ಮುಮುಕ್ಷು-ಹಿತಬೋಧೆ (ಸಾರ) ಜಯ ಜಯ ರಘುವೀರ ಸಮರ್ಥ ಗಣೇಶಃ ಶಾರದಾ ಚೈವ ಸದ್ಗುರುಃ ಸಜ್ಜನಸ್ತಥಾ | ಆರಾಧ್ಯದೈವತಂ ಗುಹ್ಯಂ ಸರ್ವಂ ಮೇ ರಘುನಂದನಃ || ಶ್ರೀರಾಮಸಮರ್ಥ | ಶ್ರೀಗುರುಭ್ಯೋ ನಮಃ || ಆತ್ಮಜ್ಞಾನಕ್ಕೆ ಅಧಿಕಾರಿ ಯಾರು? (೧ನೇ ಪ್ರಕರಣ—ಅಧಿಕಾರ ಭಾಗ) ದುರ್ಲಭಂ ತ್ರಯಮೇವೈತತ್ ದೈವಾನುಗ್ರಹಹೇತುಕಮ್ | ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ || (ವಿವೇಕಚೂಡಾಮಣಿ ಶ್ಲೋಕ ೩) ಮನುಷ್ಯನಿಗೆ ಪರಮಾತ್ಮನ ಅನುಗ್ರಹವಿಲ್ಲದೆ ಮನುಷ್ಯತ್ವವೂ, ಮುಮುಕ್ಷುತ್ವವೂ, ಮಹಾತ್ಮರ ಸಂಗವೂ (ಸದ್ಗುರುವೂ) ದೊರೆಯುವುದಿಲ್ಲ. ೧. ಮನುಷ್ಯತ್ವ-ಪಶುತ್ವ ಮೊದಲನೆಯದಾಗಿ, ಮನುಷ್ಯತ್ವವು ದುರ್ಲಭ. ಪರಮಾತ್ಮಾನುಗ್ರಹದಿಂದಾದ ಪೂರ್ವಪುಣ್ಯಸಂಚಯದ ದೆಸೆಯಿಂದ ದುರ್ಲಭವಾದ ನರಜನ್ಮ ದೊರೆತರೂ ಬಹುಮಂದಿ ಪಶುಬುದ್ಧಿಯಿಂದ, ಧರ್ಮ-ಅಧರ್ಮ ವಿವೇಕವಿಲ್ಲದೆ ಮನಬಂದಂತೆ, ಪಶುಗಳಂತೆ ಆಹಾರ-ನಿದ್ರಾ-ಭಯ-ಮೈಥುನಗಳಷ್ಟನ್ನೇ ಮನುಷ್ಯಕರ್ತವ್ಯವೆಂದೂ, ಪುರುಷಾರ್ಥವೆಂದೂ ವ್ಯವಹರಿಸುತ್ತಾ, ಪರಮಾತ್ಮ-ಮಹಾತ್ಮರಲ್ಲಿ ಭಕ್ತಿ-ಸೇವೆ ಲವಲೇಶವಿಲ್ಲದೆ,ಶಾಸ್ತ್ರನಿಯಮಗಳನ್ನು ಮೀರಿ, ವರ್ಣಾಶ್ರಮಧರ್ಮವನ್ನೂ ಪರಿಪಾಲಿಸದೆ, ದಾನ, ಧರ್ಮ, ಪರೋಪಕಾರ ಮಾಡದೇ, ಸ್ವೇಚ್ಛೆಯಿಂದ ವರ್ತಿಸುತ್ತಾ, ಅಧರ್ಮ-ಮೋಸ-ವಂಚನೆ-ಹಿಂಸಾದಿ ಯೇನ ಕೇನಾಪ್ಯುಪಾಯೇನ ಸಂಪಾದಿಸಿ, ಭೋಗಿಸಿ, ಈ ಸಂಸಾರವು ನಿತ್ಯವೆಂದು ತಿಳಿದಿರುವರು. ಆಹಾರನಿದ್ರಾಭಯಮೈಥುನಾನಿ ಸಾಮಾನ್ಯಮೇತತ್ ಪಶುಭ...