ಯೋಗವಾಸಿಷ್ಠಮ್ ೨

योगवासिष्ठम् २
२) द्वितीयः सर्गः

दिवि भूमौ तथाकाशे 
बहिरन्तश्च मे विभुः ।
यो विभात्यवभासात्मा
तस्मै सर्वात्मने नमः ॥ १ ॥

ದೇವಲೋಕದಲ್ಲಿ, ಭೂಲೋಕದಲ್ಲಿ, ಹಾಗೆಯೇ ಇವುಗಳ ನಡುವಿನ ಆಕಾಶ / ಅಂತರಿಕ್ಷಲೋಕ ದಲ್ಲಿ ಹಾಗೂ ನನ್ನ ದೇಹದ ಒಳ-ಹೊರಗೆಲ್ಲ (ವ್ಯಾಪಿಸಿ), ವಿಶೇಷವಾಗಿ ಬೆಳಗುತ್ತ ವಿಭುವೆನಿಸಿ ಯಾವನು ಅವನ್ನೆಲ್ಲ ತನ್ನದಾದ ಅವಿದ್ಯೆಯ ಬಲದಿಂದ ನಾನಾರೂಪವಾಗಿ ಬೆಳಗುತ್ತಿರುವನೋ ಅಂತಹ ಪಾರಮಾರ್ಥಿಕದೃಷ್ಟಿಯಿಂದ ಸ್ವಯಂದೀಪ್ತನಾಗಿ ನಿರ್ವಿಕಾರನೂ ಚಿನ್ಮಾತ್ರಸ್ವಭಾವನಾದ ಎಲ್ಲರ ಅಂತರಾತ್ಮಚೈತನ್ಯಜ್ಯೋತಿಯಾಗಿದ್ದು ವಿಶ್ವಾತ್ಮ / ಸರ್ವಾತ್ಮ ನೆನಿಸಿದ  ಬ್ರಹ್ಮಾತ್ಮ / ಪರಬ್ರಹ್ಮವಸ್ತುವಾದ ನನ್ನ ನಿಜವಾದ ಮೂಲಸ್ವರೂಪಕ್ಕೆ ನಮಸ್ಕಾರವು. 

ಅಥವಾ— "पृथिवी पूर्वरूपम् । द्यौरुत्तररूपम् ||" ಎಂಬ ತೈತ್ತಿರೀಯೋಪನಿಷನ್ಮಂತ್ರದಲ್ಲಿರುವಂತೆ,ಸ್ವರ್ಣಮಯವಾಗಿರುವ ಬ್ರಹ್ಮಾಂಡದ ಮೇಲಿನ ಕಪಾಲದಲ್ಲೂ (ಮುಂಡ— ಶಿರ), ರಜತಮಯವಾಗಿರುವ ಭೂಮಿಯಲ್ಲಿನ ಕೆಳಗಿನ ಕಪಾಲದಲ್ಲೂ(ರುಂಡ— ದೇಹ), ಆಕಾಶದಲ್ಲಿ ಇವೆರಡರ ನಡುವಣ ಸೂಕ್ಷ್ಮಾಕಾಶ (ಹೃದಯಾಕಾಶ, ದಹರಾಕಾಶ)ದಲ್ಲೂ, ಬ್ರಹ್ಮಾಂಡದ ಒಳಹೊರಗೂ ಯಾವ ಈ ವಿಶ್ವಾತ್ಮನು ವಿಶೇಷವಾಗಿ ಸೂರ್ಯ ಚಂದ್ರ ಅಗ್ನಿ ವಾಕ್ ಮುಂತಾದುವುಗಳಿಗಿಂತ ಅತ್ಯಧಿಕವಾಗಿ ಅಖಂಡವಾದ ಸ್ವಯಂಪ್ರಕಾಶವುಳ್ಳವನಾಗಿ ಬೆಳಗುತ್ತಾನೆ. 

ಹೇಗೆಂದರೆ, ಇವನು ಸೂರ್ಯಾದಿಗಳಿಗೂ ಮೂಲಜ್ಯೋತಿಯಾದ ಅವರೆಲ್ಲರ ಆತ್ಮನು. "येन सूर्यस्तपति तेजसेद्धः"— "ಯಾವ ತೇಜಸ್ಸಿನ ಪ್ರಭಾವದಿಂದ ಸೂರ್ಯನೂ ಶಾಖವನ್ನೀಯುತ್ತಾನೋ", "आत्मैवास्य ज्योतिर्भवति" — "ಆತ್ಮನೇ ಇವನ ಬೆಳಕಾಗುತ್ತಾನೆ", "ज्योतिषामपि तज्ज्योतिः"— "ಬೆಳಕುಗಳಿಗೂ ಮೂಲ ಬೆಳಕೇ ಅದು" ಇತ್ಯಾದಿ ಶ್ರುತಿ-ಸ್ಮೃತಿ-ವಾಕ್ಯಗಳ ಆಧಾರದಿಂದಾಗಿ. ಅಂತಹ ಸರ್ವವಸ್ತುಗಳ ಪಾರಮಾರ್ಥಿಕಸ್ವರೂಪನಾದ ಸರ್ವಾತ್ಮನಿಗೆ ನಮಸ್ಕಾರ ಎಂದರ್ಥ.

Comments

Popular posts from this blog

विवेकचूडामणिः १ / ವಿವೇಕಚೂಡಾಮಣಿ ೧

೧೭. ವಿಶುದ್ಧವೇದಾಂತಪರಿಭಾಷಾ / १७. विशुद्धवेदान्तपरिभाषा

೩. ಶ್ರೀಮದ್-ಭಗವದ್ಗೀತಾ-ಪೀಠಿಕಾ ೨