬಾ ಗೌರವಾನ್ವಿತರಾಗಿದ್ದರು. ಯಾರಿಗೂ ಯಾವುದೇ ದ್ವೇಷ ಅಥವಾ ಶತ್ರುಭಾವವಿಲ್ಲದ, ಮತ್ತು ಪ್ರೇಮ ದಯೆಗಳಿಂದ ತುಂಬಿದ ಹೃದಯವುಳ್ಳ ಪ್ರತಿಯೊಬ್ಬನಿಗೂ ಈ ರೀತಿಯ ಬ್ರಾಹ್ಮಣನಾಗಿ ವಿಕಾಸಹೊಂದುವ ಸಾಧ್ಯತೆ ಸಾಮರ್ಥ್ಯಗಳಿರುತ್ತವೆ ಎಂದು ಪ್ರಾಚೀನ ಕಾಲದಿಂದಲೂ ನಾವು ತಿಳಿದುಕೊಂಡಿದ್ದೇವೆ.
ನಮ್ಮ ಇಂದಿನ ಕಾಲದಲ್ಲಿ ಮಹಾತ್ಮಾಗಾಂಧಿಯವರಿದ್ದರು. ಒಂದು ಅರ್ಥದಲ್ಲಿ, ಜಾತಿಯಿಂದ ಅವರು ವೈಶ್ಯ; ಆದರೆ ಶೀಲದಿಂದ ಅವರು ಬ್ರಾಹ್ಮಣರಾಗಿದ್ದರು. ದ್ವೇಷವನ್ನು ತೋರಿಸಲಿಲ್ಲ; ದಕ್ಷಿಣ ಆಫ್ರಿಕಾದಲ್ಲಿ ಅವರನ್ನು ನೆಲಕ್ಕೊತ್ತಿದ ಪೊಲೀಸರಿಗೆ ಸಹಾ; ಅವರ ವಿರುದ್ಧ ಕೋರ್ಟಿಗೆ ಹೋಗಿ ಸಾಕ್ಷ್ಯ ನುಡಿಯಲು ನಿರಾಕರಿಸಿಬಿಟ್ಟರು. ಇಂದಿಗೂ ಅಂಥ ಜನ ನಮ್ಮಲ್ಲಿದ್ದಾರೆ; ಈ ಸ್ಥಿತಿಯನ್ನು ಸಾಧಿಸುವುದು ಅಸಾಧ್ಯವೇನಲ್ಲ ಎಂದು ನಮಗೆ ಗಾಂಧೀಜಿಯಂಥ ಒಬ್ಬ ಮನುಷ್ಯ ಪುನಃ ಖಚಿತಪಡಿಸುತ್ತಾರೆ. ನಾವೇನು ಮಾಡೋಣ? ವಿಕಾಸದ ಹಾದಿಯಲ್ಲಿ ಮಾನವಜೀವಿಯ ಆವಿರ್ಭಾವ ಆದನಂತರ ಸಾವಯವ ವಿಕಾಸ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿತು ಎನ್ನುತ್ತದೆ ಆಧುನಿಕ ಜೀವವಿಜ್ಞಾನ. ಮಾನವನಲ್ಲಿ ಮೆದುಳಿನ ಔನ್ನತ್ಯ ಅಚ್ಚರಿಯ ಕೆಲಸಗಳನ್ನು ನಿರ್ವಹಿಸಬಲ್ಲುದು; ಆದ್ದರಿಂದ ವಿಕಾಸದ ಮುಂದುವರಿಕೆಯನ್ನು ಉನ್ನತ ಮಟ್ಟದಲ್ಲಿ ಕಾಣಬೇಕಾಗುತ್ತದೆ. ಸರ್ ಜೂಲಿಯನ್ ಹಕ್ಸ್ಲೇ ಅವರು ಅದನ್ನು ಸಾಮಾಜಿಕ-ಮಾನಸಿಕ ವಿಕಾಸವೆನ್ನುತ್ತಾರೆ; ವೇದಾಂತವು ಅದನ್ನು ಆಧ್ಯಾತ್ಮಿಕ ವಿಕಾಸ ಎನ್ನುತ್ತದೆ. ವಿಕಾಸದ ಗುರಿ ಏನೆಂಬುದು ಜೀವವಿಜ್ಞಾನಕ್ಕೆ ಇನ್ನೂ ತಿಳಿದಿಲ್ಲ; ಆದರೆ ಗುರಿಯ ನಿರ್ಣಯ ಗುಣಾತ್ಮಕವಾಗಿರುವುದೇ ಹೊರತು ಪ್ರಮಾಣಾತ್ಮಕವಾಗಿರುವುದಿಲ್ಲ ಎಂದು ತೀರ್ಮಾನಕ್ಕಂತೂ ಬಂದಿದೆ.
ಬ್ರಾಹ್ಮಣತ್ವದ ಆದರ್ಶದಲ್ಲಿ ಭಾರತ ಪರಿಪೂರ್ಣತೆಯನ್ನು ಕಾಣುತ್ತಿರುವುದು ಈ 'ಗುಣ'ದಲ್ಲಿಯೇ. ಆದರ್ಶ ಇಲ್ಲಿದೆ ಮತ್ತು ಕೆಲವು ಉದಾಹರಣೆಗಳು ಇಲ್ಲಿವೆ; ಆ ದಿಕ್ಕಿನಲ್ಲಿ ಚಲಿಸಲು ಆರಂಭಿಸಿ. ನೀವು ತಮಸ್ಸಿನಿಂದ ತುಂಬಿಕೊಂಡ ಕೇವಲ ಶ್ರೀಸಾಮಾನ್ಯನಾಗಿರಬಹುದು. ಪರವಾಗಿಲ್ಲ; ಜೀವನದಲ್ಲಿ ಮುನ್ನಡೆ ಎಂಬುದಿದೆ; ಅದು ಈ ದಿಕ್ಕಿನಲ್ಲಿರಲಿ. ಈ ಆದರ್ಶವನ್ನು ಜನರ ಮುಂದಿಟ್ಟಾಗ ಇಡಿಯ ಭಾರತದೇಶವೇ ಸಂಪೂರ್ಣವಾಗಿ ಪರಿವರ್ತನೆಯಾಗಿಬಿಡುವುದು. ನಿಮ್ಮ ಶಕ್ತಿಸಾಮರ್ಥ್ಯಗಳಿಗೆ ಅನುಗುಣವಾಗಿ ಆ ದಿಕ್ಕಿನಲ್ಲಿ ಚಲಿಸಲಾರಂಭಿಸಿ. ಒಂದು ಹೆಜ್ಜೆ, ಎರಡು ಹೆಜ್ಜೆ, ಮೂರು ಹೆಜ್ಜೆ, ಆಹಾ! ಎಂಥ ಬದಲಾವಣೆ ನಿಮ್ಮ ಜೀವನದಲ್ಲಿ ಬರುವುದು! ಇದು ರಷ್ಯಾ, ಅಮೆರಿಕಾ, ಜರ್ಮನಿ, ಚೈನಾ ಎಲ್ಲೆಲ್ಲೂ ಅನ್ವಯವಾಗಬಹುದಾದದ್ದು - ಈ ಮಾನವ ಶ್ರೇಷ್ಠತೆಯ ಬ್ರಾಹ್ಮಣ ಕಲ್ಪನೆ. ಸಾಮಾಜಿಕ ವಿಕಾಸದ ಗುರಿ ಇದೇ ಎಂಬುದನ್ನು ಇಂದು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಪ್ರಚಲಿತ ಸಮಾಜವಿಜ್ಞಾನದ ಹೆಚ್ಚು ಭಾಗ ಕೇವಲ ಸಾಮಾಜಿಕ ಸಂಖ್ಯಾಸಂಗ್ರಹ; ಆದರೆ ಯಾವುದು ಮಾನವನ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸಾಮಾಜಿಕ ವಿಕಾಸಕ್ಕೆ ಒತ್ತು ಕೊಡುವುದೋ ಅದೇ ನಿಜವಾದ ಸಮಾಜವಿಜ್ಞಾನ. ಆ ದಿಶೆಯಲ್ಲಿ ವಿಕಾಸವಾಗುವ ಸಮಾಜ ಹೇಗಿರುವುದು? ನಾವು ಅದನ್ನು ಆಧ್ಯಾತ್ಮಿಕ ದಿಶೆ ಎನ್ನುತ್ತೇವೆ. ಮಾನವನ ಹಂತದಲ್ಲಿ ವಿಕಾಸದ ಗುರಿ ಈ ಆಧ್ಯಾತ್ಮಿಕ ದಿಶೆ. ಇಪ್ಪತ್ತನೆಯ ಶತಮಾನದ ಜೀವವಿಜ್ಞಾನ ನಿಧಾನವಾಗಿ ಇದನ್ನೇ ಹೇಳುತ್ತಿದೆ: ದೇಹದ, ಇಂದ್ರಿಯಗಳ ಮಿತಿಯನ್ನು ಮೀರಿಹೋಗುವುದು - ಮೆದುಳಿನ ಔನ್ನತ್ಯ ಇರುವುದೇ ಅದಕ್ಕಾಗಿ, ಸಾಮಾಜಿಕ-ಮಾನಸಿಕ ವಿಕಾಸದ ಕುರಿತೂ ಹೇಳುತ್ತಿದ್ದಾರೆ. ಎಲ್ಲಾ ಜನಗಳ ಮತ್ತು ಸಮಾಜದ ಜೊತೆಗೆ ಐಕ್ಯವನ್ನು ಅನುಭವಿಸುವ ಮನಸ್ಸು: ಇದು ಲಭ್ಯವಾದರೆ ಶೋಷಣೆ ಎಲ್ಲಿದೆ? ಇದೇ ಬ್ರಾಹ್ಮಣ ಭಾವ.
ಪ್ರತಿಯೊಂದು ಸಮಾಜದಲ್ಲೂ ವಿಕಾಸದ ದಿಕ್ಕು ಬ್ರಾಹ್ಮಣ ರೀತಿಯ ಕಡೆಗೆ ಎನ್ನುತ್ತದೆ ಇಪ್ಪತ್ತನೆಯ ಶತಮಾನದ ಜೀವವಿಜ್ಞಾನ. ಶಂಕರರ ಗೀತಾಭಾಷ್ಯದ ಈ ಅಭಿವ್ಯಕ್ತಿಯ ಪ್ರಾಮುಖ್ಯತೆ ಇದು.
ವೇದಾಂತದ ಪ್ರಕಾರ ಇದೇ ಮಾನವ ವಿಕಾಸದ ಹಾದಿ ಮತ್ತು ಗುರಿ. ದೇವರ ಅವತಾರವಾಗುವುದು ಜನರನ್ನು ಈ ವಿಕಾಸದ ಹಾದಿಯಲ್ಲಿ ನಿಲ್ಲಿಸಿ ಅವರಿಗೆ ಸ್ವಲ್ಪ ಪ್ರಚೋದನೆ ಕೊಡುವುದಕ್ಕಾಗಿ. ಆ ಪ್ರಚೋದನೆ ಕೊಡಲ್ಪಟ್ಟಾಗ, ಕಾಲಾನುಕ್ರಮದಲ್ಲಿ ಅನೇಕ ಕೇಡುಗಳು ಅದೃಶ್ಯವಾಗುತ್ತವೆ; ಏಕೆಂದರೆ ನಿಮ್ಮ ಧೋರಣೆ, ನಿಮ್ಮ ಮೌಲ್ಯವ್ಯವಸ್ಥೆ ಬದಲಾದುವು; ನೀವು ನಿಮ್ಮ ಜೀವನವನ್ನು ಉನ್ನತವಾದದ್ದೊಂದು ಉದ್ದೇಶದ ನೊಗಕ್ಕೆ ಕಟ್ಟಿದಿರಿ. ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ನಿಮಗೆ ಹಾನಿಯನ್ನು ತರುವುದಿಲ್ಲ. ಮಾನವನ ಬೆಳವಣಿಗೆ ಮತ್ತು ಅಭಿವೃದ್ಧಿಯ ಕಲ್ಪನೆಯಿದು; ಯುಗಪ್ರವರ್ತಕನೂ ದಿವ್ಯಾತ್ಮನೂ ಆದ ಅವತಾರ ಪುರುಷನು ಮಾತ್ರ ಇಂತಹ ಕಾರ್ಯವನ್ನು ಸಾಧಿಸಬಲ್ಲನು. ನಾವು ಅವತಾರವೆಂದು ಕರೆಯುವ ಅಂತಹ ವ್ಯಕ್ತಿಯಿಂದ ಮಾತ್ರ ಈ ಪ್ರಚಂಡ ಆಧ್ಯಾತ್ಮಿಕ ಶಕ್ತಿಪ್ರವಾಹವನ್ನು ಚಾಲನೆಯಲ್ಲಿರಿಸುವುದು ಸಾಧ್ಯ. ನೀವು ಇನ್ನಾವುದೇ ಶಬ್ದವನ್ನೂ ಬಳಸಬಹುದು. ಒಂದು ನವಯುಗಾರಂಭವನ್ನೇ ಸೃಷ್ಟಿಸುವ ಅಸಾಧಾರಣ ಶಕ್ತಿ - ಸಾಮಾನ್ಯ ಸಂತನಲ್ಲಿ ಕಾಣದಂತಹ ಅಪಾರವಾದ ಶಕ್ತಿ. ಲೋಕವನ್ನೇ ಚಲಿಸಬಲ್ಲಂಥವರು ತೀರ ಕೆಲವೇ ಕೆಲವರಾದ ಅಂತಹ ವ್ಯಕ್ತಿಗಳೇ, ಶ್ರೀರಾಮ, ಶ್ರೀಕೃಷ್ಣ, ಬುದ್ಧ, ಜೀಸಸ್ ಮತ್ತು ಈಗ ಶ್ರೀರಾಮಕೃಷ್ಣ - ಇಂತಹ ಅವತಾರಪುರುಷರೆಂದು ನಾವು ಪರಿಗಣಿಸುತ್ತೇವೆ. ನಮ್ಮ ಇಡೀ ಸಂಪ್ರದಾಯದ ಹಿನ್ನೆಲೆಯಲ್ಲಿ ಇದು ಒಂದು ಅಚ್ಚರಿಯ ಅಧ್ಯಯನ. ಪರಿಸ್ಥಿತಿ ಕೆಟ್ಟಾಗ ಅದೇ ಚೇತನ ಮತ್ತೊಮ್ಮೆ ಬರಬೇಕು; ಬರುತ್ತಾನೆ ಕೂಡ. ಗೀತೆಯ ನಾಲ್ಕನೆಯ ಅಧ್ಯಾಯದಲ್ಲಿ ಶ್ರೀಕೃಷ್ಣ ಹೇಳಿದ್ದಾನೆ - ಸಾಮಾನ್ಯ ಮಾನವನಂತೆ ತಾನು ಬಂದಾಗ ಅನೇಕರು ತನ್ನನ್ನು ಗುರುತಿಸುವುದಿಲ್ಲ ಎಂದು. ಆದರೆ, ಕಾಲಾನುಕ್ರಮದಲ್ಲಿ ಮಿಲಿಯಾಂತರ ಜನರು ಅವನನ್ನು ಗುರ್ತಿಸುವರು. ನಾವು ಆ ಮಹಾಪುರುಷನ ಹತ್ತಿರವೇ ಇರುವುದರಿಂದ ಅವನನ್ನು ಗುರುತಿಸಲಾರೆವು. ಗೀತೆಯ ನಾಲ್ಕನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ವಿವರಿಸಿರುವ ಈ ಅವತಾರ ಕಲ್ಪನೆಯು ಸನಾತನ ಧರ್ಮದ ಮತ್ತು ಕ್ರೈಸ್ತಮತದ ಕೇಂದ್ರಬಿಂದುವಾಗಿರುವುದು. ಇನ್ನಾವ ಧರ್ಮದಲ್ಲಿಯೂ ಈ ಅವತಾರ ಕಲ್ಪನೆ ಇಲ್ಲ. ಈ ಕಾಲದಲ್ಲಿ ಸಹಾ ಅಂತಹ ಒಂದು ಹೊಂದಾಣಿಕೆಯ ಅಗತ್ಯ ಬಿದ್ದುದರಿಂದ ಶ್ರೀರಾಮಕೃಷ್ಣ ಎಂಬ ಮಹಾಪುರುಷನ ಜನ್ಮವಾಯಿತು. ಬೋಧನೆಯೆಲ್ಲ ಪುಸ್ತಕದಲ್ಲಿದೆ; ಆದರೆ ಅದನ್ನು ಅರ್ಥಮಾಡಿಕೊಳ್ಳುವುದೂ ಅದರಂತೆ ನಡೆಯುವುದೂ ಹೇಗೆಂದು ತಿಳಿಯುತ್ತಿಲ್ಲ. ಯಾರಾದರೂ ಬಂದು ನಮಗೆ ಹೊಸದೊಂದು ಅಂತರ್ದೃಷ್ಟಿಯನ್ನು ಕೊಡಬೇಕು. ಯಾರು ಅದನ್ನು ಮಾಡುವರು? ಯಾವುದೋ ಪಂಡಿತನೋ, ಪುರೋಹಿತನೋ, ಪ್ರಾಧ್ಯಾಪಕನೋ ಅಲ್ಲ. ಅವರಿಗೇನು ಗೊತ್ತು? ಒಬ್ಬ ಪ್ರಚಂಡನಾದ ಆಧ್ಯಾತ್ಮಿಕ ವ್ಯಕ್ತಿ, ಮೌನವಾಗಿ ಆತ ಬರುತ್ತಾನೆ, ಒಂದು ಹೊಸ ಆಧ್ಯಾತ್ಮಿಕತೆಯ ಪ್ರವಾಹವನ್ನೇ ಹರಿಸುತ್ತಾನೆ. ಆ ಆಧ್ಯಾತ್ಮಿಕತೆ ಜನರನ್ನು ಸ್ವಲ್ಪ ಸ್ವಲ್ಪವೇ ಆವರಿಸುತ್ತದೆ, ನಿಧಾನವಾಗಿ ಜಗತ್ತನ್ನೇ ಬದಲಾಯಿಸುತ್ತದೆ.
ಶ್ರೀರಾಮಕೃಷ್ಣರ ದೈವತ್ವದ ಬಗ್ಗೆ ವಿವೇಕಾನಂದರು
ಸಮಾಜದಲ್ಲಿನ ಬಲಗಳ ಅನುಪಾತವನ್ನು ಒಬ್ಬ ಅವತಾರನು ಹೇಗೆ ಬದಲಾಯಿಸುವನು? ಶಂಕರಾಚಾರ್ಯರು ತಮ್ಮ ಭಾಷ್ಯದಲ್ಲಿ ಈ ಪ್ರಶ್ನೆಗೆ ಉತ್ತರವನ್ನು ಹೇಳುವರು; ಆದರೆ ಈ ಸಂದರ್ಭದಲ್ಲಿ, ಸಮಾಜದ ಸ್ಥಿತಿಗತಿ ಕೆಟ್ಟು ಹೋದಾಗ ಬಂದು ಅದನ್ನು ಸರಿಪಡಿಸುವ ಅವತಾರನ ಪ್ರಾಮುಖ್ಯತೆಯ ಬಗ್ಗೆ ಸ್ವಾಮಿ ವಿವೇಕಾನಂದರು ಏನು ಹೇಳಿರುವರೆಂಬುದನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಅವರು ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ನನ್ನ ಗುರುದೇವ ಎಂಬ ಮುಖ್ಯವಾದ ವಿಷಯವನ್ನು ಕುರಿತು ಮಾತನಾಡುತ್ತಿದ್ದರು. ಅವರು ಅಮೆರಿಕಾದಲ್ಲಿಯಾಗಲಿ ಯೂರೋಪಿನಲ್ಲಾಗಲಿ ತಾವು ಅಲ್ಲಿದ್ದ ನಾಲ್ಕು ವರ್ಷಗಳಲ್ಲಿ ಶ್ರೀರಾಮಕೃಷ್ಣರ ಮೇಲೆ ಮಾತನಾಡಿರಲಿಲ್ಲ; ಕೇವಲ ವೇದಾಂತದ ಬಗ್ಗೆ ಮಾತನಾಡುತ್ತಿದ್ದರು. ಅವರಿಗೆ ರಾಮಕೃಷ್ಣ ಎಂಬ ಅದ್ಭುತ ವ್ಯಕ್ತಿ ಗುರುಗಳಾಗಿದ್ದುದನ್ನು ಕೇಳಿದ ಶಿಷ್ಯರು, ಗುರುಗಳನ್ನು ಕುರಿತು ಮಾತನಾಡಬೇಕೆಂದು ಒತ್ತಾಯ ಹಾಕಿದ್ದರು. ಹಾಗೆ ನ್ಯೂಯಾರ್ಕ್ ಮತ್ತು ಲಂಡನ್‌ನಲ್ಲಿ ನನ್ನ ಗುರುದೇವ ಎಂಬ ಈ ಒಂದು ಉಪನ್ಯಾಸವನ್ನು ಕೊಟ್ಟರು. ಉಪನ್ಯಾಸದ ಪ್ರಾರಂಭದಲ್ಲಿ ಶಂಕರರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ: ಸಮಾಜದಲ್ಲಿ ಸ್ಥಿತಿಗತಿಗಳು ನಿಯಂತ್ರಣವನ್ನು ಮೀರಿಹೋಗಿ ಭ್ರಷ್ಟಾಚಾರವು ನೆಲೆಗೊಂಡಾಗ, ನೈತಿಕ ಮೌಲ್ಯಗಳನ್ನು ಪುನಃ ಪ್ರತಿಷ್ಠಾಪಿಸುವುದಕ್ಕಾಗಿ, ಮಹಾಶಕ್ತಿಯೊಂದರ ಅವತರಣವಾಗುತ್ತದೆ. ಹೀಗೆ ಉಪನ್ಯಾಸವನ್ನು ಪ್ರಾರಂಭಿಸಿದ್ದಾರೆ. ಮಹಾಗುರುವಿನ ಸುಂದರ ಚಿತ್ರಣವುಳ್ಳ ಸುಂದರ ಇಂಗ್ಲಿಷ್‌ನ ಅದ್ಭುತ ಉಪನ್ಯಾಸವದು. ಮನೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ, ಹಾಗೂ ಶ್ರೀರಾಮಕೃಷ್ಣ ಮಹಾಸಂಘದಲ್ಲಿನ ಬ್ರಹ್ಮಚಾರಿಯಾಗಿದ್ದಾಗ, ನಾನು ಆ ಭಾಷಣವನ್ನು ಸುಮಾರು ಇಪ್ಪತ್ತೈದು ಬಾರಿಯಾದರೂ ಓದಿರಬಹುದು. ಅದು ಪ್ರತಿಯೊಂದು ದೃಷ್ಟಿಯಿಂದಲೂ ಅಷ್ಟು ಸೊಗಸಾಗಿದೆ. ಅವರು ಪ್ರಾರಂಭಿಸುತ್ತಾರೆ (ಕೃತಿಶ್ರೇಣಿ, ಸಂಪುಟ ೬, ಪುಟ ೧೧೯-೧೨೦):
“ಯಾವಾಗ ಒಳಿತು ಹಿಂದಾಗಿ ಕೇಡು ವಿಜೃಂಭಿಸುತ್ತದೆಯೋ ಆಗ ನಾನು ಮಾನವಕೋಟಿಗೆ ಸಹಾಯಮಾಡುವುದಕ್ಕಾಗಿ ಇಳಿದು ಬರುತ್ತೇನೆ” ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಉದ್ಘೋಷಿಸಿದ್ದಾನೆ. ನಮ್ಮ ಈ ಪ್ರಪಂಚಕ್ಕೆ ತನ್ನ ಬೆಳವಣಿಗೆಯಿಂದಾಗಿ, ಹೊಸದಾಗಿ ಸೇರ್ಪಡೆಯಾದ ಪರಿಸ್ಥಿತಿಗಳಿಂದಾಗಿ ಹೊಸದೊಂದು ಹೊಂದಾಣಿಕೆ ಅಗತ್ಯವಾದಾಗ, ಶಕ್ತಿಯ ಅಲೆಯೊಂದು ಬರುವುದು; ಮನುಷ್ಯ ಲೌಕಿಕ ಹಾಗೂ ಆಧ್ಯಾತ್ಮಿಕ ಎಂಬ ಎರಡು ಸ್ತರಗಳಲ್ಲಿ ಕ್ರಿಯಾಶೀಲನಾಗಿರುವುದರಿಂದ ಹೊಂದಾಣಿಕೆಯ ಅಲೆ ಎರಡೂ ಸ್ತರಗಳಲ್ಲಿ ಬರುವುದು. ಒಂದು ಕಡೆ ಲೌಕಿಕ ಸ್ತರದ ಹೊಂದಾಣಿಕೆ ಆಧುನಿಕ ಕಾಲದಲ್ಲಿ ಮುಖ್ಯವಾಗಿ ಯೂರೋಪಿನಲ್ಲಾಗಿದೆ; ಇನ್ನೊಂದು ಕಡೆ ಆಧ್ಯಾತ್ಮಿಕ ಸ್ತರದ ಹೊಂದಾಣಿಕೆ ಪ್ರಪಂಚದ ಇತಿಹಾಸದುದ್ದಕ್ಕೂ ಏಷಿಯಾದಲ್ಲಾಗಿದೆ. ಇಂದು ಮನುಷ್ಯನಿಗೆ ಆಧ್ಯಾತ್ಮಿಕ ಸ್ತರದಲ್ಲಿ ಇನ್ನೊಂದು ಹೊಂದಾಣಿಕೆ ಅಗತ್ಯವಾಗಿದೆ; ಲೌಕಿಕ ಪರಿಕಲ್ಪನೆಗಳು ತಮ್ಮ ಶಕ್ತಿ ವೈಭವಗಳ ಔನ್ನತ್ಯದಲ್ಲಿರುವ ಇಂದು; ಭೌತವಸ್ತುಗಳ ಮೇಲೆ ಹೆಚ್ಚಾಗುತ್ತಿರುವ ತನ್ನ ಅವಲಂಬನೆಯಿಂದಾಗಿ ಮಾನವ ತನ್ನ ದಿವ್ಯತೆಯನ್ನು ಮರೆತು ಕೇವಲ ಸಂಪತ್-ಸೃಜನ ಯಂತ್ರವಾಗಿಬಿಡುವ ಸಾಧ್ಯತೆ ಇರುವ ಇಂದು, ಒಂದು ಹೊಂದಾಣಿಕೆ ಅಗತ್ಯವಾಗಿದೆ; ಧ್ವನಿಯೊಂದು ಗರ್ಜಿಸಿದೆ, ದಟ್ಟಿಸುತ್ತಿರುವ ವಾಸ್ತವವಾದದ ಮೋಡಗಳನ್ನು ಚದುರಿಸುವ ಶಕ್ತಿಯ ಆಗಮನವಾಗುತ್ತಿದೆ. ಮಹಾಶಕ್ತಿ ಚಾಲನೆಯಲ್ಲಿದೆ, ಅದು ಸದ್ಯದಲ್ಲಿಯೇ ಮಾನವಕುಲಕ್ಕೆ ತನ್ನ ನಿಜಸ್ವಭಾವವನ್ನು ಜ್ಞಾಪಿಸಲಿದೆ, ಮತ್ತೊಮ್ಮೆ ಈ ಶಕ್ತಿಯ ಉಗಮ ಏಷಿಯಾದಲ್ಲೇ ಆಗಲಿದೆ.
“ನಮ್ಮ ಈ ಪ್ರಪಂಚದ ವ್ಯವಸ್ಥೆ ನೆಲೆಗೊಂಡಿರುವುದು ಕೆಲಸಗಳನ್ನು ಹಂಚಿಕೊಳ್ಳುವ ಯೋಜನೆಯ ಮೇಲೆ. ಒಬ್ಬನ ಬಳಿಯೇ ಎಲ್ಲವೂ ಇರಬೇಕೆನ್ನುವುದು ಭ್ರಮೆಯಷ್ಟೆ. ಅಂತೆಯೇ ಒಂದೇ ದೇಶವು ಎಲ್ಲವನ್ನೂ ಹೊಂದಿರಬೇಕೆನ್ನುವುದು ಇನ್ನೂ ದೊಡ್ಡ ಭ್ರಮೆ. ಆದರೂ ನಮ್ಮದು ಅದೆಂತಹ ಹುಡುಗಾಟ! ಮಗು ಅದರ ಮುಗ್ಧತೆಯಲ್ಲಿ ಯೋಚಿಸುತ್ತದೆ, ಅದರ ಬಳಿ ಇರುವ ಬೊಂಬೆಯೊಂದೇ ಇಡೀ ಪ್ರಪಂಚದಲ್ಲಿ ತುಂಬಾ ಬೆಲೆಯಿರುವ ವಸ್ತು ಎಂದು. ಅದೇ ರೀತಿ ಭೌತಿಕ ಶಕ್ತಿ ಗಳಿಸಿರುವ ದೇಶವೊಂದು ಚಿಂತಿಸಬಹುದು, ಅದರ ಬಳಿ ಇರುವ ಆ ಶಕ್ತಿಯೇ ಬೆಲೆಯುಳ್ಳದ್ದು, ಅದೇ ಅಭಿವೃದ್ಧಿಯೆಂದರೆ, ನಾಗರಿಕತೆಯೆಂದರೆ, ಎಂದು; ಅಂತಹ ಭೌತಿಕ ಶಕ್ತಿ ಇಲ್ಲದ ಇತರ ದೇಶಗಳಿದ್ದರೆ ಅವುಗಳು ಬಾಳಲು ಅಯೋಗ್ಯ, ಅವುಗಳ ಅಸ್ತಿತ್ವವೇ ಅರ್ಥಹೀನ!
'ಇನ್ನೊಂದು ಕಡೆ ಭೌತಿಕ ಶ್ರೀಮಂತಿಕೆ ಮಾತ್ರವೇ ಇರುವ ನಾಗರಿಕತೆ ವ್ಯರ್ಥ ಎಂದು ಇನ್ನೊಂದು ದೇಶ ಯೋಚಿಸಬಹುದು. ಪೌರ್ವಾತ್ಯ ವಾಣಿ ಇಡೀ ಪ್ರಪಂಚಕ್ಕೆ ಹೇಳಿತು, ಒಬ್ಬನ ಬಳಿ ಈ ಲೋಕದಲ್ಲಿರುವ ಎಲ್ಲಾ ಇರಬಹುದು, ಆದರೆ ಆಧ್ಯಾತ್ಮಿಕತೆ ಎಂಬುದೊಂದು ಇಲ್ಲದಿದ್ದರೆ ಆ ಎಲ್ಲಾ ಇದ್ದು ಏನು ಪ್ರಯೋಜನ? ಇದು ಪೌರ್ವಾತ್ಯ ರೀತಿ; ಅದು ಪಾಶ್ಚಾತ್ಯ ರೀತಿ. 'ಈ ಒಂದೊಂದು ರೀತಿಗೂ ಅದರದ್ದೇ ಆದ ವೈಭವವಿದೆ, ಅದರದ್ದೇ ಆದ ಶೋಭೆ ಇದೆ. ಈಗ ಆಗಬೇಕಾಗಿರುವ ಹೊಂದಾಣಿಕೆಯೆಂದರೆ, ಇವೆರಡೂ ಆದರ್ಶಗಳ ಸಮ್ಮೇಳನ, ಸಮನ್ವಯ. ಪೌರ್ವಾತ್ಯಕ್ಕೆ ಅಧ್ಯಾತ್ಮ ಹೇಗೆ ಸತ್ಯವೋ ಪಾಶ್ಚಾತ್ಯಕ್ಕೆ ಐಂದ್ರಿಯಕ ಪ್ರಪಂಚ ಅಷ್ಟೇ ಸತ್ಯ. ಪೌರ್ವಾತ್ಯನು ಅವನು ಆಶಿಸುವ, ಅಪೇಕ್ಷಿಸುವ, ಜೀವನವನ್ನು ಅರ್ಥವತ್ತಾಗಿಸುವ ಎಲ್ಲವನ್ನೂ ಅಧ್ಯಾತ್ಮದಲ್ಲಿಯೇ ಕಾಣುತ್ತಾನೆ. ಪಾಶ್ಚಾತ್ಯನಿಗೆ ಇವನು ಹಗಲುಗನಸು ಕಾಣುವವ; ಪೌರ್ವಾತ್ಯನಿಗೆ ಅವನು ಬೊಂಬೆಗಳ ಜೊತೆಗೆ ಆಟವಾಡುತ್ತಿರುವ ಕನಸಿಗ; ಬೆಳೆದ ಸ್ತ್ರೀಪುರುಷರು ಇಂದೋ ನಾಳೆಯೋ ತಾವು ಬಿಟ್ಟು ಹೋಗಲಿರುವ ಅಲ್ಪ ವಸ್ತುಗಳ ಬಗ್ಗೆ ಅಷ್ಟೊಂದು ಮುತುವರ್ಜಿ ವಹಿಸುವುದನ್ನು ಕಂಡು ಅವನಿಗೆ ನಗೆ. ಇಬ್ಬರಿಗೂ ಪರಸ್ಪರರು ಕನಸಿಗರು.
ಆದರೆ ಮಾನವ ಜಾತಿಯ ಅಭಿವೃದ್ಧಿಗೆ ಪೌರ್ವಾತ್ಯ ಆದರ್ಶ ಪಾಶ್ಚಾತ್ಯದ ಆದರ್ಶದಷ್ಟೇ ಅವಶ್ಯಕ; ನಾನು ಹೇಳುತ್ತೇನೆ, ಇನ್ನೂ ಹೆಚ್ಚು ಅವಶ್ಯಕ. ಯಂತ್ರಗಳು ಮನುಷ್ಯನನ್ನು ಎಂದೂ ಸುಖವಾಗಿರಿಸಿದ್ದಿಲ್ಲ, ಮುಂದೂ ಸುಖವಾಗಿರಿಸಲಾರವು. ನಮ್ಮನ್ನು ನಂಬಿಸಲೆತ್ನಿಸುತ್ತಿರುವವನು ಯಂತ್ರದಲ್ಲಿ ಸುಖವಿದೆ ಎನ್ನಬಹುದು; ಆದರೆ ಸುಖವಿರುವುದು ಯಾವಾಗಲೂ ಮನಸ್ಸಿನಲ್ಲಿ. ಯಾರು ತನ್ನ ಮನಸ್ಸಿಗೆ ತಾನೇ ಯಜಮಾನನಾಗಿರುವನೋ ಅವನೇ ಸುಖಿಯೇ ಹೊರತು ಬೇರೆ ಯಾರೂ ಅಲ್ಲ. ಯಂತ್ರಗಳ ಶಕ್ತಿಯಾದರೂ ಎಷ್ಟು? ಒಂದು ತಂತಿಯಲ್ಲಿ ವಿದ್ಯುತ್ತನ್ನು ಕಳುಹಿಸಬಲ್ಲವನೊಬ್ಬನನ್ನು ಬಹಳ ಬುದ್ದಿಶಾಲಿ, ಬಹಳ ಹಿರಿಮೆಯುಳ್ಳವ ಎಂದೇಕೆ ಪರಿಗಣಿಸಬೇಕು? ಪ್ರಕೃತಿ ಅದನ್ನು ಮಿಲಿಯಗಟ್ಟಲೆ ಪ್ರಮಾಣದಲ್ಲಿ ಪ್ರತಿ ಕ್ಷಣವೂ ಮಾಡುತ್ತಿಲ್ಲವೆ? ಹಾಗಾದರೆ ಪ್ರಕೃತಿಯೆದುರು ಮಂಡಿಯೂರಿ ಅದನ್ನು ಪೂಜಿಸಬಾರದೇಕೆ? ಇಡಿಯ ವಿಶ್ವದ ಮೇಲೂ, ವಿಶ್ವದಲ್ಲಿರುವ ಪ್ರತಿ ಪರಮಾಣುವಿನ ಮೇಲೂ ನಿಮಗೆ ಹತೋಟಿಯಿದ್ದರೆ ಸಹ ಏನಾದಂತಾಯಿತು? ನಿಮ್ಮನ್ನು ನೀವು ಗೆದ್ದ ಹೊರತು, ನಿಮ್ಮೊಳಗೆ ಸುಖದ ಶಕ್ತಿಕೇಂದ್ರ ಇದ್ದ ಹೊರತು, ಅದೇನೂ ನಿಮ್ಮನ್ನು ಸುಖಿಯನ್ನಾಗಿಸುವುದಿಲ್ಲ. ನಿಜ, ಮನುಷ್ಯ ಹುಟ್ಟಿರುವುದೇ ಪ್ರಕೃತಿಯನ್ನು ಗೆಲ್ಲುವುದಕ್ಕೆ; ಆದರೆ ಪಾಶ್ಚಾತ್ಯರಿಗೆ ಪ್ರಕೃತಿ ಎಂದರೆ ಕೇವಲ ಭೌತ ಅಥವಾ ಬಾಹ್ಯ ಪ್ರಕೃತಿ. ನಿಜ, ಪರ್ವತಗಳು, ಸಾಗರಗಳು, ನದಿಗಳು ಮೊದಲಾದುವುಗಳಿಂದ ಕೂಡಿದ ಬಾಹ್ಯ ಪ್ರಕೃತಿ ತನ್ನ ಅನಂತ ಶಕ್ತಿಯಿಂದ, ವಿಭಿನ್ನತೆಯಿಂದ ವೈಭವಯುತವಾದದ್ದು; ಆದರೆ ಅದಕ್ಕಿಂತಲೂ ವೈಭವಯುತವಾದದ್ದು ಮಾನವನ ಆಂತರಿಕ ಪ್ರಕೃತಿ - ಇದು ನಮ್ಮ ಭೂಮಿಗಿಂತಲೂ, ಸೂರ್ಯಚಂದ್ರ ನಕ್ಷತ್ರಗಳಿಗಿಂತಲೂ, ಭೌತ ವಿಶ್ವಕ್ಕಿಂತಲೂ ದೊಡ್ಡದು, ನಮ್ಮ ಈ ಸಣ್ಣ ಬದುಕುಗಳಿಗಿಂತ ಅತೀತವಾದದ್ದು. ಅದು ನಮಗೆ ಅಧ್ಯಯನಕ್ಕಾಗಿ ಇನ್ನೊಂದೇ ಕ್ಷೇತ್ರವನ್ನು ತೆರೆಯುವುದು. ಆ ಕ್ಷೇತ್ರದಲ್ಲಿ ಪಾಶ್ಚಾತ್ಯರು ಪರಿಣತರಾಗಿರುವಂತೆಯೆ, ಈ ಆಂತರಿಕ ಪ್ರಕೃತಿಯ ಕ್ಷೇತ್ರದಲ್ಲಿ ಪೌರ್ವಾತ್ಯರು ಪರಿಣತರಾಗಿರುವರು. ಆದ್ದರಿಂದಲೇ ಆಧ್ಯಾತ್ಮಿಕ ಹೊಂದಾಣಿಕೆ ಆಗಬೇಕಾದಾಗ ಅದು ಪೂರ್ವದಿಂದ ಬರತಕ್ಕದ್ದು ಯೋಗ್ಯವಾಗಿಯೇ ಇದೆ. ಹಾಗೆಯೇ ಪೌರ್ವಾತ್ಯನು ಯಂತ್ರದ ತಯಾರಿಕೆಯನ್ನು ಕಲಿಯಬೇಕಾದಾಗ ಅವನು ಪಾಶ್ಚಾತ್ಯನ ಪಾದಮೂಲದಲ್ಲಿ ಕುಳಿತು ಅವನಿಂದ ಅದನ್ನು ಕಲಿಯುವುದೂ ಯೋಗ್ಯವಾಗಿದೆ. ಪಾಶ್ಚಾತ್ಯನು ದೇವರ ಬಗ್ಗೆ, ಆತ್ಮನ ಬಗ್ಗೆ, ವಿಶ್ವರಹಸ್ಯದ ಬಗ್ಗೆ ಕಲಿಯಬೇಕಾದಾಗ ಅವನು ಪೌರ್ವಾತ್ಯನ ಪಾದಮೂಲದಲ್ಲಿ ಕುಳಿತು ಕಲಿಯಬೇಕು.
'ಇಂಡಿಯಾದಲ್ಲಿ ಅಂಥದೊಂದು ಅಲೆಯನ್ನು ಚಾಲನೆಗೊಳಿಸಿದ ಒಬ್ಬನ ಜೀವನವನ್ನು ನಿಮ್ಮ ಮುಂದಿಡಲಿದ್ದೇನೆ.'
ಮುಂದೆ, ಶ್ರೀರಾಮಕೃಷ್ಣರ ಆಶ್ಚರ್ಯಕರ ಜೀವನವನ್ನು ವಿವರಿಸಿದ ನಂತರ, ಅವರು ಹೀಗೆ ಮುಗಿಸುತ್ತಾರೆ (ಅದೇ, ಪುಟ ೧೪೮-೧೪೯):
`ಆಧುನಿಕ ಪ್ರಪಂಚಕ್ಕೆ ಇದೇ ಶ್ರೀರಾಮಕೃಷ್ಣರ ಸಂದೇಶ: “ದೇವಾಲಯಗಳಿಗೆ, ಚರ್ಚುಗಳಿಗೆ, ಪಂಗಡಗಳಿಗೆ, ಮತಗಳಿಗೆ, ಸಿದ್ಧಾಂತಗಳಿಗೆ ಗಮನವೀಯದಿರಿ; ಪ್ರತಿಯೊಬ್ಬ ಮನುಷ್ಯನಲ್ಲಿರುವ ಆಧ್ಯಾತ್ಮಿಕ ಅಸ್ತಿತ್ವದ ಸಾರಕ್ಕೆ ಹೋಲಿಸಿದರೆ ಅವುಗಳೆಲ್ಲ ಲೆಕ್ಕಕ್ಕೆ ಬಾರದಷ್ಟು ಅಲ್ಪವಾದುವು; ಮನುಷ್ಯನಲ್ಲಿರುವ ಇದನ್ನು ಎಷ್ಟೆಷ್ಟು ಅಭಿವೃದ್ಧಿಪಡಿಸುವಿರೋ ಅಷ್ಟಷ್ಟು ಅವನು ಶಕ್ತಿವಂತನಾಗುವನು, ಅಲ್ಲದೆ ಶಕ್ತಿಯನ್ನು ಉಳಿಸಿಕೊಳ್ಳುವನು. ಅದನ್ನು ಮೊದಲು ಗಳಿಸಿ, ಸಂಪಾದಿಸಿ; ಯಾರನ್ನೂ ಟೀಕಿಸದಿರಿ, ಏಕೆಂದರೆ ಎಲ್ಲ ಮತಗಳಲ್ಲೂ ಏನಾದರೊಂದು ಒಳ್ಳೆಯದು ಇದ್ದೇ ಇರುವುದು. ಧರ್ಮವೆಂದರೆ ಶಬ್ದಗಳಲ್ಲ, ಹೆಸರುಗಳಲ್ಲ, ಪಂಗಡಗಳಲ್ಲ, ಕೇವಲ ಆಧ್ಯಾತ್ಮಿಕ ಸಾಕ್ಷಾತ್ಕಾರ ಎಂಬುದನ್ನು ನಿಮ್ಮ ಜೀವನದಲ್ಲಿಯೇ ತೋರಿಸಿ, ಯಾರು ಪರಿಭಾವಿಸಿರುವರೋ ಅವರಿಗೆ ಮಾತ್ರ ಅರ್ಥವಾಗುವುದು. ಯಾರಿಗೆ ಆಧ್ಯಾತ್ಮಿಕತೆ ಲಭಿಸಿದೆಯೋ ಅವರು ಇತರರೊಡನೆ ಸಂವಹನ ಮಾಡಬಲ್ಲರು, ಮಾನವಕೋಟಿಗೆ ಮಹಾಚಾರ್ಯರಾಗಬಲ್ಲರು. ಕೇವಲ ಅವರು ಮಾತ್ರ ಜ್ಯೋತಿಶಕ್ತಿಗಳು.”
'ಒಂದು ದೇಶದಲ್ಲಿ ಅಂಥ ವ್ಯಕ್ತಿಗಳು ಹೆಚ್ಚಾದಷ್ಟೂ ದೇಶವು ಉನ್ನತಿಗೇರುತ್ತದೆ; ಯಾವ ದೇಶದಲ್ಲಿ ಅಂಥ ವ್ಯಕ್ತಿಗಳಿಲ್ಲವೇ ಇಲ್ಲವೋ ಆ ದೇಶದ ಅವನತಿಯನ್ನು ಯಾರೂ ತಪ್ಪಿಸಲಾರರು. ಆದ್ದರಿಂದ ಮಾನವಕೋಟಿಗೆ ನನ್ನ ಗುರುದೇವನ ಸಂದೇಶವಿದು: “ಆಧ್ಯಾತ್ಮಿಕವಾಗಿ ಬೆಳೆಯಿರಿ ಮತ್ತು ಸತ್ಯವನ್ನು ನೀವೇ ಸಾಕ್ಷಾತ್ಕರಿಸಿಕೊಳ್ಳಿ”. ನಿರೀಕ್ಷಿಸಬಹುದಾದದ್ದು ನಿಮ್ಮ ಸಹಮಾನವರಿಗಾಗಿ ನೀವು ತ್ಯಾಗಮಾಡುವುದು, ನಿಮ್ಮ ಸಹೋದರರಿಗಾಗಿ ಪ್ರೇಮದ ಮಾತನಾಡುವುದನ್ನು ಬಿಟ್ಟು ಆ ಪ್ರೇಮವನ್ನು ನಿಮ್ಮ ಕೃತಿಯಲ್ಲಿ ತೋರಿಸುವುದು. ತ್ಯಾಗದ, ಸಾಕ್ಷಾತ್ಕಾರದ ಕಾಲ ಸನ್ನಿಹಿತವಾಗಿದೆ; ಲೋಕದ ಎಲ್ಲಾ ಧರ್ಮಗಳ ಸಾಮರಸ್ಯವನ್ನು ನೀವು ನೋಡುವಿರಿ. ಯಾವ ಜಗಳದ ಅವಶ್ಯಕತೆಯೂ ಇಲ್ಲ ಎಂಬುದನ್ನು ತಿಳಿದು, ಅನಂತರ ಮಾನವಕೋಟಿಗೆ ಸಹಾಯವೀಯಲು ಸಿದ್ಧರಾಗುವಿರಿ.’
‘ಎಲ್ಲಾ ಧರ್ಮಗಳ ಮೂಲಭೂತ ಐಕ್ಯವನ್ನು ಘೋಷಿಸಿ ವಿಶದಪಡಿಸುವುದೇ ನನ್ನ ಗುರುದೇವರ ಧೈಯವಾಗಿದ್ದಿತು. ತಮ್ಮ ಹೆಸರುಗಳಿಂದ ಪ್ರಸಿದ್ಧವಾಗಿರುವ ಧರ್ಮಗಳನ್ನು ಇತರ ಅನೇಕರು ಬೋಧಿಸಿರುವರು; ಆದರೆ ಈ ಹತ್ತೊಂಭತ್ತನೆಯ ಶತಮಾನದ ಮಹಾಬೋಧಕನು ತನಗಾಗಿ ಯಾವ ಹಕ್ಕನ್ನೂ ಮಂಡಿಸಲಿಲ್ಲ. ಸತ್ಯವಾಗಿ ಎಲ್ಲ ಧರ್ಮಗಳೂ ಒಂದೇ ಸನಾತನ ಧರ್ಮದ ಭಾಗಗಳೆಂಬುದೇ ಅವರ ಅನುಭವವಾಗಿದ್ದುದರಿಂದ, ಯಾವ ಧರ್ಮವನ್ನೂ ಅವರು ಕ್ಷೋಭೆಗೊಳಿಸಲು ಹೋಗಲಿಲ್ಲ.
ಶ್ರುತಿ ಸ್ಮೃತಿ ಗಳೆಂಬ ಭಾರತದ ಕಲ್ಪನೆ
ಉಪನಿಷತ್ತುಗಳಂತಹ ಪ್ರಾಚೀನ ಪುಸ್ತಕಗಳನ್ನು ಓದಿದಾಗ, ಆಧುನಿಕ ಕಾಲದಲ್ಲಿನ ಮಹಾಪುರುಷರ ಚಿಂತನೆಗಳೊಡನೆ ಅವು ಸಮನ್ವಯವಾಗುವುವು ಎಂಬುದು ನಿಮಗೆ ತಿಳಿಯುವುದು. ಅವುಗಳಲ್ಲಿ ಚಾರಿತ್ರಿಕ ಅವಿಚ್ಛಿನ್ನತೆ ಇರುವುದು. ಪ್ರಾಚೀನ ಹೊಂದಾಣಿಕೆಯೇ ಇಂದು ಆಧುನಿಕ ಪರಿಸ್ಥಿತಿಯಲ್ಲಿ ನವೀನ ಹೊಂದಾಣಿಕೆಯಾಗಿರುವುದು. ಇದನ್ನೇ ಭಾರತವು ಪುನಃ ಪುನಃ ಬೋಧಿಸಿರುವುದು. ಪರಿಸ್ಥಿತಿಗಳು ಬದಲಾಯಿಸಿದ ಹಾಗೆ, ಪ್ರಾಚೀನ ಸತ್ಯವನ್ನು ಅಭಿವ್ಯಕ್ತಿಸಲು ಹೊಸ ಸೂತ್ರ ಬೇಕಾಗುತ್ತದೆ. ಸತ್ಯವಿರುವುದು ಹಾಗೆಯೇ; ಬದಲಾಯಿಸುವುದು ರೂಪಾಲಂಕಾರ ಮಾತ್ರ. ಅವಿಚ್ಛಿನ್ನವಾಗಿ ಇಳಿದು ಬಂದಿರುವ ನಮ್ಮ ಪ್ರಾಚೀನ ಸಂಪ್ರದಾಯದಿಂದ ನಮಗೆ ತಿಳಿಯುವುದು ಇದೇ. ಶ್ರುತಿ ಸ್ಮೃತಿ ಎಂಬೆರಡು ಶಬ್ದಗಳಿವೆ. ಶ್ರುತಿ ಎಂದರೆ ವೇದಗಳು, ಅದರಲ್ಲೂ ನಿತ್ಯಸತ್ಯತೆಗಳನ್ನು ಕುರಿತಾದ ಉಪನಿಷತ್ತುಗಳೆಂಬ ಭಾಗಗಳು; ಸ್ಮೃತಿಗಳೆಂದರೆ ಆಯಾ ಕಾಲದ ಸಾಮಾಜಿಕ ನೀತಿ ನಿಯಮಗಳು. ಶ್ರುತಿಗೆ ಅಧೀನವಾದದ್ದು ಸ್ಮೃತಿ, ಭಾರತೀಯ ಸಂಪ್ರದಾಯವು ಇದನ್ನು ಒತ್ತಿ ಹೇಳುತ್ತದೆ: “ಶ್ರುತಿ-ಸ್ಮೃತಿವಿರೋಧೇ ತು ಶ್ರುತಿರೇವ ಗರೀಯಸೀ” - 'ಶ್ರುತಿ ಸ್ಮೃತಿಗಳ ನಡುವೆ ವಿರೋಧಾಭಾಸ ಉಂಟಾದಾಗ ಶ್ರುತಿಯೇ ಹೆಚ್ಚು ವಿಧಾಯಕವಾಗುತ್ತದೆ.’ ಶ್ರುತಿ ನಿತ್ಯವಾದದ್ದು. ನೀವು ಸನಾತನ ಧರ್ಮವೆಂದು ಕರೆಯುವುದು ಶ್ರುತಿಯನ್ನೇ - ಮನುಷ್ಯನ ಸ್ವಭಾವ, ದೇವರೆಂದರೇನು, ಆಧ್ಯಾತ್ಮಿಕ ಸಾಕ್ಷಾತ್ಕಾರವನ್ನು ಸಾಧಿಸುವುದು ಹೇಗೆ, ಇವೆಲ್ಲ ನಿತ್ಯಸತ್ಯಗಳು, ಅವು ನಮಗೆ, ಅಮೆರಿಕನ್ನರಿಗೆ, ಎಲ್ಲರಿಗೂ ಸತ್ಯಗಳೇ; ಸಾರ್ವತ್ರಿಕವಾದುವುಗಳು. ವೈಜ್ಞಾನಿಕ ಸತ್ಯಗಳು ಸಾರ್ವತ್ರಿಕವಾಗಿರುವಂತೆಯೇ ಶ್ರುತಿಯ ಸತ್ಯಗಳೂ ಸಹ - ಏಕೆಂದರೆ ಅವು ತನ್ನ ಆಳದಲ್ಲಿ ತಾನು ಮುಳುಗಿದ ಮನುಷ್ಯನ ವಿಜ್ಞಾನದ ಫಲಿತಗಳು, ಮಾನವ ಸಾಧ್ಯತೆಗಳ ವಿಜ್ಞಾನದ ಫಲಿತಗಳು, ಆದಕಾರಣವೆ ಅದನ್ನು ಸನಾತನ ಧರ್ಮ ಎಂದು ಕರೆಯುವುದು. ಭಗವಾನ್ ಬುದ್ಧನು ತನ್ನ ಬೋಧನೆಗಳಲ್ಲಿ ಇದನ್ನೇ ಹೇಳುತ್ತಾನೆ – “ಏಷ ಧರ್ಮಃ ಸನಾತನಃ” - 'ಈ ಧರ್ಮ ನಿತ್ಯವಾದದ್ದು.' ಅದರೊಂದಿಗೆ ಬರುವುದು ಯುಗ ಧರ್ಮ - ಒಂದು ಯುಗದ ಅಥವಾ ಅವಧಿಗೆ, ಚರಿತ್ರೆಯ ಒಂದು ಕಾಲಕ್ಕೆ, ಜನರ ಒಂದು ಗುಂಪಿಗೆ, ಸಂಬಂಧಿಸಿದ ಧರ್ಮ, ಇದನ್ನೇ ಸ್ಮೃತಿ ಎನ್ನುವುದು.
ಸ್ಮೃತಿಗಳು ಬರುತ್ತವೆ, ಹೋಗುತ್ತವೆ. ಎಷ್ಟೊಂದು ಸ್ಮೃತಿಗಳನ್ನು ಭಾರತದಲ್ಲಿ
ಜಾರಿಗೆ ತಂದು ನಂತರ ಕೈ ಬಿಟ್ಟಿಲ್ಲ? ಇಂದು ನಮ್ಮ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಸಂವಿಧಾನದ ವಿರುದ್ಧವೆನಿಸಬಹುದಾದ ಎಲ್ಲಾ ಹಳೆಯ ಸ್ಮೃತಿಗಳನ್ನೂ ಕೈಬಿಡಲಾಗಿದೆ. ಹಳೆಯ ಸ್ಮೃತಿಗಳನ್ನು ಬದಲಾಯಿಸಿ ಕಾಲಕ್ಕೆ ತಕ್ಕಹಾಗೆ ಹೊಸವನ್ನು ಬೆಳೆಸುವ ಧೈರ್ಯ ನಮ್ಮ ಜನರಿಗಿದೆ. ಇದೊಂದು ಭಾರತದಲ್ಲಿನ ಅದ್ಭುತ ವಿಚಾರ - ಸಾಮಾಜಿಕ ಬದಲಾವಣೆ, ಶಾಶ್ವತವಾದ ಬೋಧನೆಗಳನ್ನೂ ಬದಲಾದ ಪರಿಸ್ಥಿತಿಗನುಗುಣವಾಗಿ ರೂಪಪರಿವರ್ತನೆ ಮಾಡಲಾಗುವುದು; ಇದನ್ನು ಮಾಡಲು ಆಧ್ಯಾತ್ಮಿಕ ಜ್ಞಾನ ಹಾಗೂ ಅಧಿಕಾರ ಉಳ್ಳ ಮಹಾಚಾರ್ಯರು ಅಗತ್ಯ. ಈ ಅಧಿಕಾರ ಪೋಪ್ ಬಿಷಪ್‌ಗಳಂಥ ಯಾವುದೋ ಸಾಂಪ್ರದಾಯಿಕ ಮಠದ ಗುರುಸ್ಥಾನದಿಂದ ಬರುವುದಲ್ಲ; ಅದು ಆಧ್ಯಾತ್ಮಿಕ ಸಾಕ್ಷಾತ್ಕಾರದಿಂದ, ಆಚಾರ್ಯನ ಹೃದಯದಲ್ಲಿರುವ ಅನಂತ ಅನುಕಂಪದಿಂದ ಬರತಕ್ಕುದು. ಹಾಗೆ ಹೊಸ ಸ್ಮೃತಿಗಳು ಹುಟ್ಟುವುವು. ಭಾರತವು ಈ ಆದರ್ಶಕ್ಕೆ ಅಂಟಿಕೊಂಡಿರುವುದರ ಫಲವಾಗಿ, ವೇದಗಳ ಕಾಲದಿಂದ ಇಂದಿನ ಕಾಲದ ವರೆಗೂ ನಮ್ಮ ದೇಶದಲ್ಲಿ, ಧರ್ಮದಲ್ಲಿ, ಸಮಾಜದಲ್ಲಿ ಅನೇಕಾನೇಕ ಬದಲಾವಣೆಗಳಾಗಿದ್ದರೂ, ನಾವು ಹಾಗೆಯೇ ಉಳಿದಿದ್ದೇವೆ. ನಾವು ಬದಲಾಗುತ್ತಿರುವ ಮಧ್ಯದಲ್ಲೇ ಸನಾತನರು, ಅದೇ ಸನಾತನ ಧರ್ಮವೆಂಬುದರ ಅರ್ಥ.
ಪ್ರೊಫೆಸರ್ ಬ್ರಜೇಂದ್ರನಾಥ ಸೀಲ್‌ರವರು ವಿವೇಕಾನಂದರ ಕಾಲೇಜು ಸಹಪಾಠಿ; ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿಯಾಗಿದ್ದ ಅವರು ಮಹಾ ಬುದ್ಧಿಶಾಲಿ. ಅವರು, 'ಭಾರತಕ್ಕೆ ನಿತ್ಯವೂ ವಯಸ್ಸಾಗುತ್ತಿದೆ; ಆದರೆ ಅದು ಮುದಿಯಾಗುವುದಿಲ್ಲ' ಎಂದಿದ್ದಾರೆ. ಇದಕ್ಕೆ ಕಾರಣ ಆಯಾ ಕಾಲಕ್ಕೆ ತಕ್ಕಂತೆ ಮಾಡಿಕೊಳ್ಳಲಾಗುವ ಹೊಂದಾಣಿಕೆ. ಹೊಸ ರಂಗಸಜ್ಜಿಕೆಯಲ್ಲಿ ಆಕಾರ ತಳೆಯುತ್ತಿರುವ ಇದು, ಬದಲಾವಣೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಲೇ ಇರುವ ಅದೇ ಪ್ರಾಚೀನ ಭಾರತ. ಸತ್ತಿರುವ ಮರದ ಭಾಗವನ್ನು ಕತ್ತರಿಸಿ ಹಾಕಲಾಗುತ್ತಿದೆ; ಸ್ಮೃತಿಯನ್ನು ಶಾಂತವಾಗಿ ಬದಲಾಯಿಸುವ ಈ ಧೈರ್ಯ ಹಿಂದೂ ಸಮಾಜಕ್ಕೆ ತಲೆತಲಾಂತರದಿಂದ ಬಂದಿರುವುದು. ಬೇರಾವ ಧರ್ಮವೂ ಈ ಧೈರ್ಯವನ್ನು ತೋರಿಸಿಲ್ಲ. ಇತರ ಧರ್ಮಗಳಲ್ಲಿ, ಸ್ಮೃತಿಗಳೇ ಸರ್ವಸ್ವ; ಅವನ್ನು ಮುಟ್ಟಲಾಗದು; ಯಾರಾದರೂ ಅವನ್ನು ಬದಲಾಯಿಸಿ ಸುಧಾರಣೆ ಮಾಡಲು ಯತ್ನಿಸಿದರೆ, ಅವನನ್ನು ಬೆನ್ನು ಹತ್ತಿ ಕಿರುಕುಳ ಕೊಟ್ಟು ಕೊಲ್ಲುವರು. ಆದರೆ ನಾವು, 'ಹಳೆಯ ಕಾಲದ ಆ ಸ್ಮೃತಿಯನ್ನು ಈ ಕಾಲಕ್ಕೆ ಹೊಂದುವಂತೆ ಬದಲಿಸಿ' ಎನ್ನುತ್ತೇವೆ. 'ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಯಲ್ಲಿ ಮೊಘಲ್ ಕಾಲದ ನಾಣ್ಯಗಳು ನಡೆಯುವುದಿಲ್ಲ' ಎಂದು ಶ್ರೀರಾಮಕೃಷ್ಣರೇ ಹೇಳಿದ್ದಾರೆ. ಹಾಗೆಂದರೆ ಹಳೆಯ ಸ್ಮೃತಿಗಳು ಇಂದಿನ ಕಾಲಕ್ಕೆ ಹೊಂದುವುದಿಲ್ಲ ಎಂದು. ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಯಲ್ಲಿ ಹೊಸ ನಾಣ್ಯ ಬೇಕಾದ ಹಾಗೆಯೇ ಇಂದು ಭಾರತ ಗಣರಾಜ್ಯದಲ್ಲಿ ಇನ್ನೊಂದು ಅಗತ್ಯ. ನೂರು ವರ್ಷಗಳ ಕೆಳಗೆ ಸಮುದ್ರ ದಾಟಿ ಬೇರೆ ದೇಶಗಳಿಗೆ ಹೋದವನನ್ನು ಭಾರತದಲ್ಲಿ ಸಮಾಜದಿಂದಲೇ ಹೊರಗೆ ಹಾಕುತ್ತಿದ್ದರು; ಈಗ ಯಾರು ಅದಕ್ಕೆ ಗಮನ ಕೊಡುವರು?
ನಮ್ಮ ಧರ್ಮವನ್ನು ಶುದ್ಧಿಗೊಳಿಸಿ ನಮ್ಮ ಸಮಾಜದ ಆರೋಗ್ಯವನ್ನು ಉತ್ತಮ ಪಡಿಸುವ ಅನೇಕ ಬದಲಾವಣೆಗಳಾಗಿವೆ. ಆದರೆ ಶ್ರುತಿ, ನಿತ್ಯ ಸತ್ಯ, ಮಾನವನ ಆಧ್ಯಾತ್ಮಿಕ ಸ್ವಭಾವ, ಈ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವ ಉದ್ದೇಶವುಳ್ಳ ಜೀವನದ ಪಯಣ - ಇವುಗಳನ್ನು ಮರೆಯುವಂತಿಲ್ಲ. ಇದೇ ಸನಾತನ ಧರ್ಮ. ಇದಕ್ಕೆ ಒತ್ತು ಕೊಡುವುದೇ ಅವತಾರಪುರುಷನ ದೊಡ್ಡ ಕೆಲಸ. ಒಬ್ಬ ಸಾಮಾಜಿಕ ಕಾರ್ಯಕರ್ತ ಬರುತ್ತಾನೆ, ಏನನ್ನೋ ಹೇಳಿ ಸ್ವಲ್ಪ ಸಮಾಜಸುಧಾರಣೆಯನ್ನು ಮಾಡುತ್ತಾನೆ. ಆದರೆ ಒಬ್ಬ ಅವತಾರನು ಸಮಾಜವನ್ನು ಅಲುಗಾಡಿಸಲು ಹೋಗುವುದೇ ಇಲ್ಲ. ಬದಲಿಗೆ ಸಮಾಜಕ್ಕೊಂದು ಹೊಸ ಮೌಲ್ಯ ಸಂಹಿತೆಯನ್ನು ಕೊಡುತ್ತಾನೆ. ಅದರಿಂದಾಗಿ ನಮಗೆ ಒಳಿತು ಕೆಡುಕುಗಳು ತಿಳಿಯುತ್ತವೆ; ಪರಿಣಾಮಕಾರಿ ಸುಧಾರಣೆಗಳು ಆಗುತ್ತವೆ; ಅದರಂತೆ ಮೌನವಾಗಿ ನಾವು ಬದಲಾಯಿಸುತ್ತೇವೆ. ಸಮಾಜದ ಮೇಲೆ ಈ ಆಧ್ಯಾತ್ಮಿಕ ವಿಧಾನ ಮೌನವಾಗಿ, ಮೃದುವಾಗಿ ಕೆಲಸ ಮಾಡುತ್ತದೆ. ಎಂಥ ಅದ್ಭುತ ಪರಿಕಲ್ಪನೆ! ನಮಗೆ ಅವತಾರನು ಬಂದದ್ದೂ ಹೋದದ್ದೂ ಗೊತ್ತಾಗುವುದೇ ಇಲ್ಲ. ಆದರೆ ಅವನು ಅಚ್ಚರಿಯೆಂಬಂತಹ ಶಕ್ತಿಯನ್ನು ಬಿಟ್ಟು ಹೋಗಿರುತ್ತಾನೆ. ಕೆಲವು ದಿನಗಳ ಹಿಂದೆ ನನಗೆ ಬಲ್ಗೇರಿಯಾದ ಸೋಫಿಯಾ ಎಂಬುವಳಿಂದ ಪತ್ರವೊಂದು ಬಂದಿತು. ಅಲೆಕ್ಸಾಂಡರ್ ಎಂಬುವನಿಂದ ಇನ್ನೊಂದು; ಅವನು ಬರೆಯುತ್ತಾನೆ: 'ನಾನೂ ನನ್ನ ಹೆಂಡತಿಯೂ ಶ್ರೀರಾಮಕೃಷ್ಣ ವಚನವೇದವನ್ನು ಓದಿದೆವು. ನನಗೆ ಮೂವತ್ತು ವರ್ಷ, ನನ್ನ ಹೆಂಡತಿ ತಾಂಥಿಯಗೆ ಇಪ್ಪತ್ತಮೂರು. ಆ ಗ್ರಂಥ ಅದ್ಭುತವಾಗಿದೆ. ನಮಗೆ ರಾಮಕೃಷ್ಣ ವಿವೇಕಾನಂದರ ಬಗ್ಗೆ ಏನೂ ಗೊತ್ತಿಲ್ಲ. ನೀವು ನಮಗೆ ಮಾಹಿತಿ ಕೊಡಬೇಕು. ನಾನು ಬೆಂಗಳೂರಿನ ಖ್ಯಾತ ಸಿನಿಮಾ ನಟಿ ದೇವಿಕಾರಾಣಿಗೆ ಕಾಗದ ಬರೆದೆ. ಅವಳು ಹೈದರಾಬಾದಿನಲ್ಲಿರುವ ಸ್ವಾಮೀಜಿಯವರಿಗೆ ಬರೆಯಲು ನನಗೆ ತಿಳಿಸಿದಳು'. ರಾಮಕೃಷ್ಣರ ಮೇಲೆ, ವಿವೇಕಾನಂದರ ಮೇಲೆ, ಹೆಚ್ಚು ತಿಳಿದುಕೊಳ್ಳಬೇಕೆಂದು ಈ ಮನುಷ್ಯ ಬರೆಯುತ್ತಾನೆ. ಈ ಸ್ಫೂರ್ತಿಯನ್ನು ಪಡೆಯಲು ಅವರೆಷ್ಟು ಕಾತುರರು! ಕೆಲವು ಪುಸ್ತಕಗಳನ್ನು ಕಳುಹಿಸಿಕೊಡುತ್ತೇನೆ ಎಂದು ನಾನು ಅವನಿಗೆ ಬರೆದೆ. ಅನಂತರ ಅವರಿಗೆ ಪುಸ್ತಕ ಕಳುಹಿಸಿಕೊಡುವಂತೆ ಪಶ್ಚಿಮ ಬರ್ಲಿನ್‌ನಲ್ಲಿರುವ ಒಬ್ಬರಿಗೆ ಬರೆದೆ. ಶ್ರೀರಾಮಕೃಷ್ಣರಂತಹ ಮಹಾ ಪ್ರಬೋಧಕರು ಸದ್ದಿಲ್ಲದೆ ನಿಮ್ಮ ಜೀವನವನ್ನು ಪ್ರವೇಶಿಸುತ್ತಾರೆ; ಮೌನವಾಗಿ ನಿಮ್ಮೊಳಗೆ ಬದಲಾವಣೆಯನ್ನು ತರುತ್ತಾರೆ. ಅವತಾರನು ಬಂದಾಗ ಹೀಗಾಗುವುದು ಸಾಧ್ಯ. ಅವತಾರನು ಸಮಾಜದಲ್ಲಿ ಕೆಲಸಮಾಡಿ ಹೇಗೆ ಜನರನ್ನು ಅವರವರ ಆಧ್ಯಾತ್ಮಿಕ ಅಭಿವೃದ್ಧಿಯ ಹಾದಿಯಲ್ಲಿರಿಸಿ ಸದ್ದಿಲ್ಲದೆ ಪರಿವರ್ತನೆಯನ್ನು ತರುತ್ತಾನೆ ಎಂಬ ಕಲ್ಪನೆಯನ್ನು ಶಂಕರಾಚಾರ್ಯರು ಕೆಲವು ವಾಕ್ಯಗಳಲ್ಲಿ ವಿವರಿಸುತ್ತಾರೆ. ಅವನ್ನು ನಾವು ಅಧ್ಯಯನ ಮಾಡೋಣ.
ಶಂಕರಾಚಾರ್ಯರು ಬರೆದ ಗೀತಾಭಾಷ್ಯದ ಮುನ್ನುಡಿಯನ್ನು ಓದುವಾಗ ನಾವು ಎರಡು ಅಭಿಪ್ರಾಯಗಳನ್ನು ನೋಡಿದೆವು. ಒಂದು, ಜನಗಳ ಧೋರಣೆಯಲ್ಲಿ ಬದಲಾವಣೆ ಆಗುವುದರಿಂದ ಕಾಲಕ್ರಮೇಣ ಸಮಾಜ ಅವನತಮುಖವಾಗುತ್ತದೆ. ಅತಿಯಾದ ಕಾಮ ಕ್ರೋಧಾದಿ ದುರ್ಗುಣಗಳು ತಲೆದೋರಿ ಸಮಾಜದ ನೈತಿಕ ಸಮತೋಲವನ್ನು ಅಲ್ಲಾಡಿಸುತ್ತವೆ. ಶಂಕರಾಚಾರ್ಯರು ಹೇಳುವಂತೆ ಧರ್ಮ ಖಿಲವಾಗಿ ಅಧರ್ಮ ತಲೆಯೆತ್ತುತ್ತದೆ. ಅನಂತರ ಇಂದ್ರಿಯಗಳ ಆಕರ್ಷಣೆಯಿಂದ, ಅನಿಯಂತ್ರಿತ ಆಸೆಗಳಿಂದ ಅವನತಿ ಪ್ರಾರಂಭವಾಗುತ್ತದೆ; ಫಲಿತಾಂಶವಾಗಿ ವಿವೇಕ ವಿಜ್ಞಾನಗಳು ನಾಶವಾಗುತ್ತವೆ. ವಿವೇಕವೆಂದರೆ ಏನನ್ನು ಮಾಡಬೇಕು ಏನನ್ನು ಮಾಡಬಾರದು ಎಂಬುದನ್ನು ನಿರ್ಣಯಿಸುವ ಸಾಮರ್ಥ್ಯ. ಎಲ್ಲಿ ನಾವು ಯಾವುದಕ್ಕಾದರೂ ಅಂಟಿಕೊಂಡಿರುವೆವೋ ಅಲ್ಲಿ ನಮ್ಮ ವಿವೇಕ ತತ್ತರಿಸುತ್ತದೆ. ಇದರ ಜೊತೆಗೆ ವಿಜ್ಞಾನ, ಅಂದರೆ ಸರಿಯಾದ ತಿಳುವಳಿಕೆ ಸಹಾ ಅಲ್ಲಾಡಿಹೋಗುತ್ತದೆ. ಯಾವಾಗ ಒಬ್ಬನು ಇಂದ್ರಿಯಗಳ ಹಸಿವನ್ನು ನಿಯಂತ್ರಿಸಿಕೊಳ್ಳಲಾರನೋ ಆಗ ಮನಸ್ಸಿಗೆ ಏನೋ ಆಗಿಬಿಡುತ್ತದೆ. ಕಠೋಪನಿಷತ್ತು ಹೇಳುವಂತೆ, ಸವಾರನನ್ನು ಅಸಹಾಯಕನನ್ನಾಗಿಸಿ ರಥವನ್ನು ಸಿಕ್ಕಾಪಟ್ಟೆ ಓಡಿಸಿಕೊಂಡುಹೋಗುವ ಕುದುರೆಗಳಂತೆ ಇಂದ್ರಿಯಗಳು ಓಡುತ್ತವೆ. ಅವನತಮುಖವಾದ ಸಮಾಜದ ಹಾಗೂ ಜನರ ಅವಸ್ಥೆ ಇದು. ಧರ್ಮ ಗ್ಲಾನಿಯಾದಾಗ, ಅಧರ್ಮ ತಂತಾನೆ ಹೆಚ್ಚುತ್ತದೆ. ಮಾನವ ಸಮಾಜದಲ್ಲಿ ನೈತಿಕತೆ ಕಡಿಮೆಯಾದಾಗ, ಅನೈತಿಕತೆ ಹೆಚ್ಚುತ್ತದೆ.
ಮಾನವ ವಿಕಾಸದ ಪ್ರಗತಿಯಲ್ಲಿ ದೇವರ ಅವತಾರದ ಪಾತ್ರ
ಇಂಥ ಒಂದು ಸನ್ನಿವೇಶ ಒದಗಿದಾಗ, ಸಾಮಾನ್ಯ ಮಾನವ ವಿವೇಚನೆಯಿಂದ ಸಮತೋಲವನ್ನು ಕಾಪಾಡಿಕೊಳ್ಳುವುದು ಅಸಾಧ್ಯವೆನಿಸಿದಾಗ, ಭೂಮಿಯಲ್ಲಿ ದೇವರ ಅವತರಣ ಆಗುತ್ತದೆ, ಅವನ ಬೋಧನೆಯಿಂದ ಸಮಾಜ ಹೊಸ ಸಮತೋಲವನ್ನು ಸಾಧಿಸುತ್ತದೆ, ಮೌಲ್ಯಗಳ ಹೊಸ ಅರ್ಥೈಸುವಿಕೆ ನಡೆಯುತ್ತದೆ, ಧರ್ಮ ಉದ್ಧಾರವಾಗಿ ಆಧರ್ಮ ನಾಶವಾಗು ತ್ತದೆ, ಎಂಬುದು ಭಾರತೀಯರಾದ ನಮ್ಮ ಭದ್ರವಾದ ನಂಬಿಕೆ. ಪುನಃ ಪುನಃ ಕಾಣಿಸಿಕೊಳ್ಳುವ ಅನೇಕ ಸಮಸ್ಯೆಗಳ ಹೊರತಾಗಿಯೂ, ಕಳೆದ ಐದು ಸಾವಿರ ವರ್ಷಗಳಿಂದ ನಾವು ಒಂದು ಜನಾಂಗವಾಗಿ ಉಳಿದಿರುವುದಕ್ಕೆ ಇದೇ ಕಾರಣ. ಬುದ್ಧ ಹುಟ್ಟುವುದಕ್ಕಿಂತ ಮುಂಚೆ ಬೌದ್ಧಿಕತೆ ಬೇಕಾದಹಾಗಿತ್ತು, ಅರ್ಥಹೀನ ದೇಹಶೋಷಣೆಯ ತಪಸ್ಸಿತ್ತು; ಜನಸಾಮಾನ್ಯರು ವಿಧವಿಧವಾದ ಮೂಢನಂಬಿಕೆಗಳೊಡನೆ ಮನೋದೌರ್ಬಲ್ಯಗಳೊಡನೆ ಬದುಕಿದ್ದರು. ಆಗ ಕ್ರಿ. ಪೂ. ೭ ಅಥವಾ ೬ ನೆಯ ಶತಮಾನದಲ್ಲಿ ಬುದ್ಧನ ಅವತರಣವಾಯಿತು. ಅವನು ಯಾವ ಸಮಾಜ ಸುಧಾರಣೆಯ ಕಾರ್ಯಕ್ರಮವನ್ನೂ ಪ್ರಾರಂಭಿಸಲಿಲ್ಲ; ಬದಲಿಗೆ ಕೇವಲ ಮಾನವರಲ್ಲಿರುವ ಆಧ್ಯಾತ್ಮಿಕತೆ ಚೇತರಿಸುವಂತೆ ಮಾಡಿದ. ಫಲಿತಾಂಶವಾಗಿ ಜನರು ಪುನಃ ಪ್ರಾಮಾಣಿಕರಾಗಿ ಘನತೆಯನ್ನು ಬೆಳೆಸಿಕೊಂಡರು; ಅನುಕಂಪ ಸೇವಾಮನೋಭಾವಗಳನ್ನೂ ಬೆಳೆಸಿಕೊಂಡರು. ಮಾನವ ಆಧ್ಯಾತ್ಮಿಕವಾಗಿ ಎಚ್ಚರಗೊಂಡ ಪರಿಣಾಮವಿದು. ಮಹಾಪುರುಷರು ಕೆಲಸ ಮಾಡುವ ರೀತಿ ಇದು; ಅವರ ಸ್ಫೂರ್ತಿಯ ಪರಿಣಾಮವಾಗಿ ದೊಡ್ಡ ಸಮಾಜ ಸುಧಾರಣೆಯ ಪ್ರಯತ್ನಗಳು ನಡೆಯುತ್ತವೆ. ಇದು ಮರದ ಎಲೆ ಕೊಂಬೆರೆಂಬೆಗಳಿಗೆ ನೀರುಣಿಸುವ ಬದಲು ಮರದ ಆಳದ ಬೇರಿಗೆ ನೀರುಣಿಸುವಂತೆ.
ಈ ಮಹಾಪುರುಷರು ಸುಧಾರಣಾ ಪ್ರಯತ್ನಗಳನ್ನು ಆರಂಭಿಸುವುದಿಲ್ಲವೇಕೆಂದರೆ, ಮನುಷ್ಯಸಮಾಜದ ಮೂಲಭೂತ ಕಷ್ಟಗಳಿಗೆ ಅವು ಸ್ಪಂದಿಸದೇ ಇರುವುದು. ಉದಾಹರಣೆಗೆ ಶ್ರೀರಾಮಕೃಷ್ಣರನ್ನು ತೆಗೆದುಕೊಳ್ಳೋಣ. ಅವರು ಯಾವ ಸುಧಾರಣೆಯ ಆಂದೋಳನವನ್ನು ಆರಂಭಿಸದಿದ್ದರೂ, ಅವರ ಸ್ಫೂರ್ತಿಯಿಂದ ಬೇಕಾದಷ್ಟು ಸುಧಾರಣಾ ಕಾರ್ಯಕ್ರಮಗಳು ಹುಟ್ಟಿಕೊಳ್ಳುತ್ತವೆ, ಅನೇಕ ಕಲಾವಿದರು, ಸಂತರು ಬರುತ್ತಾರೆ. ಮಾನವಸಮಾಜಕ್ಕೆ ಒಂದು ಮೂಲಭೂತ ಆಧ್ಯಾತ್ಮಿಕ ಪ್ರಚೋದನೆ ಕೊಡುವುದು ಅಷ್ಟೆ. ನಮ್ಮ ದೇಶದಲ್ಲಿ ಕಾಲಾನುಕಾಲಕ್ಕೂ ಆಗಿರುವುದು ಇದೇ - ಅದು ಅವನತಿಯನ್ನೂ ಕಂಡಿದೆ; ಪುನರುತ್ಥಾನವನ್ನೂ ಉನ್ನತಿಯನ್ನೂ ಕಂಡಿದೆ. ಒಂದು ದೇಶವು ದೀರ್ಘಕಾಲ ಬಾಳಿದಾಗ ಇಂತಹ ಭೌತಿಕ ಮಾನಸಿಕ ಕಾರ್ಪಣ್ಯಗಳು ಸಹಜವಾಗಿಯೆ ಹುಟ್ಟಿಕೊಳ್ಳುತ್ತವೆ; ಆದರೆ ದೇಶವು ಯೌವನವನ್ನು ಮರಳಿ ಪಡೆಯುತ್ತದೆ. ಇದು ಅನೇಕ ಚರಿತ್ರಕಾರರು ಹೆಸರಿಸಿರುವಂತಹ ಇಂಡಿಯಾ ದೇಶದ ಅಸದೃಶವಾದ ವಿಶೇಷ ಅನುಭವ.
ಇನ್ನೂ ಎಷ್ಟೋ ನಾಗರಿಕತೆಗಳು ಪ್ರಪಂಚದಲ್ಲಿ ಉದ್ಭವಿಸಿದವು, ಕೆಲ ಶತಮಾನಗಳ ಕಾಲ ತಮ್ಮ ಪಾತ್ರವನ್ನು ವಹಿಸಿದವು; ಅನಂತರ ಅವನತಿ ಪ್ರಾರಂಭವಾಯಿತು, ಕೊನೆಗೆ ಇಲ್ಲವಾದವು. ಇಂದು ಅವುಗಳನ್ನು ವಸ್ತುಸಂಗ್ರಹಾಲಯಗಳಲ್ಲಿ, ಪುಸ್ತಕಗಳಲ್ಲಿ ಅಧ್ಯಯನ ಮಾಡಬಹುದು. ಆದರೆ ನಮ್ಮ ನಾಗರಿಕತೆ ಅವಿಚ್ಛಿನ್ನವಾಗಿ ನಡೆದು ಬಂದಿದೆ. ಆಗಾಗ್ಗೆ ಅದು ಪುನರುಜ್ಜೀವಗೊಳ್ಳುತ್ತದೆ, ಹೊಸ ಯೌವನದ ಜೊತೆಗೆ ಪ್ರಚಂಡ ಶಕ್ತಿಯನ್ನು ಪಡೆಯುತ್ತದೆ, ಅನಂತರ ಉತ್ತಮವಾಗುತ್ತಾ ಹೋಗುತ್ತದೆ. ಒಂದು ಹೊಸ ಯುಗ ಪ್ರಾರಂಭವಾಗುತ್ತದೆ; ಜನಗಳು ನೈತಿಕ ಪ್ರಜ್ಞೆಯನ್ನು, ಮಾನವೀಯತೆಯನ್ನು, ಸೇವಾಸ್ಫೂರ್ತಿಯನ್ನು ಪಡೆದುಕೊಳ್ಳುತ್ತಾರೆ.
ಎಡ್ವರ್ಡ್ ಗಿಬ್ಬನ್ ಬರೆದ ರೋಮನ್ ಸಾಮ್ರಾಜ್ಯದ ಅವನತಿ ಮತ್ತು ನಾಶ ಎಂಬ ಪುಸ್ತಕವನ್ನೋದಿದಾಗ, ಆ ಸಾಮ್ರಾಜ್ಯ ಅದೆಷ್ಟು ಶಕ್ತಿಯುತವಾಗಿದ್ದಿತು ಎಂದು ನಮಗೆ ತಿಳಿಯುತ್ತದೆ. ಪೂರ್ವ ಮೆಡಿಟರೇನಿಯನ್ ಭಾಗ, ದಕ್ಷಿಣ ಯೂರೋಪ್ ಮತ್ತು ಉತ್ತರ ಆಫ್ರಿಕಾ, ಇಸ್ರೇಲ್ ಮತ್ತು ಪ್ಯಾಲಸ್ಟೀನ್‌ಗಳು ರೋಮನರ ಸ್ವಾಧೀನದಲ್ಲಿದ್ದುವು. ನಿಧಾನವಾಗಿ ಅವನತಿ ಪ್ರಾರಂಭವಾಯಿತು; ಆದರೆ ಅದು ಹೇಗಾಯಿತು? ಯಾವ ರೀತಿ ಆಯಿತು? ಅದೇ ಜನಾಂಗ, ಅವರು ತುಂಬ ಬುದ್ಧಿಶಾಲಿಗಳು, ಆದರೆ ಭೋಗಾಸಕ್ತಿ ಹೆಚ್ಚಾಯಿತು, ಕಷ್ಟಪಟ್ಟು ದುಡಿಯುವುದಕ್ಕೆ, ಕಷ್ಟಜೀವನ ನಡೆಸುವುದಕ್ಕೆ ಇಷ್ಟವಾಗಲಿಲ್ಲ. ಪ್ರತಿಯೊಬ್ಬನಿಗೂ ಲಾಭ, ಸುಖ ಬೇಕು, ಆದರೆ ಸಮಾಜದ ಒಳಿತಿಗಾಗಿ ಯಾರ ಕೊಡುಗೆಯೂ ಇಲ್ಲ ಎಂಬಂತಾಯಿತು. ಹೀಗೆ, ರೋಮನರು ಸೋಮಾರಿಗಳಾದರು; ಕಾಯಕಷ್ಟಗಳಿಗಾಗಿ ಜೀತದಾಳುಗಳನ್ನಿಟ್ಟುಕೊಂಡು ಸುಖವನ್ನು ಮಾತ್ರ ಬಯಸತೊಡಗಿದರು. ಸುಖಸೌಲಭ್ಯಗಳಿಂದಾಗಿ ಮನುಷ್ಯನ ಸಂವೇದನೆ ಸದಭಿರುಚಿಗಳಿಗೆ ಧಕ್ಕೆ ಬಂತು; ಹಿಂಸೆಯಲ್ಲೂ ಲೋಲುಪ್ತಿಯಲ್ಲೂ ತೊಡಗಿದರು. ವರ್ತುಲ ಬಯಲುನಾಟಕಶಾಲೆಗಳಲ್ಲಿ ಕ್ರೂರ ಮೃಗಗಳೊಂದಿಗೆ ಜೀತದಾಳುಗಳನ್ನು ಹೋರಾಟಕ್ಕೆ ಇಳಿಸುತ್ತಿದ್ದರು; ಸಾವಿರಾರು ಜನ, ಸರ್ಕಾರದ ವರಿಷ್ಠನನ್ನೂ ಒಳಗೊಂಡು ಎಲ್ಲರೂ ಅದನ್ನು ನೋಡುತ್ತ, ಸಿಂಹವೊಂದು ಮನುಷ್ಯನನ್ನು ಹರಿದೊಗೆದಾಗ ಖುಷಿಯಿಂದ ಚಪ್ಪಾಳೆ ತಟ್ಟುತ್ತಿದ್ದರು.
ಅಂಥ ಪರಿಸ್ಥಿತಿಯಲ್ಲಿ ಸದಭಿರುಚಿಯ, ಮಾನವೀಯ ಮೌಲ್ಯಗಳ ಅವನತಿಯಾಗಿರುವುದನ್ನು ನೀವು ನೋಡಬಹುದು. ಅಚ್ಚರಿಯೆಂಬಂತೆ, ಆಗ ಬದುಕಿದ್ದ ಯಾರಿಗೂ ತಾವು ಅವನತಿಯ ಹಾದಿಯಲ್ಲಿದ್ದೇವೆ ಎಂಬುದೇ ಗೊತ್ತಾಗಲಿಲ್ಲ; ಏಕೆಂದರೆ ಅದು ನಿಧಾನವಾದ ಅವನತಿಯಾಗಿತ್ತು. ನಾಗರಿಕತೆಗಳು ಬೆಳೆಯುವುದೂ ನಿಧಾನ, ಅವನತಿ ಹೊಂದುವುದೂ ನಿಧಾನ. ಸುಮಾರು ಒಂದು ಶತಮಾನವಾದ ನಂತರ, ಓಹೋ! ನಮ್ಮ ಸಮಾಜಕ್ಕೆ ಏನೋ ಆಗಿದೆ ಎನ್ನಿಸುವುದು. ರೋಮನ್ ಸಾಮ್ರಾಜ್ಯದಲ್ಲಿ ಧರ್ಮ ಯಾವ ಸ್ಥಿತಿಯಲ್ಲಿತ್ತು ಎಂಬುದನ್ನು ಗಿಬ್ಬನ್ ಒಂದು ವಾಕ್ಯದಲ್ಲಿ ಹೇಳುತ್ತಾನೆ. ರೋಮನ್ ಸಾಮ್ರಾಜ್ಯದ ಎಲ್ಲ ಪಂಥಗಳನ್ನೂ ಧರ್ಮಗಳನ್ನೂ ಜನಸಾಮಾನ್ಯರು ಸಮಾನವಾಗಿ ಸತ್ಯವೆಂದೂ, ತತ್ತ್ವಜ್ಞರು ಸಮಾನವಾಗಿಯೇ ಸುಳ್ಳೆಂದೂ, ನ್ಯಾಯಾಧಿಪತಿಗಳು ಸಮಾನವಾಗಿಯೆ ಉಪಯುಕ್ತವೆಂದೂ ಭಾವಿಸುತ್ತಿದ್ದರಂತೆ! ರೋಮನ್ ಸಾಮ್ರಾಜ್ಯದ ಅವನತಿ ಮತ್ತು ನಾಶ ಎಂಬ ಪುಸ್ತಕದ ಹೆಸರೇ ಬಹಳಷ್ಟನ್ನು ಹೇಳುತ್ತದೆ. ಜನರು ಭ್ರಷ್ಟಾಚಾರದ ಜೀವನವನ್ನು ನಡೆಸಿದರು. ಅನ್ಯದೇಶೀಯರು ದಾಳಿ ಮಾಡಿದಾಗ ತರುಣರು ಹೋರಾಡಿ ಸಾಮ್ರಾಜ್ಯದ ರಕ್ಷಣೆಗೆ ಮುಂದಾಗಲೇ ಇಲ್ಲ, ಅವರಿಗಾಗಿ ಜೀತದಾಳುಗಳು ಹೋರಾಡಿದರಂತೆ!
ನಮಗೆ ಸುಖ ಬೇಕು, ಸಂತೋಷ ಬೇಕು. ನೈಟ್ ಕ್ಲಬ್‌ಗಳಿಗೆ ಹೋಗುವುದನ್ನು ಬಿಟ್ಟು ಯುದ್ಧರಂಗಕ್ಕೆ ಹೋಗುವುದಾದರೂ ಹೇಗೆ? ಈ ಅವನತಿ ಸಮಾಜದ ಮುಖ್ಯರನ್ನು ತಟ್ಟಿದಾಗ, ಇಡೀ ಸಮಾಜದ ರಚನೆಯೇ ಮುರಿದುಬೀಳುತ್ತದೆ. ಕೇವಲ ಒಂದೇ ಒಂದು ಅನ್ಯದೇಶೀಯರ ದಾಳಿಗೆ ಇಡೀ ರೋಮನ್ ಸಮಾಜ ಪುನಃ ಮೇಲೇಳಲಾರದಂತೆ ಪುಡಿಪುಡಿಯಾಗಿಹೋಯಿತು. ಇದು ರೋಮನ್ ಸಾಮ್ರಾಜ್ಯದ ಕಥೆ. ಈಜಿಪ್ಟ್, ಬೇಬಿಲೋನಿಯಾ, ಅಸ್ಪೀರಿಯಾ ಇತ್ಯಾದಿ ಇನ್ನೂ ಅನೇಕ ಸಾಮ್ರಾಜ್ಯಗಳೂ ಇಂಥವೇ ಅವಸ್ಥೆಗಳ ಮೂಲಕ ಸಾಗಬೇಕಾಯಿತು.
ಮೊದಲನೆಯ ಮಹಾಯುದ್ಧವಾದ ಮೇಲೆ, ಯೂರೋಪಿನ ಅನೇಕ ಚಿಂತಕರು ಯೂರೋಪೂ ಇಂತಹ ಅವಸ್ಥೆಯ ಮೂಲಕ ಸಾಗುತ್ತಿದೆಯೆ ಎಂದು ಯೋಚಿಸಲಾರಂಭಿಸಿದರು. ಯೂರೋಪಿನಲ್ಲಿ ಯೂರೋಪಿಯನ್ ನಾಗರಿಕತೆಯ ಬಗ್ಗೆ ಇಪ್ಪತ್ತನೆಯ ಶತಮಾನದಲ್ಲಿ ಪ್ರಕಟವಾದ ಮೊದಲನೆಯ ಪುಸ್ತಕ ಜರ್ಮನ್ ಮೇಧಾವಿ ತತ್ತ್ವಶಾಸ್ತ್ರಜ್ಞ ಆಸ್ಟಲ್ ಸ್ಟೆಂಗ್ಲರ್ (೧೮೮೦-೧೯೩೬) ಬರೆದ The Decline of the West ಎಂಬುದು. ಬಹು ಶಕ್ತವಾದ ಬರವಣಿಗೆಯ ಆ ಪುಸ್ತಕದಲ್ಲಿ ಅವನು, ತನ್ನ ಕೆಲಸವನ್ನು ಮುಗಿಸಿದ ಪಾಶ್ಚಿಮಾತ್ಯ ಸಮಾಜವು ಅವನತಿಯ ಹಾದಿಯಲ್ಲಿದೆ ಎಂದು ಹೇಳಿದ್ದಾನೆ. In Defence of the West ಎಂಬ ಪುಸ್ತಕ ಬರೆದ ಹೆನ್ರಿ ಮಾಸ್ಸೋನಂಥ ಸಂಪ್ರದಾಯವಾದಿಗಳು ಇದನ್ನೊಪ್ಪಲಿಲ್ಲ; ಇನ್ನೂ ಅನೇಕ ವಸಾಹತುಗಳು ತಮ್ಮ ಅಧೀನದಲ್ಲೇ ಇದ್ದುದರಿಂದ ಅವರಿಗೆ ತಾವಿನ್ನೂ ಬಲವಾಗಿಯೇ ಉಳಿದಿದ್ದೇವೆ ಎನ್ನಿಸುತ್ತಿತ್ತು. ಅನಂತರ ಇನ್ನೂ ಘೋರವಾದ ಎರಡನೆಯ ಮಹಾಯುದ್ಧ ಬಂದಿತು; ಈಗ ಪಶ್ಚಿಮದಲ್ಲಿ ತಮ್ಮ ಸಂಸ್ಕೃತಿಯಲ್ಲಿರಬಹುದಾದ ದೋಷಗಳ ಬಗ್ಗೆ ಚಿಂತನಮಂಥನ ನಡೆದಿದೆ. ಅತಿರೇಕದ ಕಚ್ಚಾ ವಾಸ್ತವತಾವಾದ, ಅಪೇಕ್ಷೆಗಳ ಹೆಚ್ಚಳ, ಇವು ಸಮಾಜದಲ್ಲಿ ಏನೋ ಭಯಾವಹವಾದ ದೋಷವಿದೆ ಎಂಬುದರ ಚಿಹ್ನೆ. ಇದರಿಂದಾಗಿ, ಆಧುನಿಕ ಪಾಶ್ಚಾತ್ಯ ನಾಗರಿಕತೆಯ ಅವನತಿಯ ಕುರಿತಾಗಿ ಅನೇಕ ಪುಸ್ತಕಗಳು ಬರೆಯಲ್ಪಡುತ್ತಿವೆ.
ಅಮೆರಿಕಾವೂ ಅವನತಿಯ ಹಾದಿಯಲ್ಲಿದೆಯೇ ಮತ್ತು ಹೇಗೆ ಅದನ್ನು ತಪ್ಪಿಸಬಹುದು
೧೯೭೧-೭೨ರ ನನ್ನ ವ್ಯಾಪಕವಾದ ಅಮೆರಿಕಾ ಪ್ರವಾಸದಲ್ಲಿ, ಜುಲೈ ೧೯, ೧೯೭೧ರ ಟೈಮ್ ಎಂಬ ಅಮೆರಿಕಾದ ವಾರ್ತಾಪತ್ರಿಕೆಯಲ್ಲಿನ 'ಅಮೆರಿಕನ್ ನೋಟ್ಸ್' ವಿಭಾಗದಲ್ಲಿ ನಾನು ‘ಆಫ್ ದಿ ಯು. ಎಸ್. ಆ್ಯಂಡ್ ರೋಂ' ಎಂಬ ತಲೆಬರಹದಡಿಯಲ್ಲಿ ಹೀಗೊಂದು ಸುದ್ದಿ ಪ್ರಕಟವಾಗಿದ್ದನ್ನು ನೋಡಿದೆ: 'ಮಧ್ಯ ಪ್ರವೇಶಿಸುವವರ ಕುರಿತಾದ ಅಮೆರಿಕನ್ ಕಲ್ಪನೆಯನ್ನು ರೋಂ ಹೆದರಿಸುತ್ತಿರುವುದು ಮತ್ತು ಶೀತಲ ಯುದ್ಧದ ಯೋಧರು ಪ್ರಾಚೀನ ಸಾಮ್ರಾಜ್ಯವನ್ನು ಲೋಕವ್ಯವಸ್ಥೆಯ ಮಾದರಿ ಎಂದು ಪ್ರಚುರಪಡಿಸಲು ಅಮೆರಿಕ ಅನುವಾಗಬೇಕೆಂದು ಹೇಳುತ್ತಿರುವುದು ವಿಚಿತ್ರವಾಗಿದೆ. ಇನ್ನೊಂದು ಕಡೆ ಪ್ರತಿಯೊಂದು ಉದ್ದ ಕೂದಲಿನ ತಲೆಯಲ್ಲೂ ಹಬೆಯುಗುಳುವ ಪಾತ್ರೆಯಲ್ಲೂ ಪಶ್ಚಿಮದ ಅವನತಿಯನ್ನೇ ಕಾಣುತ್ತಿರುವವರೂ ರೋಂ ಅನ್ನು ಜ್ಞಾಪಿಸುತ್ತಿದ್ದಾರೆ.' ಕಾನ್ಸಾಸ್ ನಗರದ ನಾರ್ತ್‌ವೆಸ್ಟ್ ಸುದ್ದಿ ಸಂಪಾದಕರ ಜೊತೆಗೆ ಮಾತನಾಡುತ್ತ ಅಧ್ಯಕ್ಷ ನಿಕ್ಸನ್ ವಾಷಿಂಗ್‌ಟನ್‌ನಲ್ಲಿನ ಸಂಯುಕ್ತರಾಷ್ಟ್ರ ಕಟ್ಟಡಗಳನ್ನು ಕುರಿತು ಹೀಗೆಂದರು:
“ಕೆಲವೊಮ್ಮೆ ಆ ಮಹಾಕಂಭಗಳನ್ನು ನೋಡಿದಾಗ, ಗ್ರೀಸ್‌ನ ಅಕ್ರೋಪೋಲಿಸ್‌ನಲ್ಲಿ ಕಂಭಗಳನ್ನು ನೋಡಿದ ನೆನಪಾಗುತ್ತದೆ. ರೋಂನಲ್ಲಿನ ಸಾರ್ವಜನಿಕ ಸಭಾಸ್ಥಾನದ ಆ ದೃಢವಾದ ಕಂಭಗಳನ್ನು ನೋಡಿದ ನೆನಪೂ ಆಗುತ್ತದೆ. ಆ ಎರಡು ಪ್ರದೇಶಗಳಲ್ಲಿಯೂ ನಾನು ರಾತ್ರಿ ನಡೆದಿದ್ದೇನೆ. ಗ್ರೀಸ್‌ಗೆ ಮತ್ತು ರೋಂಗೆ ಏನಾಯಿತು, ಅಲ್ಲಿ ಏನು ಉಳಿದಿದೆ ಬರೀ ಕಂಭಗಳಲ್ಲವೆ? ಎಂಬ ಯೋಚನೆಯೂ ಬರುತ್ತದೆ. ಆ ಪುರಾತನ ನಾಗರಿಕತೆಗಳು, ಶ್ರೀಮಂತವಾಗುತ್ತಲೂ ಅಭಿವೃದ್ಧಿಯಾಗಬೇಕೆಂಬ ಇಚ್ಛೆಯನ್ನೇ, ಬದುಕಬೇಕೆಂಬ ಇಚ್ಛೆಯನ್ನೇ ಕಳೆದುಕೊಂಡವು; ನಾಗರಿಕತೆಯನ್ನು ಕೊನೆಗೆ ನಾಶಮಾಡುವ ಕ್ಷೀಣಗತಿಗೆ ಇಳಿದವು. ಈಗ ಸಂಯುಕ್ತ ಸಂಸ್ಥಾನಗಳಿಗೂ ಅದೇ ಕಾಲ ಬಂದಿದೆ.”
“ಬಲು ಬೇಗ ನಿಕ್ಸನ್ ಮಾತು ಬದಲಿಸಿ ರಾಷ್ಟ್ರವು ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯವಾಗಿ ಉಳಿಯುವಷ್ಟು ಬಲ, ಧೈರ್ಯ, ಜೀವಂತಿಕೆಗಳಿಂದ ಕೂಡಿದೆ ಎಂಬುದರಲ್ಲಿ ತನಗೆ ವಿಶ್ವಾಸವಿದೆ ಎಂದೆಲ್ಲ ಸ್ಫೂರ್ತಿಯ ಮಾತುಗಳನ್ನಾಡಿದರೂ, ಒಟ್ಟಾರೆ ಪರಿಣಾಮವು ತಕ್ಷಣಕ್ಕೆ ದಿಗಿಲುಹುಟ್ಟಿಸುವಂಥದಾಗಿತ್ತು.'
ನಾನು ೧೯೬೮-೬೯ರ ಅಮೆರಿಕಾ ಪ್ರವಾಸದಲ್ಲಿದ್ದಾಗ ಪ್ರಖ್ಯಾತ ಅಮೆರಿಕನ್ ಬರಹಗಾರ ರೋಜರ್ ಪ್ರೈಸ್ ಬರೆದ Decline and Fall by Gibbon and Roger Price ಎಂಬ ಗಮನ ಸೆಳೆಯುವ ಪುಸ್ತಕವನ್ನು ನೋಡಿದೆ. ರೋಮನ್ ಸಾಮ್ರಾಜ್ಯದ ಅವನತಿ ಮತ್ತು ನಾಶ ಎಂಬ ಪ್ರಸಿದ್ಧ ಪುಸ್ತಕದ ತಲೆಬರಹ ಮತ್ತು ಲೇಖಕನ ಹೆಸರನ್ನು ತನ್ನದರ ಜೊತೆಗೆ ಸೇರಿಸಿಕೊಂಡು ಬರೆದಿದ್ದು; ಪ್ರಾಚೀನ ರೋಂ ಮತ್ತು ತನ್ನ ಅಮೆರಿಕಾ ಇವೆರಡರ ನಡುವೆ ಸಾಮಾನ್ಯವೆಂಬಂತಿದ್ದ ಅವನತಿಯ ಕಲ್ಪನೆ ಮಾತ್ರದಿಂದಲ್ಲ, ಜೊತೆಗೆ ರೋಂನ ಅವನತಿಗೆ ಸಂಬಂಧಿಸಿದಂತೆ ಗಿಬ್ಬನ್‌ನ ಪುಸ್ತಕದಿಂದ ಆರಿಸಿದ ಒಂದು ಉಲ್ಲೇಖವನ್ನು ತನ್ನ ಪುಸ್ತಕದಲ್ಲಿ ಎಡಪುಟದಲ್ಲಿ ನಮೂದಿಸಿ, ಪ್ರಚಲಿತ ಅಮೆರಿಕನ್ ಬದುಕಿನಿಂದ ತಾನೇ ಅರಿಸಿದ, ಅದನ್ನು ಸಮರ್ಥಿಸುವಂತಹ ಚಿತ್ರವನ್ನೂ ಬಲಪುಟದಲ್ಲಿ ಕೊಟ್ಟಿದ್ದಾನೆ.
ಇಂದಿನ ಪಾಶ್ಚಾತ್ಯ ನಾಗರಿಕತೆಯಲ್ಲಿ, ಸಾಮಾನ್ಯವಾಗಿ ಯೂರೋಪಿನಲ್ಲಿ ಮತ್ತು ವಿಶೇಷವಾಗಿ ಅಮೆರಿಕಾದಲ್ಲಿ, ಒಂದು ಸ್ವಾಭಾವಿಕವಾದ ಹಿರಿಮೆ ಇದೆ. ಈ ನಾಗರಿಕತೆ ಏನಾದರೂ ಅವನತಿ ಹೊಂದಿದರೆ, ಮಾನವ ಜನಾಂಗಕ್ಕೆ ಅದು ಬಹು ದೊಡ್ಡ ನಷ್ಟ. ಭಾರತದಲ್ಲಿ ಇಂದು ನಡೆಯುತ್ತಿರುವಂತಹ, ಆಧುನಿಕ ಭಾರತ ಇರಬೇಕೆಂದು ವಿವೇಕಾನಂದರು ಆಶಿಸಿದ್ದಂತಹ, ವಿಭಿನ್ನ ಸಂಸ್ಕೃತಿಗಳ ಸಂಕಲನ ಅಲ್ಲೂ ನಡೆಯುವ ಮೂಲಕ, ಈ ನಷ್ಟ ಸಂಭವಿಸಲಾರದು ಎಂದು ನನಗೆ ನಂಬಿಕೆಯಿದೆ. ಅಮೆರಿಕಾದಲ್ಲೇ ಹತ್ತೊಂಭತ್ತನೆಯ ಶತಮಾನದಲ್ಲಿ ಅಮೆರಿಕನ್ ಸಂಸ್ಕೃತಿಗೆ ಒಂದು ಆಧ್ಯಾತ್ಮಿಕ ಆಯಾಮವನ್ನು ತಂದುಕೊಡಲು ಬಯಸಿದ ಅತೀತವಾದಿ ಆಂದೋಳನವೊಂದು ನಡೆಯಿತು. ಅದು ರಾಲ್ಫ್ ವಾಲ್ಟೋ ಎಮರ್ಸನ್, ಹೆನ್ರಿ ಡೇವಿಡ್ ಥೋರೋ ಮತ್ತು ವಾಲ್ಟ್ ವ್ಹಿಟ್‌ಮನ್‌ರಂಥವರಲ್ಲಿ ಅಭಿವ್ಯಕ್ತಿ ಪಡೆಯಿತು. ಲಂಡನ್ನಿನಿಂದ ಅಮೆರಿಕಾಕ್ಕೆ ವಾಪಸು ಹೊರಡುವಾಗ ಎಮರ್ಸನ್‌ನು ಬ್ರಿಟಿಷ್ ಚಿಂತಕ ಕಾರ್ಲೈಲ್‌ನಿಂದ ನಾವೀಗ ಓದುತ್ತಿರುವ ಗೀತೆಯ ಒಂದು ಪ್ರತಿಯನ್ನು ಪಡೆದುಕೊಂಡ. ಈ ಪುಸ್ತಕವನ್ನು ಪಡೆದ ನಂತರ ಎಮರ್ಸನ್‌ನು ತನ್ನದೇ ಆದ ಶೈಲಿಯಲ್ಲಿ ಗೀತೆಯ ಅಭಿಪ್ರಾಯಗಳನ್ನು ಪ್ರಮುಖವಾಗಿ ಅಭಿವ್ಯಕ್ತಿಸಿ ತನ್ನ ಪ್ರಸಿದ್ಧವಾದ ಪ್ರಬಂಧಗಳನ್ನು ಬರೆದ.
ತಮ್ಮ Life of Vivekananda ಎಂಬ ಪುಸ್ತಕದಲ್ಲಿ ರೋಮಾ ರೋಲಾ ಹೇಳುತ್ತಾರೆ(ಪುಟ ೫೨-೫೩):
`ಥೋರೋ ತನ್ನ ಕಾನ್‌ಕಾರ್ಡ್ ಮತ್ತು ಮೆರಿಮ್ಯಾಕ್ ನದಿಗಳ ಮೇಲೆ ಒಂದು ವಾರ ಎಂಬ ಪುಸ್ತಕದಿಂದ ಕೆಲವು ಭಾಗಗಳನ್ನು ತನಗೆ ಓದಿ ಹೇಳುತ್ತಿದ್ದನೆಂದು ಎಮರ್ಸನ್ ೧೮೪೬ರ ಜುಲೈನಲ್ಲಿ ದಾಖಲಿಸಿದ್ದಾನೆ. ಈ ಕೃತಿ (ಸೋಮವಾರ ಎಂಬ ಭಾಗ) ಗೀತೆಯ ಮತ್ತು ಭಾರತದ ಶ್ರೇಷ್ಠ ಕಾವ್ಯ ಹಾಗೂ ದರ್ಶನಗಳ ಉತ್ಸಾಹಪೂರ್ಣ ಗುಣಗಾನ. ಭಾರತೀಯ ಚಿಂತನೆಯು ಎಮರ್ಸನ್‌ನಲ್ಲಿ ಒಡಮೂಡಿಸಿದ ಭಾವೋತ್ಕರ್ಷ ಬಲವಾದದ್ದೇ ಆಗಿರಬೇಕು; ೧೮೫೬ರಲ್ಲಿ ಎಮರ್ಸನ್ ಬರೆದ ಬ್ರಹ್ಮ ಎಂಬ ಸುಂದರವಾದ ವೇದಾಂತಕವನ ಹೀಗಿದೆ (ಅದೇ, ಪುಟ ೫೪):
ರಕ್ತಕೊಲೆಗಡುಕ ತಾ ಕೊಲೆಗಡುಕನೆಂದುಕೊಳೆ
ಕೊಲೆಯಾದ ಮನುಜ ತಾ ಕೊಲೆಯಾದೆನೆಂದುಕೊಳೆ
ಅರಿಯದವರಿಬ್ಬರೂ ನನ್ನ ಸೂಕ್ಷ್ಮದ ಹಾದಿ-
-ಯಲ್ಲಿರುವ ತಿರುವುಗಳ, ನನ್ನ ನಿಜ ಅರಿವುಗಳ,
ಬಹುದೂರ ಮರೆತಿರುವುದೆಲ್ಲ ಹತ್ತಿರ ನನಗೆ
ನೆರಳು ಸೂರ್ಯನ ಬೆಳಕು ಒಂದೆ ನೋಡು;
ಮರೆಯಾದ ದೇವರುಗಳಿಹರೆಲ್ಲ ನನ್ನೆದುರು
ಮಾನಾಪಮಾನಗಳು ಒಂದೆ ಎನಗೆ.
ನನ್ನ ಬಿಟ್ಟಿರುವವರು ಮಿಥ್ಯೆಯನು ಗ್ರಹಿಸುವರು
ಅವರೆನ್ನ ಹಾರಿಸಲು ನಾನೆ ರೆಕ್ಕೆ;
ಸಂಶಯವ ಪಡುವವನು ಸಂಶಯವೆ ನಾನಹೆನು
ಬ್ರಾಹ್ಮಣನ ಸಾಮಗಾಯನವೆ ನಾನು.
ನನ್ನ ನೆಲೆಗಾಗಿ ಸುರಶ್ರೇಷ್ಠರೆಲ್ಲರು ತಪಿಸಿ
ವ್ಯರ್ಥ ಸಪ್ತರ್ಷಿಗಳ ಎಲ್ಲ ತಪವು;
ನೀ ವಿನೀತನು ಕೃಷ್ಣಪ್ರೇಮಿಯಾದವನಾಗಿ
ಕಂಡೆನ್ನ ಬೆನ್ನುತಿರುಗಿಸು ಸಗ್ಗಕೆ.
ಅಮೆರಿಕಾದ ಅತೀತವಾದಿ ಥೋರೋ ತನ್ನ ವಾಲ್ಟನ್ ಎಂಬ ಪುಸ್ತಕದಲ್ಲಿ ಗೀತೆಯನ್ನು ಕುರಿತು ಹೀಗೆ ಹೇಳುತ್ತಾನೆ (ವಾಲ್ಡನ್, ಪುಟ ೨೬೬, ಎಸ್. ಚಾಂದ್ ಆ್ಯಂಡ್ ಕೋ, ನವದೆಹಲಿ):
'ನನ್ನ ಬುದ್ಧಿಗೆ ಬೆಳಗಿನ ಸ್ನಾನವನ್ನು ಭಗವದ್ಗೀತೆಯಲ್ಲಿನ ವಿಶ್ವಸೃಷ್ಟಿವಾದದ ಅದ್ಭುತ ತತ್ತ್ವಾಂಬುಧಿಯಲ್ಲಿ ಮಾಡಿಸುತ್ತೇನೆ. ಇದರ ರಚನೆಯಾದ ನಂತರ ದೇವತೆಗಳ ವರ್ಷಗಳು ಸವೆದಿವೆ; ಇದಕ್ಕೆ ಹೋಲಿಸಿದರೆ ನಮ್ಮ ಆಧುನಿಕ ಪ್ರಪಂಚ, ಅದರ ಸಾಹಿತ್ಯ ಎಲ್ಲಾ ಅಲ್ಪಾಲ್ಪವಾಗಿ ತೋರುತ್ತವೆ.'
ಆದರೆ ಅಮೆರಿಕಾವು ಭೌತಿಕ ವಿಜ್ಞಾನವನ್ನಾಧರಿಸಿದ ಭೌತವಾದವನ್ನೇ ಬೆಳೆಸುವುದನ್ನು ಮುಂದುವರೆಸಿತು. ಅನಂತರ ಹತ್ತೊಂಭತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಬಂದಿತು ವಿವೇಕಾನಂದರ ಮಾನವ ಸಾಧ್ಯತೆಗಳ ವಿಜ್ಞಾನದ ಉದ್ಘೋಷ - ಪ್ರತಿ ಮಾನವಜೀವಿಯ ಅಮೃತತ್ವ ಮತ್ತು ದೈವತ್ವದ, ವೇದಾಂತದ ಉದ್ಘೋಷ - ಮೊದಲು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ, ಅನಂತರ ನಾಲ್ಕು ವರ್ಷ ಅಮೆರಿಕಾದ ಇತರ ಭಾಗಗಳಲ್ಲಿ ಹಾಗೂ ಇಂಗ್ಲೆಂಡಿನಲ್ಲಿ.
ವೇದಾಂತವನ್ನು ಕುರಿತು ಸ್ವಾಮಿ ವಿವೇಕಾನಂದರು ಬಹು ಸಾರಯುಕ್ತವಾಗಿ ಹೀಗೆ ಹೇಳಿರುವರು (ಕೃತಿಶ್ರೇಣಿ, ಸಂಪುಟ ೨, ಪುಟ ೩೧೦):
'ಪ್ರತಿಯೊಬ್ಬನೂ ಅಂತಸ್ಥವಾಗಿ ದೈವಿಕನೇ. ಬಾಹ್ಯ, ಆಂತರಿಕ ಪ್ರಕೃತಿಯನ್ನು ನಿಗ್ರಹಿಸುವುದರ ಮೂಲಕ ಈ ಅಂತಸ್ಥ ದೈವಿಕತೆಯನ್ನು ಹೊರತರುವುದೇ ಜೀವನದ ಗುರಿ. ಇದನ್ನು ಕರ್ಮ, ಭಕ್ತಿ, ಯೋಗ, ಜ್ಞಾನ - ಇವುಗಳಲ್ಲಿ ಒಂದು ಅಥವಾ ಅನೇಕದಿಂದ ಸಾಧಿಸಿ ಮತ್ತು ಮುಕ್ತರಾಗಿರಿ. ಪೂರ್ಣವಾಗಿ ಧರ್ಮವೆಂದರೆ ಇದೇ. ಸಿದ್ಧಾಂತಗಳು, ಮತಗಳು, ಕ್ರಿಯಾವಿಧಿಗಳು, ಶಾಸ್ತ್ರಗಳು, ದೇವಾಲಯಗಳು, ದಿವ್ಯರೂಪಗಳು - ಈ ಎಲ್ಲವೂ ಆನುಷಂಗಿಕ ವಿವರಗಳಷ್ಟೆ.'
ಈ ಸಂದೇಶವು ನಿಧಾನವಾಗಿ ಪಶ್ಚಿಮದಲ್ಲಿ ಅನೇಕ ರೂಪಗಳಲ್ಲಿ ಹರಡುತ್ತಿದೆ. ಮೂರನೆಯ ಸಹಸ್ರಮಾನದ ಮೊದಲ ಶತಮಾನದಲ್ಲೇ ಯೂರೋಪಿನ ಮತ್ತು ಅಮೆರಿಕಾದ ನಾಗರಿಕತೆಗಳು ಆಧ್ಯಾತ್ಮಿಕ ದಿಕ್ಕಿನಲ್ಲಿ ಮುನ್ನಡೆಯುತ್ತವೆ ಎಂಬುದರಲ್ಲಿ ನನಗೇನೂ ಸಂಶಯವಿಲ್ಲ.
ನಾಗರಿಕತೆಗಳು ಖಿಲವಾಗುವುದನ್ನು ಶಂಕರಾಚಾರ್ಯರು ತಮ್ಮ ಮನಶ್ಶಾಸ್ತ್ರೀಯ ಅಧ್ಯಯನದಲ್ಲಿ ಖಚಿತವಾಗಿ ನಿರೂಪಿಸುತ್ತಾರೆ: ಅನುಷ್ಠಾತೃಣಾಂ ಕಾಮೋದ್ಭವಾತ್ ಹೀಯಮಾನ ವಿವೇಕವಿಜ್ಞಾನಹೇತುಕೇನ - ತುಂಬಾ ಸುಲಭ ಸಂಸ್ಕೃತದಲ್ಲಿ ಹೇಳಿದ್ದಾರೆ: ‘ಅನುಷ್ಠಾನಮಾಡುವ ನಾಗರಿಕರಿಗೆ (ಐಂದ್ರಿಯಕ ಒತ್ತಡಗಳ ರೂಪವಾದ) ಕಾಮವುಂಟಾಗಿ,’ ಕಾಮವು ಒಂದು ಮಟ್ಟವನ್ನು ಮೀರಿದಾಗ ಸಮಾಜದಲ್ಲಿ ಅನೇಕ ಕೇಡುಗಳು ಕಾಣಿಸಿಕೊಳ್ಳತೊಡಗುತ್ತವೆ, ಮತ್ತು `ವಿವೇಕ ವಿಜ್ಞಾನಗಳು ಕಡಿಮೆಯಾಗತೊಡಗುತ್ತವೆ.’ ಅಭಿಭೂಯ ಮಾನೇ ಧರ್ಮೇ – 'ಧರ್ಮವು ಮುಚ್ಚಿಹೋಗಿ,’ ಪ್ರವರ್ಧಮಾನೇ ಚ ಅಧರ್ಮೇ— ‘ಅಧರ್ಮವು ಹೆಚ್ಚುತ್ತಾ ಬರಲಾಗಿ’’. ಪ್ರಾರಂಭದಲ್ಲಿ ಎಲ್ಲಾ ಚೆನ್ನಾಗಿಯೇ ಇದ್ದರೂ, ಎಲ್ಲ ಸಮಾಜಗಳಲ್ಲಿಯೂ ಕೊನೆಕೊನೆಗೆ ಆಗುವುದು ಇಂಥ ಪರಿಸ್ಥಿತಿಯೇ. ನಾನು ಹಿಂದೆ ಹೇಳಿದ ಸ್ಟೆಂಗ್ಲರ್, ಆರ್ನಾಲ್ಡ್ ಟಾಯ್ನಬೀ ಮತ್ತಿತರ ಪಾಶ್ಚಾತ್ಯ ಚಿಂತಕರು ಬರೆದ ಪುಸ್ತಕಗಳಲ್ಲಿ ಕಾಣುವ ಒಂದು ಕಲ್ಪನೆಯೆಂದರೆ - ಸಂಸ್ಕೃತಿ ಎಂಬುದು ಮಾನವ ಸಮಾಜದ ಚಾಲಕ ಅಂಶ; ಅದು ದುರ್ಬಲಗೊಂಡಾಗ ನಾಗರಿಕತೆ ಅವನತಮುಖವಾಗುತ್ತದೆ. ಸ್ಟೆಂಗ್ಲರನ ಪ್ರಕಾರ ನಾಗರಿಕತೆ ಎಂಬುದೇ ಸ್ಖಾಲಿತ್ಯದ ಚಿಹ್ನೆ; ಸಂಸ್ಕೃತಿ ಎಂಬುದು ಅಭಿವೃದ್ಧಿಯ ಚಿಹ್ನೆ. ಜನಗಳಿಗೆ ಸುಖಸೌಲಭ್ಯಗಳು ಹೆಚ್ಚಾಗಬೇಕು, ಸಂತೋಷ ಹೆಚ್ಚಬೇಕು, ಪರಿಕರಗಳು ಹೆಚ್ಚು ಬೇಕು, ಇತ್ಯಾದಿ ಅನ್ನಿಸಿದಾಗ ಇಂದ್ರಿಯವ್ಯವಸ್ಥೆ ಪ್ರಚೋದನೆಗೊಳ್ಳುತ್ತದೆ, ಅಪೇಕ್ಷೆಗಳು ಹೆಚ್ಚುತ್ತವೆ, ನಾಗರಿಕತೆ ಹಿನ್ನಡೆಯಲಾರಂಭಿಸುತ್ತದೆ. ನಾವು ಕಷ್ಟಪಟ್ಟು ದುಡಿದು ದೇಶ ಕಟ್ಟುವುದಕ್ಕೆ ಹೋರಾಟ ನಡೆಸಿದಾಗ, ತಾತ್ತ್ವಿಕ ಭಾಷೆಯಲ್ಲಿ ಹೇಳುವುದಾದರೆ, ‘ಆಗುವ’ ಹಂತದಲ್ಲಿರುತ್ತೇವೆ; ಅದು ಸಂಸ್ಕೃತಿ. ಯಾವಾಗ ನಾವು 'ಆಗಿಬಿಟ್ಟೆ'ವೋ, ಅದು ನಾಗರಿಕತೆ; ಅವನತಿಯ ಪ್ರಾರಂಭವೂ ಅದೇ. ಒಬ್ಬ ಬಡವ ಕಷ್ಟಪಟ್ಟು ದುಡಿದು ತನ್ನದೇ ಆದ ಒಂದು ಆರ್ಥಿಕ ಸಾಮ್ರಾಜ್ಯವನ್ನು ಕಟ್ಟುತ್ತಾನೆ. ಅವನ ಮಗ, ಯಾವ ಹೋರಾಟವಿಲ್ಲದೆ, ಸಂಪತ್ತನ್ನೆಲ್ಲ ಖರ್ಚುಮಾಡಲಾರಂಭಿಸುತ್ತಾನೆ; ಒಂದೆರಡು ತಲೆಮಾರುಗಳಲ್ಲೇ ಅವನತಿ ಪ್ರಾರಂಭವಾಗುತ್ತದೆ. ಸುಖಸೌಲಭ್ಯಗಳು ಹೆಚ್ಚಿದಂತೆ, ಹೋರಾಟದ ಅವಶ್ಯಕತೆಯೇ ಇಲ್ಲವಾಗುತ್ತದೆ; ಮಾನವನಲ್ಲಿನ ಪೌರುಷದ ಮೇಲೆ ಕಾವಳ ಕವಿಯುತ್ತದೆ. ಸಂಪತ್ತು ಒಂದೇ ಕುಟುಂಬದಲ್ಲಿ ಮೂರು ಅಥವಾ ನಾಲ್ಕು ತಲೆಮಾರುಗಳಿಗೂ ಮಿಕ್ಕಿ ಉಳಿಯುವುದೇ ಇಲ್ಲ. ಹೀಗೆ, ಸಂಸ್ಕೃತಿ ಮತ್ತು ನಾಗರಿಕತೆಗಳು ‘ಆಗುವ' ಮತ್ತು 'ಆಗಿಬಿಟ್ಟಿರುವ’ ಹಂತಗಳ ಮೂಲಕ ಸಾಗುತ್ತವೆ; ಅದೇ ಸ್ಟೆಂಗ್ಲರ್ ಮತ್ತಿತರರು ಕೊಡುವ ವಿಶ್ಲೇಷಣೆ.
ಹೇಗೆ ಭಾರತವು ಅನೇಕ ಅವನತಿಯನ್ನನುಭವಿಸಿದರೂ ಸಾವನ್ನು ತಪ್ಪಿಸಿಕೊಂಡಿತು
ನಮ್ಮ ಭಾರತೀಯ ಸಂಸ್ಕೃತಿಯು ಈ ಎಲ್ಲಾ ಅವಸ್ಥೆಗಳ ಮೂಲಕ ಹಾದುಹೋಗಿದೆ. ಮಹಾ ಸಂಸ್ಕೃತಿಯಾದ ವೇದಗಳ ಕಾಲವನ್ನು ತೆಗೆದುಕೊಳ್ಳೋಣ. ಅದನ್ನು ಕಟ್ಟಲು ಆಗಿನ ಜನರು ಎಂತೆಂತಹ ಕಷ್ಟಗಳನ್ನನುಭವಿಸಿದರು, ಹೇಗೆ ಹೋರಾಟ ನಡೆಸಿದರು! ಆಗಿನ ಮನಸ್ಸು ಶಕ್ತವಾಗಿತ್ತು, ಕ್ರಿಯಾಶೀಲವಾಗಿತ್ತು, ತುಂಬಾ ಜೀವಂತಿಕೆಯಿಂದಿತ್ತು. ಮಹಾಕಾವ್ಯಗಳ ಕಾಲದವರೆಗೆ ಮುಂದುವರೆಯಿತು. ಆಗ ಪ್ರಚಂಡವಾದೊಂದು ಹಿನ್ನಡೆ - ಮೂರು ಸಾವಿರ ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧವೊಂದು ದೊಡ್ಡ ಹಿನ್ನಡೆಯಾಯಿತು! ಸಾವಿರಾರು ಜನ ಸತ್ಕುಲಪ್ರಸೂತರು ಆ ಯುದ್ಧದಲ್ಲಿ ಸತ್ತರು. ನಮ್ಮ ಇತಿಹಾಸದಲ್ಲಿ ಅದೊಂದು ದೊಡ್ಡ ಇಳಿಮೇಡು ಎಂದು ಪರಿಗಣಿಸಲಾಗಿದೆ. ಕೆಲಕಾಲಾನಂತರ ಹೊಸ ಶಕ್ತಿ ಕುದುರಿಕೊಂಡಿತು; ಆದರೆ ಪುನಃ ಅವನತಿಯ ಹಾದಿ ಹಿಡಿಯಿತು. ಹೀಗೆಯೇ, ಅಲೆಗಳು ಮೇಲೆದ್ದು ಕೆಳಗಿಳಿಯುವಂತೆ, ಮುಂದುವರೆಯಿತು; ಆದರೆ, ನಾನು ಹಿಂದೆಯೇ ಹೇಳಿದಂತೆ, ಅನೇಕ ಬಾರಿ ಸ್ಖಾಲಿತ್ಯವನ್ನು ಅನುಭವಿಸಿದರೂ, ನಾವು ಸಾಯಲಿಲ್ಲ ಎಂಬುದೇ ವಿಶೇಷ. ಯಾವುದೋ ಹೊಸ ಶಕ್ತಿ ಬರುತ್ತದೆ, ನಾವು ಚೇತರಿಸಿಕೊಳ್ಳುತ್ತೇವೆ. ಕಳೆದ ಶತಮಾನದಲ್ಲಿ ನಾವು ಕೆಳಕ್ಕಿಳಿದ ಆಳವೆಷ್ಟು! ಆಗಿನ ಕಾಲದ ಸಾಹಿತ್ಯವನ್ನೋದಿದಾಗ, ಭಾರತದಲ್ಲಿ ಮಾನವನ ಮನಸ್ಸು ಅದೆಷ್ಟು ಕೆಳಮಟ್ಟಕ್ಕಿಳಿದು ಶಿಥಿಲಗೊಂಡಿತ್ತು ಎಂಬುದು ಅರಿವಾಗುತ್ತದೆ. ಮೊದಲಿದ್ದ ಎಲ್ಲಾ ಶಕ್ತಿ, ಜೀವಂತಿಕೆ, ಸೃಜನಶೀಲತೆ ಎಲ್ಲವೂ ಕಣ್ಮರೆಯಾಗಿ ನಾವು ಅರೆಸತ್ತ ಜನರಾಗಿದ್ದೆವು. ಅಂತಹ ಅವಸ್ಥೆಯಿಂದ ಪ್ರಚಂಡ ಜಾಗೃತಿಯೊಂದು ಬಂದಿತು, ಹೊಸ ಅಭಿವೃದ್ಧಿಗಳಾದವು. ಇದು ಹೇಗೆ ಸಾಧ್ಯವಾಯಿತು? ಇಲ್ಲೇ ಮಹಾಕಲ್ಪನೆ ಇದೆ. ಜನರನ್ನು ಮೇಲೆತ್ತಲು ಒಬ್ಬ ಮಹಾ ಆಧ್ಯಾತ್ಮಿಕ ಪ್ರಬೋಧಕನ ಅವತರಣವಾಗುವುದರ ಜೊತೆಗೆ, ಕೆಲವು ಬಾರಿ ಸಾಂಸ್ಕೃತಿಕ ಸಂಕಲನವೂ ಸಂಭವಿಸುತ್ತದೆ. ನಮ್ಮ ಅನೇಕ ಮೂರ್ಖ ಅಭಿಪ್ರಾಯಗಳನ್ನು ಕಿತ್ತೊಗೆಯುವುದಕ್ಕೆ ಪಾಶ್ಚಾತ್ಯ ಸಂಸ್ಕೃತಿ ಸಹಾಯಮಾಡಿತು. ಅದು ನಮಗೆ ಹೊಸ ದಾರಿಯನ್ನು ತೋರಿಸಿತು, ಹೆಚ್ಚು ಶಕ್ತಿವಂತರನ್ನಾಗಿಸಿತು. ಇದೇನೂ ಪಾಶ್ಚಾತ್ಯರ ಉದ್ದೇಶವಾಗಿರಲಿಲ್ಲವಾದರೂ, ಆದದ್ದು ಅದೇ. ಪಾಶ್ಚಾತ್ಯ ಪರಿಕಲ್ಪನೆಗಳು ಭಾರತದೊಂದಿಗೆ ಬೆರೆತುದರ ಫಲವಾಗಿ ನಮ್ಮಲ್ಲಿ ಹೊಸ ಜಾಗೃತಿಯುಂಟಾಯಿತು; ಹೊಸ ಶಕ್ತಿ, ನವತಾರುಣ್ಯಗಳು ಪ್ರಾಪ್ತವಾದುವು.
ಸಂಸ್ಕೃತಿಗಳ ಸಂಕಲನದಿಂದ ಸಾಂಸ್ಕೃತಿಕ ಅವನತಿಗೆ ತಡೆಯುಂಟಾದದ್ದು
ಸಂಸ್ಕೃತಿಗಳ ಸಂಕಲನವೇನೋ ಆಗಬಹುದು, ಆದರೆ ಅದನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಲು, ಅದನ್ನು ಸೃಜನಶೀಲವಾದ ಚಾಲನೆಯನ್ನಾಗಿಸಲು, ದೂರದೃಷ್ಟಿಯುಳ್ಳ ಮುಂದಾಳುಗಳೂ ಮಹಾನ್ ಚಿಂತಕರೂ ಅಗತ್ಯ. ಕಳೆದ ಶತಮಾನದಲ್ಲಿ ಭಾರತ ಅಂತಹ ಅನೇಕರನ್ನು - ರಾಜಾ ರಾಮಮೋಹನ ರಾಯ್‌ರಿಂದ ಪ್ರಾರಂಭಿಸಿ, ಕೊನೆಗೆ ಶಕ್ತ, ಸೃಜನಾತ್ಮಕ ಮತ್ತು ಒಂದುಗೂಡಿಸುವ ಚಾಲನೆಯಾಗಿ ಅರಳಿದ ಸ್ವಾಮಿ ವಿವೇಕಾನಂದರ ವರೆಗೆ – ಕೊಟ್ಟಿತು. ಹತ್ತೊಂಭತ್ತನೆಯ ಶತಮಾನದ ಚರಿತ್ರೆಯನ್ನು ಸ್ವಾಮಿ ವಿವೇಕಾನಂದರಿಂದ ಆರಂಭಿಸಿ ಅಧ್ಯಯನ ಮಾಡಿದಾಗ, ಉತ್ಪಾದನೆಯಾದ ಈ ಜಾಗೃತಿಯು ಪ್ರಬುದ್ಧತೆಯನ್ನೂ ರಾಷ್ಟ್ರೀಯ ಅಂತಾರಾಷ್ಟ್ರೀಯ ವ್ಯಾಪ್ತಿಯನ್ನೂ ಪಡೆದದ್ದನ್ನು ಕಾಣಬಹುದು. ಆದ್ದರಿಂದ, ಕೇವಲ ಸಂಕಲನವೊಂದೇ ಸಾಲದು. ಆ ಶಕ್ತಿಯನ್ನು ಬಳಸಿಕೊಂಡು ಅದಕ್ಕೊಂದು ಸರಿಯಾದ ದಿಕ್ಕನ್ನು ಕೊಡುವುದಕ್ಕೆ ಸಾಧ್ಯವಿರಬೇಕು. ಸ್ವಾಮಿ ವಿವೇಕಾನಂದರ ಅತ್ಯದ್ಭುತ ಸಾಧನೆಯೆಂದರೆ, ನಮ್ಮಲ್ಲಿ ಪರಂಪರಾಗತವಾಗಿ ಬಂದಿದ್ದ ಎಲ್ಲಾ ದುರ್ಬಲಗೊಳಿಸುವಂಥದ್ದನ್ನೂ ಮೂಢನಂಬಿಕೆಗಳನ್ನೂ ತೆಗೆದುಹಾಕಿ, ನಮ್ಮಲ್ಲಿನ ಅತ್ಯುತ್ತಮವಾದುದನ್ನು ಪಾಶ್ಚಾತ್ಯರಿಂದ ತೆಗೆದುಕೊಂಡ ಉತ್ತಮಾಂಶದೊಡನೆ ಒಂದುಗೂಡಿಸಿದ್ದು. ನಮ್ಮ ಶಕ್ತಿಗಳೊಂದಿಗೆ ಪಾಶ್ಚಾತ್ಯ ಸಂಸ್ಕೃತಿಯಲ್ಲಿನ ಶಕ್ತಿಗಳನ್ನು ಸಂಕಲಿಸಿ ಹಿಂದೆಂದಿಗಿಂತಲೂ ಉತ್ತಮವಾದ ಒಂದು ಹೊಸ ಇಂಡಿಯಾವು ಹುಟ್ಟಲಿದೆ ಎಂದು ಅವರು ಹೇಳುತ್ತಿದ್ದರು. ಈ ಆಧುನಿಕ ಕಾಲದಲ್ಲಿ ಸದ್ದಿಲ್ಲದೆ ನಿಧಾನವಾಗಿ ನಡೆಯುತ್ತಿರುವುದು ಅದೇ; ಕಾಲಕ್ರಮದಲ್ಲಿ ಇದು ಲೋಕವನ್ನು ಸ್ತಬ್ಧಗೊಳಿಸುವುದು. ಕ್ರಿಯಾಶೀಲ ಪಾಶ್ಚಾತ್ಯ ಸಂಸ್ಕೃತಿಯನ್ನೊಡಗೂಡಿಕೊಂಡೇ ಸ್ವಾಮಿ ವಿವೇಕಾನಂದರು ಕಳೆದ ಶತಮಾನದಲ್ಲಿ ಜಾಗೃತಗೊಂಡ ಪ್ರಚಂಡ ಶಕ್ತಿಯನ್ನು ಯುಕ್ತ ರೀತಿಯಲ್ಲಿ ಹರಿಯಬಿಟ್ಟರು. ಇಂಡಿಯಾವು ಆಗ ಅನ್ಯದೇಶೀಯರ ರಾಜ್ಯಾಂಗವಾಗಿದ್ದರೂ, ಪಾಶ್ಚಾತ್ಯರ ಚಿಂತನ ವಿಧಾನಗಳ ಪ್ರಭಾವವೂ ಪ್ರಚಂಡವಾಗಿಯೇ ಇದ್ದುದರಿಂದ ನಾವು ಹೊಸ ಹೊಸ ಮಾರ್ಗಗಳಲ್ಲಿ ಚಿಂತಿಸತೊಡಗಿದೆವು. ಆವರೆಗೆ ನಾವು ಕಿರಿದಾದ ಮತದೃಷ್ಟಿಯ ಜಾಡಿನಲ್ಲಿಯೇ ಸಾಗುತ್ತಿದ್ದೆವು. ಪಾಶ್ಚಾತ್ಯ ಹಾಗೂ ಇಂಡಿಯಾದ ಸಾಂಸ್ಕೃತಿಕ ಮೌಲ್ಯಗಳನ್ನು ಅನುಕಲಿಸುವುದೆಂತೆಂದು ಅರಿಯಬಯಸುವವರೂ, ರಾಷ್ಟ್ರದ ನಾಡಿಯನ್ನು ತಿಳಿಯಬಯಸುವವರೂ ಆದ ಪ್ರತಿಯೊಬ್ಬ ಭಾರತೀಯ ನಾಗರಿಕನೂ ಓದಲೇ ಬೇಕಾದ ಪುಸ್ತಕ ಕೊಲಂಬೋದಿಂದ ಅಲ್ಮೋರಕೆ ಎಂಬ ಉಪನ್ಯಾಸಮಾಲಿಕೆಯಲ್ಲಿ ಸ್ವಾಮಿ ವಿವೇಕಾನಂದರು ಆಗಿನ ಸ್ಥಿತಿಗತಿಯ ಚಿತ್ರಣವನ್ನು ಕೊಟ್ಟಿದ್ದಾರೆ.
'ಸ್ವಭಾವತಃ ಅರ್ಥಹೀನವಾದ ವಿಷಯಗಳ ಬಗೆಗಿನ ಹಳೆಯ ಹೋರಾಟಗಳನ್ನೂ ಹಳೆಯ ವಾದವಿವಾದಗಳನ್ನೂ ಬಿಟ್ಟುಬಿಡಿ. ನಮ್ಮ ನೂರಾರು ಪ್ರಬುದ್ಧ ಪುರುಷರು ವರ್ಷಗಟ್ಟಲೆ ಕುಳಿತು ಬಲಗೈಯಿಂದ ನೀರು ಕುಡಿಯಬೇಕೋ ಎಡಗೈಯಿಂದಲೋ, ಕೈಯನ್ನು ಮೂರು ಸಲ ತೊಳೆಯಬೇಕೋ ನಾಲ್ಕು ಸಲವೋ, ಐದು ಸಲ ಬಾಯಿ ಮುಕ್ಕಳಿಸಬೇಕೊ ಆರು ಸಲವೋ, ಮುಂತಾಗಿ ಚರ್ಚಿಸುತ್ತಿದ್ದ ಕಳೆದ ಆರು ಅಥವಾ ಏಳು ನೂರು ವರ್ಷಗಳಿಂದ ಆಗಿರಬಹುದಾದ ಅವನತಿ ಎಷ್ಟೆಂಬುದನ್ನು ಪರಿಭಾವಿಸಿ, ಇಂಥ ಸಾಂದರ್ಭಿಕ ಪ್ರಶ್ನೆಗಳನ್ನೇ ಜೀವನವಿಡೀ ಚರ್ಚಿಸುತ್ತ ಅದರ ಮೇಲೆ ವಿದ್ವತ್ಪೂರ್ಣ ಗ್ರಂಥಗಳನ್ನು ಬರೆಯುವ ಜನರಿಂದ ನೀವು ಏನನ್ನು ತಾನೇ ನಿರೀಕ್ಷಿಸಬಹುದು!'
ಭಾರತವು ಬ್ರಿಟಿಷರ ಸಂಪರ್ಕಕ್ಕೆ ಬಂದಾಗ ಇದೆಲ್ಲಕ್ಕೂ ಬಲವಾದ ಹೊಡೆತ ಬಿತ್ತು. ಜನರೆಲ್ಲ ಇನ್ನೊಮ್ಮೆ ಚಿಂತಿಸುವಂತೆ ಮಾಡಿತು. ಆ ಹಳೆಯ ಮುದಿ ಪಂಡಿತನ ಮಗನೇ ಮುಂದೆ ಹೊಸ ಅಭಿವೃದ್ಧಿಯ ಹಾದಿ ಹಿಡಿದು ಭೌತ ವಿಜ್ಞಾನವನ್ನೋದಿ ಅದಕ್ಕೆ ತನ್ನ ಕಾಣಿಕೆಯನ್ನೂ ಕೊಟ್ಟು ಒಬ್ಬ ನೊಬೆಲ್ ಪ್ರಶಸ್ತಿವಿಜೇತ ಸಿ. ವಿ. ರಾಮನ್ ಆಗುವಂತೆ ಆಯಿತು. ಜನಗಳಿಗೆ ಹೊಸ ಬದುಕನ್ನು ತೆರೆದಿಡುವ ಇದನ್ನೇ ಪುನರುತ್ಥಾನವೆನ್ನುವುದು. ಅದೆಲ್ಲ ಆಗಿದ್ದು ಕಳೆದ ಶತಮಾನದಲ್ಲಿ; ಈಗ ನಾವು ಆ ಪ್ರಚಂಡ ಅಭಿವೃದ್ಧಿಯ ಫಲವನ್ನು ಪಡೆಯುತ್ತಿದ್ದೇವೆ. ಒಂದು ಹೊಸ ತಾರುಣ್ಯದ ಲವಲವಿಕೆ, ಒಂದು ಹೊಸ ಶಕ್ತಿ ಲಭಿಸಿದೆ; ಆದರೂ ನಾವು ನಮ್ಮ ಗೊಂಡಾರಣ್ಯದಿಂದ ಇನ್ನೂ ಹೊರಬಂದಿಲ್ಲ. ಈಗ ಇನ್ನೂ ಹೆಚ್ಚಿನ ತೊಂದರೆಯಿದೆ: ವ್ಯಾಪಕ ಭ್ರಷ್ಟಾಚಾರ ಮತ್ತು ಹಿಂಸೆ; ಆದರೂ ಅದು ಜನಗಳಲ್ಲಿ ಶಕ್ತಿ ಸಾಮರ್ಥ್ಯಗಳಿರುವುದನ್ನು ತೋರಿಸುತ್ತದೆಯಾದ್ದರಿಂದ ಅದೂ ಒಂದು ಆಸ್ತಿ ಎಂದುಕೊಳ್ಳಬೇಕು. ಪರಿಸ್ಥಿತಿಯನ್ನು ಬದಲಾಯಿಸಬಹುದು; ಈ ಎಲ್ಲ ಮಹಾಚಾರ್ಯರುಗಳು ಈ ಶಕ್ತಿಗೆ ಒಂದು ಬೇರೆ ಒಳ್ಳೆಯ ರೂಪವನ್ನು ಕೊಡುವುದಕ್ಕೆ ಬಂದಿರುವುದು. ಹಿಂಸೆ ಪಾತಕಗಳಿವೆಯೆಂದು ಅವರಿಗೇನೂ ಚಿಂತೆಯಿಲ್ಲ. ತಮಸ್ಸಿನಿಂದ ರಜಸ್ಸಿಗೆ ನಿಜವಾಗಿ ಪುರೋಭಿವೃದ್ಧಿಯೇ; ರಜಸ್ಸಿನಲ್ಲಿ ಇದ್ದಾಗ ನೀವು ನಿಮಗೂ ಸಮಾಜಕ್ಕೂ ಸಮಸ್ಯೆಯಾಗಿಬಿಡುವಿರಿ; ಆದರೂ ನಿರ್ಜೀವ ಅವಸ್ಥೆಯಾದ ತಮಸ್ಸಿನಿಂದ ರಜಸ್ಸಿಗೆ ಬರುವುದು ಅಭಿವೃದ್ಧಿಯೇ. ಅಲ್ಲಿಂದ ಮುಂದಿನ ಹಂತವಾದ ಸತ್ತ್ವ ಒಂದು ಅತ್ಯಂತ ಮಾನವೀಯ, ಶಿಸ್ತಿನ, ರಚನಾತ್ಮಕ ಶಕ್ತಿಯುಳ್ಳ ಸ್ಥಿತಿ. ಏನದ್ಭುತ ಅದು! ಭಾರತವು ಇಂತಹ ಬೋಧನೆಗಳನ್ನು ಕೇವಲ ಆಧ್ಯಾತ್ಮಿಕ ಗುರುಗಳಿಂದ ಮಾತ್ರವಲ್ಲ, ರಾಜಕೀಯ ಧುರೀಣರಿಂದಲೂ ಪಡೆಯಿತು. ಲೋಕಮಾನ್ಯ ಬಾಲಗಂಗಾಧರ ತಿಲಕ್, ಸುಭಾಷ್ ಚಂದ್ರ ಬೋಸ್, ಮೋತಿಲಾಲ್ ನೆಹರೂ ಮುಂತಾದವರು ಹಣವನ್ನೂ ಸುಖ ಸೌಲಭ್ಯಗಳನ್ನೂ ದೇಶಕ್ಕಾಗಿ ತ್ಯಾಗಮಾಡಿ ಉದಾತ್ತ ಜೀವನವನ್ನು ನಡೆಸಿದರು. ಶ್ರೀರಾಮಕೃಷ್ಣ ವಿವೇಕಾನಂದರಂತಹ ಆಧ್ಯಾತ್ಮಿಕ ಮಹಾಮಹಿಮರಲ್ಲದೆ ಇಂಥ ಉತ್ತಮರೂ ಸಹ ಕಳೆದ ಶತಮಾನದಲ್ಲಿ ಹಾಗೂ ಈ ಶತಮಾನದ ಆದಿಭಾಗದಲ್ಲಿ ಇದ್ದರು. ಗಾಂಧೀಜಿ ಒಬ್ಬರು ಪ್ರಚಂಡ ಆಧ್ಯಾತ್ಮಿಕ ಶಕ್ತಿಯಾಗಿ ಕಂಗೊಳಿಸಿದರು. ರಾಷ್ಟ್ರೀಯ ಕಾಂಗ್ರೆಸ್ ಧುರೀಣ ಚಿತ್ತರಂಜನದಾಸ್ ಎಂಬವರಿದ್ದರು; ಅವರು ೧೯೨೫ರಲ್ಲಿ ಸತ್ತಾಗ ಸ್ವಯಂ ಗಾಂಧೀಜಿಯವರೇ ಅವರ ಶವವನ್ನು ಸಂಸ್ಕಾರಕ್ಕಾಗಿ ಹೊತ್ತೊಯ್ದರಂತೆ. ಈ ದಾಸ್ ಬಡವ, ಲಾ ಓದಿ ವಕೀಲ ವೃತ್ತಿಯಿಂದ ಸಂಪಾದನೆ ಮಾಡುತ್ತಿದ್ದರು. ಅವರ ತಂದೆ ಪಾಪರ್ ಆಗಿ ತೀರಾ ಬಡತನದಲ್ಲಿ ಪ್ರಾಣ ಬಿಟ್ಟಿದ್ದರು. ಸಂಪಾದನೆ ಪ್ರಾರಂಭಿಸಿದ ಚಿತ್ತರಂಜನ ದಾಸ್ ಮಾಡಿದ ಮೊದಲ ಕೆಲಸವೆಂದರೆ, ತಂದೆಯ ಎಲ್ಲಾ ಸಾಲಗಳನ್ನೂ ಚಿಕ್ಕಾಸೂ ಬಿಡದೆ ತೀರಿಸಿ ಅವರ ಹೆಸರನ್ನು ಪಾಪ ಘೋಷಣೆ ಪಟ್ಟಿಯಿಂದ ತೆಗೆಯಿಸಿದ್ದು. ಇಲ್ಲಿ ನಾವು ಮಾನವ ಮನಸ್ಸಿನ ಔನ್ನತ್ಯವನ್ನು ನೋಡುತ್ತೇವೆ. ತಂದೆ ಸತ್ತಿದ್ದರಿಂದ ಅವರ ಸಾಲಗಳನ್ನು ಇವರು ತೀರಿಸದೆ ಉದಾಸೀನ ಮಾಡಬಹುದಾಗಿತ್ತು; ಆದರೆ ಅವರಿಗೆ ಹಣಕ್ಕಿಂತ ಮರ್ಯಾದೆ ಮುಖ್ಯವೆನಿಸಿತು. ಇವತ್ತು ನಾವು ಆ ಶೀಲವನ್ನು ಕಳೆದುಕೊಂಡಿದ್ದೇವೆ. ಇಂದು ಮರ್ಯಾದೆ ಇದ್ದರೆಷ್ಟು ಬಿಟ್ಟರೆಷ್ಟು, ಹಣವೇ ಮುಖ್ಯ ಎಂಬಂತಾಗಿದೆ - ಕೇವಲ ಎಂಭತ್ತು ವರ್ಷಗಳಲ್ಲಿ! ಇಂಥ ಮಹನೀಯರುಗಳು ನಮ್ಮ ರಾಷ್ಟ್ರದ ಶಕ್ತಿಗಳಿಗೆ ಮಾರ್ಗದರ್ಶನ ಮಾಡಿ ಭಾರತಕ್ಕೆ ಹೊಸ ಜೀವನವನ್ನು ಕೊಟ್ಟರು; ಅವರೆಲ್ಲರ ಮುಕುಟರತ್ನವಾಗಿ ಸ್ವಾಮಿ ವಿವೇಕಾನಂದರಿದ್ದರು, ಅವರ ಪ್ರಭಾವ ಈ ಎಲ್ಲ ರಾಜಕೀಯ ಧುರೀಣರ ಮೇಲೆ ಆಗಿತ್ತು. ರೋಮಾ ರೋಲಾ ಬರೆದ ವಿವೇಕಾನಂದರ ಜೀವನಚರಿತ್ರೆಯನ್ನೋದಿದರೆ ನಮಗೆ ಈ ಪ್ರಭಾವ ಎಂಥದೆಂದು ತಿಳಿಯುತ್ತದೆ. ೧೯೨೧ರ ಕಾಂಗ್ರೆಸ್ ಮಹಾಧಿವೇಶನಕ್ಕಾಗಿ ಕಲ್ಕತ್ತಾಕ್ಕೆ ಹೋದ ಗಾಂಧೀಜಿ ಬೇಲೂರಿನ ರಾಮಕೃಷ್ಣ ಮಠಕ್ಕೂ ಭೇಟಿಕೊಟ್ಟರು. ಅಲ್ಲಿನ ಹುಲ್ಲುಹಾಸಿನಲ್ಲಿ ಪ್ರಾಸಂಗಿಕವಾಗಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಗಾಂಧೀಜಿ, ತಾವು ಬೇಲೂರು ಮಠಕ್ಕೆ ಸತ್ಯಾಗ್ರಹವನ್ನು ಬೋಧಿಸುವುದಕ್ಕೆ ಬಂದಿಲ್ಲವೆಂದೂ, ತಾವು ದೇಶವನ್ನು ಇನ್ನೂ ಹೆಚ್ಚಾಗಿ ಪ್ರೀತಿಸಲು ವಿವೇಕಾನಂದರು ವಾಸಿಸಿದ್ದ ಈ ಸ್ಥಳದಿಂದ ಸ್ಫೂರ್ತಿಯನ್ನು ಪಡೆದುಕೊಳ್ಳಲು ಬಂದಿರುವುದಾಗಿಯೂ ತಿಳಿಸಿದರು. 'ವಿವೇಕಾನಂದರನ್ನು ಓದಿದ ಮೇಲೆ ಭಾರತದ ಮೇಲಣ ನನ್ನ ಪ್ರೀತಿ ಸಾವಿರ ಪಾಲು ಹೆಚ್ಚಿದೆ', ಎಂದು ಹೇಳಿ ಸ್ವಾಮೀಜಿಯನ್ನು ಗೌರವಿಸಿದ ಗಾಂಧೀಜಿ, ಇಲ್ಲಿಗೆ ಬಂದವರು ನೀವೂ ಮನೆಗೆ ಹೋಗುವ ಮುನ್ನ ಆ ಸ್ಫೂರ್ತಿಯಲ್ಲಿ ಸ್ವಲ್ಪವನ್ನು ಕೊಂಡೊಯ್ಯಿರಿ ಎಂದು ನೆರೆದಿದ್ದ ಜನರಿಗೆ ಹೇಳಿದರು.
ತಮ್ಮ ಮೂವತ್ತೊಂಭತ್ತು ವರ್ಷಗಳ ಅಲ್ಪಾವಧಿಯ ಬದುಕಿನಲ್ಲಿ ಸ್ವಾಮೀಜಿ ಜರ್ಜರಿತವಾಗಿದ್ದ ಈ ಅದ್ಭುತವಾದ ಪ್ರಾಚೀನ ಸಂಸ್ಕೃತಿಗೆ ಹೊಚ್ಚ ಹೊಸ ತಾರುಣ್ಯವನ್ನು ತಂದುಕೊಟ್ಟರು. ಎಷ್ಟೋ ಸಾಮ್ರಾಜ್ಯವಾದಿ ಬ್ರಿಟಿಷ್ ಬರಹಗಾರರು ಕ್ರಿಯಾಶೀಲವಾಗಿದ್ದ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಈ ಭಾರತೀಯ ಸಂಸ್ಕೃತಿ ಖಿಲಗೊಂಡು ನಾಮಾವಶೇಷವಾಗುವುದೆಂದು ಭವಿಷ್ಯ ನುಡಿದಿದ್ದರು. ಭಾರತದಲ್ಲಿ ಆಂಗ್ಲ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ ಮೆಕಾಲೆ ಅದು ಸ್ವಲ್ಪ ಕಾಲದಲ್ಲೇ ಸಾಯುವುದೆಂದು ಬರೆದಿದ್ದ. ಅದರ ವಿರುದ್ಧವಾದದ್ದೇ ಸಂಭವಿಸಿತು. ಭಾರತವು ಮತ್ತೊಮ್ಮೆ ಶಕ್ತಿಪೂರ್ಣವಾಯಿತು, ಹೊಸ ಶಕ್ತಿಯಿಂದ ಮತ್ತೊಮ್ಮೆ ಮುನ್ನಡೆಯಲಾರಂಭಿಸಿತು. ರಾಮಕೃಷ್ಣ ವಿವೇಕಾನಂದರು ಒಂದುವೇಳೆ ಬಾರದೆ ಇದ್ದರೂ, ನಾವು ಶಕ್ತಿಶಾಲಿಗಳಾಗಿಯೆ, ಕ್ರಿಯಾಶೀಲರಾಗಿಯೇ ಇರುತ್ತಿದ್ದೆವು. ಆಧುನಿಕ ಪಾಶ್ಚಾತ್ಯ ಸಂಸ್ಕೃತಿ ನಮ್ಮನ್ನು ಶಕ್ತಿಶಾಲಿಗಳನ್ನಾಗಿಸುತ್ತಿತ್ತು, ಇದರಲ್ಲಿ ಸಂದೇಹವಿಲ್ಲ; ಆದರೆ ನಾವು ನಮ್ಮ ಆತ್ಮವನ್ನು ಕಳೆದುಕೊಂಡಿರುತ್ತಿದ್ದೆವು, ನಮ್ಮ ಪ್ರಾಚೀನ ಪರಂಪರೆಯ ನಿರಂತರತೆಯನ್ನು ಕಳೆದುಕೊಂಡಿರುತ್ತಿದ್ದೆವು. ಅಂತಹ ಮಹಾ ಪ್ರಬೋಧಕರು ಬಂದದ್ದರಿಂದ ಹಾಗೆ ಆಗಲಿಲ್ಲ ಅಷ್ಟೆ.
ಇದೇ ಅಭಿಪ್ರಾಯಗಳನ್ನು ನಾವು ಶಂಕರಾಚಾರ್ಯರ ಗೀತಾಭಾಷ್ಯದ ಮುನ್ನುಡಿಯಲ್ಲಿ ನೋಡುವೆವು. ಪ್ರಗತಿಪರಾಙ್ಮುಖ ಧೋರಣೆಯನ್ನು ತಳೆದ ಆಗಿನ ಕೆಲವು ಭಾರತೀಯ ಮುಂದಾಳುಗಳು, ನಾವು ಪಶ್ಚಿಮದೊಂದಿಗೆ ಯಾವ ಸಂಪರ್ಕವನ್ನೂ ಇಟ್ಟುಕೊಳ್ಳಬಾರದೆಂದೂ, ಅನ್ಯದೇಶಗಳ ಪರಿಕಲ್ಪನೆಗಳನ್ನು ನಾವು ಸ್ವೀಕರಿಸಬಾರದೆಂದೂ, ನಮ್ಮದಕ್ಕೇ ನಾವು ಅಂಟಿಕೊಂಡು ಇರಬೇಕೆಂದೂ ಅಭಿಪ್ರಾಯಪಟ್ಟರು. ಆದರೆ ದೇಶವು ಅವರ ಮಾತನ್ನು ಕೇಳಲಿಲ್ಲ. ಸ್ವಾಮೀಜಿ ನಮ್ಮ ಸಂಸ್ಕೃತಿಯೇನೋ ತುಂಬಾ ಮಹತ್ತ್ವದ್ದೇ, ಆದರೆ ಬೇರೆಯವರು ಮಹತ್ತ್ವದ ಪರಿಕಲ್ಪನೆಗಳನ್ನು ಕೊಡುವುದಾದರೆ ನಾವು ಅದನ್ನು ವಿನೀತರಾಗಿ ಸ್ವೀಕರಿಸಬೇಕೆಂದು ಹೇಳಿದರು. ನಮಗೆ ಅವರು ಪಶ್ಚಿಮದಿಂದ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಲೋಕವ್ಯವಹಾರ, ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಕಲಿಯಿರಿ ಎಂದು ಬುದ್ಧಿಮಾತು ಹೇಳಿದರು. ಅಮೆರಿಕಾದಿಂದ ಇಂಡಿಯಾಕ್ಕೆ ಬರೆದ ಕಾಗದವೊಂದರಲ್ಲಿ ಹೀಗೆಂದಿದ್ದಾರೆ (ಕೃತಿಶ್ರೇಣಿ, ಸಂಪುಟ ೪, ಪುಟ noe):
'ಸಮಾನತಾಭಾವ, ಸ್ವಾತಂತ್ರ್ಯ, ಕಾರ್ಯವಿಚಕ್ಷಣತೆ, ಶಕ್ತಿಗಳಲ್ಲಿ ನೀನು ಪಾಶ್ಚಿಮಾತ್ಯರಲ್ಲಿ ಪಾಶ್ಚಿಮಾತ್ಯನೂ, ಧಾರ್ಮಿಕ ಸಂಸ್ಕೃತಿಯಲ್ಲೂ ಹುಟ್ಟರಿವಿನಲ್ಲೂ ಹಿಂದೂ ಬೆನ್ನೆಲಬನ್ನುಳ್ಳವನೂ ಆಗಬಲ್ಲೆಯಾ?'
ಇತರರಿಂದ ಕಲಿಯಬೇಕೆಂಬುದೇನೂ ಹೊಸತಲ್ಲ; ಮನುಸ್ಮೃತಿಯಲ್ಲಿ (೨, ೨೩೮) ನಾವು ಈ ಹೇಳಿಕೆಯನ್ನು ಕಾಣುತ್ತೇವೆ.
ಶ್ರದ್ದಧಾನಃ ಶುಭಾಂ ವಿದ್ಯಾಮ್ ಆದದೀತ್ ಅವರಾದಪಿ |
ಅಂತ್ಯಾದಪಿ ಪರಂ ಧರ್ಮಂ ಸ್ತ್ರೀರತ್ನಂ ದುಷ್ಕುಲಾದಪಿ ||
“ಕೆಳಗಿನವರಿಂದಲಾದರೂ ಸಹ, ಶುದ್ಧಜ್ಞಾನವನ್ನು ಶ್ರದ್ಧೆಯಿಂದ ಗಳಿಸಿಕೊಳ್ಳಬೇಕು; ಧರ್ಮವನ್ನು ಕೆಳಜಾತಿಯವರಿಂದಲಾದರೂ ತಿಳಿದುಕೊಳ್ಳಬೇಕು; ಸ್ತ್ರೀರತ್ನವನ್ನು ಕೆಟ್ಟ ಕುಟುಂಬದಿಂದಲಾದರೂ ತಂದುಕೊಳ್ಳಬೇಕು.'
ಎಂತಹ ಉದಾತ್ತವಾದ ಸಾಮಾಜಿಕ ಭಾವನೆ! ನವಭಾರತವೆಂದರೆ ಪಾಶ್ಚಾತ್ಯ ಪೌರ್ವಾತ್ಯಗಳ ಒಳ್ಳೆಯ ಸಂಕಲನವಾಗಬೇಕೆಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು; ಇಂದು ಪ್ರಾಚೀನ ಗ್ರೀಕ್ ಪ್ರಾಚೀನ ಹಿಂದೂವನ್ನು ಇಂಡಿಯಾದ ಮಣ್ಣಿನ ಮೇಲೆ ಭೇಟಿ ಮಾಡುತ್ತಿದ್ದಾನೆ. ೧೮೯೭ರ ಫೆಬ್ರವರಿಯಲ್ಲಿ ಮದರಾಸಿನಲ್ಲಿ ಕೊಟ್ಟ ನಮ್ಮ ಮುಂದಿರುವ ಕೆಲಸ ಎಂಬ ಭಾಷಣದಲ್ಲಿ ಇದು ಅವರೇ ಹೇಳಿದ ಮಾತು. ಪ್ರಾಚೀನ ಇಂಡಿಯಾದಲ್ಲಿ ನಮ್ಮ ವಿದ್ಯಾಭ್ಯಾಸವು ಒಗ್ಗೂಡಿಸಿದ್ದಾಗಿತ್ತು. ನಮ್ಮ ಸಂಸ್ಕೃತಿಯನ್ನೂ ಉಳಿಸಿಕೊಂಡು, ಇತರರು ಏನನ್ನೇ ಕೊಡಲಿ ಅದನ್ನು ಸ್ವೀಕರಿಸಿ ರಕ್ತಗತ ಮಾಡಿಕೊಳ್ಳುತ್ತಿದ್ದೆವು. ಆ ತರಹದ ಒಗ್ಗೂಡಿಕೆ ಈಗ ಪುನಃ ಹೊಸ ಭಾರತವನ್ನು ಕಟ್ಟುತ್ತದೆ. ಈ ಪರಿಕಲ್ಪನೆ ನಿಧಾನವಾಗಿ, ಏಕಪ್ರಕಾರವಾಗಿ ಹರಡಲಿ. ನಮ್ಮಲ್ಲಿಂದು ಬೇಕಾದಷ್ಟು ನ್ಯೂನತೆಗಳಿವೆ, ದೌರ್ಬಲ್ಯಗಳಿವೆ, ಕೇಡುಗಳಿವೆ. ಇವೆಲ್ಲ ಪುನರುಜ್ಜೀವನಗೊಳ್ಳುತ್ತಿರುವ ದೇಶದ ಬೆಳವಣಿಗೆಯ ಭಾಗವಾಗಿ ಬರತಕ್ಕವುಗಳೇ. ತುಂಬಾ ಕೊರತೆಯನ್ನನುಭವಿಸಿದ ಜನರು, ಜೀವನದಲ್ಲಿ ಸ್ವಲ್ಪ ಏನಾದರೂ ಅವಕಾಶ ಸಿಕ್ಕಾಗ, ತಪ್ಪು ಮಾಡುವುದು ಸಹಜ; ಆದರೆ ಮಹಾ ಆಚಾರ್ಯರುಗಳು ನಮಗೆ ವಿಧಾನವನ್ನು ತಿಳಿಸಿ ಮಾರ್ಗದರ್ಶನವನ್ನೂ ಮಾಡಿರುವುದರಿಂದ, ನಾವು ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ.
ಈ ಸಂಸ್ಕೃತಿಗಳ ಸಂಕಲನವೆಂಬ ಕಲ್ಪನೆ ಮಹತ್ತ್ವದ್ದು. ನಿಜವಾಗಿ ಹೇಳುವುದಾದರೆ, ಆಧುನಿಕ ಯೂರೋಪಿನ ನಾಗರಿಕತೆಯೂ ಸಂಕಲಿತ ಸಂಸ್ಕೃತಿಗಳ ಫಲವೇ. ಕ್ರಿ.ಶ. ಹದಿನೈದು-ಹದಿನಾರನೆಯ ಶತಮಾನದ ಹೊತ್ತಿಗೆ ಗ್ರೀಕ್ ಚಿಂತನೆ ಯೂರೋಪನ್ನು ಪ್ರವೇಶಿಸಿತು. ಆ ಕಾಲಕ್ಕೆ ಗ್ರೀಸ್ ಒಂದು ಸತ್ತ ರಾಷ್ಟ್ರವಾಗಿತ್ತು. ಎರಡನೆಯ ಶತಮಾನದ ಹೊತ್ತಿಗೆ ಅದು ರೋಮನ್ ಸಾಮ್ರಾಜ್ಯದಿಂದ ಗೆಲ್ಲಲ್ಪಟ್ಟಿತ್ತು. ಮೂರನೆಯ ಶತಮಾನದಲ್ಲಿ ಅದು ಪ್ರಾಚೀನ ಗ್ರೀಕ್ ಸಂಸ್ಕೃತಿಗೆ ಸಂಪೂರ್ಣ ಅನ್ಯವಾಗಿದ್ದ ಕ್ರೈಸ್ತಮತವನ್ನು ಒಪ್ಪಿಕೊಂಡಿತು. ಕ್ರೈಸ್ತ ಅಥವಾ ಇಸ್ಲಾಂ ಮತ ಹೋದಲ್ಲೆಲ್ಲ ಪ್ರಾಚೀನವಾಗಿದ್ದ ಎಲ್ಲವನ್ನೂ ನಾಶಮಾಡುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಹೀಗೆ, ಗ್ರೀಕ್ ಚಿಂತನೆ ಕೇವಲ ಪುಸ್ತಕಗಳಲ್ಲಿ ಮಾತ್ರ ಉಳಿಯುವಂತಾಯಿತು. ಪಶ್ಚಿಮ ಯೂರೋಪಿನ ಜನರಿಗಾಗ ಗ್ರೀಕ್ ಚಿಂತನೆ ಏನೂ ಗೊತ್ತಿರಲಿಲ್ಲ; ಅವರು ಕಾಡುಜನರಾಗಿದ್ದರು. ರೋಮನ್ ಸಾಮ್ರಾಜ್ಯದಿಂದಾಚೆ ಡಾನುಬೆ ನದಿಯನ್ನು ದಾಟಿದರೆ ಸಿಕ್ಕುವ ಸ್ಕಾಂಡಿನೇವಿಯನ್ ರಾಷ್ಟ್ರಗಳು, ಜರ್ಮನಿ ಎಲ್ಲವೂ ಆಗ ಕಾಡುಜನರ ಪ್ರದೇಶವಾಗಿತ್ತು. ಕೊನೆಗೆ ರೋಮನರೂ ಕ್ರೈಸ್ತಮತವನ್ನು ಸ್ವೀಕರಿಸಿದರು; ಆದರೆ ಆ ಧರ್ಮವು ಜೀವನದ ಬಗ್ಗೆ ಸಂಕುಚಿತ ದೃಷ್ಟಿಯನ್ನು ಹೊಂದಿತ್ತು; ಪ್ರಾಚೀನ ಗ್ರೀಕರ ಮತ್ತು ರೋಮನರ ಮಹತ್ಸಾಧನೆಗಳಿಗೆ ಮನ್ನಣೆ ಕೊಡಲಾರದೆ, ಅವರನ್ನು ಕ್ಷುದ್ರಧರ್ಮೀಯರೆಂದು ಕರೆಯಿತು. ಹಳೆಯ ಸಂಸ್ಕೃತಿಗಳೆಲ್ಲ ನಿರ್ನಾಮವಾದುವು. ಯೂರೋಪಿನ ಇತಿಹಾಸದ ಕ್ರಿ. ಶ. ೧೨೫೦ರ ವರೆಗಿನ ಮಧ್ಯಯುಗವನ್ನು ಅಂಧಕಾರದ ಯುಗವೆಂದು ಕರೆಯುತ್ತಾರೆ.
ಅನಂತರ, ಯೂರೋಪಿನ ಪೂರ್ವಪಶ್ಚಿಮಗಳ ಮಧ್ಯದ ಹೃದಯವಾದ ರೋಮನ್ ಕಾನ್‌ಸ್ಟಾಂಟಿನೋಪಲ್ ಅನ್ನು ತುರ್ಕರು ಗೆದ್ದು ವಶಪಡಿಸಿಕೊಂಡರು. ದಿನೇದಿನೇ ತುರ್ಕರು, ಮಹಮ್ಮದೀಯರು ಹೆಚ್ಚು ಹೆಚ್ಚು ಬಲಶಾಲಿಗಳಾಗಿ ಹತ್ತಿರವಿದ್ದ ಎಲ್ಲಾ ಕ್ರೈಸ್ತ ದೇಶಗಳನ್ನೂ ಆಕ್ರಮಿಸಿಕೊಂಡರು. ಕ್ರಿ.ಶ. ೧೪೫೩ರಲ್ಲಿ ಕಾನ್‌ಸ್ಟಾಂಟಿನೋಪಲ್ ಶತ್ರುವಶವಾದಮೇಲೆ ಅನೇಕ ಗ್ರೀಕ್ ವಿದ್ವಾಂಸರು ತಮ್ಮ ಗ್ರಂಥಗಳೊಡನೆ ಪಶ್ಚಿಮ ಯೂರೋಪಿಗೆ ವಲಸೆ ಹೋಗಲು ಆರಂಭಿಸಿದರು. ಯೂರೋಪಿಯನ್ನರು ಟರ್ಕಿಯ ಮೂಲಕ ಪೂರ್ವಕ್ಕೆ ಪ್ರಯಾಣಮಾಡಲು ಅವಕಾಶವಿರಲಿಲ್ಲ; ಫಲವಾಗಿ ಯೂರೋಪು ಇಂಡಿಯಾ ಇತ್ಯಾದಿ ಪೂರ್ವದೇಶಗಳೊಂದಿಗೆ ಸಂಪರ್ಕ ಕಳೆದುಕೊಂಡಿತು. ಆ ಕಾರಣದಿಂದಲೇ ಪಾಶ್ಚಿಮಾತ್ಯರು ಗುಡ್‌ಹೋಪ್ ಭೂಶಿರವನ್ನು ಸುತ್ತಿಕೊಂಡು ಇಂಡಿಯಾಕ್ಕೆ ಹೋಗುವ ಹೊಸ ಮಾರ್ಗವನ್ನು ಶೋಧಿಸಿದ್ದು; ಅಂಥದೊಂದು ಪ್ರಯತ್ನದಲ್ಲಿ ಪಶ್ಚಿಮಕ್ಕೆ ತೆರಳಿ ಅಮೆರಿಕಾವನ್ನು ತಲುಪಿ ಅದನ್ನೇ ಇಂಡಿಯಾ ಎಂದು ತಿಳಿದದ್ದು. ಇದು ಇತ್ತೀಚಿನ ಇತಿಹಾಸ. ಆದರೆ ಕ್ರಿ. ಶ. ೧೪೫೩ರ ಆಸುಪಾಸಿನಲ್ಲಿ, ಕಾನ್‌ಸ್ಟಾಂಟಿನೋಪಲ್ ಬಿದ್ದು ಹೋದಾಗ, ಗ್ರೀಕ್ ಚಿಂತನೆ ಪಶ್ಚಿಮ ಯೂರೋಪನ್ನು ಪ್ರವೇಶಿಸಿ ಅದಕ್ಕೆ ಹೊಸ ಮಾನವೀಯತೆಯ ವಿಶಾಲವಾದ ಲೋಕದೃಷ್ಟಿಯನ್ನು ತಂದುಕೊಟ್ಟಿತು. ಯೂರೋಪಿನ ಚರಿತ್ರೆಯಲ್ಲಿ ಇದು ಪುನರುತ್ಥಾನವೆಂದು ಪ್ರಸಿದ್ಧವಾಗಿದೆ. ಮುಂದೆ ಹದಿನಾರನೆಯ ಶತಮಾನದಿಂದೀಚೆಗೆ ಅಲ್ಲಿ ನಡೆದ ಎಲ್ಲ ಅಭಿವೃದ್ಧಿಯೂ ಯೂರೋಪಿಯನ್ ಮನಸ್ಸು ಮತ್ತು ಗ್ರೀಕೊ-ರೋಮನ್ ಸಂಸ್ಕೃತಿಗಳ ಸಂಕಲನದ ಫಲ.
ಅನಂತರ ನಡೆದದ್ದು ಸುಧಾರಣೆ, ಪರಿಷ್ಕರಣೆ; ಕ್ರೈಸ್ತಮತವು ಒಡೆದುಹೋಗಿ, ವಾಲ್ಟೇರ್ ಮತ್ತು ಜರ್ಮನಿ ಮತ್ತಿತರ ದೇಶಗಳ ಪ್ರಬೋಧಿತ ಗುಂಪಿನ ಜನರು ನಾಸ್ತಿಕರಾದರು. ಹೇಗಾದರೂ ಆಗಲಿ, ಇದು ಪ್ರಾಚೀನ ಗ್ರೀಸ್‌ನಲ್ಲಿ ಆದಂತೆಯೇ ಹೊಸ ಶಕ್ತಿಯ, ಹೊಸ ತಾರುಣ್ಯದ, ತನ್ನನ್ನು ತಾನು ಹದ್ದಿನಲ್ಲಿರಿಸಿಕೊಳ್ಳಲಾರದ ಹೊಸ ಯೂರೋಪನ್ನು ಹುಟ್ಟುಹಾಕಿತು. ಇಂಥದೇ ಒಂದು ಪರಿಸ್ಥಿತಿ ಪ್ರಾಚೀನ ಗ್ರೀಸ್‌ನಲ್ಲೂ ಉಂಟಾಗಿತ್ತು. ಕೇವಲ ಎರಡೂವರೆ ಲಕ್ಷ ಜನಸಂಖ್ಯೆಯುಳ್ಳ ಅಥೆನ್ಸ್‌ನಂಥ ಒಂದು ಪುಟ್ಟ ನಗರ ಇಡೀ ಗ್ರೀಸನ್ನೇ ವ್ಯಾಪಿಸುವಷ್ಟು ಪ್ರಚಂಡ ಬಲವನ್ನು ಪಡೆದ ಚಕ್ರಾಧಿಪತ್ಯ ಎನ್ನಿಸಿಕೊಂಡಿತು; ಅದರ ದೊರೆ ಅಲೆಕ್ಸಾಂಡರ್ ಅನೇಕ ದೇಶಗಳನ್ನು ಗೆಲ್ಲುತ್ತ ಗೆಲ್ಲುತ್ತ ಇಂಡಿಯಾದವರೆಗೂ ಬಂದನು. ಬಳಿಕ ಯೂರೋಪಿಯನ್ ದೇಶಗಳೂ ಸಹ ಅಂತೆಯೇ ಆಗಿದ್ದವು. ಪ್ರಚಂಡ ಶಕ್ತಿಶಾಲಿಗಳಾಗಿದ್ದ ಅವು, ತಮ್ಮನ್ನು ಹೇಗೆ ಹದ್ದಿನಲ್ಲಿರಿಸಿಕೊಳ್ಳಬೇಕೆಂದು ಅರಿಯದೆ, ಹೊಸ ದೇಶಗಳನ್ನು ಗೆಲ್ಲುತ್ತ, ವಸಾಹತುಗಳನ್ನು ಸ್ಥಾಪಿಸುತ್ತ, ಸೂರೆ ಹೊಡೆಯುತ್ತ, ನಾಶಗೈಯುತ್ತ ನಡೆದರು. ಜೊತೆಗೆ ತಮ್ಮದೇ ಆದ ಹೊಸ ಕಲ್ಪನೆಗಳನ್ನೂ ಹರಡಿದರು. ಆಗ ಯೂರೋಪಿಗೆ ಲಭ್ಯವಾದ ನವಜೀವನ ಈಗ ಕ್ಷೀಣಿಸುತ್ತಿದೆ. ಇದೇ ಕಾಲಕ್ಕೆ ಇಂಡಿಯಾದಿಂದ ವಿಶಾಲಮನೋಭಾವದ, ವಿವೇಚನಾಯುಕ್ತವಾದ ಆಧ್ಯಾತ್ಮಿಕ ಪರಿಕಲ್ಪನೆಗಳು ಯೂರೋಪು ಅಮೆರಿಕಾಗಳಿಗೆ ಹೋಗಿ ಅಲ್ಲಿನ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಪ್ರಾರಂಭವಾಯಿತು.
ಸಾಮ್ರಾಜ್ಯಶಾಹಿ ಬ್ರಿಟನ್ ಇಂಡಿಯಾದ ಮೇಲೆ ಆಧಿಪತ್ಯ ಸ್ಥಾಪಿಸಿದಾಗ, ಅದೊಂದು ಪೂರ್ವಪಶ್ಚಿಮಗಳ ಅಸಂತೋಷದ ಪ್ರತಿರೋಧವಾಗುವಂತಾಯಿತು. ಈಗ ಅದು ಸಂತೋಷದ ಮುಖಾಬಿಲೆಯಾಗಿ ಅಭಿವೃದ್ಧಿಯಾಗಿದೆ. ಪೂರ್ವಕ್ಕೂ ಪಶ್ಚಿಮಕ್ಕೂ ಪರಿಕಲ್ಪನೆಗಳ ಪರಸ್ಪರ ವಿನಿಮಯ ನಡೆದಿದೆ; ಜನರು ಪಶ್ಚಿಮದ ಅನೇಕ ಕಲ್ಪನೆಗಳನ್ನು ಸ್ವಾಗತಿಸುತ್ತಿದ್ದಾರೆ. ಆಧುನಿಕ ಪಾಶ್ಚಾತ್ಯ ನಾಗರಿಕತೆ ರೋಂನಂತೆ ನಾಶವಾಗುವುದಿಲ್ಲ. ಕ್ರೈಸ್ತಮತವು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದರಿಂದ ರೋಂ ನಾಶವಾಗಬೇಕಾಯಿತು. ಚರ್ಚ್ ಮತ್ತು ಅದರ ಅಧಿಕಾರ—ಎರಡೇ ಉಳಿದು ಇನ್ನೆಲ್ಲವೂ ಅಂತರ್ಧಾನವಾಗುವಂತಾಯಿತು. ಇತಿಹಾಸಕಾರ ಆರ್ನಾಲ್ಡ್ ಟಾಯ್ನ್ ಬೀ ಅವರು ರೋಂನ 'ಕ್ಷುದ್ರಧರ್ಮ'ವನ್ನು (Paganism) ಪ್ರತಿನಿಧಿಸಿದ ರೋಮನ್ ಸೆನೇಟರ್ ಸಿಮಾಕಸ್‌ನಿಗೂ, ಕ್ಯಾಥೊಲಿಕ್ ಕ್ರೈಸ್ತಧರ್ಮವನ್ನು ಪ್ರತಿನಿಧಿಸಿದ ರೋಂನ ಬಿಷಪ್ ಆ್ಯಂಬ್ರೋಸ್‌ರಿಗೂ ನಡೆದ ವಾಗ್ಯುದ್ಧವನ್ನು ಉಲ್ಲೇಖಿಸುತ್ತಾರೆ. ರೋಮನ್ ಸಾಮ್ರಾಜ್ಯದಲ್ಲಿ ತನ್ನ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿರುವ ತಮ್ಮ ಕ್ರೈಸ್ತಮತವೊಂದೇ ದೇವರೆಡೆಗೆ ಹೋಗಲು ದಾರಿ ಎಂಬ ದೃಷ್ಟಿ ಬಿಷಪ್ಪರದು. ದೇವರನ್ನು ಕಾಣಲು ಅನೇಕ ಮಾರ್ಗಗಳಿವೆ ಎಂಬುದು “ಕ್ಷುದ್ರಧರ್ಮಿ” ಸಿಮಾಕಸ್‌ನ ಅಭಿಪ್ರಾಯ. ಕೊನೆಗೆ ಕ್ರಿಶ್ಚಿಯನ್ ಚರ್ಚ್ ಎದುರಿಗೆ ಸೆನೇಟರ್ ಸಿಮಾಕಸ್ ಸುಮ್ಮನಾಗಬೇಕಾಯಿತು. ಆದರೆ, ಸೆನೇಟರ್‌ನನ್ನೇನೋ ಅಂದು ಸುಮ್ಮನಾಗಿಸಿದರು, ಅವನ ದೃಷ್ಟಿಕೋಣವು ಇಂದಿಗೂ ಮಿಲಿಯಾಂತರ ಹಿಂದೂಗಳಿಂದ ಪುರಸ್ಕೃತವಾಗಿದೆ ಎಂದು ಟಾಯ್ನ್ ಬೀ ಸೇರಿಸುತ್ತಾರೆ.
ಹೇಗಾದರೂ ಆಗಲಿ, ಈಗ, ಇಂಡಿಯಾದ ಪುನರುತ್ಥಾನವಾದ ಮೇಲೆ, ಹೊಸ ಕಲ್ಪನೆಗಳು ಎಲ್ಲಾ ಪಾಶ್ಚಿಮಾತ್ಯ ದೇಶಗಳಿಗೂ ಹರಡುತ್ತಿವೆ; ಅವು ಪುನಃ ನವಶಕ್ತಿಯನ್ನೂ ರಭಸವನ್ನೂ ಪಡೆದುಕೊಳ್ಳುತ್ತವೆ. ಪಶ್ಚಿಮದಲ್ಲಿ ಇಂದು ತಿನ್ನುವುದು, ಕುಡಿಯುವುದು, ಭೋಗಾನ್ವೇಷಣೆ - ಇದೇ ಪ್ರಧಾನವಾದ ಸೇವನಾತತ್ತ್ವದ ಜೀವನವಿಧಾನವನ್ನು ಬೇಡವೆಂದು ಬಿಟ್ಟ ಹಲವರನ್ನು ನೀವು ಕಾಣುತ್ತೀರಿ. ಇದು ಮೊಟ್ಟಮೊದಲು ಕಾಣಿಸಿಕೊಂಡಿದ್ದು ಹಿಪ್ಪಿ ಆಂದೋಳನದ ರೂಪದಲ್ಲಿ - ಮೊದಲು ಅಮೆರಿಕಾದಲ್ಲಿ, ನಂತರ ಫ್ರಾನ್ಸ್ ನಲ್ಲಿ: ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಬಾಲಕ(ಅಥವಾ ಬಾಲಕಿ)ನೊಬ್ಬನು ತಾನು ಆ ಕುಟುಂಬದವನೆಂದು ಗುರುತಿಸಿಕೊಳ್ಳಲು ಇಚ್ಛಿಸದೆ ಹೋಗುವುದು. ಬಹು ಸಾಮಾನ್ಯವಾದ ಸರಳ ಉಡುಪನ್ನು ಅವರು ಆರಿಸಿಕೊಂಡರು, ತ್ಯಾಗದ ಚಿಹ್ನೆಯಾಗಿ, ಜನಗಳಲ್ಲಿ ಹೊಸ ಶಕ್ತಿ ಪ್ರವಹಿಸಲಾರಂಭಿಸಿದ ಪ್ರಾರಂಭ ಅದು. ಸದ್ಯಕ್ಕೆ ಮಂಕಾಗಿ ತಗ್ಗಿರುವ ಅದು ಪುನಃ ಜೋರಾಗಬಹುದು.
ಶಂಕರಾಚಾರ್ಯರ ಈ ಮಾತುಗಳನ್ನೋದಿದಾಗ, ಮಾನವ ಸಮಾಜದ ಬಗೆಗಿನ, ಮಾನವನ ಒಟ್ಟು ಪ್ರಯತ್ನದ ಬಗೆಗಿನ ಸತ್ಯವನ್ನು ನೀವು ನೋಡುವಿರಿ. ಸಂಸ್ಕೃತಿ ಎಂದರೆ ಒಂದು ಅಲೆಯಂತೆ - ಕೆಳಕ್ಕೆ ಹೋಗುವುದು, ಮತ್ತೆ ಮೇಲಕ್ಕೆ ಬರುವುದು. ಈ ಮೇಲಕ್ಕೆ ಬರುವುದರ ಚಾಲನೆಯು, ನಮ್ಮ ದೇಶದಲ್ಲಿ, ನಾನು ಹಿಂದೆಯೇ ಹೇಳಿದಂತೆ, ಯಾವಾಗಲೂ ಅವತಾರ-ಪುರುಷನೊಬ್ಬನ ಆವಿರ್ಭಾವವಾದಾಗಲೇ ಆಗುತ್ತದೆ. ರಾಜಕಾರಣಿ, ಸೈನ್ಯಾಧಿಪತಿ ಅಥವಾ ಭೌತಿಕ ವಿಜ್ಞಾನಿ ಇಂತಹ ಚಾಲನೆಯನ್ನು ಕೊಡಲಾರ. ಇಂತಹ ಪ್ರವಾಹವನ್ನು ಹರಿಯಬಿಡಬಲ್ಲವನು ಮಾನವನ ಹೃದಯದಲ್ಲಿರುವ ಸತ್ಯದ ಬಗ್ಗೆ ಆಳವಾದ ಅಂತರ್ದರ್ಶನವುಳ್ಳ ದೇವಮಾನವ ಮಾತ್ರ. ನಾನು ಈ ಹಿಂದೆ ಸ್ವಾಮಿ ವಿವೇಕಾನಂದರು ನ್ಯೂಯಾರ್ಕ್‌ನಲ್ಲಿ ಮಾಡಿದ ಸರ್ವಾಂಗಸುಂದರ ಚಿತ್ರಣವಾದ ನನ್ನ ಗುರುದೇವ ಎಂಬ ಉಪನ್ಯಾಸವನ್ನು ಉಲ್ಲೇಖಿಸಿದ್ದು ಈ ಸಂಬಂಧವಾಗಿಯೇ. ಹೇಗೆ ಆಧುನಿಕ ಯುಗದಲ್ಲಿ ಇಂಡಿಯಾಕ್ಕೂ ಪಾಶ್ಚಿಮಾತ್ಯ ರಾಷ್ಟ್ರಗಳಿಗೂ ನಡುವೆ ಒಂದು ಹೊಸ ಹೊಂದಾಣಿಕೆ ಆಗುತ್ತಿದೆ ಎಂಬುದಾಗಿ -ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಮೂಲಕ ಒಂದು ಹೊಸ ಸಂಸ್ಕೃತಿ ಆವಿರ್ಭಾವವಾಗುತ್ತದೆ, ಒಂದು ಹೊಸ ವಿಶ್ವವ್ಯಾಪೀ ಸಮಷ್ಟಿಪ್ರಜ್ಞೆ, ಸಮಾಜದಲ್ಲಿ ಹೊಸ ಸಮನ್ವಯ ಮೂಡುತ್ತವೆ.
ಪ್ರಾಚೀನ ಕಾಲದಲ್ಲಿ ಶ್ರೀಕೃಷ್ಣನ ರೂಪದ ಮಹಾ ಅವತಾರನೊಬ್ಬ ಭಾರತದಲ್ಲಿದ್ದ ಎಂದು ಈ ಹಿಂದೆ ಹೇಳಿದ್ದೆ. ಆ ಮಹಾಭಾರತದ ಕಾಲವನ್ನು ಕುರಿತೇ ಶಂಕರಾಚಾರ್ಯರು ಹೇಳಿದ್ದು - ಧರ್ಮಕ್ಕಿಂತ ಅಧರ್ಮದ್ದೇ ಮೇಲುಗೈಯಾದಾಗ, ಇಂದ್ರಿಯಚಾಪಲ್ಯ ಅತಿಯಾಗಿ ವಿವೇಕ ವಿವೇಚನೆಗಳ ಅವನತಿಯಾದಾಗ, ಸನಾತನ ಧರ್ಮದ ಆಧ್ಯಾತ್ಮಿಕತೆಯನ್ನೂ ವೇದಗಳ ತತ್ತ್ವವನ್ನೂ ರಕ್ಷಿಸುವುದಕ್ಕಾಗಿ, ನಾರಾಯಣನು ದೇವಕೀ ವಸುದೇವರುಗಳ ಮಗ ಕೃಷ್ಣನಾಗಿ ಅವತಾರ ಮಾಡಿದನು.
ಅನಂತರ ನಾನು ಧಮ್ಮಪದದಿಂದ ಉಲ್ಲೇಖಿಸಿ, ಭಗವಾನ್ ಬುದ್ಧನು ಈ ಮಾನವೀಯ ಆದರ್ಶದ ಬಗ್ಗೆ ಇಟ್ಟುಕೊಂಡಿದ್ದ ಮಹಾಗೌರವವನ್ನು ವಿವರಿಸಿ, ಭಾರತೀಯ ಸಮಾಜಶಾಸ್ತ್ರದಲ್ಲಿನ ಬ್ರಾಹ್ಮಣ ಆದರ್ಶವೆಂಬ ಈ ವಿಷಯವನ್ನೂ ಹೇಳಿದ್ದೆ. ಇದೊಂದು ಆದರ್ಶ; ಒಬ್ಬ ವ್ಯಕ್ತಿಯೋ ಒಂದು ಜಾತಿಯೋ ಅಲ್ಲ; ಪ್ರತಿಯೊಂದು ಸಮಾಜವೂ ಇದನ್ನು ಆದರ್ಶವಾಗಿಟ್ಟುಕೊಳ್ಳಲು ಅರ್ಹವಾದದ್ದು. ಆತ್ಮನಿಗ್ರಹ, ಸರಳತೆ, ದಯೆ, ಸೇವಾಮನೋಭಾವ ಇವೆಲ್ಲವೂ ಸೇರಿ ಸತ್ತ್ವವೇ ಪ್ರಧಾನವಾದ ಈ ಬ್ರಾಹ್ಮಣ ರೀತಿ ಉಂಟಾಗುತ್ತದೆ. ಇಂತಹ ವ್ಯಕ್ತಿ ಆಕ್ರಮಣಕಾರಿಯಲ್ಲ, ಶಾಂತ; ಎಲ್ಲರಿಗೂ ಒಳ್ಳೆಯದನ್ನು ಹಾರೈಸತಕ್ಕವನು. ನಮ್ಮ ಕಾಲದಲ್ಲಿ ಇದನ್ನು ಮಹಾತ್ಮಾಗಾಂಧಿಯವರಲ್ಲಿ ಕಂಡೆವು; ಜಾತಿಯಿಂದ ವೈಶ್ಯರಾಗಿದ್ದರೂ, ಅವರು ಗುಣದಿಂದ ಬ್ರಾಹ್ಮಣರಾಗಿದ್ದರು.
ಭಗವದ್ಗೀತೆ ಎಂಬ ಈ ಪುಸ್ತಕವು ಈ ಗುಣವನ್ನೂ ಮತ್ತು ಕ್ಷತ್ರಿಯ ಗುಣವನ್ನೂ
ಚರ್ಚಿಸುತ್ತದೆ. ಸಿಂಹಾಸನದ ಮೇಲೆ ಕುಳಿತವರೆಲ್ಲ, ಕಿರೀಟಧಾರಣೆ ಮಾಡಿದವರೆಲ್ಲ ಕ್ಷತ್ರಿಯರಲ್ಲ; ಯುದ್ಧದಿಂದ ಓಡಿಹೋಗದವನೇ ಕ್ಷತ್ರಿಯ ಎನ್ನುತ್ತದೆ ಗೀತೆ - ಯುದ್ಧೇ ಚಾಪ್ಯಪಲಾಯನಮ್ ; ಅವನು ಧೈರ್ಯಶಾಲಿ, ದಾನಶೂರ, ಎಂದಿಗೂ ಸಣ್ಣ ಮನಸ್ಸಿನವನಲ್ಲ. ಈ ಗುಣಗಳನ್ನು ನಮ್ಮ ಇಂದಿನ ರಾಜಕಾರಣಿಗಳೂ ಆಡಳಿತವರ್ಗದವರೂ ಮೈಗೂಡಿಸಿಕೊಳ್ಳಬೇಕು. ಹೇಗಿದ್ದರೂ, ಪ್ರತಿಯೊಬ್ಬನ ಗುರಿಯೂ ಈ ಬ್ರಾಹ್ಮಣ ರೀತಿಯೇ; ಸಮಾಜಕ್ಕೆ ಸಮಾಜವೇ ಕೆಳಮಟ್ಟದಿಂದ ಮೇಲ್ಮಟ್ಟಕ್ಕೆ ವಿಕಾಸವಾಗುವುದು. ಮಾನವ ವಿಕಾಸ ಸಾವಯವ ಮಟ್ಟದ್ದಲ್ಲ; ಅದು ಮುಖ್ಯವಾಗಿ ನೈತಿಕ ಮತ್ತು ಆಧ್ಯಾತ್ಮಿಕ ವಿಕಾಸ. ಮಾನವನಿಗೆ ಇನ್ನೂ ಉತ್ತಮವಾದ ಶರೀರದ ಅಂಗಾಂಶಗಳೇನೂ ಅಗತ್ಯವಿಲ್ಲ: ಮೆದುಳೆಂಬ ಅತ್ಯುತ್ಕೃಷ್ಟ ಅಂಗವೇ ಅವನಿಗಿದೆ. ಸಾವಯವ ವ್ಯವಸ್ಥೆಯ ಶಕ್ತಿಯನ್ನು ಬಳಸಿ ವಿಕಾಸದ ಇನ್ನೂ ಮೇಲಿನ ಸ್ತರಕ್ಕೆ ಹೋಗಬೇಕಾಗಿದೆ. ಇಲ್ಲೇ ಸತ್ತ್ವದ ಅಗತ್ಯ ಬೀಳುವುದು. ಇಂದು ನಮಗೆ ಬೇಕಾದಷ್ಟು ಶಕ್ತಿ ಇದೆ; ನಾವು ಜನರನ್ನು ಕೊಲ್ಲುತ್ತೇವೆ; ಮನೆಗಳನ್ನು ಸುಡುತ್ತೇವೆ; ಏಕೆಂದರೆ ಆ ಶಕ್ತಿ ಸತ್ತ್ವದ ಮೂಲಕವಾಗಿ ಶುದ್ಧಿಕರಿಸಲ್ಪಟ್ಟಿಲ್ಲ. ಸವಾಲೆಂದರೆ ಈ ಶಕ್ತಿಯನ್ನು ಶುದ್ಧೀಕರಿಸಿ, ಮಾನವೀಯವನ್ನಾಗಿಸಿ, ಬ್ರಾಹ್ಮಣತ್ವದ ಆದರ್ಶವನ್ನು ಸಾಧಿಸುವುದು.
ಬ್ರಾಹ್ಮಣತ್ವಸ್ಯ ರಕ್ಷಣಾರ್ಥಮ್ – ಬ್ರಾಹ್ಮಣ ಆದರ್ಶದ ರಕ್ಷಣೆಗಾಗಿ ಒಬ್ಬ ಅವತಾರ ಬರುವುದು. ಅಲ್ಲದೆ ವೇದಗಳ ರಕ್ಷಣೆಗಾಗಿಯೂ ಸಹ. ವೈದಿಕ ಧರ್ಮ ಅಥವಾ ಸನಾತನ ಧರ್ಮ, ಸಾರ್ವತ್ರಿಕವಾದದ್ದು, ತುಂಬ ಶುದ್ಧವಾದದ್ದು, ಯುಕ್ತಿಯುಕ್ತವಾದದ್ದು. ಒಂದು ಕಾಲದಲ್ಲಿ ಅದು ಪ್ರಪಂಚದ ವಿಶಾಲ ಭಾಗಗಳಲ್ಲಿ ಹರಡಿತ್ತು; ಅನಂತರ ಸ್ವಲ್ಪ ಭಾಗಕ್ಕೆ ಸೀಮಿತಗೊಂಡಿತು, ಆದರೆ ಈಗ ಪುನಃ ಅದು ಹರಡುತ್ತಿದೆ. ವೈದಿಕ ಧರ್ಮ ಎಲ್ಲಾ ಧರ್ಮಗಳನ್ನೂ ಒಳಗೊಂಡಿದೆ. ಎಲ್ಲಾ ಧರ್ಮಗಳನ್ನೂ ಒಪ್ಪಿಕೊಳ್ಳುತ್ತದೆ; ಇಂತಹ ಸಾರ್ವತ್ರಿಕವಾದ ವಿಶ್ವದೃಷ್ಟಿಯನ್ನು ನಾವು ಇನ್ನೆಲ್ಲೂ ನೋಡಲಾರೆವು. ವೈದಿಕ ಧರ್ಮವನ್ನು ರಕ್ಷಿಸಿ ಬ್ರಾಹ್ಮಣ ಆದರ್ಶವನ್ನು ಎತ್ತಿ ಹಿಡಿಯುವುದಕ್ಕಾಗಿ ಶ್ರೀಕೃಷ್ಣನು ವಸುದೇವ ದೇವಕಿಯರ ಮಗನಾಗಿ ಹುಟ್ಟಿದ. ಸ್ವಪ್ರಯೋಜನ ಅಭಾವೇ ಅಪಿ - 'ಅವನಿಗೆ ತನ್ನದೇ ಆದ ಸ್ವಾರ್ಥಪರ ಉದ್ದೇಶವಾವುದೂ ಇರಲಿಲ್ಲ.' ತನ್ನದೇ ಮಾಯೆಯಿಂದ ಅವನು ಮನುಷ್ಯರೂಪವನ್ನು ಪಡೆದ; ಮತ್ತು ವೈದಿಕಂ ಧರ್ಮದ್ವಯಂ ಅರ್ಜುನಾಯ ಉಪದಿದೇಶ - “ಅವನು ಪ್ರವೃತ್ತಿಲಕ್ಷಣ ನಿವೃತ್ತಿಲಕ್ಷಣ ಎಂಬ ಎರಡು ವಿಧವಾದ ವೈದಿಕಧರ್ಮದ್ವಯವನ್ನು ಅರ್ಜುನನಿಗೆ ಉಪದೇಶ ಮಾಡಿದ. ಆಗ ಅರ್ಜುನನ ಅವಸ್ಥೆ ಏನಾಗಿತ್ತು? ಶೋಕಮೋಹಮಹೋದಧೌ ನಿಮಗ್ನಾಯ - 'ಶೋಕಮೋಹಗಳ ಸಾಗರದಲ್ಲಿ ಮುಳುಗಿದ್ದ.' ಈ ಎರಡು ಸಂವೇದನೆಗಳು ಜೀವನದ ಪ್ರತಿಯೊಂದು ಅಂಗವನ್ನೂ ವಿರೂಪಗೊಳಿಸಬಲ್ಲವು. ಸಮುದ್ರದಂತಹ ದುಃಖ ಮತ್ತು ಮೋಹ ಅರ್ಜುನನನ್ನು ಮುಳುಗಿಸಿಬಿಟ್ಟಿತು. ಈ ಅರ್ಜುನನ ವಿಷಾದದ ವರ್ಣನೆಯನ್ನು ಗೀತೆಯ ಮೊದಲನೆಯ ಅಧ್ಯಾಯದಲ್ಲಿ ನೋಡುವೆವು.
ಶ್ರೀಕೃಷ್ಣನು ಅರ್ಜುನನಿಗೆ — ಅವನ ಮೂಲಕ ನಮ್ಮೆಲ್ಲರಿಗೆ — ಒಂದು ಗಾಢವಾದ ಸಂದೇಶವನ್ನು ಕೊಟ್ಟಿದ್ದಾನೆ. ದಯಾಪೂರ್ಣನಾದ ಅವನು, ಮಾನವರೂಪದಲ್ಲಿ ಈ ಪ್ರಪಂಚಕ್ಕೆ ಬಂದು ಅನೇಕ ಕಷ್ಟಗಳನ್ನನುಭವಿಸಿದನು. ಅವನ ಇಡೀ ಜೀವನ ಕಷ್ಟಮಯವಾಗಿದ್ದಿತು. ಅವನಂತಹ ಉತ್ಕರ್ಷಿತ ಅವಸ್ಥೆಯಲ್ಲಿರುವವನಿಗೆ ಜೀವನ ಸುಲಭವೆಂದು ನಮಗನ್ನಿಸಬಹುದು; ಆದರೆ ಅದು ಹಾಗಲ್ಲ; ಅದು ಬಹಳ ಕಠಿಣವಾದ ಜೀವನವಾಗಿದ್ದಿತು. ಮಹಾತ್ಮರ ಕಷ್ಟ ಮಹಾತ್ಮರಿಗೇ ಗೊತ್ತು ಎಂಬುದಾಗಿ ಮಹಾತ್ಮಾಗಾಂಧಿಯವರು ಒಂದುಸಲ ಹೇಳಿದರಂತೆ. ನಾವಿಂದು ನಮ್ಮ ರಾಜಕೀಯ ಜೀವನದಲ್ಲಿ ನೋಡುತ್ತಿರುವಂಥದೇ ಚಾರಿತ್ರ್ಯವಧೆಯನ್ನು ಶ್ರೀಕೃಷ್ಣನೂ ಅನುಭವಿಸಬೇಕಾಯಿತು. ಯಾವನೋ ಒಬ್ಬ ತನ್ನ ಸ್ಯಮಂತಕ ಮಣಿಯೆಂಬ ರತ್ನವನ್ನು ಕದ್ದನೆಂದು ಶ್ರೀಕೃಷ್ಣನಿಗೆ ಕಳ್ಳನ ಪಟ್ಟ ತೊಡಿಸಿದ. ಕೃಷ್ಣನು ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಬೇಕಾಯಿತು! ಅವನು ಅದಕ್ಕಾಗಿ ಹುಡುಕಾಡಿ, ಇಬ್ಬರು ಬಡ ಮಕ್ಕಳು ಅದರೊಂದಿಗೆ ಆಟವಾಡುತ್ತಿದ್ದುದನ್ನು ಕಂಡುಹಿಡಿದು, ರತ್ನವನ್ನು ಅದರ ಮಾಲಿಕನಿಗೆ ಹಿಂದಿರುಗಿಸಿದನಂತೆ. ಈ ತರಹದ ಸುಳ್ಳು ಸುಳ್ಳೇ ಅವಮರ್ಯಾದೆ ಮಾಡಿದ ಅನೇಕ ಪ್ರಸಂಗಗಳಿವೆ. ಶ್ರೀಕೃಷ್ಣನು ಅವುಗಳನ್ನೆಲ್ಲ ಉದಾಸೀನ ಮಾಡಬಹುದಿತ್ತು; ಏಕೆಂದರೆ ಅವುಗಳಿಂದ ಅವನಿಗಾವ ಲಾಭವಾಗಲಿ ನಷ್ಟವಾಗಲಿ ಇರಲಿಲ್ಲ. ಆದರೂ ಮಾನವಶರೀರದಲ್ಲಿ ಬಂದ ಮೇಲೆ, ಅವತಾರನೂ ನೋವನ್ನು, ಅವಮಾನವನ್ನು ಅನುಭವಿಸಬೇಕಾಯಿತು. ಇದ್ದ ಕೆಲವು ಸಂತೋಷಗಳೂ ಈ ಹಲವು ದುಃಖಗಳಿಂದಾಗಿ ಕ್ಷೀಣಿಸಿದವು. ಯಾವುದೇ ಮಾನುಷಶರೀರಧಾರಿಯಾದರೂ ಇಂಥವುಗಳ ಮೂಲಕ ಸಾಗಲೇಬೇಕು. ಆದರೆ, ಮನುಷ್ಯ ಶರೀರದಲ್ಲಿದ್ದರೂ, ಅವತಾರನಿಗೆ ತನ್ನ ಆಳದಲ್ಲಿ ಪೂರ್ಣವಾಗಿರುವ ದಿವ್ಯತೆಯ ಅರಿವಿರುತ್ತದೆ. ಶ್ರೀಕೃಷ್ಣನ ಜೀವನದ ಪರಮೋತ್ಕೃಷ್ಟ ಕ್ಷಣವೆಂದರೆ ಕುರುಕ್ಷೇತ್ರದ ರಣರಂಗದಲ್ಲಿ ಗೀತೆಯ ಸಂದೇಶವನ್ನು ಅರ್ಜುನನ ಮೂಲಕ ಇಡೀ ಮಾನವಜನಾಂಗಕ್ಕೆ ಕೊಟ್ಟಿದ್ದು; ಇದಕ್ಕಾಗಿಯೇ ನಾವೆಲ್ಲರೂ ಅವನನ್ನು ಈ ಸಾವಿರಾರು ವರ್ಷಗಳಿಂದ ನೆನಪಿಟ್ಟುಕೊಂಡಿರುವುದು.
ಉಪಸಂಹಾರ
ಅರ್ಜುನನಿಗೆ ಈ ಸಂದೇಶವನ್ನು ಕೊಡುವುದರಲ್ಲಿ ಶ್ರೀಕೃಷ್ಣನ ಉದ್ದೇಶವೇನಿರ ಬಹುದು? ಈಗ ನಮ್ಮ ಮುಂದಿರುವ ವಿಷಯ ಇದು. ರಣರಂಗದಲ್ಲಿ ಏಕೆ ಶ್ರೀಕೃಷ್ಣನು ಅರ್ಜುನನೊಡನೆ ಸಂವಾದವನ್ನಾರಂಭಿಸಿದನು? ಪ್ರಪಂಚವನ್ನು ಆತನು ರಕ್ಷಿಸಬಲ್ಲನೆ? ಶಂಕರರ ಭಾಷ್ಯದಲ್ಲಿ ಈ ಬಗ್ಗೆ ಒಂದು ಮಾತಿದೆ: ಗುಣಾಧಿಕೈಃ ಹಿ ಗೃಹೀತಃ ಅನುಷ್ಠೀಯಮಾನಶ್ಚ ಧರ್ಮಃ ಪ್ರಚಯಂ ಗಮಿಷ್ಯತಿ ಇತಿ – 'ಸದ್ಗುಣಗಳಿಂದ ದೊಡ್ಡವರೆನಿಸಿಕೊಂಡವರು ಗ್ರಹಿಸಿ ಅನುಷ್ಠಾನಮಾಡಿದ ಧರ್ಮವೇ ಪ್ರಚಾರವಾಗುವುದು ಎಂದು'; ಒಂದು ಉರಿಯುತ್ತಿರುವ ದೀಪದ ಸಹಾಯದಿಂದ ಇನ್ನೊಂದು ದೀಪವನ್ನು ಹಚ್ಚುವಂತೆ, ಅದು ಸಮುದಾಯದ ನೈತಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ನಿಧಾನವಾಗಿ ಹೆಚ್ಚಿಸುವುದು. ಜೀಸಸ್ ಹೇಳುವಂತೆ, “ಒಂದು ಸ್ವಲ್ಪ ಹುದುಗಿದ ಹಿಟ್ಟು ಇಡೀ ಬ್ರೆಡ್ಡನ್ನೇ ಹುದುಗಿಸುತ್ತದೆ. ಇಂತಹ ಪರಿಕಲ್ಪನೆಗಳು ನಿಧಾನವಾಗಿ ಸಮಾಜವನ್ನು ಪ್ರವೇಶಿಸಿ ಕೊನೆಗೆ ಸಮಾಜವನ್ನೇ ಬದಲಾಯಿಸುತ್ತವೆ. ಇದು ಹೇಗೆ ಆಗುತ್ತದೆ ಎಂದು ಈಗ ನೋಡೋಣ.
ಶಂಕರರು ಮುಂದುವರೆಸುತ್ತಾರೆ:
ಸ ಚ ಭಗವಾನ್ ಜ್ಞಾನೈಶ್ವರ್ಯಶಕ್ತಿಬಲವೀರ್ಯತೇಜೋಭಿಃ ಸದಾ ಸಂಪನ್ನಃ, ತ್ರಿಗುಣಾತ್ಮಿಕಾಂ ವೈಷ್ಣವೀಂ ಸ್ವಾಂ ಮಾಯಾಂ ಮೂಲಪ್ರಕೃತಿಂ ವಶೀಕೃತ್ಯ, ಅಜೋಽವ್ಯಯೋ ಭೂತಾನಾಮೀಶ್ವರೋ ನಿತ್ಯಶುದ್ಧಬುದ್ಧಮುಕ್ತಸ್ವಭಾವೋsಪಿ ಸನ್ ಸ್ವಮಾಯಯಾ ದೇಹವಾನಿವ ಜಾತ ಇವ ಚ ಲೋಕಾನುಗ್ರಹಂ ಕುರ್ವನ್ ಲಕ್ಷ್ಯತೇ। ಸ್ವಪ್ರಯೋಜನಾಭಾವೇsಪಿ ಭೂತಾನುಜಿಘೃಕ್ಷಯಾ ವೈದಿಕಂ ಧರ್ಮದ್ವಯಂ ಅರ್ಜುನಾಯ ಶೋಕಮೋಹಮಹೋದಧೌ ನಿಮಗ್ನಾಯ ಉಪದಿದೇಶ। ಗುಣಾಧಿಕೈರ್ಹಿ ಗೃಹೀತೋಽನುಷ್ಠೀಯಮಾನಶ್ಚ ಧರ್ಮಃ ಪ್ರಚಯಂ ಗಮಿಷ್ಯತೀತಿ। ತಂ ಧರ್ಮಂ ಭಗವತಾ ಯಥೋಪದಿಷ್ಟಂ ವೇದವ್ಯಾಸಃ ಸರ್ವಜ್ಞೋ ಭಗವಾನ್ ಗೀತಾಖ್ಯೈಃ ಸಪ್ತಭಿಃ ಶ್ಲೋಕಶತ್ಯೆ: ಉಪನಿಬಬಂಧ ||
'ಮತ್ತು ಆ ಭಗವಂತನು ಜ್ಞಾನ, ಐಶ್ವರ್ಯ, ಶಕ್ತಿ, ಬಲ, ವೀರ್ಯ, ತೇಜಸ್ಸು – ಇವುಗಳಿಂದ ಯಾವಾಗಲೂ ಕೂಡಿಕೊಂಡಿದ್ದು ತ್ರಿಗುಣಸ್ವರೂಪವಾದ ತನ್ನ ವೈಷ್ಣವಮಾಯೆ ಎಂಬ ಮೂಲಪ್ರಕೃತಿಯನ್ನು ತನ್ನ ವಶದಲ್ಲಿಟ್ಟುಕೊಂಡು (ನಿಜವಾಗಿ ತಾನು) ಜನ್ಮರಹಿತನೂ ನಾಶರಹಿತನೂ ಪ್ರಾಣಿಗಳಿಗೆ ಒಡೆಯನೂ ನಿತ್ಯಶುದ್ಧ ಬುದ್ಧಮುಕ್ತಸ್ವಭಾವದವನು ಆಗಿದ್ದರೂ ತನ್ನ ಮಾಯೆಯಿಂದ ದೇಹವುಳ್ಳವನಂತೆಯೂ ಹುಟ್ಟಿದವನಂತೆಯೂ ಲೋಕಾನುಗ್ರಹವನ್ನು ಮಾಡುವವನಾಗಿ ಕಂಡುಬರುತ್ತಾನೆ. ತನಗೆ (ಯಾವ) ಪ್ರಯೋಜನವೂ ಇಲ್ಲದಿದ್ದರೂ ಪ್ರಾಣಿಗಳಿಗೆ ಅನುಗ್ರಹ ಮಾಡಬೇಕೆಂಬ ಇಚ್ಛೆಯಿಂದ, ಶೋಕಮೋಹಗಳೆಂಬ ಮಹಾಸಮುದ್ರದಲ್ಲಿ ಮುಳುಗಿದ್ದ ಅರ್ಜುನನಿಗೆ, ಸದ್ಗುಣಗಳಿಂದ ದೊಡ್ಡವರೆನ್ನಿಸಿಕೊಂಡಿರುವವರು ಗ್ರಹಿಸಿ ಅನುಷ್ಠಾನ ಮಾಡಿದ ಧರ್ಮವೇ ಪ್ರಚಾರವಾಗುವುದೆಂಬ ಕಾರಣದಿಂದ, (ಈ) ವೈದಿಕ ಧರ್ಮಗಳೆರಡನ್ನೂ ಉಪದೇಶ ಮಾಡಿದನು. ಆ ಧರ್ಮವನ್ನು ಭಗವಂತನು ಉಪದೇಶ ಮಾಡಿದಂತೆಯೇ ಸರ್ವಜ್ಞರೂ ಭಗವದ್ರೂಪರೂ ಆದ ವೇದವ್ಯಾಸರು ಗೀತೆ ಎಂಬ ಹೆಸರಿನ ಏಳುನೂರುಶ್ಲೋಕಗಳಿಂದ ಗ್ರಂಥರೂಪವಾಗಿಟ್ಟರು.
ಗೀತೆ ಹೇಗೆ ಹುಟ್ಟಿತು ಎಂಬುದನ್ನು ಹೇಳಿದ ನಂತರ, ಶಂಕರರು ಹೀಗೆ ಮುಂದುವರೆಯುತ್ತಾರೆ:
ತದಿದಂ ಗೀತಾಶಾಸ್ತ್ರಂ ಸಮಸ್ತವೇದಾರ್ಥಸಾರಸಂಗ್ರಹಭೂತಂ ದುರ್ವಿಜ್ಞೇಯಾರ್ಥಮ್ | ತದರ್ಥಾವಿಷ್ಕರಣಾಯ ಅನೇಕೈರ್ವಿವೃತಪದಪದಾರ್ಥವಾಕ್ಯಾರ್ಥನ್ಯಾಯಮಪಿ ಅತ್ಯಂತವಿರುದ್ಧಾನೇಕಾರ್ಥತ್ವೇನ ಲೌಕಿಕೈರ್ಗೃಹ್ಯಮಾಣಮುಪಲಭ್ಯ ಅಹಂ ವಿವೇಕತೋsರ್ಥನಿರ್ಧಾರಣಾರ್ಥಂ ಸಂಕ್ಷೇಪತೋ ವಿವರಣಂ ಕರಿಷ್ಯಾಮಿ ||
“ಅಂಥ ಈ ಗೀತಾಶಾಸ್ತ್ರವು ಸಮಸ್ತವೇದಗಳ ಅರ್ಥಸಾರದ ಸಂಗ್ರಹವಾಗಿರುತ್ತದೆ. ಇದರ ಅರ್ಥವನ್ನು ತಿಳಿಯುವುದು ಕಷ್ಟ. ಇದರ ಅರ್ಥವನ್ನು ಹೊರಪಡಿಸುವುದಕ್ಕಾಗಿ ಅನೇಕರು ಪದ, ಪದಾರ್ಥ, ವಾಕ್ಯಾರ್ಥ, (ವಾಕ್ಯಾರ್ಥವನ್ನು ನಿಶ್ಚಯಿಸುವುದಕ್ಕೆ ಬೇಕಾದ) ಯುಕ್ತಿ - ಇವುಗಳನ್ನು ವಿವರವಾಗಿ ತಿಳಿಸಿರುತ್ತಾರಾದರೂ ಲೋಕದಲ್ಲಿ ಜನರು ಅತ್ಯಂತ ವಿರುದ್ಧವಾದ ಅನೇಕಾರ್ಥಗಳನ್ನು (ಇದರ ಅರ್ಥವೆಂದು) ತಿಳಿಯುತ್ತಿರುವುದನ್ನು ಕಂಡು ನಾನು (ಇದರ) ಅರ್ಥವನ್ನು ವಿಂಗಡಿಸಿ ಗೊತ್ತುಮಾಡುವುದಕ್ಕಾಗಿ (ಇದಕ್ಕೆ) ಸಂಕ್ಷೇಪವಾಗಿ ವಿವರಣವನ್ನು ಮಾಡುವೆನು.'
ಶಂಕರರು ತಮ್ಮ ವಿಶೇಷ ಪರ್ಯಾಲೋಚಿತ ಮುನ್ನುಡಿಯನ್ನು ಹೀಗೆ ಮುಗಿಸುತ್ತಾರೆ:
ಇಮಂ ದ್ವಿಪ್ರಕಾರಂ ಧರ್ಮಂ ನಿಃಶ್ರೇಯಸಪ್ರಯೋಜನಂ ಪರಮಾರ್ಥತತ್ತ್ವಂ ಚ ವಾಸುದೇವಾಖ್ಯಂ ಪರಂ ಬ್ರಹ್ಮ ಅಭಿದೇಯಭೂತಂ ವಿಶೇಷತಃ ಅಭಿವ್ಯಂಜಯತ್ ವಿಶಿಷ್ಟಪ್ರಯೋಜನಸಮೃದ್ಧಾಭಿದೇಯವತ್ ಗೀತಾಶಾಸ್ತ್ರಮ್ | ಯತಸ್ತದರ್ಥವಿಜ್ಞಾನೇ ಸಮಸ್ತಪುರುಷಾರ್ಥಸಿದ್ಧಿಃ | ಅತಸ್ತ್ರದ್ವಿವರಣೇ ಯತ್ನಃ ಕ್ರಿಯತೇ ಮಯಾ ||
'ನಿಃಶ್ರೇಯಸವೆಂಬ ಪ್ರಯೋಜನವುಳ್ಳ ಈ (ಪ್ರವೃತ್ತಿ ನಿವೃತ್ತಿಗಳೆಂಬ) ಎರಡು ಬಗೆಯ ಧರ್ಮವನ್ನೂ ಪರಬ್ರಹ್ಮವಾದ ವಾಸುದೇವನೆಂಬ ಹೆಸರಿನ ಪರಮಾರ್ಥವನ್ನೂ (ತನಗೆ) ವಿಷಯವೆಂದು ಗೀತಾಶಾಸ್ತ್ರವು ವಿಶೇಷವಾಗಿ ತಿಳಿಸಿಕೊಡುವುದರಿಂದ ಇದಕ್ಕೆ ಅಸಾಧಾರಣವಾದ ಪ್ರಯೋಜನವೂ ಸಂಬಂಧವೂ ವಿಷಯವೂ ಇದ್ದಂತಾಯಿತು. ಇದರ ಅರ್ಥವನ್ನು ಅರಿತುಕೊಂಡರೆ ಸಮಸ್ತ ಪುರುಷಾರ್ಥವೂ ಸಿದ್ಧಿಯಾಗುವುದರಿಂದ ಇದನ್ನು ವಿವರಿಸುವುದಕ್ಕೆ ನಾನು ಯತ್ನವನ್ನು ಮಾಡುವೆನು.'
Comments
Post a Comment