ಯೋಗವಾಸಿಷ್ಠಮ್ ೧

ಯೋಗವಾಸಿಷ್ಠಮ್ ೧
(ವಾಲ್ಮೀಕೀಯಮ್)

(ಪರಮಹಂಸ-ಶ್ರೀಮದ್-ಆನಂದಬೋಧೇಂದ್ರಸರಸ್ವತೀ-ಪ್ರಣೀತ-ವಾಸಿಷ್ಠ-ಮಹಾರಾಮಾಯಣ-ತಾತ್ಪರ್ಯ-ಪ್ರಕಾಶಾಖ್ಯ-ವ್ಯಾಖ್ಯಾಯಾಃ-ದಂಬೆ-ಕೃಷ್ಣಮೂರ್ತಿಶಾಸ್ತ್ರಿ-ಕೃತೇನ ಕರ್ಣಾಟಕಭಾಷಾನುವಾದೇನ ಸಹಿತಮ್)

೧. ವೈರಾಗ್ಯಪ್ರಕರಣಮ್

೧) ಸೂತ್ರಪಾತನಕೋ ನಾಮ ಪ್ರಥಮಃ ಸರ್ಗಃ


ಯತಃ ಸರ್ವಾಣಿ ಭೂತಾನಿ ಪ್ರತಿಭಾನ್ತಿ ಸ್ಥಿತಾನಿ ಚ |
ಯತ್ರೈವೋಪಶಮಂ ಯಾನ್ತಿ ತಸ್ಮೈ ಸತ್ಯಾತ್ಮನೇ ನಮಃ ||೧||

ಯಾವುದರಿಂದ ಸಕಲಚರಾಚರಗಳು ಪ್ರಕಾಶಿಸುವುವೋ / ಉಂಟಾಗುವುವೋ / ಪ್ರಕಾಶಕ್ಕೆ ಬರುವುವೋ, ಇರುವುವೋ / ಸ್ಥಿತವಾಗಿವೆಯೋ, ಹಾಗೂ ಯಾವುದರಲ್ಲೇ ಉಪಶಮನಹೊಂದುವುವೋ / ಲಯವಾಗುವುವೋ, ಅಂತಹ ಸತ್ಯಾತ್ಮಕ್ಕೆ / ನಿಜವಾದ ಆತ್ಮಕ್ಕೆ / ಅವ್ಯಕ್ತವಾದರೂ ನಿಜವಾಗಿಯೂ
ಇರುವ ನಮ್ಮ ಅಂತರಾತ್ಮಕ್ಕೆ / ಅಂತರ್ಯಾಮಿಯಾದ (ಲಿಂಗಾತೀತ, ಗುಣಾತೀತ, ಕಾಲಾತೀತ, ನಾಮ-ರೂಪಾತೀತ) ಪರಮಾತ್ಮಕ್ಕೆ ನಮಸ್ಕಾರ.

ಜ್ಞಾತಾ ಜ್ಞಾನಂ ತಥಾ ಜ್ಞೇಯಂ ದ್ರಷ್ಟಾ ದರ್ಶನದೃಶ್ಯಭೂಃ |
ಕರ್ತಾ ಹೇತುಃ ಕ್ರಿಯಾ ಯಸ್ಮಾತ್ತಸ್ಮೈ ಜ್ಞಪ್ತ್ಯಾತ್ಮನೇ ನಮಃ ||೨||

ಯಾವನು ಜ್ಞಾತೃವೂ (ತಿಳಿಯುವವನೂ), ಜ್ಞಾನವೂ (ತಿಳುವಳಿಕೆಯೂ), ಹಾಗೆಯೇ ಜ್ಞೇಯವೂ (ತಿಳಿಯಲ್ಪಡಬೇಕಾದುದೂ); ದ್ರಷ್ಟಾ (ಕಾಣುವವನೂ), ದರ್ಶನ (ಕಾಣುವುದೂ / ಕಂಡದ್ದೂ), ದೃಶ್ಯವೂ (ಕಾಣಬೇಕಾದದ್ದೂ); ಕರ್ತೃವೂ (ಮಾಡುವವನೂ), ಹೇತುವೂ (ಎಲ್ಲಕ್ಕೂ ಕಾರಣನೂ) ಆಗಿರುವನೋ, ಯಾವನಿಂದಾಗಿ ಲೋಕದ ಸಮಸ್ತಕ್ರಿಯೆಗಳೂ ನಡೆಯುವುವೋ ಅಂತಹ ಜ್ಞಾನ / ಬುದ್ಧಿರೂಪೀ ಆತ್ಮ / ಪರಮಾತ್ಮನಿಗೆ ನಮಸ್ಕಾರ.
ಟಿಪ್ಪಣಿ— ಜ್ಞಾತುಂ ಯೋಗ್ಯಂ (ತಿಳಿಯಲು ಯೋಗ್ಯವಾದದ್ದು / ತಿಳಿಯುವಂಥದ್ದು)— ಜ್ಞೇಯಮ್ | ದ್ರಷ್ಟುಂ ಯೋಗ್ಯಂ (ನೋಡಲು ಯೋಗ್ಯವಾದದ್ದು / ನೋಡುವಂಥದ್ದು)— ದೃಶ್ಯಮ್ | ಜ್ಞಪ್ಯತೇ ಜ್ಞಾಯತೇ ಅನಯಾ ಇತಿ ಜ್ಞಪ್ತಿಃ / ಬುದ್ಧಿಃ (ಇದರಿಂದ ತಿಳಿಯಲ್ಪಡುತ್ತದೆ ಎಂಬುದರಿಂದಾಗಿ) ||

ಸ್ಫುರನ್ತಿ ಸೀಕರಾ ಯಸ್ಮಾದಾನನ್ದಸ್ಯಾಮ್ಬರೇऽವನೌ |
ಸರ್ವೇಷಾಂ ಜೀವನಂ ತಸ್ಮೈ ಬ್ರಹ್ಮಾನನ್ದಾತ್ಮನೇ ನಮಃ ||೩||

ಆನನ್ದಸ್ಯ ಸೀಕರಾಃ (ತೋಯಕಣಾಃ ಇವ) ಅಮ್ಬರೇ (ದಿವಿ) ಅವನೌ (ಭುವಿ) (ಚ) ಯಸ್ಮಾತ್ ಸ್ಫುರನ್ತಿ, (ತಾದೃಶಂ) ಸರ್ವೇಷಾಂ ಜೀವನಂ (ಯತ್ - ಅಸ್ತಿ), ತಸ್ಮೈ ಬ್ರಹ್ಮಾನನ್ದಾತ್ಮನೇ ನಮಃ ||
ಪರಮಾನಂದದ ಕಣಗಳು ಯಾವುದರಿಂದಾಗಿ ದೇವಲೋಕದಲ್ಲೂ, ಭೂಲೋಕದಲ್ಲೂ ಸ್ಫುರಿಸುತ್ತವೋ / ಹೊಳೆಯುತ್ತವೋ, (ಅಂತಹ) ಎಲ್ಲರ ಜೀವನಕಾರಣವು (ಯಾವುದಿದೆಯೋ), ಅಂತಹ ಬ್ರಹ್ಮಾನಂದಸ್ವರೂಪವಾದ ಆತ್ಮನಿಗೆ ನಮಸ್ಕಾರ.
ಸುತೀಕ್ಷ್ಣೋ ಬ್ರಾಹ್ಮಣಃ ಕಶ್ಚಿತ್ಸಂಶಯಾಕೃಷ್ಟಮಾನಸಃ |
ಅಗಸ್ತೇರಾಶ್ರಮಂ ಗತ್ವಾ ಮುನಿಂ ಪಪ್ರಚ್ಛ ಸಾದರಮ್ ||೪||

ಸುತೀಕ್ಷ್ಣನೆಂಬೊಬ್ಬ ಬ್ರಾಹ್ಮಣನು ಸಂಶಯಾವೃತವಾದ ಮನಸ್ಸುಳ್ಳವನಾಗಿ, ಅಗಸ್ತಿಯ / ಅಗಸ್ತ್ಯನ ಆಶ್ರಮಕ್ಕೆ ಹೋಗಿ, ಆ ಮುನಿಯನ್ನು ಆದರಪೂರ್ವಕವಾಗಿ ಪ್ರಶ್ನಿಸಿದನು.
ಸುತೀಕ್ಷ್ಣ ಉವಾಚ
ಭಗವನ್ಧರ್ಮತತ್ತ್ವಜ್ಞ ಸರ್ವಶಾಸ್ತ್ರವಿನಿಶ್ಚಿತ |
ಸಂಶಯೋऽಸ್ತಿ ಮಹಾನೇಕಸ್ತ್ವಮೇತಂ ಕೃಪಯಾ ವದ ||೫||

ಸುತೀಕ್ಷ್ಣನು ಹೇಳಿದನು
ಹೇ ಭಗವನ್! ಧರ್ಮದ ಮರ್ಮವನ್ನರಿತವನೇ! ಸಕಲಶಾಸ್ತ್ರವಿಚಾರಗಳನ್ನೂ ‘ಇದಮ್ ಇತ್ಥಮ್’ (ಇದು ಹೀಗೆಯೇ) ಎಂದು ನಿಶ್ಚಯಾತ್ಮಕವಾಗಿ ಬಲ್ಲವನೇ! (ನನಗೆ) ಒಂದು ದೊಡ್ಡ ಸಂಶಯವುಂಟಾಗಿದೆ. ನೀನು ಅದನ್ನು ಕೃಪೆಯಿಟ್ಟು ಹೇಳು / ಪರಿಹರಿಸು.
 ಮೋಕ್ಷಸ್ಯ ಕಾರಣಂ ಕರ್ಮ ಜ್ಞಾನಂ ವಾ ಮೋಕ್ಷಸಾಧನಮ್ |
ಉಭಯಂ ವಾ ವಿನಿಶ್ಚಿತ್ಯ ಏಕಂ ಕಥಯ ಕಾರಣಮ್ ||೬||

ಮೋಕ್ಷದ ಕಾರಣವು ಕರ್ಮವೋ? ಅಥವಾ ಜ್ಞಾನವು ಮೋಕ್ಷಕ್ಕೆ ಸಾಧನವೋ? ಅಥವಾ ಇವೆರಡೂ ಮೋಕ್ಷಸಾಧಕಗಳೋ? ಚೆನ್ನಾಗಿ ನಿಶ್ಚಯಿಸಿ ನಿಜವಾದ ಮೋಕ್ಷಸಾಧನವೊಂದನ್ನು ಹೇಳು.
ಅಗಸ್ತಿರುವಾಚ—
ಉಭಾಭ್ಯಾಮೇವ ಪಕ್ಷಾಭ್ಯಾಂ ಯಥಾ ಖೇ ಪಕ್ಷಿಣಾಂ ಗತಿಃ |
ತಥೈವ ಜ್ಞಾನಕರ್ಮಭ್ಯಾಂ ಜಾಯತೇ ಪರಮಂ ಪದಮ್ ||೭||

ಅಗಸ್ತಿಯು ಹೇಳಿದನು— 
ಹೇಗೆ ಆಕಾಶದಲ್ಲಿ ಎರಡೂ ರೆಕ್ಕೆಗಳಿಂದ ಹಕ್ಕಿಗಳ ಗಮನ / ಹಾರಾಟ / ಗತಿಯೋ, ಅಂತೆಯೇ ಜ್ಞಾನ-ಕರ್ಮಗಳಿಂದ ಪರಮಪದವು ಉಂಟಾಗುವುದು. (ಹೇಗೆ ಒಂದೇ ರೆಕ್ಕೆಯಿಂದ ಹಾರಲಸಾಧ್ಯವೋ, ಅಂತೆಯೇ ಇವೆರಡೂ ಬದುಕಿನ ಅವಿಭಾಜ್ಯ ಅಂಗಗಳೆಂಬ ಅಭಿಪ್ರಾಯ.)
ಕೇವಲಾತ್ಕರ್ಮಣೋ ಜ್ಞಾನಾನ್ನ ಹಿ ಮೋಕ್ಷೋऽಭಿಜಾಯತೇ |
ಕಿನ್ತೂಭಾಭ್ಯಾಂ ಭವೇನ್ಮೋಕ್ಷಃ ಸಾಧನಂ ತೂಭಯಂ ವಿದುಃ ||೮||

ಕೇವಲ ಕರ್ಮದ ಬಗೆಗಿನ ಜ್ಞಾನ / ಅರಿವಿನಿಂದಲೇ ಮೋಕ್ಷವು ಉಂಟಾಗುವುದಿಲ್ಲ. ಅಲ್ಲವೆ? ಆದರೆ, ಕರ್ಮದ ಬಗೆಗಿನ (ಮಾಡಬೇಕಾದುದು, ಮಾಡಬಾರದುದರ) ತಿಳುವಳಿಕೆ / ಜ್ಞಾನ ಹಾಗೂ ಅದರ ಅನುಷ್ಠಾನ / ಕರ್ಮ— ಇವೆರಡರಿಂದ ಮಾತ್ರವೇ ಮೋಕ್ಷವುಂಟಾಗುವುದು. ಹಾಗಾಗಿ, ಜ್ಞಾನ-ಕರ್ಮ—  ಇವೆರಡೂ ಸೇರಿದರೆ ಮಾತ್ರ ಮೋಕ್ಷಸಾಧನವಾಗುವುದೆಂದು ತಿಳಿಯುವರು.
ಅಸ್ಮಿನ್ನರ್ಥೇ ಪುರಾವೃತ್ತಮಿತಿಹಾಸಂ ವದಾಮಿ ತೇ |
ಕಾರುಣ್ಯಾಖ್ಯಃ ಪುರಾ ಕಶ್ಚಿದ್ಬ್ರಾಹ್ಮಣೋऽಧೀತವೇದಕಃ ||೯||

ಈ ಬಗ್ಗೆ ನಿನಗೆ ಹಿಂದೆ ನಡೆದ ಚರಿತ್ರೆಯನ್ನು ಹೇಳುತ್ತೇನೆ. ಹಿಂದೆ ಕಾರುಣ್ಯನೆಂಬ ಯಾವನೋ ಒಬ್ಬ ವೇದಾಧೀತನಾದ ಬ್ರಾಹ್ಮಣನಿದ್ದನು.
ಅಗ್ನಿವೇಶ್ಯಸ್ಯ ಪುತ್ರೋऽಭೂದ್ವೇದವೇದಾಙ್ಗಪಾರಗಃ |
ಗುರೋರಧೀತವಿದ್ಯಸ್ಸನ್ನಾಜಗಾಮ ಗೃಹಂ ಪ್ರತಿ ||೧೦||

ಇವನು ಅಗ್ನಿವೇಶ್ಯನೆಂಬವನ ಪುತ್ರನಾಗಿದ್ದನು; ವೇದವೇದಾಂಗಗಳಲ್ಲಿ ಪಾರಂಗತನಾಗಿದ್ದನು. ಇವನು ಗುರುವಿನಿಂದ ಸಕಲವಿದ್ಯೆಗಳನ್ನು ಕಲಿತು, ತನ್ನ ಮನೆಗೆ ಮರಳಿ ಬಂದನು.
ತಸ್ಥಾವಕರ್ಮಕೃತ್ತೂಷ್ಣೀಂ ಸಂಶಯಾನೋ ಗೃಹೇ ತದಾ |
ಅಗ್ನಿವೇಶ್ಯೋ ವಿಲೋಕ್ಯಾಥ ಪುತ್ರಂ ಕರ್ಮವಿವರ್ಜಿತಮ್ ||೧೧||

ಮನೆಯಲ್ಲಿ ಸದಾ ಮಲಗಿದ್ದು, ಯಾವ ಕೆಲಸವನ್ನೂ ಮಾಡದೆ ಸುಮ್ಮನೆ ಇದ್ದನು. ಆಗ, ಪುತ್ರನು ಕರ್ಮಮಾಡದಿರುವುದನ್ನು ಕಂಡು ಅಗ್ನಿವೇಶ್ಯನು,
ಪ್ರಾಹ ಏತದ್ವಚೋ ನಿನ್ದ್ಯಂ ಗುರುಃ ಪುತ್ರಂ ಹಿತಾಯ ಚ |

ಅಗ್ನಿವೇಶ್ಯ ಉವಾಚ—

ಕಿಮೇತತ್ಪುತ್ರ ಕುರುಷೇ ಪಾಲನಂ ನ ಸ್ವಕರ್ಮಣಃ ||೧೨||

ಈ ನಿಂದಿಸುವ ಮಾತನ್ನು ಗುರುವು ಶಿಷ್ಯನಿಗೆನ್ನುವಂತೆ, ತನ್ನ ಮಗನನ್ನು ಕುರಿತು ಹಾಗೂ ಅವನ ಹಿತಕ್ಕಾಗಿ ಹೇಳಿದನು.

ಅಗ್ನಿವೇಶ್ಯನು ಹೇಳಿದನು—

ಸ್ವಕರ್ಮವನ್ನು ಪಾಲಿಸದೆ ಇದೇನು ಮಾಡುತ್ತಿರುವೆ ಮಗನೇ?

ಅಕರ್ಮನಿರತಃ ಸಿದ್ಧಿಂ ಕಥಂ ಪ್ರಾಪ್ಸ್ಯಸಿ ತದ್ವದ |
ಕರ್ಮಣೋऽಸ್ಮಾನ್ನಿವೃತ್ತೇಃ ಕಿಂ ಕಾರಣಂ ತನ್ನಿವೇದ್ಯತಾಮ್ ||೧೩||

ಕರ್ಮಮಾಡದೆಯೇ ಇರುವವನಾದ ನೀನು ಫಲಸಿದ್ಧಿಯನ್ನು ಹೇಗೆ ಪಡೆಯುವೆ ಎಂಬುದನ್ನು ಹೇಳು. ಈ ನಿನ್ನ ಕರ್ಮದಿಂದ ನೀನು ನಿವೃತ್ತನಾಗಲು / ಪ್ರವೃತ್ತನಾಗದಿರಲು ಏನು ಕಾರಣವೆಂಬುದನ್ನು ಹೇಳುವಂಥವನಾಗು.

ಕಾರುಣ್ಯ ಉವಾಚ—
ಯಾವಜ್ಜೀವಮಗ್ನಿಹೋತ್ರಂ ನಿತ್ಯಂ ಸನ್ಧ್ಯಾಮುಪಾಸಯೇತ್ |
ಪ್ರವೃತ್ತಿರೂಪೋ ಧರ್ಮೋऽಯಂ ಶ್ರುತ್ಯಾ ಸ್ಮೃತ್ಯಾ ಚ ಚೋದಿತಃ ||೧೪||

ಕಾರುಣ್ಯನು ಹೇಳಿದನು— 
ಜೀವವಿರುವ ತನಕ ನಿತ್ಯವೂ ಸಂಧ್ಯೋಪಾಸನೆ ಹಾಗೂ ಅಗ್ನಿಹೋತ್ರೋಪಾಸನೆಯನ್ನು ಮಾಡತಕ್ಕದ್ದು. ಇದು ಶ್ರುತಿ (ವೇದ)- ಸ್ಮೃತಿಗಳಿಂದ ಪ್ರಚೋದಿತವಾದ (ಅವುಗಳಲ್ಲಿ ಮಾಡತಕ್ಕದ್ದೆಂದು ಹೇಳಿರುವ) ಪ್ರವೃತ್ತಿಪರವಾದ ಧರ್ಮವಾಗಿದೆ.

ನ ಧನೇನ ಭವೇನ್ಮೋಕ್ಷಃ ಕರ್ಮಣಾ ಪ್ರಜಯಾ ನ ವಾ |
ತ್ಯಾಗಮಾತ್ರೇಣ ಕಿನ್ತ್ವೇಕೇ ಯತಯೋऽಶ್ನನ್ತಿ ಚಾಮೃತಮ್ ||೧೫||

ಧನದಿಂದಲಾಗಲೀ, ಕರ್ಮದಿಂದಲಾಗಲೀ, ಸಂತಾನದಿಂದಾಗಲೀ ಮೋಕ್ಷವುಂಟಾಗಲಾರದು. ಕೇವಲ ತ್ಯಾಗವೊಂದರಿಂದಲೇ ನಿಯತೇಂದ್ರಿಯರಾದ ಯತಿಗಳು ಅಮೃತತ್ತ್ವವನ್ನು ಪಡೆಯುತ್ತಾರೆ. (ಇದಕ್ಕೆ “ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ತ್ವಮಾನಶುಃ” ಎಂಬ ಶ್ರುತಿವಚನದ ಆಧಾರವಿದೆ.)

ಇತಿ ಶ್ರುತ್ಯೋರ್ದ್ವಯೋರ್ಮಧ್ಯೇ ಕಿಂ ಕರ್ತವ್ಯಂ ಮಯಾ ಗುರೋ |
ಇತಿ ಸಂದಿಗ್ಧತಾಂ ಗತ್ವಾ ತೂಷ್ಣೀಂಭೂತೋऽಸ್ಮಿ ಕರ್ಮಣಿ ||೧೬||

ಈ ಮೇಲಿನ ಎರಡು ರೀತಿಯಾದ ಶ್ರುತಿವಾಕ್ಯಗಳ ನಡುವೆ ನನ್ನಿಂದ ಯಾವುದು ಮಾಡಲ್ಪಡಬೇಕು ಹೇ ಗುರುವೇ? ಈ ರೀತಿಯ ಸಂದಿಗ್ಧತೆಯನ್ನು (ದ್ವೈಧೀಭಾವವನ್ನು, ಉಭಯಸಂಕಟವನ್ನು) ಹೊಂದಿ, ನಾನು ಕರ್ಮದ ವಿಷಯದಲ್ಲಿ ತೊಡಗದೆ ಸುಮ್ಮನಾಗಿರುವೆನು.
ಅಗಸ್ತಿರುವಾಚ—
ಇತ್ಯುಕ್ತ್ವಾ ತಾತ ವಿಪ್ರೋऽಸೌ ಕಾರುಣ್ಯೋ ಮೌನಮಾಗತಃ |
ತಥಾವಿಧಂ ಸುತಂ ದೃಷ್ಟ್ವಾ ಪುನಃ ಪ್ರಾಹ ಗುರುಃ ಸುತಮ್ ||೧೭||

ಅಗಸ್ತಿಯು ಹೇಳಿದನು—
ಮಗು ಸುತೀಕ್ಷ್ಣನೇ! ಹೀಗೆಂದು (ಈ ಮೇಲಿನ ಮಾತನ್ನು ಹೇಳಿ) ಆ ವಿಪ್ರನಾದ ಕಾರುಣ್ಯನು ಮೌನವನ್ನಾಶ್ರಯಿಸಿದನು. ಇಂತಿರುವ ಮಗನನ್ನು ನೋಡಿ ಗುರುಸದೃಶನಾದ ಆತನ ತಂದೆ ಅಗ್ನಿವೇಶ್ಯನು ಪುನಃ ಮಗನನ್ನು ಕುರಿತು ಹೀಗೆಂದನು—

ಅಗ್ನಿವೇಶ್ಯ ಉವಾಚ
ಶ್ರುಣು ಪುತ್ರ ಕಥಾಮೇಕಾಂ ತದರ್ಥೇ ಹೃದಯೇऽಖಿಲಮ್ |
ಮತ್ತೋऽವಧಾರ್ಯ ಪುತ್ರ ತ್ವಂ ಯಥೇಚ್ಛಸಿ ತಥಾ ಕುರು ||೧೮||

ಅಗ್ನಿವೇಶ್ಯನು ಹೇಳಿದನು—
ಮಗನೇ! ಒಂದು ಕಥೆಯನ್ನು ಹೇಳುವೆನು. ಪೂರ್ಣಮನಸ್ಸಿನಿಂದ ಅದನ್ನು ಕೇಳು. ನನ್ನಿಂದ ಅದನ್ನು ಕೇಳಿ, ಬಳಿಕ ಚೆನ್ನಾಗಿ ಯೋಚಿಸು (ಮನನ ಮಾಡು) ಮಗನೇ! ಅನಂತರ, ನಿನಗೆ ಹೇಗೆ ಇಚ್ಛೆಯಾಗುವುದೋ ಹಾಗೆ ನಡೆದುಕೋ.

ಸುರುಚಿರ್ನಾಮ ಕಾಚಿತ್ಸ್ತ್ರೀ ಅಪ್ಸರೋಗಣ ಉತ್ತಮಾ |
ಉಪವಿಷ್ಟಾ ಹಿಮವತಃ ಶಿಖರೇ ಶಿಖಿಸಂವೃತೇ ||೧೯||

ಅಪ್ಸರಗಡಣದಲ್ಲಿ ಬ್ರಹ್ಮವಿದ್ಯಾಧಿಕಾರಿವಿಶೇಷಣಸಂಪನ್ನತೆಯಿಂದ ಶ್ರೇಷ್ಠಳಾದ ಸುರುಚಿಯೆಂಬ ಯಾವಳೋ ಒಬ್ಬಾಕೆ ಸ್ತ್ರೀಯು, ಮಯೂರ-ಮಯೂರಿಗಳಿಂದ ಆವೃತವಾದ ಹಿಮಾಲಯದ ಶಿಖರವೊಂದರಲ್ಲಿ ಕುಳಿತಿದ್ದಳು.

ರಮನ್ತೇ ಕಾಮಸನ್ತಪ್ತಾಃ ಕಿನ್ನರ್ಯೋ ಯತ್ರ ಕಿನ್ನರೈಃ |
ಸ್ವರ್ಧುನ್ಯೋಘೇನ ಸಂಸೃಷ್ಟೇ ಮಹಾಘೌಘವಿನಾಶಿನಾ ||೨೦||

ಮಹಾಪಾಪಸಮೂಹವಿನಾಶಿನಿಯಾದ ದೇವನದಿಯಾದ ಗಂಗೆಯ ಜಲದ ಹರಿವಿನ ಮಂಜುಳನಿನಾದದಿಂದ ಕೂಡಿದ ಆ ಸ್ಥಳದಲ್ಲಿ, ಕಾಮಪೀಡಿತರಾದ ಕಿನ್ನರಿಯರು ಕಿನ್ನರರೊಂದಿಗೆ ರಮಮಾಣರಾಗಿದ್ದರು. 

ದೂತಮಿನ್ದ್ರಸ್ಯ ಗಚ್ಛನ್ತಮನ್ತರಿಕ್ಷೇ ದದರ್ಶ ಸಾ |
ತಮುವಾಚ ಮಹಾಭಾಗಾ ಸುರುಚಿಶ್ಚಾಪ್ಸರೋವರಾ ||೨೧||

ಅವಳು (ಸುರುಚಿಯು), ಇಂದ್ರನ ದೂತನು ಅಂತರಿಕ್ಷದಲ್ಲಿ ಹೋಗುತ್ತಿರುವುದನ್ನು ನೋಡಿದಳು ಮತ್ತು ಅಪ್ಸರೆಯರಲ್ಲಿ ಶ್ರೇಷ್ಠಳೂ, ಜ್ಞಾನೋಪದೇಶಫಲಭಾಗಿನೀತ್ವದಿಂದ ಮಹಾಭಾಗಳೂ ಎನಿಸಿದ ಆ ಸುರುಚಿಯು ಅವನನ್ನು ಕುರಿತು ಹೇಳಿದಳು— 

ಸುರುಚಿರುವಾಚ—
ದೇವದೂತ ಮಹಾಭಾಗ ಕುತ ಆಗಮ್ಯತೇ ತ್ವಯಾ |
ಅಧುನಾ ಕುತ್ರ ಗನ್ತಾऽಸಿ ತತ್ಸರ್ವಂ ಕೃಪಯಾ ವದ ||೨೨||

ಸುರುಚಿಯು ಹೇಳಿದಳು— 
ಹೇ ಮಹಾನುಭಾವನಾದ ದೇವದೂತನೇ ! ನಿನ್ನಿಂದ ಎತ್ತಕಡೆಯಿಂದ ಬರಲ್ಪಡುತ್ತಿದೆ? (=>ನೀನು ಎಲ್ಲಿಂದ ಬರುತ್ತಿದ್ದೀಯೇ?) ಈಗ ಎಲ್ಲಿಗೆ ಹೋಗುವವನಾಗಿದ್ದಿ? ಅದೆಲ್ಲವನ್ನು ಕೃಪೆಯಿಟ್ಟು ಹೇಳು.

ದೇವದೂತ ಉವಾಚ—
ಸಾಧು ಪೃಷ್ಟಂ ತ್ವಯಾ ಸುಭ್ರು ಯಥಾವತ್ಕಥಯಾಮಿ ತೇ |
ಅರಿಷ್ಟನೇಮೀ ರಾಜರ್ಷಿರ್ದತ್ವಾ ರಾಜ್ಯಂ ಸುತಾಯ ವೈ ||೨೩||

ದೇವದೂತನು ಹೇಳಿದನು— 
ಹೇ ಸುಂದರ ಹುಬ್ಬಿನವಳೇ! ನಿನ್ನಿಂದ ಕೇಳಲ್ಪಟ್ಟುದು ಸಾಧುವೇ (ಯೋಗ್ಯವಾದ ಪ್ರಶ್ನೆಯೇ) ಆಗಿದೆ. ಇದ್ದದ್ದನ್ನು ಇದ್ದಂತೆ {ಯಥಾ ಸಮ್ಭೂತಮ್- ಹೇಗೆ ಆಯಿತೋ,ವತ್(ತಥಾ) - ಹಾಗೆಯೇ} ನಿನಗೆ ಕಥನಮಾಡುತ್ತೇನೆ (ಹೇಳುತ್ತೇನೆ). ಅರಿಷ್ಟನೇಮಿಯೆಂಬ ರಾಜರ್ಷಿಯು (ಋಷಿಸದೃಶ ವ್ಯಕ್ತಿತ್ವವುಳ್ಳ ರಾಜ— ರಾಜರ್ಷಿ) ತನ್ನ ಮಗನಿಗೆ ರಾಜ್ಯವನ್ನು ಬಿಟ್ಟುಕೊಟ್ಟು,

ವೀತರಾಗಃ ಸ ಧರ್ಮಾತ್ಮಾ ನಿರ್ಯಯೌ ತಪಸೇ ವನಮ್ |
ತಪಶ್ಚರತ್ಯಸೌ ರಾಜಾ ಪರ್ವತೇ ಗನ್ಧಮಾದನೇ ||೨೪||

ಆ ಧರ್ಮಾತ್ಮನಾದ ರಾಜಾ ಅರಿಷ್ಟನೇಮಿಯು ರಾಗ(ಪ್ರೀತಿ, ಆಸಕ್ತಿ, ಅನುರಾಗ),ಮೋಹಾದಿಗಳನ್ನು ಬಿಟ್ಟವನಾಗಿ, ತಪಗೈಯಲೋಸುಗ ಕಾಡಿಗೆ ನಿರ್ಗಮಿಸಿದನು. ಗಂಧಮಾದನಪರ್ವತದಲ್ಲಿ ಆ ರಾಜನು ಈಗ ತಪವನ್ನಾಚರಿಸುತ್ತಿರುವನು.

ಕಾರ್ಯಂ ಕೃತ್ವಾ ಮಯಾ ತತ್ರ ತತ ಆಗಮ್ಯತೇऽಧುನಾ |
ಗನ್ತಾಸ್ಮಿ ಪಾರ್ಶ್ವೇ ಶಕ್ರಸ್ಯ ತಂ ವೃತ್ತಾನ್ತಂ ನಿವೇದಿತುಮ್ ||೨೫||

ಅಲ್ಲಿ ನಾನು ಮಾಡಬೇಕಾದುದನ್ನು ಮಾಡಿ, ಈಗ ಅಲ್ಲಿಂದಲೇ ಬರಲ್ಪಡುತ್ತಿದೆ. (ಬರುತ್ತಿದ್ದೇನೆ). ಶತಕ್ರತುವಾದ ಶಕ್ರ (ಇಂದ್ರ, ದೇವೇಂದ್ರ) ನ ಬಳಿಗೆ ಈ ವೃತ್ತಾಂತವನ್ನು ನಿವೇದಿಸಲು ಹೋಗುವವನಾಗಿದ್ದೇನೆ. (“ಕರ್ತಾ— ಮಾಡುವವನು” ಎಂಬಂತೆ, “ಗನ್ತಾ— ಹೋಗುವವನು, ಗಮನಮಾಡುವವನು, ಗಮಿಸುವವನು”)

ಅಪ್ಸರಾ ಉವಾಚ—

ವೃತ್ತಾನ್ತಃ ಕೋऽಭವತ್ತತ್ರ ಕಥಯಸ್ವ ಮಮ ಪ್ರಭೋ |
ಪ್ರಷ್ಟುಕಾಮಾ ವಿನೀತಾऽಸ್ಮಿ ನೋದ್ವೇಗಂ ಕರ್ತುಮರ್ಹಸಿ ||೨೬||

ಅಪ್ಸರೆಯಾದ ಸುರುಚಿಯು ಹೇಳಿದಳು—

ಹೇ ಪ್ರಭುವೇ! ಅಲ್ಲೇನಾಯಿತೆಂಬ ವೃತ್ತಾಂತವನ್ನು ನನಗೆ ಹೇಳು. ವಿನೀತಳಾಗಿ ಪ್ರಶ್ನಿಸುವ ಬಯಕೆಯುಳ್ಳವಳಾಗಿರುವೆನು; ನೀನು — ನಾನು ಪದೇ ಪದೇ ಪ್ರಶ್ನಿಸುತ್ತಿರುವೆನೆಂದು— ಉದ್ವೇಗಕ್ಕೊಳಗಾಗುವ ಅಗತ್ಯವಿಲ್ಲ.

ದೇವದೂತ ಉವಾಚ—

ಶ್ರುಣು ಭದ್ರೇ ಯಥಾವೃತ್ತಂ ವಿಸ್ತರೇಣ ವದಾಮಿ ತೇ |
ತಸ್ಮಿನ್ರಾಜ್ಞಿ ವನೇ ತತ್ರ ತಪಶ್ಚರತಿ ದುಸ್ತರಮ್ ||೨೭||

ದೇವದೂತನು ಹೇಳಿದನು—

ಎಲೈ ಮಂಗಲರೂಪಳೇ! ನಿನಗೆ ನಡೆದುದೆಲ್ಲವನ್ನೂ ಯಥಾವತ್ತಾಗಿಯೂ, ವಿಸ್ತಾರವಾಗಿಯೂ ಹೇಳುತ್ತೇನೆ; ಕೇಳು. ಅಲ್ಲಿ (ಗಂಧಮಾದನಪರ್ವತದ), ಆ ಕಾಡಿನಲ್ಲಿ, (ಅರಿಷ್ಟನೇಮಿಯೆಂಬ ರಾಜ್ಯವನ್ನು ಮಗನಿಗೆ ಬಿಟ್ಟುಕೊಟ್ಟು ವನಗಮನ ಮಾಡಿದ) ರಾಜನು ಅತ್ಯಂತ ದುಸ್ತರವಾದ / ಕಠಿಣವಾದ ತಪವನ್ನಾಚರಿಸುತ್ತಿರಲಾಗಿ,

ಇತ್ಯಹಂ ದೇವರಾಜೇನ ಸುಭ್ರೂರಾಜ್ಞಾಪಿತಸ್ತದಾ |
ದೂತ ತ್ವಂ ತತ್ರ ಗಚ್ಛಾಶು ಗೃಹೀತ್ವೇದಂ ವಿಮಾನಕಮ್ ||೨೮||

ಎಲೈ ಸುಂದರಹುಬ್ಬಿನವಳೇ (ಸುಭ್ರೂಃ),
ಆಗ (ತದಾ), ನಾನು (ಅಹಂ), ದೇವೇಂದ್ರನಿಂದ (ದೇವರಾಜೇನ), ಆಜ್ಞಾಪಿಸಲ್ಪಟ್ಟೆನು (ಆಜ್ಞಾಪಿತಃ)—
“ದೂತನೇ! (ದೂತ) ನೀನು (ತ್ವಂ), ಈ ವಿಮಾನವನ್ನು ಉಪಯೋಗಿಸಿ (ಇದಂ ವಿಮಾನಕಂ ಗೃಹೀತ್ವಾ), ಅಲ್ಲಿಗೆ (ತತ್ರ), ಬೇಗ (ಆಶು), ಹೋಗು (ಗಚ್ಛ)”— ಎಂಬುದಾಗಿ (ಇತಿ).

ಅಪ್ಸರೋಗಣಸಂಯುಕ್ತಂ ನಾನಾವಾದಿತ್ರಶೋಭಿತಮ್ |
ಗನ್ಧರ್ವಸಿದ್ಧಯಕ್ಷೈಶ್ಚ ಕಿನ್ನರಾದ್ಯೈಶ್ಚ ಶೋಭಿತಮ್ ||೨೯||

ತಾಲವೇಣುಮೃದಙ್ಗಾದಿಪರ್ವತೇ ಗನ್ಧಮಾದನೇ |
ನಾನಾವೃಕ್ಷಸಮಾಕೀರ್ಣೇ ಗತ್ವಾ ತಸ್ಮಿನ್ಗಿರೌ ಶುಭೇ ||೩೦||

ಅರಿಷ್ಟನೇಮಿಂ ರಾಜಾನಂ ದೂತಾರೋಪ್ಯ ವಿಮಾನಕೇ |
ಆನಯ ಸ್ವರ್ಗಭೋಗಾಯ ನಗರೀಮಮರಾವತೀಮ್ ||೩೧||

ಅಪ್ಸರಗಡಣಯುತವಾದ, ತಾಳ-ಕೊಳಲು-ಮೃದಂಗಾದಿ ನಾನಾವಾದ್ಯಗಳ ನಿನಾದಮಯವಾದ, ಗಂಧರ್ವ-ಸಿದ್ಧ-ಯಕ್ಷರಿಂದಲೂ, ಕಿನ್ನರಾದಿಗಳಿಂದಲೂ ಶೋಭಿತವಾದ, ನಾನಾವೃಕ್ಷಗಳಿಂದ ತುಂಬಿದ ಆ ಮಂಗಲಕರವಾದ ಗಂಧಮಾದನಪರ್ವತದಲ್ಲಿ ತಪಗೈಯುತ್ತಿರುವ ರಾಜಾ ಅರಿಷ್ಟನೇಮಿಯನ್ನು, ಎಲೈ ದೂತನೇ! ವಿಮಾನದಲ್ಲಿ ಕುಳ್ಳಿರಿಸಿ, ಸ್ವರ್ಗಭೋಗಸುಖವನ್ನನುಭವಿಸಲು ಅಮರಾವತೀಪುರಿಗೆ (ಸ್ವರ್ಗಕ್ಕೆ) ಕರೆದು ತಾ (— ಎಂದು ಇಂದ್ರನು ನನಗೆ ಆಜ್ಞಾಪಿಸಿರುವನು.)

ಇತ್ಯಾಜ್ಞಾಂ ಪ್ರಾಪ್ಯ ಶಕ್ರಸ್ಯ ಗೃಹೀತ್ವಾ ತದ್ವಿಮಾನಕಮ್ |
ಸರ್ವೋಪಸ್ಕರಸಂಯುಕ್ತಂ ತಸ್ಮಿನ್ನದ್ರಾವಹಂ ಯಯೌ ||೩೨||

ಈ ರೀತಿಯಾದ ಇಂದ್ರನ ಆಜ್ಞೆಯನ್ನು ಪಡೆದು ನಾನು ಆ ವಿಮಾನವನ್ನು ಸ್ವೀಕರಿಸಿ (ಪರಿಗ್ರಹಿಸಿ), ಸಕಲ ಸುಖಸಾಧನಯುತವಾದ ಆ ವಿಮಾನದಲ್ಲಿ (ಅರಿಷ್ಟನೇಮಿರಾಜನನ್ನು ಕರೆತರಲು) ಹೋದೆನು.

ಆಗತ್ಯ ಪರ್ವತೇ ತಸ್ಮಿನ್ರಾಜ್ಞೋ ಗತ್ವಾऽऽಶ್ರಮಂ ಮಯಾ |
ನಿವೇದಿತಾ ಮಹೇನ್ದ್ರಸ್ಯ ಸರ್ವಾಜ್ಞಾऽರಿಷ್ಟನೇಮಯೇ ||೩೩||

ಆ ಗಂಧಮಾದನ ಪರ್ವತಕ್ಕೆ ಬಂದು, ಅಲ್ಲಿದ್ದ ರಾಜನ ಆಶ್ರಮಕ್ಕೆ (ತಪೋಭೂಮಿಗೆ) ಹೋಗಿ, ಆ ರಾಜಾ ಅರಿಷ್ಟನೇಮಿಗೆ ಮಹೇಂದ್ರನ ಸಕಲ ಆಜ್ಞೆಗಳೂ ನನ್ನಿಂದ ನಿವೇದಿಸಲ್ಪಟ್ಟವು (ದೇವೇಂದ್ರನು ದೂತನಿಗೆ ಏನು ಆಜ್ಞಾಪಿಸಿದನೆಂಬುದನ್ನು ವಿವರವಾಗಿ ದೂತನು ರಾಜನಿಗೆ ವಿವರಿಸಿದನು / ಅರಿಕೆ ಮಾಡಿಕೊಂಡನು).

ಇತಿ ಮದ್ವಚನಂ ಶ್ರುತ್ವಾ ಸಂಶಯಾನೋऽವದಚ್ಛುಭೇ |

ರಾಜೋವಾಚ—

ಪ್ರಷ್ಟುಮಿಚ್ಛಾಮಿ ದೂತ ತ್ವಾಂ ತನ್ಮೇ ತ್ವಂ ವಕ್ತುಮರ್ಹಸಿ ||೩೪||

ಶುಭೇ— ಎಲೈ ಮಂಗಳರೂಪಳೇ  !
ಇತಿ—  ಈ ರೀತಿಯಾದ,
ಮದ್+ವಚನಮ್— ನನ್ನ ಮಾತನ್ನು,
ಶ್ರುತ್ವಾ— ಕೇಳಿ,
ಸಂಶಯಾನಃ (ರಾಜಾ)— ಸಂಶಯಾನ್ವಿತನಾದ ರಾಜಾ ಅರಿಷ್ಟನೇಮಿಯು,
ಅವದತ್— ಹೇಳಿದನು.

ರಾಜನು ಹೇಳಿದನು—

ದೂತ— ಎಲೈ ದೂತನೇ  !
ತ್ವಾಮ್— ನಿನ್ನನ್ನು,
ಪ್ರಷ್ಟುಮ್— ಪ್ರಶ್ನಿಸಲು / ಕೇಳಲು,
ಇಚ್ಛಾಮಿ— ಬಯಸುತ್ತೇನೆ / ಇಚ್ಛಿಸುತ್ತೇನೆ.
ತತ್ (ತಸ್ಮಾತ್)— ಅದನ್ನು (ಆದ್ದರಿಂದ),
ತ್ವಮ್— ನೀನು,
ಮೇ (ಮಹ್ಯಮ್)— ನನಗೆ,
ವಕ್ತುಮ್— ಹೇಳಲು,
ಅರ್ಹಸಿ— ಅರ್ಹ / ಯೋಗ್ಯನಾಗಿದ್ದಿ. ||೩೪||

ಗುಣಾ ದೋಷಾಶ್ಚ ಕೇ ತತ್ರ ಸ್ವರ್ಗೇ ವದ ಮಮಾಗ್ರತಃ |
ಜ್ಞಾತ್ವಾ ಸ್ಥಿತಿಂ ತು ತತ್ರತ್ಯಾಂ ಕರಿಷ್ಯೇऽಹಂ ಯಥಾರುಚಿ ||೩೫||

(ರಾಜಾ ಅರಿಷ್ಟನೇಮಿಯು ದೇವದೂತನಲ್ಲಿ ಹೀಗೆನ್ನುತ್ತಾನೆ—)
ತತ್ರ ಸ್ವರ್ಗೇ— ಅಲ್ಲಿ, ಸ್ವರ್ಗದಲ್ಲಿ,
ಗುಣಾಃ ದೋಷಾಃ ಚ ಕೇ— ಗುಣ (ಲಾಭ)ಗಳು ಮತ್ತು ದೋಷ (ಹಾನಿ)ಗಳು ಯಾವುವು?
(ಇತಿ) ಮಮ ಅಗ್ರತಃ ವದ— (ಎಂಬುದನ್ನು) ನನ್ನ ಮುಂದೆ ( / ನನ್ನಲ್ಲಿ) ಹೇಳು; 
ತತ್ರತ್ಯಾಂ ಸ್ಥಿತಿಂ ಜ್ಞಾತ್ವಾ— ಅಲ್ಲಿರುವ / ಅಲ್ಲಿನ ಪರಿಸ್ಥಿತಿಯನ್ನು ತಿಳಿದು (ಅನಂತರ),
ಅಹಂ— ನಾನು,
ಯಥಾರುಚಿ— ನನ್ನಿಷ್ಟದಂತೆ (ರುಚಿಮ್ ಅನತಿಕ್ರಮ್ಯ— ಇಷ್ಟವನ್ನು ಅತಿಕ್ರಮಿಸದೆ / ಮೀರದಂತೆ; ಉದಾ— ಶಕ್ತಿಮ್ ಅನತಿಕ್ರಮ್ಯ— ಯಥಾಶಕ್ತಿ),
ಕರಿಷ್ಯೇ— ಮಾಡುವೆನು.

ದೂತ ಉವಾಚ— 

ಸ್ವರ್ಗೇ ಪುಣ್ಯಸ್ಯ ಸಾಮಗ್ರ್ಯಾ ಭುಜ್ಯತೇ ಪರಮಂ ಸುಖಮ್ |
ಉತ್ತಮೇನ ತು ಪುಣ್ಯೇನ ಪ್ರಾಪ್ನೋತಿ ಸ್ವರ್ಗಮುತ್ತಮಮ್ ||೩೬||

ದೂತನು ಹೇಳಿದನು—

ಸ್ವರ್ಗದಲ್ಲಿ ಪುಣ್ಯಸಾಮಗ್ರಿಯ ಸಂಗ್ರಹದಿಂದ ಪರಮಸುಖವು ಭೋಗಿಸಲ್ಪಡುವುದು. ಉತ್ತಮೋತ್ತಮ ಪುಣ್ಯದಿಂದ ಉತ್ತಮೋತ್ತಮವಾದ ಸ್ವರ್ಗದ ಪ್ರಾಪ್ತಿಯಾಗುವುದು.

ಮಧ್ಯಮೇನ ತಥಾ ಮಧ್ಯಃ ಸ್ವರ್ಗೋ ಭವತಿ ನಾನ್ಯಥಾ |
ಕನಿಷ್ಠೇನ ತು ಪುಣ್ಯೇನ ಸ್ವರ್ಗೋ ಭವತಿ ತಾದೃಶಃ || ೩೭ ||

ಹಾಗೆಯೇ, ಮಧ್ಯಮಪ್ರಮಾಣದ / ಮಧ್ಯಮರೀತಿಯ ಪುಣ್ಯದಿಂದ ಮಧ್ಯಮಪ್ರಮಾಣ / ರೀತಿಯ ಸ್ವರ್ಗವು ಲಭಿಸುವುದು. ಕನಿಷ್ಠ / ಕಡಿಮೆ ಪ್ರಮಾಣದ / ರೀತಿಯ ಪುಣ್ಯದಿಂದ ಅಂತಹ / ಅಷ್ಟೇ ಸ್ವರ್ಗಸುಖವು ಲಭಿಸಬಹುದಷ್ಟೇ. ಅದಕ್ಕಿಂತ ಹೆಚ್ಚಿನದು ಲಭಿಸದು.

ಪರೋತ್ಕರ್ಷಾಸಹಿಷ್ಣುತ್ವಂ ಸ್ಪರ್ಧಾ ಚೈವ ಸಮೈಶ್ಚ ತೈಃ |
ಕನಿಷ್ಠೇಷು ಚ ಸಂತೋಷೋ ಯಾವತ್ಪುಣ್ಯಕ್ಷಯೋ ಭವೇತ್ || ೩೮ ||

ಸ್ವರ್ಗಪ್ರಾಪ್ತಿಯ ಬಳಿಕ, ಅಲ್ಲಿ ಬೇರೆಯವರ ಔನ್ನತ್ಯವನ್ನು ಸಹಿಸದಿರುವಿಕೆ (ಪರ-ಉತ್ಕರ್ಷ-ಅಸಹಿಷ್ಣುತ್ವಂ) / ತನಗಿಂತ ಮೇಲ್ಮಟ್ಟದ ಪುಣ್ಯಾತ್ಮನ / ಜ್ಞಾನಿಯ / ದೇವತೆಯ ಶ್ರೇಷ್ಠತ್ವವನ್ನು ಕಂಡು ಮತ್ಸರ / ಈರ್ಷ್ಯೆ ಪಡುವಿಕೆ, ತನ್ನ ಸಮಾನರೊಂದಿಗೆ ತಾನು ಮೇಲೆಂದು ಸ್ಪರ್ಧೆಗಿಳಿಯುವುದು ಹಾಗೂ ತನಗಿಂತ ಇತರರು ಕೆಳಮಟ್ಟದಲ್ಲಿದ್ದರೆ ಅದರಿಂದ ಸಂತೋಷಪಡುವುದು— ಇವುಗಳಿಂದ ನಮ್ಮ ಪುಣ್ಯವು ಕಡಿಮೆಯಾಗುವುದು ಸರ್ವಸಾಧಾರಣವಾಗಿದೆ / ಸಹಜವೂ ಸ್ವಾಭಾವಿಕವೂ ಆದ ನಿಯಮವಾಗಿದೆ (ಅಥವಾ, ಎಲ್ಲಿಯವರೆಗೆ ಇಂತಹ ಸ್ವಭಾವವಿರುವುದೋ ಅಲ್ಲಿಯವರೆಗೆ ಪುಣ್ಯವು ಕುಗ್ಗುತ್ತಾ ಹೋಗುವುದು). 

ಕ್ಷೀಣೇ ಪುಣ್ಯೇ ವಿಶಂತ್ಯೇತಂ ಮರ್ತ್ಯಲೋಕಂ ಚ ಮಾನವಾಃ |
ಇತ್ಯಾದಿಗುಣದೋಷಾಶ್ಚ ಸ್ವರ್ಗೇ ರಾಜನ್ ಅವಸ್ಥಿತಾಃ || ೩೯ ||

ಹೀಗೆ ಕಾಲಾನಂತರದಲ್ಲಿ ಸ್ವರ್ಗದಲ್ಲಿದ್ದು ಪುಣ್ಯವು ಕ್ಷಯಿಸಲು, ಈ ಮರಣ-ಜನನಗಳಿರುವುದರಿಂದ ಮರ್ತ್ಯಲೋಕವೆನಿಸಿದ ಭೂಮಿಯಲ್ಲಿ ಬಹುದುರ್ಲಭವಾದ ನರಜನ್ಮವನ್ನು ಹೊಂದುತ್ತಾರೆ. ಹೇ ರಾಜನ್! ಅರಿಷ್ಟನೇಮಿಯೆ!! ಸ್ವರ್ಗದಲ್ಲಿ ಈ ಎಲ್ಲ ಗುಣ-ದೋಷಗಳು ಇವೆ (ಎಂಬುದಾಗಿ ದೇವದೂತನು ಹೇಳುತ್ತಾನೆ).

ಇತಿ ಶ್ರುತ್ವಾ ವಚೋ ಭದ್ರೇ ಸ ರಾಜಾ ಪ್ರತ್ಯಭಾಷತ |

ರಾಜೋವಾಚ— 

ನೇಚ್ಛಾಮಿ ದೇವದೂತಾಹಂ ಸ್ವರ್ಗಮೀದೃಗ್ವಿಧಂ ಫಲಮ್ || ೪೦ ||

ಎಲೈ ಮಂಗಲರೂಪೀ ಸುರುಚಿಯೆಂಬ ಅಪ್ಸರೆಯೆ!! ನಾನು ಈ ರೀತಿಯಾಗಿ ಹೇಳಿದ್ದನ್ನಾಲಿಸಿದ ಆ ಅರಿಷ್ಟನೇಮಿಯೆಂಬ ರಾಜರ್ಷಿಯು ಪುನರುತ್ತರಿಸಿದನು.

ರಾಜನು ಹೇಳಿದನು—

ಅಯ್ಯಾ ದೇವದೂತನೆ!! ಇಂತಹ ಗುಣ-ದೋಷಗಳುಳ್ಳ ಸ್ವರ್ಗವೆಂಬ ಪುಣ್ಯಫಲವನ್ನು ನಾನು ಇಚ್ಛಿಸುವುದಿಲ್ಲ / ಇಷ್ಟಪಡುವುದಿಲ್ಲ.

ಅತಃ ಪರಂ ಮಹೋಗ್ರಂ ಚ ತಪಃ ಕೃತ್ವಾ ಕಲೇವರಮ್ |
ತ್ಯಕ್ಷ್ಯಾಮ್ಯಹಮಶುದ್ಧಂ ಹಿ ಜೀರ್ಣಂ ತ್ವಚಮಿವೋರಗಃ || ೪೧ ||

ಇನ್ನುಮುಂದೆ ನಾನು ಅತ್ಯುಗ್ರವಾದ ತಪಸ್ಸನ್ನಾಚರಿಸಿ, ಹಳತಾದ ಚರ್ಮವನ್ನು / ಪೊರೆಯನ್ನು ಉರಗವು / ಹಾವು ಕಳಚುವಂತೆ, ಅಪವಿತ್ರವಾದ ಈ ಶರೀರವನ್ನು / ಕಳೇಬರವನ್ನು ತ್ಯಜಿಸುವೆನು.

ದೇವದೂತ ವಿಮಾನೇದಂ ಗೃಹೀತ್ವಾ ತ್ವಂ ಯಥಾऽऽಗತಃ |
ತಥಾ ಗಚ್ಛ ಮಹೇಂದ್ರಸ್ಯ ಸಂನಿಧೌ ತ್ವಂ ನಮೋऽಸ್ತು ತೇ || ೪೨ ||

ಅಯ್ಯಾ ದೇವದೂತನೆ! ಈ ವಿಮಾನವನ್ನು ಪರಿಗ್ರಹಿಸಿ ನೀನು ಹೇಗೆ ಬಂದಿರುವೆಯೋ ಹಾಗೆಯೇ ಆ ದೇವರಾಜನಾದ ಮಹೇಂದ್ರನ ಬಳಿಗೆ ನೀನು ಮರಳು. ನಿನಗಿದೋ ನಮಸ್ಕಾರವಿರಲಿ.

ದೇವದೂತ ಉವಾಚ—

ಇತ್ಯುಕ್ತೋऽಹಂ ಗತೋ ಭದ್ರೇ ಶಕ್ರಸ್ಯಾಗ್ರೇ ನಿವೇದಿತುಮ್ |
ಯಥಾವೃತ್ತಂ ನಿವೇದ್ಯಾಥ ಮಹದಾಶ್ಚರ್ಯತಾಂ ಗತಃ || ೪೩ ||

ಹೀಗೆ(ಇತಿ) ರಾಜಾ ಅರಿಷ್ಟನೇಮಿಯಿಂದ ಹೇಳಲ್ಪಟ್ಟ(ಉಕ್ತಃ) ನಾನು(ಅಹಂ), ಶತಕ್ರತುವಾದ ಶಕ್ರನ / ಇಂದ್ರನ(ಶಕ್ರಸ್ಯ) ಮುಂದೆ(ಅಗ್ರೇ), ಯಥಾವತ್ತಾಗಿ ಇದನ್ನು (ರಾಜನು ಸ್ವರ್ಗವನ್ನು ನಿರಾಕರಿಸಿದ ವಿಚಾರವನ್ನು) / ನಡೆದ ವೃತ್ತಾಂತವನ್ನು(ಯಥಾವೃತ್ತಂ) ನಿವೇದಿಸಲಾಗಿ(ನಿವೇದ್ಯ), ಆಗ(ಅಥ) ಆತನು ಮಹದಾಶ್ಚರ್ಯವನ್ನು (ಬಹುವಾಗಿ ಅಚ್ಚರಿಯನ್ನು)(ಮಹತ್-ಆಶ್ಚರ್ಯತಾಂ) ಹೊಂದಿದನು(ಗತಃ).

ಪುನಃ ಪ್ರಾಹ ಮಹೇಂದ್ರೋ ಮಾಂ ಶ್ಲಕ್ಷ್ಣಂ ಮಧುರಯಾ ಗಿರಾ |

ಇಂದ್ರ ಉವಾಚ—

ದೂತ ಗಚ್ಛ ಪುನಸ್ತತ್ರ ತಂ ರಾಜಾನಂ ನಯಾಶ್ರಮಮ್ || ೪೪ ||
ವಾಲ್ಮೀಕೇರ್ಜ್ಞಾತತತ್ತ್ವಸ್ಯ ಸ್ವಬೋಧಾರ್ಥಂ ವಿರಾಗಿಣಮ್ |
ಸಂದೇಶಂ ಮಮ ವಾಲ್ಮೀಕೇರ್ಮಹರ್ಷೇಸ್ತ್ವಂ ನಿವೇದಯ || ೪೫ ||

ದೇವೇಂದ್ರನು ಮತ್ತೆ ನನ್ನನ್ನು ಕುರಿತು ಸವಿನುಡಿಗಳಿಂದ ಸಾಂತ್ವನಗೊಳಿಸುವ ಮಾತುಗಳನ್ನಾಡಿದನು.

ಇಂದ್ರನು ಹೇಳಿದನು—

ದೂತನೆ! ಮತ್ತೆ ಅಲ್ಲಿಗೆ ಹೋಗು; ವೈರಾಗ್ಯವುಂಟಾಗಿರುವ ಆ ರಾಜಾ ಅರಿಷ್ಟನೇಮಿಯನ್ನು, ಆತ್ಮತತ್ತ್ವವನ್ನರಿತ ವಾಲ್ಮೀಕಿಮಹರ್ಷಿಯ ಆಶ್ರಮಕ್ಕೆ, ಸ್ವ-ಬೋಧ / ತನ್ನ ಬಗೆಗಿನ ಅರಿವು / ಆತ್ಮಜ್ಞಾನದ ಪ್ರಾಪ್ತಿಗಾಗಿ ಕರೆದೊಯ್ಯು. ಹಾಗೆಯೇ, ವಾಲ್ಮೀಕಿಮಹರ್ಷಿಗಳಿಗೆ ನನ್ನ ಸಂದೇಶವನ್ನು ನಿವೇದಿಸು / ವೇದ್ಯವಾಗುವಂತೆ ಹೇಳು.

ಮಹರ್ಷೇ ತ್ವಂ ವಿನೀತಾಯ ರಾಜ್ಞೇऽಸ್ಮೈ ವೀತರಾಗಿಣೇ |
ನ ಸ್ವರ್ಗಮಿಚ್ಛತೇ ತತ್ತ್ವಂ ಪ್ರಬೋಧಯ ಮಹಾಮುನೇ || ೪೬ ||

ಅಯ್ಯಾ ಮಹಾಮುನಿಯಾದ ವಾಲ್ಮೀಕಿಮಹರ್ಷಿಯೇ!! ಸ್ವರ್ಗವನ್ನೂ ಬಯಸದ, ರಾಗಾದಿಗಳನ್ನು ತೊರೆದ / ಆಸೆ-ಆಸಕ್ತಿಯಿಲ್ಲದ, ವಿನೀತನಾದ ಈ ರಾಜಾ ಅರಿಷ್ಟನೇಮಿಗೆ ನೀನು ಪರತತ್ತ್ವವನ್ನು ಚೆನ್ನಾಗಿ / ಪ್ರಕೃಷ್ಟವಾಗಿ ಬೋಧಿಸು.

ತೇನ ಸಂಸಾರದುಃಖಾರ್ತೋ ಮೋಕ್ಷಮೇಷ್ಯತಿ ಚ ಕ್ರಮಾತ್ |
ಇತ್ಯುಕ್ತ್ವಾ ದೇವರಾಜೇನ ಪ್ರೇಷಿತೋऽಹಂ ತದಂತಿಕೇ || ೪೭ ||

ಆ ಪರತತ್ತ್ವಜ್ಞಾನದಿಂದ ಸಂಸಾರದುಃಖಗಳಿಂದ ಆರ್ತನಾದ ಆತನು ಕ್ರಮಕ್ರಮವಾಗಿ ಮೋಕ್ಷವನ್ನು / ಕ್ರಮಮುಕ್ತಿಯನ್ನು ಹೊಂದುವನು. (ಮುಕ್ತಿ ೨ ವಿಧ— ಸದ್ಯೋಮುಕ್ತಿ ಹಾಗೂ ಕ್ರಮಮುಕ್ತಿ. ಸದ್ಯೋಮುಕ್ತಿಯು ತತ್ಕಾಲದಲ್ಲೇ ಆಗುವಂಥದ್ದು.) ಹೀಗೆ ಹೇಳಿ ದೇವೇಂದ್ರನಿಂದ ಅರಿಷ್ಟನೇಮಿಯ ಬಳಿಗೆ ನಾನು ಪ್ರೇಷಿತನಾಗಿರುವೆನು / ಕಳುಹಿಸಲ್ಪಟ್ಟಿರುವೆನು.

ಮಯಾಗತ್ಯ ಪುನಸ್ತತ್ರ ರಾಜಾ ವಲ್ಮೀಕಜನ್ಮನೇ |
ನಿವೇದಿತೋ ಮಹೇಂದ್ರಸ್ಯ ರಾಜ್ಞಾ ಮೋಕ್ಷಸ್ಯ ಸಾಧನಮ್ || ೪೮ ||

ನನ್ನಿಂದ ಪುನಃ ಬರಲ್ಪಟ್ಟು, ಮಹೇಂದ್ರನ ಆಜ್ಞೆಯು ರಾಜಾ ಅರಿಷ್ಟನೇಮಿಗೆ ನಿವೇದಿಸಲ್ಪಟ್ಟಿತು (ನಾನು ಪುನಃ ಬಂದು, ನನಗೆ ಇಂದ್ರನು ಮತ್ತೆ ಮಾಡಿದ ಆಜ್ಞೆಯನ್ನು ರಾಜನಿಗೆ ನಿವೇದಿಸಿದೆನು). ಅಂತೆಯೇ, ಆ ರಾಜನಿಂದಲೂ ವಾಲ್ಮೀಕಿಮುನಿಗೆ ಮೋಕ್ಷದ ಸಾಧನದ ಕುರಿತ ಸಂದೇಹ / ಪ್ರಶ್ನೆಯು ನಿವೇದಿಸಲ್ಪಟ್ಟಿತು (ರಾಜನೂ ವಾಲ್ಮೀಕಿಯನ್ನು ಮೋಕ್ಷಸಾಧನದ ಬಗ್ಗೆ ಪ್ರಶ್ನಿಸಿದನು).

ತತೋ ವಲ್ಮೀಕಜನ್ಮಾಸೌ ರಾಜಾನಂ ಸಮಪೃಚ್ಛತ |
ಅನಾಮಯಮತಿಪ್ರೀತ್ಯಾ ಕುಶಲಪ್ರಶ್ನವಾರ್ತಯಾ || ೪೯ ||

ಬಳಿಕ ಈ ವಾಲ್ಮೀಕಿಮುನಿಯು ಪಾಪ-ರೋಗಾದಿರಹಿತನಾದ ರಾಜಾ ಅರಿಷ್ಟನೇಮಿಯನ್ನು ಬಹಳ ಪ್ರೀತಿಯಿಂದ ದೇಶ-ಕೋಶ-ಪುತ್ರ-ತಪಸ್ಸು — ಇತ್ಯಾದಿಗಳ ಕುರಿತ ಕುಶಲಪ್ರಶ್ನೆಯೇ ಮುಂತಾದ ಕ್ಷೇಮಸಮಾಚಾರವನ್ನು ಕೇಳುವ ಮೂಲಕವಾಗಿ ಸೂಕ್ತರೀತಿಯಲ್ಲಿ ಪ್ರಶ್ನಿಸಿದನು.

ರಾಜೋವಾಚ—

ಭಗವನ್ ಧರ್ಮತತ್ತ್ವಜ್ಞ ಜ್ಞಾತಜ್ಞೇಯ ವಿದಾಂವರ |
ಕೃತಾರ್ಥೋऽಹಂ ಭವದ್ದೃಷ್ಟ್ಯಾ ತದೇವ ಕುಶಲಂ ಮಮ || ೫೦ ||

ರಾಜನು ಹೇಳಿದನು—

ಹೇ ಭಗವನ್! ಧರ್ಮತತ್ತ್ವರಹಸ್ಯವನ್ನು / ಕರ್ಮಕಾಂಡದ ರಹಸ್ಯವನ್ನು ಬಲ್ಲವನೆ!! ತಿಳಿಯಬೇಕಾದ ಜ್ಞೇಯವಾದ ಪರತತ್ತ್ವವನ್ನು / ಬ್ರಹ್ಮತತ್ತ್ವವನ್ನು ತಿಳಿದಿರುವ ಜ್ಞಾತನೆ / ಜ್ಞಾತೃವೆ!!! ಜ್ಞಾನಿಗಳಲ್ಲಿ / ಲೌಕಿಕ-ವ್ಯವಹಾರಜ್ಞಾನಿಗಳಲ್ಲೂ ಶ್ರೇಷ್ಠನಾದವನೆ!!!! ನನ್ನೆಡೆಗಿನ ತಮ್ಮ ಕೃಪಾಪೂರ್ಣದೃಷ್ಟಿಯಿಂದಲೇ ( / ತಮ್ಮ ದರ್ಶನಮಾತ್ರದಿಂದಲೇ) ನಾನು ಕೃತಾರ್ಥನಾದೆನು. ಅದೇ ನನಗೆ ಕುಶಲಪ್ರದವಾದುದು / ಯೋಗಕ್ಷೇಮ / ಕೃತಾರ್ಥತೆ / ಕೃತಕೃತ್ಯತೆ ಯನ್ನು ಕೊಡುವಂಥದ್ದು. 

ಭಗವನ್ ಪ್ರಷ್ಟುಮಿಚ್ಛಾಮಿ ತದವಿಘ್ನೇನ ಮೇ ವದ |
ಸಂಸಾರಬಂಧದುಃಖಾರ್ತೇಃ ಕಥಂ ಮುಂಚಾಮಿ ತದ್ವದ || ೫೧ ||

ಹೇ ಭಗವನ್ ವಾಲ್ಮೀಕಿಮುನಿಯೆ! (ಸಂದೇಹನಿವಾರಣೆಗಾಗಿ) ನಿನ್ನಲ್ಲಿ ಪ್ರಶ್ನಿಸಲು ಇಚ್ಛಿಸುತ್ತೇನೆ. ಅದಕ್ಕೆ ಪರಿಹಾರವನ್ನು ಯಾವುದೇ ಅಡೆತಡೆಯಿಲ್ಲದೆ ನನಗೆ ಹೇಳು. ಸಂಸಾರಬಂಧನದುಃಖವೆಂಬ ಆರ್ತಿ / ರೋಗ / ಸಂಕಟ / ಪೀಡೆ ಯಿಂದ ಹೇಗೆ ನಾನು ಮುಕ್ತನಾಗುವೆನೆಂಬುದನ್ನು (ದಯವಿಟ್ಟು) ಹೇಳು.

[ “ನಾऽಪೃಷ್ಟಃ ಕಸ್ಯಚಿದ್ ಬ್ರೂಯಾತ್”— ಪ್ರಶ್ನಿಸದ ಯಾವನಿಗೂ ಯಾವ ವಿಚಾರವನ್ನೂ ಹೇಳಬಾರದೆಂಬ ಆಕ್ಷೇಪದ ನಿವಾರಣೆಗಾಗಿಯೂ, ವಾಲ್ಮೀಕಿಯು ಉಪೇಕ್ಷಿಸಬಾರದೆಂಬ ಕಾರಣಕ್ಕಾಗಿಯೂ ರಾಜನು ವಾಲ್ಮೀಕಿಯನ್ನು ಪ್ರಶ್ನಿಸುತ್ತಾನೆ. “ಶ್ರೇಯಾಂಸಿ ಬಹುವಿಘ್ನಾನಿ”— ಎಂಬಂತೆ ಶ್ರೇಯಸ್ಸಿನ ದಾರಿಗಳು ಬಹಳ ಅಡೆತಡೆಗಳಿಂದ ಕೂಡಿದವುಗಳು ಎಂಬುದಕ್ಕಾಗಿ “ಅವಿಘ್ನೇನ ವದ” ಎನ್ನಲಾಗಿದೆ. “ತಸ್ಮಾತ್, ಏಷಾಂ ತನ್ನ ಪ್ರಿಯಂ ಯದೇತತ್, ಮನುಷ್ಯಾ ವಿದ್ಯುಃ”— ಎಂಬ ಶ್ರುತಿವಚನದಂತೆ, ಇವರಿಗೆ / ದೇವತೆಗಳಿಗೆ  ಯಾವುದು ಪ್ರಿಯವಾದುದೆಂದು / ದೈವಸಂಕಲ್ಪ ಹೇಗಿದೆಯೆಂದು ಈ ಮನುಷ್ಯರು ಅರಿಯಲಾರರು. ಹಾಗಾಗಿಯೇ ಮಾನುಷಕಾರ್ಯಗಳಿಗೆ ದೈವದ್ವಾರಾ / ದೇವತೆಗಳ ಮೂಲಕ ವಿಘ್ನಸಂಭವ. ಉದಾ— ಇಂದ್ರಾಜ್ಞೆಯಿಂದ ಮೇನಕೆಯ ಮೂಲಕ ವಿಶ್ವಾಮಿತ್ರನ ತಪೋಭಂಗ. ಆದರೆ, ಇಲ್ಲಿ ದೇವೇಂದ್ರನ ಆಣತಿಯಂತೆಯೇ ರಾಜನು ಪ್ರಶ್ನಿಸಿರುವುದರಿಂದ ಅವಿಘ್ನತೆಯಿಂದಲೇ ಉಪದೇಶಿಸಬಹುದು, ದೇವಸಹಾಯ ಹೇಗೂ ಇದೆ, ವಿಘ್ನದ ಭಯವಿಲ್ಲ ಎಂಬುದರ ದ್ಯೋತಕ “ಅವಿಘ್ನೇನ ವದ” ಎಂಬ ಮಾತು. ಇಲ್ಲಿ ಮೋಕ್ಷಸ್ವರೂಪ ಹಾಗೂ ಮೋಕ್ಷಸಾಧನದ ಕುರಿತು ಪ್ರಶ್ನಿಸಲಾಗಿದೆ. ]

ವಾಲ್ಮೀಕಿರುವಾಚ—

ಶೃಣು ರಾಜನ್ ಪ್ರವಕ್ಷ್ಯಾಮಿ ರಾಮಾಯಣಮಖಂಡಿತಮ್ |
ಶ್ರುತ್ವಾವಧಾರ್ಯ ಯತ್ನೇನ ಜೀವನ್ಮುಕ್ತೋ ಭವಿಷ್ಯಸಿ || ೫೨ ||

ವಾಲ್ಮೀಕಿಯು ಹೇಳಿದನು—

(ರಾಜನ್)ಹೇ ರಾಜನೆ!, ಯಾವುದನ್ನು (ಅಖಂಡಿತಂ)ಅಖಂಡವಾಗಿ / ಸಮಗ್ರವಾಗಿ / ಇಡಿಯಾಗಿ, (ಶ್ರುತ್ವಾ)ಶ್ರವಣಮಾಡಿ (ಯತ್ನೇನ)ಪ್ರಯತ್ನಪೂರ್ವಕವಾಗಿ ಮನನ, ನಿಧಿಧ್ಯಾಸನಾದಿಗಳ ಮೂಲಕ, (ಅವಧಾರ್ಯ)ಅವಧಾರಣೆ ಮಾಡಿಕೊಂಡು / ಅನುಷ್ಠಾನಪೂರ್ವಕ ಅನುಭವಿಸಿ / ಅವಧರಿಸಿ / ಚೆನ್ನಾಗಿ ಚಿತ್ತದಲ್ಲಿ ಧಾರಣೆ ಮಾಡಿಕೊಂಡು (ಅವ— ಕೆಳಕ್ಕೆ / download ಮಾಡಿ, ಧಾರ್ಯ— ಧರಿಸಿ / instal ಮಾಡಿ), ನೀನು (ಜೀವನ್ಮುಕ್ತಃ, ಭವಿಷ್ಯಸಿ)ಬದುಕಿರುವಾಗಲೇ ಬಂಧಮುಕ್ತನಾಗುವೆಯೋ / ಜೀವನ್ಮುಕ್ತನಾಗುವಿಯೋ (ಜೀವನ್ ಮುಕ್ತ) ಅಂತಹ (ರಾಮಾಯಣಂ)ವಾಸಿಷ್ಠರಾಮಾಯಣವನ್ನು , (ಪ್ರವಕ್ಷ್ಯಾಮಿ)ಪ್ರಕೃಷ್ಟವಾದ ರೀತಿಯಲ್ಲಿ / ರಮಣೀಯವಾಗಿ ಹೇಳುವೆನು; (ಶೃಣು)ಕೇಳು.

[ ಕೈಕೇಯೀಪ್ರಾಪ್ತವರಗಳಿಂದ ರಾಜ್ಯಭ್ರಷ್ಟನಾದ ರಾಮನಿಂದ ರಾಕ್ಷಸರನ್ನು ಗೆದ್ದು ಸ್ವಸ್ಥಾನ / ಅಯನ / ಅಭ್ಯುದಯದ ಪ್ರಾಪ್ತಿ;  ಅಂತೆಯೇ ಭೃಗುಶಾಪದಿಂದ ವೈಕುಂಠವನ್ನು ತೊರೆದು ಭೂಮಿಯಲ್ಲಿ ರಾಮನಾಗಿ ಮಾನುಷಾವತಾರ ತಾಳಿದವನು, ವಸಿಷ್ಠೋಪದೇಶದಿಂದ ನರದೇಹಸಹಜವಾದ ಅಜ್ಞಾನಾದಿ ರಾಕ್ಷಸರನ್ನು ಕೊಂದು ಸ್ವ-ಸ್ವರೂಪಜ್ಞಾನವೆಂಬ ಅಭ್ಯುದಯವನ್ನು ಪ್ರಾಪ್ತಿಮಾಡಿಕೊಂಡದ್ದು— ಎಂಬ ಅನುಕ್ರಮವಾಗಿ ಈ ೨ ರೀತಿಯ ರಾಮಾಯಣಗಳಾದ ವಾಲ್ಮೀಕಿರಾಮಾಯಣ (ಮೋಕ್ಷಸ್ವರೂಪ) ಹಾಗೂ ವಾಲ್ಮೀಕಿವಿರಚಿತ ವಾಸಿಷ್ಠರಾಮಾಯಣ / ಯೋಗವಾಸಿಷ್ಠ (ಮೋಕ್ಷಸಾಧನ)— “ಶ್ರುತ್ವಾ”— ಇವುಗಳ ಶ್ರವಣದಿಂದ ಇವು ಪ್ರಮಾಣಗ್ರಂಥಗಳೆಂಬ ಬಗ್ಗೆ ಸಂಭಾವನಾ / ಊಹೆಮಾತ್ರವಲ್ಲದೆ, ನಿಜವೆಂಬ ತಿಳಿವು ಉಂಟಾಗುವುದು. “ಅವಧಾರ್ಯ”— ಮನನ / ಅವಧಾರಣೆಯಿಂದ ಪ್ರಮೇಯ / ನಿಜಸ್ವರೂಪದ ಸಂಭಾವನಾ / ಊಹಾಭಾವವು ಹೋಗಿ ನಿಜದ ಅರಿವಾಗುವುದು. “ಯತ್ನೇನ”— ನಿಧಿಧ್ಯಾಸನದಿಂದ ವಿಪರೀತ / ವಿರೋಧಭಾವನೆಗಳು ಇಲ್ಲವಾಗಿ ಸಾಕ್ಷಾತ್ಕಾರವಾಗುವುದು. ]

ವಸಿಷ್ಠ-ರಾಮಸಂವಾದಂ ಮೋಕ್ಷೋಪಾಯಕಥಾಂ ಶುಭಾಮ್ |
ಜ್ಞಾತ-ಸ್ವ-ಭಾವೋ ರಾಜೇಂದ್ರ ವದಾಮಿ ಶ್ರೂಯತಾಂ ಬುಧ || ೫೩ ||

ಅಯ್ಯಾ ವಿಬುಧನೂ / ಜ್ಞಾನಿಯೂ ರಾಜೇಂದ್ರನೂ ಆದ ಅರಿಷ್ಟನೇಮಿಯೆ! ಸೂರ್ಯವಂಶದ ರಾಜಮನೆತನದ ಕುಲಗುರುಗಳಾದ, ಗೋತ್ರಪ್ರವರ್ತಕ ಸಪ್ತರ್ಷಿಗಳಲ್ಲೊಬ್ಬರಾದ ಬ್ರಹ್ಮರ್ಷಿ ವಸಿಷ್ಠರು ಹಾಗೂ ಸೂರ್ಯವಂಶಲಲಾಮನಾದ ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರರ ನಡುವಿನ ಸಂವಾದ / ಮಾತುಕತೆಯ ರೂಪವಾದ ಈ ಶುಭಪ್ರದವಾದ, ಮೋಕ್ಷದ ಉಪಾಯವನ್ನು ಹೇಳುವ ಕಥೆಯನ್ನು, ಸ್ವರೂಪ / ಆತ್ಮ / ಬ್ರಹ್ಮ ದ ಗುಣ, ಸ್ವರೂಪ, ಸ್ವಭಾವ, ಸಾಧನಾದಿಗಳನ್ನು ತಿಳಿದವನಾದ ನಾನು ಹೇಳುತ್ತೇನೆ, ಕೇಳುವವನಾಗು.

[ “ನ ನರೇಣ ಅವರೇಣ ಪ್ರೋಕ್ತಃ, ಏಷಃ ಸುವಿಜ್ಞೇಯಃ, ಬಹುಧಾ ಚಿಂತ್ಯಮಾನಃ”— ಎಂಬ ವೇದವಚನದಂತೆ, ತತ್ತ್ವಜ್ಞನಲ್ಲದವನ ಉಪದೇಶದಿಂದ ಶಿಷ್ಯನಿಗೆ ಕೃತಾರ್ಥತೆಯುಂಟಾಗದೆಂಬುದಕ್ಕಾಗಿ, ವಾಲ್ಮೀಕಿಯು ತನ್ನ ತತ್ತ್ವಜ್ಞತ್ವವನ್ನು (ತಾನು ಆತ್ಮಜ್ಞಾನಿಯೆಂಬುದನ್ನು) “ಜ್ಞಾತಸ್ವಭಾವಃ” ಎಂದು ಹೇಳಿದ್ದಾನೆ. ]

ಕೋ ರಾಮಃ ಕೀದೃಶಃ ಕಸ್ಯ ಬದ್ಧೋ ವಾ ಮುಕ್ತ ಏವ ವಾ |
ಏತನ್ಮೇ ನಿಶ್ಚಿತಂ ಬ್ರೂಹಿ ಜ್ಞಾನಂ ತತ್ತ್ವವಿದಾಂ ವರ || ೫೪ ||

ಈ ನೀವು ಹೇಳಿದ ರಾಮಾಯಣದ ರಾಮನಾರು? ಎಂಥವನು? ಯಾರವನು / ಯಾರ ಮಗನು / ಯಾವ ದೇಶದವನು / ಯಾವ ವಂಶದವನು? ಆತನು ಲೌಕಿಕವ್ಯಾಮೋಹಗಳಿಗೆ ಬದ್ಧನೆ? ಅಥವಾ ಅವುಗಳಿಂದ ಮುಕ್ತನೆ? ಅಯ್ಯಾ ಪರತತ್ತ್ವವರಿತವರಲ್ಲಿ ಶ್ರೇಷ್ಠನಾದ ವಾಲ್ಮೀಕಿಮಹರ್ಷಿಯೆ! ಈ ಕುರಿತಾಗಿ “ಇದಮ್ ಇತ್ಥಮ್”— “ಇದು ಹೀಗೆಯೇ” ಎಂಬಂತಹ ನಿಶ್ಚಯಾತ್ಮಕವಾದ ವಿಚಾರವನ್ನು ಹೇಳಿ ನನಗೆ ಆ ಬಗ್ಗೆ ಸ್ಪಷ್ಟವಾದ ಅರಿವನ್ನುಂಟುಮಾಡು.

[ ವಸಿಷ್ಠ-ರಾಮರ ಸಂವಾದವೆಂಬಲ್ಲಿ ರಾಮನನ್ನು ಶಿಷ್ಯನಾಗಿ ಹೇಳಿರುವುದರಿಂದ ಶಿಷ್ಯತ್ವವು ಪರತತ್ತ್ವವರಿಯದ ಅಜ್ಞಾನಿಗೇ ಹೊರತು ಪರಮೇಶ್ವರನಿಗೆ ಸಂಬಂಧಿಸಲಾರದು. ರಾಮನು ಭಗವಂತನ ಅವತಾರವಾದುದರಿಂದ ಸರ್ವಜ್ಞನೆಂಬುದೇ ಉಚಿತವಲ್ಲವೆ ಎಂಬ ಸಂದೇಹವುಳ್ಳವನಾಗಿ ರಾಜಾ ಅರಿಷ್ಟನೇಮಿಯು ಕೇಳುತ್ತಾನೆ “ರಾಮ ಯಾರು / ಯಾವ ರಾಮ?” ಎಂಬುದಾಗಿ. ರಾಮನೆಂಬ ಹೆಸರಿನ ಬೇರೊಬ್ಬನೇ ಅಥವಾ ಸುಪ್ರಸಿದ್ಧನಾದ ನಿತ್ಯಮುಕ್ತನಾದ ವಿಷ್ಣುವೇ? ಎಂಬ ಆಶಯ ಈ ಪ್ರಶ್ನೆಯದ್ದು. “ಜ್ಞಾಯತೇ ಅನೇನ ಇತಿ ಜ್ಞಾನಮ್”— “ಇದರಿಂದಾಗಿ ಯಾವುದೇ ವಿಚಾರವು ತಿಳಿಯುತ್ತದೆ” ಎಂಬುದರಿಂದ ಜ್ಞಾನವು ನಿಶ್ಚಯಾತ್ಮಕವಾದುದು ಎಂದರ್ಥ. 

ವಾಲ್ಮೀಕಿರುವಾಚ—

ಶಾಪವ್ಯಾಜವಶಾದೇವ ರಾಜವೇಷಧರೋ ಹರಿಃ |
ಆಹೃತಾಜ್ಞಾನಸಂಪನ್ನಃ ಕಿಂಚಿಜ್ಞೋऽಸೌ ಭವತ್ಪ್ರಭುಃ || ೫೫ ||

ವಾಲ್ಮೀಕಿಯು ಹೇಳಿದನು— 

ನಡೆಯುತ್ತಿರುವ ಸೃಷ್ಟಿಯ ಪಾಲಕನಾಗಿ / ಸ್ಥಿತಿಕಾರಕನಾಗಿ ಭವತ್-ಪ್ರಭುವೆನಿಸಿದ ಶ್ರೀಹರಿಯಾದ ಇವನು / ರಾಮನು, ಶಾಪವೆಂಬ ನೆಪಮಾತ್ರದ ಕಾರಣದಿಂದಲೇ ತಾನೇ ಸ್ವೇಚ್ಛೆಯಿಂದ ಸ್ವೀಕರಿಸಿದ ಅಜ್ಞಾನದಿಂದ ಸಂಪನ್ನನಾದ / ಕೂಡಿದ ಅಲ್ಪಜ್ಞನಾದನು.

[ ತನ್ನ ಭಕ್ತರ ಮಾತು / ಭೃಗುಮುನಿಯೇ ಮುಂತಾದವರ ಶಾಪ ನಿಜವಾಗಲೆನ್ನುವ / ಹುಸಿಯಾಗದಿರಲೆಂಬ ಆಶಯದಿಂದ ತಾನೇ ಅಜ್ಞಾನವನ್ನು ಪರಿಗ್ರಹಿಸಿದನೋ ಎಂಬಂತೆ, ಅಲ್ಪಜ್ಞನೋ ಎಂಬಂತೆ ವರ್ತಿಸಿದನು. ಇಲ್ಲಿ “ಭವತ್” ಎಂದರೆ “ಅಭವತ್”— ಆದನು, ಎಂದರ್ಥ. “ಅಡಭಾವಶ್ಛಾಂದಸಃ” (ಅಟ್ ಅಭಾವಃ ಛಾಂದಸಃ) ಎಂಬ ನಿಯಮದಂತೆ ಅ-ಕಾರವು ಲೋಪವಾಗಿರುವುದು ಛಾಂದಸ / ಆರ್ಷ / ವೈದಿಕಪ್ರಯೋಗವಾಗಿದೆ. ]

ರಾಜೋವಾಚ—

ಚಿದಾನಂದಸ್ವರೂಪೇ ಹಿ ರಾಮೇ ಚೈತನ್ಯವಿಗ್ರಹೇ |
ಶಾಪಸ್ಯ ಕಾರಣಂ ಬ್ರೂಹಿ ಕಃ ಶಪ್ತಾ ಚೇತಿ ಮೇ ವದ || ೫೬ ||

ರಾಜನು ಹೇಳಿದನು— 

ಶ್ರೀರಾಮನು ಚಿದಾನಂದಸ್ವರೂಪವಾದ ಪರಬ್ರಹ್ಮಶಕ್ತಿ / ಮೂಲಚೈತನ್ಯದ ಸಾಕಾರವೇ ಆಗಿರುವಾಗ, ಶಪಿಸಿದವನು ಯಾರು? ಹಾಗೂ ಈ ರೀತಿಯ ಶಾಪಕ್ಕೆ / ಶಾಪದ ಕಾರಣವೇನು ಎಂಬುದನ್ನು ನನಗೆ ಹೇಳು ಎಂದು ಅರಿಷ್ಟನೇಮಿಯು ವಾಲ್ಮೀಕಿಯನ್ನು ಕೇಳಿದನು.

[ ಮಹರ್ಷಿಗಳು ಅಪರಾಧಿಗಳನ್ನು ಮಾತ್ರ ಶಪಿಸುತ್ತಾರೆ. ಅಪರಾಧವು ಅಪೂರ್ಣಕಾಮನಾದ (ಬಯಕೆಗಳು ಇನ್ನೂ ಪೂರ್ಣವಾಗದ / ಪೂರೈಸದ) ಅಜ್ಞನಿಂದಲೇ ಮಾಡಲ್ಪಡುವುದಲ್ಲದೆ, ಪಾರಮಾರ್ಥಿಕವಾಗಿ ಚಿತ್ ಗಿಂತ ಅಭಿನ್ನವಾದ, ಮಾಯೆ / ಅವಿದ್ಯೆ / ಅಜ್ಞಾನದಿಂದ ಆವರಿಸಲ್ಪಡದೆ ಸರ್ವಜ್ಞನೂ, ವ್ಯಾವಹಾರಿಕವಾಗಿಯೂ ಭಕ್ತಾನುಕಂಪಮಾತ್ರದಿಂದ ನಿರಾಕಾರಚೈತನ್ಯವೇ ನರದೇಹವನ್ನಾಶ್ರಯಿಸಿ ಸ್ವೇಚ್ಛೆಯಿಂದ ಅವತರಿಸಿರುವ ರಾಮನಿಂದಲಾದರೋ / ವಿಷ್ಣುವಿನಿಂದಲಾದರೋ ಅಪರಾಧವೆಂತು ಸಂಭವಿಸಬಲ್ಲದು? ಶಾಪವೇಕೆ ಬಂತು? ಎಂಬ ಭಾವ ಇಲ್ಲಿದೆ. ]

ವಾಲ್ಮೀಕಿರುವಾಚ

ಸನತ್ಕುಮಾರೋ ನಿಷ್ಕಾಮ ಅವಸದ್ಬ್ರಹ್ಮಸದ್ಮನಿ |
ವೈಕುಂಠಾದಾಗತೋ ವಿಷ್ಣುಸ್ತ್ರೈಲೋಕ್ಯಾಧಿಪತಿಃ ಪ್ರಭುಃ || ೫೭ ||

ಯಾವುದೇ ಕಾಮನೆಗಳಿಲ್ಲದೆ ನಿಷ್ಕಾಮಯೋಗಿಯಾದ ಬ್ರಹ್ಮಮಾನಸಪುತ್ರ ಸನತ್ಕುಮಾರನು ಬ್ರಹ್ಮಲೋಕದಲ್ಲಿ ವಾಸವಾಗಿದ್ದನು. ಒಮ್ಮೆ, ಮೂರೂ ಲೋಕಗಳ ಒಡೆಯನಾದ ವಿಷ್ಣುವು ತನ್ನ ಧಾಮವಾದ ವೈಕುಂಠದಿಂದ ಬ್ರಹ್ಮಲೋಕಕ್ಕೆ ಆಗಮಿಸಿದವನಾದನು.

ಬ್ರಹ್ಮಣಾ ಪೂಜಿತಸ್ತತ್ರ ಸತ್ಯಲೋಕನಿವಾಸಿಭಿಃ |
ವಿನಾ ಕುಮಾರಂ ತಂ ದೃಷ್ಟ್ವಾ ಹ್ಯುವಾಚ ಪ್ರಭುರೀಶ್ವರಃ || ೫೮ ||

ಬ್ರಹ್ಮನಿಂದಲೂ, ಸತ್ಯಲೋಕವೆನಿಸಿದ ಬ್ರಹ್ಮಲೋಕದ ಸಕಲ ನಿವಾಸಿಗಳಿಂದಲೂ ವಿಷ್ಣುವು ಪೂಜಿಸಲ್ಪಟ್ಟನು. ಆಗ, ಸನತ್ಕುಮಾರನೊಬ್ಬನು ಕಾಣದಿರುವುದನ್ನು ನೋಡಿ ಲೋಕಪ್ರಭು / ಜಗದೀಶ್ವರನಾದ ವಿಷ್ಣುವು ಹೇಳಿದನು—

ಸನತ್ಕುಮಾರ ಸ್ತಬ್ಧೋऽಸಿ ನಿಷ್ಕಾಮೋ ಗರ್ವಚೇಷ್ಟಯಾ |
ಅತಸ್ತ್ವಂ ಭವ ಕಾಮಾರ್ತಃ ಶರಜನ್ಮೇತಿ ನಾಮತಃ || ೫೯ ||

ಎಲೈ ಸನತ್ಕುಮಾರನೆ! ನೀನು ನಿಷ್ಕಾಮನೆಂಬ ಗರ್ವದಿಂದ ಚೇಷ್ಟಿತನಾಗಿ / ಚೋದಿತನಾಗಿ (ಉಳಿದವರಂತೆ ನನ್ನನ್ನು ಸತ್ಕರಿಸದೆ) ಸ್ತಬ್ಧನಾಗಿ ಸುಮ್ಮನಿರುವೆ. ಹಾಗಾಗಿ ನೀನು ಶರಜನ್ಮಾ ಎಂಬ ಹೆಸರಿನವನಾಗಿ ಕಾಮಾರ್ತನಾಗಿ ಜನಿಸು ಎಂದು ವಿಷ್ಣುವು ಸನತ್ಕುಮಾರನನ್ನು ಶಪಿಸಿದನು. (“ಕಾಮೇನ ಋತಃ / ವ್ಯಾಪ್ತಃ ಕಾಮಾರ್ತಃ”— ಕಾಮದಿಂದ ವ್ಯಾಪ್ತನಾದವನು ಕಾಮಾರ್ತನು.)

ತೇನಾಪಿ ಶಾಪಿತೋ ವಿಷ್ಣುಃ ಸರ್ವಜ್ಞತ್ವಂ ತವಾಸ್ತಿ ಯತ್ |
ಕಿಂಚಿತ್ಕಾಲಂ ಹಿ ತತ್ತ್ಯಕ್ತ್ವಾ ತ್ವಮಜ್ಞಾನೀ ಭವಿಷ್ಯಸಿ || ೬೦ ||

ವಿಷ್ಣುವೂ ಸನತ್ಕುಮಾರನಿಂದ ಶಪಿಸಲ್ಪಟ್ಟನು ಹೇಗೆಂದರೆ— “ನಿನಗೆ ಯಾವ ಸರ್ವಜ್ಞತ್ವವಿದೆಯೋ, ಅದನ್ನು ಸ್ವಲ್ಪಕಾಲ ನೀನು ತ್ಯಜಿಸಿ ಅಜ್ಞಾನಿಯಾಗುವೆ”.

*ಭೃಗುರ್ಭಾರ್ಯಾಂ ಹತಾಂ ದೃಷ್ಟ್ವಾ ಹ್ಯುವಾಚ ಕ್ರೋಧಮೂರ್ಚ್ಛಿತಃ |*
*ವಿಷ್ಣೋ ತವಾಪಿ ಭಾರ್ಯಾಯಾ ವಿಯೋಗೋ ಹಿ ಭವಿಷ್ಯತಿ || ೬೧ ||*

_ಮಹರ್ಷಿ ಭೃಗುವು ತನ್ನ ಪತ್ನಿಯಾದ ಖ್ಯಾತಿಯು ಕೊಲ್ಲಲ್ಪಟ್ಟುದನ್ನು ನೋಡಿ ಕೋಪಾವಿಷ್ಟನಾಗಿ (ಕ್ರೋಧೇನ ಮೂರ್ಚ್ಛಿತಃ ಮೋಹಿತಃ, ಸಮುಚ್ಛ್ರಿತಶ್ಚ— ಕ್ರೋಧವಶನಾಗಿ, ಕ್ರೋಧವನ್ನು ಬಹುವಾಗಿ ಆಶ್ರಯಿಸಿದವನಾಗಿ, ಸಮ್ ಉತ್ ಶ್ರಿತಃ ಚ), “ಎಲೈ ವಿಷ್ಣುವೆ! ಭವಿಷ್ಯದಲ್ಲಿ ನಿನಗೂ ನಿನ್ನ ಪತ್ನಿಯ ವಿ-ಯೋಗ / ಬೇರ್ಪಡುವಿಕೆ ಉಂಟಾಗಲಿ” ಎಂದು ಹೇಳಿದನು / ಶಪಿಸಿದನು._

*ವೃನ್ದಯಾ ಶಾಪಿತೋ ವಿಷ್ಣುಶ್ಛಲನಂ ಯತ್ತ್ವಯಾ ಕೃತಮ್ |*
*ಅತಸ್ತ್ವಂ ಸ್ತ್ರೀವಿಯೋಗಂ ತು ವಚನಾನ್ಮಮ ಯಾಸ್ಯಸಿ || ೬೨ ||*

_ಜಲಂಧರನೆಂಬ ಅಸುರನ ಪತ್ನಿಯಾದ ವೃಂದೆಯೆಂಬವಳಿಂದಲೂ “ನಿನ್ನಿಂದ ನನ್ನ ಪತಿವೇಷವು ಧರಿಸಲ್ಪಟ್ಟು ತನ್ಮೂಲಕ ನನ್ನ ಪಾತಿವ್ರತ್ಯವು ಮೋಸದಿಂದ  ಭಂಗಗೊಳಿಸಲ್ಪಟ್ಟುದರಿಂದ ನೀನು ನನ್ನ ಶಾಪವಚನನಿಮಿತ್ತದಿಂದ ಪತ್ನೀವಿಯೋಗವನ್ನು ಹೊಂದಲಿರುವೆ” ಎಂದು ವಿಷ್ಣುವು ಶಪಿತನಾದನು._

*ಭಾರ್ಯಾ ಹಿ ದೇವದತ್ತಸ್ಯ ಪಯೋಷ್ಣೀತೀರಸಂಸ್ಥಿತಾ |*
*ನೃಸಿಂಹವೇಷಧೃಗ್ವಿಷ್ಣುಂ ದೃಷ್ಟ್ವಾ ಪಞ್ಚತ್ವಮಾಗತಾ || ೬೩ ||*
*ತೇನ ಶಪ್ತೋ ಹಿ ನೃಹರಿರ್ದುಃಖಾರ್ತಃ ಸ್ತ್ರೀವಿಯೋಗತಃ |*
*ತವಾಪಿ ಭಾರ್ಯಯಾ ಸಾರ್ಧಂ ವಿಯೋಗೋ ಹಿ ಭವಿಷ್ಯತಿ || ೬೪ ||*

_ಪಯೋಷ್ಣೀನದೀತೀರದಲ್ಲಿದ್ದ ದೇವದತ್ತನೆಂಬವನ ಪತ್ನಿಯು ವಿಷ್ಣುವಿನ ನರಸಿಂಹಾವತಾರರೂಪವನ್ನು ಕಂಡು (ಭೀತಳಾಗಿ) ಮರಣಹೊಂದಿ ಪಂಚಭೂತಗಳಲ್ಲಿ ಲೀನವಾದಳು. ಹೀಗೆ ಪತ್ನೀವಿಯೋಗದಿಂದ ದುಃಖಾರ್ತನಾದ ಆ ದೇವದತ್ತನಿಂದ  ನರಹರಿಯು / ವಿಷ್ಣುವು “ನಿನಗೂ ನಿನ್ನ ಪತ್ನೀವಿಯೋಗವುಂಟಾಗಲಿ” ಎಂದು ಶಪಿಸಲ್ಪಟ್ಟನು._

*ಭೃಗುಣೈವಂ ಕುಮಾರೇಣ ಶಾಪಿತೋ ದೇವಶರ್ಮಣಾ |*
*ವೃನ್ದಯಾ ಶಾಪಿತೋ ವಿಷ್ಣುಸ್ತೇನ ಮಾನುಷ್ಯತಾಂ ಗತಃ || ೬೫ ||*

_ಹೀಗೆ, ಮೊದಲನೆಯಾದ ಸನತ್ಕುಮಾರನ ಸರ್ವಜ್ಞತ್ವದ ತಾತ್ಕಾಲಿಕನಾಶವುಂಟಾಗಲೆಂಬ ಶಾಪದಿಂದ ಮನುಷ್ಯನಾಗಿ ರಾಮಾವತಾರದಲ್ಲಿ ಸಾಕ್ಷಾತ್ತಾಗಿ ಮಾಯಾಮೃಗಪ್ರಕರಣದಲ್ಲಿ ಅಜ್ಞಾನವಶದಿಂದ ಸೀತಾವಿಯೋಗವುಂಟಾದರೆ, ಅನಂತರದ ಭೃಗು, ದೇವಶರ್ಮ, ವೃಂದೆಯರ ಶಾಪಗಳಿಂದಾಗಿ ಆಕ್ಷೇಪ / ಅಪವಾದಗಳಿಂದ ಅಜ್ಞಾನವುಂಟಾಯಿತು. ಹಾಗಾಗಿಯೇ, ರಾಮನಿಗೆ ರಾವಣಕೃತ-ಸೀತಾಪಹಾರ, ರಜಕ-ಕೃತ-ಮಿಥ್ಯಾಪವಾದ ಹಾಗೂ ಸೀತೆಯಿಂದ ಸ್ವಯಂಕೃತ ಭೂತಲಪ್ರವೇಶ— ಇವುಗಳಿಂದ  ೩ ಬಾರಿ ಸೀತಾವಿಯೋಗವುಂಟಾಯಿತು. “ಸೀತೆಯು ಹೆಚ್ಚುಕಾಲ ನಿನ್ನೊಂದಿಗಿರಳು” ಎಂಬ ವಾಲಿಪತ್ನಿ ತಾರೆಯ ಮಾತು ಕೇವಲ ಆಕ್ಷೇಪಮಾತ್ರವಲ್ಲದೆ ಶಾಪವಾಗದು. ಏಕೆಂದರೆ, ವಾಲಿವಧೆಯ ನಂತರ ಸುಗ್ರೀವನೊಂದಿಗಿನ ಆಕೆಯ ದಾಂಪತ್ಯದಿಂದ ಪಾತಿವ್ರತ್ಯಭಂಗ ಹಾಗೂ ವಾನರಯೋನಿಯು ನರಜನ್ಮಕ್ಕಿಂತ ಕೆಳಮಟ್ಟದ್ದಾಗಿರುವುದರಿಂದಲೂ ತಾರೆಗೆ ಶಾಪಸಾಮರ್ಥ್ಯವಿಲ್ಲದೇ ಹೋಯಿತು._

*ಏತತ್ತೇ ಕಥಿತಂ ಸರ್ವಂ ಶಾಪವ್ಯಾಜಸ್ಯ ಕಾರಣಮ್ |*
*ಇದಾನೀಂ ವಚ್ಮಿ ತತ್ಸರ್ವಂ ಸಾವಧಾನಮತಿಃ ಶೃಣು || ೬೬ ||*

_”ಅಯ್ಯಾ ರಾಜನ್! ಅರಿಷ್ಟನೇಮಿಯೆ!! ಇದುವರೆಗೆ ವಿಷ್ಣುವಿಗೆ ಬಂದ ಶಾಪಗಳೆಂಬ ನೆಪಗಳ ಕಾರಣವನ್ನೆಲ್ಲ ನಿನಗೆ ಹೇಳಿದ್ದಾಯಿತು. ಈಗ ನೀನು ಆಗ ಕೇಳಿದ ಮೋಕ್ಷಸಾಧನದ ಬಗ್ಗೆ ವಿಸ್ತಾರವಾಗಿ ಹೇಳುವೆನು. ಗಮನ ಕೊಟ್ಟು ಕೇಳುವವನಾಗು” ಎಂದು ವಾಲ್ಮೀಕಿಮುನಿಯು ಹೇಳಿದನು. ಇದನ್ನು ದೇವದೂತನು ಸುರುಚಿಯೆಂಬ ಅಪ್ಸರೆಗೆ ಹೇಳಿದನು._

*ಇತ್ಯಾರ್ಷೇ ಶ್ರೀಮದ್ವಾಸಿಷ್ಠಮಹಾರಾಮಾಯಣೇ ವಾಲ್ಮೀಕೀಯೇ ದೇವದೂತೋಕ್ತೇ ಮೋಕ್ಷೋಪಾಯೇ ದ್ವಾತ್ರಿಂಶತ್ಸಾಹಸ್ರ್ಯಾಂ ಸಂಹಿತಾಯಾಂ ವೈರಾಗ್ಯಪ್ರಕರಣೇ ಸೂತ್ರಪಾತನಕೋ ನಾಮ ಪ್ರಥಮಃ ಸರ್ಗಃ || ೧ ||*

_ಇಲ್ಲಿಗೆ ವಾಲ್ಮೀಕಿಮಹರ್ಷಿಪ್ರಣೀತವಾದ ೩೨,೦೦೦ ಶ್ಲೋಕಗಳುಳ್ಳ ಶ್ರೀಮದ್-ವಾಸಿಷ್ಠಮಹಾರಾಮಾಯಣದಲ್ಲಿ ಮೊದಲನೆಯದಾದ ವೈರಾಗ್ಯಪ್ರಕರಣದಲ್ಲಿ ದೇವದೂತನಿಂದ ಹೇಳಲ್ಪಟ್ಟ ಮೋಕ್ಷೋಪಾಯದಲ್ಲಿ ಸೂತ್ರಪಾತನಕವೆಂಬ ಮೊದಲ ಸರ್ಗವು ಮುಗಿಯಿತು._

Comments