೧. ಶ್ರೀಮದ್-ಭಗವದ್ಗೀತಾ-ಮಾಹಾತ್ಮ್ಯ—ವಾರಾಹಪುರಾಣೋಕ್ತ

 ೧. ಪ್ರಾರಬ್ಧಕರ್ಮದ ದೆಸೆಯಿಂದ ಸಂಕಷ್ಟ ಅನುಭವಿಸುತ್ತಿರುವವನಿಗೆ ಪರಮಾತ್ಮನಲ್ಲಿ ಭಕ್ತಿ, ಶ್ರದ್ಧೆಗಳು ಉಂಟಾಗಿ ಆತ್ಮೋದ್ಧಾರವಾಗಲು ಏನು ಮಾಡಬೇಕು?


೧. ಶ್ರೀಮದ್-ಭಗವದ್ಗೀತಾ-ಮಾಹಾತ್ಮ್ಯಮ್

(೧) ವಾರಾಹಪುರಾಣೋಕ್ತಮ್

ಧರಾ ಉವಾಚ |

ಭಗವನ್ ಪರಮೇಶಾನ ಭಕ್ತಿರವ್ಯಭಿಚಾರಿಣೀ |

ಪ್ರಾರಬ್ಧಂ ಭುಜ್ಯಮಾನಸ್ಯ ಕಥಂ ಭವತಿ ಹೇ ಪ್ರಭೋ || ೧ ||


ಭೂದೇವಿಯು ಹೇಳಿದ್ದಳು—

ಹೇ ಪರಮಪ್ರಭುವೂ ಸಕಲೇಶ್ವರನೂ ಆದ ಭಗವಂತನೇ! ಹಿಂದೆ ಮಾಡಿದ, ಇದೀಗ ಫಲಕೊಡಲಾರಂಭಿಸಿದ ಪ್ರಾರಬ್ಧಕರ್ಮದ ಫಲವನ್ನು ಉಣ್ಣುತ್ತಿರುವವನಿಗೆ (ಅನುಭವಿಸುತ್ತಿರುವವನಿಗೆ / ಭೋಗಿಸುತ್ತಿರುವವನಿಗೆ) ಅಚಲವೂ, ಏಕಾಗ್ರವೂ ಆದ ಭಗವದ್ಭಕ್ತಿಯು / ಭಗವತ್ಪ್ರೇಮವು ಹೇಗೆ ಸಂಭವಿಸಬಲ್ಲದು / ಉಂಟಾಗಬಲ್ಲದು ಹೇ ಪ್ರಭುವೆ / ವಲ್ಲಭನೆ?

ವಿಷ್ಣುಃ ಉವಾಚ |

ಪ್ರಾರಬ್ಧಂ ಭುಜ್ಯಮಾನೋ ಹಿ ಗೀತಾಭ್ಯಾಸರತಃ ಸದಾ |

ಸ ಮುಕ್ತಃ ಸ ಸುಖೀ ಲೋಕೇ ಕರ್ಮಣಾ ನೋಪಲಿಪ್ಯತೇ || ೨ ||


ವಿಷ್ಣುವು ಹೇಳಿದ್ದನು—

ಪ್ರಾರಬ್ಧಕರ್ಮವನ್ನು ಅನುಭವಿಸುತ್ತಿರುವವನಾದರೋ ಯಾವಾಗಲೂ ಶ್ರೀಮದ್ಭಗವದ್ಗೀತೆಯ ಅಭ್ಯಾಸದಲ್ಲೇ ನಿರತನಾಗಿದ್ದರೆ (ತೊಡಗಿದ್ದರೆ), ಅಂಥವನು ಜೀವನ್ಮುಕ್ತನು (ಬದುಕಿದ್ದೂ ಸಂಸಾರಬಂಧನಮುಕ್ತನು); ಅವನೇ ಲೋಕದಲ್ಲಿ (ಜಗತ್ತಿನಲ್ಲಿ) ಸುಖಿಯು; ಆತನು ಕರ್ಮದಿಂದ ಲೇಪಗೊಳ್ಳಲಾರನು. (ಕರ್ಮಬಂಧನದಲ್ಲಿ ಸಿಲುಕಲಾರನು; ನಿರ್ಲೇಪ / ನಿಷ್ಕಾಮ / ಫಲಕಾಮರಹಿತ ಕರ್ಮವನ್ನೇ ಮಾಡುವನು. ಇದರಿಂದಾಗಿ ಆತನಿಗೆ ಪಾಪಪುಣ್ಯಗಳಿಲ್ಲ.)


೨. ಮಹಾಪಾಪಗಳನ್ನೂ ಕಳೆದುಕೊಳ್ಳುವ ಸರಳ ಉಪಾಯ ಯಾವುದು?


ಮಹಾಪಾಪಾದಿಪಾಪಾನಿ ಗೀತಾಧ್ಯಾನಂ ಕರೋತಿ ಚೇತ್ |

ಕ್ವಚಿತ್ ಸ್ಪರ್ಶಂ ನ ಕುರ್ವನ್ತಿ ನಲಿನೀದಲಮಂಬುವತ್ || ೩ ||


ಗೀತೆಯನ್ನೇ ಮನನ-ಧ್ಯಾನ ಮಾಡುತ್ತಿದ್ದರೆ, ತಾವರೆಯ ಎಲೆಗೆ ನೀರು ಹೇಗೆ ಅಂಟುವುದಿಲ್ಲವೋ ಹಾಗೆಯೇ ಪಂಚಮಹಾಪಾತಕಗಳೇ ಮೊದಲಾದ ಸಕಲಪಾಪಗಳೂ ಸ್ವಲ್ಪವೂ ಮುಟ್ಟಲಾರವು / ಸ್ಪರ್ಶಿಸಲಾರವು.


೩. ಪ್ರಯಾಗಾದಿ ಸಕಲ ಪವಿತ್ರತೀರ್ಥಗಳ ಏಕಸಾಂನಿಧ್ಯ ಯಾವುದು?


ಗೀತಾಯಾಃ ಪುಸ್ತಕಂ ಯತ್ರ ಯತ್ರ ಪಾಠಃ ಪ್ರವರ್ತತೇ |

ತತ್ರ ಸರ್ವಾಣಿ ತೀರ್ಥಾನಿ ಪ್ರಯಾಗಾದೀನಿ ತತ್ರ ವೈ || ೪ ||


ಗೀತೆಯ ಪುಸ್ತಕವು ಎಲ್ಲಿರುವುದೋ, ಎಲ್ಲಿ ಗೀತಾಪಾಠವು ನಡೆಯುತ್ತದೋ, ಅಲ್ಲಿ ಎಲ್ಲ ಪವಿತ್ರ ತೀರ್ಥಗಳೂ ನೆಲೆಸಿರುವುವು. ಪ್ರಯಾಗವೇ ಮೊದಲಾದ ಕ್ಷೇತ್ರಗಳೂ ಅಲ್ಲಿಯೇ ಇರುವವು. 


೪. ಗೀತಾಧ್ಯಯನ ಸಂನಿಧಿಯ ಮಹಿಮೆ ಏನು?


ಸರ್ವೇ ದೇವಾಶ್ಚ ಋಷಯೋ ಯೋಗಿನಃ ಪನ್ನಗಾಶ್ಚ ಯೇ |

ಗೋಪಾಲಾ ಗೋಪಿಕಾ ವಾऽಪಿ ನಾರದೋದ್ಧವಪಾರ್ಷದೈಃ |

ನಿವಸನ್ತಿ ಸದಾ ತತ್ರ ಯತ್ರ ಗೀತಾ ಪ್ರವರ್ತತೇ || ೫ ||

(/ಸಹಾಯೋ ಜಾಯತೇ ಶೀಘ್ರಂ ಯತ್ರ ಗೀತಾ ಪ್ರವರ್ತತೇ)


ಎಲ್ಲಿ ಗೀತಾಧ್ಯಯನವು ನಡೆಯುತ್ತಿರುವುದೋ ಅಲ್ಲಿ ಎಲ್ಲಾ ದೇವತೆಗಳೂ, ಋಷಿಗಳೂ, ಯೋಗಿಗಳೂ, ಯಾವ ಪನ್ನಗರಿರುವರೋ ಅವರೂ, ಗೋಪಾಲಕರೂ, ಗೋಪಿಕೆಯರೂ, ದೇವರ್ಷಿಗಳಾದ ನಾರದ-ಉದ್ಧವ-ಗಣಗಳೊಡನೆ ಯಾವಾಗಲೂ ನೆಲೆಸಿರುವರು.


ಯತ್ರ ಗೀತಾವಿಚಾರಶ್ಚ ಪಠನಂ ಪಾಠನಂ ಶ್ರುತಮ್ |

ತತ್ರಾಹಂ ನಿಶ್ಚಿತಂ ಪೃಥ್ವಿ ನಿವಸಾಮಿ ಸದೈವ ಹಿ || ೬ ||


ಹೇ ಪೃಥ್ವೀದೇವಿಯೆ! ಎಲ್ಲಿ ಗೀತಾವಿಚಾರವೂ, ಪಠನವೂ (ಓದುವಿಕೆಯೂ), ಪಾಠನವೂ (ಓದಿಸುವಿಕೆಯೂ) ಕೇಳಿಬರುತ್ತದೋ, ನಾನು ಯಾವಾಗಲೂ ಅಲ್ಲಿ ನಿಶ್ಚಿತವಾಗಿಯೂ ವಾಸಮಾಡುತ್ತೇನೆ.


೫. ಪರಮಾತ್ಮನು ಯಾವುದನ್ನು ಆಶ್ರಯಿಸಿ ಲೋಕವನ್ನು ಪಾಲಿಸುವನು?


ಗೀತಾಶ್ರಯೇऽಹಂ ತಿಷ್ಠಾಮಿ ಗೀತಾ ಮೇ ಚೋತ್ತಮಂ ಗೃಹಮ್ |

ಗೀತಾಜ್ಞಾನಮುಪಾಶ್ರಿತ್ಯ ತ್ರೀಂಲ್ಲೋಕಾನ್ಪಾಲಯಾಮ್ಯಹಮ್ || ೭ ||


ನಾನು ಗೀತೆಯೆಂಬ ಆಶ್ರಯದಲ್ಲಿ / ಮನೆಯಲ್ಲಿ ನೆಲೆಸಿರುತ್ತೇನೆ. ಹಾಗೂ, ಗೀತೆಯು ನನಗೆ ಒಳ್ಳೆಯ ಮನೆ. ಗೀತಾಜ್ಞಾನವನ್ನು ಚೆನ್ನಾಗಿ ಆಶ್ರಯಿಸಿ ಮೂರು ಲೋಕಗಳನ್ನೂ ನಾನು ಪಾಲಿಸುತ್ತೇನೆ.


೬. ಗೀತೆಯ ಅರ್ಧಾಕ್ಷರದ ಮಹಿಮೆಯೇನು?


ಗೀತಾ ಮೇ ಪರಮಾ ವಿದ್ಯಾ ಬ್ರಹ್ಮರೂಪಾ ನ ಸಂಶಯಃ |

ಅರ್ಧಮಾತ್ರಾಕ್ಷರಾ ನಿತ್ಯಾ ಸಾ(/ಸ್ವಾ)ನಿರ್ವಾಚ್ಯಪದಾತ್ಮಿಕಾ || ೮ ||


ಗೀತೆಯು ನನಗೆ ಪರಮವಿದ್ಯೆಯು; ಬ್ರಹ್ಮರೂಪವೇ ಆದದ್ದು; ಸಂಶಯವಿಲ್ಲ. ಅದರ ಅರ್ಧಮಾತ್ರಾಕಾಲದ ಅಕ್ಷರವೂ ಸಹ ಅನಿರ್ವಚನೀಯವಾದ ಪರಮಪದವನ್ನೀಯುವಂಥದ್ದು.


೭. ಗೀತೆಯು ಮೊದಲು ಯಾರಿಂದ ಯಾರಿಗೆ ಹೇಳಲ್ಪಟ್ಟಿತು? ಅದರಲ್ಲಿನ ವಿಷಯವೇನು? 


ಚಿದಾನಂದೇನ ಕೃಷ್ಣೇನ ಪ್ರೋಕ್ತಾ ಸ್ವಮುಖತೋऽರ್ಜುನಮ್ |

ವೇದತ್ರಯೀ ಪರಾನಂದಾ ತತ್ತ್ವಾರ್ಥಜ್ಞಾನಸಂಯುತಾ || ೯ ||


ಇಂತಹ ಗೀತೆಯು ಚಿದಾನಂದಸ್ವರೂಪನಾದ (ಸತ್, ಚಿತ್, ಆನಂದ—ಇರವು, ಅರಿವು, ಆನಂದ) ಕೃಷ್ಣನಿಂದಲೇ ಮುಖತಃ ಅರ್ಜುನನಿಗೆ ಪ್ರೋಕ್ತವಾದದ್ದು / ಪ್ರಕೃಷ್ಟವಾಗಿ, ಚೆನ್ನಾಗಿ ಉಕ್ತವಾದದ್ಜು, ಹೇಳಲ್ಪಟ್ಟದ್ದು / ಉಪದೇಶಿಸಲ್ಪಟ್ಟದ್ದು; ಮೂರು ವೇದಗಳ ಸಾರರೂಪ; ಪರಮಾನಂದಸ್ವರೂಪ; ತತ್ತ್ವಾರ್ಥಜ್ಞಾನದಿಂದ ಕೂಡಿರುವುದಾಗಿದೆ.


೮. ಸಂಪೂರ್ಣ ಗೀತಾಪಾಠದ ಫಲವೇನು?


ಯೋऽಷ್ಟಾದಶಜಪೀ ನಿತ್ಯಂ ನರೋ (ನಿರ್ಮಲ/)ನಿಶ್ಚಲ-ಮಾನಸಃ |

ಜ್ಞಾನಸಿದ್ಧಿಂ ಸ ಲಭತೇ ತತೋ ಯಾತಿ ಪರಂ ಪದಮ್ || ೧೦ ||


ಯಾವ ನರನು ಗೀತೆಯ ೧೮ ಅಧ್ಯಾಯಗಳನ್ನೂ ನಿತ್ಯವೂ ಶುದ್ಧ ಹಾಗೂ ಸ್ಥಿರವಾದ ಮನಸ್ಸಿನಿಂದ ಜಪಿಸುತ್ತಾನೋ / ಪಠಿಸುತ್ತಾನೋ ಅವನು ಜ್ಞಾನಸಿದ್ಧಿಯನ್ನು ಪಡೆದು ಬಳಿಕ ಪರಮಪದವನ್ನು ಹೊಂದುತ್ತಾನೆ.


೯. ಗೀತಾರ್ಧ ಪಠನದ ಲಾಭವೇನು?


ಪಾಠೇऽಸಮರ್ಥಃ ಸಂಪೂರ್ಣೇ ತತೋऽರ್ಧಂ ಪಾಠಮಾಚರೇತ್ |

ತದಾ ಗೋದಾನಜಂ ಪುಣ್ಯಂ ಲಭತೇ ನಾತ್ರ ಸಂಶಯಃ || ೧೧ ||


ಇಡೀ ಗೀತೆಯನ್ನು ಓದಲು ಸಾಧ್ಯವಾಗದಿದ್ದರೆ, ಅದರ ಅರ್ಧವನ್ನು ಓದಬೇಕು. ಆಗ, ಗೋದಾನದ ಪುಣ್ಯವನ್ನು ಹೊಂದುವುದರಲ್ಲಿ ಸಂಶಯವಿಲ್ಲ.


೧೦. ಗೀತೆಯ ೧/೩ ಹಾಗೂ ೧/೬ ಭಾಗದ ಪಠನದ ಪ್ರಯೋಜನವೇನು?


ತ್ರಿಭಾಗಂ ಪಠಮಾನಸ್ತು ಗಂಗಾಸ್ನಾನಫಲಂ ಲಭೇತ್ |

ಷಡಂಶಂ ಜಪಮಾನಸ್ತು ಸೋಮಯಾಗಫಲಂ ಲಭೇತ್ || ೧೨ ||


ಗೀತೆಯ ಮೂರನೇ ಒಂದು ಭಾಗವನ್ನು ನಿತ್ಯವೂ ಓದುವವನು ಗಂಗಾಸ್ನಾನಫಲವನ್ನೂ, ಆರನೇ ಒಂದು ಭಾಗವನ್ನು ನಿತ್ಯ ಪಠಿಸುವವನು ಸೋಮಯಾಗದ ಫಲವನ್ನೂ ಪಡೆಯುವನು.


೧೧. ಗೀತೆಯ ಒಂದಧ್ಯಾಯದ ನಿತ್ಯಪಠನಫಲವೇನು?


ಏಕಾಧ್ಯಾಯಂ ತು ಯೋ ನಿತ್ಯಂ ಪಠತೇ ಭಕ್ತಿಸಂಯುತಃ |

ರುದ್ರಲೋಕಮವಾಪ್ನೋತಿ ಗಣೋ ಭೂತ್ವಾ ವಸೇಚ್ಚಿರಮ್ || ೧೩ ||


ಯಾವನು ಗೀತೆಯ ಒಂದು ಅಧ್ಯಾಯವನ್ನಾದರೂ ನಿತ್ಯವೂ ಭಕ್ತಿಯಿಂದ ಪಠಿಸುವನೋ ಅವನು ರುದ್ರಲೋಕವನ್ನೈದಿ, ಅಲ್ಲಿ ಶಿವಗಣವಾಗಿ ಚಿರಕಾಲ ವಾಸಮಾಡುವನು.


೧೨. ಗೀತೆಯ ಶ್ಲೋಕದ ಒಂದು ಪಾದವನ್ನಾದರೂ ನಿತ್ಯ ಪಠಿಸಿದರೇನಾಗುವುದು?


ಅಧ್ಯಾಯಂ ಶ್ಲೋಕಪಾದಂ ವಾ ನಿತ್ಯಂ ಯಃ ಪಠತೇ ನರಃ |

ಸ ಯಾತಿ ನರತಾಂ ಯಾವನ್ಮನ್ವನ್ತರಂ ವಸುಂಧರೇ || ೧೪ ||


ಗೀತೆಯ ಒಂದು ಅಧ್ಯಾಯವನ್ನೋ, ಶ್ಲೋಕದ ಒಂದು ಪಾದವನ್ನಾದರೂ ಯಾವ ಮನುಜನು ನಿತ್ಯವೂ ಪಠಿಸುವನೋ ಅಂಥವನು ೧ ಮನ್ವಂತರಕಾಲ ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟುವನು.


೧೩. ಚಂದ್ರಲೋಕಪ್ರಾಪ್ತಿಗೆ ಹಾಗೂ ಮನುಷ್ಯಜನ್ಮ ಬರಲು ಏನು ಮಾಡಬೇಕು?


ಗೀತಾಯಾಃ ಶ್ಲೋಕದಶಕಂ ಸಪ್ತ ಪಂಚ ಚತುಷ್ಟಯಮ್ |

ದ್ವೌ ತ್ರೀನೇಕಂ ತದರ್ಧಂ ವಾ ಶ್ಲೋಕಾನಾಂ ಯಃ ಪಠೇನ್ನರಃ || ೧೫ ||


ಗೀತೆಯ ೧೦, ೭, ೫, ೪, ೨, ೩, ೧ ಅಥವಾ ಅದರ ಅರ್ಧ ಶ್ಲೋಕವನ್ನಾದರೂ ಯಾವ ಮನುಷ್ಯನು ಪಠಿಸುವನೋ,


ಚಂದ್ರಲೋಕಮವಾಪ್ನೋತಿ ವರ್ಷಾಣಾಮಯುತಂ ಧ್ರುವಮ್ |

ಗೀತಾಪಾಠಸಮಾಯುಕ್ತೋ ಮೃತೋ ಮಾನುಷತಾಂ ವ್ರಜೇತ್ || ೧೬ ||


ಅವನು ೧೦ ಸಾವಿರ ವರ್ಷಕಾಲ ಸ್ಥಿರವಾಗಿ ಚಂದ್ರಲೋಕವನ್ನು ಹೊಂದುವನು. ಗೀತೆಯನ್ನು ಪಠಿಸುತ್ತಲೇ ಸತ್ತರೆ, ಮುಂದೆ ಮನುಷ್ಯಜನ್ಮವನ್ನು ಹೊಂದುವನು.


೧೪. ಮುಕ್ತಿಪ್ರಾಪ್ತಿಗೆ ಏನು ಮಾಡಬೇಕು?


ಗೀತಾಭ್ಯಾಸಂ ಪುನಃ ಕೃತ್ವಾ ಲಭತೇ ಮುಕ್ತಿಮುತ್ತಮಾಮ್ |

ಗೀತೇತ್ಯುಚ್ಚಾರಸಂಯುಕ್ತೋ ಮ್ರಿಯಮಾಣೋ ಗತಿಂ ಲಭೇತ್ || ೧೭ ||


ಮುಂದಿನ ಜನ್ಮದಲ್ಲಿ ಮತ್ತೆ ಗೀತಾಭ್ಯಾಸವನ್ನು ಮಾಡಿ ಶ್ರೇಷ್ಠಗತಿಯಾದ ಮುಕ್ತಿಯನ್ನೈದುವನು. ಸಾಯುತ್ತಿರುವವನು 'ಗೀತೇ, ಗೀತಾ' ಎಂದು ಉಚ್ಚರಿಸಿದರೂ ಕೂಡ ಸದ್ಗತಿಯನ್ನು ಹೊಂದುತ್ತಾನೆ.


೧೫. ಗೀತಾರ್ಥವನ್ನು ಕೇಳುವುದರಿಂದೇನು ಫಲ?


ಗೀತಾರ್ಥಶ್ರವಣಾಸಕ್ತೋ ಮಹಾಪಾಪಯುತೋऽಪಿ ವಾ |

ವೈಕುಂಠಂ ಸಮವಾಪ್ನೋತಿ ವಿಷ್ಣುನಾ ಸಹ ಮೋದತೇ || ೧೮ ||


ಮಹಾಪಾಪದಿಂದ ಕೂಡಿದವನಾದರೂ, ಗೀತೆಯ ಅರ್ಥವನ್ನು ಶ್ರವಣಮಾಡಲು ಆಸಕ್ತನಾದರೆ, ವೈಕುಂಠವನ್ನು ಹೊಂದುತ್ತಾನೆ ಹಾಗೂ ವಿಷ್ಣುವಿನೊಂದಿಗೆ ಆನಂದದಿಂದಿರುತ್ತಾನೆ.


ಗೀತಾರ್ಥಂ ಧ್ಯಾಯತೇ ನಿತ್ಯಂ ಕೃತ್ವಾ ಕರ್ಮಾಣಿ ಭೂರಿಶಃ |

ಜೀವನ್ಮುಕ್ತಃ ಸ ವಿಜ್ಞೇಯೋ ದೇಹಾನ್ತೇ ಪರಮಂ ಪದಮ್ || ೧೯ ||


ಬಹಳಷ್ಟು ಪುಣ್ಯ-ಪಾಪಕರ್ಮಗಳನ್ನು ಮಾಡಿದರೂ, ಗೀತೆಯ ಅರ್ಥವನ್ನು ನಿತ್ಯವೂ ಧ್ಯಾನಿಸಿದರೆ ಅಂಥವನು ಬದುಕಿದ್ದಾಗಲೇ ಮುಕ್ತನೆಂದು (ಜೀವನ್-ಮುಕ್ತನೆಂದು, ಸದೇಹಮುಕ್ತನೆಂದು) ತಿಳಿಯಬೇಕು; ಅವನು ದೇಹಬಿಟ್ಟ ಮೇಲೆಯೂ ವಿದೇಹಮುಕ್ತಿಯನ್ನೂ ಹೊಂದುವನು.


೧೬. ಗೀತೆಯಿಂದ ಹಿಂದೆ ಯಾರ್ಯಾರು ಪರಮಪದವನ್ನು ಹೊಂದಿರುವರು?


ಗೀತಾಮಾಶ್ರಿತ್ಯ ಬಹವೋ ಭೂಭುಜೋ ಜನಕಾದಯಃ |

ನಿರ್ಧೂತಕಲ್ಮಷಾ ಲೋಕೇ ಗೀತಾಯಾತಾಃ ಪರಂ ಪದಮ್ || ೨೦ ||


ಜನಕನೇ ಮೊದಲಾದ ಅನೇಕ ರಾಜರುಗಳು ಗೀತೆಯನ್ನಾಶ್ರಯಿಸಿ ಲೋಕದಲ್ಲಿ ಪಾಪವನ್ನು ಕಳೆದುಕೊಂಡು, ಗೀತೆಯಿಂದಲೇ ಪರಮಪದವನ್ನು ಹೊಂದಿದವರಾಗಿರುವರು.


೧೭. ಗೀತಾಮಾಹಾತ್ಮ್ಯೆಯ ಪಠನವನ್ನು ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು? ಅದನ್ನು ಓದದಿದ್ದರೆ ನಷ್ಟವೇನು?


ಗೀತಾಯಾಃ ಪಠನಂ ಕೃತ್ವಾ ಮಾಹಾತ್ಮ್ಯಂ ನೈವ ಯಃ ಪಠೇತ್ |

ವೃಥಾ ಪಾಠೋ ಭವೇತ್ತಸ್ಯ ಶ್ರಮ ಏವ ಹ್ಯುದಾಹೃತಃ || ೨೧ ||


ಗೀತೆಯ ಪಠನವನ್ನು ಮಾಡಿ ಗೀತಾಮಾಹಾತ್ಮ್ಯವನ್ನು ಯಾವನು ಎಂದಿಗೂ ಪಠಿಸಿರುವುದಿಲ್ಲವೋ ಅಂಥವನ ಪಠನವು ವ್ಯರ್ಥವೇ ಸರಿ; ಅದು ಕೇವಲ ಆಯಾಸವನ್ನಷ್ಟೇ / ಶ್ರಮವನ್ನು ಮಾತ್ರ ಉಂಟುಮಾಡುವುದು ಎನ್ನಲಾಗಿದೆ.


ಏತನ್ಮಾಹಾತ್ಮ್ಯಸಂಯುಕ್ತಂ ಗೀತಾಭ್ಯಾಸಂ ಕರೋತಿ ಯಃ |

ಸ ತತ್ಫಲಮವಾಪ್ನೋತಿ ದುರ್ಲಭಾಂ ಗತಿಮಾಪ್ನುಯಾತ್ || ೨೨ ||


ಈ ಮಾಹಾತ್ಮ್ಯ ಸಮೇತವಾಗಿ ಯಾವನು ಗೀತಾಧ್ಯಯನವನ್ನು ಮಾಡುತ್ತಾನೋ, ಅಂಥವನು ಇದರಲ್ಲಿ ಹೇಳಿದ ಆಯಾ ಫಲವನ್ನು ಹಾಗೂ ಅತ್ಯಂತ ದುರ್ಲಭವಾದ ಸದ್ಗತಿಯನ್ನೂ ಹೊಂದುವನು.


ಸೂತ ಉವಾಚ |

ಮಾಹಾತ್ಮ್ಯಮೇತದ್ಗೀತಾಯಾ ಮಯಾ ಪ್ರೋಕ್ತಂ ಸನಾತನಮ್ |

ಗೀತಾಂತೇ ಚ ಪಠೇದ್ಯಸ್ತು ಯದುಕ್ತಂ ತತ್ಫಲಂ ಲಭೇತ್ || ೨೩ ||


ಸೂತನು ಹೇಳಿದ್ದನು—

ನನ್ನಿಂದ ಹೇಳಲ್ಪಟ್ಟ ಇದು ಗೀತೆಯ ಸನಾತನವಾದ ಮಾಹಾತ್ಮ್ಯವು (ಮಹಾತ್ಮೆಯು). ಅಂತೆಯೇ, ಇದನ್ನು ಗೀತಾಪಠನದ ಕೊನೆಯಲ್ಲಿ ಯಾವನು ಪಠಿಸುವನೋ ಅವನು ಇದರಲ್ಲಿ ಯಾವ ಫಲವನ್ನು ಹೇಳಿದೆಯೋ ಅದನ್ನೇ ಪಡೆಯುವನು.


|| ಇತಿ ಶ್ರೀವಾರಾಹಪುರಾಣೋಕ್ತಂ ಶ್ರೀಮದ್ಗೀತಾಮಾಹಾತ್ಮ್ಯಂ ಸಮ್ಪೂರ್ಣಮ್ ||

|| ಇಲ್ಲಿಗೆ ಶ್ರೀವಾರಾಹಪುರಾಣದಲ್ಲಿ ಹೇಳಿದ ಶ್ರೀಮದ್ ಗೀತೆಯ ಮಹಾತ್ಮೆಯು ಸಂಪೂರ್ಣವು ||


Comments

Popular posts from this blog

विवेकचूडामणिः १ / ವಿವೇಕಚೂಡಾಮಣಿ ೧

೧೭. ವಿಶುದ್ಧವೇದಾಂತಪರಿಭಾಷಾ / १७. विशुद्धवेदान्तपरिभाषा

೩. ಶ್ರೀಮದ್-ಭಗವದ್ಗೀತಾ-ಪೀಠಿಕಾ ೨