೩. ಶ್ರೀಮದ್-ಭಗವದ್ಗೀತಾ-ಪೀಠಿಕಾ ೨
೩. ಶ್ರೀಮದ್-ಭಗವದ್ಗೀತಾ-ಪೀಠಿಕಾ ೨ (೪) ಡಿವಿಜಿಯವರ ಶ್ರೀಮದ್ಭಗವದ್ಗೀತಾತಾತ್ಪರ್ಯ / ಜೀವನಧರ್ಮಯೋಗ ಭೂಮಿಕೆಯಿಂದ… ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ | ಪರಾಶರಾತ್ಮಜಂ ವನ್ದೇ ಶುಕತಾತಂ ತಪೋನಿಧಿಮ್ || (ಬ್ರಹ್ಮರ್ಷಿ ವಸಿಷ್ಠರ ಮರಿಮಗನೂ, ಶಕ್ತಿಮುನಿಯ ಮೊಮ್ಮಗನೂ, ಪರಾಶರಮಹರ್ಷಿಗಳ ಪುತ್ರನೂ, ಮಹಾತ್ಮಾ ಶುಕಮುನಿಯ ತಂದೆಯೂ, ನಿಷ್ಕಲ್ಮಷರೂ, ತಪೋನಿಧಿಗಳೂ ಆದ ವೇದವ್ಯಾಸಮಹರ್ಷಿಗಳನ್ನು ವಂದಿಸುತ್ತೇನೆ.—ಸಂಪಾದಕ) (ಶ್ರೀಕೃಷ್ಣಾವತಾರಿಯಾಗಿ ವಿಷ್ಣುವಿನಿಂದ ಉಪದಿಷ್ಟವಾದ ಭಗವದ್ಗೀತೆಯನ್ನು ಮಹಾಭಾರತದೊಳಗೆ ಬರೆಯಲು ಸಾಕ್ಷಾತ್ ವಿಷ್ಣುವೇ ವ್ಯಾಸಾವತಾರಿಯಾಗಿ ಭುವಿಗಿಳಿದು ಬಂದ ಎಂಬುದಂತೂ ಅಚ್ಚರಿಯೇ ಸರಿ!!—ಸಂಪಾದಕ) ಶ್ರೀ ವಿಷ್ಣುವಾದಿಗುರು ಪಾ- | ರ್ಥವ್ಯಾಜದೆ ಸಕಲಮನುಜಲೋಕಹಿತಾರ್ಥಂ || ಕಾವ್ಯಮಯಶಾಸ್ತ್ರನಯದಿಂ | ಜೀವನ-ಸದ್ಧರ್ಮಯೋಗಮಂ ಗೀತಿಸಿದಂ || {ಜಗತ್ತಿನ ಆದಿಗುರುವಾದ ಶ್ರೀ(ಲಕ್ಷ್ಮೀ)-ಪತಿಯಾದ (ವಿಶ್ವವ್ಯಾಪಿಯಾದ)ವಿಷ್ಣುವು ಪೃಥಾಸುತನಾಗಿ ಪಾರ್ಥನೆನಿಸಿದ / ಕುಂತೀಪುತ್ರನಾಗಿ ಕೌಂತೇಯನೆನಿಸಿದ ಅರ್ಜುನನನ್ನು ನೆಪಮಾಡಿಕೊಂಡು, ಸಮಗ್ರ ಮನುಕುಲದ ಹಿತಕಾಯಲೋಸುಗ, ಕಾಂತೆಯಂತೆ ರಮಿಸಿ ಹೇಳಬಲ್ಲ ಕಾವ್ಯರೂಪಿಯೂ (ಕಾಂತಾಸಂಮಿತ), ರಾಜಶಾಸನದಂತೆ ಆದೇಶ ವಿಧಿಸುವ ವೇದ-ಧರ್ಮಶಾಸ್ತ್ರರೂಪಿಯೂ (ಪ್ರಭುಸಂಮಿತ), ಮಿತ್ರನಂತೆ ಹಿತೋಪದೇಶ ಮಾಡುವ ಇತಿಹಾಸ-ಪುರಾಣ-ಸುಭಾಷಿತ-ನೀತಿ (ನಯ...