ಮುಮುಕ್ಷು-ಹಿತಬೋಧೆ (ಸಾರ)
ಮುಮುಕ್ಷು-ಹಿತಬೋಧೆ (ಸಾರ)
ಜಯ ಜಯ ರಘುವೀರ ಸಮರ್ಥ
ಗಣೇಶಃ ಶಾರದಾ ಚೈವ
ಸದ್ಗುರುಃ ಸಜ್ಜನಸ್ತಥಾ |
ಆರಾಧ್ಯದೈವತಂ ಗುಹ್ಯಂ
ಸರ್ವಂ ಮೇ ರಘುನಂದನಃ ||
ಶ್ರೀರಾಮಸಮರ್ಥ | ಶ್ರೀಗುರುಭ್ಯೋ ನಮಃ ||
ಆತ್ಮಜ್ಞಾನಕ್ಕೆ ಅಧಿಕಾರಿ ಯಾರು?
(೧ನೇ ಪ್ರಕರಣ—ಅಧಿಕಾರ ಭಾಗ)
ದುರ್ಲಭಂ ತ್ರಯಮೇವೈತತ್
ದೈವಾನುಗ್ರಹಹೇತುಕಮ್ |
ಮನುಷ್ಯತ್ವಂ ಮುಮುಕ್ಷುತ್ವಂ
ಮಹಾಪುರುಷಸಂಶ್ರಯಃ ||
(ವಿವೇಕಚೂಡಾಮಣಿ ಶ್ಲೋಕ ೩)
ಮನುಷ್ಯನಿಗೆ ಪರಮಾತ್ಮನ ಅನುಗ್ರಹವಿಲ್ಲದೆ ಮನುಷ್ಯತ್ವವೂ, ಮುಮುಕ್ಷುತ್ವವೂ, ಮಹಾತ್ಮರ ಸಂಗವೂ (ಸದ್ಗುರುವೂ) ದೊರೆಯುವುದಿಲ್ಲ.
೧. ಮನುಷ್ಯತ್ವ-ಪಶುತ್ವ
ಮೊದಲನೆಯದಾಗಿ, ಮನುಷ್ಯತ್ವವು ದುರ್ಲಭ. ಪರಮಾತ್ಮಾನುಗ್ರಹದಿಂದಾದ ಪೂರ್ವಪುಣ್ಯಸಂಚಯದ ದೆಸೆಯಿಂದ ದುರ್ಲಭವಾದ ನರಜನ್ಮ ದೊರೆತರೂ ಬಹುಮಂದಿ ಪಶುಬುದ್ಧಿಯಿಂದ, ಧರ್ಮ-ಅಧರ್ಮ ವಿವೇಕವಿಲ್ಲದೆ ಮನಬಂದಂತೆ, ಪಶುಗಳಂತೆ ಆಹಾರ-ನಿದ್ರಾ-ಭಯ-ಮೈಥುನಗಳಷ್ಟನ್ನೇ ಮನುಷ್ಯಕರ್ತವ್ಯವೆಂದೂ, ಪುರುಷಾರ್ಥವೆಂದೂ ವ್ಯವಹರಿಸುತ್ತಾ, ಪರಮಾತ್ಮ-ಮಹಾತ್ಮರಲ್ಲಿ ಭಕ್ತಿ-ಸೇವೆ ಲವಲೇಶವಿಲ್ಲದೆ,ಶಾಸ್ತ್ರನಿಯಮಗಳನ್ನು ಮೀರಿ, ವರ್ಣಾಶ್ರಮಧರ್ಮವನ್ನೂ ಪರಿಪಾಲಿಸದೆ, ದಾನ, ಧರ್ಮ, ಪರೋಪಕಾರ ಮಾಡದೇ, ಸ್ವೇಚ್ಛೆಯಿಂದ ವರ್ತಿಸುತ್ತಾ, ಅಧರ್ಮ-ಮೋಸ-ವಂಚನೆ-ಹಿಂಸಾದಿ ಯೇನ ಕೇನಾಪ್ಯುಪಾಯೇನ ಸಂಪಾದಿಸಿ, ಭೋಗಿಸಿ, ಈ ಸಂಸಾರವು ನಿತ್ಯವೆಂದು ತಿಳಿದಿರುವರು.
ಆಹಾರನಿದ್ರಾಭಯಮೈಥುನಾನಿ
ಸಾಮಾನ್ಯಮೇತತ್ ಪಶುಭಿರ್ನರಾಣಾಮ್ |
ಜ್ಞಾನಂ ನರಾಣಾಮಧಿಕಂ ವಿಶೇಷೋ
ಜ್ಞಾನೇನ ಹೀನಾಃ ಪಶುಭಿಃ ಸಮಾನಾಃ ||
ಹೀಗೆ, ಮನುಷ್ಯನಾಗಿ ಹುಟ್ಟಿಯೂ ಪಶುಮಾತ್ರರಂತೆ ಕೇವಲ ಉಣ್ಣುವುದು, ನಿದ್ರಿಸುವುದು, ಭಯಪಡುವುದು, ಲೈಂಗಿಕಕ್ರಿಯೆ ನಡೆಸುವುದು—ಇಷ್ಟನ್ನೇ ಮಾಡುತ್ತಿದ್ದರೆ, ಮನುಷ್ಯರಿಗೇ ವಿಶೇಷವಾದ ವಿವೇಕ-ವಿಚಾರ-ಸಾರ-ಅಸಾರ ಜ್ಞಾನವಿರದಿದ್ದರೆ ಪಶುವಿಗೂ ಇವನಿಗೂ ಏನು ಅಂತರವಿದೆ? ಹಾಗಾಗಿ, ಅನೇಕಜನ್ಮಸುಕೃತಬಲಮಾತ್ರದಿಂದ ಮನುಷ್ಯನಾಗಿ ಹುಟ್ಟಿದವನು, ಅದನ್ನು ಮನುಷ್ಯತ್ವಕ್ಕನುಗುಣವಾದ ಆಚಾರ-ವಿಚಾರಗಳಿಗೆ (ಮೋಕ್ಷಜಿಜ್ಞಾಸೆಗೆ) ಸದುಪಯೋಗಪಡಿಸಿಕೊಂಡರೆ ಮಾತ್ರ ಜನ್ಮಸಾರ್ಥಕ್ಯವಲ್ಲವೆ?
೨. ಮುಮುಕ್ಷುತ್ವ
ಮೋಕ್ಷದ ತೀವ್ರ ಹಂಬಲ, ಜನನ-ಮರಣ-ಸುಖ-ದುಃಖಾದಿ ಸಮಸ್ತ ದ್ವಂದ್ವಗಳಿಂದ ಬಿಡುಗಡೆ ಹೊಂದಬೇಕೆಂಬ ತೀವ್ರೇಚ್ಛೆ, ಬದುಕಿನ ಅರ್ಥ-ಉದ್ದೇಶಗಳನ್ನು ತಿಳಿಯುವ ಬಯಕೆ, ದೇವ-ಜೀವ-ಜಗತ್-ಬಂಧ-ಮೋಕ್ಷ ಸ್ವರೂಪ-ಸಂಬಂಧಜಿಜ್ಞಾಸೆ— ಇದೇ ಮುಮುಕ್ಷುತ್ವ, ಮುಮುಕ್ಷುವಿನ ಲಕ್ಷಣ. ಇದಕ್ಕಾಗಿ ಸದ್ಗುರುವನ್ನಾಶ್ರಯಿಸಿ, ತತ್ಸೇವೆ ಮಾಡಿ, ತದುಪದೇಶಾನುಸಾರ ಸಾಧನೆಯನ್ನು ಮಾಡಿ ಪರಮಾನಂದವನ್ನು ಹೊಂದಬೇಕೆಂಬ ಇಚ್ಛೆ. ಇದೂ ಅತ್ಯಂತ ಅಪರೂಪ.
ಮನುಷ್ಯಾಣಾಂ ಸಹಸ್ರೇಷು
ಕಶ್ಚಿದ್ಯತತಿ ಸಿದ್ಧಯೇ |
ಯತತೋ ಹ್ಯಪಿ ಸಿದ್ಧಾನಾಂ
ಕಶ್ಚಿನ್ಮಾಂ ವೇತ್ತಿ ತತ್ತ್ವತಃ ||
(ಭಗವದ್ಗೀತಾ ೭-೩)
ಸಾವಿರಾರು ಮನುಷ್ಯರಲ್ಲಿ ಯಾವನೋ ಒಬ್ಬನು ಮಾತ್ರ ಮೋಕ್ಷಸಿದ್ಧಿಗಾಗಿ ಪ್ರಯತ್ನಶೀಲನಾಗುತ್ತಾನೆ. ಹಾಗೆ ಯತ್ನಿಸುವವರಲ್ಲೂ, ಯಾವನೋ ಒಬ್ಬನು ಮಾತ್ರ ಭಗವಂತನಾದ ನನ್ನನ್ನು ಯಥಾರ್ಥವಾಗಿ, ತಾತ್ತ್ವಿಕವಾಗಿ ತಿಳಿಯುತ್ತಾನೆ ಎಂದಿರುವನು ಗೀತಾಚಾರ್ಯ.
ಹಾಗಾಗಿ, ಪರಮಾತ್ಮನ ಕೃಪೆಯಾದಾಗಲೇ ಮುಮುಕ್ಷುತ್ವವು ಬರುವುದು, ಇಲ್ಲದಿದ್ದರೆ ಇಲ್ಲ.
೩. ಸದ್ಗುರುವಿನ ದುರ್ಲಭತೆ
ಗುರವೋ ಬಹವಃ ಸಂತಿ
ಶಿಷ್ಯವಿತ್ತಾಪಹಾರಕಾಃ |
ಗುರವೋ ವಿರಲಾಃ ಸಂತಿ
ಶಿಷ್ಯಹೃತ್ತಾಪಹಾರಕಾಃ ||
ಶಿಷ್ಯನ ಧನಸಂಪದಪಹಾರಕ ಗುರುಗಳು ಲೋಕದಲ್ಲಿ ಬಹಳ; ಆದರೆ, ಶಿಷ್ಯನ ಮನದ ತಾಪವನ್ನು / ಬೇಗೆಯನ್ನು ನಿವಾರಿಸಿ ಉದ್ಧಾರ ಮಾಡಬಲ್ಲ ಗುರುಗಳು ವಿರಳ.
ಸತ್ಯವಾದ ವಿಚಾರವನ್ನು ಹೇಳಿ, ಭಕ್ತಿ-ಜ್ಞಾನ-ವೈರಾಗ್ಯಗಳನ್ನು ಪ್ರತಿಪಾದಿಸಿ, ಶಿಷ್ಯನನ್ನು ಅನಾಚಾರದಿಂದ ಸದಾಚಾರಕ್ಕೂ, ಅವಿಚಾರದಿಂದ ಸುವಿಚಾರಕ್ಕೂ, ಕಾಮ-ಕ್ರೋಧ-ಲೋಭ-ಮೋಹ-ಮದ-ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಶಮ-ದಮ-ಉಪರತಿ-ತಿತಿಕ್ಷಾ-ಶ್ರದ್ಧಾ-ಸಮಾಧಾನಗಳೆಂಬ ಸಾಧನಷಟ್ಸಂಪತ್ತಿಗೂ, ಅವಿದ್ಯಾ-ಅಸ್ಮಿತೆ-ರಾಗ-ದ್ವೇಷ-ಅಭಿನಿವೇಶಗಳೆಂಬ ಪಂಚಕ್ಲೇಶಗಳಿಂದ ಮೈತ್ರಿ-ಕರುಣಾ-ಮುದಿತ-ಉಪೇಕ್ಷಾಗಳೆಂಬ ಚಿತ್ತಶುದ್ಧಿಸಾಧಕ ಸದ್ಗುಣಗಳಿಗೂ, ದೇಹಾತ್ಮಬುದ್ಧಿಯಿಂದ ಸತ್ಯಾತ್ಮ / ಬ್ರಹ್ಮಾತ್ಮಬುದ್ಧಿಗೂ ಪ್ರಯತ್ನಮಾಡಿ ಪರಿವರ್ತಿಸುವವನೇ ಸದ್ಗುರು.
ನಾನಾತ್ವವಿಲ್ಲ, ಜಗತ್ತೂ ಇಲ್ಲ, ಸಂಸಾರವೂ ಇಲ್ಲ, ಇದೆಲ್ಲವೂ ಕೇವಲ ಕಲ್ಪನಾಮಾತ್ರವೆನ್ನುವ ಜ್ಞಾನವನ್ನು, ಅನುಭವಕ್ಕೆ ತಂದುಕೊಡುವವನೇ ಸದ್ಗುರು.
ಶಿಷ್ಯನ ಮೇಲಿನ ದಾಕ್ಷಿಣ್ಯಾದಿಗಳಿಂದ ಆತನನ್ನು ತಿದ್ದದ, ಆತನ ಸ್ವೇಚ್ಛಾವರ್ತನೆಯನ್ನು ಸರಿಪಡಿಸದೆ ಸಮ್ಮತಿಸುವ ಗುರುವು ಗುರುವಲ್ಲ, ಸಾಕ್ಷಾತ್ ಯಮಕಿಂಕರನೇ ಸರಿ.
ಸದ್ಗುರುವು ಸಿಗಬೇಕಾದರೆ ಮೊದಲು ಸಕಲಗುರುಗಳಿಗೂ ಗುರುವಾದ ಪರಮಾತ್ಮನನ್ನೇ ಶರಣುಹೊಂದಬೇಕು. ಅವನ ಕೃಪೆಯಾದಕೂಡಲೇ ಸದ್ಗುರುವು ಸಿಕ್ಕುತ್ತಾನೆ.
ಹೀಗಾಗಿ, ಪರಮಾತ್ಮಾನುಗ್ರಹದಿಂದಲೇ ಪ್ರಾಪ್ತವಾದ ದುರ್ಲಭವಾದ ಈ ನರಜನ್ಮದಲ್ಲಿ, ಆತನ ದಯೆಯಿಂದಲೇ ದುರ್ಲಭವಾದ ಮುಮುಕ್ಷುತ್ವವನ್ನು (ಮೋಕ್ಷಾಕಾಂಕ್ಷೆಯನ್ನು) ಹೊಂದಿ, ಆತನ ಕೃಪಾಬಲಮಾತ್ರದಿಂದಲೇ ಅತ್ಯಂತ ದುರ್ಲಭರಾದ ಮಹಾತ್ಮ ಸದ್ಗುರುಗಳ ಸಂಸರ್ಗ, ಉಪದೇಶಗಳನ್ನು ಪಡೆದು ಜನ್ಮಸಾರ್ಥಕ್ಯ ಹೊಂದಲು ಆ ಪರಮಾತ್ಮನನ್ನೇ ಸದಾ ಶರಣುಹೊಂದೋಣ.
Comments
Post a Comment