೫. ಶ್ರೀಮದ್-ಭಗವದ್ಗೀತಾ-ಪೀಠಿಕಾ ೨

 (೫) ಗೀತಾಚಿಂತನ 

(ವೇ.ಮೂ.ಕೌಂಜೂರು ಚಂದ್ರಶೇಖರ ಅಡಿಗರು)

ಸಾರ್ಥಕ ಜೀವನ ಸಾಧನ

'ಗೀತಾಚಿಂತನ' ದ ಚಿಂತನ (ಡಾ|| ಮಹೇಶ ಕಾಕತ್ಕರ್, ಶೃಂಗೇರಿ)


  ಪ್ರಪಂಚದಲ್ಲಿ ಅದೆಷ್ಟೋ ಗೀತೆಗಳು ಇದ್ದರೂ ಅರ್ಜುನನಿಗೆ ಭಗವಂತನು ಉಪದೇಶಿಸಿದ ಭಗವದ್ಗೀತೆಯು ಗಳಿಸಿದಷ್ಟು ಮನ್ನಣೆಯನ್ನು ಬೇರಾವ ಗೀತೆಯೂ ಪಡೆದಿಲ್ಲ. ಗೀತೆಯ ಮಹತ್ತ್ವವೇ ಹಾಗೆ. ಜಗದ್ಗುರು ಶಂಕರಾಚಾರ್ಯರು ಭಗವದ್ಗೀತೆಯ ಮಹಿಮೆಯನ್ನು, 


ಭಗವದ್ಗೀತಾ ಕಿಂಚಿದಧೀತಾ ಗಂಗಾಜಲಲವಕಣಿಕಾ ಪೀತಾ |

ಸಕೃದಪಿ ಯೇನ ಮುರಾರಿಸಮರ್ಚಾ ಕ್ರಿಯತೇ ತೇನ ಯಮೇನ ನ ಚರ್ಚಾ ||


ಎಂಬುದಾಗಿ ವರ್ಣಿಸಿದ್ದಾರೆ. ಭಗವದ್ಗೀತೆಯಲ್ಲಿರುವ ಸಂಪೂರ್ಣ ೭೦೦ ಶ್ಲೋಕಗಳನ್ನು ಓದಲು ಸಾಧ್ಯವಾಗದಿದ್ದರೆ ಅದರ ಒಂದೆರಡು ಶ್ಲೋಕಗಳನ್ನು ಓದಿದರೂ ಅಗಣಿತ ಫಲವೇ ಸಿಗುತ್ತದೆ ಎಂಬುದು ಈ ಶ್ಲೋಕದ ಮೊದಲ ಪಾದದ ತಾತ್ಪರ್ಯ.

       ಭಾರತೀಯರ ಅಧ್ಯಾತ್ಮಪರಂಪರೆಯಲ್ಲಿ ಪ್ರಸ್ಥಾನತ್ರಯಕ್ಕೆ ಅಗ್ರಮಾನ್ಯ ಸ್ಥಾನವಿದೆ. ಇದರಲ್ಲಿ ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳು ಸೇರಿವೆ. ಅನೇಕ ಆಚಾರ್ಯರುಗಳು ಇವುಗಳಿಗೆ ಭಾಷ್ಯವನ್ನು ಬರೆದಿದ್ದಾರೆ. ಆದರೆ, ಭಗವದ್ಗೀತೆಯ ಮೇಲೆ ಇರುವಷ್ಟು ವ್ಯಾಖ್ಯಾನಗಳು ಉಳಿದವುಗಳಿಗಿಲ್ಲ. ಅವುಗಳಲ್ಲಿ ಕೆಲವು ಸರಳವಾದರೆ ಮತ್ತೆ ಕೆಲವು ಪಂಡಿತರಿಗೆ ಮಾತ್ರ ಅರ್ಥವಾಗುವಷ್ಟು ಗಂಭೀರವಾದವುಗಳು. ಸಂಸ್ಕೃತಗ್ರಂಥಗಳನ್ನು ಓದಿ ಅರ್ಥಮಾಡಿಕೊಳ್ಳುವುದು ಕನ್ನಡ ಮಾತ್ರ ಬಲ್ಲವರಿಗೆ ಸಾಧ್ಯವಿಲ್ಲ. ಅಂಥವರಿಗಾಗಿ ಕರ್ಣಾಟಕದ ಅನೇಕ ಪಂಡಿತಮಹನೀಯರು ಭಗವದ್ಗೀತೆಯ ಶಬ್ದಾರ್ಥ-ಭಾವಾರ್ಥ-ಗೂಢಾರ್ಥಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಲೆಕ್ಕವಿಲ್ಲದಷ್ಟು ಗ್ರಂಥಗಳನ್ನು ರಚಿಸಿದ್ದಾರೆ.

    ಇದೀಗ ನಮ್ಮ ಮಿತ್ರರಾದ ಕೌಂಜೂರು ಚಂದ್ರಶೇಖರ ಅಡಿಗರಿಂದ ರಚಿತವಾಗಿ ಸಾಹಿತ್ಯಪ್ರಪಂಚಕ್ಕೆ ನೂತನವಾಗಿ ಸೇರ್ಪಡೆಗೊಳ್ಳುತ್ತಿರುವ, 'ಗೀತಾಚಿಂತನ' ಎಂಬ ಈ ಹೊತ್ತಗೆಯು ಹೊಸತನವನ್ನು ಹೊಂದಿದ್ದು, ಜನಸಾಮಾನ್ಯರ ನಿತ್ಯಜೀವನಕ್ಕೆ ಅತ್ಯುಪಯುಕ್ತವಾಗುವಂತೆ ರಚಿತವಾಗಿದೆ. ಶ್ರೀಯುತರು ವೇದ-ಶಾಸ್ತ್ರವಿಶಾರದರಾಗಿದ್ದು, ಸಮಗ್ರಗೀತೆಯನ್ನು ಹೃದ್ಗತಮಾಡಿಕೊಂಡು, ಪ್ರತಿದಿನವೂ ಅರ್ಥಾನುಸಂಧಾನಪೂರ್ವಕವಾಗಿ ಪಾರಾಯಣ ಮಾಡುವ ಗೀತೋಪಾಸಕರಾಗಿದ್ದಾರೆ. ಈ ಪುಸ್ತಕದ ಲೇಖನದ ಸಂದರ್ಭದಲ್ಲಿ ಇವರು ಯಾವುದೇ ಆಚಾರ್ಯರ ಮತದ ಕಡೆಗೆ ಆಕರ್ಷಿತರಾಗದೇ ತಾವು ಮತಿಯಿಂದ ಮಥಿಸಿ, ಚಿಂತನೆಯಿಂದ ಕಂಡುಕೊಂಡ ವಿಚಾರಗಳನ್ನು ಇಲ್ಲಿ ನಮೂದಿಸಿದ್ದಾರೆ. ಇವರ ಈ ಬರವಣಿಗೆಯಲ್ಲಿ ಓದುಗರು ತಮ್ಮ ದೈನಂದಿನವಾದ ವ್ಯವಹಾರಗಳಲ್ಲಿ ಗೀತೆಯ ಸಮನ್ವಯ ಮಾಡಿ ಕೊಳ್ಳಬಹುದಾದ ವಿಷಯಗಳು ಆವಶ್ಯಕತೆಗನುಗುಣವಾಗಿ ಸಂಕಲಿತವಾಗಿವೆ. ಈ ಹೊತ್ತಿಗೆಯ ಆರಂಭದಲ್ಲಿ ಲೇಖಕರು ಗೀತೆಯ ಪುಷ್ಪಿಕಾವಾಕ್ಯದಲ್ಲಿ ಹೇಳಿರುವ ಶ್ರೀಮದ್ಭಗವದ್ಗೀತೆ, ಉಪನಿಷತ್ತು, ಬ್ರಹ್ಮವಿದ್ಯೆ, ಯೋಗಶಾಸ್ತ್ರ ಶ್ರೀಕೃಷ್ಣಾರ್ಜುನಸಂವಾದ, ಈ ಎಲ್ಲಾ ಹೆಸರುಗಳು ಗೀತೆಗೆ ಹಾಗೂ ಪ್ರತಿಯೊಂದು ಅಧ್ಯಾಯದ 'ಅರ್ಜುನವಿಷಾದಯೋಗ' ಮೊದಲಾದ ಹೆಸರುಗಳು ಆಯಾ ಅಧ್ಯಾಯಗಳಿಗೆ ಹೇಗೆ ಸರಿಯಾಗಿ ಹೊಂದುತ್ತವೆ ಎಂಬುದನ್ನು ಯುಕ್ತಿಯುಕ್ತವಾಗಿ ನಿರೂಪಿಸಿ, ಅನಂತರ ಪ್ರಸ್ಥಾನತ್ರಯದಲ್ಲಿ ಗೀತೆಯ ಮಹತ್ವ ಏನು? ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿದ್ದಲ್ಲದೇ, ಭಗವದ್ಗೀತೆ ಆಬಾಲವೃದ್ಧರ ಜೀವನಶಾಸ್ತ್ರ ಏಕೆ? ಎಂಬುದನ್ನು ತೋರಿಸಿದ್ದಾರೆ. 'ಉದ್ಧರೇದಾತ್ಮನಾತ್ಮಾನಂ....' ಎಂಬ ಶ್ಲೋಕವು ಸಮಗ್ರಭಗವದ್ಗೀತೆಯನ್ನೇ ಪ್ರತಿನಿಧಿ ಸುತ್ತದೆ ಎನ್ನುವುದನ್ನು ಇಲ್ಲಿ ಸೊಗಸಾಗಿ ಮಂಡಿಸಿದ್ದಾರೆ. 'ಮನುಷ್ಯ ಬಡವ ನಾಗಿ ಹುಟ್ಟಿದರೂ ಬಡವನಾಗಿಯೇ ಸಾಯಬಾರದು, ಪ್ರತಿಯೊಬ್ಬನೂ ಜಾತಿ-ಮತ-ಶರೀರವ್ಯಾಪಾರಗಳನ್ನು ಮೀರಿ ಭೌತಿಕವಾಗಿಯೂ, ಬೌದ್ಧಿಕವಾಗಿಯೂ ಶ್ರೀಮಂತಿಕೆಯನ್ನು ಸಾಧಿಸಬೇಕು ಎಂಬುದು ಭಗವದ್ಗೀತೆಯ ಸಂದೇಶ' ಎನ್ನುವ ಅವರ ವಿವರಣೆಯಂತೂ ಮಾನವಜೀವನಕ್ಕೆ ಗೀತೆ ಎಷ್ಟು ಹತ್ತಿರವಾಗಿದೆ ಎನ್ನುವ ಅಂಶವನ್ನು ಸ್ಪಷ್ಟೀಕರಿಸುತ್ತದೆ.


“ನಾನು ಎಂದರೆ ಯಾರು?' ಎಂಬ ವಿವರಣೆಯಲ್ಲಿ ನಮ್ಮೆಲ್ಲರಿಗೂ ಇರುವ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳು, ಅವುಗಳೊಂದಿಗೆ ನಾನೆಂಬ ನಮ್ಮನ್ನು ಬಂಧಿಸಿದ ಗುಣಗಳು, ಅವುಗಳ ಲಕ್ಷಣಗಳು— ಇತ್ಯಾದಿ ವಿಷಯಗಳನ್ನು ಭಗವದ್ಗೀತೆಯ ಆಧಾರದಲ್ಲಿ ವಿವರಿಸಲಾಗಿದೆ.


ಆಹಾರದ ವೈವಿಧ್ಯಗಳನ್ನು ವರ್ಣಿಸುವಾಗ ಲೇಖಕರು ಹೇಳಿರುವ 'ಕೇವಲ ಬಾಯಿಯಿಂದ ಸ್ವೀಕರಿಸುವುದು ಮಾತ್ರ ಆಹಾರವಲ್ಲ; ಕಿವಿ, ಚರ್ಮ, ಕಣ್ಣು, ಮೂಗುಗಳಿಂದ ಮಾಡುವ ವಿಷಯಗಳ ಆಸ್ವಾದನೆಯೂ ಆಹಾರವೇ ಆಗಿದೆ' ಎಂಬ ಮಾತು ಮನುಷ್ಯಮಾತ್ರರನ್ನು ಎಚ್ಚರಿಸುವ ಶಬ್ದವಾಗಿದೆ. ಯಜ್ಞದ ಸ್ವರೂಪವೇನು? ಅವುಗಳ ವಿಧಗಳು ಯಾವುವು? ನಮ್ಮ ಜೀವನವನ್ನು ಯಜ್ಞವನ್ನಾಗಿ ಮಾರ್ಪಡಿಸುವುದು ಹೇಗೆ? ಇವೇ ಮೊದಲಾದ ವಿಚಾರಗಳನ್ನು ಗೀತೆಯ ಹಿನ್ನೆಲೆಯಲ್ಲಿ ಚೆನ್ನಾಗಿ ವಿವರಿಸಿದ್ದಲ್ಲದೇ ಜ್ಞಾನದ ಸ್ವರೂಪ, ಸಂನ್ಯಾಸ ಮತ್ತು ತ್ಯಾಗಗಳಿಗಿರುವ ವ್ಯತ್ಯಾಸ, ದೇಹ, ಮಾತು, ಮನಸ್ಸುಗಳಿಂದ ಮಾಡುವ ತಪಸ್ಸು, ಮುಕ್ತಿಯನ್ನು ಪಡೆಯುವ ಕ್ರಮ, ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ ಇವೇ ಮೊದಲಾದ ಗೀತೆಯ ವಿಷಯಗಳನ್ನು ಜನಸಾಮಾನ್ಯರಿಗೂ ಸುಲಭವಾಗಿ ಅರ್ಥ ಆಗುವಂತೆ ಈ ಪುಸ್ತಕದಲ್ಲಿ ವಿಸ್ತರಿಸಿ ಹೇಳಿದ್ದಾರೆ. 'ಸಂನ್ಯಾಸವೆಂದರೆ ಕಾವಿತೊಟ್ಟು ಕಾಡಿಗೆ ಹೋಗುವುದಲ್ಲ, ಹೊರತು ಸ್ವಾರ್ಥಿಯಾಗದೇ ಸಮಾಜಸೇವೆ ಮಾಡುವುದು ಮತ್ತು ಫಲಾಪೇಕ್ಷೆ ಇಲ್ಲದೆ ಭಗವದರ್ಪಣಬುದ್ಧಿಯಿಂದ ಕೆಲಸಗಳನ್ನು ಮಾಡುವುದೇ ಆಗಿದೆ' ಎನ್ನುವ ಗೀತೆಯ ಅಭಿಪ್ರಾಯವನ್ನು ವಾಕ್ಯಾಧಾರಪೂರ್ವಕವಾಗಿ ಓದುಗರ ಮನ ಮುಟ್ಟುವಂತೆ ಮುಂದಿಟ್ಟಿದ್ದಾರೆ.


ಭಗವದ್ಗೀತೆಯ ಸಾರವನ್ನು ತಿಳಿಗನ್ನಡದಲ್ಲಿ ಚಿಂತಿಸುವ ಈ 'ಗೀತಾ ಚಿಂತನ' ಗ್ರಂಥವು ಗೀತಾಜಿಜ್ಞಾಸುಗಳಿಗೆ ಶಾಂತಿಸಮೃದ್ಧವಾದ ನಿತ್ಯಜೀವನ ವನ್ನು ನಡೆಸಲು ಬಹಳ ಉಪಯುಕ್ತವಾದ ಸಾಧನವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಎಲ್ಲರೂ ಗೀತಾ ಸಂದೇಶವನ್ನು ಅರಿತು ಶ್ರದ್ಧೆಯಿಂದ ಅದರ ಅಧ್ಯಯನ ಮಾಡಿ ಅಲ್ಲಿ ಹೇಳಿದ 'ಅದ್ವೇಷ್ಟಾ ಸರ್ವಭೂತಾನಾಂ...' ಮೊದಲಾದ ಸ್ವಲ್ಪವನ್ನಾದರೂ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂಬ ಲೇಖಕರ ಕಳಕಳಿ ಸ್ತುತ್ಯರ್ಹವಾಗಿದೆ.


ಇತಿ ವಿದ್ವಜ್ಜನವಿಧೇಯ,

 ಡಾ|| ಮಹೇಶ ಕಾಕತ್ಕರ್ (ಶೃಂಗೇರಿ), 

ಸಂಸ್ಕೃತ ಉಪನ್ಯಾಸಕರು,

ಸರ್ಕಾರಿಪದವಿಪೂರ್ವ ಕಾಲೇಜು,

ಕೊಪ್ಪ, ಚಿಕ್ಕಮಗಳೂರು ಜಿಲ್ಲೆ.



ಲೇಖಕರ ನುಡಿ


ಐದನೆಯ ವೇದವೆಂದೇ ಗೌರವಿಸಲ್ಪಡುವ ಮಹರ್ಷಿವ್ಯಾಸಪ್ರಣೀತವಾದ ಮಹಾಭಾರತಗ್ರಂಥದ ಹದಿನೆಂಟು ಪರ್ವಗಳಲ್ಲಿ ಆರನೆಯದ್ದಾದ ಭೀಷ್ಮಪರ್ವದಲ್ಲಿ ಇಪ್ಪತ್ತೈದನೆಯ ಅಧ್ಯಾಯದಿಂದ ಪ್ರಾರಂಭವಾಗುವ ಶ್ರೀಮದ್ಭಗವದ್ಗೀತೆ, ಶಾಸ್ತ್ರಪ್ರಪಂಚದಲ್ಲಿ ಅತ್ಯುಚ್ಚಸ್ಥಾನವನ್ನು ಪಡೆದಿದೆ. ಅದೇ ಪರ್ವದ ನಲವತ್ತಮೂರನೆಯ ಅಧ್ಯಾಯದಲ್ಲಿ, "ಇದು ಮಹಾಭಾರತವೆಂಬ ಅಮೃತಸಮುದ್ರವನ್ನು ಕಡೆದು ಸಂಗ್ರಹಿಸಿದ ಅಮೃತ ಸಾರವಾಗಿದ್ದು ಎಲ್ಲ ಶಾಸ್ತ್ರಗಳ ಸಾರವನ್ನೂ ಒಳಗೊಂಡು ಸರ್ವಶಾಸ್ತ್ರಸ್ವರೂಪವಾಗಿದೆ. ಆದ್ದರಿಂದ ಎಷ್ಟೇ ಶಾಸ್ತ್ರಗಳನ್ನು ಓದಿದ ವಿದ್ವಾಂಸರಾದರೂ ಭಗವದ್ಗೀತೆಯನ್ನು ಓದಿಲ್ಲವಾದರೆ ಅವರ ಓದು ಸಾರ್ಥಕವಾಗುವುದಿಲ್ಲ, ಯಾವುದೇ ಶಾಸ್ತ್ರವನ್ನು ಓದದಿದ್ದವರೂ ಭಗವದ್ಗೀತೆಯನ್ನು ತಿಳಿದರಾದರೆ ಅವರ ಓದು ಸಾರ್ಥಕವಾಗುತ್ತದೆ. ಏಕೆಂದರೆ ಗೀತಾ, ಗಂಗಾ, ಗಾಯತ್ರೀ, ಗೋವಿಂದ—ಈ ನಾಲ್ಕು 'ಗ'ಕಾರಗಳನ್ನು ಹೃದಯದಲ್ಲಿರಿಸಿಕೊಂಡವನಿಗೆ ಪುನರ್ಜನ್ಮವಿರುವುದಿಲ್ಲ. ಆದ್ದರಿಂದ ಅನೇಕಶಾಸ್ತ್ರಗಳನ್ನು ಓದುವುದಕ್ಕಿಂತ ಗೀತಾಚಿಂತನೆಯನ್ನು ಮಾಡುವುದೇ ಮಾನವಜೀವನವನ್ನು ಸಾರ್ಥಕಗೊಳಿಸುವ ಉತ್ತಮವಾದ ಉಪಾಯವಾಗಿದೆ" ಎಂದು ವೈಶಂಪಾಯನರು ಹೇಳಿದ್ದಾರೆ.


ಗೀತೆ ಚಿಂತಿಸಿದಷ್ಟೂ ಚಿಗುರುವ ಕಲ್ಪವೃಕ್ಷ. ಇದನ್ನಾಧರಿಸಿದ ಸಣ್ಣ-ದೊಡ್ಡ ಗ್ರಂಥಗಳು ನಾನಾಸ್ತರದ ವಿದ್ವಾಂಸರಿಂದ ನಾನಾಭಾಷೆಗಳಲ್ಲಿ ರಚಿತವಾಗಿವೆ. ಅವುಗಳ ಮಧ್ಯದಲ್ಲಿ ನನ್ನದೊಂದು ಚಿಕ್ಕ ಪುಸ್ತಕ ಸಮಾಜಕ್ಕೆ ಭಾರವಾಗಲಾರದೆಂಬ ಭಾವನೆಯಿಂದ ಗೀತೆಯ ಕುರಿತ ನನ್ನ ಚಿಂತನೆಯನ್ನು ಹಂಚಿಕೊಳ್ಳುವುದಕ್ಕಾಗಿ ಈ 'ಗೀತಾಚಿಂತನ' ವೆಂಬ ಹೊತ್ತಿಗೆಯನ್ನು ರಚಿಸಿದ್ದೇನೆ. ಇಲ್ಲಿ ಶ್ಲೋಕಗಳ ಚಿಂತನೆಗಾಗಿ ಯಾವುದೇ ಆಚಾರ್ಯರ ವ್ಯಾಖ್ಯಾನಗಳನ್ನು ಬಳಸಿಕೊಳ್ಳಲಿಲ್ಲ. ತಾತ್ಪರ್ಯಲಿಂಗಗಳನ್ನಷ್ಟೇ ಬಳಸಿಕೊಂಡು ಸಾಮಾನ್ಯಜನರಿಗೆ ಉಪಯುಕ್ತವಾಗುವಂತೆ ನನ್ನ ಬುದ್ಧಿಯ ಮಿತಿಯಲ್ಲಿ ಚಿಂತನೆಯನ್ನು ನಡೆಸಿದ್ದೇನೆ.


ಇದನ್ನು ವಿಮರ್ಶಿಸಿ ಹಿನ್ನುಡಿ ಮುನ್ನುಡಿಗಳನ್ನು ಬರೆದು ಕೊಡುವಂತೆ ನನ್ನ ಸಹೃದಯಸ್ನೇಹಿತರಾದ ವಿ ನಾರಾಯಣಮೂರ್ತಿಗಳಲ್ಲಿ ಮತ್ತು ಡಾ| ಮಹೇಶ ಕಾಕತ್ಕರರಲ್ಲಿ ಕೇಳಿದಾಗ ಪ್ರೀತಿಯಿಂದ ಒಪ್ಪಿ ಅವುಗಳಿಂದ ಪುಸ್ತಕವನ್ನು ಅಲಂಕರಿಸಿದ್ದಾರೆ……. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.


ಇತಿ ಲೇಖಕ.


|| ಶ್ರೀಕೃಷ್ಣಾಯ ಪರಬ್ರಹ್ಮಣೇ ನಮಃ ||


ಗೀತಾಚಿಂತನ


ಮಂಗಲಾಚರಣಮ್


ಸರ್ವೋಪನಿಷದಾಂ ಸಾರಂ ಸಂಗೃಹ್ಯೋಪದಿದೇಶ ಯಃ |

 ಭಗವಂತಂ ವಾಸುದೇವಂ ಕೃಷ್ಣಂ ವಂದೇ ಜಗದ್ಗುರುಮ್ ||


ಗೀತೆಯ ಪರಿಚಯ


ಗೀತಾ, ಅಥವಾ ಗೀತೆ ಇದು ಪ್ರಪಂಚದಲ್ಲೇ ಪ್ರಸಿದ್ಧವಿರಬಹುದಾದ ಶಬ್ದವಾಗಿದೆ. ಲಯಬದ್ಧವಾದ ಶಬ್ದಗಳ ಸಮೂಹವನ್ನು 'ಗೀತೆ' ಎನ್ನಲಾ ಗುತ್ತದೆ. ಲೌಕಿಕಭಾಷೆಯಲ್ಲಿ ಇದನ್ನು 'ಹಾಡು' ಎನ್ನುತ್ತೇವೆ. ಅಂತಹ ಹಾಡುಗಳು ಪ್ರಪಂಚದ ಎಲ್ಲ ಭಾಷೆಗಳಲ್ಲಿಯೂ ಇವೆ. ಅವುಗಳನ್ನು ಎಷ್ಟಿವೆ ಎಂದು ಲೆಕ್ಕಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಶಾಸ್ತ್ರ ಪ್ರಪಂಚದ ಪರಿಚಯವಿದ್ದವರಿಗೆ 'ಗೀತೆ' ಎಂಬ ಶಬ್ದವನ್ನು ಕೇಳಿದ ಕೂಡಲೆ ಮೊದಲು ನೆನಪಿಗೆ ಬರುವುದು ಭಗವಂತನಿಂದ ಗೀತವಾದ ಗೀತೆಗಳುಳ್ಳ ಸನಾತನ ಹಿಂದೂಧರ್ಮದ ಅನುಯಾಯಿಗಳ ಪೂಜ್ಯತಮವಾದ ಒಂದೇ ಒಂದು ಪುಟ್ಟ ಗ್ರಂಥ, ಅದು ಶ್ರೀಮದ್ಭಗವದ್ಗೀತೆ. ಶಾಂತಿ ಸಮೃದ್ಧವಾದ ಸಾರ್ಥಕಜೀವನವನ್ನು ನಡೆಸಲು ಬಯಸುವ ಪ್ರತಿಯೊಬ್ಬರೂ ಚಿಂತಿಸಬೇಕಾದ ಗ್ರಂಥ ಇದಾಗಿದ್ದು, ಇದರ ಗ್ರಂಥವನ್ನು ಪ್ರವೇಶಿಸುವ ಮೊದಲು ಇದರ ಸಾಮಾನ್ಯವಾದ ಪರಿಚಯವನ್ನು ಮಾಡಿಕೊಳ್ಳಬೇಕು.


★ಶ್ರೀಮದ್ಭಗವದ್ಗೀತಾ—


ಈ ಗೀತೆ ಲೌಕಿಕವಾದ ಹಾಡುಗಳ ಸಂಕಲನದಂತೆ ಸಾಮಾನ್ಯವಾದ ಒಂದು ಕೃತಿಯಲ್ಲ. ಇದು ಭಗವದ್ಗೀತೆ; ಅಂದರೆ ಭಗವಂತ ಹಾಡಿದ ಗೀತೆ; ಆತ ತನ್ನ ಭಕ್ತರ ಉದ್ಧಾರಕ್ಕಾಗಿ ರಚಿಸಿದ ಗೀತೆ; ಭಕ್ತರಿಗೆ ಜೀವನ ಮಾರ್ಗವನ್ನು ತೋರಿಸಲು ಹೇಳಿದ ಗೀತೆ. ಇದು ಭಗವಂತನಿಗೆ ಸಂಬಂಧಿಸಿದಂತೆ ಎಲ್ಲ ವಿಷಯಗಳನ್ನು ಒಳಗೊಂಡ ಗೀತೆ. ಮನುಷ್ಯನು ಜೀವನದಲ್ಲಿ ಮಾಡಬೇಕಾದ ಕರ್ತವ್ಯವನ್ನು ಬೋಧಿಸುವ, ಶ್ರದ್ಧೆಯಿಂದ ಕೇಳಿ ತಮ್ಮ ಜೀವನವಿಧಾನದಲ್ಲಿ ಸ್ವಲ್ಪವನ್ನಾದರೂ ಅಳವಡಿಸಿಕೊಳ್ಳುವ ಶ್ರದ್ಧಾಳುಗಳಿಗೆ ಲೌಕಿಕಜೀವನದಲ್ಲಿ ಶಾಂತಿ-ಸಮೃದ್ಧಿ (ಜೀವನ್ಮುಕ್ತಿ)ಗಳನ್ನು ನೀಡುವು ದಷ್ಟೇ ಅಲ್ಲದೇ ದೇಹ ಬಿಟ್ಟ ಅನಂತರ ಭಗವಂತನನ್ನೇ ಹೊಂದಿಸಿ (ವಿದೇಹಮುಕ್ತಿ) ಅವರ ಜೀವನವನ್ನೇ ಉದ್ಧಾರ ಮಾಡಬಹುದಾದ ಲಯವುಳ್ಳ ಛಂದೋಬದ್ಧವೂ ಸುಮಧುರವೂ ಆಗಿರುವ ಗೀತೆ ಭಗವದ್ಗೀತೆ.


ಸಮಗ್ರವಾದ ಐಶ್ವರ್ಯ, ಧರ್ಮ, ಯಶಸ್ಸು, ಶ್ರೀ, ಜ್ಞಾನ, ವಿಜ್ಞಾನ, ಈ ಆರು ಸಂಪತ್ತುಗಳಿಗೆ ಭಗ ಎಂದು ಹೆಸರು. ಈ ಭಗಗಳು ಇರುವವನೇ “ಭಗವಾನ್'. ಶ್ರೀಶಬ್ದಕ್ಕೆ ಸಾಮರ್ಥ್ಯ, ಸಮೃದ್ಧಿ, ಶೋಭೆ, ಕಾಂತಿ, ಪರಿಪೂರ್ಣತೆ ಮೊದಲಾದ ಅನೇಕ ಅರ್ಥಗಳಿವೆ. ಭಗವಂತನಿಂದ ಗೀತವಾದ ಈ ಗೀತೆ ಭಗವಂತನನ್ನು ತಿಳಿಸಿ ಕೊಡುವಲ್ಲಿ ಅಥವಾ ಸಾಧಕನನ್ನು ಭಗವಂತನೊಂದಿಗೆ ಸೇರಿಸುವಲ್ಲಿ ಸಮರ್ಥವೂ ಸಮೃದ್ಧವೂ ಪರಿಪೂರ್ಣವೂ ಆಗಿದೆ ಎಂಬುದನ್ನು ತಿಳಿಸುವುದಕ್ಕೋಸ್ಕರ ಈ ಭಗವದ್ಗೀತೆ ಶಬ್ದ ದೊಂದಿಗೆ ಶ್ರೀಮತ್ ಎಂಬ ವಿಶೇಷಣವನ್ನು ಸೇರಿಸಿ 'ಶ್ರೀಮದ್ಭಗವದ್ಗೀತೆ' ಎಂದು ಕರೆಯಲಾಗಿದೆ.


ಭಾರತೀಯ ಶಾಸ್ತ್ರಪ್ರಪಂಚದಲ್ಲಿ ಶ್ರೀಭಗವಂತನಿಂದ ಗೀತವಾದ ಗರುಡಪುರಾಣ, ಉದ್ದವಗೀತಾ ಮೊದಲಾದ ಅನೇಕ ಗ್ರಂಥಗಳಿವೆ. ಯೌಗಿಕವಾಗಿ ಅವುಗಳೆಲ್ಲವೂ ಶ್ರೀಮದ್ಭಗವದ್ಗೀತೆಗಳೇ ಆಗುತ್ತವೆ. ಆದರೆ 'ಶ್ರೀಮದ್ಭಗವದ್ಗೀತೆ' ಎಂಬ ಈ ಪದವನ್ನು ಅವುಗಳೆಲ್ಲವುಗಳ ಹೆಸರನ್ನಾಗಿ ಬಳಸದೇ ಶ್ರೀವೇದವ್ಯಾಸರಿಂದ ಮಹಾಭಾರತಗ್ರಂಥದ ಮಧ್ಯದಲ್ಲಿ ಗ್ರಥಿಸಲ್ಪಟ್ಟ ಏಳು ನೂರು ಶ್ಲೋಕಗಳುಳ್ಳ ಗ್ರಂಥದ ಹೆಸರನ್ನಾಗಿ ಮಾತ್ರವೇ ಬಳಸಲಾಗುತ್ತದೆ. ಹಿಂದೆ ಹೇಳಿದ 'ಶ್ರೀಮದ್ಭಗವದ್ಗೀತೆ' ಶಬ್ದದ ಆ ಎಲ್ಲ ಗುಣ-ಲಕ್ಷಣಗಳು ಈ ಗ್ರಂಥದಲ್ಲಿ ಮಾತ್ರ ಪರಿಪೂರ್ಣವಾಗಿರುವುದರಿಂದ ಈ ಹೆಸರು ಈ ಗ್ರಂಥಕ್ಕೆ ಮಾತ್ರವೇ ಸಾರ್ಥಕವಾಗಿ ಹೊಂದಿಕೊಳ್ಳುತ್ತದೆ. ಆದ್ದರಿಂದ ಇದನ್ನು ಮಾತ್ರವೇ ರೂಢನಾಮವಾಗಿಯೂ, ಅಷ್ಟೇ ಅಲ್ಲದೇ ಯೌಗಿಕವಾಗಿಯೂ ಅನ್ವರ್ಥವಾಗಿ ಶ್ರೀಮದ್ಭಗವದ್ಗೀತೆ ಎಂದು ಹೆಸರಿಸಲಾಗುತ್ತದೆ. 


★ಉಪನಿಷತ್—


ಶಬ್ದನಿಷ್ಠವಾಗಿ ಹೇಳುವುದಾದರೆ ಹಾಡು ಎನ್ನುವುದಕ್ಕೆ ಸಂಸ್ಕೃತಭಾಷೆ ಯಲ್ಲಿ ಪರ್ಯಾಯಪದ 'ಗೀತಂ' ಅಥವಾ 'ಗೀತಿಃ' ಎಂದಾಗುತ್ತದೆಯೇ ಹೊರತು 'ಗೀತಾ' ಎಂದಾಗುವುದಿಲ್ಲ. ಸಂಸ್ಕೃತಭಾಷೆಯಲ್ಲಿ 'ಗೀತಾ' ಎಂಬ ಶಬ್ದವನ್ನು ಬೇರೊಂದು ಶಬ್ದಕ್ಕೆ ವಿಶೇಷಣವನ್ನಾಗಿಸಿ ಬಳಸ ಬಹುದೇ ಹೊರತು ಸ್ವತಂತ್ರಶಬ್ದವನ್ನಾಗಿ ಬಳಸಲಾಗುವುದಿಲ್ಲ. ಇಲ್ಲಿ ಈ ಶಬ್ದವನ್ನು 'ಉಪನಿಷತ್' ಎಂಬ ಶಬ್ದಕ್ಕೆ ವಿಶೇಷಣವಾಗಿ ಬಳಸಲಾಗಿದೆ. ಶ್ರೀಮದ್ಭಗವ ದ್ಗೀತೋಪನಿಷತ್ ಎಂಬುದು ಈ ಗ್ರಂಥದ ಪೂರ್ಣ ಹೆಸರು. ಅದರ ಏಕದೇಶವನ್ನು ಹಿಡಿದು 'ಗೀತಾ' ಅಥವಾ 'ಗೀತೆ' ಎಂದು ಇದನ್ನು ಕರೆಯ ಲಾಗುತ್ತಿದೆ. ಈ ಗೀತಾಗ್ರಂಥದ ಮೂಲ ಹೆಸರು 'ಉಪನಿಷತ್' ಎಂಬುದಾಗಿ, ಮುಖ್ಯವಾಗಿ ಈ ಹೆಸರು ವೇದಗಳ ರಹಸ್ಯಭಾಗಗಳಾದ ವೇದಾಂತ ಗಳಿಗೆ ಮಾತ್ರ ಇರುವುದು. ಆದರೂ ಕೂಡ ಇದು ಅವುಗಳ ಸಾರಸಂಗ್ರಹ ರೂಪವಾಗಿದೆ ಎಂಬ ಕಾರಣದಿಂದ ಇದನ್ನೂ ಕೂಡ ಆ ಹೆಸರಿನಿಂದಲೇ ಗುರುತಿಸಲಾಗಿದೆ. ಆದರೆ ಇದು ವೇದಾಂತಗಳಂತೆ ಅಪೌರುಷೇಯವಾಗಿರದೇ ಶ್ರೀಭಗವಂತನಿಂದ ಹೇಳಲ್ಪಟ್ಟದ್ದು ಎಂಬುದನ್ನು ತಿಳಿಸುವುದಕ್ಕಾಗಿ 'ಶ್ರೀಮದ್ಭಗವದ್ಗೀತಾ' ಎಂಬ ಈ ವಿಶೇಷಣವನ್ನು ಇದಕ್ಕೆ ಸೇರಿಸಲಾಗಿದೆ. ಆದ್ದರಿಂದ ಇದು 'ಶ್ರೀಮದ್ಭಗವದ್ಗೀತೋಪನಿಷತ್'. ಉಪ, ನಿ— ಎಂಬ ಎರಡು ಉಪಸರ್ಗಗಳಿಂದ ಕೂಡಿದ ಷದ್-ಲೃ(ವಿಶರಣಗತ್ಯವಸಾದನೇಷು) ಎಂಬ ಧಾತುರೂಪದಿಂದ ನಿಷ್ಪನ್ನವಾದ 'ಉಪನಿಷತ್' ಶಬ್ದಕ್ಕೆ ವೇದಾಂತವಿದ್ವಾಂಸರಿಂದ ವಿಸ್ತಾರವಾದ ವ್ಯಾಪ್ತಿಯುಳ್ಳ ಅನೇಕ ಅರ್ಥಗಳು ನಿರೂಪಿತವಾಗಿವೆ. ವೇದೋಪನಿಷತ್ತುಗಳು ಜಟಿಲವಾದ ಶೈಲಿಯಲ್ಲಿದ್ದು ಸಾಮಾನ್ಯರಿಂದ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಗೀತೆಯಲ್ಲಾದರೂ ಆ ಎಲ್ಲ ಉಪನಿಷತ್ತುಗಳ ಸಾರವು ಸಂಗ್ರಹಿಸಲ್ಪಟ್ಟಿದ್ದು ಆ ಎಲ್ಲ ಉಪನಿಷತ್ತುಗಳ ಸಾರ್ಥಕತೆಯನ್ನೂ ಈ ಒಂದು ಗ್ರಂಥದಲ್ಲಿಯೇ ಕಾಣಬಹುದು. ಆದ್ದರಿಂದಲೇ ಹಿರಿಯರು ಹೇಳಿದರು—


'ಸರ್ವೋಪನಿಷದೋ ಗಾವೋ

 ದೋಗ್ಧಾ ಗೋಪಾಲನಂದನಃ |

ಪಾರ್ಥೋ ವತ್ಸಃ ಸುಧೀರ್ಭೋಕ್ತಾ

 ದುಗ್ಧಂ ಗೀತಾಮೃತಂ ಮಹತ್ ॥' 


ಎಂದು. ಗೀತಾಗ್ರಂಥದಲ್ಲೇ ನಿರೂಪಿತವಾದಂತೆ ಸುಲಭವಾಗಿ ಹೇಳುವುದಾದರೆ-


 (ಸರ್ವಗುಹ್ಯತಮಂ ಭೂಯಃ ಶೃಣು ಮೇ ಪರಮಂ ವಚಃ | ಇಷ್ಟೋsಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್ ॥ ಗೀ.ಅಧ್ಯಾಯ.೧೮, ಶ್ಲೋಕ, ೬೪॥ ಇದಂ ತು ತೇ ಗುಹ್ಯತಮಂ…ಪ್ರವಕ್ಷ್ಯಾಮಿ.. | ಜ್ಞಾನಂ ವಿಜ್ಞಾನಸಹಿತಂ ಯಜ್ಞಾತ್ವಾ ಮೊಕ್ಷ್ಯಸೇsಶುಭಾತ್ || ೯.೧ ॥ ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್ ॥ ೧೦.೧ || ಯ ಇದಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ ॥ ೧೮.೬೮ ||)


-ಇದು 'ಶ್ರೀಭಗವಂತನ ಭಕ್ತರಿಗೆ ಹಿತವಾದ ಪರಮ ರಹಸ್ಯವಿದ್ಯೆ'. ಅಂತಹ ವಿದ್ಯೆಯನ್ನು ಪ್ರತಿಪಾದಿಸುವ ಗ್ರಂಥಕ್ಕೂ ಅದೇ ಹೆಸರಿನಿಂದ ಕರೆಯುವ ಸಂಪ್ರದಾಯ ವೈದಿಕಪರಂಪರೆಯಲ್ಲಿ ಇರುವುದರಿಂದ ಇಲ್ಲಿಯೂ ಈ ಗ್ರಂಥವನ್ನು ಹಾಗೆಯೇ ಹೆಸರಿಸಲಾಗಿದೆ. ಅರ್ಥವ್ಯಾಪ್ತಿಯಲ್ಲಿ ಈ ಗ್ರಂಥದ ಒಂದೊಂದು ಅಧ್ಯಾಯವಷ್ಟೇ ಅಲ್ಲ, ಒಂದೊಂದು ಶ್ಲೋಕವೂ ಕೂಡ ಒಂದೊಂದು ಉಪನಿಷತ್ತಿಗೆ ಸರಿಸಮವಾಗಿ ನಿಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಅಭಿಪ್ರಾಯದಿಂದ ಶ್ರೀಮದ್ಭಗವದ್ಗೀತೋಪನಿಷದಃ [ಶ್ರೀಮದ್ಭಗವದ್ಗೀತೋಪನಿಷತ್ಸು] ಎಂಬುದಾಗಿ ಉಪನಿಷತ್ ಪ್ರಾತಿಪದಿಕದೊಂದಿಗೆ ಬಹುವಚನ ಪ್ರತ್ಯಯವನ್ನು ಪ್ರಯೋಗಿಸಲಾಗುತ್ತದೆ. ವೇದೋಪನಿಷತ್ತುಗಳಲ್ಲಿರುವ ಶಬ್ದಸಮೂಹಗಳನ್ನು ಹೆಸರಿನಿಂದ ಗೌರವಿಸುವುದು ಭಾರತೀಯ ಶಿಷ್ಟಸಂಪ್ರದಾಯ. 'ಮನನ ಮಾಡುವವರನ್ನು ಅಂದರೆ ಅನನ್ಯಭಾವದಿಂದ ಚಿಂತಿಸುವವರನ್ನು ರಕ್ಷಿಸುವ ವಿಶಿಷ್ಟವಾದ ಶಕ್ತಿಯಿಂದ ಸಮೃದ್ಧವಾದ ವಿದ್ಯೆ' ಎಂಬುದು ಮಂತ್ರ ಶಬ್ದದ ಪಾರಿಭಾಷಿಕ ಅರ್ಥವಾಗಿದೆ. ಆದ್ದರಿಂದ ಉಪನಿಷತ್ತಾದ ಇದರಲ್ಲಿನ ಎಲ್ಲ ವಾಕ್ಯಗಳಲ್ಲಿಯೂ ಈ ಮಂತ್ರಲಕ್ಷಣ ಇರುವುದರಿಂದ ಎಲ್ಲ ವಾಕ್ಯಗಳೂ ಮಂತ್ರಗಳೇ ಆಗಿವೆ. ಅದಲ್ಲದೇ ಇಲ್ಲಿನ ವಿಷಯಗಳು ಅತ್ಯಂತ ರಹಸ್ಯಗಳಾಗಿದ್ದು ಇದರ ಒಂದೊಂದು ಶ್ಲೋಕವೂ ಕೂಡ ಉಪನಿಷತ್ತಿನ ಮಂತ್ರಗಳೆಂಬಂತಹ ಅರ್ಥಲಕ್ಷಣವನ್ನೇ ಹೊಂದಿದೆ. ತಪಸ್ಸಿಲ್ಲದವರಿಗೆ, ಭಕ್ತರಲ್ಲದವರಿಗೆ, ಕೇಳಲು ಇಚ್ಛೆ ಇಲ್ಲದವರಿಗೆ, ಭಗವಂತನನ್ನು ಕುರಿತು ಅಸೂಯೆ ಪಡುವವರಿಗೆ ಇದನ್ನು ಹೇಳಬಾರದು—


ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ |

 ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋsಭ್ಯಸೂಯತಿ ||


ಎಂದು ಭಗವಂತನೇ ಆದೇಶಿಸಿದ್ದಾನೆ. ಆದ್ದರಿಂದ ಭಗವಂತನನ್ನು ಪಡೆಯುವುದ ಕ್ಕಾಗಿ ಶಾರೀರಕವಾಗಿ, ವಾಚಿಕವಾಗಿ ಹಾಗೂ ಮಾನಸಿಕವಾಗಿ ತಪಸ್ಸನ್ನು ಮಾಡುತ್ತಿದ್ದು ಕೇಳುವ ಆಸಕ್ತಿಯನ್ನು ಹೊಂದಿರುವ ಸಾಧಕಭಕ್ತರಿಗೆ ಮಾತ್ರ ಇದನ್ನು ಹೇಳಬೇಕು. ಅಂತವರು ಮಾತ್ರ ಇದನ್ನು ಅರ್ಥವಿಸಿಕೊಳ್ಳಲು ಸಾಧ್ಯವಾಗುವುದರಿಂದ ಆಗ ಮಾತ್ರ ಹೇಳಿದವರ ಪರಿಶ್ರಮ ಸಾರ್ಥಕ ವಾಗುತ್ತದೆ. ಅದಿಲ್ಲದೇ ಅಯೋಗ್ಯರಿಗೆ ಹೇಳಿದರೆ ಅದರಿಂದ ಹೇಳುಗನ ಶ್ರಮ ವ್ಯರ್ಥವಾಗುವುದಲ್ಲದೇ ಕೇಳಿದವನು ವಿಪರೀತವಾಗಿಯೇ ತಿಳಿದುಕೊಂಡು ಕುತರ್ಕವನ್ನೇ ಮಾಡುತ್ತಾ ಸಮಾಜಕಂಟಕನೇ ಆಗುತ್ತಾನೆ. ಅದರಿಂದ ಹೇಳಿದವರಿಗೂ ಇದರಿಂದ ಪಾಪ ತಟ್ಟುತ್ತದೆ. 'ಮೂರ್ಖ ಶಿಷ್ಯಪದೇಶೇನ ಪಂಡಿತೋಽಪ್ಯವಸೀದತಿ'— ಮೂರ್ಖರಾದ ಶಿಷ್ಯರಿಗೆ ಉಪದೇಶಿಸುವುದರಿಂದ ಪಂಡಿತನೂ ಕೂಡ ಪತನವನ್ನು ಹೊಂದುತ್ತಾನೆ ಎನ್ನುತ್ತದೆ ಶಾಸ್ತ್ರ.


ಶ್ರದ್ಧಾವಾನನಸೂಯಶ್ಚ ಶೃಣುಯಾದಪಿ ಯೋ ನರಃ | ಸೋsಪಿ ಮುಕ್ತಃ

ಶುಭಾನ್ ಲೋಕಾನ್ ಪ್ರಾಪ್ನುಯಾತ್ ಪುಣ್ಯಕರ್ಮಣಾಮ್ || (೧೮-೭೧)


 ಭಗವಂತ ಹಾಗೂ ಭಕ್ತನ ಸಂವಾದರೂಪವಾದ, ಧರ್ಮಪೂರ್ಣವಾದ ಈ ಗ್ರಂಥವನ್ನು ಅಧ್ಯಯನ ಮಾಡುವವರು ತನ್ನನ್ನು ಜ್ಞಾನಯಜ್ಞದಿಂದ ತೃಪ್ತಿಪಡಿಸಿದರೆಂದೇ ಭಗವಂತ ತಿಳಿಯುತ್ತಾನೆ. ಪರಮಗುಹ್ಯವಾದ ಇದನ್ನು ಭಕ್ತರಿಗೆ ಹೇಳುವವರಿಗಿಂತ, ಭಗವಂತನಿಗೆ ಪ್ರಿಯತಮರಾದವರು, ಮನುಷ್ಯಲೋಕದಲ್ಲಿಯೇ ಮತ್ತೊಬ್ಬರಿರಲಾರರು. ಅಂತಹ ಪ್ರಿಯತಮರು ಭೂಮಿಯಲ್ಲಿ ಹುಟ್ಟುವುದೂ ಇಲ್ಲ. ಅವರು ಭಗವಂತನಲ್ಲಿ ಪರಮಭಕ್ತಿಯನ್ನು ಮಾಡಿ ಆ ಭಗವಂತನನ್ನೇ ಸೇರುತ್ತಾರೆ ಎಂಬುದರಲ್ಲಿ ಸಂಶಯ ವಿಲ್ಲ. ಅದಲ್ಲದೇ ಈ ಗ್ರಂಥವನ್ನು ಪಾರಾಯಣ ಮಾಡುತ್ತಿರುವುದನ್ನು ಅಸೂಯೆ ಇಲ್ಲದೇ ಶ್ರದ್ಧಾಸಮನ್ವಿತರಾಗಿ ಭಕ್ತಿಯಿಂದ ಕೇಳುವವರೂ ಕೂಡ ಸಂಸಾರಬಂಧನದಿಂದ ಮುಕ್ತರಾಗಿ ಪುಣ್ಯಕರ್ಮಗಳನ್ನು ಮಾಡಿದ ವ್ಯಕ್ತಿಗಳು ಹೊಂದಬಹುದಾದ ಪುಣ್ಯಲೋಕವನ್ನೇ ಹೊಂದುತ್ತಾರೆ ಎಂಬುದಾಗಿ ಈ ಗೀತೆಯಲ್ಲಿಯೇ ಕೊನೆಯಲ್ಲಿ ಹೇಳಲಾಗಿದೆ. 


★ಬ್ರಹ್ಮವಿದ್ಯೆ


ವಿದ್ವಾಂಸರು ಇದನ್ನು ಬ್ರಹ್ಮವಿದ್ಯೆ ಎಂದೂ ಹೆಸರಿಸಿದ್ದಾರೆ. ಬ್ರಹ್ಮ ಶಬ್ದಕ್ಕೆ 'ವೇದ' ಎಂಬುದು ಒಂದರ್ಥವಾದರೆ ಜಗತ್ತಿನ ಸೃಷ್ಟಿ-ಸ್ಥಿತಿ-ಪ್ರಳಯಗಳನ್ನು ನಡೆಸುತ್ತಿರುವ 'ಭಗವಂತ' ಎಂಬುದು ಮತ್ತೊಂದರ್ಥ. ಅಜ್ಞಾನವನ್ನು ನಾಶ ಮಾಡುವ 'ಸುಜ್ಞಾನ' ಎಂಬ ಇನ್ನೊಂದರ್ಥವೂ ಇದೆ. ಹಾಗೆಯೇ (ಬೃಹಿ-ವೃದ್ಧೌ) ಮಿತಿಮೀರಿದ ದೊಡ್ಡ ವಸ್ತು, ಪ್ರಕೃತಿ (ಮಮ ಯೋನಿರ್ಮಹದ್ ಬ್ರಹ್ಮ) ಮುಂತಾದ ಇತರ ಅರ್ಥಗಳೂ ಇವೆ. ವೇದಗಳ ಸಾರವನ್ನು ಸಂಗ್ರಹಿಸಿ ಹೇಳಿರುವುದರಿಂದ, ಅನಂತವಾದ ತತ್ತ್ವಜ್ಞಾನದ ಭಂಡಾರವಾಗಿರುವುದರಿಂದ, ಸಂಸಾರದ ದುಃಖಕ್ಕೆ ಕಾರಣವಾದ ಅಜ್ಞಾನವನ್ನು ನಾಶ ಮಾಡುವ ಸುಜ್ಞಾನವನ್ನು ಪಡೆಯಲು ಸಾಧನವಾಗಿರುವುದರಿಂದ, ಪರಮಾತ್ಮನ ಸರ್ವವ್ಯಾಪಕತ್ವವನ್ನು ವಿಚಾರಮಾಡುವುದರಿಂದ, ಪ್ರಕೃತಿಯ ಗುಣಗಳೊಂದಿಗೆ ದೇಹಿಯ ಸಂಬಂಧವನ್ನು ವಿಚಾರ ಮಾಡಿ ದೇಹಿಯು ಬಂಧಕಗಳಾದ ಆ ಗುಣಗಳಿಂದ ಬಿಡಿಸಿಕೊಳ್ಳುವ ಉಪಾಯವನ್ನು ಉಪದೇಶಿಸುವುದರಿಂದ— ಹೀಗೆ ಇನ್ನೂ ಅನೇಕ ಕಾರಣ ಗಳಿಂದಲೂ ಈ ಭಗವದ್ಗೀತೆಗೆ 'ಬ್ರಹ್ಮವಿದ್ಯೆ' ಎಂಬ ಅಭಿಧೇಯ ಸಾರ್ಥಕವಾಗಿದೆ.


★ಯೋಗಶಾಸ್ತ್ರ


ತಮ್ಮಲ್ಲಿಲ್ಲದ ಒಳ್ಳೆಯದನ್ನು ಪಡೆಯುವುದಕ್ಕೆ (ಅಪ್ರಾಪ್ತಸ್ಯ ಪ್ರಾಪ್ತಿಃ ಯೋಗಃ) 'ಯೋಗ' ಎಂಬ ಹೆಸರು. (ಪ್ರಾಪ್ತಸ್ಯ ರಕ್ಷಣಮ್ ಕ್ಷೇಮಃ—ಪಡೆದಿರುವುದರ ರಕ್ಷಣೆಯೇ ಕ್ಷೇಮವು.) ಇಹಪರಗಳಿಗೆ ಸಲ್ಲುವಂತಹ ಶುದ್ಧ-ಸಮೃದ್ಧ ಬದುಕನ್ನು ನಡೆಸಲು ಬೇಕಾದ ಶಿಕ್ಷಣ ಕೊಡುವ ಗ್ರಂಥಕ್ಕೆ 'ಶಾಸ್ತ್ರ' ಎಂಬ ಹೆಸರು. ಗೀತೆಯು ಸಾಧಕನಲ್ಲಿ ಇಲ್ಲದ ಅವನು ಬಯಸಿದ ಒಳ್ಳೆಯದನ್ನು ಪಡೆಯಲು ಬೇಕಾದ ಶಿಕ್ಷಣವನ್ನು ಕೊಡುತ್ತದೆ. ಮನುಷ್ಯನಾಗಿ ಹುಟ್ಟಿದವನು ತನ್ನನ್ನು ಸೃಷ್ಟಿಸಿ ಕಾಪಾಡುತ್ತಿರುವ ಪರಮಾತ್ಮನ ಜ್ಞಾನವನ್ನು ಸ್ವಲ್ಪವಾದರೂ ಪಡೆದನಾದರೇ ಅದೇ ಮುಖ್ಯವಾಗಿ ಪುರುಷಾರ್ಥವಾದ 'ಯೋಗ'ವಾಗಿರುತ್ತದೆ. ಅದಲ್ಲದೇ ಕೆಲಸವನ್ನು ಮಾಡುತ್ತಾ ಅದರಿಂದ ಫಲ ಸಿಕ್ಕಿದರೂ ಸಿಗದಿದ್ದರೂ ಹರ್ಷ-ಶೋಕಗಳನ್ನು ಹೊಂದದೇ ಸಮಭಾವದಿಂದ ಇರುವುದೂ 'ಯೋಗ'. (ಸಮತ್ವಂ ಯೋಗ ಉಚ್ಯತೇ). ಪಾಪ-ಪುಣ್ಯಗಳು ಲೇಪಿಸದಂತೆ ಕರ್ಮವನ್ನು ಮಾಡುವ ಕರ್ಮಕೌಶಲ್ಯವನ್ನೂ 'ಯೋಗ' (ಯೋಗಃ ಕರ್ಮಸು ಕೌಶಲಮ್) ಎನ್ನಲಾಗಿದೆ. ಇದೆಲ್ಲವನ್ನೂ ಈ ಗ್ರಂಥವು ಕಲಿಸುವುದರಿಂದ ಇದಕ್ಕೆ ಯೋಗಶಾಸ್ತ್ರ ಎಂಬ ಹೆಸರೂ ಸಾರ್ಥಕವೇ ಆಗಿದೆ.


ಇದರಲ್ಲಿ ಒಟ್ಟು ಏಳುನೂರು ಶ್ಲೋಕಗಳಿದ್ದು, ಅವುಗಳನ್ನು ಹದಿನೆಂಟು ಅಧ್ಯಾಯಗಳನ್ನಾಗಿ ವಿಂಗಡಿಸಿ ಅವುಗಳ ಒಂದೊಂದು ಅಧ್ಯಾಯವನ್ನೂ ಒಂದೊಂದು ಯೋಗದ ಶಿಕ್ಷಕಗಳನ್ನಾಗಿ ಗುರುತಿಸಿ ಅವುಗಳಿಗೆ ಕ್ರಮವಾಗಿ—

೧.ಅರ್ಜುನವಿಷಾದಯೋಗ (೪೭ ಶ್ಲೋಕಗಳು) 

೨.ಸಾಂಖ್ಯಯೋಗ (೭೨)

೩.ಕರ್ಮಯೋಗ (೪೩) 

೪.ಜ್ಞಾನಕರ್ಮಸಂನ್ಯಾಸಯೋಗ (೪೨)

೫.ಕಮಸನ್ಯಾಸಯೋಗ (೨೯)

೬.ಆತ್ಮಸಂಯಮಯೋಗ (೪೭)

೭.ಜ್ಞಾನವಿಜ್ಞಾನಯೋಗ (೩೦) 

೮.ಅಕ್ಷರಬ್ರಹ್ಮಯೋಗ (೨೮)

೯.ರಾಜವಿದ್ಯಾರಾಜಗುಹ್ಯಯೋಗ (೩೪) 

೧೦.ವಿಭೂತಿಯೋಗ (೪೨)

೧೧.ವಿಶ್ವರೂಪದರ್ಶನಯೋಗ (೫೫) 

೧೨.ಭಕ್ತಿಯೋಗ (೨೦)

೧೩.ಕ್ಷೇತ್ರ ಕ್ಷೇತ್ರಜ್ಞವಿಭಾಗಯೋಗ (೩೪) 

೧೪.ಗುಣತ್ರಯವಿಭಾಗಯೋಗ (೨೭) 

೧೫.(ಪುರಾಣ)ಪುರುಷೋತ್ತಮಯೋಗ (೨೦)

೧೬.ದೈವಾಸುರಸಂಪದ್ವಿಭಾಗಯೋಗ (೨೪) 

೧೭.ಶ್ರದ್ಧಾತ್ರಯವಿಭಾಗಯೋಗ (೨೮) 

೧೮.ಮೋಕ್ಷಸಂನ್ಯಾಸಯೋಗ (೭೮)


ಎಂದು ಹೆಸರಿಸಿದ್ದಾರೆ….ಗೀತಾಪ್ರೆಸ್ಸಿನ ಮಹಾಭಾರತದ ಭೀಷ್ಮಪರ್ವದ ೪೩ನೆಯ ಅಧ್ಯಾಯದಲ್ಲಿರುವಂತೆ ಗೀತೆಯಲ್ಲಿ ೭೪೫ ಶ್ಲೋಕಗಳಿವೆ. ಆದರೆ, ನಾ ಕಂಡಂತೆ ಮಧ್ವಭಾಷ್ಯದಲ್ಲಿ ೭೦೧ ಶ್ಲೋಕಗಳಿದ್ದು, ಉಳಿದೆಲ್ಲ ಪುಸ್ತಕಗಳಲ್ಲಿಯೂ ೭೦೦ ಶ್ಲೋಕಗಳೇ ಇವೆ.


ಅರ್ಜುನನು ವಿಷಾದವನ್ನು ಅಂದರೆ ಶೋಕವನ್ನು ಹೊಂದಿ ತನ್ನ ಕರ್ತವ್ಯದಿಂದ ವಿಮುಖನಾಗುವುದನ್ನು ತಿಳಿಸುವ ಮೊದಲನೆಯ ಅಧ್ಯಾಯ ಹೇಗೆ ಯೋಗಶಾಸ್ತ್ರವಾಗಲು ಸಾಧ್ಯ? ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಉತ್ತರವನ್ನು ಹುಡುಕಬೇಕಾದರೆ ಅರ್ಜುನ ಏಕೆ ವಿಷಾದವನ್ನು ಹೊಂದಿದ ಎಂಬುದನ್ನು ಗಮನಿಸಬೇಕು. 


ಅರ್ಜುನನಲ್ಲಿರುವ 'ಅಹಂ, ಮಮ' ಎಂದರೆ 'ನಾನು, ನನ್ನದು' ಎಂಬ ಅಹಂಕಾರದ ಅಭಿಮಾನವೇ ಆತನ ವಿಷಾದಕ್ಕೆ ಅಂದರೆ ದುಃಖಕ್ಕೆ ಕಾರಣವಾಯಿತು. ಈ ವಿಷಾದವೇ ಆತನು ಕರ್ತವ್ಯದಿಂದ ವಿಮುಖನಾಗಲು ಕಾರಣವಾಗಿದೆ. ಸೇನೆಯ ಮಧ್ಯದಲ್ಲಿ ಸ್ವಜನರನ್ನು ನೋಡುವ ಮೊದಲು ಅವನಲ್ಲಿ "(ಯೋತ್ಸ್ಯಮಾನಾನವೇಕ್ಷೇsಹಂ) ಯುದ್ಧ ಮಾಡುವವರನ್ನು ನಾನು ನೋಡುತ್ತೇನೆ. ಧೃತರಾಷ್ಟ್ರನ ಮಗನಾದ ದುಷ್ಟದುರ್ಯೋಧನನೇ ಮೊದಲಾದ ನನ್ನ ಶತ್ರುಗಳೊಂದಿಗೆ ನಾನು ಯುದ್ಧ ಮಾಡುತ್ತೇನೆ" ಎಂಬ ಅಹಂಕಾರದ ಅಭಿಮಾನವಿತ್ತು. ಶ್ರೀಕೃಷ್ಣ ಎರಡು ಸೇನೆಗಳ ಮಧ್ಯದಲ್ಲಿ ರಥವನ್ನು ನಿಲ್ಲಿಸಿ ಒಟ್ಟು ಸೇರಿರುವ ಈ ಕುರುವಂಶೀಯರನ್ನು ನೋಡು ಎಂದು ಹೇಳಿದ ಅನಂತರ ಎರಡು ಸೇನೆಗಳಲ್ಲಿ ಸೇರಿರುವ ಭೀಷ್ಮ , ದ್ರೋಣ ಮೊದಲಾದವರನ್ನು ನೋಡಿದ ಅವನ ಆ ಅಹಂಕಾರವು ಕೃಪಾ ರೂಪವನ್ನು ಹೊಂದಿ ಅವನನ್ನು ಆವರಿಸಿ 'ಇವರು ನನ್ನ ಬಂಧುಗಳು. ನಾನು ಇವರ ಬಂಧು' ಎಂಬ ಬಾಂಧವ್ಯದ ಅಭಿಮಾನವಾಗಿ ಬದಲಾಯಿತು. ತನ್ನ ಪಕ್ಷದಲ್ಲಿ ಯೋಧರಾಗಿ ನಿಂತಿರುವ ದ್ರುಪದ ಮೊದಲಾದವರಲ್ಲಾಗಲೀ, ಶತ್ರುಪಕ್ಷದಲ್ಲಿ ಶತ್ರುಗಳಾಗಿ ನಿಂತಿರುವ ಭೀಷ್ಮ ಮೊದಲಾದವರಲ್ಲಾಗಲೀ ಬೆಳೆಸಿಕೊಂಡ 'ಬಂಧುಗಳಾದ ಇವರನ್ನು ನಾನು ಕಳೆದುಕೊಳ್ಳಬಾರದು' ಎಂಬ ಕಾರ್ಪಣ್ಯ ಎಂದರೆ ಜಿಪುಣತೆ ಅವನ ವಿಷಾದಕ್ಕೆ ಕಾರಣವಾಯಿತು. ಈ ಅಭಿಮಾನವನ್ನು ಹೊಂದಿದ್ದರಿಂದಲೇ ಆತ ವಿಷಾದವನ್ನು ಹೊಂದಬೇಕಾಯಿತು. ಇದು ಅರ್ಜುನನ ವಿಷಾದದ ಯೋಗ.


 ಈ ವಿಷಾದದಲ್ಲಿಯೂ ಅವನಲ್ಲಿ ' ಅಣ್ಣ ಯುಧಿಷ್ಠಿರ ನನ್ನ ಪೌರುಷವನ್ನು ನಂಬಿಕೊಂಡೇ ಈ ಯುದ್ಧದ ಆಹ್ವಾನವನ್ನು ಸ್ವೀಕರಿಸಿದ್ದಾನೆ. ಆದ್ದರಿಂದ ನನ್ನಿಂದಲೇ ಈ ಯುದ್ಧ ನಡೆಯುತ್ತಿದೆ. ನಾನು ಹಿಂದೆ ಸರಿದರೆ ಆಗ ರಾಜ ಯುಧಿಷ್ಠಿರನೂ ಕೂಡ ಯುದ್ಧದಿಂದ ಹಿಂದೆ ಸರಿಯುತ್ತಾನೆ. ಆಗ ನಾನೇ ಈ ಯುದ್ಧವನ್ನು ನಿಲ್ಲಿಸಿದವನಾಗುತ್ತೇನೆ. ಆದ್ದರಿಂದ ಯುದ್ಧ ನಡೆಯುವುದಿರಲಿ, ನಿಲ್ಲುವುದಿರಲಿ ನನ್ನಿಂದಲೇ ಆಗುತ್ತಿದೆ ' ಎಂಬ ಅಹಂಕಾರದ ಅಭಿಮಾನವೇ ಇತ್ತು. ಈ ವಿಷಾದ ಮತ್ತು ಅಹಂಕಾರಗಳೇ ಅವನ ಸ್ವಕರ್ತವ್ಯದ ತ್ಯಾಗಕ್ಕೆ ಕಾರಣವಾಗಿದ್ದವು. ಆದರೂ ಕೂಡ ಇವುಗಳನ್ನು ಯೋಗೇಶ್ವರನಾದ ಮಧುಸೂದನನಲ್ಲಿಯೇ ಪ್ರಕಟಪಡಿಸಿದ್ದರಿಂದ ಈ ವಿಷಾದವೇ ಈ ಮೊದಲು ಆತ ಹೊಂದಿರದ ಉತ್ತಮವಾದ ಜ್ಞಾನವನ್ನು ಪಡೆಯಲು ಕಾರಣವಾಯಿತು. ಇದೂ ಕೂಡ ಕುಶಲಕರ್ಮವೇ ಆಗಿ ಯೋಗವಾಯಿತು. ಹೀಗೆ ಎರಡು ಕಾರಣಗಳಿಂದಲೂ ಗೀತೆಯ ಮೊದಲ ಅಧ್ಯಾಯ ಅರ್ಜುನವಿಷಾದ ಯೋಗವಾಗಿದೆ.


 ನಮಗೆ ಯಾವುದೇ ಕೆಲಸವು ಕರ್ತವ್ಯವಾಗಿ ಒದಗಿದಾಗ 'ನಾನು-ನನ್ನದು-ನನ್ನವರು' ಎಂಬ ಅಹಂಕಾರವನ್ನೋ, ಅಭಿಮಾನವನ್ನೋ, ಜಿಪುಣತೆಯನ್ನೋ ಹೊಂದಬಾರದು. ಅದು ಆದರ್ಶ ವ್ಯಕ್ತಿಗಳೆನಿಸಿಕೊಂಡವರು ಹೊಂದಬಾರದ ಹಾಗೂ ಸ್ವರ್ಗಪ್ರಾಪ್ತಿಗೆ ಪ್ರತಿಬಂಧಕವಾದ ಮನೋದೌರ್ಬಲ್ಯರೂಪವಾದ ಕಶ್ಮಲವೇ ಆಗಿರುತ್ತದೆ. ಒಂದು ವೇಳೆ ಅಂತಹ ಕ್ಲೈಬ್ಯವನ್ನು ಅಥವಾ ಹೃದಯದೌರ್ಬಲ್ಯವನ್ನು ಹೊಂದಿದರೂ ಕೂಡ ಅದನ್ನು ಸಮರ್ಥರಾದ ಗುರು-ಹಿರಿಯರ ಸಂಮುಖದಲ್ಲಿ ಹೊರಹಾಕಿ ಅವರಿಂದ, 


ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ । 

ಮಿಥ್ಯೈಷ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ ||ಗೀ.೧೮-೫೯||


ಯಾವ ಅಹಂಕಾರವನ್ನು ಆಶ್ರಯಿಸಿ ಕರ್ತವ್ಯವನ್ನು ಮಾಡುವುದಿಲ್ಲ ಎಂದು ತಿಳಿಯುತ್ತೀಯೋ ಈ ನಿನ್ನ ಆಲೋಚನೆ ವ್ಯರ್ಥ. ಪ್ರಕೃತಿಯು ನಿನ್ನನ್ನು ನಿಯೋಜಿಸುತ್ತದೆ. ಯಾವುದನ್ನು ನೀನು ' ನಾನೇ ಮಾಡುವವನು. ನಾನು ಮಾಡದಿದ್ದರೆ ಆ ಕೆಲಸ ನಡೆಯುವುದೇ ಇಲ್ಲ' ಎಂಬ ಕರ್ತತ್ವದ ಭ್ರಮೆಯಿಂದ ಮಾಡಲು ಇಚ್ಛಿಸುತ್ತಿಲ್ಲವೋ ಅದನ್ನು

ನೀನು ನಿನ್ನ ಸ್ವಭಾವಜನ್ಯವಾದ ಕರ್ಮದಿಂದ ಬಂಧಿತನಾಗಿ ನಿನ್ನ ಅಧೀನನಲ್ಲದೇ ಮಾಡಬೇಕಾಗುತ್ತದೆ. ಎಲ್ಲ ಜೀವಿಗಳನ್ನು ತನ್ನ ಮಾಯೆಯಿಂದ ಪ್ರಕೃತಿ ಎಂಬ ಯಂತ್ರದಲ್ಲಿ ಹತ್ತಿಸಿ ತಿರುಗಿಸುತ್ತಿರುವ ಈಶ್ವರನು ಆ ಎಲ್ಲ ಜೀವಿಗಳ ಹೃದಯದಲ್ಲಿಯೇ ಇದ್ದಾನೆ. ನೀನೂ ಕೂಡ ಅದಕ್ಕಿಂತ ಹೊರತಲ್ಲವಾಗಿ ನಿನ್ನನ್ನೂ ಕೂಡ ಈ ಕರ್ಮಚಕ್ರದಲ್ಲಿ ಅವನೇ ತಿರುಗಿಸುತ್ತಿದ್ದಾನೆ. ನೀನು ಇದರಿಂದ ಬಿಡುಗಡೆಯನ್ನು ಹೊಂದಿ ಬೆಳಕಿನೆಡೆಗೆ ಹೋಗ ಬಯಸುವಿಯಾದರೆ ಅದಕ್ಕಾಗಿ ಎಲ್ಲ ವಿಧದಿಂದಲೂ ಅವನನ್ನೇ ಶರಣು ಹೊಂದಬೇಕು. ಅವನ ಅನುಗ್ರಹದಿಂದ ಮಾತ್ರವೇ ಪರಮಶಾಂತಿಯನ್ನೂ, ಶಾಶ್ವತಪದವಿಯನ್ನೂ ಹೊಂದಲು ಸಾಧ್ಯ ' ಎಂಬ ಶ್ರೀಭಗವಂತನ ಅಮೃತವಚನದಂತಹ ಯಥಾರ್ಥವಿಷಯಗಳ ಉಪದೇಶವನ್ನು ಪಡೆದು ಆ ಮನೋದೌರ್ಬಲ್ಯವನ್ನು ತ್ಯಜಿಸಿ ಕುಶಲನಾಗಿ ಸಮಭಾವದಿಂದ ಕರ್ತವ್ಯದಲ್ಲಿ ನಿರತರಾಗಬೇಕು ಎಂಬ ಶಿಕ್ಷಣವನ್ನು ಶಿಕ್ಷಿಸುತ್ತದೆ. ಆದ್ದರಿಂದ ಈ ಅಧ್ಯಾಯವೂ ಕೂಡ ಯೋಗಶಾಸ್ತ್ರವೇ ಆಗಿದೆ. ಹೀಗೆಯೇ ಇದರ ಪ್ರತಿಯೊಂದು ಅಧ್ಯಾಯವೂ ಯೋಗಶಾಸ್ತ್ರವಾಗಿದೆ. ಇದರ ಒಂದೊಂದು ಶ್ಲೋಕವೂ ಮನುಷ್ಯಮಾತ್ರರು ನಿತ್ಯವೂ ಮನನಮಾಡಬೇಕಾದ ಮಹಾಮಂತ್ರವಾಗಿದೆ. ಮಾನವಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಬಯಸುವ ಜನರಿಗೆ ಸರಳವಾಗಿ ಜೀವನದ ಮಾರ್ಗವನ್ನು ತೋರಿಸುವ ಸರ್ವಾಂಗಸುಂದರವಾದ ಸಣ್ಣ ಶಾಸ್ತ್ರಗ್ರಂಥ ಈ ಭಗವದ್ಗೀತೆಯಾಗಿದೆ.


★ಶ್ರೀಕೃಷ್ಣಾರ್ಜುನಸಂವಾದ—


ಈ ಗೀತೆಯನ್ನು ಶ್ರೀಕೃಷ್ಣ ಅರ್ಜುನನಿಗೆ ಉಪದೇಶಿಸಿದ ಎಂಬ ಐತಿಹ್ಯ ಪ್ರಸಿದ್ಧವಿದೆ. ಮೊದಲ ಗೀತೋಪನ್ಯಾಸಕನಾದ ಸಂಜಯನೂ ಕೂಡ (ಕೆಳಕಂಡಂತೆ) ಇದು ರೋಮಾಂಚನಗೊಳಿಸುವಷ್ಟು ಅದ್ಭುತವಾದ ವಾಸುದೇವಪಾರ್ಥಸಂವಾದ ಎಂದಿದ್ದಾನೆ.


 ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ |

 ಸಂವಾದಮಿಮಮಶ್ರೌಷಮದ್ಭುತಂ ರೋಮಹರ್ಷಣಮ್ ||


 ಆದರೂ ಕೂಡ ಇದನ್ನು ಯಾರೂ 'ಶ್ರೀಕೃಷ್ಣಗೀತಾ' ಎಂದಾಗಲೀ 'ವಾಸುದೇವಗೀತಾ' ಎಂದಾಗಲೀ ಹೆಸರಿಸಿಲ್ಲ. ಇದು ಯಾವನೋ ಒಬ್ಬ ಸಾಮಾನ್ಯ ಗೋವಳ ಮನುಷ್ಯನಾದ ವಸುದೇವನ ಮಗ ವಾಸುದೇವಕೃಷ್ಣ ಎಲ್ಲೋ ಉದ್ಯಾನವನದಲ್ಲಿ ಕುಳಿತು ಮನಸ್ಸಿಗೆ ತೋಚಿದಂತೆ ಗೊಣಗಿದ ಸಾಮಾನ್ಯವಾದ ಕವನವಲ್ಲ. ಹೊರತು ಗೋವಳಶರೀರದಲ್ಲಿ ಅಭಿವ್ಯಕ್ತನಾದ ಶ್ರೀಭಗವಂತ, ಭಕ್ತನಾದ ಸ್ನೇಹಿತನನ್ನು ಉದ್ಧರಿಸುವುದಕ್ಕೋಸ್ಕರ ಗುಪ್ತವಾಗಿ ಸಮಾಲೋಚಿಸಿದ ಅಥವಾ ರಹಸ್ಯದಲ್ಲಿ ಉಪದೇಶಿಸಿದ ಅದ್ಭುತವಾದ ಮಂತ್ರ ಇದಾಗಿದೆ. ಭಗವಾನ್ ಶ್ರೀವೇದವ್ಯಾಸರ ಅನುಗ್ರಹಕ್ಕೆ ಭಾಜನನಾಗಿ ಅವರಿಂದ ಕೊಡಲ್ಪಟ್ಟ ದಿವ್ಯಶಕ್ತಿಯಿಂದ ಕೃಷ್ಣಾರ್ಜುನರ ಸಂವಾದವನ್ನು ಸಾಕ್ಷಾತ್ತಾಗಿಯೇ ಕೇಳಿ ರೋಮಾಂಚನಗೊಂಡು ಧೃತರಾಷ್ಟ್ರನ ಎದುರಿನಲ್ಲಿ ಇದನ್ನು ಮೊದಲು ಉಪನ್ಯಾಸ ಮಾಡಿದ ಸಂಜಯ, ತನ್ನ ಮಾತಿನ ಮಧ್ಯದಲ್ಲಿ ಎಲ್ಲಿಯೂ ಇದನ್ನು ಯಾದವಕೃಷ್ಣ ಹೇಳಿದ ಎಂಬ ಶಬ್ದವನ್ನು ಹೇಳದೇ ಆ ಎಲ್ಲ ಸ್ಥಾನಗಳಲ್ಲಿ 'ಶ್ರೀಭಗವಾನ್ ಉವಾಚ' ಎಂಬ ಅಥವಾ ಅದಕ್ಕೆ ಸಮನಾದ ಹೃಷಿಕೇಶ, ಮಧುಸೂದನ ಇತ್ಯಾದಿ ಶಬ್ದಗಳನ್ನೇ ಬಳಸಿದ್ದಾನೆ. ಇಲ್ಲಿ ಸಂಜಯ, ಗೀತಾಚಾರ್ಯನನ್ನು ವಾಸುದೇವ ಎಂಬ ಹೆಸರಿನಿಂದ ಸಂಕೇತಿಸಿದ್ದನಾದರೂ, ಆ ಪದವನ್ನು ವಸುದೇವನ ಮಗ ಎಂಬ ಭಾವದಿಂದ ಪ್ರಯೋಗಿಸಿದ್ದಾನೆ ಎಂಬುದು ಗ್ರಂಥಸಂದರ್ಭಕ್ಕೆ ಹೊಂದಿಕೆಯಾಗಲಾರದು. 


ಆದ್ದರಿಂದ ಶ್ರೀವಿಷ್ಣು ಪುರಾಣದಲ್ಲಿ ಹೇಳಿದ,

'ಸರ್ವತ್ರಾಸೌ ಸಮಸ್ತಂ ಚ ವಸತ್ಯತ್ರೇತಿ ವೈ ಯತಃ | 

ತತಃ ಸ ವಾಸುದೇವೇತಿ ವಿದ್ವದ್ಧಿಃ ಪರಿಪಠ್ಯತೇ ॥'


 ಎಂಬ ವೇದವ್ಯಾಸರ ನಿರ್ವಚನದಂತೆ 'ಭಗವಂತನೇ ಎಲ್ಲದರಲ್ಲಿಯೂ ವಾಸಿಸಿದ್ದು ಎಲ್ಲವೂ ಅವನಲ್ಲಿಯೇ ವಾಸಿಸಿವೆ' ಎಂಬ ಕಾರಣದಿಂದ ವಾಸುದೇವ ಎಂಬ ಹೆಸರು ಭಗವಂತನಿಗೇ ಅನ್ವರ್ಥವಾಗುತ್ತದೆ' ಎಂಬ ಭಾವನೆಯಿಂದ ಗೀತಾಚಾರ್ಯನನ್ನು ಶ್ರೀಭಗವಂತನನ್ನಾಗಿ ನಿರೂಪಿಸುವುದಕ್ಕಾಗಿಯೇ ವಾಸುದೇವ ಶಬ್ದವನ್ನು ಪ್ರಯೋಗಿಸಿದ್ದಾನೆ ಎಂದೇ ತಿಳಿಯ ಬೇಕು. ಆದ್ದರಿಂದಲೇ ಅನಂತರ ಇದನ್ನು ಮಹಾಭಾರತಗ್ರಂಥದಲ್ಲಿ ಸೇರಿಸಿದ ವೇದವ್ಯಾಸರಾಗಲಿ, ಮಹಾಭಾರತವನ್ನು ಬರೆದ ಶಿವಸುತನಾದ ಗಣಪತಿಯಾಗಲಿ ಇದನ್ನು ಪ್ರಶ್ನಿಸದೇ ಅದೇ ಶ್ರೀಭಗವಾನ್ ಎಂಬ ಶಬ್ದವನ್ನೇ ಬಳಸಿ ಬರೆದಿದ್ದಾರೆ.


ಆದರೂ ಕೂಡ ಗೊಲ್ಲರ ಮನೆಯಲ್ಲಿ ಹುಟ್ಟಿದ ಗೋವಳ ಕೃಷ್ಣ ಹೇಳಿದ ಈ ಮಾತುಗಳನ್ನು 'ಶ್ರೀಮದ್ಭಗವದ್ಗೀತೋಪನಿಷತ್ತುಗಳು' ಎಂದು ಹೇಗೆ ಗೌರವಿಸುವುದು ಎಂದು ಸಾಮಾನ್ಯಜನರಲ್ಲಿ ಗೊಂದಲ ಉಂಟಾಗಬಹುದು. ಆ ಕಾಲದಲ್ಲಿ ಕೃಷ್ಣನೊಂದಿಗೇ ಇದ್ದು ಅವನ ಅತಿಮಾನುಷವಾದ ವ್ಯವಹಾರಗಳನ್ನು ಕಣ್ಣಾರೆ ಕಂಡ ಅರ್ಜುನನಿಗೇ ಈ ಗೊಂದಲ

ಇತ್ತು ಎಂದು ತಿಳಿದು ಬರುತ್ತಿರುವಾಗ ಈಗೀಗ ಹುಟ್ಟಿಕೊಂಡಿರುವ ಜನರಲ್ಲಿ ಆ ಭಾವ ಹುಟ್ಟಿಕೊಂಡರೆ ಆಶ್ಚರ್ಯವೇನಿಲ್ಲ. ಅರ್ಜುನನಿಗೆ ಈ ಗೊಂದಲ ಇದ್ದೇ ಇತ್ತು ಎಂಬುದು ಭಗವದ್ಗೀತೆಯನ್ನು ಓದಿದವರಿಗೆ ತಿಳಿಯದಿರಲಾರದು. ಭಗವದ್ಗೀತೆಯಲ್ಲಿ ಕಂಡಂತೆ ಹೇಳುವುದಾದರೆ ಈ ಗೀತೆ ಪ್ರಾರಂಭವಾಗುವ ಮೊದಲು ಅರ್ಜುನ ಶ್ರೀಕೃಷ್ಣನನ್ನು ಭಗವಂತನೆಂದು ಒಪ್ಪಿಕೊಂಡಿರಲಿಲ್ಲ. ಆತನನ್ನು ಆತ 'ಯಾದವ, ಸಖ' ಎಂಬುದಾಗಿಯೇ ಪ್ರೀತಿಸಿ, ಪ್ರಣಯದ ಸಲುಗೆಯಿಂದಲೇ ವ್ಯವಹರಿಸುತ್ತಿದ್ದ. ಇಲ್ಲಿಯೇ ನಾಲ್ಕನೆಯ ಅಧ್ಯಾಯದಲ್ಲಿ ಅವನೇ 'ನೀನು ಯಾದವರಾದ ವಸುದೇವ-ದೇವಕಿಯರ ಮಗನಾಗಿ ಈಗ ಕೆಲವು ವರ್ಷಗಳ ಹಿಂದಷ್ಟೇ ನನ್ನಂತೆ ಹುಟ್ಟಿರುವುದು ನನಗೆ ತಿಳಿದಿರುವಾಗ ನೀನೇ ಈ ಕರ್ಮಯೋಗವನ್ನು ವಿವಸ್ವಂತನಿಗೆ ಉಪದೇಶಿಸಿದಿ ಅಂದರೆ ನೀನೇ ಅನಾದ್ಯನಂತನಾದ ಭಗವಂತ ಎಂಬ ನಿನ್ನ ಮಾತನ್ನು ಒಪ್ಪುವುದು ಹೇಗೆ ಸಾಧ್ಯ?' ಎಂಬ ಸಂಶಯವನ್ನು

ವ್ಯಕ್ತಪಡಿಸುತ್ತಾನೆ. 


ಆಗ ಭಗವಂತ, "ನೀನು ಬಹಳ ಬಾರಿ ಹುಟ್ಟಿರುವಿ. ನಾನೂ ಕೂಡ ಬಹಳ ಬಾರಿ ಹುಟ್ಟಿರುವೆನು. ನಿನಗೂ ಬಹಳ ಜನ್ಮಗಳು ಕಳೆದಿವೆ. ನನಗೂ ಬಹಳ ಜನ್ಮಗಳು ಕಳೆದಿವೆ. ಮೇಲುನೋಟಕ್ಕೆ ನಮ್ಮಿಬ್ಬರ ಹುಟ್ಟು ಒಂದೇ ರೀತಿಯಾಗಿ ಕಾಣುತ್ತದೆ. ಆದರೆ ತಾತ್ವಿಕವಾಗಿ ನಮ್ಮಿಬ್ಬರ ಹುಟ್ಟಿನಲ್ಲಿ ಬಹಳ ವ್ಯತ್ಯಾಸವಿದೆ. ನೀನು ನಿನ್ನಿಚ್ಛೆ ಇಲ್ಲದೆಯೂ ಪ್ರಕೃತಿಯ ವಶನಾಗಿ ಹಿಂದೆ ಹುಟ್ಟಿದ್ದಿ, ಈಗ ಹುಟ್ಟಿರುವಿ ಮತ್ತು ಹುಟ್ಟುತ್ತಿ. ಆದರೆ ನಾನು ಹಾಗಲ್ಲ. ಪ್ರಪಂಚದಲ್ಲಿ ದುಷ್ಟರ ಹಾವಳಿ ಹೆಚ್ಚಾಗಿ ಅಧರ್ಮವು ತಾಂಡವವಾಡಿ ಧರ್ಮಕ್ಕೆ ಗ್ಲಾನಿ ಉಂಟಾಗಿ ಸಜ್ಜನರಿಗೆ ಸಹಿಸಲಾಗದ ಕಷ್ಟ ಒದಗಿದಾಗ ಅವರ ಪರಿತ್ರಾಣ, ಆ ದುಷ್ಕೃತರ ನಾಶ, ಸದ್ಧರ್ಮದ ಸಂಸ್ಥಾಪನ ಎಂಬ ಲೋಕೋಪಕಾರಕವಾದ ಕೆಲಸಗಳನ್ನು ಮಾಡುವುದಕ್ಕೋಸ್ಕರ ಪ್ರಕೃತಿಯನ್ನು ವಶೀಕರಿಸಿಕೊಂಡು ಆ ಸಂದರ್ಭದಲ್ಲಿ ಆ ಕೆಲಸಕ್ಕೆ ಅನುಕೂಲವಾಗುವ ಯಾವುದಾದರೂ ಶರೀರವನ್ನು ನಾನೇ ಸ್ವತಂತ್ರನಾಗಿ ಆರಿಸಿಕೊಂಡು ಸ್ವೀಕರಿಸಿ ಯುಗಯುಗದಲ್ಲೂ ಅವತರಿಸಿದ್ದೇನೆ. ಅದರಂತೆ ಈ ಯುಗದಲ್ಲಿ ಈ ಕೆಲಸವನ್ನು ಮಾಡಲು ನನಗೆ ಈ ಯಾದವಕೃಷ್ಣಶರೀರ ಅನುಕೂಲವೆಂದು ಆಲೋಚಿಸಿ ಯಾದವಕುಲದಲ್ಲಿ ಈ ಗೋವಳಕೃಷ್ಣನ ದೇಹವನ್ನು ಸ್ವೀಕರಿಸಿ ಕಾಣಿಸಿಕೊಂಡಿದ್ದೇನೆ" ಎನ್ನುತ್ತಾನೆ. 


ಅರ್ಜುನನೇ ಕಂಡಂತೆ ಅಥವಾ ಕೇಳಿದಂತೆ ದೇವರ್ಷಿಗಳಾದ ನಾರದರನ್ನು ಮೊದಲ್ಗೊಂಡು ಅಸಿತ, ದೇವಲ, ವ್ಯಾಸ ಮೊದಲಾದ ಎಲ್ಲ ಋಷಿಗಳೂ ಕೂಡ ಇವನನ್ನು 'ಪರಂ ಬ್ರಹ್ಮ, ಪರಂ ಧಾಮ, ಪರಮ ಪವಿತ್ರ, ಶಾಶ್ವತ ದಿವ್ಯ ಪುರುಷ, ಆದಿದೇವ, ಅಜ, ವಿಭು ಎಂದೇ ಹೇಳುತ್ತಿದ್ದರು. ಕೃಷ್ಣನೂ ಕೂಡ ತನಗೆ ಪ್ರಿಯನಾದ ಸ್ನೇಹಿತನಾದ್ದರಿಂದ ಅರ್ಜುನನಿಗೆ ತಾನು ಯಾರೆಂಬುದನ್ನು ಆಗಾಗ ಪ್ರಕಟಪಡಿಸುತ್ತಿದ್ದನು. ಹೀಗಿದ್ದರೂ ಕೂಡ ಅರ್ಜುನನಿಗೆ ಅವನ ಮಹಿಮೆ ತಿಳಿದಿರಲಿಲ್ಲ. ಅವನಲ್ಲಿ ಭಗವಂತ ಎಂಬ ಶ್ರದ್ಧೆ-ಭಕ್ತಿ-ವಿಶ್ವಾಸಗಳು ಮೂಡದೇ ಪ್ರಮಾದದಿಂದಲೋ ಪ್ರಣಯದಿಂದಲೋ ಕೇವಲ ಸ್ನೇಹಿತ ಎಂದಷ್ಟೇ ಇವನನ್ನು ಗುರುತಿಸಿಕೊಂಡು 'ಹೇ ಕೃಷ್ಣ! ಹೇ ಯಾದವ! ಹೇ ಸಖ!' ಎಂದು ಲಘುವಾಗಿಯೇ ಸಂಬೋಧಿಸುತ್ತಿದ್ದನು. ಅವಹಾಸಕ್ಕಾಗಿ ವಿಹಾರ, ಶಯ್ಯೆ, ಆಸನ, ಭೋಜನಕಾಲಗಳಲ್ಲಿ ಸಾಂಕೇತಿಕವಾಗಿಯಾದರೂ ಸತ್ಕರಿಸುತ್ತಿರಲಿಲ್ಲ. ಈ ಗೀತೆಯಲ್ಲಿಯೇ ನಾಲ್ಕನೆಯ ಅಧ್ಯಾಯದಿಂದಲೇ ತಾನು ಶ್ರೀಭಗವಂತ ಎಂಬ ರಹಸ್ಯವನ್ನು ಶ್ರೀಕೃಷ್ಣ ಪುನಃ ಪುನಃ ಹೇಳಿದರೂ ಕೂಡ ಅವನ ವಿಶ್ವರೂಪದರ್ಶನ ಮಾಡುವ ತನಕವೂ ಅದನ್ನು ಒಪ್ಪುವ ಸ್ಥಿತಿಯಲ್ಲಿ ಅರ್ಜುನನಿರಲಿಲ್ಲ. ಆತ ಶ್ರೀಭಗವಂತನ ಮಾತನ್ನು ಪೂರ್ಣವಾಗಿ ಒಪ್ಪದೇ ಒಂದಲ್ಲ ಒಂದು ಸಂಶಯವನ್ನು ಎತ್ತುತ್ತಲೇ ಇದ್ದ. ಅಲ್ಲಿಯ ತನಕವೂ ಭಗವಂತ ಅರ್ಜುನನಿಗೆ ಯಾದವಕೃಷ್ಣನಾಗಿಯೇ ಇದ್ದ. ಅಲ್ಲಿಯ ತನಕವೂ ಭಗವಂತನ ಮಾತು ಅವನಿಗೆ ಭಗವದ್ಗೀತೆಯಾಗಿರದೇ ಕೃಷ್ಣಾರ್ಜುನಸಂವಾದವಾಗಿಯೇ ಇತ್ತು. ಅದಿಲ್ಲದಿದ್ದರೆ,


 'ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ | 

ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ ॥

 ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ! ನೈತತ್ ತ್ವಯ್ಯುಪಪದ್ಯತೇ । 

ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ ॥'


 ಯೋಗ್ಯವಲ್ಲದ ಈ ಯುದ್ಧದ ಪ್ರಾರಂಭದ ಕಾಲದಲ್ಲಿ ಉತ್ತಮಪುರುಷರು ಸ್ವೀಕರಿಸಲು ಯೋಗ್ಯವಲ್ಲದೇ ಸಂಸ್ಕಾರರಹಿತಮನುಷ್ಯರು ಹೊಂದಲು ಯೋಗ್ಯವೂ, ಸ್ವರ್ಗಪ್ರಾಪ್ತಿಗೆ ಅಥವಾ ಅದರ ಪ್ರಾಪ್ತಿಗೆ ಕಾರಣವಾದ ಪುಣ್ಯಸಂಪಾದನೆಗೆ ಪ್ರತಿಬಂಧಕವಾಗಿರುವುದಷ್ಟೇ ಅಲ್ಲದೇ ನರಕಪ್ರಾಪ್ತಿಗೆ ಅಥವಾ ಅದರ ಪ್ರಾಪ್ತಿಗೆ ಕಾರಣವಾದ ಪಾಪವನ್ನು ಹೊಂದಲು ಕಾರಣವೂ ಆಗಬಹುದಾದ, ಅಷ್ಟೇ ಅಲ್ಲದೇ ಈ ಲೌಕಿಕ ಬದುಕಿನಲ್ಲಿಯೂ ಈ ತನಕ ಸಂಪಾದಿಸಿದ ಸಾಮಾಜಿಕವಾದ ಕೀರ್ತಿ-ಅಂತಸ್ತು-ಗೌರವಗಳನ್ನು ನಾಶ ಮಾಡುವುದಷ್ಟೇ ಅಲ್ಲದೇ ಅಪಕೀರ್ತಿಯನ್ನು ಉಂಟುಮಾಡುವ ಈ ಕಲ್ಮಷವು ಯಾವ ಮಾರ್ಗದಿಂದ ನಿನ್ನ ಹೃದಯದೊಳಗೆ ಪ್ರವೇಶಿಸಿತು? 


'ಪಾರ್ಥ' ಎಂಬುದು ನಿನ್ನ ತಾಯಿಯ ಕಾರಣದಿಂದಾಗಿ ನಿನಗೆ ಸಿಕ್ಕಿದ ಬಿರುದು. ಕ್ಷಾತ್ರವನಿತೆಯಾಗಿದ್ದು ವೀರಮಾತೆ ಎಂಬ ಕೀರ್ತಿಯನ್ನು ಬಯಸುವ ಪೃಥಾದೇವಿಗೆ ನಿನ್ನ ಆ ಬಿರುದು ಹೆಮ್ಮೆಯನ್ನುಂಟುಮಾಡುವಂಥದ್ದು. ಅಂತಹ ವೀರಮಾತೆಯ ಮಗನಾದ ನೀನು ಹೀಗೆ ಷಂಡತನವನ್ನು ಹೊಂದಿ ಅಥವಾ ನಪುಂಸಕರಂತೆ ವರ್ತಿಸಿ ಪಾರ್ಥನೆಂಬ ಕೀರ್ತಿಗೆ ಕಳಂಕವನ್ನು ಉಂಟುಮಾಡಿದೆಯಾದರೆ ಅದರಿಂದ ಆ ನಿನ್ನ ಮಾತೆಯಾದ ಪೃಥೆಗೆ ಅವಮಾನವನ್ನುಂಟು ಮಾಡಿದಂತಾಗಿ ಅದರ ದುಷ್ಟಫಲವನ್ನು ನೀನು ಅನುಭವಿಸಬೇಕಾಗುತ್ತದೆ. ಅದಲ್ಲದೇ, ಈ ತನಕದ ಎಷ್ಟೋ ಯುದ್ಧಗಳಲ್ಲಿ ಶತ್ರುಗಳನ್ನು ಸೋಲಿಸಿ ಅವರ ಮನಸ್ಸಿನಲ್ಲಿ ತಾಪವನ್ನುಂಟುಮಾಡಿ 'ಪರಂತಪ' ಎಂಬ ಬಿರುದನ್ನು ಪಡೆದ ನಿನಗೆ ಈ ಕ್ಲೈಬ್ಯವು ಶೋಭಿಸುವುದಿಲ್ಲ. 


ಹೀಗೆ ಕ್ಲೈಬ್ಯವನ್ನು ಮುಂದುವರಿಸಿದೆಯಾದರೆ ಈ ಕೀರ್ತಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ. ಅದಲ್ಲದೆ, ಕ್ಷತ್ರಿಯನಾದ ನಿನಗೆ ಯುದ್ಧವನ್ನು ಮಾಡಿ ಶತ್ರುಗಳಿಗೆ ತಾಪವನ್ನು ಉಂಟುಮಾಡುವುದೇ ಧರ್ಮವಾಗಿರುತ್ತದೆ. ಆದ್ದರಿಂದ ಈಗ ಹೀಗೆ ಯುದ್ಧದಿಂದ ಹಿಂದೆ ಸರಿದೆಯಾದರೆ ಅದರಿಂದ ಸ್ವಧರ್ಮಪರಿತ್ಯಾಗದಿಂದ ಉಂಟಾಗುವ ಪಾಪದ ಫಲವನ್ನೂ ಕೂಡ ಅನುಭವಿಸಬೇಕಾಗುತ್ತದೆ. ನೀನು ಹಿಂದೆ ಹೇಳಿದಂತೆ ನಿನ್ನಲ್ಲಿ ಉಂಟಾದ ಶರೀರದ ಸೊರಗುವಿಕೆ ಮೊದಲಾದ ಎಲ್ಲ ವಿಕಾರಗಳು ಹಾಗೂ ಎಲ್ಲ ಮಾತುಗಳು ನಿನ್ನ ಮನಸ್ಸಿನ ನೀಚವಾದ ದೌರ್ಬಲ್ಯದಿಂದಲೇ ತೋರಿಕೊಂಡವುಗಳಾಗಿವೆ. ಆದ್ದರಿಂದ, "ಎಲೈ ಪರಂತಪನೇ! ಆ ಹೃದಯದ ದೌರ್ಬಲ್ಯವನ್ನು ತ್ಯಜಿಸಿ ಮೇಲೇಳು ಹಾಗೂ ಧನುಸ್ಸನ್ನು ಎತ್ತುವ ಮೂಲಕ ಪ್ರಾರಂಭಿಸಿದ ಈ ಧರ್ಮಯುದ್ಧವೆಂಬ ಕರ್ತವ್ಯವನ್ನು ಮಧ್ಯದಲ್ಲಿ ನಿಲ್ಲಿಸದೇ ಸಮಾಪ್ತಿಯ ತನಕ ಮುಂದುವರಿಸು" ಎಂಬ ಈ ಎರಡು ಮಂತ್ರಗಳೇ ಅವನು ಸ್ವಕರ್ತವ್ಯದಲ್ಲಿ ನಿರತನಾಗಲು ಸಾಕಾಗುತ್ತಿದ್ದವು. (ಆದರೆ ಆಗ ಮಾತ್ರ ಲೋಕಕ್ಕೆ ಈ ಭಗವದ್ಗೀತೆ ಸಿಕ್ಕುತ್ತಿರಲಿಲ್ಲವೋ ಏನೋ?) ಆದರೆ ಭಗವಂತ ಅವನಿಗೆ ದಿವ್ಯದೃಷ್ಟಿಯನ್ನು ಕೊಟ್ಟು ವಿಶ್ವರೂಪದ ದರ್ಶನ ಮಾಡಿಸಿದ ಮೇಲಷ್ಟೇ ತನ್ನ ಎದುರಿನಲ್ಲಿರುವ ಈತ ಯಾದವಕೃಷ್ಣ ಎಂಬ ಬಗ್ಗೆ ಅವನಲ್ಲಿದ್ದ ಎಲ್ಲ ಸಂಶಯಗಳೂ ದೂರವಾಗಿ, ಪೂರ್ಣಮನಸ್ಸಿನಿಂದ ಅವನನ್ನು ಶ್ರೀಭಗವಂತ ಎಂದು ಒಪ್ಪಿಕೊಳ್ಳುತ್ತಾನೆ.


ಮೊದಲು ಅವನನ್ನು ಚ್ಯುತಿ ಇಲ್ಲದಂತೆ ಕೆಲಸ ಮಾಡುವ ಕರ್ಮನಿಪುಣ ಎಂಬ ಭಾವದಿಂದ,


 ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಽಚ್ಯುತ! | 

ಯಾವದೇತಾನ್ ನಿರೀಕ್ಷೇsಹಂ ಯೋದ್ಧುಕಾಮಾನವಸ್ಥಿತಾನ್ ॥ ೧.೨೧ ||


 ಅಚ್ಯುತನೇ! ಎಂದು ಭಗವಂತನನ್ನು ಸಂಬೋಧಿಸಿದ್ದ ಅರ್ಜುನ, ಗೀತೆಯನ್ನು ಕೇಳಿದ ಅನಂತರ ಕೊನೆಯಲ್ಲಿ ಆತ 'ಚ್ಯುತಿ ಇಲ್ಲದ ಭಗವಂತ' ಎಂಬುದನ್ನು ತಿಳಿದುಕೊಂಡು ಹಾಗೂ ಒಪ್ಪಿಕೊಂಡು,


ನಷ್ಟೋ ಮೋಹಃ ಸ್ಮೃತಿರ್ಲಬ್ಧಾ  ತ್ವತ್ಪ್ರಸಾದಾನ್ಮಯಾಚ್ಯುತ |

 ಸ್ಥಿತೋsಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ ॥೧೮.೭೩ ||


 ಅದೇ `ಅಚ್ಯುತ' ಎಂಬ ಶಬ್ದದಿಂದ ಸಂಬೋಧಿಸಿ ಅವನ ಮಾತನ್ನು ಒಪ್ಪಿ ನಡೆದು, ಹೇಳಿದ ಕರ್ತವ್ಯವನ್ನು ಮಾಡುವುದಾಗಿ ಪ್ರತಿಜ್ಞೆ ಗೈಯ್ದು, ಧನುರ್ಬಾಣಗಳನ್ನು ಹಿಡಿದು ಎದ್ದು ನಿಲ್ಲುತ್ತಾನೆ. ಅನಂತರವೇ ಅವನಿಗೆ ಶ್ರೀಭಗವಂತನ ಮೊದಲಿನಿಂದ ಕೊನೆಯ ತನಕದ ಎಲ್ಲ ಮಾತುಗಳೂ ಭಗವದ್ಗೀತೆಗಳಾದವು; ಉಪನಿಷತ್ತುಗಳಾದವು; ಮೋಹನಾಶಕಗಳೂ, ಸಂದೇಹಚ್ಛೇದಕಗಳೂ, ಆತ್ಮೋದ್ಧಾರಕಗಳೂ ಆದ ಮಹಾಮಂತ್ರಗಳಾದವು. 


ಅರ್ಜುನನಿಗೆ ಶ್ರೀಕೃಷ್ಣ ಉಪದೇಶಿಸಿದ ಎಲ್ಲ ಮಾತುಗಳನ್ನೂ ಸಂಜಯ “ಶ್ರೀಭಗವಾನುವಾಚ” ಎಂದು ಭಗವಂತನ ಮಾತನ್ನಾಗಿಯೇ ಅನುವಾದಿಸಿರುವುದರಿಂದ ಅದೆಲ್ಲವೂ ಭಗವದ್ಗೀತೆಯೇ ಆಗಿದೆ. ಆದರೂ ಕೂಡ, ಅದರ ಉಗಮಕ್ಕೆ ಕಾರಣ ಭಗವದರ್ಜುನಸಂವಾದವಾಗಿರದೇ ಶ್ರೀಕೃಷ್ಣಾರ್ಜುನಸಂವಾದವೇ ಆಗಿದೆಯಷ್ಟೇ? ಈಗ ಅರ್ಜುನನ ಮಾತುಗಳೂ, ಅದರ ಜೊತೆಗಿರುವ ಧೃತರಾಷ್ಟ್ರ-ಸಂಜಯರ ವಚನಗಳೂ ಭಗವದ್ಗೀತೆಯಲ್ಲಿಯೇ ಸೇರಿವೆ. ಆದರೂ ಕೂಡ ಅರ್ಜುನನು ಕೃಷ್ಣನೊಂದಿಗೆ ಸಂವಾದವನ್ನು ನಡೆಸಿರುವುದರಿಂದಲೇ ಜಗತ್ತಿಗೆ ಈ ಭಗವದ್ಗೀತೆ ಲಭಿಸಿದೆ. ಅದಿಲ್ಲದಿದ್ದರೆ ಇದು ಸಿಗುತ್ತಿರಲಿಲ್ಲ ಎಂಬ ಯಥಾರ್ಥವನ್ನು ಗಮನಿಸಿದ ಪೂರ್ವಸೂರಿಗಳು ಈ ಗ್ರಂಥವನ್ನು ಶ್ರೀಕೃಷ್ಣಾರ್ಜುನಸಂವಾದ ಎಂದೂ ಹೆಸರಿಸಿ ಮೊದಲು ಅರ್ಜುನ ಕಂಡ ಯಾದವ ಶ್ರೀಕೃಷ್ಣನನ್ನೂ ಗೌರವಿಸಿದ್ದಾರೆ. 


★ಅನುಪಮಗ್ರಂಥ—


ಸಾಂಸಾರಿಕವಾದ ಜಂಜಾಟದಲ್ಲಿ ಸೋತು ಶೋಕಿಸುತ್ತಿರುವ ಮನುಷ್ಯಮಾತ್ರನಿಗೆ (ಅಶೋಚ್ಯಾನನ್ವಶೋಚಸ್ತ್ವಂ…||. ಮಾ ಶುಚಃ || ) “ನೀನು ಶೋಕಿಸಲು ಯೋಗ್ಯವಲ್ಲದ ವಿಷಯಗಳನ್ನು ತಲೆಯಲ್ಲಿ ತುಂಬಿಸಿಕೊಂಡು ಶೋಕಿಸುತ್ತಿರುವಿ. ಇದು ಸರಿಯಲ್ಲ. ಏಕೆಂದರೆ ನೀನು ದುಃಖದಿಂದ ಕೂಡಿರುವ ಈ ಅನಿತ್ಯವಾದ ಮರ್ತ್ಯಲೋಕದಲ್ಲಿ ಹುಟ್ಟಿಕೊಂಡಿದ್ದರೂ ಸಹ ನನ್ನನ್ನು ಭಜಿಸುವ ವಿಶೇಷವಾದ ಯೋಗ್ಯತೆ ಇರುವ ಮನುಷ್ಯದೇಹವನ್ನು ಹೊಂದಿರುವಿ. ಇದನ್ನು ಸರಿಯಾಗಿ ಬಳಸಿಕೊಳ್ಳು, ಈ ಅನಿತ್ಯವಾದ ದೇಹದಿಂದಲೇ ಇದಿರುವಷ್ಟು ಕಾಲ ಇದನ್ನು ಸಾಧನವನ್ನಾಗಿಸಿಕೊಂಡು ನಿತ್ಯನಾದ ನನ್ನನ್ನು ಭಜಿಸು. ನನ್ನಲ್ಲಿ ಮನಸ್ಸುಳ್ಳವನಾಗು. ನನ್ನ ಭಕ್ತನಾಗು. ನನ್ನನ್ನು ಪೂಜಿಸು. ನನ್ನನ್ನು ನಮಸ್ಕರಿಸು. ಈ ಕ್ರಮದ ಭಕ್ತಿಯಿಂದ ನನ್ನನ್ನೇ ಸಮೀಪಿಸು. ಹೀಗೆ ನನ್ನ ಅನನ್ಯಭಕ್ತನಾಗು. ಇದರಿಂದ ನೀನು ನನಗೆ ಅತ್ಯಂತ ಪ್ರಿಯನಾಗುತ್ತಿ. ನಿನಗೆ ಸತ್ಯವಾದ ಒಂದು ವಿಚಾರವನ್ನು ಪ್ರತಿಜ್ಞೆಮಾಡಿ ಹೇಳುತ್ತೇನೆ ಕೇಳು. ನನ್ನಲ್ಲಿಯೇ ಮನಸ್ಸನ್ನಿಡು ಮತ್ತು ನನ್ನಲ್ಲಿಯೇ ಬುದ್ಧಿಯನ್ನಿಡು. ಇದೆರಡನ್ನು ಮಾಡಿದಿಯಾದರೆ ಆಗ ನೀನು ನಿಃಸಂಶಯವಾಗಿ ನನ್ನಲ್ಲಿಯೇ ನೆಲೆ ನಿಲ್ಲುವಿ. ಪಾಪಯೋನಿಯಲ್ಲಿ ಹುಟ್ಟಿಕೊಂಡವರು, ಪತಿತರು, ಸ್ತ್ರೀಯರು, ವೈಶ್ಯರು, ಶೂದ್ರರು ಇವರೇ ಮೊದಲಾದವರೂ ಕೂಡ ನನ್ನನ್ನು ಆಶ್ರಯಿಸಿ ಪರಮಗತಿಯನ್ನು ಹೊಂದುತ್ತಾರೆ. ವೇದಗಳ ಅಧ್ಯಯನದಿಂದ ಪವಿತ್ರರಾದ ಬ್ರಾಹ್ಮಣರು, ಸ್ವಕರ್ಮದಲ್ಲಿ ನಿಷ್ಠರಾದ ರಾಜರ್ಷಿಗಳು ಇವರೇ ಮೊದಲಾದವರು ಭಕ್ತರಾಗಿ ನನ್ನನ್ನು ಆಶ್ರಯಿಸಿದರೆ ಪರಮಗತಿಯನ್ನು ಹೊಂದುತ್ತಾರೆ ಎಂದು ಪುನಃ ಹೇಳಬೇಕಾದದ್ದಿಲ್ಲವಷ್ಟೇ? ಹಾಗಿರುವಾಗ ನನ್ನ ಪ್ರಿಯಭಕ್ತನಾದ ನಿನ್ನನ್ನು ನಾನು ಕೈಬಿಡುವ ವಿಚಾರವೇ ಇರಲಾರದು. ಆದ್ದರಿಂದ ಮೇಲುನೋಟಕ್ಕೆ ಧರ್ಮದಂತೆ ಕಾಣುವ ಅವೈದಿಕವಾದ ಯಾವುದಾದರೂ ಆಚರಣೆಗಳನ್ನು ನೀನು ಧರ್ಮಗಳೆಂದು ತಿಳಿದು ಭ್ರಮೆಗೊಂಂಡು ಆಚರಿಸುತ್ತಿದ್ದರೆ, ಆ ಎಲ್ಲ

ಅವೈದಿಕಧರ್ಮಗಳನ್ನು ಬಿಟ್ಟು ನಾನು ಇಲ್ಲಿ ಹೇಳಿದ ಈ ವೈದಿಕಧರ್ಮಗಳ ಆಚರಣೆಗಳನ್ನು ಮಾತ್ರ ಆಚರಿಸುತ್ತಾ ನನ್ನನ್ನು ಮಾತ್ರ ಶರಣುಹೊಂದು; ಅಷ್ಟೇ ಸಾಕು. ಹೀಗೆ ಶರಣಾದ ನಿನ್ನನ್ನು ನಾನೇ ಎಲ್ಲ ಪಾಪಗಳಿಂದಲೂ, ಎಲ್ಲ ಸಂಕಷ್ಟಗಳಿಂದಲೂ, ಎಲ್ಲ ದುಃಖಗಳಿಂದಲೂ

ಬಿಡುಗಡೆಗೊಳಿಸಿ ಉದ್ಧರಿಸುತ್ತೇನೆ, ಶೋಕಿಸಬೇಡ" ಎಂದು ಧೈರ್ಯವನ್ನು ತುಂಬಿ ಜೀವನೋತ್ಸಾಹವನ್ನು ಚಿಮ್ಮಿಸುವ ಏಕೈಕಗ್ರಂಥ ಈ ಗೀತೆಯಾಗಿದ್ದು, ಇದಕ್ಕೆ ಸಮನಾದ ಗ್ರಂಥ ಇದಕ್ಕಿಂತ ಇನ್ನೊಂದು, ಪ್ರಪಂಚದಲ್ಲಿಯೇ ಇರಲಾರದು. 'ಗಗನಂ ಗಗನಾಕಾರಂ ಸಾಗರಃ ಸಾಗರೋಪಮಃ' ಎಂಬಂತೆ ಗೀತೆಗೆ ಗೀತೆಯೇ ಉಪಮೆಯಾಗಿದೆ. ಇದನ್ನು ಚೆನ್ನಾಗಿ ಚಿಂತನೆ ಮಾಡುವರಿಗೆ ಭೌತಿಕವಾಗಿಯಾಗಲಿ, ಬೌದ್ಧಿಕವಾಗಿಯಾಗಲಿ, ಆತ್ಮೋದ್ಧಾರಕ್ಕಾಗಿಯಾಗಲಿ, ಅನೇಕ ಗ್ರಂಥಗಳನ್ನು ಅಧ್ಯಯನ ಮಾಡುವ ಆವಶ್ಯಕತೆಯೇ ಇರಲಾರದು. ಇದನ್ನು ಗಮನಿಸಿಯೇ ಹಿರಿಯರು ಹೇಳಿರುವುದು -


“ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ್ರವಿಸ್ತರೈಃ |

ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ ವಿನಿಃಸೃತಾ ||"


 ಎಂದು.


★ಪ್ರಸ್ಥಾನಗ್ರಂಥ —


ಆತ್ಮ ಅಥವಾ ಪರಮಾತ್ಮನ ವಿಷಯಗಳನ್ನು ಪ್ರತಿಪಾದಿಸುವ ಗ್ರಂಥಗಳನ್ನು ಅಧ್ಯಾತ್ಮಗ್ರಂಥಗಳು ಎನ್ನಲಾಗುತ್ತದೆ. ಭಾರತೀಯರ ಅಧ್ಯಾತ್ಮಸಂಪ್ರದಾಯದಲ್ಲಿ ಲೆಕ್ಕವಿಲ್ಲದಷ್ಟು ಅಧ್ಯಾತ್ಮಗ್ರಂಥಗಳಿವೆ. ಅಂತಹ ಗ್ರಂಥಗಳು ಅನೇಕವಿದ್ದರೂ ಕೂಡ ಅವುಗಳಿಗೆಲ್ಲ ಒಬ್ಬನೇ ಒಬ್ಬ ಸೃಷ್ಟಿಕರ್ತ ಪರಮಾತ್ಮನನ್ನು ಪ್ರತಿಪಾದಿಸುವುದರಲ್ಲಿ ತಾತ್ಪರ್ಯವಿದೆ. ಮನುಷ್ಯಜೀವನದ ಸಾರ್ಥಕತೆ ಆ ಪರಮಾತ್ಮನನ್ನು ಪಡೆಯುವುದರಲ್ಲೇ ಇರುವುದರಿಂದ ಅವೆಲ್ಲವೂ ಮನುಷ್ಯರು ಆ ಒಬ್ಬನನ್ನು ತಲುಪುವಲ್ಲಿ ಮಾರ್ಗದರ್ಶಕಫಲಕಗಳಾಗಿ ಕೆಲಸ ಮಾಡುತ್ತವೆ. ಅವುಗಳು ಪ್ರತ್ಯೇಕವಾಗಿ ಜ್ಞಾನ, ಭಕ್ತಿ, ಕರ್ಮ, ಶರಣಾಗತಿ ಮೊದಲಾಗಿ ಬೇರೆ ಬೇರೆಯಾದ ಯಾವುದೇ ಮಾರ್ಗಗಳನ್ನು ತೋರಿಸಿದರೂ ಕೂಡ ಅವುಗಳು ತಲುಪಿಸುವ ಸ್ಥಾನ ಒಂದೇ ಆಗಿದೆ. ಆ ಯಾವ ಮಾರ್ಗದಲ್ಲಿ ಹೋದರೂ ಸೇರುವುದು ಒಬ್ಬ ಪರಮಾತ್ಮನನ್ನೇ ಆದರೂ ಕೂಡ ಎಲ್ಲ ಸಾಧಕರ ಸಾಮರ್ಥ್ಯ ಒಂದೇ ರೀತಿಯಾಗಿ ಇಲ್ಲದಿರುವುದರಿಂದ ಬೇರೆ ಬೇರೆ ಗ್ರಂಥಗಳು ಸಾಧಕನ ಸಾಮರ್ಥ್ಯಕ್ಕನುಗುಣವಾದ ಬೇರೆ ಬೇರೆ ಮಾರ್ಗಗಳನ್ನು ತೋರಿಸುತ್ತವೆ. ಅವುಗಳಲ್ಲಿ ಕೆಲವು ಗ್ರಂಥಗಳು ಕಾಲುದಾರಿಯನ್ನು ತೋರಿಸಿದರೆ ಇನ್ನು ಕೆಲವು ಗ್ರಂಥಗಳು ರಾಜಮಾರ್ಗವನ್ನು ಅಥವಾ ಹೆದ್ದಾರಿಯನ್ನು ತೋರಿಸುತ್ತವೆ. ಅಧ್ಯಾತ್ಮಸಂಪ್ರದಾಯದಲ್ಲಿ ಅಂತಹ ಕಾಲುದಾರಿಯನ್ನು ತೋರಿಸುವ ಗ್ರಂಥಗಳನ್ನು ಪದ್ಧತಿಗ್ರಂಥಗಳು ಎಂದೂ, ರಾಜಮಾರ್ಗವನ್ನು ತೋರಿಸುವ ಗ್ರಂಥಗಳನ್ನು ಪ್ರಸ್ಥಾನಗ್ರಂಥಗಳೆಂದೂ ಹೆಸರಿಸಲಾಗುತ್ತದೆ.


ಅಂತಹ ಪ್ರಸ್ಥಾನಗ್ರಂಥಗಳಲ್ಲಿ ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಮತ್ತು ಭಗವದ್ಗೀತೆ ಈ ಮೂರನ್ನು ಸೇರಿಸಿ ಇವುಗಳನ್ನು 'ಪ್ರಸ್ಥಾನತ್ರಯ' ಎಂದು ಹೆಸರಿಸಲಾಗುತ್ತದೆ. ಈ ಮೂರರಲ್ಲಿ ಉಪನಿಷತ್ತುಗಳು ಘನವಿದ್ವಾಂಸರಿಗೂ ಸ್ಪಷ್ಟವಾಗಿ ಅರ್ಥವಾಗದ ಗ್ರಂಥಗಳಾಗಿದ್ದು, ಅವುಗಳ ಅರ್ಥವನ್ನು ನಿರ್ಧರಿಸುವುದಕ್ಕಾಗಿಯೇ ಭಗವಾನ್ ಬಾದರಾಯಣರಿಂದ ಬ್ರಹ್ಮಸೂತ್ರಗಳು ರಚಿತವಾದವು. ಆ ಬ್ರಹ್ಮಸೂತ್ರಗಳೂ ಕೂಡ ಸ್ಪಷ್ಟ-ಸುಲಭವಾಗಿರುವವುಗಳಾಗಿರದೇ ಉಪನಿಷತ್ತುಗಳನ್ನು ಚೆನ್ನಾಗಿ ಅಧ್ಯಯನ ಮಾಡಿದ ಮಹಾಮೇಧಾವಿಗಳು ಮಾತ್ರ ಅವುಗಳ ಸ್ಪಷ್ಟವಾದ ಭಾವವನ್ನು ತಿಳಿಯಬಹುದು ಅಷ್ಟೆ. ಆದ್ದರಿಂದ ಉಪನಿಷತ್ತು ಬ್ರಹ್ಮಸೂತ್ರ— ಇವೆರಡೂ ಒಂದನ್ನೊಂದು ಆಶ್ರಯಿಸಿರುವ ಗ್ರಂಥಗಳಾಗಿದ್ದು ಎರಡನ್ನೂ ಪರಸ್ಪರ ಹೊಂದಿಸಿಕೊಂಡು ಅಧ್ಯಯನ ಮಾಡಿದಾಗ ಮಾತ್ರ ಏನನ್ನಾದರೂ ತಿಳಿಯಬಹುದಲ್ಲದೇ ಅವುಗಳಿಂದ ಸ್ವತಂತ್ರವಾಗಿ ಒಂದೊಂದನ್ನೇ ಓದುವುದರಿಂದ ಯಾವ ಅರ್ಥವನ್ನೂ ಅಥವಾ ಯಾವ ತಾತ್ಪರ್ಯವನ್ನೂ ಸ್ಪಷ್ಟವಾಗಿ ನಿರ್ಧರಿಸಲಾಗದು. ಆದರೆ ಗೀತೆಯು ಹಾಗಿರದೇ ಬೇರೆಗ್ರಂಥಗಳ ಸಹಾಯವನ್ನು ಪಡೆಯದೇ ಸ್ವತಂತ್ರವಾಗಿಯೇ ತಾನು ಹೇಳಬೇಕಾದ ವಿಚಾರಗಳನ್ನು ನಿರ್ಧರಿಸಿ ಹೇಳುವ ಸಾಮರ್ಥವುಳ್ಳ ಗ್ರಂಥವಾಗಿದೆ. ಅದರಿಂದಲೇ ಇದು ಆ ಪ್ರಸ್ಥಾನತ್ರಯದಲ್ಲಿಯೂ ಹೆಚ್ಚಿನ

ಮನ್ನಣೆಯನ್ನು ಪಡೆದುಕೊಂಡು ಶಾಸ್ತ್ರರಾಜನೆನಿಸಿಕೊಂಡಿದೆ. ಅದಲ್ಲದೇ, ವೇದೋಪನಿಷತ್ತುಗಳನ್ನು ಅಧ್ಯಯನ ಮಾಡಲು ಅಧಿಕಾರಿನಿಯಮವಿದೆ. ಆದರೆ ಈ ಭಗವದ್ಗೀತೆಯನ್ನು ಓದಲು ಯಾವುದೇ ಅಧಿಕಾರಿನಿಯಮವಿಲ್ಲ. ಶ್ರದ್ಧೆ - ಭಕ್ತಿ ಹಾಗೂ ಶರಣಾಗತಿಗಳಷ್ಟೇ ಇದರಲ್ಲಿ ಅಧಿಕಾರವನ್ನು ಪಡೆಯುವ ಆವಶ್ಯಕತೆಗಳಾಗಿರುತ್ತವೆ . 


ಗೀತೆಯ ಭಾವವನ್ನು ವಿವರಿಸುವುದಕ್ಕಾಗಿ ಲೆಕ್ಕಿಸಲು ಸಾಧ್ಯವಿಲ್ಲದಷ್ಟು ಭಾಷ್ಯಗಳು, ಟೀಕೆಗಳು, ತಾತ್ಪರ್ಯಚಿಂತನೆಗ್ರಂಥಗಳು ಪ್ರಪಂಚದ ನಾನಾ ಭಾಷೆಗಳಲ್ಲಿ ರಚಿತವಾಗಿವೆ ಹಾಗೂ ಇಂದಿಗೂ ಅದು ಕೊನೆಯಾಗದೆ ನವನವೀನವಾದ ಚಿಂತನೆಗಳು ನಡೆಯುತ್ತಲೇ ಇವೆ. ಗ್ರಂಥಗಳು ರಚಿತವಾಗಿ ಪ್ರಕಟಗೊಳ್ಳುತ್ತಲೇ ಇವೆ . ಇದನ್ನು ಗಮನಿಸಿಯೇ ಈ ಗ್ರಂಥದ ಸಾರ್ವಕಾಲೀನತೆಯನ್ನು ಹಾಗೂ ಗಾಂಭೀರ್ಯವನ್ನು ಊಹಿಸಿಕೊಳ್ಳಬೇಕೇ ಹೊರತು ಅದನ್ನು ಶಬ್ದಗಳಿಂದ ಹೇಳಲು ಸಾಧ್ಯವಿಲ್ಲ. ಭಗವಂತ ಅನಂತನಾಗಿರುವಂತೆ ಅವನಿಂದ ಗೀತವಾದ ಇದರ ಭಾವವೂ ಅನಂತವೇ ಆಗಿದೆ. ಬೆಂಕಿಯ ಪೊಟ್ಟಣದಲ್ಲಿರುವ ಕಡ್ಡಿಗಳೆಲ್ಲವೂ ಬೆಂಕಿಯ ಚಂಡುಗಳೇ ಆಗಿರುವಂತೆ ಇದರ ಪ್ರತಿಯೊಂದು ಶ್ಲೋಕವೂ ಜ್ಞಾನದ ಭಂಡಾರವೇ ಆಗಿದೆ. ಇದು ಎತ್ತಿದಷ್ಟೂ ಬತ್ತದ ಬಾವಿ. ಇದಕ್ಕೆ ಮೊದಲನೆಯ ಅರ್ಥವ್ಯಾಖ್ಯಾನವನ್ನು ಯಾರು ಯಾವಾಗ ಮಾಡಿದರು ಎಂಬುದನ್ನು ಊಹಿಸಲು ಇತಿಹಾಸಸಂಶೋಧಕರಿಗೂ ಸಾಧ್ಯವಾಗುತ್ತಿಲ್ಲ . ಆದರೆ ತಮಗೆ ಲಭಿಸುತ್ತಿರುವ ಭಾಷ್ಯಗಳಲ್ಲಿ ಆದಿಶಂಕರರದ್ದೇ ಮೊದಲಿನದ್ದು ಎಂದು ಅವರು ಹೇಳುತ್ತಾರೆ . ಆದರೆ ಶಾಂಕರಭಾಷ್ಯವನ್ನು ನೋಡಿದರೆ ಅವರು ಭಾಷ್ಯವನ್ನು ಬರೆಯುವುದಕ್ಕಿಂತ ಮೊದಲೇ ಬೇರೆಯವರು ಇದಕ್ಕೆ ಭಾಷ್ಯವನ್ನು ಬರೆದಿದ್ದರು. ಶಂಕರರ ಕಾಲದಲ್ಲಿ ಅವುಗಳು ಉಪಲಭ್ಯವೂ ಇದ್ದವು ಎಂದು ಎನ್ನಿಸದಿರಲಾರದು . 


★ಆಬಾಲವೃದ್ಧರ ಜೀವನಶಾಸ್ತ್ರ—


ಗೀತೆ ಹೀಗೆ ಇಷ್ಟು ಗಂಭೀರವಾದ ಶಾಸ್ತ್ರವಾದರೂ ಕೂಡ ವೇದೋಪನಿಷತ್ತುಗಳಂತೆ ಕೇವಲ ಆತ್ಮ-ಅನಾತ್ಮವಿಚಾರಗಳ ಚಿಂತನೆಗಷ್ಟೇ ಸೀಮಿತವಾಗಿರದೇ, ಮನುಷ್ಯನು ನಿತ್ಯಜೀವನದಲ್ಲಿ ದೇವತೆಗಳಿಂದ ಕೊಡಲ್ಪಟ್ಟ ಪ್ರಾಕೃತಿಕವಾದ ಸಂಪತ್ತುಗಳನ್ನು ದೇವತೆಗಳಿಗೂ ಸಮಾಜಕ್ಕೂ ಹಂಚದೇ ಇದೆಲ್ಲವನ್ನೂ ತಾನೇ ಸಂಪಾದಿಸಿದ್ದೇನೆ ಎಂಬ ಸ್ವಾರ್ಥಭಾವನೆಯಿಂದ ಉಪಯೋಗಿಸಿಕೊಂಡು ಕಳ್ಳನಾಗಿ ಬದುಕದೇ ಅವುಗಳನ್ನು ಯಜ್ಞ - ದಾನ ತಪಸ್ಸುಗಳಿಗಾಗಿ ಬಳಸಿಕೊಂಡು ದೇವತೆಗಳಿಗೂ, ಸಮಾಜಕ್ಕೂ ಹಂಚುತ್ತಾ ಸ್ವಕರ್ಮಗಳಿಂದ ಪರಮಾತ್ಮನನ್ನು ಆರಾಧಿಸುತ್ತಾ ಪ್ರವರ್ತಿತವಾದ ಸೃಷ್ಟಿಚಕ್ರವನ್ನು ಅನುವರ್ತಿಸುತ್ತಾ ಹಿತಮಿತವಾದ ಜೀವನವನ್ನು ನಡೆಸಿ, ತಾನು ಯೋಗ್ಯವಾಗಿ ಬದುಕಿ ಆತ್ಮೋದ್ಧಾರವನ್ನು ಮಾಡಿಕೊಳ್ಳುವುದಷ್ಟೇ ಅಲ್ಲದೇ, ಅದರ ಜೊತೆಗೆ ತಾನಿರುವ ಸಮಾಜದ ಪ್ರತಿಯೊಂದು ಜೀವಿಯನ್ನೂ ಬದುಕಿಸಬೇಕು ಎಂಬ ಮನುಷ್ಯಜೀವನದ ಹೊಣೆಗಾರಿಕೆಯನ್ನೂ ಕಲಿಸಿಕೊಟ್ಟು, ಮನುಷ್ಯ ಅವನ ನೆರೆಯವರಿಗೆ ಹೊರೆಯಾಗದೆ ಎಲ್ಲರಿಗೂ ಉಪಕಾರಿಯಾಗಿ ಬದುಕುವ ಜೀವನಕಲೆಯನ್ನು ಕಲಿಸುವ ಜೀವನಯೋಗಶಾಸ್ತ್ರವೂ ಆಗಿದೆ . 


ಇದು ಇಂತಹ ಸ್ವತಂತ್ರವಾದ ಪ್ರಸ್ಥಾನಗ್ರಂಥವಾದರೂ ಕೂಡ ಇದನ್ನು ಕೇಳಿದವರು ಅಥವಾ ಓದಿದವರು ತಾನು ಹೇಳಿದಂತೆಯೇ ನಡೆಯಬೇಕು ಎಂಬ ಆಗ್ರಹ ಇದನ್ನು ಹೇಳಿದವನಲ್ಲಿ ಇಲ್ಲ. ಆತ,


 ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ ಗುಹ್ಯತರಂ ಮಯಾ |

 ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು ||


 "ಇದು ಯಾರಿಗಾದರೆ ಅವರಿಗೆ ಉಪದೇಶಿಸಬಹುದಾದ ಸಾಮಾನ್ಯವಾದ ಜ್ಞಾನವಲ್ಲ . ಇದು ರಹಸ್ಯದಲ್ಲಿಯೇ ರಹಸ್ಯವಾದ ವಿದ್ಯೆಯಾಗಿದೆ. ಆದರೂ ಕೂಡ ನಾನು ಹೇಳಿದೆನೆಂಬ ಕಾರಣದಿಂದ, ಇದನ್ನು ಒಪ್ಪಿ, ಆಚರಿಸಬೇಕಾಗಿಲ್ಲ. ಇಲ್ಲಿ ಹೇಳಿದ 'ಅಶೋಚ್ಯಾ ನನ್ವಶೋಚಸ್ತ್ವಮ್' ಎಂಬುದರಿಂದ ಆರಂಭಿಸಿ ' ಮಾ ಶುಚಃ ' ಎನ್ನುವ ತನಕದ ಎಲ್ಲ ಮಾತುಗಳನ್ನೂ ಒಂದೊಂದು ಶಬ್ದವನ್ನೂ ಬಿಡದೇ ವಿಮರ್ಶೆ ಮಾಡು. ಅನಂತರ ನಿನಗೆ ಯಾವುದು ಸರಿ ಎನ್ನಿಸುತ್ತದೋ ಅದನ್ನೇ ಆಚರಿಸು " ಎಂಬುದಾಗಿ ಆಚರಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಕೇಳುಗರಿಗೇ ಅಥವಾ ಅಧ್ಯಯನ ಮಾಡುವವರಿಗೆ ಬಿಟ್ಟುಕೊಟ್ಟಿದ್ದಾನೆ.


ಇದು ಇಂತಹ ಉದ್ಗ್ರಂಥವಾದರೂ ಕೂಡ ಮೂರು ವರ್ಷದ ಮಕ್ಕಳಿಗೂ ಬಾಯಿ ತಿದ್ದಲಿಕ್ಕಾಗಿ ಮತ್ತು ಸಂಸ್ಕೃತಭಾಷೆಯನ್ನು ಕಲಿಸಲಿಕ್ಕಾಗಿ ಉಪಯೋಗಿಸಬಹುದಾದ ಸರಳ - ಸುಂದರವಾದ ಗ್ರಂಥವಾಗಿದೆ. ಇಲ್ಲಿರುವ ಬಹುಭಾಗ ಶ್ಲೋಕಗಳೆಲ್ಲ ಚಿಕ್ಕದಾದ ಅನುಷ್ಟುಪ್ ಛಂದಸ್ಸಿನಲ್ಲಿಯೇ ಇದ್ದು, ಚಿಕ್ಕಮಕ್ಕಳ ಬಾಯಿಯಿಂದಲೂ ಉಚ್ಚರಿಸಬಹುದಾದ ಸರಳವಾದ ಶಬ್ದಗಳಿಂದ ಕೂಡಿವೆ. ಕೆಲವಷ್ಟು ಶ್ಲೋಕಗಳು ತ್ರಿಷ್ಟುಪ್ ಛಂದಸ್ಸಿನಲ್ಲಿದ್ದರೂ ಅದಕ್ಕಿಂತ ದೊಡ್ಡ ಛಂದಸ್ಸಿನ ಶ್ಲೋಕ ಇಲ್ಲವೇ ಇಲ್ಲ . ಎರಡು ಅಥವಾ ಮೂರು ಶಬ್ದಗಳಿಂದ ಕೂಡಿದ ಸಮಸ್ತಪದಗಳು ಇರುವವೇ ಹೊರತು ಅವುಗಳಿಗಿಂತ ಹೆಚ್ಚಿಗೆ ಶಬ್ದಗಳಿರುವ "ಸುಹೃನಿತ್ರಾರ್ಯುದಾಸೀನಮಧ್ಯಸ್ಥದ್ವೇಷ್ಯಬಂಧುಷು" ಇಂತಹ ಪದಗಳು ವಿರಳವೇ ಆಗಿವೆ. ಉಚ್ಚರಿಸಲೋ ತಿಳಿದುಕೊಳ್ಳಲೋ ಅತ್ಯಂತ ಕಷ್ಟವಾಗಬಹುದಾದ ಅಕ್ಷರಸಂಧಿ, ಪದಪ್ರಾಸ, ಅಕ್ಷರಪ್ರಾಸ, ಶ್ಲೇಷಾರ್ಥ, ದೂರಾನ್ವಯ ಮುಂತಾದ ವಿದ್ವತ್-ಪ್ರದರ್ಶಕವಾದ ಕಸರತ್ತುಗಳು ಇಲ್ಲಿಲ್ಲ. ಕೇಳುವವನಿಗೆ ಪ್ರತಿಶಬ್ದವೂ ಅರ್ಥವಾಗಬೇಕು ಎಂಬ ಕಾಳಜಿಯೇ ಹೇಳಿದವರಲ್ಲಿ ಇರುವುದು ಸ್ಪಷ್ಟವಾಗಿ ಕಾಣುತ್ತದೆ. 


ಹೀಗೆ ಬಾಲಕರಿಂದ ವೃದ್ಧರ ತನಕದ, ಪಾಮರರಿಂದ ಪಂಡಿತರ ತನಕದ, ಮರ್ತ್ಯಲೋಕದ ಪ್ರತಿಯೊಬ್ಬ ಸ್ತ್ರೀ - ಪುರುಷಮನುಷ್ಯರ ಮೇಲಿನ ಕರುಣೆಯಿಂದಲೋ ಕಾಳಜಿಯಿಂದಲೋ ರಚಿತವಾದ ಗ್ರಂಥ ಈ ಭಗವದ್ಗೀತೆಯಾಗಿದ್ದು, ಪ್ರತಿಯೊಬ್ಬರೂ ಇದರಿಂದ ಅವರವರ ಯೋಗ್ಯತೆಗೆ ತಕ್ಕಂತೆ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. 


' ಚಿಕ್ಕ ವಯಸ್ಸಿನವರು ಇದನ್ನು ಓದಿದರೆ ಸಂಸಾರದಲ್ಲಿ ವೈರಾಗ್ಯ ಉಂಟಾಗಿ ಸಂನ್ಯಾಸಿಗಳಾಗುತ್ತಾರೆ. ಆದ್ದರಿಂದ ಸಾಂಸಾರಿಕ ಹೊಣೆಗಾರಿಕೆಯನ್ನು ಕಳೆದುಕೊಂಡ ಅರುವತ್ತು - ಎಪ್ಪತ್ತು ವರ್ಷದ ಇಳಿವಯಸ್ಸಿನವರು ಮಾತ್ರ ಇದನ್ನು ಓದಬೇಕು ' ಎಂಬ ತಪ್ಪು ಭಾವನೆಯಿಂದ ಮಕ್ಕಳಿಗೆ ಈ ಪುಸ್ತಕ ಸಿಗದಂತೆ ಎಚ್ಚರಿಕೆ ವಹಿಸುವವರು ಕೆಲವರಿದ್ದಾರೆ. ಅಂಥವರು ಈ ಗೀತೆ ಉಗಮವಾದ ಸಂದರ್ಭವನ್ನು ಗಮನಿಸಬೇಕು. ಯುದ್ಧಕ್ಕಾಗಿ ರಣರಂಗವನ್ನು ಪ್ರವೇಶಿಸಿ, ಹೋರಾಟಕ್ಕಾಗಿ ಧನುಸ್ಸನ್ನು ಎತ್ತಿ ಹಿಡಿದು, ಅನಂತರ ಎರಡು ಸೇನೆಗಳಲ್ಲಿಯೂ ಯುದ್ಧಕ್ಕಾಗಿ ಸೇರಿರುವ ಸ್ವಜನರನ್ನು, ಅಂದರೆ ತನ್ನ ಬಂಧುಗಳನ್ನು ನೋಡಿ, ಬಂಧು ವ್ಯಾಮೋಹದಿಂದ ಕೂಡಿದವನಾಗಿ, ದುಃಖದಿಂದ ವೈರಾಗ್ಯವನ್ನು ಹೊಂದಿ, ಧನುಸ್ಸು-ಬಾಣಗಳನ್ನು ಕೆಳಗೆ ಎಸೆದು "ಯುದ್ಧರೂಪವಾದ ತನ್ನ ಕರ್ತವ್ಯವನ್ನು ಮಾಡುವುದಿಲ್ಲ" ಎಂದು ಕರ್ಮಸಂನ್ಯಾಸವನ್ನು ಸ್ವೀಕರಿಸಿದ ಕ್ಷತ್ರಿಯವೀರನಾದ ಅರ್ಜುನನ್ನು ಆ ವೈರಾಗ್ಯಭಾವದಿಂದ ಹೊರತಂದು ಕರ್ಮಯೋಗದಲ್ಲಿ ತೊಡಗಿಸುವುದಕ್ಕಾಗಿಯೇ ಶ್ರೀಕೃಷ್ಣ ಇದನ್ನು ಅರ್ಜುನನಿಗೆ ಉಪದೇಶಿಸಿದನೇ ಹೊರತು ಸಂನ್ಯಾಸವನ್ನು ಸ್ವೀಕರಿಸುವುದಕ್ಕಾಗಿ ಅಲ್ಲ. ಅದಲ್ಲದೇ, ಶ್ರೀಕೃಷ್ಣನಿಂದ ಇದರ ಉಪದೇಶವನ್ನು ಪಡೆದ ಅರ್ಜುನ ತನಗೆ ಉಂಟಾಗಿದ್ದ ವೈರಾಗ್ಯವನ್ನು ತ್ಯಜಿಸಿ, ಕೆಳಗೆಸೆದಿದ್ದ ಧನುರ್ಬಾಣಗಳನ್ನು ಪುನಃ ಎತ್ತಿಹಿಡಿದು, ಕರ್ಮಯೋಗದಲ್ಲಿ ತೊಡಗಿಕೊಂಡು ಹಿಂತಿರುಗಿ ನೋಡದೇ ಮುನ್ನುಗ್ಗಿ ಸಫಲತೆಯನ್ನು ಕಾಣುತ್ತಾನೆ. ಅದಲ್ಲದೇ ಮುಂದೆಂದೂ ಆತ ಸಂನ್ಯಾಸವನ್ನು ಸ್ವೀಕರಿಸಿಲ್ಲ. ಅಂತಹ ಶಬ್ದವನ್ನೂ ಉಚ್ಚರಿಸಲಿಲ್ಲ.


ಭಗವದ್ಗೀತೆಯಲ್ಲಿ 'ಸಂನ್ಯಾಸ' ಎಂಬ ಶಬ್ದ ವನ್ನು ಅಲ್ಲಲ್ಲಿ ಬಳಸಿದ್ದರೂ ಕೂಡ ಅದರ ಅರ್ಥ ಸಾಮಾನ್ಯಜನರು ತಿಳಿದಿರುವಂತೆ ಮನೆಯನ್ನು ಬಿಟ್ಟು ಕಾವಿಬಟ್ಟೆ ತೊಟ್ಟು ಸಂಸಾರದಿಂದ ದೂರ ಇರುವುದಲ್ಲ. ಹೊರತು,(ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ, ಸರ್ವಕರ್ಮಫಲತ್ಯಾಗಂ ತ್ಯಾಗಂ) ಕರ್ಮವನ್ನು ಮಾಡುತ್ತಾ ಅದರಲ್ಲಿ ಸ್ವಾರ್ಥವನ್ನು ಬಿಡುವುದು ಅಥವಾ ಫಲವನ್ನು ಅಪೇಕ್ಷಿಸಿ ಮಾಡುವ ಕಾಮ್ಯಕರ್ಮವನ್ನು ಬಿಡುವುದೇ ಆಗಿದೆ. ಮನುಷ್ಯ ಕೇವಲ ಸ್ಪಾರ್ಥಿಯಾಗದೇ ಸಮಾಜಸೇವೆಯನ್ನೂ, ಭಗವಂತನ ಪ್ರೀತಿಯನ್ನೂ ಗಮನದಲ್ಲಿರಿಸಿಕೊಂಡು ಕೆಲಸವನ್ನು ಮಾಡಬೇಕು ಎನ್ನುವುದು ಅದರ ಅಭಿಪ್ರಾಯ. ಈ ಭಾವವನ್ನು ಬಾಲಕರಿಂದ ಆರಂಭಿಸಿ ಪ್ರತಿಯೊಬ್ಬರೂ ಅವಶ್ಯವಾಗಿ ಬೆಳೆಸಿಕೊಳ್ಳಬೇಕು. ಇದೇ ಕರ್ಮಯೋಗ. ಆದರೆ ಇದನ್ನು ಬೆಳೆಸಿಕೊಳ್ಳುವುದು ಸುಲಭವಲ್ಲ. ಅದಕ್ಕಾಗಿಯೇ ಇದಕ್ಕೆ ಬೇಕಾದ ಶಿಕ್ಷಣವನ್ನು ಗೀತೆ ಕೊಡುತ್ತದೆ. ಇಂತಹ ವಿಶಿಷ್ಟವಾದ ಕರ್ಮಯೋಗವನ್ನು ದೇಹದಲ್ಲಿ ಕರ್ಮ ಮಾಡುವ ಶಕ್ತಿ ಇರುವ ಯೌವನದ ಕಾಲದಲ್ಲಿಯೇ ತಿಳಿಯಬೇಕೇ ಹೊರತು ಕರ್ಮಶಕ್ತಿಯನ್ನು ಕಳೆದುಕೊಂಡು ನಿವೃತ್ತರಾದ ಮೇಲಲ್ಲ. ಅರುವತ್ತು-ಎಪ್ಪತ್ತು ವರ್ಷದ ಅನಂತರ ಇದನ್ನು ತಿಳಿಯುವುದರಿಂದ ಬೇರೆಯವರಿಗೆ ಹೇಳುವುದನ್ನು ಬಿಟ್ಟು ಅವರ ಸ್ವಂತದ ಜೀವನಕ್ಕೆ ಹೆಚ್ಚಿನ ಉಪಯೋಗವೇನೂ ಆಗಲಾರದು. ಮಾಡದೇ ಆಡಿದ ಮಾತು ಹೆಚ್ಚು ಪರಿಣಾಮಕಾರಿಯೂ ಆಗಲಾರದು. ಆದ್ದರಿಂದ ಇಲ್ಲಿ ಹೇಳಿದ ಕರ್ಮಯೋಗವನ್ನಾಗಲೀ, ಜ್ಞಾನಯೋಗವನ್ನಾಗಲಿ, ಭಕ್ತಿಯೋಗವನ್ನಾಗಲಿ, ಶರಣಾಗತಿಯನ್ನಾಗಲೀ ಬಾಲ್ಯದಲ್ಲಿಯೇ ಅಭ್ಯಾಸ ಮಾಡಿಕೊಳ್ಳಬೇಕು. ಅಂತಹವನಿಗೆ ಮುಂದೆ ಯಾವುದೇ ಕಾಲದಲ್ಲಿ ಯಾವುದೇ ಕೆಲಸವನ್ನು ಮಾಡುವ ಸಂದರ್ಭ ಒದಗಿದಾಗಲೂ ಕಾರ್ಪಣ್ಯಕ್ಕೊಳಗಾಗದೇ ಮುನ್ನುಗುವ ಧೈರ್ಯ ಬರು ತ್ತದೆ. ಇತರರಿಗೆ ಮಾರ್ಗ ದರ್ಶನ ಮಾಡುವ ಮನಃಸ್ಥೆರ್ಯವೂ ಇರುತ್ತದೆ. ಆದ್ದರಿಂದ ಹಿರಿಯರು ಕಿರಿಯರು ಸ್ತ್ರೀಯರು-ಪುರುಷರು ಎಂಬ ವಯೋ-ಲಿಂಗಗಳ ಭೇದವಿಲ್ಲದೇ ಎಲ್ಲರೂ ದಿನದಲ್ಲಿ ಸ್ವಲ್ಪ ಸಮಯವಾದರೂ 'ಗೀತಾಚಿಂತನೆ' ಯಲ್ಲಿ ತೊಡಗಿಕೊಳ್ಳಬೇಕು.


******


ಗೀತೆಯ ಉದ್ದೇಶ—


ಈ ಗೀತೆ ಒಂದು ಧರ್ಮಗ್ರಂಥವಾಗಿದೆ. 'ಧರ್ಮಕ್ಷೇತ್ರೇ' ಎಂದು ಧರ್ಮಶಬ್ದದಿಂದ ಪ್ರಾರಂಭವಾಗುವ ಇದರ ಮೊದಲ ಶ್ಲೋಕದ ಮೊದಲ 'ಧ‌ರ್' ಎಂಬ ಅಕ್ಷರದೊಂದಿಗೆ (... ಮತಿರ್ಮಮ || ) ಕೊನೆಯ ಶ್ಲೋಕದ ಕೊನೆಯ 'ಮ' ಎಂಬ ಅಕ್ಷರವನ್ನು (ಪ್ರತ್ಯಾಹಾರ ಮಾಡಿದರೂ) ಸೇರಿಸಿದರೂ 'ಧರ್ಮ' ಎಂಬ ಶಬ್ದವೇ ಸಿದ್ಧವಾಗುತ್ತದೆ. ಅವುಗಳ ಮಧ್ಯ ದಲ್ಲಿರುವ ಶಬ್ದಗಳೂ ಕೂಡ ತಾತ್ಪರ್ಯದಿಂದ ಪ್ರತಿಪಾದಿಸುವ ವಿಷಯ 'ಧರ್ಮ'ವೇ ಆಗಿದೆ. '(ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ) ನನ್ನ ಉದ್ಧಾರದ ನಿಶ್ಚಿತವಾದ ಸಾಧನವನ್ನು ಹೇಳಿರಿ' ಎಂದು ಶರಣಾದ ಶಿಷ್ಯನ ಪ್ರಾರ್ಥನೆಗೆ 'ಧರ್ಮದ ಆಚರಣೆಯೇ ಆತ್ಮೋದ್ಧಾರದ ನಿಶ್ಚಿತವಾದ ಸಾಧನವಾಗಿದೆ' ಎಂಬ ಗುರುವಿನ ನಿಶ್ಚಿತವಾದ ಉತ್ತರ ಇಲ್ಲಿದೆ.


ವೇದಪ್ರಣಿಹಿತೋ ಧರ್ಮೋ ಹ್ಯಧರ್ಮಸ್ತದ್ವಿಪರ್ಯಯಃ || ಪ್ರಾಣಿನಾಂ ಸಾಕ್ಷಾದಭ್ಯುದಯನಿಃಶ್ರೇಯಸಹೇತುರ್ಯಃ ಸ ಧರ್ಮೊ ಬ್ರಾಹ್ಮಣಾದ್ಯೈ ರ್ವರ್ಣಿಭಿರಾಶ್ರಮಿಭಿಶ್ಚ ಶ್ರೇಯೋऽರ್ಥಿಭಿರನುಷ್ಠೀಯಮಾನಃ || 


ವೇದಗಳಲ್ಲಿ ವಿಹಿತವಾದ ಕರ್ಮವೇ ಧರ್ಮ. ಈ ಧರ್ಮವು ಶ್ರೇಯೋರ್ಥಿಗಳಾದ ಬ್ರಾಹ್ಮಣರೇ ಮುಂತಾದ ವರ್ಣದವರಿಂದ ಹಾಗೂ ಆಶ್ರಮಿಗಳಿಂದ ಅನುಷ್ಠಾನಿಸಲ್ಪಟ್ಟದ್ದಾಗಿ ಜಗತ್ತಿನ ಜೀವಸಂಕುಲದ ಅಭ್ಯುದಯಕ್ಕೂ ಅಂದರೆ ಅವುಗಳು ಈಗ ಪಡೆದಿರುವ ಯಾವುದೇ ಶರೀರದಲ್ಲಿ ಬದುಕಿರುವಷ್ಟು ಕಾಲ ಶಾಂತಿ ಸಮೃದ್ಧವಾದ ಜೀವನವನ್ನು ಹೊಂದುವುದಕ್ಕೂ, ನಿಃಶ್ರೇಯಸಕ್ಕೂ ಅಂದರೆ ಈ ಧರ್ಮಾನುಷ್ಠಾನವನ್ನು ಮಾಡಿದವರು ಈ ಜನ್ಮದಲ್ಲಿ ಶಾಂತಿಸಮೃದ್ಧಿಯಿಂದ ಬದುಕುವುದಷ್ಟೇ ಅಲ್ಲದೇ ಈ ದೇಹವನ್ನು ತ್ಯಾಗ ಮಾಡಿದ ಮೇಲೆ ಮುಕ್ತಿ ಎಂಬ ಮಂಗಳಮಯವಾದ ಪದವನ್ನು ಹೊಂದುವುದಕ್ಕೂ ಕಾರಣವಾಗುತ್ತದೆ.


ದ್ವಿವಿಧೋ ಹಿ ವೇದೋಕ್ತೋ ಧರ್ಮಃ ಪ್ರವೃತ್ತಿಲಕ್ಷಣೋ ನಿವೃತ್ತಿಲಕ್ಷಣಶ್ಚ ಜಗತಃ ಸ್ಥಿತಿಕಾರಣಮ್ | ಅಭ್ಯುದಯಾರ್ಥೋ ಹಿ ಯಃ ಪ್ರವೃತ್ತಿಲಕ್ಷಣೋ ಧರ್ಮೋ ವರ್ಣಾನಾಶ್ರಮಾಂಶ್ಚೋದ್ದಿಶ್ಯ ವಿಹಿತಃ ಸ ದೇವಾದಿಸ್ಥಾನಪ್ರಾಪ್ತಿಹೇತುರಪಿ ಸನ್ ಈಶ್ವರಾರ್ಪಣಬುದ್ಧ್ಯಾ ಅನುಷ್ಠೀಯಮಾನಃ ಸತ್ತ್ವಶುದ್ಧಯೇ ಭವತಿ ಫಲಾಭಿಸಂಧಿವರ್ಜಿತಃ | ಶುದ್ಧಸತ್ತ್ವಸ್ಯ ಚ ಜ್ಞಾನನಿಷ್ಠಾಯೋಗ್ಯತಾಪ್ರಾಪ್ತಿದ್ವಾರೇಣ ಜ್ಞಾನೋತ್ಪತ್ತಿಹೇತುತ್ವೇನ ಚ ನಿಃಶ್ರೇಯಸಹೇತುತ್ವಮಪಿ ಪ್ರತಿಪದ್ಯತೇ ॥


ಜಗತ್ತಿನ ಸಂರಕ್ಷಣೆಗೆ ಕಾರಣವಾದ ಈ ಧರ್ಮವು ಪ್ರವೃತ್ತಿರೂಪ ಹಾಗೂ ನಿವೃತ್ತಿರೂಪ ಎಂಬುದಾಗಿ ಎರಡು ವಿಧವಾಗಿದೆ. ಇವುಗಳಲ್ಲಿ ಎರಡನೆಯ ಜ್ಞಾನವೈರಾಗ್ಯಲಕ್ಷಣವಾದ ನಿವೃತ್ತಿಧರ್ಮವು ಅತ್ಯಂತ ಕಠಿಣವಾಗಿದ್ದು ಆತ್ಮರತರೂ ಆತ್ಮತೃಪ್ತರೂ ಆತ್ಮಸಂತುಷ್ಟರೂ ಆದ ಸನಕಾದಿಯೋಗಿಗಳಂತಹ ದಿವ್ಯಮಾನವರಿಂದ ಮಾತ್ರ ಆಚರಿಸಲು ಸಾಧ್ಯ. ಅದನ್ನು ಇಲ್ಲಿ ಚಿಂತಿಸುವುದು ನಮ್ಮ ಯೋಗ್ಯತೆಯನ್ನು ಮೀರಿದ ಕೆಲಸವಾಗುತ್ತದೆ. ಆದ್ದರಿಂದ ಅದನ್ನು ಚಿಂತಿಸದೇ ಪ್ರವೃತ್ತಿಧರ್ಮವನ್ನು ಮಾತ್ರವೇ ಇಲ್ಲಿ ಚಿಂತಿಸೋಣ.


ಈ ಪ್ರವೃತ್ತಿಧರ್ಮವಾದರೂ ಅತ್ಯಂತ ಸರಳವಾಗಿದ್ದು ಪ್ರತಿಯೊಬ್ಬರೂ ಆಚರಿಸಬಹುದಾಗಿದೆ ಮತ್ತು ಆಚರಿಸಬೇಕಾದದ್ದಾಗಿದೆ. ಅಭ್ಯುದಯಕ್ಕೆ ಎಂದರೆ ಜೀವನದ ಏಳಿಗೆಗೆ ಕಾರಣವಾಗಬಹುದಾದ ಇದನ್ನು ಉತ್ತಮವಾದ ಫಲದ ಅಭಿಲಾಷೆಯನ್ನು ಇಟ್ಟುಕೊಂಡು ಆಚರಿಸಿದರೆ ಅದರಿಂದ ಇಲ್ಲಿ ಸುಖಜೀವನವು ಸಿಗುವುದಷ್ಟೇ ಅಲ್ಲದೇ ಪರದಲ್ಲಿ ಅಪೇಕ್ಷಿಸಿದ ಸ್ವರ್ಗವೇ ಮೊದಲಾದ ದೈವಿಕಸ್ಥಾನಗಳು ಲಭಿಸುತ್ತವೆ. ಅದೇ ಧರ್ಮವನ್ನು, ಫಲವನ್ನು ಅಪೇಕ್ಷಿಸದೇ ಭಗವದರ್ಪಣಬುದ್ಧಿಯಿಂದ ಆಚರಿಸಿದರೆ ಅದರಿಂದ ಚಿತ್ತವು ಶುದ್ಧಗೊಂಡು ಭಗವಂತನನ್ನು ತಿಳಿಯುವ ಯೋಗ್ಯತೆಯು ಪ್ರಾಪ್ತಿಯಾಗಿ, ಅನಂತರ ಭಗವಂತನ ಜ್ಞಾನವೂ ಉಂಟಾಗಿ, ಅದರಿಂದ ಕೊನೆಯಲ್ಲಿ ಪರಬ್ರಹ್ಮನೆಂಬ ಹೆಸರುಳ್ಳ ವಾಸುದೇವಭಗವಂತನ ಪ್ರಾಪ್ತಿರೂಪವಾದ ನಿಃಶ್ರೇಯಸವೇ ಪರಮ ಪ್ರಯೋಜನವಾಗಿ ಲಭಿಸುತ್ತದೆ.


ಸ್ವವಿಹಿತವ್ಯತ್ತ್ಯಾ ಭಕ್ತಾ ಭಗವದಾರಾಧನಮೇವ ಪರಮೋ ಧರ್ಮಃ |

ತದ್ವಿರುದ್ಧಃ ಸರ್ವೋsಪ್ಯಧರ್ಮಃ ॥


 ಅದಲ್ಲದೇ ವೇದಗಳಲ್ಲಿ ತನ್ನ ವರ್ಣಕ್ಕೆ ಮತ್ತು ಆಶ್ರಮಕ್ಕೆ ಹೇಳಿದ ಯಾವುದೇ ವೃತ್ತಿಯನ್ನು ಮೇಲು-ಕೀಳು ಎಂದು ಭಾವಿಸದೇ ಶ್ರದ್ಧೆಯಿಂದ ಮಾಡುತ್ತಾ, ತಾನು ಮಾಡುತ್ತಿರುವ ಆ ಎಲ್ಲ ಕೆಲಸಗಳಿಂದಲೂ ಭಗವಂತನನ್ನು ಪೂಜಿಸುವುದೇ (ಅಂದರೆ ತಾನು ಯಾವುದೇ ಕೆಲಸವನ್ನು ಮಾಡುತ್ತಿದ್ದರೂ 'ನಾನು ಇದರಿಂದ ಭಗವಂತನ ಪೂಜೆಯನ್ನೇ ಮಾಡುತ್ತಿದ್ದೇನೆ' ಎಂಬ ಭಾವನೆಯಿಂದ ಮಾಡುವುದೇ) ಪರಮೋಚ್ಚಧರ್ಮವಾಗಿದೆ. ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದೆಲ್ಲವೂ ಅಧರ್ಮವಾಗುತ್ತದೆ. ಈ ಧರ್ಮಾಧರ್ಮಗಳಲ್ಲಿ ಪ್ರವೃತ್ತಿ-ನಿವೃತ್ತಿಗಳನ್ನು ಹೊಂದುವುದರಿಂದ ಪರಮಶ್ರೇಯೋರೂಪನಾದ ಭಗವಂತನನ್ನು ಹೊಂದಬಹುದಾಗಿದೆ. ಈ ಧರ್ಮಗಳನ್ನು ಬೋಧಿಸುವುದೇ ಗೀತೆಯ ಮುಖ್ಯ ಉದ್ದೇಶವಾಗಿದೆ. 


ಪರಮಾರ್ಥತತ್ತ್ವಂ ಚ ವಾಸುದೇವಾಖ್ಯಂ ಪರಂ ಬ್ರಹ್ಮಾಭಿಧೇಯಭೂತಂ ವಿಶೇಷತೋsಭಿವ್ಯಂಜಯದ್ವಿಶಿಷ್ಟಪ್ರಯೋಜನಸಂಬಂಧಾಭಿಧೇಯವತ್ ಗೀತಾಶಾಸ್ತ್ರಮ್ | ಯತಸ್ತದರ್ಥವಿಜ್ಞಾನೇ ಸಮಸ್ತಪುರುಷಾರ್ಥಸಿದ್ದಿರತಸ್ತದ್ವಿವರಣೇ ಯತ್ನಃ ಕ್ರಿಯತೇ ಮಯಾ ||


ಹಿಂದೆ ಹೇಳಿದ ಧರ್ಮದೊಂದಿಗೆ, ಪರಮಾರ್ಥತತ್ತ್ವವೂ ಪರಬ್ರಹ್ಮವೂ ಪರಮಾತ್ಮನೂ ಆದ ವಾಸುದೇವಭಗವಂತನನ್ನು ತಿಳಿಸುವುದರಲ್ಲಿಯೂ, ಈ ಗೀತೆಯು ತಾತ್ಪರ್ಯವನ್ನು ಹೊಂದಿದೆ. ಹೀಗೆ ಧರ್ಮ ಹಾಗೂ ಭಗವಂತ— ಇವೆರಡು ಇಲ್ಲಿ ಪ್ರತಿಪಾದಿತವಾದ ವಿಷಯಗಳಾಗಿವೆ.


ಹೀಗೆ ಈ ಗೀತಾಶಾಸ್ತ್ರವು ವಿಶಿಷ್ಟವಾದ ಸಂಬಂಧ-ಪ್ರಯೋಜನ-ವಿಷಯಗಳನ್ನು ಹೊಂದಿದೆ. ಇದರ ಅರ್ಥವನ್ನು ತಿಳಿದು ಚಿಂತನೆ ಮಾಡಿ ತಾತ್ಪರ್ಯವನ್ನು ತಿಳಿದು ಇಲ್ಲಿ ಹೇಳಿದ ಪ್ರವೃತ್ತಿಲಕ್ಷಣವಾದ ಧರ್ಮವನ್ನು ಆಚರಿಸುತ್ತಾ ತಾನು ಬಯಸುವ ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕು ವಿಧದ ಪುರುಷಾರ್ಥ ಪ್ರಯೋಜನಗಳನ್ನೂ ಕೂಡ ಈ ಗೀತೆಯ ಅನುಷ್ಠಾನದಿಂದ ಪಡೆಯಬಹುದಾಗಿದೆ.








Comments

Popular posts from this blog

विवेकचूडामणिः १ / ವಿವೇಕಚೂಡಾಮಣಿ ೧

೧೭. ವಿಶುದ್ಧವೇದಾಂತಪರಿಭಾಷಾ / १७. विशुद्धवेदान्तपरिभाषा

೩. ಶ್ರೀಮದ್-ಭಗವದ್ಗೀತಾ-ಪೀಠಿಕಾ ೨