೩. ಶ್ರೀಮದ್-ಭಗವದ್ಗೀತಾ-ಮಾಹಾತ್ಮ್ಯ—ವೈಷ್ಣವೀಯತನ್ತ್ರಸಾರೋಕ್ತ
೩೬. ವೈಷ್ಣವೀಯತಂತ್ರಸಾರದಲ್ಲಿ ವ್ಯಾಸರು ಗೀತಾಮಹಿಮೆಯನ್ನು ಹೇಗೆ ಹೇಳಿರುವರೆಂದಿದೆ?
(೫) ವೈಷ್ಣವೀಯ-ತಂತ್ರಸಾರೋದ್ಧೃತಮ್
|| ಓಂ ನಮೋ ಭಗವತೇ ವಾಸುದೇವಾಯ ||
(ಶೌನಕ) ಋಷಿರುವಾಚ |
ಗೀತಾಯಾಶ್ಚೈವ ಮಾಹಾತ್ಮ್ಯಂ ಯಥಾವತ್ಸೂತ ಮೇ ವದ |
ಪುರಾ ನಾರಾಯಣಕ್ಷೇತ್ರೇ ವ್ಯಾಸೇನ ಮುನಿನೋದಿತಮ್ || ೧ ||
(ಶೌನಕ) ಋಷಿಯು ಹೇಳಿದನು—
ಹೇ ಸೂತಮುನಿಯೆ! ಹಿಂದೆ ನಾರಾಯಣಕ್ಷೇತ್ರವಾದ ಬದರಿಯಲ್ಲಿ (ಬದರಿ ನಾರಾಯಣನ ಕ್ಷೇತ್ರದಲ್ಲಿ) ವ್ಯಾಸಮುನಿಯಿಂದ ಹೇಳಲ್ಪಟ್ಟ ಗೀತೆಯ ಮಾಹಾತ್ಮ್ಯೆಯನ್ನು ಯಥಾವತ್ತಾಗಿ (ಇದ್ದುದನ್ನು ಇದ್ದಂತೆಯೇ, ಹೇಳಿದ್ದನ್ನು ಹೇಳಿದಂತೆಯೇ, ಕೇಳಿದ್ದನ್ನು ಕೇಳಿದಂತೆಯೇ) ನನಗೆ ಹೇಳು.
ಸೂತ ಉವಾಚ |
ಭದ್ರಂ ಭಗವತಾ ಪೃಷ್ಟಂ ಯದ್ಧಿ ಗುಪ್ತತಮಂ ಪರಮ್ |
ಶಕ್ಯತೇ ಕೇನ ತದ್ವಕ್ತುಂ ಗೀತಾಮಾಹಾತ್ಮ್ಯಮುತ್ತಮಮ್ || ೨ ||
ಸೂತನು ಹೇಳಿದ್ದನು—
ಭಗವಾನ್ ಶೌನಕರಾದ ತಮ್ಮಿಂದ ಪರಮಮಂಗಲಕರವೂ ರಹಸ್ಯತಮವೂ ಶ್ರೇಷ್ಠವೂ ಆದ ಯಾವ ಗೀತಾಮಾಹಾತ್ಮ್ಯವು ಪ್ರಶ್ನಿಸಲ್ಪಟ್ಟಿತೋ ಅದನ್ನು ಯಾರಿಂದ ತಾನೇ ಹೇಳಲು ಶಕ್ಯವಿದೆ? ಯಾರು ತಾನೇ ಅದಕ್ಕೆ ಸಮರ್ಥರಾದಾರು ಎಂಬ ಭಾವ.
೩೭. ಗೀತಾಮಹಿಮೆಯನ್ನು ಯಾರ್ಯಾರು ಎಷ್ಟೆಷ್ಟು ಬಲ್ಲರು?
ಕೃಷ್ಣೋ ಜಾನಾತಿ ವೈ ಸಮ್ಯಕ್ ಕಞ್ಚಿತ್ ಕುನ್ತೀಸುತಃ ಫಲಮ್ |
ವ್ಯಾಸೋ ವಾ ವ್ಯಾಸಪುತ್ರೋ ವಾ ಯಾಜ್ಞವಲ್ಕ್ಯೋऽಥ ಮೈಥಿಲಃ || ೩ ||
ಗೀತೆಯ ಮಹಾತ್ಮೆಯನ್ನು ಶ್ರೀಕೃಷ್ಣನೋರ್ವನೇ ಚೆನ್ನಾಗಿ, ಸಂಪೂರ್ಣವಾಗಿ ಬಲ್ಲನು. ಕುಂತೀಪುತ್ರಾದ ಅರ್ಜುನನು, ವ್ಯಾಸಮುನಿಯು, ವ್ಯಾಸಪುತ್ರ ಶುಕರು, ಯಾಜ್ಞವಲ್ಕ್ಯರು ಹಾಗೆಯೇ ಮಿಥಿಲಾಧಿಪ ಜನಕ ಮಹಾರಾಜನು—ಇವರು ಗೀತೆಯ ಫಲಶ್ರುತಿಯನ್ನು ಅಲ್ಪ ಸ್ವಲ್ಪ ತಿಳಿದಿರುವರು.
ಅನ್ಯೇ ಶ್ರವಣತಃ ಶ್ರುತ್ವಾ ಲೇಶಂ ಸಙ್ಕೀರ್ತಯನ್ತಿ ಚ |
ತಸ್ಮಾತ್ ಕಿಞ್ಚಿದ್ವದಾಮ್ಯತ್ರ ವ್ಯಾಸಸ್ಯ ಸ್ಯಾನ್ಮಯಾ ಶ್ರುತಮ್ || ೪ ||
ಇತರರು ಮಹಾತ್ಮೆಯ ಶ್ರವಣದಿಂದ ಲೇಶಮಾತ್ರ ಕೇಳಿದ್ದನ್ನು ಸಂಕೀರ್ತನೆ ಮಾಡುತ್ತಾರೆ. ಹಾಗಾಗಿ, ವ್ಯಾಸರಿಂದ ಕೇಳಿದಷ್ಟುಮಾತ್ರ ನಾನು ಸ್ವಲ್ಪ ಇಲ್ಲಿ ಹೇಳುತ್ತೇನೆ.
೩೮. ಗೀತಾಮೃತದ ರೂಪಕವೇನು?
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನನ್ದನಃ |
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ || ೫ ||
ಎಲ್ಲ ಉಪನಿಷತ್ತುಗಳೂ ಗೋವುಗಳು; ಗೋಪಾಲಕೃಷ್ಣನು ಹಾಲುಗರೆಯುವವನು; ಪೃಥಾಸುತ ಅರ್ಜುನನು ಕರುವು; ಜ್ಞಾನಿಯು ಹಾಲು ಕುಡಿಯುವವನು. ಇಂತಹ ಗೀತಾಮೃತವೆಂಬ ಹಾಲು ಅತ್ಯಂತ ಮಹತ್ತ್ವವುಳ್ಳದ್ದೂ ಪವಿತ್ರವೂ ಆಗಿರುವುದು.
೩೯. ಗೀತೆಯನ್ನು ನಿಜವಾಗಿ ಯಾಕಾಗಿ, ಯಾರಿಗಾಗಿ ಕೃಷ್ಣನು ಉಪದೇಶಿಸಿದನು?
ಸಾರಥ್ಯಮರ್ಜುನಸ್ಯಾದೌ ಕುರ್ವನ್ ಗೀತಾಮೃತಂ ದದೌ |
ಲೋಕತ್ರಯೋಪಕಾರಾಯ ತಸ್ಮೈ ಕೃಷ್ಣಾತ್ಮನೇ ನಮಃ || ೬ ||
ಮೊದಲಿಗೆ ನರನಾದ ಅರ್ಜುನನಿಗೆ ಸಾರಥ್ಯವನ್ನು ಮಾಡುತ್ತಾ ಮೂರ್ಲೋಕಗಳಿಗೂ ಉಪಕಾರವಾಗುವುದಕ್ಕೋಸ್ಕರ ಗೀತೆಯೆಂಬ ಅಮೃತವನ್ನು ನೀಡಿದ ಆ ಕೃಷ್ಣಾತ್ಮನಿಗೆ ನಮಸ್ಕಾರ.
೪೦. ಸಂಸಾರಸಾಗರಕ್ಕೆ ನೌಕೆ ಯಾವುದು?
ಸಂಸಾರಸಾಗರಂ ಘೋರಂ ತರ್ತುಮಿಚ್ಛತಿ ಯೋ ನರಃ |
ಗೀತಾನಾವಂ ಸಮಾಸಾದ್ಯ ಪಾರಂ ಯಾತಿ ಸುಖೇನ ಸಃ || ೭ ||
ಯಾವ ಮನುಜನು ಘೋರವಾದ ಸಂಸಾರಸಾಗರವನ್ನು ದಾಟಲು ಬಯಸುವನೋ ಅವನು ಗೀತೆಯೆಂಬ ಹಡಗನ್ನು ಹತ್ತಿ ಹೊರಟರೆ ಸುಲಭವಾಗಿ ಆಚೆಯ ದಡವನ್ನು ಸೇರುತ್ತಾನೆ.
೪೧. ಗೀತಾರ್ಥವನ್ನರಿಯದೆ ಓದಿದರೆ ಫಲವೇನು?
ಗೀತಾಜ್ಞಾನಂ ಶ್ರುತಂ ನೈವ ಸದೈವಾಭ್ಯಾಸಯೋಗತಃ |
ಮೋಕ್ಷಮಿಚ್ಛತಿ ಮೂಢಾತ್ಮಾ ಯಾತಿ ಬಾಲಕಹಾಸ್ಯತಾಮ್ || ೮ ||
ಯಾವಾಗಲೂ ಗೀತೆಯನ್ನು ಮತ್ತೆ ಮತ್ತೆ ಓದಿದರೂ ಅದರ ಅರ್ಥಾನುಸಂಧಾನ ಜ್ಞಾನವನ್ನು ಎಂದೂ ಕೇಳಿ ತಿಳಿಯದಿದ್ದರೆ, ಅಂತಹ ಮೂಢನು ಮೋಕ್ಷವನ್ನು ಬಯಸುವುದು ಮಕ್ಕಳಾಟದಂತೆ ಹಾಸ್ಯಾಸ್ಪದವೆನಿಸುವುದು.
೪೨. ಹಗಲಿರುಳೂ ಗೀತಾಶ್ರವಣ, ಪಠನದ ಫಲವೇನು?
ಯೇ ಶೃಣ್ವನ್ತಿ ಪಠನ್ತ್ಯೇವ ಗೀತಾಶಾಸ್ತ್ರಮಹರ್ನಿಶಮ್ |
ನ ತೇ ವೈ ಮಾನುಷಾ ಜ್ಞೇಯಾ ದೇವರೂಪಾ ನ ಸಂಶಯಃ || ೯ ||
ಯಾರು ಗೀತಾಶಾಸ್ತ್ರವನ್ನು ಹಗಲಿರುಳೂ ಪಠಿಸುತ್ತಿರುವರೋ, ಕೇಳುತ್ತಿರುವರೋ ಅವರು ಮನುಷ್ಯರೆಂದು ತಿಳಿಯಬಾರದು; ದೇವತೆಗಳೇ, ಸಂಶಯವಿಲ್ಲ.
೪೩. ಗೀತೋಕ್ತ ಭಕ್ತಿಯ ಸ್ವರೂಪವೇನು?
ಗೀತಾಜ್ಞಾನೇನ ಸಮ್ಬೋಧಂ ಕೃಷ್ಣಃ ಪ್ರಾಹಾರ್ಜುನಾಯ ವೈ |
ಭಕ್ತಿತತ್ತ್ವಂ ಪರಂ ತತ್ರ ಸಗುಣಂ ವಾಥ ನಿರ್ಗುಣಮ್ || ೧೦ ||
ಗೀತಾಜ್ಞಾನದಿಂದ ಅರ್ಜುನನಿಗೆ ಕೃಷ್ಣನು ಸುಜ್ಞಾನವನ್ನು ಬೋಧಿಸಿದನು. ಅದರಲ್ಲಿ ಸಗುಣ ಹಾಗೂ ನಿರ್ಗುಣ ಭಕ್ತಿತತ್ತ್ವವು ಹೆಚ್ಚಿನದು. (ಸಗುಣವೆಂದರೆ ಸತ್ತ್ವ ರಜ ತಮ ಗಳೆಂಬ ತ್ರಿಗುಣಾತ್ಮಕವಾದ, ಪಾಂಚಭೌತಿಕ / ಪಂಚಭೂತಾತೀತ ದೈವಿಕ, ಸಾಕಾರ ರೂಪ. ನಿರ್ಗುಣವೆಂದರೆ ೩ ಗುಣಗಳಾಚೆಗಿನ ನಿರಾಕಾರ, ಸರ್ವವ್ಯಾಪಕ, ಸರ್ವಾಂತರ್ಯಾಮಿ ಮೂಲ ಸ್ವರೂಪ.)
೪೪. ಚಿತ್ತಶುದ್ಧಿಯುಂಟಾಗಲು ಒಂದು ಸರಳ ದಾರಿ ಯಾವುದು?
ಸೋಪಾನಾಷ್ಟಾದಶೈರೇವಂ ಭುಕ್ತಿಮುಕ್ತಿಸಮುಚ್ಛ್ರಿತೈಃ |
ಕ್ರಮಶಶ್ಚಿತ್ತಶುದ್ಧಿಃ ಸ್ಯಾತ್ಪ್ರೇಮಭಕ್ತ್ಯಾದಿಕರ್ಮಸು || ೧೧ ||
ಹೀಗೆ ಗೀತೆಯಲ್ಲಿರುವ ಭುಕ್ತಿ-ಮುಕ್ತಿ / ಭೋಗ-ಮೋಕ್ಷಪರವಾದ (ಸಮ್ ಉತ್ ಶ್ರಿತೈಃ— ಸಮುಚ್ಛ್ರಿತೈಃ— ಚೆನ್ನಾಗಿ ಉತ್ತಮವಾಗಿ ಆಶ್ರಯಿಸಿರುವವುಗಳಿಂದ) ೧೮ ಅಧ್ಯಾಯಗಳೆಂಬ ೧೮ ಮೆಟ್ಟಿಲುಗಳನ್ನು ಕ್ರಮವಾಗಿ ಏರಿ, ಸಮಸ್ತ ಕರ್ಮಗಳಲ್ಲೂ ಭಗವತ್ಪ್ರೇಮಭಕ್ತಿಯೇ ಮುಂತಾದ ಸಾಧನಕರ್ಮಗಳಲ್ಲಿ ಚಿತ್ತಶುದ್ಧಿಯುಂಟಾಗುತ್ತದೆ; ಮನಸ್ಸು ಕೊಳೆ ಕಲ್ಮಷ ದುರಾಲೋಚನೆ ಚಾಂಚಲ್ಯ ರಹಿತವಾಗಿ, ಭಗವಂತನಲ್ಲಿ ತನ್ಮಯ, ತಲ್ಲೀನ, ನಿಮಗ್ನವಾಗುತ್ತದೆ.
೪೫. ಶ್ರದ್ಧೆಯಿಲ್ಲದ, ಅರ್ಥ ತಿಳಿಯದ ಗೀತಾಪಠನದ ಫಲವೇನು?
ಸಾಧೋರ್ಗೀತಾಮ್ಭಸಿ ಸ್ನಾನಂ ಸಂಸಾರಮಲನಾಶನಮ್ |
ಶ್ರದ್ಧಾಹೀನಸ್ಯ ತತ್ಕಾರ್ಯಂ ಹಸ್ತಿಸ್ನಾನಂ ವೃಥೈವ ತತ್ || ೧೨ ||
ಸಾಧುವಿನ (ಸತ್ಪುರುಷನು ಅರ್ಥಾನುಸಂಧಾನಪೂರ್ವಕ ಶ್ರದ್ಧೆಯಿಂದ ಮಾಡಿದ), ಗೀತೆಯೆಂಬ ಜಲದಲ್ಲಿನ ಸ್ನಾನವು ಜನನ-ಮರಣಾದಿ ದ್ವಂದ್ವಯುತವಾದ ಸಂಸಾರವೆಂಬ ಕೊಳೆಯನ್ನೇ ನಾಶಮಾಡಿಬಿಡುವುದು. ಆದರೆ, ಶ್ರದ್ಧೆಯಿಲ್ಲದವನು ಅದನ್ನು ಮಾಡಿದರೆ ಅದು ಕೇವಲ ಗಜಸ್ನಾನದಂತೆ (ಆನೆಯು ದೀರ್ಘಕಾಲ ಮಾಡಿದ ಸ್ನಾನಾನಂತರ ಮತ್ತೆ ಮರಳನ್ನು ಮೈಗೆ ಮೆತ್ತಿಕೊಳ್ಳುವಂತೆ) ನಿಶ್ಚಯವಾಗಿಯೂ(ವೃಥಾ ಏವ— ವೃಥೈವ, ವೃದ್ಧಿಸನ್ಧಿಃ) ವ್ಯರ್ಥವೇ ಸರಿ.
ಗೀತಾಯಾಶ್ಚ ನ ಜಾನಾತಿ ಪಠನಂ ನೈವ ಪಾಠನಮ್ |
ಸ ಏವ ಮಾನುಷೇ ಲೋಕೇ ಮೋಘಕರ್ಮಕರೋ ಭವೇತ್ || ೧೩ ||
ಗೀತೆಯ ಪಠನ / ಓದುವಿಕೆಯನ್ನು (ಯಾವನು) ತಿಳಿದಿಲ್ಲವೋ, ಬೇರೆಯವರಿಗೆ ಓದಿಸುವಿಕೆ / ಪಾಠನವಂತೂ ಹೇಗೂ ಅರಿತಿಲ್ಲವೋ, ಅಂಥವನು ಈ ಇಡೀ ಮನುಷ್ಯಲೋಕದಲ್ಲೇ ವ್ಯರ್ಥಕರ್ಮವನ್ನು ಮಾಡುವವನಾಗಿರುವನು. (ನ+ಏವ—ನೈವ—ವೃದ್ಧಿಸನ್ಧಿಃ, ಎಂದೂ ಕೂಡ ಇಲ್ಲ ಎಂದರ್ಥ).
ತಸ್ಮಾದ್ಗೀತಾಂ ನ ಜಾನಾತಿ ನಾಧಮಸ್ತತ್ಪರೋ ಜನಃ |
ಧಿಕ್ತಸ್ಯ ಮಾನುಷಂ ದೇಹಂ ವಿಜ್ಞಾನಂ ಕುಲಶೀಲತಾಮ್ || ೧೪ ||
ಹಾಗಾಗಿ, ಗೀತೆಯನ್ನರಿಯದವನಿಗಿಂತ ಹೆಚ್ಚಿನ ಅಧಮನಿಲ್ಲ (ಕೀಳಾದವನಿಲ್ಲ). ಅಂಥವನ ಮನುಷ್ಯದೇಹ/ಜನ್ಮಕ್ಕೂ, ವಿಶೇಷ ಜ್ಞಾನ-ಕುಲ-ಶೀಲಗಳಿಗೂ ಧಿಕ್ಕಾರವಿರಲಿ.
ಗೀತಾರ್ಥಂ ನ ವಿಜಾನಾತಿ ನಾಧಮಸ್ತತ್ಪರೋ ಜನಃ |
ಧಿಕ್ಶರೀರಂ ಶುಭಂ ಶೀಲಂ ವಿಭವಂ ತದ್-ಗೃಹಾಶ್ರಮಮ್ || ೧೫ ||
ಗೀತೆಯ ಅರ್ಥವನ್ನರಿಯದವನಿಗಿಂತ ಅಧಿಕ ಅಧಮನಿಲ್ಲ. ಅಂತಹವನ ಶರೀರಕ್ಕೂ, ಸದಾಚಾರಕ್ಕೂ (ಶುಭಂ ಶೀಲಂ), ವೈಭವಕ್ಕೂ / ಸಂಪತ್ತಿಗೂ / ಕೀರ್ತಿಗೂ, ಆತನ ಗೃಹಸ್ಥಾಶ್ರಮಕ್ಕೂ, ಮನೆಗೂ, ಆಶ್ರಮಕ್ಕೂ ಧಿಕ್ಕಾರವಿರಲಿ.
ಗೀತಾಶಾಸ್ತ್ರಂ ನ ಜಾನಾತಿ ನಾಧಮಸ್ತತ್ಪರೋ ಜನಃ |
ಧಿಕ್ಪ್ರಾರಬ್ಧಂ ಪ್ರತಿಷ್ಠಾಂ ಚ ಪೂಜಾಂ ದಾನಂ ಮಹತ್ತಮಮ್ || ೧೬ ||
ಗೀತಾಶಾಸ್ತ್ರವನ್ನೇ ಯಾವನರಿತಿಲ್ಲವೋ ಅವನಿಗಿಂತ ಕೀಳಾದವನಿಲ್ಲ. ಆತನ ಮಹತ್ತಮವಾದ / ದೊಡ್ಡದಾದ ಪ್ರಾರಬ್ಧಕ್ಕೂ, ಪ್ರತಿಷ್ಠೆ / ಕೀರ್ತಿಗೂ, ಪೂಜೆಗೂ, ದಾನಕ್ಕೂ ಧಿಕ್-ಕಾರ / ಧಿಕ್ ಘೋಷಣೆ / ನಿಂದೆ ಇರಲಿ.
ಗೀತಾಶಾಸ್ತ್ರೇ ಮತಿರ್ನಾಸ್ತಿ ಸರ್ವಂ ತನ್ನಿಷ್ಫಲಂ ಜಗುಃ |
ಧಿಕ್ತಸ್ಯ ಜ್ಞಾನದಾತಾರಂ ವ್ರತಂ ನಿಷ್ಠಾಂ ತಪೋ ಯಶಃ || ೧೭ ||
ಗೀತಾಶಾಸ್ತ್ರದಲ್ಲಿ (ಶಾಸನಾತ್ ಶಾಸ್ತ್ರಮ್— ಇದು ಹೀಗೆಯೇ ಎಂದು ಶಾಸನದಂತೆ ನಿಯಮಮಾಡಿ ಹೇಳುವುದೇ ಶಾಸ್ತ್ರವು) ಯಾವನಿಗೆ ಮನಸ್ಸಿಲ್ಲವೋ ಆತನದೆಲ್ಲವೂ ನಿಷ್ಫಲವೇ ಸರಿ. ಅಂಥವನಿಗೆ ಜ್ಞಾನವಿತ್ತ ಗುರುವಿಗೂ, ಅಂಥವನ ವ್ರತ-ನಿಷ್ಠೆ-ತಪ-ಯಶಸ್ಸುಗಳಿಗೂ ಧಿಕ್ಕಾರ. (ಅಶ್ನುತೇ ವ್ಯಾಪ್ನೋತೀತಿ ಯಶಃ— ವ್ಯಾಪಕವಾಗಿ ಹಬ್ಬುತ್ತಾನೆ ಯಾವುದರಿಂದಲೋ ಅದೇ ಯಶಸ್ಸು / ಕೀರ್ತಿ)
ಗೀತಾರ್ಥಪಠನಂ ನಾಸ್ತಿ ನಾಧಮಸ್ತತ್ಪರೋ ಜನಃ |
ಗೀತಾಗೀತಂ ನ ಯಜ್ಜ್ಞಾನಂ ತದ್ವಿದ್ಧ್ಯಾಸುರಸಂಮತಮ್ || ೧೮ ||
ಗೀತೆಯ ಅರ್ಥವನ್ನು ಓದದವನಿಗಿಂತ ಅಧಮನು ಯಾರೂ ಇಲ್ಲ. ಗೀತೆ ಯಾವುದು? ಅಗೀತೆ ಯಾವುದು? ಎಂಬ ತಿಳುವಳಿಕೆಯಿಲ್ಲದೆ ಗೀತೆಯನ್ನು ಅವಮಾನ ಮಾಡುವುದು ಆಸುರ ಸ್ವಭಾವವೆಂದು ತಿಳಿ.
೪೬. ಗೀತೆಯ ವಿಶೇಷವೇನು?
ತಸ್ಮಾದ್ಧರ್ಮಮಯೀ ಗೀತಾ ಸರ್ವಜ್ಞಾನಪ್ರಯೋಜಿಕಾ |
ಸಾರಾ ಸಾ ಸರ್ವಶಾಸ್ತ್ರಾಣಾಂ ವಿಶುದ್ಧಾಪಿ ವಿಶಿಷ್ಯತೇ || ೧೯ ||
ಹಾಗಾಗಿ ಗೀತೆಯು ಸರ್ವಜ್ಞಾನಮಯವೂ, ಸರ್ವಧರ್ಮಮಯವೂ, ಸರ್ವಶಾಸ್ತ್ರಗಳ ಸಾರವೂ, ವಿಶುದ್ಧವೂ, ವಿಶಿಷ್ಟವೂ ಆಗಿರುವುದು.
೪೭. ಹರಿದಿನಗಳಲ್ಲಿ ಗೀತಾಧ್ಯಯನದ ವಿಶೇಷಫಲವೇನು?
ಯೋऽಧೀತೇ ವಿಷ್ಣುಪರ್ವಾಹ್ನೇ ಗೀತಾಂ ಶ್ರೀಹರಿವಾಸರೇ |
ಸ್ವಪನ್ ಜಾಗ್ರತ್ ಚಲನ್ ತಿಷ್ಠನ್ ಶತ್ರುಭಿರ್ನ ಸ ಹೀಯತೇ || ೨೦ ||
ಯಾವನು ಗೀತೆಯನ್ನು ವಿಷ್ಣುಪರ್ವ / ವಿಷ್ಣುಸಂಬಂಧಿ ಹಬ್ಬ / ಏಕಾದಶಿಯ ದಿನ / ಹರಿವಾಸರದಂದು ಅಧ್ಯಯನ ಮಾಡುವನೋ, ಅವನು ನಿದ್ರಿಸುತ್ತಿರುವಾಗಲೂ ಎಚ್ಚರದಲ್ಲಿರುವಾಗಲೂ ಸಂಚರಿಸುತ್ತಿರುವಾಗಲಾಗಲೀ ಸ್ಥಿರವಾಗಿ ರುವಾಗವಾಗಲೀ ಶತ್ರುಬಾಧೆಗೆ ಒಳಗಾಗನು.
೪೮. ಸ್ಥಿರಸೌಭಾಗ್ಯವನ್ನು ಪಡೆಯಲು ಏನು ಮಾಡಬೇಕು?
ಶಾಲಗ್ರಾಮಶಿಲಾಯಾಂ ವಾ ದೇವಾಗಾರೇ ಶಿವಾಲಯೇ |
ತೀರ್ಥೇ ನದ್ಯಾಂ ಪಠೇದ್ಗೀತಾಂ ಸೌಭಾಗ್ಯಂ ಲಭತೇ ಧ್ರುವಮ್ || ೨೧ ||
ಶಾಲಗ್ರಾಮಶಿಲೆಯ ಸಂನಿಧಾನದಲ್ಲಿ, ದೇವಾಲಯದಲ್ಲಿ, ಶಿವಾಲಯದಲ್ಲಿ, ತೀರ್ಥಕ್ಷೇತ್ರದಲ್ಲಿ, ನದಿಯಲ್ಲಿ / ನದೀತೀರದಲ್ಲಿ ಗೀತೆಯನ್ನು ಪಠಿಸಿದರೆ ನಿಶ್ಚಯವಾಗಿಯೂ ಸ್ಥಿರಸೌಭಾಗ್ಯವನ್ನು ಪಡೆಯುತ್ತಾನೆ.
೪೯. ಕೃಷ್ಣನನ್ನು ಪ್ರಸನ್ನಗೊಳಿಸುವ ಬಗೆ ಹೇಗೆ?
ದೇವಕೀನನ್ದನಃ ಕೃಷ್ಣೋ ಗೀತಾಪಾಠೇನ ತುಷ್ಯತಿ |
ಯಥಾ ವೇದೈರ್ನ ದಾನೇನ ಯಜ್ಞತೀರ್ಥವ್ರತಾದಿಭಿಃ || ೨೨ ||
ವೇದಗಳಿಂದಲೂ, ದಾನ-ಯಜ್ಞ-ತೀರ್ಥಯಾತ್ರೆ-ವ್ರತಾದಿಗಳಿಂದಲೂ ಪ್ರಸನ್ನನಾಗದ ದೇವಕೀಸುತನೂ ದೇವಕಿಗೆ ಸದಾನಂದವನ್ನೀಯುವವನೂ ಆದ ದೇವಕೀನಂದನ, ವಸುದೇವಪುತ್ರ ಸಕಲರಲ್ಲೂ ವಾಸವಾಗಿರುವ ವಾಸುದೇವ ("ವಾಸನಾದ್ ವಾಸುದೇವಸ್ಯ ವಾಸಿತಂ ಭವನತ್ರಯಮ್ | ಸರ್ವಭೂತನಿವಾಸೋऽಸಿ ವಾಸುದೇವ ನಮೋऽಸ್ತು ತೇ ||") ಕೃಷ್ಣನು ಗೀತಾಪಠನ-ಪಾಠನಗಳಿಂದಲೇ ಸುಪ್ರಸನ್ನನಾಗುತ್ತಾನೆ.
೫೦. ಗೀತಾಧ್ಯಯನದ ಫಲವೆಷ್ಟು?
ಗೀತಾಧೀತಾ ಚ ಯೇನಾಪಿ ಭಕ್ತಿಭಾವೇನ ಚೇತಸಾ |
ವೇದಶಾಸ್ತ್ರಪುರಾಣಾನಿ ತೇನಾಧೀತಾನಿ ಸರ್ವಶಃ || ೨೩ ||
ಭಕ್ತಿಭಾವದ ಮನಸ್ಸಿನಿಂದ ಗೀತೆಯು ಯಾವನಿಂದಲಾದರೂ ಅಧ್ಯಯನ ಮಾಡಲ್ಪಡುವುದೋ ಆತನಿಂದ ಎಲ್ಲರೀತಿಯಿಂದಲೂ ಸಕಲ ವೇದ ಶಾಸ್ತ್ರ ಪುರಾಣಗಳೂ ಅಧ್ಯಯನ ಮಾಡಲ್ಪಟ್ಟಂತೆಯೇ ಆಗುವುದು.
೫೧. ಪರಮಸಿದ್ಧಿಯನ್ನು ಹೊಂದಲು ಗೀತೆಯನ್ನು ಎಲ್ಲೆಲ್ಲಿ ಪಠಿಸಬೇಕು?
ಯೋಗಸ್ಥಾನೇ ಸಿದ್ಧಪೀಠೇ ಶಿಲಾಗ್ರೇ ಸತ್ಸಭಾಸು ಚ |
ಯಜ್ಞೇ ಚ ವಿಷ್ಣುಭಕ್ತಾಗ್ರೇ ಪಠನ್ ಸಿದ್ಧಿಂ ಪರಾಂ ಲಭೇತ್ || ೨೪ ||
ಯೋಗಸುಯೋಗವಿರುವಲ್ಲಿ, ಸಿದ್ಧರ ಪೀಠದಲ್ಲಿ, ಶಿಲೆಯ ತುದಿಯಲ್ಲಿ, ಅಂತೆಯೇ ಸಜ್ಜನರ ಸಭೆಯಲ್ಲಿ, ಯಜ್ಞದಲ್ಲಿ ಹಾಗೂ ವಿಷ್ಣು / ದೇವ ಭಕ್ತರ ಮುಂದೆ ಗೀತಾಪಠನ ಮಾಡಿದರೆ ಪರಮಸಿದ್ಧಿಯು ಲಭಿಸುವುದು.
೫೨. ವೈಷ್ಣವೀಯತಂತ್ರಸಾರದ ಪ್ರಕಾರ ಗೀತೆಯ ಮಹಿಮೆಗಳೇನು?
ಗೀತಾಯಾಃ ಶ್ರವಣಂ ಪಾಠಂ ಯಃ ಕರೋತಿ ದಿನೇ ದಿನೇ |
ಕ್ರತವೋ ವಾಜಿಮೇಧಾದ್ಯಾಃ ಕೃತಾಸ್ತೇನ ಸದಕ್ಷಿಣಾಃ || ೨೫ ||
ಯಾವನು ಪ್ರತಿದಿನವೂ ಗೀತೆಯ ಶ್ರವಣವನ್ನೂ ಪಾಠವನ್ನೂ ಮಾಡುತ್ತಾನೋ ಅಂಥವನಿಂದ ದಕ್ಷಿಣೆ ಸಹಿತವಾದ ಅಶ್ವಮೇಧಾದಿ ಮಹಾ ಮಹಾ ಶ್ರೌತಯಾಗಗಳೂ ಕೂಡ ಮಾಡಲ್ಪಟ್ಟಂತೆಯೇ ಸರಿ.
ಯಃ ಶೃಣೋತಿ ಚ ಗೀತಾರ್ಥಂ ಕೀರ್ತಯತ್ಯೇವ ಯಃ ಪರಮ್ |
ಶ್ರಾವಯೇಚ್ಚ ಪರಾರ್ಥಂ ವೈ ಸ ಪ್ರಯಾತಿ ಪರಂ ಪದಮ್ || ೨೬ ||
ಯಾವನು ಗೀತೆಯ ಅರ್ಥವನ್ನು ಶ್ರವಣಮಾಡುತ್ತಾನೋ, ಯಾವ ಮತ್ತೊಬ್ಬನು ಅದನ್ನು ಕೀರ್ತಿಸುತ್ತಾನೋ, ಯಾವನು ಇತರರಿಗೆ ಶ್ರವಣಮಾಡಿಸುತ್ತಾನೋ ಅಂಥವರೆಲ್ಲರೂ ಪರಮಪದವನ್ನೇ ಹೊಂದುತ್ತಾರೆ.
ಗೀತಾಯಾಃ ಪುಸ್ತಕಂ ಶುದ್ಧಂ ಯೋऽರ್ಪಯತ್ಯೇವ ಸಾದರಾತ್ |
ವಿಧಿನಾ ಭಕ್ತಿಭಾವೇನ ತಸ್ಯ ಭಾರ್ಯಾ ಪ್ರಿಯಾ ಭವೇತ್ || ೨೭ ||
ಯಾವನು ಗೀತೆಯ ಶುದ್ಧಪ್ರತಿಯನ್ನು ಪ್ರೀತಿಯಿಂದಲೂ ಭಕ್ತಿಯಿಂದಲೂ ವಿಧಿವತ್ತಾಗಿಯೂ ಇನ್ನೊಬ್ಬನಿಗೆ ಸಮರ್ಪಿಸುತ್ತಾನೋ, ಅವನಿಗೆ ತನ್ನ ಪತ್ನಿಯು ಅನುಕೂಲೆಯಾಗಿರುತ್ತಾಳೆ. "ಬೆಚ್ಚನೆಯ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿವ ಸತಿಯಿರಲು, ಸ್ವರ್ಗಕ್ಕೆ, ಕಿಚ್ಚು ಹಚ್ಚೆಂದ ಸರ್ವಜ್ಞ"— ಎಂಬಂತೆ ತನ್ನ ಮನದಿಂಗಿತಕ್ಕೆ ಸರಿಯಾಗಿ ನಡೆದುಕೊಳ್ಳುವ ಪತ್ನಿ ಸಿಗುವುದು ದುರ್ಲಭವೇ ಸರಿ. ಅಂಥ ಫಲ ಗೀತಾಗ್ರಂಥದಾನದಿಂದಾಗುತ್ತದೆ. ವಿವಾಹಿತರಿಗೆ ಪತ್ನಿಯು ಅನುಕೂಲೆಯಾಗುವಳು; ಅವಿವಾಹಿತರಿಗೆ ಅನೂಕೂಲೆಯಾದವಳೇ ಪತ್ನಿಯಾಗುವಳು.
ಯಶಃ ಸೌಭಾಗ್ಯಮಾರೋಗ್ಯಂ ಲಭತೇ ನಾತ್ರ ಸಂಶಯಃ |
ದಯಿತಾನಾಂ ಪ್ರಿಯೋ ಭೂತ್ವಾ ಪರಮಂ ಸುಖಮಶ್ನುತೇ || ೨೮ ||
ಗೀತೆಯಿಂದ, ಗೀತಾಧ್ಯಯನದಿಂದ, ಗೀತಾಕೃತಿಯ ದಾನದಿಂದ, ಕೀರ್ತಿ, ಸೌಭಾಗ್ಯ, ಆರೋಗ್ಯಗಳನ್ನು ಪಡೆಯುವುದರಲ್ಲಿ ಸಂಶಯವಿಲ್ಲ. ಪತ್ನಿಯರಿಗೆ ಅತ್ಯಂತ ಪ್ರಿಯತಮನಾಗಿ ಪರಮಸುಖವನ್ನೂ ಹೊಂದುವನು.
೫೩. ಗೀತೆಯಿಂದ ಎಂಥೆಂಥ ತೊಂದರೆಗಳು ಪರಿಹಾರವಾಗುತ್ತವೆ?
ಅಭಿಚಾರೋದ್ಭವಂ ದುಃಖಂ ವರಶಾಪಾಗತಂ ಚ ಯತ್ |
ನೋಪಸರ್ಪತಿ ತತ್ರೈವ ಯತ್ರ ಗೀತಾರ್ಚನಂ ಗೃಹೇ || ೨೯ ||
ಮಾಟ, ಮಂತ್ರ, ಅಭಿಚಾರಾದಿಗಳಿಂದ ಉಂಟಾದ ದುಃಖ ಹಾಗೂ ವರ-ಶಾಪಾದಿಗಳಿಂದ ಉಂಟಾದ ಕಷ್ಟ— ಇವುಗಳು, ಯಾವ ಮನೆಯಲ್ಲಿ ಗೀತೆಗೆ ಗೌರವಾದರಗಳು ಸಿಗುತ್ತಿವೆಯೋ ಅಲ್ಲಿ, ಎಷ್ಟು ಮಾತ್ರಕ್ಕೂ ಬಳಿ ಸುಳಿಯಲಾರವು.
ತಾಪತ್ರಯೋದ್ಭವಾ ಪೀಡಾ ನೈವ ವ್ಯಾಧಿರ್ಭವೇತ್ ಕ್ವಚಿತ್ |
ನ ಶಾಪೋ ನೈವ ಪಾಪಂ ಚ ದುರ್ಗತಿಂ ನರಕಂ ನ ಚ || ೩೦ ||
ಆಧ್ಯಾತ್ಮಿಕ, ಆಧಿದೈವಿಕ ಹಾಗೂ ಆಧಿಭೌತಿಕವೆಂಬ ತಾಪತ್ರಯದಿಂದ ಪೀಡೆಯಾಗಲೀ / ತೊಂದರೆಯಾಗಲೀ ಉಂಟಾಗದು. ಯಾವುದೇ ಆಧಿ (ಮಾನಸಿಕ)-ವ್ಯಾಧಿ(ದೈಹಿಕ) ರೋಗಗಳು ಎಂದಿಗೂ ಬಾರವು. ಯಾವುದೇ ಶಾಪ, ಪಾಪ, ದುರ್ಗತಿ, ನರಕಗಳೂ ಗೀತಾಧ್ಯಾಯಿಗಿಲ್ಲ.
ವಿಸ್ಫೋಟಕಾದಯೋ ದೇಹೇ ನ ಬಾಧನ್ತೇ ಕದಾಚನ |
ಲಭೇತ್ ಕೃಷ್ಣಪದೇ ದಾಸ್ಯಂ ಭಕ್ತಿಂ ಚಾವ್ಯಭಿಚಾರಿಣೀಮ್ || ೩೧ ||
ವಿಸ್ಫೋಟಕಾದಿಗಳೂ ಕೂಡ ಎಂದಿಗೂ ಅಂಥವರ ದೇಹದಲ್ಲಿ ಯಾವುದೇ ಬಾಧೆಯುಂಟುಮಾಡವು. ಕೃಷ್ಣಪದದಲ್ಲಿ / ಪರಮಾತ್ಮನಲ್ಲಿ ಎಡೆಬಿಡದ ದಾಸಭಾವ, ಭಕ್ತಿಗಳನ್ನು ಪಡೆಯುವರು.
ಜಾಯತೇ ಸತತಂ ಸಖ್ಯಂ ಸರ್ವಜೀವಗಣೈಃ ಸಹ |
ಪ್ರಾರಬ್ಧಂ ಭುಞ್ಜತೋ ವಾಪಿ ಗೀತಾಭ್ಯಾಸರತಸ್ಯ ಚ ||
ಸ ಮುಕ್ತಃ ಸ ಸುಖೀ ಲೋಕೇ ಕರ್ಮಣಾ ನೋಪಲಿಪ್ಯತೇ || ೩೨ ||
ನಿತ್ಯ ಗೀತಾಧ್ಯಾಯಿಗೆ ಸಮಸ್ತ ಜೀವಸಮೂಹಗಳೊಂದಿಗೆ ಮಿತ್ರತ್ವವು ಸಿದ್ಧಿಸುವುದು. ಅಂಥವನು ತನ್ನ ಪ್ರಾರಬ್ಧವನ್ನು ಉಣ್ಣುತ್ತಿದ್ದರೂ, ಯಾವುದೇ ಕರ್ಮಗಳು ಆತನಿಗೆ ಅಂಟದು; ಆತನೇ ಮುಕ್ತನು; ಲೋಕದಲ್ಲಿ ಹೆಚ್ಚಿನ ಸುಖಿಯು.
ಮಹಾಪಾಪಾತಿಪಾಪಾನಿ ಗೀತಾಧ್ಯಾಯೀ ಕರೋತಿ ಚೇತ್ |
ನ ಕಿಞ್ಚಿತ್ ಸ್ಪೃಶ್ಯತೇ ತಸ್ಯ ನಲಿನೀದಲಮಮ್ಭಸಾ || ೩೩ ||
ಮಹಾಪಾಪಗಳನ್ನೋ, ಅತಿಯಾದ ಪಾತಕಗಳನ್ನೋ ಗೀತಾಧ್ಯಾಯಿಯು ಒಂದೊಮ್ಮೆ ಮಾಡಿದ್ದರೂ, ಕಮಲದೆಲೆಗೆ ನೀರು ಅಂಟದಂತೆಯೇ, ಆತನಿಗೂ ಸ್ವಲ್ಪವೂ ಪಾಪಲೇಪವಾಗದು.
ಅನಾಚಾರೋದ್ಭವಂ ಪಾಪಮವಾಚ್ಯಾದಿಕೃತಂ ಚ ಯತ್ |
ಅಭಕ್ಷ್ಯಭಕ್ಷಜಂ ದೋಷಮಸ್ಪೃಶ್ಯಸ್ಪರ್ಶಜಂ ತಥಾ || ೩೪ ||
ಮಾಡಬಾರದ್ದನ್ನು ಮಾಡಿದ್ದರಿಂದಾದ ಪಾಪವೂ, ಹೇಳಬಾರದ್ದನ್ನು ಹೇಳಿದ್ದರಿಂದಾದ ಪಾಪವೂ, ತಿನ್ನಬಾರದ್ದನ್ನು ತಿಂದುಂಟಾದ ದೋಷವೂ, ಹಾಗೆಯೇ, ಮುಟ್ಟಬಾರದ್ದನ್ನು ಮುಟ್ಟಿದ್ದರಿಂದಾದ ದೋಷವೂ,
ಜ್ಞಾನಾಜ್ಞಾನಕೃತಂ ನಿತ್ಯಮಿನ್ದ್ರಿಯೈರ್ಜನಿತಂ ಚ ಯತ್ |
ತತ್ಸರ್ವಂ ನಾಶಮಾಯಾತಿ ಗೀತಾಪಾಠೇನ ತತ್ಕ್ಷಣಾತ್ || ೩೫ ||
ದಿನದಿನವೂ ತಿಳಿದೋ ತಿಳಿಯದೆಯೋ ಕರ್ಮೇಂದ್ರಿಯಗಳಿಂದಲೋ ಜ್ಞಾನೇಂದ್ರಿಯಗಳಿಂದಲೋ ಕಾಯೇನ ವಾಚಾ ಮನಸಾ ಮಾಡಿದ ಪಾಪಗಳೆಲ್ಲ ಗೀತಾ ಪಠನದಿಂದ ಆ ಕ್ಷಣದಲ್ಲೇ ನಾಶಹೊಂದುವುವು.
ಸರ್ವತ್ರ ಪ್ರತಿಭೋಕ್ತಾ ಚ ಪ್ರತಿಗೃಹ್ಯ ಚ ಸರ್ವಶಃ |
ಗೀತಾಪಾಠಂ ಪ್ರಕುರ್ವಾಣೋ ನ ಲಿಪ್ಯೇತ ಕದಾಚನ || ೩೬ ||
ಎಲ್ಲೆಡೆಯಲ್ಲೂ ಕೊಟ್ಟದ್ದನ್ನು ಭುಂಜಿಸುವವನೂ, ಎಲ್ಲರಿಂದಲೂ ದಾನ ಪಡೆಯುವವನೂ, ಗೀತಾಪಠನವನ್ನು ಚೆನ್ನಾಗಿ ಮಾಡುವವನಾದರೆ ಎಂದಿಗೂ ಆತನಿಗಾವುದರ ಲೇಪವೂ ಇಲ್ಲ.
ರತ್ನಪೂರ್ಣಾಂ ಮಹೀಂ ಸರ್ವಾಂ ಪ್ರತಿಗೃಹ್ಯಾವಿಧಾನತಃ |
ಗೀತಾಪಾಠೇನ ಚೈಕೇನ ಶುದ್ಧಸ್ಫಟಿಕವತ್ ಸದಾ || ೩೭ ||
ರತ್ನಗರ್ಭೆಯಾದ ಸಮಗ್ರ ವಸುಂಧರೆಯನ್ನೇ ಅವಿಧಿಪೂರ್ವಕವಾಗಿ ದಾನ ಪಡೆದರೂ, ಒಂದು ಸಲ ಪೂರ್ತಿ ಗೀತೆಯನ್ನೋದಿದರೆ ಶುದ್ಧಸ್ಫಟಿಕವು ಹೇಗೋ ಹಾಗೆಯೇ ಆತನಿಗಾವ ಪಾಪಲೇಪವಿರದೆ ಪರಿಶುದ್ಧನಾಗುವನು.
೫೪. ಶ್ರದ್ಧಾಪೂರ್ವಕ ಗೀತಾಧ್ಯಯನದಿಂದ ಯಾವ ಫಲವನ್ನು ಪಡೆಯಬಹುದು?
ಯಸ್ಯಾನ್ತಃಕರಣಂ ನಿತ್ಯಂ ಗೀತಾಯಾಂ ರಮತೇ ಸದಾ |
ಸ ಸಾಗ್ನಿಕಃ ಸದಾ ಜಾಪೀ ಕ್ರಿಯಾವಾನ್ ಸ ಚ ಪಣ್ಡಿತಃ || ೩೮ ||
ಯಾವನ ಅಂತಃಕರಣವು ನಿತ್ಯವೂ ಗೀತೆಯಲ್ಲೇ ಸದಾ ರಮಿಸುತ್ತಿರುವುದೋ ಅವನೇ ನಿಜವಾಗಿ ನಿತ್ಯಾಗ್ನಿಹೋತ್ರಿಯು, ನಿತ್ಯಜಪನಿರತನು, ನಿತ್ಯ ಕ್ರಿಯಾವಂತನು ಹಾಗೂ ಅವನೇ ಪಂಡಿತನು / ಜ್ಞಾನಿಯು.
ಧನವಾನ್ ದರ್ಶನೀಯಶ್ಚ ಸ ಯೋಗೀ ಜ್ಞಾನವಾನಪಿ |
ಸ ಏವ ಯಾಜ್ಞಿಕೋ ಯಾಜೀ ಸರ್ವವೇದಾರ್ಥದರ್ಶಕಃ || ೩೯ ||
ಅಂಥವನೇ ಧನಿಕನೂ, ಸುಂದರನೂ, ಯೋಗಿಯೂ ಜ್ಞಾನವಂತನೂ, ಯಾಜ್ಞಿಕನೂ, ಯಾಜಿಯೂ / ಯಾಗಾನುಷ್ಠಾತೃವೂ, ಸಕಲ ವೇದಾರ್ಥಗಳನ್ನು ಕಂಡವನೂ ಆಗಿರುವನು.
ಗೀತಾಯಾಃ ಪುಸ್ತಕಂ ಯತ್ರ ನಿತ್ಯಪಾಠಶ್ಚ ವರ್ತತೇ |
ತತ್ರ ಸರ್ವಾಣಿ ತೀರ್ಥಾನಿ ಪ್ರಯಾಗಾದೀನಿ ಭೂತಲೇ || ೪೦ ||
ಎಲ್ಲಿ ಗೀತಾಗ್ರಂಥವಿದೆಯೋ, ಗೀತೆಯ ನಿತ್ಯಪಾಠವು ನಡೆಯುವುದೋ ಅಂತಹ ಭೂಭಾಗದಲ್ಲಿ ಪ್ರಯಾಗವೇ ಮೊದಲಾದ ಎಲ್ಲ ಪವಿತ್ರ ತೀರ್ಥಗಳೂ ನೆಲೆಸಿರುವುವು.
ನಿವಸನ್ತಿ ಸದಾ ದೇಹೇ ದೇಹಶೇಷೇऽಪಿ ಸರ್ವದಾ |
ಸರ್ವೇऽಪಿ ಮುನಯೋ ದೇವಾ ಯೋಗಿನೋ ದೇಹರಕ್ಷಕಾಃ || ೪೧ ||
ನಿತ್ಯ ಗೀತಾಧ್ಯಾಯಿಯ ದೇಹದಲ್ಲಿಯೂ ದೇಹದ ಭಾಗದಲ್ಲಿಯೂ ಎಲ್ಲ ಮುನಿಗಳೂ, ದೇವತೆಗಳೂ, ಯೋಗಿಗಳೂ ದೇಹರಕ್ಷಕರಾಗಿ ವಾಸವಾಗಿರುವರು.
ಗೋಪಾಲೋ ಬಾಲಕೃಷ್ಣೋऽಪಿ ನಾರದ-ಧ್ರುವ-ಪಾರ್ಷದೈಃ |
ಸಹಾಯೋ ಜಾಯತೇ ಶೀಘ್ರಂ ಯತ್ರ ಗೀತಾ ಪ್ರವರ್ತತೇ || ೪೨ ||
ಗೋಪಾಲನು ಬಾಲಕೃಷ್ಣನಾದರೂ, ಎಲ್ಲಿ ಗೀತಾಧ್ಯಯನ ನಡೆಯುತ್ತಿರುವುದೋ ಅಲ್ಲಿ ನಾರದ, ಧ್ರುವ, ಹರಿಪಾರ್ಷದರೊಂದಿಗೆ ಬೇಗನೆ ಸಹಾಯಕರಾಗುವರು.
ಯತ್ರ ಗೀತಾವಿಚಾರಶ್ಚ ಪಠನಂ ಪಾಠನಂ ತಥಾ |
ಶ್ರೀಕೃಷ್ಣೋ ಭಗವಾಂಸ್ತತ್ರ ಮೋದತೇ ರಾಧಯಾ ಸಹ || ೪೩ ||
ಎಲ್ಲಿ ಗೀತೆಯ ಮಂಥನವೂ, ಪಠನ, ಪಾಠನವೂ ನಡೆಯುತ್ತಿರುವುದೋ ಅಲ್ಲಿ ಭಗವಾನ್ ಶ್ರೀಕೃಷ್ಣನು ತನ್ನ ಶಕ್ತಿಯಾದ ರಾಧಾದೇವಿಯೊಂದಿಗೆ ಆನಂದದಿಂದಿರುತ್ತಾನೆ.
೫೫. ಪರಮಾತ್ಮನ ದೃಷ್ಟಿಯಲ್ಲಿ ಗೀತೆಯ ಸ್ಥಾನ, ಮಹಿಮೆಗಳೇನು?
ಶ್ರೀಭಗವಾನುವಾಚ |
ಗೀತಾ ಮೇ ಹೃದಯಂ ಪಾರ್ಥ ಗೀತಾ ಮೇ ಸಾರಮುತ್ತಮಮ್ |
ಗೀತಾ ಮೇ ಜ್ಞಾನಮತ್ಯುಗ್ರಂ ಗೀತಾ ಮೇ ಜ್ಞಾನಮವ್ಯಯಮ್ || ೪೪ ||
ಶ್ರೀಭಗವಂತನು ಹೇಳಿದ್ದನು—
ಹೇ ಪಾರ್ಥನೆ! ಗೀತೆಯು ನನ್ನ ಹೃದಯವಾಗಿದೆ. ಗೀತೆಯು ನನಗೆ ಉತ್ತಮವಾದ ಸಾರತತ್ತ್ವವಾಗಿದೆ. ಗೀತೆಯು ನನ್ನ ಅತಿ ತೀಕ್ಷ್ಣವಾದ ಉಜ್ಜ್ವಲವಾದ ಜ್ಞಾನವಾಗಿದೆ. ಗೀತೆಯು ನನ್ನ ಅವ್ಯಯವಾದ, ಎಂದಿಗೂ ಕುಂದಿರದ ಜ್ಞಾನವಾಗಿದೆ.
ಗೀತಾ ಮೇ ಚೋತ್ತಮಂ ಸ್ಥಾನಂ ಗೀತಾ ಮೇ ಪರಮಂ ಪದಮ್ |
ಗೀತಾ ಮೇ ಪರಮಂ ಗುಹ್ಯಂ ಗೀತಾ ಮೇ ಪರಮೋ ಗುರುಃ || ೪೫ ||
ಗೀತೆಯು ನನಗೆ ಇರಲು ಉತ್ತಮವಾದ ಸ್ಥಾನವಾಗಿದೆ. ಗೀತೆಯು ನನಗೆ ಪರಮಪದವಾಗಿದೆ. ಗೀತೆಯು ನನ್ನ ಅತ್ಯಂತ ಗುಹ್ಯರಹಸ್ಯವು. ಗೀತೆಯು ನನಗೆ ಪರಮಗುರುವು.
ಗೀತಾಶ್ರಯೇऽಹಂ ತಿಷ್ಠಾಮಿ ಗೀತಾ ಮೇ ಪರಮಂ ಗೃಹಮ್ |
ಗೀತಾಜ್ಞಾನಂ ಸಮಾಶ್ರಿತ್ಯ ತ್ರಿಲೋಕೀಂ ಪಾಲಯಾಮ್ಯಹಮ್ || ೪೬ ||
ನಾನು ಗೀತೆಯನ್ನಾಶ್ರಯಿಸಿರುತ್ತೇನೆ. ಗೀತೆಯು ನನಗೆ ಶ್ರೇಷ್ಠವಾದ ಮನೆಯು. ಗೀತಾಜ್ಞಾನವನ್ನು ಚೆನ್ನಾಗಿ ಆಶ್ರಯಿಸಿಕೊಂಡು ನಾನು ಮೂರೂ ಲೋಕಗಳನ್ನು ಪಾಲಿಸುತ್ತೇನೆ, ರಕ್ಷಿಸುತ್ತೇನೆ.
ಗೀತಾ ಮೇ ಪರಮಾ ವಿದ್ಯಾ ಬ್ರಹ್ಮರೂಪಾ ನ ಸಂಶಯಃ |
ಅರ್ಧಮಾತ್ರಾಕ್ಷರಾ ನಿತ್ಯಮನಿರ್ವಾಚ್ಯಪದಾತ್ಮಿಕಾ || ೪೭ ||
ಗೀತೆಯು ನನಗೆ ಶ್ರೇಷ್ಠ ವಿದ್ಯೆಯು; ಬ್ರಹ್ಮರೂಪವಾದುದು; ಸಂಶಯವಿಲ್ಲ. ಗೀತೆಯು ನನಗೆ ಪರಬ್ರಹ್ಮವಿದ್ಯೆಯು. ಇದರ ಅರ್ಧಮಾತ್ರಾಕಾಲದ ಅಕ್ಷರವಾದರೂ ನಿತ್ಯಪಠನದಿಂದ ನಿತ್ಯವೂ ಅನಿರ್ವಚನೀಯವಾದುದೂ ಬಣ್ಣಿಸಲಸದಳವಾದುದೂ ಆದ ಪರಮಪದವನ್ನು ಕೊಡುವುದಾಗಿರುವುದು.
೫೬. ಪುಣ್ಯತಮವೂ, ಪಾಪಹರವೂ, ಮುಕ್ತಿಪ್ರದವೂ ಆದ ನಾಮಗಳಾವುವು?
ಗೀತಾನಾಮಾನಿ ವಕ್ಷ್ಯಾಮಿ ಗುಹ್ಯಾನಿ ಶೃಣು ಪಾಣ್ಡವ |
ಕೀರ್ತನಾತ್ ಸರ್ವಪಾಪಾನಿ ವಿಲಯಂ ಯಾನ್ತಿ ತತ್ಕ್ಷಣಾತ್ || ೪೮ ||
ಹೇ ಪಾಂಡುಪುತ್ರನಾಗಿ ಪಾಂಡವನೆನಿಸಿದ ಅರ್ಜುನನೆ! ರಹಸ್ಯವಾದ ಗೀತೆಯ ವಿವಿಧ ಹೆಸರುಗಳನ್ನು ಹೇಳುವೆನು, ಕೇಳು. ಇವುಗಳ ನಾಮಸಂಕೀರ್ತನೆಯಿಂದ ಸಕಲ ಪಾಪಗಳೂ ಆ ಕ್ಷಣದಿಂದಲೇ ನಾಶಹೊಂದುವುವು.
ಗಙ್ಗಾ ಗೀತಾ ಚ ಸಾವಿತ್ರೀ ಸೀತಾ ಸತ್ಯಾ ಪತಿವ್ರತಾ |
ಬ್ರಹ್ಮಾವಲಿರ್ಬ್ರಹ್ಮವಿದ್ಯಾ ತ್ರಿಸನ್ಧ್ಯಾ ಮುಕ್ತಗೇಹಿನೀ || ೪೯ ||
ಗಂಗಾ, ಗೀತಾ, ಸಾವಿತ್ರೀ (ಸವಿತೃಗಾಯತ್ರೀಮಂತ್ರ), ಸೀತಾ, ಸತ್ಯಸ್ವರೂಪಿಣಿಯಾದ / ಸತ್ಯವಾನನ ಪತ್ನಿಯಾದ ಪತಿವ್ರತೆ (ಸಾವಿತ್ರಿ), ಬ್ರಹ್ಮಜ್ಞರ ಪಂಕ್ತಿ, ಬ್ರಹ್ಮಾತ್ಮವಿದ್ಯೆ ಮತ್ತು ಪ್ರಾತಃ(ಪೂರ್ವಾಹ್ಣ)-ಮಧ್ಯಾಹ್ನ-ಸಾಯಂ(ಸಾಯಾಹ್ನ) ಎಂಬ ಮೂರು ಸಂಧ್ಯಾಕಾಲಗಳು ಮುಕ್ತಿಯ ಮನೆಗಳು / ಆಶ್ರಯಸ್ಥಾನಗಳು.
೫೭. ಗೀತೆಯ ಎಷ್ಟೆಷ್ಟು ಭಾಗಕ್ಕೆ ಏನೇನು ಫಲಗಳಿವೆ?
ಅರ್ಧಮಾತ್ರಾ ಚಿದಾನನ್ದಾ ಭವಘ್ನೀ ಭ್ರಾನ್ತಿನಾಶಿನೀ |
ವೇದತ್ರಯೀ ಪರಾನನ್ದಾ ತತ್ತ್ವಾರ್ಥಜ್ಞಾನಮಞ್ಜರೀ || ೫೦ ||
ಗೀತೆಯ ಅರ್ಧಮಾತ್ರೆಯೂ ಕೂಡ ಚಿದಾನಂದ (ಚಿತ್ + ಆನಂದ) / ಜ್ಞಾನಾನಂದಸ್ವರೂಪಿಣಿಯು, ಭವಸಾಗರವನ್ನು ನಿವಾರಿಸಬಲ್ಲದ್ದು, ಅಜ್ಞಾನಭ್ರಾಂತಿನಿವಾರಿಣಿಯು, ಋಗ್ಯಜುಸ್ಸಾಮರೂಪೀ ಮೂರು ತೆರನಾದ ಮಂತ್ರಗಳಿಂದಾಗಿಯೂ, ಸಂಹಿತಾ-ಬ್ರಾಹ್ಮಣ-ಆರಣ್ಯಕೋಪನಿಷತ್ ಎಂಬ ಮೂರು ವಿಭಾಗಗಳಿಂದಾಗಿಯೂ ತ್ರಯೀ ಎನಿಸಿದ ನಾಲ್ಕಾಗಿ ತೋರುವ ಸಮಗ್ರವೇದಸ್ವರೂಪಿಣಿಯೂ, ಪರಮಾನಂದ(ಬ್ರಹ್ಮಾನಂದ, ಆತ್ಮಾನಂದ, ಶಾಶ್ವತಾನಂದ, ಸಚ್ಚಿದಾನಂದ)ಸ್ವರೂಪಿಣಿಯೂ, ಪರತತ್ತ್ವದ ಅರ್ಥಜ್ಞಾನವೆಂಬ ಮುತ್ತುಗಳ ಅಥವಾ ಮೊಗ್ಗುಗಳ ಸಮೂಹವೂ / ಲತೆಯೂ / ಸರಣಿಯೂ ಆಗಿರುವುದೀ ಭಗವದ್ಗೀತೆ.
ಇತ್ಯೇತಾನಿ ಜಪೇನ್ನಿತ್ಯಂ ನರೋ ನಿಶ್ಚಲಮಾನಸಃ |
ಜ್ಞಾನಸಿದ್ಧಿಂ ಲಭೇನ್ನಿತ್ಯಂ ತಥಾನ್ತೇ ಪರಮಂ ಪದಮ್ || ೫೧ ||
ಈ ರೀತಿಯಾಗಿ ಮನುಷ್ಯನು ಅಚಲವಾದ ಅಲುಗಾಡದೆ ಸ್ಥಿರವಾದ ಅಚಂಚಲ ಮನಸ್ಸಿನಿಂದ ನಿತ್ಯವೂ ಗೀತೆಯನ್ನು ಅರ್ಥಸಹಿತ ಜಪಿಸಿದರೆ ನಿತ್ಯವಾದ ಶಾಶ್ವತವಾದ ಬ್ರಹ್ಮಾತ್ಮಜ್ಞಾನಸಿದ್ಧಿಯನ್ನು ಪಡೆದು, ಕೊನೆಗೆ ಪರಮಪದವನ್ನೇ ಹೊಂದುವನು.
ಪಾಠೇऽಸಮರ್ಥಃ ಸಮ್ಪೂರ್ಣೇ ತದರ್ಧಂ ಪಾಠಮಾಚರೇತ್ |
ತದಾ ಗೋದಾನಜಂ ಪುಣ್ಯಂ ಲಭತೇ ನಾತ್ರ ಸಂಶಯಃ || ೫೨ ||
ಗೀತೆಯನ್ನು ಪೂರ್ತಿಯಾಗಿ ಪಠನಮಾಡಲಸಾಧ್ಯವಾದಲ್ಲಿ ಅದರರ್ಧವನ್ನಾದರೂ ಓದಬೇಕು. ಆಗ ಗೋದಾನದ ಫಲ ಬರುವುದು, ಸಂಶಯವಿಲ್ಲ.
ತ್ರಿಭಾಗಂ ಪಠಮಾನಸ್ತು ಸೋಮಯಾಗಫಲಂ ಲಭೇತ್ |
ಷಡಂಶಂ ಜಪಮಾನಸ್ತು ಗಂಗಾಸ್ನಾನಫಲಂ ಲಭೇತ್ || ೫೩ ||
ಗೀತೆಯ ಮೂರನೇ ಒಂದು ಭಾಗವನ್ನೋದಿದರೆ ಸೋಮಯಾಗದ ಫಲವನ್ನೂ, ಆರರಲ್ಲಿ ಒಂದಂಶವನ್ನು ಪಠಿಸಿದರೆ ಗಂಗಾಸ್ನಾನದ ಫಲವನ್ನೂ ಪಡೆಯುವನು.
ತಥಾಧ್ಯಾಯದ್ವಯಂ ನಿತ್ಯಂ ಪಠಮಾನೋ ನಿರನ್ತರಮ್ |
ಇನ್ದ್ರಲೋಕಮವಾಪ್ನೋತಿ ಕಲ್ಪಮೇಕಂ ವಸೇದ್ಧ್ರುವಮ್ || ೫೪ ||
ಹಾಗೆಯೇ, ಗೀತೆಯ ಎರಡೆರಡಧ್ಯಾಯಗಳನ್ನು ನಿತ್ಯವೂ ನಿರಂತರವೂ ಪಠಿಸುವವನು ಮರಣಾನಂತರ ದೇವೇಂದ್ರನ ಲೋಕವಾದ ಸ್ವರ್ಗವನ್ನು ಪಡೆದು, ಅಲ್ಲಿ ೧ ಬ್ರಾಹ್ಮಕಲ್ಪ (೨೦೦೦ ಚತುರ್ಯುಗಗಳ) ಕಾಲ ಸ್ಥಿರವಾಗಿ ವಾಸವಾಗಿರುವನು.
ಏಕಮಧ್ಯಾಯಕಂ ನಿತ್ಯಂ ಪಠತೇ ಭಕ್ತಿಸಂಯುತಃ |
ರುದ್ರಲೋಕಮವಾಪ್ನೋತಿ ಗಣೋ ಭೂತ್ವಾ ವಸೇಚ್ಚಿರಮ್ || ೫೫ ||
ನಿತ್ಯವೂ ಗೀತೆಯ ೧ ಅಧ್ಯಾಯವನ್ನನ ಭಕ್ತಿಯಿಂದ ಪಠಿಸುವವನು ರುದ್ರಲೋಕವನ್ನು ಹೊಂದಿ ಅಲ್ಲಿನ ಗಣವಾಗಿ ಚಿರಕಾಲ ವಾಸವಾಗಿರುವನು.
ಅಧ್ಯಾಯಾರ್ಧಂ ಚ ಪಾದಂ ವಾ ನಿತ್ಯಂ ಯಃ ಪಠತೇ ಜನಃ |
ಪ್ರಾಪ್ನೋತಿ ರವಿಲೋಕಂ ಸ ಮನ್ವನ್ತರಸಮಾಃ ಶತಮ್ || ೫೬ ||
ಗೀತೆಯ ೧ ಅಧ್ಯಾಯದ ಅರ್ಧವನ್ನೋ, ಕಾಲುಭಾಗವನ್ನೋ ನಿತ್ಯವೂ ಯಾವ ಮನುಜನು ಪಠಿಸುವನೋ ಅವನು ೧೦೦ ಮನ್ವಂತರ (೭೧ ಚತುರ್ಯುಗಕ್ಕೆ ೧ ಮನ್ವಂತರ) ಕಾಲ ಸೂರ್ಯಲೋಕವನ್ನು ಪಡೆಯುವನು.
ಗೀತಾಯಾಃ ಶ್ಲೋಕದಶಕಂ ಸಪ್ತ ಪಞ್ಚ ಚತುಷ್ಟಯಮ್ |
ತ್ರಿದ್ವ್ಯೇಕಮರ್ಧಮಥವಾ ಶ್ಲೋಕಾನಾಂ ಯಃ ಪಠೇನ್ನರಃ ||
ಚನ್ದ್ರಲೋಕಮವಾಪ್ನೋತಿ ವರ್ಷಾಣಾಮಯುತಂ ತಥಾ || ೫೭ ||
ಗೀತೆಯ ೧೦ ಶ್ಲೋಕಗಳನ್ನೋ, ಏಳನ್ನೋ, ಐದನ್ನೋ, ನಾಲ್ಕನ್ನೋ, ಮೂರು ಎರಡು ಒಂದು ಅಥವಾ ಅರ್ಧಶ್ಲೋಕವನ್ನೋ ಯಾವ ಮನುಷ್ಯನು ದಿನವೂ ಪಠಿಸುವನೋ ಅವನು ಮರಣಾನಂತರ ೧೦,೦೦೦ ವರ್ಷಗಳ ಕಾಲ ಚಂದ್ರಲೋಕವನ್ನು ಹೊಂದುವನು.
ಗೀತಾರ್ಧಮೇಕಪಾದಂ ಚ ಶ್ಲೋಕಮಧ್ಯಾಯಮೇವ ಚ |
ಸ್ಮರಂಸ್ತ್ಯಕ್ತ್ವಾ ಜನೋ ದೇಹಂ ಪ್ರಯಾತಿ ಪರಮಂ ಪದಮ್ || ೫೮ ||
ಗೀತೆಯ ಅರ್ಧಭಾಗವನ್ನೋ ಕಾಲುಭಾಗವನ್ನೋ ೧ ಅಧ್ಯಾಯ ಅಥವಾ ಕಡೆಗೆ ೧ ಶ್ಲೋಕವನ್ನಾದರೂ ಯಾವ ವ್ಯಕ್ತಿಯು ಸ್ಮರಣೆ ಮಾಡುತ್ತಾ ದೇಹತ್ಯಾಗ ಮಾಡುತ್ತಾನೋ ಅಂಥವನು ಪರಮಪದವನ್ನೇ ಹೊಂದುವನು.
೫೮. ಮರಣಕಾಲದಲ್ಲಿ ಗೀತೆಯ ಫಲವೇನು?
ಗೀತಾರ್ಥಮಪಿ ಪಾಠಂ ವಾ ಶೃಣುಯಾದನ್ತಿಮೇ ದಿನೇ |
ಮಹಾಪಾತಕಯುಕ್ತೋऽಪಿ ಮುಕ್ತಿಭಾಗೀ ಭವೇಜ್ಜನಃ || ೫೯ ||
ಗೀತೆಯ ಅರ್ಥವನ್ನೋ ಪಠನವನ್ನೋ ತನ್ನ ಬದುಕಿನ ಕೊನೆಯ ದಿನ ಕೇಳುವ ಮನುಷ್ಯನು ಮಹಾಪಾಪಿಯಾದರೂ ಮುಕ್ತಿಗೆ ಯೋಗ್ಯನಾಗುತ್ತಾನೆ.
ಗೀತಾಪುಸ್ತಕಸಂಯುಕ್ತಃ ಪ್ರಾಣಾಂಸ್ತ್ಯಕ್ತ್ವಾ ಪ್ರಯಾತಿ ಯಃ |
ಸ ವೈಕುಣ್ಠಮವಾಪ್ನೋತಿ ವಿಷ್ಣುನಾ ಸಹ ಮೋದತೇ || ೬೦ ||
ಗೀತೆಯ ಪುಸ್ತಕವನ್ನು ಹಿಡಿದುಕೊಂಡು ಯಾವನು ಪ್ರಾಣ ಬಿಡುತ್ತಾನೋ ಅವನು ವೈಕುಂಠವನ್ನು ಹೊಂದಿ ವಿಷ್ಣುವಿನೊಂದಿಗೆ ಆನಂದವನ್ನು ಹೊಂದುತ್ತಾನೆ.
ಗೀತಾಧ್ಯಾಯಸಮಾಯುಕ್ತೋ ಮೃತೋ ಮಾನುಷತಾಂ ವ್ರಜೇತ್ |
ಗೀತಾಭ್ಯಾಸಂ ಪುನಃ ಕೃತ್ವಾ ಲಭತೇ ಮುಕ್ತಿಮುತ್ತಮಾಮ್ || ೬೧ ||
ಗೀತೇತ್ಯುಚ್ಚಾರಸಂಯುಕ್ತೋ ಮ್ರಿಯಮಾಣೋ ಗತಿಂ ಲಭೇತ್ || ೬೨ ||
ಗೀತಾಧ್ಯಯನ ಮಾಡುತ್ತಾ ಮೃತನಾದರೆ ಮುಂದಿನ ಜನ್ಮದಲ್ಲಿ ಮನುಷ್ಯತ್ವವನ್ನು ಹೊಂದುವ ಪುಣ್ಯವನ್ನು ಗಳಿಸುತ್ತಾನೆ. ಗೀತೆಯ ಅಭ್ಯಾಸವನ್ನು ಮತ್ತೆ ಮತ್ತೆ (ಮರುಜನ್ಮದಲ್ಲೂ) ಮಾಡಿ ಉತ್ತಮವಾದ ಮುಕ್ತಿಯನ್ನೇ ಹೊಂದುವನು. ಗೀತೆ ಎಂದು ಹೇಳುತ್ತಾ ಸತ್ತರೆ ಉತ್ತಮ ಗತಿಯು ದೊರಕುತ್ತದೆ.
೫೯. ಗೀತೆಯಿಂದ ನಾವು ಮಾಡುವ ಕರ್ಮಗಳ ಮೇಲಿನ ಫಲವೇನು?
ಯದ್ಯತ್ಕರ್ಮ ಚ ಸರ್ವತ್ರ ಗೀತಾಪಾಠಪ್ರಕೀರ್ತಿಮತ್ |
ತತ್ತತ್ಕರ್ಮ ಚ ನಿರ್ದೋಷಂ ಭೂತ್ವಾ ಪೂರ್ಣತ್ವಮಾಪ್ನುಯಾತ್ || ೬೩ ||
ಗೀತಾಪಠನ ಮಾಡುತ್ತಿರುವವನು ಎಲ್ಲೆಲ್ಲಿ ಯಾವ್ಯಾವ ಕರ್ಮವನ್ನು ಮಾಡುತ್ತಾನೋ ಅದೆಲ್ಲವೂ ದೋಷರಹಿತವಾಗಿ ಪರಿಪೂರ್ಣತೆಯನ್ನು ಹೊಂದುತ್ತದೆ.
೬೦. ಗೀತೆಯನ್ನು ಶ್ರಾದ್ಧಕಾಲದಲ್ಲಿ ಪಠಿಸಿದರೇನು ಫಲ?
ಪಿತೄನುದ್ದಿಶ್ಯ ಯಃ ಶ್ರಾದ್ಧೇ ಗೀತಾಪಾಠಂ ಕರೋತಿ ಹಿ |
ಸನ್ತುಷ್ಟಾಃ ಪಿತರಸ್ತಸ್ಯ ನಿರಯಾದ್ಯಾನ್ತಿ ಸ್ವರ್ಗತಿಮ್ || ೬೪ ||
ಪಿತೃದೇವತೆಗಳನ್ನು ಉದ್ದೇಶಿಸಿ ಯಾವನು ಶ್ರಾದ್ಧಕಾಲದಲ್ಲಿ ಗೀತಾಪಠನವನ್ನು ಮಾಡುತ್ತಾನೋ ಆತನ ಪಿತೃಗಳು ಸಂತೋಷಗೊಳ್ಳುತ್ತಾರೆ ಹಾಗೂ ನರಕದಿಂದ ಸ್ವರ್ಗಕ್ಕೆ ಹೋಗುತ್ತಾರೆ.
ಗೀತಾಪಾಠೇನ ಸನ್ತುಷ್ಟಾಃ ಪಿತರಃ ಶ್ರಾದ್ಧತರ್ಪಿತಾಃ |
ಪಿತೃಲೋಕಂ ಪ್ರಯಾನ್ತ್ಯೇವ ಪುತ್ರಾಶೀರ್ವಾದತತ್ಪರಾಃ || ೬೫ ||
ಗೀತಾಪಾಠದಿಂದ ಸಂತುಷ್ಟರಾದ, ಗೀತಾಪೂರ್ವಕ ಶ್ರಾದ್ಧದಿಂದ ತೃಪ್ತರಾದ ಪಿತೃಗಳು ತಮ್ಮ ಮಕ್ಕಳಿಗೆ ಆಶೀರ್ವಾದವನ್ನು ಸದಾ ಮಾಡುತ್ತಲೇ ಪಿತೃಲೋಕಕ್ಕೇ ಹೋಗಿಬಿಡುತ್ತಾರೆ.
ಗೀತಾಪುಸ್ತಕದಾನಂ ಚ ಧೇನುಪುಚ್ಛಸಮನ್ವಿತಮ್ |
ಕೃತ್ವಾ ಚ ತದ್ದಿನೇ ಸಮ್ಯಕ್ ಕೃತಾರ್ಥೋ ಜಾಯತೇ ಜನಃ || ೬೬ ||
ಶ್ರಾದ್ಧದ ದಿನ ಗೋವಿನ ಬಾಲದ ತುದಿಯ ಕೂದಲೊಂದಿಗೆ ಗೀತೆಯ ಪುಸ್ತಕದ ದಾನವನ್ನು ವಿಧಿವತ್ತಾಗಿ ಮಾಡಿದ ವ್ಯಕ್ತಿಯು ಕೃತಾರ್ಥನಾಗುವನು.
ಪುಸ್ತಕಂ ಹೇಮಸಂಯುಕ್ತಂ ಗೀತಾಯಾಃ ಪ್ರಕರೋತಿ ಯಃ |
ದತ್ವಾ ವಿಪ್ರಾಯ ವಿದುಷೇ ಜಾಯತೇ ನ ಪುನರ್ಭವಮ್ || ೬೭ ||
ಸ್ವರ್ಣಖಚಿತವಾದ ಗೀತಾಪುಸ್ತಕವನ್ನು ಯಾವನು ವಿದ್ವಾಂಸನಾದ (ಬ್ರಹ್ಮಜ್ಞಾನಿಯಾದ) ವಿಪ್ರನಿಗೆ (ವೇದಾಧ್ಯಾಯಿಗೆ) ದಾನ ಮಾಡುತ್ತಾನೋ ಅವನು ಮತ್ತೆ ಹುಟ್ಟದಂತೆ, ಮುಕ್ತಿಯನ್ನು ಹೊಂದುತ್ತಾನೆ.
೬೧. ಗೀತಾಪುಸ್ತಕದಾನದ ಫಲವೇನು?
ಶತಪುಸ್ತಕದಾನಂ ಚ ಗೀತಾಯಾಃ ಪ್ರಕರೋತಿ ಯಃ |
ಸ ಯಾತಿ ಬ್ರಹ್ಮಸದನಂ ಪುನರಾವೃತ್ತಿದುರ್ಲಭಮ್ || ೬೮ ||
ಗೀತೆಯ ೧೦೦ ಪುಸ್ತಕಗಳನ್ನು ಯಾವನು ದಾನ ಮಾಡುತ್ತಾನೋ ಅವನು ಮರಣಾನಂತರ ಪುನರ್ಜನ್ಮವಿರದ ಬ್ರಹ್ಮಲೋಕವನ್ನು ಹೊಂದುತ್ತಾನೆ.
ಗೀತಾದಾನಪ್ರಭಾವೇನ ಸಪ್ತಕಲ್ಪಮಿತಾಃ ಸಮಾಃ |
ವಿಷ್ಣುಲೋಕಮವಾಪ್ನೋತಿ ವಿಷ್ಣುನಾ ಸಹ ಮೋದತೇ || ೬೯ ||
ಗೀತಾಕೃತಿಯ ದಾನದ ಪ್ರಭಾವದಿಂದ ೭ ಕಲ್ಪ ಕಾಲ ವಿಷ್ಣುಲೋಕವನ್ನು ಪಡೆದು ವಿಷ್ಣುವಿನೊಂದಿಗೆ ಆನಂದಪಡುತ್ತಾನೆ.
ಸಮ್ಯಕ್ ಶ್ರುತ್ವಾ ಚ ಗೀತಾರ್ಥಂ ಪುಸ್ತಕಂ ಯಃ ಪ್ರದಾಪಯೇತ್ |
ತಸ್ಮೈ ಪ್ರೀತಃ ಶ್ರೀಭಗವಾನ್ ದದಾತಿ ಮಾನಸೇಪ್ಸಿತಮ್ || ೭೦ ||
ಗೀತೆಯ ಅರ್ಥವನ್ನು ಚೆನ್ನಾಗಿ ಕೇಳಿ ಗೀತಾಪುಸ್ತಕವನ್ನು ಯಾವನು ದಾನಮಾಡುತ್ತಾನೋ ಅಂಥವನಿಗೆ ಪ್ರಸನ್ನನಾದ ಶ್ರೀಭಗವಂತನು ಮನಸ್ಸಿನ ಬಯಕೆಗಳನ್ನು ಈಡೇರಿಸಿಕೊಡುತ್ತಾನೆ.
೬೨. ಗೀತೆಯನ್ನು ನಿರ್ಲಕ್ಷಿಸಿದರೆ ಫಲವೇನು?
ದೇಹಂ ಮಾನುಷಮಾಶ್ರಿತ್ಯ ಚಾತುರ್ವರ್ಣ್ಯೇಷು ಭಾರತ |
ಶೃಣೋತಿ ನ ಪಠತ್ಯೇತಾಂ ಗೀತಾಮಮೃತರೂಪಿಣೀಮ್ ||
ಹಸ್ತಾತ್ತ್ಯಕ್ತ್ವಾಮೃತಂ ಪ್ರಾಪ್ತಂ ಸ ನರೋ ವಿಷಮಶ್ನುತೇ || ೭೧ ||
ಎಲೈ ಭರತವಂಶೀಯ ಅರ್ಜುನನೆ! ಯಾವನು ಈ ಮನುಷ್ಯದೇಹವನ್ನೂ, ಬ್ರಾಹ್ಮ, ಕ್ಷಾತ್ರ, ವೈಶ್ಯ, ಶೂದ್ರಾಖ್ಯ ಚಾತುರ್ವರ್ಣ್ಯವನ್ನೂ ಪಡೆದು ಭಾರತದೇಶದಲ್ಲಿ ಜನಿಸಿಯೂ ಗೀತಾಮೃತವನ್ನು ಪಠಿಸದೇ, ಕೇಳದೇ ಇರುವನೋ ಅವನು ತಾನು ಪಡೆದ ಅಮೃತವನ್ನು ಕೈಯಿಂದ ಬಿಟ್ಟು ವಿಷವನ್ನುಂಡಂತೆಯೇ ಸರಿ.
೬೩. ಗೀತೆಯಿಂದ ಯಾರಿಗೆ ಯಾವ ಫಲವಾಯಿತು?
ಜನಃ ಸಂಸಾರದುಃಖಾರ್ತೋ ಗೀತಾಜ್ಞಾನಂ ಸಮಾಲಭೇತ್ |
ಪೀತ್ವಾ ಗೀತಾಮೃತಂ ಲೋಕೇ ಲಬ್ಧ್ವಾ ಭಕ್ತಿಂ ಸುಖೀ ಭವೇತ್ || ೭೨ ||
ಸಂಸಾರದ ದುಃಖದಿಂದ ಆರ್ತನಾದ ವ್ಯಕ್ತಿಯು ಗೀತಾಜ್ಞಾನವನ್ನು ಪಡೆದು, ಗೀತಾಮೃತವನ್ನು ಪಾನಮಾಡಿದರೆ ಈ ಲೋಕದಲ್ಲಿಯೇ ಭಕ್ತಿಯನ್ನು ಪಡೆದು ಸುಖಿಯಾಗುತ್ತಾನೆ.
ಗೀತಾಮಾಶ್ರಿತ್ಯ ಬಹವೋ ಭೂಭುಜೋ ಜನಕಾದಯಃ |
ನಿರ್ಧೂತಕಲ್ಮಷಾ ಲೋಕೇ ಗತಾಸ್ತೇ ಪರಮಂ ಪದಮ್ || ೭೩ ||
ಗೀತೆಯನ್ನಾಶ್ರಯಿಸಿ, ಅವಲಂಬಿಸಿ, ಆಧರಿಸಿ, ಭೂಮಿಗಾಧಾರವಾಗಿರುವ ಭೂಪತಿಗಳಾದ ಜನಕಾದಿ ಬಹುಮಂದಿ ಲೋಕದಲ್ಲಿ ಪಾಪಗಳನ್ನು ಕಳೆದುಕೊಂಡು ಪರಮಪದವನ್ನು ಹೊಂದಿರುವರು.
೬೪. ಗೀತೆಯಲ್ಲಿ ಭೇದಭಾವವಿದೆಯೇ?
ಗೀತಾಸು ನ ವಿಶೇಷೋऽಸ್ತಿ ಜನೇಷೂಚ್ಚಾವಚೇಷು ಚ |
ಜ್ಞಾನೇಷ್ವೇವ ಸಮಗ್ರೇಷು ಸಮಾ ಬ್ರಹ್ಮಸ್ವರೂಪಿಣೀ || ೭೪ ||
ಗೀತೆಗಳಲ್ಲಿ ಜನರಲ್ಲಿ ಉಚ್ಚ-ನೀಚವೆಂಬ ವಿಶೇಷಭಾವವಿಲ್ಲ. ಸಮಗ್ರವಾದ ಜ್ಞಾನದಲ್ಲೇ ಗೀತೆಯು ಬ್ರಹ್ಮಸ್ವರೂಪಿಣಿಯಾಗಿ ಸಮನಾಗಿರುವಳು.
೬೫. ಗೀತಾನಿಂದೆಯ ಫಲವೇನು?
ಯೋऽಭಿಮಾನೇನ ಗರ್ವೇಣ ಗೀತಾನಿನ್ದಾಂ ಕರೋತಿ ಚ |
ಸ ಯಾತಿ ನರಕಂ ಘೋರಂ ಯಾವದಾಹೂತಸಮ್ಪ್ಲವಮ್ || ೭೫ ||
ಯಾವನು ಅಭಿಮಾನದಿಂದಲೋ ಗರ್ವದಿಂದಲೋ ಗೀತೆಯ ನಿಂದೆಯನ್ನು ಮಾಡುತ್ತಾನೋ ಅವನು ಮಹಾಪ್ರಲಯಾಂತಕಾಲ ಘೋರ ನರಕವನ್ನು ಹೊಂದುವನು.
ಅಹಙ್ಕಾರೇಣ ಮೂಢಾತ್ಮಾ ಗೀತಾರ್ಥಂ ನೈವ ಮನ್ಯತೇ |
ಕುಮ್ಭೀಪಾಕೇಷು ಪಚ್ಯೇತ ಯಾವತ್ಕಲ್ಪಕ್ಷಯೋ ಭವೇತ್ || ೭೬ ||
ಅಹಂಕಾರದಿಂದ ಮೂಢನಾದವನು ಗೀತಾರ್ಥವನ್ನು ಎಂದಿಗೂ ತಿಳಿದುಕೊಳ್ಳದೆ, ಕುಂಭೀಪಾಕವೆಂಬ ನರಕದಲ್ಲಿ ಕಲ್ಪಾಂತದವರೆಗೆ ಬೇಯುತ್ತಿರುತ್ತಾನೆ.
ಗೀತಾರ್ಥಂ ವಾಚ್ಯಮಾನಂ ಯೋ ನ ಶೃಣೋತಿ ಸಮಾಸತಃ |
ಸ ಸೂಕರಭವಾಂ ಯೋನಿಮನೇಕಾಮಧಿಗಚ್ಛತಿ || ೭೭ ||
ಹೇಳುತ್ತಿರುವ ಗೀತಾರ್ಥವನ್ನು ಸಂಕ್ಷೇಪವಾಗಿ, ಸಾರರೂಪವಾಗಿ ಯಾವನು ಕೇಳುವುದಿಲ್ಲವೋ ಅವನು ಹಂದಿಯಲ್ಲಿ ಹುಟ್ಟುವ ಜನ್ಮವನ್ನು ಅನೇಕಬಾರಿ ಹೊಂದುತ್ತಾನೆ.
ಚೌರ್ಯಂ ಕೃತ್ವಾ ಚ ಗೀತಾಯಾಃ ಪುಸ್ತಕಂ ಯಃ ಸಮಾನಯೇತ್ |
ನ ತಸ್ಯ ಸಫಲಂ ಕಿಞ್ಚಿತ್ ಪಠನಂ ಚ ವೃಥಾ ಭವೇತ್ || ೭೮ ||
ಗೀತಾಗ್ರಂಥವನ್ನು ಯಾವನು ಕದ್ದು ತರುವನೋ ಆತನಿಗೆ ಕಿಂಚಿತ್ತೂ ಫಲವಿಲ್ಲ ಹಾಗೂ ಆತನ ಗೀತಾಪಠನವು ವ್ಯರ್ಥವೇ ಸರಿ.
ಯಃ ಶ್ರುತ್ವಾ ಮೋದತೇ ನೈವ ಗೀತಾಂ ಚ ಪರಮಾರ್ಥತಃ |
ನೈವ ತಸ್ಯ ಫಲಂ ಲೋಕೇ ಪ್ರಮತ್ತಸ್ಯ ಯಥಾ ಶ್ರಮಃ || ೭೯ ||
ಗೀತೆಯನ್ನು ಕೇಳಿ ಯಾವನು ಅದನ್ನು ಪರಮಾರ್ಥದಿಂದ ತಿಳಿದು ಮುದಗೊಳ್ಳುವುದಿಲ್ಲವೋ ಆತನಿಗೆ ಲೋಕದಲ್ಲಿ ಯಾವುದೇ ಫಲವಿಲ್ಲ; ಆತನ ಬದುಕು ಕೇವಲ ದುರಹಂಕಾರಿ / ಹುಚ್ಚನ ಶ್ರಮದಂತೆಯೇ ಸರಿ.
೬೬. ಗೀತಾಶ್ರವಣಾನಂತರ ಏನನ್ನು ದಾನ ಮಾಡಬೇಕು?
ಗೀತಾಂ ಶ್ರುತ್ವಾ ಹಿರಣ್ಯಂ ಚ ಭೋಜ್ಯಂ ಪಟ್ಟಾಮ್ಬರಂ ತಥಾ |
ನಿವೇದಯೇತ್ ಪ್ರದಾನಾರ್ಥಂ ಪ್ರೀತಯೇ ಪರಮಾತ್ಮನಃ || ೮೦ ||
ಗೀತೆಯನ್ನು ಕೇಳಿ ಚಿನ್ನ-ತಿನಿಸು-ಪಟ್ಟೆವಸ್ತ್ರಗಳನ್ನು ಪರಮಾತ್ಮನ ಪ್ರೀತ್ಯರ್ಥ ಪ್ರದಾನ ಮಾಡಲು ನಿವೇದಿಸಬೇಕು.
ವಾಚಕಂ ಪೂಜಯೇದ್ಭಕ್ತ್ಯಾ ದ್ರವ್ಯವಸ್ತ್ರಾದ್ಯುಪಸ್ಕರೈಃ |
ಅನೇಕೈರ್ಬಹುಧಾ ಪ್ರೀತ್ಯಾ ತುಷ್ಯತಾಂ ಭಗವಾನ್ ಹರಿಃ || ೮೧ ||
ಗೀತಾಪಾಠಕರನ್ನು ಭಕ್ತಿಯಿಂದ ಹಣ, ಬಟ್ಟೆ ಮುಂತಾದ ಬಹುವಿಧವಾದ ಅನೇಕ ಉಡುಗೊರೆಗಳಿಂದ ಪ್ರೀತಿಯಿಂದ ಪೂಜಿಸಬೇಕು. ಇದರಿಂದ ಭಗವಂತನು ಸಂತುಷ್ಟನಾಗುವನು.
೬೭. ಗೀತಾಮಾಹಾತ್ಮ್ಯವನ್ನು ಯಾವಾಗ ಓದಬೇಕು? ಅದರ ಫಲವೇನು?
ಸೂತ ಉವಾಚ |
ಮಾಹಾತ್ಮ್ಯಮೇತದ್ಗೀತಾಯಾಃ ಕೃಷ್ಣಪ್ರೋಕ್ತಂ ಪುರಾತನಮ್ |
ಗೀತಾನ್ತೇ ಪಠತೇ ಯಸ್ತು ಯಥೋಕ್ತಫಲಭಾಗ್ಭವೇತ್ || ೮೨ ||
ಸೂತನು ಹೇಳಿದ್ದನು—
ಕೃಷ್ಣನೇ ಹೇಳಿದ ಪುರಾತನವಾದ ಈ ಗೀತಾಮಾಹಾತ್ಮ್ಯವನ್ನು ಗೀತಾಪಠನದ ಕೊನೆಯಲ್ಲಿ ಯಾವನು ಪಠಿಸುತ್ತಾನೋ ಅವನು ಹಿಂದೆ ಹೇಳಿದಂತಹ ಫಲವನ್ನು ಪಡೆಯುತ್ತಾನೆ.
ಗೀತಾಯಾಃ ಪಠನಂ ಕೃತ್ವಾ ಮಾಹಾತ್ಮ್ಯಂ ನೈವ ಯಃ ಪಠೇತ್ |
ವೃಥಾ ಪಾಠಫಲಂ ತಸ್ಯ ಶ್ರಮ ಏವ ಹ್ಯುದಾಹೃತಃ || ೮೩ ||
ಗೀತೆಯನ್ನು ಪಠಿಸಿ ಮಾಹಾತ್ಮ್ಯವನ್ನು ಯಾವನು ಎಂದಿಗೂ ಪಠಿಸುವುದಿಲ್ಲವೋ ಅಂಥವನ ಗೀತಾಪಠನದ ಫಲವು ಶೂನ್ಯ; ಅವನು ಕೇವಲ ಶ್ರಮಪಟ್ಟಿದ್ದೇ ಸರಿ.
ಏತನ್ಮಾಹಾತ್ಮ್ಯಸಂಯುಕ್ತಂ ಗೀತಾಪಾಠಂ ಕರೋತಿ ಯಃ |
ಶ್ರದ್ಧಯಾ ಯಃ ಶೃಣೋತ್ಯೇವ ಪರಮಾಂ ಗತಿಮಾಪ್ನುಯಾತ್ || ೮೪ ||
ಈ ಮಾಹಾತ್ಮ್ಯಸಹಿತವಾದ ಗೀತಾಪಠನವನ್ನು ಯಾವನು ಶ್ರದ್ಧೆಯಿಂದ ಮಾಡುತ್ತಾನೋ, ಕೇಳುತ್ತಾನೋ ಅವನು ಪರಮಗತಿಯನ್ನು ಹೊಂದುವನು.
ಶ್ರುತ್ವಾ ಗೀತಾಮರ್ಥಯುಕ್ತಾಂ ಮಾಹಾತ್ಮ್ಯಂ ಯಃ ಶೃಣೋತಿ ಚ |
ತಸ್ಯ ಪುಣ್ಯಫಲಂ ಲೋಕೇ ಭವೇತ್ಸರ್ವಸುಖಾವಹಮ್ || ೮೫ ||
ಗೀತೆಯನ್ನು ಅರ್ಥಸಹಿತ ಯಾವನು ಕೇಳಿ ಮಾಹಾತ್ಮ್ಯವನ್ನೂ ಶ್ರವಣಮಾಡುವನೋ ಅವನಿಗೆ ಲೋಕದಲ್ಲಿ ಪುಣ್ಯದ ಫಲರೂಪವಾಗಿ ಎಲ್ಲವೂ ಸುಖಮಯವಾಗಿರುವುದು.
|| ಇತಿ ಶ್ರೀವೈಷ್ಣವೀಯತನ್ತ್ರಸಾರೇ ಶ್ರೀಮದ್ಗೀತಾಮಾಹಾತ್ಮ್ಯಂ ಸಮ್ಪೂರ್ಣಮ್ ||
|| ಇಲ್ಲಿಗೆ ಶ್ರೀವೈಷ್ಣವೀಯ ತಂತ್ರಸಾರದಲ್ಲಿರುವ ಶ್ರೀಮದ್ಗೀತಾಮಾಹಾತ್ಮ್ಯವು ಸಂಪೂರ್ಣವಾಯಿತು ||
|| ಶ್ರೀಕೃಷ್ಣಾರ್ಪಣಮಸ್ತು ||
೬೮. "ಗೀತಾ" ಶಬ್ದದ ವಾಚ್ಯಾರ್ಥ, ಸೂಚ್ಯಾರ್ಥ, ವ್ಯಂಜನಾರ್ಥಗಳೇನು?
(೬) ಗೀತಾಮಹಿಮೆ
'ಗೀ'ಕಾರಂ ತ್ಯಾಗರೂಪಂ ಸ್ಯಾತ್ 'ತ'ಕಾರಂ ತತ್ತ್ವಬೋಧಕಮ್ |
ಗೀತಾವಾಕ್ಯಮಿದಂ ತತ್ತ್ವಂ ಜ್ಞೇಯಂ ಸರ್ವಮುಮುಕ್ಷುಭಿಃ ||
ಗೀ ಎಂದರೆ ತ್ಯಾಗ, ತ ಎಂದರೆ ತತ್ತ್ವಬೋಧಕ, ಹೀಗೆ ಗೀತಾ ಎಂದರೆ ತ್ಯಾಗ ಹಾಗೂ ತತ್ತ್ವಗಳನ್ನು ಬೋಧಿಸುವ ಶ್ರೇಷ್ಠ ಶಾಸ್ತ್ರವೆಂದು ಸಕಲ ಮುಮುಕ್ಷು ಜಿಜ್ಞಾಸು ಸಾಧಕರು ತಿಳಿದು ಗೀತಾಧ್ಯಯನಶೀಲರಾಗಬೇಕು.
ವಾಚ್ಯಾರ್ಥವು ನೇರ ಅರ್ಥ. ಗೀತೆಯೆಂದರೆ ಹಾಡು, ಗೇಯಪ್ರಧಾನ ಎಂಬುದು ವಾಚ್ಯ ಅರ್ಥ. ಸೂಚ್ಯಾರ್ಥವು ಧ್ವನಿತ ಭಾವ / ತಾತ್ಪರ್ಯ. ಗೀತೆಯೆಂದರೆ ತ್ಯಾಗ-ತತ್ತ್ವ ಉಪದೇಶಕ ಶಾಸ್ತ್ರವೆಂಬುದು ಸೂಚ್ಯ ಅರ್ಥ. ವ್ಯಂಜನಾರ್ಥವೆಂದರೆ ಉಪ್ಪು ಖಾರ ಹುಳಿ ಬೆರೆಸಿ ಬಣ್ಣಿಸುವ ಪರಿ. ಗೀತೆಯೆಂದರೆ ಪ್ರಸ್ಥಾನತ್ರಯೀ ಗ್ರಂಥಗಳಲ್ಲೊಂದಾದ, ಸಾಧನಪ್ರಸ್ಥಾನವೂ, ಸ್ಮೃತಿಪ್ರಸ್ಥಾನವೂ, ಯೋಗಶಾಸ್ತ್ರವೂ, ಮೋಕ್ಷಶಾಸ್ತ್ರವೂ, ವೇದಾಂತದ ಸರಳರೂಪವೂ, ಜೀವನಧರ್ಮಯೋಗಶಾಸ್ತ್ರವೂ ಆಗಿರುವ ಕೃತಿಯೆಂಬುದಿಲ್ಲಿ ವ್ಯಂಜನಾರ್ಥ.
೬೯. ೧೫ನೆಯ ರತ್ನ, ೭ನೆಯ ರಸ, ೫ನೆಯ ವೇದ, ಹತ್ತನೆಯ ಗ್ರಹ ಯಾವುದು? ಉಳಿದ ೧೪ ರತ್ನಗಳು, ೬ ರಸಗಳು, ೪ ವೇದಗಳು, ೯ ಗ್ರಹಗಳಾವುವು?
ದಾತಾ ಪಂಚದಶಂ ರತ್ನಂ ಸುಪುತ್ರಃ ಸಪ್ತಮೋ ರಸಃ |
"ಭಾರತಂ ಪಂಚಮೋ ವೇದಃ" ಜಾಮಾತಾ ದಶಮೋ ಗ್ರಹಃ ||
ದಾನಿಯು ೧೫ನೆಯ ರತ್ನವಾಗಿರುವನು. ೧೪ ರತ್ನಗಳು ಲೋಕದಲ್ಲಿ ಪ್ರಸಿದ್ಧವಾಗಿರುವುವು.
"ಚಕ್ರಂ ರಥೋ ಮಣಿಃ ಖಡ್ಗಶ್ಚರ್ಮ ರತ್ನಂ ಚ ಪಂಚಮಮ್ |
ಕೇತುರ್ನಿಧಿಶ್ಚ ಸಪ್ತೈವಮಪ್ರಾಣಾನಿ ಪ್ರಚಕ್ಷತೇ ||
ಭಾರ್ಯಾ ಪುರೋಹಿತಶ್ಚೈವ ಸೇನಾನೀ ರಥಕೃಚ್ಚ ಯಃ |
ಪತ್ತ್ಯಶ್ವೌ ಕಲಭಶ್ಚೇತಿ ಪ್ರಾಣಿನಃ ಸಪ್ತ ಕೀರ್ತಿತಾಃ ||
ಚತುರ್ದಶೈತಾನಿ ರತ್ನಾನಿ ಸರ್ವೇಷಾಂ ಚಕ್ರವರ್ತಿನಾಮ್ ||"
(ವಿಷ್ಣುಪುರಾಣ ಅಂಶ ೪, ಅಧ್ಯಾಯ ೧೨)
ಚಕ್ರವರ್ತಿಗೆ ಪ್ರಾಣರಹಿತವಾದ ಚಕ್ರ, ರಥ, ಮಣಿ, ಖಡ್ಗ, ಚರ್ಮ, ಕೇತು (ಧ್ವಜ), ನಿಧಿ ಎಂಬ ೭, ಪತ್ನಿ, ಪುರೋಹಿತ, ಸೇನಾಧಿಪತಿ, ರಥಕಾರ, ಪತ್ತಿ (ಕಾಲಾಳು), ಅಶ್ವ, ಗಜ ಎಂಬ ೭ ಪ್ರಾಣವಂತರು— ಹೀಗೆ ಒಟ್ಟು ೧೪ ರತ್ನಗಳು. ದಾನಿಯಾದರೋ ೧೫ನೆಯ ರತ್ನವಾಗಿರುವುದು.
ಇನ್ನು ಸತ್ಪುತ್ರನು ೭ನೆಯ ರಸವು. ಲೋಕದಲ್ಲಿ ಪಾಕದಲ್ಲಿ ಸಿಹಿ (ಮಧುರಃ—ಪೃಥಿವ್ಯಂಬುಗುಣಬಾಹುಲ್ಯಾತ್—ಪೃಥಿವೀ ಹಾಗೂ ಜಲ ತತ್ತ್ವ ಪ್ರಧಾನ / ಬಾಹುಳ್ಯದಿಂದಾಗಿ), ಕಹಿ (ತಿಕ್ತಃ—ವಾಯ್ವಾಕಾಶಾಗುಣಬಾಹುಲ್ಯಾತ್), ಒಗರು (ಕಷಾಯಃ—ಪೃಥಿವ್ಯನಿಲಗುಣಬಾಹುಲ್ಯಾತ್), ಉಪ್ಪು (ಲವಣಃ—ಪೃಥಿವ್ಯಗ್ನಿಗುಣಬಾಹುಲ್ಯಾತ್), ಹುಳಿ (ಆಮ್ಲ—ತೋಯಾಗ್ನಿಗುಣಬಾಹುಲ್ಯಾತ್), ಖಾರ (ಕಟು—ವಾಯ್ವಗ್ನಿಗುಣಬಾಹುಲ್ಯಾತ್)— ಎಂಬೀ ೬ ಷಡ್ರಸಗಳೆಂದು ಪ್ರಸಿದ್ಧಿ. "ರಸನೇಂದ್ರಿಯಗ್ರಾಹ್ಯವಸ್ತು ರಸಃ"— ರಸನೇಂದ್ರಿಯವಾದ ನಾಲಗೆಗೆ ಗ್ರಾಹ್ಯವಾದುದೇ ರಸವು.
ಇನ್ನು ಮಹಾಭಾರತವು ೫ನೆಯ ವೇದವೆನಿಸಿರುವುದು. ಋಗ್, ಯಜುಸ್, ಸಾಮ, ಅಥರ್ವಗಳು ೪ ವೇದಗಳು. ಗೀತೆಯು ಈ ಮಹಾಭಾರತದಲ್ಲೇ ಬರುವುದರಿಂದ ಇದೂ ವೇದತುಲ್ಯವು.
ಅಳಿಯನು ೧೦ನೆಯ ಗ್ರಹವು. ರವಿ, ಶಶಿ, ಕುಜ, ಸೌಮ್ಯ, ಬೃಹಸ್ಪತಿ, ಭಾರ್ಗವ, ಮಂದ, ರಾಹು, ಕೇತುಗಳು ನವಗ್ರಹರು. ಇವರಂತೆಯೇ ಬಾಧಿಸುವವನು ಮಗಳ ಗಂಡನು.
೭೦. ವ್ಯಾಸಮಹಾಭಾರತದಲ್ಲಿರುವ ಪಂಚರತ್ನಗಳಾವುವು?
ಗೀತಾ ಸಹಸ್ರನಾಮೈವ ಸ್ತವರಾಜೋ ಹ್ಯನುಸ್ಮೃತಿಃ |
ಗಜೇಂದ್ರಮೋಕ್ಷಣಂ ಚೈವ ಪಂಚ ರತ್ನಾನಿ ಭಾರತೇ ||
ಗೀತೆ, ವಿಷ್ಣು / ಶಿವ ಸಹಸ್ರನಾಮ, ಭೀಷ್ಮಸ್ತವರಾಜ, ಅನುಸ್ಮೃತಿ, ಗಜೇಂದ್ರಮೋಕ್ಷ— ಇವು ೫ ಮಹಾಭಾರತದ ಪಂಚ ರತ್ನಗಳು.
೭೧. ಘೋರವಾದ ಆಪತ್ತು ಹಾಗೂ ನರಕಗಳ ದರ್ಶನವಾಗದಿರಬೇಕಾದರೆ ಉಪಾಯವೇನು?
ಗೀತಾಧ್ಯಯನಶೀಲಶ್ಚ ಗೀತಾತಾತ್ಪರ್ಯಬೋಧಕಃ |
ಆಪದಂ ನರಕಂ ಘೋರಂ ನೈವ ಪಶ್ಯತಿ ಮಾನವಃ ||
ಗೀತೆಯ ಅಧ್ಯಯನಶೀಲನಾಗಿರುವವನೂ, ಗೀತಾತಾತ್ಪರ್ಯವನ್ನು ತಿಳಿದು ಬೋಧಿಸುವವನೂ ಆದ ಮಾನವನು ಯಾವುದೇ ಆಪತ್ತನ್ನೂ, ಘೋರನರಕವನ್ನೂ ಎಂದಿಗೂ ಕಾಣುವುದಿಲ್ಲ.
೭೨. ಗೀತೆಯ ೭೦೦ ಶ್ಲೋಕಗಳು ಯಾರ ಯಾರ ಮಾತುಗಳು?
ಶ್ಲೋಕೈಕೋ ಧೃತರಾಷ್ಟ್ರಸ್ಯ ನವ ದುರ್ಯೋಧನಸ್ಯ ಚ |
ದ್ವಾತ್ರಿಂಶತ್ ಸಂಜಯಪ್ರೋಕ್ತಾಃ ವೇದಾಷ್ಟಾವರ್ಜುನಸ್ಯ ಚ ||
ತತ್ತ್ವಾವಬೋಧೇ ವೇದಾದ್ರಿ ಪಂಚ ಕೇಶವನಿರ್ಮಿತಾಃ |
ಏವಂ ಗೀತಾಪ್ರಮಾಣಂ ತು ಶ್ಲೋಕಸಪ್ತಶತಾನಿ ಚ ||
ಧೃತರಾಷ್ಟ್ರನದು ೧ ಶ್ಲೋಕ
ದುರ್ಯೋಧನನದು ೯ ಶ್ಲೋಕಗಳು
ಸಂಜಯಪ್ರೋಕ್ತವಾದ ೩೨ ಶ್ಲೋಕಗಳು,
ಅರ್ಜುನನವು ೮೪ (ಅಷ್ಟೌ—೮, ವೇದ—೪) ಶ್ಲೋಕಗಳು
ಶ್ರೀಕೃಷ್ಣಪರಮಾತ್ಮನಿಂದ ೫೭೪ (ಪಂಚ—೫, ಅದ್ರಿ— ಸಪ್ತಕುಲಾಚಲಗಳು ೭, ವೇದಗಳು ೪)
ಹೀಗೆ ಗೀತೆಯಲ್ಲಿ ಒಟ್ಟು ೭೦೦ ಶ್ಲೋಕಗಳಿವೆ.
೭೩. ಗೀತೆಯ ಆದಿಮಂಗಳಶ್ಲೋಕಗಳಾವುವು?
ಆದಿಮಂಗಲಶ್ಲೋಕಗಳು
ಸಚ್ಚಿದಾನಂದರೂಪಂ ತಂ ಜಗದಾದಿಗುರುಂ ಪರಮ್ |
ಶಿವಪಾರ್ವತಿಸೂನುಂ ಚ ವಿಘ್ನರಾಜಮಹಂ ಶ್ರಯೇ || ೧ ||
ಸಚ್ಚಿದಾನಂದಸ್ವರೂಪನಾದ (ಸತ್—ಸರ್ವಮೂಲ ಅಸ್ತಿತ್ವ, ಚಿತ್—ಸರ್ವಜ್ಞತ್ವ, ಸರ್ವಮೂಲಚೇತನತ್ವ, ಆನಂದ—ಶಾಶ್ವತವಾದ ಪರಮಾನಂದತ್ವ), ಜಗತ್ತಿನ ಆದಿಮ ಪರಮಗುರುವಾದ, ಶಿವ-ಪಾರ್ವತಿಯರ ಸುತನೂ ಆದ ವಿಘ್ನಗಳಿಗೊಡೆಯನಾದ ಮಹಾಗಣಪತಿಯನ್ನು ಆಶ್ರಯಿಸುತ್ತೇನೆ.
ನಾರಾಯಣಸ್ವರೂಪಶ್ಚ ವಾಸುದೇವೋ ಪರಾತ್ಪರಃ |
ಪರಬ್ರಹ್ಮ ಪರಾತ್ಮಾ ಚ ವಿವೇಕಂ ಪ್ರದದಾತು ನಃ || ೨ ||
ನಾರಾಯಣಸ್ವರೂಪನಾದ ಪರಾತ್ಪರನಾದ ವಾಸುದೇವನು ಸಾಕ್ಷಾತ್ ಪರಬ್ರಹ್ಮಸ್ವರೂಪನೂ ಪರಮಾತ್ಮನೂ ಆಗಿರುವನು. ಆತನು ನಮಗೆ ವಿವೇಕವನ್ನು ದಯಪಾಲಿಸಲಿ.
ದೇವಕೀಸುತಕೃಷ್ಣಾಯ ಯಶೋದಾನಂದನಾಯ ಚ |
ವಸುದೇವಸುಪುತ್ರಾಯ ಗೀತಾಚಾರ್ಯಾಯ ತೇ ನಮಃ || ೩ ||
ದೇವಕಿಯ ಪುತ್ರನಾದ ಕೃಷ್ಣನಿಗೆ ಯಶೋದೆಗೆ ಆನಂದವನ್ನುಂಟುಮಾಡಿದ ಕೃಷ್ಣನಿಗೆ, ವಸುದೇವನ ಸತ್ಪುತ್ರನಾಗಿ ಅವತರಿಸಿದಂತೆ ತೋರಿದವನಿಗೆ, ಗೀತಾಚಾರ್ಯನಾದ ನಿನಗೆ ನಮಸ್ಕಾರ.
ಮಹಾಭಾರತನಿರ್ಮಾತ್ರೇ ಕೃಷ್ಣದ್ವೈಪಾಯನಾಯ ಚ |
ಸತ್ಯವತೀಸುಪುತ್ರಾಯ ಪಾರಾಶರ್ಯಾಯ ತೇ ನಮಃ || ೪ ||
ಮಹಾಭಾರತದ ನಿರ್ಮಾತೃವೂ, ಸತ್ಯವತೀ-ಪರಾಶರಮಹರ್ಷಿಗಳ ಪುತ್ರರೂ, ಕೃಷ್ಣದ್ವೈಪಾಯನ ನಾಮಕರೂ ಆದ ಭಗವಾನ್ ವೇದವ್ಯಾಸರಿಗೆ ನಮಸ್ಕಾರ.
ಗುರವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಮ್ |
ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ || ೫ ||
ಸಕಲ ಲೋಕಗಳಿಗೂ ಗುರುವಾದ, ಜನನ ಮರಣರೂಪೀ ಭವರೋಗಿಗಳಿಗೆ ವೈದ್ಯನಾದ, ಸಕಲ ವಿದ್ಯೆಗಳಿಗೆ ನಿಧಿಯಾದ, ದಕ್ಷಿಣಾಮೂರ್ತಿಗೆ ನಮಸ್ಕಾರ.
ಅರ್ಜುನಂ ಭಗವದ್ಭಕ್ತಂ ಮುಮುಕ್ಷುಂ ಭಾಗ್ಯಶಾಲಿನಮ್ |
ಗೀತೋಪದೇಶಹೇತುಂ ತಂ ಗುಡಾಕೇಶಮಹಂ ಭಜೇ || ೬ ||
ಭಗವದ್ಭಕ್ತನೂ, ಮೋಕ್ಷಾಕಾಂಕ್ಷಿಯೂ, ಭಾಗ್ಯವಂತನೂ, ನಿದ್ದೆಯನ್ನು ಗೆದ್ದು ಗುಡಾಕೇಶನೆನಿಸಿದವನೂ (ಗುಡಾಕ—ನಿದ್ದೆ, ಈಶ—ಗೆದ್ದವನು), ಗೀತೋಪದೇಶಕ್ಕೆ ಕಾರಣನೂ ಆದ ಅರ್ಜುನನ್ನು ನಾನು ಭಜಿಸುತ್ತೇನೆ.
ಭಾರತೋದಧಿನಿರ್ಮಥ್ಯ ಗೀತಾಮೃತೋದ್ಧೃತಾಯ ತೇ |
ಸರ್ವಲೋಕಪ್ರಕಾಶಾಯ ಶಂಕರಾಯ ನಮೋ ನಮಃ || ೭ ||
ಮಹಾಭಾರತವೆಂಬ ಸಾಗರವನ್ನು ಮಥಿಸಿ ಗೀತೆಯೆಂಬ ಅಮೃತವನ್ನು ಆಯ್ದು, ಅದಕ್ಕೆ ಭಾಷ್ಯವನ್ನು ಬರೆದು ಅದರ ಮಹಿಮೆಯನ್ನು ಇಡೀ ಜಗತ್ತಿಗೆ ಪ್ರಕಾಶಪಡಿಸಿದ ಭಗವಾನ್ ಆದಿಶಂಕರರಿಗೆ ನಮಸ್ಕಾರಗಳು.
ನಮಾಮಿ ಭಗವದ್ಗೀತಾಂ ವೇದಸಾರಾಂ ಸುಮಂಗಳಾಮ್ |
ಜ್ಞಾನಭಕ್ತಿಸುಸಂಪನ್ನಾಂ ಸರ್ವಪಾಪಹರಾಂ ಶುಭಾಮ್ || ೮ ||
ವೇದಗಳ ಸಾರವೂ, ಸುಮಂಲಸ್ವರೂಪಿಣಿಯೂ, ಜ್ಞಾನ-ಭಕ್ತಿಸಂಪನ್ನೆಯೂ, ಸರ್ವಪಾಪಹರಳೂ, ಶುಭಕರಳೂ ಆದ ಭಗವದ್ಗೀತಾಂಬೆಯನ್ನು ನಮಿಸುತ್ತೇನೆ.
ಮಹೇಶ್ವರ ನಮಸ್ತುಭ್ಯಂ ಕೃಷ್ಣಂ ವಂದೇ ಜಗದ್ಗುರುಮ್ |
ದತ್ತಾತ್ರೇಯಂ ಪರಬ್ರಹ್ಮ ತ್ರಿಮೂರ್ತಿಂ ಸಂಶ್ರಯಾಮ್ಯಹಮ್ || ೯ ||
ಆದಿಗುರುವಾದ ಮಹೇಶ್ವರನೇ! ನಿನಗೆ ನಮಸ್ಕಾರ. ಜಗದ್ಗುರುವಾದ ಕೃಷ್ಣನನ್ನು ವಂದಿಸುತ್ತೇನೆ. ಪರಬ್ರಹ್ಮನನ್ನೂ, ದತ್ತಾತ್ರೇಯನನ್ನೂ, ತ್ರಿಮೂರ್ತಿಗಳನ್ನೂ ಚೆನ್ನಾಗಿ ಆಶ್ರಯಿಸುತ್ತೇನೆ.
ತಪೋರೂಪಾಂ ಜ್ಞಾನರೂಪಾಂ ಭವಬಂಧವಿಮೋಚಿನೀಮ್ |
ಜ್ಞಾನವೈರಾಗ್ಯಬೋಧಾಂ ಶ್ರೀಗೀತಾಂಬಾಂ ಪ್ರಣಮಾಮ್ಯಹಮ್ || ೧೦ ||
ತಪಸ್ಸಿನ ಸ್ವರೂಪಳೂ, ಜ್ಞಾನಸ್ವರೂಪಳೂ, ಭವಬಂಧನವನ್ನು ಕಳೆಯುವವಳೂ, ಜ್ಞಾನವೈರಾಗ್ಯಬೋಧಕಳೂ ಆದ ಶ್ರೀ ಗೀತಾಂಬೆಯನ್ನು ನಾನು ಪ್ರಣಾಮ ಮಾಡುತ್ತೇನೆ.
ಶ್ರೀಕೃಷ್ಣಂ ಸಚ್ಚಿದಾನಂದಂ ವೇದವ್ಯಾಸಂ ತಪೋನಿಧಿಮ್ |
ಅರ್ಜುನಂ ಭಗವದ್ಭಕ್ತಂ ಪ್ರಣಮಾಮಿ ಮುನಿತ್ರಯಮ್ || ೧೧ ||
ಸಚ್ಚಿದಾನಂದಸ್ವರೂಪನಾದ ಶ್ರೀಕೃಷ್ಣನನ್ನೂ, ತಪೋನಿಧಿಗಳಾದ ವೇದವ್ಯಾಸರನ್ನೂ, ಭಕ್ತಶ್ರೇಷ್ಠನಾದ ಅರ್ಜುನನನ್ನೂ— ಈ ಮೂವರು ಮುನಿಸ್ವರೂಪರನ್ನು ವಂದಿಸುತ್ತೇನೆ.
ನಿತ್ಯಶುದ್ಧಾಂ ನಿತ್ಯಬುದ್ಧಾಂ ನಿತ್ಯಮುಕ್ತಸ್ವರೂಪಿಣೀಮ್ |
ಜ್ಞಾನಮೋಕ್ಷಪ್ರದಾಂ ಶಾಂತಾಂ ವಂದೇ ಗೀತಾಂ ಪರಾತ್ಪರಾಮ್ || ೧೨ ||
ನಿತ್ಯಶುದ್ಧಳೂ, ನಿತ್ಯಬುದ್ಧಳೂ, ನಿತ್ಯಮುಕ್ತಸ್ವರೂಪಿಣಿಯೂ, ಜ್ಞಾನಮೋಕ್ಷಪ್ರದಳೂ, ಶಾಂತಸ್ವರೂಪೆಯೂ, ಪರಾತ್ಪರಳೂ ಆದ ಗೀತಾಮಾತೆಯನ್ನು ವಂದಿಸುತ್ತೇನೆ.
೭೪. ಗೀತೆಯು ಒಂದು ಕಲ್ಪವೃಕ್ಷ. ಹೇಗೆ?
ಗೀತಾಕಲ್ಪತರುಂ ಭಜೇ ಭಗವತಾ ಕೃಷ್ಣೇನ ಸಂರೋಪಿತಂ
ವೇದವ್ಯಾಸ-ವಿವರ್ಧಿತಂ ಶ್ರುತಿಶಿರೋಬೀಜಂ ಪ್ರಬೋಧಾಂಕುರಮ್ |
ನಾನಾಶಾಸ್ತ್ರರಹಸ್ಯಶಾಖಮರತಿಕ್ಷಾಂತಿಪ್ರವಾಳಾಂಕಿತಂ
ಕೃಷ್ಣಾಂಘ್ರಿದ್ವಯಭಕ್ತಿಪುಷ್ಪಸುರಭಿಂ ಮೋಕ್ಷಪ್ರದಂ ಜ್ಞಾನಿನಾಮ್ || ೧೩ ||
ಭಗವಂತನಾದ ಕೃಷ್ಣನಿಂದ ನೆಡಲ್ಪಟ್ಟ, ವೇದವ್ಯಾಸರಿಂದ ಮಹಾಭಾರತದಲ್ಲಿ ವಿಶೇಷವಾಗಿ ಬೆಳೆಸಲ್ಪಟ್ಟ, ವೇದದ ಪ್ರಧಾನಭಾಗವೆನಿಸಿದ ಉಪನಿಷತ್ತುಗಳೆಂಬ ಬೀಜದಿಂದಲೇ ಹುಟ್ಟಿದ, ಆತ್ಮವಿಜ್ಞಾನವೆಂಬ ಮೊಳಕೆಯನ್ನುಳ್ಳ, ನಾನಾಶಾಸ್ತ್ರಗಳ ರಹಸ್ಯಗಳನ್ನೇ ತನ್ನ ಕೊಂಬೆಗಳಾಗಿಸಿರುವ, ವೈರಾಗ್ಯ (ಅರತಿ)-ಕ್ಷಮೆ (ಕ್ಷಾಂತಿ) ಮುಂತಾದ ದೈವೀಗುಣಗಳನ್ನೇ ಚಿಗುರೆಲೆಗಳಾಗಿ ಹೊಂದಿರುವ (ಪ್ರವಾಳ + ಅಂಕಿತಮ್), ಶ್ರೀಕೃಷ್ಣನ ಪಾದಪದ್ಮವೆರಡರಲ್ಲಿ ಉಂಟಾಗುವ ಭಕ್ತಿಯೆಂಬ ಪುಷ್ಪದ ಸುಗಂಧ ಪರಿಮಳದಿಂದ ಕೂಡಿದ (ಸುರಭಿಂ), ಜ್ಞಾನಿಗಳಿಗೆ ಮೋಕ್ಷಸಾಮ್ರಾಜ್ಯವನ್ನೇ ದಯಪಾಲಿಸುವ ಶ್ರೀಮದ್ ಭಗವದ್ ಗೀತೆಯೆಂಬ ಕಲ್ಪತರುವನ್ನು ನಾನು ಭಜಿಸುತ್ತೇನೆ.
Comments
Post a Comment