೨. ಶ್ರೀಮದ್-ಭಗವದ್ಗೀತಾ-ಮಾಹಾತ್ಮ್ಯ—ಸ್ಕಾನ್ದಪುರಾಣೋಕ್ತ , ಶಂಕರಾಚಾರ್ಯೋಕ್ತ, ಮಹಾಭಾರತೋಕ್ತ

 ೧೮. ಸ್ಕಾನ್ದಪುರಾಣದಲ್ಲಿ ಹೇಳಿದಂತೆ, ಗೀತೆಯ ಸಾರವೇನು? ಫಲವೇನು?


(೨) ಸ್ಕಾಂದಪುರಾಣೋಕ್ತಮ್

ನ ಬಂಧೋऽಸ್ತಿ ನ ಮೋಕ್ಷೋऽಸ್ತಿ ಬ್ರಹ್ಮೈವಾಸ್ತಿ ನಿರಾಮಯಮ್ |

ನೈಕಮಸ್ತಿ ನ ಚ ದ್ವಿತ್ವಂ ಸಚ್ಚಿತ್ಕಾರಂ ವಿಜೃಂಭತೇ || ೧ ||


ಬಂಧನವೆಂಬುದೂ ಇಲ್ಲ; ಬಂಧನದಿಂದ ಬಿಡುಗಡೆ / ಮೋಕ್ಷವೆಂಬುದೂ ಇಲ್ಲ; ಕೇವಲ ನಿರಾಮಯವಾದ, ನಿರ್ದೋಷವಾದ, ನೀರೋಗಿಯಾದ ಬ್ರಹ್ಮತತ್ತ್ವವೊಂದೇ ಇರುವುದು. ಏಕ (ಒಂದು) ಎಂಬುದಿಲ್ಲ; ಹಾಗೆಯೇ ಎರಡೆಂಬುದಿಲ್ಲ, ಅನೇಕವೆಂಬುದೂ ನಿಜವಾಗಿ, ಪರಮಾರ್ಥದೃಷ್ಟಿಯಿಂದ ಇಲ್ಲ; ಕೇವಲ ವ್ಯಾವಹಾರಿಕದೃಷ್ಟಿಯಿಂದ ವೈವಿಧ್ಯವು ತೋರುತ್ತದೆ. ಪರಮಾರ್ಥದಿಂದ ಕೇವಲ ಸತ್ (ಶುದ್ಧ ಸತ್ತೆ, ಇರವು, ಅಸ್ತಿತ್ವ), ಚಿತ್ (ಜ್ಞಾನ, ಚೈತನ್ಯ), ಆನಂದಸ್ವರೂಪವಾಚ್ಯವಾದ ಪರತತ್ತ್ವವೊಂದೇ ಸರ್ವತ್ರ ವಿಜೃಂಭಿಸುತ್ತಿರುವುದು.


ಗೀತಾಸಾರಮಿದಂ ಶಾಸ್ತ್ರಂ ಸರ್ವಶಾಸ್ತ್ರಸುನಿಶ್ಚಿತಮ್ |

ಯತ್ರ ಸ್ಥಿತಂ ಬ್ರಹ್ಮಜ್ಞಾನಂ ವೇದಶಾಸ್ತ್ರಸುನಿಶ್ಚಿತಮ್ || ೨ ||


ಈ ಶಾಸ್ತ್ರವು / ಮಾಹಾತ್ಮ್ಯವು ಗೀತೆಯ ಸಾರವಾಗಿದೆ; ಸಕಲಶಾಸ್ತ್ರಗಳಲ್ಲಿ ಚೆನ್ನಾಗಿ ನಿಶ್ಚೈಸಿದ ಸಾರತತ್ತ್ವವಾಗಿದೆ; ಯಾವ ಇದರಲ್ಲಿರುವ ಬ್ರಹ್ಮಜ್ಞಾನವು ಸಕಲ ವೇದ-ಶಾಸ್ತ್ರಗಳೆಲ್ಲದರಲ್ಲೂ ಚೆನ್ನಾಗಿ ನಿಶ್ಚೈಸಿ ಹೇಳಿದುದೇ ಆಗಿರುವುದು.


ಇದಂ ಶಾಸ್ತ್ರಂ ಮಯಾ ಪ್ರೋಕ್ತಂ ಗುಹ್ಯವೇದಾರ್ಥದರ್ಪಣಮ್ |

ಯಃ ಪಠೇತ್ಪ್ರಯತೋ ಭೂತ್ವಾ ಸ ಗಚ್ಛೇದ್ವಿಷ್ಣುಶಾಶ್ವತಮ್ || ೩ ||


ನನ್ನಿಂದ ಚೆನ್ನಾಗಿ ಹೇಳಲ್ಪಟ್ಟ ಈ ಗೀತಾಮಾಹಾತ್ಮ್ಯವೆಂಬ ಶಾಸ್ತ್ರವು ರಹಸ್ಯವಾದ ವೇದಾರ್ಥಕ್ಕೆ ಹಿಡಿದ ಕನ್ನಡಿ. ಯಾವನು ಪ್ರಯತ್ನಪೂರ್ವಕವಾಗಿ ಇದನ್ನು ಪಠಿಸುವನೋ ಅವನು ಶಾಶ್ವತವಾದ ವಿಷ್ಣುವನ್ನೇ ಹೊಂದುವನು.


ಏತತ್ಪುಣ್ಯಂ ಪಾಪಹರಂ ಧನ್ಯಂ ದುಃಖಪ್ರಣಾಶನಮ್ |

ಪಠತಾಂ ಶೃಣ್ವತಾಂ ವಾಪಿ ವಿಷ್ಣೋರ್ಮಾಹಾತ್ಮ್ಯಮುತ್ತಮಮ್ || ೪ ||


ವಿಷ್ಣುವಿನ / ಪರಮಾತ್ಮನ ಶ್ರೇಷ್ಠವಾದ ಮಾಹಾತ್ಮ್ಯವನ್ನು ಪಠಿಸುವವರಿಗೂ ಶ್ರವಣಮಾಡುವವರಿಗೂ ಇದು ಪುಣ್ಯಕರವೂ, ಪಾಪಹರವೂ, ಧನಪ್ರದವೂ, ಧನ್ಯತೆಯನ್ನುಂಟುಮಾಡುವುದೂ, ದುಃಖನಾಶಕವೂ ಆಗಿರುವುದು.


೧೯. ಗೀತೆಯ ಆಕರಗ್ರಂಥಗಳು ಯಾವುವು? 

೨೦. ಗೀತಾರಚನೆಕಾರರು ಯಾರು? ೨೧. ನವವ್ಯಾಕರಣಗಳು ಯಾವುವು? 

೨೨. ೧೮ ಮಹಾಪುರಾಣಗಳ ಹೆಸರುಗಳ ನೆನಪಿಗೆ ಶ್ಲೋಕ ಯಾವುದು?


ಅಷ್ಟಾದಶಪುರಾಣಾನಿ ನವವ್ಯಾಕರಣಾನಿ ಚ |

ನಿರ್ಮಥ್ಯ ಚತುರೋ ವೇದಾನ್ ಮುನಿನಾ ಭಾರತಂ ಕೃತಮ್ || ೫ ||


೧೮ ಮಹಾಪುರಾಣಗಳನ್ನೂ (ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್ | ಅನಾಪಲಿಙ್ಗಕೂಸ್ಕಾನಿ ಪುರಾಣಾನಿ ಪ್ರಚಕ್ಷತೇ ||), ೯ ವ್ಯಾಕರಣಗಳನ್ನೂ (ಐಂದ್ರಂ ಚಾಂದ್ರಂ ಕಾಶಕೃತ್ಸ್ನಂ ಕೌಮಾರಂ ಶಾಕಟಾಯನಮ್ | ಸಾರಸ್ವತಂ ಚಾಪಿಶಲಂ ಶಾಕಲಂ ಪಾಣಿನೀಯಕಮ್ ||) , ಹಾಗೆಯೇ, ನಾಲ್ಕೂ ವೇದಗಳನ್ನೂ ಚೆನ್ನಾಗಿ ಮಥಿಸಿ / ಕಡೆದು / ಮಥನಮಾಡಿ, ಕೃಷ್ಣ ದ್ವೈಪಾಯನ ಬಾದರಾಯಣ ವೇದವ್ಯಾಸ ಮಹಾಮುನಿಗಳಿಂದ ಮಹಾಭಾರತವೆಂಬ ಲಕ್ಷಶ್ಲೋಕಾತ್ಮಕ ಐತಿಹಾಸಿಕ ಉದ್ಗ್ರಂಥವು ವಿರಚಿಸಲ್ಪಟ್ಟಿತು.


ಭಾರತೋದಧಿನಿರ್ಮಥ್ಯ ಗೀತಾನಿರ್ಮಥಿತಸ್ಯ ಚ |

ಸಾರಮುದ್ಧೃತ್ಯ ಕೃಷ್ಣೇನ ಅರ್ಜುನಸ್ಯ ಮುಖೇ ಧೃತಮ್ || ೬ ||


ಅಂತಹ ಮಹಾಭಾರತವೆಂಬ ಸಾಗರವನ್ನು ಮತ್ತೆ ಚೆನ್ನಾಗಿ ಕಡೆದು ಸಿಕ್ಕಿದ ಗೀತೆಯ ಸಾರವನ್ನು ಹೆಕ್ಕಿ ಭಕ್ತರಿಗೆ ಸಾಕ್ಷಾತ್ ಪರಮಾತ್ಮನಾದ, ಜಿಜ್ಞಾಸುಗಳಿಗೆ ಬ್ರಹ್ಮಜ್ಞಾನಿಯಾದ ಕೃಷ್ಣನಿಂದ ಅರ್ಜುನನ ಮುಂದೆ ಉಪದೇಶಿಸಲ್ಪಟ್ಟಿತು.


೨೩. ಮನದ ಕೊಳೆಯನ್ನು ಕಳೆಯುವ ಬಗೆ ಹೇಗೆ?


ಮಲನಿರ್ಮೋಚನಂ ಪುಂಸಾಂ ಗಂಗಾಸ್ನಾನಂ ದಿನೇ ದಿನೇ |

ಸಕೃದ್ಗೀತಾಂಭಸಿ ಸ್ನಾನಂ ಸಂಸಾರಮಲನಾಶನಮ್ || ೭ ||


ಪ್ರತಿದಿನವೂ ಗಂಗೆಯಲ್ಲಿ ಸ್ನಾನಮಾಡಿದರೆ ಮನುಷ್ಯರ ದೇಹದ ಕೊಳೆ ಹಾಗೂ ಅಂದಂದಿನ / ಆವರೆಗಿನ ಪಾಪವು ತೊಳೆದು ಹೋಗುವುದು. ಆದರೆ, ಗೀತೆಯೆಂಬ ನದಿ(ರೂಪಕಾಲಂಕಾರ ಪ್ರಯೋಗವಿದೆ) ಯಲ್ಲಿ / ನೀರಿನಲ್ಲಿ ಒಮ್ಮೆ / ಒಂದು ಬಾರಿ ಸ್ನಾನ ಮಾಡಿದರೂ ಸಹ, ಸಂಸಾರವೆಂಬ / ಹುಟ್ಟು-ಸಾವುಗಳೆಂಬ ಕೊಳೆಯು ಸಂಪೂರ್ಣ  ನಾಶವಾಗುವುದು. ನೀರಿನ ಸ್ನಾನವು ದೇಹದ ಕೊಳೆಯನ್ನು ಕಳೆದರೆ, ಗೀತೆಯೆಂಬ ನೀರಿನಲ್ಲಿ ಮಿಂದರೆ ಮನದ ಕೊಳೆಯು ತೊಳೆದುಹೋಗುವುದು.


೨೪. ನಾರಾಯಣಸ್ವರೂಪನಾಗಲು ಏನು ಮಾಡಬೇಕು?


ಗೀತಾನಾಮಸಹಸ್ರೇಣ ಸ್ತವರಾಜೋ ವಿನಿರ್ಮಿತಃ |

ಯಸ್ಯ ಕುಕ್ಷೌ ಚ ವರ್ತೇತ ಸೋऽಪಿ ನಾರಾಯಣಃ ಸ್ಮೃತಃ || ೮ ||


ಭಗವದ್ಗೀತೆ, ವಿಷ್ಣುಸಹಸ್ರನಾಮ, ಭೀಷ್ಮಸ್ತವರಾಜ— ಈ ಮೂರು ಮಹಾಭಾರತದ ಶ್ರೇಷ್ಠ  ಭಕ್ಷ್ಯಗಳು ಯಾವನ ಹೊಟ್ಟೆಯಲ್ಲಿ ಇವೆಯೋ, ಯಾವನ ಚಿತ್ತದಲ್ಲಿರುವವೋ, ಯಾವನ ಹೃದ್ಗತವಾಗಿರುವವೋ, ಅಂಥವನೂ ಕೂಡ ನಾರಾಯಣನೆಂದೇ ಸ್ಮರಿಸಲ್ಪಡುವನು. ಇವನ್ನು ರಚಿಸಿದ ವೇದವ್ಯಾಸರೂ ಕೂಡ ನಾರಾಯಣನೆಂದೇ ಸ್ಮರಿಸಲ್ಪಡುವರು.


೨೫. ಸರ್ವ ವೇದ-ಧರ್ಮ-ತೀರ್ಥ-ದೇವಮಯ ಯಾವುದು / ಯಾರು?


ಸರ್ವವೇದಮಯೀ ಗೀತಾ ಸರ್ವಧರ್ಮಮಯೋ ಮನುಃ |

ಸರ್ವತೀರ್ಥಮಯೀ ಗಂಗಾ ಸರ್ವದೇವಮಯೋ ಹರಿಃ || ೯ ||


ಗೀತೆಯು ಸಕಲ ವೇದಗಳ ಸಾರ; ಮನುಸ್ಮೃತಿಯು ಸರ್ವ ಧರ್ಮಗಳ ಮೂಲ; ಗಂಗಾನದಿಯು ಎಲ್ಲ ಪವಿತ್ರತೀರ್ಥಗಳ ಸಂಗಮ; ಶ್ರೀಹರಿಯು / ಪರಮಾತ್ಮನು ಎಲ್ಲ ದೇವ-ದೇವತೆಗಳ ಮೂಲಸ್ವರೂಪ.


೨೬. ಗೀತೆಯು ಹೇಗೆ ಮೋಕ್ಷಸಾಧನವಾಗಿದೆ?


ಪಾದಸ್ಯಾಪ್ಯರ್ಧಪಾದಂ ವಾ ಶ್ಲೋಕಂ ಶ್ಲೋಕಾರ್ಧಮೇವ ವಾ |

ನಿತ್ಯಂ ಧಾರಯತೇ ಯಸ್ತು ಸ ಮೋಕ್ಷಮಧಿಗಚ್ಛತಿ || ೧೦ ||


ಗೀತೆಯ ಒಂದು ಶ್ಲೋಕವನ್ನೋ, ಅರ್ಧ ಶ್ಲೋಕವನ್ನೋ, ಶ್ಲೋಕದ ಒಂದು ಪಾದ ಅಥವಾ ಅರ್ಧ ಪಾದವನ್ನಾದರೂ ಯಾವಾಗಲೂ ಯಾವನಾದರೂ ಧರಿಸಿರುತ್ತಾನೋ / ಹೃದ್ಗತ / ಕಂಠಸ್ಥ ಮಾಡಿರುತ್ತಾನೋ ಅಂಥವನು ಮೋಕ್ಷವನ್ನು ಹೊಂದುತ್ತಾನೆ / ಮೋಕ್ಷದೆಡೆ ನಡೆಯುತ್ತಾನೆ / ಮೋಕ್ಷಗಾಮಿಯಾಗುತ್ತಾನೆ.


೨೭. ಕಲಿಯುಗದಲ್ಲಿ ಪಾಪದ ಕೊಳೆಯನ್ನೂ, ಮನಸ್ಸಿನ ಕಲ್ಮಷವನ್ನೂ ಕಳೆಯಲು ಏನು ಮಾಡಬೇಕು?

೨೮. ತ್ರಿಫಲವೆಂದರೇನು?

೨೯. ರೂಪಕಾಲಂಕಾರದ ಲಕ್ಷಣವೇನು?


ಕೃಷ್ಣವೃಕ್ಷಸಮುದ್ಭೂತಾ ಗೀತಾಮೃತಹರೀತಕೀ |

ಮಾನುಷೈಃ ಕಿಂ ನ ಖಾದ್ಯೇತ ಕಲೌ ಮಲವಿರೇಚನೀ || ೧೧ ||


ಕೃಷ್ಣನೆಂಬ ವೃಕ್ಷದಿಂದ ಉಂಟಾದ ಗೀತಾಮೃತವೆಂಬ ಅಳಲೇಕಾಯಿಯು (ಹರೀತಕಿಯು) ಕಲಿಯುಗದಲ್ಲಿ ಪಾಪರಾಶಿಯನ್ನು ಸಮೂಲ ವಿರೇಚನ ಮಾಡುವಂಥದ್ದು. ಹಾಗಿದ್ದರೂ ಮನುಷ್ಯರಿಂದ ಇದು ಯಾಕೆ ಸೇವಿಸಲ್ಪಡುವುದಿಲ್ಲ? (ಆಮಲಕೀ, ವಿಭೀತಕೀ ಹಾಗೂ ಹರೀತಕೀ— ಅಂದರೆ ನೆಲ್ಲಿಕಾಯಿ, ಶಾಂತಿಕಾಯಿ ಹಾಗೂ ಅಳಲೇ / ಅಣಿಲೇಕಾಯಿ— ಇವು ಮೂರರ ನಿಶ್ಚಿತ ಪ್ರಮಾಣದ ಮಿಶ್ರಣವೇ ತ್ರಿ-ಫಲ ಚೂರ್ಣ. ಇದು ಆಯುರ್ವೇದದಲ್ಲಿ ದೇಹದ ಮಲಬದ್ಧತೆ ನಿವಾರಕ, ವಿರೇಚಕ ಔಷಧಿ. ಅಂತೆಯೇ ನಮ್ಮ ಮನದ ಕಲಿಕಶ್ಮಲ ವಿರೇಚಕ ಗೀತೆಯೆಂಬ ಅಮೃತಫಲ ಎಂದಿಲ್ಲಿ ರೂಪಕಾಲಂಕಾರವನ್ನು ಪ್ರಯೋಗಿಸಲಾಗಿದೆ. "ಉಪಮಾನೋಪಮೇಯಯೋಃ ಅಭೇದಃ ರೂಪಕಮ್ "— ಗೀತೆಯೆಂಬ ಉಪಮೇಯಕ್ಕೂ ಹರೀತಕಿಯೆಂಬ ಉಪಮಾನಕ್ಕೂ ಪರಿಣಾಮದಲ್ಲಿ ಭೇದವಿಲ್ಲ, ಎರಡೂ ಒಂದೇ ಎಂಬಂತೆ ಹೇಳಿದೆ. ಒಂದು ಶರೀರಮಲಹಾರಿ, ಇನ್ನೊಂದು ಮನೋಮಲಹಾರಿ.)


೩೦. ಕಲಿಯುಗದಲ್ಲಿನ ಪವಿತ್ರಸ್ಥಾನಗಳಾವುವು?


ಗಂಗಾ ಗೀತಾ ತಥಾ ಭಿಕ್ಷುಃ ಕಪಿಲಾಶ್ವತ್ಥಸೇವನಮ್ |

ವಾಸರಂ ಪದ್ಮನಾಭಸ್ಯ ಪಾವನಂ ಕಿಂ ಕಲೌ ಯುಗೇ || ೧೨ ||


ಗಂಗಾನದಿ, ಭಗವದ್ಗೀತಾ, ಭಿಕ್ಷಣಶೀಲನಾದ ಸಂನ್ಯಾಸಿ, ಕಪಿಲವರ್ಣದ ಗೋವು, ಅಶ್ವತ್ಥವೃಕ್ಷ, ಹರಿವಾಸರ / ಏಕಾದಶೀತಿಥಿ— ಇವುಗಳನ್ನು ಪೂಜಿಸುವುದಕ್ಕಿಂತ ಹೆಚ್ಚು ಪವಿತ್ರವಾದುದು ಈ ಕಲಿಯುಗದಲ್ಲಿ ಬೇರಾವುದಿದೆ?


೩೧. ಸಕಲಶಾಸ್ತ್ರಗಳಿಗಿಂತಲೂ ಗೀತೆಯನ್ನೇ ಯಾಕೆ ಅಧ್ಯಯನ ಮಾಡಬೇಕು?


ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ್ರವಿಸ್ತರೈಃ |

ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ವಿನಿಃಸೃತಾ || ೧೩ ||

ಆಪದಂ ನರಕಂ ಘೋರಂ ಗೀತಾಧ್ಯಾಯೀ ನ ಪಶ್ಯತಿ || ೧೪ ||


ಯಾವ ಗೀತೆಯು ಸ್ವತಃ ಕಮಲನಾಭನಾದ ಪರಮಾತ್ಮನ ಮುಖಕಮಲದಿಂದಲೇ ಹೊರಬಂದಿದೆಯೋ ಅಂತಹ ಶ್ರೀಮದ್-ಭಗವದ್-ಗೀತೆಯನ್ನು ಭಕ್ತಿಶ್ರದ್ಧಾದರಗಳಿಂದ ಅರ್ಥಾನುಸಂಧಾನಪೂರ್ವಕ ಚೆನ್ನಾಗಿ ಪಠಿಸಬೇಕು, ಅಧ್ಯಯನ ಮಾಡಬೇಕು. ಬೇರೆ ವಿಸ್ತಾರವಾದ ಶಾಸ್ತ್ರಗಳಿಂದೇನು ಹೆಚ್ಚು ಫಲ ಸಿಗುವುದು? ಇದು ಎಲ್ಲದರ ಸಾರಸಂಕ್ಷೇಪವಾಗಿದೆ. ಇದನ್ನು ಸದಾ ಅಧ್ಯಯನಮಾಡುವ ಗೀತಾಧ್ಯಾಯಿಯು ಇಹದಲ್ಲಿ ಯಾವುದೇ ಘೋರವಾದ ಆಪತ್ತುಗಳನ್ನೂ, ಪರದಲ್ಲಿ ನರಕವನ್ನೂ ಕಾಣಲಾರ / ಹೊಂದಲಾರನು.


|| ಇತಿ ಶ್ರೀಸ್ಕಾನ್ದಪುರಾಣೋಕ್ತಂ ಶ್ರೀಮದ್ಗೀತಾಮಾಹಾತ್ಮ್ಯಂ ಸಮ್ಪೂರ್ಣಮ್ ||

|| ಇಲ್ಲಿಗೆ ಶ್ರೀಸ್ಕಾಂದಪುರಾಣದಲ್ಲಿ ಹೇಳಿದ ಗೀತಾ ಮಹಿಮೆಯು ಸಂಪೂರ್ಣವು ||


೩೨. ಶಂಕರಾಚಾರ್ಯರ ಪ್ರಕಾರ ಗೀತಾಪಠನದ ಫಲವೇನು?


(೩) ಶಂಕರಾಚಾರ್ಯೋದ್ಧೃತಮ್

ಗೀತಾಶಾಸ್ತ್ರಮಿದಂ ಪುಣ್ಯಂ ಯಃ ಪಠೇತ್ಪ್ರಯತಃ ಪುಮಾನ್ |

ವಿಷ್ಣೋಃ ಪದಮವಾಪ್ನೋತಿ ಭಯಶೋಕಾದಿವರ್ಜಿತಃ || ೧ ||


ಈ ಪುಣ್ಯಕರವಾದ ಗೀತಾಶಾಸ್ತ್ರವನ್ನು ("ಶಾಸನಾತ್ ಶಾಸ್ತ್ರಮ್ "— ಹೀಗೇ ಮಾಡಬೇಕೆಂದು ವಿಧಿಸುವುದರಿಂದ ಶಾಸ್ತ್ರವು) ಯಾವ ವ್ಯಕ್ತಿಯು ಪ್ರಯತ್ನಪೂರ್ವಕ ಪಠಿಸುವನೋ ಅವನು ಭಯ-ದುಃಖಗಳನ್ನು ಕಳೆದುಕೊಂಡು ವಿಷ್ಣುಪದ("ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ ಇತಿ ವಿಷ್ಣುಃ "— ವಿಶ್ವಮಾನವತ್ವ, ಸರ್ವಾಂತರ್ಯಾಮಿತ್ವ)ವನ್ನೇ ಹೊಂದುತ್ತಾನೆ.


ಗೀತಾಧ್ಯಯನಶೀಲಸ್ಯ ಪ್ರಾಣಾಯಾಮಪರಸ್ಯ ಚ |

ನೈವ ಸನ್ತಿ ಹಿ ಪಾಪಾನಿ ಪೂರ್ವಜನ್ಮಕೃತಾನಿ ಚ || ೨ ||


ನಿತ್ಯ ಗೀತಾಧ್ಯಯನಶೀಲನಾದವನಿಗೆ, ಪ್ರಾಣಾಯಾಮಪರನಾದವನಿಗೆ ಪೂರ್ವಜನ್ಮದಲ್ಲಿ ಮಾಡಿದ ಪಾಪಗಳೂ ಕೂಡ ಎಂದೂ ಅಂಟುವುದಿಲ್ಲ.


ಮಲನಿರ್ಮೋಚನಂ ಪುಂಸಾಂ ಜಲಸ್ನಾನಂ ದಿನೇ ದಿನೇ |

ಸಕೃದ್ಗೀತಾಂಭಸಿ ಸ್ನಾನಂ ಸಂಸಾರಮಲನಾಶನಮ್ || ೩ ||


ಪ್ರತಿದಿನವೂ ನೀರಿನಲ್ಲಿ ಮಿಂದರೆ ಮನುಜರ ಅಂದಂದಿನ ಮೈಯ ಕೊಳೆಯು ಹೋಗಿಬಿಡುವುದು. ಆದರೆ, ಜೀವನದಲ್ಲಿ ಒಂದು ಸಲವಾದರೂ ಗೀತಾಜಲದಲ್ಲಿ ಮಿಂದರೆ(ಗೀತಾರ್ಥಾನುಸಂಧಾನ ಮಾಡಿದರೆ) ಸಂಸಾರವೆಂಬ ತಾಪತ್ರಯವು (ಜನನ-ಮರಣ ರೂಪೀ ವಿಷವರ್ತುಲವು) ಎಂದೆಂದಿಗೂ ಇಲ್ಲವಾಗುವುದು.


ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ್ರವಿಸ್ತರೈಃ |

ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ವಿನಿಃಸೃತಾ || ೪ ||


700 ಶ್ಲೋಕಗಳಲ್ಲೇ ಸರ್ವವೇದಶಾಸ್ತ್ರಸಾರವನ್ನು ಅಡಕಮಾಡಿಕೊಂಡಿರುವ ಸರಲ, ಸಂಕ್ಷಿಪ್ತವಾದ ಭಗವದ್ಗೀತೆಯನ್ನು ಚೆನ್ನಾಗಿ ಶ್ರವಣ(listening, not only hearing), ಮನನ(ಕೇಳಿದ್ದನ್ನು ಮತ್ತೆ ಮತ್ತೆ ಚಿಂತನ ಮಾಡುವುದು, ವಿಶ್ಲೇಷಿಸುವುದು, analysis, thinking, meditation) ನಿದಿಧ್ಯಾಸನ(ಅನುಭವ, ಅನುಷ್ಠಾನಕ್ಕೆ ತರುವುದು, experiencing, internalisation, practice) ಮಾಡುವುದು ನಮ್ಮ ಕರ್ತವ್ಯ. ಇದನ್ನು ತಿಳಿದರೆ ಬೇರೆ ಸಾವಿರಾರು ಪುಟಗಳ ಸುದೀರ್ಘ ಶಾಸ್ತ್ರಗಳ ಅಗತ್ಯವಿರುವುದಿಲ್ಲ. ಯಾಕೆಂದರೆ ಇದು ಸಾಕ್ಷಾತ್ ಭಗವಂತನೇ ಹೇಳಿದ ಉಪದೇಶವಾಗಿರುವುದು.


ಭಾರತಾಮೃತಸರ್ವಸ್ವಂ ವಿಷ್ಣೋರ್ವಕ್ತ್ರಾದ್ವಿನಿಃಸೃತಮ್ |

ಗೀತಾಗಂಗೋದಕಂ ಪೀತ್ವಾ ಪುನರ್ಜನ್ಮ ನ ವಿದ್ಯತೇ || ೫ ||


ಪರಮಾತ್ಮನ ಮುಖದಿಂದ ಹೊರಬಂದ, ಮಹಾಭಾರತದ ಸಾರಾಮೃತವಾಗಿರುವ, ಗೀತಾಗಂಗಾಜಲವನ್ನು ಪಾನಮಾಡಿದರೆ ಮರುಜನ್ಮವಿರದ ಮುಕ್ತಿಯೇ ಆಗುವುದು.


ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ |

ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ || ೬ ||


ಎಲ್ಲ ಉಪನಿಷತ್ತುಗಳೂ ಗೋವುಗಳು; ಗೋಪಾಲನಂದನ ಕೃಷ್ಣನೇ ಹಾಲು ಕರೆಯುವವನು; ಅರ್ಜುನನೇ ಕರುವು; ಪಂಡಿತನೇ / ಜ್ಞಾನಿಯೇ / ಬುದ್ಧಿವಂತನೇ (ಸು-ಧೀಃ— ಒಳ್ಳೆಯ ಬುದ್ಧಿಯಿರುವವನು. ಸುಧೀಃ, ಸುಧಿಯೌ, ಸುಧಿಯಃ) ಹಾಲು ಕುಡಿಯುವವನು. ಮಹತ್ತಮವಾದ ಗೀತೆಯೆಂಬ ಅಮೃತವೇ ಹಾಲು. (ರೂಪಕಾಲಂಕಾರ)


ಏಕಂ ಶಾಸ್ತ್ರಂ ದೇವಕೀಪುತ್ರಗೀತಮ್

ಏಕೋ ದೇವೋ ದೇವಕೀಪುತ್ರ ಏವ |

ಏಕೋ ಮನ್ತ್ರಸ್ತಸ್ಯ ನಾಮಾನಿ ಯಾನಿ 

ಕರ್ಮಾಪ್ಯೇಕಂ ತಸ್ಯ ದೇವಸ್ಯ ಸೇವಾ || ೭ ||


ಶಾಸ್ತ್ರವೆಂಬುದು ಒಂದೇ ಇರುವುದು, ಅದೇ ದೇವಕೀನಂದನ ಕೃಷ್ಣನಿಂದ ಉಪದಿಷ್ಟವಾದ ಗೀತಾಶಾಸ್ತ್ರವು. ದೇವರೂ ಇರುವುದು ಒಬ್ಬನೇ, ಅವನೇ ದೇವಕೀಸುತ ಶ್ರೀಕೃಷ್ಣನು. ಮಂತ್ರವೂ ಒಂದೇ ಇರುವುದು, ಅದೇ ಆ ಕೃಷ್ಣನ ನಾಮಗಳು. ಕರ್ಮವೆಂಬುದೂ, ಕೆಲಸವೆಂಬುದೂ, ಕರ್ತವ್ಯವೆಂಬುದೂ ಒಂದೇ ಒಂದು ಇರುವುದು, ಅದೇ ಆ ಪರಮಾತ್ಮನ ಸೇವೆ. ಗೀತೆಯೊಂದೇ ಶಾಸ್ತ್ರ, ಕೃಷ್ಣನೋರ್ವನೇ ದೇವ, ಕೃಷ್ಣನ ನಾಮಗಳು ಮಾತ್ರ ಮಂತ್ರಗಳು, ಪರಮಾತ್ಮನ ಸೇವೆಯೊಂದೇ ಕರ್ತವ್ಯವು ನಿಜವಾದ ಜ್ಞಾನೀಭಕ್ತರಿಗೆ.


|| ಇತಿ ಶ್ರೀಶಂಕರಾಚಾರ್ಯೋಕ್ತಂ ಶ್ರೀಮದ್ಗೀತಾಮಾಹಾತ್ಮ್ಯಂ ಸಮ್ಪೂರ್ಣಮ್ ||

|| ಇಲ್ಲಿಗೆ ಶ್ರೀಶಂಕರಾಚಾರ್ಯರು ಹೇಳಿದ ಗೀತಾ ಮಹಾತ್ಮೆಯು ಮುಗಿಯಿತು ||


೩೩. ಮಹಾಭಾರತದಲ್ಲಿ ಗೀತಾಮಹಿಮೆಯನ್ನು ಹೇಗೆ ಹೇಳಿದೆ?


(೪) ಮಹಾಭಾರತೋದ್ಧೃತಮ್

ವೈಶಂಪಾಯನ ಉವಾಚ |

ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ್ರವಿಸ್ತರೈಃ |

ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ವಿನಿಃಸೃತಾ || ೧ ||


ವೈಶಂಪಾಯನನು ಹೇಳಿದ್ದನು—

ಯಾವುದು ಸ್ವಯಂ ತಾವರೆಯಂಥ ಹೊಕ್ಕುಳುಳ್ಳ, ತಾವರೆಯನ್ನು ಹೊಕ್ಕುಳಲ್ಲಿ ಧರಿಸಿ ಪದ್ಮನಾಭನೆನಿಸಿದ ಶ್ರೀಮನ್ನಾರಾಯಣನ ಮೊಗದಾವರೆಯಿಂದ ನಿಃಸೃತವಾಯಿತೋ, ಹೊರಹೊಮ್ಮಿತೋ ಅಂತಹ ಸರ್ವಸಾರವೂ ಸಂಕ್ಷೇಪವೂ ಆದ ಗೀತಾಶಾಸ್ತ್ರವೇ ಚೆನ್ನಾಗಿ ಅಧ್ಯಯನಯೋಗ್ಯವಾದುದೇ ಹೊರತು, ಉಳಿದ ವಿಸ್ತಾರವಾದ ಸಾಸಿರ ಶಾಸ್ತ್ರಗಳಿಂದೇನು ಪ್ರಯೋಜನ?


ಸರ್ವಶಾಸ್ತ್ರಮಯೀ ಗೀತಾ ಸರ್ವದೇವಮಯೋ ಹರಿಃ |

ಸರ್ವತೀರ್ಥಮಯೀ ಗಂಗಾ ಸರ್ವವೇದಮಯೋ ಮನುಃ || ೨ ||


ಗೀತೆಯು ಎಲ್ಲ ಶಾಸ್ತ್ರಗಳ ಸಾರವು; ಶ್ರೀಹರಿಯು ಸರ್ವದೇವತೆಗಳ ಮೂಲಸ್ವರೂಪನು; ಗಂಗಾನದಿಯು ಸಕಲ ಪವಿತ್ರ ತೀರ್ಥಗಳ ತವನಿಧಿ; ಮನುಸ್ಮೃತಿಯು ಸಕಲ ವೇದಗಳ ಸಾರಸರ್ವಸ್ವ.


೩೪. ಗಕಾರಾದಿಯ ೪ ಮೋಕ್ಷಪ್ರದ ಪದಗಳಾವುವು?


ಗೀತಾ ಗಂಗಾ ಚ ಗಾಯತ್ರೀ ಗೋವಿಂದೇತಿ ಹೃದಿ ಸ್ಥಿತೇ |

ಚತುರ್ಗಕಾರಸಂಯುಕ್ತೇ ಪುನರ್ಜನ್ಮ ನ ವಿದ್ಯತೇ || ೩ ||


ಗೀತಾ, ಗಂಗಾ, ಗಾಯತ್ರೀ ಹಾಗೂ ಗೋವಿಂದ— ಎಂಬ ಈ ಗಕಾರಾದಿಯಿಂದ ಕೂಡಿದ ನಾಲ್ಕರ ಸ್ಮರಣೆ ಸದಾ ಹೃದಯದಲ್ಲಿ ಸ್ಥಿರವಾಗಿದ್ದರೆ ಅಂಥವರಿಗೆ ಪುನರ್ಜನ್ಮವೇ ಇಲ್ಲದ ಮೋಕ್ಷವಾಗುವುದು.


೩೫. ಗೀತೆಯ ವಿವಿಧ 'ಉವಾಚ' ಗಳ ಶ್ಲೋಕಪರಿಮಾಣಗಳೇನು?


[ಷಟ್-ಶತಾನಿ ಸ-ವಿಂಶಾನಿ ಶ್ಲೋಕಾನಾಂ ಪ್ರಾಹ ಕೇಶವಃ |

ಅರ್ಜುನಃ ಸಪ್ತಪಂಚಾಶತ್ ಸಪ್ತಷಷ್ಠಿಂ ತು ಸಂಜಯಃ |

ಧೃತರಾಷ್ಟ್ರಃ ಶ್ಲೋಕಮೇಕಂ ಗೀತಾಯಾ ಮಾನಮುಚ್ಯತೇ||]


ವಾಸುದೇವ ಭಗವಂತನು, ಕೇಶಿನಿಷೂದನನು ("ಕೇಶಿನಂ ವಾತಿ ಹನ್ತೀತಿ ಕೇಶವಃ"), ಸುಂದರವಾದ ಕೇಶಪಾಶ / ಗುಂಗುರುಗೂದಲುಳ್ಳ ("ಅಭಿರೂಪಾಃ ಕೇಶಾಃ, ವರ್ತನ್ತೇ ಯಸ್ಯ ಸಃ ಕೇಶವಃ") ಹಾಗೂ ಬ್ರಹ್ಮಾ(ಕ)-ವಿಷ್ಣು(ವ)-ಮಹೇಶ್ವರ(ಈಶ)ಸ್ವರೂಪನಾದ್ದರಿಂದ ("ಕಶ್ಚ, ಈಶಶ್ಚ, ವಿಷ್ಣುಶ್ಚ ಯಸ್ಯ ವಶೇ ವರ್ತನ್ತೇ ಸಃ ಪರಮಾತ್ಮಾ ಪರಬ್ರಹ್ಮಸ್ವರೂಪಃ ಕೇಶವಃ") ಕೇಶವನೆನಿಸಿದ ಪರಮಾತ್ಮನು, ಗೀತೆಯಲ್ಲಿ 620 ಶ್ಲೋಕಗಳನ್ನು ಹೇಳಿರುವನು. ಅರ್ಜುನನು 57 ಶ್ಲೋಕಗಳನ್ನೂ, 67 ಶ್ಲೋಕಗಳನ್ನು ಸಂಜಯನೂ, 1 ಶ್ಲೋಕವನ್ನು ಧೃತರಾಷ್ಟ್ರನೂ ಹೇಳಿರುವರು. ಇದು ಗೀತೆಯ ಒಟ್ಟು ಶ್ಲೋಕ ಸಂಖ್ಯೆಯ ಪರಿಮಾಣ (ಪರಿ-ಒಟ್ಟು + ಮಾನ-ಅಳತೆ)ವಾಗಿದೆ (620+57+67+1=745). 


ಭಾರತಾಮೃತಸರ್ವಸ್ಯ ಗೀತಾಯಾ ಮಥಿತಸ್ಯ ಚ |

ಸಾರಮುದ್ಧೃತ್ಯ ಕೃಷ್ಣೇನ ಅರ್ಜುನಸ್ಯ ಮುಖೇ ಹುತಮ್ || ೪ ||


ಮಹಾಭಾರತವೆಂಬ ಅಮೃತಸಾಗರದ ಹಾಗೂ ಗೀತಾಮೃತದ ಮಥನದಿಂದುಂಟಾದ ಈ ಸಾರವು ಆರಿಸಲ್ಪಟ್ಟು, ಕೃಷ್ಣನಿಂದ ಅರ್ಜುನಿಗೆ ನೀಡಲ್ಪಟ್ಟಿತು.


|| ಇತಿ ಶ್ರೀಮನ್ಮಹಾಭಾರತೋದ್ಧೃತಂ ಶ್ರೀಮದ್-ಗೀತಾಮಾಹಾತ್ಮ್ಯಂ ಸಮ್ಪೂರ್ಣಮ್ ||


|| ಇಲ್ಲಿಗೆ ಶ್ರೀಮನ್-ಮಹಾಭಾರತದಿಂದಾಯ್ದ ಶ್ರೀಮದ್-ಗೀತಾಮಾಹಾತ್ಮ್ಯವು ಸಂಪೂರ್ಣವಾಯಿತು ||


Comments

Popular posts from this blog

विवेकचूडामणिः १ / ವಿವೇಕಚೂಡಾಮಣಿ ೧

೧೭. ವಿಶುದ್ಧವೇದಾಂತಪರಿಭಾಷಾ / १७. विशुद्धवेदान्तपरिभाषा

೩. ಶ್ರೀಮದ್-ಭಗವದ್ಗೀತಾ-ಪೀಠಿಕಾ ೨