೧೨. ಶ್ರೀಮದ್-ಭಗವದ್ಗೀತಾ-ಪೀಠಿಕಾ ೯
(೩೧) ಭಗವದ್ಗೀತಾಸಾರವಿಚಾರ—ಹೊಸಕೆರೆ ಚಿದಂಬರಯ್ಯ …ಕ್ರಿ.ಶ. 1911 ರಲ್ಲಿ ವಿದ್ಯಾಭೂಷಣ, ವೇದಾಂತವಾಚಸ್ಪತಿ, Ph.D., F.R.S.A,M.R.A.,S. ಇತ್ಯಾದಿ ಬಿರುದಾಂಕಿತರಾದ ಕುರ್ತುಕೋಟಿಯ ಶ್ರೀಮಹಾಭಾಗವತರು ಧಾರವಾಡದ ಮಹಾಸಭೆಯಲ್ಲಿ ಕೊಟ್ಟ ಭಗವದ್ಗೀತಾಸಾರವಿಚಾರ ವ್ಯಾಖ್ಯಾನಮಾಲೆಯನ್ನು ಈಗ ಪುಸ್ತಕರೂಪದಲ್ಲಿ…ತರುವುದಕ್ಕೆ ನನಗೆ ಬಹು ಸಂತೋಷವಾಗುತ್ತದೆ….ಶ್ರೀಕೃಷ್ಣನ ನಿಜವಾದ ತಾತ್ಪರ್ಯವನ್ನು ಹಿಡಿಯುವುದು ಬರೀ ಮೇಧಾಶಕ್ತಿಗೆ ಸಾಧ್ಯವಲ್ಲ….ಪ್ರಜ್ಞಾಶಾಲಿಯಾಗಿ ಸಾಧನಚತುಷ್ಟಯ ಸಂಪನ್ನನಾಗಿ ಗುರುವಿಗೆ ಶರಣೆಂದವನಿಗೆ ಮಾತ್ರ ಗೀತೆಯ ಯಥಾರ್ಥವು ಸ್ಫೂರ್ತಿಯಾದೀತು. ಪಾತ್ರೆಯಲ್ಲಿ ತುಂಬಿಟ್ಟ ಹಾಲು, ಆಗತಾನೆ ಹಸುವಿನ ಕೆಚ್ಚಲಿನಿಂದ ಹೊರಟ ಹಾಲಿನಷ್ಟು ಗುಣಕಾರಿಯಲ್ಲವೆಂಬುದು ಹೇಗೋ ಹಾಗೆ, ಇದು ಅವರ ಸಾಕ್ಷಾನ್ಮುಖದಿಂದ ತನಗೆ ತಾನೇ ಸ್ಫೂರ್ತಿಯಾಗಿ ಏಕಪ್ರಕಾರವಾಗಿ ಪ್ರವಹಿಸುತ್ತಿದ್ದ ವಾಣಿಯಷ್ಟು ಉದ್ಬೋಧಕಾರಿಯಾಗಲಾರದು…ಅವರಿಂದ ಅಗತ್ಯವಾದ ತಿದ್ದುಪಾಟುಗಳನ್ನು ಮಾಡಿಸಿರುವೆನು. ಗೀತಾರ್ಥದಲ್ಲಿ ತೋರಬಹುದಾದ ಎಷ್ಟೋ ಸಂಶಯದ ಗಂಟುಗಳನ್ನು ಬಿಚ್ಚಿ, ಶ್ರುತಿಸ್ಮೃತಿ ಮೊದಲಾದವುಗಳ ಪ್ರಮಾಣವಾಕ್ಯಗಳನ್ನೂ, ಲೌಕಿಕವಾದ ಯುಕ್ತಿಗಳನ್ನೂ ಸಮಂಜಸವಾದ ಉದಾಹರಣೆಗಳನ್ನೂ ಸೂರೆಮಾಡುವ ಈ ವ್ಯಾಖ್ಯಾನಗಳನ್ನು ಕನ್ನಡಿಗರೆಲ್ಲರೂ ಅಗತ್ಯವಾಗಿ ಓದಬೇಕಾಗಿರುವುದು. ಬ್ರಹ್ಮನಿಷ್ಠಾಯ ವಿದ್ಮಹೇ ಸಂಯಮೀಂದ್ರಾಯ ಧೀಮಹಿ | ತನ್ನಃ ಸಚ್ಚಿದಾನಂದಃ ಪ್ರಚೋದಯಾತ್ || ★...