೧) ಅಗಸ್ತ್ಯಗೀತಾ
೧) ಅಗಸ್ತ್ಯಗೀತಾ
(ವರಾಹಪುರಾಣ ಅಧ್ಯಾಯ ೫೧-೬೭)
ಶ್ರೀವರಾಹ ಉವಾಚ |
ಶ್ರುತ್ವಾ ದುರ್ವಾಸಸೋ ವಾಕ್ಯಂ
ಧರಣೀವ್ರತಮುತ್ತಮಮ್ |
ಯಯೌ ಸತ್ಯತಪಾಃ ಸದ್ಯೋ
ಹಿಮವತ್ಪಾರ್ಶ್ವಮುತ್ತಮಮ್ || ೫೧.೧ ||
ಶ್ರೀವರಾಹಸ್ವಾಮಿಯು ಹೇಳಿದನು—
ಮಹರ್ಷಿ ದುರ್ವಾಸರ ಮಾತನ್ನು ಕೇಳಿ ಸತ್ಯವನ್ನೇ ತನ್ನ ತಪವನ್ನಾಗಿಸಿದ ರಾಜಾ ಸತ್ಯತಪನು ಕೂಡಲೇ ಉತ್ತಮವಾದ ಹಿಮವತ್ಪರ್ವತದ ತಪ್ಪಲಿನಲ್ಲಿ ಉತ್ತಮವಾದ ಧರಣೀವ್ರತವೆಂದು (ಭೂದೇವಿಯು ಹಿಂದೆ ಆಚರಿಸಿ ವರಾಹಸ್ವಾಮಿಯಿಂದ ಉದ್ಧರಿಸಲ್ಪಟ್ಟುದರಿಂದ) ಪ್ರಸಿದ್ಧವಾದ ದಾಮೋದರದ್ವಾದಶೀವ್ರತವನ್ನು ಆಚರಿಸಿದನು.
ಪುಷ್ಪಭದ್ರಾನದೀ ಯತ್ರ
ಶಿಲಾ ಚಿತ್ರಶಿಲಾ ತಥಾ |
ವಟೋ ಭದ್ರವಟೋ ಯತ್ರ
ತತ್ರ ತಸ್ಯಾಶ್ರಮೋ ಬಭೌ |
ತತ್ರೋಪರಿ ಮಹತ್ ತಸ್ಯ
ಚರಿತಂ ಸಮ್ಭವಿಷ್ಯತಿ || ೫೧.೨ ||
ಎಲ್ಲಿ ಪುಷ್ಪಭದ್ರಾನದಿಯೂ, ವಿಚಿತ್ರತರವಾದ ಕಲ್ಲುಬಂಡೆಗಳೂ, ಮಂಗಲಕರವಾದ ವಟ (ಅಶ್ವತ್ಥ) ವೃಕ್ಷವೂ / ಭದ್ರವಟವೂ ಇದ್ದವೋ ಅಲ್ಲಿ ಆ ರಾಜನ ಆಶ್ರಮವಿತ್ತು. ಅಂತಹ ಆ ರಾಜಾ ಸತ್ಯತಪನ ಚರಿತೆಯು ಅಲ್ಲಿ ಮಹತ್ತರವಾಗಿ ಸಂಭವಿಸುವುದು.
ಧರಣ್ಯುವಾಚ—
ಬಹುಕಲ್ಪಸಹಸ್ರಾಣಿ
ವ್ರತಸ್ಯಾಸ್ಯ ಸನಾತನ |
ಮಯಾ ಕೃತಸ್ಯ ತಪಸಃ
ತನ್ಮಯಾ ವಿಸ್ಮೃತಂ ಪ್ರಭೋ || ೫೧.೩ ||
ಭೂದೇವಿಯು ಹೇಳಿದಳು—
ಹೇ ಸನಾತನನಾದ ಪ್ರಭುವೇ! ನಾನೀ ವ್ರತವನ್ನೂ, ತಪಸ್ಸನ್ನೂ ಆಚರಿಸಿ ಅನೇಕ ಸಾವಿರಕಲ್ಪಗಳಾದುದರಿಂದ ನನಗೆ ಮರೆತೇಹೋಗಿದ್ದಿತು.
ಇದಾನೀಂ ತ್ವತ್ಪ್ರಸಾದೇನ
ಸ್ಮರಣಂ ಪ್ರಾಕ್ತನಂ ಮಮ |
ಜಾತಂ ಜಾತಿಸ್ಮರಾ ಚಾऽಸ್ಮಿ
ವಿಶೋಕಾ ಪರಮೇಶ್ವರ || ೫೧.೪ ||
ಇದೀಗಲಾದರೋ ನಿನ್ನ ಅನುಗ್ರಹದಿಂದ ನನಗೆ ಹಿಂದಿನ ನೆನಪು ಉಂಟಾಗಿದೆ. ಹೇ ಪರಮೇಶ್ವರನೆ! ನಾನೀಗ ಪೂರ್ವಕಲ್ಪಗಳ ನನ್ನ ಜನ್ಮಗಳ ಸ್ಮರಣೆಯಿಂದಾಗಿ "ಜಾತಿಸ್ಮರ"ಳೆನಿಸಿ ದುಃಖವಿಲ್ಲದವಳಾಗಿರುವೆ.
ಯದಿ ನಾಮ ಪರಂ ದೇವ
ಕೌತುಕಂ ಹೃದಿ ವರ್ತತೇ |
ಅಗಸ್ತ್ಯಃ ಪುನರಾಗತ್ಯ
ಭದ್ರಾಶ್ವಸ್ಯ ನಿವೇಶನಮ್ |
ಯಚ್ಚಕಾರ ಸ ರಾಜಾ ಚ
ತನ್ಮಮಾಚಕ್ಷ್ವ ಭೂಧರ || ೫೧.೫ ||
ಅಯ್ಯಾ ಪರಮೇಶ್ವರನೆ! ನಿನ್ನ ಮನದಲ್ಲಿ ಕುತೂಹಲವು ಅಧಿಕವಾಗಿದ್ದರೆ, ಅಗಸ್ತ್ಯ ಮಹರ್ಷಿಯು ರಾಜಾ ಭದ್ರಾಶ್ವನ ಅರಮನೆಗೆ ಪುನಃ ಬಂದು ಏನು ಮಾಡಿದನು? ಆ ರಾಜನೇನು ಮಾಡಿದನು? ಹೇ ಭೂಮಿಯನ್ನೆತ್ತಿ ಹಿಡಿದ ಶ್ವೇತ-ಯಜ್ಞ-ಭೂ-ವರಾಹ-ಸ್ವಾಮಿಯೆ! ನೀನು ಈ ಕುರಿತಾಗಿ ನನಗೆ ಹೇಳುವವನಾಗು.
ಶ್ರೀವರಾಹ ಉವಾಚ—
ಪ್ರತ್ಯಾಗತಮೃಷಿಂ ದೃಷ್ಟ್ವಾ
ಭದ್ರಾಶ್ವಃ ಶ್ವೇತವಾಹನಃ |
ವರಾಸನಗತಂ ದೃಷ್ಟ್ವಾ
ಕೃತ್ವಾ ಪೂಜಾಂ ವಿಶೇಷತಃ |
ಅಪೃಚ್ಛನ್ಮೋಕ್ಷಧರ್ಮಾಖ್ಯಂ
ಪ್ರಶ್ನಂ ಸಕಲಧಾರಿಣಿ || ೫೧.೬ ||
ಶ್ರೀವರಾಹಸ್ವಾಮಿಯು ಹೇಳಿದನು—
ಹೇ ಎಲ್ಲರನ್ನೂ ಹೊತ್ತುಕೊಂಡಿರುವ ಸಕಲಧಾರಿಣಿಯಾದ ಭೂದೇವಿಯೆ! ಪುಷ್ಕರತೀರ್ಥಕ್ಕೆ ಹೋಗಿ ಮತ್ತೆ ಬಂದ ಅಗಸ್ತ್ಯ ಮಹರ್ಷಿಗಳನ್ನು ಕಂಡು, ಶ್ರೇಷ್ಠವಾದ ವೀರಾಸನದಲ್ಲಿ ಅವರನ್ನು ಕುಳ್ಳಿರಿಸಿ, ಬೆಳ್ಗುದುರೆಯನ್ನು ವಾಹನವನ್ನಾಗಿಸಿದ ರಾಜಾ ಭದ್ರಾಶ್ವನು (ಭದ್ರ—ಮಂಗಳ, ಶುಭ, ಅಶ್ವ—ಕುದುರೆ) ವಿಶೇಷವಾಗಿ ಅವರನ್ನು ಪೂಜಿಸಿ, ಮೋಕ್ಷಧರ್ಮದ ಕುರಿತಾದ ಪ್ರಶ್ನೆಯನ್ನು ಕೇಳಿದನು.
ಭದ್ರಾಶ್ವ ಉವಾಚ—
ಭಗವನ್ ಕರ್ಮಣಾ ಕೇನ
ಛಿದ್ಯತೇ ಭವಸಂಸೃತಿಃ |
ಕಿಂ ವಾ ಕೃತ್ವಾ ನ ಶೋಚಂತಿ
ಮೂರ್ತಾಮೂರ್ತೋಪಪತ್ತಿಷು || ೫೧.೭ ||
ಭದ್ರಾಶ್ವನು ಹೇಳಿದನು—
ಹೇ ಭಗವನ್! ಅಗಸ್ತ್ಯ ಮಹರ್ಷಿಗಳೆ!! ಯಾವ ಕರ್ಮವನ್ನು ಮಾಡುವುದರಿಂದ ಜನನಮರಣ ಸುಖದುಃಖಾದಿ ದ್ವಂದ್ವಗಳಿಂದ ಕೂಡಿದ ಸಂಸಾರವೆಂಬ ವಿಷವರ್ತುಲವು ಛೇದಿಸಲ್ಪಡುವುದು (ಕತ್ತರಿಸಲ್ಪಡುವುದು)? ಸಾಕಾರ-ನಿರಾಕಾರಗಳೆಂಬ ಯುಕ್ತಿಗಳಲ್ಲಿ ಯಾವುದನ್ನು ಆಚರಿಸಿದರೆ ಶೋಕಮುಕ್ತರಾಗುವರು? (ಅಥವಾ, ದೇಹಸಂಬಂಧವಿದ್ದಾಗಲೂ ಇಲ್ಲದಿದ್ದಾಗಲೂ ಸಹ, ಏನು ಮಾಡಿದರೆ ಆತ್ಮನು ದುಃಖಿಸುವುದಿಲ್ಲ?)
ಅಗಸ್ತ್ಯ ಉವಾಚ—
ಶೃಣು ರಾಜನ್ ಕಥಾಂ ದಿವ್ಯಾಂ
ದೂರಾಸನ್ನವ್ಯವಸ್ಥಿತಾಮ್ |
ದೃಶ್ಯಾದೃಶ್ಯವಿಭಾಗೋತ್ಥಾಂ
ಸಮಾಹಿತಮನಾ ನೃಪ || ೫೧.೮ ||
ಅಗಸ್ತ್ಯನು ಹೇಳಿದನು—
ಎಲೈ ರಾಜನೆ! ನರಪತಿಯೆ!! ದೂರದಲ್ಲಿಯೂ ಇದ್ದು ಹತ್ತಿರದಲ್ಲೂ ಇರುವ (ಕಷ್ಟದಿಂದ ತಿಳಿಯಲು ಸಾಧ್ಯವಾಗುವಂತಿರುವ) ಕಾಣುವ— ಕಾಣದಿರುವ ಎಂಬ ವಿಭಾಗವುಳ್ಳದ್ದಾದ ದಿವ್ಯವಾದ ಕಥೆಯನ್ನು ಏಕಾಗ್ರ ಮನದಿಂದ ಕೇಳು.
ನಾಹೋ ನ ರಾತ್ರಿರ್ನ ದೃಶೋ ದಿಶಶ್ಚ ( / ದಿಶೋऽದಿಶಶ್ಚ)
ನ ದ್ಯೌರ್ನ ದೇವಾ ನ ದಿನಂ ನ ಸೂರ್ಯಃ |
ತಸ್ಮಿನ್ ಕಾಲೇ ಪಶುಪಾಲೇತಿ ರಾಜಾ
ಸ ಪಾಲಯಾಮಾಸ ಪಶೂನನೇಕಾನ್ || ೫೧.೯ ||
ಒಂದು ಕಾಲದಲ್ಲಿ ಹಗಲೂ ಇರಲಿಲ್ಲ, ರಾತ್ರಿಯೂ ಇರಲಿಲ್ಲ. ಕಣ್ಣುಗಳಾಗಲೀ ದಿಕ್ಕುಗಳಾಗಲೀ (/ದಿಕ್ಕುಗಳೂ ಉಪದಿಕ್ಕುಗಳೂ) ಇರಲಿಲ್ಲ. ಅಂತರಿಕ್ಷವೂ / ಆಕಾಶವೂ ಇರಲಿಲ್ಲ; ದೇವತೆಗಳೂ ಇರಲಿಲ್ಲ. ಬೆಳಕೂ ಇರಲಿಲ್ಲ; ಸೂರ್ಯನೂ ಇರಲಿಲ್ಲ. ಆ ಕಾಲದಲ್ಲಿ ಪಶುಪಾಲನೆಂಬ ರಾಜನೋರ್ವನಿದ್ದನು. ಅವನು ಅನೇಕ ಪಶುಗಳನ್ನು ಕಾಪಾಡುತ್ತಿದ್ದನು.
ತಾನ್ ಪಾಲಯನ್ ಸ ಕದಾಚಿದ್ ದಿದೃಕ್ಷುಃ
ಪೂರ್ವಂ ಸಮುದ್ರಂ ಚ ಜಗಾಮ ತೂರ್ಣಮ್ |
ಅನಂತಪಾರಸ್ಯ ಮಹೋದಧೇಸ್ತು
ತೀರೇ ವನಂ ತತ್ರ ವಸಂತಿ ಸರ್ಪಾಃ || ೫೧.೧೦ ||
ಹಾಗೆ ಪಶುಗಳನ್ನು ಪಾಲಿಸುತ್ತಿದ್ದ ರಾಜಾ ಪಶುಪಾಲನು ಒಮ್ಮೆ ಪೂರ್ವಸಮುದ್ರವನ್ನು ನೋಡುವ ಇಚ್ಛೆಯುಳ್ಳವನಾಗಿ ಬೇಗನೆ ಹೋದನು. ಆಚೆಯ ದಡಗಾಣದೆ ಅನಂತವಾಗಿದ್ದ ಮಹಾಸಾಗರದ ಈ ಬದಿಯಲ್ಲಿ ಗೊಂಡಾರಣ್ಯವಿದ್ದು, ಅದರಲ್ಲಿ ಸರ್ಪಗಳು ವಾಸಿಸುತ್ತಿದ್ದವು.
ಅಷ್ಟೌ ದ್ರುಮಾಃ ಕಾಮವಹಾ ನದೀ ಚ
ತುರ್ಯಕ್ ಚೋರ್ಧ್ವಂ ಬಭ್ರಮುಸ್ತತ್ರ ಚಾನ್ಯೇ |
ಪಂಚ ಪ್ರಧಾನಾಃ ಪುರುಷಾಸ್ತಥೈಕಾಂ
ಸ್ತ್ರಿಯಂ ಬಿಭ್ರತೇ ತೇಜಸಾ ದೀಪ್ಯಮಾನಾಮ್ || ೫೧.೧೧ ||
ಎಂಟು ಮಹಾವೃಕ್ಷಗಳೂ, ತನ್ನಿಚ್ಛೆಯಂತೆ ಹರಿಯುವ ನದಿಯೂ, ಅಡ್ಡಡ್ಡ ಹಾಗೂ ಮೇಲೆ ಕೆಳಗೆ ಪರಿಭ್ರಮಣಮಾಡುತ್ತಿದ್ದ ಇತರ ಐವರು ಪ್ರಧಾನ ಪುರುಷರೂ ಅಲ್ಲಿದ್ದರು. ಹಾಗೆಯೇ ತೇಜಸ್ಸಿನಿಂದ ಬೆಳಗುತ್ತಿರುವ ಒಬ್ಬಾಕೆ ಸ್ತ್ರೀಯನ್ನು ಅವರಲ್ಲೊಬ್ಬ ಪುರುಷನು ಧರಿಸಿದ್ದನು.
ಸಾऽಪಿ ಸ್ತ್ರೀ ಸ್ವೇ ವಕ್ಷಸಿ ಧಾರಯನ್ತೀ
ಸಹಸ್ರಸೂರ್ಯಪ್ರತಿಮಂ ವಿಶಾಲಮ್ |
ತಸ್ಯಾ ಧರಸ್ತ್ರಿರ್ವಿಕಾರಸ್ತ್ರಿವರ್ಣ—
—ಸ್ತಂ ರಾಜಾನಂ ಪಶ್ಯ ಪರಿಭ್ರಮಂತಮ್ || ೫೧.೧೨ ||
ತೂಷ್ಣೀಭೂತಾ ಮೃತಕಲ್ಪಾ ಇವಾಸನ್
ನೃಪೋऽಪ್ಯಸೌ ತದ್ವನಂ ಸಂವಿವೇಶ |
ತಸ್ಮಿನ್ ಪ್ರವಿಶ್ಟೇ ವಿವಿಶುಃ ಸರ್ವ ಏತೇ
ಭಯಾದೈಕ್ಯಂ ಗತವಂತಃ ಕ್ಷಣೇನ || ೫೧.೧೩ ||
ಆ ವನಿತೆಯಾದರೋ ಸಹಸ್ರಸೂರ್ಯರಿಗೆ ಸಮನಾದ ವಿಶಾಲವಾದ ಸ್ತನಗಳುಳ್ಳವಳಾಗಿದ್ದಳು. ಅವಳನ್ನು ಹಿಡಿದುಕೊಂಡಿದ್ದವನು ಮೂರು ಬಗೆಯ ವಿಕಾರಗಳೂ, ಮೂರು ಬಣ್ಣಗಳೂ ಉಳ್ಳ ಪುರುಷನು. ಅವರೆಲ್ಲರೂ ಅಲ್ಲಿ ಸಂಚರಿಸುತ್ತಿದ್ದ ದೊರೆಯನ್ನು ನೋಡಿ, ಮೌನದಿಂದ ಸತ್ತವರಂತಿದ್ದರು. ರಾಜನು ಆ ವನಕ್ಕೆ ಹೋಗಿಯೇಬಿಟ್ಟನು. ಅವನು ಪ್ರವೇಶಿಸಲು, ಆ ಸರ್ಪಗಳು ಹೆದರಿಕೆಯಿಂದ ಬೇಗನೆ ಜೊತೆಸೇರಿಕೊಂಡವು.
ತೈಃ ಸರ್ಪೈಸ್ಸ ನೃಪೋ ದುರ್ವಿನೀತೈಃ
ಸಂವೇಷ್ಟಿತೋ ದಸ್ಯುಭಿಶ್ಚಿಂತಯಾನಃ |
ಕಥಂ ಚೈತೇ ನ ಭವಿಷ್ಯಂತಿ ಯೇನ
ಕಥಂ ಚೈತೇ ಸಂಸ್ಮೃತಾಸ್ಸಂಭವೇಯುಃ || ೫೧.೧೫ ||
ಕೆಟ್ಟವೂ, ಹಗೆಗಳೂ ಆದ ಆ ಹಾವುಗಳಿಂದ ರಾಜನು ಸುತ್ತಿಕೊಳ್ಳಲ್ಪಟ್ಟನು. ಇವುಗಳಿಲ್ಲದಂತಾಗುವುದು ಅಥವಾ ಇವುಗಳ ಸ್ಮರಣೆಯೇ ಬಾರದಂತಾಗುವುದು ಹೇಗೆಂದು ರಾಜನು ಚಿಂತಿತನಾದನು.
ಏವಂ ರಾಜ್ಞಶ್ಚಿಂತಯತಃ
ತ್ರಿವರ್ಣಃ ಪುರುಷೋऽಪರಃ |
ಶ್ವೇತಂ ರಕ್ತಂ ತಥಾ ಪೀತಂ
ತ್ರಿವರ್ಣಂ ಧಾರಯನ್ ನರಃ || ೫೧.೧೬ ||
ಸ ಸಂಜ್ಞಾಂ ಕೃತವಾನ್ ಮಹ್ಯಂ
ಅಪರೋऽಥ ಕ್ವ ಯಾಸ್ಯಸಿ |
ಏವಂ ತಸ್ಯ ಬ್ರುವಾಣಸ್ಯ
ಮಹನ್ನಾಮ ವ್ಯಜಾಯತ || ೫೧.೧೭ ||
ರಾಜಾ ಪಶುಪಾಲನು ಹಾಗೆ ಚಿಂತಿಸುತ್ತಿರಲು, ಬಿಳಿ ಕೆಂಪು ಹಳದಿಗಳೆಂಬ ಮೂರು ಬಣ್ಣಗಳನ್ನು ಧರಿಸಿದ ಮತ್ತೋರ್ವ ಪುರುಷನು ರಾಜನನ್ನು ಕುರಿತು, "ನನ್ನಿಂದ ತಪ್ಪಿಸಿಕೊಂಡು ಎಲ್ಲಿ ಹೋಗುವೆ? " ಎಂದು ಕೈಸನ್ನೆಯಿಂದಲೇ ಕೇಳಿದನು. ಹಾಗೆ ಕೇಳುತ್ತಿದ್ದ ಅವನಿಂದ ಮಹತ್ತೆಂಬ ಹೆಸರಿನ ಮತ್ತೋರ್ವನು ಉಂಟಾದನು.
ತೇನಾಪಿ ರಾಜಾ ಸಂವೀತಃ
ಸ ಬುದ್ಧ್ಯಸ್ವೇತಿ ಚಾಬ್ರವೀತ್ |
ಏವಮುಕ್ತೇ ತತಃ ಸ್ತ್ರೀ ತು
ತಂ ರಾಜಾನಂ ರುರೋಧ ಹ || ೫೧.೧೮ ||
ಅಲನೂ ದೊರೆಯನ್ನು ಸುತ್ತಿಕೊಂಡು, "ತಿಳಿದುಕೋ (ಎಚ್ಚರಗೊಳ್ಳು)" ಎಂದು ಹೇಳಿದನು. ಅವನು ಹಾಗೆ ಹೇಳಲು, ಬಳಿಕ ಆ ಸ್ತ್ರೀಯೂ ರಾಜನನ್ನು ತಡೆದಳು.
Comments
Post a Comment