೪. ಶ್ರೀಮದ್-ಭಗವದ್ಗೀತಾ-ಪೀಠಿಕಾ ೧

 ಶ್ರೀಮದ್-ಭಗವದ್ಗೀತಾ-ಪೀಠಿಕಾ ೧


ಗೀತೆಯ ೩ ಕಾಂಡಗಳ ೧೮ ಅಧ್ಯಾಯಗಳ ವಿಷಯಗಳು

ಸಚ್ಚಿದಾನನ್ದರೂಪಂ ತತ್ | 

ಪೂರ್ಣಂ ವಿಷ್ಣೋಃ ಪರಂ ಪದಮ್ |

ಯತ್ ಪ್ರಾಪ್ತಯೇ ಸಮಾರಬ್ಧಾಃ | 

ವೇದಾಃ ಕಾಂಡತ್ರಯಾತ್ಮಕಾಃ ||


ಕರ್ಮೋಪಾಸ್ತಿಸ್ತಥಾ ಜ್ಞಾನಮ್ | 

ಇತಿ ಕಾಂಡತ್ರಯಂ ಕ್ರಮಾತ್ |

ತದ್ರೂಪಾಷ್ಟಾದಶಾಧ್ಯಾಯಾ | 

ಗೀತಾ ಕಾಂಡತ್ರಯಾತ್ಮಿಕಾ ||


ಆ ಪರಿಪೂರ್ಣವೂ, ಸತ್-ಚಿತ್-ಆನಂದ ಸ್ವರೂಪವೂ ಆದ ಮಹಾವಿಷ್ಣುವಿನ ಪರಮಪದವಾದ ವೈಕುಂಠದ ಪ್ರಾಪ್ತಿಗಾಗಿ ಕರ್ಮಕಾಂಡ, ಉಪಾಸನಾಕಾಂಡ ಹಾಗೂ ಜ್ಞಾನಕಾಂಡಗಳೆಂಬ ಮೂರು ಭಾಗಗಳಿಂದ ಕೂಡಿದ ವೇದಗಳು ಹೊರಟಿವೆ. ಅದೇರೀತಿ ಸಮಸ್ತ ವೇದಸಾರರೂಪವಾದ ಭಗವದ್ಗೀತೆಯೂ ಕಾಂಡತ್ರಯಾತ್ಮಕವಾಗಿ ಹದಿನೆಂಟು ಅಧ್ಯಾಯಗಳುಳ್ಳದ್ದಾಗಿಯೂ ವಿಷ್ಣುಪ್ರಾಪ್ತಿಗಾಗಿಯೂ ಆ ವಿಷ್ಣುವಿನ ಪೂರ್ಣಾವತಾರಿಯಾದ, ನಾರಾಯಣಮುನಿಯಾಗಿಯೂ ಅವತರಿಸಿದ್ದ ಕೃಷ್ಣನಿಂದಲೇ, ನಾರಾಯಣನೊಂದಿಗೆ ನರನಾಗಿ ಹಿಂದೆ ಅವತರಿಸಿದ್ದ ಅರ್ಜುನನಿಗೆ ಉಪದೇಶಿಸಲ್ಪಟ್ಟು, ಅದೇ ವಿಷ್ಣುವಿನ ವ್ಯಾಸಾವತಾರದಿಂದ ಮಹಾಭಾರತದೊಳಗೆ ನಿಕ್ಷೇಪಿಸಲ್ಪಟ್ಟಿರುವುದು.


ಪ್ರಥಮ ಷಟ್ಕ— ಕರ್ಮಕಾಂಡ


ತತ್ರ ತು ಪ್ರಥಮೇ ಕಾಂಡೇ ಕರ್ಮ ತತ್ತ್ಯಾಗವರ್ತ್ಮನಾ |

ತ್ವಂ ಪದಾರ್ಥೋ ವಿಶುದ್ಧಾತ್ಮಾ ಸೋಪಪತ್ತಿರ್ನಿರೂಪ್ಯತೇ ||


ಅಲ್ಲಿ (ಅಂತಹ ಗೀತೆಯಲ್ಲಿ) ಮೊದಲನೆಯ ಕರ್ಮಕಾಂಡದಲ್ಲಾದರೋ (ಮೊದಲ ೬ ಅಧ್ಯಾಯಗಳಲ್ಲಾದರೋ) ಕರ್ಮದ ವಿವಿಧ ಬಗೆಗಳು ಮತ್ತು ಅವುಗಳ ಸ್ವರೂಪ, ಕರ್ಮಫಲತ್ಯಾಗ / ನಿಷ್ಕಾಮಕರ್ಮ, ತ್ವಂ ಪದದ ಅರ್ಥ (ಉಪನಿಷತ್ತಿನ "ತತ್ ತ್ವಮ್ ಅಸಿ"— ಅದು ನೀನೇ ಆಗಿದ್ದಿ ಎಂಬಲ್ಲಿ ನೀನು / ಜೀವಾತ್ಮದ ಸ್ವರೂಪ), ಆತ್ಮದ ವಿಶುದ್ಧ ನಿರ್ಮಲ ಸ್ವರೂಪ— ಇವುಗಳ ವಿಚಾರಗಳು ಕಾರಣಸಹಿತವಾಗಿ, ಸಿದ್ಧಾಂತರೂಪವಾಗಿ ನಿರೂಪಿಸಲ್ಪಡುತ್ತವೆ.


೧. ಅರ್ಜುನವಿಷಾದಯೋಗ / ಪ್ರಾಕೃತಕಾರುಣ್ಯಯೋಗ 

(ಜಗದುದ್ಧಾರೇಚ್ಛೆಯುಳ್ಳ ಭಗವಂತನಿಂದ ಗೀತಾಶಾಸ್ತ್ರಾವತಾರಕ್ಕೆ ಕಾರಣವಾದದ್ದು)


೨. ಸಾಂಖ್ಯಯೋಗ / ತತ್ತ್ವವಿವೇಕಯೋಗ

(ಆತ್ಮಜ್ಞಾನ, ಅದರ ಸಾಧನವಾದ ಕರ್ಮ, ಕರ್ಮದ ಫಲವಾದ ಸತ್ತ್ವಶುದ್ಧಿ, ತತ್ಫಲವಾಗಿ ಜ್ಞಾನ)


೩. ಕರ್ಮಯೋಗ / ಸ್ವಧರ್ಮಯೋಗ

(ಸುಜ್ಞಾನಪ್ರಾಪ್ತಿಗೆ ಉಪಾಯ / ಸಾಧನವಾದ ಕರ್ಮನಿಷ್ಠೆಯನ್ನು ಪ್ರಾಧಾನ್ಯವಾಗಿ ಉಪಸಂಹರಿಸಿ, ಜ್ಞಾನನಿಷ್ಠೆಯೇ ಉಪೇಯ / ಸಾಧನೀಯವಾದದ್ದೆಂಬ ವರ್ಣನೆ)


೪. ಜ್ಞಾನಕರ್ಮಸಂನ್ಯಾಸಯೋಗ / ನಿರ್ಲೇಪಕರ್ಮಯೋಗ / ಬ್ರಹ್ಮಾರ್ಪಣಯೋಗ

(ತನ್ನ ಅನೀಶತ್ವಬೋಧೆಯಿಂದ ಭಕ್ತಿಶ್ರದ್ಧೆಗಳನ್ನು ದೃಢೀಕರಿಸಿ, ಬುದ್ಧಿಹೇತುವಾದ ಕರ್ಮನಿಷ್ಠೆಯ ಉಪಸಂಹಾರ)


೫. ಸಂನ್ಯಾಸಯೋಗ / ಕರ್ಮಸಂನ್ಯಾಸಯೋಗ

(ಅನೇಕ ಸಾಧನ-ಅಭ್ಯಾಸನಿಷ್ಪನ್ನವಾದ ಮುಕ್ತಿಸಾಧನವಾದ ಸ್ವ-ಸ್ವರೂಪ-ಪರಿಜ್ಞಾನ)


೬. ಧ್ಯಾನಯೋಗ / ಧ್ಯಾನಾಭ್ಯಾಸಯೋಗ / ಆತ್ಮಸಂಯಮಯೋಗ

(ಧ್ಯಾನಯೋಗದ ಬಹಿರಂಗ-ಅಂತರಂಗ ಸಾಧನೆ)


ದ್ವಿತೀಯಷಟ್ಕ— ಉಪಾಸನಾಕಾಂಡ


ದ್ವಿತೀಯೇ ಭಗವದ್ಭಕ್ತಿನಿಷ್ಠಾವರ್ಣನವರ್ತ್ಮನಾ |

ಭಗವಾನ್ಪರಮಾನನ್ದಸ್ತತ್ಪದಾರ್ಥೋऽವಧಾರ್ಯತೇ ||


ಗೀತೆಯ ಏಳರಿಂದ ಹನ್ನೆರಡನೆಯ ಅಧ್ಯಾಯಗಳವರೆಗಿನ ೬ ಅಧ್ಯಾಯಗಳ ಎರಡನೆಯ ಉಪಾಸನಾಕಾಂಡದಲ್ಲಿ ಭಗವತ್ಸ್ವರೂಪ, "ತತ್ ತ್ವಮ್ ಅಸಿ" ಎಂಬ ಉಪನಿಷದ್ವಾಕ್ಯದಲ್ಲಿನ ಪರಬ್ರಹ್ಮವಾಚ್ಯವಾದ ತತ್ ಪದದ ಅರ್ಥ, ಭಗವಂತನ ಬಗೆಗಿನ ಭಕ್ತಿನಿಷ್ಠೆಯ ವರ್ಣನೆ— ಮುಂತಾದ ವಿಚಾರಗಳು ತಿಳಿದುಬರುತ್ತವೆ.


೭. ಜ್ಞಾನವಿಜ್ಞಾನಯೋಗ / ಜಗಜ್ಜೀವೇಶ್ವರಯೋಗ / ಜ್ಞಾನಯೋಗ

(ಬ್ರಹ್ಮವಿದನು ಯಾವ ನಿಷ್ಠೆಯಲ್ಲಿರುತ್ತಾನೆ? ಆ ಬ್ರಹ್ಮದ ಲಕ್ಷಣವೇನು? ಬ್ರಹ್ಮದಲ್ಲಿ ಹೇಗೆ ನೆಲೆಯಾಗಬೇಕು?)


೮. ಅಕ್ಷರಬ್ರಹ್ಮಯೋಗ / ಪ್ರಣವಾರ್ಥಯೋಗ

(ಬ್ರಹ್ಮಾದಿಗಳ ಸ್ವರೂಪವಿವೇಚನೆ, ಅಂತ್ಯಕಾಲದಲ್ಲಿ ಮುಮುಕ್ಷುವಿನ ಕರ್ತವ್ಯ-ಧ್ಯಾತವ್ಯಗಳ ನಿರೂಪಣೆ)


೯. ರಾಜವಿದ್ಯಾರಾಜಗುಹ್ಯಯೋಗ / ಬ್ರಹ್ಮಜಗತ್ಸಂಬಂಧಯೋಗ

(ಪರಬ್ರಹ್ಮದ ಸ್ವರೂಪ, ಸೃಷ್ಟ್ಯಾದಿಗಳಲ್ಲಿ ಅದರ ಸಾಕ್ಷಿತ್ವಾದಿ ಧರ್ಮಗಳು ಹಾಗೂ ಉಪಾಸನಾಭೇದಗಳು)


೧೦. ವಿಭೂತಿಯೋಗ / ಈಶ್ವರವೈಭವಯೋಗ

(ಮಂದಬುದ್ಧಿಯ ಮುಮುಕ್ಷುವಿನ ಉಪಾಸನಾಸಿದ್ಧಿಗೆ ಭಗವದುಪಾಸನಾಫಲ, ಭಕ್ತಾನುಗ್ರಾಹತ್ವ ಹಾಗೂ ಮಹಿಮೆಗಳು)


೧೧. ವಿಶ್ವರೂಪದರ್ಶನಯೋಗ / ವಿಶ್ವರೂಪಸಂದರ್ಶನಯೋಗ

(ಭಗವಂತನಿಂದ ತನ್ನ ಮಾಯಾವಿಜೃಂಭಿತವಾದ ವಿಶ್ವರೂಪದಲ್ಲಿ ಅಖಿಲಸೃಷ್ಟ್ಯಾದಿಕ್ರಿಯಾಪ್ರಕಾಶನ)


೧೨. ಭಕ್ತಿಯೋಗ / ಭಕ್ತಿಸೋಪಾನಯೋಗ

(ಸಗುಣ-ನಿರ್ಗುಣೋಪಾಸಕರ ತಾರತಮ್ಯವಿಶೇಷ, ಅವರೀರ್ವರ ಪ್ರತ್ಯೇಕವಾದ ಸಾಧನೆಯ ನಿರೂಪಣೆ)


ತೃತೀಯಷಟ್ಕ— ಜ್ಞಾನಕಾಂಡ


ತೃತೀಯೇ ತು ತಯೋರೈಕ್ಯಂ ವಾಕ್ಯಾರ್ಥೋ ವರ್ಣ್ಯತೇ ಸ್ಫುಟಮ್ |

ಏವಮಪ್ಯತ್ರ ಕಾಂಡಾನಾಂ ಸಂಬಂಧೋऽಸ್ತಿ ಪರಸ್ಪರಮ್ ||


ಇನ್ನು, ಗೀತೆಯ ಕೊನೆಯ ೬ ಅಧ್ಯಾಯಗಳ ಮೂರನೆಯ ಜ್ಞಾನಕಾಂಡದಲ್ಲಿಯಾದರೋ ಮೊದಲ ಕಾಂಡೋಕ್ತ ತ್ವಂ (ಜೀವಾತ್ಮ) ಹಾಗೂ ಎರಡನೆಯ ಕಾಂಡೋಕ್ತ ತತ್ (ಪರಮಾತ್ಮ)— ಇವೆರಡರ ಐಕ್ಯವಾಗಲು ಬೇಕಾದ ಜ್ಞಾನ, ಸಾಧನೋಪಾಯಗಳ ಕುರಿತು, ಹಾಗೂ "ತತ್ತ್ವಮಸಿ"— ಈ ಉಪನಿಷದ್ವಾಕ್ಯದ ಪೂರ್ಣಾರ್ಥವಿಸ್ತಾರ ಸ್ಪಷ್ಟವಾಗಿ ವರ್ಣಿಸಲ್ಪಟ್ಟಿದೆ. ಹೀಗೆ, ವೇದಗಳಂತೆ ಗೀತೆಯಲ್ಲೂ ಕರ್ಮ-ಉಪಾಸನಾ-ಜ್ಞಾನಗಳೆಂಬ ೩ ಕಾಂಡಗಳಿಗೆ ಪರಸ್ಪರ ಸಂಬಂಧವಿದೆ.


೧೩. ಕ್ಷೇತ್ರಕ್ಷೇತ್ರಜ್ಞವಿಭಾಗಯೋಗ / ಪ್ರಕೃತಿಪುರುಷವಿವೇಕಯೋಗ 

(ಆತ್ಮ-ಅನಾತ್ಮ ಶಬ್ದಾರ್ಥಗಳಾದ ಪುರುಷ-ಪ್ರಕೃತಿಗಳ ವಿವೇಚನೆ, ವಿವಿಕ್ತಾತ್ಮನ ಬ್ರಹ್ಮೈಕ್ಯತೆ)


೧೪. ಗುಣತ್ರಯವಿಭಾಗಯೋಗ / ತ್ರಿಗುಣತಂತ್ರಜಾಗರೂಕಯೋಗ

(ಪ್ರಕೃತಿಯ ಗುಣವಿಭಾಗ, ಗುಣಸ್ವರೂಪ, ಪರಸ್ಪರ ಅಭಿಭಾವಕತ್ವ ಹಾಗೂ ತತ್ಫಲಭೇದ)


೧೫. ಪುರುಷೋತ್ತಮಯೋಗ / ಅಶ್ವತ್ಥಮೂಲೋಪಾಸನಯೋಗ

(ಕ್ಷರ-ಅಕ್ಷರ ವಿಲಕ್ಷಣವಾದ ಪುರುಷೋತ್ತಮನೆಂಬ ಬ್ರಹ್ಮದ ಅನುಸಂಧಾನ, ಅದರಲ್ಲೇ ಮಹಾತ್ಮರ ಪ್ರವೃತ್ತಿ ಹಾಗೂ ಅದರ ಫಲ)


೧೬. ದೈವಾಸುರಸಂಪದ್ವಿಭಾಗಯೋಗ / ದೈವಾಸುರಭೇದವಿವೇಕಯೋಗ

(ಎರಡೂ ಸಂಪತ್ತುಗಳ ಸ್ವರೂಪನಿರೂಪಣೆ ಹಾಗೂ ಅವುಗಳ ಹೇಯ-ಉಪಾದೇಯ ವ್ಯವಸ್ಥೆ)


೧೭. ಶ್ರದ್ಧಾತ್ರಯವಿಭಾಗಯೋಗ / ಶ್ರದ್ಧಾತ್ರಯವಿವೇಕಯೋಗ

(ಈ ಮೂರುವಿಧದ ಶ್ರದ್ಧೆಯಲ್ಲಿ ಸಾತ್ತ್ವಿಕಾಹಾರ-ತಪೋ-ಯಜ್ಞಯುತರಾದವರಿಗೆ ಶಮದಮಾದಿ ಷಟ್-ಸಂಪತ್ತಿಯಿಂದ ಮೋಕ್ಷಾಧಿಕಾರದ ನಿರೂಪಣೆ)


೧೮. ಮೋಕ್ಷಸಂನ್ಯಾಸಯೋಗ / ತದೇಕಶರಣತಾಯೋಗ

(ತ್ಯಾಗ-ಸಂನ್ಯಾಸಗಳ ಏಕಾರ್ಥ, ಕಾಮ್ಯ-ನಿಷಿದ್ಧಕರ್ಮತ್ಯಾಗ, ನಿತ್ಯಕರ್ಮಗಳಾದ ಯಜ್ಞ-ದಾನ-ತಪಸ್ಸೇ ಮುಂತಾದವುಗಳ ನಿಯಮಬದ್ಧ ಆಚರಣೆ, ತ್ಯಾಗದ ಸಾತ್ತ್ವಿಕಾದಿ ಭೇದಗಳು, ನೈಷ್ಕರ್ಮ್ಯಸಿದ್ಧಿಲಕ್ಷಣವಾದ ಜ್ಞಾನ-ಕರ್ಮ-ಧೃತಿ-ಬುದ್ಧಿ-ಸುಖಗಳ ಸಾತ್ತ್ವಿಕಾದಿ ಭೇದ, ಬ್ರಾಹ್ಮಣಾದಿ ಸರ್ವವರ್ಣೀಯರ ಕರ್ಮಗಳು-ಜ್ಞಾನ-ಜ್ಞಾನನಿಷ್ಠೆ ಹಾಗೂ ಬ್ರಹ್ಮಪ್ರಾಪ್ತಿ)

(ಆಧಾರ— ವಾಸುದೇವ ಲಕ್ಷ್ಮಣ ಶಾಸ್ತ್ರೀ ಪಣಶೀಕರ)


ಹೀಗೆ ೧೮ ಅಧ್ಯಾಯಗಳ ಗೀತಾಮೃತವು ಸಕಲವೇದೋಪನಿಷತ್ಸಾರವು. 

ಗೀತೆಯು ಬದುಕಿಗೆ ಅತ್ಯಂತ ಸುಂದರವಾದ ಮಾರ್ಗದರ್ಶನವನ್ನೀಯುತ್ತದೆ...ಅನರ್ಘ್ಯ ವಾಗ್ರತ್ನ (ನುಡಿಮುತ್ತು)ಗಳ ಖನಿ ಗೀತಾಮೃತ. ಜೀವನಧರ್ಮ-ಮೋಕ್ಷಧರ್ಮಗಳ ಸುಮಧುರ ಸಂಗಮ. ಜ್ಞಾನ-ಕರ್ಮಯೋಗ-ಧ್ಯಾನ-ಭಕ್ತಿ-ವೈರಾಗ್ಯ ಮುಂತಾದ ಸಕಲ ವಿಚಾರಗಳ ತವನಿಧಿ.

ಉದ್ಧರೇದಾತ್ಮನಾತ್ಮಾನಂ…

ಕರ್ಮಣ್ಯೇವಾಧಿಕಾರಸ್ತೇ...

ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ |

ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ||

….ಸಮಲೋಷ್ಟಾಶ್ಮಕಾಂಚನಃ ||

ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು |

ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ||

ಆಯುಸ್ಸತ್ತ್ವಬಲಾರೋಗ್ಯಸುಖಪ್ರೀತಿವಿವರ್ಧನಾಃ |

ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ವಿಕಪ್ರಿಯಾಃ ||

ಕಟ್ವಾಮ್ಲಲವಣಾತ್ಯುಷ್ಣತೀಕ್ಷ್ಣರೂಕ್ಷವಿದಾಹಿನಃ |

ಆಹಾರಾ ರಾಜಸಸ್ಯೇಷ್ಟಾಃ ದುಃಖಶೋಕಾಮಯಪ್ರದಾಃ ||

ಯಾತಯಾಮಂ ಗತರಸಂ ಪೂತಿಪರ್ಯುಷಿತಂ ಚ ಯತ್ |

ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸಪ್ರಿಯಮ್ ||


ಫಲಸಂಕಲ್ಪರಹಿತ ಯಜ್ಞವು ಸಾತ್ತ್ವಿಕ, ಫಲಾಪೇಕ್ಷೆಯಿಂದ ಆಡಂಬರ ಸಹಿತವಾದ ಯಜ್ಞವು ರಾಜಸ, ವಿಧಿವಿಹೀನ ಮಂತ್ರಹೀನ ದಕ್ಷಿಣೆಯಿಲ್ಲದ ಶ್ರದ್ಧೆಯಿಲ್ಲದ ಯಜ್ಞವು ತಾಮಸ. 


ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜವಮ್ |

ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ ||

ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ |

ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ ||

ಮನಃಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ |

ಭಾವಸಂಶುದ್ಧಿರಿತ್ಯೇತತ್ತಪೋ ಮಾನಸಮುಚ್ಯತೇ ||


ತಪಸ್ಸುಗಳು ೩ ಬಗೆ— ಕಾಯಿಕ, ವಾಚಿಕ, ಮಾನಸಿಕ.

ದಾನಗಳಲ್ಲಿ ತ್ರಿವಿಧ— ಸಾತ್ತ್ವಿಕ, ರಾಜಸ, ತಾಮಸ.


ಮುಂದೆ, ತ್ರಿಗುಣಗಳ ಬಗ್ಗೆ ಬರುತ್ತದೆ.

ತತ್ರ ಸತ್ವಂ ನಿರ್ಮಲತ್ವಾತ್ ಪ್ರಕಾಶಕಮನಾಮಯಮ್ |

ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ ||

ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾಸಂಗಸಮುದ್ಭವಮ್ |

ತನ್ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಮ್ ||

ತಮಸ್ತ್ವಜ್ಞಾನಜಂ ವಿದ್ಧಿ ಮೋಹನಂ ಸರ್ವದೇಹಿನಾಮ್ |

ಪ್ರಮಾದಾಲಸ್ಯನಿದ್ರಾಭಿಸ್ತನ್ನಿಬಧ್ನಾತಿ ಭಾರತ ||

ಶುದ್ಧಸತ್ತ್ವವು ಪ್ರಪಂಚದಲ್ಲೇನೂ ಸಾಧಿಸಲಾರದು. ಅದಕ್ಕೆ ರಜಸ್ಸಿನ ಸಹಾಯ ಅಗತ್ಯ. ಆದರೆ, ಸತ್ತ್ವಕ್ಕೆ ರಜೋಗುಣವು ಪೂರಕವಾಗಿರಬೇಕೇ ವಿನಾ ರಜಸ್ಸೇ ಸತ್ತ್ವದ ಮೇಲಧಿಕಾರಿಯಾಗಬಾರದು. ೩ ಗುಣಗಳೂ ಲೋಕದಲ್ಲಿ ಸಮಸಮವಾದರೆ ಲೋಕವೇ ನಿಂತುಹೋದೀತು. ಈ ಗುಣಸ್ಪರ್ಧೆಗಳಿಂದಲೇ ಜಗದ್ವ್ಯಾಪಾರ.  ಹಾಗಾಗಿ ತ್ರಿಗುಣಾತೀತರಾಗಬೇಕು.

ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |

ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||

ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು ||


ಯತ್ರಯೋಗೇಶ್ವರಃ ಕೃಷ್ಣಃ…..


ನಾವಿಲ್ಲಿ ಈ ಕೆಳಕಂಡ ಅನುಕ್ರಮದಲ್ಲಿ ಯಥಾಮತಿ ವಿವಿಧ ಗೀತಾಭಾಷ್ಯ-ವ್ಯಾಖ್ಯಾನಗಳ ಸಹಾಯದಿಂದ ಗೀತೆಯ ತುಲನಾತ್ಮಕ ಅಧ್ಯಯನಯಜ್ಞದಲ್ಲಿ ನಮ್ಮನ್ನು  ತೊಡಗಿಸಿಕೊಳ್ಳೋಣ. ಗೀತಾರ್ಥವಾರಿಧಿಯ ಆಳಕ್ಕಿಳಿದು ಅಲ್ಲಿನ ಬಹುಮೌಲ್ಯವುಳ್ಳ ಅಮೃತವಾಣಿಗಳ ಅರ್ಥಾನುಸಂಧಾನ ಹಾಗೂ ನಿಜಬದುಕಿನಲ್ಲಿ ಅವುಗಳ ಯಥಾಸಾಧ್ಯ ಆಚರಣೆಯ ಮೂಲಕ ನಮ್ಮನ್ನು ನಾವು ಉದ್ಧಾರಮಾಡಿಕೊಂಡು ("ಉದ್ಧರೇತ್ ಆತ್ಮನಾ ಆತ್ಮಾನಮ್"—ಎಂಬಂತೆ), ಲೋಕಹಿತವನ್ನೂ ಸಾಧಿಸೋಣ ("ಆತ್ಮನೋ ಮೋಕ್ಷಾರ್ಥಂ ಜಗತ್-ಹಿತಾಯ ಚ"— ಎಂಬಂತೆ).


(೧) ಸ್ವಾಮಿ ಹರ್ಷಾನಂದರ ಗೀತಾಸಾರಸರ್ವಸ್ವ (ಪ್ರತಿಯೊಂದು ಅಧ್ಯಾಯದ ಸಂಕ್ಷಿಪ್ತವೂ, ಸಾರರೂಪವೂ ಆದ ವ್ಯಾಖ್ಯಾನ; ಪ್ರತಿ ಶ್ಲೋಕದ್ದಲ್ಲ)

(೨) ಶ್ರೀಪಾದ್ಮಪುರಾಣೋಕ್ತ ಗೀತಾಧ್ಯಾಯಮಾಹಾತ್ಮ್ಯ (ಪ್ರತಿ ಅಧ್ಯಾಯದ ಪ್ರಾರಂಭದಲ್ಲಿ)

(೩) ವಿದ್ವಾನ್ ಅನಂತಶರ್ಮಾ ಭುವನಗಿರಿಯವರ ಗೀತೆಯ ಬೆಳಕು (ವೇದಾಂತಭಾರತೀಗ್ರಂಥಮಾಲಾ)(ದೃಷ್ಟಾಂತಪೂರ್ವಕ ಅಧ್ಯಾಯಸಾರವಿವೇಚನೆ)

(೪) ಗೀತಾಪ್ರವೇಶಃ ೨.೧, ೨.೨—ಸಂಸ್ಕೃತಭಾರತೀ

(೫) ಗೀತಾಚಿಂತನ—ವೇ.ಮೂ.ಕೌಂಜೂರು ಚಂದ್ರಶೇಖರ ಅಡಿಗ

(೬) ದಾರ್ಶನಿಕ ಡಿವಿಜಿಯವರ ಶ್ರೀಮದ್ಭಗವದ್ಗೀತಾತಾತ್ಪರ್ಯ / ಜೀವನಧರ್ಮಯೋಗ

(೭) ಲೋಕಮಾನ್ಯ ಬಾಲಗಂಗಾಧರತಿಲಕರ "ಗೀತಾರಹಸ್ಯ / ಕರ್ಮಯೋಗ" 

(೮) ಶ್ರೀಪಾದ ದಾಮೋದರ ಸಾತವಳೇಕರರ ಪುರುಷಾರ್ಥಬೋಧಿನೀ ಟೀಕಾ

(೯) ಡಾ. ಯಸ್. ಶಂಕರನಾರಾಯಣರ ಆಧ್ಯಾತ್ಮಿಕವ್ಯಾಖ್ಯಾನ

(೧೦) ಶ್ರೀ ಅರವಿಂದರ ಗೀತಾಪ್ರಬಂಧಗಳು ಹಾಗೂ ಗೀತಾದರ್ಶನ

(೧೧) ವಿನೋಬಾ ಭಾವೆಯವರ ಗೀತಾಪ್ರವಚನದ ಸಾರ

(೧೨) ವೇಂಕಟನಾಥಕೃತಂ ಬ್ರಹ್ಮಾನಂದಗಿರ್ಯಾಖ್ಯವ್ಯಾಖ್ಯಾನಮ್

(೧೩) ಸ್ವಾಮಿ ಸೋಮನಾಥಾನಂದಜೀಯವರ ಗೀತಾಭಾವಧಾರೆ

(೧೪) ಸ್ವರ್ಣವಲ್ಲೀ ಸ್ವಾಮಿಗಳ ಗೀತಾಂತರಂಗ

(೧೫) ಗೀತಾಪ್ರವಚನ—ಸ್ವಾಮಿ ವಿವೇಕಾನಂದರು


ಅದ್ವೈತ(ಕೇವಲಾದ್ವೈತ)ಪರ (ಬ್ರಹ್ಮವೊಂದೇ ಸತ್ಯ, ಜಗತ್ತು ಮಾಯೆ; ಆತ್ಮ-ಪರಮಾತ್ಮರಿಗೆ ಭೇದವಿಲ್ಲವೆಂಬ ಸಿದ್ಧಾಂತ)— 


(೧೬) ಶ್ರೀಮದ್ಭಗವದ್ಗೀತೆಯ ಸಾರ ಮತ್ತು ಪ್ರಧಾನೋಪದೇಶಗಳು—ಹೊಳೆನರಸೀಪುರಶ್ರೀಗಳು

(೧೭) ಹನುಮತ್-ಕೃತಂ ಪೈಶಾಚಭಾಷ್ಯಮ್ (ಗೀತೋಪದೇಶದ ಪ್ರಥಮಸಾಕ್ಷಿಯಾದ ಹನುಮಂತನು ಕೃಷ್ಣನ ಆಜ್ಞಾನುಸಾರ ಪಿಶಾಚದೇಹವನ್ನಾಶ್ರಯಿಸಿ ಬೋಧಿಸಿದ್ದು; ಶಾಂಕರಭಾಷ್ಯಕ್ಕೆ ಮೂಲವೆಂಬ ನಂಬಿಕೆಯಿದೆ; ಶಾಂಕರಭಾಷ್ಯವನ್ನನುಸರಿಸಿ ಬೇರೊಬ್ಬ ಹನುಮಾನ್ ಎಂಬವರು ಬರೆದಿರಬಹುದೆಂಬ ಮತವೂ ಇದೆ.)

(೧೮) ಗೀತಾಮನನ—ಹೊಳೆನರಸೀಪುರಶ್ರೀಗಳು

(೧೯) ಶ್ರೀಮದ್ಭಗವದ್ಗೀತಾ-ಶಾಂಕರಭಾಷ್ಯಮ್ ಆನಂದಗಿರಿವ್ಯಾಖ್ಯಾಸಂವಲಿತಮ್

(೨೦) ಶ್ರೀಮದ್ಭಗವದ್ಗೀತಾ-ಶಾಂಕರಭಾಷ್ಯಮ್—ಹೊಳೆನರಸೀಪುರಶ್ರೀಗಳ ಅನುವಾದ

(೨೧) ಶ್ರೀಬೆಲ್ಲಂಕೊಂಡ ರಾಮರಾಮವಿರಚಿತ ಭಗವದ್ಗೀತಾಭಾಷ್ಯಾರ್ಕಪ್ರಕಾಶಃ

(೨೨) ಸಚ್ಚಿದಾನಂದೇಂದ್ರಸರಸ್ವತೀಕೃತಃ ಗೀತಾಶಾಸ್ತ್ರಾರ್ಥವಿವೇಕಃ

(೨೩) ನೀಲಕಂಠೀಯ ಭಾರತಭಾವ(ಪ್ರ)ದೀಪಾಂತರ್ಗತಾ (ಗೀತಾ)ಚತುರ್ಧರೀವ್ಯಾಖ್ಯಾ

(೨೪) ಭಗವದ್ಗೀತೆಯ ಉಪನ್ಯಾಸಗಳು—ಹೊಳೆನರಸೀಪುರಶ್ರೀಗಳು

(೨೫) ಮಧುಸೂದನೀ-ಗೂಢಾರ್ಥದೀಪಿಕಾ-ವ್ಯಾಖ್ಯಾ, ಧರ್ಮದತ್ತ (/ಬಚ್ಚಾ)ಶರ್ಮವಿರಚಿತ-ಗೂಢಾರ್ಥತತ್ತ್ವಾಲೋಕೇನ ಯುತಾ

(೨೬) ಶ್ರೀಮದ್ಭಗವದ್ಗೀತಾರ್ಥಸರ್ವಸ್ವ—ಹೊಳೆನರಸೀಪುರಶ್ರೀಗಳು

(೨೭) ಧನಪತಿಸೂರಿಕೃತಾ ಭಾಷ್ಯೋತ್ಕರ್ಷದೀಪಿಕಾ

(೨೮) ಭಗವದ್ಗೀತಾಸಾರವಿಚಾರ—ಹೊಳೆನರಸೀಪುರಶ್ರೀಗಳು

(೨೯) ಶ್ರೀಧರಸ್ವಾಮಿಕೃತಾ ಸುಬೋಧಿನೀವ್ಯಾಖ್ಯಾ

(೩೦) ಗೀತಾಶಾಸ್ತ್ರೋಪದೇಶಸೋಪಾನ—ಹೊಳೆನರಸೀಪುರಶ್ರೀಗಳು

(೩೧) ಅಭಿನವಗುಪ್ತಪಾದಾಚಾರ್ಯವ್ಯಾಖ್ಯಾ

(೩೨) ಶಂಕರಾನಂದಕೃತಾ ತಾತ್ಪರ್ಯಬೋಧಿನೀ

(೩೩) ಸದಾನಂದಕೃತ-ಭಾವಪ್ರಕಾಶಃ

(೩೪) ದೈವಜ್ಞಪಂಡಿತಸೂರ್ಯಕೃತಾ ಪರಮಾರ್ಥಪ್ರಪಾ

(೩೫) ಜ್ಞಾನೇಶ್ವರೀವ್ಯಾಖ್ಯಾ

(೩೬) ಜಯದಯಾಲ ಗೋಯಂದಕಾ— ಇವರ ತತ್ತ್ವವಿವೇಚನೀ

(೩೭) ಸ್ವಾಮಿ ರಾಮಸುಖದಾಸರ ಸಾಧಕಸಂಜೀವನೀ

(೩೮) ಸ್ವಾಮಿ ಚಿನ್ಮಯಾನಂದಭಾಷ್ಯ

(೩೯) ಸ್ವಾಮಿ ಶಿವಾನಂದಭಾಷ್ಯ

(೪೦) ಧೂಪಕರಶಾಸ್ತ್ರಿಗಳ ಅವಿಗೀತಾ (ಅನಂತಾಖ್ಯಾ)

(೪೧) ಶ್ರೀಧರವಚನಾಮೃತ ಧಾರೆ ೧೩ರಿಂದ ಗೀತಾ ಸಾರಸುಧಾ

(೪೨) ಮಹಾಮಹೋಪಾಧ್ಯಾಯ ಸುಬ್ರಾಯಶರ್ಮಾರವರ ವಿವಿಧ ಗೀತಾಪರ ಕೃತಿಗಳು


ವಿಶಿಷ್ಟಾದ್ವೈತಪರ / ಶ್ರೀವೈಷ್ಣವ 

(ಜೀವ, ಜಗತ್ತು, ನಾರಾಯಣ— ಇವು ಮೂರೂ ಸತ್ಯ; ಆದರೆ ಲಕ್ಷ್ಮೀನಾರಾಯಣನೇ ಆತ್ಯಂತಿಕಸತ್ಯ; ಆತ್ಮವು ಪರಮಾತ್ಮನ ಒಂದಂಶ ಎಂಬ ಸಿದ್ಧಾಂತ)— 


(೪೩) ರಾಮಾನುಜಭಾಷ್ಯಂ ವೇದಾಂತದೇಶಿಕಾಚಾರ್ಯ-ವೇಂಕಟನಾಥಕೃತ-ತಾತ್ಪರ್ಯಚಂದ್ರಿಕಾವ್ಯಾಖ್ಯಾಸಮೇತಮ್

(೪೪) ಯಾಮುನಮುನಿಪ್ರಣೀತಃ ಗೀತಾರ್ಥಸಂಗ್ರಹಃ ಮಹಾದೇಶಿಕಾಚಾರ್ಯ-ವೇಂಕಟನಾಥಕೃತಾ ಗೀತಾರ್ಥಸಂಗ್ರಹರಕ್ಷಾವಿಭೂಷಿತಃ

(೪೫) ಡಾ.ಕೆ.ಎಸ್.ನಾರಾಯಣಾಚಾರ್ಯರ ಗೀತಾರ್ಥರತ್ನನಿಧಿ (ಮೊದಲೆರಡು ಅಧ್ಯಾಯಗಳಿಗೆ ಪ್ರತಿಶ್ಲೋಕವಿವರಣೆ ಹಾಗೂ ತಾತ್ಪರ್ಯ, ಉಳಿದ ೧೬ಕ್ಕೆ ಕೇವಲ ತಾತ್ಪರ್ಯ)


ದ್ವೈತಪರ / ವೈಷ್ಣವ / ಭೇದವಾದ 

(ಜೀವ, ಜಗತ್ತು, ವಿಷ್ಣು— ಮೂರೂ ಸತ್ಯ; ಆತ್ಮ, ಪರಮಾತ್ಮ ಬೇರೆ ಬೇರೆ; ಜೀವಾತ್ಮವು ಮೂಲಬಿಂಬವಾದ ಪರಮಾತ್ಮನ ಪ್ರತಿಬಿಂಬ; ಸೃಷ್ಟಿಯಲ್ಲಿ ಜೀವ-ಜಡ, ಜೀವ-ಜೀವ, ಜೀವ-ದೇವ, ದೇವ-ದೇವ, ದೇವ-ಜಡ— ಎಂಬ ಪಂಚಭೇದಗಳಿವೆ. ಹರಿಯೇ ಸರ್ವೋತ್ತಮ, ವಾಯುವೇ ಜೀವೋತ್ತಮ ಎಂಬ ಸಿದ್ಧಾಂತ)— 


(೪೬) ಮಾಧ್ವ(ಆನಂದತೀರ್ಥ)ಭಾಷ್ಯಂ ಜಯತೀರ್ಥಕೃತಾ ಪ್ರಮೇಯದೀಪಿಕಾಟೀಕಾವಿಭೂಷಿತಮ್

(೪೭) ಮಾಧ್ವ-ಗೀತಾತಾತ್ಪರ್ಯಮ್

(೪೮) ರಾಘವೇಂದ್ರಸ್ವಾಮಿಕೃತ-ಅರ್ಥಸಂಗ್ರಹಃ

(೪೯) ಬನ್ನಂಜೆ ಗೋವಿಂದಾಚಾರ್ಯರ ಗೀತೆಯ ನಲ್ನುಡಿ ಹಾಗೂ ಗೀತಾಪ್ರವಚನ

(೫೦) ಗೀತಾಪರಿಮಳ—ಆಲೂರ ವೆಂಕಟರಾಯರು

(೫೧) ಗೀತಾಸಂದೇಶ—ಆಲೂರ ವೆಂಕಟರಾಯರು


ದ್ವೈತಾದ್ವೈತ (ವಿಷ್ಣುಸ್ವಾಮೀಯ) / ಭೇದಾಭೇದ / ಹಂಸ / ಕುಮಾರ / ಚತುಸ್ಸನಾ / ಸನಕಾದಿ / ನಿಂಬಾರ್ಕಾಚಾರ್ಯ ಸಂಪ್ರದಾಯಪರ 

(ಜೀವ ಹಾಗೂ ಜಗತ್ತು ಪರಮಾತ್ಮನಿಗಿಂತ ಭಿನ್ನವಲ್ಲವಾದರೂ, ಕೇವಲ ಒಂದಂಶ ಮಾತ್ರ; ಜೀವನು ದೇವನ ಒಂದು ಶಕ್ತಿ ಹಾಗೂ ಪರಮಾತ್ಮನಾದ ಭಗವಾನ್ ಕೃಷ್ಣನೇ ಸರ್ವಜೀವರ ಮೂಲಾಶ್ರಯನು; ಮೋಕ್ಷವೆಂದರೆ ಜ್ಞಾನೋದಯವಾದ ಜೀವನ ಹಾಗೂ ಪರಮಾತ್ಮನ ಪ್ರೇಮಪೂರ್ವಕವಾದ ಆಧ್ಯಾತ್ಮಿಕ ಸಂಯೋಗ / ಐಕ್ಯ; ಮೋಕ್ಷದಲ್ಲೂ ಜೀವನು ದಾಸನೇ, ಆದರೂ ಸೃಷ್ಟಿ-ಸ್ಥಿತಿ-ಲಯಗಳೆಂಬ ಭಗವಚ್ಛಕ್ತಿಗಳಿರದ ಪರಿಪೂರ್ಣನು; ಸಂತಭಾವ / ಶಾಂತರಸ, ದಾಸ್ಯ, ಸಖ್ಯ, ವಾತ್ಸಲ್ಯ ಹಾಗೂ ಮಾಧುರ್ಯಗಳೇ ಮೋಕ್ಷದ ೫ ದಾರಿಗಳು— ಎಂಬ ಸಿದ್ಧಾಂತ)


(೫೨) ಕೇಶವಕಾಶ್ಮೀರಿಭಟ್ಟಾಚಾರ್ಯಕೃತಾ ತತ್ತ್ವಪ್ರಕಾಶಿಕಾ


ಶುದ್ಧಾದ್ವೈತಪರ / ವಲ್ಲಭಸಂಪ್ರದಾಯ / ಪುಷ್ಟಿಮಾರ್ಗ / ಬ್ರಹ್ಮವಾದ 

(ಅಂತರಾತ್ಮವೂ ದೇವರೂ ಒಂದೇ; ದೇವರು ಪರಿಪೂರ್ಣ, ಜೀವನು ಆತನ ಒಂದಂಶ, ಬೆಂಕಿಯ ಸಣ್ಣ ಕಿಡಿಯಂತೆ; ಆದರೆ, ಶಂಕರರೆಂದಂತೆ ಅವಿದ್ಯಾಮಾಯೆಯಿಂದಾವೃತವಾದ ಜೀವನೇ ಸಚ್ಚಿದಾನಂದ ಪರಮಾತ್ಮನಲ್ಲ; ಆದರೆ, ಜೀವನು ಪರಿಪೂರ್ಣಾನಂದವನ್ನು ಗ್ರಹಿಸದ ಕೇವಲ ಸತ್-ಚಿದಾತ್ಮಕ ಬ್ರಹ್ಮಸ್ವರೂಪಿ; ಆತ್ಮನೇ ಕರ್ತಾ-ಭೋಕ್ತಾ; ಗಂಧದಕಡ್ಡಿಯ ಪರಿಮಳದಂತೆ ಸೂಕ್ಷ್ಮನಾದರೂ ಶರೀರದಲ್ಲೆಲ್ಲ ವ್ಯಾಪಿಸಿರುವುದು ಆತ್ಮಾ; ಮಾಯೆಯು ಅವಿದ್ಯೆ / ಅಜ್ಞಾನವಲ್ಲ, ಆದರೆ ಈಶ್ವರನ ಶಕ್ತಿ; ಈಶ್ವರನು ಜಗತ್ಕರ್ತಾ ಮಾತ್ರವಲ್ಲ, ಜಗತ್ತೇ ಆಗಿರುವನು; ಒಬ್ಬನೇ ಆದ ಪರಮಾತ್ಮನೇ ಅಸಂಖ್ಯ ಜೀವಾತ್ಮರು ಹಾಗೂ ವಿಶ್ವವಾದನು; ಹೀಗೆ ಬ್ರಹ್ಮವು ಅವ್ಯಕ್ತವಾದರೂ, ಜಗತ್ತೇ ಆತನ ವ್ಯಕ್ತರೂಪ; ಭಕ್ತಿಯೇ ಮೋಕ್ಷಕ್ಕೆ ಸಾಧನ; ಶಂಕರರು ಹೇಳಿದಂತೆ "ಜ್ಞಾನವೇ ಮೋಕ್ಷದ ಪರಮಸಾಧನ" ವಲ್ಲ, ಆದರೆ ಪ್ರಯೋಜನಕಾರಿ; ಮುಕ್ತಿಯೇ ಕೊನೆಯಲ್ಲ; ಕೃಷ್ಣನ ಸೇವೆಯೇ ಪರಮಶ್ರೇಯಸ್ಕರ; ಬ್ರಹ್ಮದ ದೈವೀ / ಅತಿಮಾನುಷ ಪ್ರಜ್ಞೆಯೇ ಪುರುಷೋತ್ತಮತತ್ತ್ವ; ಅವ್ಯಾಜ ಭಗವತ್ಪ್ರೇಮ ಹಾಗೂ ಭಗವದ್ಭಕ್ತಿಯೇ ಶ್ರೇಷ್ಠ; ಸೂರ್ ದಾಸ್ ಮೊದಲಾದ ಅಷ್ಟಕವಿಗಳ ರಚನೆಗಳೇ ಈ ಸಿದ್ಧಾಂತದ ಪ್ರತಿಪಾದಕಗಳು— ಎಂಬ ಸಿದ್ಧಾಂತ)— 

(೫೩) ವಲ್ಲಭಲಾಲಕೃತಾ ತತ್ತ್ವದೀಪಿಕಾ

(೫೪) ಪುರುಷೋತ್ತಮಪ್ರಕಾಶಿತಾ ಅಮೃತತರಂಗಿಣೀ


ಗೌಡೀಯ ವೈಷ್ಣವ / ಚೈತನ್ಯ / ಬ್ರಹ್ಮ-ಮಾಧ್ವ-ಗೌಡೀಯ / ಹರೇಕೃಷ್ಣ ಸಂಪ್ರದಾಯಪರ 

(ಕೃಷ್ಣನೇ ಸರ್ವಮೂಲಪುರುಷ, ರಾಧಾದೇವಿಯೇ ಆತನ ಶಕ್ತಿ / ಪ್ರಕೃತಿ; ಕೃಷ್ಣ-ಅಲ್ಲಾ-ಬುದ್ಧ-ಜೆಹೋವ-ಏಸು ಎಲ್ಲಾ ಒಂದೇ; ಪರಿಪೂರ್ಣ ಆಧ್ಯಾತ್ಮಿಕತೆಯಿಂದ ಈ ಜನ್ಮದಲ್ಲೇ ಮುಕ್ತರಾಗಬಹುದು; ವೇದಗಳಲ್ಲಿ ಶಾಶ್ವತಸತ್ಯವಿದೆ, ಭಗವದ್ಗೀತೆ ಅದರ ಸಾರ; ಸದಾ ಕೃಷ್ಣಪ್ರಜ್ಞೆಯುಳ್ಳ ಸದ್ಗುರುವಿನಿಂದ ಸಾಧಕನು ಜ್ಞಾನವನ್ನು ಪಡೆಯಬಹುದು; ಕೃಷ್ಣಾರ್ಪಣ ಬುದ್ಧಿಯಿಂದಲೇ ಎಲ್ಲವನ್ನೂ ಮಾಡಬೇಕು; ಈ ಕಲಿಯುಗದಲ್ಲಿ ಆತನ ನಾಮಸ್ಮರಣೆಯೇ ಮುಕ್ತಿಗೆ ದಾರಿ; "ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ | ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ||"— ಇದರ ಜಪ ಮುಕ್ತಿಗೆ ಬಹುಸರಳವಿಧಾನ— ಎಂಬ ಸಿದ್ಧಾಂತ)— 

(೫೫) ಭಕ್ತಿವೇದಾಂತಸ್ವಾಮಿ ಪ್ರಭುಪಾದರ ವ್ಯಾಖ್ಯಾನ (ಗೌಡೀಯ / ಇಸ್ಕಾನ್)


ಸ್ವಾಮಿನಾರಾಯಣಪರಂಪರಾಪರ

(೫೬) ಸತ್-ಶ್ರೀಗೋಪಾಲಾನಂದಸ್ವಾಮಿವಿರಚಿತಂ ಶ್ರೀಮದ್ಭಗವದ್ಗೀತಾಯಾಃ ಮೂಲಭಾಷ್ಯಮ್


(೫೭) 

ಸರ್ವಸಾರ—

ಡಾ. ದಂಬೆ ಕೃಷ್ಣಮೂರ್ತಿ ಶಾಸ್ತ್ರೀ ಕೃತ ಸರಳಾನುವಾದ ಹಾಗೂ "ಸುಮನಾ"ವ್ಯಾಖ್ಯಾನ




 ಆ ಶ್ರೀಕೃಷ್ಣಭಗವಂತನ ಅನುಗ್ರಹವು ಸದಾ ನಮ್ಮ ಮೇಲಿದ್ದು, ಗೀತೆಯ ಯಥಾರ್ಥ-ಮನನ-ಅನುಷ್ಠಾನಾದಿಗಳು ನಮ್ಮಿಂದ ಈ ಜನ್ಮದಲ್ಲೇ ನೆರವೇರಿ, ಬದುಕು ಸಾರ್ಥಕವಾಗಲೆಂದು ಗಣಪತಿ ಹಾಗೂ ಗುರುಪದಪದ್ಮಗಳಲ್ಲೂ, ಶ್ರೀ ಉಮಾಮಹೇಶ್ವರನಲ್ಲೂ ಶರಣುಹೊಂದಿ ಪ್ರಾರ್ಥಿಸುತ್ತೇನೆ.


|| ಹರೇ ರಾಮ ಹರೇ ಕೃಷ್ಣ ||


|| ಶ್ರೀಕೃಷ್ಣಾರ್ಪಣಮಸ್ತು ||




ಪ್ರಸ್ತಾವನೆ

(೧) ಸ್ವಾಮಿ ಹರ್ಷಾನಂದರ ಗೀತಾ-ಸಾರಸರ್ವಸ್ವ


ಮೊದಲ ಮಾತು


        ಆಧುನಿಕ ಮನುಷ್ಯ ಮನಶ್ಶಾಂತಿ ಬೇಕು ಎನ್ನುತ್ತಾನೆ. ಇಂದು ಅವನ ಮನಃಶಾಂತಿ ತುಂಬಾ ಕದಡಿರುವುದಕ್ಕೆ ಅವನೇ ಕಾರಣ. ಶಾಂತಿ ಕೆಡುವುದಕ್ಕೆ ಅನುವಾದಂತಹ (ಪೂರಕವಾದಂತಹ) ವಾತಾವರಣವನ್ನು ತಾನೇ ನಿರ್ಮಾಣಮಾಡಿ ತನ್ನೊಳಗೂ ಶಾಂತಿ ಇರಬೇಕು, ಹೊರಗೂ ಶಾಂತಿಯಿರಬೇಕು ಎಂದು ನಿರೀಕ್ಷಿಸಿದರೆ ಹೇಗೆ? ಕೈಯನ್ನು ಬೆಂಕಿಯಲ್ಲಿಟ್ಟು, ಸುಡಬಾರದು ಎಂದು ಅಪೇಕ್ಷಿಸಿದರೆ ಹೇಗೋ ಹಾಗೆ.


        ಶಾಂತಿ ಕದಡುವುದಕ್ಕೆ ಹಲವಾರು ಕಾರಣಗಳಿರಬಹುದು. ಇಂತಹ ಸಮಯದಲ್ಲೆ ಗೀತೆ ನಮ್ಮ ನೆರವಿಗೆ ಬರುತ್ತದೆ. ಸಾವೋ, ಕಾಯಿಲೆಯೋ ಕಾರಣವಾಗಿ ಮನಶ್ಶಾಂತಿ ಕೆಟ್ಟಿದ್ದರೆ ಆತ್ಮದ ಅಮರತೆಯನ್ನು ಸಾರುವ ಗೀತೆ ಮನಸ್ಸಿಗೆ ಧೈರ್ಯ, ಸಮಾಧಾನಗಳನ್ನು ನೀಡುತ್ತದೆ; ಸಹಿಸುವ ಶಕ್ತಿಯನ್ನು ಕೊಡುತ್ತದೆ. ಹಣಕಾಸಿನ ತೊಂದರೆಗಳಿಂದಾಗಿ ಮನಶ್ಶಾಂತಿ ಹಾಳಾಗಿದ್ದರೆ, "ಲೋಭ-ದುರಾಸೆಗಳನ್ನು ದಾನ-ಔದಾರ್ಯಗಳಿಗೆ ತಿರುಗಿಸು; ಬದುಕಿನ ಸುಖ-ಸಂಪದಗಳನ್ನು ಇತರರೊಂದಿಗೆ ಹಂಚಿಕೊ" ಎಂದು ಮನವರಿಕೆ ಮಾಡಿಕೊಡುತ್ತ, ಗೀತೆ ಹಣದ ಸಮಸ್ಯೆಗಳನ್ನು ತಗ್ಗಿಸುತ್ತದೆ. 


       ಪರಸ್ಪರ ಸ್ನೇಹ-ವಿಶ್ವಾಸಗಳ ಸಂಬಂಧ ಕೆಟ್ಟು ಮನಶ್ಶಾಂತಿ ಇಲ್ಲವಾಗಿದ್ದರೆ ತನ್ನನ್ನೇ ಎಲ್ಲರಲ್ಲೂ ಅಥವಾ ಭಗವಂತನನ್ನೇ ಎಲ್ಲರಲ್ಲೂ ಕಾಣಬೇಕು ಎಂಬ ಗೀತಾಬೋಧನೆ ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸುತ್ತದೆ. ಮಾಡುವ ಕಾರ್ಯದಲ್ಲಾಗಲಿ ಕರ್ತವ್ಯದಲ್ಲಾಗಲಿ ಉಂಟಾದ ಬಿಕ್ಕಟ್ಟೊ, ಒತ್ತಡವೊ ಕಾರಣವಾಗಿದ್ದಲ್ಲಿ ಸಮಸ್ತ ಗೀತೆಯೇ ನಮ್ಮ ನೆರವಿಗೆ ಬರುತ್ತದೆ; ಏನು ಮಾಡಬೇಕು, ಹೇಗೆ ಮಾಡಬೇಕು ಎಂಬ ವಿಚಾರದಲ್ಲಿ ಮಾರ್ಗದರ್ಶನ ನೀಡುತ್ತದೆ. ಒಂದು ವೇಳೆ (!) ಭಗವದನುಭೂತಿಯ ಹಂಬಲದಿಂದ ವ್ಯಾಕುಲಗೊಂಡಿದ್ದರೆ, ಗೀತೆ ಸಾಧನಾಪಥದಲ್ಲಿ ಮಾರ್ಗದರ್ಶಿಯಾಗಿ ಮುನ್ನಡೆಸುತ್ತದೆ.


            "ಗೀತಾ" ಎಂದೇ ಜನಜನಿತವಾಗಿರುವ ಭಗವದ್ಗೀತೆ ಜಗತ್ತಿನ ಅಸಾಧಾರಣವಾದ ಧಾರ್ಮಿಕ ಮಹೋನ್ನತ ಗ್ರಂಥಗಳಲ್ಲಿ ಒಂದು. ಗೀತೆಯನ್ನು ಪೂರ್ಣವಾಗಿಯಾಗಲೀ, ಅದರ ಯಾವುದೇ ಒಂದು ಭಾಗವನ್ನಾಗಲೀ ಶ್ರದ್ಧಾ-ಭಕ್ತಿಗಳಿಂದ ವಿಧ್ಯುಕ್ತವಾಗಿ ಪಾರಾಯಣ ಮಾಡಿದರೆ ಅಪಾರವಾದ ಪುಣ್ಯ ಲಭಿಸುವುದೆಂಬ ನಂಬಿಕೆಯೂ ಇದೆ.


            ಹದಿನೆಂಟು ಅಧ್ಯಾಯಗಳಷ್ಟು ವಿಸ್ತಾರವಾಗಿರುವ ಭಗವದ್ಗೀತೆ ಅದಕ್ಕೂ ದೊಡ್ಡದಾದ ಮಹಾಭಾರತಕಾವ್ಯದ ಕಥೆಯಲ್ಲಿ ಅವಿಭಾಜ್ಯವಾಗಿ ಸೇರಿರುವ ಭಾಗವಾಗಿದೆ (ಭೀಷ್ಮಪರ್ವ ಅಧ್ಯಾಯ ೨೫ ರಿಂದ ೪೨). ಕುರುಕ್ಷೇತ್ರ ರಣರಂಗದ ಮಧ್ಯೆ, ಯುದ್ಧ ಆರಂಭವಾಗುವ ಮುಂಚೆ, ಶ್ರೀಕೃಷ್ಣ-ಅರ್ಜುನರ ಸಂವಾದವಾಗಿ ಈ ಕಾವ್ಯಮಯವಾದ ಗೀತೆ ಹೊಮ್ಮಿದೆ. ಚತುರಂಗಬಲ ಸಮೇತರಾಗಿ ಯುದ್ಧಸನ್ನದ್ಧರಾಗಿ, ಎದುರು ಬದುರಾಗಿ ನಿಂತ ಕೌರವ-ಪಾಂಡವ ಸೇನೆಗಳ ಅಮೋಘ ನೋಟದ ಹಿನ್ನೆಲೆ ಇದಕ್ಕೊಂದು ನಾಟಕೀಯ ಸನ್ನಿವೇಶವನ್ನೊದಗಿಸಿದೆ. ಗೀತೋಪದೇಶ ವಾಸ್ತವಿಕ ಬದುಕಿಗೆ ಧರ್ಮದ ಸಂಬಂಧವನ್ನು ಕೂಡಿಸುತ್ತದೆ.


          ಗೀತೆ ಇಂತಹ ಶ್ರೇಷ್ಠವಾದ ಮತ್ತು ಜನಪ್ರಿಯವಾದ ಕೃತಿ ಆಗಲು ಅದರ ಹಲವಾರು ಅಂಶಗಳು ಕಾರಣ—

(೧) ಇದು ಪಂಚಮವೇದ ಎಂದೇ ಪರಿಗಣಿತವಾಗಿ ಪೂಜನೀಯವಾಗಿರುವ ಮಹಾಭಾರತದ ಕಥಾಭಾಗವಾಗಿರುವುದು.

(೨) ಇದನ್ನು ಬೋಧಿಸಿದ ಆಚಾರ್ಯ, ಭಗವಂತನ ಅವತಾರ, ಸಾಕ್ಷಾತ್ ಪರಮಾತ್ಮ ಎಂದೇ ಪ್ರಸಿದ್ಧನಾದ ಶ್ರೀಕೃಷ್ಣ! ಎಲ್ಲ ವಿಚಾರಗಳಲ್ಲೂ ಈತನೊಬ್ಬ ಆದರ್ಶ ಪುರುಷ, ಮಹಾನುಭಾವ, ಆದರ್ಶಸಖ, ಬಹುದೊಡ್ಡ ರಾಜನೀತಿಜ್ಞ, ಅಜೇಯ ಯೋಧ, ಪ್ರಾಜ್ಞನಾದ ಗುರು, ಪರಮಶ್ರೇಷ್ಠನಾದ ಯೋಗಿ. ತನ್ನ ಬದುಕಿನಲ್ಲಿ ಘರ್ಷಣೆಗಳಿಂದ ಕೂಡಿದ ವಿವಿಧ ಕಾರ್ಯ-ಚಟುವಟಿಕೆಗಳಲ್ಲಿ ಸಮನ್ವಯವನ್ನು ಸಾಧಿಸಿದವನು. ಹೀಗಿರುವುದರಿಂದಲೇ, ಅಂತಹ ಶ್ರೇಷ್ಠ, ಆಧ್ಯಾತ್ಮಿಕ ತತ್ತ್ವಬೋಧನೆಯನ್ನು ಮಾಡುವುದಕ್ಕೆ ಅತ್ಯಂತ ಯೋಗ್ಯನಾದ ಅಧಿಕಾರವುಳ್ಳವನಾದ.

(೩) ಈ ಬೋಧನೆಯನ್ನು ಪಡೆದ ಅರ್ಜುನ ತ್ರಿಲೋಕವೀರನಾಗಿರುವಂತೆಯೇ ಮಾನವರ ದಿಟವಾದ ಪ್ರತಿನಿಧಿಯೂ ಹೌದು. ಸಂಕಟ ಪರಿಸ್ಥಿತಿಯಲ್ಲಿ ವಿಚಲಿತರಾಗುವುದು, ಏನು ಮಾಡಬೇಕೆಂದು ತೋಚದೆ ಗೊಂದಲಕ್ಕೊಳಗಾಗುವುದು ಮಾನವರ ಸಹಜಸ್ವಭಾವ. ಅರ್ಜುನ ಒಳಗಾದ ವಿಷಾದಭಾವ ನಮಗೂ ನಮ್ಮ ಬದುಕಿನಲ್ಲಿ ಒಂದಲ್ಲ ಒಂದು ಸಲ ಉಂಟಾಗುವಂತಹುದೇ. 

(೪) ಅರ್ಜುನ ಕೇಳುವ ಪ್ರಶ್ನೆಗಳು, ಪಡುವ ಆತಂಕ-ಸಂದೇಹಗಳು ಮತ್ತು ಅವುಗಳಿಗೆ ಶ್ರೀಕೃಷ್ಣನು ಕೊಡುವ ಉತ್ತರಗಳು-ಪರಿಹಾರಗಳು ನಮ್ಮ ಬದುಕಿಗೂ ಬಹು ಸುಸಂಗತವಾಗಿರುವುದು ಮಾತ್ರವಲ್ಲ, ಇಂದಿನ ಕಾಲಕ್ಕೂ ಸಹ ಅತ್ಯಂತ ಪ್ರಸ್ತುತವಾಗಿವೆ.

(೫) ಭಾರತೀಯ ವೇದಾಂತ ಪರಂಪರೆಯಲ್ಲಿ, ಉಪನಿಷತ್ತುಗಳು, ಬ್ರಹ್ಮಸೂತ್ರ ಹಾಗೂ ಗೀತೆ— ಇವು ಮೂರು "ಪ್ರಸ್ಥಾನ-ತ್ರಯ (ಮೂರು ದಾರಿಗಳು)" ಎನಿಸಿದ್ದು, ಇವುಗಳಲ್ಲಿ ಗೀತೆಯೂ ಒಂದಾಗಿದೆ. ಹೀಗಾಗಿಯೇ ಶಂಕರರು ಅದ್ವೈತ (ಕೇವಲಾದ್ವೈತ), ರಾಮಾನುಜರು ವಿಶಿಷ್ಟಾದ್ವೈತ (ಶ್ರೀವೈಷ್ಣವ), ಮಧ್ವರು ದ್ವೈತ (ವೈಷ್ಣವ), ನಿಂಬಾರ್ಕರು ದ್ವೈತಾದ್ವೈತ(ಭೇದಾಭೇದ), ವಲ್ಲಭರು ಶುದ್ಧಾದ್ವೈತ, ಭಕ್ತಿವೇದಾಂತರು ಗೌಡೀಯ ವೈಷ್ಣವ (ಹರೇಕೃಷ್ಣ)— ಎಂಬ ವಿವಿಧ ಸಿದ್ಧಾಂತ-ಸಂಪ್ರದಾಯಗಳಲ್ಲಿ ಹಾಗೂ ಇತರ ಹಲವರು ತಮ್ಮದೇ ಆದ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಗೀತೆಗೆ ಭಾಷ್ಯಗಳನ್ನು ರಚಿಸಲು ಮುಂದಾದರು.


(೨) ಶ್ರೀಪಾದ್ಮಪುರಾಣೋಕ್ತ ಗೀತಾಧ್ಯಾಯಮಾಹಾತ್ಮ್ಯ

ಪೀಠಿಕೆ

ಶ್ರೀ ಪಾದ್ಮ (/ಪದ್ಮ) ಮಹಾಪುರಾಣವು ಅಷ್ಟಾದಶ(೧೮) ಮಹಾಪುರಾಣಗಳಲ್ಲೊಂದು ಹಾಗೂ ೨ ನೇ ಬೃಹತ್ ಪುರಾಣವು. ಸ್ಕಾನ್ದ ಪುರಾಣವು ಅತ್ಯಂತ ದೊಡ್ಡದು. ಈ ಪಾದ್ಮಮಹಾಪುರಾಣದ ಉತ್ತರಖಂಡದಲ್ಲಿರುವ ೧೭೧ನೇ ಅಧ್ಯಾಯದಿಂದ ಮೊದಲ್ಗೊಂಡು ೧೮ ಅಧ್ಯಾಯಗಳಲ್ಲಿ ಅನುಕ್ರಮವಾಗಿ ಗೀತೆಯ ೧೮ ಅಧ್ಯಾಯಗಳ ಮಾಹಾತ್ಮ್ಯ ಕಥೆಗಳನ್ನು ದೇವ ಸದಾಶಿವನು ತನ್ನ ಪತ್ನಿ ಪಾರ್ವತಿಯ ಪ್ರಶ್ನೆಗುತ್ತರವಾಗಿ ಆಖ್ಯಾನಮಾಡುತ್ತಾನೆ. ಗೀತೆಯ ಪ್ರತಿ ಅಧ್ಯಾಯದ ಮೊದಲ ಶ್ಲೋಕಾರ್ಥವನ್ನು ನೋಡುವ ಸಮಯದಲ್ಲೇ ಆಯಾ ಅಧ್ಯಾಯದ ಪೂರ್ಣ ಮಾಹಾತ್ಮ್ಯವನ್ನು ಪುರಾಣದ ಶ್ಲೋಕಾರ್ಥಸಹಿತವಾಗಿ ನೋಡೋಣ. ಈಗ ಈ ಬಗ್ಗೆ ಪ್ರಸ್ತಾವಿಸಿದ್ದೇನಷ್ಟೆ. 


(೩) ವಿದ್ವಾನ್ ಅನಂತಶರ್ಮಾ ಭುವನಗಿರಿಯವರ " ಗೀತೆಯ ಬೆಳಕು" (ವೇದಾಂತಭಾರತೀಗ್ರಂಥಮಾಲಾ)

    ಪ್ರಸ್ತಾವನೆ

(ಪ್ರಾ || ರಾಮಚಂದ್ರ ಜಿ. ಭಟ್ಟ, ಕೋಟೇಮನೆ, 

ವೇದವಿಜ್ಞಾನ ಗುರುಕುಲಮ್, 

ಚನ್ನೇನಹಳ್ಳಿ)


ಆಧುನಿಕಯುಗ ಬಹುವೇಗದ್ದು. ಪ್ರತಿಯೊಬ್ಬನೂ ತನ್ನ ಜೀವನದಲ್ಲಿ ಸಫಲನಾಗಬೇಕೆಂದರೆ ನಾನಾವಿಧದ ಸವಾಲುಗಳನ್ನು ಎದುರಿಸಲೇಬೇಕು. ಸವಾಲನ್ನು ಎದೆಯೊಡ್ಡಿ ಎದುರಿಸಬಲ್ಲವರು ಮಾತ್ರ ಯಶಸ್ವಿಗಳಾಗುತ್ತಿದ್ದಾರೆ. ಸವಾಲುಗಳಿಂದ ಪಲಾಯನ ಮಾಡುವವರು, ಪರಿಸ್ಥಿತಿಯನ್ನು ಅರಿಯಲಾಗದೇ ಕಲ್ಪನಾಲೋಕದಲ್ಲಿ ವಿಹರಿಸುವವರು, ಅಳುಬುರುಕರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೇಲೆ ಬರಲಾರರು. ಇಂತಹ ಪರಿಸ್ಥಿತಿಯಲ್ಲಿ ನಮಗಿಂದು ಶ್ರೀಕೃಷ್ಣನ ಜೀವನ ಮತ್ತು ಸಂದೇಶ ದಾರಿದೀಪವಾಗಬಲ್ಲದು. ಶ್ರೀಕೃಷ್ಣ ಹೇಗೆ ಬಾಳಿ ತೋರಿಸಿದನೋ ಅದನ್ನೇ ಭಗವದ್ಗೀತೆಯಲ್ಲಿ ನುಡಿದಿದ್ದಾನೆ. ಆದ್ದರಿಂದ ಭಗವದ್ಗೀತೆ ಕಾಲದಿಂದ ಹಳೆಯದಾದರೂ ಆಧುನಿಕ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು.


       ದ್ವಂದ್ವ-ದೌರ್ಬಲ್ಯಗಳಿಂದ ವಿಷಾದಪಡುತ್ತಿದ್ದ ಮನುಷ್ಯ ಅರ್ಜುನ. ತನ್ನ ಕುಲದ ಜನ, ಗುರುಜನ, ರಕ್ತ ಸಂಬಂಧಿಗಳು ಯುದ್ಧದಲ್ಲಿ ಪಾಲ್ಗೊಳ್ಳುತ್ತಾರೆಂದು ಆತನಿಗೆ ಮೊದಲೇ ತಿಳಿದಿದೆ. ಅದೆಲ್ಲಾ ತಿಳಿದೇ ಯುದ್ಧಕ್ಕೆ ಸಿದ್ಧನಾಗಿ ಆತ ಕುರುಕ್ಷೇತ್ರಕ್ಕೆ ಬಂದಿದ್ದಾನೆ. ಈ ಕಾರ್ಯದಲ್ಲಿ ಪೂರ್ಣ ಯಶಸ್ವಿಯಾಗಲೆಂದೇ ಪರಶಿವನಿಂದ ಪಾಶುಪತಾದಿ ಅಸ್ತ್ರಗಳನ್ನು ಪಡೆದಿದ್ದಾನೆ. ಶ್ರೀಕೃಷ್ಣನನ್ನೇ ಬಯಸಿ ತನ್ನ ಸಾರಥಿಯನ್ನಾಗಿಸಿಕೊಂಡಿದ್ದಾನೆ. ಆ ಕಾಲದಲ್ಲಿ ದುಷ್ಟಸಂಹಾರದಿಂದಲೇ ಧರ್ಮದ ಪುನಃಸ್ಥಾಪನೆ ಸಾಧ್ಯವೆಂದು ಕೂಡ ಸರಿಯಾಗಿ ಅರಿತಿದ್ದಾನೆ.


       ಇಷ್ಟಿದ್ದಾಗಲೂ ಆತನಿಗೆ ಪ್ರತ್ಯಕ್ಷ ಕಾರ್ಯಕ್ಷೇತ್ರಕ್ಕೆ ಬಂದಾಗ ವಿಷಾದ ಹುಟ್ಟಿತು. ಇಂಥ ಅರ್ಜುನನನ್ನು ಮುಂದಿಟ್ಟು ಅಂತಹ ಎಲ್ಲರಿಗೂ ಜೀವನದ ಮಾರ್ಗವನ್ನು ಭಗವಂತ ಉಪದೇಶಿಸಿದ್ದಾನೆ ಎಂದು ಶ್ರೀ ಶಂಕರಭಗವತ್ಪಾದಾಚಾರ್ಯರು ಗೀತಾಭಾಷ್ಯ ಭೂಮಿಕೆಯಲ್ಲಿ ತಿಳಿಸಿದ್ದಾರೆ. ಆಧುನಿಕ ಜಗದಲ್ಲಂತೂ ಹೆಚ್ಚಿನ ಜನರು ನಾನಾಕಾರಣಗಳಿಂದ ಶೋಕ-ಮೋಹಗಳೆಂಬ ಸಮುದ್ರದಲ್ಲಿ ಮುಳುಗಿದ್ದಾರೆ. ಬಾಲಕ-ಬಾಲಿಕೆಯರಲ್ಲೂ ನಿರಂತರ ಒತ್ತಡದಿಂದ ಆತಂಕ ಕಂಡುಬರುತ್ತಿದೆ. ಹೀಗಾಗಿ, ಈಗ ಸರಿಯಾದ ಮಾರ್ಗದರ್ಶನ ಬೇಕಾಗಿದ್ದು ಅದು ಒದಗುವುದು ಭಗವದ್ಗೀತೆಯಿಂದಲೇ. 


     ಋಷಿಪ್ರಣೀತವಾದ ಆಕರಗ್ರಂಥಗಳಲ್ಲಿ ಹೊರತೋರುವ ಅರ್ಥ ಸುಲಭಗ್ರಾಹ್ಯವಾಗಿರುತ್ತದೆ. ಆದರೂ, ಅರ್ಥಾವಧಾರಣೆಯ ಸೌಲಭ್ಯಕ್ಕಾಗಿ ಸರಳಾನುವಾದದ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ, ಗ್ರಂಥದ ಒಳಭಾವ ಗ್ರಹಣ ಮಾಡಿಕೊಳ್ಳುವಾಗ ಹೆಚ್ಚು ಶ್ರಮ ಬೇಕು. ಸಾಮಾನ್ಯ ಅನುವಾದಗಳನ್ನೇ ಓದಿ, "ಭಗವದ್ಗೀತೆ ನನಗೆ ತಿಳಿದಿದೆ" ಎಂದು ಭಾವಿಸುವುದು ಸರಿಯಲ್ಲ. ಗೀತೆಯ ಒಳಭಾವ ಸರಸ್ವತಿನದೀ ಪ್ರವಾಹದಂತೆ ಅಂತರ್ಗಾಮಿಯಾಗಿದೆ. ಅದನ್ನು ಅರಿಯಲು ನಮಗೆ ಮುಖ್ಯವಾಗಿ ಸಹಾಯ ಮಾಡುವಂತಹುದು, ಶ್ರೀ ಶಂಕರ ಭಗವತ್ಪಾದರ ಗೀತಾಭಾಷ್ಯ ಮತ್ತು ಅದನ್ನು ಆಧರಿಸಿ ಬರೆದಿರುವ ವ್ಯಾಖ್ಯಾನಗಳು. ಆದರೆ, ಗೀತೆಗೆ ತಮಗೆ ತೋಚಿದಂತೆ ಅರ್ಥ ಹೇಳುವುದು, ಅಪಾರ್ಥಕಲ್ಪನೆ ಮಾಡುವುದು ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ "ವೇದಾಂತಭಾರತೀ" ವತಿಯಿಂದ "ಗೀತೆಯ ಬೆಳಕು" ಹೊರತರಬೇಕಾದದ್ದು ಅನಿವಾರ್ಯವಾಯಿತು.


     ಪರಂಪರೆಯ ಪ್ರಕಾರ ವೇದಾಂತವನ್ನೋದಿ, ಆಧುನಿಕ ಚಿಂತನೆಯ ಧಾಟಿಯನ್ನೂ ಹತ್ತಿರದಿಂದ ತಿಳಿದು ಹದವನ್ನು ಸಾಧಿಸಿಕೊಂಡ ಹಿರಿಯರ ಲೇಖನಿಯಿಂದ "ಗೀತೆಯ ಬೆಳಕು" ಹೊರಬಂದಿರುವುದು ಇಲ್ಲಿ ಉಲ್ಲೇಖನೀಯ. ……


ಡಾ|| ಶ್ರೀಧರಭಟ್ಟ ಐನಕೈ, ನಿರ್ದೇಶಕರು, ವೇದಾಂತಭಾರತೀ — ಇವರ ಪ್ರಕಾಶಕರ ನುಡಿಯಿಂದ—


……ನಾಡಿನ ಹಿರಿಯ ವಿದ್ವಾಂಸರಾದ ಶ್ರೀ ಅನಂತಶರ್ಮಾ ಭುವನಗಿರಿಯವರು ಸುಲಭಶೈಲಿಯಲ್ಲಿ ವ್ಯಾವಹಾರಿಕ ಉದಾಹರಣೆಗಳೊಂದಿಗೆ ನಿರೂಪಿಸಿ ಗೀತೆಯ ತತ್ತ್ವವನ್ನು ಸಂಗ್ರಹಿಸಿ ನಮ್ಮ ಮುಂದಿರಿಸಿದ್ದಾರೆ. ……


ಉದ್ದೇಶ


  ಇದು ಭಗವದ್ಗೀತೆಯ ಯಥಾನುವಾದವಲ್ಲ; ಭಾವಾನುವಾದವೂ ಅಲ್ಲ. ಗೀತೆಯಲ್ಲಿ ಹೇಳಿದ ಅನೇಕ ವಿಷಯಗಳಲ್ಲಿ ಕೆಲವನ್ನಷ್ಟೇ ಆರಿಸಿಕೊಂಡು ಸ್ವತಂತ್ರವಾಗಿ ಬಾಲಕರ ದೃಷ್ಟಿಯಿಂದ ಅದನ್ನು ವಿವರಿಸುವ ಒಂದು ಪ್ರಯತ್ನ. ……ಮಧ್ಯೆ ಮಧ್ಯೆ ದೃಷ್ಟಾಂತರೂಪದಲ್ಲಿ ಕಥೆಗಳನ್ನು ನೀಡಲಾಗಿದೆ…..


ಸಂದರ್ಭ


ಭಗವದ್ಗೀತೆಯು ಭಾರತೀಯರಿಗೆ ಅತ್ಯಂತ ಪವಿತ್ರವೂ ವಿಶ್ವಮಾನ್ಯವೂ ಆದ ಗ್ರಂಥ. ಜಗದ್ಗುರುವಾದ ಶ್ರೀಕೃಷ್ಣನು ಯುದ್ಧದ ಸಂದರ್ಭದಲ್ಲಿ ಅರ್ಜುನನಿಗೆ ಬೋಧಿಸಿದ ಉಪದೇಶವೇ ಈ ಭಗವದ್ಗೀತೆ. ವ್ಯಾಸಮಹರ್ಷಿಗಳಿಂದ ರಚಿತವಾದ ಮಹಾಭಾರತದಲ್ಲಿ ನಾವು ಭಗವದ್ಗೀತೆಯನ್ನು ನೋಡುತ್ತೇವೆ. ಶ್ರೀಕೃಷ್ಣನು ಅರ್ಜುನನಿಗೆ ಇದನ್ನು ಉಪದೇಶಿಸಿದ ಸಂದರ್ಭ ಹೀಗಿದೆ—


    ಒಮ್ಮೆ ಕೌರವರು ಮತ್ತು ಪಾಂಡವರು ಜೂಜನ್ನಾಡಿದರು. ಪಾಂಡವರು ಜೂಜಿನಲ್ಲಿ ಸೋತರು. ಜೂಜಿನಲ್ಲಿ ಅವರು ಇಟ್ಟುಕೊಂಡ ನಿಯಮದಂತೆ ಪಾಂಡವರು ೧೨ ವರ್ಷ ವನವಾಸ, ೧ ವರ್ಷ ಅಜ್ಞಾತವಾಸಕ್ಕೆ ತೆರಳಿದರು. ಆ ಸಮಯದಲ್ಲಿ ಅವರು ತಮ್ಮ ರಾಜ್ಯವನ್ನು ಕೌರವರಲ್ಲಿ ಇಟ್ಟುಹೋಗಿದ್ದರು. ವನವಾಸ-ಅಜ್ಞಾತವಾಸಗಳನ್ನು ಪೂರೈಸಿ ಬಂದು ತಮ್ಮ ರಾಜ್ಯವನ್ನು ಮರಳಿ ಪಡೆಯಲು ಕೇಳಿಕೊಂಡಾಗ ಕೌರವರು ಕೊಡಲೊಪ್ಪಲಿಲ್ಲ. ಅನಿವಾರ್ಯವಾಗಿ ಪಾಂಡವರು ಯುದ್ಧವನ್ನು ಮಾಡಬೇಕಾಯಿತು. ಮಿತ್ರರಾಜರ ಸಹಾಯದಿಂದ ದೊಡ್ಡ ಸೈನ್ಯವನ್ನು ಸಂಗ್ರಹಿಸಿ ಯುದ್ಧಕ್ಕೆ ಸಿದ್ಧರಾದರು. ಕೌರವರು ಯುದ್ಧಕ್ಕಾಗಿ ಸೇರಿದರು. ಶ್ರೀಕೃಷ್ಣನು ಅರ್ಜುನನ ರಥಕ್ಕೆ ಸಾರಥಿಯಾಗಿದ್ದನು. 


(ಇದರ ಮುಂದಿನ ಭಾಗವು ೧ ನೆಯ ಅಧ್ಯಾಯದ ವಿವರಣೆಯಲ್ಲಿ ಬರುತ್ತದೆ)


(೪) ಗೀತಾಪ್ರವೇಶಃ (ಸಂಸ್ಕೃತಭಾರತೀ)

ಪೀಠಿಕಾ


★ ಭಗವದ್ಗೀತೆಯ ೭೦೦ ಶ್ಲೋಕಗಳೂ ಕೂಡ ಇದರಲ್ಲಿ ಸಂಗ್ರಹಿಸಲ್ಪಟ್ಟಿವೆ.

★ ಮೊದಲ ಹಾಗೂ ಎರಡನೆಯ ಅಧ್ಯಾಯದಲ್ಲಿ ಪ್ರತಿಯೊಂದು ಶ್ಲೋಕದಲ್ಲೂ ಪದಚ್ಛೇದ, ಪದಪರಿಚಯ, ಪದಾರ್ಥ, ಅನ್ವಯ, ಆಕಾಂಕ್ಷಾ, ತಾತ್ಪರ್ಯ ಹಾಗೂ ವ್ಯಾಕರಣ— ಎಂಬ ಈ ಅಂಶಗಳು ತೋರಿಸಲ್ಪಟ್ಟಿವೆ. ವ್ಯಾಕರಣದಲ್ಲಿ ಮತ್ತೆ ಸಂಧಿ, ಸಮಾಸ, ಕೃದಂತ, ತದ್ಧಿತಾಂತ ಎಂಬ ೪ ಉಪವಿಭಾಗಗಳಿವೆ. 


※ಪದಚ್ಛೇದ— ಎಲ್ಲ ಪದಗಳ ಸಂಧಿವಿಚ್ಛೇದವನ್ನಿಲ್ಲಿ ಮಾಡಲಾಗಿದೆ.  


ಟಿಪ್ಪಣಿ— 

ಪ್ರಾತಿಪದಿಕಃಅರ್ಥವತ್-ಅಧಾತುಃ, ಅಪ್ರತ್ಯಯಃ,                    ಅಕ್ಷರಸಮೂಹಃ ಪ್ರಾತಿಪದಿಕಃ | (ಅರ್ಥವುಳ್ಳ, ಕ್ರಿಯಾಪದಮೂಲವೆನಿಸಿದ ಧಾತುವೂ ಅಲ್ಲದ, ಯಾವುದೇ ಪ್ರತ್ಯಯಗಳಿಲ್ಲದ ಅಕ್ಷರಸಮೂಹವೇ ಪ್ರಾತಿಪದಿಕವು.)


ಶಬ್ದಃಅರ್ಥವಾನ್, ಅಲಿಙ್ಗಮ್, ಅವಿಭಕ್ತಿಃ, ಅವಚನಃ, ಅಕ್ಷರಸಮೂಹಃ ಶಬ್ದಃ | (ಅರ್ಥವುಳ್ಳ, ಲಿಂಗ-ವಿಭಕ್ತಿ-ವಚನಗಳಿಲ್ಲದ ಅಕ್ಷರಸಮೂಹವೇ ಶಬ್ದವು.)


ಪದಮ್ಸುಪ್-ತಿಙನ್ತಂ ಪದಮ್ | (ಸುಪ್ ಪ್ರತ್ಯಯಾಂತವಾದ ಅಕ್ಷರಸಮೂಹ ನಾಮಪದ, ತಿಙ್ ಪ್ರತ್ಯಯಾಂತವಾದ ಅಕ್ಷರಸಮೂಹ ಕ್ರಿಯಾಪದ—ಇಂತಹ ಅಕ್ಷರಸಮೂಹವೇ ಪದವೆನಿಸುವುದು.) 


※ಪದಪರಿಚಯ— ಶ್ಲೋಕದಲ್ಲಿ ಬಂದ ಪ್ರತಿ ಪದವನ್ನೂ —ಸುಬಂತವಾಗಿಯೋ(ನಾಮಪದವಾಗಿಯೋ) ತಿಙಂತವಾಗಿಯೋ(ಕ್ರಿಯಾಪದವಾಗಿಯೋ) ಪರಿಚಯಿಸಲಾಗಿದೆ. ಸುಬಂತಗಳ ಅಂತ-ಲಿಂಗ-ವಿಭಕ್ತಿ-ವಚನಾದಿಗಳನ್ನೂ, ತಿಙಂತಗಳ ಲಕಾರ-ಪುರುಷ-ವಚನಾದಿಗಳನ್ನು ತೋರಿಸಲಾಗಿದೆ.


※ಪದಾರ್ಥ— ಪ್ರತಿ ಪದಕ್ಕೂ ಅರ್ಥವನ್ನು ಇನ್ನೊಂದು ಪದದಿಂದ ನಿರ್ದೇಶಿಸಲಾಗಿದೆ.


※ಅನ್ವಯ— ಶ್ಲೋಕದಲ್ಲಿನ ಪದಗಳು ಇಲ್ಲಿ ಅರ್ಥಾನುಸಾರವಾಗಿ ಅನ್ವಯಕ್ರಮದಿಂದ ತೋರಿಕೊಡಲ್ಪಟ್ಟಿವೆ.


※ಆಕಾಂಕ್ಷಾ— ಪದಗಳ ಅನ್ವಯವು, ಬೋಧಿಸುವಾಗ ಎಲ್ಲೆಡೆ ಪ್ರಶ್ನೋತ್ತರಕ್ರಮದಲ್ಲೇ ಇರುವುದಾದರೂ ಅದು ಅರ್ಥಪ್ರಧಾನ ಹಾಗೂ ಶಬ್ದಪ್ರಧಾನವೆಂದು ಇಬ್ಬಗೆಯಾಗಿದೆ. ಅವುಗಳಲ್ಲಿ ಮೊದಲನೆಯದು ಪ್ರಾಯಶಃ ಪಂಡಿತಪ್ರಿಯ ಮತ್ತು ದುರವಗಾಹ್ಯ. ಇಲ್ಲಾದರೋ ಸರಳತೆಯ ದೃಷ್ಟಿಯಿಂದ ಎರಡನೆಯ ಕ್ರಮವನ್ನೇ ಅನುಸರಿಸಿರುವುದು ವಿಶೇಷ. ನಡುನಡುವೆ ಕೆಲವೆಡೆ ಓದುಗರು ತಾವೇ ಅರ್ಥಮಾಡಿಕೊಳ್ಳಬಹುದಾದದ್ದಕ್ಕೆ ಪ್ರಥಮರೀತಿಯನ್ನೂ ಕೊಟ್ಟಿದೆ. ಮೊದಲ ನಾಲ್ಕು ಅಧ್ಯಾಯಗಳಿಗೆ ಈ ಪ್ರಶ್ನೋತ್ತರರೂಪೀ ಆಕಾಂಕ್ಷೆಯನ್ನಿತ್ತಿದ್ದು, ಮುಂದಿನವಕ್ಕೆ ಓದುಗರೇ ಮಾಡಿಕೊಳ್ಳಲು ಶಕ್ತರಾಗುವರು. ಎಲ್ಲಿ ಇಡೀ ಶ್ಲೋಕದ ಅನ್ವಯವನ್ನು ಒಂದೇ ವಾಕ್ಯದಲ್ಲಿ ಮಾಡಬಹುದಾಗಿದೆಯೋ ಅಂಥ ಕಡೆ ಅಂತಹ ದಂಡಾನ್ವಯಕ್ರಮವನ್ನೇ ಅನುಸರಿಸಿದೆ. ಇತರೆಡೆ ಖಂಡಾನ್ವಯವನ್ನು ಮಾಡಿದೆ.


※ತಾತ್ಪರ್ಯ— ಸಂಪೂರ್ಣ ಶ್ಲೋಕದ ತಾತ್ಪರ್ಯವನ್ನಿಲ್ಲಿ ೧ ಅಥವಾ ೨ ವಾಕ್ಯಗಳಲ್ಲಿ ನೀಡಲಾಗಿದೆ. 


※ವ್ಯಾಕರಣ— ಇಲ್ಲಿ ಸಂಧಿಯ ವಿಚಾರದಲ್ಲಿ ಸಂಧಿವಿಚ್ಛೇದ (ವಿಂಗಡಣೆ) ಹಾಗೂ ಸಂಧಿಯ ಹೆಸರು, ಸಮಾಸ ಎಂಬಲ್ಲಿ ವಿಗ್ರಹವಾಕ್ಯ ಮತ್ತು ಸಮಾಸದ ಹೆಸರು, ಕೃದಂತದ ಬಗ್ಗೆ ಧಾತು ಹಾಗೂ ಪ್ರತ್ಯಯ, ತದ್ಧಿದಾಂತ ಎಂಬೆಡೆ ಶಬ್ದವೂ ಪ್ರತ್ಯಯವೂ ತೋರಿಸಲ್ಪಟ್ಟಿವೆ.




Comments

Popular posts from this blog

विवेकचूडामणिः १ / ವಿವೇಕಚೂಡಾಮಣಿ ೧

೧೭. ವಿಶುದ್ಧವೇದಾಂತಪರಿಭಾಷಾ / १७. विशुद्धवेदान्तपरिभाषा

೩. ಶ್ರೀಮದ್-ಭಗವದ್ಗೀತಾ-ಪೀಠಿಕಾ ೨